ಮತಾಂಧ ಶಕ್ತಿಗಳಿಂದ ಅಪರಾಧಿ ಹಾಗೂ ಅಪರಾಧಗಳ ವಿಜ್ರಂಭಣೆ ಹಾಗೂ ಸಂತ್ರಸ್ತರ ಕ್ಷಮೆ


-ಇರ್ಷಾದ್ ಉಪ್ಪಿನಂಗಡಿ


ಪೊಲೀಸ್ ಬಂದೋಬಸ್ತಿನಲ್ಲಿ ನಗುಮುಖದಲ್ಲಿ ಕಾಣಿಸಿಕೊಳ್ಳುವ ಇವರೆಲ್ಲಾ 2010 ಜುಲೈ 4 ರಂದು ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಅಧ್ಯಾಪಕರೊಬ್ಬರPFI_Activists ಕೈ ಕಡಿದ ಪ್ರಕರಣದ ಪ್ರಮುಖ ಆರೋಪಿಗಳು. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಮತಾಂಧ ದುಷ್ಕರ್ಮಿಗಳು ಅಧ್ಯಾಪಕ ಜೆ.ಜೆ ಜೋಸೆಫ್ ಎಂಬುವವರ ಮನೆಗೆ ನುಗ್ಗಿ ಅವರ ಬಲಕೈ ಕಡಿದು ಅಟ್ಟಹಾಸ ಮೆರೆದಿದ್ದರು. ಈ ಪ್ರಕರಣ ದೇಶದಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದೀಗ ನ್ಯಾಯಾಲಯ ಪ್ರಕರಣದ ಪ್ರಮುಖ ಆರೋಪಿಗಳಾದ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಮುಸ್ಲಿಮ್ ಮೂಲಭೂತವಾಧಿ ಸಂಘಟನೆಯ 13 ಕಾರ್ಯಕರ್ತರನ್ನು ದೋಷಿಗಳೆಂದು ತೀರ್ಪು ನೀಡಿ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಎರ್ನಾಕುಳಂ ನ್ಯಾಯಾಲಯ ನೀಡಿದ ತೀರ್ಪಿನ ನಂತರ ಕೋರ್ಟ್ ಆವರಣದಿಂದ ಹೊರಬರುತ್ತಿರುವ ಆಪರಾಧಿಗಳ ಮುಖಭಾವ ಗಮನಿಸಿದಾಗ ಅವರ ಮುಖದಲ್ಲಿ ಎಳ್ಳಷ್ಟೂ ಪಶ್ಚಾತಾಪವಿರಲಿಲ್ಲ. ಬದಲಾಗಿ ಅವರು ಅತ್ಯಂತ ಖುಷಿಯಲ್ಲಿರುವಂತೆ ಕಂಡುಬರುತ್ತಿದ್ದರು. ತಮ್ಮ ಕೃತ್ಯದ ಕುರಿತಾಗಿ ಹೆಮ್ಮೆಪಟ್ಟುಕೊಳ್ಳುವಂತಿತ್ತು ಅವರ ಮುಖಭಾವ. ಇದನ್ನೇ ಹೋಲುವ ಮತ್ತೊಂದು ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೋಡಿಕರೆ ಮನೋಜ್ ಎಂಬ ಕೊಲೆ ಆರೋಪಿ , ಕೋಮುಗಲಭೆ ಸೇರಿದಂತೆ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡ ಕೋಡಿಕರೆ ಮನೋಜ್ ಎಂಬ ಕುಖ್ಯಾತ ಪಾತಕಿಯನ್ನು ಮಂಗಳೂರು ಪೊಲೀಸರು ಗೂಂಡಾ ಕಾಯಿದೆ ಅನ್ವಯ ಬಂಧಿಸಿದ್ದರು. ಕೆಲ ದಿನಗಳ ಹಿಂದೆ ಜೈಲಿಂದ ಬಿಡುಗಡೆಗೊಂಡ ಕೋಡಿಕೆರೆ ಮನೋಜ್ ಎಂಬಾತನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹೂ ಹಾರ ಹಾಕಿ ಜಯಘೋಷ ಕೂಗಿ ಸ್ವಾಗತಿಸಿದ್ದರು.

