ರವಿ ಕೃಷ್ಣಾರೆಡ್ಡಿಯವರ ಲೇಖನ ಓದುವಾಗ ನನಗನ್ನಿಸಿದ್ದು…

– ಶರ್ಮಿಷ್ಠ 

ರವಿ ಕೃಷ್ಣಾರೆಡ್ಡಿಯವರ ಲೇಖನ “ವರ್ತಮಾನ.ಕಾಮ್ ನ 2013 ಭೂತಕಾಲ” ಓದುವಾಗ ನನಗನ್ನಿಸಿದ್ದು…

ದೆಹಲಿಯಲ್ಲಿ ನಡೆದಂತಹ ಪವಾಡಸದೃಶ ಘಟನೆ ನನ್ನ ಪ್ರಕಾರ ನಮಗೆ ಅನಿವಾರ್ಯವಾಗಿ, ಅಗತ್ಯವಾಗಿಯೂ ಬೇಕು. ಆದರೆ ನಮ್ಮಲ್ಲಿ ಮನಸ್ಸುಗಳು ಮುಕ್ತವಾಗಿ ಆಲೋಚಿಸುವುದನ್ನೇ ಕಳೆದುಕೊಂಡಿರುವಾಗ ಇದು ಸಾಧ್ಯನಾ? arvind-kejriwal-delhi-electionsಕರ್ನಾಟಕದಲ್ಲಿ ನೀವು ಒಂದೋ ಎಡ ಅಥವಾ ಬಲ ಪಂಥೀಯರಾಗಿರಲೇ ಬೇಕು. ನೀವು ಗುರುತಿಸಿಕೊಳ್ಳದಿದ್ದರೂ ನಿಮ್ಮ ಸುತ್ತಲಿನ ಜನ ಇದೆರಡರಲ್ಲಿ ಒಂದಕ್ಕೆ ನಿಮ್ಮನ್ನು ಸೇರಿಸಿ, ನಿಮ್ಮನ್ನು ಹಿಗ್ಗಾಮುಗ್ಗಾ ಎಳೆದಾಡುತ್ತಾರೆ. ನಿಮ್ಮ ಒಲವು ಎಡ ವಿಚಾರಗಳ ಕಡೆಗಿದ್ದರೆ ಸಾಕು, ಅನಾವಶ್ಯಕ ನಿಮ್ಮ ಮೇಲೇ ದ್ವೇಷ ಸಾಧಿಸುತ್ತಾರೆ. ಕಾರಣವೇ ಇಲ್ಲದೆ ನಿಮ್ಮ ಬಳಿ ಮಾತು ಬಿಡುತ್ತಾರೆ, ನಿಮ್ಮ ನೆರಳು ಕಂಡರೂ ಸಾಕು ರೇಗುತ್ತಾರೆ. ಒಟ್ಟಿನಲ್ಲಿ ನಿಮ್ಮ ವಿಚಾರಗಳು ಸರಿಯಿಲ್ಲ.

ಬಲಪಂಥೀಯರೆಂದರೆ ವಿಶ್ವಾಸವಿಲ್ಲದ ಯುವಜನತೆ ಎಡಪಂಥೀಯರೆಡೆಗೆ ಹೋಗೋಣ ಎಂದರೆ ಅಲ್ಲಿರುವುದೆಲ್ಲ ಬರಿಯ ಮುಖವಾಡ, ಹಿಪೋಕ್ರಸಿ. ಹೇಳುವುದು ಒಂದು ಮಾಡುವುದು ಇನ್ನೊಂದು. ಯಾರನ್ನು ಆದರ್ಶ ಅಂಥ ಹೇಳೋಣ? ಆದರ್ಶ ಎನ್ನುವುದು ಅದು ಆದರ್ಶ ಅನ್ನೋದಕ್ಕೆ ನಮಗೆ ಆದರ್ಶಯುತವಾಗಿರಬೇಕೇ ಹೊರತು, ಬೇರೆಯವರ ಅನುಕರಣೆ ಅಲ್ಲ. ಅವರು ಆದರ್ಶವಾಗಿದ್ದರೆ ಎಷ್ಟು, ಬಿಟ್ಟರೆ ಎಷ್ಟು. ಆದರೂ ಕೆಲವೊಮ್ಮೆ ನಾವು ನಮ್ಮ ಹೋರಾಟದಲ್ಲಿ ಸೋಲು ಅನುಭವಿಸುವಾಗ ಜೀವಚೈತನ್ಯ ನೀಡುವುದಕ್ಕಾದರೂ ಆದರ್ಶಪ್ರಾಯ ವ್ಯಕ್ತಿಯೊಬ್ಬ ಸಂತೈಸಲು ಬೇಕಾಗುತ್ತದೆ. ನಮ್ಮ ನಡೆಗೆ ಜೀವ ತುಂಬಲು…

