ಯಾರ ಜಪ್ತಿಗೂ ಸಿಗದ ಧರ್ಮಸ್ಥಳದ ಕಲೋನಿಯಲ್ ಪಟ್ಟಭದ್ರ ವ್ಯವಸ್ಥೆ

– ಬಿ.ಶ್ರೀಪಾದ ಭಟ್

ಒಂದು ವರ್ಷದ ಹಿಂದೆ ನಡೆದ ಸೌಜನ್ಯ ಹತ್ಯೆ ಪ್ರಕರಣ ಈಗ ಅನಿರೀಕ್ಷಿತವಾದ ತಿರುವು ಪಡೆದುಕೊಂಡು ಕಡೆಗೆ ಧರ್ಮಸ್ಥಳದ ಸೋ ಕಾಲ್ಡ್ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಅಂಗಳಕ್ಕೆ ಬಂದು ತಲುಪಿದೆ. ಅಷ್ಟೇ ಅಲ್ಲ ಅವರಿಗೆ ಉರುಳಾಗುತ್ತಾ ಸಾಗಿದೆ. ಇವರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿದೆ. Dharmasthala_Templeಇಂದು ಸೌಜನ್ಯ ಹತ್ಯೆಯ ಹಿಂದೆಯೇ ಧರ್ಮಸ್ಥಳ ಮತ್ತು ಉಜಿರೆಯ ಸುತ್ತ ಕಳೆದ ಕೆಲವು ವರ್ಷಗಳಿಂದ ನಿಗೂಢ ಕೊಲೆಗಳು ಮತ್ತು ಅದು ಮುಚ್ಚಿ ಹಾಕಿದ ಪ್ರಭಾವಶಾಲಿ ವ್ಯಕ್ತಿ ಮತ್ತು ಸಂಸ್ಥೆಗಳ ಕೈವಾಡ ಇಂದು ಬಯಲಿಗೆ ಬರುತ್ತಿದೆ.

ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಲು ಮತ್ತು ಕೆಲವು ವರ್ಷಗಳಿಂದ ಧರ್ಮಸ್ಥಳ ಮತ್ತು ಉಜಿರೆಯ ಸುತ್ತ ಮುತ್ತ ನಡೆದಿದೆ ಎನ್ನಲಾದ ಕೊಲೆಗಳ ಸತ್ಯಶೋಧನೆಗಾಗಿ ಮಂಗಳೂರಿನ ಕಮ್ಯುನಿಷ್ಟ ಮಿತ್ರರು ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆಸುತ್ತಿರುವ ಹೋರಾಟ ಈ ಪ್ರಕರಣ ಮರುಜೀವ ಪಡೆದುಕೊಳ್ಳಲು ಕಾರಣ. ನಿಸ್ವಾರ್ಥದಿಂದ ಈ ಹೋರಾಟವನ್ನು ನಡೆಸಿದ ನಮ್ಮ ಕಮ್ಯುನಿಷ್ಟ ಮಿತ್ರರಿಗೆ ಕನ್ನಡಿಗರು ಧನ್ಯವಾದಗಳನ್ನು ಹೇಳಬೇಕಾಗಿದೆ. ನಮ್ಮ ಮಿತ್ರರು ಇದೇ ತಿಂಗಳು ಸೌಜನ್ಯಳ ಹುಟ್ಟುಹಬ್ಬದ ದಿನವಾದ ಅಕ್ಟೋಬರ್ 18ರಂದು ಬೆಳ್ತಂಗಡಿಯಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದಾರೆ. ನಮ್ಮ ಪ್ರೀತಿಯ ಗೆಳೆಯರಿಗೆ ನಾವೆಲ್ಲ ಸಂಪೂರ್ಣ ಬೆಂಬಲ ಕೊಡಬೇಕಾಗಿದೆ.

