Category Archives: ಭಾರತಿ ದೇವಿ

ಬಂಡವಾಳಶಾಹಿಯನ್ನು ಬಲಪಡಿಸುವ ಪಾಸಿಟಿವ್ ಥಿಂಕಿಂಗ್ ಸ್ವಾಮಿಗಳು

– ಭಾರತೀ ದೇವಿ ಪಿ.

ಕಳೆದ ಭಾನುವಾರ (17/6/12) “ಸಂವಹನ” ಆಯೋಜಿಸಿದ್ದ ಕವಿ ವೀರಣ್ಣ ಮಡಿವಾಳರ ಅಭಿನಂದನಾ ಸಮಾರಂಭದಲ್ಲಿ ಮಾತಾಡುತ್ತಾ ಹಿರಿಯ ಪತ್ರಕರ್ತ ದಿನೇಶ್ ಅಮಿನಮಟ್ಟು ಅವರು ’ಸಿಟ್ಟು ಅನ್ನುವುದೂ ಒಂದು ಮೌಲ್ಯವಾಗಿ ಎಷ್ಟು ಮುಖ್ಯ’ ಎಂದು ಮಾತಾಡಿದ್ದರು. ಎಲ್ಲವನ್ನೂ ಅದು ಇರುವುದು ಹಾಗೇ, ಅದರ ಬಗ್ಗೆ ಅಸಮಾಧಾನ ತಾಳಿ ನಮ್ಮ ಮನಸ್ಸು ಏಕೆ ಕೆಡಿಸಿಕೊಳ್ಳೋಣ ಎಂದು ಭಾವಿಸಿದರೆ ಹುಸಿ ನೆಮ್ಮದಿ ನಮ್ಮದಾಗಬಹುದು. ಆದರೆ ಸಮಾಜ ಒಂದಿನಿತೂ ಮುಂದೆ ಸಾಗಿರುವುದಿಲ್ಲ. ಅನ್ಯಾಯದ ವಿರುದ್ಧ ಕ್ರೋಧ, ಅವ್ಯವಸ್ಥೆಯ ಬಗ್ಗೆ ಅಸಮಾಧಾನ, ಅದು ಪ್ರತಿಭಟನೆಯಾಗಿ ಹೊರಹೊಮ್ಮುವುದು ಆರೋಗ್ಯವಂತ ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯ. ಆದರೆ ಇಂದಿನ ಆಧ್ಯಾತ್ಮಿಕ ಗುರುಗಳು ಬೋಧಿಸುವುದು ಇದಕ್ಕೆ ತದ್ವಿರುದ್ಧವಾದದ್ದು. ಕೂಲ್ ಆಗಿರಿ, ಕಾಮ್ ಆಗಿರಿ… ಪರಿಸ್ಥಿತಿಯನ್ನು ಅದಿರುವ ಹಾಗೇ ಒಪ್ಪಿಕೊಳ್ಳಿ…

ಹಲವು ವರ್ಷದ ಹಿಂದೆ ನಾನು ವಿದ್ಯಾರ್ಥಿಯಾಗಿದ್ದಾಗ ಇಂದಿನ ಜಗದ್ವಿಖ್ಯಾತ ಗುರೂಜಿಯೊಬ್ಬರ ಬಳಿ ಕೋರ್ಸ್ ಒಂದಕ್ಕೆ ಸೇರಿದ್ದೆ. ಯೋಗ, ಪ್ರಾಣಾಯಾಮ ಎಲ್ಲ ಮುಗಿದ ಬಳಿಕ ಬದುಕುವ ಕಲೆಯ ಭಾಗವಾಗಿ ಒಂದಿಷ್ಟು ಟಿಪ್ಸ್‌ಗಳನ್ನು ಅವರು ನೀಡುವ ಕಾರ್ಯಕ್ರಮವಿರುತ್ತದೆ. ಅಲ್ಲಿನ ಎರಡೇ ಎರಡು ಟಿಪ್ಸ್ ಗಮನಿಸಿ. ಒಂದು, ‘Accept the situation as it is’. ಇನ್ನೊಂದು ‘expectation reduces joy’ ಈ ಎರಡು ಹೇಳಿಕೆಗಳು ನನ್ನ ತಲೆ ಕೆಡಿಸಿದ್ದವು. ಏಕೆ ಪರಿಸ್ಥಿತಿಯನ್ನು ಯಾವಾಗಲೂ ಅದು ಇರುವ ಹಾಗೇ ಒಪ್ಪಿಕೊಳ್ಳಬೇಕು? ಒಬ್ಬ ಮಹಿಳೆಗೆ, ಒಬ್ಬ ದಲಿತನಿಗೆ ಹಾಗೆ ಭಾವಿಸುವುದು ಸಾಧ್ಯವೇ? ನಿರೀಕ್ಷೆ ಇಲ್ಲದಾಗಲೇ ಅಲ್ಲವೇ ನಾವು ಇರುವ ಸ್ಥಿತಿಯನ್ನು ಅನಿವಾರ್ಯವೆಂಬಂತೆ ಒಪ್ಪುವುದು?

ನೀವು ಇಂದಿನ ಯಾವುದೇ ಹೈಟೆಕ್ ಗುರೂಜಿಗಳನ್ನು ತೆಗೆದುಕೊಳ್ಳಿ. ಅವರು ಇವನ್ನೇ ಒಂದಲ್ಲ ಒಂದು ಬಗೆಯಲ್ಲಿ ಹೇಳುವವರಾಗಿರುತ್ತಾರೆ. ಅವರು ಯಥಾಸ್ಥಿತಿವಾದಿಗಳು. ಅವರ ಬಳಿಗೆ ಬರುವವರೂ ಆರ್ಥಿಕವಾಗಿ ತುಸು ಉತ್ತಮಮಟ್ಟದಲ್ಲಿದ್ದು ಕ್ಷಣದ ಒತ್ತಡ ಕಳೆದುಕೊಳ್ಳಬಯಸುವವರು. ಒಬ್ಬ ರೈತನನ್ನು, ಒಬ್ಬ ತರಕಾರಿ ಮಾರುವವನನ್ನು, ದಿನಪತ್ರಿಕೆ ಮಾರುವವನನ್ನು ಅವರ ಬಳಿ ನೋಡುವುದು ಸಾಧ್ಯವಿಲ್ಲ. ಎಲ್ಲರೂ ಚೆನ್ನಾಗಿ ಓದಿದವರು, ಮೇಲ್ವರ್ಗದವರು, ಹಣ ಉಳ್ಳವರು.

ಜಾಗತೀಕರಣದ ನಂತರದ ಕಾಲಮಾನದಲ್ಲಿ ಬಂಡವಾಳಶಾಹಿ ಗಟ್ಟಿಗೊಳ್ಳುತ್ತಿರುವುದಕ್ಕೂ ಈ ಹೈಟೆಕ್ ಸ್ವಾಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತಿರುವುದಕ್ಕೂ ನೇರಾನೇರ ಸಂಬಂಧವಿದೆ. ಇವರು ಇಲ್ಲಿನ ಹೈಟೆಕ್ ಜನರ ಗುರುಗಳಾಗಿರುವುದೂ ಅಮೆರಿಕ ಮುಂತಾದ ದೇಶಗಳಲ್ಲಿ ಜನಪ್ರಿಯರಾಗಿರುವುದೂ ಆಕಸ್ಮಿಕವೇನಲ್ಲ. ಇವರು ಪರಿಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ಕಲಿಸುವ ಪಾಠ ಕಂಪೆನಿಗಳನ್ನು ಬಲಪಡಿಸುತ್ತದೆ. ಅವರು ಎಷ್ಟೇ ಗಂಟೆ ತಮ್ಮ ಕ್ಯೂಬಿಕಲ್‌ಗಳಲ್ಲಿ ಕಳೆಯಬೇಕಾಗಿ ಬಂದರೂ ದನಿಯೆತ್ತುವುದನ್ನೇ ಮರೆತು ದುಡಿಯುತ್ತಾರೆ. ಸ್ಟ್ರೆಸ್ ಆದಾಗ ರಿಲಾಕ್ಸ್ ಆಗಲು ಉಸಿರು ಬಿಡುವ-ಎಳೆದುಕೊಳ್ಳುವ ತಂತ್ರಗಳನ್ನು ಇದೇ ಸ್ವಾಮೀಜಿಗಳು ಅವರಿಗೆ ಹೇಳಿಕೊಟ್ಟಿರುತ್ತಾರೆ. ವೀಕೆಂಡ್ ಧ್ಯಾನಮೇಳಗಳು ಮತ್ತೆ ವಾರಪೂರ್ತಿ ಅವರನ್ನು ಮೂಗೆತ್ತಿನಂತೆ ದುಡಿಯಲು ಹುರಿದುಂಬಿಸುತ್ತವೆ. ಒಂದು ರೀತಿಯಲ್ಲಿ ಹೊಸ ಬಗೆಯ ಜೀತ, ಗುಲಾಮೀ ಸಂಸ್ಕೃತಿಯನ್ನು ಬಲಪಡಿಸುವುದರಲ್ಲಿ ಇವರು ಕೈಲಾದ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ.

