ಲೋಕ್‌ಸತ್ತಾದಿಂದ ಆಮ್ ಆದ್ಮಿಯೆಡೆಗೆ…

ಸ್ನೇಹಿತರೇ,

ನಿಮಗೆಲ್ಲಾ ನನ್ನ ಸಕ್ರಿಯ ರಾಜಕೀಯ ಹೋರಾಟದ ಬಗ್ಗೆ ಗೊತ್ತೇ ಇದೆ. ಒಂದೂವರೆ ವರ್ಷದ ಹಿಂದೆ ನಾನು ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸುವ ಲೋಕಸತ್ತಾ ಪಕ್ಷದ ಜೊತೆ ಗುರುತಿಸಿಕೊಂಡು ಕೆಲಸ ಮಾಡುತ್ತ ಬಂದಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು, ಇತ್ಯಾದಿಗಳನ್ನು ನೀವು ಗಮನಿಸಿರುತ್ತೀರಿ.

ಕಳೆದ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ನಮ್ಮ ರಾಜ್ಯದ ಜನ ಭ್ರಷ್ಟ ಬಿಜೆಪಿಯನ್ನು ಬದಿಗೊತ್ತಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಕೊಟ್ಟರು. ಆದರೆ ಆಡಳಿತದ ವಿಷಯದಲ್ಲಾಗಲಿ ಮತ್ತು ಭ್ರಷ್ಟಾಚಾರದ ವಿಷಯದಲ್ಲಾಗಲಿ ಈಗಿನ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಪಕ್ಷಕ್ಕಿಂತ ಉತ್ತಮ ಎನ್ನುವ ಭಾವನೆ ಜನಕ್ಕೆ ಇಲ್ಲಿಯ ತನಕ ಬರದ ಹಾಗೆಯೇ ಕಾಂಗ್ರೆಸ್ ನಡೆದುಕೊಂಡಿದೆ. ಹೇಳಬೇಕೆಂದರೆ, ನಮ್ಮ ನಾಡಿನ ಜನರೂ ಕಾಂಗ್ರೆಸ್ ಮೇಲೆ ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡೇನೂ ಅವರನ್ನು ಆರಿಸಲಿಲ್ಲ. ಭ್ರಷ್ಟ ಬಿಜೆಪಿಗೆ ಮತ್ತದರ ಪರಮಾತಿಪರಮ ಭ್ರಷ್ಟರಿಗೆ ಪಾಠ ಕಲಿಸಬೇಕೆಂಬ ಉದ್ದೇಶದಿಂದಷ್ಟೇ ಕಾಂಗ್ರೆಸ್ ಅನ್ನು ಬೆಂಬಲಿಸಿದರು. ಬೇರೆ ಇನ್ನೊಂದು ಪಕ್ಷವನ್ನು ಬೆಂಬಲಿಸುವುದಕ್ಕೆ ಇಲ್ಲಿ ಗಟ್ಟಿಯಾದ ಪರ್ಯಾಯವೇ ಇರಲಿಲ್ಲ. ಹಾಗೆ ನೋಡಿದರೆ, ಉತ್ತಮವಾದ ಪರ್ಯಾಯವೊಂದನ್ನು ಕಟ್ಟುವ ಜವಾಬ್ದಾರಿ ಮತ್ತು ಚಾರಿತ್ರಿಕ ಅವಕಾಶವೊಂದು ನಾಡಿನ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಾರರಿಗೆ ಇತ್ತು. ಆದರೆ, manishsisodia-yogendrayadav-arvindkejriwal-prashantbhushanಈ ಗುಂಪಿನ ಜನರು ತಮ್ಮ ಸಿನಿಕತನ, ಜವಾಬ್ದಾರಿ ನಿಭಾಯಿಸಲಾಗದ ಹೊಣೆಗೇಡಿತನ, ಮತ್ತು ಕೆಲವು ಸ್ವಕೇಂದ್ರಿತ ಸ್ವಾರ್ಥಮನೋಭಾವಗಳಿಂದಾಗಿ ಆ ಅವಕಾಶವನ್ನು ಹಾಳುಮಾಡಿಕೊಂಡಿದ್ದಷ್ಟೇ ಅಲ್ಲದೆ ಕ್ರಮೇಣವಾಗಿ ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಅಪ್ರಸ್ತುತರಾಗಿಬಿಟ್ಟರು. ಇದು ಅವರ ಸೋಲು ಮತ್ತು ನಿಷ್ಕ್ರಿಯೆಗಿಂತ ಹೆಚ್ಚಾಗಿ ರಾಜ್ಯದ ಸೋಲಾಗಿ ಪರಿಣಮಿಸಿರುವುದನ್ನು ರಾಜ್ಯದಲ್ಲಿ ಮುಂದುವರೆದ ದುರಾಡಳಿತ, ನಿರಾಡಳಿತ, ಕುಸಿಯುತ್ತಲೇ ಇರುವ ಸಾಮಾಜಿಕ ಮೌಲ್ಯಗಳು, ಹಾಗೂ ನಮ್ಮ ಸಂವಿಧಾನಬದ್ಧ ಪ್ರಜಾಸತ್ತಾತ್ಮಕ ಸಂಸ್ಥೆಗಳ ಅವನತಿಯಲ್ಲಿ ಕಾಣಬಹುದು.

ಆದರೆ, ಇದೇ ಸಮಯದಲ್ಲಿ ದೇಶದಲ್ಲಿ ರಕ್ತರಹಿತ ಕ್ರಾಂತಿಯೊಂದು ಜಾರಿಯಲ್ಲಿದೆ. ಮೂರು ವರ್ಷಗಳ ಹಿಂದೆ ದೇಶದಲ್ಲಿಯ ಮಿತಿಮೀರಿದ ಭ್ರಷ್ಟಾಚಾರದ ವಿರುದ್ಧ ರೂಪುಗೊಂಡ ಹೋರಾಟ ಕಳೆದ ವರ್ಷದ ಅಂತ್ಯದಲ್ಲಿ ದೆಹಲಿಯ ಜನ ಕೊಟ್ಟ ಪ್ರಜಾಸತ್ತಾತ್ಮಕ ತೀರ್ಮಾನದ ಮೂಲಕ ಪ್ರಮುಖ ಘಟ್ಟವನ್ನು ತಲುಪಿದೆ. ಇದು ಈ ರಾಷ್ಟ್ರದ ಜನ ಒಂದು ನಂಬಲರ್ಹ ಪರ್ಯಾಯಕ್ಕಾಗಿ ಕಾಯುತ್ತಿದ್ದದ್ದನ್ನು ಮತ್ತು ಅಂತಹುದೊಂದನ್ನು ಬೆಂಬಲಿಸಲು ಸಿದ್ದವಿರುವುದನ್ನು ತೋರಿಸುತ್ತದೆ. ರಾಷ್ಟ್ರವ್ಯಾಪಿಯಾಗಿ ಈ ಚಳವಳಿ ಕೇವಲ aamadmipartyಆಮ್ ಆದ್ಮಿ ಪಾರ್ಟಿಯ ರೂಪದಲ್ಲಿ ಮಾತ್ರವಲ್ಲ, ಬೇರೆ ಪಕ್ಷಗಳಲ್ಲಿಯೂ ಗಮನಾರ್ಹ ಮತ್ತು ಗುಣಾತ್ಮಕ ಬದಲಾವಣೆಗಳ ರೂಪದಲ್ಲಿ ಕಾಣಿಸುತ್ತಿದೆ. ಅದನ್ನು ಗಮನಿಸದ ಪಕ್ಷಗಳು ಮತ್ತು ತಮ್ಮ ಕೋಮುವಾದಿ ಮತ್ತು ವಂಶಪಾರಂಪರ್ಯ ನೆಲೆಗಳಿಂದ ಹೊರಬಂದು ಆಂತರಿಕ ಪ್ರಜಾಪ್ರಭುತ್ವದ ಮೂಲಕ ಸರ್ವಜನರ ಪರವಾಗಿ ರಾಜಕಾರಣ ಮಾಡಲಾಗದ ಪಕ್ಷಗಳು ಇತಿಹಾಸದ ಕಸದಬುಟ್ಟಿಗೆ ಸೇರಲಿವೆ. ಇಂತಹುದೇ ಒಂದು ಸಂದರ್ಭದಲ್ಲಿ ಕರ್ನಾಟಕವೂ ಬಂದು ನಿಂತಿದೆ.

