Category Archives: ರವಿ ಕೃಷ್ಣಾರೆಡ್ಡಿ

ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿಗಿರುವ ಸವಾಲುಗಳು ಮತ್ತು ಸಾಧ್ಯತೆಗಳು…

– ರವಿ ಕೃಷ್ಣಾರೆಡ್ಡಿ

[ಪ್ರಜಾವಾಣಿಯಲ್ಲಿ ದಿ: ಫೆಬ್ರವರಿ 8, 2014 ರಂದು ಪ್ರಕಟವಾದ “ ‘ಆಮ್ ಆದ್ಮಿ’ಯಿಂದ ಆಶಾವಾದದ ಅಲೆ ” ಲೇಖನದ ವಿಸ್ತೃತ ರೂಪ.]

ಇಡೀ ದೇಶದಲ್ಲಿ ಆಶಾವಾದದ ಅಲೆಯೊಂದು ಬೀಸುತ್ತಿದೆ. ರಕ್ತರಹಿತ ಕ್ರಾಂತಿಯೊಂದು ಜಾರಿಯಲ್ಲಿದೆ. ಕಳೆದ ಹತ್ತಾರು ವರ್ಷಗಳ ಅನೈತಿಕ ರಾಜಕಾರಣ, ಭ್ರಷ್ಟಾಚಾರ, ದುರಾಡಳಿತಗಳಿಂದ ರೋಸಿಹೋಗಿರುವ ಜನಸಾಮಾನ್ಯನಿಗೆ ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಳನ ತನ್ನ ಅತೃಪ್ತಿಯನ್ನು ಮತ್ತು ರಾಜಕೀಯ ಸಕ್ರಿಯತೆಯನ್ನು ದಾಖಲಿಸಲು ಅವಕಾಶ ಮಾಡಿಕೊಟ್ಟಿತು. ಅದರ ಮುಂದುವರೆದ ಭಾಗವಾಗಿ ದೆಹಲಿಯ ಜನ ಎರಡು ತಿಂಗಳ ಹಿಂದೆ ಅಭೂತಪೂರ್ವವೆನ್ನುವಂತಹ ಪ್ರಜಾಸತ್ತಾತ್ಮಕ ತೀರ್ಪನ್ನು ನೀಡಿ ಕೊಳಚೆಯಲ್ಲಿ ಮುಳುಗಿ ಹೋಗಿದ್ದ ಪರಂಪರಾಗತ ರಾಜಕಾರಣಕ್ಕೆ ತೀವ್ರವಾದ ಕೊಡಲಿ ಪೆಟ್ಟನ್ನು ಕೊಟ್ಟರು.

ಈಗ ಆ ಸದಾಶಯ ಮತ್ತು ಆಶಾವಾದದ ಗಾಳಿ ದೇಶದಾದ್ಯಂತ ಇರುವಂತೆ ಕರ್ನಾಟಕದಲ್ಲೂ ಇದೆ. ಆಮ್ ಆದ್ಮಿ ಪಾರ್ಟಿಯ ದೆಹಲಿ ಯಶಸ್ಸಿನಲ್ಲಿ ಕರ್ನಾಟಕದ, ಅದರಲ್ಲೂ ಬೆಂಗಳೂರಿನ ಪಾಲು ಬಹಳಷ್ಟಿದೆ. ಇಲ್ಲಿಂದ ನೂರಾರು ಕಾರ್ಯಕರ್ತರು ದೆಹಲಿಗೆ ಹೋಗಿ ತಮ್ಮ ತನುಮನಧನಗಳನ್ನು ಅರ್ಪಿಸಿ ಪ್ರಚಾರ ಕಾರ್ಯದಲ್ಲಿ ವಾರ-ತಿಂಗಳುಗಳ ಕಾಲ ತೊಡಗಿಸಿಕೊಂಡಿದ್ದರು. ಇಲ್ಲಿಯ ಸಾವಿರಾರು ಜನ ಪಕ್ಷಕ್ಕೆ ದೇಣಿಗೆ ನೀಡಿ ಸ್ವಚ್ಚ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಬೆಂಬಲಿಸಿದರು. ದೆಹಲಿಯ ನಂತರ ಈ ಹೋರಾಟಕ್ಕೆ ಅತಿಹೆಚ್ಚು ದೇಣಿಗೆ ಹರಿದಿದ್ದು ಬೆಂಗಳೂರಿನ ನಿವಾಸಿಗಳಿಂದ. ಈಗ ಆಮ್ ಆದ್ಮಿ ಪಾರ್ಟಿ ಕರ್ನಾಟಕದಲ್ಲೂ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಮೂಲಕ ದೆಹಲಿಯಲ್ಲಾದ ಬದಲಾವಣೆಯನ್ನು ಕರ್ನಾಟಕದಲ್ಲೂ ಸಾಧ್ಯವಾಗಿಸಲು ಪ್ರಯತ್ನಿಸುತ್ತಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ AAP ಮಾಡುತ್ತಿರುವ ರಾಜಕೀಯ ಹೋರಾಟದ ರೀತಿ ಅಪರಿಚಿತವಾದದ್ದೇನೂ ಅಲ್ಲ. ಅದು ಇತ್ತೀಚೆಗೆ ಅಪರಿಚಿತವಾಗಿದೆ ಅಷ್ಟೇ. ಐವತ್ತು-ಅರವತ್ತರ ದಶಕದಲ್ಲಿಯೇ ಸಾಮಾನ್ಯ ರೈತಾಪಿ ಮನೆಯ ಶಾಂತವೇರಿ ಗೋಪಾಲಗೌಡರನ್ನು ಸಾಗರ-ಶಿವಮೊಗ್ಗದ ಜನ ತಾವೇ ದೇಣಿಗೆ ಕೊಟ್ಟು, ಪ್ರಚಾರ ಮಾಡಿ ಶಾಸನಸಭೆಗೆ ಆರಿಸಿಕಳುಹಿಸಿದ್ದರು. ಶಾಂತವೇರಿಯವರು ಅನಾರೋಗ್ಯದ ಕಾರಣದಿಂದ ಸ್ಪರ್ಧಿಸಲು ಸಾಧ್ಯವಾಗದೇ ಹೋದಾಗ ಕೊಣಂದೂರು ಲಿಂಗಪ್ಪನವರನ್ನು ಜಾತ್ಯಾತೀತವಾಗಿ ಬೆಂಬಲಿಸಿ ಯಾವೊಂದೂ ಆಮಿಷಕ್ಕೆ ಒಳಗಾಗದೆ ಅವರನ್ನು ಶಾಸನಸಭೆಗೆ ಕಳುಹಿಸಿದ್ದರು. ತನ್ನೆಲ್ಲ ಜಾತಿವಾದ ಮತ್ತು ಭ್ರಷ್ಟಾಚಾರಗಳ ಮಧ್ಯೆಯೂ ಈ ರಾಜ್ಯ ಪ್ರಗತಿಪರ ವಿಚಾರಧಾರೆಗಳಿಗೆ, ರಾಜಕೀಯ-ಸಾಮಾಜಿಕ ಸುಧಾರಣೆಗಳಿಗೆ ಹೆಸರಾಗಿತ್ತು. ಇಲ್ಲಿ ಘಟಿಸಿದ ದಲಿತ-ರೈತ-ಬಂಡಾಯ ಚಳವಳಿಗಳು ಎಲ್ಲಾ ವರ್ಗದ ಜನರಲ್ಲಿ ರಾಜಕೀಯ ಮತ್ತು ಸಾಮಾಜಿಕ ಮೇಲ್ಮುಖ ಚಲನೆಗೆ ಕಾರಣೀಭೂತವಾಗಿತ್ತು. ಆದರೆ, ಕಳೆದ ಎರಡು ದಶಕಗಳಿಂದ ಈಚೆಗೆ ರಾಜ್ಯದ ರಾಜಕೀಯ ರಂಗದಲ್ಲಿ ಆದ ಮೌಲ್ಯಗಳ ಅಧ:ಪತನ ಕಾಂಗ್ರೆಸ್-ಜೆಡಿಎಸ್, ಜೆಡಿಎಸ್-ಬಿಜೆಪಿ, ಮತ್ತು ಬಿಜೆಪಿ ಸರ್ಕಾರಗಳ ಸಮಯದಲ್ಲಿ ಪ್ರಪಾತಕ್ಕೆ ಬಿದ್ದು ಇಡೀ ದೇಶದಲ್ಲಿ ಅತಿ ಕೆಟ್ಟ ಮತ್ತು ಭ್ರಷ್ಟ ಸರ್ಕಾರವಿರುವ ರಾಜ್ಯ ಕರ್ನಾಟಕ ಎಂಬ ಕುಖ್ಯಾತಿ ಪಡೆಯಿತು.

