ಹಾಳು ಸುಡಗಾಡ ಬದುಕು : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಹನುಮಂತ ಹಾಲಿಗೇರಿ

ಈಗ ದನೇ ಅನ್ನದ ಕೂಡ ಬದನಿಕಾಯಿ ಚಟ್ನಿ ನಂಚ್ಕೊಂಡು ಊಟದ ಶಾಸ್ತ್ರ ಮುಗಿಸಿ ಕೋಲಿ ಮುಂದಿನ ಅಂಗಳದೊಳಗ ಪ್ಲ್ಯಾಸ್ಟಿಕ್ ತಟ್ ಹಾಸ್ಕೊಂಡು ಕಾಲುಚಾಚ್ಕೊಂಡು ಮಾತೆವ್ವ ಕುಂತಿದ್ಲು. ಆಕಿ ಸುಮ್ಮನ ಕುಂತಂಗ ಕಂಡ್ರೂ ಆಕಿ ದವಡೆಗಳು ಒಂದು ಸಂವನ ಮೆಲಕ್ಕ ಹಾಕುತಿದ್ವು. ಆಕಿ ಗಂಡ ದರಿಯ ಅಆಅಬ್ ಅಂತ ಡೆರಿಕಿ ಹೊಡಕೋತ ಮುಗಿಲ ಮ್ಯಾಲಿನ ಚಿಕ್ಕಿ ನೊಡಕೋತ ಅಂಗಾತ ಬಿದ್ದಕೊಂಡಿದ್ದ.

ಆಗಷ್ಟೆ ಕಂಬಳಿಯಂಥ ಕರಿ ಮುಗಿಲ ತುಂಬ ಚಿತ್ತಾರ ಮೂಡಿಸಿದ್ದ ಚಿಕ್ಕಿಗೊಳು ಮಿಣುಕುಮಿಣುಕಾಗಿ ಒಂದೊಂದೆ ಮಾಯವಾಗತೊಡಗಿದ್ದವು. ಚಂದಪ್ಪ ಇವನೌನ ಮಳಿ ಬರುವಂಗಾತು ಅನ್ಕೊಂಡು ಗೂಡು ಸೇರಿದ್ದ. ಗುಡುಲ್ ದಡುಲ್ ಎಂಬ ಗುಡುಗು, ಅದರ ಹಿಂದೆಯೇ ಒಮ್ಮೆಲೆ ನೂರು ಸಾವಿರ ಬಲ್ಬು ಬೆಳಗಿದಂಗಳ ಕೋಲ್ಮಿಂಚು…

‘ಆ..ಉ… ಉಉಂ, ಅಯ್ಯಯ್ಯ. ಎವ್ವಾ ಬೇ ಯಾಕೋ ಬೆನ್ನಿನ ನರಾ ಜಗ್ಗಾಕ ಹತ್ಯಾವು..’ ಮಗಳು ಸ್ಟೇಲ್ಲಾಳ ನರಳುವ ದ್ವನಿ ಆ ಮಳೆ ಗಾಳಿಯಲ್ಲಿ ಅಸ್ಪಷ್ಟವಾಗಿ ತೇಲಿ ಹೋಯ್ದಂತಾಯಿತು.

‘ಮಗಳ ಬ್ಯಾನಿ ತಿನ್ನಾಕ ಹತ್ತಿದಂಗ ಕಾಣತೈತಿ. ಏ ಯೇಸು ತಂದೆ, ಇನ್ನು ಸ್ವಲ್ಪ ಹೊತ್ತು ಮಳಿಗಾಳಿ ಶುರು ಮಾಡಬ್ಯಾಡೋ ಎಪ್ಪ’ ಮಾತೆವ್ವ ಮನದೊಳಗ ಬೇಡ್ಕೊಂಡ್ಲು. ‘ಹೋಗು, ಯಾವುದಾದ್ರೂ ಆಟೋ ಕರಕೊಂಡು ಬರೊಗು ದವಾಖಾನಿಗೆ ಹೋಗೂನು’  kt_shivaprasad-art-familyಮಾತೆವ್ವ ಒದರುತ್ತಲೇ ಮಗಳತ್ತ ದಾವಿಸಿದಳು.

ಆಟೋ ಇಲ್ಲವೆಂದು ವಾಪಸ್ ಬಂದ ಗಂಡನಿಗೆ ಶಪಿಸುತ್ತಾ ಗೇಟ್‍ವರೆಗೆ ಮಗಳನ್ನು ನಡೆಸಿಕೊಂಡು ಬಂದ ಮಾತೆವ್ವ ಸಿಕ್ಕ ಬೇಂದ್ರೆ ಬಸ್ ಹತ್ತಿಸಿಕೊಂಡು ಕೆಎಂಸಿ ಆಸ್ಪತ್ರೆಗೆ ಬಂದಿದ್ದಳು. ಮಗಳು ಹೆರಿಗೆ ವಾರ್ಡೊಳಗೆ ಹೋದ ಮೇಲೂ ಎಷ್ಟೋ ಹೊತ್ತಿನ ಮಟಾ ದರಿಯ ಕಾಯ್ದುಕೊಂಡು ಅಲ್ಲೆ ನಿಂತಿದ್ದ. ‘ಯಜ್ಜ ನಿಂದೆನು ಕೆಲಸ ಇಲ್ಲ. ನೀ ಹೊರಗ ಹೋಗು ಎಲ್ಲ ಸರಿ ಆಕೈತಿ’ ಅಂತ ಒಬ್ಬಾಕಿ ನರ್ಸ್ ಹೇಳಿದ್ದರಿಂದ ಮುದುಕಗ ಇರಿಸು ಮುರುಸಾತು. ನಿಧಾನಕ್ಕ ಕಾಲು ಎಳಕೊಂಡು ಆಸ್ಪತ್ರೆ ಗೇಟ್‍ಮಟಾ ಬಂದ. ಅಲ್ಲೊಂದು ಪಟ್ಟಿ ಅಂಗಡಿ ಮುಂದ ಲೈಟ್ ಉರಿತಿತ್ತು. ಅಲ್ಲಿ ಹೊಗಿ ಒಂದು ಬೀಡಿ ತುಗೊಂಡು ಅಲೆಅಲೆಯಗಿ ಹೊಗೆಬಿಟ್ಟ. ಮನಸ್ಸು ದೇಹ ಸ್ವಲ್ಪ ಹಗೂರ ಆದಂಗಾದ್ವು. ಮತ್ತೆ  ದವಾಖಾನಿ ಕಡೆಗೆ ಬರತೊಡಗಿದ. ಅಲ್ಲೊಂದು ಮುಚ್ಚಿದ ಬಾಗಿಲು ಬಿಲ್ಡಿಂಗ್ ಕಾಣಿಸಿತು. ಮಗಳು ಹೆರಿಗೆ ಇನ್ನು ಮೂರ್ನಾಲ್ಕು ತಾಸಾಗಬಹುದು ಅಂದುಕೊಂಡು ಮುಚ್ಚಿದ ಬಾಗಿಲ ಮುಂದೆ ಅಡ್ಡಾದ.

***

ಸರು ಬಿಟ್ಟು ಸರು ಹಣಿಯುವ ಮಳೆಯ ಜಿಟಿ ಜಿಟಿ. ಆಗಾಗ ಮುತ್ತಿಕ್ಕುವ ಸೊಳ್ಳೆಗಳಿಂದಾಗಿ ದರಿಯನಿಗೆ ನಿದ್ದಿ ಸುಳಿಯೊಲ್ಲದು. ಮೇಲಾಗಿ ನೆನಪುಗಳು ಸ್ಪರ್ಧೆಗೆ ಬಿದ್ದವವರಗತೆ ನಾ ಮುಂದು ತಾಮುಂದು ಎಂದು ಮುಕುರಿ ಪಟ ಬಿದ್ದಿದ್ದವು.

ಹಂಗ ನೋಡಿದ್ರ ಅವನ ಜನ್ಮನಾಮ ದೊರೆರಾಜ್. ಅಂವ ಮಾಡುತ್ತಿದ್ದ ವೃತ್ತಿಯ ಕಾರಣದಿಂದಲೋ, ಅವನ ಪೂರ್ತಿ ಹೆಸರನ್ನು ಕರೆಯುವುದು ತಮಗೆ ಅವಮಾನ ಎಂದುಕೊಂಡೋ ಮರ್ಯಾದಸ್ತ ಜನರು ಅವನ ಹೆಸರನ್ನು ತಮ್ಮ ಹುಬ್ಬಳಿಗೆ ಸುತ್ತಲಿನ ಆಡುಭಾಷೆಗೆ ಹೊಂದಿಸಿಕೊಂಡು ದರ್ಯಾ ಎಂದು, ಇನ್ನಷ್ಟು ಮುಂದೆ ಹೋಗಿ ದರಿದ್ರ ದರ್ಯಾ ಎಂದು ಕರೆತಿದ್ರು. ದರಿಯನ ಮೂರ್ನಾಲ್ಕು ತಲೆಮಾರುಗಳ ಹಿಂದಿನ ಪೂರ್ವಿಕರು ಆಂದ್ರ ಪ್ರದೇಶದ ಸುಡುಗಾಡು ಕಾಯುವ ಕಾಪಾಲಿಕ ಎಂಬ ಅದ್ಯಾವದೋ ಹೀನ ಬುಡಕಟ್ಟಿನವರು. ಅಲ್ಲಿ ಅದ್ಯಾವ ಕಾರಣಕ್ಕೋ ನೆಲೆ ಕಳೆದುಕೊಂಡು ಹುಬ್ಬಳ್ಳಿಗೆ ಬಂದು ಇಲ್ಲಿನ ಸುಡುಗಾಡುಗಟ್ಟೆಗಳಲ್ಲಿ ನೆಲೆ ನಿಂತಿದ್ದರು.

