Category Archives: ರೂಪ ಹಾಸನ

ಕುವೆಂಪು ರಚಿತ ಮಕ್ಕಳ ನಾಟಕಗಳು


– ರೂಪ ಹಾಸನ


 

ಕುವೆಂಪು ಅವರು ಈ ನಾಡು ಕಂಡ ಶ್ರೇಷ್ಠ ಕವಿ ಹಾಗೂ ದಾರ್ಶನಿಕ. ಇಷ್ಟೇ10156079_609745305782339_685038433_n ಆಗಿದ್ದರೆ ಅವರನ್ನು ಇಂದಿಗೂ ನೆನಪಿಸಿಕೊಳ್ಳುವ ತುರ್ತು ಇರುತ್ತಿರಲಿಲ್ಲ. ಅವರು ಸಮಕಾಲೀನ ವಿಚಾರಗಳಿಗೆ ಸ್ಪಂದಿಸುತ್ತಿದ್ದ ರೀತಿ, ಅವರ ಸಾಮಾಜಿಕ ಕಾಳಜಿ, ಬದುಕಿನ ಹಕ್ಕಿನ ಬಗೆಗೆ ಇದ್ದ ಗೌರವ, ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ನೀಡಿದ ಮಹತ್ವ, ತುರ್ತು ಪರಿಸ್ಥಿತಿಯ ವಿರುದ್ಧ ಅವರು ವ್ಯಕ್ತ ಪಡಿಸಿದ ಆಕ್ರೋಶ….. ಹೀಗೆ ಅವರ ಇಡೀ ಬದುಕೇ ಇತರರಿಗೆ ಮಾದರಿಯಾಗಿರುವಂತದ್ದು. ಕುವೆಂಪು ಅವರ ವೈಚಾರಿಕತೆಗೆ ಇರುವ ಮುಖ್ಯ ಲಕ್ಷಣ ವೈಜ್ಞಾನಿಕ ದೃಷ್ಟಿಕೋನವಾದ್ದರಿಂದಲೇ ಅದು ಸಾರ್ವಕಾಲಿಕತೆಯನ್ನು ಪಡೆದಿದೆ. ಅವರು ಕಥೆ, ಕವಿತೆ, ಕಾದಂಬರಿ, ವಿಚಾರ ಸಾಹಿತ್ಯ, ನಾಟಕ ಅಷ್ಟೇ ಅಲ್ಲದೇ ಮಹಾಕಾವ್ಯವನ್ನು ಬರೆದಷ್ಟೇ ಪ್ರೀತಿಯಿಂದ ಮಕ್ಕಳ ಸಾಹಿತ್ಯ ಕೃಷಿಯನ್ನೂ ಮಾಡಿರುವುದು ಅವರ ಹೆಗ್ಗಳಿಕೆಯಾಗಿದೆ.

ಸಾಮಾನ್ಯವಾಗಿ ಹಿರಿಯರ ಸಾಹಿತ್ಯ-ಚರ್ಚೆ-ಸಂವಾದಗಳಲ್ಲಿ ಮಕ್ಕಳನ್ನು ಮರೆತೇ ಬಿಟ್ಟಿರುತ್ತೇವೆ. ಮಕ್ಕಳ ಸಾಹಿತ್ಯ ಇಂದಿಗೂ ಅತ್ಯಂತ ನಿರ್ಲಕ್ಷಿತ ಕ್ಷೇತ್ರವಾಗಿದೆ. ಹಾಗೇ ಮಕ್ಕಳ ಸಾಹಿತಿಯ ಬಗೆಗೂ ಸಮಾಜದಲ್ಲಿ ಒಂದು ಬಗೆಯ ಅವಜ್ಞೆ ಮನೆಮಾಡಿದೆ. ಹಿರಿಯರಿಗಾಗಿ ಸಾಹಿತ್ಯ ರಚಿಸುವ ಹೆಚ್ಚಿನ ಸಾಹಿತಿಗಳು ಮಕ್ಕಳಿಗಾಗಿ ಸಾಹಿತ್ಯ ರಚಿಸುವುದು ಕೀಳೆಂದು ಭಾವಿಸುತ್ತಾರೆ. ಆದರೆ ನವೋದಯ ಕಾಲದ ಹಲವು ಸಾಹಿತಿಗಳು ಹಿರಿಯರಿಗಾಗಿ ಸಾಹಿತ್ಯ ರಚಿಸುವ ಜೊತೆಗೇ ಮಕ್ಕಳ ಮೇಲಿನ ಪ್ರೀತಿಯಿಂದಲೂ ಕೃತಿಗಳನ್ನು ರಚಿಸಿದ್ದು ಮೆಚ್ಚಬೇಕಾದುದು. ಅದರಲ್ಲಿ ಕುವೆಂಪು ಅವರು ಕೂಡ ಒಬ್ಬರು.

ಮಕ್ಕಳ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ ಗಮನಾರ್ಹವಾದುದೆಂದೇ ಹೇಳಬೇಕು. ಅವರು ರಚಿಸಿದ ಮಕ್ಕಳ ನಾಟಕಗಳು ಎರಡೇ. 1926 ರಲ್ಲಿ ಬರೆದ ‘ಮೋಡಣ್ಣನ ತಮ್ಮ’. ಅದು ಇದುವರೆಗೆ ಆರು ಮುದ್ರಣಗಳನ್ನು ಕಂಡಿದೆ. 1930 ರಲ್ಲಿ ರಚಿಸಿದ ‘ನನ್ನ ಗೋಪಾಲ’ ನಾಟಕ ಏಳು ಮುದ್ರಣಗಳನ್ನು ಕಂಡಿದೆ. ಇದಲ್ಲದೇ ಇಂಗ್ಲೀಷ್ ಕವಿ ರಾಬರ್ಟ್ ಬ್ರೌನಿಂಗ್ ನ ‘ದಿ ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಕವಿತೆಯ ಪ್ರೇರಣೆಯಿಂದ ರೂಪುಗೊಂಡ ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ ಆರ್.ಕೆ.ಲಕ್ಷ್ಮಣ್ ಅವರ ಚಿತ್ರಗಳನ್ನೊಳಗೊಂಡು ರಚಿತವಾದ ಕಥನ ಕಾವ್ಯ ಹಾಗೂ ನೀಳ್ಗಾವ್ಯವಾಗಿದ್ದು, ಮಹಾರಾಜಾ ಕಾಲೇಜಿನ ಕರ್ನಾಟಕ ಸಂಘದ ಕಿರಿಯರ ಕಾಣಿಕೆಯಲ್ಲಿ 1928ರಲ್ಲಿ ಮೊದಲಿಗೆ ಪ್ರಕಟವಾಗಿ, ನಂತರದಲ್ಲಿ ಆರು ಮುದ್ರಣವನ್ನು ಕಂಡಿದೆ. ನನ್ನ ಮನೆ, ಮರಿ ವಿಜ್ಞಾನಿ, ಶಿಶು ಗೀತಾಂಜಲಿ, ಮೇಘಪುರ, ಬೆಳ್ಳಿ ಹಬ್ಬದ ಕಟ್ಟಿದ ಬಳ್ಳಿ ಎಂಬ ಶಿಶುಕಾವ್ಯ ಸಂಕಲನಗಳನ್ನು ಮಕ್ಕಳಿಗೆ ಕಾಣಿಕೆಯಾಗಿ ನೀಡಿರುವ ಕುವೆಂಪು ಅವರು, ಮೀನಾಕ್ಷಿ ಮನೆ ಮೇಷ್ಟ್ರು, ಒಂದು ಯಶಸ್ವೀ ಕಥೆ, ಸನ್ಯಾಸಿ, ಗುಪ್ತಧನ, ಧನ್ವಂತರಿ ಚಿಕಿತ್ಸೆ, ವೈರಾಗ್ಯದ ಮಹಿಮೆ, ನರಿಗಳಿಗೇಕೆ ಕೋಡಿಲ್ಲ ಎಂಬ ಕಥಾ ಸಂಕಲನಗಳನ್ನೂ ರಚಿಸಿದ್ದಾರೆ.

1926ರಲ್ಲಿ ರಚಿತವಾದ ಕುವೆಂಪು ಅವರ ಮೊದಲ ನಾಟಕ, ಹಾಗೂ ಮಕ್ಕಳ ಗೀತ ನಾಟಕವೂ ಆಗಿರುವ ‘ಮೋಡಣ್ಣನ ತಮ್ಮ’ ಮೋಡದ ಜೊತೆಗೆ modannana-tammaಆಡಲು ಬಯಸುವ ಕಿಟ್ಟು ಎಂಬ ಪುಟ್ಟ ಹುಡುಗನ ಕತೆಯಾಗಿದೆ. ಒಂಟಿಯಾಗಿರುವ ಕಿಟ್ಟುವಿಗೆ ಒಮ್ಮೆ ಇದ್ದಕ್ಕಿದ್ದಂತೆ ಆಕಾಶದಲ್ಲಿ ಒಂಟಿಯಾಗಿ ತೇಲುತ್ತಿರುವ ಮೋಡವನ್ನು ನೋಡಿ ತಾನೂ ಅದರ ಜೊತೆಗೆ ಆಕಾಶಕ್ಕೆ ಹಾರಿ ಬಿಡುವ ಮನಸಾಗುತ್ತದೆ. ಅವನು ‘ಓ ಮೋಡಣ್ಣ, ಓ ಮೋಡಣ್ಣ ನಾನೂ ಬರುವೆನು ಕೈ ನೀಡಣ್ಣ’ ಎಂದು ಬೇಡಿಕೊಳ್ಳುತ್ತಾನೆ. ಆದರೆ ಮೋಡಣ್ಣನಿಗೆ ಈ ಹುಡುಗನನ್ನು ತನ್ನೊಂದಿಗೆ ಕರೆದೊಯ್ಯುವ ಮನಸಿಲ್ಲ. ಹೀಗೆಂದೇ ‘ನಿನ್ನ ತಾಯಿ ಬೈಯ್ದಾಳು’ ಎಂಬ ನೆಪವೊಡ್ಡಿ ಹುಡುಗನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಕಿಟ್ಟುವಿಗೆ ಎತ್ತರದಲ್ಲಿ ತೇಲುವ ಮೋಡ, ಅದರ ಆಟ, ಮಿಂಚನ್ನೇ ಬಳೆಯಾಗಿ ಧರಿಸಿರುವ, ಗುಡುಗಿನೊಂದಿಗೆ ಆಡುವ ಎತ್ತರೆತ್ತರದ ಬೆಟ್ಟಗಳನ್ನು ಏರುವ, ದೂರ ದೂರದ ಊರುಗಳನ್ನು ನೋಡುವ ಮೋಡದ ಬದುಕು ವಿಶಿಷ್ಟವಾದುದು ಎನ್ನಿಸಿಬಿಟ್ಟಿದೆ. ಅದಕ್ಕೆ ಮೋಡದೊಡನೆ ಹೋಗಲು ತುದಿಗಾಲಲ್ಲಿ ನಿಂತಿದ್ದಾನೆ. ಆದರೆ ಮೋಡ ಒಪ್ಪುತ್ತಿಲ್ಲ. ಹೀಗಾಗಿ ಕಿಟ್ಟು ಬೆಟ್ಟದ ಮೊರೆ ಹೋಗುತ್ತಾನೆ. ಇಡೀ ದಿನ ಬೆಟ್ಟದಲ್ಲೇ ಅಲೆವ ಕಿಟ್ಟುವಿಗೆ ಅದೂ ಒಬ್ಬ ಮಿತ್ರ. ಬೆಟ್ಟ ಕಿಟ್ಟುವಿನ ಪರವಾಗಿ ಮೋಡವನ್ನು ಬೇಡಿಕೊಳ್ಳುತ್ತದೆ. ಇಲ್ಲಿ ಕುವೆಂಪು ಅವರ ಕಲ್ಪನಾ ಶಕ್ತಿಯನ್ನು ಗಮನಿಸಬೇಕು.

ಶರಧಿಯ ನೀರನೆ ಹೊರುವಾ ನಿನಗೆ
ಕಿರಿಯವನಿವನತಿ ಭಾರವೆ, ಅಣ್ಣಾ?
ಸಿಡಿಲನು ಮಿಂಚನು ಆಳುವೆ ನೀನು
ಹುಡುಗನ ಆಳುವುದಸದಳವೇನು
ರೈತರ ನಿಂದೆಯ ಸೈರಿಪ ನೀನು
ತಾಯಿಯ ದೂರನು ಹೊಂದಿದರೇನು?

ಎನ್ನುತ್ತಾರೆ. ಆದರೆ ಮೋಡ ಇದಕ್ಕೂ ಜಗ್ಗುವುದಿಲ್ಲ. ಹತ್ತು ಕಡಲನ್ನ ಹೊತ್ತರೂ ಒಬ್ಬ ಹುಡುಗನನ್ನ ಹೊರಲಾರೆ. ರೈತರ ಗುಂಪೇ ಬೈಯ್ಯಬಹುದು, ಆದರೆ ತಾಯಿಯ ಶಾಪವನ್ನು ಸಹಿಸಲಾರೆ ಎನ್ನುತ್ತದೆ ಮೋಡ. ತಾಯಿಯ ಘನತೆಯನ್ನೂ ಈ ಮೂಲಕ ಕುವೆಂಪು ಅವರು ಸೂಕ್ಷ್ಮದಲ್ಲೇ ಎತ್ತಿ ಹಿಡಿಯುತ್ತಾರೆ. ಮತ್ತೆ ಮತ್ತೆ ಕಿಟ್ಟು ಮೋಡವನ್ನು ಬೇಡಿಕೊಳ್ಳುತ್ತಾನೆ. ಮೋಡದ ಮನೆಯಲ್ಲಿ ಉಳಿಯಲು ಕೊಡೆ, ಕಂಬಳಿ, ಹಾಸಿಗೆ, ಹೊದಿಕೆ ಎಲ್ಲವನ್ನೂ ತರುತ್ತೇನೆ ಒಂದೇ ದಿನ ಉಳಿದು ವಾಪಸ್ ಬಂದು ಬಿಡುತ್ತೇನೆ ಎನ್ನುತ್ತಾನೆ. ಮೋಡದಲ್ಲಿ ಹುಲಿ, ರಾಕ್ಷಸರು, ದೊಡ್ಡ ಊರುಗಳನ್ನು, ಕುರಿಗಳ ಹಿಂಡು, ಹೊಳೆ, ತೊರೆ, ಕಡಲು, ದಟ್ಟಡವಿಗಳನ್ನು ಕಾಣುತ್ತಿದ್ದೇನೆ ಎನ್ನುವ ಕಿಟ್ಟುವಿನ ಕಣ್ಣಿನ ಮೂಲಕ ಕುವೆಂಪು ಅವರು ಮಕ್ಕಳ ಮುಗ್ಧ ಕಾಲ್ಪನಿಕ ಹಾಗೂ ಭಾವುಕ ಜಗತ್ತನ್ನು ಕಟ್ಟಿಕೊಡುತ್ತಾರೆ. ನಂತರ ಕಿಟ್ಟು ಕಾಡನ್ನು ತನ್ನ ಪರವಾಗಿ ಮೋಡದ ಬಳಿ ಬೇಡಿಕೊಳ್ಳಲು ತಿಳಿಸುತ್ತಾನೆ. ಆದರೆ ಕಾಡಿಗೆ ಇಡೀ ಮನುಜ ಕುಲದ ಬಗ್ಗೆಯೇ ಅಸಹನೆ. ಮರಗಳನ್ನು ಕಡಿದು ಕಾಡನ್ನು ನಾಶಪಡಿಸುತ್ತಿರುವ, ಹೊಸ ಕಾಡನ್ನು ರೂಪಿಸಲು ಸಿದ್ಧವಿಲ್ಲದ ಮನುಷ್ಯರ ಸಂತತಿಯ ಕಿಟ್ಟುವನ್ನೂ ನಿನ್ನೊಂದಿಗೆ ಕರೆದೊಯ್ಯ ಬೇಡ ಎಂದು ಹೇಳುವ ಕಾಡಿನ ಮೂಲಕ, ಕಾಡಿನ ಮೂಕ ನೋವುಗಳ ಎಲ್ಲ ಮುಖಗಳನ್ನೂ ಕುವೆಂಪು ಅನಾವರಣಗೊಳಿಸುತ್ತಾ ಮಕ್ಕಳ ಮನಸಿನಲ್ಲಿ ಪ್ರಕೃತಿ ಪ್ರೀತಿಯನ್ನೂ ಮೂಡಿಸುವ ಪ್ರಯತ್ನ ಮಾಡುತ್ತಾರೆ.

ಪುರಾಣದಲ್ಲಿ ಚರ್ಚಿತವಾದ ಮೋಡದ ಕುರಿತ ವಿವರಗಳು, ಲೌಕಿಕ ಜಗತ್ತಿನ ವಿವರಗಳನ್ನು ಒಳಗೊಂಡಂತೆ, ಮೋಡದ ಬಾಯಿಂದ ಮಕ್ಕಳಿಗೆ ನೈತಿಕತೆಯ ಪಾಠವನ್ನು ಹೇಳಿಸುವುದನ್ನೂ ಇಲ್ಲಿ ಕಾಣುತ್ತೇವೆ. ಆದರ್ಶ ಪುರುಷರನ್ನೆಲ್ಲಾ ಕಿಟ್ಟುವಿಗೆ ಹೋಲಿಸಿ ಅವರಂತೆ ನೀನೂ ಆಗಬೇಕೆಂದು ಮೋಡ ಹಾರೈಸುತ್ತದೆ. ಅಷ್ಟರಲ್ಲಿ ಅವನ ತಾಯಿ ಕರೆಯುತ್ತಾಳೆ. ಮೋಡದ ಬಳಿ ಕಿಟ್ಟುವಿನ ಬೇಡಿಕೆಯೂ ಕರಗಿರುತ್ತದೆ. ಅವನು ಸಂತೋಷದಿಂದ ಮೋಡವನ್ನು ಬೀಳ್ಗೊಡುತ್ತಾನೆ ಎಂಬಲ್ಲಿಗೆ ನಾಟಕ ಮುಗಿಯುತ್ತದೆ. ನಾಟಕದ ಓದಿಗಿಂತ, ಅಭಿನಯದ ಮೂಲಕ ನಾಟಕ ಹೆಚ್ಚು ಸಮರ್ಥವೂ ಸಾರ್ಥಕವೂ ಆಗುವುದು ನಿಜ. ಅಲ್ಲಲ್ಲಿ ಕೆಲವು ಮುಖ್ಯ ತಿದ್ದುಪಡಿಯೊಂದಿಗೆ ಈ ‘ಮೋಡಣ್ಣನ ತಮ್ಮ’ ನಾಟಕದ ಕೆಲವು ಯಶಸ್ವಿ ರಂಗ ಪ್ರಯೋಗಗಳೂ ಆಗಿವೆ ಎಂದು ಕೇಳಿದ್ದೇನೆ.

