Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಸಾಹಿತ್ಯಕ ರಾಜಕಾರಣ ಮತ್ತು ಋಣಸಂದಾಯದ ಸಮಾಧಾನ


– ಡಾ.ಎಸ್.ಬಿ. ಜೋಗುರ


 

ಹಿಂದೊಮ್ಮೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜಕೀಯ ನಾಯಕರೊಬ್ಬರು ಸಾಹಿತ್ಯಕ ವಲಯದಲ್ಲಿಯ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಮಾತನಾಡುತ್ತಾ ರಾಜಕೀಯದಲ್ಲಿದ್ದುಕೊಂಡು ನಾವು ಮಾಡುವ ರಾಜಕಾರಣ ನಿಮ್ಮ ಮುಂದೆ ಏನೂ ಅಲ್ಲ, ನಿಜವಾದ ರಾಜಕಾರಣಿಗಳನ್ನು ಮೀರಿಸುವಂಥಾ ರಾಜಕಾರಣಿಗಳು ನೀವು ಎಂದು ನೇರವಾಗಿ ಮುಖಕ್ಕೆ ರಾಚುವಂತೆ ಹೇಳಿದ್ದರು. ಆ ತುಂಬಿದ ಸಭೆಯಲ್ಲಿದ್ದವರೆಲಾ ಬಹುತೇಕವಾಗಿ ಸಾಹಿತಿಗಳೇ..

ಆ ರಾಜಕಾರಣಿ ಹೇಳಿದ್ದರಲ್ಲಿ ಒಂದರ್ಥವಿದೆ. ನಮ್ಮ ಸಾಹಿತಿಗಳು ಆಡುವ ಆಟಗಳು, ಮಾಡುವ ಮಾಟಗಳು, ಮಾತನಾಡುವ ರೀತಿ, ಬದುಕುವ ಕ್ರಮ, ತೋರುವ ಗತ್ತು ಇವೆಲ್ಲವುಗಳನ್ನು ನೋಡಿದಾಗ ಖಂಡಿತ ಇವರು ಯಾವ ರಾಜಕಾರಣಿಗಳಿಗೂ ಕಡಿಮೆಯಿಲ್ಲ. ಇನ್ನು ಕೆಲವು ಸಾಹಿತಿಗಳು ಬದುಕಿನಿಂದ ವಿಮುಖವಾಗಿ Enaradaಬರವಣಿಗೆಯನ್ನು ಮಾಡುವವರು. ಹೇಗೆ ಬದುಕಿದರೇನು..? ಬರವಣಿಗೆ ಮಾತ್ರ ಚೆಂದಾಗಿದೆಯಲ್ಲ? ಎನ್ನುವ ವೇಷಧಾರಿಗಳಿವರು. ಎಲ್ಲಾದರೂ ಒಂದು ಸಮ್ಮೇಳನ ನಡೆಯುತ್ತದೆ ಎಂದರೆ ಸಾಕು ಇವರ ನಿಜವಾದ ರಾಜಕಾರಣ ಬೆತ್ತಲಾಗಿ ಬೆಕ್ಕಸ ಬೆರಗಾಗುವಂಗೆ ಮಾಡಿ ಬಿಡುತ್ತದೆ. ನನಗೆ ಗೊತ್ತಿರುವ ಕವಿತೆ ಗೀಚುವ ಖಯಾಲಿಯಿರುವ ಕೆಲ ಪುಡಿ ಸಾಹಿತಿಗಳು, ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧ್ಯಕ್ಷರ ಬಾಲ ಬಡಿದು ಗೋಷ್ಟಿಯಲ್ಲಿ ತಮ್ಮ ಹೆಸರನ್ನು ಹಾಕಿಸಿಕೊಂಡು ನಂತರ ಅತ್ಯಂತ ಬಿಗುಮಾನದಿಂದ ನನಗೂ ದಸರಾ ಕವಿಗೋಷ್ಟಿಗೆ ಬುಲಾವ್ ಬಂದಿದೆ, ಸಮ್ಮೇಳನಕ್ಕೆ ಕರೆ ಬಂದಿದೆ ಎಂದು ಬೀಗುವದನ್ನು ಕೇಳಿ ಹೇಸಿಕೆಯೆನಿಸುತ್ತಿತ್ತು. ನಿಜವಾಗಿಯೂ ಕಾವ್ಯ ಕ್ಷೇತ್ರದ ಹಿರಿಮೆಯಾಗಿರುವ ಒಬ್ಬಾತನ ಹಕ್ಕನ್ನು ಈತ ಲಾಬಿ ಮಾಡಿ ಕಸಿದು ಕೊಂಡಿರುವ ಬಗ್ಗೆ ಅಸಹ್ಯ ಎನಿಸುತ್ತಿತ್ತು. ಇಂಥವರು ಹೇಗಾದರೂ ಮಾಡಿ ಬೆಳೆಯಬೇಕು, ಬಲಿಯಬೇಕು ಎಂದು ಸದಾ ಚಡಪಡಿಸುತ್ತಿರುತ್ತಾರೆ. ಇಂಥವರು ಒಂದು ಸಾರಿ ಬೆಳೆದರೆ ತೀರಿತು, ಆಲದ ಗಿಡದಂತೆ ಇವರ ನೆರಳಲ್ಲಿ ಹುಲ್ಲು ಕಡ್ದಿಯೂ ಬೆಳೆಯುವಂತಿಲ್ಲ. ಪ್ರತಿಯೊಂದರಲ್ಲಿಯೂ ದೇಶಾವರಿ ರಾಜಕಾರಣ ಮಾಡುವ ಇವರು ಸಾಹಿತ್ಯಕ ವಲಯಕ್ಕೆ ಒಂದು ದೊಡ್ಡ ಶಾಪ. ಇವರು ಕತೆ, ಕವಿತೆ, ಕಾದಂಬರಿ, ವಿಮರ್ಶೆ, ನಾಟಕ ಎಲ್ಲವನ್ನೂ ಬರೆಯಬಲ್ಲರು ಆದ್ಸರೆ ಯಾವುದನ್ನೂ ಬರೆಯಲಾರರು. ಇವರ ಪ್ರಮಾಣ ಈಗೀಗ ಸಾಹಿತ್ಯಕ ವಲಯದಲ್ಲಿ ಹೆಚ್ಚಾಗುತ್ತಿದೆ. ಇಂಥವರ ಮಾತುಗಳು ಮಾತ್ರ ಭರವಸೆ ಮೂಡಿಸುತ್ತವಾದರೂ ಆ ಮಾತಿಗೆ ವ್ಯತಿರಿಕ್ತವಾಗಿ ಇವರು ಸಾಹಿತ್ಯ ರಚಿಸುತ್ತಾರೆ ಎನ್ನುವುದೇ ಭಯಂಕರವಾದ ಸತ್ಯ. ಅಷ್ಟಕ್ಕೂ ಬರೆದಂಗೆ ಬದುಕಬೇಕು ಅನ್ನೋ ಸಿದ್ಧಾಂತ ಎಲ್ಲಿದೆರಿ..? ಅನ್ನೋ ಇವರು ಅದ್ಯಾವ ನಮೂನೆಯ ವ್ಯಕ್ತಿತ್ವವೋ ನಾನರಿಯೆ.

ಈಗೀಗ ಕೆಲ ಯುವ ಸಾಹಿತಿಗಳಲ್ಲಿ ಗುಂಪುಗಾರಿಕೆಯ ರೋಗ ಶುರುವಾಗಿದೆ. ಅದರಲ್ಲಿ ಅತಿ ಮುಖ್ಯವಾಗಿ ಜಾತಿ ಪ್ರಾಧಾನ್ಯತೆಯ ಗುಂಪು. ಇದು ಒಂದು ನಿರ್ದಿಷ್ಟ ಜಾತಿ-ಉಪಜಾತಿಯವರಿಂದಲೇ ಸುತ್ತುವರೆದಿರುವ ಗುಂಪು ಇಲ್ಲಿ ಬರೆಯಲು ಬಾರದವನೂ ಸ್ವಜಾತಿ ಬಂಧುಗಳ ಅನುಕಂಪ ಗಿಟ್ಟಿಸಿ ರಾತ್ರೋರಾತ್ರಿ ಕವಿಯಾಗಬಲ್ಲ. ಇದೊಂಥರಾ ಋಣ ಸಂದಾಯದ ಸ್ಕೀಮಿನ ಹಾಗೆ ಆರಂಭವಾಗುವ ಸಾಹಿತ್ಯಕ ಚಟುವಟಿಕೆ. ಒಮ್ಮೆ ನೀನು ಇನ್ನೊಮ್ಮೆ ನಾನು ಮತ್ತೊಮ್ಮೆ ಅವನು ಇಲ್ಲಿ ಅವರ್ನ್ ಬಿಟ್ಟು ಇವರನ್ ಬಿಟ್ಟು ಇವರಾರು..? ಎಂದು ಕೇಳುವ ಪ್ರಶ್ನೆಯೇ ಇರುವದಿಲ್ಲ. ಮತ್ತೆ ಮತ್ತೆ ಅದೇ ಹೆಸರು..ಅದೇ ಮುಖ. ಕೊನೆಗೂ ಋಣಸಂದಾಯವಷ್ಟೇ ಇಲ್ಲಿ ಮುಖ್ಯ. ಇನ್ನೊಂದು ಪ್ರಾದೇಶಿಕತೆಯನ್ನು ಆಧರಿಸಿದ್ದು, ಇವರು ಮೂಲ ಇಲ್ಲಿಯವರು ಹೊರಗಿನವರು ಎನ್ನುವದರ ಆಧಾರದ ಮೆಲೆ ಆಯ್ಕೆ, ತಿರಸ್ಕಾರದ ಕ್ರಿಯೆಗಳು, ಆ ಆಯ್ಕೆಯ ನಡುವೆ ಅನೇಕ ಬಾರಿ ಒಳಗಿನರು ಹೊರಗಾಗಿ, ಹೊರಗಿನವರು ಒಳಗಾಗಿ ದಿಗಿಲಾಗುವುದೂ ಇದೆ. ಮತ್ತೊಂದು ಎಡ ಬಲಮನ:ಸ್ಥಿತಿಯವರು. ಈಗ ಇಲ್ಲೂ ಯಾವುದು ಎಡ ಯಾವುದು ಬಲ ಎನ್ನುವುದು ತಿಳಿಯದಂತಾಗಿದೆ. ಬೆಳಿಗ್ಗೆ ಎಡಸಮೂಹದ ಕವಿಗೊಷ್ಟಿಯಲ್ಲಿ ಹಾಜರ್, ಸಾಯಂಕಾಲ ಬಲದವರ ಸಂವಾದಗೋಷ್ಟಿಯಲ್ಲಿ. ಕೊನೆಗೂ ಇವರು ಎಡಬಲ ಸಮೂಹವಾಗಿಯೇ ಹೊರಮ್ಮುವುದಿದೆ. ಇಂಥವರು ಮಾತ್ರ ಎಲ್ಲರಿಗೂ ಬೇಕಾಗಿ ಬೆಳೆಯಬಲ್ಲವರು. ಯಾಕೆಂದರೆ ಇವರು ಅಲ್ಲೂ ಬುಳುಬುಳು..ಇಲ್ಲೂ ಬುಳುಬುಳು.. ಇವರದೇ ಒಂದು ಜಾತಿ. ಹೀಗೆಲ್ಲಾ ಕಂಡಾಪಟ್ಟೆ ಕಟಿಬಿಟಿ ಮಾಡಿ ಹೆಚ್ಚೆಂದರೆ ಜುಬ್ಬಾ ಧರಿಸಿ, ದಾಡಿ ಬೆಳೆಸಬಹುದೇ ಹೊರತು ಒಂದು ಉತ್ತಮ ಕೃತಿಯನ್ನಂತೂ ರಚಿಸಲಾಗದು.

ಖುಷ್‌ವಂತ್ ಸಿಂಗ್ ಹಿಂದೊಮ್ಮೆ ಪತ್ರಿಕಾವಲಯದಲ್ಲಿರುವ ರಾಜಕಾರಣವನ್ನು ನೆನೆದು ಸಿಡಿಮಿಡಿಗೊಂಡಿಗೊಂಡು ಬರೆದಿರುವದಿತ್ತು. Khushwant Singhರಾಜಕಾರಣಿಗಳು ಎಲ್ಲ ಸಂದರ್ಭದಲ್ಲಿಯೂ ಪತ್ರಿಕೆಯವರನ್ನು ತಮ್ಮ ಬಲಬದಿಗೆ ಇಡಲು ಯತ್ನಿಸುತ್ತಾರೆ. ಅಷ್ಟು ಮಾತ್ರವಲ್ಲ, ಅವರ ಕೈಗೆ ಏನಾದರೂ ಉಡುಗೊರೆ ನೀಡುವ ಮೂಲಕ ಅವರ ಪ್ರೀತಿ ಪಾತ್ರರಾಗುತ್ತಾರೆ. ಈ ಬಗೆಯ ಬಲಬದಿ ಉಳಿಯುವ ಗುಣ ತಮಗೆ ಬರಲೇ ಇಲ್ಲ. ತಮ್ಮ ಕೆಲವು ಬರಹಗಳನ್ನು ಮೆಚ್ಚಿ ಓದುಗರೇ ಒಂದೆರಡು ಬಾರಿ ಸ್ಕಾಚ್ ವಿಸ್ಕಿ ಬಾಟಲ್ ಕೊಟ್ಟಿರುವದಿದೆ. ಅದನ್ನು ನಾನು ಖುಷಿಯಿಂದ ಸ್ವೀಕರಿಸಿರುವೆ. ಆದರೆ ಹೀಗೆ ರಾಜಕಾರಣಿಗಳ ಸಹವಾಸದ ಮೂಲಕ ಅಲ್ಲ, ಎಂದಿದ್ದರು ಖುಷ್‌ವಂತ್ ಸಿಂಗ್.

