ವರ್ತಮಾನ.ಕಾಮ್‌ನ 2013 ಭೂತಕಾಲ


– ರವಿ ಕೃಷ್ಣಾರೆಡ್ಡಿ


 

2012 ಆರಂಭವಾದಾಗ ನಮ್ಮ ಆಶಾವಾದಗಳು ಆಕಾಶದಲ್ಲಿ ಹಾರುತ್ತಿದ್ದವು. ಆ ವರ್ಷದ ಆರಂಭದಲ್ಲಿ ನಾನು ಬರೆದ “2012 – ಪಲ್ಲಟಗಳ ವರ್ಷದಲ್ಲಿ ವರ್ತಮಾನ” ಎಂಬ ಲೇಖನದಲ್ಲಿ ಅದಕ್ಕೆ ಕಾರಣಗಳನ್ನು ನೀವು ಗುರುತಿಸಬಹುದು. ಹಾಗೆ ನೋಡಿದರೆ 2012 ರಲ್ಲಿ ಅಂತಹ ದೊಡ್ಡ ಬದಲಾವಣೆಗಳಾಗಲಿಲ್ಲ. ಆದರೆ ಮುಂದಿನ ವರ್ಷ, ಅಂದರೆ 2013 ರಲ್ಲಿ, ಈ ದೇಶ ಪಡೆದುಕೊಂಡ ತಿರುವುಗಳ ಬೀಜಗಳೆಲ್ಲ 2012 ರಲ್ಲಿ ಬಿತ್ತಲ್ಪಟ್ಟವು ಎನ್ನುವುದನ್ನು ನಾವು ಮರೆಯಬಾರದು.

2013 ಈ ದೇಶವಾಸಿಗಳಲ್ಲಿ ಹೊಸ ಹುಮ್ಮಸ್ಸನ್ನು, ಕನಸನ್ನು, ಧೈರ್ಯವನ್ನು, ನಗುವನ್ನು, (ಬಹುಶಃ ಒಂದಷ್ಟು ಭ್ರಮೆಗಳನ್ನೂ) ತುಂಬಿದೆ. ಆದರೆ ಕರ್ನಾಟಕದ ರಾಜಕೀಯದ ವಿಚಾರಕ್ಕೆ ಹೇಳುವುದಾದರೆ, ramya-siddaramaiahಭ್ರಷ್ಟ ಬಿಜೆಪಿ ವಿರುದ್ಧ ಭ್ರಷ್ಟ ಕಾಂಗ್ರೆಸ್ ಬಂದು ಕುಳಿತಿದೆ. ಒಂದೇ ಸಮಾಧಾನ ಎಂದರೆ ಸಿದ್ಧರಾಮಯ್ಯನವರು ಯಡ್ಡಯೂರಪ್ಪನವರಲ್ಲ ಎನ್ನುವುದು. ಆದರೆ ಸರ್ಕಾರ ಕೇವಲ ಸಿದ್ಧರಾಮಯ್ಯ ಅಲ್ಲ ಎನ್ನುವುದನ್ನು ನಾವು ನೆನಪಿಡಬೇಕು. 2014 ರ ಮೊದಲನೆಯ ದಿನವೇ ಈ ಸರ್ಕಾರ ಕಳಂಕಿತರನ್ನು, ಭ್ರಷ್ಟರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳ ಹೊರಟಿದೆ. ಭ್ರಷ್ಟ ಯಡ್ಡಯೂರಪ್ಪ ಭ್ರಷ್ಟ ಬಿಜೆಪಿಗೆ ಮರಳಲಿದ್ದಾರೆ. ಜೆಡಿಎಸ್ ಒಡೆಯಲು ಕಾಲ ದೂರವಿಲ್ಲ. (ಇಂತಹುದನ್ನೆಲ ಊಹಿಸಿಯೇ ನಾನು 2013 ರ ಬಗ್ಗೆ ವರ್ಷದ ಹಿಂದೆ “2013 – ಕರ್ನಾಟಕದಲ್ಲಿ ಮೌಲ್ಯಗಳು ಪಾತಾಳದ ತಳ ಕಾಣಲಿರುವ ವರ್ಷ…” ಲೇಖನ ಬರೆದದ್ದು.)

