ನಿನ್ನ ಬಾಂದಳದಂತೆ ನನ್ನ ಮನವಿರಲಿ, ನಿನ್ನ ಸಾಗರದಂತೆ ನನ್ನ ಎದೆಯಿರಲಿ

– ಬಿ.ಶ್ರೀಪಾದ ಭಟ್

ನೀನೊಬ್ಬನೆಯೆ ಅಲ್ಲ, ಸಾವಿನಳುಕಿಗೆ ಸಿಕ್ಕಿ
ಮುದ್ದಾಡಲರ್ಹವಹ ಶಿಶುಗಳೇನು ಶಿಲೆಗೆ
ಬಡಿದು ಕೊಂದೆಂಟನೆಯದರ ಕೈಲಿ ಸೀಳಲ್ಗೊಲೆಗೆ
ತುತ್ತಾದವನು ಕಂಸ ನಮ್ಮೆದೆಗಳನು ಕುಕ್ಕಿ
ನೋಡಿದರೆ ಕಾಣುವುದು ಮಕ್ಕಳೆಲುಬಿನ ರಾಶಿ !
ಒಂದೊಂದು ಹೃದಯವೂ ಕಂಸಶಿಲೆ
– ಕುವೆಂಪು

ಜೀವನವಿಡೀ ನಿಗಿನಿಗಿ ಕೆಂಡದಂತೆ ಉರಿದು ಕಡೆಗೆ ಬೂದಿಯಾಗಿದ್ದಾರೆ ನಾಮದೇವ ಢಸಾಳ. ಢಸಾಳ ನಿನ್ನೆ ಕರುಳಿನ ಕಾನ್ಸರ್‌ನಿಂದ ಕೊನೆಯುಸಿರೆಳಿದಿದ್ದಾರೆ. ಢಸಾಳರ ಹೆಸರು ಕೇಳಿದಾಕ್ಷಣ ನೋವಿನಿಂದ ಹೃದಯ ಕಿವುಚುತ್ತದೆ. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಎನ್ನುವ ಪ್ರಶ್ನೆಗೆ ಎಲ್ಲವನ್ನೂ ಕಂಡೆ ಎನ್ನುವಂತಿತ್ತು ಢಸಾಳರ ಬದುಕು. ಅಲ್ಲಿ ಹೋರಾಟವಿತ್ತು, ಕವಿತೆಯಿತ್ತು, ದಾರಿ ತಪ್ಪಿದ ಮಗುವಿನ ನಡೆಗಳಿತ್ತು, ಕ್ರೌರ್ಯವಿತ್ತು, ಸಂಸಾರ ಇನ್ನೇನು ನುಚ್ಚು ನೂರಾಗುತ್ತದೆ ಎನ್ನುವಷ್ಟರಲ್ಲಿ ಮರಳಿ ತೇಲುವಂತಹ ನೋವಿನ ಪಯಣವಿತ್ತು. ನಾಮದೇವ ಢಸಾಳರ ಕುರಿತು ಬರೆಯಲಿಕ್ಕೆ ನಮ್ಮಲ್ಲಿ ಶಕ್ತಿ ಇದೆಯಾ ಎನ್ನುವಷ್ಟರ ಮಟ್ಟಿಗೆ ಸದಾ ಉರಿಯುತ್ತಿದ್ದ ಢಸಾಳರ ಕುರಿತು ನಾವು ಪ್ರಾಮಾಣಿಕವಾಗಿ ಬರೆಯದಿದ್ದರೆ ನಾವೂ ಉರಿದು ಹೋಗುವುದರಲ್ಲಿ ಅನುಮಾನವೇ ಇಲ್ಲ.

ಎಪ್ಪತ್ತರ ದಶಕದಲ್ಲಿ ತಮ್ಮ ಬೆಂಕಿಯುಗಳುವ ಕವಿತೆಗಳನ್ನು ಕುರಿತು “ಕವಿತೆಗಳು ಬುಲೆಟ್‌ನಂತಿರಬೇಕು, ಅವುಗಳನ್ನು ಸರಿಯಾಗಿ ಗುರಿಯಿಡಬೇಕು, ಅವುಗಳನ್ನು ಸ್ನೇಹಿತರಿಗಾಗಿ ಬಳಸಬೇಕು” ಎಂದು ಹೇಳಿದ್ದರು. ಅವರ ಮೊದಲ ಕವನ ಸಂಕಲನ “ಗೋಳಪಿತ’ದ ಮೂಲಕ ಮರಾಠಿ ಸಾಹಿತ್ಯವನ್ನೇ ಬೆಚ್ಚಿಬೀಳಿಸಿದ್ದರು. namdeo-dasalಅದರ rawness, intense & unorthodox ಶೈಲಿ ಇಡೀ ಮರಾಠಿ ಸಾಹಿತ್ಯಕ್ಕೆ ನೀಡಿದ ಆ ಮಹಮದ್ ಅಲಿ ಪಂಚ್ ಐತಿಹಾಸಿಕವಾದ್ದು.

