ಬಂಡವಾಳಶಾಹಿಯನ್ನು ಬಲಪಡಿಸುವ ಪಾಸಿಟಿವ್ ಥಿಂಕಿಂಗ್ ಸ್ವಾಮಿಗಳು

– ಭಾರತೀ ದೇವಿ ಪಿ.

ಕಳೆದ ಭಾನುವಾರ (17/6/12) “ಸಂವಹನ” ಆಯೋಜಿಸಿದ್ದ ಕವಿ ವೀರಣ್ಣ ಮಡಿವಾಳರ ಅಭಿನಂದನಾ ಸಮಾರಂಭದಲ್ಲಿ ಮಾತಾಡುತ್ತಾ ಹಿರಿಯ ಪತ್ರಕರ್ತ ದಿನೇಶ್ ಅಮಿನಮಟ್ಟು ಅವರು ’ಸಿಟ್ಟು ಅನ್ನುವುದೂ ಒಂದು ಮೌಲ್ಯವಾಗಿ ಎಷ್ಟು ಮುಖ್ಯ’ ಎಂದು ಮಾತಾಡಿದ್ದರು. ಎಲ್ಲವನ್ನೂ ಅದು ಇರುವುದು ಹಾಗೇ, ಅದರ ಬಗ್ಗೆ ಅಸಮಾಧಾನ ತಾಳಿ ನಮ್ಮ ಮನಸ್ಸು ಏಕೆ ಕೆಡಿಸಿಕೊಳ್ಳೋಣ ಎಂದು ಭಾವಿಸಿದರೆ ಹುಸಿ ನೆಮ್ಮದಿ ನಮ್ಮದಾಗಬಹುದು. ಆದರೆ ಸಮಾಜ ಒಂದಿನಿತೂ ಮುಂದೆ ಸಾಗಿರುವುದಿಲ್ಲ. ಅನ್ಯಾಯದ ವಿರುದ್ಧ ಕ್ರೋಧ, ಅವ್ಯವಸ್ಥೆಯ ಬಗ್ಗೆ ಅಸಮಾಧಾನ, ಅದು ಪ್ರತಿಭಟನೆಯಾಗಿ ಹೊರಹೊಮ್ಮುವುದು ಆರೋಗ್ಯವಂತ ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯ. ಆದರೆ ಇಂದಿನ ಆಧ್ಯಾತ್ಮಿಕ ಗುರುಗಳು ಬೋಧಿಸುವುದು ಇದಕ್ಕೆ ತದ್ವಿರುದ್ಧವಾದದ್ದು. ಕೂಲ್ ಆಗಿರಿ, ಕಾಮ್ ಆಗಿರಿ… ಪರಿಸ್ಥಿತಿಯನ್ನು ಅದಿರುವ ಹಾಗೇ ಒಪ್ಪಿಕೊಳ್ಳಿ…

ಹಲವು ವರ್ಷದ ಹಿಂದೆ ನಾನು ವಿದ್ಯಾರ್ಥಿಯಾಗಿದ್ದಾಗ ಇಂದಿನ ಜಗದ್ವಿಖ್ಯಾತ ಗುರೂಜಿಯೊಬ್ಬರ ಬಳಿ ಕೋರ್ಸ್ ಒಂದಕ್ಕೆ ಸೇರಿದ್ದೆ. ಯೋಗ, ಪ್ರಾಣಾಯಾಮ ಎಲ್ಲ ಮುಗಿದ ಬಳಿಕ ಬದುಕುವ ಕಲೆಯ ಭಾಗವಾಗಿ ಒಂದಿಷ್ಟು ಟಿಪ್ಸ್‌ಗಳನ್ನು ಅವರು ನೀಡುವ ಕಾರ್ಯಕ್ರಮವಿರುತ್ತದೆ. ಅಲ್ಲಿನ ಎರಡೇ ಎರಡು ಟಿಪ್ಸ್ ಗಮನಿಸಿ. ಒಂದು, ‘Accept the situation as it is’. ಇನ್ನೊಂದು ‘expectation reduces joy’ ಈ ಎರಡು ಹೇಳಿಕೆಗಳು ನನ್ನ ತಲೆ ಕೆಡಿಸಿದ್ದವು. ಏಕೆ ಪರಿಸ್ಥಿತಿಯನ್ನು ಯಾವಾಗಲೂ ಅದು ಇರುವ ಹಾಗೇ ಒಪ್ಪಿಕೊಳ್ಳಬೇಕು? ಒಬ್ಬ ಮಹಿಳೆಗೆ, ಒಬ್ಬ ದಲಿತನಿಗೆ ಹಾಗೆ ಭಾವಿಸುವುದು ಸಾಧ್ಯವೇ? ನಿರೀಕ್ಷೆ ಇಲ್ಲದಾಗಲೇ ಅಲ್ಲವೇ ನಾವು ಇರುವ ಸ್ಥಿತಿಯನ್ನು ಅನಿವಾರ್ಯವೆಂಬಂತೆ ಒಪ್ಪುವುದು?