ಯಾರಾದ್ರೈ ಸತ್ತರೇ ಮಾತ್ರ ಇವರಿಗೆ ಹೊಟೆ ತುಂಬ ಊಟ. ಒಂದು ಕಡೆ ಹೆಣ ಬೇಯಿಸ್ತಾ ಇದ್ದರೆ ಇನ್ನೊಂದು ಕಡೆ ಹೆಣದ ಮೇಲಿನ ಅಕ್ಕಿಯನ್ನು ತಾಯಿ ಬೇಯಿಸೋದನ್ನೆ ನೋಡಿಕೊಂಡೆ ದರಿಯ ದೊಡ್ಡವನಾಗಿದ್ದ. ಒಮ್ಮೊಮ್ಮೆ ಜಾಸ್ತಿ ಚಿಲ್ಲರೆ ಕಾಸು ಸಿಕ್ಕರೆ ಅವತ್ತು ಅಪ್ಪ ಒಂದೆರಡು ಪಾಕೀಟು ಸೆರೆ ಮತ್ತು ಚಿಕ್ಕನ್ ಪೀಸು ತರ್ತಿದ್ದ.

ಒಂದೊಂದು ಸಲ ಬಾಳ ಇಚಿತ್ರ ಹೆಣ ಬರತಿದ್ವು. ಕಾಲ ಇದ್ದರ ಕೈ ಇರಲ್ಲ. ಎರಡು ಇದ್ದರ ತಲೆ ಇರ್ತಿರಲಿಲ್ಲ. ಒಮ್ಮೊಮ್ಮೆ ಎಲ್ಲವೂ ಇದ್ರು ಹೆಣ ಪೂರ್ತಿ ಕೊಳತು ಮುಟ್ಟಿದರ ಹರ್ಕೊಂಡು ಬರುವಂಗ ಇರ್ತಿತ್ತು. ಒಂದೊಂದು ಹೆಣ ಅಂತ್ರೂ ಕಿಂವು ರಕ್ತದಿಂದ ತುಂಬ್ಕೊಂಡು ಅಕರಾಳ ವಿಕರಾಳ ಆಗಿರುತಿದ್ವು. ಒಮ್ಮೊಮ್ಮೆ ಕೆಎಂಸಿಯಿಂದ ಪೊಲೀಸರಿಂದ ಫೋನ್ ಬರೋದು, ಅಲ್ಲಿಂದ ಕೊಯ್ದ ಪಂಚನಾಮೆ ಮಾಡಿದ ಹೆಣ ಸುಡಾಕ ಅಷ್ಟೋ ಇಷ್ಟು ದುಡ್ಡು ಕೊಡ್ತಿದ್ರು. ಎಷ್ಟೋ ಹೆಣಗಳಿಗೆ ವಾರಸುದಾರರೆ ಇರ್ತಿರಲಿಲ್ಲ. ಒಮ್ಮೊಮ್ಮೆ ತಿಂಗಳಾನುಗಟ್ಲೆ ಯಾರೂ ಸಾಯದೆ ಉಪವಾಸ ಇದ್ರ, ಒಮ್ಮೊಮ್ಮೆ ಎಕ್ಸಿಡೆಂಟ್ ಆದೋರು, ವಿಷ ಕುಡ್ದೋರು, ಉರ್ಲು ಹಾಕೊಂಡೋರ ಹತ್ತಾರು ಹೆಣ ಬರ್ತಿದ್ವು. abstract-art-sheepಆಗೆಲ್ಲ ಎಲ್ಲರಿಗೂ ಕೈ ತುಂಬ ಹೆಣ ಸುಡೋ ಕೆಲಸ. ಸುಗ್ಗಿಯೋ ಸುಗ್ಗಿ. ಪಾಪ ಎಷ್ಟೆಷ್ಟು ಸಣ್ಣ ಸಣ್ಣ ಮಕ್ಕಳೆಲ್ಲ ವಿಷ ಕುಡ್ದು ಉರ್ಲು ಹಾಕ್ಕೊಂಡು ಹೆಣ ಆಗಿ ಬಂದ್ರ ಅವುನ್ನ ಸುಡೋದು ಬಾಳ ಕಷ್ಟ ಆಕ್ತಿತ್ತು. ಗೆರೆ ಕೊರ್ದು ಚಿತ್ರ ಬಿಡಿಸಿ ಬಣ್ಣ ತುಂಬಿದ ಗೊಂಬಿಯಂಥೋರ ಮೈಗೆ ಬೆಂಕಿ ಹಾಕೋದಂದ್ರ ಹ್ಯಾಂಗ ಮನಸ್ಸು ಬರ್ತದ. ಆ ಮಕ್ಕಳನ್ನು ಆಡಿಸಿ ಬೆಳಿಸಿ ದೊಡ್ಡವರನ್ನಾಗಿ ಮಾಡಿದ ಹೆತ್ತೊಡಲುಗಳು ಅಳ್ಳೋದು ಕೇಳಿಸಿದ್ರಂತೂ ಕಳ್ಳ ಚುರಕ್ ಅಂತಿತ್ತು.

ಹೆಣ ಸುಡ್ತಾ ಸುಡ್ತಾನೆ ದೊರೆರಾಜ್‍ನ ರಟ್ಟೆ ಬಲ್ತಿದ್ವು. ಅವಂಗ ಹೆಣ್ಣು ನೋಡುವ ಜವಾಬ್ದಾರಿಯನ್ನ ಅಪ್ಪ ಶುರುವಿಟ್ಟುಕೊಂಡಿದ್ದ. ಹೆಣ ಸುಡೋನಿಗೆ ಮತ್ಯಾರು ಹೆಣ್ಣು ಕೊಡಬೇಕು, ಹೆಣ ಸುಡೋರ ಮಕ್ಕಳೆ ಆಗಬೇಕಲ್ವೆ? ಆಗಾಗ ತನ್ನ ಹಳೆಯ ಸಂಬಂಧಿಕರ ಮನೆಗೆ ಹೋದಾಗ ಬೇಕಂತ್ಲೆ ಮಾತಿನ ಮುಂದೆ ಮಗ ವಯಸ್ಸಿಗ ಬಂದ ವಿಷಯವನ್ನು ತರುತ್ತಿದ್ದ. ಅವನಂಗೆ ಹೆಣ ಸುಡೋರು ಹುಬ್ಬಳಿ ದಾರವಾಡ ಸೀಮಿ ಸುಡುಗಾಡದೊಳಗ ಸಿಗೂದಿಲ್ಲ ಅಂತ ಮೀಸಿ ತಿರುತ್ತಿದ್ದ. ಅಪ್ಪನ ಮಾತು ನಂಬಿ ಸುತ್ತಲಿನ ಸಣ್ಣ ಸಣ್ಣ ಪಟ್ಟಣಗಳ ಸುಡುಗಾಡುಗಳಲ್ಲಿ ಬೀಡು ಬಿಟ್ಟಿದ್ದ ಹೆಣ್ಣು ಹೆತ್ತವರು ಬಂದು ಹೋಗಿ ಮಾಡುವುದನ್ನು ಶುರುವಿಟ್ಟುಕೊಂಡಿದ್ದರು.

ರೈತರಿಗೆ ಜಮೀನು ಜಾನುವಾರು ಆಸ್ತಿ ಆದ್ರ, ಇವರಿಗೆ ಸುಡಗಾಡೇ ಆಸ್ತಿ ಇದ್ದಂಗ. ಹೆಣ್ಣು ಕೊಡಲಿಕ್ಕೆ ಬಂದವರೆಲ್ಲ ಸುಡುಗಾಡನ್ನು ಅಡ್ಡಾಡಿ ನೋಡತಿದ್ರು. ಸುಡುಗಾಡಿನ ವಿಸ್ತಾರ, ಸುಡುಗಾಡು ಸುತ್ತಲಿನ ವಾರ್ಡುಗಳ ಜನಸಂಖ್ಯೆ, ಅವರ ಶ್ರೀಮಂತಿಕೆ, ಅವರ ಚಟಾದಿಗಳು, ರೋಗ ರುಜಿನಗಳನ್ನು ಮನದಲ್ಲೆ ಲೆಕ್ಕ ಹಾಕಿಕೊಂಡು ತಮ್ಮ ಮಗಳನ್ನು ಇಲ್ಲಿಗೆ ಸೊಸೆಯಾಗಿ ಕಳಿಸಿದರೆ ಮಗಳು ಸುಖವಾಗಿ ಇರಬಹುದೆ ಎಂಬುದನ್ನು ಅಂದಾಜಿಸಿಕೊಂಡು ಮಾತುಕತೆಗೆ ಮುಂದಾಗುತ್ತಿದ್ದರು. ಐದಾರು ಮಾತುಕತೆಗಳು ಮುಂದುವರೆಯಲಿಲ್ಲವಾದರೂ ನಂತರದ ಸಂಬಂಧ ನಿಕ್ಕಿಯಾಗಿ ದೊರೆರಾಜನಿಗೆ ಮಾತೆವ್ವ ಜೊತೆಯಾಗಿ ಬಂದಿದ್ದಳು. ದೊರೆರಾಜ ದರ್ಯಾ ಆದ ಹಾಗೆ ಮೇರಿಮಾತಾ ಹೋಗಿ ಆ ನೆಲದ ನುಡಿಗನುಗುಣವಾಗಿ ಮಾತೆವ್ವ ಆಗಿದ್ದಳು. ವರ್ಷದಲ್ಲಿ ಮಗಳು ಸ್ಟೆಲ್ಲಾ ತೊಡೆ ಏರಿದ್ದಳು.