ಬಾರ್ಬರಾ ಎರೆನ್‍ರೀಚ್ ಎಂಬ ಮಹಿಳೆ ‘ಸ್ಮೈಲ್ ಆರ್ ಡೈ: ಹೌ ಪೊಸಿಟಿವ್ ಥಿಂಕಿಂಗ್ ಫೂಲ್ಡ್ ಅಮೆರಿಕಾ ಅಂಡ್ ದ ವರ್ಲ್ಡ್’ ಎಂಬ ಕೃತಿಯಲ್ಲಿ ಇದನ್ನು ತುಂಬಾ ಚೆನ್ನಾಗಿ ವಿಮರ್ಶೆಗೊಳಪಡಿಸುತ್ತಾರೆ. ಪೊಸಿಟಿವ್ ಆಗಿ ಯೋಚಿಸುವ ವ್ಯಕ್ತಿ ಎಂದರೆ ‘ಆತ ಸದಾ ಹಸನ್ಮುಖಿಯಾಗಿರಬೇಕು, ಏನನ್ನೂ ದೂರಬಾರದು, ಹೆಚ್ಚು ವಿಮರ್ಶಾತ್ಮಕವಾಗಿರಬಾರದು, ಮೇಲಧಿಕಾರಿ ಹೇಳಿದ್ದಕ್ಕೆ ಎದುರಾಡದೆ ಒಪ್ಪಿಸಿಕೊಳ್ಳುವವನಾಗಿರಬೇಕು’. ಇಂದಿನ ಅರ್ಥವ್ಯವಸ್ಥೆಗೆ ಇಂತಹ ವ್ಯಕ್ತಿಯೇ ಬೇಕು ಎನ್ನುತ್ತಾರೆ ಆಕೆ. ಆದರೆ ಶೋಚನೀಯ ಸಂಗತಿಯೆಂದರೆ ನಿಜಕ್ಕೂ ಇವರಿಗೆ ತಮ್ಮ ಬದುಕನ್ನು ರೂಪಿಸುವಲ್ಲಿ ಯಾವ ನಿಲುವೂ ಇರುವುದಿಲ್ಲ. ಅವರು ಸ್ವತಂತ್ರವಾಗಿ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ಆದರೆ ಇಂತಹವರನ್ನೇ ನಮ್ಮ ಜಗತ್ತು ‘ಯಶಸ್ವಿ ವ್ಯಕ್ತಿ’ ಎಂದು ಕೊಂಡಾಡುತ್ತದೆ.

ಇವರ ಬಳಿ ಹೋಗುವವರಿಗೆ ಪ್ರಶ್ನೆಗಳೇ ಏಳುವುದಿಲ್ಲ. ಗುರುಗಳೇ ಹೇಳಿದ್ದೇ ವೇದವಾಕ್ಯ. ವಿಜ್ಞಾನ ಓದಿದವರೇ ಬಹಳ ಸಂಖ್ಯೆಯಲ್ಲಿ ಇರುವ ಇವರಲ್ಲಿ ‘ವೈಜ್ಞಾನಿಕ ಮನೋಭಾವ’ ಎಳ್ಳಷ್ಟೂ ಇಲ್ಲ. ಸದ್ಯಕ್ಕೆ ಸದ್ದು ಮಾಡುತ್ತಿರುವ ಸ್ವಾಮಿಯಿಂದ ಮೋಸಗೊಂಡವರ ಪಟ್ಟಿ, ಅವರ ವಿದ್ಯಾರ್ಹತೆ ನೋಡಿದರೆ ಇದು ಗೊತ್ತಾಗುತ್ತದೆ. ಇವರು ನಿಜಕ್ಕೂ ವಿಜ್ಞಾನದ ವಿದ್ಯಾರ್ಥಿಗಳಾ? ಹಾಗಾದರೆ ಇಂದು ನಮ್ಮಲ್ಲಿನ ವಿಜ್ಞಾನದ ಬೋಧನೆ ಯಾವ ದಿಕ್ಕಿನಲ್ಲಿದೆ ಎಂದು ನಾವು ಚಿಂತಿಸುವಂತಾಗಿದೆ.

ಬಹುಶಃ ಇವರಿಗೆ ನಮ್ಮ ಸುತ್ತಲಿನ ಸಮಾಜದ ಬಗೆಗೆ ಕನಿಷ್ಟ ತಿಳುವಳಿಕೆಯೂ ಇಲ್ಲವೇನೋ ಎನಿಸುತ್ತದೆ. ಗುರು ಹೇಳಿದ್ದನ್ನೇ ಪರಮಸತ್ಯವೆಂದು ನಂಬುವ ಇವರಲ್ಲಿ ಅಧ್ಯಯನಶೀಲತೆ ಹುಡುಕುವುದು ಸಾಧ್ಯವೇ ಇಲ್ಲವೇನೋ. ತಮ್ಮ ಸಾಮಾಜಿಕ ಬದ್ಧತೆಯನ್ನೇ ಮರೆತು ವೈಯಕ್ತಿಕ ಲೋಕದಲ್ಲಿ ಹುಸಿ ನೆಮ್ಮದಿಯ ಕವಚ ಹೊತ್ತು ಸಾಗುವ ಇಂತಹ ಜನರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿದ್ದಾರೆ. ಇವರು ಬೋಧಿಸುವ ಈ ಎಲ್ಲ ತಂತ್ರಗಳು ಕ್ಷಣಕಾಲ ಮನಸ್ಸನ್ನು ಹಗುರಗೊಳಿಸುತ್ತವೆ. ಆದರೆ ಅದಕ್ಕೆ ಬಳಸುವ ದಾರಿ ವಾಸ್ತವವನ್ನು ನಮ್ಮ ಕಣ್ಣೆದುರಿಂದ ಮರೆ ಮಾಡುವುದು. ಆಗ ನಾವೇ ಕಟ್ಟಿಕೊಂಡ ಲೋಕದಲ್ಲಿ ನಾವು ಸುಖಿಗಳೆಂಬ ಕಲ್ಪನೆಯಲ್ಲಿ ಮೈಮರೆಯುತ್ತೇವೆ. ಈ ‘ಪೈನ್ ಕಿಲ್ಲರ್’ ತಂತ್ರಗಳು ಕ್ಷಣಕಾಲ ನಮ್ಮನ್ನು ಸಮಸ್ಯೆಗಳಿಂದ ದೂರ ಇರಿಸಬಹುದು. ಮೂಲ ಬೇರಿಗೇ ಸಾಗದ ಚಿಕಿತ್ಸೆಯಿಂದ ಒಳಗೊಳಗೇ ರೋಗ ಉಲ್ಬಣಗೊಳ್ಳುತ್ತಲೇ ಸಾಗುತ್ತದೆ. ನಮ್ಮ ಸಮಾಜದ ಹಲವು ರೋಗಗಳು ಇಂದು ಹೀಗೇ ವಿಷಮ ಸ್ಥಿತಿ ತಲುಪಿದೆ.

ಹಸಿವು ಮತ್ತು ಅವಮಾನ, ಈ ಎರಡನ್ನು ಅನುಭವಿಸದವನು ಅಥವಾ ಅನುಭವಿಸದಿದ್ದರೂ ಇವನ್ನು ಹತ್ತಿರದಿಂದ ಬಲ್ಲವನು ಮಾತ್ರ ನಿಜವಾದ ಮನುಷ್ಯನಾಗಲು ಸಾಧ್ಯ. ನೆಲದಿಂದ ದೂರವೇ ಇದ್ದು ನಾವು ನಂಬಿದ್ದೇ ಆಧ್ಯಾತ್ಮ ಎಂದುಕೊಂಡು ಬದುಕಿನ ಹಲವು ಸಾಧ್ಯತೆಗಳತ್ತ ಕಣ್ಣುಪಟ್ಟಿ ಕಟ್ಟುವ ಈ ಆಧ್ಯಾತ್ಮಿಕ ತಂತ್ರಗಳು ಜನರ ಮೂಢನಂಬಿಕೆಯನ್ನು ನಗದೀಕರಿಸಿಕೊಂಡು ಬಂಡವಾಳಶಾಹಿಯನ್ನು ಬಲಪಡಿಸುವುದರಾಚೆಗೆ ಬೇರೆ ಯಾವ ಬದಲಾವಣೆಯನ್ನೂ ತರಲಾರವು.