ನೀವು ಇಂದಿನ ಯಾವುದೇ ಹೈಟೆಕ್ ಗುರೂಜಿಗಳನ್ನು ತೆಗೆದುಕೊಳ್ಳಿ. ಅವರು ಇವನ್ನೇ ಒಂದಲ್ಲ ಒಂದು ಬಗೆಯಲ್ಲಿ ಹೇಳುವವರಾಗಿರುತ್ತಾರೆ. ಅವರು ಯಥಾಸ್ಥಿತಿವಾದಿಗಳು. ಅವರ ಬಳಿಗೆ ಬರುವವರೂ ಆರ್ಥಿಕವಾಗಿ ತುಸು ಉತ್ತಮಮಟ್ಟದಲ್ಲಿದ್ದು ಕ್ಷಣದ ಒತ್ತಡ ಕಳೆದುಕೊಳ್ಳಬಯಸುವವರು. ಒಬ್ಬ ರೈತನನ್ನು, ಒಬ್ಬ ತರಕಾರಿ ಮಾರುವವನನ್ನು, ದಿನಪತ್ರಿಕೆ ಮಾರುವವನನ್ನು ಅವರ ಬಳಿ ನೋಡುವುದು ಸಾಧ್ಯವಿಲ್ಲ. ಎಲ್ಲರೂ ಚೆನ್ನಾಗಿ ಓದಿದವರು, ಮೇಲ್ವರ್ಗದವರು, ಹಣ ಉಳ್ಳವರು.

ಜಾಗತೀಕರಣದ ನಂತರದ ಕಾಲಮಾನದಲ್ಲಿ ಬಂಡವಾಳಶಾಹಿ ಗಟ್ಟಿಗೊಳ್ಳುತ್ತಿರುವುದಕ್ಕೂ ಈ ಹೈಟೆಕ್ ಸ್ವಾಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತಿರುವುದಕ್ಕೂ ನೇರಾನೇರ ಸಂಬಂಧವಿದೆ. ಇವರು ಇಲ್ಲಿನ ಹೈಟೆಕ್ ಜನರ ಗುರುಗಳಾಗಿರುವುದೂ ಅಮೆರಿಕ ಮುಂತಾದ ದೇಶಗಳಲ್ಲಿ ಜನಪ್ರಿಯರಾಗಿರುವುದೂ ಆಕಸ್ಮಿಕವೇನಲ್ಲ. ಇವರು ಪರಿಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ಕಲಿಸುವ ಪಾಠ ಕಂಪೆನಿಗಳನ್ನು ಬಲಪಡಿಸುತ್ತದೆ. ಅವರು ಎಷ್ಟೇ ಗಂಟೆ ತಮ್ಮ ಕ್ಯೂಬಿಕಲ್‌ಗಳಲ್ಲಿ ಕಳೆಯಬೇಕಾಗಿ ಬಂದರೂ ದನಿಯೆತ್ತುವುದನ್ನೇ ಮರೆತು ದುಡಿಯುತ್ತಾರೆ. ಸ್ಟ್ರೆಸ್ ಆದಾಗ ರಿಲಾಕ್ಸ್ ಆಗಲು ಉಸಿರು ಬಿಡುವ-ಎಳೆದುಕೊಳ್ಳುವ ತಂತ್ರಗಳನ್ನು ಇದೇ ಸ್ವಾಮೀಜಿಗಳು ಅವರಿಗೆ ಹೇಳಿಕೊಟ್ಟಿರುತ್ತಾರೆ. ವೀಕೆಂಡ್ ಧ್ಯಾನಮೇಳಗಳು ಮತ್ತೆ ವಾರಪೂರ್ತಿ ಅವರನ್ನು ಮೂಗೆತ್ತಿನಂತೆ ದುಡಿಯಲು ಹುರಿದುಂಬಿಸುತ್ತವೆ. ಒಂದು ರೀತಿಯಲ್ಲಿ ಹೊಸ ಬಗೆಯ ಜೀತ, ಗುಲಾಮೀ ಸಂಸ್ಕೃತಿಯನ್ನು ಬಲಪಡಿಸುವುದರಲ್ಲಿ ಇವರು ಕೈಲಾದ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ.