ಇದೆಲ್ಲವನ್ನೂ ಮತ್ತು ರಾಜ್ಯದ ರಾಜಕೀಯ ವಾಸ್ತವಗಳನ್ನು ಗಮನಿಸಿ ನಾನು ಕಳೆದ ವಾರ ಲೋಕಸತ್ತಾ ಪಕ್ಷಕ್ಕೆ ರಾಜಿನಾಮೆ ನೀಡಿ, ಇಂದು ಆಮ್ ಆದ್ಮಿ ಪಕ್ಷದ ಸದಸ್ಯನಾಗಿ ಅಧಿಕೃತವಾಗಿ ಸೇರ್ಪಡೆ ಆಗಿದ್ದೇನೆ. ಇದು ಒಂದು ರೀತಿಯಲ್ಲಿ ತಾಂತ್ರಿಕವಾಗಿ ಪಕ್ಷಾಂತರವಾದರೂ ಲೋಕಸತ್ತಾ ಮತ್ತು ಆಮ್ ಆದ್ಮಿ ಪಾರ್ಟಿಗಳ ನಡುವೆ ಹೇಳಿಕೊಳ್ಳುವಂತಹ ಗಂಭೀರ ವ್ಯತ್ಯಾಸಗಳಿಲ್ಲ; ಅದರಲ್ಲೂ ಮೌಲ್ಯಾಧಾರಿತ ಮತ್ತು ಭ್ರಷ್ಟಾಚಾರಮುಕ್ತ ರಾಜಕಾರಣದ ವಿಚಾರದಲ್ಲಿ ಇಲ್ಲವೇ ಇಲ್ಲ. aap-pressmeet-01022014ಆದರೆ, ಕೆಲವು ಕಾರಣಾಂತರಗಳಿಂದಾಗಿ ಈ ಎರಡೂ ಪಕ್ಷಗಳು ಕೂಡಿ ಕೆಲಸ ಮಾಡುವ ಸ್ಥಿತಿ ಈಗ ಕರ್ನಾಟಕದಲ್ಲಿ ಇಲ್ಲ ಎನ್ನುವ ವಾತಾವರಣದಲ್ಲಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದಲಾವಣೆಗೆ ತುಡಿಯುತ್ತಿರುವ ಮತ್ತು ಆ ದಿಸೆಯಲ್ಲಿ ಗಟ್ಟಿಯಾದ ಚಳವಳಿಯೊಂದು ರೂಪುಗೊಳ್ಳುತ್ತಿರುವ ಸಂದರ್ಭದಲ್ಲಿ ಅಂತಹ ಚಳವಳಿಯೊಂದರಿಂದ ಹೊರಗಿರುವುದು ನೈತಿಕವಾಗಿ ಸರಿಯಾದ ನಿರ್ಧಾರ ಅಲ್ಲ ಮತ್ತು ಅದನ್ನು ಬೆಂಬಲಿಸುವುದು ಮತ್ತು ಪಾಲ್ಗೊಳ್ಳುವುದು ಚಳವಳಿಯೆಡೆಗಿನ ನನ್ನ ಬದ್ಧತೆಯೂ ಹೌದು ಎನ್ನುವ ಕಾರಣಕ್ಕಾಗಿ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದೇನೆ. ನಾನು ನಂಬುವ ಮತ್ತು ನಾನು ತಪ್ಪು ಮಾಡಬಹುದಾದ ಸಂದರ್ಭದಲ್ಲಿ ನನ್ನನ್ನು ಕೈಹಿಡಿದು ಸರಿಯಾದ ಮಾರ್ಗದಲ್ಲಿ ನಡೆಸಬಲ್ಲ ಆತ್ಮೀಯರು ಮತ್ತು ಸ್ನೇಹಿತರು ನನ್ನ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ ಮತ್ತು ಇದು ಪಕ್ಷಾಂತರವಲ್ಲ, ತಾರ್ಕಿಕವಾಗಿ ಮುಟ್ಟಬೇಕಿದ್ದ ಗುರಿಯೇ ಎಂದು ಹೇಳಿದ್ದಾರೆ. ಹಾಗಾಗಿ ಯಾವುದೇ ಗೊಂದಲಗಳಿಲ್ಲದೆ ರಾಜ್ಯ ಆಮ್ ಆದ್ಮಿ ಪಕ್ಷದಲ್ಲಿಯ ಕೆಲವು ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ.

ಆಮ್ ಆದ್ಮಿ ಪಾರ್ಟಿಯೆನ್ನುವುದು ಈಗ ವಾಸ್ತವ. ಸಾವಿರಾರು ಜನ ಆ ಪಕ್ಷಕ್ಕೆ ಯಾವುದೇ ವೈಯಕ್ತಿಕ ಲಾಭದ ನಿರೀಕ್ಷೆಗಳಿಲ್ಲದೆ ಸೇರುತ್ತಿದ್ದಾರೆ. ಅನೇಕ ಜನ ತಾವು ಮಾಡುತ್ತಿದ್ದ ನೌಕರಿಯಿಂದ ರಜೆ ಪಡೆದು ಮತ್ತು ಅದಾಗದ ಸಂದರ್ಭದಲ್ಲಿ ರಾಜೀನಾಮೆ ನೀಡಿ ಪೂರ್ಣಾವಧಿ ಕಾರ್ಯಕರ್ತರಾಗಿ ಒಂದು ಘನ ಉದ್ದೇಶಕ್ಕಾಗಿ ದುಡಿಯುತ್ತಿದ್ದಾರೆ. ನನ್ನ ಇಲ್ಲಿಯತನಕದ ಜೀವನದಲ್ಲಿ ವೈಯಕ್ತಿಕವಾಗಿ ಅನುಭವಕ್ಕೆ ಬಾರದಿದ್ದ ವಿದ್ಯಮಾನವೊಂದನ್ನು ಇಲ್ಲಿ ಕಾಣುತ್ತಿದ್ದೇನೆ. ಇದನ್ನು ಇತಿಹಾಸದ ಹಿನ್ನೆಲೆಯಲ್ಲಿ ಕೇಳಿದ್ದೆ, ಓದಿದ್ದೆ. ಆದರೆ ಸ್ವತಃ ನೋಡಿರಲಿಲ್ಲ. ಸಮಾಜದ ನಾನಾವರ್ಗದ ಜನರು ಒಂದು ಧ್ಯೇಯೋದ್ದೇಶಕ್ಕಾಗಿ ನಿಸ್ವಾರ್ಥವಾಗಿ ತೊಡಗಿಸಿಕೊಂಡು ತಮ್ಮೆಲ್ಲ ಹಮ್ಮುಬಿಮ್ಮು, ನೋವುನಲಿವುಗಳನ್ನು ಬದಿಗೊತ್ತಿ ತಮ್ಮೆಲ್ಲ ಎಚ್ಚರದ ಸ್ಥಿತಿಯನ್ನು ಈ ಚಳವಳಿಗೆ ದುಡಿಯುತ್ತಿರುವುದನ್ನು ಕಂಡು ನಾನು ಆಶ್ಚರ್ಯಪಟ್ಟಿದ್ದೇನೆ, ಹೆಮ್ಮೆಪಟ್ಟಿದ್ದೇನೆ. ಇದು ನಮ್ಮ ಕಾಲದ ಚಳವಳಿ. ನಮ್ಮದೇ ಚಳವಳಿ.

ನಾನು ಆಮ್ ಆದ್ಮಿ ಪಾರ್ಟಿಗೆ ಸೇರಿರುವ ಸಂಗತಿ ವರ್ತಮಾನ.ಕಾಮ್‌ನ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ (ನನ್ನ ಸಮಯವನ್ನೊಂದು ಬಿಟ್ಟು). ಮೊದಲಿನಿಂದಲೂ ನಾವು ನಮ್ಮ ಬಳಗದ ಎಲ್ಲಾ ಪ್ರಮುಖ ಲೇಖಕರ ಲೇಖನಗಳನ್ನು ಎಡಿಟ್ ಮಾಡದೇ ಪ್ರಕಟಿಸುತ್ತ ಬಂದಿದ್ದೇವೆ (ಕಾಗುಣಿತ ಮತ್ತು ಕೆಲವು ಭಾಷಾಪ್ರಯೋಗಗಳನ್ನು ಹೊರತುಪಡಿಸಿ). ಅದು ಮುಂದೆಯೂ ಮುಂದುವರೆಯುತ್ತದೆ. ನಮ್ಮಲ್ಲಿ ಈಗಾಗಲೇ ಬರೆಯುತ್ತಿರುವ ಲೇಖಕರಿಂದ ಇಲ್ಲಿ ಆಮ್ ಆದ್ಮಿ ಪಾರ್ಟಿಯ ಪರವಾಗಿ ಏನಾದರೂ ಕೆಲವು ಲೇಖನಗಳು ಬಂದರೆ ಅದು ಅವರ ಬರವಣಿಗೆ ಮತ್ತು ಸ್ವತಂತ್ರ ಅಭಿಪ್ರಾಯದ ಮುಂದುವರೆಕೆಯೇ ಹೊರತು ಬೇರಲ್ಲ, ಇದೊಂದು ಸ್ವತಂತ್ರ ವೇದಿಕೆ ಮತ್ತು ಹಾಗೆಯೇ ಮುಂದುವರೆಯುತ್ತದೆ; ನನ್ನ ವೈಯಕ್ತಿಕ ಆಯ್ಕೆಗಳ ಹೊರತಾಗಿ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

5 thoughts on “ಲೋಕ್‌ಸತ್ತಾದಿಂದ ಆಮ್ ಆದ್ಮಿಯೆಡೆಗೆ…

    1. ಇಬ್ರಾಹಿಮ್ ಖಾದಿರ್

      ಕೆಜ್ರೀವಾಲ್ ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ, ಆದರೆ ಆಮ್ ಆದ್ಮಿ ಪಕ್ಷ ಮಾತ್ರ ಒಂದು ಖಿಚಡಿ ಪಕ್ಷ. ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲುವ ಭರವಸೆ ಇಲ್ಲ. ಕೆಜ್ರೀವಾಲ್ ಅವರ ಹೋರಾಟವನ್ನು ಆಮ್ ಆದ್ಮಿ ಪಕ್ಷ ಮುಳುಗಿಸಿಬಿಡುತ್ತದೆ ಯಾವ ಅನುಮಾನವೂ ಇಲ್ಲ. ರವಿ ಕೃಷ್ಣಾರೆಡ್ಡಿ ಅವರು ಚುನಾವಣೆಯ ತರುವಾಯ ತಿರುಗ ಲೋಕಸತ್ತಾ ಪಕ್ಷಕ್ಕೆ ಮರಳುತ್ತಾರಾ ಅಥವಾ ಪವನ್ ಕಲ್ಯಾಣ್ ಪಾರ್ಟಿ ಸೇರುತ್ತಾರ? ಕಾದು ನೋಡಿ. 😉

