‘ಮ್ಯೂಸಿಕ್ ಸೀಸನ್‌’ನಲ್ಲಿ ಹಾಡಲು ನಿರಾಕರಿಸುತ್ತಿರುವ ಸಂಗೀತಪ್ರೇಮಿ ಹಾಡುಗಾರನ ಅಳಲು

ನಾನೇಕೆ ‘ಮ್ಯೂಸಿಕ್ ಸೀಸನ್‌’ನಲ್ಲಿ ಹಾಡುತ್ತಿಲ್ಲ…

 – ಟಿ.ಎಂ.ಕೃಷ್ಣ
ಕನ್ನಡಕ್ಕೆ: ಶ್ರೀಮತೀ ದೇವಿ.ಪಿ

ಮದರಾಸಿನ ಸಂಗೀತ ಸೀಸನ್

ಇದು ಮದರಾಸಿನಲ್ಲಿ ಪ್ರತಿವರ್ಷ ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ನಡೆಯುವ ಸಂಗೀತ ಹಬ್ಬ. ಸುಮಾರು ಆರು ವಾರಗಳ ಕಾಲ ನಡೆಯುವ ಇದರಲ್ಲಿ ಹಾಡುವುದು, ನುಡಿಸುವುದು ಸಂಗೀತಗಾರರಿಗೆ ಪ್ರತಿಷ್ಠೆಯ ವಿಷಯ. ದೇಶವಿದೇಶಗಳ ಸಂಗೀತ ಪ್ರೇಮಿಗಳು ತಮ್ಮ ನೆಚ್ಚಿನ ಸಂಗೀತಗಾರರ ಸಂಗೀತ ಕೇಳಲು ಮುಗಿಬಿದ್ದರೆ ಈಗ ತಾನೇ ತಲೆಯೆತ್ತುತ್ತಿರುವ ಕಲಾವಿದರು ಹಾಡುವ ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತಾರೆ. ಚೆನ್ನೈನ ವಿವಿಧ ಸಭಾಗಳು ಪೈಪೋಟಿಯ ಮೇಲೆ ಸ್ಟಾರ್ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅವಕಾಶಕ್ಕಾಗಿ ಲಾಬಿ, ಸ್ಟಾರ್ ಸಂಗೀತಗಾರರ ಮೇಲಾಟ, ಜನಪ್ರಿಯತೆಯೇ ಮುನ್ನೆಲೆಗೆ ಬರುತ್ತಿರುವುದು, ಭಿನ್ನ ಸಮುದಾಯಗಳನ್ನು ಒಳಗೊಳ್ಳದಿರುವುದು ಹೀಗೆ ಈ ಸಂಗೀತ ಹಬ್ಬ ಸಂಗೀತೇತರ ಕಾರಣಗಳಿಗೂ ಚರ್ಚೆಗೆ ಒಳಗಾಗುತ್ತಿರುವುದು chennai-music-seasonಅಲ್ಲಲ್ಲಿ ನಡೆದೇ ಇದ್ದರೂ ಈ ಬಗ್ಗೆ ದೊಡ್ಡದನಿ ಎತ್ತುವ ಕೆಲಸ ನಡೆದಿರಲಿಲ್ಲ. ಟಿ.ಎಂ.ಕೃಷ್ಣ ತಾವು ಇನ್ನು ಮುಂದೆ ಸೀಸನ್ನಲ್ಲಿ ಹಾಡುವುದಿಲ್ಲ ಎನ್ನುವುದರ ಮೂಲಕ ಕಲಾವಿದರು ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳನ್ನು ಎತ್ತುತ್ತಾ ವಾಗ್ವಾದಕ್ಕೆ ಮುನ್ನುಡಿ ಬರೆದಿದ್ದಾರೆ.