ಇನ್ನು ಕುವೆಂಪು ಅವರ ಎರಡನೆಯ ಮಕ್ಕಳ ನಾಟಕ 1930 ರಲ್ಲಿ ರಚಿತವಾದ ‘ನನ್ನ ಗೋಪಾಲ’. nanna-gopalaಇದರಲ್ಲಿ ದೇವರು ಮಗುವಿನ ಮುಗ್ಧತೆಗೆ ಒಲಿಯುತ್ತಾನೆ, ಕರ್ಮಠರಿಗಲ್ಲ ಎಂಬ ಸಂದೇಶವಿದೆ. ಬಡ ವಿಧವೆ ತಾಯಿಯೊಡನೆ ಕಾಡಿನ ಅಂಚಿನಲ್ಲಿ ವಾಸಿಸುವ ಬಾಲಕ ಗೋಪಾಲ, ಶಾಲೆಗೆ ಕಾಡನ್ನು ದಾಟಿ ಹೋಗ ಬೇಕಾದ ಅನಿವಾರ್ಯತೆ ಇದೆ. ಶ್ರೀಮಂತರ ಮನೆಯ ಮಕ್ಕಳಿಗೆ ಕಾಡನ್ನು ದಾಟಿ ಹೋಗಲು ಆಳುಗಳು ಜೊತೆಗಿದ್ದಾರೆ. ಕೃಷ್ಣನಲ್ಲಿ ನಿಷ್ಕಲ್ಮಶ ಭಕ್ತಿ ಇರುವ ಗೋಪಾಲನ ತಾಯಿ ತನ್ನ ಮಗನ ಜವಾಬ್ದಾರಿಯನ್ನು ಅವನಿಗೇ ವಹಿಸಿ ನಿಶ್ಚಿಂತಳಾಗಿದ್ದಾಳೆ. ಕಾಡಿನಲ್ಲಿ ಹೆದರಿಕೆಯಾದಾಗಲೆಲ್ಲ ಬಾಲಕ ಗೋಪಾಲ, ತನ್ನ ಅಣ್ಣನೆಂದು ತಾಯಿ ಹೇಳಿಕೊಟ್ಟ ಕೃಷ್ಣನನ್ನೇ ಕರೆದು ತನ್ನ ಭಯವನ್ನು ಹಂತ ಹಂತವಾಗಿ ಮೀರುತ್ತಲೇ ಕೃಷ್ಣನೊಂದಿಗೆ ಆಪ್ತತೆ ಮೂಡಿಬಿಡುತ್ತದೆ. ತಾಯಿಗೂ ಇದನ್ನು ತಿಳಿದು ಅತ್ಯಂತ ನಿರಾಳತೆ. ಕುವೆಂಪು ಅವರು ಬಾಲ್ಯವನ್ನು ವಿಶೇಷ ದೃಷ್ಟಿಯಿಂದ ಇಲ್ಲಿ ವಿವರಿಸಿದ್ದಾರೆ. ಮಗುವಿನ ಮನಸ್ಸನ್ನು ಹೊಕ್ಕು ಅದರ ಮನಸ್ಸಿನಲ್ಲಿ ಇರುವ ಬಾಲ್ಯ ಸಹಜವಾದ ಕುತೂಹಲ, ತಳಮಳ, ಆತಂಕಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕಾಡಿನಲ್ಲಿನ ಕೃಷ್ಣ ಹಾಗು ಗೋಪಾಲರ ಆತ್ಮೀಯ ಮಾತುಕತೆಗಳಲ್ಲಿ ಮಕ್ಕಳ ಮುಗ್ಧ ಲೋಕದ ಅನಾವರಣವಿದೆ. ಗೋಪಾಲನ ಕುತೂಹಲದ ಪ್ರಶ್ನೆಗಳು ಹಾಗೂ ಕೃಷ್ಣನ ಸಮಂಜಸ ಉತ್ತರಗಳಲ್ಲಿ ಲೋಕದ ಎಲ್ಲ ವ್ಯಾಪಾರಗಳೂ ಮಗುವಿನ ನಿರ್ಮಲ ಮನಸ್ಸಿನ ಒಳತೋಟಿಯನ್ನು ಹಿಡಿದೇ ಚಲಿಸುತ್ತವೆ. ಶಾಲೆಯ ಗುರುಗಳು ತಮ್ಮ ಮನೆಯಲ್ಲಿ ವಿಶೇಷ ಮಂಗಳ ಕಾರ್ಯ ನಡೆಯುವುದೆಂದು ಗುರುದಕ್ಷಿಣೆ ನೀಡಬೇಕೆಂದು ಶಿಷ್ಯರಲ್ಲಿ ಕೇಳಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಗೋಪಾಲನ ತಾಯಿ ತನ್ನ ಬಳಿ ಕೊಡಲು ಏನೂ ಇಲ್ಲವೆಂದು ಅಣ್ಣನೆಂದೇ ತಿಳಿದ ಬನದ ಕೃಷ್ಣನಲ್ಲೇ ಕಾಣಿಕೆ ಕೇಳೆಂದು ಹೇಳುತ್ತಾಳೆ. ಕೃಷ್ಣ ಒಂದು ಕುಡಿಕೆಯಲ್ಲಿ ಮೊಸರು ಕೊಟ್ಟು ಕಳಿಸುತ್ತಾನೆ. ಶ್ರೀಮಂತರ ಮನೆಯ ಮಕ್ಕಳೆಲ್ಲ ಬೆಲೆ ಬಾಳುವ ವಸ್ತುಗಳನ್ನು ಕಾಣಿಕೆಯಾಗಿ ತಂದಿದ್ದು, ಅವರೆಲ್ಲ ಗೋಪಾಲನ ಕುಡಿಕೆಯ ಮೊಸರನ್ನು ತಮಾಷೆಯಾಗಿ ಆಡಿಕೊಂಡು ನಗುವ ಚಿತ್ರಣವನ್ನು ಕುವೆಂಪು ಅವರು ಅತ್ಯಂತ ಸಹಜವಾಗಿ ಮಕ್ಕಳ ತುಂಟ ಮನಸಿನಾಳವನ್ನು ಅರಿತವರಂತೆ ಚಿತ್ರಿಸಿದ್ದಾರೆ.

ಕುಡಿಕೆಯ ಮೊಸರು ಪಾತ್ರೆಗೆ ಎಷ್ಟು ಸುರಿದರೂ ಮತ್ತೆ ಮತ್ತೆ ತುಂಬುವ ಕಾಲ್ಪನಿಕತೆಯನ್ನೂ ಮಕ್ಕಳ ಮನೋಲೋಕದ ಪರಿಧಿಗೆ ಹಿಗ್ಗಲಿಸಿ ಕಟ್ಟಿಕೊಡುವ ಕುವೆಂಪು ಅವರು ಗುರುಗಳ ಮೂಲಕ ಗೋಪಾಲನ ತಾಯಿಯ ಹಿರಿಮೆಯನ್ನು ಕುರಿತು ಹೇಳಿಸುತ್ತಾ ಇಡೀ ವಿಶ್ವದ ತಾಯಂದಿರ ಹೃದಯ ವೈಶಾಲ್ಯತೆಯನ್ನೇ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಕೊನೆಯ ಅಂಕದಲ್ಲಿ ಗೋಪಾಲ ಮತ್ತು ಗುರುಗಳೊಂದಿಗೆ ಅ ಅಕ್ಷಯ ಮೊಸರನ್ನು ಕೊಟ್ಟ ಬನದ ಕೃಷ್ಣನನ್ನು ನೋಡಲು ಎಲ್ಲ ಹುಡುಗರೂ ಹೋಗುತ್ತಾರೆ. ಗೋಪಾಲ ಎಷ್ಟು ಕರೆದರೂ ಕೃಷ್ಣ ಕಾಣಿಸದಿದ್ದಾಗ, ಅವನು ದರ್ಶನ ತೋರುವಂತೆ ಕೃಷ್ಣನಲ್ಲಿ ಕಣ್ಣು ತುಂಬಿ ಬೇಡಿಕೊಳ್ಳುತ್ತಾನೆ. ಕೊನೆಗೆ ಅವನ ದನಿಯಷ್ಟೇ ಕೇಳುತ್ತದೆ, ಅವನು ಪ್ರತ್ಯಕ್ಷನಾಗುವುದಿಲ್ಲ. ಈ ಮೂಲಕ ಗೋಪಾಲ ಮತ್ತು ಅವನ ತಾಯಿಯ ಪ್ರಾಮಾಣಿಕ ಭಕ್ತಿ ಮತ್ತು ಪ್ರೀತಿಗಳು ಗೆಲ್ಲುವುದನ್ನು ಕುವೆಂಪು ಅವರು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ. ಹಾಗೇ ಈ ನಾಟಕ ಪುರಾಣ ಪ್ರತಿಮೆಯ ಪುನರ್ ಸೃಷ್ಟಿಯನ್ನು ಮಾಡುತ್ತಾ ಮನಸ್ಸಿನ ಅಂತರ್ ದೃಷ್ಟಿಯ ಕಡೆಗೆ ಒತ್ತು ಕೊಡುವುದನ್ನು ಕಾಣುತ್ತೇವೆ. ಈ ನಾಟಕವೂ ಯಶಸ್ವಿ ರಂಗ ಪ್ರಯೋಗವನ್ನು ಕಂಡು ಮಕ್ಕಳ ಮನಸನ್ನು ಗೆದ್ದಿದೆ.

‘ನನ್ನ ಗೋಪಾಲ’ ನಾಟಕವನ್ನು ಓದಿದ ಶ್ರೀ ಎ. ಆರ್, ಕೃಷ್ಣಶಾಸ್ತ್ರಿಗಳು ಕುವೆಂಪು ಅವರಿಗೆ ಬರೆದ ಪತ್ರದಲ್ಲಿ “ನಿಮ್ಮ ‘ನನ್ನ ಗೋಪಾಲ’ನಾಟಕ ಭಗವದ್ಗೀತೆ ಮತ್ತು ಭಾಗವತ ಎರಡರ ಸಾರಸರ್ವಸ್ವವನ್ನೂ ತನ್ನಲ್ಲಿ ಒಳಗೊಂಡಿರುವ ಒಂದು ಪುಟ್ಟ ಅನಘ್ರ್ಯ ರತ್ನ. ಕಣ್ಣೀರು ತುಂಬಿ ಅದನ್ನು ಓದಿದ್ದೇನೆ.” ಎನ್ನುತ್ತಾರೆ. ಬಹುಶಃ ಇದು ಕುವೆಂಪು ಅವರ ನಾಟಕಕ್ಕೆ ಸಿಕ್ಕ ಬಹು ದೊಡ್ಡ ಮೆಚ್ಚುಗೆ. ಆದರೆ ಈ ಎರಡೂ ಮಕ್ಕಳ ನಾಟಕದಲ್ಲಿ ಇರಲೇಬೇಕಾದ ರಂಜನೆ ಹಿಡಿದಿಡುವಂತಹ ಗುಣಕ್ಕಿಂತಾ ಹೆಚ್ಚಾಗಿ ಉಪದೇಶಾತ್ಮಕ, ಆದರ್ಶಮಯ ನೆಲೆಯಲ್ಲಿ ಚಿತ್ರಿತವಾಗಿದೆ. ಇಂದಿನ ಮಕ್ಕಳಿಗೆ 80-90 ವರ್ಷಗಳ ಹಿಂದೆ ರಚಿತವಾದ ಕುವೆಂಪು ಅವರ ಈ ನಾಟಕಗಳು ಹೇಗೆನ್ನಿಸುತ್ತದೆ ಎಂದು ತಿಳಿದುಕೊಳ್ಳಲೆಂದೇ ಈ ನಾಟಕಗಳನ್ನು ನಮ್ಮ ಮಕ್ಕಳ ಸಂಸ್ಥೆ ಪ್ರೇರಣಾ ವಿಕಾಸ ವೇದಿಕೆಯ ಸಾಹಿತ್ಯಾಸಕ್ತ ಮಕ್ಕಳಿಗೆ ಓದಲು ನೀಡಿದ್ದೆ. ಅವರು ಅದರ ಒಟ್ಟು ಕಥೆಯ ಸಾರಾಂಶವನ್ನು ಇಷ್ಟಪಟ್ಟರೂ ಅದರಲ್ಲಿ ತಮ್ಮನ್ನ ಕಾರ್ಟೂನು ಅಥವಾ ಮಕ್ಕಳ ಇತ್ತೀಚೆಗಿನ ನಾಟಕ ಹಾಗೂ ಮಕ್ಕಳ ಟಿವಿ ಶೋಗಳು ಹಿಡಿದಿಡುವಂತೆ ಹಿಡಿದಿಡಲ್ಲ ಎಂದು ಆರೋಪಿಸಿದರು. ಒಂದಿಷ್ಟು ನೀರಸವಾಗಿದೆ ಎಂಬ ಆಕ್ಷೇಪವನ್ನೂ ಮಾಡಿದರು. ಅದೂ 8 ರಿಂದ 10-12 ವರ್ಷದ ಮಕ್ಕಳಿಗಷ್ಟೇ ಇಂತಹ ಮುಗ್ಧ ಲೋಕದ ಕಥೆಗಳು ಇಷ್ಟವಾಗುತ್ತವೆಯೇ ಹೊರತು ಅದಕ್ಕಿಂತಾ ದೊಡ್ಡ ಮಕ್ಕಳಿಗೆ ಇಂತಹ ಭಾವುಕ ಕಥಾ ಹಂದರ ಹಿಡಿಸುವುದಿಲ್ಲ. ಆದರೆ ‘ಕಿಂದರಿ ಜೋಗಿ’ಯನ್ನು ಮಕ್ಕಳು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಈ ನೀಳ್ಗಾವ್ಯ ಸಶಕ್ತವಾಗಿ ಮಕ್ಕಳ ಮನಸ್ಸನ್ನು ಗೆಲ್ಲಲು ಸಫಲವಾಗಿದೆ ಎಂದೇ ಹೇಳಬೇಕು.

ಅವರ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ಮಕ್ಕಳ ಕಥನಕಾವ್ಯವಾದರೂ ಅದು ತನ್ನ 7325e9bab174325596e65326641444341587343ನಾಟಕೀಯ ಗುಣಗಳಿಂದ ಅದ್ಭುತ ನಾಟಕವಾಗಿ ಮಾರ್ಪಟ್ಟಿದೆ. ಈ ಕಥೆಯ ಭಾಷೆಯ ಲಾಲಿತ್ಯ ಎಂಥಹಾ ಅರಸಿಕ ಮಗುವನ್ನೂ ಹಿಡಿದಿಡುವಷ್ಟು ಸಶಕ್ತವಾಗಿದೆ. ಕಿಂದರಿಜೋಗಿ ಈ ಹೊತ್ತಿಗೂ ಮಕ್ಕಳನ್ನು ಬೆರಗುಗೊಳಿಸುವ ಸಾಮರ್ಥ್ಯ ಹೊಂದಿದೆ. ಅದರ ಕಥಾ ಹಂದರ, ಸ್ವಾರಸ್ಯಕರ ನಿರೂಪಣೆ, ತಮಾಷೆಯ ಪ್ರಸಂಗಗಳು ಎಲ್ಲವೂ ಮನವನ್ನು ಸೆಳೆಯುತ್ತವೆ. ಇದು ವಿದೇಶಿ ಕಥೆಯ ರೂಪಾಂತರವಾದರೂ ನಮ್ಮ ಸಾಮಾಜಿಕ ಪರಿಸರದಲ್ಲಿಯೇ ಸಂಭವಿಸಿದಂತೆ, ಕನ್ನಡ ನಾಡಿನ ಮಣ್ಣಿನ ಹದವನ್ನು ತುಂಬಿ ಕುವೆಂಪು ಅವರ ಕಥನ ಸಾಮರ್ಥ್ಯದ ಮೂಲಕ ಪುನರ್ ಸೃಷ್ಟಿಯಾಗಿದೆ. ಇದು ಮೇಲ್ನೋಟಕ್ಕೆ ಮಕ್ಕಳ ನೀತಿ ಕಥೆಯಂತೆ ಕಂಡರೂ ಅದರೊಳಗೆ ಮಕ್ಕಳ ಮನೋಲೋಕವನ್ನು ವಿಸ್ತರಿಸುವ ಕಾಲ್ಪನಿಕ ಜಗತ್ತು ಅದ್ಭುತವಾಗಿ ಹೆಣೆದುಕೊಂಡಿದೆ.

ಕುವೆಂಪು ಅವರು ಈ ಕವಿತೆಯನ್ನು ಮೊದಲಿಗೆ ಶಿವಮೊಗ್ಗದ ಸಭೆಯೊಂದರಲ್ಲಿ ವಾಚಿಸಿದಾಗ ಪ್ರತಿ ನುಡಿಗೂ ದೀರ್ಘ ಕರತಾಡನದ ಪ್ರತಿಕ್ರಿಯೆ ದೊರಕಿತ್ತಂತೆ. ಮಕ್ಕಳಿಗೆ ಇಲಿಗಳ ದೊಡ್ಡ ಬಳಗದ ಕತೆ, ಅವುಗಳ ಅಸಾಧ್ಯ ಚೇಷ್ಟೆ ಖಂಡಿತಾ ರಂಜನೆಯ ಸಂಗತಿಯೇ. ಕಿನ್ನರಿಯ ನಾದಕ್ಕೆ ಇದ್ದಕ್ಕಿದ್ದ ಹಾಗೆ ಎಲ್ಲ ಅವನನ್ನು ಹಿಂಬಾಲಿಸುವುದು, ನೀರಲ್ಲಿ ಮುಳುಗಿ ಹೋಗುವುದು, ಹಾಗೇ ಮಕ್ಕಳೆಲ್ಲಾ ಹಿಂಬಾಲಿಸುವುದು, ಬೆಟ್ಟ ಬಾಯ್ದೆರೆದು ಅವರೆಲ್ಲಾ ಅದರೊಳಗೆ ಹೋಗಿಬಿಡುವುದು, ಅವಾಸ್ತವದ ಸಂಗತಿಗಳಾಗಿಯೂ ಬಾಲ ಮನಸ್ಸಿನ ಕುತೂಹಲವನ್ನು, ಅಚ್ಚರಿಯನ್ನು ಇಮ್ಮಡಿಗೊಳಿಸುತ್ತದೆ. ಹೀಗಾಗಿಯೇ ಮಕ್ಕಳಿಗೆ ಇದು ಹಿಡಿಸಿದೆ ಮತ್ತು ಮುದಗೊಳಿಸಿದೆ.

ಬಾಲ್ಯದ ಕುರಿತು, ಕಳೆದುಹೋದ ಆ ಸಮಯದ ಕುರಿತು ಮರಳಿ ಅದನ್ನು ಪ್ರಕೃತಿಯ ಮಡಿಲಲ್ಲಿ ಪಡೆಯುವ ಕುರಿತು ಕುವೆಂಪು ಅವರು ಹಲವು ನಾಟಕಗಳಲ್ಲಿ ಬರೆಯುತ್ತಾ ಬಾಲ್ಯದ ಕುರಿತ ತಮ್ಮ ಅತ್ಯಂತ ಸಂತಸದ ಸಂಗತಿಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಬಾಲ್ಯ ಒಂದು ಅಪರೂಪದ ಸಮಯ, ಮತ್ತೆಂದೂ ಸಿಗಲಾರದೇ ಹೋಗಿ ಬಿಡುತ್ತದೆ ಎಂಬ ಲಹರಿಯೊಂದಿಗೆ, ಬಾಲ್ಯವನ್ನು ದೈವೀಕವಾಗಿ ಕಾಣುವ ಕಣ್ಣು ನಮಗೆ ಕುವೆಂಪು ಅವರ ಎಲ್ಲ ಮಕ್ಕಳ ಸಾಹಿತ್ಯದಲ್ಲೂ ಸಿಗುತ್ತದೆ. ಬಾಲ್ಯವೆಲ್ಲ ಬದುಕಿನ ತಯಾರಿಗಾಗಿ ಸಿದ್ಧಗೊಳಿಸುವ ಹಂತವಾಗಿ ಕಾಣದೇ ಅದರಲ್ಲಿಯೂ ಒಂದು ಬಗೆಯ ಪರಿಪೂರ್ಣತೆಯನ್ನು ಕಾಣುವ ಬಗೆ ಇಲ್ಲೆಲ್ಲ ಗೋಚರಿಸುತ್ತದೆ.

ತಾಯಿ, ಮಗು ಮತ್ತು ಪ್ರಕೃತಿಯ ನಡುವಿನ ಸಂಬಂಧದ ಗಾಢತೆ ಹಾಗೂ ನಿಗೂಢತೆ ಪ್ರಕೃತಿ ಸಹಜವಾದರೂ ಅಪರೂಪದ ಭಾವಲೋಕಕ್ಕೆ ಕರೆದೊಯ್ಯುವ ಶಕ್ತಿ ಕುವೆಂಪು ಅವರಿಗಿದೆ. ಹೀಗೆಂದೇ ಅವರು ರಚಿಸಿದ ಮಕ್ಕಳ ಕಥೆ, ಕವಿತೆ, ನಾಟಕಗಳಲ್ಲೆಲ್ಲಾ ಈ ಬಗೆಯ ಭಾವ ಲೋಕವನ್ನು ಕಾಣುತ್ತೇವೆ. ಮಕ್ಕಳ ಮನೋರಂಗದ ಸಹಜವಾದ ಹರಿವು ಮತ್ತು ಪರಕಾಯ ಪ್ರವೇಶದ ಸಾಧ್ಯತೆಯನ್ನು ಅವರ ಇಂತಹ ಅಭಿವ್ಯಕ್ತಿಗಳಲ್ಲಿ ಕಾಣಬಹುದಾಗಿದೆ. ನೈಜವಾಗಿ ಎಲ್ಲ ಮಕ್ಕಳಲ್ಲಿ ಕಾಣುವ ಮನೋಲೋಕದ ಭಾವಲಹರಿಗಳು ಈ ಎರಡು ಮಕ್ಕಳ ನಾಟಕಗಳಲ್ಲೂ ಕೆಲಸ ಮಾಡಿದೆ. ಅವರ ಅನೇಕ ಮಕ್ಕಳ ಕಥೆಗಳಲ್ಲೂ ನಾಟಕೀಯ ಗುಣವಿರುವುದರಿಂದ ಅವೂ ಕೂಡ ಯಶಸ್ವಿಯಾಗಿ ನಾಟಕಗಳಾಗಿ ಪರಿವರ್ತನೆ ಹೊಂದಿ ಪ್ರದರ್ಶನಗೊಳ್ಳಲು ಸಾಧ್ಯವಾಗಿದೆ. ಆದರೆ ಮಕ್ಕಳ ರಂಗ ಸಾಧ್ಯತೆಗಳು ಇಂದಿಗೂ ಕೆಲವು ಪ್ರಮುಖ ಪಟ್ಟಣಗಳಿಗಷ್ಟೇ ಸೀಮಿತವಾಗಿರುವುದರಿಂದ, ಅವುಗಳನ್ನು ಹೊರತು ಪಡಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕುವೆಂಪು ಅವರ ನಾಟಕಗಳು ಸಾಹಿತ್ಯವಾಗಿಯಷ್ಟೇ ತಲುಪುವುದೂ ಅವರ ಕಲ್ಪನೆಯ ಪರಿಧಿಯನ್ನು ವಿಸ್ತರಿಸಲು ಇರುವ ಒಂದು ತೊಡಕು ಎಂದು ನಾನು ಭಾವಿಸುತ್ತೇನೆ.

