ಪಾತಕಿ ಗಣೇಶ್ ಶೆಟ್ಟಿಯೂ ಕರಾವಳಿಯ ಧರ್ಮ ರಕ್ಷಕರೂ

Naveen Soorinje


– ನವೀನ್ ಸೂರಿಂಜೆ


 

 

ಧರ್ಮ ದೇವರ ಹೆಸರಿನಲ್ಲಿ ರಕ್ತ ಹರಿಸೋ ನಾಯಕರ ಮಧ್ಯೆ ನಮಗೆ ಒಮ್ಮೊಮ್ಮೆ ಒಬ್ಬ ಭೂಗತ ಪಾತಕಿಯೂ ಮಾದರಿಯಾಗಬಲ್ಲ. Mangalore_Jail_Murderಜೈಲಿನಲ್ಲಿ ಮಾಡೂರು ಯೂಸೂಫ್ ಎಂಬ ಭೂಗತ ಪಾತಕಿಯನ್ನು ಹಿಂದೂ ಕಮ್ಯೂನಲ್ ಗೂಂಡಾಗಳಿಂದ ರಕ್ಷಣೆ ಮಾಡಲು ಧಾವಿಸಿ ಹತನಾದ ಗಣೇಶ್ ಶೆಟ್ಟಿ ಎಂಬ ಭೂಗತ ಪಾತಕಿಯಿಂದ ಧರ್ಮದ ಅಮಲು ತುಂಬಿಕೊಂಡವರು ಕಲಿಯಬೇಕಿರುವುದು ಬಹಳಷ್ಟಿದೆ.

1994 ರಲ್ಲಿ ಮಹೇಂದ್ರ ಪ್ರತಾಪ್ ಎಂಬ ಉದ್ಯಮಿಯನ್ನು ಹಫ್ತಾಕ್ಕಾಗಿ ಮುಂಬೈನಲ್ಲಿ ಕೊಲೆ ಮಾಡಿದ ಭೂಗತ ಪಾತಕಿ, ಶಾರ್ಪ್ ಶೂಟರ್ ಗಣೇಶ್ ಶೆಟ್ಟಿ ಮಂಗಳೂರಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರು ಜೈಲಿನಲ್ಲಿದ್ದ. ಶ್ರೀಮಂತ ಕುಟುಂಬದಿಂದ ಬಂದ ಗಣೇಶ್ ಶೆಟ್ಟಿಗೆ ಮಂಗಳೂರಿನ ಪ್ರಕರಣಕ್ಕೆ ಜಾಮೀನು ದೊರೆತಿದ್ದರೂ ಮುಂಬೈ ಪ್ರಕರಣದ ನ್ಯಾಯಾಲಯದ ತಾಂತ್ರಿಕ ಅಡಚಣೆಯಿಂದ ಜೈಲಿನಲ್ಲೇ ಬಾಕಿಯಾಗಿದ್ದ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇನ್ನೊಂದು ಎರಡು ಮೂರು ದಿನಗಳಲ್ಲಿ ಆತ ಬಿಡುಗಡೆಯಾಗಬೇಕಿತ್ತು.