      Reply
  1. Ananda Prasad

    ಲೋಕಸತ್ತಾ ಪಕ್ಷವು ಆಮ್ ಆದ್ಮಿ ಪಕ್ಷದಲ್ಲಿ ವಿಲೀನ ಆಗುವುದು ಒಳ್ಳೆಯ ನಿರ್ಧಾರ ಆದೀತು ಏಕೆಂದರೆ ಲೋಕಸತ್ತಾ ಪಕ್ಷವು ಕರ್ನಾಟಕದಲ್ಲಿ ಬೆಳೆಯುವ ಲಕ್ಷಣಗಳು ಇಲ್ಲ. ಒಂದು ಪಕ್ಷವು ಹೊಸದಾಗಿ ಬೆಳೆಯಬೇಕಾದರೆ ಅದೂ ಅಸ್ತಿತ್ವದಲ್ಲಿರುವ ಪ್ರಬಲ ಪಕ್ಷಗಳ ಎದುರು ಬೆಳೆಯಬೇಕಾದರೆ ಒಂದು ಚಳುವಳಿಯ ಅಲೆ ಇರಬೇಕಾಗುತ್ತದೆ. ಅಂಥ ಅಲೆ ಲೋಕಸತ್ತಾ ಪಕ್ಷಕ್ಕೆ ಇಲ್ಲ ಏಕೆಂದರೆ ಲೋಕಸತ್ತಾ ಪಕ್ಷ ರಾಜ್ಯಾದ್ಯಂತ ಗಮನ ಸೆಳೆಯುವ ಹೋರಾಟ/ಅಂದೋಳನದಲ್ಲಿ ತೊಡಗಿರಲಿಲ್ಲ. ಇಂಥ ಸನ್ನಿವೇಶದಲ್ಲಿ ಅದು ಬೆಳೆಯುವುದು ಬಹಳ ಕಷ್ಟ. ಹತ್ತಿರ ಹತ್ತಿರ ಒಂದೇ ರೀತಿಯ ಗುರಿ ಇರುವ ಪಕ್ಷಗಳು ಒಬ್ಬರ ವಿರುದ್ಧ ಇನ್ನೊಬ್ಬರನ್ನು ನಿಲ್ಲಿಸಿ ತಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವುದರಿಂದ ಏನೂ ಪ್ರಯೋಜನ ಇಲ್ಲ. ಒಂದು ವೇಳೆ ಲೋಕಸತ್ತಾ ಪಕ್ಷವು ವಿಲೀನ ಮಾಡಲು ಮನಸ್ಸಿಲ್ಲದಿದ್ದರೆ ಆಮ್ ಆದ್ಮಿ ಪಕ್ಷದ ಜೊತೆ ಚುನಾವಣೆಗಳಲ್ಲಿ ಹೊಂದಾಣಿಕೆ/ಮೈತ್ರಿ ಮಾಡಿಕೊಳ್ಳುವುದು ಉತ್ತಮ. ಆಮ್ ಆದ್ಮಿ ಪಕ್ಷವೂ ಕೂಡ ತಾನು ಅಧಿಕಾರಕ್ಕಾಗಿ ಎಂದೂ ರಾಜಿ ಮಾಡಿಕೊಳ್ಳಬಾರದು, ವ್ಯವಸ್ಥೆ ಪರಿವರ್ತನೆಯ ಉದ್ಧೇಶವಷ್ಟೇ ಗುರಿಯಾಗಿರಬೇಕು. ಹೀಗಾಗಿ ಅಧಿಕಾರಕ್ಕಾಗಿ, ಸ್ಥಾನ ಮಾನಗಳಿಗಾಗಿ ಬೇರೆ ಸಾಂಪ್ರದಾಯಿಕ ಪಕ್ಷಗಳಿಂದ ಬರುವವರನ್ನು ಸೇರಿಸಿಕೊಳ್ಳದೆ ಇರುವುದು ಒಳ್ಳೆಯದು. ದೆಹಲಿಯಲ್ಲಿ ಅಧಿಕಾರಕ್ಕಾಗಿ ಅತ್ಯಂತ ಭ್ರಷ್ಟ ಕಾಂಗ್ರೆಸ್ ಪಕ್ಷದ ಜೊತೆ ಆಮ್ ಆದ್ಮಿ ಪಕ್ಷದ ಜೊತೆ ರಾಜಿ ಮಾಡಿಕೊಂಡಿದೆ ಎಂಬ ವಿಪಕ್ಷಗಳ ಟೀಕೆಗಳಿಗೆ ತನ್ನ ಕೆಲಸದ ಮೂಲಕವೇ ದಿಟ್ಟ ಉತ್ತರ ನೀಡಬೇಕು. ಕಾಂಗ್ರೆಸ್ ಪಕ್ಷದ ಜೊತೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕಾಗಿ ರಾಜಿ ಮಾಡಿಕೊಂಡಿದೆ ಎಂಬುದು ಒಂದು ಅಪಪ್ರಚಾರ. ಕಾಂಗ್ರೆಸ್ ಪಕ್ಷದವರು ಸರ್ಕಾರದ ಒಂದು ಭಾಗವಾಗಿ ಆಮ್ ಆದ್ಮಿ ಪಕ್ಷದ ಜೊತೆ ಅಧಿಕಾರ ಹಂಚಿಕೊಂಡಿಲ್ಲ. ಕಾಂಗ್ರೆಸ್ಸಿನವರು ಸರ್ಕಾರದ ಒಳಗೆ ಸೇರಿ ಮಂತ್ರಿಗಳಾಗಿದ್ದರೆ ಅದನ್ನು ಅಧಿಕಾರಕ್ಕಾಗಿ ರಾಜಿ ಎಂದು ಹೇಳಬಹುದಾಗಿತ್ತು. ಆಮ್ ಆದ್ಮಿ ಪಕ್ಷ ಹಾಗೇನೂ ಮಾಡಿಲ್ಲದ ಕಾರಣ ಇದನ್ನು ಅಧಿಕಾರಕ್ಕಾಗಿ ರಾಜಿ ಎಂದು ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್ಸಿನವರು ಆಮ್ ಆದ್ಮಿ ಪಕ್ಷ ಬೆಂಬಲ ಕೇಳದೆ ಇದ್ದರೂ ಬೆಂಬಲ ಕೊಟ್ಟು ಆಮ್ ಆದ್ಮಿ ಪಕ್ಷವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಬಯಸಿದ್ದರು. ದೆಹಲಿಯಲ್ಲಿ ಅಧಿಕಾರ ಸ್ವಲ್ಪದರಲ್ಲೇ ಕೈ ತಪ್ಪಿದ ಕಾರಣ ಬಿಜೆಪಿಯವರು ಹತಾಶರಾಗಿದ್ದಾರೆ ಹಾಗೂ ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಸಿಕ್ಕಿದಂತೆ ಆಮ್ ಆದ್ಮಿ ಪಕ್ಷ ಏನು ಮಾಡಿದರೂ ಅವರಿಗೆ ಈಗ ತಪ್ಪಾಗಿ ಕಾಣುತ್ತಾ ಇದೆ. ಹೊಸ ಪಕ್ಷವೊಂದರ ಬಗೆಗೆ ಈ ರೀತಿಯ ಅಸಹನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯದಲ್ಲ.

