Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಸಮ್ಮೇಳನ – ಭೈರಪ್ಪರನ್ನು ಸಭೆಯಲ್ಲಿ ಟೀಕೆ ಮಾಡುತ್ತಿದ್ದರೆ, ಜನ ಚಪ್ಪಾಳೆ ಹೊಡೆದರು!

– ಸದಾನಂದ ಲಕ್ಷ್ಮೀಪುರ

“ಈ ಭೂಮಿಯಲ್ಲಿ ಶೇ.50 ರಷ್ಟಿರುವ ಮಹಿಳೆಯರನ್ನು ತನ್ನಂತೆಯೇ ಮನುಷ್ಯರು ಎಂದು ಕಾಣದ ಭೈರಪ್ಪ, ಬರಹಗಾರ ಇರಲಿ, ಒಬ್ಬ ನಾಗರಿಕ ಎಂದು ನನಗನ್ನಿಸುವುದಿಲ್ಲ.” – ಡಾ.ಎಂ.ಎಸ್.ಆಶಾದೇವಿ.

“ಭೈರಪ್ಪನ ಕಾದಂಬರಿಗಳಲ್ಲಿ ಕೆಳ ಸಮುದಾಯಗಳ ಹೆಣ್ಣು ಮಕ್ಕಳು ನಡತೆಗೆಟ್ಟವರಂತೆ ಚಿತ್ರತರಾಗುತ್ತಾರೆ. ಮೇಲ್ವರ್ಗದ ಹೆಣ್ಣು ಮಕ್ಕಳ ವಿಚಾರದಲ್ಲಿ ಹಾಗಿಲ್ಲ.”- ಕೆ. ಷರೀಫಾ.

“ಹೆಣ್ಣು ಮಕ್ಕಳು ಅತ್ಯಾಚಾರ ಆಗಲಿ ಎಂದು ಬಯಸುತ್ತಾರೆ..ಎಂದು ಭೈರಪ್ಪನ ಮನಸ್ಥಿತಿ ಎಂತಹದು? ಎಲ್ಲಾ ಮಹಿಳೆಯರು ಆತನ ವಿರುದ್ಧ ಕೂಗು ಹಾಕಬೇಕಿದೆ.” – ಕೆ.ಎಸ್. ವಿಮಲಾ.

“ವೃತ್ತಿಯಲ್ಲಿ ಇಂಜಿನಿಯರ್ ಆದ ವ್ಯಕ್ತಿ, ದಿನವಿಡೀ ತನ್ನ ಕೆಲಸದಲ್ಲಿ ಮುಳುಗಿದ್ದಾಗ kannada-sammelana-hassan-kavigoshtiತನ್ನ ಪತ್ನಿಯ ಆಕಾಂಕ್ಷೆಗಳಿಗೆ ಗಮನ ಕೊಡಲು ಆಗಿರುವುದಿಲ್ಲ. ಆಗ ಆ ಪತ್ನಿ ಮತ್ತೊಬ್ಬರ ಸನಿಹ ಬಯಸುತ್ತಾಳೆ. ಇದು ಸಹಜ. ವೃತ್ತಿಯಲ್ಲಿ ತಾನೂ ಒಬ್ಬ ಇಂಜಿನಿಯರ್ ಆಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಇದು ಅರ್ಥವಾಗುತ್ತದೆ. ಆದರೆ ಭೈರಪ್ಪನಿಗೆ ಇದು ವಿಕೃತಿಯಾಗಿ ಕಾಣುತ್ತದೆ. ಈ ದೇಶಕ್ಕೆ ಅಂಟಿದ ಶಾಪ ಬ್ರಾಹ್ಮಣ್ಯ. ಅದನ್ನು ಪ್ರತಿಪಾದಿಸುವ ಭೈರಪ್ಪನಿಗೆ ರಾಷ್ಟ್ರೀಯ ಪ್ರಾಧ್ಯಾಪಕ ಪುರಸ್ಕಾರ ದಕ್ಕಿದೆ.” – ಗೌರಿ ಲಂಕೇಶ್.

ಶ್ರವಣಬೆಳಗೊಳದಲ್ಲಿ ನಡೆದ ಸಮ್ಮೇಳನಕ್ಕೆ ಮಹತ್ವ ತಂದುಕೊಟ್ಟವರು ಈ ನಾಲ್ವರು. ತನ್ನ ಬರಹಗಳ ಮೂಲಕ ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುವ ಹಾಗೂ ಮಹಿಳೆಯರನ್ನು ತುಚ್ಚವಾಗಿ ಕಾಣುವ ಮನೋಭಾವದ ಕಾರಣಗಳಿಗಾಗಿ ಜನಪ್ರಿಯರಾಗಿರುವ ಭೈರಪ್ಪನವರನ್ನು ಇವರು ಟೀಕಿಸುತ್ತಿದ್ದರೆ, ಸಭೆಯಲ್ಲಿ ಹಾಜರಿದ್ದವರು ಚಪ್ಪಾಳೆಯಿಂದ ಸ್ವಾಗತಿಸಿದರು. ಈ ಕಾರ್ಯಕ್ರಮ ನಡೆದದ್ದು, bhyrappaಭೈರಪ್ಪನವರ ತವರು ತಾಲೂಕಿನಲ್ಲಿ ಎನ್ನುವುದು ವಿಶೇಷ.

ಭೈರಪ್ಪನವರನ್ನು ಹೊಗಳಿ, ತಲೆ ಮೇಲೆ ಹೊತ್ತು ತಿರುಗುವ ಅನೇಕರು ಅವರ ಪರವಾಗಿ ಹೇಳುವ ಮಾತೆಂದರೆ, ಅವರು ಭಾರೀ ಬೇಡಿಕೆಯ ಲೇಖಕ. ಬೇರೆ ಬೇರೆ ಭಾಷೆಗಳಿಗೆ ಅವರ ಕೃತಿಗಳು ಅನುವಾದವಾಗಿವೆ. ಮಹಾರಾಷ್ಟ್ರದಲ್ಲೂ ಅವರ ಅಭಿಮಾನಿಗಳಿದ್ದಾರೆ..ಎಂದೆಲ್ಲಾ ಮಾತನಾಡುತ್ತಾರೆ. ಅವರು ಬರೆದ ಕಾದಂಬರಿಗಳಲ್ಲಿ ಒಂದೆರಡು ಮಹತ್ವದ್ದು ಎಂದು ವಿಮರ್ಶಾ ವಲಯ ಒಪ್ಪಿಕೊಂಡರೂ, ಅವರ ಒಟ್ಟಾರೆ ಕೃತಿಗಳು ಧ್ವನಿಸುವ ಸಿದ್ಧಾಂತದ ಕಾರಣಕ್ಕೆ ಅವರು ಜೀವಪರ ಚಿಂತಕರ ಟೀಕೆಗೆ ಗುರಿಯಾಗಿದ್ದಾರೆ. ಭೈರಪ್ಪ ಜನಪ್ರಿಯ ಇರಬಹುದು, ಜನಪರ ಅಲ್ಲ. ಇತ್ತೀಚೆಗೆ ಪ್ರಕಟವಾದ ’ಆವರಣ’, ’ಕವಲು’, ’ಯಾನ’ ಕೃತಿಗಳು ನಿಜವಾದ ಭೈರಪ್ಪನವರನ್ನು ಇನ್ನಷ್ಟು ಸ್ಪಷ್ಟವಾಗಿ ಅನಾವರಣಗೊಳಿಸಿದವು. ಇದುವೆರೆಗೆ ಅವರನ್ನು ಮೆಚ್ಚಿಕೊಂಡಿದ್ದ ಅನೇಕ ಓದುಗರು, ಮುಖ್ಯವಾಗಿ ಮಹಿಳೆಯರು, bhyrappa-Kavalu’ಕವಲು’ ಓದಿ ಕಂಗಾಲಾದರು. ’ಆವರಣ’ವಂತೂ ಧರ್ಮದ ಆಧಾರದ ಮೇಲೆ ಸಮುದಾಯಗಳನ್ನು ಒಡೆಯುವ ಕೃತಿ. ಹೀಗಿರುವಾಗ ಅವರು ಜನಪರ ಹೇಗಾದಾರು?

ಸಮ್ಮೇಳನದಲ್ಲಿ ಭೈರಪ್ಪ ವಿರುದ್ಧ ಮಾತನಾಡಿದ ಲೇಖಕಿಯರ ವಿರುದ್ಧ ಹಲವರು ಅಲ್ಲಲ್ಲಿ ಕೆಂಡಕಾರುತ್ತಿದ್ದಾರೆ. ಅವರಲ್ಲಿ ಕೆಲ ಬೃಹಸ್ಪತಿಗಳು, ಸಮ್ಮೇಳನದಲ್ಲಿ ಅವರಿಗೆ ಕೊಟ್ಟ ವಿಚಾರ ಬೇರೆ, ಆದರೂ ಅವರು ಸುಮ್ಮನೇ ತಮ್ಮ ಬಾಯಿ ಚಪಲಕ್ಕಾಗಿ ಭೈರಪ್ಪನನ್ನು ಎಳೆತಂದು ಟೀಕೆ ಮಾಡಿದರು ಎಂದು ಬರೆಯುತ್ತಿದ್ದಾರೆ. ಸಮ್ಮೇಳನದಲ್ಲಿ ಸಾಹಿತ್ಯ ಕೃತಿ, ಕೃತಿಕಾರನ ಧೋರಣೆಗಳನ್ನು ಮಾತನಾಡದಿದ್ದರೆ, ಇನ್ನೆಲ್ಲಿ ಮಾತನಾಡಬೇಕು? ರೈತರ, ದಮನಿತರ ಪರವಾಗಿ ಮಾತನಾಡಿ ಎಂದು ಜನ ಸಂಸತ್ತಿಗೆ ಕಳುಹಿಸಿದರೆ, ರೈತ ಸಮುದಾಯಕ್ಕೆ ಗಂಡಾಂತರ ಸೃಷ್ಟಿಸಲಿರುವ ತಿದ್ದುಪಡಿಗಳ ಬಗ್ಗೆ ಮಾತನಾಡದೆ, ಭೈರಪ್ಪನವರ ಸಮರ್ಥನೆಗೆ ಕೆಟ್ಟಾ ಕೊಳಕು ಭಾಷೆಯಲ್ಲಿ ಮಾತನಾಡುವರರಿಗೆ ಏನು ಹೇಳಬೇಕು?