ಪ್ರಜಾಪ್ರಭುತ್ವದ ದೇಶದಲ್ಲೂ ಧರ್ಮಸ್ಥಳದಲ್ಲಿ ಈ ವೀರೇಂದ್ರ ಹೆಗ್ಗಡೆಯವರು ಅನಭಿಷಕ್ತ ರಾಜರಂತೆ ರಾಜ್ಯಾಭಾರ ನಡೆಸುತ್ತಿದ್ದಾರೆ. ಅಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಅವರ ಉಕ್ಕಿನ ಹಿಡಿತ ಸಡಿಲಗೊಂಡಿಲ್ಲ. ಇಂದು ಈ ಸರ್ವಾಧಿಕಾರದ ಆಡಳಿತಕ್ಕೆ ಸಮಾಜ ಸೇವೆಯ ಮುಖವಾಡ ಗಟ್ಟಿಯಾಗಿ ಅಂಟಿಕೊಂಡಿದೆ. ಇಷ್ಟಾದರೂ ನಮ್ಮ ದೇಶದ ಪ್ರಜಾಪ್ರಭುತ್ವದ ಸಂವಿಧಾನ ಸಮಾನತೆಗಾಗಿ ಕಲ್ಪಿಸಿಕೊಟ್ಟ ಅಲ್ಪಸಂಖ್ಯಾತರಿಗಾಗಿ ಇರುವ ಮೀಸಲಾತಿಯ ಸವಲತ್ತನ್ನು ತಮ್ಮ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಬಳಸಿಕೊಳ್ಳಲು ಈ  ವೀರೇಂದ್ರ ಹೆಗ್ಗಡೆಯವರಿಗೆ ಯಾವುದೇ ಸಂಕೋಚವಿಲ್ಲ. ಮಾತೆತ್ತಿದರೆ ನಮ್ಮ ಪರಿಸರ, ನಮ್ಮ ಸಂಸ್ಕೃತಿಯ ಕುರಿತಾಗಿ ಮಾತನಾಡುವ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಸುತ್ತಮುತ್ತ ವಸಾಹುಶಾಹಿಯ ಸಮಾಜವನ್ನು ನಿರ್ಮಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅದು ಕಲೋನಿಯಲ್ ರೂಪದಂತೆ ಗೋಚರಿಸದಿರಲು ಅಲ್ಲಿ ಉದಾರವಾದಿ ಮುಖವಾಡವನ್ನು ತೊಡಿಸಲಾಗಿದೆ. ಇದಕ್ಕೆ ಪೂರಕವಾಗಿ ವೀರೇಂದ್ರ ಹೆಗ್ಗಡೆಯವರ ಸಂಘ ಸಂಸ್ಥೆಗಳ ಸಮಾಜ ಸೇವೆಯ ಗರಿಗಳು ಮುಡಿಗೇರಿರುವುದು ಪ್ರಜ್ಞಾವಂತರಲ್ಲಿ ಅಚ್ಚರಿ ಮೂಡಿಸಿದೆ. ಈ ವೀರೇಂದ್ರ ಹೆಗ್ಗಡೆಯವರ ಧಾರ್ಮಿಕ ಮೂಲಭೂತವಾದವನ್ನು ಪ್ರಗತಿಪರರು ಬಿಚ್ಚಿ ತೋರಿಸಿದರೆ ಬೆಂಬಲಿಗರು ಅದನ್ನು ಅಲ್ಲಗೆಳೆಯದೆಯೇ ಬದಲಾಗಿ ಹೆಗ್ಗಡೆಯವರ ಸಮಾಜಸೇವೆಯ ಪಟ್ಟಿಗಳನ್ನು ನೀಡಿ ಇದೇ ಅವರ ಅಸ್ಮಿತೆ ನೆನಪಿರಲಿ ಎಂದು ತಾಕೀತು ಮಾಡುತ್ತಾರೆ. ಇಂದು ಧರ್ಮಸ್ಥಳದ ಧಾರ್ಮಿಕತೆಯ ಅಮಾನವೀಯ ಅಟ್ಟಹಾಸವನ್ನು Sowjanya-Rape-Murderದೈವತ್ವದ ಪವಾಡವಾಗಿ ಬಳಸಿಕೊಂಡಿರುವುದು ವೀರೇಂದ್ರ ಹೆಗ್ಗಡೆಯವರ ಚಾಣಾಕ್ಷತೆ ಎನ್ನುವದರಲ್ಲಿ ಅನುಮಾನವೇ ಇಲ್ಲ. ಅಲ್ಲಿನ ಗುಲಾಮಿತನವನ್ನು ಭಕ್ತಿಯ ಪರಾಕಷ್ಟೆಯೆಂಬಂತೆ ಜಗಜ್ಜಾಹೀರುಗೊಳಿಸಿರುವುದು ವೀರೇಂದ್ರ ಹೆಗ್ಗಡೆಯವರ ಬಲು ದೊಡ್ಡ ಮಾರ್ಕೆಟಿಂಗ್‌ ಸಕ್ಸೆಸ್. ಅಲ್ಲಿನ ನಾಗರಿಕರು ಚಿಂತನೆಗೆ ಒರೆ ಹಚ್ಚಬೇಕಾದಂತಹ ತಮ್ಮದೇ ಆದ ಮಿದುಳನ್ನು ಮೌನವಾಗಿ ನಿಷ್ಕ್ರಿಯೆಗೊಳಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಪದತಲದಲ್ಲಿ ಮುಡಿಪಾಗಿರಿಸಿದ್ದಾರೆ. ಕಲೋನಿಯಲ್ನ ಈ ದಿಗ್ವಿಜಯದ ಫಲವಾಗಿ  ಅಲ್ಲಿನ ‘ಒಡೆಯ-ಗುಲಾಮ’ ವ್ಯವಸ್ಥೆ ಗುರು-ಶಿಷ್ಯ ಸಂಬಂಧದ ಮುಖವಾಡ ಧರಿಸಿದೆ. ಹಾಗಾದಲ್ಲಿ ವೀರೇಂದ್ರ ಹೆಡೆಯವರ ಸಾಮ್ರಾಜ್ಯದಲ್ಲಿ ಆಧುನಿಕತೆಯ, ವೈಚಾರಿಕತೆಯ ವ್ಯಾಖ್ಯಾನವೇನು?? ಸ್ವಘೋಷಿತ ಧಾರ್ಮಿಕ ನಾಯಕನ ಈ ಸಕ್ಸೆಸ್ ಓಟ ಎಗ್ಗಿಲ್ಲದೆ ಜನಬೆಂಬಲ ಪಡೆದುಕೊಳ್ಳತೊಡಗಿದರೆ ಇನ್ನೆಲ್ಲಿದೆ ಮಾನವೀಯ ನಾಯಪರವಾದ ಸಂವಾದ?? ಇನ್ನೆಲ್ಲಿದೆ ಹೃದಯ ವೈಶಾಲ್ಯತೆ?