ಈ ಎರಡೂ ಅಮಾನವೀಯ ನಿದರ್ಶನಗಳು ಬಹಳಷ್ಟು ಸಂದೇಶಗಳನ್ನು ಸಮಾಜಕ್ಕೆ ರವಾನಿಸುತ್ತವೆ. ನಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿರುವುದು ಧರ್ಮದ ಹೆಸರಲ್ಲಿ ಅಪರಾಧ ಎಸಗುತ್ತಿರುವವರ ಹಾಗೂ ಅಂಥಹಾ ಅಪರಾಧಿಗಳನ್ನು ಬೆಂಬಲಿಸುವ ಜನರ ಹಾಗೂ ಕೋಮುವಾದಿ ಸಂಘಟನೆಗಳ ಅಪಾಯಕಾರಿ ಮನಸ್ಥಿತಿ. ಶಾಂತಿ, ಸಹಬಾಳ್ವೆಯನ್ನು ಸಾರಬೇಕಾದ ಧರ್ಮದ ತಿರುಳನ್ನು ತಿರುಚಿ ತಮ್ಮ ಕೈವಶಮಾಡಿಕೊಂಡಿರುವ ಧಾರ್ಮಿಕ ಮೂಲಭೂತವಾದಿಗಳು ಇಂದು ಧರ್ಮ ನಿಂದನೆ, ಧರ್ಮ ರಕ್ಷಣೆಯ ಹೆಸರಲ್ಲಿ ಹಲ್ಲೆ, ಹತ್ಯೆ, ಹಿಂಸೆ ಹಾಗೂ ಅಭಿವ್ಯಕ್ತಿಯನ್ನು ಹರಣ ಮಾಡುವ ಮೂಲಕ ಕ್ರೌರ್ಯತೆಯನ್ನು ಮೆರೆಸುತ್ತಿದ್ದಾರೆ. ಇದಕ್ಕಾಗಿ ಬಳಕೆಗೊಳ್ಳುತ್ತಿರುವ ಯುವಕರ ಮನಸ್ಸಿನಲ್ಲಿ ತಾವು ಎಸಗುತ್ತಿರುವ ಅಪರಾಧ ಕೃತ್ಯದ ಕುರಿತಾಗಿ ಹೆಮ್ಮೆಪಟ್ಟುಕೊಳ್ಳುವಂತಹ ಮನಸ್ಥಿತಿಯನ್ನು ಸೃಷ್ಟಿಸುವಲ್ಲಿ ಸಫಲರಾಗುತ್ತಿದ್ದಾರೆ ಎಂಬುವುದು ಆತಂಕಕಾರಿ ಬೆಳವಣಿಗೆ.