ಎಸ್.ಎಲ್.ಭೈರಪ್ಪ – ನನ್ನೊಳಗೆ ನಾ ತಿಳಿದುಕೊಳ್ಳಲು ನಿರಾಕರಿಸುವ ಜೀವವಿರೋಧಿ ಲೇಖಕ

– ಬಿ. ಶ್ರೀಪಾದ ಭಟ್

ಎಸ್.ಎಲ್.ಭೈರಪ್ಪನವರ ಹಿಂದೂತ್ವದ, ಹಿಂದೂ ಧರ್ಮದ ಪರವಾದ ಪೂರ್ವಗ್ರಹಪೀಡಿತ ಚಿಂತನೆಗಳ ಕುರಿತು, ಅವರ ಕವಲು, ಆವರಣ, ಯಾನ, ಅಂಚುಗಳಂತಹ ಮೂರನೇ ದರ್ಜೆಯ ಕಾದಂಬರಿಗಳಲ್ಲಿ ಅಡಕಗೊಂಡಿರುವ ಹಿಂದುತ್ವದ ಪ್ರತಿಪಾದನೆ, ಅನ್ಯ ಧರ್ಮದ ಕುರಿತಾದ ತೀವ್ರ ಅಸಹನೆ ಮತ್ತು ತಿರಸ್ಕಾರ, ಸನಾತನ ಧರ್ಮದ ಅಮಾನವೀಯ ತತ್ವಗಳು, ಆಧುನಿಕ ಮಹಿಳೆಯ ಕುರಿತಾದ ಕ್ರೌರ್ಯ ಮನಸ್ಥಿತಿಯ ಚಿಂತನೆಗಳ ಕುರಿತು ಮೊನ್ನೆ ಶ್ರವಣಬೆಳಗೋಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹೋರಾಟಗಾರ್ತಿ, ಲೇಖಕಿಯರಾದ kannada-sammelana-hassan-kavigoshtiಕೆ.ಎಸ್.ವಿಮಲ, ಕೆ.ಷರೀಫಾ, ಗೌರಿ ಲಂಕೇಶ್, ವಿನಯಾ, ಎಂ.ಎಸ್.ಆಶಾದೇವಿಯವರು ಪ್ರಬುದ್ಧವಾಗಿ ವಿಮರ್ಶಿಸಿ ಭೈರಪ್ಪನವರ ಕಾದಂಬರಿಗಳ ವಿಕೃತ ಮನಸ್ಥಿತಿಯ ಕುರಿತಾಗಿ ಅತ್ಯಂತ ಮಾನವೀಯ ನೆಲೆಯಲ್ಲಿ ವಿಶ್ಲೀಷಿಸುತ್ತಾ ಅದು ಹೇಗೆ ಒಬ್ಬ ಜನಪ್ರಿಯ ಲೇಖಕ ಮಹಿಳೆಯರ ಕುರಿತು ಜೀವವಿರೋಧಿ ಧೋರಣೆಯಲ್ಲಿ ನಿರಂತರವಾಗಿ ಬರೆಯಲು ಸಾಧ್ಯ ಎಂದು ದಿಟ್ಟವಾಗಿ ಪ್ರಶ್ನಿಸಿದ್ದಾರೆ. ಇದನ್ನು ಜನಪ್ರಿಯತೆ ಎಂದು ಕರೆಯುವುದಾದದರೆ ಅದು ಈ ನಾಡಿನ ದುರಂತವಷ್ಟೇ ಎಂದು ಭೈರಪ್ಪನವರ ಜನಪ್ರಿಯತೆಯ ಕುರಿತಾದ ಮಿಥ್ ಅನ್ನು ಸಾರ್ವಜನಿಕವಾಗಿ ಬಯಲುಗೊಳಿಸಿದ್ದಾರೆ.

ಕವಿ ಮಿಲ್ಟನ್ ಒಂದು ಕಡೆ ಜನಪ್ರಿಯತೆಯು ಪ್ರಾಣನಾಶಕ ಭೂಮಿಯ ಮೇಲೆ ಬೆಳೆಯುವ ಗಿಡವಲ್ಲ ಎಂದು ಬರೆಯುತ್ತಾನೆ. ಇದೇ ನೀತಿಯ ಆಧಾರದ ಮೇಲೆ ಭೈರಪ್ಪನವರ ಜನಪ್ರಿಯತೆ ಪ್ರಾಣನಾಶಕ ಭೂಮಿಯ ಮೇಲೆ ಬೆಳೆದಂತ ಗಿಡವೆಂದೇ ವಿಶ್ಲೇಷಿಸಬೇಕಾಗುತ್ತದೆ. ಅದನ್ನು ಮೇಲಿನ ನಮ್ಮ ಹೆಮ್ಮೆಯ vinaya-vakkunda-81st-kannada-sahitya-sammelana-shravanabelagolaಲೇಖಕಿಯರು ತಮ್ಮ ಸ್ಪಷ್ಟ ಮಾತುಗಳಲ್ಲಿ ವಿವರಿಸುತ್ತಾ ಇನ್ನೊಬ್ಬರ ಜೀವ, ಮತ್ತೊಬ್ಬರ ಬದುಕಿನ ಕುರಿತಾಗಿ ಒಬ್ಬ ಜನಪ್ರಿಯ ಲೇಖಕ ಇಷ್ಟೊಂದು ನಿರ್ಲಕ್ಷ್ಯದಿಂದ, ಸದಾ ದ್ವೇಷಿಸುವ ಮನಸ್ಥಿತಿಯಿಂದ ಬರೆಯಲು ಹೇಗೆ ಸಾಧ್ಯ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ನಾವು ಏನನ್ನು ಆರಿಸಿಕೊಳ್ಳುತ್ತೇವೆಯೋ ಅದು ಸದಾಕಾಲವೂ ಉತ್ತಮ ತರದಾಗಿರಬೇಕಿರುತ್ತದೆ. ಈ ಉತ್ತಮತನವು ಎಲ್ಲಾ ಧರ್ಮ, ಜಾತಿಗಳ ಒಳಿತನ್ನು ಒಳಗೊಂಡಿರಬೇಕಾಗಿರುತ್ತದೆ. ಆದರೆ ಜನಪ್ರಿಯ ಲೇಖಕ ಭೈರಪ್ಪನವರ ಚಿಂತನೆಗಳಲ್ಲಿ ಈ ಒಳಗೊಳ್ಳುವಿಕೆಯ ಧೋರಣೆಗಳ ಯಾವ ಲಕ್ಷಣಗಳೂ ಇಲ್ಲ. ಸತ್ಯದ ವಿವಿಧ ಮುಖಗಳನ್ನು ಗ್ರಹಿಸಬೇಕಾದ ಲೇಖಕ ಅದನ್ನು ನಿರಾಕರಿಸಿ ಸುಳ್ಳುಗಳನ್ನು ಕಾದಂಬರಿಗಳನ್ನಾಗಿಸಿದರೆ ಪ್ರಜ್ಞಾವಂತರು ತೀಕ್ಷಣವಾಗಿ ಅದನ್ನು ವಿಮರ್ಶಿಸಲೇಬೇಕಾಗುತ್ತದೆ. ಆದರೆ ಸುಳ್ಳುಗಳು ತಂದುಕೊಡುವ ಈ ಭೈರಪ್ಪನವರ ಮಾದರಿಯ ಜನಪ್ರಿಯತೆಗಳು ವ್ಯವಸ್ಥೆಯಲ್ಲಿ ನಿರ್ಲಜ್ಜತೆಯನ್ನು, ಪೂರ್ವಗ್ರಹಗಳನ್ನು, ಹಳಸಲು ವಾದಗಳನ್ನು, ಹಿಂಸಾತ್ಮಕ ವರ್ತನೆಗಳನ್ನು ಮಾತ್ರ ಹುಟ್ಟುಹಾಕಲು ಸಾಧ್ಯ. ಭೈರಪ್ಪನವರ ಮಾದರಿಯ ಈ ಹುಸಿ ಜನಪ್ರಿಯತೆಗಳು ಫೆನಟಿಸಂ ವ್ಯಕ್ತಿತ್ವದ ಲುಂಪೆನ್ ಮತಾಂಧರ ಕೈಯಲ್ಲಿ ಸಿಟ್ಟು, ದ್ವೇಷ, ಮತ್ಸರದ ಆಯುಧಗಳಾಗುತ್ತವೆ. ಆದರೆ ಭೈರಪ್ಪನವರಂತಹ ಹಿರಿಯ ಲೇಖಕರು ದಶಕಗಳ ಕಾಲ ಈ ನೆಲದಲ್ಲಿನ ರಕ್ತಪಾತಗಳು, ಮತೀಯ ದ್ವೇಷಗಳಿಂದ ಏನನ್ನೂ ಅರಿಯಲಿಲ್ಲವೇ ಎನ್ನುವ ಪ್ರಶ್ನೆಯೇ ಅಪ್ರಸ್ತುತ. ಏಕೆಂದರೆ ಲಂಕೇಶ್ ಮನುಷ್ಯ ಶತಮಾನಗಳು, ವರ್ಷಗಳು ಉರುಳಿದಂತೆ ಉತ್ತಮನಾಗುತ್ತಾನೆಯೇ? ಶಿಕ್ಷಣವಾಗಲಿ, ಕಷ್ಟಗಳಾಗಲಿ, ದುರಂತವಾಗಲಿ ಇವನಿಗೆ ಪಾಠ ಕಲಿಸುತ್ತವೆಯೇ? ಈ ಪ್ರಶ್ನೆಗೆ ನಮ್ಮ ಎದುರಿನ ವಾಸ್ತವ ಇಲ್ಲ ಎಂದು ಉತ್ತರಿಸುತ್ತದೆ ಎಂದು ಬರೆಯುತ್ತಾರೆ. ಇದು ಕಟುವಾಸ್ತವ. ಇಂದು ಭೈರಪ್ಪನವರಂತಹ ಒಬ್ಬ ಜೀವ ವಿರೋಧಿ ನೆಲೆಯ ಜನಪ್ರಿಯ ಲೇಖಕರ ಉದಾಹರಣೆ ನಮ್ಮ ಕಣ್ಣ ಮುಂದಿದೆ.