ಎಕೂಷೆ ಫೆಬ್ರವರಿ : ಅಂತರರಾಷ್ಟ್ರೀಯ ಮಾತೃಭಾಷಾ ದಿನ

-ಭಾರತೀ ದೇವಿ. ಪಿ

ಬಹುಸಂಖ್ಯಾತರ ಭಾಷೆಯನ್ನು ಮಾನ್ಯಮಾಡಬೇಕೆಂದು ಹುಟ್ಟಿಕೊಂಡ ಚಳುವಳಿಯೊಂದು ಸ್ವಾಯತ್ತದೇಶಕ್ಕಾಗಿ ನಡೆದ ದೊಡ್ಡ ಹೋರಾಟ ರೂಪುಗೊಳ್ಳುವಲ್ಲಿ ಪ್ರಧಾನ ಪಾತ್ರವಹಿಸಿದ್ದನ್ನು ನೆನಪಿಸಿಕೊಡುವ ದಿನ ಫೆಬ್ರವರಿ 21. ಪ್ರತಿವರ್ಷ ಫೆಬ್ರವರಿ 21ನೇ ತಾರೀಕನ್ನು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಸಾಂಸ್ಕೃತಿಕ ಮತ್ತು ಭಾಷಿಕ ಬಹುತ್ವವನ್ನು ಮಾನ್ಯಮಾಡುವ ದಿಸೆಯಲ್ಲಿ ವಿಶ್ವಸಂಸ್ಥೆ 1999ರಲ್ಲಿ ಈ ದಿನವನ್ನು ಮಾತೃಭಾಷಾ ದಿನವನ್ನಾಗಿ ಘೋಷಿಸಿತು.

ಈ ಫೆಬ್ರವರಿ 21ರ ವಿಶೇಷತೆ ಏನು ಎಂಬುದನ್ನು ತಿಳಿಯಲು ಇತಿಹಾಸದತ್ತ ಕಣ್ಣು ಹಾಯಿಸಬೇಕಾಗುತ್ತದೆ. 1947ರಲ್ಲಿ ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿದ್ದ ಪ್ರದೇಶವನ್ನು ಬಿಟ್ಟುಹೋಗುವ ಮೊದಲು ಭಾರತ ಮತ್ತು ಪಾಕಿಸ್ತಾನ ಎಂಬ ದೇಶಗಳು ರೂಪುಗೊಂಡದ್ದನ್ನು ನಾವೆಲ್ಲರೂ ಬಲ್ಲೆವು. ಹೀಗಾದಾಗ ಪಾಕಿಸ್ತಾನ ಎರಡು ಭಾಗಗಳಾಗಿ ಈಗಿರುವ ಪಾಕಿಸ್ತಾನ ಪಶ್ಚಿಮ ಪಾಕಿಸ್ತಾನವಾಗಿಯೂ, ಇಂದಿನ ಬಾಂಗ್ಲಾದೇಶ ಪೂರ್ವಪಾಕಿಸ್ತಾನವಾಗಿಯೂ ಭಾರತದ ಪೂರ್ವ ಮತ್ತು ಪಶ್ಚಿಮ ಗಡಿಗಳಾಚೆ ಹರಡಿಹೋಗಿದ್ದವು. ಆಡಳಿತ, ಕಾನೂನು, ನೀತಿನಿಯಮಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ಧರಿಸುವಲ್ಲಿ ಹೆಚ್ಚಿನ ಹಿಡಿತವಿದ್ದದ್ದು ಪಶ್ಚಿಮ ಪಾಕಿಸ್ತಾನದ ನೇತಾರರ ಕೈಯಲ್ಲಿ. ಹೀಗಾಗಿ ಪೂರ್ವಪಾಕಿಸ್ತಾನದ ಜನರು ಎಲ್ಲ ರಂಗದಲ್ಲಿಯೂ ಅವಗಣನೆಗೆ ಒಳಗಾಗಿದ್ದರು. ಜೊತೆಗೆ ಪೂರ್ವಪಾಕಿಸ್ತಾನದ ಬಹುಸಂಖ್ಯಾತರ ಭಾಷೆ ಬಾಂಗ್ಲಾ (ಬಂಗಾಳಿ) ಇದ್ದಾಗಲೂ ಅದನ್ನು ಕಡೆಗಣಿಸಿ ಜಿನ್ನಾ ಮೊದಲಾಗಿ ನೇತಾರರು ಉರ್ದುವನ್ನು ರಾಷ್ಟ್ರಭಾಷೆಯಾಗಿ ಘೋಷಿಸಿದರು. ಇದು ಪೂರ್ವ ಪಾಕಿಸ್ತಾನದ ಜನರ ಭಾವನೆಗಳನ್ನು ಘಾಸಿಗೊಳಿಸಿತು. ಇದು ತಮ್ಮ ಹಕ್ಕನ್ನು, ಹಿತಾಸಕ್ತಿಯನ್ನು ಅವಗಣಿಸುವ ಬಗೆಯಾಗಿ ಅವರಿಗೆ ಕಂಡಿತು. ಇದೇ ಸಂದರ್ಭದಲ್ಲಿ ಭಾಷೆಯ ಕುರಿತಾದ ತಮ್ಮ ಹಕ್ಕು ಸ್ಥಾಪಿಸುವ ಉದ್ದೇಶದಿಂದ ‘ಆಲ್ ಪಾರ್ಟಿ ಸ್ಟೇಟ್ ಲಾಂಗ್ವೇಜ್ ಕಮಿಟಿ’ ರೂಪಿತವಾಯಿತು.

ಈ ವಿರುದ್ಧ 1952ರ ಫೆಬ್ರವರಿ 20-21ರಂದು ದೇಶವ್ಯಾಪಿ ಚಳುವಳಿ ಮಾಡುವುದಾಗಿ ಈ ಸಮಿತಿ ನಿರ್ಧರಿಸಿತು. 21ರಂದು ಬಜೆಟ್ ಮಂಡನೆಯಿದ್ದ ಕಾರಣ ಈ ದಿನಗಳನ್ನು ಅವರು ಆರಿಸಿಕೊಂಡರು. ಇದರಲ್ಲಿ ವಿದ್ಯಾರ್ಥಿಗಳು, ನಾಯಕರು, ಸಾಹಿತಿಗಳು ಎಲ್ಲರೂ ಸೇರಿದ್ದರು. ಆದರೆ ಸರ್ಕಾರ ಇದ್ದಕ್ಕಿದ್ದಂತೆ ಚಳುವಳಿ ನಡೆಸದಂತೆ 144ನೇ ಸೆಕ್ಷನ್ ಹೇರಿತು. ಈ ಸಂದರ್ಭದಲ್ಲಿ ಮುಂದಿನ ಕ್ರಮ ನಿರ್ಧರಿಸಲು 20ರ ಸಂಜೆ ಮುಂಚೂಣಿಯಲ್ಲಿರುವವರು ಸಭೆ ಸೇರಿದರು. ಈ ಹೊತ್ತಿನಲ್ಲಿ ಪ್ರತಿಭಟನೆ ಕೈಬಿಡುವ ತೀರ್ಮಾನಕ್ಕೂ ಕೆಲವು ನಾಯಕರು ಬಂದರು. ಆದರೆ ಈಗಾಗಲೇ ಹುರುಪಿನಿಂದ ಕೆಚ್ಚಿನಿಂದ ಕೂಡಿದ್ದ ಯುವಸಮುದಾಯಕ್ಕೆ ಈ ನಿರ್ಧಾರ ಸಮ್ಮತವಾಗಲಿಲ್ಲ.