ಕುವೆಂಪು ಅವರಿಗೆ ಮಕ್ಕಳ ಬಗೆಗಿದ್ದ ಅನನ್ಯ ಪ್ರೀತಿಯ ಹಾಗೂ ಅವನು ದೊಡ್ಡವನಾಗುತ್ತಾ ಹೋದಂತೆ ದುರ್ಗುಣಗಳು ಬೆಳೆಯುತ್ತಾ ಪಶುವಾಗುವ ವಿಪಯರ್ಯಾಸವನ್ನು ಕುರಿತು ರಚಿಸಿದ ಈ ಪುಟ್ಟ ಕವಿತೆಯನ್ನು ಓದಿ,

ದೊಡ್ಡವರೆಲ್ಲರ ಹೃದಯದಿ ಕಟ್ಟಿಹ
ತೊಟ್ಟಿಲ ಲೋಕದಲಿ
ನಿತ್ಯ ಕಿಶೋರತೆ ನಿದ್ರಿಸುತಿರುವುದು
ವಿಸ್ತೃತ ನಾಕದಲಿ
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯ ಶಿಶು
ಹಾಡಲಿ ಕುಣಿಯಲಿ ಹಾರಲಿ ಏರಲಿ
ದಿವಿಜತ್ವಕೆ ಈ ಮನುಜ ಪಶು.

ಮನುಷ್ಯ ಮಗುವಾದರೆ ಅಥವಾ ಮಗುವಿನ ಮುಗ್ಧತೆ ಉಳಿಸಿಕೊಂಡರೆ ಸಾಕು ಅವನು ದೇವರಿಗೆ ಸಮಾನ ಎಂಬ ಕುವೆಂಪು ಅವರ ಕಲ್ಪನೆ ನಿಜಕ್ಕೂ ಇಂದಿನ ಕ್ಷುದ್ರಗೊಂಡ ಬದುಕಿಗೆ ಅತ್ಯಂತ ಅವಶ್ಯಕ ಎಂದು ಭಾವಿಸುವೆ.

ಭೈರಪ್ಪನವರ ’ಕವಲು’ ನಾನೇಕೆ ನಿರಾಕರಿಸುತ್ತೇನೆ?


– ರೂಪ ಹಾಸನ


 

[ಇಂದು ಮತ್ತೆ ಮಹಿಳಾ ದಿನಾಚರಣೆ ಬಂದಿದೆ. ಇದು ಮಹಿಳಾ ಬದುಕಿನ ಅವಲೋಕನದ ಜೊತೆಗೆ ಮಹಿಳೆಯೆಡೆಗಿನ ಪುರುಷ ಪ್ರಪಂಚದ ಧೋರಣೆಯ ಅವಲೋಕನವೂ ಆಗಿರುತ್ತದೆಂದು ನಾನು ಭಾವಿಸುತ್ತೇನೆ. ಆ ಹಿನ್ನೆಲೆಯಲ್ಲಿ ಈ ಬರಹ.]

ಕನ್ನಡದ ಹಿರಿಯ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪನವರ ಹೊಸ ಕಾದಂಬರಿ ’ಕವಲು’ ವಾರದೊಳಗೆ ನಾಲ್ಕನೆಯ ಮುದ್ರಣ ಕಂಡ ಹಿನ್ನೆಲೆಯಲ್ಲಿ 2010 ಜುಲೈ ಒಂದರಂದು ಪ್ರಜಾವಾಣಿಯಲ್ಲಿ ಅವರ ಕಿರು ಸಂದರ್ಶನ ಪ್ರಕಟವಾಗಿತ್ತು. ಅದರಲ್ಲಿ ಕಾದಂಬರಿಯ ಪಾತ್ರವೊಂದು ’ಓದಿದ ಗಂಡಸರೆಲ್ಲಾ ಹೆಂಗಸರಾಗ್ತಾರೆ. ಓದಿದ ಹೆಂಗಸರೆಲ್ಲಾ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ ಹೆಂಗಸರು ಹೆಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು’ ಎನ್ನುತ್ತದೆ, ಅದು ಸತ್ಯವೂ ಆಗುತ್ತಿದೆ ಎಂದು ಭೈರಪ್ಪನವರು ಕಳವಳಿಸಿದ್ದರು! ಅದನ್ನು ಓದಿ ಬೆಚ್ಚಿಬಿದ್ದಿದ್ದೆ. bhyrappa-Kavaluಜೊತೆಗೆ ’ಮಹಿಳಾಪರ ಕಾನೂನುಗಳು ಶೇಕಡ 98 ರಷ್ಟು ದುರ್ಬಳಕೆ ಆಗುತ್ತಿವೆ, ಇದರಿಂದ ಇಡೀ ಭಾರತೀಯ ಕುಟುಂಬದಲ್ಲಿ ಆಗುತ್ತಿರುವ ಬದಲಾವಣೆಗಳು, ತಲ್ಲಣಗಳೇ ತಮ್ಮ ಕಾದಂಬರಿಯ ವಸ್ತು’ ಎಂದು ಅವರು ಹೇಳಿದ್ದು ಕೇಳಿ ಉಗ್ರ ಕುತೂಹಲದಿಂದ ಅಂದೇ ಕಷ್ಟಪಟ್ಟು ಪುಸ್ತಕ ಸಂಪಾದಿಸಿ ಎರಡೇ ದಿನಕ್ಕೆ ಕವಲು ಓದಿ ಮುಗಿಸಿದ್ದೆ.

ಪುಸ್ತಕ ಓದಿ ಮುಚ್ಚಿಟ್ಟ ನಂತರ, ಈ ಕಾದಂಬರಿಯಲ್ಲಿ ವಿಶೇಷವೇನಿದೆ? ಎಂದು ಪ್ರಶ್ನಿಸಿಕೊಂಡರೆ ನಿಜಕ್ಕೂ ಅಂಥದ್ದೇನೂ ವಿಶೇಷ ಕಾಣಲಿಲ್ಲ. ಭೈರಪ್ಪನವರ ಮಾಮೂಲಿ ಪುರುಷ ಮೂಲಭೂತವಾದಿ ಮನಸ್ಸಿನ ಪಾರದರ್ಶಕ ದರ್ಶನವಷ್ಟೇ! ಪುಸ್ತಕದಿಂದ ಭೈರಪ್ಪನವರ ಹೆಸರು ತೆಗೆದು ಹಾಕಿದರೆ ಅದೊಂದು ಪೂರ್ವಗ್ರಹ ಪೀಡಿತವಾದ ಮನಸ್ಸಿನ ಯಾರೂ ಬರೆಯಬಹುದಾದ ಸಾಮಾನ್ಯವಾದ ಕಾದಂಬರಿ. ಇಂತಹದ್ದೇ ವಿಷಯದ ಹಲವು ಕಾದಂಬರಿಗಳನ್ನು ಹಲವಾರು ಬರಹಗಾರರು ಈಗಾಗಲೇ ಬರೆದಿದ್ದಾರೆ. ಇಲ್ಲಿ ಭೈರಪ್ಪನವರ ಹೆಗ್ಗಳಿಕೆಯೆಂದರೆ ಮಹಿಳಾಪರ ಕಾನೂನುಗಳನ್ನು ಯಾವ ರೀತಿಯೆಲ್ಲಾ ದುರ್ಬಳಕೆ ಮಾಡಿಕೊಳ್ಳಬಹುದೆಂಬುದರ ಅತ್ಯಂತ ಸೂಕ್ಷ್ಮ ವಿವರಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿ ತಮ್ಮ ಕಾದಂಬರಿಯಲ್ಲಿ ಚಿತ್ರಿಸಿ, ಅದರ ಅವಶ್ಯಕತೆಯಿರುವ ಹೆಣ್ಣು ಮಕ್ಕಳಿಗೆ ಅನುಕೂಲ ಮಾಡಿದ್ದಾರೆ! ಅದಕ್ಕೆ ಅವರಿಗೆ ಧನ್ಯವಾದ ಹೇಳಬೇಕು.

ಕಾದಂಬರಿಯಲ್ಲಿ ಅವರು ಚಿತ್ರಿಸಿರುವ ಮಹಿಳಾ ಖಳಪಾತ್ರಗಳಂಥಾ ವ್ಯಕ್ತಿಗಳು ನಮ್ಮ ಮಧ್ಯೆ ಇಲ್ಲದಿಲ್ಲ. ಆದರೆ ಅಂಥವರ ಸಂಖ್ಯೆ ಅತ್ಯಲ್ಪ. ನಮ್ಮ ಕಿರುತೆರೆ ಧಾರಾವಾಹಿಗಳಲ್ಲಿ ಭೈರಪ್ಪನವರಿಗಿಂಥಾ ಕೆಟ್ಟದಾಗಿ ಖಳನಾಯಕಿಯರ ಪಾತ್ರಗಳಲ್ಲಿ ಹೆಣ್ಣನ್ನು ಚಿತ್ರಿಸಲಾಗುತ್ತಿದೆ. ನಾವು ಸುಮ್ಮನಿದ್ದೇವೆ. ಏಕೆಂದರೆ ಅದು ಮನರಂಜನೆಗಾಗಿ ಮಾತ್ರ ಎಂಬ ರಿಯಾಯಿತಿಯಿಂದ. ಆದರೆ ’ಕಾಲ್ಪನಿಕ’ವಾದ ಈ ಕವಲು ಕಾದಂಬರಿಯ ಕಥೆ ಹಾಗೂ ಅಲ್ಲಿ ಚಿತ್ರಿತವಾಗಿರುವ ನೆಗೆಟೀವ್ ಸ್ತ್ರೀ ಪಾತ್ರಗಳು ಸುಮ್ಮನೇ ಹುಟ್ಟಿಕೊಂಡವಲ್ಲ. ಅದು ಕೇವಲ ಮನರಂಜನೆಗೆ ಬರೆದ ಕಾದಂಬರಿಯೂ ಅಲ್ಲ. ಅದರ ಹಿಂದೆ ಮಹಿಳಾ ಅರಿವಿನ ವಿಸ್ತರಣೆಯ ವಿರೋಧಿಯಾದ ಒಂದು ಮನಸ್ಸಿದೆ. alva-nudisiri-baraguru-bhairappaಅದು ಮನು ಹೇಳುವಂಥಾ ’ಹೆಣ್ಣು ಕ್ಷೇತ್ರ. ಗಂಡು ಕ್ಷೇತ್ರಾಧಿಪತಿ’ಎಂಬ ನಿಲುವನ್ನು ಅಕ್ಷರಶಃ ಒಪ್ಪಿಕೊಂಡ ಮನಸ್ಸು. ಒಟ್ಟಾರೆ ಭೈರಪ್ಪನವರ ನಿಲುವು, ಕಾದಂಬರಿಯ ಧೋರಣೆ, ಸಂದೇಶಗಳು, ಪೂರ್ವ-ಪರ ಚಿಂತನೆಯಿಲ್ಲದೇ ಆಕ್ರಮಣ ಮಾಡುವ ಸೈನಿಕ ನಿಲುವಿನಿಂದ ಕೂಡಿರುವುದೇ, ಕಾದಂಬರಿ ಕುರಿತು ಚರ್ಚೆಯನ್ನು ಹುಟ್ಟುಹಾಕುವುದಕ್ಕೆ ಮುಖ್ಯ ಕಾರಣವಾಗಿವೆ.

ಇದಕ್ಕೆಲ್ಲಾ ಮುಖ್ಯ ಹೊಣೆಗಾರರು ಭೈರಪ್ಪನವರೇ. ಏಕೆಂದರೆ, ಕಾದಂಬರಿ ಬರೆದು ಅವರು ಸುಮ್ಮನಾಗಿಬಿಡುವುದಿಲ್ಲ. [ಅಥವಾ ಭೈರಪ್ಪ ಫ್ಯಾನ್ ಮತ್ತು ಮಾಧ್ಯಮಗಳು ಅವರು ಸುಮ್ಮನಿರಲು ಬಿಡುವುದಿಲ್ಲ!] ತಮ್ಮ ಕಾದಂಬರಿಯಾಚೆಗೂ ಅವರು ಅಲ್ಲಿನ ಪಾತ್ರಗಳಿಂದ ಹೇಳಿಸಿದ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಾರೆ, ಅದನ್ನು ತಮ್ಮ ಚರ್ಚೆಗಳಲ್ಲಿ ಪುಷ್ಟಿಗೊಳಿಸುತ್ತಾರೆ, ತಮ್ಮ ಮೂಗಿನ ನೇರಕ್ಕೇ ಅಂಕಿ ಅಂಶಗಳನ್ನು ಕಲೆ ಹಾಕಿ ತಮ್ಮ ಸೈನಿಕ ಆಕ್ರಮಣದ ವಾದವನ್ನೇ ಅಂತಿಮ ಸತ್ಯವೆಂದು ಪ್ರತಿಪಾದಿಸುತ್ತಾರೆ. [ಹೀಗಾಗಿಯೇ ನಾವೂ ಅವರ ಕಾದಂಬರಿಯಾಚೆಗೆ ಹೋಗಿಯೇ ಅವರ ಇಂತಹ ಏಕಪಕ್ಷೀಯ ವಾದವನ್ನು ವಿಶ್ಲೇಷಿಸಬೇಕಾಗುತ್ತದೆ, ಚರ್ಚಿಸಬೇಕಾಗುತ್ತದೆ.] ಅವರ ಬುದ್ಧಿಪೂರ್ವಕ ಯೋಚನೆ ಹಾಗೂ ಯೋಜನೆಯಂತೆಯೇ ಕಥೆ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ, ತರ್ಕಬದ್ಧವಾಗಿ ರೂಪಿತವಾಗುತ್ತದೆ. ಮತ್ತು ಅವರು ನಂಬಿರುವ ತತ್ವಕ್ಕನುಗುಣವಾಗಿಯೇ ಅಂತ್ಯ ಕಾಣುತ್ತದೆ. ಅವರ ಕಾದಂಬರಿ ಬಿಡುಗಡೆಗೆ ಮೊದಲೇ ಮಾಧ್ಯಮಗಳು ಕಥೆಯ ವಸ್ತುವನ್ನು ಅತಿ ರಂಜಿಸಿ ಪ್ರಚಾರ ಮಾಡಿಬಿಡುತ್ತವೆ. ತಮ್ಮದೇ ಆದ ಇಂತಹ ಪ್ರಚಾರ ತಂತ್ರ, ಅದರ ಸಮರ್ಥ ನೆಟ್‌ವರ್ಕಿಂಗ್‌ನಿಂದಾಗಿ ಅವರ ಅಭಿಮಾನಿಗಳು ಕಾದಂಬರಿ ಓದಿದರೆ, ಎಲ್ಲಕ್ಕಿಂಥಾ ಮುಖ್ಯವಾಗಿ ಅವರ ಸಮಷ್ಠಿ ಬದಲಾವಣೆಯ ವಿರೋಧಿ ನಿಲುವಿನಿಂದಾಗಿ ಇಷ್ಟವಿರಲೀ ಬಿಡಲಿ, ಅವರ ಅಭಿಮಾನಿಯಿರಲೀ, ವಿರೋಧಿಸುವವರಿರಲಿ ಅವರ ಕಾದಂಬರಿಯನ್ನು ಓದಲೇಬೇಕೆಂಬ ಅನಿವಾರ್ಯ ತುರ್ತು ನನ್ನಂಥವರಿಗೆ ಹುಟ್ಟಿಬಿಡುತ್ತದೆ! [ಹುಟ್ಟಿಸಲಾಗುತ್ತದೆ.] ನಾವು ಮುಖ್ಯವಾಗಿ ವಿರೋಧಿಸಬೇಕಿರುವುದು ಸತ್ಯಕ್ಕೆ ಹಲವು ಮುಖಗಳಿರುವುದನ್ನು ಒಪ್ಪದೇ ಕಾದಂಬರಿಯಲ್ಲಿ ಪ್ರತಿಪಾದಿತವಾಗುವ ತಮ್ಮ ವೈಯಕ್ತಿಕ ನಿಲುವನ್ನೇ ಅಂತಿಮ ಸತ್ಯವೆನ್ನುವಂತೆ ವೈಭವೀಕರಿಸುವ, ಎತ್ತಿಹಿಡಿಯುವ ಭೈರಪ್ಪನವರ ಈ ಮನೋಧರ್ಮವನ್ನು.

ನಾವೂ ವಿನಾಕಾರಣ ಇಂಥಹ ಋಣಾತ್ಮಕ ನೆಲೆಯ ಕಾದಂಬರಿಯ ಕುರಿತು ಚರ್ಚಿಸಿ ಅದರ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತಿದ್ದೇವೇನೋ ಎಂಬ ಆತಂಕ ನನ್ನಂತೆಯೇ ಅನೇಕರನ್ನು ಕಾಡಿರಬಹುದು. ಮಹಿಳೆಯರು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲಿಡಲಾರಂಭಿಸಿದ 70ರ ದಶಕದಿಂದಾ ಇಂದಿನವರೆಗೆ ನಾಲ್ಕು ದಶಕಗಳೇ ಕಳೆದಿವೆ. ಅನೇಕ ಲೇಖಕಿಯರು [ಮಾತ್ರವಲ್ಲ ಲೇಖಕರೂ] ಸ್ತ್ರೀ ಸಂವೇದನೆಯ ನೆಲೆಯಲ್ಲಿ, ಮಹಿಳೆಯ ಅನನ್ಯತೆ, ವಿಭಿನ್ನತೆಯನ್ನು ವಿವಿಧ ಪ್ರಕಾರದ ತಮ್ಮ ಅಭಿವ್ಯಕ್ತಿಯಲ್ಲಿ ಸೂಕ್ಷ್ಮವಾಗಿ, ಅಷ್ಟೇ ವಿವೇಕಯುತವಾಗಿ ಕಟ್ಟಿಕೊಡುತ್ತಾ ಬಂದಿದ್ದಾರೆ. women-gp-membersಅಂತಹ ಬರಹಗಳನ್ನು ಈ ಕವಲು ಕಾದಂಬರಿಗೆ ಮಾಡುತ್ತಿರುವಂತೆ ಸಮಗ್ರವಾಗಿ ವಿಶ್ಲೇಷಿಸಿ, ಚರ್ಚಿಸಿ ಪ್ರೋತ್ಸಾಹಿಸುವಂತಹ ಧನಾತ್ಮಕ ಕೆಲಸವನ್ನು ನಾವೆಲ್ಲಿ ಮಾಡಿದ್ದೇವೆ? ಒಟ್ಟಾರೆಯಾಗಿ ಈ ನಾಲ್ಕು ದಶಕಗಳಲ್ಲಿ ಹೆಣ್ಣಿನ ಅಸ್ಮಿತೆಯನ್ನು ಕಟ್ಟಿಕೊಡುವ ಪ್ರಯತ್ನದ ಮಹಿಳಾ ಅಭಿವ್ಯಕ್ತಿಗೆ ನಾವೇ ಎಲ್ಲಿ ಮಾನ್ಯತೆ ನೀಡಿದ್ದೇವೆ? ಸಮಗ್ರವಾಗಿ ಅಂತಹುದ್ದನ್ನು ದಾಖಲಿಸುವ, ನಮ್ಮಲ್ಲಿಯೂ ಇಂಥಹ ಸಮರ್ಥ ಅಭಿವ್ಯಕ್ತಿಗಳು ಬಂದಿವೆ ಎಂದು ಸಮಾಜಕ್ಕೆ ಕಾಣುವಂತೆ ಅದರ ಎದುರು ಎಲ್ಲಿ ಎತ್ತಿಹಿಡಿದಿದ್ದೇವೆ? ಪ್ರದರ್ಶಿಸಿದ್ದೇವೆ? ಈ ಎಲ್ಲ ಕಾರಣಗಳಿಂದಾಗಿಯೇ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಮ್ಮ ಇಂತಹಾ ವಿಭಿನ್ನ, ಅನನ್ಯ ಅಭಿವ್ಯಕ್ತಿಗಳು ಸರಿಯಾದ ಕ್ರಮದಲ್ಲಿ ದಾಖಲಾಗದೇ ಉಳಿದುಬಿಟ್ಟವೇ? ಸಕಾರಾತ್ಮಕ ಅಭಿವ್ಯಕ್ತಿಯನ್ನು ಗುರುತಿಸುವ ಕೆಲಸಕ್ಕಿಂಥಾ ನಕಾರಾತ್ಮಕ ಅಭಿವ್ಯಕ್ತಿಯೇ ಸಮಾಜದಿಂದ ಹೆಚ್ಚು ಗುರುತಿಸಲ್ಪಡುತ್ತದೆ ಹಾಗೂ ವಿಜೃಂಭಿಸುತ್ತದೆ ಎಂಬುದು ನಿಜವೇ? ಇದು ಈ ಸಂದರ್ಭದಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪ್ರಶ್ನೆಗಳು.