ಮಗಳು ವಯಸ್ಸಿಗೆ ಬಂದು ಆಕೆಯ ಮದುವೆ ಹ್ಯಾಂಗ ಮಾಡೋದು ಅಂತ ಮಾತೆವ್ವ ಚಿಂತಿಗೆ ಬಿದ್ದು ದರ್ಯಾನ ಜೀವ ತಿನ್ನುವ ಸಮಯದಲ್ಲೆ ಮುನ್ಸಿಪಾಲ್ಟಿಯ ಪೌರ ಕಾರ್ಮಿಕನೊಬ್ಬ ಸುಡುಗಾಡಿನ ಗೇಟಿನ ಮುಂದಿನ ರಸ್ತೆಯಲ್ಲಿ ದಿನಾಲೂ ಕಸ ಹೊಡೆಯಲು ಬಂದು ಇವಳನ್ನು ಬುಟ್ಟಿಗೆ ಹಾಕಿಕೊಂಡಿದ್ದರಿಂದ ಮಗಳ ಮದುವೆಯ ಚಿಂತೆ ದೂರಾಗಿತ್ತು.

***

ಯಾರೋ ಕೋಲಿಂದ ತಿವಿದಂಗಾಗಿ ದರೆಯಪ್ಪ ಗಾಬರಿಯಾಗಿ ಹೊದ್ದ ಲುಂಗಿಯಿಂದ ಮುಖ ಹೊರಗ್ಹಾಕಿ ನೋಡಿದರೆ ಪೊಲೀಸ್. ಸಡನ್ನಾಗಿ ಎದ್ದು ಕುಳಿತ.

‘ಹೆಣದ ಮನಿ ಮುಂದ ಮಲಕ್ಕೊಂಡಿಯಲ್ಲೋ ಹುಚ್ಚಗಿಚ್ಚ ಹಿಡದದನ ನಿನಗ. ವಾಚಮನ್ ಏನಾದ್ರೂ ನಿದ್ದೆಗಣ್ಣಾಗ ಬಂದು ಹೆಣ ಇಲ್ಯಾಕ ಬಾಗಲದಾಗ ಬಿದೈತಿ ಅಂತ ತಗ್ದು ಒಳಗ ಒಗ್ದ ಅಂದ್ರ ಏನು ಮಾಡ್ತಿ, ನಡಿ ನಡಿ ಅಕ್ಕಾಡಿ’ ಅಂದ. ದರ್ಯಾಮುಖ ಕಿವುಚುತ್ತಲೇ ಲುಂಗಿ ಸುಟಗೊಂಡು ಹೆರಿಗೆ ವಾರ್ಡ್ ಮುಂದ ಹೋಗಿ ಅಲ್ಲಿನ ಬೆಂಚ್ ಮೇಲೆ ಕುಂಡಿ ಊರಿದ.

ಮತ್ತೆ ಸುಡಿಗಾಡಿನದೆ ನೆನಪುಗಳು, ಇವನೌನ ಇವತ್ತೊಂದಿನ ಸುಡುಗಾಡು ಬಿಟ್ಟು ಬಂದಿನಿ, ಆದ್ರ ಅದು ನನ್ನ ಬಿಡೊಲ್ಲದು ಅಂತ ನಗಿ ಬಂತು. ಸುಡುಗಾಡಿಗೆ ಹೆಣ ತರುವವರೆಲ್ಲ ತಮ್ಮ ಮೃತ ಬಂಧುವನ್ನು ಯಾರನ್ನಾದರೂ ಹುಗಿದಲ್ಲಿ ಹುಗಿಬಾರದು, ಹೊಸ ಜಾಗಾನೇ ಬೇಕು ಎಂದು ಹಟ ಹಿಡಿಯುವವರನ್ನು ಕಂಡು ಅವನಿಗೆ ಸಿಕ್ಕಾಪಟ್ಟಿ ನಗುಬರತಿತ್ತು. ಪರಪಂಚದ ತುಂಬಾ ಜನಾನ ತುಂಬ್ಯಾರ, ಅವರಿಗೆಲ್ಲ ಹೊಸ ಜಾಗ ಹುಡುಕ್ಕೋತ ಹೊಂಟರ ಇಡಿ ಪರಪಂಚನೆ ಗೋರಿಗಳಿಂದ ತುಂಬಿಕೋತೈತಿ. ಇಂಥ ಸಣ್ಣ ವಿಚಾರ ಈ ಜನಕ್ಕ ಹೊಳಿದುಲ್ಲಲಾ ಅಂತ ಅನಕೋತ ’ಈ ಜಾಗ ಪ್ರೆಸ್ ಐತ್ರಿ ಸಾಹೆಬರ,’ ಅಂತ ಸುಳಸುಳ್ಳೆ ಹೇಳಿ ಕೆಲಸ ಶುರು ಮಾಡ್ತಿದ್ದ. ಆದ್ರ ಮಜಕೂರ ಅಂದ್ರ ಅಲ್ಲಿ ಇನ್ನು ಕೊಳಿಲಾರದ ಕೈ ಕಾಲಿನ ಎಲುಬುಗೊಳು ಸಿಕ್ಕು ದರಿಯನನ್ನು ಅಡಕತ್ತರ್ಯಾಗ ಸಿಲುಕಿಸುತ್ತಿದ್ದವು. ಕೆಲವರಂತೂ ತಾವು ಸಾಯುದಕಿಂತ ಮೊದಲ ಪಾಲಿಕೆಗೆ artಒಂದಿಷ್ಟು ದುಡ್ಡು ಕೊಟ್ಟು ನನ್ನ ಇಲ್ಲೆ ಹುಗಿಬೇಕು, ಹುಗಿದ ಮ್ಯಾಲ ಗೋರಿ ಕಟ್ಟಿ ಅದರ ಮೇಲೆ ತಮಗೆ ಬೇಕಾದ ದೇವರ ಚಿತ್ರವನ್ನು ಕೆತ್ತಬೇಕು ಅಂತ ಕಂಡಿಶನ್ ಹಾಕಿದ ಮ್ಯಾಲ ಸಾಯತಿದ್ರು. ಈ ಜಲಮು ಶಾಶ್ವತ ಅಲ್ಲ ಅಂತ ಗೊತ್ತಿದ್ದು ಇರೂಮಟ ಅದು ನಂದು ಇದು ನಂದು ಅಂತ ಬಡಿದಾಡೂ ಜನ, ತಾವು ಸತ್ತ ಮ್ಯಾಲೂ ತಮ್ಮ ಗೋರಿಗಾಗಿ ಬಡಿದಾಡತಾರಂದ್ರ….

ಎಲ್ಲ ಸುಡುಗಾಡದಾಗೂ ಗೋರಿ ಕಟ್ಟಿಸಿಗೋತ ಹೊಂಟಿದ್ದರಿಂದ ಪರಪಂಚದ ಸುಡುಗಾಡಗೊಳೆಲ್ಲ ಗೋರಿಗೊಳಿಂದ ತುಂಬಿ ಬಿಟ್ಟಾವು. ಅದಕ್ಕಂತ ಇತ್ತಿತ್ತಲಾಗ ಹೆಣ ಸುಡಾಕೂ ಒಂದು ಮಷಿನು ಕಂಡು ಹಿಡಿದಾರ.