ಫೆಬ್ರವರಿ 21ರಂದು (ಬಂಗಾಳಿ ಭಾಷೆಯಲ್ಲಿ ಎಕೂಷೆ ಫೆಬ್ರವರಿ) ವಿದ್ಯಾರ್ಥಿಗಳು ಢಾಕಾದಲ್ಲಿ ಶಾಂತಿಯುತವಾಗಿ ಪ್ರತಿಭಟನೆಗಿಳಿದರು. ಬಜೆಟ್ ಮಂಡನೆಗೆಂದು ಬರುತ್ತಿದ್ದ ನಾಯಕರು ಪ್ರವೇಶಿಸದಂತೆ ದ್ವಾರದಲ್ಲಿ ತಡೆ ಒಡ್ಡಿದರು. ಈ ಸಂದರ್ಭದಲ್ಲಿ ಪೊಲೀಸರು ಸರ್ಕಾರದ ಆದೇಶದಂತೆ ಗುಂಡು ಹಾರಿಸತೊಡಗಿದರು. ಈ ಗುಂಡಿನ ದಾಳಿಗೆ ಹಲವಾರು ವಿದ್ಯಾರ್ಥಿಗಳು ಬಲಿಯಾದರು.

ಪ್ರಭುತ್ವದ ಹೇರಿಕೆ, ಕ್ರೌರ್ಯವನ್ನು ನೇರವಾಗಿ ಬಯಲಿಗೆಳೆದ ಈ ಘಟನೆ ಸ್ವಾಯತ್ತ ಬಾಂಗ್ಲಾದೇಶಕ್ಕಾಗಿ ಹೋರಾಟ ನಡೆಸಲು ದೊಡ್ಡ ಪ್ರೇರಣೆಯಾಯಿತು. ಕೊನೆಯಲ್ಲಿ 1971ರಲ್ಲಿ ಸ್ವತಂತ್ರ ಬಾಂಗ್ಲಾದೇಶ ತಲೆಯೆತ್ತಿತು.

ಈ ನೆನಪಿನಲ್ಲಿ ವಿಶ್ವಸಂಸ್ಥೆ ಫೆಬ್ರವರಿ 21ನ್ನು ಬಹುತ್ವವನ್ನು ಒಳಗುಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರೇರೇಪಿಸುವ ದಿನವಾಗಿ ಮಾತೃಭಾಷಾ ದಿನ ಎಂದು ಘೋಷಿಸಿದೆ. ಬಹುಭಾಷಿಕ ಪರಿಸರದಲ್ಲಿ ನೆಲೆಸಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಿರಂತರ ಕೊಡುಕೊಳೆಯಲ್ಲಿ ನಿರತವಾಗಿರುವ ನಾವು ಬಹುತ್ವವನ್ನು ಮಾನ್ಯಮಾಡುವುದನ್ನು ಅತ್ಯಗತ್ಯವಾಗಿ ಕಲಿಯಲೇಬೇಕಾಗಿದೆ. ಮಾತೃಭಾಷಾ ದಿನ ನಮ್ಮ ಭಾಷೆ ಸಕ್ಕರೆ, ಚಿನ್ನ ಎಂದು ಕೊಂಡಾಡುವ ದಿನವಲ್ಲ ಎಂಬುದು ಈ ದಿನದ ಹಿನ್ನೆಲೆಯನ್ನು ಅರಿತರೆ ಅರ್ಥವಾಗುತ್ತದೆ. ಭಾಷಾ ಹೇರಿಕೆ, ಭಾಷಾ ಮೂಲಭಾತವಾದವನ್ನು ಕಿತ್ತೊಗೆದು ಪ್ರಜಾಪ್ರಭುತ್ವೀಯ ನೆಲೆಯಲ್ಲಿ ಎಲ್ಲ ಭಾಷೆಗಳನ್ನು ಗೌರವಿಸುವ ನೆಲೆಯಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುವ ದಿನ ಇದು. ಈ ದಿನಕ್ಕೆ ಸಂಬಂಧಿಸಿದಂತೆ ಈ ವರ್ಷದ ಘೋಷಣಾ ವಾಕ್ಯವೂ ‘ಮಾತೃಭಾಷಾಮಾಧ್ಯಮ ಮತ್ತು ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣ’ ಎಂದಿರುವುದು ಇಂದಿನ ತುರ್ತನ್ನು ಮತ್ತೆ ಒತ್ತಿಹೇಳುವಂತಿದೆ.

ಸಾಮುದಾಯಿಕ ಹಾದಿಯಾಗಿ ಸಂಗೀತ

-ಭಾರತೀ ದೇವಿ. ಪಿ

ಸಂಗೀತ ಕುರಿತಾದ ಸಂಕಥನಗಳಲ್ಲಿ ನಾವು ಮತ್ತೆ ಮತ್ತೆ ‘ಸಂಗೀತ ಆತ್ಮದ ಭಾಷೆ, ಅದಕ್ಕೆ ಕಾಲ ದೇಶಗಳ ಹಂಗಿಲ್ಲ, ಅದರ ಭಾಷೆ ವಿಶ್ವಾತ್ಮಕವಾದುದು’ ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ಹೀಗೆ ದೇಶ ಭಾಷೆಗಳಾಚೆಗೆ ಎಲ್ಲರನ್ನು ತಲುಪುವ ವಿಶೇಷ ಗುಣ ಸಂಗೀತಕ್ಕಿದೆ, ಏಕೆಂದರೆ ಅದು ಭಾಷೆಯನ್ನು ಸಂಕೋಲೆಯಾಗಿ ಮಾಡಿಕೊಂಡಿಲ್ಲ. ಆದರೆ ತಾಂತ್ರಿಕವಾಗಿ ಸುಸಜ್ಜಿತವಾದ, ಶ್ರೇಷ್ಠ ಅಭಿರುಚಿ ತಮ್ಮದೆಂದುಕೊಂಡ ಕೇಳುಗರಿಂದ ತುಂಬಿಕೊಂಡಿರುವ ಸಭಾಂಗಣದಲ್ಲಿ ಕುಳಿತಾಗೆಲ್ಲ ಈಚೆಗೆ ವಿಚಿತ್ರ ಕಸಿವಿಸಿಯಾಗುತ್ತದೆ. ಇಂತಹ ವಿಶ್ವಾತ್ಮಕ ಭಾಷೆಯಾದ ಸಂಗೀತದ ಒಂದು ಪ್ರಭೇದವಾದ ‘ಶಾಸ್ತ್ರೀಯ’ ಎನಿಸಿಕೊಂಡಿರುವ ಸಂಗೀತ ಕೆಲವೇ ನಿರ್ದಿಷ್ಟ ಗುಂಪಿನ ಜನರ ಅಭಿರುಚಿಯ ಸಂಗತಿಯಾಗಷ್ಟೇ ಸೀಮಿತಗೊಳ್ಳುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತದೆ. ಹೀಗೆ ನನ್ನಲ್ಲಿ ಎದ್ದ ಹಲವು ಪ್ರಶ್ನೆ ಮತ್ತು ಆತಂಕಗಳನ್ನು ಅವಲೋಕಿಸುವ ಲೌಡ್ ಥಿಂಕಿಂಗ್‍ನ ರೂಪದಲ್ಲಿ ಇಲ್ಲಿನ ನನ್ನ ಅಭಿಪ್ರಾಯಗಳಿವೆ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸುತ್ತೇನೆ.

ಕಲೆಯ ಹಾದಿ ಆತ್ಮಸಾಕ್ಷಾತ್ಕಾರದ ಹಾದಿ ಎಂದು ಭಾವಿಸಿಕೊಂಡಾಗ ಅದು ವೈಯಕ್ತಿಕ ಸಾಧನೆಯ ಪಥವಾಗುತ್ತದೆ. ತನ್ನ ಸಾಧನೆ, ಅದರ ಮೂಲಕ ಪಡೆಯುವ ಪಕ್ವತೆ, ಸಹೃದಯನೊಂದಿಗೆ ನಡೆಸುವ ಅನುಸಂಧಾನ ಇವು ಒಂದು ವಲಯದೊಳಗೆ ನಡೆಯುವಂಥವು. ಇದರಾಚೆಗೆ ಒಂದು ಸಾಮುದಾಯಿಕ ಆಯಾಮ ಸಂಗೀತ ಸೇರಿದಂತೆ ಲಲಿತಕಲೆಗಳಿಗೆ ಇದೆ. ಇದು ಸಂಸ್ಕಾರ, ರಂಜನೆ, ಭಕ್ತಿ, ಆತ್ಮ ನಿರೀಕ್ಷಣೆಯಾಚೆಗಿನ ಎಲ್ಲರೊಂದಿಗೆ ಒಂದಾಗಿ ತನ್ನನ್ನು ಗುರುತಿಸಿಕೊಳ್ಳುವ ಬಗೆ. ಆದರೆ ಶಾಸ್ತ್ರೀಯ ಸಂಗೀತದ ಇಂದಿನ ಬೆಳವಣಿಗೆಯನ್ನು ಕಂಡಾಗ ಅದು ವೈಯಕ್ತಿಕ ಸಾಧನೆಯ, ಶೋಧನೆಯ ದಾರಿಯಾಗಿ ಕಾಣುತ್ತಿದೆ. ಒಂದೇ ಬಗೆಯ ಶ್ರೋತೃಗಳು, ಸಂಘಟನೆ, ಪ್ರಸ್ತುತಿಯಲ್ಲಿ ಏಕರೂಪತೆ ಕಾಣುತ್ತಿದೆ. ಇವುಗಳು ಬಹುತ್ವದಿಂದ ದೂರವಾಗಿವೆ.