ಹಿಂದೂ ಕೋಮುವಾದಿಗಳ ರಾಕ್ಷಸೀ ಪ್ರವೃತ್ತಿಯನ್ನು ಬಯಲಿಗೆಳೆದಿದ್ದಕ್ಕಾಗಿ ಅಂದಿನ ಬಿಜೆಪಿ ಸರಕಾರ ನನ್ನನ್ನು ಜೈಲಿಗೆ ಹಾಕಿದ್ದ ದಿನಗಳಲ್ಲಿ ಗಣೇಶ್ ಶೆಟ್ಟಿ ಐದನೇ ಬ್ಯಾರಕಿನಲ್ಲಿದ್ದ. ಮಂಗಳೂರು ಜೈಲಿನಲ್ಲಿ ರಾಜ್ಯದ ಯಾವ ಜೈಲಿನಲ್ಲೂ ಇಲ್ಲದ ವಿಶೇಷ ವ್ಯವಸ್ಥೆಯೊಂದಿದೆ. ಜೈಲನ್ನು ಎ ಮತ್ತು ಬಿ ಬ್ಲಾಕುಗಳೆಂದು ವಿಂಗಡನೆ ಮಾಡಲಾಗಿದೆ. ಎ ಬ್ಲಾಕು ಮತ್ತು ಬಿ ಬ್ಲಾಕುಗಳ ಮಧ್ಯೆ ಸಂಪರ್ಕ ಮತ್ತು ಸಂವಹನ ಸಾಧ್ಯವೇ ಇಲ್ಲ ಎನ್ನುವ ರೀತಿಯ ವ್ಯವಸ್ಥೆ ಇದೆ. ಇಲ್ಲಿನ ವಿಶೇಷವೆಂದರೆ ಎ ಬ್ಲಾಕಿನಲ್ಲಿ ಮುಸ್ಲೀಮರೂ, ಬಿ ಬ್ಲಾಕಿನಲ್ಲಿ ಹಿಂದೂಗಳನ್ನು ಕೂಡಿ ಹಾಕಲಾಗುತ್ತದೆ. ಮಂಗಳೂರು ಜೈಲಿನಲ್ಲಿ ಕೋಮುಗಲಭೆಗಳ ಕೈದಿಗಳೇ ಜಾಸ್ತಿ ಇರೋದ್ರಿಂದ ಮತ್ತು ಮಂಗಳೂರಿಗರಲ್ಲಿ ಕೋಮುಭಾವನೆಯೂ ಜಾಸ್ತಿ ಇರೋದ್ರಿಂದ ಜೈಲಿನಲ್ಲಿ ಕೋಮುಗಲಭೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹಿಂದೂ ಕೋಮುವಾದಿಗಳಿಂದ ಬೆದರಿಕೆ ಇದ್ದ ನನ್ನನ್ನು ಹಿಂದೂವಾಗಿದ್ದರೂ ಮುಸ್ಲೀಮರಿರುವ ಎ ಬ್ಲಾಕಿಗೆ ಸೇರಿಸಲಾಗಿತ್ತು.  ಅಲ್ಲಿ ಗಣೇಶ್ ಶೆಟ್ಟಿಯೂ ಇದ್ದ. ಜೊತೆಗೆ ಕಮ್ಯೂನಲ್ ಅಲ್ಲದೇ ಇರುವ ಕೆಲವೊಂದು ಹಿಂದೂ ಕೈದಿಗಳೂ ಎ ಬ್ಲಾಕಿನಲ್ಲಿ ಇದ್ದರು.

ಭೂಗತ ಪಾತಕಿ ಗಣೇಶ್ ಶೆಟ್ಟಿ ಬೆಳಿಗ್ಗೆ 5 ಗಂಟೆಗೆ ಎದ್ದು ಸುಮಾರು ಒಂದು ಗಂಟೆಗಳ ಕಾಲ ದೇವರ ಫೋಟೋದ ಎದುರು ಕುಳಿತು ದ್ಯಾನ ಮಾಡುತ್ತಿದ್ದ. ಆತ ಪೂಜೆ ಮಾಡುವ ಜಾಗ ನೋಡೋದೇ ಚಂದ. ಕಟೀಲು ದುರ್ಗಾಪರಮೇಶ್ವರಿ ಪರಮ ಭಕ್ತನಾಗಿದ್ದ ಆತ ದೇವರ ಫೋಟೋ ಕಾಣದಷ್ಟು ನಿತ್ಯ ಹೂ ಹಾಕುತ್ತಿದ್ದ. ಫೋಟೋದ ಎದುರು ಕೇಜಿಗಟ್ಟಲೆ ಹಣ್ಣು ಹಂಪಲುಗಳನ್ನು ಇಡುತ್ತಿದ್ದ. ಯಾರಿಗೂ ಕೆಟ್ಟದಾಗಿ ಬೈದಿರೋದನ್ನು ನಾನು ಜೈಲಿನಲ್ಲಿದ್ದ ನಾಲ್ಕುವರೆ ತಿಂಗಳು ಕಂಡಿದ್ದಿಲ್ಲ. ಜೈಲಿನಲ್ಲಿ ಇದ್ದಷ್ಟೂ ದಿನ ಗಣೇಶ ಶೆಟ್ಟಿ ಸಸ್ಯಹಾರಿಯಾಗಿದ್ದ. ದೇವರ ಹೆಸರಿನಲ್ಲಿ ಆತ ಮಾಂಸಾಹಾರವನ್ನೂ ತ್ಯಜಿಸಿದ್ದ. ದೇವರ ಹೆಸರಿನ ಯಾವುದೇ ಉಪವಾಸಗಳನ್ನೂ ತಪ್ಪಿಸುತ್ತಿರಲಿಲ್ಲ. ಒಬ್ಬ ಶಾರ್ಪ್ ಶೂಟರ್ ಭೂಗತ ಪಾತಕಿಯೊಬ್ಬ ಧರ್ಮ, ದೇವರನ್ನು ಈ ರೀತಿಯಲ್ಲಿ ಆರಾಧನೆ ಮಾಡುತ್ತಿದ್ದ ಎಂದರೆ ಆಶ್ಚರ್ಯವಾಗುತ್ತಿತ್ತು. ದೇವರ ಆರಾಧನೆಯನ್ನು ತಪ್ಪದೇ ಮಾಡುತ್ತಿದ್ದ ಆತ ಯಾವತ್ತೂ ಕೂಡಾ ಯಾವುದೇ ವಿಷಯಕ್ಕೆ ಕಮ್ಯೂನಲ್ ಆಗಿ ಪ್ರತಿಕ್ರಿಯೆ ನೀಡಿಲ್ಲ. ಅದೇ ರೀತಿ ಬಹುತೇಕ ಮುಸ್ಲೀಮರೇ ಜಾಸ್ತಿಯಿದ್ದ ಐದನೇ ಬ್ಯಾರಕಿನಲ್ಲಿ ಗಣೇಶ್ ಶೆಟ್ಟಿಯ ಪೂಜೆ ವೃತಗಳಿಗೆ ಯಾವ ತೊಂದರೆಯೂ ಆಗಿರಲಿಲ್ಲ.