ಏಕೆಂದರೆ ಹಿಂದೂ ಧರ್ಮದ ಶಕ್ತಿಯ ಕುರಿತಾಗಿ ಮಾತನಾಡುವ ಭೈರಪ್ಪನವರು ಆ ಮೂಲಕ ನೇರವಾಗಿ ಪ್ರತಿಪಾದಿಸುತ್ತಿರುವುದು ಬ್ರಾಹ್ಮಣ್ಯದ ಪುರುತ್ಥಾನವನ್ನು. ವೈದಿಕ ವ್ಯವಸ್ಥೆ ಅಪಾಯವಲ್ಲ ಎಂದೇ ಹೇಳುವ ಭೈರಪ್ಪನವರು ಒಬ್ಬ ತತ್ವಶಾಸ್ತ್ರದ ಮೇಷ್ಟ್ರು ಎನ್ನುವುದು ಇಂದಿಗೂ ಒಂದು ಚೋದ್ಯ. ಭೈರಪ್ಪನವರ ಭಾರತೀಯ ತತ್ವಮೀಮಾಂಸೆ ಅಂದರೆ ವೈದಿಕ ಮೀಮಾಂಸೆ. ಭೈರಪ್ಪನವರ ತತ್ವಶಾಸ್ತ್ರದ ಅನುಸಾರ ಮನುಷ್ಯನ ಅರಿವಿನ ಪ್ರಕ್ರಿಯೆ ಎಂದರೆ ಪೊಳ್ಳುತನದ, ಡಾಂಭಿಕತೆಯ ಧರ್ಮದ ಕಡೆಗೆ ಹಿಮ್ಮುಖವಾಗಿ ಶತಮಾನಗಳ ಹಿಂದಿನ ಕಾಲಕ್ಕೆ ಚಲಿಸುವುದು. Bhyrappaತಮ್ಮೊಳಗಿನ ಪ್ರತ್ಯೇಕತೆ, ತಾರತಮ್ಯದ ಲಕ್ಷಣಗಳನ್ನು ತಮ್ಮ ಕಾದಂಬರಿಗಳ ಮೂಲಕ ಸಮಾಜಕ್ಕೆ ಹಂಚುವುದು, ಪರಂಪರೆಯ ವೈಭವೀಕರಣವನ್ನು ಹೆಗಲಿಗೇರಿಸಿಕೊಂಡು ಶುಷ್ಕವಾದ, ಒಣ ಪಾಂಡಿತ್ಯದ ಪ್ರದರ್ಶನ ಸಹ ಭೈರಪ್ಪನವರ ತತ್ವಶಾಸ್ತ್ರದ ಲಕ್ಷಣಗಳಲ್ಲೊಂದು. ತಮ್ಮ ಬಹುಪಾಲು ಕಾದಂಬರಿಗಳಲ್ಲಿ ಹಿಂದುತ್ವದ ಪ್ರತಿಮೆಗಳನ್ನು ಕಟ್ಟುತ್ತಾ ಅದರ ಶ್ರೇಷ್ಠತೆಯನ್ನೇ ಧ್ಯಾನಿಸುವ,ಓದುಗರ ಮೇಲೆ ಬಲವಂತವಾಗಿ ಹೇರುವ ಭೈರಪ್ಪನವರು ಒಬ್ಬ ಜೀವವಿರೋಧಿ ಲೇಖಕ ಎನ್ನದೆ ವಿಧಿಯಿಲ್ಲ.

ಆದರೆ ಚಂದ್ರಕಾಂತ ಪೋಕಳೆಯವರು ಈ ಎಲ್ಲಾ ಸೂಕ್ಷ್ಮತೆಗಳನ್ನು ಗಾಳಿಗೆ ತೂರಿ ಭೈರಪ್ಪನವರು ಅದು ಹೇಗೆ ಜನಪ್ರಿಯ, ಅದು ಹೇಗೆ ರಾಷ್ಟ್ರೀಯ ಮಟ್ಟದಲ್ಲಿ ಭೈರಪ್ಪನವರು ಪ್ರಸಿದ್ಧಿಯಾಗಿದ್ದಾರೆ ಎಂದು ಬರೆದಿರುವ ಧೋರಣೆಯನ್ನು ನಾವಂತೂ ಒಪ್ಪಲು ಸಾಧ್ಯವಿಲ್ಲ. ಎಲ್ಲಿಯೂ ಚರ್ಚೆಗೆ ಆಸ್ಪದ ಕೊಡದಂತೆ ನಿರರ್ಗಳವಾಗಿ ವಿತಂಡವಾದವನ್ನು ಮಂಡಿಸಿರುವ ಪೋಕಳೆಯವರ ಈ ಅಭಿಪ್ರಾಯಗಳು ನಿಷ್ಠುರತೆ, ಪ್ರಾಮಾಣಿಕತೆಯ ಕೊರತೆಯನ್ನು ಎದುರಿಸುತ್ತಿವೆ (ಪ್ರಜಾವಾಣಿ ಸಂಗತ).

ಆದರೆ ಇವರಿಗಿಂತಲೂ ಅಸಹ್ಯವಾಗಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಕಾರಿಕೊಂಡಿರುವ ಪ್ರತಾಪ ಸಿಂಹ ಎನ್ನುವ ಹಾಲಿ ಸಂಸದ ತನ್ನ ಲೇಖನದಲ್ಲಿ ಸೌಜನ್ಯ, ಕನಿಷ್ಠ ನೀತಿಸಂಹಿತೆಗಳನ್ನು ಪ್ರದರ್ಶಿಸದೆ ಕೀಳು ಮಟ್ಟದಲ್ಲಿ ತನ್ನ ಅಸಹನೆಯನ್ನು ವ್ಯಕ್ತಪಡಿಸಿರುವುದು ತಿರಸ್ಕಾರಕ್ಕೆ ಮಾತ್ರ ಯೋಗ್ಯವಾಗಿದೆ. ಸಂವಾದ ನಡೆಸಲು ನಿರಾಕರಿಸುವ ಈ ಪ್ರತಾಪಸಿಂಹ ಶಬ್ದಗಳ ಮೂಲಕ ಸೃಷ್ಟಿಸುವ ಅಪಾಯಕಾರಿ, ದ್ವೇಷದ ಸಾಲುಗಳು ಮಾನವ ವಿರೋಧಿ ಧೋರಣೆಗಳಿಗೆ ಸಂಕೇತಗಳಾಗಿವೆ. ಕ್ಷುಲ್ಲಕವಾದ, ಅಸಭ್ಯ ಚಿಂತನೆಗಳ ಪ್ರತೀಕವಾದ ಈ ಮಾದರಿಯ ಲೇಖನಗಳು ಓದುಗರನ್ನು ಉನ್ಮಾದಗೊಳಿಸುವಲ್ಲಿ ಪ್ರಯತ್ನಿಸುತ್ತವಾದರೂ ಕಡೆಗೆ ದಯನೀಯವಾಗಿ ಸೋಲುತ್ತವೆ. ಹಿಂದೂ ಧರ್ಮದ ಪರಿಪಾಲನೆಯ ಶ್ರೇಷ್ಠತೆಯ ಕುರಿತಾಗಿ ಸಾರ್ವಜನಿಕವಾಗಿ ಅನೈತಿಕವಾಗಿ ಮಾತನಾಡುವ ಪ್ರತಾಪ ಸಿಂಹರಂತಹ ಸಂಸದರ ಅಪಾಯಕಾರಿ ನಿಲುವುಗಳು ಆಳದಲ್ಲಿ ಧಾರ್ಮಿಕ ಮೂಲಭೂತವಾದವನ್ನು ಅಡಗಿಸಿಕೊಂಡಿವೆ. ಸಾರ್ವಜನಿಕವಾಗಿ ಅತ್ಯಂತ ವಿರೂಪವಾಗಿ ಪ್ರಕಟಗೊಳ್ಳುವ ಈ ಸಿಂಹರಂತಹವರ ವರ್ತನೆಗಳು ಯಜಮಾನ್ಯ ಶಕ್ತಿಯನ್ನು ಹೇರಲು ಪ್ರಯತ್ನಿಸುತ್ತವೆ. ಮತೀಯ ಧೂರ್ತತನವನ್ನು ಹೊದ್ದುಕೊಂಡ ಈ ವಿಕೃತ ಸ್ವರೂಪದ ಚಿಂತನೆಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವಂತಿಕೆಗೆ ಅಪಾಯಕಾರಿಯಾಗಿವೆ. ಬೇಜವಬ್ದಾರಿಯುತ ರಾಜಕಾರಣಿಯಾಗಿ ಹಿಂದೂಯಿಸಂನ ಹತಾರಗಳನ್ನು ಬಳಸಿಕೊಳ್ಳುವ ಪ್ರತಾಪ ಸಿಂಹರ ವರ್ತನೆಗಳು ಕೇವಲ ಬಾಲಿಶವಲ್ಲ ಎಂದು ನಾವು ಅರಿಯಬೇಕು. ಏಕೆಂದರೆ ಈ ವ್ಯಕ್ತಿ ಒಬ್ಬ ಸಂಸದ ಸಹ.