ವೈವಿಧ್ಯ ಮತ್ತು ಬಹುತ್ವ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಗಮನಾರ್ಹವಾದ ಮತ್ತು ಮುಖ್ಯವಾದ ಸಂಗತಿಗಳು. ಕೇವಲ ಹಾಡುವ ಬಗೆ, ಕೌಶಲಗಳಲ್ಲಿ ಮಾತ್ರ ವೈವಿಧ್ಯ ವ್ಯಕ್ತವಾದರೆ ಸಾಕೆ? ಕುಮಾರ ಗಂಧರ್ವರು ತತ್ವಪದಗಳೊಂದಿಗೆ ಮಾಡಿಕೊಂಡ ಅನುಸಂಧಾನ, ಹಿಂದೆ ಶಾಸ್ತ್ರೀಯ ಸಂಗೀತದೊಡನೆ ನಾಟ್ಯ ಸಂಗೀತದ ಅಂಶಗಳು ಬೆರೆತು ಪರಸ್ಪರ ಕೊಡುಕೊಳ್ಳುಗಳ ಮೂಲಕ ಶ್ರೀಮಂತಗೊಂಡ ಬಗೆ ಇವುಗಳಿಂದ ಕಲಿಯುವುದು ಸಾಕಷ್ಟಿದೆ. ವೈವಿಧ್ಯ ಮತ್ತು ಒಳಗೊಳ್ಳುವಿಕೆ ಶಾಸ್ತ್ರೀಯ ಸಂಗೀತದ ಕಸುವನ್ನು ಹೆಚ್ಚಿಸುತ್ತದೆ.

ಶಾಸ್ತ್ರೀಯ ಸಂಗೀತದ ಬೇರುಗಳಿರುವುದು ಸಮುದಾಯದಲ್ಲಿ. ಆದರೆ ಇಂದು ಅದು ಬೇರಿನಿಂದ ಸಾಕಷ್ಟು ದೂರ ಕ್ರಮಿಸಿದೆ. ತಂತ್ರಜ್ಞಾನದ ಬೆಂಬಲದೊಂದಿಗೆ ಹೊಸತನಕ್ಕೆ ಒಡ್ಡಿಕೊಂಡಿರುವ ಸಂಗೀತ ಮತ್ತೆ ಬೇರುಗಳೆಡೆಗೆ ಸಾಗದ ಹೊರತು ಶುಷ್ಕವಾಗಿಬಿಡುತ್ತದೆ. ಹಿಂದಿನ ಗಂಗೂಬಾಯಿಯವರಲ್ಲಾಗಲೀ, ಭೀಮಸೇನ ಜೋಶಿಯವರಲ್ಲಾಗಲೀ ಕಾಣುವ ಕಸುವು ಇಂದಿನ ಹಾಡುಗಾರರಲ್ಲಿ ಕಾಣಲಾಗುತ್ತಿಲ್ಲ ಎಂದು ಹೇಳುವಾಗ ನಮ್ಮ ಗಮನ ಸಾಗಬೇಕಾದುದು ಈ ಕಡೆಗೆ. ವಿಶಾಲವಾಗುವ, ಎತ್ತರಕ್ಕೇರುವ ಹುಮ್ಮಸ್ಸಿನಲ್ಲಿ ಆಳಕ್ಕಿಳಿಯುವ, ಬೇರುಗಳನ್ನು ತಡಕುವ ಹಾದಿ ಹಿನ್ನಡೆಯ ಹಾದಿಯಲ್ಲ; ಅದು ಜೀವರಸವನ್ನು ಮತ್ತೆ ಪಡೆಯುವ ಹಾದಿಯಾಗುತ್ತದೆ. ಹೀಗೆ ಮತ್ತೆ ಮತ್ತೆ ಅದು ಭೇಟಿ ನೀಡಬೇಕಾಗಿರುವುದು ಮರಳಿ ಸಮುದಾಯದ ಕಡೆಗೇ.

ಸಂಗೀತ ಹೃದಯದ ಭಾಷೆ ಎನ್ನುವುದು ಅದರ ನಿರೂಪಣೆಗೆ ಸಂಬಂಧಿಸಿದ ಸಂಗತಿ. ಹೃದಯದ ಭಾಷೆಗೆ ವಿಚಾರದ ಹಂಗಿಲ್ಲ ಎನ್ನುವುದೂ ನಿಜ. ಆದರೆ ಹೃದಯ ತಟ್ಟುವುದರಾಚೆಗೆ ನಮ್ಮ ಪ್ರಜ್ಞೆಯನ್ನು ತಟ್ಟಬಲ್ಲ ಗುಣ, ಶಕ್ತಿ ಸಂಗೀತಕ್ಕಿಲ್ಲವೇ? ಆದರೆ ಇಂದು ಸಂಗೀತ ಬಲ್ಲವರಲ್ಲಿ ಬಹುಪಾಲು ಜನ ಅದರ ವೈಚಾರಿಕ ಆಯಾಮದ ಕುರಿತು ಯೋಚಿಸಿದಂತಿಲ್ಲ. ಯಾವುದೇ ಸಾಮಾಜಿಕ ಸಂಗತಿಗಳ ಬಗೆಗೆ ಅವರ ದನಿ ಕೇಳುವುದಿಲ್ಲ. ಇಂದಿನ ರಿಯಾಲಿಟಿ ಶೋಗಳ, ಸಿನೆಮಾಗಳ ಜನಪ್ರಿಯ ಹಾಡುಗಾರರಿಂದ ಹಿಡಿದು ಶಾಸ್ತ್ರೀಯ ಸಂಗೀತಗಾರರವರೆಗೆ ಸಾಮಾಜಿಕ ಸಂಗತಿಗಳಿಗೆ ಸಂಗೀತಗಾರರು ಸ್ಪಂದಿಸಿದ್ದು ಕಡಿಮೆ. ಸಂಗೀತಕ್ಕಿರುವ ಸಾಮಾಜಿಕ ಆಯಾಮ ಸಹೃದಯರ ರಂಜನೆಗಷ್ಟೇ ಸೀಮಿತವೇ? ಅದರಾಚೆಗೆ ಸಮಾಜದೊಂದಿಗೆ ಸಂಗೀತಗಾರರು ಯಾವ ಬಗೆಯಲ್ಲಿ ಸ್ಪಂದಿಸಬಹುದು? ಸಂಗೀತ ಕಲಿಕೆ, ಕೇಳ್ಮೆ ಮತ್ತು ಪ್ರಸ್ತುತಿಯಲ್ಲಿ ಸಂಗೀತದ ಪ್ರಜಾಪ್ರಭುತ್ವೀಕರಣ ನಡೆಸಬಹುದಾದ ಬಗೆ ಯಾವುದು?

ಈ ಪ್ರಶ್ನೆಗಳೊಂದಿಗೆ ಹೊರಟಾಗ ಸಂಗೀತ ದೈವಿಕವಾದದ್ದು, ಅದು ಆತ್ಮದ ಭಾಷೆ ಎಂಬೆಲ್ಲ ಮಾತುಗಳನ್ನು ಮರುಪ್ರಶ್ನೆಗೊಳಪಡಿಸಬೇಕಾಗುತ್ತದೆ. ಸಂಗೀತ ಶ್ರೇಷ್ಠವಾದ ಕಲೆ ನಿಜ, ಅದಕ್ಕೆ ಅದರದೇ ಆದ ಸ್ಥಾನ, ಗೌರವ ಇದೆ. ಆದರೆ ಯಾವುದನ್ನೇ ಆಗಲಿ ಅದು ಉಳಿದವುಗಳಿಗಿಂತ ಶ್ರೇಷ್ಠ ಎನ್ನುವ ಮಾತು ಶ್ರೇಣೀಕರಣವನ್ನು ಪೋಷಿಸುವ ಮಾತಾಗುವಂತೆಯೇ ನಿಧಾನಕ್ಕೆ ಶ್ರೇಷ್ಠವೆನಿಸಿಕೊಂಡದ್ದರ ಬೇರನ್ನು ಶಿಥಿಲಗೊಳಿಸುವ ಬಗೆಯೂ ಆಗುತ್ತದೆ. ನಮ್ಮ ಶಾಸ್ತ್ರೀಯ ಪ್ರಭೇದಗಳು ಶ್ರೇಷ್ಠತೆಯ ಕಲ್ಪನೆ ಮತ್ತು ವ್ಯಸನದಿಂದ ಹೊರಬಂದ ಹೊರತು ಅವುಗಳಿಂದ ಹೊಸದೇನನ್ನೂ ನಿರೀಕ್ಷಿಸುವುದು ಸಾಧ್ಯವಾಗುವುದಿಲ್ಲ.