ಮಷಿನ್ ಅಂದಕೂಡ್ಲೆ ದರ್ಯಾನ ತಲ್ಯಾಗ ಸೊಟ್ರಾಮ ಮತ್ತು ಅವನ ಸುಡುಗಾಡು ನೆನಪಾತು. ಇತ್ತೀಚೆಗಷ್ಟೆ ದರ್ಯಾ ಸೊಟ್ರಾಮನ ಸುಡುಗಾಡು ಹೊಕ್ಕು ಬಂದಿದ್ದ. ಹೋದ ಕೂಡ್ಲೆ ದಂಗಾಗಿ ಬಿಟ್ಟಿದ್ದ. ನಳದ ಮುಂದ ಕೊಡಪಾನ ಪಾಳೆಕ ಇಟ್ಟಂಗ ಐದಾರು ಹೆಣ ದಾರ್ಯಾಗ ಇಟ್ಟಿದ್ದರು. ಅದರಾಗ ಬಾಳಷ್ಟ ಹೆಣ ಮುದುಕುರವೆ ಆಗಿದ್ದರಿಂದ್ಲೋ ಏನೋ, ಆ ಹೆಣಗಳ ಸಂಬಂಧಿಕರು ಅಷ್ಟೆನೂ ದುಖಃ ಪಡದೆ ನಿರಾಳರಾದವರಂತೆ ಅಲ್ಲೆ ಬೆಂಚಿಕಲ್ಲಿಗೆ ಒರಗಿಕೊಂಡು ಅನು ತನು ಮಾತಾಡಕೋತ ಕುಂತಿದ್ರು. ಹೆಣದ ಬಾಯಲ್ಲಿ ನೊಣ ಹೋಗಿ ಬಂದರೂ ಅವರ್ಯಾರಿಗೂ ಖಬರಿರಲಿಲ್ಲ. ಮಧ್ಯಾಹ್ನದ ಮಟಾ ಮಾತ್ರ ರಜೆ ಹಾಕಿ ಸಂಸ್ಕಾರಕ್ಕೆಂದು ಬಂದಿದ್ದ ಹೆಣಗಳ ಕೆಲ ಸಂಬಂಧಿಕರ ಬೇಗ ಮುಗಿದುಬಿಟ್ಟರೆ ಸಾಕು. ಇಲ್ಲಂದ್ರ ರಜೆ ಮುಂದುವರೆಸಬೇಕಾಕೈತೋ ಅಂತ ದಿಗಿಲಿಗೆ ಬಿದ್ದಿದ್ದರು.

ಅಲ್ಲೆ ಇದ್ದ ಸೊಟ್ರಾಮ ಗುಟಕಾ ಜಗಿತಾ ಎತ್ತಲೋ ನೋಡಕೋತ ಕುಂತಿದ್ದ. ‘ಯಾಕೋ ರಾಮ್ಯಾ ಆರಾಮಿಲ್ಲೇನು, ಮುಖ ಒಂಥರಾ ಆಗೈತೆಲ್ಲ. ಯಾಕ ಕೆಲಸ ಶುರು ಹಚ್ಚಗೋಬೇಕಿಲ್ಲ. ಸುಡಗಾಡಕ್ಕ ಇಷ್ಟೊಂದು ಹೆಣ ಬಂದಾವು. ಏಳು ನಾನು ಕೈ ಜೋಡಿಸ್ತಿನಿ’ ಅಂತ ದರ್ಯಾ ಅವನ ಹತ್ತಿರಕ್ಕೆ ಸರಿದ.

ಇಷ್ಟ ಸಾಕಿತ್ತು, ಸೊಟ್ರಾಮನ ಕಣ್ಣು ತೇವಗೊಂಡವು. ‘ಆ ಹೆಣಗಳನ್ನು ದಫನ್ ಮಾಡೋದು ನನ್ನ ಕೆಲಸ ಅಲ್ಲೋ ಕಾಕಾ. ಅಲ್ಲೊಂದು ದೆವ್ವದಂತ ಮಷೀನ್ ಐತಿ, ಅದು ನನ್ನ ಕೆಲಸ ಕಸಕೊಂಡು ಕುಂತೈತಿ. ಹೊಟ್ಟಿ ತುಂಬ ಊಟ ಮಾಡಿ, ಎರಡ್ಮೂರು ತಿಂಗಳಾತೋ ಕಾಕಾ, ಮಷಿನ್ ಯಾವತ್ತೋ ಬಂದೈತೋ ಅವತ್ತಿಂದ ಮೈ ತುಂಬಾ ಕೆಲಸಾನು ಇಲ್ಲ, ಹೊಟ್ಟಿ ತುಂಬ ಊಟಾನೂ ಇಲ್ಲ. ಇಲ್ಲಿಂದ ಎಲ್ಯಾರ ದೂರ ಹೋಗಬೇಕು ಅಂತ ಅನಿಸತೈತಿ. ಆದ್ರ ಎಲ್ಲಿ ಹೋಗಬೇಕು, ಏನು ಮಾಡಬೇಕು ಅನ್ನೊದು ತಿಳಿವಲ್ಲದಂಗ ಆಗೇತಿ’ ಅಂತ ನೆಲಕ್ಕ ದೃಷ್ಟಿ ಚೆಲ್ಲಿದ.

ದರ್ಯಾಗ ಅವತ್ತು ದೊಡ್ಡ ವಿಚಿತ್ರ ನೋಡಿದಂಗಾತು. ‘ಕಲಿಕಾಲ ಬರತೈತಿ, ಹಡಿಯಾಕ ಮಷೀನು, ದಪನ್ ಮಾಡಾಕ ಮಷೀನು ಬರತಾವು. ತೂಗಿ ತಿಂದು ತಿಣುಕಿ ಹೇಲೋ ಕಾಲ ದೂರಿಲ್ಲ’ ಅಂತ ಬುಡಬುಡಿಕ್ಯಾ ಹೋದ ವರ್ಷ ಹೇಳಿದ್ದನ್ನೆ ದೇನಿಸಿಕೊತ ಕುಂತ.

ಅಷ್ಟರೊಳಗ ಕರೆಂಟ್ ಬಂದುವಂಥ ಯಾರೊ ಒಬ್ಬ ಒದರಿದ್ರು. ಹೆಣ ಮಷೀನ್ ಬಾಯಾಗ ಕೋಡೋದನ್ನ ನೋಡಾಕಂತ ದರ್ಯಾ ಎದ್ದು ಬಂದ. ಎಲ್ಲ ಪೂಜಾವಿಧಿ ಮೂಗಿದ ಮ್ಯಾಲ ಅಂಗಡಿ ಬಾಗಿಲದಂಥ ಷಟರ್ ಮ್ಯಾಲ ಎಳದು ಅದರೊಳಗ ಹೆಣ ತುರುಕತಿದ್ರು. ಮತ್ತ ಬಾಗಲು ಹಾಕಿ ಒಂದೈದು ನಿಮಿಷ ಬಿಟ್ಟು ಷೆಟರ್ ತೆಗದು ನೋಡಿದರ ಅಲ್ಲಿ ಹೆಣ ಮಂಗ ಮಾಯ. ಈಗಷ್ಟೆ ಹೆಣ ತಿಂದರೂ ಹಸಿವು ನೀಗದಂತಿದ್ದ ಅಲ್ಲಿನ ನಿಗಿ ನಿಗಿ ಕೆಂಡ ಬಾಯ್ದೆರೆದು ತನ್ನನ್ನೆ ಕರೆದಂತಾಗಿ ದರೆಪ್ಪ ಅಲ್ಲಿಂದ ಕಣ್ ಕಿತ್ತಿದ್ದ.

ಆ ಮಷೀನ್ ಪಕ್ಕವೇ ಪ್ಯಾಂಟು ಶರಟು ಹಾಕಿದ್ದ ಒಬ್ಬ ಹುಡುಗ ಆಪೀಸರ್ ದಿಮಾಕಿನಲ್ಲಿ ಬಟನ್ ಒತ್ತುವುದು ಆರ್ಸೂದು ಮಾಡ್ತಿದ್ದ. ಅಂವನನ್ನು ತೋರಿಸಿದ ಸೊಟ್ರಾಮ ‘ಮಷಿನು ನಡಿಸಾಕಂತ ಅವಂಗ ಸರಕಾರ ಪಂದ್ರ ಸಾವಿರ ಪಗಾರ ಕೊಡೋ ನೌಕರಿ ಕೊಟ್ಟೈತಿ. ಬಟನ್ ಚಾಲೂ ಮಾಡೂದು ಬಂದ್ ಮಾಡೂದು ಅಷ್ಟ ಅಂವನ ಕೆಲಸ. ಇವನೌನ ನಾವಿಲ್ಲಿ ಮೈ ನೂಸುವಂಗ ತೆಗ್ಗ ತೊಡೋದು, ಹೆಣ ಸುಡೊದು ಮಾಡಿದ್ರೂ ನಯ್ಯಾಪೈಸೆ ಕೊಡೂದಿಲ್ಲ.’ ಸೊಟ್ರಾಮ ಸುಡುವ ಬಿಸಲಲ್ಲಿ ಬೆವರಿಳಿಸಿಕೊಂಡು ಕೊತಕೊತ ಕುದಿಯುವ ತನ್ನ ನೋವು ತೋಡಿಕೊಂಡ. ಅವನಿಗೆ ಏನು ಹೇಳಬೇಕಂಬೂದು ಗೊತ್ತಾಗದ ದರ್ಯಾ ಸ್ವಲ್ಪ ಹೊತ್ತಿನ ಮ್ಯಾಲ ತನ್ನ ಸುಡುಗಾಡಿನ ದಾರಿ ಹಿಡಿದಿದ್ದ. ಈ  ಮಾಯಾವಿ ಮಷೀನು ತಮ್ಮ ಮಂದಿಯ ಬದುಕನ್ನೆ ನುಂಗುವುದಾದರೆ ಯಾಕಿದನ್ನು ಕಂಡು ಹಿಡಿದರೋ, ನಾವೇನು ಅನ್ಯಾಯ ಮಾಡಿದ್ದೇವೆಯೋ, ಎಂಥ ಕಾಲ ಬಂತು. ಮುಂದ ತುತ್ತಿಡಾಕೂ ಮಷೀನು, ಹಿಂದ ಕುಂಡಿ ತೊಳಿಯಾಕೂ ಮಷೀನು ಬಂದು ನಮ್ಮಂಥ ಬಡವರು ಬದುಕಾಕ ದಾರಿನೇ ಇಲ್ಲದಂಗಾತೋ ಅಂತ ಸೊಟ್ರಾಮನ ಬಡಬಡಿಕೆ ದರೆಪ್ಪನನ್ನು ಬೆನ್ನು ಬೀಡದೆ ಹಿಂಬಾಲಿಸಿ ಗೋಳು ಹೊಯ್ಕೊಳುತ್ತಿತ್ತು.