ಚೆನ್ನೈಯ ಮ್ಯೂಸಿಕ್ ಸೀಸನ್ (ಡಿಸೆಂಬರ್) ನಲ್ಲಿ ಇನ್ನು ಮುಂದೆ ನಾನು ಹಾಡುವುದಿಲ್ಲ ಎಂಬ ನನ್ನ ತೀರ್ಮಾನ, ಏಕಾಏಕಿಯಾದದ್ದಲ್ಲ ಹಾಗೂ ಯಾವುದೇ ಒಂದು ನಿರ್ದಿಷ್ಟ ಘಟನೆಯಿಂದ ಹುಟ್ಟಿದ್ದಲ್ಲ. ಕಳೆದ ೪-೫ ವರ್ಷಗಳಿಂದ ನಾನು ಈ ಬಗ್ಗೆ ತುಂಬಾ ಆಲೋಚಿಸಿದ್ದೇನೆ. ಮ್ಯೂಸಿಕ್ ಸೀಸನ್‌ನೊಂದಿಗಿನ ನನ್ನ ಸಂಬಂಧವೇನು, ಇದರ ಮೂಲಕ ಸಂಗೀತಕ್ಕೆ ನಾವೇನನ್ನು ಕೊಡಲು ಹೊರಟಿದ್ದೇವೆ, ಹಾಗೂ ಈಗ ಈ ಸೀಸನ್ ಎಂಬುದು ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಗಳನ್ನು ನನಗೆ ನಾನೇ ಹಲವಾರು ಬಾರಿ ಕೇಳಿಕೊಂಡಿದ್ದೇನೆ.

ಚಿಕ್ಕಂದಿನಿಂದಲೂ ನಾನು, ಈ ಮ್ಯೂಸಿಕ್ ಸೀಸನ್ನಿನ ಕಛೇರಿಗಳನ್ನು ಕೇಳುತ್ತಾ ಬೆಳೆದಿದ್ದೇನೆ ಹಾಗೂ ಇವುಗಳಿಂದ ತುಂಬಾ ಕಲಿತಿದ್ದೇನೆ. ಸಂಗೀತ ಕ್ಷೇತ್ರದಲ್ಲಿನ ನನ್ನ ಪ್ರಗತಿಯೂ ಈ ’ಸಂಗೀತ ಹಬ್ಬ’ದೊಂದಿಗೇ ನಡೆದಿದೆ. ಆದ್ದರಿಂದ ಕಲಾತ್ಮಕವಾಗಿಯೂ, ವ್ಯವಸಾಯದಲ್ಲೂ ನನ್ನ ಬೆಳವಣಿಗೆಗೆ ಕಾರಣವಾದ ಸಂಗೀತ ಸೀಸನ್‌ಗೆ ಕೃತಜ್ನತೆ ಸಲ್ಲಿಸಲು ಮರೆತರೆ ಅದು ದೊಡ್ಡ ತಪ್ಪಾಗುತ್ತದೆ. ಆದರೆ, ಇತ್ತೀಚಿಗಿನ ಸಂಗೀತ ಸೀಸನ್, ಸಂಗೀತದಿಂದಲೇ ದೂರ ಹೋಗುತ್ತಿರುವಂತೆ ನನಗೆ ಕಾಣುತ್ತಿದೆ. ಇಲ್ಲಿ ಸಂಗೀತದ ಒಳಗಿನ ಹಾಗೂ ಸಂಗೀತದ ಆಚೆಗಿನ ಗಲಾಟೆ(ಶಬ್ದ) ನೋಡಿದರೆ, ಸಂಗೀತವೇ ಇಲ್ಲಿಂದ ಓಡಿ ಹೋಗುತ್ತಿದೆಯೆಂದು ಹೇಳುವುದೇ ಸೂಕ್ತವೇನೋ…