ಶ್ರವಣಬೆಳಗೋಳದಲ್ಲಿ ನಮ್ಮ ಹೋರಾಟಗಾರ್ತಿ, ಲೇಖಕಿಯರು ತಾವು ಸ್ವತಹ ನಡೆಯುವುದರ ಮೂಲಕ ಹೊಸ ದಾರಿಯನ್ನು ರೂಪಿಸಿದ್ದಾರೆ. ನನ್ನೊಳಗೆ ನಾ ತಿಳಿದುಕೊಳ್ಳಲು ನಿರಾಕರಿಸುವ ಭೈರಪ್ಪನವರಂತಹ ಜನಪ್ರಿಯ ಸಾಹಿತಿಗಳನ್ನು, ರಾಷ್ಟ್ರೀಯ ಪ್ರ್ರಾಧ್ಯಾಪಕರನ್ನು ಸತ್ಯದ, ಮಾನವೀಯ ನೆಲೆಯಲ್ಲಿ ಸಮರ್ಥವಾಗಿ ವಿಮರ್ಶಿಸಿದ್ದಾರೆ. ಇಲ್ಲಿನ ಮೂಢ ನಂಬಿಕೆಗಳನ್ನು, ಸ್ತ್ರೀ ವಿರೋಧಿ ಧೋರಣೆಗಳನ್ನು ಪ್ರತಿಪಾದಿಸುವ ಭೈರಪ್ಪನವರ ಚಿಂತನೆಗಳ ವಿರುದ್ಧ ನಿಷ್ಠುರವಾದ, ಸಕಾರಾತ್ಮಕವಾದ, ಮೌಲಿಕವಾದ ತಕರಾರುಗಳನ್ನು ಎತ್ತಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಹೊಸ ಸಂವಾದಗಳಿಗೆ, ಚರ್ಚೆಗಳಿಗೆ ಕಿಟಿಕಿಯನ್ನು ತೆರದಿದ್ದಾರೆ. ಈ ನಮ್ಮ ಕಿರಗೂರಿನ ಗಯ್ಯಾಳಿಗಳಿಗೆ ಥ್ಯಾಂಕ್ಸ್.

ಶಿಕ್ಷಣ ಕ್ಷೇತ್ರದ ಪಂಕ್ತಿಭೇದ ವಿರುದ್ಧದ ಕೂಗು: ಸಮ್ಮೇಳನದ ಯಶಸ್ಸು

– ಸದಾನಂದ ಲಕ್ಷ್ಮೀಪುರ

ಸಮ್ಮೇಳನದ ಸಂಘಟನೆ ಬಗ್ಗೆ, ಖರ್ಚಾದ ಹಣದ ಬಗ್ಗೆ ಏನೇ ಅಸಮಾಧಾನಗಳಿದ್ದರೂ, ಒಂದಂತೂ ಸತ್ಯ. ಇತ್ತೀಚಿನ ವರ್ಷಗಳಲ್ಲಿ ನಡೆದ ಅನೇಕ ಸಮ್ಮೇಳನಗಳ ಪೈಕಿ ಕನ್ನಡ ಪ್ರಜ್ಞೆಗೆ ಕಿಡಿಹೊತ್ತಿಸುವಂತಹ ಕೆಲಸ ಆಗಿದ್ದು ಇಲ್ಲಿಯ ಸಮ್ಮೇಳನದ ಹಿನ್ನೆಲೆಯಲ್ಲಿ ನಡೆದ ಕೆಲ ಬೆಳವಣಿಗೆಗಳಿಂದ ಮಾತ್ರ. ಅದು ಆರಂಭವಾಗಿದ್ದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ದೇವನೂರು ಮಹದೇವ ಅವರನ್ನು ಅಧ್ಯಕ್ಷತೆಗೆ ಒಪ್ಪಿಸಲು ಮಾಡಿದ ಪ್ರಯತ್ನದಿಂದ.

ಈ ಬಗ್ಗೆ ಕೇಂದ್ರ deva ಕನ್ನಡ ಸಾಹಿತ್ಯ ಪರಿಷತ್ ಗೆ ಅಷ್ಟಾಗಿ ಉತ್ಸಾಹ ಇದ್ದಂತಿರಲಿಲ್ಲ. ಕಾರಣ, ಈ ಮೊದಲು ಅನೇಕ ಬಾರಿ ಪರಿಷತ್ ಮಹದೇವ ಅವರನ್ನು ಈ ಬಗ್ಗೆ ಸಂಪರ್ಕಿಸಿದ್ದಾಗ ಅವರು ಉತ್ಸಾಹ ತೋರಿಸಿರಲಿಲ್ಲ. ಮತ್ತೊಮ್ಮೆ ಪ್ರಯತ್ನ ಮಾಡಿದರೆ ಯಶಸ್ಸು ಸಿಗುತ್ತದೆ ಎಂಬ ವಿಶ್ವಾಸವೂ ಅವರಿಗಿರಲಿಲ್ಲ. “ಆದರೂ..ನೀವು ಒಮ್ಮೆ ಪ್ರಯತ್ನ ಮಾಡುವುದಾದರೆ, ಮಾಡಿ. ನಮ್ಮ ಅಭ್ಯಂತರವಿಲ್ಲ. ಒಪ್ಪಿದರೆ, ನಮಗೂ ಸಂತೋಷ’ ಎಂಬ ಸಂದೇಶ ಜಿಲ್ಲಾ ಸಾಹಿತ್ಯ ಪರಿಷತ್ ಗೆ ರವಾನೆಯಾಗಿತ್ತು. ಅದರಂತೆ, ಜಿಲ್ಲಾ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್ ತಮ್ಮ ಗೆಳೆಯರೊಂದಿಗೆ ದೇವನೂರು ಅವರನ್ನು ಭೇಟಿಯಾದರು. ಅದು ಅವರು ಹೇಳುವಂತೆ ಅನೌಪಚಾರಿಕ ಭೇಟಿ.

ಮಹದೇವ ಅವರು ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ ಕನ್ನಡ ಶಾಲೆಗಳು, ಕನ್ನಡ ಕಲಿಕೆ ಹಾಗೂ ಸಮಾನ ಶಿಕ್ಷಣದ ಕೂಗಿಗೆ ಒದಗಿರುವ ದು:ಸ್ಥಿತಿಗೆ ಈ ಸಂದರ್ಭದಲ್ಲಿ ಆಗಬೇಕಿರುವ ಕೆಲಸ ಬೇಕಾದಷ್ಟಿದೆ ಎಂದರು. ಈ ಉದ್ದೇಶಗಳಿಗಾಗಿ ಒಂದು ಪರ್ಯಾಯ ಸಮ್ಮೇಳನ ನಡೆಯುವುದಾದರೆ, ಬರಲು ಸಿದ್ಧ ಎಂದರು. ಹಾಗೂ ಹಿಂದೆ ಇಂತಹದೇ ಕಾರಣಕ್ಕೆ ಪರಿಷತ್ ನೀಡುವ ನೃಪತುಂಗ ಪ್ರಶಸ್ತಿಯನ್ನು ಅವರು ನಿರಾಕರಿಸಿದ್ದರು. ಆದರೆ ಈ ಭೇಟಿಯ ಸುದ್ದಿ ರಹಸ್ಯವಾಗಿ ಉಳಿಯಲಿಲ್ಲ. ಸುದ್ದಿ ಮಾಧ್ಯಮಗಳಲ್ಲಿ ವರದಿಯಾಯಿತು. ಪರಿಷತ್ ಗೆ ಒಂದಿಷ್ಟು ಮುಜುಗರವಾದರೂ, ನಾಡಿನಾದ್ಯಂತ ಮಹದೇವ ಅವರು ಎತ್ತಿರುವ ಪ್ರಶ್ನೆಗಳು ಚರ್ಚೆಯಾದವು. ಹಲವು ಲೇಖನಗಳು ಪ್ರಕಟವಾದವು. ದೇವನೂರು ಅವರು ಇದೇ ವಿಚಾರವಾಗಿ ಸಾಹಿತ್ಯ ಪರಿಷತ್ ಗೆ ಒಂದು ವಿವರವಾದ ಪತ್ರ ಬರೆದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಆ ಪತ್ರವೂ (ವರ್ತಮಾನವೂ ಸೇರಿದಂತೆ) ಹಲವೆಡೆ ಪ್ರಕಟವಾಯಿತು.