ಇಲ್ಲಿ ಇಂಥಹ ಜೀವವಿರೋಧಿ ಕ್ರೂರ ಮನಸ್ಥಿತಿ ಹುಟ್ಟಲು ಕಾರಣ ತಾನು ನಂಬಿರುವ ಧರ್ಮದ ಕುರಿತಾದ ಅಜ್ಷಾನ ಹಾಗೂ ಅಂಧಾಭಿಮಾನ.hindu_jagarana_vedike ಇಂದಿನ ದಿನಗಳಲ್ಲಿ ಕೋಮುವಾದ, ಧಾರ್ಮಿಕ ಮೂಲಭೂತವಾದವನ್ನು ವಿರೋಧಿಸುವವರು, ಧರ್ಮ ಸಂಸ್ಕತಿಯ ಕುರಿತಾಗಿ ವಿಮರ್ಶೆ ಮಾಡುವವರು, ದೇವರ ಹೆಸರಲ್ಲಿ ನಡೆಯುವ ಕ್ರೌರ್ಯವನ್ನು ಪ್ರಶ್ನಿಸುವವರ ಮೇಲೆ ದಾಳಿ ಹೆಚ್ಚಾಗುತ್ತಿವೆ. ಇದಕ್ಕಿಂತಲೂ ಅಪಾಯಕಾರಿಯೆಂದರೆ ಹಲ್ಲೆ ಅಥವಾ ಹತ್ಯೆಯಂಥಹಾ ಅಪರಾಧ ಕೃತ್ಯ ಎಸಗಿದ ಅಪರಾಧಿಗಳನ್ನು ವೈಭವೀಕರಿಸುವ ಕಾರ್ಯ ನಡೆಯುತ್ತಿರುವುದಾಗಿದೆ. ಮಂಗಳೂರಿನಲ್ಲಿ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ದಾಳಿ ನಡೆಸಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ-ಯುವತಿಯರ ಮೇಲೆ ದಾಳಿ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳನ್ನು ಹಿಂದೂಪರ ಸಂಘಟನೆಯ ಮುಖಂಡರು ಮೆರವಣಿಗೆ ನಡೆಸಿ ಅವರನ್ನು ಸನ್ಮಾನಿಸುವ ಮೂಲಕ ಅವರ ಕೃತ್ಯಕ್ಕೆ ಪ್ರೋತ್ಸಾಹ ತುಂಬಿದ್ದರು. ಕೋಮುಗಲಭೆಯಂತಹ ಕೃತ್ಯಗಳಲ್ಲಿ ಪಾಲ್ಗೊಂಡು ಜೈಲು ಸೇರಿ ಬಿಡುಗಡೆಗೊಂಡ ಆರೋಪಿಗಳನ್ನೂ ಮೆರವಣಿಗೆ ಮೂಲಕ ಕರೆದೊಯ್ದು ಅವರಿಗೆ ಸನ್ಮಾನ ಮಾಡುವ ಮೂಲಕ ಆಪರಾಧಿಗಳಿಗೆ ತಮ್ಮ ಅಪರಾಧದ ಕೃತ್ಯದ ಕುರಿತಾಗಿ ಹೆಮ್ಮೆಪಡುವಂತೆ ಮಾಡುತ್ತಿರುವುದು ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯವಾಗುತ್ತವೆ.