ಕಳೆದ ಎರಡು ದಶಕಗಳಿಂದ, ಚೆನ್ನೈನಲ್ಲಿ ಅದರಲ್ಲೂ ಮುಖ್ಯವಾಗಿ ಸಂಗೀತ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಸ್ಪರ್ಧಾತ್ಮಕವಾದ ಸಂಗೀತ ಆಯೋಜಕರು ಇರುವುದನ್ನು ನೋಡುತ್ತಿದ್ದೇವೆ. ಇಲ್ಲಿನ ಕಛೇರಿಗಳಲ್ಲೂ ವೈರುಧ್ಯವಿದೆ. ಇವುಗಳು ಎರಡು ವಿರುದ್ಧ ಧ್ರುವಕ್ಕೆ ಸೇರಿದಂಥವು. ಒಂದು ಕಡೆ ಇಲ್ಲಿ ಕೇವಲ ಬೆರೆಳೆಣಿಕೆಯಷ್ಟು ಜನ ಮಾತ್ರ ಸಂಗೀತ ಕೇಳಲು ಸೇರಿದ್ದರೆ, ಇನ್ನೊಂದೆಡೆ ’ಸೂಪರ್ ಸ್ಟಾರ್’ಗ:ಅ ಕಛೇರಿಗೆ ತಡೆಯಲಾಗದಷ್ಟು ಜನ ಸಂದಣಿ. tm-krishna-singerಇದು ಇವತ್ತು ಬಹುದೊಡ್ಡ ಸಮಸ್ಯೆ ಎನಿಸುವವರೆಗೆ ಸಾಗಿದೆ. ಜನರು ’ಸ್ಟಾರ್’ ಸಂಗೀತಗಾರರ ಸಂಗೀತ ಕೇಳಲು ಮುಗಿಬೀಳುವುದರಲ್ಲಿ ಯಾವುದೇ ಆಶ್ಚರ್ಯಪಡುವ ಸಂಗತಿ ಇಲ್ಲ ಎಂಬುದು ನನಗೆ ತಿಳಿದಿದ್ದರೂ, ಎಲ್ಲೋ ಒಂದು ಕಡೆ ಇಡೀ ಜನಸಮೂಹವೇ ಈ ’ಜನಪ್ರಿಯತೆ’ಯ ಕಡೆ ವಾಲುತ್ತಿರುವುದನ್ನು ಸಹಿಸಲಾಗುತ್ತಿಲ್ಲ. ಇದು ನಮ್ಮಲ್ಲಿನ ಒಂದು ’ಕಲಾತ್ಮಕತೆಯ ಸಮಸ್ಯೆ’ಯೇ ಎಂದು ನನಗನಿಸುತ್ತದೆ. ಹಾಗೂ ಇದೇ ಸಮಸ್ಯೆಯನ್ನು ನಾವು ಮ್ಯೂಸಿಕ್ ಸೀಸನ್ ನಲ್ಲಿ ಕಾಣುತ್ತಿರುವುದು. ಈ ಭ್ರಮೆಯಿಂದಾಗಿ ನಮ್ಮಲ್ಲಿನ ಎಷ್ಟೋ ಅದ್ಭುತವಾದ ಸಂಗೀತಗಾರರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.

ಯಾವುದೇ ಕಲಾಪ್ರಕಾರ ತನ್ನೊಳಗಿರುವ ಕಲೆಯ ವೈವಿಧ್ಯತೆಯನ್ನು ಅರಿತುಕೊಂಡು, ಪ್ರಸಿದ್ಧರಾದ ಕೆಲವು ಗಾಯಕರು ಈ ವೈವಿಧ್ಯತೆಯೆ ’ಮುಖ’ ಹಾಗೂ ಉಳಿದೆಲ್ಲಾ ಕಲಾವಿದರು ಈ ಕಲೆಯ ಶ್ರೀಮಂತಿಕೆಗೆ ಕಾರಣರಾದ ದಾನಿಗಳು, ಪೋಷಕರು ಎಂದು ಗುರುತಿಸಲ್ಪಡುವ ವ್ಯವಸ್ಥೆ ನಮ್ಮದಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ನನಗೆ ಯಾವಾಗಲೂ ಅನಿಸುತ್ತಿರುತ್ತದೆ. ಆದರೆ, ಇವತ್ತು ನಮ್ಮಲ್ಲಿ ಈ ಉಳಿದ ಸಂಗೀತಗಾರರು ಗಣನೆಗೇ ಇಲ್ಲದವರಾಗಿದ್ದಾರೆ. ಈ ಪರಿಸ್ಥಿಗೆ ನಾನೂ ಒಬ್ಬ ಕಾರಣಕರ್ತನಾಗಿರುವುದರಿಂದ ಈ ವಿಚಾರ ನನ್ನನ್ನು ತುಂಬಾ ಕಾಡುತ್ತದೆ.