ಈ ಎಲ್ಲಾ ಬೆಳವಣಿಗೆಗಳು ಸಾಗುತ್ತಿರುವ ದಿಕ್ಕು ಶಿಕ್ಷಣ ಕ್ಷೇತ್ರದಲ್ಲಿರುವ ಪಂಕ್ತಿ ಭೇದದ ವಿರುದ್ಧದ ಸಮರಕ್ಕೆ. siddalingaiahಈ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುವುದು ಸಮಾನ ಶಿಕ್ಷಣ ಜಾರಿಯಾದಾಗ. ‘ಮುಖ್ಯಮಂತ್ರಿಯ ಮಗ, ಮಂತ್ರಿಯ ಮಗ, ಜಮೀನ್ದಾರನ ಮಗ, ಕೂಲಿಕಾರ್ಮಿಕನ ಮಗ, ಪೌರಕಾರ್ಮಿಕನ ಮಗ..ಒಂದೆಡೆ ಕೂತು ಶಿಕ್ಷಣ ಪಡೆಯುವಂತಾಗಬೇಕು..” – ಹೀಗೆಂದು ಸಮ್ಮೇಳನದ ಅಧ್ಯಕ್ಷಗಾದಿಯಿಂದ ಸಾರಿದವರು ಕವಿ ಸಿದ್ದಲಿಂಗಯ್ಯ.

ಕರ್ನಾಟಕ ಜನಶಕ್ತಿ ಹಾಗೂ ಸಮಾನ ಶಿಕ್ಷಣಕ್ಕಾಗಿ ಆಂದೋಲನದಲ್ಲಿ ತೊಡಗಿಸಿಕೊಂಡ karnataka-janashakti-protests-at-sammelanaಪ್ರಗತಿಪರ ಹೋರಾಟಕಾರರು ಸಮ್ಮೇಳನವನ್ನು ತಮ್ಮ ವಿಚಾರಗಳಿಗೆ ವೇದಿಕೆಯನ್ನಾಗಿ ಯಶಸ್ವಿಯಾಗಿ ಬಳಸಿಕೊಂಡರು. ಧಾರವಾಡದ ಜನಸಾಹಿತ್ಯ ಬಳಗದವರು ಇದೇ ಉದ್ದೇಶದ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿ ಕರಪತ್ರ ಹಂಚಿದರು. ಸಮ್ಮೇಳನದ ಕೊನೆ ದಿನವಂತೂ ಕೆ.ಆರ್.ಪೇಟೆಯ ಸರಕಾರಿ ಶಾಲೆಯೊಂದರ ಮಕ್ಕಳು ಸ್ಥಳಕ್ಕೆ ಬಂದು ಸಮಾನ ಶಿಕ್ಷಣಕ್ಕಾಗಿ ಘೋಷಣೆ ಕೂಗಿದರು. ಪುಂಡಲೀಕ ಹಾಲಂಬಿಯವರು ಈ ಹೋರಾಟದಲ್ಲಿ ತಮ್ಮದೂ ಪಾತ್ರವಿದೆ ಎಂದು ಅವರೂ ಮಕ್ಕಳ ಜೊತೆ ಸೇರಿ ಘೋಷಣೆ ಹಾಕಿದರು. ಸಂವಿಧಾನ ಮತ್ತು ರಾಜ್ಯಭಾಷೆ ವಿಚಾರ ಸಂಕಿರಣದಲ್ಲಿ ಮಾತನಾಡಿದ ಪ್ರೊ.ನಿರಂಜನಾರಾಧ್ಯ ಮತ್ತಿತರರು ತಮ್ಮ ಮಾತುಗಳಲ್ಲಿ ಸಮಾನ ಶಿಕ್ಷಣದ ಅಗತ್ಯತೆಯನ್ನು ಹಾಜರಿದ್ದ ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು.

ಈ ಎಲ್ಲಾ ಬೆಳವಣಿಗೆಗಳನ್ನು ಸರಕಾರ ಅಂದಾಜು ಮಾಡಿತ್ತು ಎನಿಸುತ್ತದೆ. ಭಾಷೆ ಶಿಕ್ಷಣದ ವಿಚಾರವಾಗಿ ಏನನ್ನಾದರೂ ಮಾಡಬೇಕಾದ ಒತ್ತಡಕ್ಕೆ ಬಿದ್ದ ರಾಜ್ಯ ಸರಕಾರ ತನ್ನ ಇತಿಮಿತಿಯೊಳಗೆ ಕಾಯ್ದೆಗೆ ತಿದ್ದುಪಡಿ ತಂದು, ಮಾತೃಭಾಷೆಯ ವ್ಯಾಖ್ಯಾನವನ್ನು ಬದಲಿಸಲು ತೀರ್ಮಾನಿಸಿದೆ. ಶಿಕ್ಷಣ ಕ್ಷೇತ್ರದಲ್ಲಿರುವ ಪಂಕ್ತಿಭೇದದ ವಿಚಾರವಾಗಿ ಇದುವರೆಗೆ ಗಟ್ಟಿಯಾದ ದನಿ ಸಮ್ಮೇಳನವೊಂದ ಹಿನ್ನೆಲೆಯಲ್ಲಿ ಮೂಡಿಬಂದಿದ್ದು ಇದೇ ಮೊದಲಿರಬೇಕು. ಆ ಕಾರಣಕ್ಕೆ ಇದು ಯಶಸ್ವಿ. ಆದರೆ ಈ ಯಶಸ್ಸಿಗಾಗಿ, ಏಳೆಂಟು ಕೋಟಿ ಖರ್ಚು ಮಾಡುವ ಅಗತ್ಯವಿರಲಿಲ್ಲ.

ಸಾಹಿತ್ಯ ಸಮ್ಮೇಳನ = ಊಟ + ವಸತಿ!!

– ಸದಾನಂದ ಲಕ್ಷ್ಮೀಪುರ

ಶ್ರವಣಬೆಳಗೊಳದಲ್ಲಿ ನಡೆದದ್ದು ಅದ್ಧೂರಿ ಸಾಹಿತ್ಯ ಸಮ್ಮೇಳನ. ಸಾಹಿತ್ಯ ಪರಿಷತ್, ಜೈನ ಮಠದ ಸ್ವಾಮೀಜಿ ಹಾಗೂ ಸಮ್ಮೇಳನದ ವ್ಯವಸ್ಥೆಗೆ ಓಡಾಡಿದ ಎಲ್ಲರಿಗೂ ಅನ್ನಿಸಿದೆ – ಇದೊಂದು ಯಶಸ್ವಿ ಸಮ್ಮೇಳನ. hassan-sahitya-sammelana-2ಹಾಗಾದರೆ, ಅವರು ಕಂಡ ಯಶಸ್ಸು ಯಾವುದು..? ಅವರ ಮಾತುಗಳಿಂದ ಗ್ರಹಿಸಬಹುದಾದ್ದೆಂದರೆ, ಊಟಕ್ಕಾಗಿ ಗದ್ದಲವಾಗಲಿಲ್ಲ. ಸರಕಾರಿ ನೌಕರರು ಓಓಡಿಗಾಗಿ ಬಟ್ಟೆ ಹರಿದುಕೊಳ್ಳಲಿಲ್ಲ. ವಸತಿ ಸಮಸ್ಯೆ ಸರಿಯಿಲ್ಲ ಎಂಬ ಕೂಗಾಟಗಳಿರಲಿಲ್ಲ. ಮುಖ್ಯವಾಗಿ ಈ ತೆರೆನ ಸುದ್ದಿಗಳಾವುವೂ ಮಾಧ್ಯಮಗಳಲ್ಲಿ ವರದಿಯಾಗಲಿಲ್ಲ ಎಂಬ ಕಾರಣಕ್ಕೆ, ಅವರು ‘ಯಶಸ್ವಿ’ ಪದ ಪ್ರಯೋಗ ಮಾಡುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದೆಂದರೆ, ‘ವ್ಯವಸ್ಥೆ’ ಮಾಡುವುದು ಎಂಬ ಅರ್ಥಕ್ಕೆ ಸೀಮಿತವಾಗಿರುವುದೇ ಇಷ್ಟಕ್ಕೆಲ್ಲಾ ಕಾರಣ. ಸಮ್ಮೇಳನಕ್ಕೆ ಸಂಬಂಧಿಸಿದಂತೆ, ಹಾಸನದಲ್ಲಿ ನಡೆದ ಬಹುತೇಕ ಸಭೆಗಳಲ್ಲಿ ವ್ಯಕ್ತವಾಗಿದ್ದು ಊಟ, ವಸತಿ, ವೇದಿಕೆ ವಿಚಾರಗಳು. ಬಂದವರಿಗೆಲ್ಲಾ ಇರಲು ವ್ಯವಸ್ಥೆ ಮಾಡಿ, ಹೊತ್ತಿಗೆ ಸರಿಯಾಗಿ ಊಟ ಹಾಕಿದರೆ ಸಮ್ಮೇಳನ ಖಂಡಿತ ‘ಯಶಸ್ವಿ’ ಎಂದೇ ಅನೇಕರ ಅಭಿಪ್ರಾಯ. ಈ ಬಾರಿ ವೇದಿಕೆಗೆ ಆದ ಖರ್ಚು ಬರೋಬ್ಬರಿ 1.88 ಕೋಟಿ ರೂ. ಅದರಲ್ಲಿ ರಾಜ್ ಎಂಟರ್ ಪ್ರೈಸಸ್ ನವರಿಗೆ 1.70 ಕೋಟಿ ರೂ. ಉಳಿದ ಹದಿನೆಂಟು ಲಕ್ಷ ಖರ್ಚಾದದ್ದು, ಆಯ್ಕೆ ಮಾಡಿಕೊಂಡಿದ್ದ ಜಾಗೆಯ ಸಮತಟ್ಟು ಮಾಡಲು. ವಿಚಿತ್ರ ಎಂದರೆ, ಸಮತಟ್ಟು ಮಾಡುವ ಕಾಮಗಾರಿಗೆ ಮೊದಲು ಲೋಕೋಪಯೋಗಿ ಇಲಾಖೆ 42 ಲಕ್ಷ ರೂಗಳ ಅಂದಾಜು ಸಿದ್ಧಪಡಿಸುತ್ತದೆ. ನಂತರ ಭೂ ಸೇನಾ ನಿಗಮದವರಿಗೆ ಆ ಕೆಲಸ ಒಪ್ಪಿಸಿ 18 ಲಕ್ಷ ರೂಗಳಿಗೆ ಮಾಡಲು ಒಪ್ಪಿಸಲಾಗುತ್ತದೆ. ನಿಜಕ್ಕೂ 42 ಲಕ್ಷ ರೂ ಮೌಲ್ಯದ ಕೆಲಸವನ್ನು 18 ಲಕ್ಷಕ್ಕೆ ಮಾಡಲು ಸಾಧ್ಯವೇ..? ಅಥವಾ 42 ಲಕ್ಷದ ಅಂದಾಜು ಸಿದ್ಧಪಡಿಸಿದವರು, ಎಂಜಿನಿಯರಿಂಗ್ ಓದದವರೇ?