ದೆಹಲಿಯ ಜನತೆ ತಿಂಗಳ ಹಿಂದೆ ಮಾಡಿದ ಪವಾಡಸದೃಶ ಮಾದರಿಯ ಕಾರ್ಯದ ಹಿನ್ನೆಲೆಯಲ್ಲಿ ಹೇಳುವುದಾದರೆ, ಅಂತಹುದೇ ಪರ್ಯಾಯವೊಂದನ್ನು 2013 ರ ಮೊದಲಾರ್ಧದಲ್ಲಿ ಇಲ್ಲಿ ಕಟ್ಟಿಕೊಳ್ಳಲು ಸೋತ ಕರ್ನಾಟಕ 2014 ರ ನಂತರವಾದರೂ ಆ ನಿಟ್ಟಿನಲ್ಲಿ ನಡೆಯಲಿದೆಯೇ ಎನ್ನುವುದನ್ನು ನಾವು ನೋಡಬೇಕಿದೆ. ನೋಡುವುದಕ್ಕಿಂತ ಹೆಚ್ಚಾಗಿ ನಾವೇ ಸಾಧ್ಯ ಮಾಡಿಕೊಳ್ಳಬೇಕಿದೆ.

ಇಲ್ಲಿ ಒಂದು ವಿಷಯ ಹೇಳಿ ವರ್ತಮಾನ.ಕಾಮ್‌ನ ವಿಷಯಕ್ಕೆ ಬರುತ್ತೇನೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನ ಹಿಂದೆ ಅನೇಕ ಅಂಶಗಳು ಮತ್ತು ದೀರ್ಘಕಾಲದ ಹೋರಾಟಗಳಿವೆ. manishsisodia-yogendrayadav-arvindkejriwal-prashantbhushan“ಭ್ರಷ್ಟಾಚಾರದ ವಿರುದ್ಧ ಭಾರತ” ಹೋರಾಟದ ಹಿನ್ನೆಲೆ ಅದರ ನಾಯಕರಿಗಿತ್ತು. ಅರವಿಂದ್ ಕೇಜ್ರಿವಾಲ್ ಹತ್ತು ವರ್ಷಕ್ಕೂ ಮಿಗಿಲಾಗಿ “ಪರಿವರ್ತನ್” ಸಂಸ್ಥೆಯನ್ನು ನಡೆಸುತ್ತ, ಆಂದೋಳನಗಳನ್ನು ರೂಪಿಸುತ್ತ, ಭ್ರಷ್ಟಾಚಾರದ ವಿರುದ್ದ ಹೋರಾಡುತ್ತ ಬಂದವರು. ಪ್ರಶಾಂತ್ ಭೂಷಣ್ ಸುಪ್ರೀಮ್‌ಕೋರ್ಟ್‌ನ ಹೆಸರಾಂತ ನ್ಯಾಯವಾದಿ ಮತ್ತು ಜನಪರ ಹೋರಾಟಗಾರ. ನಮ್ಮ ರಾಜ್ಯದ ಹಿರೇಮಠರು ನಡೆಸುತ್ತಿರುವ ಅನೇಕ ಮೊಕದ್ದಮೆಗಳನ್ನು ಇವರು ಉಚಿತವಾಗಿ ವಾದಿಸಿ ನಡೆಸಿಕೊಡುತ್ತಿದ್ದಾರೆ. ಯೋಗೇಂದ್ರ ಯಾದವ್ ದೇಶದ ಪ್ರಜ್ಞಾವಂತರ ನಂಬಿಕೆ ಉಳಿಸಿಕೊಂಡಿರುವ ಬದ್ಧತೆಯುಳ್ಳ ಚಿಂತಕ. ಮನೀಷ್ ಸಿಸೋಡಿಯ ಮತ್ತು ಶಜಿಯಾ ಇಲ್ಮಿ ಪತ್ರಕರ್ತರಾಗಿ ಹೆಸರಾದವರು. ಕುಮಾರ್ ವಿಶ್ವಾಸ್ ಹಿಂದಿಯ ಯುವತಲೆಮಾರಿನ ಹೆಸರಾಂತ ಕವಿ. ಇವರೆಲ್ಲರ ಜೊತೆಗೆ ಲಕ್ಷಾಂತರ ಜನರ ನಿಸ್ವಾರ್ಥ ಶ್ರಮ, ಮತ್ತು ದೇಶವಿದೇಶಗಳಲ್ಲಿಯ ಲಕ್ಷಾಂತರ ಜನರ ಧನಸಹಾಯ ದೆಹಲಿಯಲ್ಲಿ ಆ ಪಕ್ಷವನ್ನು