ತಮ್ಮ ಕವಿತೆಗಳ ಮೂಲಕ ಮೌನವಾಗಿ ಬೇಯುತ್ತಿದ್ದ ದಲಿತರಿಗೆ ಧ್ವನಿಯಾಗಿದ್ದಲ್ಲದೆ ಮಧ್ಯಮವರ್ಗದ ಮರಾಠಿ ಮಾನೂಸ್‌ರನ್ನು ಕಾಮಟೀಪುರದ ಸ್ಲಂನ ಕ್ರೌರ್ಯಕ್ಕೆ,ತಳಸಮುದಾಯಗಳ ದಯನೀಯ ಬುದುಕಿಗೆ, ಹಿಜಡಾಗಳ ನೋವಿಗೆ ಮುಖಾಮುಖಿಯಾಗಿಸಿದ್ದರು ಢಸಾಳ. ಇದನ್ನು ಸಾಧಿಸಿದ್ದು ಯಾವುದೇ ಅಕಾಡೆಮಿಕ್ ಅಹಂಕಾರದಿಂದಲ್ಲ ಬದಲಾಗಿ ಸದಾ ಸಮಾಜಕ್ಕೆ ಕತ್ತು ಕೊಡುವ ತನ್ನ ನಿಸ್ವಾರ್ಥ ಬಂಡಾಯದ ಗುಣದಿಂದ. ಹೈಸ್ಕೂಲನ್ನೂ ಮುಗಿಸದ ಢಸಾಳ ಮರಾಠಿ ಸಾಹಿತ್ಯದ ಉದ್ದಾಮ ಪಂಡಿತರಿಗೆ ಬನ್ನಿ ನೀವು ಕಂಡರಿಯದ ಲೋಕವೊಂದಿದೆ ಇಲ್ಲಿ ಎಂದು ಪ್ರತ್ಯಕ್ಷ ದರ್ಶನ ಮಾಡಿಸಿದರು.