ಈ ಎಲ್ಲಾ ಕುಖ್ಯಾತಿಯನ್ನು ಹೋಗಲಾಡಿಸಿಕೊಳ್ಳುವುದಕ್ಕೆ ಮತ್ತು ಸಾರ್ವಜನಿಕ ಜೀವನದಲ್ಲಿಯ ಮೌಲ್ಯಗಳ ಪುನರುತ್ಥಾನಕ್ಕೆ 2013 ರ ವಿಧಾನಸಭಾ prajavani-feb082014ಚುನಾವಣೆ ರಾಜ್ಯದ ಜನಕ್ಕೆ ಒಂದು ಅವಕಾಶ ಒದಗಿಸಿತ್ತು. ಆದರೆ, ಇಲ್ಲಿ ಸಶಕ್ತವಾದ ರಾಜಕೀಯ ಚಳವಳಿಯನ್ನಾಗಲಿ, ಪರ್ಯಾಯವನ್ನಾಗಲಿ ರಾಜ್ಯದ ಮುಂಚೂಣಿ ಚಿಂತಕರು, ಚಳವಳಿಕಾರರು, ಸಾಮಾಜಿಕ-ರಾಜಕೀಯ ಹೋರಾಟಗಾರರು ಕಟ್ಟಲಾಗದೇ ಹೋದರು. ಇರುವ ರಾಜಕೀಯ ಪಕ್ಷಗಳಲ್ಲೇ ಒಂದನ್ನು ಆರಿಸಿಕೊಳ್ಳುವ ಸ್ಥಿತಿ ಜನರದಾಯಿತು. ಭ್ರಷ್ಟ ಬಿಜೆಪಿಯನ್ನು ತೊಲಗಿಸುವ ನಿರ್ಧಾರ ಮಾಡಿದ್ದ ಜನ ಏಳು ವರ್ಷಗಳಿಂದ ಅಧಿಕಾರದಿಂದ ಹೊರಗಿದ್ದ ಕಾಂಗ್ರೆಸ್ ಪಕ್ಷವನ್ನು ಅನಿವಾರ್ಯವಾಗಿ ಅಧಿಕಾರಕ್ಕೆ ತಂದರು. ಈ ಸರ್ಕಾರದ ಆಡಳಿತಾವಧಿಯಲ್ಲಿ ಘಟಿಸುತ್ತಿರುವ ದೊಡ್ಡಹಗರಣಗಳು ಬಯಲಾಗದೇ ಇರುವುದನ್ನು ಹೊರತುಪಡಿಸಿದರೆ, ರಾಜ್ಯದ ಕಾಂಗ್ರೆಸ್ ಸರ್ಕಾರದ ನಿಷ್ಕಿಯತೆ, ಸರ್ಕಾರಿ ಕಛೇರಿಗಳಲ್ಲಿ ಕಮ್ಮಿಯಾಗದ ಲಂಚಗುಳಿತನ, ಭ್ರಷ್ಟಾಚಾರದ ವಿರುದ್ಧ ಸರ್ಕಾರಕ್ಕಿಲ್ಲದ ಚಿತ್ತಶುದ್ಧಿ, ಕಳಂಕಿತರು ಸಚಿವರಾಗಿರುವುದು, ಇತ್ಯಾದಿಗಳಿಂದಾಗಿ ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದಾರೆ ಮತ್ತು ದೆಹಲಿಯಲ್ಲಿ ಒದಗಿದಂತೆ ಇಲ್ಲಿಯೂ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಆಮ್ ಆದ್ಮಿ ಪಾರ್ಟಿ ಪರ್ಯಾಯವಾದೀತು ಎಂಬ ಆಶಾವಾದದಲ್ಲಿದ್ದಾರೆ.

ಈಗಾಗಲೆ ರಾಜ್ಯದಲ್ಲಿ AAPಗೆ ನಿರೀಕ್ಷೆಗೂ ಮೀರಿದ ಜನಬೆಂಬಲ ವ್ಯಕ್ತವಾಗುತ್ತಿದೆ. ಜನ ತಾವಾಗಿಯೇ ಎಸ್‍ಎಮ್‌ಎಸ್ ಕಳುಹಿಸಿ ಸದಸ್ಯರಾಗುತ್ತಿದ್ದಾರೆ. ಒಳ್ಳೆಯದರ ಪರ ನಿಲ್ಲಬೇಕು ಎನ್ನುವ ಅನೇಕ ನಾಗರಿಕರು–ಗಣ್ಯರೂ ಸೇರಿದಂತೆ–ಸದ್ದಿಲ್ಲದೆ ಪಕ್ಷದ ಸದಸ್ಯರಾಗಿದ್ದಾರೆ. ಇತ್ತೀಚಿನ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ ಸುಮಾರು ಮೂರು ಲಕ್ಷ ಜನ ಆಮ್ ಅದ್ಮಿ ಪಕ್ಷದ ಸದಸ್ಯರಾಗಿದ್ದಾರೆ, ಮತ್ತು ಅರ್ಧಕ್ಕೂ ಹೆಚ್ಚು ಜನ ಬೆಂಗಳೂರಿನಲ್ಲಿಯೇ ಇದ್ದಾರೆ. ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕ ಹೊರಾಟದಲ್ಲಿ ತೊಡಗಿಕೊಂಡಿರುವವರು ಮತ್ತು ಯಾವುದೇ ವೈಯಕ್ತಿಕ ಲಾಭ-ಫಲಾಪೇಕ್ಷೆಯ ಆಕಾಂಕ್ಷೆ ಇಲ್ಲದ, ಈ ದೇಶವನ್ನು ಪ್ರೀತಿಸುವ ಯುವಕರು ತಮ್ಮ ನೌಕರಿಗಳಿಂದ ರಜೆ ಪಡೆದು, ಇಲ್ಲವೆ ತ್ಯಜಿಸಿ, ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಅನೈತಿಕ ರಾಜಕೀಯ ವ್ಯವಸ್ಥೆ ಬದಲಾಗಬೇಕು, ಭ್ರಷ್ಟಾಚಾರ ಕೊನೆಗೊಳ್ಳಬೇಕು, ಅ ಮೂಲಕ ದೇಶವಾಸಿಗಳ ಜನಜೀವನ ಸುಧಾರಿಸಬೇಕು ಮತ್ತು ಸುಂದರವಾಗಬೇಕು ಎಂಬ ಕನಸು ಹೊತ್ತವರು ಇವರು. ತಮ್ಮ ಇಡೀ ಜೀವಮಾನದಲ್ಲಿ ಯಾವೊಂದೂ ಚಳವಳಿಯಲ್ಲಿ ಪಾಲ್ಗೊಂಡಿರದ ಅಥವ ಅಂತಹ ಅವಕಾಶ ಸಿಕ್ಕಿಲ್ಲದ ಯುವಕಯುವತಿಯರು ಇದನ್ನು ದೇಶಸೇವೆಯ ಕರೆ ಮತ್ತು ಅದಕ್ಕೆ ಓಗೊಡುವುದು ನನ್ನ ಕರ್ತವ್ಯ ಎಂದು ಭಾವಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ರೈತ ಮತ್ತು ಜನಪರ ಚಳವಳಿಗಳಲ್ಲಿ ಪಾಲ್ಗೊಂಡಿದ್ದ ಅನೇಕ ಮುಖಂಡರು, ಚಳವಳಿಗಳ ಬಗ್ಗೆ ಬದ್ಧತೆ ಹೊಂದಿರುವ ಚಿಂತಕರು ಮತ್ತು ಕಾರ್ಯಕರ್ತರು ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ತಮ್ಮಂತಹದೇ ಚಳವಳಿಗಳ ಮುಂದುವರೆದ ರೂಪ ಎಂದು ಭಾವಿಸಿ ಬೆಂಬಲಿಸುತ್ತಿದ್ದಾರೆ. ಎಚ್.ಎಸ್.ದೊರೆಸ್ವಾಮಿ, ಎಸ್.ಆರ್.ಹಿರೇಮಠ್, ಕಡಿದಾಳು ಶಾಮಣ್ಣ, ರಾಘವೇಂದ್ರ ಕುಷ್ಟಗಿ, ಆ.ನ.ಯಲ್ಲಪ್ಪ ರೆಡ್ಡಿ, ಮತ್ತು ಇನ್ನೂ ಅನೇಕ ಹೋರಾಟಗಾರರು ಪಕ್ಷದ ಸದಸ್ಯರಾಗಿದ್ದಾರೆ, ಇಲ್ಲವೇ ಅದನ್ನು ಬೆಂಬಲಿಸುತ್ತಿದ್ದಾರೆ.

ಆದರೆ, ಇದೇ ಸಂದರ್ಭದಲ್ಲಿ ಕೇವಲ ಚುನಾವಣೆಗೆ ಸ್ಪರ್ಧಿಸುವ ಉದ್ದೇಶವನ್ನೇ ಮುಖ್ಯವಾಗಿಸಿಕೊಂಡು ಕೆಲವು ಜನ ಪಕ್ಷವನ್ನು ಸೇರುತ್ತಿದ್ದಾರೆ. ಇನ್ನೊಂದು ರಾಜಕೀಯ ಪಕ್ಷದ ಸದಸ್ಯನಾಗಿರದ ದೇಶದ ಯಾವೊಬ್ಬ ನಾಗರಿಕನಾಗಲಿ ಆಮ್ ಆದ್ಮಿ ಪಕ್ಷದ ಸದಸ್ಯನಾಗುವುದಕ್ಕೆ ಯಾವುದೇ ನಿರ್ಬಂಧ ಇರಬಾರದು. ಆದರೆ ಯಾರು ಪಕ್ಷವನ್ನು ಎಲ್ಲಿ ಮುನ್ನಡೆಸಬೇಕು ಮತ್ತು ಅವರ ಇತಿಮಿತಿಗಳೇನು, ದೀರ್ಘಕಾಲದ ರಾಜಕೀಯ ಸಂಘಟನೆ ಮತ್ತು ಹೋರಾಟದಲ್ಲಿ ಯಾರು ಎಲ್ಲಿ ನಿಲ್ಲುತ್ತಾರೆ ಎನ್ನುವ ಸ್ಪಷ್ಟ ಕಲ್ಪನೆ ಪಕ್ಷಕ್ಕಿರಬೇಕು. ಇಲ್ಲದಿದ್ದರೆ ಅವಕಾಶವಾದಿಗಳು ಪಕ್ಷದ ನಿಸ್ವಾರ್ಥಿ ಕಾರ್ಯಕರ್ತರನ್ನು ಬಳಸಿಕೊಂಡು ಈ ಆಂದೋಳನದ ಧ್ಯೇಯೋದ್ದೇಶಗಳನ್ನು ಮತ್ತು ಪಾವಿತ್ರ್ಯವನ್ನು ಹಾಳುಮಾಡುವ ಸಾಧ್ಯತೆಗಳಿರುತ್ತವೆ. ಅಂತಹ ದ್ರೋಹ ಪಕ್ಷದ ಕಾರ್ಯಕರ್ತರಿಗೆ ಎಸಗಿದ ದ್ರೋಹವಷ್ಟೇ ಆಗುವುದಿಲ್ಲ, ಬದಲಿಗೆ ಚಾರಿತ್ರಿಕ ಅವಕಾಶವೊಂದನ್ನು ಮಣ್ಣುಗೂಡಿಸಿದ ಆರೋಪವನ್ನೂ ಹೊರಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಹಿರಿಯ ಹೋರಾಟಗಾರರ ಮತ್ತು ಪ್ರಾಮಾಣಿಕ ಮನಸ್ಸುಗಳ ಮಾರ್ಗದರ್ಶನ ಪಕ್ಷಕ್ಕೆ ತೀರಾ ಅಗತ್ಯವಾಗಿದೆ. ಪದಾಧಿಕಾರಿಗಳ ನೇಮಕಾತಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ರೂಢಿಸಿ, ಅಧಿಕಾರಾವಧಿಗೆ ಮಿತಿಯನ್ನೂ (Term Limit) ಹೇರಿದರೆ ಈ ಪಕ್ಷ ತಾನೂ ಗುಣಾತ್ಮಕವಾಗಿ ಬೆಳೆಯುವದೇ ಅಲ್ಲದೆ ಪರೋಕ್ಷವಾಗಿ ಬೇರೆ ಪಕ್ಷಗಳಲ್ಲಿಯೂ ಗುಣಾತ್ಮಕ ಬದಲಾವಣೆಗಳನ್ನು ತರಬಲ್ಲುದಾಗಿದೆ.

ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹಲವು ನಗರಕೇಂದ್ರಿತ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಉಮೇದುವಾರಿಕೆಯಿಂದಾಗಿ ಖಂಡಿತವಾಗಿ ತ್ರಿಕೋನ ಅಥವ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ. ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ಈ ಪಕ್ಷ ದುಡಿಯುತ್ತದೆ ಮತ್ತು ಈ ಪರ್ಯಾಯ ಯಾವುದೇ ಕಾರಣಕ್ಕೂ ಭ್ರಷ್ಟವಾಗುವುದಿಲ್ಲ ಮತ್ತು ಇದರ ಅಭ್ಯರ್ಥಿಗಳು ಚುನಾವಣಾ ಅಕ್ರಮಗಳನ್ನು ಎಸಗುವುದಿಲ್ಲ ಎನ್ನುವ ಸಂದೇಶ ಮತ್ತು ವಾಸ್ತವವನ್ನು ರಾಜ್ಯದ ಜನತೆಗೆ ಮುಟ್ಟಿಸುವಲ್ಲಿ ಯಶಸ್ವಿಯಾದರೆ, ರಾಷ್ಟ್ರ ರಾಜಧಾನಿಯಲ್ಲಾದ ರಾಜಕೀಯ ಕ್ರಾಂತಿ ರಾಜ್ಯ ರಾಜಧಾನಿಯಲ್ಲೂ ಈ ಬಾರಿಯೇ ಆಗುತ್ತದೆ, ಮತ್ತದು ಕರ್ನಾಟಕದ ಉದ್ದಗಲಕ್ಕೂ ಪಸರಿಸುತ್ತದೆ. ಇನ್ನು ಒಂದೂವರೆ ವರ್ಷದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ. ಇವತ್ತಿನ ಸಂಘಟನೆ ಮತ್ತು ಜನಬೆಂಬಲದ ದೃಷ್ಟಿಯಿಂದ ನೋಡಿದರೆ ಮಹಾನಗರಪಾಲಿಕೆಯಲ್ಲಿ ಅತಿದೊಡ್ಡ ಗುಂಪಾಗಿ ಆಮ್ ಆದ್ಮಿ ಪಾರ್ಟಿ ಹೊಮ್ಮುವ ಸಾಧ್ಯತೆ ಇದೆ. ದೂರದೃಷ್ಟಿಯಿಂದ ಕೆಲಸ ಮಾಡುತ್ತ, ಪಕ್ಷ ಸಂಘಟನೆಯ ಜೊತೆಜೊತೆಗೆ ರಚನಾತ್ಮಕ ಕಾರ್ಯಗಳನ್ನೂ ಹಮ್ಮಿಕೊಳ್ಳುತ್ತ, ಇದೇ ನೈತಿಕತೆ ಮತ್ತು ಪರಿಶುದ್ಧತೆಯನ್ನೂ ಉಳಿಸಿಕೊಂಡು ರಾಜ್ಯದ ಜನರ ಪರ ಕೆಲಸ ಮಾಡುತ್ತ ಹೋದರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವೆಲ್ಲರೂ ಹೆಮ್ಮೆಪಡಬಹುದಾದ ಫಲಿತಾಂಶ ನೀಡಲು ರಾಜ್ಯದ ಜನತೆ ಸಿದ್ಧವಿದ್ದಾರೆ ಎನ್ನುವುದು ಇಂದಿನ ವಾಸ್ತವ.

ಲೋಕ್‌ಸತ್ತಾದಿಂದ ಆಮ್ ಆದ್ಮಿಯೆಡೆಗೆ…

ಸ್ನೇಹಿತರೇ,

ನಿಮಗೆಲ್ಲಾ ನನ್ನ ಸಕ್ರಿಯ ರಾಜಕೀಯ ಹೋರಾಟದ ಬಗ್ಗೆ ಗೊತ್ತೇ ಇದೆ. ಒಂದೂವರೆ ವರ್ಷದ ಹಿಂದೆ ನಾನು ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸುವ ಲೋಕಸತ್ತಾ ಪಕ್ಷದ ಜೊತೆ ಗುರುತಿಸಿಕೊಂಡು ಕೆಲಸ ಮಾಡುತ್ತ ಬಂದಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು, ಇತ್ಯಾದಿಗಳನ್ನು ನೀವು ಗಮನಿಸಿರುತ್ತೀರಿ.

ಕಳೆದ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ನಮ್ಮ ರಾಜ್ಯದ ಜನ ಭ್ರಷ್ಟ ಬಿಜೆಪಿಯನ್ನು ಬದಿಗೊತ್ತಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಕೊಟ್ಟರು. ಆದರೆ ಆಡಳಿತದ ವಿಷಯದಲ್ಲಾಗಲಿ ಮತ್ತು ಭ್ರಷ್ಟಾಚಾರದ ವಿಷಯದಲ್ಲಾಗಲಿ ಈಗಿನ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಪಕ್ಷಕ್ಕಿಂತ ಉತ್ತಮ ಎನ್ನುವ ಭಾವನೆ ಜನಕ್ಕೆ ಇಲ್ಲಿಯ ತನಕ ಬರದ ಹಾಗೆಯೇ ಕಾಂಗ್ರೆಸ್ ನಡೆದುಕೊಂಡಿದೆ. ಹೇಳಬೇಕೆಂದರೆ, ನಮ್ಮ ನಾಡಿನ ಜನರೂ ಕಾಂಗ್ರೆಸ್ ಮೇಲೆ ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡೇನೂ ಅವರನ್ನು ಆರಿಸಲಿಲ್ಲ. ಭ್ರಷ್ಟ ಬಿಜೆಪಿಗೆ ಮತ್ತದರ ಪರಮಾತಿಪರಮ ಭ್ರಷ್ಟರಿಗೆ ಪಾಠ ಕಲಿಸಬೇಕೆಂಬ ಉದ್ದೇಶದಿಂದಷ್ಟೇ ಕಾಂಗ್ರೆಸ್ ಅನ್ನು ಬೆಂಬಲಿಸಿದರು. ಬೇರೆ ಇನ್ನೊಂದು ಪಕ್ಷವನ್ನು ಬೆಂಬಲಿಸುವುದಕ್ಕೆ ಇಲ್ಲಿ ಗಟ್ಟಿಯಾದ ಪರ್ಯಾಯವೇ ಇರಲಿಲ್ಲ. ಹಾಗೆ ನೋಡಿದರೆ, ಉತ್ತಮವಾದ ಪರ್ಯಾಯವೊಂದನ್ನು ಕಟ್ಟುವ ಜವಾಬ್ದಾರಿ ಮತ್ತು ಚಾರಿತ್ರಿಕ ಅವಕಾಶವೊಂದು ನಾಡಿನ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಾರರಿಗೆ ಇತ್ತು. ಆದರೆ, manishsisodia-yogendrayadav-arvindkejriwal-prashantbhushanಈ ಗುಂಪಿನ ಜನರು ತಮ್ಮ ಸಿನಿಕತನ, ಜವಾಬ್ದಾರಿ ನಿಭಾಯಿಸಲಾಗದ ಹೊಣೆಗೇಡಿತನ, ಮತ್ತು ಕೆಲವು ಸ್ವಕೇಂದ್ರಿತ ಸ್ವಾರ್ಥಮನೋಭಾವಗಳಿಂದಾಗಿ ಆ ಅವಕಾಶವನ್ನು ಹಾಳುಮಾಡಿಕೊಂಡಿದ್ದಷ್ಟೇ ಅಲ್ಲದೆ ಕ್ರಮೇಣವಾಗಿ ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಅಪ್ರಸ್ತುತರಾಗಿಬಿಟ್ಟರು. ಇದು ಅವರ ಸೋಲು ಮತ್ತು ನಿಷ್ಕ್ರಿಯೆಗಿಂತ ಹೆಚ್ಚಾಗಿ ರಾಜ್ಯದ ಸೋಲಾಗಿ ಪರಿಣಮಿಸಿರುವುದನ್ನು ರಾಜ್ಯದಲ್ಲಿ ಮುಂದುವರೆದ ದುರಾಡಳಿತ, ನಿರಾಡಳಿತ, ಕುಸಿಯುತ್ತಲೇ ಇರುವ ಸಾಮಾಜಿಕ ಮೌಲ್ಯಗಳು, ಹಾಗೂ ನಮ್ಮ ಸಂವಿಧಾನಬದ್ಧ ಪ್ರಜಾಸತ್ತಾತ್ಮಕ ಸಂಸ್ಥೆಗಳ ಅವನತಿಯಲ್ಲಿ ಕಾಣಬಹುದು.