ಜಿಎಸೆಸ್ ತೀರಿಹೋದಾಗ ನನಗನ್ನಿಸಿತ್ತು, ಆದರ್ಶ ಗುರುಪರಂಪರೆಯ ಕಾಲ ಇನ್ನಿಲ್ಲ… Tumkur-VC-Sharma-with-Governorಹಿಂದಿನ ಗುರುಗಳು ಆದರ್ಶಯುತವಾದ ವಿದ್ಯಾರ್ಥಿವೃಂದವನ್ನು ಬೆಳೆಸಿದಂತೆ ಈಗ ಬೆಳೆಸುವವರು ಯಾರಿದ್ದಾರೆ? ಆ ಗುರುವಿನ ಪಟ್ಟಕ್ಕೆ ನಾವು ಬೆಲೆತೆತ್ತು ಹೋಗುತ್ತಿರುವಾಗ, ವಿಸೀ ಪದವಿ ನಡೆಯುತ್ತಿರುವುದು ಆಯ್ಕೆಯಲ್ಲ, ಅನಧಿಕೃತ “ಬಿಡ್” ಅನ್ನುವುದು ಎಲ್ಲರಿಗೂ ಗೊತ್ತಿರುವಾಗ ಆದರ್ಶಯುತ ವಿದ್ಯಾರ್ಥಿವೃಂದ ಬೆಳೆಸೋದು ಸಾಧ್ಯನಾ? ಕಾಲೇಜುಗಳಲ್ಲೇ ವಿದ್ಯಾರ್ಥಿ ಚುನಾವಣೆ ಮೂಲಕ ರಾಜಕೀಯ ಕಾಲಿಟ್ಟು ವಿದ್ಯಾರ್ಥಿ ಸಮುದಾಯವನ್ನೇ ಒಡೆಯುತ್ತಿದೆ. ಸಮಾರಂಭದಲ್ಲಿ ನಮ್ಮ ಅಧ್ಯಾಪಕರ ಆಯ್ಕೆ ಕಾಲೇಜಿಗೆ ಫಂಡ್ ಕೊಡಬಲ್ಲ ಲಂಚಕೋರ ರಾಜಕಾರಣಿಯೇ ಹೊರತು ಆದರ್ಶ ವ್ಯಕ್ತಿ ಅಲ್ಲ.

ಒಳ್ಳೆಯ ಶಿಷ್ಯ ಪರಂಪರೆಯನ್ನು ಕಟ್ಟಬಲ್ಲ ತಾಕತ್ತಿರುವ ಅಧ್ಯಾಪಕರನ್ನು ನಾವು ನಕ್ಸಲ್ ಬೆಂಬಲಿಗ ಎನ್ನುವ ಹಣೆಪಟ್ಟಿ ಹಚ್ಚಿ ಮೂಲೆಗೆ ತಳ್ಳಿಯಾಗಿದೆ. ಸೆಕ್ಯುಲರ್‌ಗಳು ಎನಿಸಿಕೊಂಡಿರುವವರು ತಪ್ಪು ಯಾರು ಮಾಡಿದರೂ ತಪ್ಪು ಎನ್ನೋ ಧೋರಣೆ ಬಿಟ್ಟು ಯಾವುದೋ ವಾದವನ್ನು ಮುಂದಿಟ್ಟುಕೊಂಡು ಬಲಪಂಥೀಯರನ್ನು ಹೆಚ್ಚು ಹೆಚ್ಚು ತಯಾರು ಮಾಡುತ್ತಿದ್ದಾರೆ. ಅದಕ್ಕೆ ಕರ್ನಾಟಕದ ಯುವಜನತೆ ಮೋದಿಯ ಚುಂಗು ಹಿಡಿದುಕೊಂಡಿದೆ. ಇಲ್ಲಿ ಆಮ್ ಆದ್ಮಿ ಮೋಡಿ ಆಗುತ್ತಿಲ್ಲ.