ಈ ವೀರೇಂದ್ರ ಹೆಗ್ಗಡೆಯವರ ಈ ಶಕ್ತಿಕೇಂದ್ರ ಯಾವುದೇ ಬಗೆಯ ಹೊನ್ನಾಳಿ ಹೊಡೆತಕ್ಕೂ, ಬಲವಾದ ಸುತ್ತಿಗೆ ಏಟಿಗೂ ಒಂದಿಂಚೂ ಅಲ್ಲಾಡದಿರಲು ಕಾರಣವೇನು?? ಧರ್ಮಸ್ಥಳ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ ಪ್ರಕರಣಗಳು ಸೂಕ್ತವಾಗಿ ತನಿಖೆಯಾಗದಂತೆ ತಡೆಯುತ್ತಿರುವ ಕಾಣದ ಕೈಗಳಾವವು?? ಅಲ್ಲಿನ ಪೋಲೀಸರು ನಿಷ್ಪಕ್ಷಪಾತ ತನಿಖೆ ನಡೆಸದಂತೆ ನಿಗ್ರಹಿಸುತ್ತಿರುವ ರಾಜಕೀಯ ಶಕ್ತಿಗಳಾವುವು?? ಉತ್ತರ ಕ್ಲಿಷ್ಟವೇನಲ್ಲ. ತುಂಬಾ ಸರಳ.

ಸೀನ್ 1:
ಈ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಕೊಲೆ ಸಂಚಿನ ಆರೋಪ ಎದುರಿಸುತ್ತಿರುವಂತಹ ಈ ಸೂಕ್ಷ್ಮ ಸಂದರ್ಭದಲ್ಲಿ  ಸೋ ಕಾಲ್ಡ್ ಸೆಕ್ಯುಲರ್ ಪಕ್ಷ ಕಾಂಗ್ರೆಸ್‌ನ ಬುದ್ಧಿಜೀವಿ ರಾಜಕಾರಣಿ ಎಂದೇ ಪ್ರಖ್ಯಾತರಾದ ಕನ್ನಡ ಚಿತ್ರಕಲಾ ಪರಿಷತ್‌ನ ಅಧ್ಯಕ್ಷರೂ ಆಗಿರುವ ರಾಜಕಾರಣಿ ಬಿ.ಎಲ್. ಶಂಕರ್ ಏಕಾಏಕಿ ಅವರಿಗೆ ಬೆಂಬಲ ಸೂಚಿಸುತ್ತಿರುವುದರಲ್ಲಿ ಈ ಉತ್ತರ ಅಡಗಿದೆ.