ಎರಡನೆ ಅತಿದೊಡ್ಡ ಪಕ್ಷವಾಗಿಸಿತು. ಕರ್ನಾಟಕದಲ್ಲಿ ಆ ತರಹದ ವಾತಾವರಣವಿದೆಯೆ? ಸಂಗಯ್ಯ ಹಿರೇಮಠರು ಖಂಡಿತವಾಗಿ ಕೇಜ್ರಿವಾಲರಿಗಿಂತ ಹಿರಿಯರು ಮತ್ತು ಇತಿಹಾಸ ಹೊಂದಿರುವವರು. sr-hiremathಅವರನ್ನು ಬಿಟ್ಟರೆ ಮೇಲಿನ ಜನಕ್ಕೆ ಹೋಲಿಸಲು ಕರ್ನಾಟಕದಲ್ಲಿ ಯಾರಿದ್ದಾರೆ? ನಮ್ಮ ರಾಜ್ಯದ ಯಾವ ನ್ಯಾಯವಾದಿಯನ್ನು ನಾವು ಪ್ರಶಾಂತ್ ಭೂಷಣರಿಗೆ ಹೋಲಿಸೋಣ? ಯಾವ ವಿಶ್ವವಿದ್ಯಾಲಯದ ಪ್ರೊಫೆಸರ್ ಅನ್ನು ಯೋಗೇಂದ್ರ ಯಾದವರಿಗೆ ಹೋಲಿಸೋಣ? ಯಾವ ಪತ್ರಕರ್ತರನ್ನು ಸಿಸೋಡಿಯ ಮತ್ತು ಇಲ್ಮಿಗೆ ಹೋಲಿಸೋಣ? ಯಾವ ಕವಿ-ಸಾಹಿತಿಯಲ್ಲಿ ಕುಮಾರ್ ವಿಶ್ವಾಸನನ್ನು ಕಾಣೋಣ? ಅಂತಹ ವ್ಯಕ್ತಿಗಳು ಇರಬಹುದು ಮತ್ತು ಇದ್ದಾರೆ. ಆದರೆ ಅವರ್‍ಯಾರಿಗೂ ಈ ಹೋರಾಟಗಳು ಬೇಕಿಲ್ಲ. ಜನರೇನೋ ಸಿದ್ಧವಿದ್ದಾರೆ. ಆದರೆ ಜನರ ಮುಂದೆ ಅಗತ್ಯ ವಿಚಾರಗಳನ್ನು ಪ್ರತಿಪಾದಿಸಬಲ್ಲ, ನೆಲದ ಮೇಲೆ ಮಲಗಲು, ದೈಹಿಕ ಶ್ರಮ ಹಾಕಲು, ಹಗಲು-ರಾತ್ರಿ ಹೋರಾಡಲು, ಪೋಲಿಸರಿಂದ ಬಂಧನಕ್ಕೊಳಗಾಗಲು, ಗೆಲುವಿಗಿಂತ ಮೊದಲು ಸೋಲಲು, ಗೌರವ ಪಡೆಯುವುದಕ್ಕಿಂತ ಮೊದಲು ವಿನಾಕಾರಣ ಅವಮಾನಕ್ಕೊಳಗಾಗಲು ಸಿದ್ಧವಿರುವವರು ಕರ್ನಾಟಕದಲ್ಲಿ ಎಲ್ಲಿದ್ದಾರೆ, ಎಷ್ಟಿದ್ದಾರೆ? ಕರ್ನಾಟಕ ಅಂತಹವರನ್ನು ಕಂಡುಕೊಂಡ ದಿನ ಇಲ್ಲಿಯೂ ಬದಲಾವಣೆಯ ಪರ್ವ ಆರಂಭವಾಗುತ್ತದೆ. (ಆದರೆ ಅದಕ್ಕಿಂತ ಮೊದಲೇ ಅಧಿಕಾರದ ಹಪಾಹಪಿಯ, ಹಸುವಿನ ವೇಷದಲ್ಲಿರುವ ಹುಲಿಗಳು, ಜನಪರ ಕಾಳಜಿಗಳಿಲ್ಲದಿದ್ದರೂ ಸಹ ಒಳ್ಳೆಯವರು, ಯೋಗ್ಯರು ಎಂದು ಮಾಧ್ಯಮಗಳ ಮೂಲಕ ಬಿಂಬಿಸಿಕೊಳ್ಳಬಲ್ಲ ತಾಕತ್ತಿರುವ ಸ್ವಕೇಂದ್ರಿತ ವ್ಯಕ್ತಿಗಳು ಈಗಾಗಲೆ ಮುನ್ನೆಲೆಗೆ ಬರಲು ಸಿದ್ಧವಾಗುತ್ತಿರುವ ಮಾಹಿತಿ ಇದೆ. ಇದೇನಾದರೂ ಆದರೆ ಕರ್ನಾಟಕ ಆ ಅವಕಾಶವನ್ನೂ ಕಳೆದುಕೊಳ್ಳುತ್ತದೆ.)