’ಓದಿದ ಗಂಡಸರೆಲ್ಲಾ ಹೆಂಗಸರಾಗ್ತಿದ್ದಾರೆ, ಓದಿದ ಹೆಂಗಸರೆಲ್ಲಾ ಗಂಡಸರಾಗ್ತಿದ್ದಾರೆ. ಗಂಡಸರು ಗಂಡಸರಾಗಿ, ಹೆಂಗಸರು ಹೆಂಗಸರಾಗಿ ಇರಬೇಕಾದರೆ ಯಾರೂ ಓದಬಾರದು’ ಎಂಬ ಮಾತೇ ಅತ್ಯಂತ ರೂಕ್ಷವಾದ್ದು. ಅವರ ಇಡೀ ಕಾದಂಬರಿಗೆ ಈ ಮಾತುಗಳೇ ಮೂಲಮಂತ್ರ. ಮೂಲತಃ ಈ ಮಾತೇ ಗಂಡು-ಹೆಣ್ಣಿನ ನಡುವಿನ ಅಸಮಾನತೆಯನ್ನು ಎತ್ತಿಹಿಡಿಯುವಂತದ್ದು. ಪ್ರಕೃತಿಯಲ್ಲಿ ಗಂಡು-ಹೆಣ್ಣು ಸಮಾನಜೀವಿಗಳು. ಜೊತೆಗೆ ಸಹಜೀವಿಗಳು. ಈ ಪ್ರಾಕೃತಿಕ ಸತ್ಯವನ್ನು ಅರ್ಥಮಾಡಿಕೊಂಡು ಸಮಾಜ ನಿರ್ಮಾಣಗೊಂಡರೆ ಅಸಮಾನತೆಯ ನೆಲೆಯ ಯಾವ ಸಮಸ್ಯೆಯೂ ಬರುವುದಿಲ್ಲ. ಗಂಡು-ಹೆಣ್ಣು ಪದಗಳು ಲಿಂಗ ಸೂಚಕವೇ ಹೊರತೂ ನಮ್ಮ ಪುರುಷ ಪ್ರಧಾನ ಸಮಾಜ ನಿರ್ದೇಶಿಸುವಂತೆ ಶ್ರೇಷ್ಟತೆ-ಕನಿಷ್ಟತೆಯ ಸೂಚಕವಲ್ಲ. ಆದರೆ ಭೈರಪ್ಪನವರ ಈ ಕಾದಂಬರಿಯುದ್ದಕ್ಕೂ ಈ ಅಸಮಾನತೆಯ ನೆಲೆಯನ್ನು ವೈಭವೀಕರಿಸುವ ಹಲವಾರು ಉದಾಹರಣೆಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತಲೇ ಹೋಗುತ್ತದೆ. ಕುಟುಂಬ ವಿಘಟನೆಗೆ ಹೆಣ್ಣಿನ ಬೌದ್ಧಿಕತೆ, ಪ್ರಗತಿಪರತೆ, ಲೈಂಗಿಕ ಸ್ವಾತಂತ್ರ್ಯ, Indian-policewomanವೃತ್ತಿ ಔನತ್ಯದ ಕುರಿತ ದೃಢತೆ ಕಾರಣವೆಂದು ಪ್ರತಿಯೊಂದು ಪಾತ್ರದಿಂದಲೂ ಅತ್ಯಂತ ಜಾಣ್ಮೆಯಿಂದ ನಿರ್ದೇಶಿಸುತ್ತಾ ಬಂದಿದ್ದಾರೆ. ಇಂಥಹಾ ಯಾವ ವೈಚಾರಿಕತೆಯೂ ಇಲ್ಲದ ಹೆಣ್ಣುಮಕ್ಕಳು ಗಂಡಿನ ಅನುಯಾಯಿಗಳಾಗಿ, ಆದರ್ಶ ಸ್ತ್ರೀಯರಾಗಿ ಚಿತ್ರಿತವಾಗಿದ್ದಾರೆ. ಈ ಹೊತ್ತಿನಲ್ಲಿ ಸಮಾನ ಗೌರವದ ಸಮಾಜ ನಿರ್ಮಾಣದ ಕನಸು ಕಾಣುತ್ತಿರುವ ಮಹಿಳೆಯಿಂದ ಓಬೀರಾಯನ ಕಾಲದ ಯಥಾಸ್ಥಿತಿವಾದವನ್ನು ಬಯಸುವ ಪುರುಷ ಶ್ರೇಷ್ಟತೆಯ ಭ್ರಮೆಯಲ್ಲಿರುವ ಗಂಡಿನ ಮನಸ್ಥಿತಿಯೂ ಕಾದಂಬರಿಯಲ್ಲಿ ಢಾಳಾಗಿಯೇ ಅನಾವರಣಗೊಳ್ಳುತ್ತದೆ. ಇದರ ಹಿಂದಿನ ಮನೋಭಾವವು ಒಂದು ಶತಮಾನ ಮಿಕ್ಕಿ ನಡೆದ ಭಾರತ ಸಾತಂತ್ರ್ಯ ಹೋರಾಟ, ಪ್ರಜಾಪ್ರಭುತ್ವದ ಕಲ್ಪನೆ ನಮ್ಮ ಸಂವಿಧಾನ ಮತ್ತು ಮಹಿಳಾ ಹೋರಾಟ ನಡೆದು ಬಂದ ಹಾದಿಯಿಂದ ಒಂದು ಶತಮಾನದಷ್ಟು ಹಿಂದೆ ಸರಿದಿದೆ. ಇಷ್ಟು ಹೇಳಿದರೆ ಸಾಕು ಭೈರಪ್ಪನವರು ಇನ್ನೂ ಎಲ್ಲಿದ್ದಾರೆ ಎಂಬುದು ಅರ್ಥವಾಗಿಬಿಡುತ್ತದೆ.

ಹೆಣ್ಣನ್ನು ಸಂಗಾತಿಯೆಂದು, ಸಹಜೀವಿಯೆಂದು ಮೇಲುನೋಟಕ್ಕೆ ತೋರಿಕೆಯ ನಟನೆಯಾಡುತ್ತಾ ಒಳಗೇ ಪುರುಷ ಪ್ರಭುತ್ವದ ಸ್ಥಾಪಿತ ಮೌಲ್ಯಗಳನ್ನು ಒಪ್ಪಿಕೊಂಡಿರುವ, ಹೊಂದಾಣಿಕೆ ತನ್ನ ನೆಲೆಯಿಂದ ಸಾಧ್ಯವೇ ಇಲ್ಲವೆಂದು ಉದ್ದೇಶಿಸಿರುವ ಗಂಡು ಮನಸ್ಸಿನ ಅಹಂ ಹಾಗು ಮೇಲರಿಮೆಯನ್ನು ಪ್ರಾಮಾಣಿಕವಾಗಿ ಚಿತ್ರಿಸುತ್ತಾ ಕವಲು ಮೂಲಕ ಭೈರಪ್ಪನವರು ತಮ್ಮ ಪುರುಷ ಮೂಲಭೂತವಾದಿ ಮನಸ್ಸಿನ ದರ್ಶನ ಮಾಡಿಸುತ್ತಾರೆ. ಜೊತೆಗೇ, ಅವರು ತಾವು ನಂಬಿದಂತಾ ನಿಲುವನ್ನು ಯಾವುದೇ ಮುಖವಾಡವಿಲ್ಲದೆಯೂ ಪ್ರತಿಪಾದಿಸುತ್ತಾರಲ್ಲ! ಅದಕ್ಕಾಗಿಯಾದರೂ ಅವರನ್ನು ಅಭಿನಂದಿಸಲೇಬೇಕು.

ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಆಗುತ್ತಿರುವ ಪಲ್ಲಟಗಳಿಗೆಲ್ಲಾ ಹೆಣ್ಣನ್ನೇ ಕಾರಣವಾಗಿಸಿರುವ ಮೂಲಸಂಸ್ಕೃತಿರಕ್ಷಕರಾದ ಭೈರಪ್ಪನವರಿಗೆ ನಮ್ಮ ಕುಟುಂಬ ವ್ಯವಸ್ಥೆ ನಿಂತಿರುವುದೇ ಅಸಮಾನತೆಯ ಆಧಾರದ ಮೇಲೆ ಎನ್ನುವ ಅರಿವಿಲ್ಲವೇ? ಇಲ್ಲಿ ಹೆಂಡತಿ ಗಂಡನ ಆಜ್ಞಾನುವರ್ತಿ, Indian Women Paintingsಗೃಹಕೃತ್ಯ ನೋಡಿಕೊಳ್ಳುವ ಪರಿಚಾರಕಿ, ಅವನಿಗೆ ವಿಧೇಯಳಾಗಿರಬೇಕೆಂಬುದೇ ನಿಯಮ. ಮದುವೆಯಾಗಿ ಹೆಣ್ಣು ಗಂಡನ ಮನೆಗೆ ಹೋಗಿ ಅಲ್ಲಿನ ಪರಿಸರವನ್ನೇ ತನ್ನ ಪರಿಸರವೆಂದು ನಂಬಿ ಆ ಕುಟುಂಬದ ಎಲ್ಲ ಜವಾಬ್ದಾರಿಯನ್ನೂ [ಗೃಹಕೃತ್ಯ, ಮನೆವಾರ್ತೆ, ಮಕ್ಕಳ-ವೃದ್ಧರ ಪಾಲನೆ…… ಇತ್ಯಾದಿ] ನಿರ್ವಹಿಸಬೇಕೆಂಬ ಕಟ್ಟುಪಾಡಿನಿಂದ ಮೊದಲುಗೊಳ್ಳುವ ಅಸಮಾನತೆಯ ಹಿಂದೆ ನಮ್ಮ ಪುರುಷ ನಿರ್ಮಿತ ಸಮಾಜ ಹಾಗೂ ಸಂಸ್ಕೃತಿಯ ಏಕಪಕ್ಷೀಯ ಸ್ವಾರ್ಥವಿದೆಯೆಂಬುದನ್ನು ಉದ್ದೇಶಪೂರ್ವಕವಾಗಿ ಮರೆತಿದ್ದಾರೆಯೇ? ಕುಟುಂಬ, ಸಮಾಜ, ನೈತಿಕತೆಯ ಚೌಕಟ್ಟುಗಳನ್ನು ಕಾಲದಿಂದ ಕಾಲಕ್ಕೆ ನಮ್ಮ ಪುರುಷಪ್ರಧಾನ ಸಮಾಜ ತನಗೆ ಬೇಕೆಂದಂತೆ ಬದಲಾಯಿಸಿಕೊಳ್ಳುತ್ತಾ ಹೋಗಿರುವುದು ಚರಿತ್ರೆಯ ಅಧ್ಯಯನಕಾರರೂ ಆಗಿರುವ ಭೈರಪ್ಪನವರಿಗೆ ಹೊಳೆದಿಲ್ಲವೇ? ನಮ್ಮ ಈ ಲೋಕ ರಾಜಕಾರಣವನ್ನು ಮೀರಿ ಪ್ರಕೃತಿ ಸತ್ಯಗಳು ಅತ್ಯಂತ ನಿಗೂಢವೂ, ಸಂಕೀರ್ಣವೂ ಆಗಿರುತ್ತದೆ ಅದನ್ನು ಲೈಂಗಿಕ ಸಂಬಂಧವೊಂದರಿಂದಲೇ ಅಳೆಯಲು ಬರುವುದಿಲ್ಲ. ಜೊತೆಗೆ ಬದಲಾವಣೆ ಬಾಳಿನ ನಿಯಮ. ಅದು ಸರಿಯೋ-ತಪ್ಪೋ ನದಿಯಂತೆ ತನಗೆ ಬೇಕೆಂದಂತೆ ಹರಿಯುತ್ತಾ ಹೋಗುತ್ತದೆ. ನಾವು ಹೀಗೇ ಎಷ್ಟೇ ಬಾಯಿ ಬಡಿದುಕೊಂಡರೂ ಅದರ ದಿಕ್ಕು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸತ್ಯದ ಬಗೆಗೆ ಭೈರಪ್ಪನವರಿಗೆ ಜಾಣಕುರುಡೇ?

ಸಾಲಂಕೃತಳಾಗದೇ ಸಹಜವಾಗಿರುವ ಹೆಣ್ಣು ಭೈರಪ್ಪನವರಿಗೆ ಸಂವೇದನೆಗಳಿಲ್ಲದ ಸೂತಕದವಳಂತೆ ಕಾಣುತ್ತಾಳೆ. ಸೂತಕ ಎಂದರೆ ಏನು? ಹೊರಗಿನ ಸೂತಕದ ಮಾತನಾಡುವ ಇವರ ಒಳ ಮನಸ್ಸೇ ನಿಜವಾಗಿ ಸೂತಕದ ಮಡು. ಅದನ್ನು ಸಮಾಜಕ್ಕೂ ಆರೋಪಿಸುತ್ತಿರುವುದು ಅವರ ನಿಂತಲ್ಲೇ ನಿಂತು ಕೊಳೆತು ಹೋಗಿರುವ ಮನಸ್ಸಿನ ಸಂಕೇತ. ಹಾಗಿದ್ದರೆ, ಸೀರೆ, ಕುಂಕುಮ, ಹೂವು, ಬಳೆ, ಸರಗಳಿಂದ ಅಲಂಕಾರ ಮಾಡಿಕೊಳ್ಳದ ವಿಶ್ವದ ಬಹು ಸಂಖ್ಯಾತ ಹೆಣ್ಣುಮಕ್ಕಳಿಗೆ, ಹೆಣ್ಣು ಪ್ರಾಣಿಗಳಿಗೆ ಲೈಂಗಿಕ ಸಂವೇದನೆಗಳು ಇರಲು ಸಾಧ್ಯವೇ ಇಲ್ಲ ಎಂದು ಇದರ ಅರ್ಥವೇ? ಭೈರಪ್ಪನವರದು ಅದೆಂಥಾ ಹಾಸ್ಯಾಸ್ಪದ ನಿಲುವು! ಹೆಣ್ಣು ಸದಾ ಪುರುಷ ನಿರ್ಮಿಸಿದ ಸಂಸ್ಕೃತಿಯ ರಕ್ಷಕಳಾಗಿರಬೇಕೇ ಹೊರತು ಅದನ್ನು ತನ್ನ ನೆಲೆಯಿಂದ ನಿರ್ಮಿಸಿದರೆ ಅಪರಾಧವೆಂಬಂಥಾ ಅಲಿಖಿತ ಕಾನೂನನ್ನು, ಇತ್ತೀಚಿನ ಎಚ್ಚೆತ್ತ ಮಹಿಳೆ ಪ್ರತಿಭಟಿಸುತ್ತಿದ್ದಾಳೆ. ಪ್ರಶ್ನಿಸುತ್ತಿದ್ದಾಳೆ. ತಾನೇ ತನ್ನ ವರ್ತಮಾನ ಕಟ್ಟಿಕೊಳ್ಳುವ ಹಾದಿಯಲ್ಲಿ ಸಾಗುತ್ತಿದ್ದಾಳೆ ಎಂಬುದು ಭೈರಪ್ಪನವರಂಥಾ ಮನುವಾದಿಗಳಿಗೆ ನುಂಗಲಾರದ ತುತ್ತಾಗುತ್ತಿದೆಯೇ?

ಮಹಿಳಾಪರ ಕಾನೂನುಗಳು ಶೇಕಡ 98 ರಷ್ಟು ಪ್ರಕರಣಗಳಲ್ಲಿ ದುರ್ಬಳಕೆಯಾಗುತ್ತಿವೆ ಎಂದು ಇತ್ತೀಚೆಗಿನ ಸಂಶೋಧನಾ ವರದಿಯೊಂದನ್ನು ಉಲ್ಲೇಖಿಸಿ ಹೇಳಿರುವ ಅವರ ಮಾತು ಎಷ್ಟು ಸತ್ಯ? ಏಕೆಂದರೆ ನಮ್ಮ ದೇಶದ ಶೇಕಡ 90 ರಷ್ಟು ಮಹಿಳೆಯರಿಗೆ ಕಾನೂನಿನ ಅರಿವಿಲ್ಲದಿರುವುದೇ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ ಶೋಷಿತರಾಗುತ್ತಿರುವುದಕ್ಕೆ ಮುಖ್ಯಕಾರಣ ಎನ್ನುತ್ತದೆ ಮತ್ತೊಂದು ಸಂಶೋಧನಾ ವರದಿ. ಹಾಗೆ ಕಾನೂನಿನ ಅರಿವಿರುವ ಬಹಳಷ್ಟು ಮಹಿಳೆಯರೂ ಭಾರತೀಯ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಬದುಕು, ಘನತೆ, ಸಂಬಂಧಗಳ ಆಪ್ತತೆಯನ್ನು ಹರಾಜಿಗಿಟ್ಟು ಕಾನೂನಿನ ಮೊರೆ ಹೋಗುವುದು ಕಡಿಮೆಯೇ. ಬಹಳಷ್ಟು ವಿಚ್ಛೇದನ ಪ್ರಕರಣಗಳಲ್ಲಿ ಕಾನೂನಿನ ರೀತ್ಯ ಜೀವನಾಂಶ ಕೊಡಬೇಕೆಂದು ತೀರ್ಮಾನವಾಗಿದ್ದರೂ, ಕಾನೂನಿನ ಕಣ್ ತಪ್ಪಿಸಿ ಅದನ್ನು ಕೊಡದೇ ತಪ್ಪಿಸಿಕೊಳ್ಳುವ ಪ್ರಸಂಗಗಳೇ ಹೆಚ್ಚಿವೆ. ಕಾನೂನು ತಜ್ಞರು, ಮಹಿಳಾ ಕಾನೂನಿನ ದುರ್ಬಳಕೆಯ ಪ್ರಮಾಣವನ್ನು ಅಧ್ಯಯನ ಹಾಗೂ ಸಂಶೋಧನೆಗಳ ಮೂಲಕ ಸಾಬೀತು ಪಡಿಸಬೇಕಿದೆ. ತನ್ಮೂಲಕ ಭೈರಪ್ಪನವರು ಎತ್ತಿರುವ ಮೂಲಭೂತ ಆಕ್ಷೇಪಣೆಗೆ ಉತ್ತರ ಹುಡುಕುವ ಪ್ರಯತ್ನಗಳಾಗಬೇಕಿವೆ. ಆದರೆ ಇದರ ಜೊತೆಗೇ ಕಾನೂನಿನ ತೆಕ್ಕೆಗೇ ಬರದೇ ತಾರತಮ್ಯ, ಅಸಮಾನತೆ, ದೌರ್ಜನ್ಯಗಳಿಂದ ನಿತ್ಯ ನರಳುತ್ತಿರುವ ಅಸಂಖ್ಯಾತ ಹೆಣ್ಣುಜೀವಗಳ ಸಂಕಟವನ್ನೂ ಅಧ್ಯಯನ ಮಾಡಿ ಸತ್ಯಾಂಶವನ್ನು ಅರಿಯುವ ಪ್ರಯತ್ನಗಳು ನಡೆಯಬೇಕಿದೆ. ಏಕೆಂದರೆ ನಮ್ಮ ಸಂವಿಧಾನಕ್ಕೆ ಬದ್ಧವಾಗಿ ನಡೆಯುವ ಸಂಕಲ್ಪವನ್ನೇನಾದರೂ ಮಾಡಿಕೊಂಡು, ಹೆಣ್ಣಿನ ದೃಷ್ಟಿಯಿಂದ ವಿವೇಚಿಸಿದರೆ, ಆಗ ಪ್ರತಿ ಮನೆಯೂ ಸಂವಿಧಾನವನ್ನು ಉಲ್ಲಂಘಿಸುತ್ತಿರುವುದು ವೇದ್ಯವಾಗುತ್ತದೆ.

ಸಮಾನತೆಯ ಆಧಾರದಲ್ಲಿ ಇಡೀ ಸಮಾಜದ ಒಟ್ಟು ಬೆಳವಣಿಗೆಗೆ ಪೂರಕವಾದ ಆಶಯವನ್ನು ಉಳ್ಳ ವಿಚಾರಗಳು ಮಾತ್ರ ಘನತೆಯುಳ್ಳವೂ ಗೌರವಿಸಲ್ಪಡುವುವು ಆಗಿರುತ್ತವೆ. ಅದಿಲ್ಲದೇ ಅಪವಾದವೆನ್ನುವಂತಾ ಬೆರಳೆಣಿಕೆಯಷ್ಟಿರುವ, bhyrappaಕವಲು ಕಾದಂಬರಿಯಲ್ಲಿ ಪ್ರಸ್ತಾಪಿತವಾದ ಪೂರ್ವಗ್ರಹ ಪೀಡಿತ ಏಕಮುಖ ವೈಯಕ್ತಿಕ ನಿಲುವುಗಳನ್ನೇ ವೈಭವೀಕರಿಸಿದರೆ ಅದು ಸತ್ಯವಾಗಿಬಿಡುವುದಿಲ್ಲ. ಭೈರಪ್ಪನವರು ಮಹಿಳೆಯರ ಅರಿವು ಹಾಗೂ ಜ್ಞಾನಕ್ಕೆ ಹಿಡಿದಿರುವ ಬಂದೂಕಿನ ನಳಿಕೆ, ಪಕ್ಕದ ದೇಶದವರ ಶತ್ರುತ್ವಕ್ಕಿಂಥಲೂ ಅಪಾಯಕಾರಿಯಾದುದು! ಯಾವುದೇ ಪ್ರಬುದ್ಧ ಸಾಹಿತಿ-ಕಲಾವಿದನ ಮಾಗಿದ ವಯಸ್ಸು, ಪ್ರತಿಭೆ, ಕಲೆಗಾರಿಕೆ, ಕಥನ ಕೌಶಲದಿಂದ ಸಮಚಿತ್ತವಾದ, ವಿಶ್ವಾತ್ಮಕ ನಿಲುವಿನ, ಸಾಂಸ್ಕೃತಿಕ ಸೂಕ್ಷ್ಮತೆ ಹಾಗೂ ಮಾನವೀಯ ಸಂವೇದನೆಯ ಅಭಿವ್ಯಕ್ತಿಯನ್ನು ಸಮುದಾಯ ಸದಾ ನಿರೀಕ್ಷಿಸುತ್ತದೆ. ಯಾವುದೇ ಅಭಿವ್ಯಕ್ತಿ ವೈಯಕ್ತಿಕ ನೆಲೆಯದಾದರೂ ಅದಕ್ಕೊಂದು ಸಮಷ್ಟಿ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಇಲ್ಲದಿದ್ದರೆ ಅದನ್ನು ನಿರಾಕರಿಸುವ ಹಾಗೂ ತಿರಸ್ಕರಿಸುವುದಕ್ಕಿಂಥಾ ದೊಡ್ಡ ಶಿಕ್ಷೆ ಲೇಖಕನಿಗೆ ಇನ್ನೊಂದಿಲ್ಲ ಎಂಬುದು ನನ್ನ ಭಾವನೆ.