ಕನಸುಗಳನ್ನು ಹೊತ್ತ ಯುವ ಸಂಗೀತಗಾರರಿಗಂತೂ ನಿರಾಶಾದಾಯಕವಾದ ಸನ್ನಿವೇಶವೇ ಇಲ್ಲಿದೆ. ಒಂದು ಕಡೆ ಕಛೇರಿ ಪಡೆಯಲು ’ಹಣ’ ಡೊನೇಷನ್ ಹೆಸರಿನಲ್ಲಿ ಓಡಾಡುತ್ತಿದ್ದರೆ ಇನ್ನೊಂದೆಡೆ ಮಧ್ಯವರ್ತಿಗಳ ಕಸರತ್ತು. ’ಡಾಲರ್’ನ ಮಹಾತ್ಮೆಯಂತೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವೆಲ್ಲದರ ನಡುವೆಯೂ ಕೇವಲ ತಮ್ಮ ಪ್ರತಿಭೆಯಿಂದ ಗುರುತಿಸಲ್ಪಟ್ಟ ಯುವಮಿತ್ರರ ಬಗ್ಗೆ ನನಗೆ ತುಂಬಾ ಹೆಮ್ಮೆಯೆನಿಸುತ್ತದೆ. ಆದರೆ, ಈ ಎಲ್ಲಾ ’ಆಟ’ ಗಳನ್ನು ಮಾಡಲಾಗದೇ ಇರುವ, ಅವಕಾಶ ವಂಚಿತರಾಗಿ ಹಿಂದೆ ಉಳಿದ ಅನೇಕ ಸಂಗೀತಗಾರರು ಇನ್ನೂ ನಮ್ಮಲ್ಲಿದ್ದಾರೆ. ೯೦ರ ದಶಕದ ಆರಂಭದಲ್ಲಿ ಪರಿಸ್ಥಿತಿ ಇಷ್ಟು ಕೆಟ್ಟದಾಗಿತ್ತೆಂದು ನನಗನಿಸುವುದಿಲ್ಲ.