ವರ್ತಮಾನ.ಕಾಮ್‌ಗೂ 2013 ಪ್ರಮುಖ ವರ್ಷವೇ. ನಾನು ಚುನಾವಣೆಗೆ ಸ್ಪರ್ಧಿಸಿದ ಕಾರಣವಾಗಿ ಇದು ಒಂದೆರಡು ತಿಂಗಳು ಸೊರಗಿದ್ದು ನಿಜ. ಆದರೆ ನಮ್ಮ ಬಳಗದ ಪ್ರಯತ್ನ ಅದನ್ನು ನಿಲ್ಲಲು ಬಿಡಲಿಲ್ಲ. courtesy-announcementಸಾಮುದಾಯಿಕ ಪ್ರಯತ್ನ ಒಬ್ಬ ವ್ಯಕ್ತಿಯ ಮೇಲೆ ನಿಂತಿಲ್ಲ. ಮೊದಲಿನಿಂದ ನಮ್ಮ ಜೊತೆಗಿದ್ದ ಕೆಲವು ಲೇಖಕರು ಈ ವರ್ಷ ಬರೆಯುವುದನ್ನು ನಿಲ್ಲಿಸಿದರು ಇಲ್ಲವೇ ಕಡಿಮೆ ಮಾಡಿದರು. ಹಲವರಿಗೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾದದ್ದು ಮುಖ್ಯ ಕಾರಣ. ಇನ್ನು ಕೆಲವರು ಯಾಕೆ ನಿಲ್ಲಿಸಿದರು ಎಂದು ಅವರು ಹೇಳಲಿಲ್ಲ, ನಾನು ಕೇಳಲಿಲ್ಲ. ಆದರೆ, ಅಷ್ಟೇ ಸಂಖ್ಯೆಯಲ್ಲಿ ಹೊಸಬರು ಬಂದರು. ಇನ್ನೂ ಹೆಚ್ಚಿನ ಬದ್ದತೆಯಿಂದ ಕೆಲವರು ಬರವಣಿಗೆಯನ್ನು ಹೆಚ್ಚು ಮಾಡಿದರು. ಕಳೆದ ವರ್ಷದ ಕೊನೆಯ ಮೂರು ತಿಂಗಳಿನಲ್ಲಿ ಹಿಂದಿನ ಎಲ್ಲಾ ತಿಂಗಳುಗಳಿಗಿಂತ ಹೆಚ್ಚಿನ ವ್ಯಾಪ್ತಿಯನ್ನು ವರ್ತಮಾನ.ಕಾಮ್ ಪಡೆದುಕೊಂಡಿತು. ಇದರಲ್ಲಿ ನಮ್ಮಲ್ಲಿ ಇಲ್ಲಿಯವರೆಗೆ ಒಂದೇ ಒಂದು ಲೇಖನವನ್ನು ಬರೆದವರಿಂದ ಹಿಡಿದು, ಓದುಗರು, ಪ್ರತಿಕ್ರಿಯಿಸಿದವರು, ಫೇಸ್‌ಬುಕ್‌ನಲ್ಲಿ ಲೈಕ್/ಷೇರ್ ಮಾಡಿದವರು, ಹೀಗೆ ಎಲ್ಲರ ಪಾಲೂ ಇದೆ.

ಹಾಗೆಯೇ ವರ್ತಮಾನ.ಕಾಮ್ ಬಳಗ “ದಲಿತರು ಮತ್ತು ಉದ್ಯಮಶೀಲತೆ” ವಿಚಾರವಾಗಿ dalit-entrepreneurship-16ಹಾಸನದಲ್ಲಿ ಮತ್ತು ತುಮಕೂರಿನಲ್ಲಿ ಎರಡು ಕಾರ್ಯಕ್ರಮಗಳನ್ನು ಹಾಕಿಕೊಂಡಿತ್ತು. ಈ ಕಾರ್ಯಕ್ರಮಗಳು ಅನೇಕ ಕಡೆ ಹೇಗೆ ಸಕಾರಾತ್ಮಕವಾಗಿ ಪ್ರತಿಫಲಿಸುತ್ತಿವೆ ಮತ್ತು ಕೆಲವರನ್ನು ಹೇಗೆ ಕ್ರಿಯಾಶೀಲಗೊಳಿಸುತ್ತಿದೆ ಎಂದು ನನಗೆ ಮತ್ತು ನಮ್ಮ ಬಳಗದ ಶ್ರೀಪಾದ ಭಟ್ಟರ ಅರಿವಿಗೆ ಬಂದಿದೆ ಮತ್ತು ಅದು ನಮಗೆ ತೃಪ್ತಿಯನ್ನೂ ಕೊಟ್ಟಿದೆ. ಇದರ ಜೊತೆಗೆ ಹಾಸನದಲ್ಲಿ ನಡೆದ “ನಾವು-ನಮ್ಮಲ್ಲಿ” ಮತ್ತು ಮಂಗಳೂರಿನಲ್ಲಿ ನಡೆದ “ಜನ-ನುಡಿ” ಕಾರ್ಯಕ್ರಮಗಳನ್ನೂ ವರ್ತಮಾನ.ಕಾಮ್ ಬೆಂಬಲಿಸಿತ್ತು.

ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ಗೆ ಬೀಳುವ ನನ್ನ ಶ್ರಮದ ಬಗ್ಗೆಯೂ ಒಂದು ಮಾತು. ಈಗ್ಗೆ ಸುಮಾರು ಒಂದು ವರ್ಷದಿಂದ-ಚುನಾವಣೆಯ ಸಂದರ್ಭ ಹೊರತುಪಡಿಸಿ- ನಮ್ಮಲ್ಲಿ ಬರುವ ಎಲ್ಲಾ ಲೇಖನಗಳನ್ನು ಯೂನಿಕೋಡ್‌ಗೆ ಪರಿವರ್ತಿಸಿ, ವ್ಯಾಕರಣ ಮತ್ತು ಕಾಗುಣಿತಗಳನ್ನು ಪರಿಷ್ಕರಿಸಿ, ಸೂಕ್ತ ಫೋಟೋಗಳನ್ನು ಆಯ್ದು, ಪುಟವಿನ್ಯಾಸ ಮಾಡಿ, ಪೋಸ್ಟ್ ಮಾಡುವ ಕೆಲಸವನ್ನು ನಾನೇ ಮಾಡುತ್ತಿದ್ದೇನೆ. ನನ್ನ ಎಚ್ಚರದ ಸ್ಥಿತಿಯ ಸರಾಸರಿ vartamaana-2-years-smallಶೇ.10-15 ಭಾಗ ವರ್ತಮಾನ.ಕಾಮ್‌ಗೇ ಪ್ರತಿದಿನ ವಿನಿಯೋಗವಾಗುತ್ತಿದೆ. ಇದನ್ನೇ ನಾನು ಪ್ರತಿದಿನವೂ ಮಾಡಲಾಗುವುದಿಲ್ಲ. ಈ ಮೊದಲು ಇದೇ ಕೆಲಸಕ್ಕೆ ಒಬ್ಬರನ್ನು ನೇಮಿಸಿಕೊಂಡಿದ್ದೆ. ವರ್ಷದಿಂದ ಆ ಸಹಾಯವೂ ಇಲ್ಲ. ನಮ್ಮ ಬಳಗದ ಇಬ್ಬರು-ಮೂವರು ಮೊದಲ ವರ್ಷ ಈ ಕೆಲಸವನ್ನು ಹಂಚಿಕೊಂಡು ಮಾಡುತ್ತಿದ್ದರು. ಅದರಲ್ಲಿ ಕೆಲವರಿಗೆ ಈ ಒಂದು ವರ್ಷದಿಂದ ಕೆಲವು ಗಂಭೀರ ವೈಯಕ್ತಿಕ-ತಾಂತ್ರಿಕ-ನೌಕರಿ ಸಂಬಂಧಿತ ಸಮಸ್ಯೆಗಳಿಂದಾಗಿ ಈ ಕೆಲಸವನ್ನು ಹಂಚಿಕೊಳ್ಳಲಾಗುತ್ತಿಲ್ಲ. ನನಗೂ ಸಹ ಮುಂದಿನ ದಿನಗಳಲ್ಲಿ ಇಷ್ಟೆಲ್ಲ ಸಮಯವನ್ನು ವಿನಿಯೋಗಿಸಲು ಆಗುವುದಿಲ್ಲ. ಹಾಗೆಂದು ವರ್ತಮಾನ.ಕಾಮ್‌ ಯಾವುದೇ ರೀತಿಯಲ್ಲಿ ನಿಧಾನಗೊಳ್ಳುವ ಪ್ರಮೇಯವೇ ಇಲ್ಲ. ಇಲ್ಲಾ ಸಹಾಯಕ್ಕೆ ಯಾರನ್ನಾದರೂ ನೇಮಿಸಿಕೊಳ್ಳಲಾಗುವುದು, ಇಲ್ಲದಿದ್ದರೆ ಬಳಗವನ್ನು ವಿಸ್ತರಿಸಲಾಗುವುದು. ಬರಹ/ನುಡಿಯನ್ನು ಯೂನಿಕೋಡ್‌ಗೆ ಬದಲಾಯಿಸಲು ಗೊತ್ತಿರುವ ಮತ್ತು ಒಂದು ಬ್ಲಾಗ್ ಪೋಸ್ಟ್ ಮಾಡುವುದು ಹೇಗೆಂದು ಗೊತ್ತಿರುವ ಯಾರಾದರೂ ಈ ಕೆಲಸ ಹಂಚಿಕೊಳ್ಳಲು ಅರ್ಹರು. ವಾರಕ್ಕೆ ಒಂದೆರಡು ದಿನ, ಕನಿಷ್ಟ ಒಂದು ಗಂಟೆ ವರ್ತಮಾನ.ಕಾಮ್‌ಗೆ ಕೊಡಬಲ್ಲವರು ಮುಂದೆ ಬಂದರೆ ಸಹಾಯವಾದೀತು. ಸಂಪರ್ಕಿಸುವುದು ಹೇಗೆಂದು ನಿಮಗೆ ಗೊತ್ತು.