ಒಮ್ಮೆ ಟಿ.ಪಿ. ಅಶೋಕ ಸಮಾರಂಭವೊಂದರಲ್ಲಿ ಹೇಳಿದ್ದರು `ಲೆಟ್ ಅಸ್ ಅಗ್ರೀ ಟು ಡಿಸಗ್ರೀ’. ಅದು ನಮ್ಮಲ್ಲಿ ಸಾಧ್ಯವೇ ಇಲ್ಲ.

ಯಾದವ್ ತರದ ಒಳ್ಳೆಯ ಆದರ್ಶ ಪ್ರೋಪೆಸರ್ ಇಲ್ಲಾ ಅಂಥಲ್ಲ ಅಂಥವರನ್ನು ಸರ್ಕಾರದ ಅಧೀನದಲ್ಲಿರುವ ವಿವಿಗಳು ಕೈಕಟ್ಟಿ ಕೂರಿಸಿವೆ. ಅಥವಾ ಸಾಧ್ಯತೆ ಇರುವವರು ಮುಂದೆ ಬರುತ್ತಿಲ್ಲ.

ಒಳ್ಳೆಯ ಪತ್ರಕರ್ತರು ಅಂಥ ಇದ್ದರೆ ಅವರು ಬಹುಶ ಮಾಧ್ಯಮದಲ್ಲಿ ಉಳಿಯುವುದಿಲ್ಲ. ಒಳ್ಳೆಯ ಆದರ್ಶಗಳಿದ್ದರೆ, ನೀವು ಅನ್‌ಫಿಟ್ ಟು ಬಿಕಮ್ ಜರ್ನಲಿಸ್ಟ್.

ಒಳ್ಳೆಯ ಲಾಯರ್ ಅಂಥ ಯಾರಿದ್ದಾರೆ. ಇದ್ದಾರೆ ಒಬ್ಬರು ಮುಕ್ತ, ಮಹಾಪರ್ವದ ಟಿ..ಎನ್. ಸೀತಾರಾಂ ಅಷ್ಟೆ. ಸಂತೋಷ ಹೆಗ್ಡೆಯವರು ಅಷ್ಟು ಕಷ್ಟಪಟ್ಟು ತಯಾರಿಸಿದ ಲೋಕಾಯುಕ್ತ ವರದಿಯನ್ನು ಲೀಕ್ ಮಾಡಿದಾಗ, Santosh_Hegdeಅವರು ಗಳಗಳನೆ ಅತ್ತರಲ್ಲ ಯಾರಿಂದ ಏನು ಮಾಡಲಿಕ್ಕಾಯ್ತು. ಈ ಪ್ರಜಾಪ್ರಭುತ್ವದಲ್ಲಿ ನಮಗೆ ಏನು ಹಕ್ಕಿದೆ? ಒಂದು ಪಿಐಎಲ್‌ಗೆ ಲಕ್ಷಗಟ್ಟಲೆ ಸುರಿಯಬೇಕಾಗಿರುವಾಗ ಯಾರು ತಾನೇ ಮುಂದೆ ಬಂದು ಜನಪರ ಹೋರಾಟಗಳನ್ನು ಮಾಡುತ್ತಾರೆ. ನಮ್ಮಲ್ಲಿ ಪಠ್ಯಪುಸ್ತಕದಲ್ಲಿ ಜಾತಿ ಹೆಸರಲ್ಲಿ‍, ಇನ್ನು ಯಾವುದೋ ಹೆಸರಲ್ಲಿ ಎಷ್ಟೆಷ್ಟೂ ಗಲಾಟೆಗಳಾಗುತ್ತದೆ. ಆದರೆ ಯಾರದರೂ ಕಾನೂನನ್ನು ಗಂಭೀರವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರಾ?

ಕೆಲವೊಮ್ಮೆ ಹೋರಾಟಗಾರರು ತಮ್ಮ ಅಹಿಂದ, ದಲಿತ, ಅಲ್ಪಸಂಖ್ಯಾತ ಧೋರಣೆಯಿಂದ ಹೊರಬೇಕಾಗುತ್ತದೆ. ಇಲ್ಲವಾದಲ್ಲಿ ಅದು ಬಹುಸಂಖ್ಯಾತರ ಬೆಂಬಲ ಕಳೆದುಕೊಂಡು ಸಮಾಜವನ್ನು ಇನ್ನೂ ಛಿದ್ರ ಛಿದ್ರ ಮಾಡುತ್ತದೆ ಅಷ್ಟೆ.