ಆದರೆ, ಇದೇ ಸಮಯದಲ್ಲಿ ದೇಶದಲ್ಲಿ ರಕ್ತರಹಿತ ಕ್ರಾಂತಿಯೊಂದು ಜಾರಿಯಲ್ಲಿದೆ. ಮೂರು ವರ್ಷಗಳ ಹಿಂದೆ ದೇಶದಲ್ಲಿಯ ಮಿತಿಮೀರಿದ ಭ್ರಷ್ಟಾಚಾರದ ವಿರುದ್ಧ ರೂಪುಗೊಂಡ ಹೋರಾಟ ಕಳೆದ ವರ್ಷದ ಅಂತ್ಯದಲ್ಲಿ ದೆಹಲಿಯ ಜನ ಕೊಟ್ಟ ಪ್ರಜಾಸತ್ತಾತ್ಮಕ ತೀರ್ಮಾನದ ಮೂಲಕ ಪ್ರಮುಖ ಘಟ್ಟವನ್ನು ತಲುಪಿದೆ. ಇದು ಈ ರಾಷ್ಟ್ರದ ಜನ ಒಂದು ನಂಬಲರ್ಹ ಪರ್ಯಾಯಕ್ಕಾಗಿ ಕಾಯುತ್ತಿದ್ದದ್ದನ್ನು ಮತ್ತು ಅಂತಹುದೊಂದನ್ನು ಬೆಂಬಲಿಸಲು ಸಿದ್ದವಿರುವುದನ್ನು ತೋರಿಸುತ್ತದೆ. ರಾಷ್ಟ್ರವ್ಯಾಪಿಯಾಗಿ ಈ ಚಳವಳಿ ಕೇವಲ aamadmipartyಆಮ್ ಆದ್ಮಿ ಪಾರ್ಟಿಯ ರೂಪದಲ್ಲಿ ಮಾತ್ರವಲ್ಲ, ಬೇರೆ ಪಕ್ಷಗಳಲ್ಲಿಯೂ ಗಮನಾರ್ಹ ಮತ್ತು ಗುಣಾತ್ಮಕ ಬದಲಾವಣೆಗಳ ರೂಪದಲ್ಲಿ ಕಾಣಿಸುತ್ತಿದೆ. ಅದನ್ನು ಗಮನಿಸದ ಪಕ್ಷಗಳು ಮತ್ತು ತಮ್ಮ ಕೋಮುವಾದಿ ಮತ್ತು ವಂಶಪಾರಂಪರ್ಯ ನೆಲೆಗಳಿಂದ ಹೊರಬಂದು ಆಂತರಿಕ ಪ್ರಜಾಪ್ರಭುತ್ವದ ಮೂಲಕ ಸರ್ವಜನರ ಪರವಾಗಿ ರಾಜಕಾರಣ ಮಾಡಲಾಗದ ಪಕ್ಷಗಳು ಇತಿಹಾಸದ ಕಸದಬುಟ್ಟಿಗೆ ಸೇರಲಿವೆ. ಇಂತಹುದೇ ಒಂದು ಸಂದರ್ಭದಲ್ಲಿ ಕರ್ನಾಟಕವೂ ಬಂದು ನಿಂತಿದೆ.

ಇದೆಲ್ಲವನ್ನೂ ಮತ್ತು ರಾಜ್ಯದ ರಾಜಕೀಯ ವಾಸ್ತವಗಳನ್ನು ಗಮನಿಸಿ ನಾನು ಕಳೆದ ವಾರ ಲೋಕಸತ್ತಾ ಪಕ್ಷಕ್ಕೆ ರಾಜಿನಾಮೆ ನೀಡಿ, ಇಂದು ಆಮ್ ಆದ್ಮಿ ಪಕ್ಷದ ಸದಸ್ಯನಾಗಿ ಅಧಿಕೃತವಾಗಿ ಸೇರ್ಪಡೆ ಆಗಿದ್ದೇನೆ. ಇದು ಒಂದು ರೀತಿಯಲ್ಲಿ ತಾಂತ್ರಿಕವಾಗಿ ಪಕ್ಷಾಂತರವಾದರೂ ಲೋಕಸತ್ತಾ ಮತ್ತು ಆಮ್ ಆದ್ಮಿ ಪಾರ್ಟಿಗಳ ನಡುವೆ ಹೇಳಿಕೊಳ್ಳುವಂತಹ ಗಂಭೀರ ವ್ಯತ್ಯಾಸಗಳಿಲ್ಲ; ಅದರಲ್ಲೂ ಮೌಲ್ಯಾಧಾರಿತ ಮತ್ತು ಭ್ರಷ್ಟಾಚಾರಮುಕ್ತ ರಾಜಕಾರಣದ ವಿಚಾರದಲ್ಲಿ ಇಲ್ಲವೇ ಇಲ್ಲ. aap-pressmeet-01022014ಆದರೆ, ಕೆಲವು ಕಾರಣಾಂತರಗಳಿಂದಾಗಿ ಈ ಎರಡೂ ಪಕ್ಷಗಳು ಕೂಡಿ ಕೆಲಸ ಮಾಡುವ ಸ್ಥಿತಿ ಈಗ ಕರ್ನಾಟಕದಲ್ಲಿ ಇಲ್ಲ ಎನ್ನುವ ವಾತಾವರಣದಲ್ಲಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದಲಾವಣೆಗೆ ತುಡಿಯುತ್ತಿರುವ ಮತ್ತು ಆ ದಿಸೆಯಲ್ಲಿ ಗಟ್ಟಿಯಾದ ಚಳವಳಿಯೊಂದು ರೂಪುಗೊಳ್ಳುತ್ತಿರುವ ಸಂದರ್ಭದಲ್ಲಿ ಅಂತಹ ಚಳವಳಿಯೊಂದರಿಂದ ಹೊರಗಿರುವುದು ನೈತಿಕವಾಗಿ ಸರಿಯಾದ ನಿರ್ಧಾರ ಅಲ್ಲ ಮತ್ತು ಅದನ್ನು ಬೆಂಬಲಿಸುವುದು ಮತ್ತು ಪಾಲ್ಗೊಳ್ಳುವುದು ಚಳವಳಿಯೆಡೆಗಿನ ನನ್ನ ಬದ್ಧತೆಯೂ ಹೌದು ಎನ್ನುವ ಕಾರಣಕ್ಕಾಗಿ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದೇನೆ. ನಾನು ನಂಬುವ ಮತ್ತು ನಾನು ತಪ್ಪು ಮಾಡಬಹುದಾದ ಸಂದರ್ಭದಲ್ಲಿ ನನ್ನನ್ನು ಕೈಹಿಡಿದು ಸರಿಯಾದ ಮಾರ್ಗದಲ್ಲಿ ನಡೆಸಬಲ್ಲ ಆತ್ಮೀಯರು ಮತ್ತು ಸ್ನೇಹಿತರು ನನ್ನ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ ಮತ್ತು ಇದು ಪಕ್ಷಾಂತರವಲ್ಲ, ತಾರ್ಕಿಕವಾಗಿ ಮುಟ್ಟಬೇಕಿದ್ದ ಗುರಿಯೇ ಎಂದು ಹೇಳಿದ್ದಾರೆ. ಹಾಗಾಗಿ ಯಾವುದೇ ಗೊಂದಲಗಳಿಲ್ಲದೆ ರಾಜ್ಯ ಆಮ್ ಆದ್ಮಿ ಪಕ್ಷದಲ್ಲಿಯ ಕೆಲವು ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ.

ಆಮ್ ಆದ್ಮಿ ಪಾರ್ಟಿಯೆನ್ನುವುದು ಈಗ ವಾಸ್ತವ. ಸಾವಿರಾರು ಜನ ಆ ಪಕ್ಷಕ್ಕೆ ಯಾವುದೇ ವೈಯಕ್ತಿಕ ಲಾಭದ ನಿರೀಕ್ಷೆಗಳಿಲ್ಲದೆ ಸೇರುತ್ತಿದ್ದಾರೆ. ಅನೇಕ ಜನ ತಾವು ಮಾಡುತ್ತಿದ್ದ ನೌಕರಿಯಿಂದ ರಜೆ ಪಡೆದು ಮತ್ತು ಅದಾಗದ ಸಂದರ್ಭದಲ್ಲಿ ರಾಜೀನಾಮೆ ನೀಡಿ ಪೂರ್ಣಾವಧಿ ಕಾರ್ಯಕರ್ತರಾಗಿ ಒಂದು ಘನ ಉದ್ದೇಶಕ್ಕಾಗಿ ದುಡಿಯುತ್ತಿದ್ದಾರೆ. ನನ್ನ ಇಲ್ಲಿಯತನಕದ ಜೀವನದಲ್ಲಿ ವೈಯಕ್ತಿಕವಾಗಿ ಅನುಭವಕ್ಕೆ ಬಾರದಿದ್ದ ವಿದ್ಯಮಾನವೊಂದನ್ನು ಇಲ್ಲಿ ಕಾಣುತ್ತಿದ್ದೇನೆ. ಇದನ್ನು ಇತಿಹಾಸದ ಹಿನ್ನೆಲೆಯಲ್ಲಿ ಕೇಳಿದ್ದೆ, ಓದಿದ್ದೆ. ಆದರೆ ಸ್ವತಃ ನೋಡಿರಲಿಲ್ಲ. ಸಮಾಜದ ನಾನಾವರ್ಗದ ಜನರು ಒಂದು ಧ್ಯೇಯೋದ್ದೇಶಕ್ಕಾಗಿ ನಿಸ್ವಾರ್ಥವಾಗಿ ತೊಡಗಿಸಿಕೊಂಡು ತಮ್ಮೆಲ್ಲ ಹಮ್ಮುಬಿಮ್ಮು, ನೋವುನಲಿವುಗಳನ್ನು ಬದಿಗೊತ್ತಿ ತಮ್ಮೆಲ್ಲ ಎಚ್ಚರದ ಸ್ಥಿತಿಯನ್ನು ಈ ಚಳವಳಿಗೆ ದುಡಿಯುತ್ತಿರುವುದನ್ನು ಕಂಡು ನಾನು ಆಶ್ಚರ್ಯಪಟ್ಟಿದ್ದೇನೆ, ಹೆಮ್ಮೆಪಟ್ಟಿದ್ದೇನೆ. ಇದು ನಮ್ಮ ಕಾಲದ ಚಳವಳಿ. ನಮ್ಮದೇ ಚಳವಳಿ.