ಕೊನೆಯದಾಗಿ, ನಾನು ಎರಡು ವರ್ಷದ ಹಿಂದೆ, 2002 ರ ಆರಂಭದ ಲೇಖನದಲ್ಲಿ ಬರೆದಿದ್ದ ಈ ಕೊನೆಯ ಪ್ಯಾರಾ ಇವತ್ತಿಗೂ ಸೂಕ್ತವಾಗಿದೆ ಎಂದು ಭಾವಿಸಿ ಅದರೊಂದಿಗೆ ಕೊನೆ ಮಾಡುತ್ತೇನೆ.

“ನಾನು ಇತ್ತೀಚೆಗೆ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಒಂದು ಮಾತು ಹೇಳಿದ್ದೆ: ‘ಚೆನ್ನಾಗಿರುವ ಒಂದು ಉತ್ತಮ ಎನ್ನಬಹುದಾದ ವ್ಯವಸ್ಥೆಯಲ್ಲಿ ನನಗೆ ಪಾತ್ರವಿಲ್ಲದಿದ್ದರೂ ಚಿಂತೆಯಿಲ್ಲ, ಆದರೆ ಕೆಟ್ಟದರ ಭಾಗವಾಗಿ ಮಾತ್ರ ಇರಲಾರೆ.’ ಬಹುಶಃ ನಮ್ಮ ಅನೇಕ ಸಮಾನಮನಸ್ಕರ ಯೋಚನೆಯೂ ಹೀಗೇ ಇರಬಹುದು. ನಾವು ಕೆಟ್ಟ ಸಂದರ್ಭವೊಂದರಲ್ಲಿ ಅಥವ ಸ್ಥಿತ್ಯಂತರದ ಸಂದರ್ಭದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ತುಡಿತಗಳು, ಆಕ್ರೋಶಗಳು, ಚಟುವಟಿಕೆಗಳು ಕೆಟ್ಟದರ ವಿರುದ್ದ, ಮತ್ತು ಹಾಗೆ ಇರುವುದನ್ನು ಸರಿಪಡಿಸಿಕೊಳ್ಳುವ ಸುತ್ತಲೂ ಇವೆ. ಆದರೆ ಅದು ಮಾತಿನಲ್ಲಿ ಮುಗಿಯದೆ ಕೃತಿಗೆ ಇಳಿಯಬೇಕು. ಆ ನಿಟ್ಟಿನಲ್ಲಿ ಈ ವರ್ಷ ವರ್ತಮಾನ.ಕಾಮ್ ಮೂಲಕ ಅಥವ ನಮ್ಮ ಇತರೆ ಪ್ರಯತ್ನಗಳ ಮೂಲಕ ನಾವೆಲ್ಲಾ ಯತ್ನಿಸೋಣ. ನಮ್ಮ ಪ್ರಯತ್ನಕ್ಕೆ ಬೆಂಬಲ ಸೂಚಿಸಿರುವ, ಒಲವಿರುವ ಎಲ್ಲಾ ಮಿತ್ರರಲ್ಲಿ ಒಂದು ಮನವಿ: ಬೇಲಿಯ ಮೇಲೆ ಕುಳಿತಿರುವ ಮತ್ತು ಬೇಲಿಯ ಹೊರಗಿನಿಂದಲೇ ನಿಂತು ನೋಡುತ್ತಿರುವ ಸ್ನೇಹಿತರೇ, ದಯವಿಟ್ಟು ಒಳಬನ್ನಿ; ಪಾಲ್ಗೊಳ್ಳಿ. ಈ ಮೂಲಕ ನಮ್ಮ ಚಿಂತನೆಗಳನ್ನು, ಕ್ರಿಯೆಗಳನ್ನು, ಬದ್ಧತೆಗಳನ್ನು ಪಕ್ವಗೊಳಿಸಿಕೊಳ್ಳುತ್ತ, ಗಟ್ಟಿಗೊಳಿಸಿಕೊಳ್ಳುತ್ತ ಹೋಗೋಣ. ಹೋಗಲೇ ಬೇಕಾದಾಗ ಹೊರಹೋಗುವುದು ಇದ್ದೇ ಇರುತ್ತದೆ. ಈ ವರ್ಷ ಬಹಳ ಮುಖ್ಯವಾದ ವರ್ಷವಾಗುವ ಎಲ್ಲಾ ಸೂಚನೆಗಳೂ ಇವೆ. ಇಂತಹ ಸಂದರ್ಭದಲ್ಲಿ ದೇಶ ಮತ್ತು ಕಾಲ ನಮ್ಮ ಮಾತು ಮತ್ತು ಕೃತಿ ಎರಡನ್ನೂ ಕೇಳುತ್ತದೆ. ಅಲ್ಲವೇ?”

