ಹೆಸರು ಹೇಳಿಕೊಳ್ಳಲೂ ಹೇಸಿಕೊಳ್ಳುವವರು vs. ಭವಿಷ್ಯ ಭಾರತದ ದಿಟ್ಟ ಸ್ಥಂಭಗಳು


– ಶ್ರೀಧರ್ ಪ್ರಭು


“ಡಿಯರ್ ಮ್ಯಾಮ್” ಎಂದು ಶುರುವಾಗುವ ‘ಒಕ್ಕಣೆ’.
ಯಾರು ಬರೆದದ್ದು?
ಗೊತ್ತಿಲ್ಲ .
ಯಾರಿಗೆ ಬರೆದದ್ದು? ಈ ‘ಮ್ಯಾಮ್’ ಎಂದರೆ ಯಾರು?
ಗೊತ್ತಿಲ್ಲ.
ಯಾವಾಗ ಬರೆದದ್ದು?
ಗೊತ್ತಿಲ್ಲ.
ದಿನಾಂಕ ನಮೂದಾಗಿದೆಯಾ?
ಇಲ್ಲ.
ಪತ್ರಕ್ಕೆ ಯಾರಾದರೂ ಸಹಿ ಹಾಕಿದ್ದಾರಾ?
ಅದೂ ಇಲ್ಲ.
ಹೋಗಲಿ, ನಕಲಿಯೇ ಸರಿ, ಯಾರದಾದರೂ ಹೆಸರು ಬರೆದಿದ್ದಾರಾ? ಸಹಿ ಹಾಕಿದ್ದಾರಾ? ಇಲ್ಲವೇ ಇಲ್ಲ.

ಒಂದು ಕಡೆ “ನಾನು” ಇನ್ನೊಂದು ಕಡೆ “ನಾವು” ಇನ್ನೊಂದು ಕಡೆ “ಐಐಟಿ ವಿದ್ಯಾರ್ಥಿಗಳು” ಎಂದು ಹೇಳಿಕೊಳ್ಳುವ ಅನಾಮಧೇಯ, iit-madrasಗತಿ-ಗೋತ್ರವಿಲ್ಲದ ಒಂದು ಕಾಗದ.

ಈ “ಮ್ಯಾಮ್” ಯಾರು, ಈ ಹಾಳೆಗೆ “ಡ್ಯಾಡ್” ಯಾರು ಎಂದು ಗೊತ್ತಿಲ್ಲದ ಇಂತಹ ಒಂದು ಲಡಾಸು ಹಾಳೆಯೊಂದನ್ನು “ಆಧರಿಸಿ”, ಮೇ ೧೫, ೨೦೧೫ ರಂದು ಘನ ಭಾರತ ಸರಕಾರದ ಮಾನವ ಸಂಪನ್ಮೂಲ ಉನ್ನತ ಶಿಕ್ಷಣ ವಿಭಾಗದ ಅಧೀನ ಕಾರ್ಯದರ್ಶಿಯೊಬ್ಬರು ಚೆನ್ನೈನ IIT-M ನ ನಿರ್ದೇಶಕರಿಗೆ ಒಂದು ನಿರ್ದೇಶನ ಕೊಡುತ್ತಾರೆ. ನಿರ್ದೇಶನ ಜಾರಿ ಮಾಡಲು ನಿರ್ದೇಶಕರು ಚಾತಕ ಪಕ್ಷಿ ಯಂತೆ ಕಾದಿದ್ದು, ತಕ್ಷಣವೇ ವಿದ್ಯಾರ್ಥಿಗಳ “ಯೋಗಕ್ಷೇಮ” ನೋಡಿಕೊಳ್ಳುವ ಡೀನ್ ರಿಗೆ ಒಂದು ನಿರ್ದೇಶನ ರವಾನೆ ಮಾಡುತ್ತಾರೆ. ‘ಯೋಗಕ್ಷೇಮ’ದ ಡೀನ್ ಒಬ್ಬ ಅರ್.ವರುಣ ಕೃಷ್ಣ ಎಂಬ ವಿದ್ಯಾರ್ಥಿಗೆ ಒಂದೂವರೆ ಸಾಲಿನ ಒಂದು ಇಮೇಲ್ ಕಳಿಸಿ ತಕ್ಷಣವೇ ಜಾರಿಗೆ ಬರುವಂತೆ “ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್”ನ ಈ ಕ್ಷಣಕ್ಕೆ ಜಾರಿಗೆ ಬರುವಂತೆ ಮಾನ್ಯತೆ ರದ್ದು ಗೊಳಿಸುತ್ತಾರೆ.