ಚೆನ್ನೈನ ಮ್ಯೂಸಿಕ್ ಸೀಸನ್ ಎಂಬುದು ಹೆಚ್ಚು ಕಡಿಮೆ ’NRI ಕೃಪಾಪೋಷಿತ’ ಸೀಸನ್ ಆಗಿಬಿಟ್ಟಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅನೇಕ ಸಂಗೀತ ವಿದ್ಯಾರ್ಥಿಗಳು ಡೆಸೆಂಬರ್‌ನಲ್ಲಿ ಅಲ್ಲಿಂದ ಇಲ್ಲಿ ಬಂದು ಕಛೇರಿ ಮಾಡುವುದು ಸಾಮಾನ್ಯವೆನಿಸಿಬಿಟ್ಟಿದೆ. ಸ್ವಲ್ಪ ಸಮಯದ ಹಿಂದೆ ಇದು ಸೀಸನ್ನಿನ ಒಂದು ಭಾಗ ಮಾತ್ರವಾಗಿದ್ದರೆ ಇವತ್ತು ಹೆಚ್ಚಿನ ಎಲ್ಲಾ ಜೂನಿಯರ್ ಸ್ಲಾಟ್‌ಗಳು NRI ಯುವಕರ ಪಾಲಾಗುತ್ತಿದೆ. ಅಲ್ಲೂ-ಇಲ್ಲೂ ಹೆಸರಾದ ದೊಡ್ಡ ಕಲಾವಿದರುಗಳೇ ತಮ್ಮ NRI ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಮಾಡಿಸಿ ಕೊಡುವ ಹೊಣೆ ಹೊತ್ತವರಂತೆ ವರ್ತಿಸುತ್ತಿದ್ದಾರೆ. ‘ಹಣ’ದ ಕೆಲಸ ಇಲ್ಲಿ ಹೇಗೆ ನಡೆಯುತ್ತದೆ ಎಂಬುದನ್ನು ಊಹಿಸಲೂ ಕಷ್ಟವಾಗುತ್ತದೆ. ಪತ್ರಿಕೆಗಳಲ್ಲಿ ಇವರ ಬಗ್ಗೆ ಲೇಖನಗಳನ್ನು ಬರೆಯಿಸಲಾಗುತ್ತದೆ. ಸಂಗೀತಗಾರರನ್ನು ‘ತಯಾರು’ ಮಾಡಲಾಗುತ್ತದೆ. ಇವೆಲ್ಲವೂ ಮುಚ್ಚಿದ ಬಾಗಿಲಿನ ಹಿಂದೆ ನಡೆಯುವ ಕೆಲಸವಾದದ್ದರಿಂದ ಯಾವ ಸಾಕ್ಷಿಯೂ ದೊರೆಯುವುದಿಲ್ಲ. ಇದರಿಂದಾಗಿ ನಮ್ಮಲ್ಲಿನ ಕಲಾವಿದರಿಗೆ ಮೋಸವಾಗುತ್ತಿರುವುದು ಮಾತ್ರವಲ್ಲದೇ, ನಿಜವಾಗಿ ಸತ್ವವುಳ್ಳ NRI ಕಲಾವಿದನಿಗೆ ತಾನು ಅಂಥವನಲ್ಲ ಎಂಬುದನ್ನು ಸಾಬೀತು ಪಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಕರ್ನಾಟಕ ಸಂಗೀತವೆಂಬ ಪುಟ್ಟ ಪ್ರಪಂಚಕ್ಕೆ ಸೇರಿದ ಹಾಗೂ ಸಂಗೀತ ಸೀಸನ್ನಿನ ಭಾಗಿಗಳಾದ ನಾವು ಈ ಸಣ್ಣ ಪ್ರಪಂಚದಿಂದ tm-krishna-singer2ಆಚೆಗೆ ಸಂಗೀತಕ್ಕೆ ಸಂಬಂಧಿಸಿದ ಕೆಲಸವನ್ನೇನಾದರೂ ಮಾಡಿದ್ದೇವೆಯೇ? ಸೀಸನ್‌ನಲ್ಲಿ ಪಾಲ್ಗೊಳ್ಳಲು, ಸಂಗೀತ ಕೇಳಲು ಸಮಾಜದಲ್ಲಿನ ಬೇರೆ ಕೇಳುಗರನ್ನೇನಾದರೂ ಬರುವಂತೆ ಮಾಡಿದ್ದೇವೆಯೇ? ಆ ಬಗ್ಗೆ ಎನಾದರೂ ಪ್ರಯತ್ನ ಮಾಡಿದ್ದೇವೆಯೇ ಅಥವಾ ನಮ್ಮ ಸಂಗೀತವನ್ನು ಒಯ್ದು ಸಮಾಜದ ಉಳಿದ ಸ್ಥರಗಳಿಗೆ ಪರಿಚಯಿಸುವ ಬಗ್ಗೆ ಚಿಂತಿಸಿದ್ದೇವೆಯೇ? ಎಲ್ಲೋ ಒಂದಿಬ್ಬರ ವೈಯಕ್ತಿಕ ಪ್ರಯತ್ನಗಳನ್ನು ಕಾಣಬಹುದಷ್ಟೇ. ಉಳಿದಂತೆ ನಮಗೆ ಸಮಾಜದ ಇತರರ ಬಗ್ಗೆ ಗಮನವೇ ಇಲ್ಲ. ಹಾಗೂ ಬಹು ಮುಖವಾಗಿ ನಮಗೆ ನಮ್ಮ ಸಂಗೀತವನ್ನು ಡೆಮೊಕ್ರಟೈಸ್ (ಎಲ್ಲರಿಗೂ ದೊರಕುವಂತೆ) ಮಾಡಬೇಕೆಂಬ ಯಾವ ಇಚ್ಛೆಯೂ ಇಲ್ಲ.