ನಾನು ಆಮ್ ಆದ್ಮಿ ಪಾರ್ಟಿಗೆ ಸೇರಿರುವ ಸಂಗತಿ ವರ್ತಮಾನ.ಕಾಮ್‌ನ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ (ನನ್ನ ಸಮಯವನ್ನೊಂದು ಬಿಟ್ಟು). ಮೊದಲಿನಿಂದಲೂ ನಾವು ನಮ್ಮ ಬಳಗದ ಎಲ್ಲಾ ಪ್ರಮುಖ ಲೇಖಕರ ಲೇಖನಗಳನ್ನು ಎಡಿಟ್ ಮಾಡದೇ ಪ್ರಕಟಿಸುತ್ತ ಬಂದಿದ್ದೇವೆ (ಕಾಗುಣಿತ ಮತ್ತು ಕೆಲವು ಭಾಷಾಪ್ರಯೋಗಗಳನ್ನು ಹೊರತುಪಡಿಸಿ). ಅದು ಮುಂದೆಯೂ ಮುಂದುವರೆಯುತ್ತದೆ. ನಮ್ಮಲ್ಲಿ ಈಗಾಗಲೇ ಬರೆಯುತ್ತಿರುವ ಲೇಖಕರಿಂದ ಇಲ್ಲಿ ಆಮ್ ಆದ್ಮಿ ಪಾರ್ಟಿಯ ಪರವಾಗಿ ಏನಾದರೂ ಕೆಲವು ಲೇಖನಗಳು ಬಂದರೆ ಅದು ಅವರ ಬರವಣಿಗೆ ಮತ್ತು ಸ್ವತಂತ್ರ ಅಭಿಪ್ರಾಯದ ಮುಂದುವರೆಕೆಯೇ ಹೊರತು ಬೇರಲ್ಲ, ಇದೊಂದು ಸ್ವತಂತ್ರ ವೇದಿಕೆ ಮತ್ತು ಹಾಗೆಯೇ ಮುಂದುವರೆಯುತ್ತದೆ; ನನ್ನ ವೈಯಕ್ತಿಕ ಆಯ್ಕೆಗಳ ಹೊರತಾಗಿ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಮಹಾತ್ಮ ಹುತಾತ್ಮನಾದಂದು…

– ರವಿ ಕೃಷ್ಣಾರೆಡ್ಡಿ

(ಹತ್ತು ವರ್ಷಗಳ ಹಿಂದೆ – 2004 ಜನವರಿ 30 – ದಟ್ಸ್‌ಕನ್ನಡ.ಕಾಮ್‌ಗೆ ಬರೆದಿದ್ದ ಲೇಖನ.)

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ಸದಸ್ಯರು ಸತ್ತ ಮನುಷ್ಯನಿಗೆ ಗೌರವ ಸೂಚಿಸಲಿಕ್ಕಾಗಿ ಕಲಾಪವನ್ನು ಕೆಲಕಾಲ ಸ್ಥಗಿತಗೊಳಿಸಿತು. ಬ್ರಿಟಿಷ್‌ ಪ್ರತಿನಿಧಿ ಫಿಲಿಪ್‌ ನೋಯೆಲ್‌ಬೆಕರ್‌ ಗಾಂಧಿಯನ್ನು ‘ಕಡುಬಡವನ, ಏಕಾಂಗಿಯ ಮತ್ತು ಸೋತವನ ಸ್ನೇಹಿತ” ಎಂದು ವರ್ಣಿಸಿ ‘ಗಾಂಧಿಯ ಮಹತ್ಸಾಧನೆಗಳು ಇನ್ನು ಮುಂದೆಯೂ ಬರಲಿವೆ” ಎಂದು ಪ್ರತಿಪಾದಿಸಿದ.

ಭದ್ರತಾ ಮಂಡಳಿಯ ಅನ್ಯ ಸದಸ್ಯರು ಗಾಂಧಿಯ ಆಧ್ಯಾತ್ಮಿಕ ಗುಣಗಳನ್ನು ಶ್ಲಾಘಿಸಿ ಶಾಂತಿ ಮತ್ತು ಅಹಿಂಸೆಯಡೆಗೆ 200px-MKGandhi[1]ಆತನ ನಿಷ್ಠೆಯನ್ನು ಪ್ರಶಂಸಿಸಿದರು. ಸೋವಿಯತ್‌ ಒಕ್ಕೂಟದ ಆಂಡ್ರ್ಯಿಗ್ರಾಮಿಕೊ ಗಾಂಧಿಯನ್ನು ಭಾರತದ ಉನ್ನತ ರಾಜಕೀಯ ನಾಯಕರೊಲ್ಲಬ್ಬರೆಂದು ವರ್ಣಿಸಿ ಆತನ ಹೆಸರು ಸುದೀರ್ಘ ಸಮಯ ತೆಗೆದುಕೊಂಡ ಭಾರತದ ಜನರ ರಾಷ್ಟ್ರೀಯ ವಿಮೋಚನಾ ಹೋರಾಟದ ಜೊತೆಗೆ ಎಂದಿಗೂ ಜೋಡಿಸಲ್ಪಡುತ್ತದೆ ಎಂದರು. ಸೋವಿಯತ್‌ ಉಕ್ರೇನ್‌ನ ಪ್ರತಿನಿಧಿ ಟಾರಾಸೆಂಕೊ ಸಹ ಗಾಂಧಿಯ ರಾಜಕಾರಣವನ್ನು ಒತ್ತುಕೊಟ್ಟು ಹೇಳಿದರು.

ವಿಶ್ವಸಂಸ್ಥೆ ತನ್ನ ಧ್ವಜವನ್ನು ಅರ್ಧಕ್ಕೆ ಕೆಳಗಿಳಿಸಿತು.
ಮಾನವತೆ ತನ್ನ ಧ್ವಜವನ್ನು ಕೆಳಗಿಳಿಸಿತು.

ಗಾಂಧಿಯ ಸಾವಿಗೆ ಜಗತ್ತಿನಾದ್ಯಂತದ ಪ್ರತಿಕ್ರಿಯೆಯೇ ಒಂದು ಮುಖ್ಯ ನೈಜಸಾಕ್ಷಿ; ಅದು ವ್ಯಾಪಕವಾಗಿ ಹರಡಿದ್ದ ಮನೋಭಾವ ಮತ್ತು ಅಗತ್ಯವನ್ನು ಅಭಿವ್ಯಕ್ತಗೊಳಿಸಿತು. ನ್ಯೂಯಾರ್ಕ್‌ನ ಪತ್ರಿಕೆಯ ಆಲ್ಬರ್ಟ್‌ ಡ್ಯೂಶ್ಚ್‌ ‘ಗಾಂಧಿಯ ಸಾವಿಗೆ ಪೂಜ್ಯಭಾವನೆಯಿಂದ ಪ್ರತಿಸ್ಪಂದಿಸಿದ ಜಗತ್ತಿಗೆ ಇನ್ನೂ ಸ್ವಲ್ಪ ಭರವಸೆಯಿದೆ”ಎಂದು ಘೋಷಿಸಿ- ‘ನವದೆಹಲಿಯ ದುರಂತವನ್ನು ಹಿಂಬಾಲಿಸಿದ ಆಘಾತ ಮತ್ತು ಪರಿತಾಪ ನಾವು ಸಂತತ್ವವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಅದನ್ನು ಗೌರವಿಸುತ್ತೇವೆ ಎಂಬುದನ್ನು ತೋರಿಸಿಕೊಟ್ಟಿತು” ಎಂದರು.

ಅಮೇರಿಕಾದ ಸೆನೆಟರ್‌ ಆರ್ಥರ್‌ ವ್ಯಾಂಡೆನ್‌ಬರ್ಗ್‌ ಹೇಳಿದ್ದು ‘ವಿನಯಶೀಲತೆ ಮತ್ತು ಸರಳ ಸತ್ಯಗಳನ್ನು gandhi_dead_bodyಗಾಂಧಿ ಸಾಮ್ರಾಜ್ಯಗಳಿಗಿಂತ ಶಕ್ತಿಶಾಲಿಯನ್ನಾಗಿ ಮಾಡಿದರು”. ಕಾದಂಬರಿಕಾರ ಪರ್ಲ್‌ ಬಕ್‌ ಗಾಂಧಿಯ ಹತ್ಯೆಯನ್ನು ‘ಮತ್ತೊಂದು ಶಿಲುಬೆಗೇರಿಕೆ” ಎಂದು ವರ್ಣಿಸಿದರು. ನ್ಯಾಯಾಧೀಶ ಫೆಲಿಕ್ಸ್‌ ಫ್ರಾಂಕ್‌ಫರ್ಟರ್‌ ಅದನ್ನು ‘ಪ್ರಪಂಚದ ಸತ್ಯ ಪಡೆಗಳ ವಿರುದ್ಧದ ಅತಿ ಕ್ರೂರ ಹೊಡೆತ” ಎಂದರು.

ಗಾಂಧಿಯನ್ನು ಪ್ರಶಂಸಿಸುತ್ತಿದ್ದ ಆಡಳಿತಗಾರ ಮತ್ತು ರಾಜಕಾರಣಿಗಳಿಗೆ ತಮ್ಮ ಸ್ವಂತವೇ ನ್ಯೂನತೆಗಳನ್ನು ಕನಿಷ್ಠ ನೆನಪಿಸುವಷ್ಟಾದರೂ ಆಗಿದ್ದರಾತ.