ಏನು ಬರೆದರೂ ಏನು ಸಾಧ್ಯವಿಲ್ಲ. ಎಲ್ಲ ಅಕ್ಷರ ಕಸ ಎನಿಸಿಬಿಡುತ್ತದೆ. ಅದಕ್ಕೆ ಸಾಕ್ಷಿ. sowjanya-heggadeಸೌಜನ್ಯಾ ಪರ ಹೋರಾಟ. ಎಲ್ಲರು ಎಷ್ಟು ದನಿಯೆತ್ತಿದರೂ ಏನೂ ಸಾಧ್ಯವಾಗಲಿಲ್ಲ. ಈ ರೀತಿಯ ಘಟನೆ ಮನಸ್ಸನ್ನು ಮತ್ತೆ ಮತ್ತೆ ಕುಗ್ಗಿಸುತ್ತೆ. ಆ ಅಮಾಯಕ ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲಿಕ್ಕೆ ಆಗಲೇ ಇಲ್ಲ. ಹಿಂದೂ ಸಮಾಜದ ಏಳಿಗೆಗೆ ಬಲಿದಾನ ಅನಿವಾರ್ಯ ಎಂದು ಹಿಂದೂ ಪರ ಸಂಘಟನೆಗಳು ಕೈಕಟ್ಟಿ ಕುಳಿತವು. ಆದರೆ ಅವಳು ನಮ್ಮ ಮನೆ ಮಗಳಾಗಿದ್ದರೆ…

ಇದನ್ನೆಲ್ಲಾ ಯಾರ ಹತ್ತಿರ ಹೇಳಬೇಕು, ಈ ಅಕ್ಷರ ಕಸ ಯಾಕೆ ಬೇಕು… ಐಯಾಮ್ ಫ್ರಸ್ಟ್ರೇಟೆಡ್.

4 thoughts on “ರವಿ ಕೃಷ್ಣಾರೆಡ್ಡಿಯವರ ಲೇಖನ ಓದುವಾಗ ನನಗನ್ನಿಸಿದ್ದು…

  1. ಜೆ.ವಿ.ಕಾರ್ಲೊ, ಹಾಸನ

    ಪ್ರೀತಿಯ ಶರ್ಮಿಷ್ಠರವರೇ ಇಷ್ಟೊಂದು ಸಿನಿಕರಾಗುವ ಅಗತ್ಯವಿಲ್ಲ. ನಿಮ್ಮ ಲೇಖನದ ಕೆಳಗೇ ಉತ್ಸಾಹಿ ಯುವಕ ಎಸ್.ಆರ್.ಹಿರೇಮಠರವರ ಬಗ್ಗೆ ಲೇಖನವಿದೆ. ಪುರುಸೊತ್ತಾಗಿ ಓದಿ.