ಈ ರೀತಿಯಾಗಿ ಪ್ರತ್ಯೇಕ ವರ್ಗವನ್ನು ನಿರ್ಮಿಸಿಕೊಂಡು ಒಂದು ದ್ವೀಪದಂತೆ ಇರುವ ಕರ್ನಾಟಕಿ ಸಂಗೀತ, ತನ್ನ ನಾಳೆಯನ್ನು ತಾನೇ ಹಾಳುಮಾಡಿಕೊಳ್ಳುತ್ತಿದೆ ಎಂಬುದು ನನ್ನ ಬಲವಾದ ಅಭಿಪ್ರಾಯ. ಸಂಕುಚಿತತೆ, ಮಡಿವಂತಿಕೆಗಳನ್ನು ಬಿಟ್ಟು ’ಮುಕ್ತ’ವಾಗುವ ಅವಶ್ಯಕತೆ ಇಂದು ಕರ್ನಾಟಕಿ ಸಂಗೀತಕ್ಕಿದೆ.

ನನ್ನಂಥಹ ’ಪವರ್‌ಫುಲ್’ ಸಂಗೀತಗಾರರು ತಮ್ಮ-ತಮ್ಮ ವೈಯಕ್ತಿಕ ಲಾಭವನ್ನು ಬಿಟ್ಟು ಈ ಕಾರ್ಯಕ್ಕಾಗಿ ಜೊತೆಗೆ ಕೈ ಜೋಡಿಸಲು ಮುಂದೆ ಬರುತ್ತಿಲ್ಲ. ನಮ್ಮ ಜೊತೆಗೇ ವೇದಿಕೆಯೇರುವ ಮೃದಂಗ, ವಯೋಲಿನ್, ಘಟ ವಾದಕರಿಗೆ ಕೊಡಲಾಗುವ ಸಂಭಾವನೆಯ ಬಗ್ಗೆ ಮಾತನಾಡಲೂ ನಾವು ಅಸಮರ್ಥರಾಗಿದ್ದೇವೆ.

ಈಗ ಈ ’ಸಂಗೀತ ಸೀಸನ್ನಿನ ಹುಚ್ಚುತನ’ ಎಂಬುದು ತಂತ್ರಜ್ಞಾನದ ಮಾಯಾಲೋಕದೊಂದಿಗೆ ಸೇರಿಬಿಟ್ಟಿದೆ. ಇಂಥಹ ಪರಿಸ್ಥಿತಿಯಲ್ಲಿ ಶಾಂತವಾಗಿರಲು ಹಾಗೂ ಹಾಡಲು ನನಗೆ ಸಾಧ್ಯವಾಗುತ್ತಿಲ್ಲ. ಇದು ನನ್ನದೇ ಅಸಮರ್ಥತತೆಯೇನೋ….