ಬೆಂಗಾಲದ ಜನ ಯಾವಾಗಲೂ ಓದುವುದರಲ್ಲಿ ಮಿಕ್ಕವರಿಗಿಂತಲೂ ತುಸು ಮುಂದೆ. ಹಾಗಾಗಿಯೇ ಅಲ್ಲಿ ಗಲ್ಲಿಗೊಂದು ಪುಸ್ತಕದ ಅಂಗಡಿಗಳಿವೆ. ಒಂದು ಊರಿನ ಬಗ್ಗೆ ಅರಿಯಬೇಕಿದ್ದರೆ ಅಲ್ಲಿ ಪುಸ್ತಕದ ಅಂಗಡಿಗಳು, ಸಿನೇಮಾ ಥೇಟರಗಳು, ರೆಸ್ಟಾರೆಂಟಗಳು ಎಷ್ಟಿವೆ ಎನ್ನುವದನ್ನು ನೋಡಿದರೆ ಸಾಕು ಗೊತ್ತಾಗುತ್ತದೆ. ಬೆಂಗಾಲದ ಮೂಲದವರಾದ ಚಟರ್ಜಿ ಎನ್ನುವವರು ಪತ್ರಿಕೆಯೊಂದರ ಸಂಪಾದಕರಾಗಿದ್ದರು. ಅವರು ಒಂದು ಬಾರಿ ಗಂಗಾ ನದಿಯಲ್ಲಿ ಈಜುವಾಗ ಕಾಲು ಜಾರಿ ನದಿಯಲ್ಲಿ ಬಿದ್ದು ಬಿಡುತ್ತಾರೆ. ದುರ್ದೈವಕ್ಕೆ ಅವರಿಗೆ ಈಜು ಬರುತ್ತಿರುವದಿಲ್ಲ, ಆಗ ಅವರು ಮುಳುಗುವದರಲ್ಲಿರುತ್ತಾರೆ ಅಲ್ಲಿಯೇ ಇದ್ದ ಯುವಕನೊಬ್ಬ ಅ ನದಿಗೆ ಜಿಗಿದು ಅವರನ್ನು ರಕ್ಷಿಸುತ್ತಾನೆ. ಆಗ ಆ ಪತ್ರಿಕೆಯ ಸಂಪಾದಕರು ತುಂಬಾ ಕೃತಜ್ಞತೆಯಿಂದ ಆ ಯುವಕನನ್ನು ಕೊಂಡಾಡಿ ಅವನಿಗೆ ತಮ್ಮ ವಿಜಿಟಿಂಗ್ ಕಾರ್ಡ್ ನೀಡಿ ಬಿಡುವು ಸಿಕ್ಕಾಗ ಬೆಂಗಾಲಗೆ ಬಂದಾಗ ಕಚೇರಿಗೆ ಬರಲು ತಿಳಿಸುತ್ತಾರೆ. ಮುಂದೊಂದು ದಿನ ಆ ಯುವಕ ಅವರ ಪತ್ರಿಕಾ ಕಾರ್ಯಾಲಯಕ್ಕೆ ತೆರಳುತ್ತಾನೆ ಇವನನ್ನು ಕಂಡದ್ದೇ ಆ ಸಂಪಾದಕರು ಖುಷಿಯಿಂದ ಬೀಗುತ್ತಾರೆ. ಒಳಗೆ ಕರೆದು ಹೇಳು ನನ್ನಿಂದ ಏನಾಗಬೇಕು ಎಂದು ಕೇಳುತ್ತಾರೆ. ಆ ಯುವಕ ತನ್ನ ಕೈಯಲ್ಲಿದ್ದ ಲೇಖನವೊಂದನ್ನು ನೀಡಿ ಇದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕು ಎಂದು ಕೋರುತ್ತಾನೆ. ಸಂಪಾದಕರು ಅದನ್ನು ಪೂರ್ಣವಾಗಿ ಓದಿ ನೀನು ಬೇಕಾದರೆ ನನ್ನನ್ನು ಪುನ: ಗಂಗಾನದಿಯಲ್ಲಿ ಎತ್ತಿ ಬೀಸಾಡಿದರೂ ತೊಂದರೆಯಿಲ್ಲ ಈ ಲೇಖನವನ್ನು ಪ್ರಕಟಿಸಲಾಗದು ಎನ್ನುತ್ತಾರೆ. ಈ ಬಗೆಯ ನಿಸ್ಪಕ್ಷಪಾತ ಸಾಹಿತ್ಯಕ ವಲಯದಲ್ಲಿ ಈಗಂತೂ ತುಂಬಾ ಜರೂರತ್ತಿದೆ.

ಈ ಹೊತ್ತಿನ ಯುವ ಲೇಖಕರಿಗೆ ಲಾಬಿ ಮಾಡುವ ಮೂಲಕವೇ ಬೆಳೆಯಲು ಸಾಧ್ಯ ಎನ್ನುವಂಥಹ ಬಲವಾದ ನಂಬುಗೆ ಮೂಡುವ ಮುನ್ನವೇ ವಾತಾವರಣ ತಿಳಿಗೊಳ್ಳಬೇಕಿದೆ. ಜಾತಿ, ಧರ್ಮ, ಶಿಫ಼ಾರಸು ಬೇಡ ಎಂದು ವೇದಿಕೆಯಲ್ಲಿ ಭಯಂಕರವಾಗಿ ಮಾತನಾಡುವ ಪ್ರಖರ ಪಂಡಿತ ಸಾಹಿತಿಯೇ ಜಾತಿವಾಸನೆಯಿಂದ ಕೊಳೆತು ನಾರುತ್ತಿರುತ್ತಾನೆ. ಹಾಗಿರುವಾಗ ಈ ಸಾಮಾಜಕ್ಕೆ ಸಾಹಿತಿ ಮತ್ತು ಅವನಿಂದ ಸೃಷ್ಟಿಯಾಗುವ ಸಾಹಿತ್ಯ ನೀಡಬಹುದಾದ ಕೊಡುಗೆ ಎಂಥದು ಎನ್ನುವುದನ್ನು ನೋಡಿದಾಗ ಬೇಸರವೆನಿಸುತ್ತದೆ. ಉದ್ದೇಶಪೂರ್ವಕವಾಗಿಯೇ ಸಾಮರ್ಥ್ಯವಿಲ್ಲದಿದ್ದರೂ ಒಬ್ಬನನ್ನು ಬೆಳೆಸುವ, ಸಾಮರ್ಥ್ಯವಿರುವ ಇನ್ನೊಬ್ಬನನ್ನು ತುಳಿಯುವ, ದುಷ್ಟತನದ ಸಹವಾಸದಲ್ಲಿ ಎಂದೂ ಗಟ್ಟಿ ಸಾಹಿತ್ಯ ಸೃಜಿಸುವದಿಲ್ಲ. ಅದೇನಿದ್ದರೂ ಬಣ್ಣದ ತಗಡಿನ ತುತ್ತೂರಿ ಮಾತ್ರ. ಪುಸಲಾಯಿಸುವುದು, ಲಾಬಿ ಮಾಡುವುದು, ಜೀ ಹುಜೂರ್ ಅನ್ನುವುದರ ಮೂಲಕವೇ ಬೆಳೆಯಬಹುದು ಎಂತಿದ್ದರೆ ಕತೆ-ಕವನ ಬರೆಯುವದಾದರೂ ಏತಕ್ಕೆ..? ನಿಮ್ಮ ಬಹುಪರಾಕ್ ತಂತ್ರಗಾರಿಕೆಯೇ ಸಾಕು ಎನಿಸುತ್ತದೆ. ಸತ್ಯವನ್ನು ಸತ್ಯ ಸುಳ್ಳನ್ನು ಸುಳ್ಳು, ಸರಿ ಇದ್ದದ್ದು ಸರಿ ತಪ್ಪನ್ನು ತಪ್ಪು ಎಂದು ಹೇಳದ ಸಾಹಿತಿ ಬರೆದರೇಷ್ಟು.. ಬಿಟ್ಟರೆಷ್ಟು, ಏನೂ ಫ಼ರಕ್ ಆಗುವದಿಲ್ಲ.

ಮಹಾತ್ಮ ಹುತಾತ್ಮನಾದಂದು…

– ರವಿ ಕೃಷ್ಣಾರೆಡ್ಡಿ

(ಹತ್ತು ವರ್ಷಗಳ ಹಿಂದೆ – 2004 ಜನವರಿ 30 – ದಟ್ಸ್‌ಕನ್ನಡ.ಕಾಮ್‌ಗೆ ಬರೆದಿದ್ದ ಲೇಖನ.)

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ಸದಸ್ಯರು ಸತ್ತ ಮನುಷ್ಯನಿಗೆ ಗೌರವ ಸೂಚಿಸಲಿಕ್ಕಾಗಿ ಕಲಾಪವನ್ನು ಕೆಲಕಾಲ ಸ್ಥಗಿತಗೊಳಿಸಿತು. ಬ್ರಿಟಿಷ್‌ ಪ್ರತಿನಿಧಿ ಫಿಲಿಪ್‌ ನೋಯೆಲ್‌ಬೆಕರ್‌ ಗಾಂಧಿಯನ್ನು ‘ಕಡುಬಡವನ, ಏಕಾಂಗಿಯ ಮತ್ತು ಸೋತವನ ಸ್ನೇಹಿತ” ಎಂದು ವರ್ಣಿಸಿ ‘ಗಾಂಧಿಯ ಮಹತ್ಸಾಧನೆಗಳು ಇನ್ನು ಮುಂದೆಯೂ ಬರಲಿವೆ” ಎಂದು ಪ್ರತಿಪಾದಿಸಿದ.

ಭದ್ರತಾ ಮಂಡಳಿಯ ಅನ್ಯ ಸದಸ್ಯರು ಗಾಂಧಿಯ ಆಧ್ಯಾತ್ಮಿಕ ಗುಣಗಳನ್ನು ಶ್ಲಾಘಿಸಿ ಶಾಂತಿ ಮತ್ತು ಅಹಿಂಸೆಯಡೆಗೆ 200px-MKGandhi[1]ಆತನ ನಿಷ್ಠೆಯನ್ನು ಪ್ರಶಂಸಿಸಿದರು. ಸೋವಿಯತ್‌ ಒಕ್ಕೂಟದ ಆಂಡ್ರ್ಯಿಗ್ರಾಮಿಕೊ ಗಾಂಧಿಯನ್ನು ಭಾರತದ ಉನ್ನತ ರಾಜಕೀಯ ನಾಯಕರೊಲ್ಲಬ್ಬರೆಂದು ವರ್ಣಿಸಿ ಆತನ ಹೆಸರು ಸುದೀರ್ಘ ಸಮಯ ತೆಗೆದುಕೊಂಡ ಭಾರತದ ಜನರ ರಾಷ್ಟ್ರೀಯ ವಿಮೋಚನಾ ಹೋರಾಟದ ಜೊತೆಗೆ ಎಂದಿಗೂ ಜೋಡಿಸಲ್ಪಡುತ್ತದೆ ಎಂದರು. ಸೋವಿಯತ್‌ ಉಕ್ರೇನ್‌ನ ಪ್ರತಿನಿಧಿ ಟಾರಾಸೆಂಕೊ ಸಹ ಗಾಂಧಿಯ ರಾಜಕಾರಣವನ್ನು ಒತ್ತುಕೊಟ್ಟು ಹೇಳಿದರು.

ವಿಶ್ವಸಂಸ್ಥೆ ತನ್ನ ಧ್ವಜವನ್ನು ಅರ್ಧಕ್ಕೆ ಕೆಳಗಿಳಿಸಿತು.
ಮಾನವತೆ ತನ್ನ ಧ್ವಜವನ್ನು ಕೆಳಗಿಳಿಸಿತು.

ಗಾಂಧಿಯ ಸಾವಿಗೆ ಜಗತ್ತಿನಾದ್ಯಂತದ ಪ್ರತಿಕ್ರಿಯೆಯೇ ಒಂದು ಮುಖ್ಯ ನೈಜಸಾಕ್ಷಿ; ಅದು ವ್ಯಾಪಕವಾಗಿ ಹರಡಿದ್ದ ಮನೋಭಾವ ಮತ್ತು ಅಗತ್ಯವನ್ನು ಅಭಿವ್ಯಕ್ತಗೊಳಿಸಿತು. ನ್ಯೂಯಾರ್ಕ್‌ನ ಪತ್ರಿಕೆಯ ಆಲ್ಬರ್ಟ್‌ ಡ್ಯೂಶ್ಚ್‌ ‘ಗಾಂಧಿಯ ಸಾವಿಗೆ ಪೂಜ್ಯಭಾವನೆಯಿಂದ ಪ್ರತಿಸ್ಪಂದಿಸಿದ ಜಗತ್ತಿಗೆ ಇನ್ನೂ ಸ್ವಲ್ಪ ಭರವಸೆಯಿದೆ”ಎಂದು ಘೋಷಿಸಿ- ‘ನವದೆಹಲಿಯ ದುರಂತವನ್ನು ಹಿಂಬಾಲಿಸಿದ ಆಘಾತ ಮತ್ತು ಪರಿತಾಪ ನಾವು ಸಂತತ್ವವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಅದನ್ನು ಗೌರವಿಸುತ್ತೇವೆ ಎಂಬುದನ್ನು ತೋರಿಸಿಕೊಟ್ಟಿತು” ಎಂದರು.

ಅಮೇರಿಕಾದ ಸೆನೆಟರ್‌ ಆರ್ಥರ್‌ ವ್ಯಾಂಡೆನ್‌ಬರ್ಗ್‌ ಹೇಳಿದ್ದು ‘ವಿನಯಶೀಲತೆ ಮತ್ತು ಸರಳ ಸತ್ಯಗಳನ್ನು gandhi_dead_bodyಗಾಂಧಿ ಸಾಮ್ರಾಜ್ಯಗಳಿಗಿಂತ ಶಕ್ತಿಶಾಲಿಯನ್ನಾಗಿ ಮಾಡಿದರು”. ಕಾದಂಬರಿಕಾರ ಪರ್ಲ್‌ ಬಕ್‌ ಗಾಂಧಿಯ ಹತ್ಯೆಯನ್ನು ‘ಮತ್ತೊಂದು ಶಿಲುಬೆಗೇರಿಕೆ” ಎಂದು ವರ್ಣಿಸಿದರು. ನ್ಯಾಯಾಧೀಶ ಫೆಲಿಕ್ಸ್‌ ಫ್ರಾಂಕ್‌ಫರ್ಟರ್‌ ಅದನ್ನು ‘ಪ್ರಪಂಚದ ಸತ್ಯ ಪಡೆಗಳ ವಿರುದ್ಧದ ಅತಿ ಕ್ರೂರ ಹೊಡೆತ” ಎಂದರು.