ಆಗ ತಾನೆ ಅಮೇರಿಕದ ಬ್ಲಾಕ್ ಪ್ಯಾಂಥರ್‍ಸ್‌ನಿಂದ ಪ್ರಭಾವಿತರಾಗಿ ಗೆಳೆಯರಾದ ರಾಜ ಡಾಳಿ, ಜೆ.ವಿ.ಪವಾರ್ ಅವರ ಜೊತೆಗೂಡಿ “ದಲಿತ ಪ್ಯಾಂಥರ್‍ಸ್” ಅನ್ನು ಸ್ಥಾಪಿಸಿದ್ದರು. ಎಪ್ಪತ್ತರ ದಶಕದಲ್ಲಿ “ದಲಿತ್ ಪ್ಯಾಂಥರ್‍ಸ್” ಮಹರಾಷ್ಟ್ರದಲ್ಲಿ ಅಂಬೇಡ್ಕರ್‌ವಾದಿಗಳಿಗೆ ವಿಶಾಲವಾದ ಹೋರಾಟದ ಆಡೊಂಬಲವಾಗಿತ್ತು. ಅತ್ಯಂತ ಪ್ರಖರ ವೈಚಾರಿಕತೆ, ಸಮತಾವಾದದ, ಎಡಪಂಥೀಯ ಲೇಖಕರು ಮತ್ತು ಚಿಂತಕರ ಪಡೆಯೇ ಅಂದಿನ ದಲಿತ ಪ್ಯಾಂಥರ್‍ಸ ಸಂಘಟನೆಯಲ್ಲಿತ್ತು. ಆದರೆ ಎಲ್ಲಾ ಪ್ರಗತಿಪರ ಹಾಗೂ ಜಾತ್ಯಾತೀತ ಸಂಘಟನೆಗಳಿಗೂ ತಗಲುವ ಜಾಡ್ಯದಂತೆ ಈ ಸಂಘಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದ ರಾಜ ಢಾಳೆ ಹಾಗೂ ನಾಮದೇವ ಢಸಾಳರ ನಡುವಿನ ಈ ವೈಯುಕ್ತಿಕ ಸಿದ್ಧಾಂತಗಳ ಭಿನ್ನತೆ ದಲಿತ ಪ್ಯಾಂಥರ್‍ಸ್ ಸಂಘಟನೆಯನ್ನೂ ಬಿಡಲಿಲ್ಲ. ರಾಜ ಢಾಳೆಯವರ ನೇತೃತ್ವದ ಗುಂಪು ಎಡಪಂಥೀಯ ಒಲವುಳ್ಳ ಸೆಕ್ಯುಲರ್ ರಾಜಕಾರಣವನ್ನು ಪುರಸ್ಕರಿಸಲಿಲ್ಲ. ಬದಲಾಗಿ ಅಂಬೇಡ್ಕರ ಪ್ರತಿಪಾದಿಸಿದ ಬುದ್ಧ ಧರ್ಮದ ಮಾರ್ಗದ ಕಡೆಗೆ ತನ್ನ ನಿಲುವನ್ನು ತಳೆದಿತ್ತು. ಇಲ್ಲಿ ಬುದ್ಧನ ಚಿಂತನೆಗಳ ಪ್ರಜ್ಞೆಯಲ್ಲಿ ಮುನ್ನಡೆಯಬೇಕೆಂಬುದೇ ರಾಜ ಢಾಳೆಯವರ ಪ್ರಮುಖ ಆಶಯವಾಗಿತ್ತು. ಆದರೆ ನಾಮದೇವ ಢಸಾಳರವರ ನೇತೃತ್ವದ ಗುಂಪು ಮಾರ್ಕ್ಸವಾದದ ನೆಲೆಗಟ್ಟಿನಲ್ಲಿ, ತಮ್ಮ ಎಡಪಂಥೀಯ ಚಿಂತನೆಗಳನ್ನು ನೇರವಾಗಿಯೇ ಪ್ರತಿಪಾದಿಸುತ್ತಾ ಬುದ್ಧನೆಡೆಗಿನ ನಡೆಯನ್ನು ಅಷ್ಟೊಂದು ತೀವ್ರವಾಗಿ ಸಮರ್ಥಿಸಲಿಲ್ಲ. ಇಲ್ಲಿ ಢಸಾಳರು ಮಾರ್ಕ್ಸವಾದಿಗಳ ಮೂಲ ಸಿದ್ಧಾಂತವಾದ ವರ್ಗ ಸಂಘರ್ಷ ಮತ್ತು ಆರ್ಥಿಕ ಆಭಿವೃದ್ಧಿ ಮೂಲಕ ಅಸ್ಪೃಶ್ಯತೆಯ ನಿರ್ನಾಮ ಹಾಗೂ ಜಾತಿವಿನಾಶದ ಕನಸನ್ನು ಕಂಡರು. ಇದು ಅಂಬೇಡ್ಕರವಾದದ Namdeo_Dhasalಬುದ್ಧನಡೆಗಿನ ನಡೆಯ ಮೂಲಕ ಜಾತಿವಿನಾಶ ಮತ್ತು ದಲಿತರ ಆತ್ಮಾಭಿಮಾನದ ಕನಸಿಗೆ, ಚಿಂತನೆಗೆ ವ್ಯತಿರಿಕ್ತವಾಗಿತ್ತು.