ನಾನು ಜೈಲು ಸೇರಿದ ನಂತರದ ನಾಲ್ಕುವರೆ ತಿಂಗಳಿನಲ್ಲಿ ಹಲವು ಅಮಾಯಕ ಕೈದಿಗಳನ್ನು ನೋಡಿದ್ದೇನೆ. ಹಲವಾರು ಬಾರಿ ಪೊಲೀಸರುMangalore_Jail ಅನುಮಾನಾಸ್ಪದ ಪ್ರಕರಣ ಎಂಬ ನೆಲೆಯಲ್ಲಿ ಅಮಾಯಕ ಯುವಕರ ಬಂಧನ ಮಾಡುತ್ತಾರೆ. ಹೆಚ್ಚಾಗಿ ಮುಸ್ಲಿಂ ಯುವಕರು ಅಥವಾ ವೃದ್ದರನ್ನು ಪೊಲೀಸರು ಬಸ್ ನಿಲ್ದಾಣದಲ್ಲೋ, ರೈಲ್ವೇ ನಿಲ್ದಾಣದಲ್ಲೋ ಬಂಧನ ಮಾಡಿ ಅನುಮಾನಾಸ್ಪದ ಎಂಬ ಸೆಕ್ಷನ್ನಿನ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಹಾಕುತ್ತಾರೆ. ನ್ಯಾಯಾಲಯದಲ್ಲಿ ಎರಡು ಸಾವಿರವೋ, ಎರಡುವರೆ ಸಾವಿರವೋ ದಂಡ ಕಟ್ಟಿದರೆ ನ್ಯಾಯಾಲಯ ಬಿಡುಗಡೆ ಮಾಡುತ್ತದೆ. ದಂಡ ಕಟ್ಟಲು ಸಾಧ್ಯವಾಗದೇ ಇರೋರು ಜೈಲು ಸೇರುತ್ತಾರೆ. ಈ ಅನುಮಾನಾಸ್ಪದ ಬಂಧನ ಎನ್ನುವುದೇ ವಿಚಿತ್ರವಾಗಿರೋದು. ಯಾವುದೋ ಒಬ್ಬ ರೌಡಿಯ ಮೇಲೆ ಹಲ್ಲೆ ಹಲವು ಪ್ರಕರಣಗಳಿದ್ದು, ಆತ ಜಾಮೀನಿನ ಮೇಲೋ, ಖುಲಾಸೆಗೊಂಡೋ ಹೊರಗಿದ್ದು, ಅತ ಅನಗತ್ಯವಾಗಿ ತನ್ನದಲ್ಲದ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾಗ ಪೊಲೀಸರು ವಿಚಾರಿಸಿದ ಸಂಧರ್ಭದಲ್ಲಿ ಆತ ಸೂಕ್ತ ರೀತಿಯ ಉತ್ತರ ನೀಡದೇ ಇದ್ದಾಗ ಆತನ ಮೇಲೆ ಅನುಮಾನಾಸ್ಪದ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬಹುದು. ಪೊಲೀಸರು ಅಪರಾಧ ಚಟುವಟಿಕೆಯನ್ನು ನಿಯಂತ್ರಿಸಲು ಕೆಲಸ ಮಾಡವ ನಿಟ್ಟಿನಲ್ಲಿ ಇದು ಸಹಕಾರಿ. ಆದರೆ ಪೊಲೀಸರು ಇದೇ ಕಾಯ್ದೆಯನ್ನು ಬಳಸಿಕೊಂಡು ಯಾರೋ ಅಬ್ಬೇಪಾರಿಗಳು, ಅನಾಥರು, ನಿಸ್ಸಾಹಯಕರನ್ನು ಈ ಕಾಯ್ದೆಯಡಿ ಬಂಧಿಸುತ್ತಾರೆ. ಅಪರಾಧ ಚಟುವಟಿಯನ್ನು ನಿಯಂತ್ರಿಸಲು ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ದಾಖಲೆ ಮೂಲಕ ತೋರಿಸಲು ಪೊಲೀಸರು ಹಲವು ಬಾರಿ ಎಲ್ಲೋ ಬಸ್ ನಿಲ್ದಾಣದಲ್ಲಿ ಮಲಗಿದ್ದ ಅಮಾಯಕರನ್ನು ಬಂಧಿಸುತ್ತಾರೆ. ಇಂತಹ ಹಲವು ಯುವಕರನ್ನು ಸಾಮಾಜಿಕ ಕಾರ್ಯಕರ್ತರ ನೆರವು ಪಡೆದು ಜೈಲಿನಿಂದ ಬಿಡುಗಡೆ ಮಾಡಿಸಿದ್ದೆವು.  ಹಲವು ಸಂದರ್ಭದಲ್ಲಿ ಹಲವು ಯುವಕರನ್ನು ಬಿಡುಗಡೆ ಮಾಡಿಸುವಲ್ಲಿ ಗಣೇಶ್ ಶೆಟ್ಟಿ ಆಸಕ್ತಿ ವಹಿಸಿದ್ದ. ಜೊತೆಗೆ ಹಣಕಾಸಿನ ನೆರವನ್ನೂ ನೀಡಿದ್ದ.