ಅಸಹಾಯಕರಿಗೆ ನ್ಯಾಯ ಎಲ್ಲಿದೆ?


– ರೂಪ ಹಾಸನ


 

ಮರೆಯಬೇಕೆಂದರೂ ಆ ಚಿತ್ರವನ್ನು ಮರೆಯಲಾಗುತ್ತಿಲ್ಲ. ತುಂಬಿದ ಬಸಿರಿನ ಪುಟ್ಟ ಹುಡುಗಿ…… ಆಕಾಶದತ್ತ ದೃಷ್ಟಿ ನೆಟ್ಟು ತನ್ನನ್ನೇ ಮರೆತು ವಶೀಕರಣಗೊಂಡವಳಂತೆ ಕುಳಿತಿದ್ದ ಆ ಗೊಂಬೆಯಂತಾ ಹುಡುಗಿಯ ನೆನಪು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ನಾನು, ನನ್ನ ಗೆಳತಿ ಯಾವುದೋ ಕೆಲಸಕ್ಕೆಂದು ಹೋದವರು, ಅದನ್ನು ಮುಗಿಸಿ ಬರುವಾಗ ಈ ಪುಟ್ಟ ಪುಟ್ಟ ಗುಡಿಸಿಲಿನಾಕಾರದ ಚಿಂದಿ ಬಟ್ಟೆಯ ಗುಡಾರಗಳು ಕಾಣಿಸಿದ್ದವು. ಕುತೂಹಲದಿಂದ ಅದನ್ನು ನೋಡುತ್ತಾ ಬರುತ್ತಿರುವ ನಮಗೆ, ಅವಳು ಕಂಡಿದ್ದಳು!

ಇನ್ನೂ 12-13 ವಯಸ್ಸಿನ ಎಳೆಯ ಬಾಲೆ. ಆ ಗುಡಾರಗಳ ಮುಂದಿನ ಮರದ ನೆರಳಲ್ಲಿ ತನಗೂ ಈ ಲೋಕಕ್ಕೂ ಸಂಬಂಧವೇ ಇಲ್ಲವೆಂಬಂತೆ, ಅಕ್ಷರಶಃ ಕಲ್ಲಿನಂತೆ ಕುಳಿತಿದ್ದಳು. ಬಡಕಲು ದೇಹದಲ್ಲಿ, ಅವಳ ವಯಸ್ಸಿಗೆ ಮೀರಿ ಬೆಳೆದು ನಿಂತ ಅವಳ ಬಸಿರು ನಮ್ಮ ಕುತೂಹಲ ಕೆರಳಿಸಿತ್ತು. ಇಷ್ಟು ಚಿಕ್ಕ ಹುಡುಗಿಗೆ ಮದುವೆ… ಮಕ್ಕಳ…. ಜಂಜಾಟವೇ ಎಂದು ನೊಂದುಕೊಳ್ಳುತ್ತಿರುವಾಗಲೇ ಸ್ವಲ್ಪ ದೂರದಲ್ಲಿ ಮುದುಕನೊಬ್ಬ ಬೀಡಿ ಸೇದುತ್ತಾ ಕುಳಿತಿರುವುದು ಕಾಣಿಸಿತ್ತು.

ಮೆಲ್ಲಗೆ ಆ ಮುದುಕನ ಬಳಿ ಹೋಗಿ ನಿಂತಾಗ ಅವನು ಬೆಚ್ಚಿ ಬಿದ್ದಿದ್ದ. ಮೋಟು ಬೀಡಿಯನ್ನು ಆಚೆಗೆಸೆದು ‘ಏನ್ ಬೇಕ್ ತಾಯಿ?’ ಎಂದು ತೊದಲುತ್ತಾ ನುಡಿದಿದ್ದ. ‘ಇಷ್ಟು ಚಿಕ್ಕ ಹುಡುಗಿಗೆ ಮದ್ವೆ ಮಾಡಿದ್ದೀರಲ್ಲ? ಬಸುರಿ ಬೇರೆ?’ ಎಂದು ಪ್ರಶ್ನಿಸಿದ್ದೆವು. ಅದಕ್ಕೆ ಆ ಮುದುಕ ಹೇಳಿದ ಕಥೆ ನಮ್ಮನ್ನು ಬೆಚ್ಚಿಬೀಳಿಸಿತ್ತು.

ಬಳ್ಳಾರಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರಿಂದ ಗುಳೆ ಬಂದ ಹದಿನೈದು ಜನರ ಕುಟುಂಬ ಅದಾಗಿತ್ತು. ಬದುಕಿನ ದಾರಿ ಹುಡುಕುತ್ತಾ ಅವರು ಊರೂರು ಅಲೆಯುತ್ತಿದ್ದರು. ಹೀಗೇ ಒಂದೂರಿನ ಬಸ್ ನಿಲ್ದಾಣದಲ್ಲಿ ಮಲಗಿ, ರಾತ್ರಿ ಎಲ್ಲರೂ ಗಾಢ ನಿದ್ದೆಯಲ್ಲಿದ್ದ ಹೊತ್ತಿನಲ್ಲಿ ಈ ಹುಡುಗಿಯನ್ನು ಯಾರೋ ಪೋಕರಿಗಳು ಸದ್ದಿಲ್ಲದೇ ಹೊತ್ತೊಯ್ದು, child-rapeಭೀಕರವಾಗಿ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು. ಅಂದಿನಿಂದ ಇವಳು ಸಂವೇದನೆಗಳೇ ಸತ್ತು ಹೋದ ಜೀವಚ್ಛವವಾಗಿದ್ದಳು. ಇದರೊಂದಿಗೆ ಆ ಹುಡುಗಿಯ ಬಸಿರು, ಕುಟುಂಬಕ್ಕೆ ಮತ್ತೊಂದು ಆತಂಕ ಸೃಷ್ಟಿಸಿತ್ತು.

‘ಅತ್ಯಾಚಾರ ಆಗಿದೆ ಅಂತಾ ಗೊತ್ತಾದ ತಕ್ಷಣ ಪೊಲೀಸ್ನೊರಿಗೆ ಕಂಪ್ಲೆಂಟ್ ಕೊಡ್ಬಾರ್‍ದಿತ್ತಾ ಅಜ್ಜಾ’ ಎಂದು ಪ್ರಶ್ನಿಸಿದ್ದಕ್ಕೆ ‘ಏನಂತಾ ಕೊಡನವ್ವ? ಅವರು ನೀವ್ಯಾರು? ಎಲ್ಲಿಂದ ಬಂದಿದ್ದೀರಾ? ಯಾತಕ್ಕೆ ಬಂದಿದ್ದೀರ? ಅಲ್ಯಾಕೆ ಮಲಗಿದ್ರಿ? ಅತ್ಯಾಚಾರ ಆಗಿದ್ದಕ್ಕೆ ಸಾಕ್ಷಿ ಏನು? ಅಂತೆಲ್ಲ ಕೇಳ್ತಾರೆ. ಏನ್ ಹೇಳಿದ್ರು ನಮ್ಮದೇ ತಪ್ಪು ಅಂತ ಸಾಧಿಸಿ ನಮ್ಮಂತ ಬಡವರ ಹತ್ರನೇ ದುಡ್ಡು ಕಿತ್ತತ್ತಾರೆ. ನಮಗೆ ಏನೂ ಅರ್ಥ ಆಗದೂ ಇಲ್ಲ. ಕಾನೂನೆಲ್ಲ ನಮ್ಮಂತವರಿಗಲ್ಲ ಬುಡಿ. ಉಳ್ಳವರಿಗೆ, ನಗರದವರಿಗೆ, ನಿಮ್ಮಂತ ವಿದ್ಯಾವಂತರಿಗೆ. ನಮಗೆ ಇವತ್ತೊಂದ್ ಊರು ನಾಳೆ ಒಂದ್ ಊರು. ಕೋರ್ಟು, ಕೇಸು ಅಂತ ಎಲ್ಲಿ ಅಲೆಯದು? ಅದಕ್ಕೆಲ್ಲ ದುಡ್ಡೆಲ್ಲಿಂದ ತರದು? ಇಂತವೆಲ್ಲ ನಮಗೆ ಮಾಮೂಲು. ದೇವರಿಟ್ಟಹಂಗ್ ಬದುಕು…..’ ಅಂತ ನಿಟ್ಟುಸಿರಿಟ್ಟ. ಆ ಹುಡುಗಿಯ ಸ್ಥಿತಿ ನೋಡಿ ನಮ್ಮ ಕಣ್ಣು ಮಂಜಾಗಿತ್ತು.

ಇವರ ಕಥೆಯನ್ನು ಕೇಳಿದ ನಮಗೆ ಖಂಡಿತ ಇವರು, ಈ ಹುಡುಗಿಗೆ ಹುಟ್ಟುವ ಮಗುವನ್ನು ನೋಡಿಕೊಳ್ಳಲಾರರು ಎಂದೆನಿಸಿತ್ತು. ಹೀಗೆಂದೇ ‘ಅಜ್ಜಾ ಈ ಹುಡುಗಿಗೆ ಹುಟ್ಟೋ ಮಗು ಏನ್ಮಾಡ್ತಿರಾ?’ ಎಂದು ಕೇಳಿದ್ದೆವು. ಅಜ್ಜಾ ನಿರ್ಭಾವುಕನಾಗಿ ‘ಎಲ್ಲಾದ್ರೂ ಬಿಸಾಕ್ತಿವಿ. ಇದೇ ಒಂದು ಹೊರೆ. ಇದನ್ನೇ ಸಾಕಕ್ಕಾಗ್ತಾ ಇಲ್ಲ. ಇನ್ನು ಆ ಮಗುನ ಏನು ಮಾಡೋದು?’ ಎಂದಿದ್ದ.

ತಕ್ಷಣ ನಾವು ‘ಅಯ್ಯೋ ಹಾಗ್ಮಾಡಬೇಡಿ ಅಜ್ಜಾ. ಆ ಹುಡುಗಿನ ಅವಳ ಹೆರಿಗೆ ಆಗುವವರೆಗೂ ಚೆನ್ನಾಗಿ ನೋಡಿಕೊಂಡು ಹುಟ್ಟುವ ಮಗುವಿಗೆ, ಹಾಗೂ child-rape-indiaಇವಳಿಗೆ ಒಂದು ನೆಲೆ ಮಾಡಬಹುದು. ನಾಳೆ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಬರ್‍ತಿವಿ. ಇಲ್ಲೇ ಇರ್‍ತೀರ ಅಲ್ವಾ?’ ಎಂದು ಎಲ್ಲವನ್ನೂ ವಿವರವಾಗಿ ಹೇಳಿ ಅಜ್ಜನ ಮನವೊಲಿಸಿದ್ದೆವು.

‘ಇರ್‍ತಿವಿ. ಎಲ್ಲಾ ಏನೇನೋ ಕೆಲಸಕ್ಕೆ ಹೋಗವರೆ. ಬಂದ್ ಮೇಲೆ ಅವರಿಗೆಲ್ಲ ಹೇಳ್ತಿನಿ’ ಎಂದ ತಾತ. ನಾವು ಆ ಹುಡುಗಿಯನ್ನಿಡುವ ವ್ಯವಸ್ಥೆಗಾಗಿ ಆ ದಿನವೆಲ್ಲಾ ಸಿದ್ಧತೆ ನಡೆಸಿ, ಮಾರನೆ ದಿನ ಆ ಗುಡಾರಗಳಿದ್ದ ಜಾಗಕ್ಕೆ ಹೋದರೆ…… ಅಲ್ಲಿ ಯಾರೂ ಇರಲಿಲ್ಲ! ಅವರಿಗೆ ಬಹುಶಃ ಮತ್ತೆ ಮತ್ತೆ ಮೋಸ, ನೋವು, ಅವಮಾನ, ಹಿಂಸೆಯನ್ನು ಅನುಭವಿಸಿ ಈ ನಾಗರಿಕ ಪ್ರಪಂಚದ ಮೇಲೆಯೇ ಅಪನಂಬಿಕೆ ಮೂಡಿರಬೇಕು.

ಇದು ಒಂದು ಘಟನೆಯಷ್ಟೇ. ಎಲ್ಲಿಯೂ ಸುದ್ದಿಯಾಗದ, ಕಾನೂನು ವ್ಯವಸ್ಥೆಯ ಅಡಿಯಲ್ಲಿಯೂ ದಾಖಲಾಗದ ಹಲವಾರು ಅಪರಾಧಗಳು ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ. ಪೊಲೀಸ್, ಕೇಸು, ಕಾನೂನು ಎಲ್ಲದರಿಂದ ಹೊರತಾಗಿ ಮೋಸಕ್ಕೆ, ಅತ್ಯಾಚಾರಕ್ಕೆ, ದುರಾಚಾರಕ್ಕೆ ಒಳಗಾಗಿಯೂ ಎಲ್ಲಿಯೂ ದಾಖಲಾಗದಂತಹ ಇಂತಹ ಪ್ರಕರಣಗಳು ಸದ್ದಿಲ್ಲದೇ ಸುದ್ದಿಯಾಗದೇ ಸತ್ತು ಹೋಗುತ್ತವೆ. ಮೋಸ ಹೋದ ಮುಗ್ಧ ಜೀವಗಳು ಒಳಗೇ ಕುದಿಯುತ್ತಲೇ ಬದುಕು ಸವೆಸುತ್ತವೆ.

ಅಜ್ಜ ಹೇಳಿದಂತೆ ಸಂವಿಧಾನಬದ್ಧ ಹಕ್ಕು, ಕಾನೂನು, ಪೊಲೀಸ್ ವ್ಯವಸ್ಥೆ, ಎಲ್ಲವೂ ಉಳ್ಳವರಿಗೆ, ನಗರದವರಿಗೆ, ವಿದ್ಯಾವಂತರಿಗೆ ಮಾತ್ರ ಸೀಮಿತವಾಗಿಬಿಟ್ಟಿದೆಯೇ? ನಮ್ಮ ಸಮಾನತೆ, ಸ್ವಾತಂತ್ರ್ಯದ ಹಕ್ಕಿನ ಪ್ರತಿಪಾದನೆ, ಅದಕ್ಕಾಗಿ ನಡೆವ ಪ್ರತಿಭಟನೆ, ಹೋರಾಟಗಳೆಲ್ಲವೂ ಬಹುಸಂಖ್ಯಾತ ಬಡವರನ್ನು, ಶೋಷಿತರನ್ನು ಇನ್ನೂ ತಲುಪಲು ಸಾಧ್ಯವೇ ಆಗಿಲ್ಲವೇ? ಅಪರಾಧಿಗಳು ರಾಜಾರೋಷವಾಗಿ ಬೀದಿಯಲ್ಲಿ ತಿರುಗುತ್ತಿದ್ದಾರೆ. ದಮನಿತರು ಬಾಯಿಬಿಡಲಾಗದೇ ನಿತ್ಯ ಒಳಗೇ ಸಾಯುತ್ತಿದ್ದಾರೆ. ಸತ್ಯವೂ ಸದ್ದಿಲ್ಲದೇ ಸತ್ತುಹೋಗಿದೆ! ಬಡವರಿಗೆ ನ್ಯಾಯ ನೀಡುವವರು ಎಲ್ಲಿದ್ದಾರೆ? ಅಪರಾಧಿಗಳನ್ನು ಶಿಕ್ಷಿಸಲು ಪರ್ಯಾಯ ಮಾರ್ಗಗಳೇ ಇಲ್ಲವೇ? ಇವು ನಮ್ಮ ಒಳಗನ್ನು ಅಲುಗಾಡಿಸಿ ಕಾಡುತ್ತಿರುವ ಪ್ರಶ್ನೆಗಳು.

ಪ್ರಕೃತಿಯ ಸವಾಲು ಅರಿವ ಕಣ್ಣಿದೆಯೇ?


– ರೂಪ ಹಾಸನ


 

ಮನುಷ್ಯ ಪ್ರಕೃತಿಯ ಒಂದು ಅದ್ಭುತ ಸೃಷ್ಟಿ. ಅವನ ಮನಸು, ಬುದ್ಧಿ, ಅಂಗಾಂಗ ರಚನೆ ಅದರ ಕಾರ್ಯವಿಧಾನ, ವಂಶಾಭಿವೃದ್ಧಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಇದನ್ನೆಲ್ಲಾ ಇಷ್ಟು ಅಚ್ಚುಕಟ್ಟಾಗಿ ಹೇಗೆ ಜೋಡಿಸಲಾಗಿದೆ! ಎಂದು ಅಚ್ಚರಿಯಾಗದೇ ಇರಲಾರದು. ಯಾವುದೇ ಜೀವಿಯ ಕಾಮದ ಮೂಲ ಉದ್ದೇಶ ಸಂತಾನಾಭಿವೃದ್ಧಿ. ಗಂಡು-ಹೆಣ್ಣುಗಳ ಸಮ್ಮಿಲನದಿಂದ ಮನುಷ್ಯ ಸಂತತಿ ಈ ಭೂಮಿಯ ಮೇಲೆ ಬೆಳೆಯುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಣ್ಣು ಮತ್ತು ಗಂಡುಗಳಿಬ್ಬರಿಗೂ ತಮ್ಮದೇ ಆದ ವಿಶಿಷ್ಟ ಪಾತ್ರಗಳಿವೆ. ಇದು ಪ್ರಾಕೃತಿಕ ಸಹಜ ನೆಲೆ. ಆದರೆ ಇನ್ನೊಂದು ಮುಖವನ್ನು ಗಮನಿಸುವುದಾದರೆ……

ಜನಸಂಖ್ಯೆಯಲ್ಲಿ ಅಪರಿಮಿತ ಹೆಚ್ಚಳವಾಗಿ ಜನರಿಗೆ ಆಹಾರವನ್ನು, ಮೂಲಭೂತ ಸೌಕರ್ಯವನ್ನೂ ಒದಗಿಸಲಾಗದೇ Solutions_to_population_explosionಅಭಿವೃದ್ಧಿಶೀಲ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳು ಇಂದು ನೆನ್ನೆಯದಲ್ಲ. ಅದರಲ್ಲೂ ಭಾರತ ಸಧ್ಯಕ್ಕೆ ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೇಶವಾಗಿದೆ. ಭಾರತದಲ್ಲಿ ಈಗ ಸುಮಾರು 120 ಕೋಟಿ ಜನರಿದ್ದೇವೆ. 2030 ರ ಹೊತ್ತಿಗೆ 1.53 ಬಿಲಿಯನ್ ಆಗುವ ಸಾಧ್ಯತೆ ಇದೆ ಎಂದು ಒಂದು ಸಂಶೋಧನಾ ವರದಿ ಹೇಳುತ್ತದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ೩೫೦ ಮಿಲಿಯನ್ ಇದ್ದ ನಮ್ಮ ಜನಸಂಖ್ಯೆ ಅಗಾಧವಾಗಿ, ಹೆದರಿಸುವಷ್ಟು ವೇಗದಲ್ಲಿ ಬೆಳೆಯುತ್ತಿದೆ. ಇದರ ವೇಗ ಹೀಗೆ ಮುಂದುವರೆದರೆ ಸಧ್ಯ ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಚೀನಾವನ್ನೂ ಕೆಲವೇ ದಶಕಗಳಲ್ಲಿ ಹಿಂದಿಕ್ಕುವ ಸಾಧ್ಯತೆ ಇದೆ. ಈಗ್ಯೆ ಮೂರು ದಶಕಗಳ ಹಿಂದೆಯೇ ಎಚ್ಚೆತ್ತುಕೊಂಡ ಚೀನಾ ಕುಟುಂಬಕ್ಕೊಂದೇ ಮಗುವೆಂಬ ಕಡ್ಡಾಯ ಕಾನೂನು ತಂದು ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದುಕೊಂಡಿದೆ. ನಮ್ಮದು ಬಹು ಸಂಸ್ಕೃತಿಗಳ, ವೈವಿಧ್ಯಗಳ, ಜಾತಿ-ಧರ್ಮಗಳ ದೇಶವಾಗಿರುವುದರಿಂದ ಇಂತಹ ಕಡ್ಡಾಯ ಕಾನೂನು ತರಲು ಸಾಧ್ಯವಾಗಿಲ್ಲ. ಇದರ ಮಧ್ಯೆಯೇ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಲವಂತದಿಂದ, ಅಸೂಕ್ಷ್ಮವಾಗಿ ಸಾವಿರಾರು ಜನರಿಗೆ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿ ಅವರ ಭಾವನೆಗಳ ಮೇಲೆ ಅತ್ಯಾಚಾರವೆಸಗಿದ್ದು ಭಾರತ ಇತಿಹಾಸದ ಕಪ್ಪು ಚುಕ್ಕೆಯಾಗಿ ದಾಖಲಾಗಿದೆ. ಇದೆಲ್ಲಾ ನಾಗರಿಕ ಜಗತ್ತಿನ, ವಾಸ್ತವದ ಇನ್ನೊಂದು ಮುಖವಷ್ಟೇ. ಆದರೆ ಪ್ರಕೃತಿಯ ನೀತಿಗೆ ಮತ್ತೊಂದೇ ಮುಖವಿದೆ.