ಗಾಂಧಿಯನ್ನು ಪ್ರಶಂಸಿಸುತ್ತಿದ್ದ ಆಡಳಿತಗಾರ ಮತ್ತು ರಾಜಕಾರಣಿಗಳಿಗೆ ತಮ್ಮ ಸ್ವಂತವೇ ನ್ಯೂನತೆಗಳನ್ನು ಕನಿಷ್ಠ ನೆನಪಿಸುವಷ್ಟಾದರೂ ಆಗಿದ್ದರಾತ.

ಕ್ಯಾಲಿಫೋರ್ನಿಯಾದ ಹದಿಮೂರು ವರ್ಷದ ಹುಡುಗಿ ಒಂದು ಕಾಗದದಲ್ಲಿ ಬರೆದಳು: ‘ಗಾಂಧಿಯ ಸಾವನ್ನು ಕೇಳಿ ನನಗೆ ನಿಜವಾಗಿಯೂ ದಾರುಣ ದುಃಖವಾಯಿತು. ನನಗೆ ಆತನಲ್ಲಿ ಅಷ್ಟು ಆಸಕ್ತಿಯಿದೆ ಎಂದು ಎಂದೂ ತಿಳಿದಿರಲಿಲ್ಲ ಆದರೆ ಆ ಮಹಾನ್‌ ವ್ಯಕ್ತಿಯ ಸಾವಿನಿಂದ ನನಗೆ ಎಷ್ಟು ಅಸಂತೋಷವಾಗಿದೆ ಎಂದು ನನಗೇ ತಿಳಿಯಿತು”.

ನ್ಯೂಯಾರ್ಕಿನಲ್ಲಿ, ಹನ್ನೆರಡು ವರ್ಷದ ಹುಡುಗಿ ಅಡಿಗೆ ಮನೆಗೆ ಉಪಹಾರ ಸ್ವೀಕರಿಸಲು ಹೋಗಿದ್ದಳು. ಚಾಲನೆಯಲ್ಲಿದ್ದ ರೇಡಿಯಾ ಗಾಂಧಿಗೆ ಗುಂಡಿಟ್ಟ ಸುದ್ದಿ ತಂದಿತು. ಅದೇ ಕ್ಷಣದಲ್ಲಿ, ಆ ಚಿಕ್ಕ ಹುಡುಗಿ, ಮನೆಕೆಲಸದವಳು, ಮತ್ತು ತೋಟದ ಮಾಲಿ ಪ್ರಾರ್ಥನಾ ಸಭೆ ನಡೆಸಿದರು, ಪ್ರಾರ್ಥಿಸಿದರು ಮತ್ತು ಅತ್ತರು. ಅದೇ ರೀತಿ, ಪ್ರಪಂಚದಾದ್ಯಂತ ಲಕ್ಷಾಂತರ ಜನ ಗಾಂಧಿಯ ಸಾವನ್ನು ವೈಯುಕ್ತಿಕ ನಷ್ಟವೆಂಬಂತೆ ಶೋಕಿಸಿದರು. ಅವರಿಗೆ ಯಾಕೆಂದು ಅಷ್ಟೇನೂ ಸರಿಯಾಗಿ ತಿಳಿದಿರಲಿಲ್ಲ; ಆತ ಏನನ್ನು ಪ್ರತಿನಿಧಿಸಿದ್ದ ಎಂದೂ ಸಹ ಚೆನ್ನಾಗಿ ಗೊತ್ತಿರಲಿಲ್ಲ. ಆದರೆ ಆತ ‘ಒಳ್ಳೆಯ ಮನುಷ್ಯ”ನಾಗಿದ್ದ ಮತ್ತು ಒಳ್ಳೆಯವರು ವಿರಳ.

ಸರ್‌ ಸ್ಟಾಫರ್ಡ್‌ ಕ್ರಿಪ್ಸ್‌ ಬರೆಯುತ್ತಾರೆ, ‘ಲೌಕಿಕ ವಸ್ತುಗಳ ಮೇಲೆ ಶಕ್ತಿಯುತ ಚೈತನ್ಯವನ್ನು ಇಷ್ಟು ಬಲಯುತವಾಗಿ ಮತ್ತು ಸಮಂಜಸವಾಗಿ ಯಾವುದೇ ಸಮಯದಲ್ಲಾಗಲಿ ಅಥವ ಕನಿಷ್ಠ ಇತ್ತೀಚಿನ ಇತಿಹಾಸದಲ್ಲಾಗಲಿ ಪ್ರದರ್ಶಿಸಿದ ಮತ್ತೊಬ್ಬ ವ್ಯಕ್ತಿ ನನಗೆ ತಿಳಿದಿಲ್ಲ”. ಇದನ್ನೇ ತಾವು ಶೋಕಿಸುತ್ತಿದ್ದಾಗ ಜನ ಗ್ರಹಿಸಿದ್ದು. ಅವರ ಸುತ್ತಮುತ್ತೆಲ್ಲ ಲೌಕಿಕ ವಸ್ತುಗಳು ಅಲೌಕಿಕ ಚೈತನ್ಯಕ್ಕಿಂತ ಬಲವಾಗಿದ್ದವು. ಆತನ ಮಿಂಚಿನಂತಹ ದಿಢೀರ್‌ ಸಾವು ವಿಶಾಲ ಕತ್ತಲನ್ನು ಅನಾವರಣಗೊಳಿಸಿತು. ಆತನ ನಂತರ ಜೀವಿಸಿದ ಯಾರೂ ಸತ್ಯವಂತ ಜೀವನವನ್ನು ಜೀವಿಸುವುದಕ್ಕಾಗಿ, ಕಕ್ಕುಲತೆ, ಸ್ವವ್ಯಕ್ತಿನಾಶ, ವಿನಯಶೀಲತೆ, ಸೇವೆ ಮತ್ತು ಅಹಿಂಸೆಯನ್ನು ಸುದೀರ್ಘ ಕಾಲ, ಪ್ರಬಲ ಶತ್ರುಗಳ ವಿರುದ್ಧದ ಕಷ್ಟಮಯ ಹೋರಾಟವನ್ನು, ಆತನಷ್ಟು ಕಠಿಣವಾಗಿ ಪ್ರಯತ್ನಿಸಲಿಲ್ಲ ಮತ್ತು ಅಷ್ಟು ಯಶಸ್ಸು ಪಡೆಯಲಿಲ್ಲ. ತನ್ನ ದೇಶದಲ್ಲಿನ ಬ್ರಿಟಿಷ್‌ ಆಡಳಿತದ ವಿರುದ್ಧ ಮತ್ತು ತನ್ನ ದೇಶದ್ದೇ ಜನರ ದುಷ್ಟತೆಯ ವಿರುದ್ಧ ಆತ ತೀವ್ರವಾಗಿ ಮತ್ತು ನಿರಂತರವಾಗಿ ಹೋರಾಡಿದ. ಆದರೆ ಯುದ್ದದ ಮಧ್ಯದಲ್ಲಿ ತನ್ನ ಕೈಗಳನ್ನು ಪವಿತ್ರವಾಗಿಟ್ಟುಕೊಂಡ. ಮತ್ಸರವಿಲ್ಲದೆ, ಢೋಂಗಿತನವಿಲ್ಲದೆ, ಅಥವ ದ್ವೇಷವಿಲ್ಲದೆ ಹೋರಾಡಿದ.

ಈ ಮೇಲಿನ ಸಾಲುಗಳು 1950ರಲ್ಲಿ ಪ್ರಕಟವಾದ, ಲೂಯಿ ಫಿಷರ್‌ ಎಂಬ ಪಾಶ್ಚಾತ್ಯ ಲೇಖಕ ಬರೆದ The Life of Mahatma Gandhi ಎಂಬ ಜೀವನಚರಿತ್ರೆ ಪುಸ್ತಕದ ಒಂದೆರಡು ಪುಟಗಳಲ್ಲಿ ಬರುವ ವಾಕ್ಯಗಳು. ಈ ಪುಸ್ತಕವನ್ನು ಆತ ಬರೆದದ್ದು ಇಂಗ್ಲೀಷ್‌ ಬಲ್ಲ the-life-of-mahatma-gandhiಅಮೇರಿಕನ್‌ ಹಾಗೂ ಪಾಶ್ಚಾತ್ಯ ಓದುಗರನ್ನು ಗಮದಲ್ಲಿಟ್ಟುಕೊಂಡು. ಆದ್ದರಿಂದ ಅಮೇರಿಕನ್ನರಿಗೆ ಅಥವ ಪಾಶ್ಚಾತ್ಯರಿಗೆ ಪ್ರಸ್ತುತ ಮತ್ತು ಪರಿಚಿತವಿರುವ, ಅವರಿಗೆ ಮುಖ್ಯವೆನಿಸುವ ವ್ಯಕ್ತಿ-ವಿಷಯಗಳನ್ನು ತೆಗೆದುಕೊಂಡು ಆ ದೃಷ್ಟಿಕೋನದಲ್ಲಿ ನಿರೂಪಿಸಿರುವುದು.

ಶರಣರ ಗುಣವನ್ನು ಮರಣದಲ್ಲಿ ನೋಡೆಂಬಂತೆ, ಮೋಹನದಾಸ ಗಾಂಧಿ ಸತ್ತಾಗ ಜಗತ್ತು ಪ್ರತಿಕ್ರಿಯಿಸಿದ ರೀತಿ ಅನನ್ಯ. ಆದರೆ ಇಲ್ಲಿ ಆ ಅನನ್ಯತೆಗೆ ಕೇವಲ ಒಳ್ಳೆಯವರು ವಿರಳ ಎಂಬುದಷ್ಟೇ ಕಾರಣವಲ್ಲ ಎನ್ನುವುದು ಸ್ವಲ್ಪ ಆಲೋಚಿಸಿದರೆ ಎಲ್ಲರಿಗೂ ತಿಳಿಯುವ ಸರಳ ಸತ್ಯ. ಐವತ್ತಾರು ವರ್ಷಗಳ ಹಿಂದೆ ಗಾಂಧಿ ಸತ್ತ ದಿನವನ್ನು ಹುತಾತ್ಮರ ದಿನಾಚರಣೆಯನ್ನಾಗಿಸಿ ಕೈತೊಳೆದುಕೊಳ್ಳುವುದಕ್ಕಿಂತ ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಗಾಂಧೀವಾದವನ್ನು ಸಾಣೆ ಹಿಡಿದುಕೊಂಡರೆ ಎಷ್ಟೋ ಸಮಸ್ಯೆಗಳಿಗೆ ನೀತಿಯುಕ್ತ, ಸತ್ಯ ಉತ್ತರ ಸಿಗುತ್ತದೆ.

ನಮ್ಮ ಅನಂತಾನಂತ ಅವತಾರಾಚಾರ್ಯ ಪುರುಷರು(?) ಹೇಳಿದಷ್ಟು ಕಠಿಣವಾಗಲಿ, ಅಮೂರ್ತವಾಗಿಯಾಗಲಿ ಗಾಂಧಿಯ ಚಿಂತನೆಗಳು ಇಲ್ಲ. ಹಾಗೆಯೇ ಗಾಂಧಿ ಹೇಳಿದ ಪ್ರತಿ ಅಕ್ಷರವೂ ಸರಿ, ಅದನ್ನು ಸಮಕಾಲೀನಕ್ಕೆ ತಕ್ಕಂತೆ ಪರಿಷ್ಕರಿಸಿ ಅಳವಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಮುಲ್ಲಾ ಮಠಾಧೀಶರ ಸ್ವತ್ತಾಗಿಯೂ ಗಾಂಧಿ ಉಳಿದಿಲ್ಲ. ತನ್ನೆಲ್ಲ ಹುಳುಕಗಳ ಜೊತೆಗೆ ಸಾರ್ವಜನಿಕವಾಗಿ ಜೀವಿಸಿದ, ಲೇಖಕ ಫಿಷರ್‌ ಹೇಳುವಂತೆ ಸ್ವವ್ಯಕ್ತಿನಾಶಕ್ಕೆ (self-effacement) ಶ್ರಮಿಸಿದವನ ವ್ಯಕ್ತಿಪೂಜೆ ಮಾಡುವವರು ಅಪಹಾಸ್ಯಕ್ಕೆ ಈಡಾಗುವುದು ಸಹಜ. ಆದ್ದರಿಂದ ಗಾಂಧಿ-ಬುದ್ಧರ ಪುನರವತಾರಕ್ಕಾಗಿ ಕಾಯಬೇಕು ಎಂಬ ನಿರಾಶಾ ಮತ್ತು ಅಸಹಾಯಕ ಸ್ಥಿತಿಯಲ್ಲಿ ಬಿದ್ದು ಹೊಸ ಮಾರ್ಗಗಳನ್ನು ಹುಡುಕುವ, ಹುಟ್ಟು ಹಾಕುವ ಕೆಲಸ ಮಾಡದೆ ಗಾಂಧಿ-ಬುದ್ಧರಿಗೆ ಕಾಯುವುದು ಕರುಣಾಜನಕವೆನಿಸುವ ಸ್ಥಿತಿ. ಇತಿಹಾಸದ ಮಟ್ಟಿಗೆ ಹೇಳುವುದಾದರೆ ಮತ್ತೆ ನಾ ಬರುವೆ ಎಂದು ಇವರ್ಯಾರೂ ಹೇಳಿಲ್ಲ! ಸತ್ತವರಿಗೆ ಕಾಯುತ್ತಾ ಕೂರುವುದು ಮನುಷ್ಯಜಾತಿಯ ಕ್ರಿಯಾಶಕ್ತಿಯನ್ನೇ ಶಂಕಿಸಿದಂತೆ. ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು. ಯಾಕೆಂದರೆ ಹುತಾತ್ಮರು ಪ್ರೇತಾತ್ಮರಲ್ಲ.