    Reply
  2. ಅಹಮದ್

    “ಆಮ್ ಆದ್ಮಿ” ಎಂಬ ಬ್ರಮೆಯ ಬೆನ್ನೇರಿ
    ಈಗ ಎಲ್ಲರ ಬಾಯಲ್ಲೂ ಆಮ್ ಆದ್ಮಿದೇ ಮಂತ್ರ, ಮೂಲೆ ಹಿಡಿದಿದ್ದ ಸಮಾಜವಾದಿಗಳು(ಜೆ.ಪಿ.ಚಳುವಳಿಯಿಂದ ಪ್ರಭಾವಿತಗೊಂಡು ಬ್ರಮ ನಿರಸಗೊಂಡು ರಾಜಕೀಯ ಸನ್ಯಾಸ ಸ್ವೀಕರಿಸಿ ಪ್ರಸ್ತುತ ರಾಜಕಾರಣಿಗಳನ್ನು ಬಯ್ಯುತ್ತಿದ್ದ ವರ್ಗ) ಚೈತನ್ಯ ಪಡೆದುಕೊಂಡು ಆಮ್ ಆದ್ಮಿ ಕೂಗನ್ನೆಬ್ಬಿಸಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಆಮ್ ಆದ್ಮಿ ಭಾರತದ ಹೊಸ ಬಾಳಿನ ಭರವಸೆ, ಕೇಜ್ರಿವಾಲ್ ಭಾರತದ ಅಭಿವೃದ್ಧಿಯ ಆಶಾಕಿರಣ ಎಂಬೆಲ್ಲಾ ಕನಸುಗಳನ್ನು ಕಟ್ಟಿಕೊಂಡು ಹುರುಪಿನಿಂದ ಓಡಾಡುತ್ತಿದ್ದಾರೆ. ನಿಜವಾಗಿಯೂ ಆಮ್ ಆದ್ಮಿ ಭಾರತದ ಹೊಸ ಭರವಸೆ ಆಗಬಲ್ಲದೆ?. ನನಗಂತೂ ವಿಶ್ವಾಸವಿಲ್ಲ, ಅದಕ್ಕೆ ಕಾರಣಗಳು ಹಲವಾರು ಹಾಗೂ ತುಂಬಾ ಸರಳ.
    ಮೊದಲನೆಯದಾಗಿ ಭಾರತಕ್ಕೆ ಹೊಸ ಗಾಳಿ ಕೊಟ್ಟ ಮೊದಲ ಪಕ್ಷವೇನೂ ಇದಲ್ಲ ೭೦ ರ ದಶಕದಲ್ಲಿ ಕಾಂಗ್ರೇಸ್ಸಿನ ಅರೆ ಪಾಳೇಗಾರಿ ಪ್ರವೃತ್ತಿಯ ಆಡಳಿತ, ಅದರಿಂದ ಬೆಳೆದ ಬ್ರಷ್ಟಾಚಾರ ಹಾಗೂ ಭಾರತದ ಬಡವರ ಬದುಕಿನಲ್ಲಿ ಎಳ್ಳೆಷ್ಟೂ ಬೆಳಕನ್ನು ಕಾಣದ ಹಿನ್ನಲೆಯಲ್ಲಿ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಭುಗಿಲೆದ್ದ ಕಾಂಗ್ರೇಸ್ ವಿರೋಧಿ ಚಳುವಳಿ ಸಮಾಜವಾದಿ ಸಿದ್ಧಾಂತದ ಭೂಮ್ನಿಂದ ಕಾಂಗ್ರೆಸ್ ಅನ್ನು ಧೂಳಿಪಟ ಮಾಡಿತು, ಹರದನಹಳ್ಳಿಯಿಂದ ಬಿಹಾರದ ಪಾಟ್ನಾ ವರೆಗೆ ಪಂಜಾಬಿನ ಟಿಕಾಯತ್ ರಿಂದ ಕರ್ನಾಟಕದ ಪಟೇಲರವರೆಗೆ ಮೈದುಂಬಿ ಮೊಳಗಿದ ಭಾರತದ ಶ್ರೀಮಂತ ರೈತರ ನೇತೃತ್ವದ ಸಮಾಜವಾದಿ ಚಳುವಳಿ ಹೊಸ ಭರವಸೆಗಳನ್ನೇ ಹುಟ್ಟು ಹಾಕಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಆ ಚಳುವಳಿಯ ಉತ್ಪನ್ನಗಳೆಲ್ಲಾ (ಸಿಂಹಪಾಲು) ನಂತರದಲ್ಲಿ ತಮ್ಮದೇ ಪ್ರಾದೇಶಿಕ ಪಕ್ಷ ರಚಿಸಿಕೊಂಡು ಕಾಂಗ್ರೇಸನ್ನೂ ಮೀರಿಸುವ ಬ್ರಷ್ಟಾಚಾರದಲ್ಲಿ ತೊಡಗಿ ಜನರ ಹೃದಯದಿಂದ ಹೊರಹೋಗಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಆ ಚಳುವಳಿಯ ಪ್ರಾಮಾಣಿಕ ಹೋರಾಟಗಾರರು ಅದರ ನೇತಾರರ ಬ್ರಷ್ಠತೆಯಿಂದ ಹೊರಬಂದು ಭಾಷಣಗಳಲ್ಲಿ ಜೆ.ಪಿ.ಹೆಸರನ್ನು ಉದುರಿಸುತ್ತಾ ವ್ಯವಸ್ಥೆ ವಿರುದ್ಧ ಕಿಡಿಕಾರುತ್ತಾ ಬದುಕುತ್ತಿದ್ದಾರೆ, ಆಮ್ ಆದ್ಮಿ ಅವರಿಗೆ ಸಂಚಲನ ನೀಡಿರುವುದು ನಿಜವಾಗಿಯೂ ಶ್ಲಾಘನೀಯ.
    ಎರಡನೆಯದಾಗಿ ೮೦ರ ದಶಕದಲ್ಲಿ ಆಂದ್ರದಿಂದ ಎನ್.ಟಿ.ಆರ್ ನೇತೃತ್ವದಲ್ಲಿ ತೆಲುಗು ದೇಶಂ ಸಿನಿಮೀಯ ನಾಯಕನ ಸಾಮಾಜಿಕ ಸೇವೆಯನ್ನೇ ನಿಜವೆಂದು ಭ್ರಮಿಸಿ ಬೃಹತ್ ಬೆಂಬಲದೊಂದಿಗೆ ಕಾಂಗ್ರೇಸನ್ನು ಧೂಳಿಪಟ ಮಾಡಿ ಬೀಸಿ ಬಂತು. ಈಗ ಆ ಪಕ್ಷ ತನ್ನ ನೆಲೆಯನ್ನು ಭದ್ರ ಪಡಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಅದೇ ಸಂದರ್ಬದಲ್ಲಿ ಅಸ್ಸಾಮಿನ ಯೂನಿವರ್ಸಿಟಿ ಹೆಬ್ಬಾಗಿಲಿನಿಂದ ಬಡಜನರ, ಆದಿವಾಸಿಗಳ ಬವಣೆಯನ್ನು ಏರಿಕೊಂಡು ಭುಗಿಲೆದ್ದ ವಿದ್ಯಾರ್ಥಿ-ಯುವಜನ ಚಳುವಳಿ ಪ್ರಫುಲ್ಲಕುಮಾರಮೊಹಂತನ ನೇತೃತ್ವದಲ್ಲಿ ಸಪ್ತಸುಂದರಿಯರ ಅಂಗಳದಿಂದ ಕಾಂಗ್ರೇಸನ್ನು ಓಡಿಸಿ ಅಸ್ಸಾಮಿನ, ೫ವರ್ಷಗಳಲ್ಲೇ ಜನತೆಯ ಬವಣೆಯನ್ನು ಬಿಸಾಕಿ ಬ್ರಷ್ಠತೆಯಲ್ಲಿ ಕಾಂಗ್ರೇಸನ್ನು ಮೀರಿಸಿದರು ಈಗ ಎರಡಂಕಿಯ ಸೀಟು ಪಡೆಯಲೂ ಪರದಾಡುತ್ತಿದ್ದಾರೆ. ಈ ಮೂರೂ ಚಳುವಳಿಗಳು ಬಂದಷ್ಟೇ ವೇಗದಲ್ಲಿ ಮೂಲೆಗುಂಪಾಗಲು ಕಾರಣ ಆ ಚಳುವಳಿ ಸ್ಪಷ್ಠವಾದ ರಾಜಕೀಯ ಪರ್ಯಾಯಾದ ಕಾರ್ಯಕ್ರಮ ರೂಪಿಸಲೇ ಇಲ್ಲ, ಭೂಸುಧಾರಣಾ ನೀತಿಗಳನ್ನು ಸಮಗ್ರವಾಗಿ ಹೊಂದಿರಲೇ ಇಲ್ಲಾ, ಸಾಮಾಜಿಕ-ಆರ್ಥಿಕ ನೀತಿಗಳ ಕುರಿತು ಕಲ್ಪನೆಗಳೇ ಇರಲಿಲ್ಲ, ಖಾಸಗೀಕರಣ ಮತ್ತು ಸಾವ್ರತ್ರೀಕರಣದ ಕುರಿತು ಅಜೆಂಡಗಳೆ ಇರಲಿಲ್ಲ ಕೇವಲ ಕಾಂಗ್ರೇಸ್ ವಿರೋಧಿ ಭಾವನೆಗಳು ಇತ್ತೇ ಹೊರತು ಮತ್ಯಾವ ದೂರದೃಷ್ಠಿ ಇರಲೇ ಇಲ್ಲ. ಈ ಎಲ್ಲ ಅಂಶಗಳೂ ಆಮ್ ಆದ್ಮಿ ಪಕ್ಷದಲ್ಲಿವೆ ಎನ್ನುವುದನ್ನು ಜನ ಮನಗಾಣಬೇಕು.
    ಆಮ್ ಆದ್ಮಿ ಪಕ್ಷದ ಗೊಂದಲಗಳು
    ೧. ಆಮ್ ಆದ್ಮಿ ಪಕ್ಷ ಬಹು ಮುಖ್ಯವಾಗಿ ಬ್ರಷ್ಟಾಚಾರದ ಕಾರ್ಯಕ್ರಮ ಹಿಡಿದು ಜನಲೋಕಪಾಲ ಮಸೂದೆ ಹೋರಾಟದಿಂದ ಆ ಹೋರಾಟಗಾರರ ನಡುವಿನ ವೈರುಧ್ಯಗಳಿಂದ ಹುಟ್ಟಿಕೊಂಡಿತು. ಇಡೀ ಜನಲೋಕಪಾಲ ಚಳುವಳಿ ಬ್ರಷ್ಟಾಚಾರಕ್ಕೆ ರಾಜಕಾರಣಿಗಳು ಮತ್ತು ಅಧಿಕಾರಿಗಳೆ ಕಾರಣ ಎಂದು ತೀರ್ಮಾನಿಸಿತು ಇಂದಿಗೂ ಕಾರ್ಪೋರೇಟ್ ವಲಯದ ಬ್ರಷ್ಟಾಚಾರದ ಕುರಿತು ಒಂದು ಸೊಲ್ಲೂ ಎತ್ತುತ್ತಿಲ್ಲ. ಬ್ರಷ್ಟಾಚಾರದ ಮೂಲ ಬೇರುಗಳು ಇರುವುದು ಖಾಸಗೀಕರಣದಿಂದ, ಖಾಸಗೀಕರಣ ಪ್ರೇರೇಪಿಸುವ ಜಾಗತೀಕರಣದ ನವ-ಉದಾರೀಕರಣ ನೀತಿಗಳು ಭಾರತದಲ್ಲಿ ಕಾರ್ಪೊರೇಟರುಗಳ ಸಂಪತ್ತನ್ನು ನೂರುಪಟ್ಟು ಅಧಿಕ ಮಾಡಿರುವುದನ್ನು ದೇಶದ ಎಲ್ಲ ಪತ್ರಿಕೆಗಳು ಪುಟಗಟ್ಟಲೆ ಬರೆಯುತ್ತಿದ್ದರೂ ಈ ಪಕ್ಷ ಮತ್ತದರ ಚಳುವಳಿ ಈ ಕುರಿತು ದಿವ್ಯ ಮೌನತಾಳಿರುವುದು ಆ ಪಕ್ಷದ ಭವಿಷ್ಯವನ್ನು ಲೆಕ್ಕ ಹಾಕಬಹುದು.
    ೨. ಆ ಪಕ್ಷದ ಮುಖಂಡರುಗಳು ಬಹುಮತದ ಹೇಳಿಕೆ ನೀಡದೆ ಒಬ್ಬೊಬ್ಬರು ಒಂದೊಂದು ಮಾದರಿ ಹೇಳಿಕೆ ನೀಡುತ್ತಿರುವುದು ಆ ಪಕ್ಷದ ನಿಲುಮೆ ಹಾಸ್ಯಾಸ್ಪದವಾಗಿ ಮೂಡಿಬರುತ್ತಿದೆ. ಒಬ್ಬ ಪ್ರಮುಖ ನಾಯಕ ಭಾರತದಲ್ಲಿ ಎಡ-ಬಲ ಎನ್ನು ಪರಿಕಲ್ಪನೆಯೇ ಅನಗತ್ಯ ಎನ್ನುತ್ತಾರೆ, ಕೇಜ್ರಿವಾಲ್ ಲ್ಯಾಟಿನ್ ಅಮೇರಿಕಾದ ಮಾದರಿಯನ್ನು ಹೊಗಳುತ್ತಾರೆ. ಲ್ಯಾಟಿನ್ ಅಮೇರಿಕದ ಬಹುತೇಕ ದೇಶಗಳು ಅಮೇರಿಕನ್ ಸಾಮ್ರಾಜ್ಯಶಾಹಿತ್ವವನ್ನು ವಿರೋಧಿಸಿ, ನವ ಉದಾರೀಕರಣದ ಕಾರ್ಪೊರೇಟ್ ಸಂಸ್ಕೃತಿಯನ್ನು ಧಿಕ್ಕರಿಸಿ ಆಡಳಿತಕ್ಕೆ ಬಂದಿವೆ ಎನ್ನುವ ಮೂಲ ಸತ್ಯ ಅರಿಯದಿರುವುದು ವಿಷಾದನೀಯ. ವೆನಿಜುವೆಲ ಹೊಸ ಜಾಗತಿಕ ಚಳುವಳಿಯ ಪ್ರೇರಣೆ ಅದು ಹ್ಯೂಗೋ ಚಾವೇಝರ ನೇತೃತ್ವದಲ್ಲಿ ಅಮೇರಿಕನ್ ಬಾಲಬುಡುಕ ಜನದ್ರೋಹಿ ವ್ಯವಸ್ಥೆಯನ್ನು ಸೀಳಿ ಅಧಿಕಾರಕ್ಕೆ ಬಂದ ತಕ್ಷಣ ರಾಷ್ಟ್ರೀಯ ಸಂಪತ್ತನ್ನೆಲ್ಲಾ ರಾಷ್ಟ್ರೀಕರಿಸಿದೆ, ಸಮಗ್ರ ಭೂಸುಧಾರಣೆ ನಡೆಸಿದೆ, ಶಿಕ್ಷಣ, ಆರೋಗ್ಯ, ವಸತಿ ವ್ಯವಸ್ಥೆಯ ಜವಾಬ್ದಾರಿಯನ್ನಾಗಿಸಿದೆ. ಈ ಮಾದರಿಯ ರಾಷ್ಟ್ರೀಕರಣದ ಸೊಲ್ಲೇ ಈ ಪಕ್ಷಕ್ಕಿಲ್ಲಾ, ಎಂದಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಕುರಿತು ಒಂದು ಸೆಮಿನಾರನ್ನೂ ನಡೆಸಿಲ್ಲ. ಮಾತ್ರವಲ್ಲ ಲ್ಯಾಟಿನ್ ಅಮೇರಿಕಾದ ದೇಶಗಳು ಎಡ ಚಿಂತನೆಯನ್ನು ಹೆಚ್ಚಾಗಿ ಆನಿಸಿಕೊಂಡಿವೆ.