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

2 thoughts on “ವರ್ತಮಾನ.ಕಾಮ್‌ನ 2013 ಭೂತಕಾಲ

  1. Nanjunda nayak, mysore

    ಪ್ರೀತಿಯ ರವಿಕೃಷ್ಣ ರೆಡ್ಡಿ ಅವರೇ,
    ನಿರಾಶೆ ಬೇಕಿಲ್ಲ. ನೀವು ಮನಸ್ಸು ಮಾಡಿದರೆ, ಕರ್ನಾಟಕದ ಕೇಜ್ರಿವಾಲ್ ಅಗಬಹುದು. ಇಲ್ಲಿಯೂ ಪ್ರಶಾಂತ್ ಭೂಷಣ, ಯೋಗೇಂದ್ರ ಯಾದವ್ ಸೇರಿದಂತೆ ಎಲ್ಲ ರೀತಿಯ ಪಾತ್ರಗಳು ಇವೆ. ಆದರೆ, ಇದು ಕೈಗೂಡಬೇಕೆಂದರೆ- ಮೊದಲು ನಿಮ್ಮ ಸಿದ್ಧಾಂತ ಹಾಗೂ ಧೋರಣೆ ಬದಲಾಗಬೇಕು. ಕೇಜ್ರಿವಾಲ್ ಭ್ರಷ್ಟಾಚಾರವನ್ನಷ್ಟೇ ವಿರೋಧಿಸಿದರು. ಅದನ್ನು ಮಾಡುತ್ತಿರುವವರು ಕಾಂಗ್ರೆಸ್ಸಿಗರೇ, ಬಿಜೆಪಿಯವರೇ, ಆರ್ಎಸ್ ಎಸ್ ನವರೇ, ಡಿಎಸ್ ಎಸ್ ನವರೇ ಎಂದು ಕನ್ನಡಕ ಹಾಕಿ ನೋಡಿ, ಹೋರಾಟವನ್ನು ಕೈಗೆತ್ತಿಕೊಳ್ಳಲಿಲ್ಲ. ಈ ಒಂದು ವಿಷಯವಲ್ಲ. ಸಾರ್ವಜನಿಕವಾಗಿ ಅವರು ಎತ್ತಿಕೊಂಡ ಬಹಳಷ್ಟು ಸಂಗತಿಗಳು ಅದೇ ರೀತಿ ಇದ್ದವು. ಆದರೆ, ಕರ್ನಾಟಕದ ಚಳವಳಿಗಳ ಹಣೆಬರಹ(ನಿಮ್ಮದು ಸೇರಿದಂತೆ) ನೋಡಿ. ಇಲ್ಲಿ ಜಾತ್ಯತೀತರು ಕೂಡ ಜಾತಿಯನ್ನಷ್ಟೇ ನೋಡಿ- ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಜಾತ್ಯತೀತರೇ ಒಂದು ರೀತಿಯ ಮೂಲಭೂತವಾದಿಗಳಾಗಿದ್ದರೆ. ಇದು ಕೋಮುವಾದದಷ್ಟೇ ಅಪಾಯಕಾರಿ. ಕೇಜ್ರಿವಾಲ್ ಗೆದ್ದಿದ್ದಾರೆ ಎಂಬ ಕಾರಣಕ್ಕೆ ನಿಮ್ಮ ಸಂಗಾತಿಗಳು, ಅವರನ್ನು ಹೊಗಳುತ್ತಿದ್ದಾರೆ. ಇಲ್ಲದಿದ್ದರೆ, ಕೇಜ್ರಿವಾಲ್ ಒಬ್ಬ ಬ್ರಾಹ್ಮಣ, ನಗರ ವಾಸಿಗಳ ಹೀರೋ, ಮಧ್ಯಮ ವರ್ಗದ ಪ್ರತಿನಿಧಿ- ಎಂದು ಕಥೆ ಕಟ್ಟಿ, ಸೋಲಿಗೆ ಈ ಎಲ್ಲ ವರ್ಗಗಳನ್ನೇ ಗುರಿ ಮಾಡುತ್ತಿದ್ದರು.
    ಕೇಜ್ರಿವಾಲ್ ಎಲ್ಲರನ್ನೂ ಒಳಗೊಂಡಂತೆ ಚಳವಳಿ ನಡೆಸಿದರೆ ವಿನಹ, ಯಾರನ್ನೂ ದೂರವಿಡಲಿಲ್ಲ. ನಮ್ಮಲ್ಲಿ ಡಿಎಸ್ ಎಸ್, ರೈತ ಹಾಗೂ ಎಲ್ಲ ಪ್ರಗತಿಪರ ಸಂಘಟನೆಗಳು ಹೆಸರಿಗಷ್ಟೇ ಜಾತ್ಯತೀತವಾಗಿರುತ್ತವೆ. . ಉಳಿದಂತೆ ಅವುಗಳ ಒಂದಂಶದ ಕಾರ್ಯಕ್ರಮ- ಅರ್ ಎಸ್ ಎಸ್ ಟೀಕಿಸುವ ನೆಪದಲ್ಲಿ ಇಡೀ ಮೇಲ್ಜಾತಿಗಳನ್ನು ಬೈಯುವುದೇ ಆಗಿರುತ್ತದೆ. ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ತರುವಾಯ, ಕೆಲವು ಬುದ್ಧಿಜೀವಿಗಳು ಏಜೆನ್ಸಿ ಶುರು ಮಾಡಿದ್ದಾರೆ. ಜಾತ್ಯತೀತರು ಯಾರು ? ಯಾರಲ್ಲ ? ಯಾರು ಯಾವ ಸಮಾರಂಭಕ್ಕೆ ಹೋಗಬಾರದು, ಯಾವ ಸಮಾರಂಭಕ್ಕೆ ಹೋಗಬೇಕು ?- ಎಂದು ಪ್ರಮಾಣ ಪತ್ರ ನೀಡುವುದು ಆ ಏಜೆನ್ಸಿಯ ಕೆಲಸವಾಗಿದೆ.
    ಮೊದಲು ಇಂಥಾ ಅತಿರೇಕಗಳಿಂದ ಹೊರಬನ್ನಿ. ಬಡವರು ಮಾತ್ರವಲ್ಲ, ಮಧ್ಯಮ ಹಾಗೂ ಶ್ರೀಮಂತರು ಸೇರಿದಂತೆ ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನು ಚಳವಳಿಯ ನೀತಿಯಾಗಿಸಿಕೊಳ್ಳಿ. ಆಗ ಕರ್ನಾಟಕದಲ್ಲೂ ಪವಾಡ ಸಂಭವಿಸಬುಹದೇನೋ…