ನೆಲಕಣಜ : ಪುಸ್ತಕ ಪರಿಚಯ

– ಬಿ. ಶ್ರೀಪಾದ ಭಟ್

ಹಿರಿಯ ಸ್ನೇಹಿತರಾದ ಎನ್. ಗೋವಿಂದಪ್ಪನವರ ಗ್ರಾಮ ಸಂಸ್ಕೃತಿಯ ಕುರಿತಾದ ಲೇಖನಗಳ ಪುಸ್ತಕ “ನೆಲಕಣಜ” ಮೊನ್ನೆ ಹುಣ್ಣಿಮೆಯಂದು nelakanaja-frontಬಿಡುಗಡೆಯಾಯ್ತು. ಇದನ್ನು ಆದಿಮ ಪ್ರಕಾಶನದವರು ಪ್ರಕಟಿಸಿದ್ದಾರೆ.

ಗೋವಿಂದಪ್ಪನವರು ಮಹಾನ್ ತಾಯ್ತನದ ವ್ಯಕ್ತಿ. ಅವರ ಮಾನವೀಯತೆ ಮತ್ತು ಸದಾ ತುಡಿಯುವ ಅಂತಃಕರಣ, ಹಾಗೂ ಗ್ರಾಮ ಸಂಸ್ಕೃತಿಯ ದಟ್ಟ ಅನುಭವಗಳು ಈ ಗ್ರಾಮೀಣ ಲಯಗಳ ಮತ್ತು ಈ ಮಣ್ಣಿನ ಬದುಕನ್ನು ಕುರಿತಾಗಿ ಅತ್ಯಂತ ಅಪ್ತವಾಗಿ ಮತ್ತು ಪ್ರಾಮಾಣಿಕವಾಗಿ ಬರೆಯುವಂತೆ ಮಾಡಿದೆ. ರಾಮಯ್ಯನವರು ಬೆನ್ನುಡಿಯಲ್ಲಿ ಬರೆದಂತೆ ಇಲ್ಲಿ ಮುರಿದು ಬಿದ್ದಿರುವ ಅರವಂಟಿಕೆಗಳು, ಕಾಣೆಯಾಗುತ್ತಿರುವ ಸಾಲು ಮರಗಳು, ಕಣಜಗಳು, ಮಳೆ ನಕ್ಷತ್ರಗಳು, ಕಂಬಳಿ ಕಾಯಕ ಮುಂತಾದ ಜೀವತೋರಣಗಳ ಸಂಭ್ರಮಗಳನ್ನು, ಪತನಗಳನ್ನು ಗೋವಿಂದಪ್ಪ ಸಶಕ್ತವಾಗಿ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಅವರು ಸಾಧಿಸಿದ್ದು ತಮ್ಮ ಜೀವಪರ ವ್ಯಕ್ತಿತ್ವದಿಂದ. ಕೊಂಚವೂ ಜಡವಾಗಲು ನಿರಾಕರಿಸುವ ಸೂಕ್ಷ್ಮತೆಯಿಂದ.

ಬೌದ್ಧಿಕ ಬಡಿವಾರಗಳನ್ನು ನಿರ್ಲಜ್ಯದಿಂದ ಪ್ರದರ್ಶಿಸುವ, ಸಾಮಾಜಿಕ, ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ ಪಠ್ಯಗಳ ಆಳವಾದ ಓದಿನಿಂದ, ಚರ್ಚೆಯಿಂದ ದೊರಕಿದ ಅಪಾರ ಜ್ಞಾನವನ್ನು ಅಕಡೆಮಿಕ್‌ನ ಅಹಂಕಾರವನ್ನು ವ್ಯಕ್ತಪಡಿಸಲು ಮಾತ್ರ ಬಳಸುವ ನಮ್ಮ ಅನೇಕ ಯೂನಿವರ್ಸಿಟಿ ಬುದ್ಧಿಜೀವಿಗಳಿಗೆ ಒಂದು ಮಾನವೀಯತೆಯ ಪಾಠದಂತಿದೆ ಇಲ್ಲಿನ ಸರಳರೇಖೆಯಂತಿರುವ ಲೇಖನಗಳು.

ಸರಳವಾಗಿರುವ ಇಲ್ಲಿನ ಲೇಖನಗಳಿಗೆ ಇನ್ನಷ್ಟು ವಿಸ್ತಾರ ಮತ್ತು ಆಳವಾದ ಒಳನೋಟಗಳ ಕೊರತೆಯಿದೆ. ಆದರೆ ಲೇಖಕರು ಮುಂದಿನ ದಿನಗಳಲ್ಲಿ ಈ ಶೈಲಿ ವಿಸ್ತಾರವನ್ನು ಬೇಡುವ ಈ ಬೆಳವಣಿಗೆಯನ್ನು ಸಾಧಿಸಲು ಅಮೂರ್ತವಾದ ಆದರೆ ವ್ಯಾಪಕವಾದ ಗ್ರಹಿಕೆಯನ್ನು ಕಂಡುಕೊಳ್ಳುತ್ತಾರೆ ಎನ್ನುವ ಭರವಸೆಯಂತೂ ಇಲ್ಲಿ ದೊರಕುತ್ತದೆ.

ಗೋವಿಂದಪ್ಪನವರು ಈ ಗ್ರಾಮ ಸಂಸ್ಕೃತಿಯನ್ನು ಸ್ವತಃ ಅನುಭವಿಸಿದವರು, ಕಣ್ಣಾರೆ ಕಂಡವರು ಮತ್ತು ಇಂದು ಅದರ ಕಣ್ಮರೆಗೆ ಸಾಕ್ಷಿಯಾಗುತ್ತಲೇ ಅಸಹಾಯಕತೆಯಿಂದ ವಿಷಾದಿಸುತ್ತಿರುವವರು. ಲೇಖಕರ ಈ ಪ್ರಾಮಾಣಿಕ ಗುಣಗಳೇ nelakanaja-backಇದು ಒಂದು ವರದಿಯಾಗುವ ಅಪಾಯದಿಂದ ಪಾರು ಮಾಡಿದ್ದು. “ಆದಿಮ ಲಿವಿಂಗ್ ಟೈಮ್ಸ್” ಪತ್ರಿಕೆಯಲ್ಲಿ ಪ್ರಕಟಗೊಂಡ ಇಲ್ಲಿನ ಬಹುಪಾಲು ಲೇಖನಗಳು ಆ ಪತ್ರಿಕೆಗೆ ಸದಾ ಅಂಟಿಕೊಳ್ಳುತ್ತಿದ್ದ ಅಕಡೆಮಿಕ್ ಚಿಂತನೆಗಳ ಕ್ಲೀಷೆಯಿಂದ ಪಾರುಮಾಡಿತು ಎಂದು ನಾನು ಭಾವಿಸುತ್ತೇನೆ.


“ನೆಲಕಣಜ – ಗ್ರಾಮ ಸಂಸ್ಕೃತಿಯ ಕೆಲವು ಟಿಪ್ಪಣಿಗಳು”
ಲೇಖಕರು : ಎನ್.ಗೋವಿಂದಪ್ಪ
ಪ್ರಕಾಶಕರು : ಆದಿಮ ಪ್ರಕಾಶನ, ಶಿವಗಂಗೆ, ವಡೇರಹಳ್ಳಿ ಅಂಚೆ, ಕೋಲಾರ – 563101

ನಿನ್ನ ಬಾಂದಳದಂತೆ ನನ್ನ ಮನವಿರಲಿ, ನಿನ್ನ ಸಾಗರದಂತೆ ನನ್ನ ಎದೆಯಿರಲಿ

– ಬಿ.ಶ್ರೀಪಾದ ಭಟ್

ನೀನೊಬ್ಬನೆಯೆ ಅಲ್ಲ, ಸಾವಿನಳುಕಿಗೆ ಸಿಕ್ಕಿ
ಮುದ್ದಾಡಲರ್ಹವಹ ಶಿಶುಗಳೇನು ಶಿಲೆಗೆ
ಬಡಿದು ಕೊಂದೆಂಟನೆಯದರ ಕೈಲಿ ಸೀಳಲ್ಗೊಲೆಗೆ
ತುತ್ತಾದವನು ಕಂಸ ನಮ್ಮೆದೆಗಳನು ಕುಕ್ಕಿ
ನೋಡಿದರೆ ಕಾಣುವುದು ಮಕ್ಕಳೆಲುಬಿನ ರಾಶಿ !
ಒಂದೊಂದು ಹೃದಯವೂ ಕಂಸಶಿಲೆ
– ಕುವೆಂಪು

ಜೀವನವಿಡೀ ನಿಗಿನಿಗಿ ಕೆಂಡದಂತೆ ಉರಿದು ಕಡೆಗೆ ಬೂದಿಯಾಗಿದ್ದಾರೆ ನಾಮದೇವ ಢಸಾಳ. ಢಸಾಳ ನಿನ್ನೆ ಕರುಳಿನ ಕಾನ್ಸರ್‌ನಿಂದ ಕೊನೆಯುಸಿರೆಳಿದಿದ್ದಾರೆ. ಢಸಾಳರ ಹೆಸರು ಕೇಳಿದಾಕ್ಷಣ ನೋವಿನಿಂದ ಹೃದಯ ಕಿವುಚುತ್ತದೆ. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಎನ್ನುವ ಪ್ರಶ್ನೆಗೆ ಎಲ್ಲವನ್ನೂ ಕಂಡೆ ಎನ್ನುವಂತಿತ್ತು ಢಸಾಳರ ಬದುಕು. ಅಲ್ಲಿ ಹೋರಾಟವಿತ್ತು, ಕವಿತೆಯಿತ್ತು, ದಾರಿ ತಪ್ಪಿದ ಮಗುವಿನ ನಡೆಗಳಿತ್ತು, ಕ್ರೌರ್ಯವಿತ್ತು, ಸಂಸಾರ ಇನ್ನೇನು ನುಚ್ಚು ನೂರಾಗುತ್ತದೆ ಎನ್ನುವಷ್ಟರಲ್ಲಿ ಮರಳಿ ತೇಲುವಂತಹ ನೋವಿನ ಪಯಣವಿತ್ತು. ನಾಮದೇವ ಢಸಾಳರ ಕುರಿತು ಬರೆಯಲಿಕ್ಕೆ ನಮ್ಮಲ್ಲಿ ಶಕ್ತಿ ಇದೆಯಾ ಎನ್ನುವಷ್ಟರ ಮಟ್ಟಿಗೆ ಸದಾ ಉರಿಯುತ್ತಿದ್ದ ಢಸಾಳರ ಕುರಿತು ನಾವು ಪ್ರಾಮಾಣಿಕವಾಗಿ ಬರೆಯದಿದ್ದರೆ ನಾವೂ ಉರಿದು ಹೋಗುವುದರಲ್ಲಿ ಅನುಮಾನವೇ ಇಲ್ಲ.

ಎಪ್ಪತ್ತರ ದಶಕದಲ್ಲಿ ತಮ್ಮ ಬೆಂಕಿಯುಗಳುವ ಕವಿತೆಗಳನ್ನು ಕುರಿತು “ಕವಿತೆಗಳು ಬುಲೆಟ್‌ನಂತಿರಬೇಕು, ಅವುಗಳನ್ನು ಸರಿಯಾಗಿ ಗುರಿಯಿಡಬೇಕು, ಅವುಗಳನ್ನು ಸ್ನೇಹಿತರಿಗಾಗಿ ಬಳಸಬೇಕು” ಎಂದು ಹೇಳಿದ್ದರು. ಅವರ ಮೊದಲ ಕವನ ಸಂಕಲನ “ಗೋಳಪಿತ’ದ ಮೂಲಕ ಮರಾಠಿ ಸಾಹಿತ್ಯವನ್ನೇ ಬೆಚ್ಚಿಬೀಳಿಸಿದ್ದರು. namdeo-dasalಅದರ rawness, intense & unorthodox ಶೈಲಿ ಇಡೀ ಮರಾಠಿ ಸಾಹಿತ್ಯಕ್ಕೆ ನೀಡಿದ ಆ ಮಹಮದ್ ಅಲಿ ಪಂಚ್ ಐತಿಹಾಸಿಕವಾದ್ದು.

ತಮ್ಮ ಕವಿತೆಗಳ ಮೂಲಕ ಮೌನವಾಗಿ ಬೇಯುತ್ತಿದ್ದ ದಲಿತರಿಗೆ ಧ್ವನಿಯಾಗಿದ್ದಲ್ಲದೆ ಮಧ್ಯಮವರ್ಗದ ಮರಾಠಿ ಮಾನೂಸ್‌ರನ್ನು ಕಾಮಟೀಪುರದ ಸ್ಲಂನ ಕ್ರೌರ್ಯಕ್ಕೆ,ತಳಸಮುದಾಯಗಳ ದಯನೀಯ ಬುದುಕಿಗೆ, ಹಿಜಡಾಗಳ ನೋವಿಗೆ ಮುಖಾಮುಖಿಯಾಗಿಸಿದ್ದರು ಢಸಾಳ. ಇದನ್ನು ಸಾಧಿಸಿದ್ದು ಯಾವುದೇ ಅಕಾಡೆಮಿಕ್ ಅಹಂಕಾರದಿಂದಲ್ಲ ಬದಲಾಗಿ ಸದಾ ಸಮಾಜಕ್ಕೆ ಕತ್ತು ಕೊಡುವ ತನ್ನ ನಿಸ್ವಾರ್ಥ ಬಂಡಾಯದ ಗುಣದಿಂದ. ಹೈಸ್ಕೂಲನ್ನೂ ಮುಗಿಸದ ಢಸಾಳ ಮರಾಠಿ ಸಾಹಿತ್ಯದ ಉದ್ದಾಮ ಪಂಡಿತರಿಗೆ ಬನ್ನಿ ನೀವು ಕಂಡರಿಯದ ಲೋಕವೊಂದಿದೆ ಇಲ್ಲಿ ಎಂದು ಪ್ರತ್ಯಕ್ಷ ದರ್ಶನ ಮಾಡಿಸಿದರು.