ಹಿಂಗ ನೆನಪುಗಳ ಜಾತ್ರೆ ನೆರೆದು ದಗ್ಗುದುಳಿಯುತ್ತಿರುವಾಗಲೇ ದರೆಪ್ಪ ಸುಸ್ತಾಗಿ ನಿದ್ದಿ ಉಡಿಯಾಗ ಬಿದ್ದಿದ್ದ.

***

ಬೆಳಗಿನ ಜಾವ ಯಾವಾಗಲೋ ದರ್ಯಾನನ್ನು ಎಬ್ಬಿಸಿಕೊಂಡು ಸಿಕ್ಕ ಆಟೋ ಹಿಡಿದುಕೊಂಡು ಸುಡುಗಾಡಿಗೆ ಕರೆದುಕೊಂಡು ಬಂದಿದ್ದಳು ಮಾತೆವ್ವ. ಮಳೆ ತಣ್ಣಗೆ ಹಣಿಯುತ್ತಲೆ ಇತ್ತು. ನಾಲ್ಕು ಗೋಡೆಯ ಮೇಲೆ ತಗಡಿನ ಶೀಟು ಹೊದಿಸಿರುವ ಒಂದು ಗೂಡಿನಲ್ಲಿಯೇ ಇವರ ವಂಶದ ಬಳ್ಳಿ ಚಿಗಿತು ಹಬ್ಬತೊಡಗಿ ಈ ಹಂತಕ್ಕೆ ಬಂದಿತ್ತು. ಆ ಗೂಡಿನಲ್ಲೆ ಈಗ ಸ್ಟೇಲ್ಲಾಳ ಬಾಣಂತನವಾಗಬೇಕು.

ಆ ಬೆಳಗ್ಗೆ ಮನೆಗೆ ಬಂದರೆ ಮನೆ ತುಂಬ ತಟ ತಟ, ಯಾವತ್ತೋ ಹೊದೆಸಿದ ತಗಡುಗಳು ಅಲ್ಲಲ್ಲಿ ತೂತು ಬಿದ್ದ ಸೋರುತ್ತಿದ್ದವು. ಬಾಗಿಲುಗಳಿಲ್ಲದ ಕಿಡಕಿಯಿಂದ ರಾಜೋರೋಷವಾಗಿ ಪ್ರವೇಶ ಮಾಡುತ್ತಿದ್ದ ಮಳೆಗಾಳಿಗೆ ಮಾತೆವ್ವ ಉಡಿಯಲ್ಲಿನ ಮಗು ಅವಚಿಕೊಂಡು ದಿಗಿಲಿಗೆ ಬಿದ್ದು ದರ್ಯಾನತ್ತ ನೋಡಿದಳು. ನಿದ್ದೆಯ ಮಂಪರಿನಲ್ಲಿದ್ದ ದರ್ಯಾ ಸಿಕ್ಕ ಹಾಸಿಗೆ ತುಗೊಂಡು ರುದ್ರಮಂಟಪದ ಕಡೆ ಹೊಂಟಬಿಟ್ಟಿದ್ದ.

‘ಎ ಮೂಳಾ, ಹಂಗ ಹೊಂಟೆಲ್ಲ, ಅಟು ಖಬರೈತಿಲ್ಲ ನಿಂಗ, ಮಗಳ ಹಸಿ ಮೈಯ್ಯಾಕಿ ಆದಾಳ ಅನ್ನೂದರ ಗೊತ್ತೈತಿಲ್ಲೋ. ಮನಿ ನೋಡಿದರ ಒಂದ ಸಂವನ ಸೋರತೈತಿ. ಹೋಗು. ಎನ್ ಮಾಡ್ತಿಯೋ ಗೊತ್ತಿಲ್ಲ, ಎಲ್ಲ ಕಿಡಕಿ ಬಂದ್ ಮಾಡಿ ಬಾ.’ ಅಂತ ಆದೇಶಿಸಿಬಿಟ್ಟಳು.

ಸುರಿಯುವ ಮಳೆಯೊಳಗ ರೇಗಾಡುತ್ತಲೇ ಹೊರಗೆ ಹೋದ ದರಿಯ ಕಿಡಕಿ ಹ್ಯಾಂಗ ಮುಚ್ಚೋದು ಅಂತ ಸ್ವಲ್ಪ ಹೊತ್ತು ವಿಚಾರ ಮಾಡ್ದ. ಏನೇನೋ ದೇನಕಿ ಹಾಕ್ಕೊಂಡು ಹುಡುಕಾಡಿದ. ಏನೂ ಸಿಗಲಿಲ್ಲ. ಅದೆ ಹೊತ್ತಲ್ಲಿ ಬಿದ್ದ ಕೋಲ್ಮಿಂಚಿನ ಬೆಳಕಲ್ಲಿ ಗೋರಿಗಳ ಮೇಲೆ ಹುಗಿಯಲಾಗಿದ್ದ ನಾಮಫಲಕಗಳು ಇವನನ್ನು ಕರದಂಗಾತು. ಜೀವವಿರುವ ಮನುಷ್ಯರಿಗಿಂತ ಸತ್ತ ಮನುಷ್ಯರೆ ಒಳ್ಳೆಯವರು ಎನ್ನುವ ಅವನು ನಂಬಿದ ಏಕೈಕ ತತ್ವ ಈ ಸಮಯದಲ್ಲಿ ಮತ್ತೆ ನೆನಪಿಗೆ ಬಂದು ಮನಸ್ಸು ಅರಳಿತು. ನೂರಾರು ವರ್ಷದ ಹಿಂದ ಗೊರಿಗಳೊಳಗ ಮಲ ಮುಂತಾದ ಸಜ್ಜನರು ‘ಬಾ ದರ್ಯಾ’ ಅಂತ ಕರೆದಂಗಾತು. ಈ ಹಿರಿಕರ ಶತಮಾನದ ಗೋರಿಗಳು ತಮ್ಮ ಮೈಮೇಲಿನ ಗಚ್ಚು ಸಿಮೆಂಟ್ ಉದುರಿ ಹೋಗಿ ಕೇವಲ ಮೂಲೆಗಲ್ಲು, ನಾಮಪಲಕಗಳ ಅಸ್ತಿಪಂಜರವನ್ನು ಮಾತ್ರ ಹೊದ್ದು ನಿಂತಿದ್ದವು. ಕೆಲವು ಗೋರಿಗಳ ನಾಮಪಲಕವೂ ಕಳಚಿ ಬಿದ್ದು, ಯಾವುದೂ ಶಾಶ್ವತವಲ್ಲ ಎಂಬ ಲೋಕ ನೀತಿಗೆ ಸಾಕ್ಷಿಯಾಗಿದ್ದವು.  ದರ್ಯಾ ತನಗೆ ಬೇಕಾದ ಆಕಾರದ ಐದಾರು ನಾಮಫಲಕಗಳನ್ನು ತಂದು ಗಾಳಿ ಮಳೆ ಪ್ರವೇಶಿಸದಂತೆ ಕೋಲಿಯ ಕಿಡಕಿಗಳಿಗೆ ಮುಚ್ಚಿದ.

ಒಳಗೆ ಮಗು ಕಿಲ ಕಿಲ ಅಂತ ನಗುತ್ತಿತ್ತು. ಹೆರಿಗೆ ಸುಸ್ತಿನಲ್ಲಿದ್ದ ಮಗಳು ನಿದ್ದೆ ಹೋಗಿದ್ದಳು. ಮಾತೆವ್ವ ಮಗಳು ಮೊಮ್ಮಗಳಿಗೆ ಮಳೆ ನೀರು ಸಿಡಿಯದಂತೆ ಹಗ್ಗದ ಮಂಚದ ಮೇಲೆ ಪ್ಲ್ಯಾಸ್ಟಿಕ್ ಹಾಳೆಯೊಂದನ್ನು ಕಟ್ಟುತ್ತಿದ್ದಳು. ಒಂದೆರಡು ಗೋಣಿ ಚೀಲಗಳನ್ನು ತೆಗೆದುಕೊಂಡ ದರ್ಯಾ ಮಲಗಲು ರುದ್ರಮಂಟಪದತ್ತ ಹೆಜ್ಜೆ ಹಾಕಿದ. ನಿದ್ರೆ ಕಣ್ತುಂಬುವವರೆಗೆ ನೆನಪುಗಳು ಅವನಿಗೆ ಮತ್ತೆ ಜೊತೆಯಾದವು.