    ೩. ಭಾರತದ ಕೇಜ್ರಿವಾಲರ ಆಮ್ ಆದ್ಮಿ ಭಾರತದಲ್ಲಿ ಸ್ವಾತಂತ್ರ ಪೂರ್ವದಿಂದಲೂ ಸಚ್ಚಾರಿತ್ರವಾಗಿ, ಬ್ರಷ್ಟಾಚಾರದ ಸೋಂಕಿಲ್ಲದೆ ಸುಧೀಘವಾಗಿ ಬಡಜನರ ಪರ ನೀತಿಗಳನ್ನು ರೂಪಿಸಿ ಸರಳವಾಗಿ ಬದುಕುತ್ತಾ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕಮ್ಯುನಿಷ್ಟರನ್ನೂ ಕೂಡ ವೈಜ್ಞಾನಿಕ ವಿಮರ್ಷೆ ಮಾಡಿಲ್ಲ ಬದಲಾಗಿ ಕಾಂಗ್ರೆಸ್, ಬಿಜೆಪಿ ಜೊತೆ ಈ ಪಕ್ಷಕ್ಕೂ ಕೂಡ ಒಂದೇ ಬ್ರಷ್ನಿಂದ ಬಣ್ಣ ಬಳಿಯುತ್ತಿದೆ ಇದು ಈ ಪಕ್ಷದ ಅಸಹಾಯಕತೆ, ಅಜ್ಞಾನ, ಅಹಂಕಾರ, ಅವೈಜ್ಞಾನಿಕತೆಯನ್ನು ಬಿಂಬಿಸುತ್ತದೆ.
    ೪. ಇನ್ನು ಆಮ್ ಆದ್ಮಿ ಪಕ್ಷದ ಸರಳತೆ ನಿಜ. ಕೇಜ್ರಿವಾಲರು ಸರಳವಾಗೇ ಇದ್ದಾರೆ ಎಲ್ಲರೂ ಹಾಗೆ ಇದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ, ಈ ದೇಶದ ಕಮ್ಯುನಿಷ್ಟರು ಹೇಗಿದ್ದಾರೆ ಎಂದು ಆಮ್ ಆದ್ಮಿ ಮಂತ್ರ ಪಠಿಸುತ್ತಿರುವ ಆರ್.ಪಿ.ವಿ ಯವರೇ ಸುಮಧರವಾಗಿ ಹೇಳುತ್ತಾರೆ ೭೦ಶೇಖಡ ಕಮ್ಯುನಿಷ್ಟ್ ಕಾರ್ಯಕರ್ತರು, ಶಾಸಕರು, ಮಂತ್ರಿಗಳಿಗೆ ಸ್ವಂತ ಮನೆ ಇಲ್ಲ, ಪಕ್ಷದ ಕಚೇರಿಗಳಲ್ಲೇ ವಾಸಿಸುತ್ತಿದ್ದಾರೆ ಇಲ್ಲ ಕಡಿಮೆ ಬಾಡಿಗೆಯ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಕೊರಳಿಗೆ ಚೈನಿಲ್ಲ, ಕೈಗೆ ಉಂಗುರವಿಲ್ಲ, ಟೀಕು-ಟಾಕು ಬಟ್ಟೆಗಳಿಲ್ಲ, ಸ್ನೋ-ಪೌಡರ್ ನೋಡಲೇ ಇಲ್ಲ. ಬುದ್ದದೇವರಿಗೆ ಅವರ ಅಪ್ಪನ ಕಾಲದ೨ ಬೆಡ್ ರೂಮಿನ ಹಳೆಯ ಮನೆಯಲ್ಲೇ ವಾಸಿಸುತ್ತಿದ್ದಾರೆ, ಅವರೆಲ್ಲರ ಸಂಬಳ ಪಕ್ಷ ನೀಡುವ ಮಾಸಿಕ ೧೦ಸಾವಿರಕ್ಕೂ ಕಡಿಮೆ ಮೌಲ್ಯದ ಅಲೋಯೆನ್ಸ್, ಕೇರಳದ ಮಾಜಿ ಮುಖ್ಯ ಮಂತ್ರಿ ವಿ.ಎಸ್.ಅಚ್ಯುತಾನಂದನ್ ಹೆಂಚಿನ ಮನೆಯಲ್ಲೇ ವಾಸಿಸುತ್ತಿದ್ದಾರೆ, ತ್ರಿಪುರಾದಾ ಮುಖ್ಯಮಂತ್ರಿ ಭಾರತದ ಅತ್ಯಂತ ಬಡ ಮುಖ್ಯ ಮಂತ್ರಿ ಎಂದು ಚುನಾವಣಾ ಆಯೋಗ ಪ್ರಮಾಣ ಪತ್ರ ನಿಡಿದೆ, ಜ್ಯೋತಿಬಸು ಸಾಯುವವರೆಗೂ ಪಕ್ಷ ನೀಡಿದ ಸಣ್ಣ ಮನೆಯಲ್ಲೇ ವಾಸಿಸುತ್ತಿದ್ದರು. ಪ್ರಕಾಶ್ ಕಾರಟ್ ಮತ್ತು ಬೃಂದಾ ಕಾರಟ್ ಮನೆಯಲ್ಲಿ ಅಡಿಗೆ ಮಾಡಿಕೊಂಡು ಪಕ್ಷದ ಕಚೇರಿಗೆ ಬುತ್ತಿ ತಂದು ಊಟಮಾಡುತ್ತಾರೆ. ಈಗಲೂ ಬಹುತೇಕ ಕಮ್ಯುನಿಸ್ಟ್ ಶಾಸಕರು ಸೈಕಲ್ಲು, ಮೊಪೆಡ್ಡುಗಳಲ್ಲಿ ಓಡಾಡುತ್ತಿದ್ದಾರೆ. ಎ.ಎ.ಪಿ ಅನುಸರಿಸುತ್ತಿರುವ ಈ ಮಾದರಿಯ ಸರಳತೆ ಈ ದೇಶದಲ್ಲಿ ಇವರಿಗಿಂತಲೂ ಮೊದಲಿನಿಂದ ಚಾಲ್ತಿಯಲ್ಲಿದೆ ಮಾತ್ರವಲ್ಲ ಅದು ಅತ್ಯಂತ ಪ್ರಮುಖ ಮಾನದಂಡವೂ ಹೌದು.
    ೫. ಕೇಜ್ರಿವಾಲರ ಪಕ್ಷಕ್ಕೆ ಜನಸಾಮಾನ್ಯರ ದೇಣಿಗೆ ಜೊತೆಗೆ ಕಾರ್ಪೊರೇಟರುಗಳ ದೇಣಿಗೆಯೂ ಇದೆ ಆದರೆ ಪ್ರತಿ ವರ್ಷ ಕಮ್ಯುನಿಷ್ಟರು ಬಕೆಟ್ ಹಿಡಿದು ಬೀದಿ ಬಿದಿಗಳಲ್ಲಿ ಪಕ್ಷಕ್ಕೆ ಚಂದಾ ಎತ್ತುತ್ತಾರೆ. ಮೊನ್ನೆ ಮೊನ್ನೆ ಕೇರಳದಲ್ಲಿ ಒಂದೇ ದಿನದಲ್ಲಿ ಬೀದಿ ಸಂಗ್ರಹಣೆಯಿಂದ ೫.೩ ಕೋಟಿ ರೂ ಸಂಗ್ರಹವಾಗಿದೆ. ಚುನಾವಣಾ ಆಯೋಗ ಹಾಗೂ ಭಾರತದ ಲೆಕ್ಕ ಪರಿಶೋಧಕರಿಗೆ ನೋಟಿಸ್ ಇಲ್ಲದೆ ಪಕ್ಕಾ ಲೆಕ್ಕ ಚುಕ್ತಾ ಮಾಡಿದ ಹಾಗೂ ನಿರಂತರವಾಗಿ ಮಾಡುತ್ತಿರುವ ಭಾರತದ ಏಕೈಕ ಪಕ್ಷ ಎಂದರೆ ಎಡಪಕ್ಷಗಳು.
    ೬. ಸರಳತೆಯಲ್ಲಿ ಎಡಪಕ್ಷಗಳ ಹಾದಿಯಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ವೈಯಕ್ತಿಕವಾಗಿ ಆಮ್ ಆದ್ಮಿ ಮುನ್ನಡೆಯುತ್ತಿರುವುದು ಸಂತೋಷ ಆದರೆ ದೇಶಕ್ಕೆ ಪರ್ಯಾಯವಾಗಲು ಸರಳತೆ ಮಾತ್ರ ಸಾಲದು ತಮ್ಮ ರಾಜಕೀಯ ಮತ್ತು ಆರ್ಥಿಕ ನೀತಿಗಳ ಕುರಿತು ಸ್ಪಷ್ಠ ನಿಲುವು ಹಾಗೂ ಭವಿಷ್ಯದ ಕುರಿತು ಸ್ಪಷ್ಠ ಯೋಜನೆ ಇರಬೇಕು. ಎನ್.ಜಿ.ಒ ಮಾದರಿಯಲ್ಲಿ ದೇಶವನ್ನು ಮುನ್ನಡೆಸಲಾಗದು ಎಂಬ ಸತ್ಯ ಈ ಪಕ್ಷ ಮತ್ತದನ್ನು ಬಿಂಬಿಸುತ್ತಿರುವ ಜನಕಾಳಜಿಯವರು ಅರಿಯಲೇ ಬೇಕು. ಯಾವದೇ ಪಕ್ಷ ಮೂರು ವಿಧದ ಕಾರ್ಯಸೂಚಿಯನ್ನು ನಿಖರವಾಗಿ ಹೊಂದಿ, ಜಾರಿಗೆ ಗುರಿ ಹಾಗೂ ಮಾರ್ಗ ಹಾಕಿರಬೇಕು ೧. ಸಂಘಟನಾ ತತ್ವ ೨. ಕಾರ್ಯಕ್ರಮ ೩. ಆರ್ಥಿಕ ನೀತಿ ಮತ್ತು ವಿದೇಶಾಂಗ ನೀತಿ
    ೭. ಇವರ ಸಂಘಟನಾ ತತ್ವ ಹೇಗಿದೆ ಎಂದರೆ ಮಿಸ್ ಕಾಲ್ ಮಾಡಿ ಈ ಪಕ್ಷಕ್ಕೆ ಸದಸ್ಯರಾಗಬಹುದು. ಇನ್ನೆಷು ದಿನ ಬಾಳಬಹುದು ಆ ಪಕ್ಷ? ಬಹುತೇಕರ ಆಯ್ಕೆಯಾದ ಇವರ ಶಾಸಕರು ಬಿಜಿಪಿ ಮತ್ತು ಕಾಂಗ್ರೇಸ್ಸಿನ ಅತೃಪ್ತರು ಅವರ ಅತೃಪ್ತಿ ಇಲ್ಲಿಯೂ ಮುಂದುವರೆದಿದೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಆ ಪಕ್ಷದ ವಲಸಿಗ ಶಾಸಕರೊಬ್ಬರೂ ದಿನವಿಡಿ ಕೇಜ್ರಿವಾಲರನ್ನು ಸರ್ವಾಧಿಕಾರಿ, ಹಠವಾದಿ, ಗುರಿಯಿಲ್ಲದವ ಎಂದು ಜರಿದುಕೊಂಡು ಹೇಳಿಕೆ ನೀಡುತ್ತಲೇ ಇದ್ದಾರೆ, ಅವರ ಹಿರಿಯ ಮುತಸ್ದ್ದಿಯೊಬ್ಬರು ಕಾಶ್ಮೀರ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ, ಕೇಜ್ರಿವಾಲರು ಅದು ಅವರ ವೈಯುಕ್ತಿಕ ಅಭಿಪ್ರಾಯ ಎಂದು ಬೇರೆ ಪಕ್ಷದವರು ಹೇಳುವ ಹಾಗೆಯೇ ಹೇಳುತ್ತಿದ್ದಾರೆ. ವ್ಯಕ್ತಿಗೊಂದು ಅಭಿಪ್ರಾಯ, ಪಕ್ಷಕ್ಕೆ ಇನ್ನೊಂದು ಅಭಿಪ್ರಾಯವಿರುತ್ತದೆಯೆ!? ಭಾರತದ ಸಿಪಿಎಂ ಒಳಗೊಂಡ ಯಾವ ಕಮ್ಯುನಿಷ್ಟ್ ಪಕ್ಷಗಳಿಗೂ ಪಕ್ಷದ ಅಭಿಪ್ರಾಯವೆ ಅಂತಿಮ ಆ ಅಭಿಪ್ರಾಯವೇ ಅವನ ಮಾತ್ರವಲ್ಲ ಆತನ ಮನೆಯವರ ಅಭಿಪ್ರಾಯವೂ ಕೂಡ ಆಗಿರುತ್ತದೆ ಎನ್ನುವುದನ್ನು ಕನ್ನಡದ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿತ್ತು ಅವರಿಗಿಂತ ಭಿನ್ನ ಇವರ ಹೇಗೆ ಆದಾರು?