ಈ ರದ್ದತಿಗೆ ಕಾರಣ? ‘ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್’ ಐಐಟಿ ನೀಡಿದ ‘ಸವಲತ್ತು’ ಗಳನ್ನ ದುರುಪಯೋಗ ಮಾಡಿಕೊಂಡಿದೆ ಎಂದು. ಯಾವ ಸವಲತ್ತು, ಯಾವಾಗ, ಯಾರು ಕೊಟ್ಟಿದ್ದು? ಯಾರು ಉಪಯೋಗಿಸಿದ್ದು? ಹೇಗೆ ದುರುಪಯೋಗ ಮಾಡಿದ್ದು? ಅದೆಲ್ಲ ‘ಪಿಕ್ಚರ್’ ನಲ್ಲಿಲ್ಲ ಸಿನಿಮಾ ಮುಗಿದ ಮೇಲೆ ನೋಡಿಕೊಳ್ಳಿ.

‘ಔಪಚಾರಿಕತೆ’ ಎಂದಾದರೂ ಸರಿ ಕಾರಣ ಕೇಳಿ ನೋಟಿಸು, ವಿವರಣೆ, ಏನಾದರೂ ಬೇಕೇ? ಅದೆಲ್ಲಾ ಯಾಕೆ? ಮೊದಲು ಕ್ರಮ ಕೈಗೊಂಡು ನಂತರ ‘ವಿಚಾರಣೆ’. ಹೇಗಿದೆ ನೋಡಿ ನಮ್ಮ ಕಾರ್ಯ ದಕ್ಷತೆಯ ತಾಕತ್ತು! ಕೇಂದ್ರ ಸರಕಾರ ಏನೂ (?) ಮಾಡುತ್ತಿಲ್ಲ ಎಂದು ಯಾಕೆ ಬೊಬ್ಬೆ ಹೊಡೆಯುತ್ತಾರೋ ತಲೆ ಸರಿಯಿಲ್ಲದ ಜನ!

ಬಾಬಾಸಾಹೇಬ್ ಜನ್ಮ ದಿನದಂದು (೧೪ ಏಪ್ರಿಲ್) ೨೦೧೪ ಅಂಬೇಡ್ಕರ್, ಪೆರಿಯಾರ್ ಮತ್ತು ಭಗತ್ ಸಿಂಗ್ ambedkar-periyar-study-circleವಿಚಾರಗಳಿಂದ ಪ್ರಭಾವಿತರಾದ ಚೆನ್ನೈ ನಲ್ಲಿರುವ ಐಐಟಿ ಯಲ್ಲಿನ ಎಲ್ಲ ಜಾತಿ ವರ್ಗ ವಿಭಾಗಗಳ ಸಮಾನ ಮನಸ್ಕ ವಿದ್ಯಾರ್ಥಿಗಳು ಒಂದುಗೂಡಿ ಒಂದು ವಿಚಾರ ಮಂಟಪ ಕಟ್ಟುತ್ತಾರೆ. ಒಂದು, ಐದು, ಹತ್ತು ಹೀಗೆ ತಮ್ಮ ತಮ್ಮ ಕೈಲಾದಷ್ಟು ಹಣ ಸಂಗ್ರಹಿಸಿ (ಸಂಸ್ಥೆಯಿಂದ ಒಂದು ದಮ್ಮಡಿ ಕಾಸು ತೆಗೆದು ಕೊಳ್ಳದೆ) ವೈವಿಧ್ಯಮಯ ವಿಷಯಗಳನ್ನು ಅಯ್ದು ಪರಿಣಿತರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

ಯಂತ್ರ-ತಂತ್ರ-ಮಂತ್ರ ಗಳ ಮಾಯೆಯಲ್ಲಿ ಮುಳುಗಿದ್ದ ಅಗ್ರಹಾರವನ್ನೂ ನಾಚಿಸುವ ವಾತಾವರಣದಲ್ಲಿ, ‘ಭಾರತದ ಕೃಷಿ ಬಿಕ್ಕಟ್ಟು’, ‘೧೯೪೭ ರ ಕಾರ್ಖಾನೆ ಕಾಯಿದೆಗೆ ತಿದ್ದುಪಡಿ ಮತ್ತು ಕಾರ್ಮಿಕರ ಹಿತಾಸಕ್ತಿ’, ‘ಭಾಷಾ ಸಮಸ್ಯೆ’, ಕುಲಾಂತರಿ ಬೀಜಗಳು’ ಮೊದಲಾದ ವಿಚಾರ ಪ್ರಚೋದಕ ವಿಷಯಗಳ ಬಗ್ಗೆ ಗೋಷ್ಠಿಗಳನ್ನು ಸಂಘಟಿಸುತ್ತಾರೆ.