    Reply
  2. Ananda Prasad

    ಭಾರತಕ್ಕೆ ಅತ್ತ ಎಡವೂ ಅಲ್ಲದ ಇತ್ತ ಬಲವೂ ಅಲ್ಲದ ಮಧ್ಯಪಂಥದ ಉದಾರವಾದಿ ಧೋರಣೆಯ ರಾಜಕೀಯ ಸೂಕ್ತ. ಅಂಥ ಧೋರಣೆಯ ಆಮ್ ಆದ್ಮಿ ಪಕ್ಷ ಈ ನಿಟ್ಟಿನಲ್ಲಿ ಭಾರತದಲ್ಲಿ ಯಶಸ್ವಿಯಾಗುವ ಸಂಭವ ಇದೆ. ಭಾರತದಲ್ಲಿ ಎಡಪಂಥದ ರಾಜಕೀಯ ಯಶಸ್ವಿಯಾಗಿ ಬೆಳೆಯುವುದಿಲ್ಲ ಎಂಬದು ಸ್ವಾತಂತ್ರ್ಯಾನಂತರದ ಐದಾರು ದಶಕಗಳಲ್ಲಿ ಕಂಡುಬಂದಿದೆ. ಎಡಪಕ್ಷಗಳು ಪಶ್ಚಿಮ ಬಂಗಾಲ, ಕೇರಳ, ತ್ರಿಪುರ ಹೊರತುಪಡಿಸಿ ಉಳಿದ ಕಡೆ ಅಧಿಕಾರ ಪಡೆಯುವಷ್ಟು ಬೆಳವಣಿಗೆ ಹೊಂದಿಲ್ಲ, ಇನ್ನು ಮುಂದೆಯೂ ಇದೇ ಸ್ಥಿತಿ ಮುಂದುವರಿಯುವ ಸಂಭವ ಕಾಣುತ್ತದೆ. ಅಧಿಕಾರಕ್ಕೆ ಬಂದಾಗ ಎಡಪಕ್ಷಗಳಲ್ಲಿಯೂ ಗೂಂಡಾಗಿರಿಯ ವರ್ತನೆಗಳು ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಂಡುಬಂದಿವೆ. ಎಡಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ಉದ್ಯಮ, ಕೈಗಾರಿಕೆ ಕ್ಷೇತ್ರ ಸಮರ್ಪಕವಾಗಿ ಬೆಳವಣಿಗೆ ಆಗದೆ ಹಿನ್ನಡೆ ಕಂಡಿವೆ. ಬಂಡವಾಳಗಾರರನ್ನು ವಿರೋಧಿಸಿದರೆ, ಹೀಯಾಳಿಸಿದರೆ ಉದ್ಯಮ, ಕೈಗಾರಿಕೆ, ವಾಣಿಜ್ಯ ಕ್ಷೇತ್ರ ಬೆಳವಣಿಗೆ ಕಾಣಲಾರದು. ಎಡಪಕ್ಷಗಳ ಅನುಯಾಯಿಗಳು ಬಂಡವಾಳಗಾರರನ್ನು ಏಕವಚನದಲ್ಲಿ ಹೆಸರು ಹೇಳಿ ಕೀಳಾಗಿ ಕಾಣುವುದು ಕಂಡುಬರುತ್ತದೆ. ಇದು ಕೂಡ ಉತ್ತಮ ನಡೆ ಅಲ್ಲ. ಬಂಡವಾಳಗಾರರನ್ನು ನಾವು ದ್ವೇಷಿಸಬೇಕಾದ ಅಗತ್ಯ ಇಲ್ಲ. ಒಂದು ರಾಷ್ಟ್ರದ ಬೆಳವಣಿಗೆಗೆ ಬಂಡವಾಳಗಾರರು, ಉದ್ಯಮಿಗಳು ಅತೀ ಅಗತ್ಯ. ಬಂಡವಾಳಗಾರರನ್ನು ಸರ್ಕಾರ ನಿಯಂತ್ರಿಸುವುದು ಅಗತ್ಯ ಮಾತ್ರವಲ್ಲದೆ ಸರ್ಕಾರ ಬಂಡವಾಳಗಾರ ಕೈಗೊಂಬೆ ಆಗಬಾರದು. ಸಮಷ್ಟಿಯ ಹಿತದೃಷ್ಟಿಯಿಂದ ಬಂಡವಾಳಗಾರರನ್ನು ರಾಷ್ಟ್ರದ ಅಭ್ಯುದಯಕ್ಕಾಗಿ ಸರ್ಕಾರಗಳು ತೊಡಗಿಸಿಕೊಳ್ಳಬೇಕಾಗಿದೆ ಹಾಗೂ ಅವರಲ್ಲಿ ರಾಷ್ಟ್ರೀಯತೆಯ ಜಾಗೃತಿಯ ಭಾವನೆಯನ್ನು ಮೂಡಿಸಬೇಕಾಗಿದೆ. ಗಾಂಧೀಜಿಯವರು ಬಿರ್ಲಾರಂಥ ಬಂಡವಾಳಗಾರರ ಸಹಾಯವನ್ನು ರಾಷ್ಟ್ರದ ಕೆಲಸಕ್ಕಾಗಿ ಪಡೆಯುತ್ತಿದ್ದರು. ರಾಷ್ಟ್ರ ನಿರ್ಮಾಣದಲ್ಲಿ ಬಂಡವಾಳಗಾರರ ಸಹಾಯವನ್ನು ಪಡೆಯುವುದರಲ್ಲಿ ತಪ್ಪಿಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಪ್ರಾಮಾಣಿಕ ನಿಲುವಿನ ಉದ್ಯಮಿಗಳು, ಬಂಡವಾಳಗಾರರು ಆಮ್ ಆದ್ಮಿ ಪಕ್ಷವನ್ನು ದೇಶಾದ್ಯಂತ ಕಟ್ಟಲು ಸಹಾಯ ಮಾಡಬೇಕು. ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ಸಹಕರಿಸಲು ಸಾಮಾಜಿಕ ಸಂವಹನ ಕ್ಷೇತ್ರದಲ್ಲಿ ಪಳಗಿದ ಎಂಬಿಎ ಪದವೀಧರರು, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳ ಪ್ರತಿಭಾನ್ವಿತ ಪದವೀಧರರ ಅಗತ್ಯ ಇದೆ. ಇಂದು ಈ ಕ್ಷೇತ್ರದಲ್ಲಿ ಇರುವವರು ಹೆಚ್ಚು ಹೆಚ್ಚು ಹಣ ಮಾಡುವ ಕೆಲಸದಲ್ಲಿ ರಾಷ್ಟ್ರದ ಕಾರ್ಯವನ್ನು ಮರೆತಿದ್ದಾರೆ. ಹೀಗಾಗಿ ದೇಶದ ರಾಜಕೀಯವು ಅನಾರೋಗ್ಯದಿಂದ ಬಳಲುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಇರುವ ಪ್ರತಿಭಾವಂತರು ಆಮ್ ಆದ್ಮಿ ಪಕ್ಷದ ಜೊತೆ ಕೈಜೋಡಿಸಿದರೆ ,ಮತ್ತು ರಾಷ್ಟ್ರಕ್ಕಾಗಿ ತಮ್ಮ ಸಮಯದಲ್ಲಿ ಸ್ವಲ್ಪ ಅಂಶವನ್ನು ಮೀಸಲಿಟ್ಟರೆ ಇದನ್ನು ರಾಷ್ಟ್ರೀಯ ಪರ್ಯಾಯವಾಗಿ ಬೆಳೆಸುವುದು ಸಾಧ್ಯವಿದೆ ಮತ್ತು ಇದು ಇಂದಿನ ರಾಷ್ಟ್ರದ ಅಗತ್ಯ ಕೂಡಾ. ವ್ಯವಸ್ಥೆಯಲ್ಲಿ ಬದಲಾವಣೆ ಆಗುವುದಿಲ್ಲ, ಎಷ್ಟು ಮಾಡಿದರೂ ಅಷ್ಟೇ ಎಂಬ ನಿರಾಶೆ ಬೇಕಾಗಿಲ್ಲ. ಒಂದು ಮರವು ನೆಟ್ಟ ಕೂಡಲೇ ಫಲ ಕೊಡುವುದಿಲ್ಲ. ಅದು ಬೆಳೆದು ಫಲ ಕೊಡಲು ಕೆಲವು ವರ್ಷ ಬೇಕಾಗುತ್ತದೆ. ಇದೇ ಅಂಶ ವ್ಯವಸ್ಥೆ ಬದಲಾವಣೆಯ ಹೋರಾಟದಲ್ಲಿಯೂ ಅನ್ವಯವಾಗುತ್ತದೆ.