    – ನಿಮ್ಮ ಅಭಿಮಾನಿ

    Reply
  2. ashok k r

    “ಮೊದಲಿನಿಂದ ನಮ್ಮ ಜೊತೆಗಿದ್ದ ಕೆಲವು ಲೇಖಕರು ಈ ವರ್ಷ ಬರೆಯುವುದನ್ನು ನಿಲ್ಲಿಸಿದರು ಇಲ್ಲವೇ ಕಡಿಮೆ ಮಾಡಿದರು.”
    ಮದುವೆ ಫಿಲಮ್ಮು ಫೋಟೋಗ್ರಫಿ ಫೋಟೋಗ್ರಫಿ ಬೇಡುವ ಸಮಯ ಮತ್ತೆಲ್ಲಕ್ಕಿಂತ ಹೆಚ್ಚಾಗಿ ಸೋಮಾರಿತನ ಒಂದಷ್ಟು ಸಿನಿಕತನ (ಬರೆದು ಏನ್ ಮಾಡ್ಬೇಕು) ಒಟ್ಟಿನಲ್ಲಿ 2013ರಲ್ಲಿ ವರ್ತಮಾನಕ್ಕೆ ಬರೆದಿದ್ದು ತುಂಬಾನೇ ಕಡಿಮೆ…. ಈ ವರುಷ ಹೋದ ವರುಷದಂತಿರದೆ ಒಂದಷ್ಟು ಬರೀತೀನಿ!

    Reply

Leave a Reply

Your email address will not be published. Required fields are marked *