ಈ ಎಲ್ಲಾ ಕಾರಣಗಳಿಂದ ಹಾಡದೇ ಇರುವುದೇ ಉತ್ತಮ ಎಂದು ನನಗನಿಸಿದೆ. ಕಳೆದ ೫ ವರ್ಷಗಳಲ್ಲಿ ಈ ಸೀಸನ್ನಿನ ಒಳಗಿದ್ದುಕೊಂಡೇ ಈ ಬಗ್ಗೆ ಏನಾದರೂ ಮಾಡಬೇಕೆಂದು ಟಿಕೆಟ್ ಇಲ್ಲದೆ ಕಛೇರಿ ಮಾಡುವುದು ಮುಂತಾದ ಹಲವು ರೀತಿಗಳಲ್ಲಿ ಪ್ರಯತ್ನಿಸಿದ್ದೇನೆ. ಆದರೆ ಇಡೀ ವಾತಾವರಣವೇ ಎಷ್ಟು ವ್ಯವಹಾರಾತ್ಮಕವಾಗಿದೆಯೆಂದರೆ, ಸಂಗೀತವನ್ನು ಕೇಳುವುದು ಎಂಬುದೇ ಇಲ್ಲವಾದಂತಾಗಿದೆ.

ಚೆನ್ನೈನ ಕರ್ನಾಟಕಿ ಸಂಗೀತವೆಂಬುದು ’ಸಂಗೀತ’ಕ್ಕಿಂತ ಹೆಚ್ಚಾಗಿ ’ಸೀಸನ್’ ಮಾತ್ರವೇ ಆಗಿಬಿಟ್ಟಿದೆ. ಇದು ಕಲೆಗೆ ಮಾರಕವಾದದ್ದು. ಇಲ್ಲಿ ನಾವು ಕಲೆ, ಅದರ ಸ್ವರೂಪ, ಕಲೆಯ ದೊರಕುವಿಕೆ ಹಾಗೂ ಅದರ ಒಟ್ಟಂದದ ಕಡೆಗಿನ ಆತ್ಮಾವಲೋಕನದ ಕೊರತೆಯನ್ನು ಕಾಣುತ್ತಿದ್ದೇವೆ. ಆದರೆ ಇವೆಲ್ಲದರ ನಡುವೆಯೂ ತಮ್ಮ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತಿರುವ ಕೆಲವು ವ್ಯಕ್ತಿಗಳು, ಕೆಲವು ಆಯೋಜಕರು, ಸಂಗೀತಗಾರರು ಹಾಗೂ ಬೆರಳೆಣಿಕೆಯಷ್ಟು ಶೋತೃಗಳು ಇರುವುದನ್ನು ನಾವು ಮರೆಯುವಂತಿಲ್ಲ.

ಹಳೆಯದೆಲ್ಲವೂ ಚೆನ್ನಾಗಿತ್ತು ಎಂದೇನು ನಾನು ಹೇಳ ಹೊರಟಿಲ್ಲ. ಆದರೆ, ಇಂದಿನ ಚೆನ್ನೈನ ಸಂಗೀತ ಸೀಸನ್ ಮಾತ್ರ ’ರಸಹೀನವಾದ ಬಹು ದೊಡ್ಡ ಬದಲಾವಣೆಗೆ ಈಡಾದ ಘಟ್ಟ’ವೊಂದನ್ನು ತಲುಪಿದೆ ಎಂದು ನನಗೆ ಖೇದವಾಗುತ್ತದೆ. ಅಥವಾ ಇದು ಮೊದಲಿನಿಂದಲೂ ಹೀಗೆಯೇ ಇದ್ದು, ನನಗೆ ಕಾಣಿಸಿದ್ದು ಮಾತ್ರ ಈಗವೇ ಎಂಬುದು ಅರ್ಥವಾಗುತ್ತಿಲ್ಲ. ಆದರೆ ಈಗ ಎಲ್ಲಾ ತಿಳಿದ ಮೇಲೂ ಇದರ ’ಕೇವಲ ಪಾಲುದಾರ’ನಾಗಲು ನನಗೆ ಸಾಧ್ಯವಾಗುತ್ತಿಲ್ಲ.

One comment

  1. One of the most sought after Karnatik music Vidwan T M Krishna has spoken out. His opinions on commercialisation and NRIsation of music are thought provoking. Democratisation of music and taking music to the doors of the people is the need of the hour. We should support his mission. – t.surendra rao ‘samudaya’ bengaluru.

Leave a Reply to Surendra Rao T Cancel reply

Your email address will not be published.