ಪರಿಣಾಮ ಧರ್ಮದ ಹೆಸರಲ್ಲಿ ಯಾವುದೇ ಕೃತ್ಯವನ್ನು ಒಬ್ಬ ಎಸಗಿದರೂ ಆತ ತನ್ನ ಕೃತ್ಯಕ್ಕೆ ಪಶ್ವಾತಾಪ ಪಟ್ಟುಕೊಳ್ಳುವುದಿಲ್ಲ. ಬದಲಾಗಿ ಹೆಮ್ಮೆಪಟ್ಟುಕೊಳ್ಳುತ್ತಾನೆ ಹಾಗೂ ಸಮರ್ಥಿಸುತ್ತಾನೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಗುಂಡಿಟ್ಟು ಕೊಂದ ನಾಥುರಾಮ್ ಗೋಡ್ಸೆ ತನ್ನ ಕೃತ್ಯದ ಕುರಿತಾಗಿ ಯಾವುದೇ ರೀತಿಯ ಪಶ್ವಾತಾಪ ಪಟ್ಟಿರಲಿಲ್ಲ. ಬದಲಾಗಿ ಆತ ತನ್ನ ಬಗ್ಗೆ ಹೆಮ್ಮೆ ಪಟ್ಟುಕೊಂಡ. ಆತನ ಪ್ರಕಾರ ಗಾಂಧಿ ಹಿಂದೂ ವಿರೋಧಿಯಾಗಿದ್ದರು. ಹಿಂದುತ್ವದ ಅಮಲು ಗೋಡ್ಸೆಯನ್ನು ಕಟುಕನನ್ನಾಗಿಸಿತ್ತು. ಗೋಡ್ಸೆಯನ್ನು ಕಟುಕನನ್ನಾಗಿ ಪರಿವರ್ತಿಸಿದ ಜನರೇ ಇಂದು ಗೋಡ್ಸೆ ಪ್ರತಿಮೆ ಸ್ಥಾಪಿಸಲು ಮುಂದಾಗುವ ಮೂಲಕ ಇನ್ನಷ್ಟು ಗಾಂಧಿಗಳ ಹತ್ಯೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ಅಂಧಶೃದ್ದೆಯ ವಿರುದ್ಧ ಧ್ವನಿ ಎತ್ತಿದ ಪ್ರಗತಿಪರ ಚಿಂತಕ ನರೇಂದ್ರ ದಾಬ್ಲೋಲ್ಕರ್ ಅವರನ್ನು 2013 ಆಗಸ್ಟ್ 20ರಂದು ಪುಣೆಯಲ್ಲಿ ಹತ್ಯೆಮಾಡಲಾಯಿತು. ಮೂಲಭೂತವಾದಿಗಳ ವಿರುದ್ಧ ಧ್ವನಿ ಎತ್ತಿದ ಮಹಾರಾಷ್ಟ್ರದ ಸಿಪಿಐ ಮುಖಂಡ ಗೋವಿಂದ್ ಪನ್ಸಾರೆ ಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು.ಮುಸ್ಲಿಮ್ ಮೂಲಭೂತವಾದ ವಿರುದ್ಧ ಧ್ವನಿ ಎತ್ತಿದ ಪಾಕಿಸ್ಥಾನದ ಸಬೀನ್ ಮೆಹಮೂದ್ ಅವರನ್ನೂ ಗುಂಡಿಕ್ಕಿ ಕೊಲ್ಲಲಾಯಿತು. ಬಾಂಗ್ಲಾದೇಶದ ಹುಮಾಯೂನ್ ಹಸನ್, ಸಂಶು ರಹಮಾನ್, ಅಭಿಜಿತ್ ರಾಯ್ ಕೂಡಾ ಇವರ ಸಾಲಿಗೆ ಸೇರಲ್ಪಟ್ಟರು. ತೀಸ್ತಾ ಸೆಟಲ್ವಾಡ್, ಸಲ್ಮಾನ್ ರಶ್ದಿ, ತಸ್ರೀನಾ ನಸ್ರಿನ್, ಪ್ರೋ. ಭಗವಾನ್ ಸೇರಿದಂತ್ತೆ ಅನೇಕ ಮಾನವತಾವಾದಿಗಳು, ಪ್ರಗತಿಪರ ಚಿಂತಕರು ಇದೇ ಮತಾಂಧರಿಂದ ಜೀವಬೆದರಿಕೆ ಎದುರಿಸುತ್ತಿದ್ದಾರೆ. ಕಾರಣ ಇವರೆಲ್ಲಾ ಜೀವಪರತೆ, ಮಾನವ ಬಂಧುತ್ವ, ಅಭಿವ್ಯಕ್ತಿಯನ್ನು ಎತ್ತಿಹಿಡಿದು ಧಾರ್ಮಿಕ ಮೂಲಭೂತವಾದ, ಕೋಮುವಾದ, ಮೌಢ್ಯತೆಯನ್ನು ವಿರೋಧಿಸಿದರು ಎಂಬುದಕ್ಕಾಗಿ.