ಇಂದಿಗೂ ಶಾಸ್ತ್ರೀಯ, ಜನಪದ ಮತ್ತು ಜನಪ್ರಿಯ ಸಂಗೀತ ಇವುಗಳ ನಡುವೆ ಸ್ಪಷ್ಟ ಶ್ರೇಣೀಕರಣ ಮನೆ ಮಾಡಿರುವುದು ಕಾಣುತ್ತದೆ. ಯಾವುದೇ ಸಾಂಸ್ಕೃತಿಕ ಉತ್ಸವ ನಡೆಯಲಿ, ಇವುಗಳಿಗೆ ದೊರೆಯುವ ವೇದಿಕೆಗಳೇ ಬೇರೆ, ಇವುಗಳ ಕೇಳುಗ ವರ್ಗವೇ ಬೇರೆ. ಅವುಗಳ ನಡುವಣ ವೈಶಿಷ್ಟ್ಯವನ್ನು ಮೆಚ್ಚುತ್ತಲೇ ಒಂದು ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ. ಈ ಬಗೆಯ ‘ವಾಟರ್ ಟೈಟ್ ಕಂಪಾರ್ಟ್‍ಮೆಂಟ್ಸ್’ ಪರಸ್ಪರ ಪ್ರಭಾವ ಪಡೆಯುವುದರಿಂದ ನಮ್ಮನ್ನು ತಡೆಯುತ್ತದೆಯೇ? ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಜನರಿಗೆ ಬೇಕಾದಂತೆ ಹಾಡುವವರನ್ನು ಜನರನ್ನು ಓಲೈಸುವವರು ಎಂದು ಅಸಡ್ಡೆಯಿಂದ ಕಾಣುವವರಿದ್ದಾರೆ. ಕಟ್ಟುನಿಟ್ಟಾಗಿ ಪಾಠಾಂತರಕ್ಕೆ ಕಟ್ಟುಬಿದ್ದವರಿದ್ದಾರೆ. ಇವು ಸಂಗೀತವನ್ನು ಸದಾ ಒಂದು ಅಲ್ಪಸಂಖ್ಯಾತ ವರ್ಗದ ಚಟುವಟಿಕೆಯಾಗಿ ನಿರ್ದಿಷ್ಟಗೊಳಿಸುತ್ತದೆಯೇ? ಇದರಿಂದ ಸಂಗೀತ ಕ್ಷೇತ್ರ ಪಡೆಯುವುದೇನು ಮತ್ತು ಕಳೆದುಕೊಳ್ಳುವುದೇನು?

ಈ ಬಗ್ಗೆ ಇಂದು ಸಂಗೀತ ಕ್ಷೇತ್ರದಲ್ಲಿ ಮನೆಮಾಡಿರುವುದು ತುಂಬಾ ಸರಳೀಕೃತವಾದ ಗ್ರಹಿಕೆ. ಜನರನ್ನು ಮೆಚ್ಚಿಸಲು ಹೋದಾಗ ಸಂಗೀತ ಜಾಳುಜಾಳಾಗುತ್ತದೆ, ಜನಪ್ರಿಯತೆಗೆ ಮಾರುಹೋದ ಸಂಗೀತಗಾರ ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತಾನೆ ಎಂಬ ಭಾವನೆ. ಈ ತಿಳುವಳಿಕೆಯನ್ನು ಮರುಪರಿಶೀಲನೆಗೆ ಒಡ್ಡಬೇಕಾಗುತ್ತದೆ. ಶುದ್ಧ ಎಂಬುದು ಯಾವುದು? ಸಂಗೀತ ಹಿಂದೆಂದೋ ಇದ್ದಂತೆ ಇಂದು ಇಲ್ಲ. ಕಾಲಕ್ಕನುಗುಣವಾಗಿ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಬದಲಾವಣೆಗಳನ್ನು ಒಳಗು ಮಾಡಿಕೊಂಡಿದೆ. ಅಲ್ಲದೆ, ತಮ್ಮ ತನವನ್ನು ಬಿಟ್ಟುಕೊಡದೆಯೂ ಜನರನ್ನು ಸೆಳೆಯುವ ಅನ್ನುವುದಕ್ಕಿಂತ ಹೆಚ್ಚಾಗಿ ಒಳಗು ಮಾಡಿಕೊಳ್ಳುವ ಬಗೆಯಲ್ಲಿ ಸಂಗೀತದ ಪ್ರಸ್ತುತಿ ಸಾಧ್ಯವಿಲ್ಲವೇ? ಒಂದು ನಿರ್ದಿಷ್ಟ  ವರ್ಗಕ್ಕೆ ಸೀಮಿತವಾಗಿದ್ದಾಗ ಅದು ಬಹಳ ಮುಂದೆ ಹೋಗುವುದು ಕಷ್ಟವಾಗುತ್ತದೆ. ಕಾಲಕ್ಕನುಗುಣವಾಗಿ ಬದಲಾಗುವ ಬಗೆಯಲ್ಲಿ ಸಂಗೀತ ಹೆಚ್ಚು ಜನಮುಖಿಯಾಗಬೇಕು. ಇಂದಿನ ಸಂಗೀತದ ಕುರಿತು ಹಳಹಳಿಕೆಯ ಮಾತಾಡುವಾಗ ಈ ಸಂಗತಿ ನಮ್ಮ ದೃಷ್ಟಿಯಿಂದ ತಪ್ಪಿ ಹೋಗಬಾರದು. ಸಂಗೀತದ ಎಲ್ಲ ಪ್ರಭೇದಗಳ ಪ್ರಜಾಪ್ರಭುತ್ವೀಕರಣ ಸಮಾನತೆಯ ದೃಷ್ಟಿಯಿಂದ ಮಾತ್ರವಲ್ಲ, ಸಂಗೀತದ ಬೆಳವಣಿಗೆಯ ದೃಷ್ಟಿಯಿಂದಲೂ ಮುಖ್ಯವಾಗುತ್ತದೆ.

“ಲಕ್ಷ್ಮಿಪತಿಯರಿಗೆ ಗಂಡಾಂತರ” ಮತ್ತು “ತಪ್ಪು, ಆದರೆ ಮಹಾಪರಾಧವೇನಲ್ಲ”

-ಭಾರತಿ ದೇವಿ ಪಿ.

‘ರಾಮಾಯಣ ಯುದ್ಧಕ್ಕೆ ಸೀತೆಯ ಚಪಲವೇ ಕಾರಣ, ಮಹಾಭಾರತದ ದುರಂತಕ್ಕೆ ನಾಂದಿ ಹಾಡಿದ್ದು ದ್ರೌಪದಿಯೇ’ ಎಂಬ ಹುಂಬ ವಾದದ ಮುಂದುವರಿಕೆಯಂತೆ ‘ಲಕ್ಷ್ಮಿಪತಿಯರಿಗೆ ತಪ್ಪಿದ್ದಲ್ಲ ಗಂಡಾಂತರ’ ಎಂಬ ಫರ್ಮಾನನ್ನು ಕನ್ನಡದ ಸುದ್ದಿ ವಾಹಿನಿಯೊಂದು ಹೊರಡಿಸಿದೆ. ಜೊತೆಗೆ, ನಿಮ್ಮ ಹೆಂಡತಿಯ ಹೆಸರು ಲಕ್ಷ್ಮಿಯೇ? ಎಂದು ಕೇಳುವುದರ ಮೂಲಕ ‘ನೀವು ಹುಶಾರಾಗಿರಿ’ ಎಂಬ ಎಚ್ಚರಿಕೆಯನ್ನೂ ನೀಡಿದೆ. ಹೀಗಾಗಿ, ಇಲ್ಲಿಗೆ ಗಂಡಂದಿರು ಮಾಡಿದ ಅನಾಚಾರಕ್ಕೆಲ್ಲ ಅವರ ದುರಾಸೆ,  ಅಧಿಕಾರ ಲಾಲಸೆ, ದುಷ್ಟತನ ಕಾರಣವಲ್ಲ, ಪತ್ನಿಯ ಹೆಸರು ಲಕ್ಷ್ಮಿ ಎಂದು ಇರುವುದೇ ಕಾರಣ ಎಂಬ ಅಪೂರ್ವ ಸಂಶೋಧನೆ ನಡೆಸಿ ತೀರ್ಮಾನ ಹೊರಡಿಸಿದೆ.