ಮರುದಿನ ಬೆಳಗ್ಗೆ ಮಾತೆವ್ವ ಹಾಸಿಗೆ ಜಗ್ಗಿ ಎಬ್ಬಿಸಿದಾಗಲೇ ಅವನಿಗೆ ಎಚ್ಚರವಾದುದು. ‘ಒಂದು ಬದುಕು ಬರೂದೈತಿ. ಒಂದು ಕುಣಿ ರೆಡಿ ಮಾಡಬೇಕು, ಎದ್ದೇಳು.’ ಅಂತ ಹಾಸಿಗೆ ಜಗ್ಗತೊಡಗಿದಳು. ತಮ್ಮೊಡಲಿಗೆ ಅನ್ನ ಹಾಕುವ ಹೆಣಗಳನ್ನೆ ಬದುಕು ಎಂದು ಕರೆಯುವ ಕಾಯಕ ಜೋಡಿಯದು.

‘ಇನ್ನೊಂದು ತಾಸಿನ್ಯಾಗ ತರ್ತಾರಂತ ಜಲ್ದಿ ಎಳು’ ಅನಕೋತ ಅಂವ ಹೊಳ್ಳಿ ಮಕ್ಕೊಂಡು ಗಿಕ್ಕೊಂಡಾನು ಅಂತ ಅಂವನ ಕೌದಿಯನ್ನು ಬಗಲಲ್ಲಿ ಇಟ್ಟುಕೊಂಡೆ ಮಾತೆವ್ವ ಕೋಲಿ ಕಡೆ ನಡೆದಳು. ಅವಳ ಹಿಂದಿಂದ ಆಕಳಿಸಿಕೊತ ಹೊದ ದರಿಯ ಬಿಸಿ ಬಿಸಿ ಚಾ ಕುಡ್ದು ಮೊಮ್ಮಗಳಿಗೆ ಮುಖ ನೋಡಿ ನಿನ್ನ ದರ್ಶನದಿಂದ ಇವತ್ತು ಚಲೋತಂಗ ಚಿಲ್ಲರೆ ಬರಲೆವ್ವ ನಿಮ್ಮವ್ವಗ ಕೋಳಿ ಸಾರು ಮಾಡಿ ಹಾಕ್ತೆನಿ ಅನಕೋತ ಸಲಕಿ ಕೆಬ್ಬಣ ಪುಟ್ಟಿ ತುಗೊಂಡು ಹೊರ ನಡೆದ.

ಒಂದು ಮೂಲೇಲಿ ಜಾಗ ಗುರುತಿಸಿ ಹಡ್ಡಬೇಕಂದವನಿಗೆ ಏನೋ ನೆನಪಾಗಿ ಸುಡುಗಾಡಿನ ಗೇಟ್‍ಕಡೆ ನಡೆದ. ಸುಡುಗಾಡಿನ ತಿರುವಿನಲ್ಲಿದ್ದ ಸರೆ ಅಂಗಡಿಗೆ ಹೋಗಿ ಉದ್ರಿ ಹೇಳಿ ಒಂದು ಬಾಟಲಿ ಹೊಟ್ಟಿಗಿಳಿಸಿ ಬಂದು ಕುಣಿ ತೋಡತೊಡಗಿದ. ಸ್ವಲ್ಪ ಹೊತ್ತಿಗೆ ತನ್ನ ಸೆರಗನ್ನೆ ಸಿಂಬಿಯನ್ನಾಗಿ ಮಾಡಕೋತ ಮನಾತೆವ್ವನೂ ಬಂದೂ ಜೋಡಾದ್ಲು. ಇಂವ ಕ್ಷಣ ಕ್ಷಣಕ್ಕೂ ಕುಣಿಯೊಳಗ ಇಳಿಯುತ್ತಾ ಹೋದಂತೆ ಮಾತೆವ್ವಳೂ ಕುಣಿಯೊಳಗ ಇಳಿದ್ಲು. ಇಂವ ಸಲಕಿಗೆ ತುಂಬೋದು, ಮಾತೆವ್ವ ಬುಟ್ಟಿ ಹೊರಗ ಚೆಲ್ಲೋದು ಸೂರ್ಯ ಹೆಗಲ ಮೇಲೆ ಬರೂವರೆಗೂ….

***

ಕುಣ್ಯಾಗ ಹೆಣ ಇಟ್ಟ ಮಂದಿ ನಿರುಮ್ಮಳಾಗಿ ಮನೆ ಕಡೆ ಹೊರಡುವಾಗಲೇ ಅವರಿಗೆ ಆ ನಾಮಪಲಕಗಳು ಕಣ್ಣಿಗೆ ಬಿದ್ದು ಮುಂದಿನ ವೀಪರೀತಕ್ಕೆ ಕಾರಣವಾಗಿದ್ದವು. ಆ ಗುಂಪಿನಲ್ಲಿದ ಕಹಿರಸ (ಕರ್ನಾಟಕ ಹಿಂದೂ ರಕ್ಷಣಾ ಸಮಿತಿ) ಮುಖಂಡನೊಬ್ಬನ ಚುರುಕುಗಣ್ಣುಗಳಲ್ಲಿ ಕಿಡಕಿಗೆ ಆಸರಾಗಿ ಇಟ್ಟಿದ್ದ ಆ ನಾಮಫಲಕಗಳು ಪ್ರತಿಫಲಿಸಿ ಅವು ಕೆಂಪಾಗಲು ಕಾರಣವಾಗಿದ್ದವು. ‘ಅಯ್ಯೋ ನಮ್ಮ ಹಿರಿಕರು ಉಲ್ಟಾ ಪಲ್ಟಾ ಕುಂತಾರ, ಕರಿರಿ ಆ ಕಿರಿಸ್ತಾನ್ ಬೊಳಿ ಮಗನ್ನ’ ಅಂತ ಚೀರಾಡತೋಡಗಿದ್ದನ್ನು ನೋಡಿದ ಮಾತೆವ್ವ ಭಯದಿಂದ ಥರಗುಟ್ಟಿ ಒಳಗೆ ದನಿವಾರಿಸಿಕೊಳ್ಳುತ್ತಿದ್ದ ಗಂಡನನ್ನು ಕರೆದಳು. ದರ್ಯಾ ತೇಲಗಣ್ಣು ಮೇಲುಗಣ್ಣು ಹಾಕೋತ ಬಂದ ನಿಂತ.

‘ಮಗನ ಇಂವನ್ಯಾಕ ಇಲ್ಲಿ ಇಟಗೊಂಡಿದ್ದಿ, ಸೊಕ್ಕ ಮೈ ಏರಿತೇನ’
‘ಎಪ್ಪ ರಾತ್ರಿ ಮಳಿ ಬರತಿತ್ತ ಅದಕ್ಕ..’
‘ಅದಕ್ಕ ನಮ್ಮ ಹಿರಿಯಾರ ಬೇಕೇನೋ ಮಗನ ನಿನಗ.. ಯಾರನ್ನ ಕೇಳಿ ತೊಗೊಂಡಿ.’
‘ಎಪ್ಪ ಯಾರನ್ನೇನು ಕೇಳೋದು. ಹುಟ್ಟಿದಾಗಿಂದ ಇಲ್ಲಿ ಬದುಕೇನಿ, ಈ ಸುಡಗಾಡ ನನ್ನ ಮನಿ, ಇಲ್ಲಿ ಮಕ್ಕೊಂಡರಲ್ಲಾ, ಈ ಗೋರಿಗಳೊಳಗ, ಅವರು ನಮ್ಮ ದೇವರು.. ನನ್ನ ಮೊಮ್ಮಗಳ ಕಷ್ಟ ನೋಡಲಾರದ ಅವರ ನನಗ ಈ ಪಾಠಿಗಲ್ಲು ತೊಗೊಂಡು ಹೋಗು ಅಂದ್ರು, ಅಂದಕ್ಕ ತಂದ ಇಟಗೊನ್ನಿ.’

ಒಂದಿಷ್ಟು ಜನ ಕೊಳ್ಳೆಂದು ನಕ್ಕರು. ಆದ್ರ ಒಬ್ಬ ‘ಮಗನ್ನ ಸುಳ್ಳು ಹೇಳತಿ’ ಅಂತ ಗುಂಪಿನಲ್ಲಿದ್ದವನೊಬ್ಬ ಜಾಡಿಸಿ ಒದ್ದೆಬಿಟ್ಟ! ಇನ್ನೊಂದಿಷ್ಟು ಜನ ಬಿದ್ದವನ ತುಳಿಯಲು ಮುಂದೆ ಸರಿದರು.
ಗುಂಪಿನಲ್ಲಿದ್ದ ಹಿರಿಯನೊಬ್ಬ ಇದನ್ನೆಲ್ಲ ನೋಡಲಾರದೆ ‘ಏ ಒದಿಬ್ಯಾಡ್ರೋ ಅಟ್ರಾಸಿಟಿ ಕೇಸ್ ಹಾಕಿದ್ರ ಜಡಾ ಆಕೈತಿ’ ಅಂತ ಅವರನ್ನೆಲ್ಲ ಹಿಂದೆ ಸರಿಸಿದ.