    Reply
  3. ಮಹೇಶ್

    ಆಮ್ ಆದ್ಮಿ ಎತ್ತ ಕಡೆಯಿಂದ ನೋಡಿದರೂ ನೆಹರು ಪ್ರಣೀತ ಎಡದತ್ತಲೇ ಇದೆ.

    Reply
  4. Ananda Prasad

    ಆಮ್ ಆದ್ಮಿ ಎಡದತ್ತ ಇದೆ ಎಂಬುದು ಬಲಪಂಥೀಯರ ಆರೋಪವಷ್ಟೇ. ಎಡಪಂಥೀಯರು ಅದು ಬಲದತ್ತ ಇದೆ ಎಂದು ಆರೋಪಿಸುತ್ತಾರೆ. ನನಗನಿಸುವಂತೆ ಅದು ಎಡ ಹಾಗೂ ಬಲಗಳ ಮಧ್ಯೆ ಇದೆ. ಎಡ ಹಾಗೂ ಬಲ ಪಂಥಗಳ ಒಳ್ಳೆಯ ಅಂಶಗಳನ್ನು ಅದು ತೆಗೆದುಕೊಂಡಿದೆ. ಇದರಲ್ಲಿ ತಪ್ಪಿಲ್ಲ. ಅದನ್ನು ಒಂದು ಪಂಥಕ್ಕೆ ಸೀಮಿತಗೊಳಿಸಿ ನೋಡುವುದು ಸೂಕ್ತವಲ್ಲ.

    Reply

Leave a Reply

Your email address will not be published. Required fields are marked *