ಬಾರ್ಬರಾ ಎರೆನ್‍ರೀಚ್ ಎಂಬ ಮಹಿಳೆ ‘ಸ್ಮೈಲ್ ಆರ್ ಡೈ: ಹೌ ಪೊಸಿಟಿವ್ ಥಿಂಕಿಂಗ್ ಫೂಲ್ಡ್ ಅಮೆರಿಕಾ ಅಂಡ್ ದ ವರ್ಲ್ಡ್’ ಎಂಬ ಕೃತಿಯಲ್ಲಿ ಇದನ್ನು ತುಂಬಾ ಚೆನ್ನಾಗಿ ವಿಮರ್ಶೆಗೊಳಪಡಿಸುತ್ತಾರೆ. ಪೊಸಿಟಿವ್ ಆಗಿ ಯೋಚಿಸುವ ವ್ಯಕ್ತಿ ಎಂದರೆ ‘ಆತ ಸದಾ ಹಸನ್ಮುಖಿಯಾಗಿರಬೇಕು, ಏನನ್ನೂ ದೂರಬಾರದು, ಹೆಚ್ಚು ವಿಮರ್ಶಾತ್ಮಕವಾಗಿರಬಾರದು, ಮೇಲಧಿಕಾರಿ ಹೇಳಿದ್ದಕ್ಕೆ ಎದುರಾಡದೆ ಒಪ್ಪಿಸಿಕೊಳ್ಳುವವನಾಗಿರಬೇಕು’. ಇಂದಿನ ಅರ್ಥವ್ಯವಸ್ಥೆಗೆ ಇಂತಹ ವ್ಯಕ್ತಿಯೇ ಬೇಕು ಎನ್ನುತ್ತಾರೆ ಆಕೆ. ಆದರೆ ಶೋಚನೀಯ ಸಂಗತಿಯೆಂದರೆ ನಿಜಕ್ಕೂ ಇವರಿಗೆ ತಮ್ಮ ಬದುಕನ್ನು ರೂಪಿಸುವಲ್ಲಿ ಯಾವ ನಿಲುವೂ ಇರುವುದಿಲ್ಲ. ಅವರು ಸ್ವತಂತ್ರವಾಗಿ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ಆದರೆ ಇಂತಹವರನ್ನೇ ನಮ್ಮ ಜಗತ್ತು ‘ಯಶಸ್ವಿ ವ್ಯಕ್ತಿ’ ಎಂದು ಕೊಂಡಾಡುತ್ತದೆ.