ವೇದಿಕೆ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಲಾಗಿತ್ತು. ರಾಜ್ ಎಂಟರ್ ಪ್ರೈಸಸ್ ನವರು 2.28 ಕೋಟಿರೂಗಳನ್ನು ನಮೂದಿಸಿದ್ದರು. ಅದುವೇ ಅತೀ ಕಡಿಮೆ. ನಂತರ ಜಿಲ್ಲಾಡಳಿತ, ಹಣಕಾಸು ಸಮಿತಿ, ಸಾಹಿತ್ಯ ಪರಿಷತ್ತು ರಾಜ್ ಎಂಟರ್ ಪ್ರೈಸಸ್ ನವರೊಂದಿಗೆ ಮಾತುಕತೆ ಮಾಡಿ, ಆ ಕೆಲಸವನ್ನು 1.70 ಕೋಟಿಗೆ ಒಪ್ಪಿಸಿದರು! ಆ ಮೂಲಕ 58 ಲಕ್ಷರೂಗಳಷ್ಟು ವೆಚ್ಚ ಕಡಿಮೆಯಾಯಿತು. ವೇದಿಕೆ ನಿರ್ಮಾಣ ವೆಂದರೆ, ಅದರಲ್ಲಿ ಪುಸ್ತಕ ಮಳಿಗೆಗಳು, hassana-sahitya-sammelana-1ಊಟದ ಹಾಲ್ ಗಳು, ಮೀಡಿಯಾ ಸೆಂಟರ್, ಏಳೆಂಟು ಸಾವಿರ ಹಾಸಿಗೆ ಒದಗಿಸುವುದು, 200 ರಷ್ಟು ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸುವುದು..ಹೀಗೆ ಸಮ್ಮೇಳನಕ್ಕೆ ಬೇಕಾಗುವ ಎಲ್ಲಾ ತಾತ್ಕಾಲಿಕ ಕಟ್ಟಡಗಳ ನಿರ್ಮಾಣ ಸೇರಿಕೊಳ್ಳುತ್ತದೆ. ಮೂರು ದಿನದ ಸಂಭ್ರಮಕ್ಕಾಗಿ ನೂರಾರು ಕಾರ್ಮಿಕರು 20 ದಿನಗಳಿಗೂ ಹೆಚ್ಚುಕಾಲ ಶ್ರಮಪಟ್ಟು ವೇದಿಕೆ ನಿರ್ಮಿಸಿದ್ದಾರೆ.

ಈ ದುಬಾರಿ ವೆಚ್ಚದ ಅದ್ಧೂರಿತನ ಬೇಕಿತ್ತೆ? ಇದುವರೆಗೆ ನಡೆದ ಯಾವುದೇ ಸಮ್ಮೇಳನದಲ್ಲಿ ವೇದಿಕೆಗಾಗಿ ಈ ಪಾಟಿ ಖರ್ಚಾಗಿರಲಿಲ್ಲ. ಹಿಂದಿನ ವರ್ಷ ಮಡಿಕೇರಿಯಲ್ಲಿ ನಡೆದಾಗ ವೇದಿಕೆ ನಿರ್ಮಾಣಕ್ಕೆ ಆದ ಖರ್ಚು 1.31 ಕೋಟಿ ರೂ. ಅಲ್ಲಿ ಊಟ, ವಸತಿ, ಗೋಷ್ಟಿಗಳು ಎಲ್ಲದರ ಒಟ್ಟು ವೆಚ್ಚ 3.31 ಕೋಟಿ ರೂ. ಆದರೆ ಈ ಬಾರಿ ಒಟ್ಟು ವೆಚ್ಚ ಹಿಂದಿನದ್ದಕ್ಕಿಂತ ಎರಡು ಪಟ್ಟು ಹೆಚ್ಚಾದರೂ ಅಚ್ಚರಿ ಇಲ್ಲ. ಸಾಹಿತ್ಯ ಪರಿಷತ್ ಲೆಕ್ಕ ಹಾಕಿರುವಂತೆ ಒಟ್ಟು ಅಗತ್ಯವಾದ ಹಣ 4.8 ಕೋಟಿ ರೂ. ಅದರಲ್ಲಿ ಶ್ರವಣಬೆಳಗೊಳ ಮಠ ವಹಿಸಿಕೊಂಡಿರುವ ಊಟದ ಖರ್ಚು ಸೇರಿಕೊಂಡಿಲ್ಲ.

ಸಮ್ಮೇಳನವನ್ನು ‘ಯಶಸ್ವಿ’ ಎಂದು ಘೋಷಿಸುವವರ ಮನಸ್ಸಿನಲ್ಲಿ ಈ ಪಾಟಿ ದುಡ್ಡು ಮಹತ್ವವಾದ ಕಾರ್ಯವೊಂದಕ್ಕೆ ಖರ್ಚಾಗಿದೆ ಎಂಬ ಭಾವನೆ ಇದ್ದಂತಿದೆ. ಊಟ ಮಾಡಿದವರು ವ್ಯವಸ್ಥೆ ಚೆನ್ನಾಗಿತ್ತು ಎಂದಿದ್ದಾರೆ. ಉಳಿದುಕೊಂಡವರು ವಸತಿ ವ್ಯವಸ್ಥೆ ಪರವಾಗಿಲ್ಲ ಎಂದರು. ಹಲವರು ಸಾಂಸ್ಕೃತಿಕ ಕಾರ್ಯಕ್ರಮಗಳು ಮನೆಸೆಳೆದವು ಎಂದು ಹೇಳುವವರು ಅನೇಕರಿದ್ದಾರೆ. ಹಾಗಾದರೆ ಸಮ್ಮೇಳನ ನಡೆಸುವುದು ಈ ಕಾರಣಗಳಿಗಾಗಿ ಮಾತ್ರವಾ..?