ಮಾನವೀಯತೆಯನ್ನು ಸಾರುವ ಈ ಪ್ರತಿನಿಧಿಗಳನ್ನು ಧರ್ಮದ ಹೆಸರಲ್ಲಿ ಹತ್ಯೆ ಮಾಡಿದ ಹಾಗೂ ದೌರ್ಜನ್ಯ ಎಸಗಿ ಕ್ರೌರ್ಯವನ್ನುMKGandhi ಮೆರೆಸುತ್ತಿರುವ ಈ ಮತಾಂಧರ ಮನಸ್ಸಿನಲ್ಲಿ ಕ್ಷಮೆಗೆ ಬದಲಾಗಿ ದ್ವೇಷ ತುಂಬಿಸಲಾಗುತ್ತಿದೆ ಹಾಗೂ ಅದನ್ನು ವಿಜ್ರಂಭಿಸಲಾಗುತ್ತಿದೆ. ಪ್ರವಾದಿ ಮುಹಮ್ಮದರನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಕಾರಣಕ್ಕಾಗಿ ಮತಾಂಧರಿಂದ ತನ್ನ ಬಲಗೈ ಕಳೆದುಕೊಂಡ ಪ್ರಾಧ್ಯಾಪಕ ಜೆ.ಜೆ ಜೋಸೆಫ್ ಹಾಗೂ ಅವರ ಕುಟುಂಬ ಈ ಕೃತ್ಯ ಎಸಗಿದ ಆರೋಪಿಗಳನ್ನು ನಾವು ಕ್ಷಮಿಸುತ್ತೇವೆ ಎನ್ನುವಾಗ “ಒಬ್ಬ ಮುಸ್ಲಿಮನು ಅಕ್ರಮವಾಗಿ ಇನ್ನೊಬ್ಬನ ರಕ್ತ ಹರಿಸದವರೆಗೆ ಅವನು ಧರ್ಮದಲ್ಲಿ ವಿಶಾಲತೆ ಮತ್ತು ಉನ್ನತಿ ಹೊಂದುತ್ತಿರುವನು” ಎಂಬ ಪ್ರವಾದಿಯವರ ಶಾಂತಿಯ ವಚನ ನೆನಪಾಗುತ್ತದೆ. ಬಹುಷಃ ಪ್ರವಾದಿಯ ಈ ವಚನವನ್ನು ದುಷ್ಕರ್ಮಿಗಳಿಗಿಂತ ಚೆನ್ನಾಗಿ ಅರಿತುಕೊಂಡಿರುವ ಜೆ.ಜೆ ಜೋಸೆಫ್ ಹಾಗೂ ಕುಟುಂಬ ವರ್ಗ ಜೀವಪರವಾಗಿ ಕಾಣಿಸಿಕೊಳ್ಳುತ್ತಾರೆ. ಮತಾಂತರದ ಆರೋಪ ಹೊರಿಸಿ 1999ರ ಇಸವಿಯಲ್ಲಿ ಓರಿಸ್ಸಾದಲ್ಲಿ ಆಸ್ಟ್ರೇಲಿಯಾದ ಮಿಷನರಿ ಗ್ರಾಹಮ್ ಸ್ಟೇನ್ಸ್ ಹಾಗೂ ಆತನ ಇಬ್ಬರು ಮಕ್ಕಳನ್ನು ಜೀವಂತ ದಹಿಸಿದ ಭಜರಂಗದಳದ ಸಂಘಟನೆಯ ಕಾರ್ಯಕರ್ತ ದಾರಾ ಸಿಂಗ್ ಹಾಗೂ ಆತನ 12 ಸಹಚರರಿಗೆ ಸಿ.ಬಿ.ಐ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದಾಗ ಹತ್ಯೆಗೊಳಗಾದ ಗ್ರಾಹಮ್ ಅವರ ವಿಧವೆ ಪತ್ನಿ ಗ್ಲಾಡೇಸ್ ಸ್ಟೇನ್ಸ್ ತನ್ನ ಗಂಡ ಹಾಗೂ ಮಕ್ಕಳನ್ನು ಕೊಂದ ಆಪರಾಧಿಗಳನ್ನು ನಾನು ಕ್ಷಮಿಸಿದ್ದೇನೆ ಎಂಬ ಹೇಳಿಕೆಯನ್ನು ಗಮನಿಸಿದಾಗ ಹಿಂದುತ್ವವಾದಿ ದಾರಾ ಸಿಂಗ್ ಗಿಂತ ಹೆಚ್ಚಾಗಿ ಹಿಂದೂ ಧರ್ಮದ ಶಾಂತಿಯ ತಿರುಳನ್ನು ಅರಿತ ಗ್ಲಾಡೇಸ್ ಸ್ಟೇನ್ಸ್ ಮಾನವತಾವಾಧಿಯಾಗಿ ಕಾಣಿಸಿಕೊಳ್ಳುತ್ತಾರೆ. ಧರ್ಮದ ಹೆಸರಲ್ಲಿ ತಮ್ಮ ಅಪರಾಧವನ್ನು ವಿಜ್ರಂಭಿಸುತ್ತಿರುವ ಮತಾಂಧ ಶಕ್ತಿಗಳಿಂದ ದೌರ್ಜನ್ಯಕ್ಕೊಳಗಾದರೂ ದೌರ್ಜನ್ಯ ಎಸಗಿದವರನ್ನು ಕ್ಷಮಿಸುವ ಮೂಲಕ ಜೀವಪರ ಸಂದೇಶ ಸಾರುವ ಇವರಿಂದ ಮತಾಂಧರು ಪ್ರೀತಿ, ಮಾನವೀಯತೆಯ ಪಾಠ ಕಲಿಯಬೇಕಾಗಿದೆ.

.

Leave a Reply

Your email address will not be published.