ಧರ್ಮದ ಆಚರಣೆಗಳನ್ನು ಚಾಚೂ ತಪ್ಪದೆ ಆಚರಿಸೋ ವೃತ್ತಿಪರ ಪಾತಕಿಯೋರ್ವ ತನ್ನ ವೃತ್ತಿಯನ್ನು ಮೀರಿಯೂ ಮಾನವೀಯ ಗುಣಗಳನ್ನು ಬೆಳೆಸಿಕೊಳ್ತಾನೆ ಎಂದಾದರೆ ದನ ಕರುವನ್ನು ಪ್ರೀತಿಸುವವರಿಗೆ ಮನುಷ್ಯರನ್ನೇಕೆ ಪ್ರೀತಿಸಲಾಗಲ್ಲ ಎಂಬುದು ಯಕ್ಷ ಪ್ರಶ್ನೆ. ಧರ್ಮದ ಹೆಸರಿನಲ್ಲಿ ರಕ್ತ ಹರಿಸೋರು ವಿವೇಕಾನಂದರಂತವರನ್ನು ಅನುಸರಿಸೋಕೆ ಆಗದೇ ಇದ್ರ್ರೆ ಕನಿಷ್ಠ ಗಣೇಶ್ ಶೆಟ್ಟಿಯಂತಹ ಭೂಗತ ಪಾತಕಿಯ ಈ ಗುಣಗಳನ್ನಾದ್ರೂ ಅನುಸರಿಸಲಿ ಎಂಬುದಷ್ಟೇ ಆಶಯ.