ಇವರ ಬಳಿ ಹೋಗುವವರಿಗೆ ಪ್ರಶ್ನೆಗಳೇ ಏಳುವುದಿಲ್ಲ. ಗುರುಗಳೇ ಹೇಳಿದ್ದೇ ವೇದವಾಕ್ಯ. ವಿಜ್ಞಾನ ಓದಿದವರೇ ಬಹಳ ಸಂಖ್ಯೆಯಲ್ಲಿ ಇರುವ ಇವರಲ್ಲಿ ‘ವೈಜ್ಞಾನಿಕ ಮನೋಭಾವ’ ಎಳ್ಳಷ್ಟೂ ಇಲ್ಲ. ಸದ್ಯಕ್ಕೆ ಸದ್ದು ಮಾಡುತ್ತಿರುವ ಸ್ವಾಮಿಯಿಂದ ಮೋಸಗೊಂಡವರ ಪಟ್ಟಿ, ಅವರ ವಿದ್ಯಾರ್ಹತೆ ನೋಡಿದರೆ ಇದು ಗೊತ್ತಾಗುತ್ತದೆ. ಇವರು ನಿಜಕ್ಕೂ ವಿಜ್ಞಾನದ ವಿದ್ಯಾರ್ಥಿಗಳಾ? ಹಾಗಾದರೆ ಇಂದು ನಮ್ಮಲ್ಲಿನ ವಿಜ್ಞಾನದ ಬೋಧನೆ ಯಾವ ದಿಕ್ಕಿನಲ್ಲಿದೆ ಎಂದು ನಾವು ಚಿಂತಿಸುವಂತಾಗಿದೆ.

ಬಹುಶಃ ಇವರಿಗೆ ನಮ್ಮ ಸುತ್ತಲಿನ ಸಮಾಜದ ಬಗೆಗೆ ಕನಿಷ್ಟ ತಿಳುವಳಿಕೆಯೂ ಇಲ್ಲವೇನೋ ಎನಿಸುತ್ತದೆ. ಗುರು ಹೇಳಿದ್ದನ್ನೇ ಪರಮಸತ್ಯವೆಂದು ನಂಬುವ ಇವರಲ್ಲಿ ಅಧ್ಯಯನಶೀಲತೆ ಹುಡುಕುವುದು ಸಾಧ್ಯವೇ ಇಲ್ಲವೇನೋ. ತಮ್ಮ ಸಾಮಾಜಿಕ ಬದ್ಧತೆಯನ್ನೇ ಮರೆತು ವೈಯಕ್ತಿಕ ಲೋಕದಲ್ಲಿ ಹುಸಿ ನೆಮ್ಮದಿಯ ಕವಚ ಹೊತ್ತು ಸಾಗುವ ಇಂತಹ ಜನರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿದ್ದಾರೆ. ಇವರು ಬೋಧಿಸುವ ಈ ಎಲ್ಲ ತಂತ್ರಗಳು ಕ್ಷಣಕಾಲ ಮನಸ್ಸನ್ನು ಹಗುರಗೊಳಿಸುತ್ತವೆ. ಆದರೆ ಅದಕ್ಕೆ ಬಳಸುವ ದಾರಿ ವಾಸ್ತವವನ್ನು ನಮ್ಮ ಕಣ್ಣೆದುರಿಂದ ಮರೆ ಮಾಡುವುದು. ಆಗ ನಾವೇ ಕಟ್ಟಿಕೊಂಡ ಲೋಕದಲ್ಲಿ ನಾವು ಸುಖಿಗಳೆಂಬ ಕಲ್ಪನೆಯಲ್ಲಿ ಮೈಮರೆಯುತ್ತೇವೆ. ಈ ‘ಪೈನ್ ಕಿಲ್ಲರ್’ ತಂತ್ರಗಳು ಕ್ಷಣಕಾಲ ನಮ್ಮನ್ನು ಸಮಸ್ಯೆಗಳಿಂದ ದೂರ ಇರಿಸಬಹುದು. ಮೂಲ ಬೇರಿಗೇ ಸಾಗದ ಚಿಕಿತ್ಸೆಯಿಂದ ಒಳಗೊಳಗೇ ರೋಗ ಉಲ್ಬಣಗೊಳ್ಳುತ್ತಲೇ ಸಾಗುತ್ತದೆ. ನಮ್ಮ ಸಮಾಜದ ಹಲವು ರೋಗಗಳು ಇಂದು ಹೀಗೇ ವಿಷಮ ಸ್ಥಿತಿ ತಲುಪಿದೆ.