ಈ ಜನಸಂಖ್ಯಾ ಸ್ಪೋಟಕ್ಕೆದುರಾಗಿ ಪ್ರಕೃತಿ ಸದ್ದಿಲ್ಲದೇ ಮನುಕುಲಕ್ಕೆ ತನ್ನ ಪ್ರತಿಕಾರವೆಸಗಲು ಪ್ರಾರಂಭಿಸಿದ್ದಾಳೆ. ಮನುಷ್ಯನ ಮಿತಿಮೀರಿದ ಆಸೆ, ಪ್ರಕೃತಿ ಬದ್ಧವಲ್ಲದ ಅಸಹಜ ನಡವಳಿಕೆ, ಹೆಚ್ಚಿದ ಜನಸಂಖ್ಯೆಯ ಪರಿಣಾಮದಿಂದ ಕುಸಿಯುತ್ತಿರುವ ಮನುಷ್ಯನ ಆರೋಗ್ಯದ ಗುಣಮಟ್ಟ, ಕಲುಷಿತಗೊಳ್ಳುತ್ತಿರುವ ಪರಿಸರ……. ಹೀಗೆ ಹಲವಾರು ಕಾರಣಗಳಿಂದ ಗಂಡು-ಹೆಣ್ಣಿನ ಸಂತಾನೋತ್ಪತ್ತಿಯ ಕಾರ್ಯ ಕುಂಠಿತಗೊಳ್ಳುತ್ತಿದೆ. frigidity-imageಗಂಡಿನಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಚಲನೆಯ ಸಾಮರ್ಥ್ಯ ಕಡಿಮೆಯಾಗುತ್ತಿರುವುದು, ಹೆಣ್ಣಿನಲ್ಲಿ ’ಫ್ರಿಜಿಡಿಟಿ’ [ನಿಷ್ಪಂದನೆ]ಯ ಪ್ರಮಾಣವೂ ಹೆಚ್ಚಾಗುತ್ತಿರುವುದು ವೈದ್ಯಲೋಕದಲ್ಲಿ ಈಗಾಗಲೇ ಕಳವಳ ಮೂಡಿಸಿದೆ. ಆದರೆ ಇತ್ತೀಚೆಗೆ ಬಹು ಹೆಚ್ಚು ಆತಂಕಕ್ಕೀಡು ಮಾಡಿರುವ ಮುಖ್ಯ ಸಮಸ್ಯೆ ಎಂದರೆ, ಹೆಣ್ಣಿನಲ್ಲಿ ಸ್ತ್ರೀ ಹಾರ್ಮೋನುಗಳ ಉತ್ಪತ್ತಿಯಲ್ಲಿನ ಏರುಪೇರು ಮತ್ತು ಅವಳಲ್ಲಿ ಪುರುಷ ಹಾರ್ಮೋನುಗಳ ಹೆಚ್ಚಳದಿಂದಾಗಿ, ಗರ್ಭಧಾರಣೆಗೆ ಸಂಬಂಧಿಸಿದ ಹಲವು ತೊಂದರೆಗಳನ್ನು ಆಕೆ ಎದುರಿಸುತ್ತಿದ್ದಾಳೆ. ಆಕೆಯಲ್ಲಿ ಅಂಡಾಣು ಉತ್ಪಾದನೆ ಕಡಿಮೆಯಾಗುತ್ತಿದೆ. ಗರ್ಭಪಾತಗಳು ಹೆಚ್ಚಾಗುತ್ತಿವೆ. ಅವಳಲ್ಲಿ ನಿರ್ದಿಷ್ಟ ಕಾರಣವಿಲ್ಲದೇ ಸ್ತ್ರೀತ್ವದ ಹಾರ್ಮೋನಿಗೆ ಬದಲಾಗಿ ಪುರುಷ ಹಾರ್ಮೋನುಗಳು ಉತ್ಪತ್ತಿಯಾಗುತ್ತಿರುವ ಸಮಸ್ಯೆಗೆ “ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್” [ಪಿ.ಸಿ.ಒ.ಎಸ್] ಎಂದು ಹೆಸರಿಸಲಾಗಿದೆ. ಇದೊಂದು ನಿರ್ನಾಳ ಗ್ರಂಥಿಗಳ ಸಮಸ್ಯೆ. ಇದು ಪ್ರಕೃತಿ ’ಹೆಣ್ತನಕ್ಕೆ’ ಒಡ್ಡಿರುವ ಸವಾಲು ಎಂದೇ ವೈದ್ಯ ಲೋಕ ಪರಿಗಣಿಸಿದೆ.

1930 ರಲ್ಲಿಯೇ ಈ ಸಮಸ್ಯೆಯನ್ನು ಅಮೆರಿಕದಲ್ಲಿ ಪತ್ತೆ ಹಚ್ಚಿದ್ದರೂ ಇದಕ್ಕೆ ಕಾರಣವನ್ನು ಇದುವರೆವಿಗೂ ಕಂಡುಹಿಡಿಯಲಾಗಿಲ್ಲ. ಈ ಸಮಸ್ಯೆಯು ನಿರ್ದಿಷ್ಟ ರೋಗಲಕ್ಷಣವನ್ನು ಹೊಂದಿಲ್ಲದ ಕಾರಣ ಇದನ್ನು ಪತ್ತೆ ಹಚ್ಚಲು ಅನೇಕ ವೈದ್ಯವಿಧಾನಗಳನ್ನು ಪ್ರಯೋಗಿಸಬೇಕಿದೆ. ಜೊತೆಗೆ ಇದಕ್ಕೆ ನಿರ್ದಿಷ್ಟವಾದ ಯಾವುದೇ ಒಂದು ಚಿಕಿತ್ಸಾಕ್ರಮವೂ ಇಲ್ಲ. ಪ್ರಾರಂಭದಲ್ಲಿ ಈ ಸಮಸ್ಯೆಯಿಂದ ಬಳಲುವ ಮಹಿಳೆಯರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದ್ದು, ಇಂದು ಜಗತ್ತಿನಾದ್ಯಂತಾ ಶೇಕಡ ೨೦ಕ್ಕಿಂತಾ ಹೆಚ್ಚು ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುತ್ತಿರುವುದು, ಭಾರತದಲ್ಲಿ ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವ ಮಹಿಳೆಯರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.

ಈ ಸಮಸ್ಯೆ ಇರುವ ಮಹಿಳೆಯರಲ್ಲಿ ಸ್ತ್ರೀ ಹಾರ್ಮೋನುಗಳ ಸ್ರವಿಸುವಿಕೆಯಲ್ಲಿ ಏರುಪೇರಾಗಿ ಅಂಡಾಣು ಬೆಳವಣಿಗೆ ಮತ್ತು ಬಿಡುಗಡೆಗೆ ತೊಂದರೆಯುಂಟಾಗುತ್ತದೆ. ಜೊತೆಗೆ ಪುರುಷ ಹಾರ್ಮೋನುಗಳಾದ ಟೆಸ್ಟೆಸ್ಟಿರೋನ್ ಹಾಗೂ ಆಂಡ್ರೋಜನ್ ಅಂಶ ಹೆಚ್ಚಾಗಿ, ಮಹಿಳೆಯರಲ್ಲಿ ಪುರುಷನಂತೆ ಮುಖ ಹಾಗೂ ಮೈ-ಕೈಗಳ ಮೇಲೆ ರೋಮ ಬೆಳೆಯುವುದು, ಗಂಡಿನಂತೆ ತಲೆಗೂದಲು ಉದುರುವುದು, ಹೆಚ್ಚು ಮೊಡವೆಗಳು ಬರುವುದು…. ಇತ್ಯಾದಿ ಸಮಸ್ಯೆಗಳ ಜೊತೆಗೆ ವಿಪರೀತದ ಬೊಜ್ಜು ಬರುವುದು, ಮಾಸಿಕ ಸ್ರಾವದಲ್ಲಿ ಏರುಪೇರಾಗುವುದು, ದೈಹಿಕ ಶುಷ್ಕತೆ, ಬಂಜೆತನ ಕಾಣಿಸಿಕೊಳ್ಳುವುದು, ಗರ್ಭಿಣಿಯಾದರೂ ಗರ್ಭಸ್ರಾವ, ಗರ್ಭಪಾತಗಳಂತಾ ತೊಂದರೆಗಳು ಉಂಟಾಗುತ್ತವೆ. ಇದಕ್ಕೆ ಸ್ಥೂಲವಾಗಿ, ಮಹಿಳೆಯರಲ್ಲಿ ಅತೀ ಹೆಚ್ಚಾದ ಕೊಬ್ಬಿನಾಂಶದ ಆಹಾರ ಸೇವನೆ, ಧೂಮಪಾನ-ಮದ್ಯಪಾನದ ಅಭ್ಯಾಸ, ಯಾವುದೇ ರೀತಿಯ ವ್ಯಾಯಾಮ ಇಲ್ಲದಿರುವುದು, ಮುಖ್ಯವಾಗಿ ನಗರದ ಆಧುನಿಕ, ಹಾಗೂ ಪುರುಷಾನುಕರಣೆಯ ಜೀವನಕ್ರಮ ಹಾಗೂ ಒತ್ತಡದ ಬದುಕಿನ ಪದ್ಧತಿಗಳು ಕಾರಣವೆಂದು ಹೇಳಲಾಗುತ್ತಿದ್ದರೂ ಈ ಸಮಸ್ಯೆಗೆ ನಿರ್ದಿಷ್ಟ ಕಾರಣವನ್ನು ಇನ್ನೂ ಸಂಶೋಧಿಸಬೇಕಿದೆ.

ಈ ಸಮಸ್ಯೆ ಹೆಚ್ಚಾಗಿ ನಗರಪ್ರದೇಶದ ಹೆಣ್ಣು ಮಕ್ಕಳನ್ನು ಕಾಡುತ್ತಿರುವುದು, ಆಧುನಿಕ ಅಸಹಜ ಜೀವನ ವಿಧಾನದ ಬದಲಾವಣೆಯ ಕಡೆಗೆ ಬೊಟ್ಟು ಮಾಡಿ ತೋರುತ್ತಿದೆ. ಮಹಿಳೆಯ ಬದಲಾದ ಸಾಮಾಜಿಕ, ಕೌಟುಂಬಿಕ, ವೈಯಕ್ತಿಕ ಬದುಕಿನ ಪದ್ಧತಿ ಮತ್ತು ಅವಳ ಸ್ಥಾನಮಾನ, ತನ್ಮೂಲಕ ಅವಳ ಬದಲಾದ ಪ್ರಕೃತಿ ಸಹಜ ಮೂಲಭೂತ ಗುಣ ಸ್ವಭಾವಗಳೂ, ಅತೀ ಒತ್ತಡದ ಜೀವನ ಕ್ರಮ ಈ ಸಮಸ್ಯೆಗೆ ಮುಖ್ಯ ಕಾರಣವೆಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಹೇಳುತ್ತಿದ್ದಾರೆ. ಈ ಕುರಿತು ಮನಃಶಾಸ್ತ್ರೀಯ ನೆಲೆಯಲ್ಲಿಯೂ ಹೆಚ್ಚಿನ ಸಂಶೋಧನೆಗಳಾದರೆ, ಮಹಿಳೆಯ ಕುರಿತ ನಮ್ಮ ಇದುವರೆಗಿನ ಸಿದ್ಧಾಂತಗಳು, ತಿಳಿವಳಿಕೆಗಳೇ ತಲೆಕೆಳಗಾಗುವ ಪ್ರಸಂಗಗಳು ಬರಬಹುದು! ಈ ಸಮಸ್ಯೆಗೆ ಔಷಧಿಗಳಿಗಿಂತಾ ಹೆಚ್ಚಾಗಿ ಸರಿಯಾದ ಜೀವನಕ್ರಮ ಮತ್ತು ಭಾವನಾತ್ಮಕ ನಿರ್ವಹಣೆಯೇ ಅಂದರೆ, ಸ್ತ್ರೀ ಸಹಜ-ಮೂಲಭೂತ ಜೈವಿಕ ಗುಣದ ನಿರ್ವಹಣೆ, ನಿಯಮಿತವಾದ, ಕೊಬ್ಬಿನಂಶವಿರದ ಆಹಾರ ಸೇವನೆ, ಸೂಕ್ತವಾದ ವ್ಯಾಯಾಮ, ಮಾನಸಿಕ ಒತ್ತಡ ನಿವಾರಣಾ ಕ್ರಮಗಳ ಅನುಸರಣೆಯೇ ಸ್ವಲ್ಪ ಮಟ್ಟಿಗಿನ ಈ ಸಮಸ್ಯೆಯ ನಿಯಂತ್ರಣಕ್ಕೆ ಪರಿಹಾರಗಳು ಎಂದು ವೈದ್ಯರು ಹೇಳುವುದನ್ನು ಕೇಳಿದಾಗ ಪ್ರಕೃತಿಯ ಮುಂದೆ ನಾವು ಎಷ್ಟು ದುರ್ಬಲರು ಎಂದು ಅರಿವಾಗುತ್ತದೆ.

ತಾಯ್ತನವೇ ತಮ್ಮ ಸಾಧನೆಗೆ, ಏಳ್ಗೆಗೆ ಅಂಟಿದ ಶಾಪವೆಂದು, ತಾಯ್ತನದ ವೈಭವೀಕರಣದಿಂದ ತಮ್ಮನ್ನು ಬಂಧಿಸಲಾಗುತ್ತಿದೆಯೆಂದು ಒಂದು ಸ್ತ್ರೀ ಸಮೂಹ ಭಾವಿಸುತ್ತಿದೆ. ಹಾಗೇ ತಮಗೆ ಮಕ್ಕಳ ಬಂಧನವೇ ಬೇಡವೆಂದು ಒಂದು ಯುವ ಸಮೂಹ ಅದನ್ನು ನಿರಾಕರಿಸುತ್ತಿದೆ. ಇದರ ಮಧ್ಯೆಯೇ ತಮ್ಮ ಬದುಕು ಸಾರ್ಥಕಗೊಳ್ಳಲು ಒಂದಾದರೂ ಮಗುವಿರಬೇಕೆಂದು ಯೋಚಿಸುವವರೂ ಇರುವುದು ಸಮಾಧಾನಕರ ಅಂಶವಾದರೂ ಪ್ರಕೃತಿ ಗಂಡು-ಹೆಣ್ಣುಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಮರೆತು ತನ್ನ ಮಿತಿಯನ್ನು ಅರ್ಥಮಾಡಿಕೊಳ್ಳದೇ ಅವಿವೇಕಿಗಳು, ಸ್ವಾರ್ಥಿಗಳೂ ಆದಷ್ಟೂ ಆ ಅತಿಗಳನ್ನು ತಡೆಯಲು, ಸೃಷ್ಟಿಯ ಸಮತೋಲನವನ್ನು ಕಾಪಾಡಲು ಪ್ರಕೃತಿ ಸದ್ದಿಲ್ಲದೇ ತನ್ನ ತಂತ್ರ ಹೂಡುತ್ತಲೇ ಇರುತ್ತದೆ. ಅದನ್ನು ಎದುರಿಸಲು, ಮನುಷ್ಯ ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿಯಲು ತಿಣುಕುತ್ತಲೇ ಇರಬೇಕಾಗುತ್ತದೆ ಎಂಬುದು ನಿರ್ವಿವಾದ.

ಮಹಿಳಾ ಚಳವಳಿಗಳು ಮತ್ತು ಆಧುನಿಕ ಲೇಖಕಿಯರ ಮೇಲೆ ವಿಜಯಾ ದಬ್ಬೆಯವರ ಪ್ರಭಾವಗಳು


– ರೂಪ ಹಾಸನ


 

[ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗು ಹಾಸನದ ಜಿಲ್ಲಾ ಲೇಖಕಿಯರ ಬಳಗದ ವತಿಯಿಂದ ದಿನಾಂಕ 27.2.2010 ರಂದು ಬೇಲೂರಿನಲ್ಲಿ ನಡೆದ ‘ವಿಜಯಾನ್ವೇಷಣೆ’ ವಿಜಯಾ ದಬ್ಬೆ ಸಾಹಿತ್ಯ -ಸಾಧನೆ ಕುರಿತ ವಿಚಾರಸಂಕಿರಣದಲ್ಲಿ ಮಂಡಿಸಿದ ವಿಚಾರಗಳ ಬರಹ ರೂಪ.]

ಪ್ರಜಾವಾಣಿಯಲ್ಲಿ ಆತ್ಮಕಥೆಗಳ ಹಿನ್ನಲೆಯಲ್ಲಿ ವಿಜಯಾದಬ್ಬೆಯವರ ಕುರಿತ ನನ್ನ ಅಂಕಣ ಪ್ರಕಟವಾದ ನಂತರ, ವಿವಿಧ ದೂರದರ್ಶನ ವಾಹಿನಿಗಳಲ್ಲಿ ನಾನು ಮೇಡಂ ಕುರಿತು “ಅವರು ನಮ್ಮ ಜಿಲ್ಲೆಯ ಆಧುನಿಕ ಕವಯಿತ್ರಿಯರಲ್ಲಿ ಮೊದಲಿಗರು ಮತ್ತು ಕನ್ನಡ ಸಾಹಿತ್ಯದ ಮಹತ್ವದ ಲೇಖಕಿ, ಅವರಿಂದು ಕ್ರಿಯಾಶೀಲರಾಗಿದ್ದರೆ ಮಹಿಳಾ ಲೋಕದಲ್ಲಿ ಪ್ರಮುಖ ಸ್ಥಾನದಲ್ಲಿರ್‍ತಿದ್ದರು” ಎಂದು ಮಾತನಾಡಿದ್ದು ಕೇಳಿದ ರಾಜ್ಯದ ಬೇರೆ ಬೇರೆ ಭಾಗದ ಕೆಲವು ಲೇಖಕ-ಲೇಖಕಿಯರು ನನ್ನೊಂದಿಗೆ ಮಾತನಾಡಿ “ವಿಜಯಾ ದಬ್ಬೆಯವರು ಈಗ ಅಪ್ರಸ್ತುತ. ಅವರ ಬಗ್ಗೆ ಯಾಕೆ ಅಷ್ಟೊಂದು ಬರೆದು, ಮಾತನಾಡಲು ಹೋದ್ರಿ?” ಎಂದಿದ್ದರು. ಅವರ ಮಾತು ಕೇಳಿ ನನಗೆ ವಿಷಾದವಾಗಿತ್ತು. ಸಾಹಿತ್ಯ ಲೋಕದ ಸಣ್ಣತನದ ಪರಿಚಯವೂ ಆಗಿತ್ತು. ಜಾತಿ, ಲಿಂಗ, ವರ್ಗ, ಬೌದ್ಧಿಕ ಸಾಮರ್ಥ್ಯ ಆಧಾರಿತವಾಗಿರುವ ಅಸೂಯೆ, vijaya-dabbeಹೊಟ್ಟೆಕಿಚ್ಚುಗಳು ಬೇರೆಲ್ಲ ಕ್ಷೇತ್ರಕ್ಕಿಂತ ಸಾಹಿತ್ಯ ಕ್ಷೇತ್ರದಲ್ಲೇ ಹೆಚ್ಚು ಎಂದು ಇಂಥಹ ಸಂದರ್ಭದಲ್ಲೆಲ್ಲಾ ನನಗೆ ಅನ್ನಿಸುತ್ತಿರುತ್ತದೆ. ಆದರೆ ಹಾಗೇ, “ಮೇಡಂ ಬಗ್ಗೆ ಓದಿ, ಟಿ.ವಿ. ನಲ್ಲಿ ನೋಡಿ ಸಂತೋಷವಾಯ್ತು. ಈಗ ಹೇಗಿದ್ದಾರೆ? ಎಲ್ಲಿದ್ದಾರೆ?” ಎಂದು ವಿಚಾರಿಸಿದವರ ಸಂಖ್ಯೆ ಕಿಡಿಕಾರಿದವರ ಸಂಖ್ಯೆಗಿಂತಾ ಹೆಚ್ಚಿತ್ತೆನ್ನುವುದೇ ಒಂದು ಸಮಾಧಾನ. ಆಗ ನನ್ನಲ್ಲಿ ಪ್ರಶ್ನೆಗಳೆದ್ದಿತ್ತು, ‘ಒಬ್ಬ ಲೇಖಕ ನಿಷ್ಕ್ರಿಯನಾದ ಎಂದ ತಕ್ಷಣ ಅವನು ಅಪ್ರಸ್ತುತನೇ? ಅವನು ತನ್ನ ಬರವಣಿಗೆಯ ಮೂಲಕ ಸದಾ ಪ್ರಸ್ತುತನಾಗಿರುತ್ತಾನಲ್ಲವೇ? ಸಾಹಿತ್ಯ ಚರಿತ್ರೆಯಲ್ಲಿ ದಾಖಲಾದ ಯಾವುದೇ ಸಾಹಿತಿ ಆಯಾ ಕಾಲಘಟ್ಟದ ಜೊತೆಗೆ, ಸಾರ್ವಕಾಲಿಕ ಸತ್ಯಗಳನ್ನು ಪ್ರತಿಪಾದಿಸಿದ್ದರೆ ಸರ್ವಕಾಲಕ್ಕೂ ಪ್ರಸ್ತುತನಾಗಿರುತ್ತಾನಲ್ಲವೇ?’ ಅನ್ನಿಸಿತ್ತು. ಅದರಲ್ಲೂ ವಿಜಯಾ ದಬ್ಬೆಯವರು ಲೇಖಕಿ ಮಾತ್ರ ಅಲ್ಲ. ಮುಖ್ಯವಾಗಿ ಅವರೊಬ್ಬ ದಿಟ್ಟ ಮಹಿಳಾಪರ ಹೋರಾಟಗಾರ್ತಿ. ಸಾಹಿತ್ಯದ ಜೊತೆಗೆ ಪ್ರತಿಭಟನೆ, ಹೋರಾಟಗಳ ಮೂಲಕ ಲಿಂಗಾಧಾರಿತವಾದ ಸಾಮಾಜಿಕ ಬದಲಾವಣೆಯನ್ನು, ಸಮಾನತೆಯನ್ನು ತರಬೇಕು, ಜಾಗೃತಿ ಮೂಡಿಸಬೇಕು ಎಂದು ನಂಬಿದವರು. ಹೀಗಾಗಿ ಸಾಹಿತ್ಯ ಚರಿತ್ರೆಯಲ್ಲಿ ಮಾತ್ರ ಅಲ್ಲ, ಮಹಿಳಾ ಚರಿತ್ರೆಯಲ್ಲಿ ಕೂಡ ಅವರ ಹೆಸರು ಚಿರಸ್ಥಾಯಿಯಾಗಿರುವಂತದ್ದು ಎಂದು ನಾನು ಭಾವಿಸಿದ್ದೇನೆ.