ಸ್ವಾತಂತ್ರ್ಯ ದೊರೆತು 64 ವರ್ಷಗಳಾದ ಮೇಲಾದರೂ ಸಮಾಜದಲ್ಲಿ ದಲಿತರ, ಮಹಿಳೆಯರ ಸ್ಥಾನಮಾನ ಉತ್ತಮಗೊಂಡಿದೆ ಎಂಬ ಭರವಸೆ ಹುಸಿಯಾಗುವ ಬಗೆಯಲ್ಲಿ ಈ ಬಗೆಯ ಘಟನೆಗಳು ಕಾಣಿಸುತ್ತವೆ. ಇತ್ತೀಚೆಗಿನ ದರ್ಶನ್ ಪ್ರಕರಣದಲ್ಲಿ ಒಂದೆಡೆ ಚಿತ್ರರಂಗದ ‘ಗಣ್ಯರು’ ಅವರ ಪತ್ನಿ ವಿಜಯಲಕ್ಷ್ಮಿಗೆ ಬಾತ್‌ರೂಮ್‌ನಲ್ಲಿ ಬಿದ್ದುದಾಗಿ ಹೇಳಿಕೆ ನೀಡುವಂತೆ ಒತ್ತಡ ಹೇರಿದರೆ ಇನ್ನೊಂದೆಡೆ ಇದಕ್ಕೆಲ್ಲ ಕಾರಣ ನಿಖಿತಾ ಎಂದು ಅವರಿಗೆ ಚಿತ್ರರಂಗದಿಂದ ಬಹಿಷ್ಕಾರ ಹಾಕುತ್ತದೆ. ಏಕೆಂದರೆ ‘ಗಂಡ ಹೆಂಡತಿಗೆ ಹೊಡೆಯುವುದು ಸಹಜ’ವಾದ ಸಂಗತಿ ಎಂದು ಇವರಿಗೆ ಕಾಣುತ್ತದೆ. ಗಂಡಸಿನದು ಯಾವುದೇ ತಪ್ಪಿಲ್ಲದೆ ಅವನನ್ನು ತನ್ನ ಮೈಮಾಟಗಳಿಂದ ಸೆಳೆದು, ಸಂಸಾರಕ್ಕೆ ಹುಳಿ ಹಿಂಡುವವಳು ಇನ್ನೊಬ್ಬ ಹೆಣ್ಣು ಎಂದು ಅವರಿಗೆ ಅನಿಸುತ್ತದೆ. ಕನ್ನಡ ಚಿತ್ರರಂಗದ ಅಪ್ರಬುದ್ಧತೆ ಹೊಸದೇನೂ ಅಲ್ಲ ಎಂದಿಟ್ಟುಕೊಳ್ಳೋಣ. ಆದರೆ ಕರ್ನಾಟಕದ ಹೆಸರಾಂತ ಪತ್ರಿಕೆಯೊಂದು ಜನರ ಸಮೀಕ್ಷೆ ನಡೆಸಿ ದರ್ಶನ್ ಮಾಡಿದ್ದು ‘ತಪ್ಪು, ಆದರೆ ಮಹಾಪರಾಧವೇನಲ್ಲ’ ಎಂಬ ನಿಲುವಿಗೆ ಬಂದಿರುವುದು ಆಘಾತವುಂಟುಮಾಡುತ್ತದೆ. ಮಾಧ್ಯಮಗಳು ನ್ಯಾಯಾಧೀಶರಂತೆ ತಮ್ಮ ಮೂಗಿನ ನೇರಕ್ಕೆ ತೀರ್ಮಾನ ಕೊಡುತ್ತಿರುವುದು ಆತಂಕ ಹುಟ್ಟಿಸುತ್ತದೆ.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಿಡಬೇಕಾದ ಮಾಧ್ಯಮಗಳು ಸ್ವಾತಂತ್ರ ದೊರೆತು ಇಷ್ಟು ವರ್ಷಗಳಾದ ಹಂತದಲ್ಲಿ ಪ್ರಬುದ್ಧತೆಯನ್ನು ಮೆರೆಯಬೇಕಿತ್ತು. ಬದಲಿಗೆ ಇಂದು ಜನರಲ್ಲಿ ಬೇರೂರಿರುವ ಮೌಢ್ಯಗಳನ್ನು ಬಲಪಡಿಸುತ್ತಾ ಹಣ ಗಳಿಸುವತ್ತ ಸಾಗುತ್ತಿವೆ. ಅಷ್ಟೇ ಅಲ್ಲ, ಜನಸಾಮಾನ್ಯರ ಬದುಕಿನಲ್ಲಿ ಆಟ ಆಡುತ್ತಿವೆ. ‘ಲಕ್ಷ್ಮಿ ಪತಿಯರಿಗೆ ಕಾಟ ತಪ್ಪಿದ್ದಲ್ಲ’ ಕಾರ್ಯಕ್ರಮ ನಡೆದಾಗ ಬಂದ ಹಲವಾರು ಆತಂಕಿತ ಫೋನ್ ಕರೆಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಈ ಕಾರ್ಯಕ್ರಮದಿಂದಾಗಿ ಲಕ್ಷ್ಮಿ ಎಂಬ ಹೆಂಗಸಿನ ಗಂಡ ತನ್ನ ಸೋಲಿಗೆ ಅನುದಿನವೂ ಪತ್ನಿಯನ್ನು ದೂರುತ್ತಿದ್ದರೆ ಆಕೆಗಾಗುವ ಮಾನಸಿಕ ಹಿಂಸೆಯನ್ನು ಈ ಕಾರ್ಯಕ್ರಮದ ರೂವಾರಿಗಳು ಸರಿಪಡಿಸುತ್ತಾರೆಯೇ? ಅಥವಾ ಲಕ್ಷ್ಮಿ ಎಂಬ ಹೆಸರಿರುವ ಹುಡುಗಿಗೆ ಮದುವೆಯಾಗುವುದು ಕಷ್ಟವಾದರೆ ಅದರ ಹೊಣೆಯನ್ನು ಇವರು ಹೊರುತ್ತಾರೆಯೇ?

ಹಿರಿಯ ಪತ್ರಕರ್ತ ದಿನೇಶ್ ಅಮಿನಮಟ್ಟು ಅವರು ‘ಮಾಧ್ಯಮಗಳ ಕೆಲಸ ಜನರು ಏನು ಬಯಸುತ್ತಾರೆ, ಅದನ್ನು ಕೊಡುವುದಲ್ಲ. ಜನರಿಗೆ ಏನು ಬೇಕು ಅದನ್ನು ನೀಡುವುದು’ ಎಂದು ಒಂದೆಡೆ ಹೇಳಿದ್ದರು. ಇದಕ್ಕೆ ತದ್ವಿರುದ್ಧವಾಗಿ ಇಂದಿನ ಮಾಧ್ಯಮಗಳು ಜನರ ಬದುಕಿಗೆ ಬೇಕಾದ ತಿಳುವಳಿಕೆ ಕೊಡುವುದಕ್ಕೆ ಬದಲಾಗಿ ಅವರ ಬದುಕನ್ನು ಈ ಬಗೆಯಲ್ಲಿ ಕಲಕುವ ಪ್ರಯತ್ನ ಮಾಡುತ್ತಿವೆ. ಜೊತೆಗೆ, ಇನ್ನೊಬ್ಬರ ವೈಯಕ್ತಿಕ ಬದುಕಿಗೆ ಎಷ್ಟರ ಮಟ್ಟಿಗೆ ಪ್ರವೇಶಿಸಬಹುದು ಎಂಬ ವಿವೇಕ ಮಾಧ್ಯಮಗಳಲ್ಲಿ ಇಲ್ಲದಿರುವುದು ವ್ಯಕ್ತಿಯ ಬದುಕಿನ ಘನತೆ, ಪಾವಿತ್ರ್ಯವನ್ನೇ ಅಲ್ಲಗಳೆಯುವ ಪ್ರಜಾಪ್ರಭುತ್ವ ವಿರೋಧಿ ಮೌಲ್ಯ.