ಹೀಗಿದ್ದಾಗ, ಜೂನ್, ೨೦೧೪ ರ ಹೊತ್ತಿಗೆ ವಿದ್ಯಾರ್ಥಿ “ಯೋಗಕ್ಷೇಮ” ದ ಜವಾಬ್ದಾರಿಯಿರುವ ಡೀನ್ ರಿಂದ ಬಂತೊಂದು ಬುಲಾವು. ‘ನಿಮ್ಮ ವೇದಿಕೆಯ ಹೆಸರೇ ಸರಿಯಿಲ್ಲವಲ್ಲ’! ಈ ಅಂಬೇಡ್ಕರ್-ಪೆರಿಯಾರ್ ಎಂದೆಲ್ಲ ಹೆಸರು ಇಟ್ಟುಕೊಂಡರೆ ಸಮಾಜದ ಸ್ವಾಸ್ಥ್ಯ ಹಾಳಾಗುವುದಿಲ್ಲವೆ? ಅದೂ ಸರಿಯೇ. ಆದರೆ ಈ ‘ಹಾಳಾದ’ ವಿದ್ಯಾರ್ಥಿಗಳು ಹೆಸರು ಬದಲಿಸಲು ಒಪ್ಪಲಿಲ್ಲ!

ಸೆಪ್ಟೆಂಬರ್ ೨೦೧೪ ರಲ್ಲಿ ಮತ್ತೊಮ್ಮೆ ಅಂಬೇಡ್ಕರ್ ಮತ್ತು ಪೆರಿಯಾರ್ ಹೆಸರುಗಳು ಜನರ ಮಧ್ಯೆ ಕಂದಕವನ್ನು ತೋಡುತ್ತವೆ; ಆದ್ದರಿಂದ ನಿಮ್ಮ ‘ಹೆಸರು’ ಬದಲಿಸಿ ಎಂದು ಡೀನ್ ಮತ್ತೊಮ್ಮೆ ಹೆದರಿಸಲಾಯಿತು.

ಏಪ್ರಿಲ್ ೨೦೧೫ ರ ಅಂಬೇಡ್ಕರ್ ಜಯಂತಿಯ ಸಂದರ್ಭ ಮತ್ತು ತನ್ನ ಹುಟ್ಟಿನ ಮೊದಲ ವರ್ಷಾಚರಣೆ ಸಂದರ್ಭದಲ್ಲಿ ಅಂಬೇಡ್ಕರ್ “ಜಾತಿ ವಿನಾಶ”ದ ಉಕ್ತಿಗಳನ್ನು ನೇರವಾಗಿ ಉದಾಹರಿಸಿ ಬರೆದ ಕರಪತ್ರವನ್ನು ಹೊರಡಿಸಲಾಯಿತು. ಈ ಕರಪತ್ರದಲ್ಲಿ ‘ಭಾರತ ಮಾತೆ’ ಯ ಸಂಕಷ್ಟಗಳ ವಿವರಣೆ ಇತ್ತು ನಿಜ ಆದರೆ ಇದಕ್ಕಿಂತ ಖಾರದ ಕರಪತ್ರಗಳನ್ನು ಸ್ವತಃ ರಾಷ್ಟ್ರೀಯ ಸ್ವಯಂ ಸೇವಕ ಇಂದು ಕೇಂದ್ರದ ವಿರುದ್ಧ ಹೊರಡಿಸಿದೆ. ಅಂಬೇಡ್ಕರ್ ಜಯಂತಿಯ ಮೊದಲು ಅಥವಾ ನಂತರ ಯಾವುದೇ ಅಹಿತಕರ ಘಟನೆಗಳಾಗಲಿಲ್ಲ. IIT ಸಂಸ್ಥೆಯ ಯಾವ ನೀತಿ ನಿಯಮಗಳ ಉಲ್ಲಂಘನೆಯೂ ಆಗಲಿಲ್ಲ. ಏಕಾಏಕಿ, ತಮ್ಮ ಹೆಸರು ಬರೆದುಕೊಳ್ಳಲು ಅಂಜುವ ಪುಕ್ಕಲುಗಳು ‘ಬರೆದ’ ಬುರ್ನಾಸು ಹಾಳೆಯನ್ನು ಆಧರಿಸಿ ವಿಚಾರಶೀಲ ವಿದ್ಯಾರ್ಥಿಗಳ ಸಂಘಟನೆಯನ್ನು IIT ಮಟ್ಟಿಗೆ ನಿಷೇಧಿಸಲಾಗಿದೆ.