ಹಸಿವು ಮತ್ತು ಅವಮಾನ, ಈ ಎರಡನ್ನು ಅನುಭವಿಸದವನು ಅಥವಾ ಅನುಭವಿಸದಿದ್ದರೂ ಇವನ್ನು ಹತ್ತಿರದಿಂದ ಬಲ್ಲವನು ಮಾತ್ರ ನಿಜವಾದ ಮನುಷ್ಯನಾಗಲು ಸಾಧ್ಯ. ನೆಲದಿಂದ ದೂರವೇ ಇದ್ದು ನಾವು ನಂಬಿದ್ದೇ ಆಧ್ಯಾತ್ಮ ಎಂದುಕೊಂಡು ಬದುಕಿನ ಹಲವು ಸಾಧ್ಯತೆಗಳತ್ತ ಕಣ್ಣುಪಟ್ಟಿ ಕಟ್ಟುವ ಈ ಆಧ್ಯಾತ್ಮಿಕ ತಂತ್ರಗಳು ಜನರ ಮೂಢನಂಬಿಕೆಯನ್ನು ನಗದೀಕರಿಸಿಕೊಂಡು ಬಂಡವಾಳಶಾಹಿಯನ್ನು ಬಲಪಡಿಸುವುದರಾಚೆಗೆ ಬೇರೆ ಯಾವ ಬದಲಾವಣೆಯನ್ನೂ ತರಲಾರವು.

8 thoughts on “ಬಂಡವಾಳಶಾಹಿಯನ್ನು ಬಲಪಡಿಸುವ ಪಾಸಿಟಿವ್ ಥಿಂಕಿಂಗ್ ಸ್ವಾಮಿಗಳು

  1. ರಾಕೇಶ್ ಶೆಟ್ಟಿ

    ಈ ಹೈಟೆಕ್ ಸ್ವಾಮೀಜಿಗಳು ನನ್ನ ಕಣ್ಣಿಗೆ ಮೊದಲಿನಿಂದಲೂ Entrepreneurs ಆಗಿಯೇ ಕಾಣುತ್ತಾರೆ. ಯಾಮಾರುವ ಜನಗಳು ಇರುವವರೆಗೂ ಯಾಮಾರಿಸುವವರು ಇದ್ದೆ ಇರುತ್ತಾರೆ.

    Finally … ಒಂದು ಧೀರ್ಘ ಉಸಿರೆಳೆದುಕೊಳ್ಳಿ 🙂

    Reply
  2. vasanth

    Good article. Our college education is so communal. Our teachers are so much happy and asking a extension of bogus program called “Manavathe” or “vikasini” in degree colleges. I came to know that the disciples of Ravishankar guruji used to come to the colleges for training students under these programs. They were telling our student “eating non-veg” is a sin and source of major disease. Our education system also as corrupt as these people.

    Reply
  3. dr.poornananda.m.p.

    lekhana chenngide. adare e hightech swamigalannu nivarisuvudu kashatavagide. namma manteswamy, malemadappa,junjappa,nayakanahatti tippeswamy,mylaralinga heege namma poorvikara aadhyatma punaruthanavagabeku.

    Reply
  4. vinay

    At a personal level , these principles of accepting people and situation as they are really works ….. on the contrary , these points may not work where there is a bigger injustice happing in the society …. I have listned to Guruji many times and I have never seen him advising accepting injustice …. It’s individual discretion to revolt for any injustice in their area …. We should also note that , This Hitech spiritual leaders are greatly contributing in spreading the massage of Indianism and our ancient Indian wisdom in other countries in a big way . We must acknowledge this effort…..

    Reply
  5. Vasanth

    It is not ancient Indian wisdom it is communalism. Hatred among religions. And also spreading their empire all over the world. Why they need big posh banglow kind of building and gunman to protect them if they are truly spiritual.