ಕ್ಯಾಲಿಫೋರ್ನಿಯಾದ ಹದಿಮೂರು ವರ್ಷದ ಹುಡುಗಿ ಒಂದು ಕಾಗದದಲ್ಲಿ ಬರೆದಳು: ‘ಗಾಂಧಿಯ ಸಾವನ್ನು ಕೇಳಿ ನನಗೆ ನಿಜವಾಗಿಯೂ ದಾರುಣ ದುಃಖವಾಯಿತು. ನನಗೆ ಆತನಲ್ಲಿ ಅಷ್ಟು ಆಸಕ್ತಿಯಿದೆ ಎಂದು ಎಂದೂ ತಿಳಿದಿರಲಿಲ್ಲ ಆದರೆ ಆ ಮಹಾನ್‌ ವ್ಯಕ್ತಿಯ ಸಾವಿನಿಂದ ನನಗೆ ಎಷ್ಟು ಅಸಂತೋಷವಾಗಿದೆ ಎಂದು ನನಗೇ ತಿಳಿಯಿತು”.

ನ್ಯೂಯಾರ್ಕಿನಲ್ಲಿ, ಹನ್ನೆರಡು ವರ್ಷದ ಹುಡುಗಿ ಅಡಿಗೆ ಮನೆಗೆ ಉಪಹಾರ ಸ್ವೀಕರಿಸಲು ಹೋಗಿದ್ದಳು. ಚಾಲನೆಯಲ್ಲಿದ್ದ ರೇಡಿಯಾ ಗಾಂಧಿಗೆ ಗುಂಡಿಟ್ಟ ಸುದ್ದಿ ತಂದಿತು. ಅದೇ ಕ್ಷಣದಲ್ಲಿ, ಆ ಚಿಕ್ಕ ಹುಡುಗಿ, ಮನೆಕೆಲಸದವಳು, ಮತ್ತು ತೋಟದ ಮಾಲಿ ಪ್ರಾರ್ಥನಾ ಸಭೆ ನಡೆಸಿದರು, ಪ್ರಾರ್ಥಿಸಿದರು ಮತ್ತು ಅತ್ತರು. ಅದೇ ರೀತಿ, ಪ್ರಪಂಚದಾದ್ಯಂತ ಲಕ್ಷಾಂತರ ಜನ ಗಾಂಧಿಯ ಸಾವನ್ನು ವೈಯುಕ್ತಿಕ ನಷ್ಟವೆಂಬಂತೆ ಶೋಕಿಸಿದರು. ಅವರಿಗೆ ಯಾಕೆಂದು ಅಷ್ಟೇನೂ ಸರಿಯಾಗಿ ತಿಳಿದಿರಲಿಲ್ಲ; ಆತ ಏನನ್ನು ಪ್ರತಿನಿಧಿಸಿದ್ದ ಎಂದೂ ಸಹ ಚೆನ್ನಾಗಿ ಗೊತ್ತಿರಲಿಲ್ಲ. ಆದರೆ ಆತ ‘ಒಳ್ಳೆಯ ಮನುಷ್ಯ”ನಾಗಿದ್ದ ಮತ್ತು ಒಳ್ಳೆಯವರು ವಿರಳ.

ಸರ್‌ ಸ್ಟಾಫರ್ಡ್‌ ಕ್ರಿಪ್ಸ್‌ ಬರೆಯುತ್ತಾರೆ, ‘ಲೌಕಿಕ ವಸ್ತುಗಳ ಮೇಲೆ ಶಕ್ತಿಯುತ ಚೈತನ್ಯವನ್ನು ಇಷ್ಟು ಬಲಯುತವಾಗಿ ಮತ್ತು ಸಮಂಜಸವಾಗಿ ಯಾವುದೇ ಸಮಯದಲ್ಲಾಗಲಿ ಅಥವ ಕನಿಷ್ಠ ಇತ್ತೀಚಿನ ಇತಿಹಾಸದಲ್ಲಾಗಲಿ ಪ್ರದರ್ಶಿಸಿದ ಮತ್ತೊಬ್ಬ ವ್ಯಕ್ತಿ ನನಗೆ ತಿಳಿದಿಲ್ಲ”. ಇದನ್ನೇ ತಾವು ಶೋಕಿಸುತ್ತಿದ್ದಾಗ ಜನ ಗ್ರಹಿಸಿದ್ದು. ಅವರ ಸುತ್ತಮುತ್ತೆಲ್ಲ ಲೌಕಿಕ ವಸ್ತುಗಳು ಅಲೌಕಿಕ ಚೈತನ್ಯಕ್ಕಿಂತ ಬಲವಾಗಿದ್ದವು. ಆತನ ಮಿಂಚಿನಂತಹ ದಿಢೀರ್‌ ಸಾವು ವಿಶಾಲ ಕತ್ತಲನ್ನು ಅನಾವರಣಗೊಳಿಸಿತು. ಆತನ ನಂತರ ಜೀವಿಸಿದ ಯಾರೂ ಸತ್ಯವಂತ ಜೀವನವನ್ನು ಜೀವಿಸುವುದಕ್ಕಾಗಿ, ಕಕ್ಕುಲತೆ, ಸ್ವವ್ಯಕ್ತಿನಾಶ, ವಿನಯಶೀಲತೆ, ಸೇವೆ ಮತ್ತು ಅಹಿಂಸೆಯನ್ನು ಸುದೀರ್ಘ ಕಾಲ, ಪ್ರಬಲ ಶತ್ರುಗಳ ವಿರುದ್ಧದ ಕಷ್ಟಮಯ ಹೋರಾಟವನ್ನು, ಆತನಷ್ಟು ಕಠಿಣವಾಗಿ ಪ್ರಯತ್ನಿಸಲಿಲ್ಲ ಮತ್ತು ಅಷ್ಟು ಯಶಸ್ಸು ಪಡೆಯಲಿಲ್ಲ. ತನ್ನ ದೇಶದಲ್ಲಿನ ಬ್ರಿಟಿಷ್‌ ಆಡಳಿತದ ವಿರುದ್ಧ ಮತ್ತು ತನ್ನ ದೇಶದ್ದೇ ಜನರ ದುಷ್ಟತೆಯ ವಿರುದ್ಧ ಆತ ತೀವ್ರವಾಗಿ ಮತ್ತು ನಿರಂತರವಾಗಿ ಹೋರಾಡಿದ. ಆದರೆ ಯುದ್ದದ ಮಧ್ಯದಲ್ಲಿ ತನ್ನ ಕೈಗಳನ್ನು ಪವಿತ್ರವಾಗಿಟ್ಟುಕೊಂಡ. ಮತ್ಸರವಿಲ್ಲದೆ, ಢೋಂಗಿತನವಿಲ್ಲದೆ, ಅಥವ ದ್ವೇಷವಿಲ್ಲದೆ ಹೋರಾಡಿದ.

ಈ ಮೇಲಿನ ಸಾಲುಗಳು 1950ರಲ್ಲಿ ಪ್ರಕಟವಾದ, ಲೂಯಿ ಫಿಷರ್‌ ಎಂಬ ಪಾಶ್ಚಾತ್ಯ ಲೇಖಕ ಬರೆದ The Life of Mahatma Gandhi ಎಂಬ ಜೀವನಚರಿತ್ರೆ ಪುಸ್ತಕದ ಒಂದೆರಡು ಪುಟಗಳಲ್ಲಿ ಬರುವ ವಾಕ್ಯಗಳು. ಈ ಪುಸ್ತಕವನ್ನು ಆತ ಬರೆದದ್ದು ಇಂಗ್ಲೀಷ್‌ ಬಲ್ಲ the-life-of-mahatma-gandhiಅಮೇರಿಕನ್‌ ಹಾಗೂ ಪಾಶ್ಚಾತ್ಯ ಓದುಗರನ್ನು ಗಮದಲ್ಲಿಟ್ಟುಕೊಂಡು. ಆದ್ದರಿಂದ ಅಮೇರಿಕನ್ನರಿಗೆ ಅಥವ ಪಾಶ್ಚಾತ್ಯರಿಗೆ ಪ್ರಸ್ತುತ ಮತ್ತು ಪರಿಚಿತವಿರುವ, ಅವರಿಗೆ ಮುಖ್ಯವೆನಿಸುವ ವ್ಯಕ್ತಿ-ವಿಷಯಗಳನ್ನು ತೆಗೆದುಕೊಂಡು ಆ ದೃಷ್ಟಿಕೋನದಲ್ಲಿ ನಿರೂಪಿಸಿರುವುದು.

ಶರಣರ ಗುಣವನ್ನು ಮರಣದಲ್ಲಿ ನೋಡೆಂಬಂತೆ, ಮೋಹನದಾಸ ಗಾಂಧಿ ಸತ್ತಾಗ ಜಗತ್ತು ಪ್ರತಿಕ್ರಿಯಿಸಿದ ರೀತಿ ಅನನ್ಯ. ಆದರೆ ಇಲ್ಲಿ ಆ ಅನನ್ಯತೆಗೆ ಕೇವಲ ಒಳ್ಳೆಯವರು ವಿರಳ ಎಂಬುದಷ್ಟೇ ಕಾರಣವಲ್ಲ ಎನ್ನುವುದು ಸ್ವಲ್ಪ ಆಲೋಚಿಸಿದರೆ ಎಲ್ಲರಿಗೂ ತಿಳಿಯುವ ಸರಳ ಸತ್ಯ. ಐವತ್ತಾರು ವರ್ಷಗಳ ಹಿಂದೆ ಗಾಂಧಿ ಸತ್ತ ದಿನವನ್ನು ಹುತಾತ್ಮರ ದಿನಾಚರಣೆಯನ್ನಾಗಿಸಿ ಕೈತೊಳೆದುಕೊಳ್ಳುವುದಕ್ಕಿಂತ ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಗಾಂಧೀವಾದವನ್ನು ಸಾಣೆ ಹಿಡಿದುಕೊಂಡರೆ ಎಷ್ಟೋ ಸಮಸ್ಯೆಗಳಿಗೆ ನೀತಿಯುಕ್ತ, ಸತ್ಯ ಉತ್ತರ ಸಿಗುತ್ತದೆ.