ಸ್ವತಃ ‘ಸ್ವಾತಂತ್ರ್ಯವೇ ನನ್ನ ಜನ್ಮ ಸಿದ್ಧ ಹಕ್ಕು’ ಎಂದವರೇ ಅಂಬೇಡ್ಕರ್ ಬರಹಗಳನ್ನು ಹೋಗಲಿ ಜಾಹೀರಾತನ್ನು ಪ್ರಕಟಿಸುವ ನೈತಿಕತೆ ತೋರಿಸಲಿಲ್ಲ. ಇನ್ನು ಇಂದಿನ ‘ಅಗ್ರಹಾರಗಳಿಂದ’ ಹೆಚ್ಚಿನದನ್ನು ನಿರೀಕ್ಷಿಸುವುದು ಮೂರ್ಖತನ. ಇತ್ತೀಚಿಗೆ ಸಾಮಾಜಿಕ ತಾಣಗಳ ಸರದಾರರೊಬ್ಬರು ತಂತ್ರಜ್ಞಾನ ಬೋಧಿಸುವ ಸಂಸ್ಥೆ ಯಲ್ಲಿ ಅಂಬೇಡ್ಕರ್ ಹೆಸರಿನ ಸಂಘಟನೆಯ ಔಚಿತ್ಯ ಪ್ರಶ್ನಿಸಿದ್ದಾರೆ? ಮೀಸಲಾತಿಯನ್ನು ಕಾರಣವಾಗಿಟ್ಟು ಕೊಂಡು ಅಂಬೇಡ್ಕರ್‌ರನ್ನು ವಿರೋಧಿಸುವ ಇವರು ಮೀಸಲಾತಿ ಇಲ್ಲದ ಅಷ್ಟೇ ಅಲ್ಲ, ೧೦೦% ಮೀಸಲಾತಿ ಇವರಿಗೇ ಇದ್ದ ಐದು ಸಾವಿರ ವರ್ಷಗಳ ‘ಸುವರ್ಣ ಯುಗ’ ದಲ್ಲಿ ತಮ್ಮ ಬ್ರಹ್ಮ ತೇಜಸ್ಸಿನಿಂದ ಒಂದು ಪಾಯಖಾನೆಯನ್ನೂ ಕೂಡ ಅವಿಷ್ಕರಿಸಲಾಗಲಿಲ್ಲ ಏಕೆ ಎಂದು ಅವರು ಉತ್ತರಿಸಬೇಕು.

ಇಂದು IIT ಗಳನ್ನು ಯಂತ್ರ-ಮಂತ್ರ ತಂತ್ರಗಳ ತಾಣ ಮಾಡ ಹೊರಟವರಿಗೆ ಇರುಸು ಮುರುಸು ಆಗುವುದೇನೆಂದರೆ, IIT Madras Student Protestಅಲ್ಲಿನ ಅನೇಕ ಜಾಗೃತ ವಿದ್ಯಾರ್ಥಿಗಳು ಜನಪರ ಸಿದ್ಧಾಂತಗಳ ಪರ ವಾಲುತ್ತಿರುವುದು. ನಿಮಗೆ ಗೊತ್ತಿರಲಿ ಚೆನ್ನೈ IIT ಯ Humanities and Social Sciences ವಿಭಾಗ ಒಂದರಲ್ಲೇ ಸುಮಾರು ನಲವತ್ತೆರಡು ಅಧ್ಯಾಪಕರಿದ್ದಾರೆ! ಸಾಮಾಜಿಕ ವಿಜ್ಞಾನವನ್ನು ವಿಜ್ಞಾನವೆಂದೇ ಒಪ್ಪದ ಬುರುಡೆ ಪುರಾಣ ಶೂರರಿಗೆ ಏನು ಹೇಳುವುದು? ಅಂಬೇಡ್ಕರ್ ಪೆರಿಯಾರ್ ಈ ದೇಶದಲ್ಲಿ ಹುಟ್ಟದಿದ್ದರೆ, ಗಂಡು ಮಕ್ಕಳಾಗಲು ಮಾತ್ರೆ ಕೊಡುವವರು ಯಾ ಬದರಿ ಕೇದಾರದಲ್ಲಿ ಭಕ್ತರು ಮಲವಿಸರ್ಜನೆ ಮಾಡಿದ್ದಕ್ಕೆ ಜಲಪ್ರಳಯದ ನಂಟು ತಾಗಿಸುವವರು ಪ್ರಳಯಾಂತಕ ಬುದ್ಧಿವಂತರೆನ್ನಿಸಿಕೊಳ್ಳುತ್ತಿದ್ದರು.