ಕಹಿರಸ ಮುಖಂಡ ಇನ್ನು ಬುಸುಗುಡುತ್ತಲೇ ಇದ್ದ. ‘ಕಿರಿಸ್ತಾನ ಮಗನ್ನ ನಮ್ಮ ಸುಡುಗಾಡಿಂದ ಒದ್ದೋಡಿಸುವರೆಗೂ ನಮ್ಮ ಹಿರಿಕರ ಈ ಗೋಳು ತಪ್ಪುವಂಗಿಲ್ಲ. ಮೊದಲು ಇಂವನ ಮ್ಯಾಲೆ ಒಂದು ಕೇಸು ಜಡಿಯೋನು ಬರ್ಯೋ’ ಅಂತ ಒಂದಿಷ್ಟು ಗುಂಪು ಹೊಂಡಿಸಿಗೊಂಡು ಹೊರಟೇ ಬಿಟ್ಟ. ಹೋಗುವ ಮುನ್ನ ಸಾಕ್ಷಿಗಿರಲೆಂದು ತನ್ನ ಮೊಬೈಲ್‍ನಿಂದ ಉಲ್ಟಾ ಪಲ್ಟಾ ಇಟ್ಟಿದ್ದ ನಾಮಫಲಕಗಳ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ.

ಅವನಿಗೆ ಕ್ರಿಶ್ಚಿಯನ್ ಅನುಯಾಯಿಗಳ ಮೇಲೆ, ಅದರಲ್ಲೂ ಯಾರ ಯಾರದೋ ಮಾತು ಕೇಳಿ ತಮ್ಮ ಧರ್ಮವನ್ನೆ ಮಾರಿಕೊಂಡವರ ಮೇಲೆ ಬಹಳ ಸಿಟ್ಟಿತ್ತು. ಭಾರತ ಹಿಂದೂಗಳ ದೇಶವೆಂದು ಆತ ಬಲವಾಗಿ ನಂಬಿದ್ದ. ಹೇಗಾದರೂ ಮಾಡಿ ಅನ್ಯ ಧರ್ಮದ ಕುನ್ನಿಗಳನ್ನ ಓಡಿಸೋಣ ಎಂದು ಆಗಾಗ ಸಭೆಗಳಲ್ಲಿ ಭಾಷಣ ಮಾಡುತ್ತಿದ್ದ. ಆತ ಬಹಳ ದಿನಗಳ ನಂತರ ಮಾತನ್ನು ಕೃತಿಗಿಳಿಸಲು ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದೆಂಬ ಹುಮ್ಮಸ್ಸಿನಲ್ಲಿದ್ದ.

ಮುಸಲರ ಹುಡಗನೊಬ್ಬ ಹಿಂದೂ ಹುಡುಗಿಗೆ ಕಿಚಾಯಿಸಿದ್ದರ ಪ್ರಕರಣವೊಂದರ ಬಗ್ಗೆ ತಲೆಬಿಸಿ ಮಾಡಿಕೊಂಡ ಕುಂತಿದ್ದ ಪಿಎಸ್‍ಐ ಸೂರ್ಯರೆಡ್ಡಿ ಅವರು ಕಹಿರಸ ಸಂಘಟನೆಯವರು ತಂದ ದೂರನ್ನು ಆಲಿಸಿ ಮತ್ತಷ್ಟು ಗರಂ ಆಗಿದ್ದರು. ‘ಕೇವಲ ನಾಮಫಲಕಗಳ ಕಳುವು ಅಂಥ ಕೇಸು ಜಡಿದರೆ ಅದು ಸ್ಟ್ರಾಂಗ್ ಆಗೂದಿಲ್ಲ. ಸುಡಾಗಾಡಿನ್ಯಾಗ ಅಸ್ತಿಪಂಜರ, ಎಲುಬು, ಆಗಷ್ಟೆ ಹುಗಿದ ಹೆಣ ಮಾರ್ತಾನ ಅಂತ ಕೇಸ್ ಜಡಿರಿ. ಒಂದಷ್ಟು ವರ್ಷ ಕಂಬಿ ಎಣಿಸಲಿ ಮಗಾ’ ಅಂತ ತಮಗೆ ತಿಳಿದ ಕೆಲವು ಸೆಕ್ಷೆನ್‍ಗಳ ನಂಬರ್ ಹೇಳಿ ತಮ್ಮ ತಲೆಬಿಸಿಯನ್ನು ಸ್ವಲ್ಪಮಟ್ಟಿಗೆ ತಣ್ಣಗೆ ಮಾಡಿಕೊಂಡರು. ಜೊತೆಗೆ ಕಹಿರಸ ಸಂಘಟನೆ ಮುಖ್ಯಸ್ಥರಿಂದ ಶಹಬ್ಬಾಷಗಿರಿ ಸಿಕ್ಕು ಮತ್ತಷ್ಟು ಖುಷಿಗೊಂಡರು.

ಇಲ್ಲಿ ಕೇಸು ಜಡಿಯಲಾಗುತ್ತಿದ್ದರೆ ಅಲ್ಲಿ ರುದ್ರಮಂಟಪದೊಳಗೆ ನೆಮ್ಮದಿಯ ನಿದ್ದೆಯಲ್ಲಿದ್ದವನನ್ನು ಪೋಲೀಸ್ ಪೆದೆಗಳು ಎಳೆದು ತಂದರು. ಅಷ್ಟೊತ್ತಿಗಾಗಲೇ ಕಹಿರಸ ವೇದಿಕೆಯ ಸಮಾಜಸೇವಕರು ತಮಗೆ ಗೊತ್ತಿದ್ದ ಟಿವಿ ರೀಪೋರ್ಟ್‍ರ್‍ಗಳಿಗೆ ಪೋನಾಯಿಸಿ ಕರೆಸಿಕೊಂಡು ತಮ್ಮ ಸೇವೆಯನ್ನು ಸಾಧ್ಯಂತವಾಗಿ ವಿವರಿಸುವಲ್ಲಿ ತಲ್ಲೀನರಾಗಿದ್ದರು. ಅಲ್ಲಿಗೆ ಯಾವದೋ ಲೋಕದ ಪ್ರಾಣಿಯಂತೆ ಹಿಡಿದು ತರಲಾದ ದರ್ಯಾನನ್ನು ನೋಡಿದ ಟಿವಿ ವರದಿಗಾರರು ತಮ್ಮ ಕ್ಯಾಮರಾವನ್ನು ದರಿಯನತ್ತ ತಿರುಗಿಸಿದರು. ಕೇಸಿನ ತಳಬುಡವನ್ನು ಅರಿಯದ ದರಿಯ ಎಂದಿನಂತೆ ಹಲ್ಕಿರಿದು ಪೋಜು ಕೊಟ್ಟ. ಅವನನ್ನು ಸ್ಟೇಷನ್ನಿನಲ್ಲೆ ಇದ್ದ ಕಂಬಿಯೊಳಗೆ ನೂಕಿ ಕೀಲಿ ಜಡಿಯಲಾಯಿತು. ಇದ್ಯಾವುದರ ತಳಬುಡವೂ ಅರ್ಥವಾಗದ, ಅರ್ಥೈಸಿಕೊಳ್ಳಲು ಪ್ರಯತ್ನಿಸದ ದರಿಯ ಅಲ್ಲಿಯೆ ಟಾವೆಲ್ಲು ಚೆಲ್ಲಿ ಅಡ್ಡಾಗಿಬಿಟ್ಟ. ಬಹುಶಃ ಕುಡಿದದ್ದು ಇನ್ನು ಇಳಿಯದಿದ್ದುದರಿಂದ ಮತ್ತೆ ನೆನಪುಗಳ ಲೋಕದಲ್ಲಿ ವಿಹರಿಸಿ ನಿದ್ರೆಯ ಪಾತಳಿಗೆ ಬಿದ್ದು ನಿರಮ್ಮಳನಾದ.

ಇತ್ತ ಮಾದ್ಯಮಗಳಲ್ಲಿ ನೋಡಿ ಈ ಪ್ರಕರಣವನ್ನು ಗಂಭೀರವಾಗಿ ಕೆಲವು ದೇಶಭಕ್ತರು ದೇಶದ ರಕ್ಷಣೆಗಾಗಿ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಒಟ್ಟಾದರು. ತುರ್ತು ಸಭೆಗಳನ್ನು ನಡೆಸಿದರು. ಇದರ ಫಲವಾಗಿ ಮಾರನೆ ದಿನವೇ ಸುಡುಗಾಡಿನ ಮುಂದೆ ಬೃಹತ್ ಪ್ರತಿಭಟನಾ ಧರಣಿ ನಡೆಯಿತು. ಹೆಣ, ಅಸ್ತಿಪಂಜರ ಮಾರಾಟ ಮಾಡುವ, ಹಿಂದೂ ಗೋರಿಗಳನ್ನು ದ್ವಂಸಗೊಳಿಸಿ ಸಮಾಜದ ಕೋಮು ಸೌಹಾರ್ದವನ್ನು ಕೆಡಿಸುತ್ತಿರುವ ಕ್ರಿಶ್ಚಿಯನ್ ದೊರೆರಾಜ್‍ನ ಕುಟುಂಬವನ್ನು ಕೂಡಲೆ ಸ್ಮಶಾನದಿಂದ ಎತ್ತಂಗಡಿ ಮಾಡುವವರೆಗೂ ನಮ್ಮ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದರು. ಇದೆ ವೇಳೆ ಪ್ರತಿಭಟನಾಕಾರರಿಂದ ಮಾತೆವ್ವನ ಮನೆ ಮೇಲೆ ಕಲ್ಲುಗಳು ಬಿದ್ದವು. ಸುದ್ದಿ ತಿಳಿದ ಅಳಿಯ ಮುನ್ಸಿಪಾಲ್ಟಿ ನೌಕರ ಗಂಗರಾಜು ಎಲ್ಲಿದ್ದವನೋ ಓಡೋಡಿ ಬಂದು ತಾಬಡತೋಬಡ ತನ್ನ ಬಾಣಂತಿ ಹೆಂಡತಿ ಮತ್ತು ಅತ್ತೆ ಮಾತೆವ್ವನನ್ನು ತನ್ನ ತಗಡಿನ ಮನೆಗೆ ಸಾಗಿಸಿದ.