ಆಗ ತಾನೆ ಅಮೇರಿಕದ ಬ್ಲಾಕ್ ಪ್ಯಾಂಥರ್‍ಸ್‌ನಿಂದ ಪ್ರಭಾವಿತರಾಗಿ ಗೆಳೆಯರಾದ ರಾಜ ಡಾಳಿ, ಜೆ.ವಿ.ಪವಾರ್ ಅವರ ಜೊತೆಗೂಡಿ “ದಲಿತ ಪ್ಯಾಂಥರ್‍ಸ್” ಅನ್ನು ಸ್ಥಾಪಿಸಿದ್ದರು. ಎಪ್ಪತ್ತರ ದಶಕದಲ್ಲಿ “ದಲಿತ್ ಪ್ಯಾಂಥರ್‍ಸ್” ಮಹರಾಷ್ಟ್ರದಲ್ಲಿ ಅಂಬೇಡ್ಕರ್‌ವಾದಿಗಳಿಗೆ ವಿಶಾಲವಾದ ಹೋರಾಟದ ಆಡೊಂಬಲವಾಗಿತ್ತು. ಅತ್ಯಂತ ಪ್ರಖರ ವೈಚಾರಿಕತೆ, ಸಮತಾವಾದದ, ಎಡಪಂಥೀಯ ಲೇಖಕರು ಮತ್ತು ಚಿಂತಕರ ಪಡೆಯೇ ಅಂದಿನ ದಲಿತ ಪ್ಯಾಂಥರ್‍ಸ ಸಂಘಟನೆಯಲ್ಲಿತ್ತು. ಆದರೆ ಎಲ್ಲಾ ಪ್ರಗತಿಪರ ಹಾಗೂ ಜಾತ್ಯಾತೀತ ಸಂಘಟನೆಗಳಿಗೂ ತಗಲುವ ಜಾಡ್ಯದಂತೆ ಈ ಸಂಘಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದ ರಾಜ ಢಾಳೆ ಹಾಗೂ ನಾಮದೇವ ಢಸಾಳರ ನಡುವಿನ ಈ ವೈಯುಕ್ತಿಕ ಸಿದ್ಧಾಂತಗಳ ಭಿನ್ನತೆ ದಲಿತ ಪ್ಯಾಂಥರ್‍ಸ್ ಸಂಘಟನೆಯನ್ನೂ ಬಿಡಲಿಲ್ಲ. ರಾಜ ಢಾಳೆಯವರ ನೇತೃತ್ವದ ಗುಂಪು ಎಡಪಂಥೀಯ ಒಲವುಳ್ಳ ಸೆಕ್ಯುಲರ್ ರಾಜಕಾರಣವನ್ನು ಪುರಸ್ಕರಿಸಲಿಲ್ಲ. ಬದಲಾಗಿ ಅಂಬೇಡ್ಕರ ಪ್ರತಿಪಾದಿಸಿದ ಬುದ್ಧ ಧರ್ಮದ ಮಾರ್ಗದ ಕಡೆಗೆ ತನ್ನ ನಿಲುವನ್ನು ತಳೆದಿತ್ತು. ಇಲ್ಲಿ ಬುದ್ಧನ ಚಿಂತನೆಗಳ ಪ್ರಜ್ಞೆಯಲ್ಲಿ ಮುನ್ನಡೆಯಬೇಕೆಂಬುದೇ ರಾಜ ಢಾಳೆಯವರ ಪ್ರಮುಖ ಆಶಯವಾಗಿತ್ತು. ಆದರೆ ನಾಮದೇವ ಢಸಾಳರವರ ನೇತೃತ್ವದ ಗುಂಪು ಮಾರ್ಕ್ಸವಾದದ ನೆಲೆಗಟ್ಟಿನಲ್ಲಿ, ತಮ್ಮ ಎಡಪಂಥೀಯ ಚಿಂತನೆಗಳನ್ನು ನೇರವಾಗಿಯೇ ಪ್ರತಿಪಾದಿಸುತ್ತಾ ಬುದ್ಧನೆಡೆಗಿನ ನಡೆಯನ್ನು ಅಷ್ಟೊಂದು ತೀವ್ರವಾಗಿ ಸಮರ್ಥಿಸಲಿಲ್ಲ. ಇಲ್ಲಿ ಢಸಾಳರು ಮಾರ್ಕ್ಸವಾದಿಗಳ ಮೂಲ ಸಿದ್ಧಾಂತವಾದ ವರ್ಗ ಸಂಘರ್ಷ ಮತ್ತು ಆರ್ಥಿಕ ಆಭಿವೃದ್ಧಿ ಮೂಲಕ ಅಸ್ಪೃಶ್ಯತೆಯ ನಿರ್ನಾಮ ಹಾಗೂ ಜಾತಿವಿನಾಶದ ಕನಸನ್ನು ಕಂಡರು. ಇದು ಅಂಬೇಡ್ಕರವಾದದ Namdeo_Dhasalಬುದ್ಧನಡೆಗಿನ ನಡೆಯ ಮೂಲಕ ಜಾತಿವಿನಾಶ ಮತ್ತು ದಲಿತರ ಆತ್ಮಾಭಿಮಾನದ ಕನಸಿಗೆ, ಚಿಂತನೆಗೆ ವ್ಯತಿರಿಕ್ತವಾಗಿತ್ತು.

ಕಡೆಗೆ ಢಸಾಳರು 1977 ರಲ್ಲಿ ದಲಿತರ ಪರವಾಗಿ ಇಂದಿರಾಗಾಂದಿಯವರನ್ನು ಬೆಂಬಲಿಸುವುದರೊಂದಿಗೆ ದಲಿತ ಪ್ಯಾಂಥರ್‍ಸ ಇಬ್ಭಾಗವಾಯಿತು. ಆ ದಿನಗಳನ್ನು ಢಸಾಳರ ಅಪ್ತ ಸ್ನೇಹಿತ ದಿಲೀಪ್ ಚಿತ್ರೆ ಅವರಿಂದಲೇ ಕೇಳಬೇಕು. ಕಡೆಗೆ ಢಸಾಳರು ಇಂಡಿಯಾದ ಕಮ್ಯನಿಷ್ಟರ ಕುರಿತಾಗಿಯೂ ತೀವ್ರ ನಿರಾಸೆ ಹೊಂದಿದ್ದರು. ಎಪ್ತತ್ತರ ದಶಕದಲ್ಲಿ ಶಿವಸೇನೆಯ ಪುಂಡಾಟಿಕೆಯ ವಿರುದ್ಧ, ದೌರ್ಜನ್ಯದ ವಿರುದ್ಧ ದಲಿತ್ ಪ್ಯಾಂಥರ್‍ಸನ ಮೂಲಕ ನಿರಂತರವಾಗಿ ಹೋರಾಡಿದ್ದ ಢಸಾಳ ತೊಂಬತ್ತರ ದಶಕದ ಹೊತ್ತಿಗೆ ಶಿವಸೇನೆಯೊಂದಿಗೆ ಗುರುತಿಸಿಕೊಂಡು ಅದರ ಮುಖವಾಣಿ “ಸಾಮ್ನ” ಪತ್ರಿಕೆಗೆ ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದರು. ಇದು ಅವರ ಅಭಿಮಾನಿಗಳನ್ನು, ಗೆಳೆಯರನ್ನು ಶಾಕ್‌ಗೊಳಿಸಿತ್ತು. ಢಸಾಳರ ಒಟ್ಟಾರೆ ರಾಜಕೀಯ ನಡೆಗಳು ದಯನೀಯವಾಗಿ ಸೋಲುತ್ತಿದ್ದದ್ದು ಅವರ ಆತ್ಮಶಕ್ತಿಯನ್ನೇ ನಾಶಮಾಡಿತ್ತು.

ಢಸಾಳರಿಗಿಂತ ಹದಿನೈದು ವರ್ಷಗಳಷ್ಟು ಕಿರಿಯರಾದ ಅವರ ಪತ್ನಿ, ಲೇಖಕಿ, ಕವಿಯತ್ರಿ ಮಲ್ಲಿಕಾ ಅಮರ್ ಶೇಕ್‌ರು ಢಸಾಳರ ಅನಿಶ್ವಿತ, ಕ್ಷಣಕ್ಷಣಕ್ಕೆ ತಿರುಗುತ್ತಿದ್ದ ರಾಜಕೀಯ ನಡೆಗಳೊಂದಿಗೆ ತೀವ್ರ ಭಿನ್ನಾಭಿಪ್ರಾಯವನ್ನು ಹೊಂದಿದ್ದರು. ಇವರ ವೈಯುಕ್ತಿಕ ಬದುಕು ಅನೇಕ ತಲ್ಲಣಗಳನ್ನು , ಆಳವಾದ ನೋವಿನ ಜೀವನವನ್ನು ಒಳಗೊಳ್ಳಬೇಕಾಯಿತು.

ಕಡೆಗೆ ದೀರ್ಘಕಾಲದ ಮಾನಸಿಕ, ದೈಹಿಕ ಕಾಯಿಲೆಯಿಂದ ಮುಕ್ತಿ ಹೊಂದಿದ ಢಸಾಳ ಮೊನ್ನೆ ತೀರಿಕೊಂಡಿದ್ದಾರೆ.

ಅವರ ಪದ್ಯವೊಂದರ ಆಯ್ದ ಸಾಲುಗಳು:
This is hell
This is a swirling vortex
This is an ugly agony
This is pain wearing a dancer’s anklets

Shed your skin, shed your skin from its very roots
Skin yourself
Let these poisoned everlasting wombs become disembodied.
Let not this numbed ball of flesh sprout limbs
Taste this
Potassium cyanide!
As you die at the infinitesimal fraction of a second,
Write down the small ‘s’ that’s being forever lowered.

Here queue up they who want to taste
Poison’s sweet or salt flavour
Death gathers here, as do words,
In just a minute, it will start pouring here.

Skin yourself ಎಂದು ಬರೆದ ನಾಮದೇವ ಢಸಾಳ, ನಿನ್ನ ಆತ್ಮ ಇನ್ನಾದರೂ ಶಾಂತಿಯಿಂದಿರಲಿ.

ಮಹಿಳಾ ಚಳವಳಿಗಳು ಮತ್ತು ಆಧುನಿಕ ಲೇಖಕಿಯರ ಮೇಲೆ ವಿಜಯಾ ದಬ್ಬೆಯವರ ಪ್ರಭಾವಗಳು


– ರೂಪ ಹಾಸನ


 

[ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗು ಹಾಸನದ ಜಿಲ್ಲಾ ಲೇಖಕಿಯರ ಬಳಗದ ವತಿಯಿಂದ ದಿನಾಂಕ 27.2.2010 ರಂದು ಬೇಲೂರಿನಲ್ಲಿ ನಡೆದ ‘ವಿಜಯಾನ್ವೇಷಣೆ’ ವಿಜಯಾ ದಬ್ಬೆ ಸಾಹಿತ್ಯ -ಸಾಧನೆ ಕುರಿತ ವಿಚಾರಸಂಕಿರಣದಲ್ಲಿ ಮಂಡಿಸಿದ ವಿಚಾರಗಳ ಬರಹ ರೂಪ.]

ಪ್ರಜಾವಾಣಿಯಲ್ಲಿ ಆತ್ಮಕಥೆಗಳ ಹಿನ್ನಲೆಯಲ್ಲಿ ವಿಜಯಾದಬ್ಬೆಯವರ ಕುರಿತ ನನ್ನ ಅಂಕಣ ಪ್ರಕಟವಾದ ನಂತರ, ವಿವಿಧ ದೂರದರ್ಶನ ವಾಹಿನಿಗಳಲ್ಲಿ ನಾನು ಮೇಡಂ ಕುರಿತು “ಅವರು ನಮ್ಮ ಜಿಲ್ಲೆಯ ಆಧುನಿಕ ಕವಯಿತ್ರಿಯರಲ್ಲಿ ಮೊದಲಿಗರು ಮತ್ತು ಕನ್ನಡ ಸಾಹಿತ್ಯದ ಮಹತ್ವದ ಲೇಖಕಿ, ಅವರಿಂದು ಕ್ರಿಯಾಶೀಲರಾಗಿದ್ದರೆ ಮಹಿಳಾ ಲೋಕದಲ್ಲಿ ಪ್ರಮುಖ ಸ್ಥಾನದಲ್ಲಿರ್‍ತಿದ್ದರು” ಎಂದು ಮಾತನಾಡಿದ್ದು ಕೇಳಿದ ರಾಜ್ಯದ ಬೇರೆ ಬೇರೆ ಭಾಗದ ಕೆಲವು ಲೇಖಕ-ಲೇಖಕಿಯರು ನನ್ನೊಂದಿಗೆ ಮಾತನಾಡಿ “ವಿಜಯಾ ದಬ್ಬೆಯವರು ಈಗ ಅಪ್ರಸ್ತುತ. ಅವರ ಬಗ್ಗೆ ಯಾಕೆ ಅಷ್ಟೊಂದು ಬರೆದು, ಮಾತನಾಡಲು ಹೋದ್ರಿ?” ಎಂದಿದ್ದರು. ಅವರ ಮಾತು ಕೇಳಿ ನನಗೆ ವಿಷಾದವಾಗಿತ್ತು. ಸಾಹಿತ್ಯ ಲೋಕದ ಸಣ್ಣತನದ ಪರಿಚಯವೂ ಆಗಿತ್ತು. ಜಾತಿ, ಲಿಂಗ, ವರ್ಗ, ಬೌದ್ಧಿಕ ಸಾಮರ್ಥ್ಯ ಆಧಾರಿತವಾಗಿರುವ ಅಸೂಯೆ, vijaya-dabbeಹೊಟ್ಟೆಕಿಚ್ಚುಗಳು ಬೇರೆಲ್ಲ ಕ್ಷೇತ್ರಕ್ಕಿಂತ ಸಾಹಿತ್ಯ ಕ್ಷೇತ್ರದಲ್ಲೇ ಹೆಚ್ಚು ಎಂದು ಇಂಥಹ ಸಂದರ್ಭದಲ್ಲೆಲ್ಲಾ ನನಗೆ ಅನ್ನಿಸುತ್ತಿರುತ್ತದೆ. ಆದರೆ ಹಾಗೇ, “ಮೇಡಂ ಬಗ್ಗೆ ಓದಿ, ಟಿ.ವಿ. ನಲ್ಲಿ ನೋಡಿ ಸಂತೋಷವಾಯ್ತು. ಈಗ ಹೇಗಿದ್ದಾರೆ? ಎಲ್ಲಿದ್ದಾರೆ?” ಎಂದು ವಿಚಾರಿಸಿದವರ ಸಂಖ್ಯೆ ಕಿಡಿಕಾರಿದವರ ಸಂಖ್ಯೆಗಿಂತಾ ಹೆಚ್ಚಿತ್ತೆನ್ನುವುದೇ ಒಂದು ಸಮಾಧಾನ. ಆಗ ನನ್ನಲ್ಲಿ ಪ್ರಶ್ನೆಗಳೆದ್ದಿತ್ತು, ‘ಒಬ್ಬ ಲೇಖಕ ನಿಷ್ಕ್ರಿಯನಾದ ಎಂದ ತಕ್ಷಣ ಅವನು ಅಪ್ರಸ್ತುತನೇ? ಅವನು ತನ್ನ ಬರವಣಿಗೆಯ ಮೂಲಕ ಸದಾ ಪ್ರಸ್ತುತನಾಗಿರುತ್ತಾನಲ್ಲವೇ? ಸಾಹಿತ್ಯ ಚರಿತ್ರೆಯಲ್ಲಿ ದಾಖಲಾದ ಯಾವುದೇ ಸಾಹಿತಿ ಆಯಾ ಕಾಲಘಟ್ಟದ ಜೊತೆಗೆ, ಸಾರ್ವಕಾಲಿಕ ಸತ್ಯಗಳನ್ನು ಪ್ರತಿಪಾದಿಸಿದ್ದರೆ ಸರ್ವಕಾಲಕ್ಕೂ ಪ್ರಸ್ತುತನಾಗಿರುತ್ತಾನಲ್ಲವೇ?’ ಅನ್ನಿಸಿತ್ತು. ಅದರಲ್ಲೂ ವಿಜಯಾ ದಬ್ಬೆಯವರು ಲೇಖಕಿ ಮಾತ್ರ ಅಲ್ಲ. ಮುಖ್ಯವಾಗಿ ಅವರೊಬ್ಬ ದಿಟ್ಟ ಮಹಿಳಾಪರ ಹೋರಾಟಗಾರ್ತಿ. ಸಾಹಿತ್ಯದ ಜೊತೆಗೆ ಪ್ರತಿಭಟನೆ, ಹೋರಾಟಗಳ ಮೂಲಕ ಲಿಂಗಾಧಾರಿತವಾದ ಸಾಮಾಜಿಕ ಬದಲಾವಣೆಯನ್ನು, ಸಮಾನತೆಯನ್ನು ತರಬೇಕು, ಜಾಗೃತಿ ಮೂಡಿಸಬೇಕು ಎಂದು ನಂಬಿದವರು. ಹೀಗಾಗಿ ಸಾಹಿತ್ಯ ಚರಿತ್ರೆಯಲ್ಲಿ ಮಾತ್ರ ಅಲ್ಲ, ಮಹಿಳಾ ಚರಿತ್ರೆಯಲ್ಲಿ ಕೂಡ ಅವರ ಹೆಸರು ಚಿರಸ್ಥಾಯಿಯಾಗಿರುವಂತದ್ದು ಎಂದು ನಾನು ಭಾವಿಸಿದ್ದೇನೆ.