ಅಂಬೇಡ್ಕರ್ ಮೇರು ಪರ್ವತ; ಡಾಕ್ಟರ ಆಫ್ ಸೈನ್ಸ್ ಪದವಿ ಪಡೆದ ಪ್ರತಿಭಾವಂತರ ಹೆಸರನ್ನು ವೈಜ್ಞಾನಿಕ ಚಿಂತನೆಯ ಮಂಟಪಕ್ಕೆ ಇಡದೆ ಇನ್ಯಾರ ಹೆಸರನ್ನು ಇಡಬೇಕು? ಅವರು ಪಡೆದಷ್ಟು ಪದವಿಗಳನ್ನು ಒಂದೊಂದರಂತೆ ಒಬ್ಬಬ್ಬರಿಗೆ ಹಂಚಿದರೆ ನಾಲ್ಕಾರು ಅಗ್ರಹಾರಗಳು ಪದವೀಧರರಾಗಬಹುದು. ಇನ್ನು ಪೆರಿಯಾರ್ ಚಿಂತನೆ ಇಂದು ದಕ್ಷಿಣ ಭಾರತದ ಸಾಮಾಜಿಕ ಚಿಂತನೆಯ ಮೂಲ ದ್ರವ್ಯ. ಪೆರಿಯಾರ್ ರಿಂದ ಪ್ರೇರಿತವಾದ ಅನೇಕ ಸಂಘಟನೆಗಳು ನಾಡಿನಾದ್ಯಂತ ಸಾವಿರಾರು ಮೂಢನಂಬಿಕೆ ವಿರೋಧಿ ಕಾರ್ಯಕ್ರಮ ಗಳನ್ನು ಸಂಘಟಿಸಿದೆ. ಸಾಮಾಜಿಕ ವಿಜ್ಞಾನದ ಬಗ್ಗೆ ಬದ್ಧತೆ ಇರುವ ಯಾರೇ ಅದರೂ ಗೌರವಿಸುವ ಅಂಬೇಡ್ಕರ್-ಪೆರಿಯಾರ್ ರನ್ನು ಕೆಲವು ಕೊಳಕು ಮನಸ್ಸುಗಳ ಧಮಕಿಗೆ ಹೆದರಿ ಬಿಡುವಂತಿದ್ದರೆ ಭಾರತಕ್ಕೆ IIT Madras Student Protest-SmritiIraniಭವಿಷ್ಯವೇ ಇಲ್ಲ ಎಂದು ಕೊಳ್ಳಬೇಕಿತ್ತು. ಆದರೆ ಹಾಗಾಗಲಿಲ್ಲ.