    Reply
  6. Ananda Prasad

    ಇರುವುದನ್ನು ಇರುವ ಹಾಗೆ ಒಪ್ಪಿಕೊಳ್ಳುತ್ತಿರುವುದರಿಂದಲೇ ನಮ್ಮ ದೇಶದಲ್ಲಿ ಭ್ರಷ್ಟಾಚಾರವೆಂಬುದು ಒಂದು ಸಾಮಾನ್ಯ ವಿದ್ಯಮಾನವಾಗಿದೆ. ಭ್ರಷ್ಟಾಚಾರದ ವಿರುದ್ಧ ಯಾವುದೇ ಸ್ವಾಮೀಜಿಗಳು ಹೋರಾಡುವುದು, ಧ್ವನಿ ಎತ್ತುವುದು ಕಾಣಿಸುತ್ತಿಲ್ಲ. ಭ್ರಷ್ಟರನ್ನು ಜೈಲಿಗೆ ಹೋಗಿ ಭೇಟಿ ಮಾಡುವುದು, ಭ್ರಷ್ಟರು ಜೈಲಿನಿಂದ ಬಿಡುಗಡೆ ಅದಾಗ ಅವರನ್ನು ಸ್ವಾಗತಿಸಲು ಸ್ವಾಮೀಜಿಗಳು ಹೋಗುವುದು, ಭ್ರಷ್ಟರಿಗೆ ನ್ಯಾಯಾಲಯಗಳು ಜಾಮೀನು ನೀಡುವುದು ಇದನ್ನೆಲ್ಲಾ ನೋಡಿದಾಗ ನಾವು ನಾಗರೀಕ ಸಮಾಜ ವ್ಯವಸ್ಥೆಗೆ ಇನ್ನೂ ತಲುಪಿಲ್ಲ ಎಂದು ಕಾಣುತ್ತದೆ. ವಿಠಲನಂಥ ಅಮಾಯಕ ಆದಿವಾಸಿಗಳು ದೇಶಕ್ಕೆ ಗಂಡಾಂತರ, ಹಾಗಾಗಿ ಜಾಮೀನು ನೀಡಲಾಗದು ಎಂದು ಎಂದು ನಮ್ಮ ಹೈಕೋರ್ಟು ಹೇಳುತ್ತದೆ ಆದರೆ ಪರಮ ಭ್ರಷ್ಟರಿಗೆ ಎಗ್ಗಿಲ್ಲದೆ ಜಾಮೀನು ನೀಡುತ್ತದೆ. ಇಂಥ ನ್ಯಾಯಾಲಯಗಳು ಇರುವವರೆಗೆ ನಾವು ನಾಗರೀಕ ಸಮಾಜವನ್ನು ಕಟ್ಟಲು ಸಾಧ್ಯವೂ ಇಲ್ಲ. ಇಂಥ ಒಂದು ಸಮಾಜ ಹಾಗೂ ದೇಶದಲ್ಲಿ ಬದುಕುತ್ತಿರುವುದಕ್ಕಾಗಿ ವ್ಯಥೆಯಾಗುತ್ತದೆ.

    Reply
  7. naveen soorinje

    sooooper ide lekhana…
    “ಅವರು ಯಥಾಸ್ಥಿತಿವಾದಿಗಳು. ಅವರ ಬಳಿಗೆ ಬರುವವರೂ ಆರ್ಥಿಕವಾಗಿ ತುಸು ಉತ್ತಮಮಟ್ಟದಲ್ಲಿದ್ದು ಕ್ಷಣದ ಒತ್ತಡ ಕಳೆದುಕೊಳ್ಳಬಯಸುವವರು. ಒಬ್ಬ ರೈತನನ್ನು, ಒಬ್ಬ ತರಕಾರಿ ಮಾರುವವನನ್ನು, ದಿನಪತ್ರಿಕೆ ಮಾರುವವನನ್ನು ಅವರ ಬಳಿ ನೋಡುವುದು ಸಾಧ್ಯವಿಲ್ಲ. ಎಲ್ಲರೂ ಚೆನ್ನಾಗಿ ಓದಿದವರು, ಮೇಲ್ವರ್ಗದವರು, ಹಣ ಉಳ್ಳವರು.” 100% nija

    Reply

Leave a Reply

Your email address will not be published. Required fields are marked *