ಹಾಗೆ ವಿಜಯಾ ಮೇಡಂ ನನಗೆ ವೈಯಕ್ತಿಕವಾಗಿ ತುಂಬಾ ಪರಿಚಿತರಲ್ಲ. ಆದರೆ ಒಂದು ರೀತಿಯಲ್ಲಿ ಅವರು ನನ್ನ ಮಾನಸ ಗುರುಗಳು ಅಂದ್ರೆ ತಪ್ಪಿಲ್ಲ. ನನ್ನ ಕಾಲೇಜು ದಿನಗಳಲ್ಲಿ [ನಾನು ಪದವಿ ಓದಿದ್ದು ಗೌರಿಬಿದನೂರಿನಂತ ಒಂದು ಪುಟ್ಟ ಊರಿನಲ್ಲಿ] ಅವರ ಶಿಷ್ಯೆ ಆಗಿದ್ದ ನನ್ನ ಕನ್ನಡ ಉಪನ್ಯಾಸಕರಾದ ಪೂರ್ಣಿಮಾ ಅವರು ವಿಜಯಾ ಮೇಡಂ ಬಗ್ಗೆ ಎಷ್ಟೊಂದು ಹೇಳ್ತಿದ್ದರು ಎಂದರೆ, ನಮಗೆಲ್ಲ ‘ಆದ್ರೆ ವಿಜಯಾ ದಬ್ಬೆ ತರಹ ಧೈರ್ಯವಂತ ಹೆಣ್ಣುಮಗಳಾಗಬೇಕು’ ಎನ್ನುವಂತಾ ಆಸೆಯನ್ನ ಹುಟ್ಟಿಸಿದ್ದರು. ಅವರ ಮಹಿಳಾಪರ ಲೇಖನಗಳನ್ನು ಓದಿ, ಅವರ ಸಮತಾ ಚಟುವಟಿಕೆಗಳ ಬಗ್ಗೆ ಕೇಳಿ ಅವರನ್ನು ನೋಡದಿದ್ದರೂ ನಾವು ಗೆಳತಿಯರು ಅದೆಷ್ಟೊಂದು ಪ್ರೇರಣೆ ಪಡೆದಿದ್ದೆವು ಎನ್ನುವುದನ್ನು ವಿವರಿಸೋದು ತುಂಬಾ ಕಷ್ಟ. ಅವರ ಮೊದಲ ಪ್ರಭಾವ ನನ್ನಂತವರ ಮೇಲೆ ಲೇಖಕಿಯಾಗಿ ಆಗಿದ್ದಕ್ಕಿಂತಾ ಹೆಚ್ಚಾಗಿ ಹೋರಾಟಗಾರ್ತಿಯಾಗಿಯೇ ಹೆಚ್ಚು ಎಂದು ಭಾವಿಸುತ್ತೇನೆ. ಆನಂತರದ ಪ್ರಭಾವ ಕವಿಯಾಗಿ, ಬರಹಗಾರ್ತಿಯಾಗಿ. ನನ್ನ ಕಾಲೇಜು ದಿನಗಳಲ್ಲೇ ಮೈಸೂರಿಗೆ ಹೋದಾಗ ಅವರನ್ನ ಒಮ್ಮೆ ನೋಡಲೇಬೇಕು ಎಂದು ಯೂನಿವರ್ಸಿಟಿಗೆ ಹುಡುಕಿಕೊಂಡು ಹೋಗಿದ್ದು ಇನ್ನೂ ನೆನಪಿದೆ. ಆಗ ಅವರನ್ನ ನೋಡಿ ನನಗೆ ಬಹಳವೇ ನಿರಾಶೆ ಆಗಿತ್ತು. ಅವರು ಅತ್ಯಂತ ಮೃದು ಸ್ವಭಾವದ, ತೀರಾ ಮುಗ್ಧ ಹೆಣ್ಣು ಮಗಳಾಗಿ ನನಗೆ ಕಂಡಿದ್ದರು. ದಿಟ್ಟ ಮಹಿಳಾ ಹೋರಾಟಗಾರ್ತಿ, ಅನ್ಯಾಯಗಳ ವಿರುದ್ಧ ಕಿಡಿಕಾರುವ ಬಂಡಾಯಗಾರ್ತಿ, ಸಮಾನತೆಗಾಗಿ ಪ್ರತಿಭಟನೆ ಮಾಡೋ ಚಳವಳಿಗಾರ್ತಿ ಇವರೇನಾ? ಅಂತ ಆಶ್ಚರ್ಯ ಆಗಿತ್ತು. ಅವರ ವ್ಯಕ್ತಿತ್ವ ನಾನು ಕಲ್ಪಿಸಿಕೊಂಡಂತಾ ‘ದಿಟ್ಟ ಹೆಣ್ಣು ಮಗಳ’ ಚಿತ್ರಕ್ಕೆ ಸ್ವಲ್ಪ ಕೂಡ ಹೊಂದಿಕೆ ಆಗುತ್ತಿರಲಿಲ್ಲ. ಅದು ನನ್ನ ಹದಿಹರೆಯದ ತಿಲಿವಳಿಕೆಯ ದೋಷವಿರಬಹುದು! ‘ಇವರು ಮಹಿಳೆಯರ ಪರವಾಗಿ ಅದೆಂಥಾ ಹೋರಾಟ ಮಾಡ್ತಾರೆ?’ ಎಂದು ವಿಸ್ಮಯಪಟ್ಟುಕೊಂಡಿದ್ದೆ. ಆದರೆ ನನ್ನ ಮೇಲಿನ ಅವರ ಪ್ರಭಾವ ಮಾತ್ರ ಅಳಿಸಿ ಹೋಗುವಂತದ್ದಾಗಿರಲಿಲ್ಲ. ಯಾಕೆಂದರೆ ಎಂಭತ್ತರ ದಶಕದಲ್ಲಿ ಅವರು ಮಾಡ್ತಿದ್ದಂತಾ ಕೆಲಸಗಳು ಅಷ್ಟೊಂದು ಶಕ್ತಿಶಾಲಿಯಾಗಿದ್ದವು.

ಇನ್ನು ಮಹಿಳಾ ಚಳವಳಿಗಳ ಕುರಿತು ಹೇಳ್ಬೇಕು ಅಂದ್ರೇ ಯಾವುದೇ ಚಳವಳಿನೂ ದಿಢೀರನೆ ತನ್ನಷ್ಟಕ್ಕೆ ತಾನೇ ಹುಟ್ಟಿಕೊಂಡುಬಿಡುವಷ್ಟು ಸ್ವಯಂಭು ಅಲ್ಲ. ಪಕ್ವವಾದ ಬೀಜಕ್ಕೆ ಪೂರಕವಾಗಿ ಹದವಾದ ಮಣ್ಣು, ಗಾಳಿ, ಬೆಳಕು, ನೀರು ಎಲ್ಲವೂ ಬೇಕು. ಆಗ ಮಾತ್ರ ಬೀಜ ಮೊಳಕೆ ಒಡೆಯುತ್ತೆ, ಚಿಗುರುತ್ತೆ, ಹೂ-ಹಣ್ಣುಗಳನ್ನ ನೀಡುತ್ತೆ. ಇಂತಹ ಎಲ್ಲ ಪೂರಕ ಪರಿಸರ ೭೦ರ ದಶಕದಲ್ಲಿ ನಿರ್ಮಾಣ ಆಗಿದ್ದರಿಂದಲೇ ಮಹಿಳಾ ಚಳವಳಿ ಆ ಕಾಲಕ್ಕೆ ಸಶಕ್ತವಾಗಿ ರೂಪುಗೊಂಡಿತು. ಬಂಡಾಯ ಸಾಹಿತ್ಯ ಚಳವಳಿ, ದಲಿತ ಚಳವಳಿ, ರೈತ ಚಳವಳಿ, ಕಾರ್ಮಿಕ ಚಳವಳಿ…… ಹೀಗೆ ಹತ್ತು ಹಲವು ಚಳವಳಿಗಳು ಪ್ರಬಲವಾಗಿ ಹುಟ್ಟಿಕೊಂಡಂತಾ ಕಾಲಘಟ್ಟದಲ್ಲಿ ಅವುಗಳೆಲ್ಲದರಿಂದ ಪ್ರೇರಣೆ ಪಡೆದು, ಅದರ ಜೊತೆಜೊತೆಗೇ ಹೆಜ್ಜೆ ಹಾಕಲು ಪ್ರಾರಂಭಿಸಿದ್ದು ಈ ಮಹಿಳಾ ಚಳವಳಿ. ದೇಶದ ಬೇರೆ ಬೇರೆ ಭಾಗಗಳಲ್ಲಿ ಮಹಿಳಾ ಸಂಘಟನೆಗಳvijaya-dabbe-2 ಅಡಿಯಲ್ಲಿ ರೂಪುಗೊಂಡ ಈ ಮಹಿಳಾ ಚಳವಳಿ ತನ್ನ ಅನನ್ಯತೆ ಹಾಗೂ ವಿಶಿಷ್ಟತೆಯಿಂದ ಇತಿಹಾಸದಲ್ಲಿ ದಾಖಲಾಗಿದ್ದು ಒಂದು ವಿಶೇಷ.

ಬೇರೆ ಬೇರೆ ಚಳವಳಿಗಳು ಹಾಗೂ ವಿಚಾರವಾದದ ಹಿನ್ನಲೆಯ ಜೊತೆಗೆ, ಹೆಚ್ಚಾದ ಮಹಿಳಾ ಶಿಕ್ಷಣ ಪ್ರಮಾಣ, ಮಹಿಳಾ ಸಬಲೀಕರಣ ಹಾಗೂ ಔದ್ಯೋಗಿಕ ಕ್ರಾಂತಿ, ಆ ಸಂದರ್ಭದಲ್ಲಿ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸಿತ್ತು. ಇದೇ ಸಂದರ್ಭದಲ್ಲಿ ೧೯೭೨ರಲ್ಲಿ ಅದೇಮೊದಲ ಬಾರಿಗೆ ಇಂದಿರಾಗಾಂಧಿಯವರ ಸರ್ಕಾರ ಮಹಿಳಾ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ನೇಮಕ ಮಾಡಿದ್ದ ಸಮಿತಿಯ ವರದಿ, ಬೌದ್ಧಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಮಹಿಳೆಯರಲ್ಲಿ ಹೊಸ ಎಚ್ಚರವನ್ನು ಮೂಡಿಸಿತು. ಮಹಿಳೆಯರ ಸ್ಥಾನಮಾನ, ಸಾಮಾಜಿಕ ಸ್ಥಿತಿಯ ಕುರಿತು ಕಾಳಜಿ ಇದ್ದ ಹಲವು ಮಹಿಳೆಯರು ಈ ವರದಿ ಕುರಿತು ದೇಶದ ಎಲ್ಲೆಡೆ ಚರ್ಚೆಗಳನ್ನು, ವಿಚಾರಗೋಷ್ಠಿಗಳನ್ನು, ಕಾರ್ಯಾಗಾರಗಳನ್ನು ನಡೆಸಿದರು. ಇಂಥಹ ಒಂದು ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡ ಮೈಸೂರಿನ ಆಹಾರವಿಜ್ಞಾನಿಗಳಾದ ಡಾ.ಈ.ರತಿರಾವ್ ಹಾಗೂ ಡಾ.ವಿಜಯಾ ದಬ್ಬೆಯವರ ದೃಢ ನಿರ್ಧಾರದಿಂದ 1978 ರಲ್ಲಿ, ಮೈಸೂರಿನಲ್ಲಿ “ಸಮತಾ” ವೇದಿಕೆಯನ್ನು ಹುಟ್ಟುಹಾಕಿಕೊಂಡರು. ಹಾಗೆ ಇದೇ ಸಂದರ್ಭದಲ್ಲಿ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲೂ ಅನೇಕ ಮಹಿಳಾ ಪರ ಸಂಸ್ಥೆಗಳು, ಸಂಘಟನೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಬೆಂಗಳೂರಿನ “ವಿಮೋಚನಾ” ಹಾಗೂ “ಮಾನಿನಿ” ಮುಖ್ಯವಾದವುಗಳು.