ವಿಜ್ನ್ಯಾನದ ಮೊದಲ ಪಾಠ – ಪ್ರಶ್ನಿಸದೆ ಒಪ್ಪದಿರು. ಸಮಾಜದ ಕೊಳಕುಗಳನ್ನು ನಿರ್ಭೀತಿಯಿಂದ ಪ್ರಶ್ನಿಸಿದ, ಬದಲಿಸಿದ ಚಿಂತಕರಿಬ್ಬರೂ ಸಮಾಜ ವಿಜ್ಞಾನಿಗಳಲ್ಲವೇ? ಅಂಬೇಡ್ಕರ್ IIT ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಪ್ರತಿಯೊಂದು ಪ್ರತಿಷ್ಟಿತ ಶೈಕ್ಷಣಿಕ ಸಂಸ್ಥೆಯ ಪಠ್ಯಕ್ರಮದ ಭಾಗವಾಗಬೇಕು. ಅಂಬೇಡ್ಕರ್ ಮನಸ್ಸು ಮಾಡಿದ್ದರೆ ಅಮೇರಿಕಾದ ಯಾವುದೋ ದೊಡ್ಡ ವಿಶ್ವವಿದ್ಯಾಲಯದಲ್ಲಿ ಕುಳಿತು ಭಾರತದ ಬಗ್ಗೆ ಟೀಕೆ ಟಿಪ್ಪಣೆ ಮಾಡಿಕೊಂಡು ಡಾಲರ್ ಎಣಿಸಬಹುದಿತ್ತೇನೊ. ಅವರು ಸಹಿಸಿದ ಅಪಮಾನ ಸಂಕಟಗಳನ್ನು ನೋಡಿದರೆ ಅವರು ವಿದೇಶಕ್ಕೆ ಹೋಗಿದ್ದು ತಪ್ಪು ಎಂದು ಯಾರೂ ಎಂದುಕೊಳ್ಳುತ್ತಿರಲಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ‘ಗೋಮಾತೆ’,’ಘರ್-ವಾಪಸಿ’ಜಪಿಸಿ, ಅಮೇರಿಕ ವೀಸಾ ಸಿಕ್ಕರೆ ಚೆನ್ನೈನಲ್ಲಿ ಸೊಳ್ಳೆಕಾಟದ ನೆಪ ಹೇಳಿ ಗುಟ್ಟಲ್ಲಿ ಅಮೇರಿಕ ಸೇರಿಕೊಳ್ಳುವ IIT ಯ ‘ಬುದ್ಧಿವಂತ’ ಜಾತಿಗಳ ವಟುಗಳು ನೈಜ ದೇಶಭಕ್ತಿ ಏನೆಂದು ಕಲಿಯಬೇಕಾದ್ದು ಅಂಬೇಡ್ಕರ್‌ರಿಂದ.

ಚೆನ್ನೈ ಮಾತ್ರವಲ್ಲ ದೇಶದ ಪ್ರತಿಯೊಂದು ಕಡೆಯೂ ದಿಟ್ಟ ಪ್ರತಿಭಟನೆಗಳು ನಡೆದಿವೆ. ಬಂಡೆಯಂತೆ ಸ್ಥಿರವಾಗಿ ನಿಂತಿರುವ ಈ ದಿಟ್ಟಪೋರರು ಭವಿಷ್ಯ ಭಾರತದ ಭರವಸೆ. ಏನೇ ಹೇಳಿ, ವಿವೇಕಾನಂದರ ಹೆಸರು ಉಪಯೋಗಿಸಿ ಕನಿಷ್ಠ ಹೆಸರು ಬರೆದುಕೊಳ್ಳುವುದಕ್ಕೂ ಅಂಜುವ ಜನ, ಈ ನೆಲದ ಸತ್ವ ಹೀರಿ ಬೆಳೆದ ನೈಜ ಮತ್ತು ದಿಟ್ಟ ಪೋರರನ್ನು ಎಂದಿಗೂ ಎದುರಿಸಲು ಸಾಧ್ಯವಿಲ್ಲ.