    ೮. ಇವರ ಪಕ್ಷ ಕಾರ್ಯಕ್ರಮ ರೂಪಿಸಿಲ್ಲ, ಚುನಾವಣಾ ಪ್ರಣಾಳಿಕೆ ದೆಹಲಿಗೆ ಸಂಬಂದಿಸಿದಂತೆ ರೂಪಿಸಿದೆ. ಅದರ ಪ್ರಕಾರ ದೆಹಲಿಯ ಜನರ ಅತ್ಯಂತ ಪ್ರಮುಖ ಸಮಸ್ಯೆ ಕುಡಿಯುವ ನೀರು ಮತ್ತು ವಿದ್ಯುತ್ ದರ ಇವೆರೆಡನ್ನೂ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸಿದೆ ಅದು ಶ್ಲಾಘನೀಯ ಆದರೆ ಈಗಾಗಲೆ ದೆಹಲಿಯ ಜಲ ಮಂಡಳಿ ಮತ್ತು ವಿದ್ಯುತ್ ಮಂಡಳಿಗಳು ತಮ್ಮ ಅಸಮಧಾನವನ್ನು ಹೊರಹಾಕಿವೆ ೭ತಿಂಗಳ ನಂತರ ಬೃಹತ್ ಆರ್ಥಿಕ ಸಮಸ್ಯೆಯಲ್ಲಿ ದೆಹಲಿ ಸಿಲುಕಲಿದೆ ಎಂದು. ವಾಸ್ತವವಾಗಿ ಇವೆರೆಡೂ ದುಬಾರಿಯಾಗಲು ಕಾರಣ ನೀರು ಹಾಗೂ ವಿದ್ಯುತ್ ವಿತರಣೆ ಖಾಸಗೀಕರಣ ಗೊಂಡಿವೆ ಹಾಗಾಗಿ ಶಾಶ್ವತ ಪರಿಹಾರ ಮೂಲಭೂತ ಅವಶ್ಯಕತೆಗಳ ಪೂರೈಕೆಯನ್ನು ಲ್ಯಾಟಿನ್ ಅಮೇರಿಕ ದೇಶಗಳ ಮಾದರಿಯಲ್ಲಿ ರಾಷ್ಟ್ರೀಕರಣಗೊಳಿಸಬೇಕು. ಭಾರತದ ಕೇಂದ್ರೀಕೃತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಇರುವ ಸೀಮಿತ ಅಧಿಕಾರದಲ್ಲಿ ಇದನ್ನು ಮಾಡಲು ಸಾಧ್ಯವೆ? ಎಕ್ಸ್ಟೀಮಿಸಂ ರಾಜಕಾರಣದಲ್ಲಿ ವಿಡಂಬನೆಯಾಗಲಿದೆ ಎನ್ನುವುದನ್ನು ಈ ಪಕ್ಷವನ್ನು ಜನಪ್ರಿಯಗೊಳಿಸಿದ ಭಾರತದ ಕಾರ್ಪೋರೇಟ್ ಮಾಧ್ಯಮಗಳು ಈಗ ಈ ಪಕ್ಷದ ಕುರಿತೇ ಮಾತನಾಡುತ್ತಿವೆ.
    ೯. ಕಾರ್ಪೊರೇಟ್ ಪ್ರೇರಿತ ಪಕ್ಷ ಒಂದು ದೇಶಕ್ಕೆ ಯಾವ ಕಾಲಕ್ಕೂ ಪರ್ಯಾಯವಾಗದು, ಎಡ ಮತ್ತು ಪ್ರಜಾಪ್ರಭುತ್ವ ಶಕಿಗಳು ಬಲಾಢ್ಯವಾಗದೆ ಈ ದೇಶಕ್ಕೆ ಭವಿಷ್ಯ ಇಲ್ಲ. ಸಧ್ಯ ಭಾರತದ ಜನತೆ ಬಿಜೆಪಿಯ ಬ್ರಹ್ಮಾಂಡ ಬ್ರಷ್ಟಾಚಾರ, ಕಾಂಗ್ರೇಸ್ಸಿನ ವಿರಾಟ ಬ್ರಷ್ಟಾಚಾರದಿಂದ ಬ್ರಮನಿರಸನ ಮಾತ್ರವಲ್ಲ ಆಕ್ರೋಶಗೊಂಡಿದ್ದಾರೆ ಎನ್ನುವುದನ್ನು ಆಮ್ ಆದ್ಮಿ ಸ್ಪಷ್ಠ ಪಡಿಸಿದೆ ಮಾತ್ರವಲ್ಲ ಜನತೆಯ ಆಕ್ರೋಶವನ್ನು ಹೊಸ ಬದಲಾವಣೆಯ ಸಾಧ್ಯತೆಗೆ ಮುನ್ನುಡಿ ಬರೆದಿದೆ ಎನ್ನುವುದು ಸತ್ಯ ಅದಕ್ಕಾಗಿ ಈ ಪಕ್ಷವನ್ನು ಮತ್ತು ಅದು ಸಾಧಿಸಿದ ಸಾಧನೆಯನ್ನು ಗೌರವಿಸಲೇ ಬೇಕು ಮಾತ್ರವಲ್ಲ ನರೇಂದ್ರ ಮೋದಿಯ ಅಲೆಯನ್ನು ತಡೆದಿಡಲು ಬೆರೆಲ್ಲ್ಲಾ ಪಕ್ಷಗಳಿಗಿಂತ ಹೆಚ್ಚಾಗಿ ಈ ಪಕ್ಷ ಮಾಡಿದೆ. ಕಾಂಗ್ರೇಸ್ ಮತ್ತು ಬಿಜೆಪಿಯಂತಹ ಬಲಾಢ್ಯ ಪಕ್ಷಗಳ ವರ್ಚಸ್ಸನ್ನು, ಜನಪ್ರೀತಿಯನ್ನು ತನ್ನತ್ತ ಸೆಳೆದುಕೊಂಡ ಈ ಪಕ್ಷ ನಿಜವಾಗಿಯೂ ಅಭಿನಂದನಾರ್ಹ. ಆದರೆ ಭಾರತಕ್ಕೆ ಈಗ ಬೇಕಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ ಜನತಾ ಪ್ರಜಾಪ್ರಭುತ್ವ ಅದನ್ನು ಎ.ಎ.ಪಿ ಏಕಾಂಗಿಯಾಗಿ ಹೊರಲು ಸಾಧ್ಯವಿಲ್ಲ ಆ ಸಾಮರ್ಥ್ಯ ಆ ಪಕ್ಷಕ್ಕೆ ಇಲ್ಲ ಮತ್ತು ಅದರ ಅಸ್ಪಷ್ಠ ನೀತಿಗಳು ಅದರ ಜನಪ್ರಿಯತೆಯನ್ನು ಎ.ಜೆ.ಪಿ ಜೊತೆ ಸೇರಿಹೋಗುವ ಕಾಲ ದೂರವಿಲ್ಲ ಹಾಗಾಗಿ ಭಾರತದ ಬಿಜೆಪಿ-ಕಾಂಗ್ರೆಸ್ ಹೊರತಾದ ಜನತಾ ಪ್ರಜಾಪ್ರಭುತ್ವ ರಂಗವನ್ನು ಕಟ್ಟುವುದು ಆ ಕ್ರಿಯೆಯಲ್ಲಿ ಭಾರತದಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಬಲಪಡಿಸಬೇಕಿದೆ ಈ ಕೆಲಸದಲ್ಲಿ ಎ.ಎ.ಪಿ ಭಾಗಿಯಾಗಲೆ ಬೇಕಿದೆ. ಹಾಗಾಗಿ ಅದು ತನ್ನ ಕಾರ್ಯಕ್ರಮ, ಖಾಸಗೀಕರಣದ ನೀತಿಗಳು, ನವ ಉದಾರೀಕರಣದ ಕುರಿತ ತೀರ್ಮಾನಗಳು, ಆರ್ಥಿಕ ಹಾಗೂ ವಿದೇಶಾಂಗ ನೀತಿಗಳ ಕುರಿತ ಸ್ಪಷ್ಠತೆಯನ್ನು ಜನತೆಗೆ ತಿಳಿಯ ಪಡಿಸಬೇಕು ಇಲ್ಲವಾದರೆ ಇದೊಂದ ಬಿಸಿಲ್ಗುದುರೆಯಾಗಿ ಮರೆಯಾಗಬಹುದು, ಜನತೆ ಎಂದಿನಂತೆ ಹೊಸ ಭರವಸೆಯನ್ನು ಎದುರುನೋಡುತ್ತಾ ಕಾಲತಳ್ಳಲಿದೆ.
    – ಎಚ್.ಎ.ಅಹಮದ್