ಕಡೆಗೆ ಢಸಾಳರು 1977 ರಲ್ಲಿ ದಲಿತರ ಪರವಾಗಿ ಇಂದಿರಾಗಾಂದಿಯವರನ್ನು ಬೆಂಬಲಿಸುವುದರೊಂದಿಗೆ ದಲಿತ ಪ್ಯಾಂಥರ್‍ಸ ಇಬ್ಭಾಗವಾಯಿತು. ಆ ದಿನಗಳನ್ನು ಢಸಾಳರ ಅಪ್ತ ಸ್ನೇಹಿತ ದಿಲೀಪ್ ಚಿತ್ರೆ ಅವರಿಂದಲೇ ಕೇಳಬೇಕು. ಕಡೆಗೆ ಢಸಾಳರು ಇಂಡಿಯಾದ ಕಮ್ಯನಿಷ್ಟರ ಕುರಿತಾಗಿಯೂ ತೀವ್ರ ನಿರಾಸೆ ಹೊಂದಿದ್ದರು. ಎಪ್ತತ್ತರ ದಶಕದಲ್ಲಿ ಶಿವಸೇನೆಯ ಪುಂಡಾಟಿಕೆಯ ವಿರುದ್ಧ, ದೌರ್ಜನ್ಯದ ವಿರುದ್ಧ ದಲಿತ್ ಪ್ಯಾಂಥರ್‍ಸನ ಮೂಲಕ ನಿರಂತರವಾಗಿ ಹೋರಾಡಿದ್ದ ಢಸಾಳ ತೊಂಬತ್ತರ ದಶಕದ ಹೊತ್ತಿಗೆ ಶಿವಸೇನೆಯೊಂದಿಗೆ ಗುರುತಿಸಿಕೊಂಡು ಅದರ ಮುಖವಾಣಿ “ಸಾಮ್ನ” ಪತ್ರಿಕೆಗೆ ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದರು. ಇದು ಅವರ ಅಭಿಮಾನಿಗಳನ್ನು, ಗೆಳೆಯರನ್ನು ಶಾಕ್‌ಗೊಳಿಸಿತ್ತು. ಢಸಾಳರ ಒಟ್ಟಾರೆ ರಾಜಕೀಯ ನಡೆಗಳು ದಯನೀಯವಾಗಿ ಸೋಲುತ್ತಿದ್ದದ್ದು ಅವರ ಆತ್ಮಶಕ್ತಿಯನ್ನೇ ನಾಶಮಾಡಿತ್ತು.

ಢಸಾಳರಿಗಿಂತ ಹದಿನೈದು ವರ್ಷಗಳಷ್ಟು ಕಿರಿಯರಾದ ಅವರ ಪತ್ನಿ, ಲೇಖಕಿ, ಕವಿಯತ್ರಿ ಮಲ್ಲಿಕಾ ಅಮರ್ ಶೇಕ್‌ರು ಢಸಾಳರ ಅನಿಶ್ವಿತ, ಕ್ಷಣಕ್ಷಣಕ್ಕೆ ತಿರುಗುತ್ತಿದ್ದ ರಾಜಕೀಯ ನಡೆಗಳೊಂದಿಗೆ ತೀವ್ರ ಭಿನ್ನಾಭಿಪ್ರಾಯವನ್ನು ಹೊಂದಿದ್ದರು. ಇವರ ವೈಯುಕ್ತಿಕ ಬದುಕು ಅನೇಕ ತಲ್ಲಣಗಳನ್ನು , ಆಳವಾದ ನೋವಿನ ಜೀವನವನ್ನು ಒಳಗೊಳ್ಳಬೇಕಾಯಿತು.

ಕಡೆಗೆ ದೀರ್ಘಕಾಲದ ಮಾನಸಿಕ, ದೈಹಿಕ ಕಾಯಿಲೆಯಿಂದ ಮುಕ್ತಿ ಹೊಂದಿದ ಢಸಾಳ ಮೊನ್ನೆ ತೀರಿಕೊಂಡಿದ್ದಾರೆ.

ಅವರ ಪದ್ಯವೊಂದರ ಆಯ್ದ ಸಾಲುಗಳು:
This is hell
This is a swirling vortex
This is an ugly agony
This is pain wearing a dancer’s anklets

Shed your skin, shed your skin from its very roots
Skin yourself
Let these poisoned everlasting wombs become disembodied.
Let not this numbed ball of flesh sprout limbs
Taste this
Potassium cyanide!
As you die at the infinitesimal fraction of a second,
Write down the small ‘s’ that’s being forever lowered.

Here queue up they who want to taste
Poison’s sweet or salt flavour
Death gathers here, as do words,
In just a minute, it will start pouring here.

Skin yourself ಎಂದು ಬರೆದ ನಾಮದೇವ ಢಸಾಳ, ನಿನ್ನ ಆತ್ಮ ಇನ್ನಾದರೂ ಶಾಂತಿಯಿಂದಿರಲಿ.

Leave a Reply

Your email address will not be published. Required fields are marked *