ಲೇಖಕ ಪೆರುಮಾಳ್ ಮುರುಗನ್ ‘ಸಾವು’ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ

– ಶಿವರಾಮ್ ಕೆಳಗೋಟೆ.perumal

“ಪೆರುಮಾಳ್ ಮುರುಗನ್ ಎಂಬ ಲೇಖಕ ಸತ್ತಿದ್ದಾನೆ”. ಇದು ಬೇರೆ ಯಾರೋ ಹೇಳಿದ್ದಲ್ಲ; ಸ್ವತಃ ಲೇಖಕ ತನಗಾದ ನೋವಿಗೆ ಪ್ರತಿಯಾಗಿ ತನ್ನ ಸಾವನ್ನು ಘೋಷಿಸಿದ್ದು. ಸದ್ಯ ಮಾರುಕಟ್ಟೆಯಲ್ಲಿರುವ ತನ್ನ ಎಲ್ಲಾ ಕೃತಿಗಳನ್ನು ಹಿಂದಕ್ಕೆ ಪಡೆಯುತ್ತೇನೆ, ಮುಂದೆ ಏನನ್ನೂ ಬರೆಯಲಾರೆ ಎಂದಿದ್ದಾರೆ. ಈ ಲೇಖಕ ಕೇವಲ ಒಂದು ವಾರದ ಹಿಂದೆ ದಿ ಹಿಂದು ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ನಾನು ಮೊದಲು ಬರಹಗಾರ, ನಂತರ ಶಿಕ್ಷಕ. ನನ್ನೊಳಗೆ ಇನ್ನೂ ಹತ್ತು ಕಾದಂಬರಿಗಾಗುವಷ್ಟು ಸರಕು ಇದೆ ಎನಿಸುತ್ತಿದೆ ಎಂದು ಹೇಳಿದ್ದರು. ನಂತರದ ಬೆಳವಣಿಗೆಗಳಿಂದ ಬೇಸತ್ತು ಅವರು ಇಂತಹ ನಿರ್ಧಾರಕ್ಕೆ ಬಂದರು.

ವಿವಾದಕ್ಕೆ ತುತ್ತಾದದ್ದು ನಾಲ್ಕು ವರ್ಷಗಳ ಹಿಂದೆ ಅವರು ಹೊರತಂದಿದ್ದ ಮಾಧೋರುಭಾಗನ್ ಕಾದಂಬರಿ. ಇದುವರೆಗೆ ಯಾವುದೇ ವಿವಾದಗಳಿರಲಿಲ್ಲ. ಇತ್ತೀಚೆಗಷ್ಟೆ ಇಂಗ್ಲಿಷ್ ಗೂ (One Part Woman) ಅನುವಾದಗೊಂಡಿತ್ತು. ವಿಮರ್ಶಾ ವಲಯದಲ್ಲಿ ಮೆಚ್ಚುಗೆ ಗಳಿಸಿತ್ತು. ಆದರೆ ಕೆಲ ಮೂಲಭೂತವಾದಿಗಳಿಗೆ ಸರಿ ಕಾಣಲಿಲ್ಲ. ಮಕ್ಕಳಿಲ್ಲದ ಪೋಷಕರು, ನೆರೆಹೊರೆಯವರ, ನೆಂಟರಿಷ್ಟರ ಮೂದಲಿಕೆಗೆ ಗುರಿಯಾಗಿ ಮಕ್ಕಳನ್ನು ಹೊಂದುವ ಕಾರಣಕ್ಕಾಗಿ ಬಹಳ ಹಿಂದೆ ತಿರುಚೆಂಗೋಡಿನ ಅರ್ಧನಾರೀಶ್ವರ ದೇವಲಾಯದ ಆವರಣದಲ್ಲಿ ಅನುಸರಿಸುತ್ತಿದ್ದ ಕ್ರಮಗಳ ಬಗ್ಗೆ ಕಾದಂಬರಿಯಲ್ಲಿ ಬರುವ ಉಲ್ಲೇಖ ಸೋಕಾಲ್ಡ್ ಹಿಂದೂ ಧರ್ಮ ರಕ್ಷಕರ ಟೀಕೆಗೆ ಕಾರಣವಾಯ್ತು. ಟೀಕೆ ಮಾತಿಗೆ ನಿಲ್ಲಲಿಲ್ಲ. ದಾಳಿ, ಕೊಲೆ ಬೆದರಿಕೆಗಳೂ ಬಂದವು. ನಾಮಕ್ಕಲ್ ನಲ್ಲಿ ನೆಲೆಸಿರುವ ಪೆರುಮಾಳು ಮುರುಗನ್ ತಮ್ಮ ಕುಟುಂಬ ಸಮೇತ, ಪೊಲೀಸರ ಸೂಚನೆ ಮೇರೆಗೆ, ರಕ್ಷಣೆಗಾಗಿ ಬೇರೆ ಊರಿಗೆ ತಲೆಮರೆಸಿಕೊಂಡು ಹೋಗಬೇಕಾಯ್ತು.

ಹಲವು ದಿನಗಳಿಂದ ಪ್ರತಿಭಟನೆ, ವೈಯಕ್ತಿಕ ನಿಂದನೆ, ಕೃತಿಗೆ ಬೆಂಕಿ ಹಚ್ಚಿದಂತಹ ಪ್ರಕರಣಗಳಿಂದ ಬೇಸತ್ತು ಮುರುಗನ್ ತನ್ನೊಳಗಿನ ಲೇಖಕನ ಸಾವನ್ನು ಘೋಷಿಸಿದರು. ಅಲ್ಲಿಗೆ ಪ್ರತಿಭಟನಕಾರರಿಗೆ ಜಯ. ಬಿಜೆಪಿ ನಾಯಕರು ಲೇಖಕರ ನಿರ್ಧಾರವನ್ನು ಸ್ವಾಗತಿಸಿದರು. ದೇವರ ನಿರಾಕರಣೆ ಆಂದೋಲನ ಹಾಗೂ ದ್ರಾವಿಡ ಚಳವಳಿ ಹಿನ್ನೆಲೆಯಲ್ಲಿ ರೂಪುಗೊಂಡ ತಮಿಳು ನಾಡಿನ ರಾಜಕಾರಣ ಈ ಘಟನೆ ಬಗ್ಗೆ ಮೌನ ವಹಿಸಿದ್ದು ವಿಶಿಷ್ಟವಾಗಿತ್ತು. ಸದ್ಯ ಬದಲಾವಣೆ ಹಾದಿಯಲ್ಲಿರುವ ರಾಜಕಾರಣವನ್ನೂ ಅದು ಸೂಚಿಸಿತು. ತಮಿಳುನಾಡಿನಲ್ಲಿ ಬೇರೂರುವ ಪಣ ತೊಟ್ಟಿರುವ ಬಿಜೆಪಿ ಈ ಕೃತಿಯ ಮೂಲಕ ರಾಜಕಾರಣವನ್ನು ಪ್ರವೇಶಿಸಿದೆ. ಮೊದಲ ಯತ್ನದಲ್ಲಿ ಜಯಗಳಿಸಿರುವ ಕಾರಣ, ಇದೇ ಉತ್ಸಾಹದಲ್ಲಿ ಇಂತಹ ಅನೇಕ ಘಟನೆಗಳು ಹೆಚ್ಚೆಚ್ಚು ಸಂಭವಿಸಿದರೆ ಅಚ್ಚರಿಪಡಬೇಕಿಲ್ಲ.

ಶಾಂತಿ ಸಭೆಯಲ್ಲಿ ಲೇಖಕ ಕ್ಷಮೆ ಕೇಳುವಂತೆ ಮಾಡಿದ ಪ್ರತಿಭಟನಾಕಾರರು ಮತ್ತು ಜಿಲ್ಲಾಡಳಿತ ಕೊನೆಗೆ ಅವರು ಬರಹವನ್ನೇ ನಿಲ್ಲಿಸುವ ನಿರ್ಧಾರಕ್ಕೆ ಬರುವಂತೆ ಮಾಡಲು ಯಶಸ್ವಿಯಾದರು. ಲೇಖಕ ಎದೆಗುಂದಬಾರದಿತ್ತು ಎನ್ನುವುದು ಸಹಜ. ಆದರೆ, ಯಾವುದೇ ಲೇಖಕ ಅಂತಹದೊಂದು ನಿರ್ಧಾರಕ್ಕೆ ಬರುವ ಮುನ್ನ ಎದುರಿಸಿದ ತಾಕಲಾಟ ಎಷ್ಟಿರಬೇಕು? ಆಡಳಿತ ವರ್ಗ ಪ್ರತಿಭಟನಾಕಾರರ ಪರವಾಗಿರುವಾಗ, ಕುಟುಂಬದ ರಕ್ಷಣೆಗೆ ನಿಲ್ಲುವವರಾರು? ಹಾಗಾಗಿ, ಮುರುಗನ್ ಬರೆಯುವುದನ್ನು ಬಿಟ್ಟು ಅಧ್ಯಾಪನಾ ವೃತ್ತಿಗೇ ಸೀಮಿತವಾಗಿರುವ ಇರಾದೆ ವ್ಯಕ್ತಪಡಿಸಿದ್ದಾರೆ. ಇದು ಎಲ್ಲಾ ಪ್ರಗತಿಪರ ಮನಸುಗಳ ಸೋಲು. ಪ್ರತಿಭಾವಂತ ಲೇಖಕ ಬೆದರಿಕೆ ಹಾಕುವವರ ಕಾರಣಕ್ಕೆ ಲೇಖನಿಯನ್ನು ಕೆಳಗಿಡುತ್ತೇನೆ ಎಂದು ನಿರ್ಧರಿಸಿದರೆ, ಈ ಸಮಾಜ ನಾಚಿಕೆ ಪಡಬೇಕು. ಆದರೆ ವಿಚಿತ್ರವೆಂದರೆ, ಈ ನಿರ್ಧಾರವನ್ನು ಮೆಚ್ಚಿ ಸ್ವಾಗತಿಸುವ ಬಿಜೆಪಿಯಂತಹ ರಾಜಕೀಯ ಪಕ್ಷಗಳಿವೆ ಇಲ್ಲಿ!