ಹಾಗೆ ವಿಜಯಾ ಮೇಡಂ ನನಗೆ ವೈಯಕ್ತಿಕವಾಗಿ ತುಂಬಾ ಪರಿಚಿತರಲ್ಲ. ಆದರೆ ಒಂದು ರೀತಿಯಲ್ಲಿ ಅವರು ನನ್ನ ಮಾನಸ ಗುರುಗಳು ಅಂದ್ರೆ ತಪ್ಪಿಲ್ಲ. ನನ್ನ ಕಾಲೇಜು ದಿನಗಳಲ್ಲಿ [ನಾನು ಪದವಿ ಓದಿದ್ದು ಗೌರಿಬಿದನೂರಿನಂತ ಒಂದು ಪುಟ್ಟ ಊರಿನಲ್ಲಿ] ಅವರ ಶಿಷ್ಯೆ ಆಗಿದ್ದ ನನ್ನ ಕನ್ನಡ ಉಪನ್ಯಾಸಕರಾದ ಪೂರ್ಣಿಮಾ ಅವರು ವಿಜಯಾ ಮೇಡಂ ಬಗ್ಗೆ ಎಷ್ಟೊಂದು ಹೇಳ್ತಿದ್ದರು ಎಂದರೆ, ನಮಗೆಲ್ಲ ‘ಆದ್ರೆ ವಿಜಯಾ ದಬ್ಬೆ ತರಹ ಧೈರ್ಯವಂತ ಹೆಣ್ಣುಮಗಳಾಗಬೇಕು’ ಎನ್ನುವಂತಾ ಆಸೆಯನ್ನ ಹುಟ್ಟಿಸಿದ್ದರು. ಅವರ ಮಹಿಳಾಪರ ಲೇಖನಗಳನ್ನು ಓದಿ, ಅವರ ಸಮತಾ ಚಟುವಟಿಕೆಗಳ ಬಗ್ಗೆ ಕೇಳಿ ಅವರನ್ನು ನೋಡದಿದ್ದರೂ ನಾವು ಗೆಳತಿಯರು ಅದೆಷ್ಟೊಂದು ಪ್ರೇರಣೆ ಪಡೆದಿದ್ದೆವು ಎನ್ನುವುದನ್ನು ವಿವರಿಸೋದು ತುಂಬಾ ಕಷ್ಟ. ಅವರ ಮೊದಲ ಪ್ರಭಾವ ನನ್ನಂತವರ ಮೇಲೆ ಲೇಖಕಿಯಾಗಿ ಆಗಿದ್ದಕ್ಕಿಂತಾ ಹೆಚ್ಚಾಗಿ ಹೋರಾಟಗಾರ್ತಿಯಾಗಿಯೇ ಹೆಚ್ಚು ಎಂದು ಭಾವಿಸುತ್ತೇನೆ. ಆನಂತರದ ಪ್ರಭಾವ ಕವಿಯಾಗಿ, ಬರಹಗಾರ್ತಿಯಾಗಿ. ನನ್ನ ಕಾಲೇಜು ದಿನಗಳಲ್ಲೇ ಮೈಸೂರಿಗೆ ಹೋದಾಗ ಅವರನ್ನ ಒಮ್ಮೆ ನೋಡಲೇಬೇಕು ಎಂದು ಯೂನಿವರ್ಸಿಟಿಗೆ ಹುಡುಕಿಕೊಂಡು ಹೋಗಿದ್ದು ಇನ್ನೂ ನೆನಪಿದೆ. ಆಗ ಅವರನ್ನ ನೋಡಿ ನನಗೆ ಬಹಳವೇ ನಿರಾಶೆ ಆಗಿತ್ತು. ಅವರು ಅತ್ಯಂತ ಮೃದು ಸ್ವಭಾವದ, ತೀರಾ ಮುಗ್ಧ ಹೆಣ್ಣು ಮಗಳಾಗಿ ನನಗೆ ಕಂಡಿದ್ದರು. ದಿಟ್ಟ ಮಹಿಳಾ ಹೋರಾಟಗಾರ್ತಿ, ಅನ್ಯಾಯಗಳ ವಿರುದ್ಧ ಕಿಡಿಕಾರುವ ಬಂಡಾಯಗಾರ್ತಿ, ಸಮಾನತೆಗಾಗಿ ಪ್ರತಿಭಟನೆ ಮಾಡೋ ಚಳವಳಿಗಾರ್ತಿ ಇವರೇನಾ? ಅಂತ ಆಶ್ಚರ್ಯ ಆಗಿತ್ತು. ಅವರ ವ್ಯಕ್ತಿತ್ವ ನಾನು ಕಲ್ಪಿಸಿಕೊಂಡಂತಾ ‘ದಿಟ್ಟ ಹೆಣ್ಣು ಮಗಳ’ ಚಿತ್ರಕ್ಕೆ ಸ್ವಲ್ಪ ಕೂಡ ಹೊಂದಿಕೆ ಆಗುತ್ತಿರಲಿಲ್ಲ. ಅದು ನನ್ನ ಹದಿಹರೆಯದ ತಿಲಿವಳಿಕೆಯ ದೋಷವಿರಬಹುದು! ‘ಇವರು ಮಹಿಳೆಯರ ಪರವಾಗಿ ಅದೆಂಥಾ ಹೋರಾಟ ಮಾಡ್ತಾರೆ?’ ಎಂದು ವಿಸ್ಮಯಪಟ್ಟುಕೊಂಡಿದ್ದೆ. ಆದರೆ ನನ್ನ ಮೇಲಿನ ಅವರ ಪ್ರಭಾವ ಮಾತ್ರ ಅಳಿಸಿ ಹೋಗುವಂತದ್ದಾಗಿರಲಿಲ್ಲ. ಯಾಕೆಂದರೆ ಎಂಭತ್ತರ ದಶಕದಲ್ಲಿ ಅವರು ಮಾಡ್ತಿದ್ದಂತಾ ಕೆಲಸಗಳು ಅಷ್ಟೊಂದು ಶಕ್ತಿಶಾಲಿಯಾಗಿದ್ದವು.

ಇನ್ನು ಮಹಿಳಾ ಚಳವಳಿಗಳ ಕುರಿತು ಹೇಳ್ಬೇಕು ಅಂದ್ರೇ ಯಾವುದೇ ಚಳವಳಿನೂ ದಿಢೀರನೆ ತನ್ನಷ್ಟಕ್ಕೆ ತಾನೇ ಹುಟ್ಟಿಕೊಂಡುಬಿಡುವಷ್ಟು ಸ್ವಯಂಭು ಅಲ್ಲ. ಪಕ್ವವಾದ ಬೀಜಕ್ಕೆ ಪೂರಕವಾಗಿ ಹದವಾದ ಮಣ್ಣು, ಗಾಳಿ, ಬೆಳಕು, ನೀರು ಎಲ್ಲವೂ ಬೇಕು. ಆಗ ಮಾತ್ರ ಬೀಜ ಮೊಳಕೆ ಒಡೆಯುತ್ತೆ, ಚಿಗುರುತ್ತೆ, ಹೂ-ಹಣ್ಣುಗಳನ್ನ ನೀಡುತ್ತೆ. ಇಂತಹ ಎಲ್ಲ ಪೂರಕ ಪರಿಸರ ೭೦ರ ದಶಕದಲ್ಲಿ ನಿರ್ಮಾಣ ಆಗಿದ್ದರಿಂದಲೇ ಮಹಿಳಾ ಚಳವಳಿ ಆ ಕಾಲಕ್ಕೆ ಸಶಕ್ತವಾಗಿ ರೂಪುಗೊಂಡಿತು. ಬಂಡಾಯ ಸಾಹಿತ್ಯ ಚಳವಳಿ, ದಲಿತ ಚಳವಳಿ, ರೈತ ಚಳವಳಿ, ಕಾರ್ಮಿಕ ಚಳವಳಿ…… ಹೀಗೆ ಹತ್ತು ಹಲವು ಚಳವಳಿಗಳು ಪ್ರಬಲವಾಗಿ ಹುಟ್ಟಿಕೊಂಡಂತಾ ಕಾಲಘಟ್ಟದಲ್ಲಿ ಅವುಗಳೆಲ್ಲದರಿಂದ ಪ್ರೇರಣೆ ಪಡೆದು, ಅದರ ಜೊತೆಜೊತೆಗೇ ಹೆಜ್ಜೆ ಹಾಕಲು ಪ್ರಾರಂಭಿಸಿದ್ದು ಈ ಮಹಿಳಾ ಚಳವಳಿ. ದೇಶದ ಬೇರೆ ಬೇರೆ ಭಾಗಗಳಲ್ಲಿ ಮಹಿಳಾ ಸಂಘಟನೆಗಳvijaya-dabbe-2 ಅಡಿಯಲ್ಲಿ ರೂಪುಗೊಂಡ ಈ ಮಹಿಳಾ ಚಳವಳಿ ತನ್ನ ಅನನ್ಯತೆ ಹಾಗೂ ವಿಶಿಷ್ಟತೆಯಿಂದ ಇತಿಹಾಸದಲ್ಲಿ ದಾಖಲಾಗಿದ್ದು ಒಂದು ವಿಶೇಷ.

ಬೇರೆ ಬೇರೆ ಚಳವಳಿಗಳು ಹಾಗೂ ವಿಚಾರವಾದದ ಹಿನ್ನಲೆಯ ಜೊತೆಗೆ, ಹೆಚ್ಚಾದ ಮಹಿಳಾ ಶಿಕ್ಷಣ ಪ್ರಮಾಣ, ಮಹಿಳಾ ಸಬಲೀಕರಣ ಹಾಗೂ ಔದ್ಯೋಗಿಕ ಕ್ರಾಂತಿ, ಆ ಸಂದರ್ಭದಲ್ಲಿ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸಿತ್ತು. ಇದೇ ಸಂದರ್ಭದಲ್ಲಿ ೧೯೭೨ರಲ್ಲಿ ಅದೇಮೊದಲ ಬಾರಿಗೆ ಇಂದಿರಾಗಾಂಧಿಯವರ ಸರ್ಕಾರ ಮಹಿಳಾ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ನೇಮಕ ಮಾಡಿದ್ದ ಸಮಿತಿಯ ವರದಿ, ಬೌದ್ಧಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಮಹಿಳೆಯರಲ್ಲಿ ಹೊಸ ಎಚ್ಚರವನ್ನು ಮೂಡಿಸಿತು. ಮಹಿಳೆಯರ ಸ್ಥಾನಮಾನ, ಸಾಮಾಜಿಕ ಸ್ಥಿತಿಯ ಕುರಿತು ಕಾಳಜಿ ಇದ್ದ ಹಲವು ಮಹಿಳೆಯರು ಈ ವರದಿ ಕುರಿತು ದೇಶದ ಎಲ್ಲೆಡೆ ಚರ್ಚೆಗಳನ್ನು, ವಿಚಾರಗೋಷ್ಠಿಗಳನ್ನು, ಕಾರ್ಯಾಗಾರಗಳನ್ನು ನಡೆಸಿದರು. ಇಂಥಹ ಒಂದು ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡ ಮೈಸೂರಿನ ಆಹಾರವಿಜ್ಞಾನಿಗಳಾದ ಡಾ.ಈ.ರತಿರಾವ್ ಹಾಗೂ ಡಾ.ವಿಜಯಾ ದಬ್ಬೆಯವರ ದೃಢ ನಿರ್ಧಾರದಿಂದ 1978 ರಲ್ಲಿ, ಮೈಸೂರಿನಲ್ಲಿ “ಸಮತಾ” ವೇದಿಕೆಯನ್ನು ಹುಟ್ಟುಹಾಕಿಕೊಂಡರು. ಹಾಗೆ ಇದೇ ಸಂದರ್ಭದಲ್ಲಿ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲೂ ಅನೇಕ ಮಹಿಳಾ ಪರ ಸಂಸ್ಥೆಗಳು, ಸಂಘಟನೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಬೆಂಗಳೂರಿನ “ವಿಮೋಚನಾ” ಹಾಗೂ “ಮಾನಿನಿ” ಮುಖ್ಯವಾದವುಗಳು.

“ಸಮತಾ” ಪ್ರಾರಂಭದಲ್ಲಿ ಒಂದು ಮಹಿಳಾ ಅಧ್ಯಯನ ಕೇಂದ್ರವಾಗಿ ಕೆಲಸ ಮಾಡಲು ಉದ್ದೇಶಿಸಿದ್ದರೂ ಮಹಿಳೆಯರ ಸಮಸ್ಯೆಗಳ ತೀವ್ರತೆಯನ್ನು ಗಮನಿಸಿ, ಅಧ್ಯಯನದ ಜೊತೆಗೆ ಹೋರಾಟದ ಹಾದಿಯನ್ನು ಹಿಡಿಯಿತು. ವಿಜಯಾ ದಬ್ಬೆಯವರ ವ್ಯಕ್ಕಿತ್ವವನ್ನು ಈ “ಸಮತಾ ವೇದಿಕೆ” ಹಾಗೂ “ಸಮತಾ ಅಧ್ಯಯನ ಕೇಂದ್ರ”ಗಳನ್ನು ಹೊರತುಪಡಿಸಿ ಕಟ್ಟಿಕೊಳ್ಳುವುದಿಕ್ಕೆ ಸಾಧ್ಯವೇ ಇಲ್ಲ. ಇವು, ಅವರು ಮಹಿಳಾಪರ ಮತ್ತು ಸಮಾಜಮುಖಿಯಾಗುವಂತೆ ಹಂತ ಹಂತವಾಗಿ ಬೆಳೆಸಿವೆ. ಮಹಿಳಾ ಚಳವಳಿಗೆ ಒಂದು ಸಾಂಸ್ಕೃತಿಕ ನೆಲೆಗಟ್ಟು ರೂಪಿಸುವಲ್ಲಿ ಇದವರಿಗೆ ನೆರವಾಗಿವೆ. ಸಮಾಜದ ಎಲ್ಲ ಸ್ತರದ ಮಹಿಳೆಯರ ಮೇಲಿನ ವಿವಿಧ ರೀತಿಯ ಶೋಷಣೆಯ ವಿಶ್ವರೂಪದರ್ಶನ ವಿಜಯಾ ಅವರಿಗಾಗಿದ್ದು ಇವುಗಳಿಂದಲೇ. ‘ಸ್ತ್ರೀವಾದವೆಲ್ಲಾ ಪಾಶ್ಚಾತ್ಯರಿಂದ ಬಂದದ್ದು ನಮ್ಮಲ್ಲಿ ಅದರ ಅವಶ್ಯಕತೆ ಇಲ್ಲ’ ಎನ್ನುವಂತಹ ನಂಬಿಕೆ ಇದ್ದ ಕಾಲದಲ್ಲಿ ಕಲಿತ ತಿಳಿವಳಿಕೆಯ ಜೊತೆಗೆ, ಸ್ವಂತ ಅನುಭವದ ಸಾರವನ್ನು ಬೆರೆಸಿ ತನ್ನ ಬದುಕನ್ನು-ಬರಹವನ್ನು-ಚಟುವಟಿಕೆಗಳನ್ನು ಗಟ್ಟಿಗೊಳಿಸಿಕೊಳ್ಳುವುದರ ಜೊತೆಗೆ, ಅದು ಸಮಾಜಕ್ಕೆ ಉಪಯೋಗಿಯಾಗುವಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಲೆ, ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡರು ವಿಜಯಾ ದಬ್ಬೆಯವರು. ಜೊತೆಗೆ ವಿಚಾರವಂತ ಮಹಿಳೆಯರನ್ನು ನಿರಂತರವಾಗಿ ಸಂಘಟನೆಯಲ್ಲಿ ಹಿಡಿದಿಡುವಂತಾ ಕೆಲಸ ಕಡಿಮೆಯದಲ್ಲ.

ಕರ್ನಾಟಕದಾದ್ಯಂತ ಹಲವಾರು ಮಹಿಳಾ ಜಾಗೃತಿ ಶಿಬಿರ, ಸಂಕಿರಣ, ಸಂಘಟನೆಗಳನ್ನು ವ್ಯವಸ್ಥಿತವಾಗಿ ಇಪ್ಪತ್ತು ವರ್ಷಗಳ ಕಾಲ, ಸಮಾನಮನಸ್ಕರೊಡಗೂಡಿ ನಡೆಸಿದ ಗಟ್ಟಿಗಿತ್ತಿ ಇವರು. ಮಹಿಳೆಯರ ಮೇಲೆ ವಿವಿಧ ರೂಪಗಳಲ್ಲಿ ನಡೆಯುತ್ತಿದ್ದ ವರದಕ್ಷಿಣೆ ಕಿರುಕುಳ, ಸಾವು ಅಥವಾ ಕೊಲೆ, ಅತ್ಯಾಚಾರ, ಕೌಟುಂಬಿಕ ಹಿಂಸೆ, ಮುಂತಾದವುಗಳನ್ನು ಪ್ರತಿಭಟನೆ, ಹೋರಾಟಗಳ ಮೂಲಕ ಹೆಣ್ಣಿನಪರವಾಗಿ ನ್ಯಾಯ ಕೇಳಲು ಬಳಸಿಕೊಂಡಿದ್ದಾರೆ. ಅನೇಕ ದನಿಯಿಲ್ಲದ ಮಹಿಳೆಯರಿಗೆ ದನಿ ನೀಡಿದ್ದು, ನೊಂದ ಮಹಿಳೆಯರಿಗೆ ಸಾಂತ್ವನ ನೀಡಿ, ಸಮಸ್ಯೆಗಳಿಗೆ ಪರಿಹಾರ ನೀಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು “ಸಮತಾ ವೇದಿಕೆ”.