ನಮ್ಮ ಅನಂತಾನಂತ ಅವತಾರಾಚಾರ್ಯ ಪುರುಷರು(?) ಹೇಳಿದಷ್ಟು ಕಠಿಣವಾಗಲಿ, ಅಮೂರ್ತವಾಗಿಯಾಗಲಿ ಗಾಂಧಿಯ ಚಿಂತನೆಗಳು ಇಲ್ಲ. ಹಾಗೆಯೇ ಗಾಂಧಿ ಹೇಳಿದ ಪ್ರತಿ ಅಕ್ಷರವೂ ಸರಿ, ಅದನ್ನು ಸಮಕಾಲೀನಕ್ಕೆ ತಕ್ಕಂತೆ ಪರಿಷ್ಕರಿಸಿ ಅಳವಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಮುಲ್ಲಾ ಮಠಾಧೀಶರ ಸ್ವತ್ತಾಗಿಯೂ ಗಾಂಧಿ ಉಳಿದಿಲ್ಲ. ತನ್ನೆಲ್ಲ ಹುಳುಕಗಳ ಜೊತೆಗೆ ಸಾರ್ವಜನಿಕವಾಗಿ ಜೀವಿಸಿದ, ಲೇಖಕ ಫಿಷರ್‌ ಹೇಳುವಂತೆ ಸ್ವವ್ಯಕ್ತಿನಾಶಕ್ಕೆ (self-effacement) ಶ್ರಮಿಸಿದವನ ವ್ಯಕ್ತಿಪೂಜೆ ಮಾಡುವವರು ಅಪಹಾಸ್ಯಕ್ಕೆ ಈಡಾಗುವುದು ಸಹಜ. ಆದ್ದರಿಂದ ಗಾಂಧಿ-ಬುದ್ಧರ ಪುನರವತಾರಕ್ಕಾಗಿ ಕಾಯಬೇಕು ಎಂಬ ನಿರಾಶಾ ಮತ್ತು ಅಸಹಾಯಕ ಸ್ಥಿತಿಯಲ್ಲಿ ಬಿದ್ದು ಹೊಸ ಮಾರ್ಗಗಳನ್ನು ಹುಡುಕುವ, ಹುಟ್ಟು ಹಾಕುವ ಕೆಲಸ ಮಾಡದೆ ಗಾಂಧಿ-ಬುದ್ಧರಿಗೆ ಕಾಯುವುದು ಕರುಣಾಜನಕವೆನಿಸುವ ಸ್ಥಿತಿ. ಇತಿಹಾಸದ ಮಟ್ಟಿಗೆ ಹೇಳುವುದಾದರೆ ಮತ್ತೆ ನಾ ಬರುವೆ ಎಂದು ಇವರ್ಯಾರೂ ಹೇಳಿಲ್ಲ! ಸತ್ತವರಿಗೆ ಕಾಯುತ್ತಾ ಕೂರುವುದು ಮನುಷ್ಯಜಾತಿಯ ಕ್ರಿಯಾಶಕ್ತಿಯನ್ನೇ ಶಂಕಿಸಿದಂತೆ. ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು. ಯಾಕೆಂದರೆ ಹುತಾತ್ಮರು ಪ್ರೇತಾತ್ಮರಲ್ಲ.

ಜನವರಿ 19 ರಂದು ಮೈಸೂರಿನಲ್ಲಿ “ದಲಿತರು ಮತ್ತು ಉದ್ಯಮಶೀಲತೆ” – ವಿಚಾರ ಸಂಕಿರಣ ಮತ್ತು ಸಂವಾದ

ಸ್ಣೇಹಿತರೇ,

ಇತರ ಸಮಾನಮನಸ್ಕ ಸಂಸ್ಥೆ ಮತ್ತು ಸಂಘಗಳ ಜೊತೆ ಸೇರಿ ವರ್ತಮಾನ.ಕಾಮ್ ನಡೆಸುತ್ತಿರುವ “ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರ ಸಂಕಿರಣ ಮತ್ತು ಸಂವಾದದ ಮೂರನೆಯ ಕಾರ್ಯಕ್ರಮ ಬರುವ ಭಾನುವಾರದಂದು (ಜನವರಿ 19, 2014) ಮೈಸೂರಿನಲ್ಲಿ ನಡೆಯಲಿದೆ. dailts-entrepreneurship-mysoreಈ ಸರಣಿಯ ಮೊದಲ ಕಾರ್ಯಕ್ರಮ ಹಾಸನದಲ್ಲಿ ನಡೆಯಿತು. ಎರಡನೆಯದನ್ನು ತುಮಕೂರಿನಲ್ಲಿ ಆಯೋಜಿಸಲಾಗಿತ್ತು. ಮೈಸೂರಿನ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ “ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ”ದ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ಆ ಕಾರ್ಯಕ್ರಮದ ವಿವರಗಳನ್ನು ಲಗತ್ತಿಸಲಾಗಿದೆ.

ಮೈಸೂರು ಮತ್ತು ಸುತ್ತಮುತ್ತಲಿನ ಆಸಕ್ತರು, ಲೇಖಕರು, ಉದ್ಯಮಿಗಳು, ಚಳವಳಿಯಲ್ಲಿ ಇರುವವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇವೆ.

ನಮಸ್ಕಾರ,
ಬಿ. ಶ್ರೀಪಾದ್ ಭಟ್ ಮತ್ತು ರವಿ ಕೃಷ್ಣಾರೆಡ್ಡಿ
ವರ್ತಮಾನ.ಕಾಮ್ ಪರವಾಗಿ

ರವಿ ಕೃಷ್ಣಾರೆಡ್ಡಿಯವರ ಲೇಖನ ಓದುವಾಗ ನನಗನ್ನಿಸಿದ್ದು…

– ಶರ್ಮಿಷ್ಠ 

ರವಿ ಕೃಷ್ಣಾರೆಡ್ಡಿಯವರ ಲೇಖನ “ವರ್ತಮಾನ.ಕಾಮ್ ನ 2013 ಭೂತಕಾಲ” ಓದುವಾಗ ನನಗನ್ನಿಸಿದ್ದು…

ದೆಹಲಿಯಲ್ಲಿ ನಡೆದಂತಹ ಪವಾಡಸದೃಶ ಘಟನೆ ನನ್ನ ಪ್ರಕಾರ ನಮಗೆ ಅನಿವಾರ್ಯವಾಗಿ, ಅಗತ್ಯವಾಗಿಯೂ ಬೇಕು. ಆದರೆ ನಮ್ಮಲ್ಲಿ ಮನಸ್ಸುಗಳು ಮುಕ್ತವಾಗಿ ಆಲೋಚಿಸುವುದನ್ನೇ ಕಳೆದುಕೊಂಡಿರುವಾಗ ಇದು ಸಾಧ್ಯನಾ? arvind-kejriwal-delhi-electionsಕರ್ನಾಟಕದಲ್ಲಿ ನೀವು ಒಂದೋ ಎಡ ಅಥವಾ ಬಲ ಪಂಥೀಯರಾಗಿರಲೇ ಬೇಕು. ನೀವು ಗುರುತಿಸಿಕೊಳ್ಳದಿದ್ದರೂ ನಿಮ್ಮ ಸುತ್ತಲಿನ ಜನ ಇದೆರಡರಲ್ಲಿ ಒಂದಕ್ಕೆ ನಿಮ್ಮನ್ನು ಸೇರಿಸಿ, ನಿಮ್ಮನ್ನು ಹಿಗ್ಗಾಮುಗ್ಗಾ ಎಳೆದಾಡುತ್ತಾರೆ. ನಿಮ್ಮ ಒಲವು ಎಡ ವಿಚಾರಗಳ ಕಡೆಗಿದ್ದರೆ ಸಾಕು, ಅನಾವಶ್ಯಕ ನಿಮ್ಮ ಮೇಲೇ ದ್ವೇಷ ಸಾಧಿಸುತ್ತಾರೆ. ಕಾರಣವೇ ಇಲ್ಲದೆ ನಿಮ್ಮ ಬಳಿ ಮಾತು ಬಿಡುತ್ತಾರೆ, ನಿಮ್ಮ ನೆರಳು ಕಂಡರೂ ಸಾಕು ರೇಗುತ್ತಾರೆ. ಒಟ್ಟಿನಲ್ಲಿ ನಿಮ್ಮ ವಿಚಾರಗಳು ಸರಿಯಿಲ್ಲ.

ಬಲಪಂಥೀಯರೆಂದರೆ ವಿಶ್ವಾಸವಿಲ್ಲದ ಯುವಜನತೆ ಎಡಪಂಥೀಯರೆಡೆಗೆ ಹೋಗೋಣ ಎಂದರೆ ಅಲ್ಲಿರುವುದೆಲ್ಲ ಬರಿಯ ಮುಖವಾಡ, ಹಿಪೋಕ್ರಸಿ. ಹೇಳುವುದು ಒಂದು ಮಾಡುವುದು ಇನ್ನೊಂದು. ಯಾರನ್ನು ಆದರ್ಶ ಅಂಥ ಹೇಳೋಣ? ಆದರ್ಶ ಎನ್ನುವುದು ಅದು ಆದರ್ಶ ಅನ್ನೋದಕ್ಕೆ ನಮಗೆ ಆದರ್ಶಯುತವಾಗಿರಬೇಕೇ ಹೊರತು, ಬೇರೆಯವರ ಅನುಕರಣೆ ಅಲ್ಲ. ಅವರು ಆದರ್ಶವಾಗಿದ್ದರೆ ಎಷ್ಟು, ಬಿಟ್ಟರೆ ಎಷ್ಟು. ಆದರೂ ಕೆಲವೊಮ್ಮೆ ನಾವು ನಮ್ಮ ಹೋರಾಟದಲ್ಲಿ ಸೋಲು ಅನುಭವಿಸುವಾಗ ಜೀವಚೈತನ್ಯ ನೀಡುವುದಕ್ಕಾದರೂ ಆದರ್ಶಪ್ರಾಯ ವ್ಯಕ್ತಿಯೊಬ್ಬ ಸಂತೈಸಲು ಬೇಕಾಗುತ್ತದೆ. ನಮ್ಮ ನಡೆಗೆ ಜೀವ ತುಂಬಲು…