ಇದೇ ಹೊತ್ತಿಗೆ ಕರ್ನಾಟಕದಲ್ಲಿ ಒಂದು ಬೆಳವಣಿಗೆ ನಡೆದಿದೆ. ದಿನೇಶ್ ಅಮಿನ್ ಮಟ್ಟು ಮೂರು ವರ್ಷಗಳ ಹಿಂದೆ ವಿವೇಕಾನಂದರ ಕುರಿತ ಲೇಖನ ಬರೆದ ನಂತರ ಕೋಮುವಾದಿ ಶಕ್ತಿಗಳು ಹುಟ್ಟುಹಾಕಿದ್ದ ವಿವಾದವೊಂದು ಮತ್ತೆ ಜೀವ ಪಡೆದಿದೆ. ತಮ್ಮ ಮೂಗಿನ ನೇರಕ್ಕೆ ವಿವೇಕಾನಂದರನ್ನು ಅರ್ಥಮಾಡಿಕೊಂಡು, ಅವರನ್ನು ತಮ್ಮ ದುರುದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದವರಿಗೆ ಆ ಲೇಖನ ಸಿಟ್ಟು ತರಿಸಿತ್ತು. ಏಕೆಂದರೆ, ಅವರಿಗೆ ವಾಸ್ತವವನ್ನು ಗ್ರಹಿಸುವ ಉತ್ಸಾಹವಾಗಲಿ, ಮುಕ್ತ ಮನಸ್ಸಾಗಲಿ ಇರಲಿಲ್ಲ. ಅದೇ ಕಾರಣಕ್ಕೆ ಅಂದು ಅವರ ಕೆಲಸ ಮಾಡುತ್ತಿದ್ದ ಕಚೇರಿ ಎದುರು ಪ್ರತಿಭಟನೆ ಮಾಡಿದರು. ಅಷ್ಟೇ ಅಲ್ಲ, ಅನೇಕ ಮಂದಿ ತಮ್ಮ ಕಾಮೆಂಟುಗಳಲ್ಲಿ, ಎಸ್ ಎಂ ಎಸ್ ಗಳಲ್ಲಿ ನಾನಾ ರೀತಿಯ ಬೆದರಿಕೆ ಹಾಕಿದರು.

ಮೊನ್ನೆ ವಿವೇಕಾನಂದರ ಜನ್ಮದಿನಾಚರಣೆಯಂದು ಅದೇ ಲೇಖನ ಸಾಮಾಜಿಕ ತಾಣದಲ್ಲಿ ಹರಿದಾಡಿದಾಗ ಕೆಲವರು ಕೆಟ್ಟಾ ಕೊಳಕು ಭಾಷೆಯಲ್ಲಿ ದಿನೇಶ್ ವಿರುದ್ಧ ಕೆಂಡಕಾರಿದ್ದಾರೆ. ತಮಗೆ ಲೇಖನದ ವಿಚಾರ ಒಪ್ಪಿಗೆಯಾಗದಿದ್ದರೆ, ಸಂಯಮದ ಭಾಷೆಯಲ್ಲಿ ವಿರೋಧ ವ್ಯಕ್ತಪಡಿಸುವ ಛಾತಿ ಇರಬೇಕು. ಆದರೆ ಅಲ್ಲಿ ಕೆಲವರಿಗೆ ಅಂತಹ ಗುಣವೇ ಇದ್ದಂತಿಲ್ಲ. ಅವರ ವಿರುದ್ಧ ದೂರು ನೀಡಲಾಗುವುದು ಎಂದು ಒಂದು ಸ್ಟೇಟಸ್ ಹಾಕಿದಾಕ್ಷಣ, ಹಾಗೆ ಕೆಟ್ಟಾ ಕೊಳಕು ಭಾಷೆ ಬಳಸಿ ಕಾಮೆಂಟು ಮಾಡಿದ್ದವರು ಕ್ಷಮೆ ಕೇಳಿದ್ದಾರೆ, ಅಷ್ಟೇ ಅಲ್ಲ ತಮ್ಮ ಹೇಳಿಕೆಗಳನ್ನು ಡಿಲೀಟ್ ಮಾಡಿದ್ದಾರೆ. ಅದರರ್ಥ ಅವರಿಂದ ತಪ್ಪಾಗಿದೆ ಎಂದು ಅವರೇ ಒಪ್ಪಿಕೊಂಡಂತಾಯ್ತು.

ಅವರ ಮೇಲೆ ಕೇಸು ದಾಖಲಾಗಿದೆ. ಕೇಸು ದಾಖಲಾಗಿದ್ದನ್ನೇ ಕೆಲವರು ಪ್ಯಾರಿಸ್ ನ ಪತ್ರಿಕಾ ಕಚೇರಿ ಮೇಲೆ ನಡೆದ ದಾಳಿಗೆ ಹೋಲಿಸಿ ಅನೇಕ ಮಂದಿ ಟೀಕಿಸುತ್ತಿದ್ದಾರೆ. ನಮಗೆ ನಮ್ಮ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದೆ ಎಂದು ವಾದಿಸುತ್ತಿದ್ದಾರೆ. ಕೇಸು ದಾಖಲಾಗಿರುವುದೂ ಇದೇ ನೆಲದ ಕಾನೂನಿನ ಅಡಿಯಲ್ಲಿ ಎನ್ನುವುದನ್ನು ಅವರು ಮರೆಯಬಾರದು. ಹಿಂದೆ ಪ್ರಗತಿಪರ ಚಿಂತಕರನ್ನು ಅತ್ಯಾಚಾರಕ್ಕೊಳಪಡಿಸುವ ವಿಕೃತ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದವರೊಬ್ಬರdinesh ಮೇಲೆಯೂ ಇಂತಹ ದೂರು ದಾಖಲಾಗಿತ್ತು. ಸಭ್ಯತೆ ಮೇರೆ ಮೀರಿ ಮಾತನಾಡುವುದು, ಮಾನಸಿಕವಾಗಿ ನೋವು ಮಾಡುವುದು ಹಾಗೂ ಕೊಲೆ, ದೈಹಿಕ ಹಲ್ಲೆ, ದಾಳಿಯಂತಹ ಧಮಕಿ ಹಾಕುವುದು ಕಾನೂನು ಪರಿಭಾಷೆಯಲ್ಲಿ ಅಪರಾಧಗಳೇ. ಅಂತಹ ಕೃತ್ಯಗಳಿಂದ ನೊಂದವರು ಪೊಲೀಸ್ ಮೊರೆ ಹೋಗಿ ದೂರು ನೀಡಬಹುದು.

ಇಲ್ಲಿ ಐಟಿ ಕಾಯಿದೆ 2000 ರ ಅಡಿಯಲ್ಲಿ ದೂರು ದಾಖಲಾಗಿದೆ. ಆದರೆ ಈ ಕಾಯಿದೆಯಲ್ಲಿ ಕೆಲವು ಅಪಾಯಗಳಿವೆ. ಎಂತಹದನ್ನೂ ಇದರಡಿ ತಂದು ದೂರು ದಾಖಲಿಸಿ ಮುಜುಗರಕ್ಕೆ, ಹಿಂಸೆಗೆ, ಅಸಹಾಯಕತೆಗೆ ತಳ್ಳಬಹುದು. ಕೋಮು ಶಕ್ತಿಗಳು ಇಂತಹ ಸಾಧನಗಳನ್ನು ಬಳಸಿಕೊಂಡು ಸಭ್ಯರನ್ನೂ ಭಯೋತ್ಪಾದಕರನ್ನಾಗಿ ಬಿಂಬಿಸುವ ಅಪಾಯವಿದೆ.  ಆ ಕಾರಣಕ್ಕೆ ಜಾಗ್ರತೆ ಬೇಕಿದೆ. ಇಂತಹ ಕಾನೂನನ್ನು ಮುಂದಿನ ದಿನಗಳಲ್ಲಿ ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾದರೆ ಅಚ್ಚರಿ ಇಲ್ಲ. ಹಿಂದೆ ಅನೇಕ ಪ್ರಗತಿಪರ ಮನಸ್ಸುಗಳನ್ನು ಈ ಕಾನೂನಿನ ಕೆಲ ಕಲಂಗಳನ್ನು ವಿರೋಧಿಸಿದ್ದಿದೆ (ಮುಖ್ಯವಾಗಿ 66A). ಸೌಹಾರ್ದ ವಾತಾವರಣ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ಇರುವ ಸಮಾಜ ನಿರ್ಮಾಣಕ್ಕೆ ಇಂತಹ ಕಾನೂನುಗಳು ತೊಡರುಗಾಲಾಗುತ್ತವೆ. ಪ್ರಬಲ ಪ್ರತಿರೋಧ ಒಡ್ಡುವಾಗ ಸಂಯಮ, ಗಾಂಭೀರ್ಯ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂಬುದನ್ನು ಎಲ್ಲರೂ ಅರಿತರೆ, ಈ ಸಮಸ್ಯೆ ಇರುವುದಿಲ್ಲ. ಆಗ ಪೆರುಮಾಳ್ ಮುರುಗನ್ ನಂತಹ ಲೇಖಕರು ಬರೆಯುವುದನ್ನು ನಿಲ್ಲಿಸುವ ಪ್ರಮೇಯವೂ ಇರುವುದಿಲ್ಲ, ಕೇಸುಗಳನ್ನು ದಾಖಲಿಸುವ ಸಂದರ್ಭವೂ ಒದಗುವುದಿಲ್ಲ.