ವಾಸ್ತವವಾಗಿ, ಜನಾರ್ದನ ರೆಡ್ಡಿಯ ಪತ್ನಿ, ಗ್ಯಾನಳ್ಳಿ ತಮ್ಮಯ್ಯ ಇವರೆಲ್ಲರ ಪತ್ನಿಯರು ತಮ್ಮ ಗಂಡಂದಿರು ಮಾಡಿದ ತಪ್ಪಿನಿಂದ ಈ ಪಡಬಾರದ ಸಂಕಟ ಪಡುತ್ತಿರುವುದೂ ಅಲ್ಲದೆ, ಈಗ ತಮ್ಮ ಹೆಸರುಗಳಿಂದ ತಾವೇ ಗಂಡಂದಿರ ಅನಾಚಾರಕ್ಕೆ ಹೊಣೆಯನ್ನೂ ಹೊತ್ತುಕೊಳ್ಳಬೇಕಾಗಿದೆ. ಅವರ ಮೇಲೆ ಅನ್ಯಥಾ ಆರೋಪ ಹೊರಿಸುವಾಗ ಕನಿಷ್ಟ ವಿವೇಕವನ್ನೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ತೋರಿಸಿಲ್ಲ.

ಕಾರ್ಲ್ ಸಾಗನ್ ತನ್ನ “ದಿ ಡೆಮನ್ ಹಾಂಟೆಡ್ ವರ್ಲ್ಡ್” ಎಂಬ ಪುಸ್ತಕದಲ್ಲಿ ವೈಜ್ಞಾನಿಕ ಮನೋಧರ್ಮ ಮತ್ತು ಪ್ರಜಾಪ್ರಭುತ್ವ ಇವೆರಡೂ ಪ್ರತಿಪಾದಿಸುವ ಮೌಲ್ಯಗಳು ಒಂದೇ ಎಂದು ಹೇಳುತ್ತಾನೆ. ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಳ್ಳುವುದು ಪ್ರಜಾಪ್ರಭುತ್ಚದ ಮೌಲ್ಯಗಳನ್ನು ಬಲಪಡಿಸುತ್ತದೆ. ಅದರ ಬದಲಿಗೆ ಇಂದು ಅಧ್ಯಯನ ನಡೆಸಬೇಕಾಗಿರುವುದು ಮೌಢ್ಯವನ್ನೇ ಪ್ರತಿಪಾದಿಸುತ್ತಾ ಪಾಳೇಗಾರಿಕೆಯ ಮೌಲ್ಯಗಳನ್ನೇ ಬಲಪಡಿಸುವತ್ತ ಮಾಧ್ಯಮಗಳು ಸಾಗುತ್ತಿರುವುದರ ಬಗೆಗೇ ಹೊರತು ಯಾರ ಹೆಸರು ಏನು, ಅದು ಹಾಗಿರುವುದರಿಂದಲೇ ಏನು ಅನರ್ಥವಾಗಿದೆ ಎಂಬ ತಳವಿಲ್ಲದ ಸಂಗತಿಗಳ ಬಗೆಗೆ ಅಲ್ಲ.

ಟಿಆರ್‌ಪಿ ಆಧಾರದಲ್ಲಿ ಜನಪ್ರಿಯತೆಯನ್ನು ನಿರ್ಧರಿಸುವ ಕಾಲದಲ್ಲಿ ಇಂದು ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಿರುವುದರ ಮಾನದಂಡ ಅದನ್ನು ಎಷ್ಟು ಹೆಚ್ಚು ಜನ ಮೆಚ್ಚಿದ್ದಾರೆ ಎಂಬುದಷ್ಟೇ ಆಗಿಲ್ಲ. ಅದನ್ನು ಅತಿ ಹೆಚ್ಚು ಜನ ತೆಗಳಿದರೂ ಆ ಕಾರ್ಯಕ್ರಮ ಯಶಸ್ವಿಯಾಯಿತೆಂದೇ ಭಾವಿಸಲಾಗುತ್ತದೆ. ಒಟ್ಟಿನಲ್ಲಿ ಒಳ್ಳೆಯ ರೀತಿಯಲ್ಲೇ ಆಗಲೀ, ಕೆಟ್ಟ ರೀತಿಯಲ್ಲೇ ಅಗಲಿ, ಅತಿ ಹೆಚ್ಚು ಜನರನ್ನು ಸೆಳೆದು ನೋಡುವಂತಾಗಿಸುವುದೇ ಚಾನೆಲ್ಗಳ ಗುರಿ. ಹೀಗಾಗಿ ಈ ಬಗೆಯ ಕಾರ್ಯಕ್ರಮಗಳನ್ನು ವಿಮರ್ಶಿಸುವ ನಾವೂ ಪರೋಕ್ಷವಾಗಿ ಅದನ್ನು ಜನಪ್ರಿಯವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತೇವೆ ಎಂಬುದೇ ಇಲ್ಲಿನ ವ್ಯಂಗ್ಯ.

ಈ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳು, ಸಂಖ್ಯಾಶಾಸ್ತ್ರಜ್ಞರನ್ನು ಕರೆದು ಮಾತಾಡಿಸಿದಂತೆ ಒಬ್ಬ ವಿಚಾರವಾದಿಗೆ ಅವಕಾಶ ಇರಲಿಲ್ಲ. ಅದರಲ್ಲೂ ಅಲ್ಲಿಗೆ ಬಂದಿದ್ದ ಜ್ಯೋತಿಷಿಯೊಬ್ಬರು ‘ಲಕ್ಷ್ಮಿ ಅನ್ನುವ ಹೆಸರು ಶುಭವಾದದ್ದೇ ಆಗಿದ್ದರೂ ಗಂಡ ಹೆಂಡತಿಯನ್ನು ಲಕ್ಷ್ಮಿ, ಬಾರೇ ಹೋಗೇ ಅನ್ನುವುದರಿಂದ ಆ ಹೆಸರು ಅಪಮೌಲ್ಯಗೊಂಡು ತೊಂದರೆಯುಂಟಾಗುತ್ತದೆ’ ಎಂದೆಲ್ಲ ಬಾಲಿಶವಾಗಿ ಮಾತಾಡಿದ್ದರು. ಇಡೀ ಕಾರ್ಯಕ್ರಮವನ್ನು ಟಿಆರ್‌ಪಿಗಾಗಿಯೇ ಮಾಡಿದ್ದರೂ ಇಡೀ ಚರ್ಚೆಯಲ್ಲಿ ಒಂದು ಭಿನ್ನ ದನಿಗೆ ಅವಕಾಶ ಮಾಡಿಕೊಡುವ ಅವಕಾಶವಿತ್ತು. ಆದರೆ ಹಾಗಾಗಲಿಲ್ಲ.

ಮುರ್ಡೋಕ್ ಪ್ರಕರಣದ ಬಗ್ಗೆ ಜಿ.ಎನ್.ಮೋಹನ್ ಬರೆಯುತ್ತಾ “ಸಿಟಿಜನ್ ಕೇನ್” ಎಂಬ ಚಿತ್ರದ ಉದಾಹರಣೆ ನೀಡಿ ಅದರಲ್ಲಿ ‘ಪತ್ರಿಕೆಗೆ ಅತಿರಂಜಿತ ಸುದ್ದಿ ಸಿಗದಾಗ ಮಾಲೀಕ ತಾನೇ ಕೊಲೆ ಮಾಡಿಸಿ ಸುದ್ದಿ ಮಾಡುವ ಸ್ಥಿತಿ’ಗೆ ತಲುಪುವುದನ್ನು ವಿವರಿಸಿದ್ದರು. ಆದರೆ ಅವರೇ ಮುಖ್ಯಸ್ಥರಾಗಿರುವ ಸಮಯ ವಾಹಿನಿಯಲ್ಲಿ ಟಿಆರ್‌ಪಿಗಾಗಿ ಇಂತಹ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವುದು ನಿರಾಸೆ ಹುಟ್ಟಿಸುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕೆಂದು ಬಯಸುವ ನಾವು ನೋಡುಗರಾಗಿ, ಓದುಗರಾಗಿ ಹುರುಳಿಲ್ಲದ ಕಾರ್ಯಕ್ರಮಗಳನ್ನು, ಬರಹಗಳನ್ನು ಗಟ್ಟಿದನಿಯಿಂದ ವಿರೋಧಿಸುವ ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)