ಜಿಎಸೆಸ್ ತೀರಿಹೋದಾಗ ನನಗನ್ನಿಸಿತ್ತು, ಆದರ್ಶ ಗುರುಪರಂಪರೆಯ ಕಾಲ ಇನ್ನಿಲ್ಲ… Tumkur-VC-Sharma-with-Governorಹಿಂದಿನ ಗುರುಗಳು ಆದರ್ಶಯುತವಾದ ವಿದ್ಯಾರ್ಥಿವೃಂದವನ್ನು ಬೆಳೆಸಿದಂತೆ ಈಗ ಬೆಳೆಸುವವರು ಯಾರಿದ್ದಾರೆ? ಆ ಗುರುವಿನ ಪಟ್ಟಕ್ಕೆ ನಾವು ಬೆಲೆತೆತ್ತು ಹೋಗುತ್ತಿರುವಾಗ, ವಿಸೀ ಪದವಿ ನಡೆಯುತ್ತಿರುವುದು ಆಯ್ಕೆಯಲ್ಲ, ಅನಧಿಕೃತ “ಬಿಡ್” ಅನ್ನುವುದು ಎಲ್ಲರಿಗೂ ಗೊತ್ತಿರುವಾಗ ಆದರ್ಶಯುತ ವಿದ್ಯಾರ್ಥಿವೃಂದ ಬೆಳೆಸೋದು ಸಾಧ್ಯನಾ? ಕಾಲೇಜುಗಳಲ್ಲೇ ವಿದ್ಯಾರ್ಥಿ ಚುನಾವಣೆ ಮೂಲಕ ರಾಜಕೀಯ ಕಾಲಿಟ್ಟು ವಿದ್ಯಾರ್ಥಿ ಸಮುದಾಯವನ್ನೇ ಒಡೆಯುತ್ತಿದೆ. ಸಮಾರಂಭದಲ್ಲಿ ನಮ್ಮ ಅಧ್ಯಾಪಕರ ಆಯ್ಕೆ ಕಾಲೇಜಿಗೆ ಫಂಡ್ ಕೊಡಬಲ್ಲ ಲಂಚಕೋರ ರಾಜಕಾರಣಿಯೇ ಹೊರತು ಆದರ್ಶ ವ್ಯಕ್ತಿ ಅಲ್ಲ.

ಒಳ್ಳೆಯ ಶಿಷ್ಯ ಪರಂಪರೆಯನ್ನು ಕಟ್ಟಬಲ್ಲ ತಾಕತ್ತಿರುವ ಅಧ್ಯಾಪಕರನ್ನು ನಾವು ನಕ್ಸಲ್ ಬೆಂಬಲಿಗ ಎನ್ನುವ ಹಣೆಪಟ್ಟಿ ಹಚ್ಚಿ ಮೂಲೆಗೆ ತಳ್ಳಿಯಾಗಿದೆ. ಸೆಕ್ಯುಲರ್‌ಗಳು ಎನಿಸಿಕೊಂಡಿರುವವರು ತಪ್ಪು ಯಾರು ಮಾಡಿದರೂ ತಪ್ಪು ಎನ್ನೋ ಧೋರಣೆ ಬಿಟ್ಟು ಯಾವುದೋ ವಾದವನ್ನು ಮುಂದಿಟ್ಟುಕೊಂಡು ಬಲಪಂಥೀಯರನ್ನು ಹೆಚ್ಚು ಹೆಚ್ಚು ತಯಾರು ಮಾಡುತ್ತಿದ್ದಾರೆ. ಅದಕ್ಕೆ ಕರ್ನಾಟಕದ ಯುವಜನತೆ ಮೋದಿಯ ಚುಂಗು ಹಿಡಿದುಕೊಂಡಿದೆ. ಇಲ್ಲಿ ಆಮ್ ಆದ್ಮಿ ಮೋಡಿ ಆಗುತ್ತಿಲ್ಲ.

ಒಮ್ಮೆ ಟಿ.ಪಿ. ಅಶೋಕ ಸಮಾರಂಭವೊಂದರಲ್ಲಿ ಹೇಳಿದ್ದರು `ಲೆಟ್ ಅಸ್ ಅಗ್ರೀ ಟು ಡಿಸಗ್ರೀ’. ಅದು ನಮ್ಮಲ್ಲಿ ಸಾಧ್ಯವೇ ಇಲ್ಲ.

ಯಾದವ್ ತರದ ಒಳ್ಳೆಯ ಆದರ್ಶ ಪ್ರೋಪೆಸರ್ ಇಲ್ಲಾ ಅಂಥಲ್ಲ ಅಂಥವರನ್ನು ಸರ್ಕಾರದ ಅಧೀನದಲ್ಲಿರುವ ವಿವಿಗಳು ಕೈಕಟ್ಟಿ ಕೂರಿಸಿವೆ. ಅಥವಾ ಸಾಧ್ಯತೆ ಇರುವವರು ಮುಂದೆ ಬರುತ್ತಿಲ್ಲ.

ಒಳ್ಳೆಯ ಪತ್ರಕರ್ತರು ಅಂಥ ಇದ್ದರೆ ಅವರು ಬಹುಶ ಮಾಧ್ಯಮದಲ್ಲಿ ಉಳಿಯುವುದಿಲ್ಲ. ಒಳ್ಳೆಯ ಆದರ್ಶಗಳಿದ್ದರೆ, ನೀವು ಅನ್‌ಫಿಟ್ ಟು ಬಿಕಮ್ ಜರ್ನಲಿಸ್ಟ್.

ಒಳ್ಳೆಯ ಲಾಯರ್ ಅಂಥ ಯಾರಿದ್ದಾರೆ. ಇದ್ದಾರೆ ಒಬ್ಬರು ಮುಕ್ತ, ಮಹಾಪರ್ವದ ಟಿ..ಎನ್. ಸೀತಾರಾಂ ಅಷ್ಟೆ. ಸಂತೋಷ ಹೆಗ್ಡೆಯವರು ಅಷ್ಟು ಕಷ್ಟಪಟ್ಟು ತಯಾರಿಸಿದ ಲೋಕಾಯುಕ್ತ ವರದಿಯನ್ನು ಲೀಕ್ ಮಾಡಿದಾಗ, Santosh_Hegdeಅವರು ಗಳಗಳನೆ ಅತ್ತರಲ್ಲ ಯಾರಿಂದ ಏನು ಮಾಡಲಿಕ್ಕಾಯ್ತು. ಈ ಪ್ರಜಾಪ್ರಭುತ್ವದಲ್ಲಿ ನಮಗೆ ಏನು ಹಕ್ಕಿದೆ? ಒಂದು ಪಿಐಎಲ್‌ಗೆ ಲಕ್ಷಗಟ್ಟಲೆ ಸುರಿಯಬೇಕಾಗಿರುವಾಗ ಯಾರು ತಾನೇ ಮುಂದೆ ಬಂದು ಜನಪರ ಹೋರಾಟಗಳನ್ನು ಮಾಡುತ್ತಾರೆ. ನಮ್ಮಲ್ಲಿ ಪಠ್ಯಪುಸ್ತಕದಲ್ಲಿ ಜಾತಿ ಹೆಸರಲ್ಲಿ‍, ಇನ್ನು ಯಾವುದೋ ಹೆಸರಲ್ಲಿ ಎಷ್ಟೆಷ್ಟೂ ಗಲಾಟೆಗಳಾಗುತ್ತದೆ. ಆದರೆ ಯಾರದರೂ ಕಾನೂನನ್ನು ಗಂಭೀರವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರಾ?

ಕೆಲವೊಮ್ಮೆ ಹೋರಾಟಗಾರರು ತಮ್ಮ ಅಹಿಂದ, ದಲಿತ, ಅಲ್ಪಸಂಖ್ಯಾತ ಧೋರಣೆಯಿಂದ ಹೊರಬೇಕಾಗುತ್ತದೆ. ಇಲ್ಲವಾದಲ್ಲಿ ಅದು ಬಹುಸಂಖ್ಯಾತರ ಬೆಂಬಲ ಕಳೆದುಕೊಂಡು ಸಮಾಜವನ್ನು ಇನ್ನೂ ಛಿದ್ರ ಛಿದ್ರ ಮಾಡುತ್ತದೆ ಅಷ್ಟೆ.

ಏನು ಬರೆದರೂ ಏನು ಸಾಧ್ಯವಿಲ್ಲ. ಎಲ್ಲ ಅಕ್ಷರ ಕಸ ಎನಿಸಿಬಿಡುತ್ತದೆ. ಅದಕ್ಕೆ ಸಾಕ್ಷಿ. sowjanya-heggadeಸೌಜನ್ಯಾ ಪರ ಹೋರಾಟ. ಎಲ್ಲರು ಎಷ್ಟು ದನಿಯೆತ್ತಿದರೂ ಏನೂ ಸಾಧ್ಯವಾಗಲಿಲ್ಲ. ಈ ರೀತಿಯ ಘಟನೆ ಮನಸ್ಸನ್ನು ಮತ್ತೆ ಮತ್ತೆ ಕುಗ್ಗಿಸುತ್ತೆ. ಆ ಅಮಾಯಕ ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲಿಕ್ಕೆ ಆಗಲೇ ಇಲ್ಲ. ಹಿಂದೂ ಸಮಾಜದ ಏಳಿಗೆಗೆ ಬಲಿದಾನ ಅನಿವಾರ್ಯ ಎಂದು ಹಿಂದೂ ಪರ ಸಂಘಟನೆಗಳು ಕೈಕಟ್ಟಿ ಕುಳಿತವು. ಆದರೆ ಅವಳು ನಮ್ಮ ಮನೆ ಮಗಳಾಗಿದ್ದರೆ…

ಇದನ್ನೆಲ್ಲಾ ಯಾರ ಹತ್ತಿರ ಹೇಳಬೇಕು, ಈ ಅಕ್ಷರ ಕಸ ಯಾಕೆ ಬೇಕು… ಐಯಾಮ್ ಫ್ರಸ್ಟ್ರೇಟೆಡ್.