10 thoughts on “ಹೆಸರು ಹೇಳಿಕೊಳ್ಳಲೂ ಹೇಸಿಕೊಳ್ಳುವವರು vs. ಭವಿಷ್ಯ ಭಾರತದ ದಿಟ್ಟ ಸ್ಥಂಭಗಳು

  1. Ananda Prasad

    ಚೆನ್ನೈ ಐಟಿಐಯ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ ವಿದ್ಯಾರ್ಥಿ ಸಂಘಟನೆಯ ಮಾನ್ಯತೆಯನ್ನು ರದ್ದುಪಡಿಸಿರುವ ಕ್ರಮ ಪ್ರಜಾಪ್ರಭುತ್ವದಲ್ಲಿ ಇರಬೇಕಾದ ಸಹನೆಯ ಗುಣಕ್ಕೆ ವಿರುದ್ಧವಾದ ನಡವಳಿಕೆ. ಪ್ರತಿಭಾವಂತರು ದೇಶ ಹಾಗೂ ಸಮಾಜದ ಬಗ್ಗೆ ಚಿಂತನೆ ನಡೆಸಬೇಕಾಗಿರುವುದು ದೇಶದ ಪರಿಸ್ಥಿತಿ ಬದಲಾಗಬೇಕಾದರೆ ಅತ್ಯಗತ್ಯ. ಇಂದು ನಮ್ಮ ದೇಶದ ಕಲಿಕೆಯಲ್ಲಿ ಅತ್ಯಂತ ಪ್ರತಿಭಾವಂತರು ದೇಶ ಹಾಗೂ ಸಮಾಜದ ಬಗ್ಗೆ ಹಾಗೂ ಪರಿಸರದ ಬಗ್ಗೆ ಚಿಂತಿಸದೆ ಭೋಗಜೀವನ ನಡೆಸುವಲ್ಲಿಯೇ ಆಸಕ್ತರಾಗಿರುವ ಅಥವಾ ವಿದೇಶಗಳಿಗೆ ಹಾರಿ ದೇಶವನ್ನೇ ಮರೆಯುತ್ತಿರುವ ಪರಿಸ್ಥಿತಿಯಲ್ಲಿ ಚೆನ್ನೈ ಐಟಿಐಯ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ ವಿಭಿನ್ನವಾಗಿ ಚಿಂತನೆ ನಡೆಸಿರುವುದು ದೇಶದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆ. ಇಂಥ ಬೆಳವಣಿಗೆಯನ್ನು ಹತ್ತಿಕ್ಕಲು ಹೊರಡುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.

    ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಟದ ಮುಂಚೂಣಿಯಲ್ಲಿದ್ದವರು ಕಲಿಕೆಯಲ್ಲಿ ಅತ್ಯಂತ ಮುಂದಿದ್ದ ಪ್ರತಿಭಾವಂತರೇ. ಇವರಲ್ಲಿ ಹೆಚ್ಚಿನವರು ಪ್ರತಿಭಾವಂತ ವಕೀಲರು, ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾದವರು. ಇಂದು ಪ್ರತಿಭಾವಂತ ವಕೀಲರು ಭ್ರಷ್ಟ ರಾಜಕಾರಣಿಗಳು ಹಾಗೂ ಕೊಲೆಗಡುಕರನ್ನು ಕಾನೂನಿನ ಲೋಪಗಳನ್ನು ಹುಡುಕಿ ಬಚಾವು ಮಾಡುವುದರಲ್ಲಿ ತಮ್ಮ ಬುದ್ಧಿವಂತಿಕೆಯನ್ನು ವ್ಯರ್ಥ ಮಾಡುತ್ತಿದ್ದಾರೆ. ಇಂಥ ವಕೀಲರು ದೇಶದಲ್ಲಿ ಇರುವವರೆಗೆ ದೇಶದ ಪರಿಸ್ಥಿತಿ ಬದಲಾವಣೆ ಸಾಧ್ಯವಿಲ್ಲ.

    Reply
    1. ಸೀತಾ

      ನಾಡಿನ ಪ್ರತಿಭಾವಂತರು ಮುಕ್ತ ವಾತವರಣದಲ್ಲಿ ಅಧ್ಯಯನ ಹಾಗೂ ಸಂಶೋಧನೆಯನ್ನು ಮಾಡತಕ್ಕ ಸಂಸ್ಥೆಯಾದ ಐಐಟಿ ಚೆನ್ನೈಯು ವಿದ್ಯಾರ್ಥಿ ಸಂಘವೊಂದನ್ನು ಅನಾಮಧೇಯ ಪತ್ರವೊಂದರ ಆಧಾರದ ಮೇಲೆ ನಿಷೇಧಿಸಿದ್ದು ಸರಿಯಲ್ಲ. ಆಡಳಿತ ಮಂಡಳಿಯ ಈ ಕ್ರಮವನ್ನು ಪ್ರಜ್ಞಾವಂತರು ವಿರೋಧಿಸುತ್ತಿರುವುದು ಸರಿ. ಆದರೆ ಕಳೆದ ವರ್ಷ ಕರ್ನಾಟಕದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸಿ ಎಸ್ ಎಲ್ ಸಿ ಎಂಬ ಸಂಶೋಧನಾ ಸಂಸ್ಥೆಯನ್ನು ಕ್ಷುಲ್ಲಕ ಕಾರಣಗಳನ್ನು ಕೊಟ್ಟು ರಾಜಕೀಯ ಒತ್ತಡಗಳಿಗೆ ಮಣಿದು ಮುಚ್ಚಿಸಿದ್ದು ಸರಿಯೇ? ನಾಡಿನ ಪ್ರಗತಿಪರರು ಸಿ ಎಸ್ ಎಲ್ ಸಿಯ ಪರವಾಗಿ ಸೋಲ್ಲನ್ನೇ ಎತ್ತದಿದ್ದದ್ದು ಸರಿಯೇ? ಪ್ರಗತಿಪರರ ಇಬ್ಬಂಗಿತನವನ್ನು ಸಿ ಎಸ್ ಎಲ್ ಸಿ ಹಾಗೂ ಐಐಟಿ ಚೆನ್ನೈ ಪ್ರಕರಣಗಳಲ್ಲಿ ಕಾಣಬಹುದಾಗಿದೆ. ಈ ಬಗ್ಗೆ ಪ್ರಭುಗಳು ಏನನ್ನುತ್ತಾರೆ?