“ಸಮತಾ” ಪ್ರಾರಂಭದಲ್ಲಿ ಒಂದು ಮಹಿಳಾ ಅಧ್ಯಯನ ಕೇಂದ್ರವಾಗಿ ಕೆಲಸ ಮಾಡಲು ಉದ್ದೇಶಿಸಿದ್ದರೂ ಮಹಿಳೆಯರ ಸಮಸ್ಯೆಗಳ ತೀವ್ರತೆಯನ್ನು ಗಮನಿಸಿ, ಅಧ್ಯಯನದ ಜೊತೆಗೆ ಹೋರಾಟದ ಹಾದಿಯನ್ನು ಹಿಡಿಯಿತು. ವಿಜಯಾ ದಬ್ಬೆಯವರ ವ್ಯಕ್ಕಿತ್ವವನ್ನು ಈ “ಸಮತಾ ವೇದಿಕೆ” ಹಾಗೂ “ಸಮತಾ ಅಧ್ಯಯನ ಕೇಂದ್ರ”ಗಳನ್ನು ಹೊರತುಪಡಿಸಿ ಕಟ್ಟಿಕೊಳ್ಳುವುದಿಕ್ಕೆ ಸಾಧ್ಯವೇ ಇಲ್ಲ. ಇವು, ಅವರು ಮಹಿಳಾಪರ ಮತ್ತು ಸಮಾಜಮುಖಿಯಾಗುವಂತೆ ಹಂತ ಹಂತವಾಗಿ ಬೆಳೆಸಿವೆ. ಮಹಿಳಾ ಚಳವಳಿಗೆ ಒಂದು ಸಾಂಸ್ಕೃತಿಕ ನೆಲೆಗಟ್ಟು ರೂಪಿಸುವಲ್ಲಿ ಇದವರಿಗೆ ನೆರವಾಗಿವೆ. ಸಮಾಜದ ಎಲ್ಲ ಸ್ತರದ ಮಹಿಳೆಯರ ಮೇಲಿನ ವಿವಿಧ ರೀತಿಯ ಶೋಷಣೆಯ ವಿಶ್ವರೂಪದರ್ಶನ ವಿಜಯಾ ಅವರಿಗಾಗಿದ್ದು ಇವುಗಳಿಂದಲೇ. ‘ಸ್ತ್ರೀವಾದವೆಲ್ಲಾ ಪಾಶ್ಚಾತ್ಯರಿಂದ ಬಂದದ್ದು ನಮ್ಮಲ್ಲಿ ಅದರ ಅವಶ್ಯಕತೆ ಇಲ್ಲ’ ಎನ್ನುವಂತಹ ನಂಬಿಕೆ ಇದ್ದ ಕಾಲದಲ್ಲಿ ಕಲಿತ ತಿಳಿವಳಿಕೆಯ ಜೊತೆಗೆ, ಸ್ವಂತ ಅನುಭವದ ಸಾರವನ್ನು ಬೆರೆಸಿ ತನ್ನ ಬದುಕನ್ನು-ಬರಹವನ್ನು-ಚಟುವಟಿಕೆಗಳನ್ನು ಗಟ್ಟಿಗೊಳಿಸಿಕೊಳ್ಳುವುದರ ಜೊತೆಗೆ, ಅದು ಸಮಾಜಕ್ಕೆ ಉಪಯೋಗಿಯಾಗುವಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಲೆ, ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡರು ವಿಜಯಾ ದಬ್ಬೆಯವರು. ಜೊತೆಗೆ ವಿಚಾರವಂತ ಮಹಿಳೆಯರನ್ನು ನಿರಂತರವಾಗಿ ಸಂಘಟನೆಯಲ್ಲಿ ಹಿಡಿದಿಡುವಂತಾ ಕೆಲಸ ಕಡಿಮೆಯದಲ್ಲ.

ಕರ್ನಾಟಕದಾದ್ಯಂತ ಹಲವಾರು ಮಹಿಳಾ ಜಾಗೃತಿ ಶಿಬಿರ, ಸಂಕಿರಣ, ಸಂಘಟನೆಗಳನ್ನು ವ್ಯವಸ್ಥಿತವಾಗಿ ಇಪ್ಪತ್ತು ವರ್ಷಗಳ ಕಾಲ, ಸಮಾನಮನಸ್ಕರೊಡಗೂಡಿ ನಡೆಸಿದ ಗಟ್ಟಿಗಿತ್ತಿ ಇವರು. ಮಹಿಳೆಯರ ಮೇಲೆ ವಿವಿಧ ರೂಪಗಳಲ್ಲಿ ನಡೆಯುತ್ತಿದ್ದ ವರದಕ್ಷಿಣೆ ಕಿರುಕುಳ, ಸಾವು ಅಥವಾ ಕೊಲೆ, ಅತ್ಯಾಚಾರ, ಕೌಟುಂಬಿಕ ಹಿಂಸೆ, ಮುಂತಾದವುಗಳನ್ನು ಪ್ರತಿಭಟನೆ, ಹೋರಾಟಗಳ ಮೂಲಕ ಹೆಣ್ಣಿನಪರವಾಗಿ ನ್ಯಾಯ ಕೇಳಲು ಬಳಸಿಕೊಂಡಿದ್ದಾರೆ. ಅನೇಕ ದನಿಯಿಲ್ಲದ ಮಹಿಳೆಯರಿಗೆ ದನಿ ನೀಡಿದ್ದು, ನೊಂದ ಮಹಿಳೆಯರಿಗೆ ಸಾಂತ್ವನ ನೀಡಿ, ಸಮಸ್ಯೆಗಳಿಗೆ ಪರಿಹಾರ ನೀಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು “ಸಮತಾ ವೇದಿಕೆ”.

ಚೇತನ ಕನ್ನಡ ಸಂಘದ ಪುಸ್ತಕ ಪುರವಣಿಯ ಸಂಪಾದಕಿಯಾಗಿ, ನೆಲೆ ತಪ್ಪಿದ ಮಹಿಳೆಯರಿಗೆ ಭದ್ರನೆಲೆ ಒದಗಿಸುವ ಉದ್ದೇಶದಿಂದ ರೂಪಿತಗೊಂಡಿರುವ “ಶಕ್ತಿಧಾಮ”ದ ಖಜಾಂಚಿಯಾಗಿ, ಆಳಕ್ಕಿಳಿದು ಅಭ್ಯಸಿಸುವ ಸಂಶೋಧಕಿಯಾಗಿ, ಪುರುಷ ಪ್ರಧಾನ ವ್ಯವಸ್ಥೆಯ ಮೂಲ ಬೇರುಗಳನ್ನು ಜಾಗೃತ ನೆಲೆಗಳಿಂದ ದಿಟ್ಟವಾಗಿ ಪ್ರಶ್ನಿಸುವ ಕವಯಿತ್ರಿಯಾಗಿ, ಕಡ್ಡಿ ತುಂಡು ಮಾಡುವ ನಿಷ್ಠೂರತೆ ಇಲ್ಲದೇ, ಮಗುವಿಗೆ ತಿಳಿ ಹೇಳುವ ನೆಲೆಯ ವಿಮರ್ಶಕಿಯಾಗಿ, ನಿರ್ಲಕ್ಷಿತ ಲೇಖಕಿಯರ ಕುರಿತ ಲೇಖನಗಳ ಸಂಪಾದಕಿಯಾಗಿ, ಮಹಿಳಾ ಲೋಕದ ಅಧ್ಯಯನದ ಗಂಭೀರ ಲೇಖಕಿಯಾಗಿ, ಸಂಸ್ಕೃತಿಯ ಪುನರ್ ನಿರ್ಮಾಣದ ದಿಟ್ಟ ಚಿಂತಕಿಯಾಗಿ, ಪುರಾಣ ಪ್ರತೀಕಗಳನ್ನು ಮುರಿದು ಕಟ್ಟುವ ವಿದ್ವಾಂಸರಾಗಿ, ಸಮರ್ಥ ಅನುವಾದಕಿಯಾಗಿ, ಪ್ರವಾಸದಲ್ಲಿ ತನ್ನ ಸುತ್ತಲನ್ನು ಸೂಕ್ಷ್ಮತೆಯೊಂದಿಗೆ ದಾಖಲಿಸುವ ಸಾಹಿತಿಯಾಗಿ, ವಿಮೆನ್ ರೈಟಿಂಗ್ ಇನ್ ಇಂಡಿಯಾ- ಕನ್ನಡ ವಿಭಾಗದ ಪ್ರಾದೇಶಿಕ ಸಂಪಾದಕಿಯಾಗಿ, ಲೇಖಕಿಯರ ಆತ್ಮ ಕಥಾನಕ “ಲೇಖ-ಲೋಕ”ದ ಸಂಪಾದಕಿಯಾಗಿ……… ಹೀಗೆ ಆಧುನಿಕ ಲೇಖಕಿಯರು ಮಾತ್ರವಲ್ಲ, ಆಧುನಿಕ ಮಹಿಳೆಯರೆಲ್ಲರ ಮೇಲೂ ಪ್ರಭಾವ ಬೀರಬಲ್ಲಂತಾ ಬಹುಮುಖಿ ವ್ಯಕ್ತಿತ್ವ ವಿಜಯಾ ದಬ್ಬೆಯವರದ್ದು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಾರಂಭದ ದಿನಗಳಲ್ಲಿ, ಮಹಿಳೆಯರು ಓದಲು ಸೇರಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅನೇಕರಿಗೆ ಪ್ರೋತ್ಸಾಹ, ಪ್ರೇರಣೆ ನೀಡಿದ್ದಾರೆ. ಮಹಿಳಾ ಉಪನ್ಯಾಸಕಿಯರನ್ನು ರೂಪಿಸಿದ್ದಾರೆ. ಮಹಿಳಾ ಪಿ.ಹೆಚ್.ಡಿ ಗೈಡ್‌ಗಳು ಇಲ್ಲದಿದ್ದ ಕಾಲದಲ್ಲಿ ತಾವೇ ಪ್ರಥಮ ಮಹಿಳಾ ಗೈಡ್ ಆಗಿ ದಾಖಲೆ ನಿರ್ಮಿಸುವುದರೊಂದಿಗೆ, ಅನೇಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಇವೆಲ್ಲವೂ ಅವರ “ವಿಜಯಾಭಿನಂದನ” ಗ್ರಂಥದಲ್ಲಿ ದಾಖಲಾಗಿವೆ. ಅವರ ಗುರುಗಳು, ಸಹವರ್ತಿಗಳು, ಮಿತ್ರವೃಂದ, ಶಿಷ್ಯರು, ಸಹಾಯ ಪಡೆದವರು ಅವರನ್ನು, ಅವರ ಗುಣ-ಸ್ವಭಾವಗಳನ್ನು ಮೆಚ್ಚಿ ಬರೆದಿರುವ ಬರಹಗಳನ್ನು ಓದಿದರೆ ಕಣ್ಣು ತುಂಬಿಬರುತ್ತದೆ. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾಡುವುದೆಲ್ಲವನ್ನೂ ಅವರು ಕೇವಲ ಇಪ್ಪತ್ತು ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ ಎಂಬುದೇ ಅಚ್ಚರಿಯ ವಿಷಯ. ಅನೇಕರಿಗೆ ವಿದ್ಯಾಭ್ಯಾಸಕ್ಕೆ ಹಣ ನೀಡಿದ್ದಾರೆ. ತಮ್ಮ ಮನೆಯಲ್ಲೇ ಇಟ್ಟುಕೊಂಡು ಓದಿಸಿದ್ದಾರೆ. ಇಂತಹ ಅನನ್ಯ ವ್ಯಕ್ತಿತ್ವದ ವಿಜಯಾ ದಬ್ಬೆಯವರ ಬರಹಗಳು ಮಾತ್ರವಲ್ಲ, ಅವರ ಕೆಲಸಗಳೂ ನಮಗೆ ಮಾದರಿಯಾಗುವಂತದ್ದು.