9 thoughts on “ಪಾತಕಿ ಗಣೇಶ್ ಶೆಟ್ಟಿಯೂ ಕರಾವಳಿಯ ಧರ್ಮ ರಕ್ಷಕರೂ

  1. Girish, Bajpe

    ಒಳ್ಳೆಯ ಬರಹ. ಆದರೆ ಇದನ್ನು ಓದುವವರು ಎಷ್ಟೋ.. ಅರ್ಥಮಾಡಿಕೊಳ್ಳುವ ಮಂದಿ ಯಾರೋ.. ಎಷ್ಟೋ… ಈ ಕುರಿತು ಈಗಾಗಲೇ ಫೇಸ್ ಬುಕ್ ನ ಗೋಡೆಯಲ್ಲಿ ಬಿದ್ದಿರುವ ಬರಹಗಳನ್ನು ಕಂಡರೆ ದಿಗಿಲು ಹುಟ್ಟಿಸುವಂತಿದೆ.

    ಗಿರೀಶ್, ಬಜಪೆ

    Reply
  2. Anonymous

    ಯಾವುದೋ ಒಂದು ಉದಾಹರಣೆಯನ್ನು ಎಲ್ಲಕ್ಕೂ ತಳುಕು ಹಾಕಲಾಗದು ಇದೊಂದು ಪೂರ್ವಗ್ರಹ ಪೀಡಿತ ಬರಹದಂತೆ ಕಾಣುತ್ತದೆ

    Reply
  3. Devoo maheshwar

    ಸುಂದರವಾಗಿ ಕಟ್ಟಿದ ಸುಳ್ಳಿನ ಕತೆ..ಜೈಲಿನ ಗೋಡೆಗಳ ಬಣ್ಣದಲ್ಲಿ ಸತ್ಯಾಂಶಗಳೆ ಮಸುಕಾಗಿದೆ…

    Reply
  4. ಸೀತಾ

    ಹಲೋ ನವೀನ್, ಪಾತಕಿಗಳು ದೈವ ಭಕ್ತರಲ್ಲ ಅಂತ ಯಾರು ಹೇಳಿದ್ದು?!! ಒಸಾಮಾ, ಮುಲ್ಲಾ ಒಮರ್, ಬಾಗ್ದಾದಿಯಿಂದ ಹಿಡಿದು ಅಫಜಲ್ ಗುರುವರೆಗೂ ಎಲ್ಲರೂ ಮಹಾ ದೈವ ಭಕ್ತರೇ ಅಲ್ಲವೇ?
    ರಾವಣಾಸುರ ಕೂಡ ಮಹಾ ದೈವಭಕ್ತನಾಗಿದ್ದ. ಭಸ್ಮಾಸುರನೂ ಕೂಡ.

    Reply
  5. BNS

    ಮಹಿಳಾ ಕೈದಿಗಳ ಮಾಸಿಕ ಋತುಚಕ್ರಕ್ಕೆ ಬೇಕಾಗುವ ಸ್ಯಾನಿಟರಿ ನ್ಯಾಪ್ಕಿನ್ ನಂತಹ ಸೂಕ್ಷ ವಿಷಯದ ಬಗ್ಗೆ ಬರೆದ ನವೀನ್ ಇಂಥ ‘ಕ್ರೈಮ್ ರಿಪೋರ್ಟರ್’, ‘ಕ್ರೈಮ್ ಬೀಟ್’ ನಂತಹ ಅಗ್ಗದ ಜನಪ್ರಿಯ ವಿಷಯದ ಬಗ್ಗೆ ಬರೆಯುವುದು ವಿಪರ್ಯಾಸ! ಶಾರ್ಪ್ ಷೂಟರ್ ಎಂದು ಗುರುತಿಸಲ್ಪಟ್ಟ ಪಾತಕಿಯೊಬ್ಬನ ‘ವೈಯುಕ್ತಿಕ’ ವಿಷಯವಾದ ಧರ್ಮವನ್ನು ವೈಭವೀಕರಿಸುವುದು ಅವನ ಅಪರಾಧವನ್ನೂ ವೈಭವೀಕರಿಸುತ್ತದೆ ಎನ್ನುವಷ್ಟು ವಿವೇಚನೆ ಬೇಡವೇ?

    Reply
  6. ಗುರು

    ಅರ್ಥವಿಲ್ಲದ ಬರಹ …ಏನನ್ನು ಸಾಧಿಸುವ ಉದ್ದೇಶವಿದೆ?

    Reply

Leave a Reply

Your email address will not be published. Required fields are marked *