ಸೀನ್ 2:
17ನೇ ಅಕ್ಟೋಬರ್ 2013ರಂದು ತನ್ನ ಶಕ್ತಿಯನ್ನು ಸಾಬೀತುಪಡಿಸಲು ಉಜಿರೆಯಲ್ಲಿ ರಾಜಕಾರಣಿಯಂತೆ ತನ್ನ ಬೆಂಬಲಿಗರ ಸಮಾವೇಶ ನಡೆಸಿದ ವೀರೇಂದ್ರ ಹೆಗ್ಗಡೆಯವರೊಂದಿಗೆ ನಾಚಿಕೆ, ಮಾನವಿಲ್ಲದೆ ವೇದಿಕೆ ಹಂಚಿಕೊಂಡ ಸಚಿವರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ ಅಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ವೀರೇಂದ್ರ ಹೆಗ್ಗಡೆಯವರ ಪರವಾಗಿ ಜಿದ್ದಿಗೆ ಬಿದ್ದವರಂತೆ ಮಾತನಾಡಿದರು. ಇವರಿಗೆ ಸಂವಿಧಾನದ ಆಶಯಗಳೇ ಮರೆತುಹೋಗಿದ್ದು ದುರಂತವಲ್ಲದೇ ಮತ್ತಿನ್ನೇನು ?? ನೆನಪಿರಲಿ ಇವರೆಲ್ಲ ಸೆಕ್ಯುಲರ್ ರಾಜಕಾರಣಿಗಳು.

ಸೀನ್ 3:
17ನೇ ಅಕ್ಟೋಬರ್ 2013ರಂದು ಬೆಂಗಳೂರಿನಲ್ಲಿ ವೀರೇಂದ್ರ ಹೆಗ್ಗಡೆಯವರ ಪರವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಸಭ್ಯ, ನಿಷ್ಠಾವಂತ, ಶಿಕ್ಷಿತ, ಸೆಕ್ಯುಲರ್ ರಾಜಕಾರಣಿ ಎಂದೇ ಪ್ರಖ್ಯಾತರಾದ  ಕಾಂಗ್ರೆಸ್‌ನ ಸುದರ್ಶನ್, ಜನಪರ ರಾಜಕಾರಣಿ ಎಂದು ಪ್ರಸಿದ್ಧಿ ಪಡೆದ ಸಿಂಧ್ಯಾ, ಮತಾಂಧ ರಾಜಕಾರಣಿ ಸಿ.ಟಿ.ರವಿ, ಕನ್ನಡ ಚಲನಚಿತ್ರ ರಂಗದ ಗಣ್ಯರು ಮತ್ತು ಪ್ರಖ್ಯಾತ, ಜಾತ್ಯಾತೀತ, ಸೆಕ್ಯುಲರ್ ಸಾಹಿತಿಗಳಾದ ಕಮಲಾ ಹಂಪಾನಾ ಮತ್ತು ಇತ್ಯಾದಿ, ಇತ್ಯಾದಿ, ಇತ್ಯಾದಿ ಮುಖಂಡರು!!

ಸೀನ್ 4:
ಕೇವಲ ಕನ್ನಡ ಸಾಹಿತ್ಯ ಸಂಬಂದಿತ ವಿವಾದಗಳಿಗೆ ಮಾತ್ರ ತೀಕ್ಷಣವಾಗಿ ಪ್ರತಿಕ್ರಿಯಿಸಿ ಅಭಿವ್ಯಕ್ತಿ ಸ್ವಾತಂತ್ರ ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಮುಗಿಲುಮುಟ್ಟುವಂತೆ ಘೋಷಿಸುವ ನಮ್ಮ ