Daily Archives: May 18, 2015

ಗಾಂಧಿ ಎಂಬ “ಕನಿಷ್ಠ ಸಾಮಾನ್ಯ ಕಾರ್ಯಕ್ರಮ”


– ಶ್ರೀಧರ್ ಪ್ರಭು


ಫೆಬ್ರವರಿ ೧೯೪೮ ರ ಸಂದರ್ಭ. ಮಹಾತ್ಮಾ ಗಾಂಧಿಯವರ ಹತ್ಯೆಯಾಗಿ ಹತ್ತು ಹದಿನೈದು ದಿನಗಳು ಸಂದಿರಬೇಕು. ಪ್ರಧಾನಿ ನೆಹರು ಮತ್ತು ಉಪ ಪ್ರಧಾನಿ ಪಟೇಲರು ಅಧೀರರಾಗಿದ್ದರು. ಭಾರತದಲ್ಲಂತೂ ಸೂತಕದ ಛಾಯೆ. ಇಡೀ ಪ್ರಪಂಚದಾದ್ಯಂತ ಮಹಾತ್ಮರ ಹತ್ಯೆಯನ್ನು ಖಂಡಿಸಿ ಸಾವಿರಾರು ಶ್ರದ್ಧಾಂಜಲಿ ಸಭೆ ಸಮಾರಂಭಗಳು ನಡೆದಿದ್ದವು.

ಕೇವಲ ಎರಡು ಮೂರು ದಿನಗಳ ಅಂತರದಲ್ಲಿ, ಅತ್ಯಂತ ವಿಭಿನ್ನ ಹಿನ್ನೆಲೆಯ ಇಬ್ಬರು ಭಾರತೀಯ ಗಣ್ಯರು, gandhi_dead_bodyದೇಶವೆಂದೂ ಮರೆಯದ ಶ್ರದ್ಧಾಂಜಲಿ ಅರ್ಪಿಸಿದರು.

ಒಬ್ಬರು, ನಲವತ್ತರ ಅಂಚಿನ ಸರ್ವ ಸಂಗ ಪರಿತ್ಯಾಗಿ ಮತ್ತು ಅಂದು ಕರಾಚಿಯಲ್ಲಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ – ಸ್ವಾಮಿ ರಂಗನಾಥನಂದ.

ಇನ್ನೊಬ್ಬರು, ವರ್ಲಿ ರೈತ ದಂಗೆ, ತೆಲಂಗಾಣ ಸಶಸ್ತ್ರ ಹೋರಾಟ ಮತ್ತು ಮಹಾರಾಷ್ಟ್ರ ರಾಜ್ಯ ರಚನೆಯ ಸುಡುಬಿಸಿಯ ಹೋರಾಟಗಳ ನಡುಮಧ್ಯದಲ್ಲಿದ್ದ ಅರವತ್ತರ ಹರೆಯದ ಕಮ್ಯುನಿಸ್ಟ್ ನಾಯಕ – ಶ್ರೀಪಾದ ಅಮೃತ ಡಾಂಗೆ.

ಎಂತಹ ಅಗಾಧ ಭಿನ್ನತೆ ಮತ್ತು ಅಸಾಮ್ಯತೆ!

ವ್ಯಕ್ತಿಗಳ ಹಿನ್ನೆಲೆಗಳ ಅಗಾಧ ಭಿನ್ನತೆಯತೆಗಳ ಜೊತೆ ಜೊತೆಯಲ್ಲೇ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ ಗಾಂಧಿಯವರೂ ಕೂಡ ಅಗಾಧ ವೈರುಧ್ಯ ಮತ್ತು ವಿರೋಧಬಾಸಗಳ ಮೊತ್ತವಾಗಿದ್ದರು. ಹೀಗಾಗಿ ಗಾಂಧಿಯನ್ನು ಕುರಿತು ಒಂದೇ ಹಿನ್ನೆಲೆಯ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಮಾತನಾಡುವುದು ಸಾಧ್ಯವಿದೆಯೇ? ಸಾಧ್ಯವಾಯಿತು ನೋಡಿ!

ಇನ್ನೊಂದು ವಿಶೇಷತೆ ಗಮನಿಸಿ. ವಿವೇಕಾನಂದರಾಗಲಿ, ಅವರ ಗುರುಭಾಯಿಗಳಾಗಲಿ ಅಥವಾ ಆಶ್ರಮವಾಗಲಿ, ನೇರ ಅಥವಾ ಪರೋಕ್ಷವಾಗಿ ಯಾವುದೇ ರಾಜಕೀಯ ಹೋರಾಟ (ಸಾಮಾಜಿಕ ಹೋರಾಟಗಳಲ್ಲಿ ಕೂಡ) ಭಾಗಿಯಾಗಿರಲಿಲ್ಲ. ಏನಿದ್ದರೂ, ರಂಗನಾಥನಂದರಾಗಲಿ ಅವರ ಅಶ್ರಮವಾಗಲಿ ಗಾಂಧಿವಾದದ ಆಸುಪಾಸು ಎನ್ನುವಂತೆ ಕೂಡ ಇರಲಿಲ್ಲ.

ಇನ್ನು ಡಾಂಗೆಯವರಂತೂ ಗಾಂಧೀಜಿಯವರನ್ನು ಉದ್ದಕ್ಕೂ ವಿರೋಧಿಸಿದವರು. ಗಾಂಧಿ ಪ್ರೇರಿತ ಸಮಾಜವಾದ ಕಮ್ಯುನಿಸ್ಟ್ ರ ಮಟ್ಟಿಗೆ ಒಂದು ಕಾಗಕ್ಕ ಗುಬ್ಬಕ್ಕ ಕಥೆಗಿಂತ ಹೆಚ್ಚು ಮಹತಿಯದ್ದೇನಲ್ಲ.

ಹಾಗಿದ್ದರೆ, ಗಾಂಧಿಯವರ ಬದುಕು ಇವರನ್ನು ಒಟ್ಟು ಗೂಡಿಸಿತಲ್ಲದೆ, ಸಾವು ಕೂಡ ಹೇಗೆ ಸಾಮ್ಯತೆ ಬೆಸೆಯಿತು?

ಇವರಿಬ್ಬರ ಮಾತುಗಳಲ್ಲಿ ಅಗಾಧ ಸಾಮ್ಯತೆ ಇತ್ತು ಎಂದರೆ ಆಶ್ಚರ್ಯವಾಗುತ್ತದೆ. ಎಷ್ಟರ ಮಟ್ಟಿಗೆಂದರೆ, Gandhi's Funeralಇವರಿಬ್ಬರ ಭಾಷಣದ ವಾಕ್ಯಗಳನ್ನು ಬಿಡಿಯಾಗಿ ಉದಹರಿಸಿದರೆ, ಯಾವುದನ್ನು ಯಾರು ಹೇಳಿದ್ದು ಎಂದು ಹೇಳುವುದು ಕಷ್ಟ. ಇದಕ್ಕಿಂತ ಜಾಸ್ತಿ, ಹಂತಕ ಗೋಡ್ಸೆಯ ಕುರಿತಾದ ಇವರಿಬ್ಬರ ನಿಲುಮೆಯಲ್ಲಿ ಕೂಡ ಒಂದಿನಿತೂ ಭಿನ್ನತೆಗಳಿರಲಿಲ್ಲ. ಗೋಡ್ಸೆಯನ್ನು ಕ್ಷಮಿಸಿ ಬಿಡಬೇಕು ಎಂದು ಕೆಲವರು ರಾಗ ತೆಗೆದಿದ್ದನ್ನು ತಮ್ಮದೇ ರೀತಿಯಲ್ಲಿ ಇಬ್ಬರೂ ವಿರೋಧಿಸುತ್ತಾರೆ. ಡಾಂಗೆ ವಿಧಾನ ಸಭೆಯಲ್ಲಿ ಮಾತನಾಡಿದ್ದಕ್ಕೂ, ರಂಗನಾಥನಂದರು ಭಕ್ತರಿಗೆಂದು ಮೀಸಲಾದ ಸಂಜೆಯ ಪ್ರವಚನದಲ್ಲಿ ಹೇಳಿದ್ದೂ ಏಕಸೂತ್ರ ದಂತಿದೆ!

ಹಾಗೆಂದು ಸ್ವಾಮಿ ರಂಗನಾಥನಂದರು ನಮ್ಮ ಇಂದಿನ ಕೆಲವು ಪ್ರಗತಿಪರ ಮಠಾಧೀಶರ ಸಾಲಿನವರೇನಲ್ಲ. ರಂಗನಾಥನಂದರು ನಾಲ್ಕು ಕಂತುಗಳಲ್ಲಿ ಬರೆದ ಬರೆದ ಬೃಹತ್ ಮತ್ತು ಪ್ರಸಿದ್ಧ ಪುಸ್ತಕ “Eternal Values for a Changing Society” ವೇದ, ವೇದಾಂತ ಇತ್ಯಾದಿ ಕುರಿತೇ ಇರುವಂಥಹದ್ದು.

ಇದಕ್ಕಿಂತ ವಿಶೇಷ ಏನು ಗೊತ್ತೇ? ರಂಗನಾಥನಂದರ ಕರಾಚಿ ಆಶ್ರಮದಲ್ಲಿ ಅತ್ಯಂತ ಭೀಕರ ಕೋಮು ಭೀತಿಯ ವಾತಾವರಣ ಇತ್ತು. ಇಂಥ ಸಂದರ್ಭದಲ್ಲೂ ಗಾಂಧಿಯನ್ನು ಧೇನಿಸುವ ತಿಳಿ ಮನಸ್ಸು ನೋಡಿ!

ಇನ್ನೊಂದು ವಿಶೇಷವೆಂದರೆ ಕರಾಚಿ ರಾಮಕೃಷ್ಣ ಆಶ್ರಮದಲ್ಲಿ ಜರುಗುತ್ತಿದ್ದ ಭಜನೆ ಮತ್ತು ಉಪನ್ಯಾಸ ಕಾರ್ಯಕ್ರಮಗಳಿಗೆ ಸದಾ ಬರುತ್ತಿದ್ದವರಲ್ಲಿ ಒಬ್ಬ ವಿಶೇಷ ವ್ಯಕ್ತಿ ಕೂಡ ಇದ್ದರು. ಈ ವ್ಯಕ್ತಿ ಇಂದಿಗೂ ಸ್ವಾಮೀಜಿಯವರ ವ್ಯಕ್ತಿತ್ವ ಮತ್ತು ಅವರ ಅಧ್ಯಾತ್ಮಿಕತೆ ಕುರಿತ ಅವರ ಉಪನ್ಯಾಸ ಗಳನ್ನು ನೆನೆದುಕೊಳ್ಳುತ್ತಾರೆ. ಆದರೆ ಈ ವ್ಯಕ್ತಿ ಗಾಂಧಿ ಹತ್ಯೆ ಕುರಿತ ಸ್ವಾಮಿಜಿಯವರ ಈ ಉಪನ್ಯಾಸ ಕೇಳಿಸಿಕೊಂಡಿದ್ದ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಯಾರು ಗೊತ್ತೇ ಆ ವ್ಯಕ್ತಿ? ಲಾಲಕೃಷ್ಣ ಅಡ್ವಾಣಿ!

ಅಂದು ಮತ್ತೆ ಇಂದು, ಅಡ್ವಾಣಿಯವರಿಗಾಗಲಿ ಅಥವಾ ಸಂಘ ಪರಿವಾರಕ್ಕಾಗಲಿ ಗಾಂಧಿ ತತ್ವವನ್ನು ವಿರೋಧಿಸುವ ಮನಸ್ಸೇನೋ ತುಂಬಾ ಇದೆ Advaniಆದರೆ ಸ್ವಾಮಿ ರಂಗನಾಥನಂದರಂಥ ಸಂತರು ಗಾಂಧಿಯನ್ನು ಗೌರವಿಸುವಾಗ ಸಂಘ ಪರಿವಾರಕ್ಕೆ ಎಷ್ಟು ಇರುಸು ಮುರುಸು ಉಂಟಾಗುತ್ತದೆ ಗಮನಿಸಿ.

ಆ ವಿಷಯ ಹಾಗಿರಲಿ; ಗಾಂಧಿ ಎರಡಾಣೆ ಶುಲ್ಕ ಕೊಟ್ಟು ಕಾಂಗ್ರೆಸ್ ನ ಸದಸ್ಯರಾಗಿದ್ದರೋ ಇಲ್ಲವೋ ಗೊತ್ತಿಲ್ಲ, ಅವರು ಗಾಂಧಿ ಟೊಪ್ಪಿ ಎಂದೂ ತೊಡಲಿಲ್ಲ. ಎಂದಿಗೂ ಯಾವುದೇ ಮಠ ಮಾನ್ಯ ಗಳ ಬಾಗಿಲಿಗೆ ಹೋಗಲಿಲ್ಲ; ದೇವಸ್ಥಾನ, ಆಶ್ರಮ ಇತ್ಯಾದಿಗಳ ಗೋಜಿಗೂ ಹೋಗಲಿಲ್ಲ. ಬೆಳಗಾವಿಯಲ್ಲಿ ಜರುಗಿದ ಅಧಿವೇಶನ ಬಿಟ್ಟು ಬೇರೆಲ್ಲೂ ಕಾಂಗ್ರೆಸ್ ಅಧ್ಯಕ್ಷರಾಗಿರಲಿಲ್ಲ.

ಗಾಂಧಿ, ಭಾರತದ ಅತ್ಯಂತ ಪ್ರಭಾವಿ ಶಕ್ತಿ ಕೇಂದ್ರವಾಗಿದ್ದರೂ, ಯಾವ ವ್ಯಕ್ತ ಅಥವಾ ಪ್ರಕಟ ಸ್ವರೂಪದ ಅಧಿಕಾರವನ್ನು ಸ್ವೀಕರಿಸಲಿಲ್ಲ. ಭಾರತದ ಸ್ವಾಯತ್ತತೆ ಮತ್ತಿತರೇ ಮಹತ್ತರ ತೀರ್ಮಾನ ಗಳನ್ನು ಕೈಗೊಳ್ಳಲು ೧೯೪೫ ರಲ್ಲಿ ಅಂದಿನ ವೈಸ್ ರಾಯ್ ಮೌಂಟ್ ಬ್ಯಾಟನ್ ಶಿಮ್ಲಾದಲ್ಲಿ ಕರೆದ ಸಭೆಯನ್ನು ಗಾಂಧಿ ನಿರ್ದೇಶಿದ ರೀತಿ ನೋಡಿ. ಸಭೆಯ ಮುನ್ನಾ ದಿನ ಶಿಮ್ಲಾಗೆ ಬಂದಿಳಿಯುವ ಗಾಂಧಿ, ಸಭೆಗೆ ಹಾಜರಾಗುವುದಿಲ್ಲವಾದರೂ, ಸಭೆಗೆ ಹಾಜರಾಗುವ ಕಾಂಗ್ರೆಸ್ಸನ ಎಲ್ಲ ನಾಯಕರಿಗೆ ನೀತಿ ನಿರ್ದೇಶನ ನೀಡುತ್ತಾರೆ.

ಗಾಂಧಿ ಹಾಗೆಂದು ರಿಮೋಟ್ ಕಂಟ್ರೋಲ್ ನಾಯಕರಲ್ಲ. ಸ್ವಾತಂತ್ರ್ಯ ಬಂದ ಹೊಸ್ತಿಲಿನಲ್ಲಿ ಕೋಮು ದಳ್ಳುರಿ ತಣಿಸಲು ಗಾಂಧೀ ನೌಖಾಲಿಗೆ ಹೊರಡುತ್ತಾರೆ. ಅಲ್ಲಿ ಕೆಲವು ದುಷ್ಟರು ಗಾಂಧೀಜಿ ಉಳಿದುಕೊಂಡ ಗ್ರಾಮಗಳಲ್ಲಿ ಸಾಗುವ ದಾರಿಯುದ್ದಕ್ಕೂ ಮಲವನ್ನು ಮೂತ್ರ ಹರಡಿರುತ್ತಾರೆ. ಗಾಂಧೀಜಿಯ ಮೊಮ್ಮಗಳು ಮನು ಗಾಂಧಿ ಬೇಗನೆ ಮುಂದೆ ತೆರಳಿ ಅದನ್ನು ಸ್ವಚ್ಛ ಗೊಳಿಸುತ್ತಾರೆ. ಇದನ್ನು ಅರಿತ ಗಾಂಧಿ ಹೇಳುತ್ತಾರೆ “ಇಂದು ಶ್ರೇಷ್ಠ ವಾದದ್ದನ್ನು ನನ್ನಿಂದ ಕಸಿದುಕೊಂಡೆ”!

ಗಾಂಧಿಯ ಸಂವಹನ ಪ್ರಕ್ರಿಯೆ ತುಂಬಾ ಸೂಕ್ಷ್ಮ ಆದರೆ ತೀಕ್ಷ್ಣ ಮಟ್ಟದ್ದು. ಗಾಂಧಿ ಮೆಲ್ಪದರಿನ ರಾಜಕಾರಣ ಮಾಡಲೇ ಇಲ್ಲ. ದೇಶದ ವಿಭಜನೆಯೂ ಸೇರಿದಂತೆ, ಸರಕಾರದ ಅಥವಾ ಕಾಂಗ್ರೆಸ್ಸ್ ನ ಅನೇಕ ಮಹತ್ತರ ತೀರ್ಮಾನಗಳಲ್ಲಿ ಗಾಂಧಿ ನೇರವಾಗಿ ಭಾಗಿಯಲ್ಲ. ನೇತಾಜಿ – ಪಟ್ಟಾಭಿ ಸ್ಪರ್ಧೆಯ ಸಂದರ್ಭ ಬಿಟ್ಟರೆ ಗಾಂಧಿ ಕಾಂಗ್ರೆಸ್ಸನ ಸಂಘಟನೆಯ ಒಳಗಿನ ಸೋಲು ಗೆಲುವನ್ನು ತಮ್ಮ ಸೋಲು – ಗೆಲುವು ಎಂದು ಭಾವಿಸಲಿಲ್ಲ – ಕನಿಷ್ಠ ಬಿಂಬಿಸಲಂತೂ ಇಲ್ಲ .

ಹಾಗಿದ್ದಾಗ್ಯೂ, ಗೋಡ್ಸೆ ಕೊಲ್ಲುವುದು ಗಾಂಧಿಯನ್ನು; ಪ್ರಧಾನಿ ನೆಹರು ಅಥವಾ ಇತರ ಕಾಂಗ್ರೆಸ್ ನ ನಾಯಕರನ್ನಲ್ಲ. ಇನ್ನೊಂದು ಕಡೆಯಿಂದ ನೋಡಿದರೆ, ವರ್ಣಾಶ್ರಮವನ್ನು ಸಂಪೂರ್ಣವಾಗಿ ಒಪ್ಪುವ ಹಿಂದೂ ಆಗಿದ್ದ ಗಾಂಧಿಯನ್ನು ಕೊಂದದ್ದು ಇನ್ನೊಬ್ಬ ‘ಹಿಂದೂ’ – ಅದರಲ್ಲೂ ಬ್ರಾಹ್ಮಣ!

ಯುಗ ಯುಗಾಂತರದಿಂದ ಶೋಷಣೆ ಸಾಧನ ಮಾಡಿಕೊಂಡ ವೈದಿಕ ಧರ್ಮವನ್ನು ಸಮರ್ಥವಾಗಿ ಬೀದಿಯಲ್ಲಿ ಬೆತ್ತಲೆ ಮಾಡಿದ Young_Ambedkarಅಂಬೇಡ್ಕರರನ್ನು ಕಡೆಗಣಿಸಿದ ಸಾತ್ವಿಕ ಸಿಟ್ಟಿನ ಕಾರಣ ಯಾವ ದಲಿತನೂ ಗಾಂಧಿಯನ್ನು ಕೊಲ್ಲಲಿಲ್ಲ. ಪಾಕಿಸ್ತಾನದ ಮುಸ್ಲಿಂ ಉಗ್ರಪಂಥೀಯರಾಗಲಿ ಅಥವಾ ಸರ್ವಸ್ವ ಕಳೆದುಕೊಂಡ ವರಳಿಯ-ತೆಲಂಗಾಣದ ಕಮ್ಯುನಿಸ್ಟ್ ರೈತರಾಗಲಿ ಗಾಂಧಿಯನ್ನು ಕೊಲ್ಲಲಿಲ್ಲ. ಗಾಂಧಿಯನ್ನು ಕೊಂದದ್ದು ಒಬ್ಬ ‘ಹಿಂದೂ’ ಬ್ರಾಹ್ಮಣ! ಗಾಂಧಿಯ ರಾಮನ ಬಾಣ ಯಾರನ್ನು ಹೆಚ್ಚು ಚುಚ್ಚುತ್ತಿತ್ತು ಎಂದು ಇದರಿಂದಲೇ ವೇದ್ಯ ವಾಗುತ್ತದೆ.

ದಲಿತರಿಗೆ ಗಾಂಧೀ ಬಗೆಗಿನ ವಿರೋಧಕ್ಕೆ, ಅಂಬೇಡ್ಕರರ ವಿದ್ವತ್ ಪೂರ್ಣ ಸಿದ್ಧಾಂತ, ಬರಹ – ಭಾಷಣಗಳ ತಳಹದಿ ಇತ್ತು. ಕಮ್ಯುನಿಸ್ಟ್ ರಿಗೆ ಗಾಂಧಿವಾದದ ಎದುರು ಮಾರ್ಕ್ಸ್ ವಾದವೆಂಬ ವಿಶ್ವ ವಿಶಾಲ ತತ್ವದ ಆಸರೆಯಿತ್ತು. ಆದರೆ ವೈದಿಕಶಾಹಿಗಳಿಗೆ ಯಾವ ಸೈದ್ಧಾಂತಿಕ ತಲೆ ಬುಡವೂ ಇರಲಿಲ್ಲ. ಅವರ ಗರ್ಭಗುಡಿಯೊಳಗೇ ನಿಂತು ಅವರ ಮಂತ್ರ ಗಳನ್ನೂ ಉಚ್ಚರಿಸಿಯೇ ಅವರ ಭೂತವನ್ನು ಉಚ್ಚಾಟನೆ ಮಾಡುತ್ತಿದ್ದ ಗಾಂಧಿಯನ್ನು ದೈಹಿಕ ಹಲ್ಲೆ / ಕೊಲೆ ಮಾಡದೆ ಬೇರೆ ಮಾರ್ಗವೇ ಇರಲಿಲ್ಲ.

ಆದರೆ ಇಂದು ಹಿಂದುತ್ವ ಪರಿವಾರ ಗಾಂಧಿಯನ್ನು ಮತ್ತು ಗಾಂಧಿಯ ಅಂತರಂಗದ ಶಿಷ್ಯ ಪಟೇಲ್ ರನ್ನು ನುಂಗುತ್ತಿದೆ. ಸಂಘ ಪರಿವಾರವನ್ನು ನೆಹರುಗಿಂತ ಒಂದು ಕೈ ಹೆಚ್ಚೇ ವಿರೋಧಿಸುತ್ತಿದ್ದ ಪಟೇಲರು ಇಂದು ಗಣ ವೇಷ ತೊಟ್ಟು ನಡು ನೀರಿನಲ್ಲಿ ಮೂರ್ತಿಯಾಗಿ ನಿಂತಿದ್ದರೆ, ನೆಹರು ಇನ್ನೊಂದು ಐದು ವರ್ಷಕ್ಕೆ “ನಮಸ್ತೆ ಸದಾ ವತ್ಸಲೇ….” ಶುರು ಮಾಡಿಕೊಳ್ಳಬಹುದು. ಇನ್ನು ಅಂಬೇಡ್ಕರ್ ರಂತೂ “ಸಾಮಾಜಿಕ ಕ್ರಾಂತಿ ಸೂರ್ಯ” ರಾಗಿ ಹಿಂದೂ ಧರ್ಮದ ರಕ್ಷಣೆಗೆ ಕಂಕಣ ತೊಟ್ಟು ನಿಂತಾಗಿದೆ!

ಇಂಥದ್ದರಲ್ಲಿ, ಸಂಘ ಪರಿವಾರದ ಬದ್ಧ ವಿರೋಧಿಗಳಾದ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ‘ಮಹಾತ್ಮಾ ಗಾಂಧಿ ಬ್ರಿಟಿಷರ ಏಜೆಂಟ್’ ಎಂದು ಇತ್ತೀಚಿಗೆ ಅಪ್ಪಣೆ ಕೊಡಿಸಿದ್ದಾರೆ. ಅರುಂಧತಿ, ಗಾಂಧಿಯನ್ನು ಹಿಗ್ಗಾ ಮುಗ್ಗಾ ಖಂಡಿಸಿ, ನವಯಾನ ಪ್ರಕಟಿಸಿದ ಬಾಬಾ ಸಾಹೇಬರ “Annihilation of Caste” ನಲ್ಲಿ ಮುನ್ನುಡಿ ಬರೆದಿದ್ದಾರೆ. ಇದೆಲ್ಲದುರಿಂದ ಯಾರಿಗೆ ಯಾವ ರಾಜಕೀಯ ಲಾಭ ಸಿಗುತ್ತದೆ ಎಂದು ಗೊತ್ತಾಗದಷ್ಟು ಅಮಾಯಕರೇ ಇವರೆಲ್ಲ ಎಂದು ಅಚ್ಚರಿಯಾಗುತ್ತದೆ!

ಬುದ್ಧ- ಬಸವ-ಮಾರ್ಕ್ಸ್-ಫುಲೆ-ಅಂಬೇಡ್ಕರ್ ವಾದಿಗಳು ಗಾಂಧಿಯನ್ನು ಹೀಗೆ ದೂರ ಮಾಡಿಕೊಂಡಿದ್ದ ಪರಿಣಾಮ ಇಂದು ಗಾಂಧಿಯನ್ನು ಸಂಘಿಗಳು ಹೈಜಾಕ್ ಮಾಡಿಕೊಂಡಿದ್ದಾರೆ. ನಿಮಗೆ ಗೊತ್ತಿರಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಪ್ರಾತಃ ಸ್ಮರಣೀಯರ ಪಟ್ಟಿ ಒಂದಿದೆ; ಅದರಲ್ಲಿ ಗಾಂಧಿ ಕೂಡ ಒಬ್ಬರು. ೧೯೯೨ ರ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಕೈಗೆತ್ತಿ ಕೊಂಡ ಅಜೆಂಡಾ ಗಾಂಧಿಯ “ಸ್ವದೇಶೀ”. ಸಂಘ ಪರಿವಾರದ ಬೆನ್ನೆಲಬು ಎನಿಸಿಕೊಂಡ ವ್ಯಾಪಾರಸ್ಹರು ತಾವು ವಿದೇಶಿ ಸರಕು ಅಂಗಡಿಯಲ್ಲಿ ಇಟ್ಟುಕೊಂಡೇ “ಸ್ವದೇಶೀ ಸಾಮಗ್ರಿ ಕೊಳ್ಳಿ” ಎಂದು ಪ್ರಚಾರ ಶುರು ಮಾಡಿದರು. ಹೀಗೆ, ಗಾಂಧಿಯನ್ನು ಕಾಪಿ ಹೊಡೆಯದೆ ಇದ್ದಿದ್ದರೆ ಸಂಘಿಗಳಿಗೆ ಸಂಸತ್ತಿನಲ್ಲಿ “೩೫ ಮಾರ್ಕು” ದಾಟುತ್ತಿರಲಿಲ್ಲ.

ಇನ್ನು ಗಾಂಧಿಯನ್ನು ದೊಡ್ಡ ದೊಡ್ಡ ‘ಸೈದ್ಧಾಂತಿಕ’ ಕಾರಣಗಳಿಗೆ ವಿರೋಧಿಸಿದವರು ಇಂದು ಬೋರ್ಡಿಗಿಲ್ಲದೆ ಹೋದರು. ಏನೇ ಆದರೂ ಗಾಂಧಿ ವಿರೋಧದಿಂದ ಒಂದು ಪೈಸೆಯ ಲಾಭವಂತೂ ಇಲ್ಲ; ಉಲ್ಟಾ ನಷ್ಟವೇ ಜಾಸ್ತಿ. ಇಂದು ವಿದೇಶಗಳಲ್ಲಿ ಭಾರತ ಪ್ರತಿಮೆ ಎಂದರೆ ಗಾಂಧಿ ಪ್ರತಿಮೆ. ವಿದೇಶಗಳಲ್ಲಿ ಗಾಂಧಿಯನ್ನು ಬೈದುಕೊಂಡು ತಿರುಗಿದರೆ ಭಾರತ ವನ್ನೇ ಬೈದಂತೆ. ಉಗ್ರ ನಾಸ್ತಿಕವಾದಿ ಗೊ.ರಾ ಮತ್ತು ಹೆಚ್. ನರಸಿಂಹಯ್ಯನವರು ಎಷ್ಟು ಗಾಂಧಿವಾದಿಯೊ ಅಷ್ಟೇ ಸ್ವಮೂತ್ರ ಪಾನ ಮಾಡುವ ಕಟ್ಟಾ ಸಂಪ್ರದಾಯವಾದಿ ಮೊರಾರ್ಜಿ ಕೂಡ ಅಷ್ಟೇ ಗಾಂಧಿವಾದಿ. JP, ಲೋಹಿಯಾರಷ್ಟೇ ಗಾಂಧಿಯನ್ನು ಸರದಾರ್ ಪಟೇಲ್ ಮತ್ತು ಕೆ. ಎಲ್. ಮುನ್ಷಿ ಇಷ್ಟ ಪಟ್ಟಿದ್ದರು. ಇನ್ನು ತೆಲಂಗಾಣದಲ್ಲಿ ಪಟೇಲರ ಗುಂಡು ಎದುರಿಸುತ್ತಲೇ, ಗಾಂಧಿಗೆ ಶ್ರದ್ಧಾಂಜಲಿ ಅರ್ಪಿಸುವ ಡಾಂಗೆಯ ವೈಶಿಷ್ಟ್ಯ ನೋಡಿ! ತತ್ವ ಸಿದ್ಧಾಂತಗಳ ಎಲ್ಲೆ ಮೀರಿ ಎಲ್ಲ ಹಂತದ ಮತ್ತು ಭಿನ್ನ ಒಲವಿನ ವ್ಯಕ್ತಿ ಗಳನ್ನೂ ಆಕರ್ಷಿಸುವ ಶಕ್ತಿ ಮತ್ತು ಸತ್ವ ಗಾಂಧಿಯಲ್ಲಿತ್ತು.

ಗೋಡೆಗೆ ಬಣ್ಣ ಹಚ್ಚುವ ಮೊದಲು ಪುಟ್ಟಿ ಹಚ್ಚುವ ಮಾದರಿಯಲ್ಲಿ ರಾಜಕೀಯ ಹೋರಾಟಕ್ಕೆ ಮುನ್ನ ಮತ್ತು ನಂತರ ವಯಕ್ತಿಕ ಮತ್ತು MKGandhiಸಾಮಾಜಿಕ ಸನ್ನದ್ಧತೆ ತಂದು ಕೊಳ್ಳಬೇಕಾದ ಅಗತ್ಯತೆಯನ್ನು ಗಾಂಧಿಯಷ್ಟು ಪ್ರಖರವಾಗಿ ಪ್ರತಿಪಾದಿಸಿದವರೇ ಇಲ್ಲ. ಎಲ್ಲ ಪಕ್ಷ ಗಳಿಗೆ ರಾಜಕೀಯವೆಂದರೆ ಚುನಾವಣೆ ಮಾತ್ರ. ಆದರೆ ಸಂಘ ಪರಿವಾರಕ್ಕೆ ಚುನಾವಣಾ ಸೋಲು ಗೆಲವು ಗೌಣ. ಸಂಘ ಪರಿವಾರದ್ದು “ವಾಲ್ ಪುಟ್ಟಿ” ರಾಜಕಾರಣ. ಬಣ್ಣ ಯಾವುದಾದರೂ ಆದೀತು ತಳಹದಿ ಭದ್ರವಾಗಿರಬೇಕು. ಇದನ್ನೇ ಅವರು ಗಾಂಧಿಯಿಂದ ಕಲಿತದ್ದು ಮತ್ತು ಉಳಿದವರು ಬಿಟ್ಟಿದ್ದು. ಗಾಂಧಿಯನ್ನು ಪ್ರಗತಿಪರರು ತುಚ್ಚೀಕರಿಸಿದರೆ ಕೋಮುವಾದಿಗಳು ಗುರುವಾಗಿ ಸ್ವೀಕರಿಸಿದರು. ಇಂದು ಅದೇ ಗುರುವನ್ನು ಮುಂದಿಟ್ಟುಕೊಂಡು ಪ್ರಗತಿಪರರ ಹೆಬ್ಬೆಟ್ಟು ಕಿತ್ತಿದ್ದಾರೆ. ರಾಜಕೀಯದ ಇಸ್ಪೀಟ್ ಆಟದಲ್ಲಿ ನಮಗೆ ಬೇಡ ಎಂದು ಪ್ರಗತಿಪರರು ಎಸೆದ ಕಾರ್ಡ್ ಇಂದು ಸಂಘಿಗಳಿಗೆ ಟ್ರಂಪ್ ಕಾರ್ಡ್ ಆಗಿದೆ!

ಕಾಂಗ್ರೆಸ್ ಗೆ ಚುನಾವಣಾ ರಾಜಕಾರಣ ಬಿಟ್ಟರೆ ಬೇರೆ ಗೊತ್ತಿಲ್ಲ. ಸಿದ್ಧಾಂತದ ಗೋಜು ಏನಾದರೂ ಇದ್ದರೆ ಸಿಪಿಐ / ಸಿಪಿಎಂ ಮತ್ತು ಬಿ‌ಎಸ್‌ಪಿ ಗಳಿಗೆ. ಆದರೆ ಈ ಸೈದ್ಧಾಂತಿಕ ಪಕ್ಷಗಳ ಗತಿ ಏನಾಗಿದೆ? ಇಂದು ಸಂಘಿಗಳ ‘ರಾಮ’ನನ್ನು ಎದುರಿಸುವ ಶಕ್ತಿ ಏನಾದರೂ ಇದ್ದರೆ ಅದು ಗಾಂಧಿಯ ರಾಮನಿಗೆ ಮಾತ್ರ ಹೊರತು (ಯೆಚೂರಿ) ಸೀತರಾಮನಿಗಲ್ಲ ಅಥವಾ (ಕಾನ್ಷಿ) ರಾಮನನ್ನು ತೊರೆದ ಮಾಯಾವತಿಗೂ ಅಲ್ಲ. ಸತ್ವಹೀನ ಕಾಲರ ಕೀಟಾಣು ಗಳು ಕಾಲರ ರೋಗಕ್ಕೆ ಮದ್ದು. ಹಾಗೆಯೇ ಸಂಘಿಗಳ ಕೋಮುವಾದಕ್ಕೆ ಹಿಂದೂಧರ್ಮ ಮತ್ತು ವರ್ಣಾಶ್ರಮ ‘ಪ್ರತಿಪಾದಿಸುವ’ ಗಾಂಧಿಯೇ ಮದ್ದು. ಗಾಂಧಿಯಷ್ಟು ರಾಜಕಾರಣ ದಲ್ಲಿ ‘ಧರ್ಮವನ್ನು’ ಬೇರೆಸಿದವರೇ ಇಲ್ಲ. ಆದರೆ ಗಾಂಧಿ ಧರ್ಮವನ್ನು ಬಳಸಿದ್ದು ವಿಷವನ್ನು ವಿಷ ಕೊಳ್ಳುವಂತೆ ಗಾಂಧಿ ಬಿಡಿಸಿದ ಒಂದೊಂದೇ ಚಿತ್ರವು ವಿಚಿತ್ರವಾಗಿ ಕಂಡರೂ ಒಟ್ಟಿನ ಕೊಲಾಜ್ ಅರ್ಥಪೂರ್ಣವಾಗಿಸುವ ಗಾಂಧಿ ಭಾರತವನ್ನು ಒಟ್ಟು ಗೂಡಿಸಿದ ಶಕ್ತಿ.

ಗಾಂಧಿ, ಎರಡಲ್ಲ, ನಾಲ್ಕು ಧ್ರುವಗಳನ್ನು (ಹಿಂದೂ-ಮುಸ್ಲಿಂ-ಎಡ-ಬಲ) ಸಮಗ್ರವಾಗಿ ಸಮನ್ವಯಗೊಳಿಸಿದ ಶಕ್ತಿ. ಸಂವಿಧಾನ ರಚನೆಗೆ ಬಾಬಾ ಸಾಹೇಬರನ್ನೇ ನೇಮಿಸಬೇಕು ಎಂದು ನೆಹರುಗೆ ಒತ್ತಾಯಿಸಿದ್ದು ಗಾಂಧಿಯೇ. ಅಂಬೇಡ್ಕರ್ ಮತ್ತು ಗಾಂಧಿ ನಡುವಣ ಬಿನ್ನತೆಗಳು ಹೊರಪದರಿನ ಹೊಂದಾಣಿಕೆ ಸಮಸ್ಯೆಗಳೇ ವಿನಃ ಅಂತರಂಗದ ಸರಿಹೋಗಲು ಸಾಧ್ಯವೇ ಇಲ್ಲದ ವೈರುಧ್ಯಗಳಲ್ಲ. ಅಂಬೇಡ್ಕರ್, ಗಾಂಧಿಗಿಂತ ಹೆಚ್ಚು ವಿದ್ವತ್ಪೂರ್ಣ ಮತ್ತು ಪ್ರಖರ ಶಕ್ತಿ. ನಿಜ. ಆದರೆ, ಗಾಂಧಿಯನ್ನು ನಂಜಿಕೊಳ್ಳಲು ಒಲ್ಲದ ಅಂಬೇಡ್ಕರ್ ವಾದಕ್ಕೆ ನಂಜು ತಗಲುವ ಭಯವಿದೆ. ಹಾಗೆಯೇ, ಮಾರ್ಕ್ಸ್‌ವಾದ ಭಾರತದ ಸಂದರ್ಭಕ್ಕೆ ಗಾಂಧೀ ಸತ್ವ ಮತ್ತು ಅಂಬೇಡ್ಕರ್‌ರ ಕಾಣ್ಕೆಯನ್ನು ಅಂತರ್ಗತಗೊಳಿಸಿಕೊಳ್ಳಲೇಬೇಕು. ಹಾಗೆಯೇ ಮಾರ್ಕ್ಸ್ ಪ್ರತಿಪಾದಿಸಿದ ಅಂತರರಾಷ್ಟ್ರೀಯ ಶೋಷಿತರ ಭ್ರಾತೃತ್ವ, ಅರ್ಥಿಕ ಸಮಾನತೆಯ ತತ್ವ ಅಂಬೇಡ್ಕರ್ ಸಿದ್ಧಾಂತಕ್ಕೆ ಅತಿ ಮುಖ್ಯ.

ಈ ತತ್ವ ಸಮನ್ವಯ ಇಂದಿನ ಸಾಮಾಜಿಕ ಮತ್ತು ರಾಜಕೀಯ ತುರ್ತುಗಳಲ್ಲಿ ಒಂದು ಎಂದಾದ ಮೇಲೆ ಗಾಂಧಿ ಇಂದಿನ ತುರ್ತು ಎಂದು ಬೇರೆ ಹೇಳಬೇಕಿಲ್ಲ. ಏಕೆಂದರೆ ಈ ತತ್ವ ಸಮನ್ವಯ ಸಾಧ್ಯವಾಗುವುದು ಗಾಂಧಿ ಎಂಬ ಸಮಾನಾಂತರ ಕೇಂದ್ರ ಬಿಂದುವಿನಿಂದ.

ಇಂದು, ಅಂಬೇಡ್ಕರ್ ವಾದಿಗಳು, ಲೋಹಿಯಾ ಮತ್ತು ಮಾರ್ಕ್ಸ್ ವಾದಿಗಳು ಸೇರಿದಂತೆ ಎಲ್ಲ ಸಮಾಜಪರ ಪ್ರಗತಿಪರ ಶಕ್ತಿಗಳು, ನಮ್ಮ- ನಮ್ಮಲ್ಲಿ ೧೦೦-೫ ಎಂಬ ಭೇದ ಬೆಳೆಸಿಕೊಂಡರೂ, ಬೇರೆಯವರನ್ನು ೧೦೫ ರ ಶಕ್ತಿಯಿಂದ ಎದುರಿಸಬೇಕಾದ ಅಗತ್ಯವಿದೆ. ಈ ಒಗ್ಗಟ್ಟಿನ ಸಾಧ್ಯವಾಗಿಸುವ ಅತ್ಯಂತ ಸರಳ ಸಂವಹನ ಸಾಧನ ಇಂದಿಗೆ ಗಾಂಧಿ ಮಾತ್ರ.

ಗಾಂಧಿಯ ಕುರಿತ ಬಿಡಿ ಬಿಡಿ facts ಗಳು ಸತ್ಯವೆನಿಸಿಕೊಳ್ಳುವುದಿಲ್ಲ. ಇಂದಿಗೆ ಇದನ್ನೆಲ್ಲಾ ಕೆದಕಿ ಕೊಂಡು ಇದ್ದೊಂದು ಗುಡಿಸಲನ್ನೂ gandhi2ಮೈಮೇಲೆ ಕೆಡವಿಕೊಳ್ಳಲು ಇದು ಸಂದರ್ಭವೂ ಅಲ್ಲ. ಇನ್ನು ಈ ಎಲ್ಲ ಅಂತರ್ ಕಲಹದ ಲಾಭ ಯಾರಿಗೆ ಎಂದು ಬಿಡಿಸಿ ಹೇಳಬೇಕಾದ ಅಗತ್ಯವೂ ಇಲ್ಲ.

ವಿಚಿತ್ರವೆಂದರೆ, ಇಂದು ಬಿಜೆಪಿಯಲ್ಲಿನ ಅಡ್ವಾಣಿ ಮತ್ತು ಬ್ರಾಹ್ಮಣಶಾಹಿ ನಾಯಕತ್ವಕ್ಕೆ ಮೋದಿ ಮೇಲೆ ಇರುವಷ್ಟು ಸಿಟ್ಟು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ರ ಮೇಲೂ ಇಲ್ಲ. ಆದರೂ ಹೇಗೆ ತೆಪ್ಪಗೆ ನುಂಗಿಕೊಂಡು ಕೂತಿದ್ದಾರೆ ನೋಡಿ. ಇಂತಹದ್ದರಲ್ಲಿ ನಾವು ನಾವುಗಳೇ ಇಲ್ಲ ಸಲ್ಲದ ರಾದ್ದಾಂತ ಮಾಡಿಕೊಂಡು ಹೋಗುತ್ತಿದ್ದೇವೆ. ಹಾಗೆಂದು ಪ್ರಗತಿಪರರ ವಿವಿಧ ಬಣಗಳು ತಮ್ಮ ಎಲ್ಲ ತಾತ್ವಿಕ ಭಿನ್ನಾಭಿಪ್ರಾಯಗಳನ್ನೂ ಸುಮ್ಮ ಸುಮ್ಮನೆ ಬಿಟ್ಟು ಬಿಡಬೇಕು ಸಕಾರಣವಿಲ್ಲದೆ ಸುಟ್ಟು ಬಿಡಬೇಕು ಎಂದಲ್ಲ. ಹೀಗೆ ಮಾಡಿದರೆ ಅದು ತುಂಬಾ ತಾತ್ಕಾಲಿಕ ಮತ್ತು ಕೃತ್ರಿಮವಾದೀತು.

ಅಭಿಪ್ರಾಯ ಮತ್ತು ಸೈದ್ಧಾಂತಿಕ ಭೇದಗಳು ಇರಲಿ. ಅವುಗಳನ್ನು ಮನಸ್ಸಿನ ಒಂದು ಒಳ ಕೊಣೆಯಲ್ಲಿ ಇಟ್ಟುಕೊಂಡೇ ಗಾಂಧಿ ಎಂಬ ಅಂಗಳದಲ್ಲಿ ಒಟ್ಟು ಸೇರೋಣ. ನಮ್ಮ ನಮ್ಮ ಕಾರ್ಯಕ್ರಮ ನಮಗಿರಲಿ; ಗಾಂಧಿ ಮಾತ್ರ ನಮ್ಮೆಲ್ಲರ “ಕನಿಷ್ಠ ಸಾಮಾನ್ಯ ಕಾರ್ಯಕ್ರಮ” ವಾಗಿರಲಿ.