ಚೇತನ ಕನ್ನಡ ಸಂಘದ ಪುಸ್ತಕ ಪುರವಣಿಯ ಸಂಪಾದಕಿಯಾಗಿ, ನೆಲೆ ತಪ್ಪಿದ ಮಹಿಳೆಯರಿಗೆ ಭದ್ರನೆಲೆ ಒದಗಿಸುವ ಉದ್ದೇಶದಿಂದ ರೂಪಿತಗೊಂಡಿರುವ “ಶಕ್ತಿಧಾಮ”ದ ಖಜಾಂಚಿಯಾಗಿ, ಆಳಕ್ಕಿಳಿದು ಅಭ್ಯಸಿಸುವ ಸಂಶೋಧಕಿಯಾಗಿ, ಪುರುಷ ಪ್ರಧಾನ ವ್ಯವಸ್ಥೆಯ ಮೂಲ ಬೇರುಗಳನ್ನು ಜಾಗೃತ ನೆಲೆಗಳಿಂದ ದಿಟ್ಟವಾಗಿ ಪ್ರಶ್ನಿಸುವ ಕವಯಿತ್ರಿಯಾಗಿ, ಕಡ್ಡಿ ತುಂಡು ಮಾಡುವ ನಿಷ್ಠೂರತೆ ಇಲ್ಲದೇ, ಮಗುವಿಗೆ ತಿಳಿ ಹೇಳುವ ನೆಲೆಯ ವಿಮರ್ಶಕಿಯಾಗಿ, ನಿರ್ಲಕ್ಷಿತ ಲೇಖಕಿಯರ ಕುರಿತ ಲೇಖನಗಳ ಸಂಪಾದಕಿಯಾಗಿ, ಮಹಿಳಾ ಲೋಕದ ಅಧ್ಯಯನದ ಗಂಭೀರ ಲೇಖಕಿಯಾಗಿ, ಸಂಸ್ಕೃತಿಯ ಪುನರ್ ನಿರ್ಮಾಣದ ದಿಟ್ಟ ಚಿಂತಕಿಯಾಗಿ, ಪುರಾಣ ಪ್ರತೀಕಗಳನ್ನು ಮುರಿದು ಕಟ್ಟುವ ವಿದ್ವಾಂಸರಾಗಿ, ಸಮರ್ಥ ಅನುವಾದಕಿಯಾಗಿ, ಪ್ರವಾಸದಲ್ಲಿ ತನ್ನ ಸುತ್ತಲನ್ನು ಸೂಕ್ಷ್ಮತೆಯೊಂದಿಗೆ ದಾಖಲಿಸುವ ಸಾಹಿತಿಯಾಗಿ, ವಿಮೆನ್ ರೈಟಿಂಗ್ ಇನ್ ಇಂಡಿಯಾ- ಕನ್ನಡ ವಿಭಾಗದ ಪ್ರಾದೇಶಿಕ ಸಂಪಾದಕಿಯಾಗಿ, ಲೇಖಕಿಯರ ಆತ್ಮ ಕಥಾನಕ “ಲೇಖ-ಲೋಕ”ದ ಸಂಪಾದಕಿಯಾಗಿ……… ಹೀಗೆ ಆಧುನಿಕ ಲೇಖಕಿಯರು ಮಾತ್ರವಲ್ಲ, ಆಧುನಿಕ ಮಹಿಳೆಯರೆಲ್ಲರ ಮೇಲೂ ಪ್ರಭಾವ ಬೀರಬಲ್ಲಂತಾ ಬಹುಮುಖಿ ವ್ಯಕ್ತಿತ್ವ ವಿಜಯಾ ದಬ್ಬೆಯವರದ್ದು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಾರಂಭದ ದಿನಗಳಲ್ಲಿ, ಮಹಿಳೆಯರು ಓದಲು ಸೇರಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅನೇಕರಿಗೆ ಪ್ರೋತ್ಸಾಹ, ಪ್ರೇರಣೆ ನೀಡಿದ್ದಾರೆ. ಮಹಿಳಾ ಉಪನ್ಯಾಸಕಿಯರನ್ನು ರೂಪಿಸಿದ್ದಾರೆ. ಮಹಿಳಾ ಪಿ.ಹೆಚ್.ಡಿ ಗೈಡ್‌ಗಳು ಇಲ್ಲದಿದ್ದ ಕಾಲದಲ್ಲಿ ತಾವೇ ಪ್ರಥಮ ಮಹಿಳಾ ಗೈಡ್ ಆಗಿ ದಾಖಲೆ ನಿರ್ಮಿಸುವುದರೊಂದಿಗೆ, ಅನೇಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಇವೆಲ್ಲವೂ ಅವರ “ವಿಜಯಾಭಿನಂದನ” ಗ್ರಂಥದಲ್ಲಿ ದಾಖಲಾಗಿವೆ. ಅವರ ಗುರುಗಳು, ಸಹವರ್ತಿಗಳು, ಮಿತ್ರವೃಂದ, ಶಿಷ್ಯರು, ಸಹಾಯ ಪಡೆದವರು ಅವರನ್ನು, ಅವರ ಗುಣ-ಸ್ವಭಾವಗಳನ್ನು ಮೆಚ್ಚಿ ಬರೆದಿರುವ ಬರಹಗಳನ್ನು ಓದಿದರೆ ಕಣ್ಣು ತುಂಬಿಬರುತ್ತದೆ. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾಡುವುದೆಲ್ಲವನ್ನೂ ಅವರು ಕೇವಲ ಇಪ್ಪತ್ತು ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ ಎಂಬುದೇ ಅಚ್ಚರಿಯ ವಿಷಯ. ಅನೇಕರಿಗೆ ವಿದ್ಯಾಭ್ಯಾಸಕ್ಕೆ ಹಣ ನೀಡಿದ್ದಾರೆ. ತಮ್ಮ ಮನೆಯಲ್ಲೇ ಇಟ್ಟುಕೊಂಡು ಓದಿಸಿದ್ದಾರೆ. ಇಂತಹ ಅನನ್ಯ ವ್ಯಕ್ತಿತ್ವದ ವಿಜಯಾ ದಬ್ಬೆಯವರ ಬರಹಗಳು ಮಾತ್ರವಲ್ಲ, ಅವರ ಕೆಲಸಗಳೂ ನಮಗೆ ಮಾದರಿಯಾಗುವಂತದ್ದು.

ನನ್ನ ವೈಯಕ್ತಿಕ ನೆಲೆಯಲ್ಲಿ ವಿಜಯಾ ದಬ್ಬೆಯವರ ಪ್ರಭಾವ ತುಂಬಾ ದೊಡ್ಡದು. ವಿದ್ಯಾರ್ಥಿ ಜೀವನದಲ್ಲಿದ್ದಾಗ, ಅವರು ಮತ್ತವರ ತಂಡದವರು ಶತಮಾನಗಳಿಂದ ಸ್ತ್ರೀ ಪ್ರವೇಶ ನಿಷಿದ್ಧವಾಗಿದ್ದ ದೇವಾಲಯವೊಂದಕ್ಕೆ ಪ್ರತಿಭಟನಾತ್ಮಕವಾಗಿ ಪ್ರವೇಶಿಸಿದ್ದು ಕೇಳಿ ರೋಮಾಂಚನಗೊಂಡಿದ್ದೆ. ಅವರ ಮಹಿಳಾ ಪರ ಹೋರಾಟಗಳಿಂದ ಪ್ರೇರಿತರಾಗಿ ರಾಜ್ಯಾದ್ಯಂತ ಅನೇಕ ಮಹಿಳಾ ಸಂಘಟನೆಗಳು- ಸಂಸ್ಥೆಗಳು ಎಂಭತ್ತರ ದಶಕದಲ್ಲಿ ಹುಟ್ಟಿಕೊಂಡಿದ್ದವು. ಗೌರಿಬಿದನೂರಿನಂತ ಪುಟ್ಟ ತಾಲ್ಲೂಕಿನಲ್ಲಿ ಕಾಲೇಜು ಓದುತ್ತಿದ್ದ ನಾನು, ರೂಪ್ ಕನ್ವರಳ ಸತಿಸಹಗಮನ, ಹಾಗೂ ತಿಪಟೂರಿನ ವೈದ್ಯರ ಪತ್ನಿ ಶಶಿಕಲಾ ವರದಕ್ಷಿಣೆ ಪ್ರಕರಣಗಳಲ್ಲಿ, ಮೈಸೂರಿನ ಸಮತಾ ನಡೆಸಿದ ಪ್ರತಿಭಟನೆಯಂತೆಯೇ ಗೌರಿಬಿದನೂರಿನ ನ್ಯಾಷನಲ್ ಕಾಲೇಜು ಹಾಗೂ ಆಚಾರ್ಯ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳನ್ನು ಸೇರಿಸಿ ಮೌನ ಪ್ರತಿಭಟನೆ ಮಾಡಿದ್ದು ಹಾಗೂ ಬೀದಿಗಿಳಿದು ಹೋರಾಟ ನಡೆಸಿದ್ದು ನೆನಪಾಗುತ್ತದೆ. ಮಹಿಳೆಯರನ್ನು ಸೇರಿಸಿ ಪುರಸಭೆಯ ಎದುರು ಖಾಲಿಕೊಡಗಳ ಪ್ರದರ್ಶನ ನಡೆಸಿದ್ದು, ಮಹಿಳಾ ಉಪನ್ಯಾಸಕಿಯರಿಗೆ ಅನುಸರಿಸುತ್ತಿದ್ದ ತಾರತಮ್ಯ ನೀತಿಯನ್ನು, ವಿದ್ಯಾರ್ಥಿಗಳನ್ನು ಸೇರಿಸಿ ಪ್ರತಿಭಟಿಸಿದ್ದು……… ಹೀಗೆ ಇಂಥಹ ಹತ್ತು ಹಲವು ಪ್ರಗತಿಪರ ಕಾರ್ಯಗಳಿಗೆ ಸಮತಾ ಹಾಗೂ ವಿಜಯಾ ದಬ್ಬೆಯವರು ನನಗೆ ಪರೋಕ್ಷ ಪ್ರೇರಣೆ ನೀಡಿದ್ದಾರೆ. ನನ್ನಂತೆ ಅವರಿಂದ ಪ್ರೇರಣೆ ಪಡೆದ ಅನೇಕ ಲೇಖಕಿಯರು, ಮಹಿಳೆಯರು, ಅಜ್ಞಾತರಿರಬಹುದು. ಇನ್ನು ಅವರ ‘ಇರುತ್ತವೆ’, ‘ನೀರು ಲೋಹದ ಚಿಂತೆ’, ‘ಇತಿಗೀತಿಕೆ’ ಕವನ ಸಂಕಲನಗಳು ಕಾವ್ಯಾಭ್ಯಾಸಿಗಳಿಗೆಲ್ಲಾ, ಅದರಲ್ಲೂ ಮಹಿಳಾ ಚಳುವಳಿಗಳ ಹಿನ್ನಲೆಯಲ್ಲಿ ಕವಿತೆಗಳನ್ನು ಅಧ್ಯಯನ ಮಾಡುವ ಸಂಶೋಧಕರು, ಹಾಗೂ ವಿದ್ಯಾರ್ಥಿಗಳಿಗೆಲ್ಲಾ ಆಕರ ಕೃತಿಗಳಾಗಿವೆ ಹಾಗೂ ಪ್ರಭಾವ ಬೀರುವಂತವೇ ಆಗಿವೆ. ಸ್ತ್ರೀವಾದಿ ಅಧ್ಯಯನಕ್ಕೆ ಅವರ ಮಹಿಳಾ ಕಾಳಜಿಯ ಅಸಂಖ್ಯ ಲೇಖನಗಳು ಮುನ್ನುಡಿಗಳಿದ್ದಂತೆ. ಅವನ್ನು ಓದಿಕೊಳ್ಳದೇ ಮುನ್ನಡೆಯುವಂತೆಯೇ ಇಲ್ಲ.

ಅವರು ಆರೋಗ್ಯದಿಂದಿದ್ದಾಗ ನಾನವರನ್ನು ನೋಡಿದ್ದು ಒಂದೇ ಬಾರಿ. ಆದರೆ ಅವರು ಅಪಘಾತಕ್ಕೀಡಾಗಿ ನೆನಪಿನಶಕ್ತಿ ಕಳೆದುಕೊಂಡ ನಂತರದ ಇತ್ತೀಚೆಗಿನ ಎರಡು ವರ್ಷಗಳಲ್ಲಿ 3-4 ಬಾರಿ ಅವರನ್ನು ಭೇಟಿಯಾಗಿದ್ದೇನೆ. ಆಗೆಲ್ಲಾ ಅವರ ಅದಮ್ಯ ಜೀವನ ಪ್ರೀತಿಯನ್ನು ಕಂಡು ಬೆರಗಾಗಿದ್ದೇನೆ. vijaya-dabbe-3ಹೊರಗಿನದೆಲ್ಲವನ್ನೂ ಗ್ರಹಿಸುವ ಶಕ್ತಿ ಇದ್ದರೂ ಅದನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಶಕ್ತಿಯನ್ನು ಕಳೆದುಕೊಂಡಿರುವ ವಿಜಯಾ ಮೇಡಂ, ಈಗ ಕವಿತೆಗಳನ್ನು, ಚಿಕ್ಕ ಕಥೆಗಳನ್ನು ಬರೀತಿದ್ದೀನಿ. ಪ್ರಕಟಣೆಗೆ ಕಳಿಸಕ್ಕಾಗಲ್ಲ ಇನ್ನೂ ತಿದ್ದಬೇಕು. ನಿಮ್ಮೆಲ್ಲರ ಪ್ರೀತಿ ನಾನು ಮೊದಲಿನಂತಾಗಲು ಸಹಕರಿಸುತ್ತದೆ ಎಂದು ಹೇಳುವಾಗ ಕಣ್ಣು ತುಂಬಿ ಬರುತ್ತದೆ. ಅವರ ಅಸ್ಪಷ್ಟ ಕವಿತೆಗಳು ನಿಗೂಢವಾಗಿ, ಅವರೊಳಗಿನದನ್ನೆಲ್ಲಾ ತೋಡಿಕೊಳ್ಳಲು ಕಾದಿರುವ ಏಕೈಕ ಮಾಧ್ಯಮವಾಗಿ ನನಗೆ ತೋರುತ್ತದೆ. ಇಂಥಹಾ ಹೊತ್ತಿನಲ್ಲೂ ಅವರಲ್ಲಿರುವ ಆಶಾವಾದ ಬರೀ ಲೇಖಕಿಯರನ್ನು ಮಾತ್ರವಲ್ಲ, ಯಾವುದೇ ಪರಿಸ್ಥಿತಿಯಲ್ಲಿರುವ ಎಂಥಹಾ ನಿರಾಶಾವಾದಿಗಳನ್ನೂ ಪ್ರೇರೇಪಿಸುವಂತದ್ದು.

ಅವರ ಊರು ದಬ್ಬೆಗೆ ಹೋದಾಗ ಅವರ ತಂದೆ-ತಾಯಿ ವಿಜಯ ಮೇಡಂ ಅವರ ಬಾಲ್ಯದ ಕುರಿತು ವಿವರಿಸುವಾಗಲೆಲ್ಲಾ ಅವರ ಬಗೆಗಿನ ಗೌರವ ಮತ್ತಷ್ಟು ಹೆಚ್ಚುತ್ತದೆ. ದಬ್ಬೆಯಂಥಾ ಪುಟ್ಟಹಳ್ಳಿಯಲ್ಲಿ ಆ ಕಾಲಕ್ಕೆ ಶಿಕ್ಷಣ ಸೌಲಭ್ಯಗಳಿಲ್ಲದಿದ್ದಾಗ, ಪರ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ವಿಜಯಾ ಅವರು, ನಂತರ ಹಾಸನದಲ್ಲಿ ಮನೆ ಮಾಡಿಕೊಂಡು, ಹೈಸ್ಕೂಲಿಗೆ ಸೇರಿ ತಮ್ಮ-ತಂಗಿಯರನ್ನೂ ಜೊತೆಗಿರಿಸಿಕೊಂಡು ಅಡಿಗೆ, ಮನೆವಾರ್ತೆ ನೋಡಿಕೊಳ್ಳುತ್ತಾ ಓದಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಹೋಗಿ, ಅಲ್ಲಿ ಇಷ್ಟೆಲ್ಲಾ ಪ್ರಬುದ್ಧವಾಗಿ ಬೆಳೆದಿದ್ದನ್ನು ಕೇಳುವಾಗ, ಕಡು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರಿಗೆ, ಒಬ್ಬಂಟಿಯಾಗಿ ಎಲ್ಲವನ್ನೂ ಎದುರಿಸುವ ಇಂಥಹಾ ದಿಟ್ಟತನ ಎಲ್ಲಿಂದಾ ಬಂತು? ಎಂದು ಆಶ್ಚರ್ಯವಾಗುತ್ತದೆ. ಜೊತೆಗೇ ಅವರ ಬದುಕಿನ ಈ ಎಲ್ಲ ಘಟ್ಟಗಳೂ ಜೀವನ ಚರಿತ್ರೆಯ ರೂಪದಲ್ಲಾದರೂ ದಾಖಲಾಗಬೇಕು ಎಂಬ ಆಸೆ ನನ್ನದು. ಅವರು ಮಾಮೂಲಿನಂತೆ ಆರೋಗ್ಯದಿಂದ ಇದ್ದಿದ್ದರೆ ಇಷ್ಟು ಹೊತ್ತಿಗೆ ಅವರೇ ಆತ್ಮಕಥೆಯನ್ನು ಬರೆದುಕೊಂಡಿರುತ್ತಿದ್ದರೇನೋ? ಅವರ ಬದುಕನ್ನು ದಾಖಲಿಸುವ ಕುರಿತು ಅವರೊಡನೆ ಒಡನಾಡಿದ ಗೆಳತಿಯರಲ್ಲಿ ಹೇಳುತ್ತಲೇ ಬಂದಿದ್ದೇನೆ. ಅದು ಖಂಡಿತಾ ಮುಂದಿನ ಪೀಳಿಗೆಯ ನಮ್ಮಂಥಾ ಅನೇಕರಿಗೆ ಪ್ರೇರಣೆ ನೀಡುವಂತದ್ದು.

ಕರ್ನಾಟಕ ಲೇಖಕಿಯರ ಸಂಘದಿಂದ ಹೊರ ಬಂದ “ಲೇಖ-ಲೋಕ” ಮಹಿಳೆಯರ ಆತ್ಮಕಥಾನಕಗಳ ಸಂಕಲನದಲ್ಲಿ ನಾನು ಮೊದಲು ಹುಡುಕಿದ್ದು ವಿಜಯಾ ದಬ್ಬೆಯವರ ಆತ್ಮಕಥಾನಕವನ್ನು. ಆದರೆ, ತಮ್ಮ ಬದುಕಿನ ಕಥೆಯನ್ನು ಸಂಘದ ಸಂವಾದ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದವರಿಗೆ ಅದನ್ನು ಲಿಖಿತ ರೂಪದಲ್ಲಿ ದಾಖಲಿಸುವ ಮೊದಲೇ ಅಪಘಾತವಾಗಿದ್ದು ನಮ್ಮ ದುರದೃಷ್ಟ ಎಂದು ನಾನು ಭಾವಿಸುತ್ತೇನೆ. ಅವರೇ ಅವರ ಬದುಕಿನ ಸೂಕ್ಷ್ಮ, ಮುಖ್ಯ ವಿಷಯಗಳ ಕುರಿತು ಬರೆದುಕೊಂಡಿದ್ದರೆ ಖಂಡಿತಾ ಅದೊಂದು ಮನೋಜ್ಞವಾದ ಬರಹವಾಗಿರುತ್ತಿತ್ತು. ಈಗಲೂ ಅವರ ಕುಟುಂಬದವರು, ಆತ್ಮೀಯರು, ಗೆಳತಿಯರು ಅವರ ಬದುಕಿನ ಪ್ರಮುಖಘಟ್ಟಗಳನ್ನು ದಾಖಲಿಸುವ ಕೆಲಸವನ್ನು ಮಾಡಬೇಕು. ಅವರ ಅನನ್ಯವೂ, ವಿಶಿಷ್ಟವೂ ಆದ ಬದುಕು ಸರ್ವಕಾಲಕ್ಕೂ ಮಾದರಿಯಾಗಿ ಉಳಿಯುವಂತೆ ದಾಖಲಾಗಬೇಕು ಎಂದು ಆಶಿಸುತ್ತೇನೆ. ಹಾಸನ ಜಿಲ್ಲೆಯ ಪುಟ್ಟಹಳ್ಳಿಯ ಹೆಣ್ಣುಮಗಳೊಬ್ಬಳು ಸಾಹಿತ್ಯ ಹಾಗೂ ಮಹಿಳಾ ಚರಿತ್ರೆಯಲ್ಲಿ ಈ ಎತ್ತರವನ್ನು ತಲುಪಿದ್ದು ಖಂಡಿತಾ ದೊಡ್ಡ ಸಾಧನೆಯೇ. ವಿಜಯಾ ದಬ್ಬೆಯವರು ಮತ್ತೆ ಮೊದಲಿನಂತಾಗಲಿ ನನ್ನಂಥಾ ಅನೇಕ ಕಿರಿಯರಿಗೆ ಅವರ ಬರಹ, ಕೆಲಸಗಳು, ಚೈತನ್ಯ ಸದಾ ಪ್ರೇರಣೆ ನೀಡುವಂತಾಗಲಿ ಎಂದು ಮನತುಂಬಿ ಹಾರೈಸುತ್ತೇನೆ. ಅವರ ಬದುಕು-ಬರಹ-ಚಟುವಟಿಕೆಗಳನ್ನು ಈ ಮೂಲಕ ಮತ್ತೊಮ್ಮೆ ನೆನಪಿಸಿಕೊಳ್ಳಲು ಅನುವು ಮಾಡಿಕೊಟ್ಟ ಕರ್ನಾಟಕ ಸಾಹಿತ್ಯ ಅಕಾಡೆಮಿ, ಹಾಸನ ಜಿಲ್ಲಾ ಲೇಖಕಿಯರ ಬಳಗಕ್ಕೆ ಹೃತ್ಪೂರ್ವಕವಾಗಿ ವಂದಿಸುತ್ತೇನೆ.