      Reply
    2. Anonymous

      “ಇಂದು ಪ್ರತಿಭಾವಂತ ವಕೀಲರು ಭ್ರಷ್ಟ ರಾಜಕಾರಣಿಗಳು ಹಾಗೂ ಕೊಲೆಗಡುಕರನ್ನು ಕಾನೂನಿನ ಲೋಪಗಳನ್ನು ಹುಡುಕಿ ಬಚಾವು ಮಾಡುವುದರಲ್ಲಿ ತಮ್ಮ ಬುದ್ಧಿವಂತಿಕೆಯನ್ನು ವ್ಯರ್ಥ ಮಾಡುತ್ತಿದ್ದಾರೆ. ಇಂಥ ವಕೀಲರು ದೇಶದಲ್ಲಿ ಇರುವವರೆಗೆ ದೇಶದ ಪರಿಸ್ಥಿತಿ ಬದಲಾವಣೆ ಸಾಧ್ಯವಿಲ್ಲ”

      Kapil Sibal.

      Reply
  2. Anonymous

    IIT students should spend time studying technology. They must not waste time on political matters. India needs more technologists and not politicians.

    Reply
    1. ಜೆ.ವಿ.ಕಾರ್ಲೊ, ಹಾಸನ

      ರಾಜಕೀಯವಾಗಿಯೂ ಜಾಗೃತರಾಗಿರುವ ತಂತ್ರಜ್ಞರು ಭಾರತಕ್ಕೆ ಅವಶ್ಯಕವೆಮದು ಎನಿಸುವುದಿಲ್ಲವೆ?

      Reply
      1. ಸೀತಾ

        ಕಾರ್ಲೋ ಅವರೇ, ಇಂದು ತಂತ್ರಜ್ಞರಾಗಲಿ ಕೂಲಿ ಕಾರ್ಮಿಕರಾಗಲಿ ರಾಜಕೀಯ ಪ್ರಜ್ಞೆ ಇಲ್ಲದೇ ಇರುವವರೇನಲ್ಲ. ಆದರೆ ವಿದ್ಯಾರ್ಥಿಗಳು ಒಂದು ವಿದ್ಯಾಸಂಸ್ಥೆಯ ಹೆಸರನ್ನೂ ಪರಿಕರಗಳನ್ನೂ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವುದು ತಪ್ಪು. ಏಕೆಂದರೆ ಐ ಐ ಟಿ ಎಂಬ ವಿದ್ಯಾಸಂಸ್ಥೆ ಇರುವುದು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿದ್ಯಾರ್ಜನೆಗೆ – ರಾಜಕೀಯ ಕಸರತ್ತನ್ನು ಕಲಿಯಲು ಅಲ್ಲ.

        Reply
        1. ಜೆ.ವಿ.ಕಾರ್ಲೊ, ಹಾಸನ

          ನೀವು ಹೇಳುವುದೂ ಸರಿಯೇ. ಎಲ್ಲಾ ಶಾಲೆ ಕಾಲೇಜುಗಳಲ್ಲಿರುವ ರಾಜಕೀಯ ಪಕ್ಷಗಳ ವಿಧ್ಯಾರ್ಥಿ ಸಂಘಟನೆಗಳನ್ನು ಬ್ಯಾನ್ ಮಾಡುವುದು ಸರಿಯಾದ ಕ್ರಮ.

          Reply

Leave a Reply

Your email address will not be published. Required fields are marked *