    Reply
  3. Ananda Prasad

    ಭಾರತದಲ್ಲಿ ಉದಾರೀಕರಣ, ಜಾಗತೀಕರಣ, ಖಾಸಗೀಕರಣ ಆರಂಭವಾಗಿ ೨೩ ವರ್ಷಗಳಾಗಿವೆ. ಹೀಗಿರುವಾಗ ಇವೆಲ್ಲ ಕೆಟ್ಟದ್ದು, ಜನವಿರೋಧಿಯಾದದ್ದು ಎಂದಾದರೆ ಇವುಗಳನ್ನು ಆರಂಭಿಸಿದ/ಬೆಂಬಲಿಸಿದ ಪಕ್ಷಗಳನ್ನು ಸಾರಾಸಗಟಾಗಿ ಜನ ಚುನಾವಣೆಗಳಲ್ಲಿ ತಿರಸ್ಕರಿಸಿ ಇವುಗಳನ್ನು ವಿರೋಧಿಸುವ ಎಡ ಪಕ್ಷಗಳನ್ನು ಚುನಾವಣೆಯಲ್ಲಿ ಬಹುಮತದಿಂದ ಅಧಿಕಾರಕ್ಕೆ ತರಬೇಕಾಗಿತ್ತಲ್ಲವೇ? ಹಾಗೇನೂ ಆಗಿಲ್ಲ, ಆಗುವ ಲಕ್ಷಣಗಳೂ ಇಲ್ಲ. ಉದಾರೀಕರಣ, ಖಾಸಗೀಕರಣಗಳು ಆರಂಭವಾದ ನಂತರ ನಾಲ್ಕಕ್ಕಿಂತ ಹೆಚ್ಚು ಬಾರಿ ಲೋಕಸಭಾ ಚುನಾವಣೆಗಳು ನಡೆದಿವೆ. ಜನರಿಗೆ ಇವುಗಳನ್ನು ಬೆಂಬಲಿಸುವ ಪಕ್ಷಗಳನ್ನು ತಿರಸ್ಕರಿಸಲು ಸಾಕಷ್ಟು ಅವಕಾಶಗಳು ಇದ್ದವು, ಹೀಗಿದ್ದರೂ ಜನ ಇವನ್ನು ತಿರಸ್ಕರಿಸಿಲ್ಲ ಎಂಬುದು ಏನನ್ನು ಸೂಚಿಸುತ್ತದೆ ಎಂಬ ಬಗ್ಗೆ ಎಡ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯ ಇದೆ. ವಾಸ್ತವವಾಗಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳಿಂದ ಜನರ ಅರ್ಥಿಕ ಸ್ಥಿತಿ ಸುಧಾರಿಸಿದೆ, ಹಳ್ಳಿಗಳೂ ಕೂಡ ಆಧುನೀಕರಣಕ್ಕೆ ಒಳಗಾಗಿವೆ. ಜನರಿಗೆ ಎಟಕುವ ಬೆಲೆಯಲ್ಲಿ ಟಿವಿ, ಡಿಟಿಎಚ್ ಸೌಲಭ್ಯ, ಮೊಬೈಲ್ ಫೋನ್ ಸಂಪರ್ಕ, ಬೈಕು, ಸ್ಕೂಟರ್, ಕಾರುಗಳು ಇಂದು ಹಳ್ಳಿಗಳಲ್ಲೂ ಕೆಳ ಮಧ್ಯಮ ವರ್ಗ ಹಾಗೂ ಮಧ್ಯಮ ವರ್ಗದ ಜನರಲ್ಲೂ ಕಂಡು ಬರುತ್ತಿವೆ. ಒಂದು ಕಾಲದಲ್ಲಿ ಇವೆಲ್ಲ ಕೇವಲ ಶ್ರೀಮಂತರ ಬಳಿ ಮಾತ್ರ ಕಂಡುಬರುತ್ತಿದ್ದ ವಸ್ತುಗಳಾಗಿದ್ದವು. ಇದೆಲ್ಲ ಸಾಧ್ಯವಾದದ್ದು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಪ್ರಕ್ರಿಯೆಯಿಂದಲೇ. ಇವುಗಳನ್ನೆಲ್ಲ ಕುರುಡಾಗಿ ವಿರೋಧಿಸಬೇಕಾಗಿಲ್ಲ.

    ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ವಿರುದ್ಧ ಬಲಿಷ್ಠ ಲೋಕಪಾಲ್ ಮಸೂದೆ ಜಾರಿ ಮಾಡುವುದರ ಪರವಾಗಿದೆ ಮತ್ತು ಅದು ಅಧಿಕಾರಕ್ಕೆ ಬಂದರೆ ಅಂಥ ಕಾನೂನನ್ನು ತರುವ ಸಂಭವ ಇದೆ. ಬಲಿಷ್ಠ ಲೊಕಪಲ್ ಮಸೂದೆ ಜಾರಿಯಾದರೆ ಅದರಲ್ಲಿ ಕಾರ್ಪೊರೇಟ್ ಭ್ರಷ್ಟಾಚಾರವೂ ಸೇರುತ್ತದೆ ಅಂದರೆ ಎಲ್ಲಾ ಅಧಿಕಾರಸ್ಥ ರಾಜಕಾರಣಿಗಳೂ ಇದರ ಒಳಗೆ ಬರುತ್ತಾರೆ. ಯಾವುದೇ ಕಾರ್ಪೊರೇಟ್ ಬಂಡವಾಳಗಾರ ರಾಜಕಾರಣಿಗಳಿಗೆ ಲಂಚ ನೀಡಿ ಕಾನೂನುಬಾಹಿರ ಅನುಕೂಲ ಮಾಡಿಕೊಂಡಿದ್ದರೆ ಅವರು ರಾಜಕಾರಣಿಗಳ ತನಿಖೆ ಮಾಡುವಾಗ ಸಿಕ್ಕಿ ಬಿದ್ದೇ ಬೀಳುತ್ತಾರೆ. ಹೀಗಾಗಿ ಆಮ್ ಆದ್ಮಿ ಪಕ್ಷ ಕಾರ್ಪೊರೇಟ್ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಹೇಳಲಾಗದು. ಅಧಿಕಾರಸ್ಥ ರಾಜಕಾರಣಿಗಳ ಎಲ್ಲ ಭ್ರಷ್ಟಚಾರಗಳು ಲೊಕಪಲ್ ವ್ಯಾಪ್ತಿಗೆ ಬರುವಾಗ ಕಾರ್ಪೊರೇಟ್ಗಳು ಭ್ರಷ್ಟಾಚಾರ ಮಾಡಿದರೆ ತನ್ನಿಂತಾನೆ ಲೋಕಪಾಲದ ದೃಷ್ಟಿಗೆ ಬಿದ್ದೇ ಬೀಳುತ್ತಾರೆ. ಆಮ್ ಆದ್ಮಿ ಪಕ್ಷ ಚುನಾವಣಾ ಸುಧಾರಣೆ, ನ್ಯಾಯಾಂಗ ಸುಧಾರಣೆ, ಕೆಲಸ ಮಾಡದ, ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಕಾನೂನು, ಚುನಾವಣೆಗಳಲ್ಲಿ ಯೋಗ್ಯ ಅಭ್ಯರ್ಥಿ ಇಲ್ಲದಿದ್ದರೆ ‘ಯಾರಿಗೂ ಇಲ್ಲ’ ಎಂಬ ಮತ ನೀಡುವ ಹಾಗೂ ಹಾಗೆ ‘ಯಾರಿಗೂ ಇಲ್ಲ’ ಎಂಬ ಮತಗಳು ಗೆದ್ದ ಅಭ್ಯರ್ಥಿ ಪಡೆದ ಮತಗಳಿಗಿಂಥ ಹೆಚ್ಚಾದ ಪಕ್ಷದಲ್ಲಿ ಅಲ್ಲಿ ಮರುಚುನಾವಣೆ ನಡೆಸುವ ಹಾಗೂ ಮರುಚುನಾವಣೆಯಲ್ಲಿ ಮೊದಲು ಚುನಾವಣೆಗೆ ನಿಂತ ವ್ಯಕ್ತಿಗಳು ಪುನಃ ಚುನಾವಣೆಗೆ ನಿಲ್ಲಲು ಸಾಧ್ಯವಾಗದಂಥ ಕಾನೂನು ತರುವ ಕುರಿತು ಕೂಡ ಆಲೋಚನೆ ಹೊಂದಿದೆ. ಇವುಗಳೆಲ್ಲ ಜಾರಿಯಾದಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ತನ್ನಿಂದ ತಾನೇ ಬರುತ್ತವೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಒಂದು ವರುಷ ಅಥವಾ ಅದಕ್ಕೂ ಮೊದಲೇ ಕೇಸುಗಳು ಇತ್ಯರ್ಥವಾಗುವ ಪರಿಸ್ಥಿತಿ ಬಂದರೆ ಮಹತ್ತರ ಬದಲಾವಣೆಗಳು ತನ್ನಿಂದ ತಾನೇ ಬರುತ್ತವೆ. ಇಂದಿನ ಭಾರತದ ನ್ಯಾಯಾಂಗ ವ್ಯವಸ್ಥೆಯ ಅತಿ ನಿಧಾನ ಗತಿ ನಿಜವಾಗಿಯೂ ದೇಶದ್ರೋಹದ ನ್ಯಾಯಾಂಗ ವ್ಯವಸ್ಥೆಯೇ ಆಗಿದೆ. ಕೇಸು ದಾಖಲಾಗಿ ಇಪ್ಪತ್ತು ಮೂವತ್ತು ವರ್ಷ ನಂತರ ತೀರ್ಪು ಬರುತ್ತದೆ ಎಂದಾದರೆ ಅಂಥ ನ್ಯಾಯಾಂಗ ವ್ಯವಸ್ಥೆ ಇದ್ದು ಏನು ಪ್ರಯೋಜನ? ನಾಗರಿಕರೆಂದು ಹೇಳಿಕೊಳ್ಳುವ ನಮಗೆ ಇಂಥ ಭಾರತದ ಅತ್ಯಂತ ಅನಾಗರಿಕ ನ್ಯಾಯಾಂಗ ವ್ಯವಸ್ಥೆಯನ್ನು ಸ್ವಾತಂತ್ರ್ಯ ದೊರೆತು ೬೫ ವರ್ಷ ಆದರೂ ಬದಲಿಸಲು ಆಗುವುದಿಲ್ಲ ಎಂದರೆ ಅದಕ್ಕೆ ನಮ್ಮ ರಾಜಕೀಯ ಪಕ್ಷಗಳ ಹಾಗೂ ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆಯೇ ಕಾರಣವಲ್ಲವೇ? ಆಮ್ ಆದ್ಮಿ ಪಕ್ಷ ಇಂಥ ಜಡ ಹಾಗೂ ನೀಚ ವ್ಯವಸ್ಥೆಗಳನ್ನು ಬದಲಾಯಿಸುವ ಗುರಿ ಹೊಂದಿದೆ. ಇದು ಕೇವಲ ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ ಜನರೂ ಕೂಡ ಸಿನಿಕತೆಯನ್ನು ಬಿಟ್ಟು ಇದು ನಮ್ಮಿಂದ ಸಾಧ್ಯ ಎಂಬ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಆಗ ಎಲ್ಲವೂ ಸಾಧ್ಯವಾಗುತ್ತದೆ. ದೇಶದ ಎಲ್ಲರೂ ಯಾಕ್ಕಾಗಿ ಒಂದಾಗಬೇಕು. ವಿಜ್ಞಾನಿಗಳು, ಚಿಂತಕರು, ಸಾಹಿತಿಗಳು, ಕಲಾವಿದರು, ಪತ್ರಕರ್ತರು, ಮಾಧ್ಯಮಗಳುಈ ಕುರಿತು ಸತತ ಜಾಗೃತಿ ಮೂಡಿಸಬೇಕು. ರಾಜಕೀಯ ಪಕ್ಷಗಳನ್ನು ಈ ಕುರಿತು ತರಾಟೆಗೆ ತೆಗೆದುಕೊಳ್ಳಬೇಕು. ನಾವು ಮೂಕಪಶುಗಳಂತೆ, ಬಾಯಿಯಿದ್ದೂ ಇಲ್ಲದವರಂತೆ ಸಿನಿಕರಾಗಿ ಎಲ್ಲವನ್ನೂ ಇದು ಸಾಧ್ಯವಿಲ್ಲ ಅದು ಸಾಧ್ಯವಿಲ್ಲ ಎಂದು ಕಾಡು ಹರಟೆಯಲ್ಲಿಯೇ ಕಾಲಹರಣ ಮಾಡುತ್ತಿರುವ ಕಾರಣವೇ ನಮ್ಮ ದೇಶದ ಪರಿಸ್ಥಿತಿ ಹೀಗೆ ಇದೆ.

    ದೇಶದಲ್ಲಿ ಬದಲಾವಣೆ ತರುವಲ್ಲಿ ಕಾರ್ಪೊರೇಟ್ ಶಕ್ತಿಗಳ ಬೆಂಬಲ ಅತೀ ಮುಖ್ಯ. ನ್ಯಾಯಯುತವಾಗಿ ಹಣ ಗಳಿಸಿದ ಕೋಟ್ಯಾಧೀಶ ಉದ್ಯಮಿಗಳು ದೇಶದ ಬದಲಾವಣೆಗೆ ರಾಜಕೀಯ ಪಕ್ಷಗಳಿಗೆ ನ್ಯಾಯೋಚಿತವಾಗಿ, ಯಾವುದೇ ಶರತ್ತುಗಳಿಲ್ಲದೆ ದೇಣಿಗೆ ನೀಡಿದರೆ ವ್ಯವಸ್ಥೆಯನ್ನು ಬದಲಾಯಿಸುವುದು ಸುಲಭ. ಹೀಗಾಗಿ ನಾವು ಕಾರ್ಪೊರೇಟ್ ಶಕೀಗಲನ್ನು ಶಕ್ತಿಗಳನ್ನು ಸದಾ ಕಾಲವೂ ವಿರೋಧಿಸುತ್ತಲೇ ಇರಬೇಕಾಗಿಲ್ಲ. ನ್ಯಾಯವಾಗಿ ಉದ್ಯಮ ನಡೆಸಿ ಹಣ ಗಳಿಸಿದ ಉದ್ಯಮಿಗಳು ದೇಶದ ಬದಲಾವಣೆಗೆ ಬೇಕಾದ ಹಣವನ್ನು ಸೂಕ್ತ ರಾಜಕೀಯ ಪಕ್ಷಗಳಿಗೆ ನೀಡುವುದು ನಿಜವಾದ ದೇಶಭಕ್ತಿಯೂ ಆಗುತ್ತದೆ. ಜನಸಾಮಾನ್ಯರು ಮಾತ್ರವಲ್ಲ ಬದಲಾವಣೆ ಬಯಸುವ ಎಲ್ಲಾ ಉದ್ಯಮಿಗಳೂ, ವ್ಯಾಪಾರಿಗಳು ಆಮ್ ಆದ್ಮಿ ಪಕ್ಷಕ್ಕೆ ದೇಣಿಗೆ ನೀಡಲು ಮುಂದಾಗಬೇಕು ಮತ್ತು ಪಕ್ಷವನ್ನು ಸರಿಯಾದ ದಾರಿಯಲ್ಲಿ ನಡೆಸುವಲ್ಲಿ ಕಾಳಜಿ ವಹಿಸಬೇಕು. ಆಗ ಬದಲಾವಣೆ ಬಂದೇ ಬರುತ್ತದೆ.

    Reply

Leave a Reply

Your email address will not be published. Required fields are marked *