ಹೆಣಗಳ್ಳತನ ಘೋರವಾದ ಅಪರಾಧವೇ ಆದ್ದರಿಂದ ಮಾನ್ಯ ಗೌರವಾನ್ವಿತ ನ್ಯಾಯಮೂರ್ತಿಗಳು ದರಿಯನಿಗೆ 5 ವರ್ಷ ಸಜೆಯನ್ನು ವಿಧಿಸಿದರು.

***

5 ವರ್ಷಗಳಲ್ಲಿ ಏನೇನೆಲ್ಲ ಬದಲಾಗಿತ್ತು. ಅಳಿಯ ಗಂಗರಾಜು ತನ್ನ ಹೆಂಡತಿ ಮತ್ತು ಮಾತೆವ್ವನನ್ನು ತನ್ನ ಮನೆಯಲ್ಲೆ ಇಟ್ಟುಕೊಂಡು ಬಿಟ್ಟಿದ್ದ. ಸಂಸಾರ ಪೂರ್ತಿ ದರಿಯನೊಂದಿಗೆ ಸಣ್ಣಪುಟ್ಟದಕ್ಕೆಲ್ಲ ಜಗಳಾಡಿಕೊಂಡೆ ಕಳಿದಿದ್ದ ಮಾತೆವ್ವ ಅಳಿಯನ ಮನೆ ಸೇರಿದ ಮೇಲೆ ಯಾರೊಂದಿಗೂ ಮಾತನಾಡುವುದನ್ನು ಬಿಟ್ಟು ಗಂಡನ ನೆನಪಲ್ಲಿ ದಿನವೂ ಕುಸಿಯುತ್ತಾ ಹೋಗಿ ಒಂದಿನ ಮಣ್ಣಲ್ಲಿ ಸೇರಿಹೋದಳು.

ಐದು ವರ್ಷದ ನಂತರ ಬಿಡುಗಡೆಗೊಂಡ ದರಿಯಜ್ಜ ಸುಡುಗಾಡಿಗೆ ಬಂದರೆ ಅಲ್ಲೇನಿದೆ ಮಣ್ಣು? ದರಿಯನ ಕುಟುಂಬದ ಅರಮನೆಯಂತಿದ್ದ ಮುರುಕಲು ಮನೆಯನ್ನು ಯಾವತ್ತೋ ಬಿಳಿಸಲಾಗಿದೆ. ಒಂದಲ್ಲಾ ಎರಡು ವಿದ್ಯುತ್ ಶವಾಗಾರಗಳನ್ನು ಜೋಡಿಸಲಾಗಿದೆ. ಅವುಗಳನ್ನು ನಡೆಸಲು ಪ್ಯಾಂಟು ಶರಟಿನ ನೌಕರರು ಪಾಳಿಯಲ್ಲಿದ್ದ ಹೆಣಗಳನ್ನು ಕಬ್ಬು ನುರಿಸುವಂತೆ ನುರಿಸುತ್ತಿದ್ದಾರೆ.

ಗೇಟ್ ಒಳಗೆ ನುಸುಳಿದ ಈ ಅಜ್ಜನನ್ನು ಕಂಡು ರಾಂಗಾದ ಕಾವಲುಗಾರ ‘ಏಯ್ ಯಜ್ಜಾ ಯಾಕ ಒಳಗ ಬರ್ತಿ? ಇಲ್ಲಿ ಜೀವ ಇರಾಕಿಲೆ ಒಳಗ ಬರಾಕ ಆಗೂದಿಲ್ಲ ಹೋಗ್ಹೋಗ’ ಅಂದ.

‘ಹಂಗಲ್ಲೊ ತಮ್ಮ ನನ್ನ ಹೆಂಡತಿ ಮಕ್ಕಳು ಇಲ್ಲೆ ಅದಾರ. ನನ್ನ ಮನಿ ಇಲ್ಲೇ ಐತೋ’ ಅಂತ ದರಿಯಜ್ಜ ಏನೇನೊ ಬಡಬಡಿಸತೊಡಗಿದ. ಕಾವಲುಗಾರನಿಗೆ ನಗು ಬಂತು. ಹೀಗೆಂದುಕೊಂಡೆ ಬರುವ ಹುಚ್ಚರನ್ನು ಆತ ಈ ಹಿಂದೆಯೂ ನೋಡಿದ್ದ. ಬಹುಶಃ ಅಜ್ಜನ ಹೆಂಡತಿ ಮಕ್ಕಳು ಯಾವದೋ ದುರಂತದಾಗ ಸತ್ತ ಮ್ಯಾಲ ಅವರನ್ನ ಇಲ್ಲೆ ಮಣ್ಣು ಮಾಡಿರಬೇಕು. ಅವರ ಸಾವು ಅಜ್ಜಗ ಹುಚ್ಚ ಹಿಡಿಸೈತಿ, ಪಾಪ. ಅನ್ಕೊಂಡ ಕಾವಲುಗಾರನಿಗೆ ಆ ಕ್ಷಣದಲ್ಲಿ ಹಳ್ಳಿಯಲ್ಲಿರುವ ತನ್ನ ತಂದೆಯ ನೆನಪಾದ. ಆದರೂ ಆತ ಅಸಹಾಯಕ. ಅತ್ಲಾಗ ಹೋಗ ಯಜ್ಜಾ, ರಾತ್ರಿ ಬಾಳ ಆಗೇತಿ ಅಂತ ಗೇಟ್ ಹಾಕತೋಡಗಿದ. drought-kelly-stewart-sieckತನ್ನ ಶಕ್ತಿ ಮೀರಿ ಗೇಟ್‍ಒಳಗೆ ನುಸಳಲು ಪ್ರಯತ್ನಿಸಿದ ದರಿಯಜ್ಜ ಕೊನೆಗೂ ಅದು ಸಾಧ್ಯವಾಗದೆ ಗೇಟ್ ಹೊರಗೆ ಉಳಿದು ಮುಸಗುಡತೊಡಗಿದ.

ಇದಾದ 8 ದಿನಗಳವರೆಗೂ ಅಜ್ಜ ಗೇಟ್ ಪಕ್ಕದ ಗಿಡದ ನೆರಳಲ್ಲಿ ತಳ ಊರಿದ್ದ. ಗೇಟ್ ಸಪ್ಪಳವಾದಾಗೊಮ್ಮೆ ಗೇಟ್ ಹತ್ತಿರ ಕಾಲೆಳೆದುಕೊಂಡು ಬರುತ್ತಿದ್ದ. ಒಳಗೆ ನುಸಳಲು ಸಾಧ್ಯವಾಗದೆ ಸೋತು ಗಿಡದ ಬಡ್ಡಿಗೆ ಹಿಂತಿರುಗುತ್ತಿದ್ದ. ಬರಬರುತ್ತ ಗೇಟಿನ ಕಡೆ ಕೇವಲ ಮಲಗಿದಲ್ಲಿಂದಲೇ ದೃಷ್ಟಿ ಹಾಯಿಸುತ್ತಿದ್ದ. 9ನೆ ದಿನ ಅಪರಾಹ್ನ ನೊಣಗಳು ಅವನ ದೇಹದೊಳಗೆ ಹೋಗಿಬರುವುದನ್ನು ಮಾಡುವ ಮೂಲಕ ಅವನ ಜೀವ ಹೋಗಿದ್ದನ್ನು ಜಗತ್ತಿಗೆ ಸಾರಲು ಯತ್ನಿಸುತ್ತಿದ್ದವು. ಆದರೆ, ತನ್ನದೆಯಾದ ಜಂಜಡದೊಳಗೆ ಮುಳುಗಿದ್ದ ಈ ಜಗತ್ತು ಇದ್ಯಾವುದರ ಪರಿವೆಯಿಲ್ಲದೆ ಬೈಕು, ಕಾರುಗಳಲ್ಲಿ ಕುಳಿತು ಓಡುತ್ತಲೇ ಇತ್ತು. ಎಲ್ಲಿಗೆ ಮುಟ್ಟುತ್ತೋ?

***

Leave a Reply

Your email address will not be published. Required fields are marked *