ನನ್ನ ವೈಯಕ್ತಿಕ ನೆಲೆಯಲ್ಲಿ ವಿಜಯಾ ದಬ್ಬೆಯವರ ಪ್ರಭಾವ ತುಂಬಾ ದೊಡ್ಡದು. ವಿದ್ಯಾರ್ಥಿ ಜೀವನದಲ್ಲಿದ್ದಾಗ, ಅವರು ಮತ್ತವರ ತಂಡದವರು ಶತಮಾನಗಳಿಂದ ಸ್ತ್ರೀ ಪ್ರವೇಶ ನಿಷಿದ್ಧವಾಗಿದ್ದ ದೇವಾಲಯವೊಂದಕ್ಕೆ ಪ್ರತಿಭಟನಾತ್ಮಕವಾಗಿ ಪ್ರವೇಶಿಸಿದ್ದು ಕೇಳಿ ರೋಮಾಂಚನಗೊಂಡಿದ್ದೆ. ಅವರ ಮಹಿಳಾ ಪರ ಹೋರಾಟಗಳಿಂದ ಪ್ರೇರಿತರಾಗಿ ರಾಜ್ಯಾದ್ಯಂತ ಅನೇಕ ಮಹಿಳಾ ಸಂಘಟನೆಗಳು- ಸಂಸ್ಥೆಗಳು ಎಂಭತ್ತರ ದಶಕದಲ್ಲಿ ಹುಟ್ಟಿಕೊಂಡಿದ್ದವು. ಗೌರಿಬಿದನೂರಿನಂತ ಪುಟ್ಟ ತಾಲ್ಲೂಕಿನಲ್ಲಿ ಕಾಲೇಜು ಓದುತ್ತಿದ್ದ ನಾನು, ರೂಪ್ ಕನ್ವರಳ ಸತಿಸಹಗಮನ, ಹಾಗೂ ತಿಪಟೂರಿನ ವೈದ್ಯರ ಪತ್ನಿ ಶಶಿಕಲಾ ವರದಕ್ಷಿಣೆ ಪ್ರಕರಣಗಳಲ್ಲಿ, ಮೈಸೂರಿನ ಸಮತಾ ನಡೆಸಿದ ಪ್ರತಿಭಟನೆಯಂತೆಯೇ ಗೌರಿಬಿದನೂರಿನ ನ್ಯಾಷನಲ್ ಕಾಲೇಜು ಹಾಗೂ ಆಚಾರ್ಯ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳನ್ನು ಸೇರಿಸಿ ಮೌನ ಪ್ರತಿಭಟನೆ ಮಾಡಿದ್ದು ಹಾಗೂ ಬೀದಿಗಿಳಿದು ಹೋರಾಟ ನಡೆಸಿದ್ದು ನೆನಪಾಗುತ್ತದೆ. ಮಹಿಳೆಯರನ್ನು ಸೇರಿಸಿ ಪುರಸಭೆಯ ಎದುರು ಖಾಲಿಕೊಡಗಳ ಪ್ರದರ್ಶನ ನಡೆಸಿದ್ದು, ಮಹಿಳಾ ಉಪನ್ಯಾಸಕಿಯರಿಗೆ ಅನುಸರಿಸುತ್ತಿದ್ದ ತಾರತಮ್ಯ ನೀತಿಯನ್ನು, ವಿದ್ಯಾರ್ಥಿಗಳನ್ನು ಸೇರಿಸಿ ಪ್ರತಿಭಟಿಸಿದ್ದು……… ಹೀಗೆ ಇಂಥಹ ಹತ್ತು ಹಲವು ಪ್ರಗತಿಪರ ಕಾರ್ಯಗಳಿಗೆ ಸಮತಾ ಹಾಗೂ ವಿಜಯಾ ದಬ್ಬೆಯವರು ನನಗೆ ಪರೋಕ್ಷ ಪ್ರೇರಣೆ ನೀಡಿದ್ದಾರೆ. ನನ್ನಂತೆ ಅವರಿಂದ ಪ್ರೇರಣೆ ಪಡೆದ ಅನೇಕ ಲೇಖಕಿಯರು, ಮಹಿಳೆಯರು, ಅಜ್ಞಾತರಿರಬಹುದು. ಇನ್ನು ಅವರ ‘ಇರುತ್ತವೆ’, ‘ನೀರು ಲೋಹದ ಚಿಂತೆ’, ‘ಇತಿಗೀತಿಕೆ’ ಕವನ ಸಂಕಲನಗಳು ಕಾವ್ಯಾಭ್ಯಾಸಿಗಳಿಗೆಲ್ಲಾ, ಅದರಲ್ಲೂ ಮಹಿಳಾ ಚಳುವಳಿಗಳ ಹಿನ್ನಲೆಯಲ್ಲಿ ಕವಿತೆಗಳನ್ನು ಅಧ್ಯಯನ ಮಾಡುವ ಸಂಶೋಧಕರು, ಹಾಗೂ ವಿದ್ಯಾರ್ಥಿಗಳಿಗೆಲ್ಲಾ ಆಕರ ಕೃತಿಗಳಾಗಿವೆ ಹಾಗೂ ಪ್ರಭಾವ ಬೀರುವಂತವೇ ಆಗಿವೆ. ಸ್ತ್ರೀವಾದಿ ಅಧ್ಯಯನಕ್ಕೆ ಅವರ ಮಹಿಳಾ ಕಾಳಜಿಯ ಅಸಂಖ್ಯ ಲೇಖನಗಳು ಮುನ್ನುಡಿಗಳಿದ್ದಂತೆ. ಅವನ್ನು ಓದಿಕೊಳ್ಳದೇ ಮುನ್ನಡೆಯುವಂತೆಯೇ ಇಲ್ಲ.

ಅವರು ಆರೋಗ್ಯದಿಂದಿದ್ದಾಗ ನಾನವರನ್ನು ನೋಡಿದ್ದು ಒಂದೇ ಬಾರಿ. ಆದರೆ ಅವರು ಅಪಘಾತಕ್ಕೀಡಾಗಿ ನೆನಪಿನಶಕ್ತಿ ಕಳೆದುಕೊಂಡ ನಂತರದ ಇತ್ತೀಚೆಗಿನ ಎರಡು ವರ್ಷಗಳಲ್ಲಿ 3-4 ಬಾರಿ ಅವರನ್ನು ಭೇಟಿಯಾಗಿದ್ದೇನೆ. ಆಗೆಲ್ಲಾ ಅವರ ಅದಮ್ಯ ಜೀವನ ಪ್ರೀತಿಯನ್ನು ಕಂಡು ಬೆರಗಾಗಿದ್ದೇನೆ. vijaya-dabbe-3ಹೊರಗಿನದೆಲ್ಲವನ್ನೂ ಗ್ರಹಿಸುವ ಶಕ್ತಿ ಇದ್ದರೂ ಅದನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಶಕ್ತಿಯನ್ನು ಕಳೆದುಕೊಂಡಿರುವ ವಿಜಯಾ ಮೇಡಂ, ಈಗ ಕವಿತೆಗಳನ್ನು, ಚಿಕ್ಕ ಕಥೆಗಳನ್ನು ಬರೀತಿದ್ದೀನಿ. ಪ್ರಕಟಣೆಗೆ ಕಳಿಸಕ್ಕಾಗಲ್ಲ ಇನ್ನೂ ತಿದ್ದಬೇಕು. ನಿಮ್ಮೆಲ್ಲರ ಪ್ರೀತಿ ನಾನು ಮೊದಲಿನಂತಾಗಲು ಸಹಕರಿಸುತ್ತದೆ ಎಂದು ಹೇಳುವಾಗ ಕಣ್ಣು ತುಂಬಿ ಬರುತ್ತದೆ. ಅವರ ಅಸ್ಪಷ್ಟ ಕವಿತೆಗಳು ನಿಗೂಢವಾಗಿ, ಅವರೊಳಗಿನದನ್ನೆಲ್ಲಾ ತೋಡಿಕೊಳ್ಳಲು ಕಾದಿರುವ ಏಕೈಕ ಮಾಧ್ಯಮವಾಗಿ ನನಗೆ ತೋರುತ್ತದೆ. ಇಂಥಹಾ ಹೊತ್ತಿನಲ್ಲೂ ಅವರಲ್ಲಿರುವ ಆಶಾವಾದ ಬರೀ ಲೇಖಕಿಯರನ್ನು ಮಾತ್ರವಲ್ಲ, ಯಾವುದೇ ಪರಿಸ್ಥಿತಿಯಲ್ಲಿರುವ ಎಂಥಹಾ ನಿರಾಶಾವಾದಿಗಳನ್ನೂ ಪ್ರೇರೇಪಿಸುವಂತದ್ದು.

ಅವರ ಊರು ದಬ್ಬೆಗೆ ಹೋದಾಗ ಅವರ ತಂದೆ-ತಾಯಿ ವಿಜಯ ಮೇಡಂ ಅವರ ಬಾಲ್ಯದ ಕುರಿತು ವಿವರಿಸುವಾಗಲೆಲ್ಲಾ ಅವರ ಬಗೆಗಿನ ಗೌರವ ಮತ್ತಷ್ಟು ಹೆಚ್ಚುತ್ತದೆ. ದಬ್ಬೆಯಂಥಾ ಪುಟ್ಟಹಳ್ಳಿಯಲ್ಲಿ ಆ ಕಾಲಕ್ಕೆ ಶಿಕ್ಷಣ ಸೌಲಭ್ಯಗಳಿಲ್ಲದಿದ್ದಾಗ, ಪರ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ವಿಜಯಾ ಅವರು, ನಂತರ ಹಾಸನದಲ್ಲಿ ಮನೆ ಮಾಡಿಕೊಂಡು, ಹೈಸ್ಕೂಲಿಗೆ ಸೇರಿ ತಮ್ಮ-ತಂಗಿಯರನ್ನೂ ಜೊತೆಗಿರಿಸಿಕೊಂಡು ಅಡಿಗೆ, ಮನೆವಾರ್ತೆ ನೋಡಿಕೊಳ್ಳುತ್ತಾ ಓದಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಹೋಗಿ, ಅಲ್ಲಿ ಇಷ್ಟೆಲ್ಲಾ ಪ್ರಬುದ್ಧವಾಗಿ ಬೆಳೆದಿದ್ದನ್ನು ಕೇಳುವಾಗ, ಕಡು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರಿಗೆ, ಒಬ್ಬಂಟಿಯಾಗಿ ಎಲ್ಲವನ್ನೂ ಎದುರಿಸುವ ಇಂಥಹಾ ದಿಟ್ಟತನ ಎಲ್ಲಿಂದಾ ಬಂತು? ಎಂದು ಆಶ್ಚರ್ಯವಾಗುತ್ತದೆ. ಜೊತೆಗೇ ಅವರ ಬದುಕಿನ ಈ ಎಲ್ಲ ಘಟ್ಟಗಳೂ ಜೀವನ ಚರಿತ್ರೆಯ ರೂಪದಲ್ಲಾದರೂ ದಾಖಲಾಗಬೇಕು ಎಂಬ ಆಸೆ ನನ್ನದು. ಅವರು ಮಾಮೂಲಿನಂತೆ ಆರೋಗ್ಯದಿಂದ ಇದ್ದಿದ್ದರೆ ಇಷ್ಟು ಹೊತ್ತಿಗೆ ಅವರೇ ಆತ್ಮಕಥೆಯನ್ನು ಬರೆದುಕೊಂಡಿರುತ್ತಿದ್ದರೇನೋ? ಅವರ ಬದುಕನ್ನು ದಾಖಲಿಸುವ ಕುರಿತು ಅವರೊಡನೆ ಒಡನಾಡಿದ ಗೆಳತಿಯರಲ್ಲಿ ಹೇಳುತ್ತಲೇ ಬಂದಿದ್ದೇನೆ. ಅದು ಖಂಡಿತಾ ಮುಂದಿನ ಪೀಳಿಗೆಯ ನಮ್ಮಂಥಾ ಅನೇಕರಿಗೆ ಪ್ರೇರಣೆ ನೀಡುವಂತದ್ದು.

ಕರ್ನಾಟಕ ಲೇಖಕಿಯರ ಸಂಘದಿಂದ ಹೊರ ಬಂದ “ಲೇಖ-ಲೋಕ” ಮಹಿಳೆಯರ ಆತ್ಮಕಥಾನಕಗಳ ಸಂಕಲನದಲ್ಲಿ ನಾನು ಮೊದಲು ಹುಡುಕಿದ್ದು ವಿಜಯಾ ದಬ್ಬೆಯವರ ಆತ್ಮಕಥಾನಕವನ್ನು. ಆದರೆ, ತಮ್ಮ ಬದುಕಿನ ಕಥೆಯನ್ನು ಸಂಘದ ಸಂವಾದ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದವರಿಗೆ ಅದನ್ನು ಲಿಖಿತ ರೂಪದಲ್ಲಿ ದಾಖಲಿಸುವ ಮೊದಲೇ ಅಪಘಾತವಾಗಿದ್ದು ನಮ್ಮ ದುರದೃಷ್ಟ ಎಂದು ನಾನು ಭಾವಿಸುತ್ತೇನೆ. ಅವರೇ ಅವರ ಬದುಕಿನ ಸೂಕ್ಷ್ಮ, ಮುಖ್ಯ ವಿಷಯಗಳ ಕುರಿತು ಬರೆದುಕೊಂಡಿದ್ದರೆ ಖಂಡಿತಾ ಅದೊಂದು ಮನೋಜ್ಞವಾದ ಬರಹವಾಗಿರುತ್ತಿತ್ತು. ಈಗಲೂ ಅವರ ಕುಟುಂಬದವರು, ಆತ್ಮೀಯರು, ಗೆಳತಿಯರು ಅವರ ಬದುಕಿನ ಪ್ರಮುಖಘಟ್ಟಗಳನ್ನು ದಾಖಲಿಸುವ ಕೆಲಸವನ್ನು ಮಾಡಬೇಕು. ಅವರ ಅನನ್ಯವೂ, ವಿಶಿಷ್ಟವೂ ಆದ ಬದುಕು ಸರ್ವಕಾಲಕ್ಕೂ ಮಾದರಿಯಾಗಿ ಉಳಿಯುವಂತೆ ದಾಖಲಾಗಬೇಕು ಎಂದು ಆಶಿಸುತ್ತೇನೆ. ಹಾಸನ ಜಿಲ್ಲೆಯ ಪುಟ್ಟಹಳ್ಳಿಯ ಹೆಣ್ಣುಮಗಳೊಬ್ಬಳು ಸಾಹಿತ್ಯ ಹಾಗೂ ಮಹಿಳಾ ಚರಿತ್ರೆಯಲ್ಲಿ ಈ ಎತ್ತರವನ್ನು ತಲುಪಿದ್ದು ಖಂಡಿತಾ ದೊಡ್ಡ ಸಾಧನೆಯೇ. ವಿಜಯಾ ದಬ್ಬೆಯವರು ಮತ್ತೆ ಮೊದಲಿನಂತಾಗಲಿ ನನ್ನಂಥಾ ಅನೇಕ ಕಿರಿಯರಿಗೆ ಅವರ ಬರಹ, ಕೆಲಸಗಳು, ಚೈತನ್ಯ ಸದಾ ಪ್ರೇರಣೆ ನೀಡುವಂತಾಗಲಿ ಎಂದು ಮನತುಂಬಿ ಹಾರೈಸುತ್ತೇನೆ. ಅವರ ಬದುಕು-ಬರಹ-ಚಟುವಟಿಕೆಗಳನ್ನು ಈ ಮೂಲಕ ಮತ್ತೊಮ್ಮೆ ನೆನಪಿಸಿಕೊಳ್ಳಲು ಅನುವು ಮಾಡಿಕೊಟ್ಟ ಕರ್ನಾಟಕ ಸಾಹಿತ್ಯ ಅಕಾಡೆಮಿ, ಹಾಸನ ಜಿಲ್ಲಾ ಲೇಖಕಿಯರ ಬಳಗಕ್ಕೆ ಹೃತ್ಪೂರ್ವಕವಾಗಿ ವಂದಿಸುತ್ತೇನೆ.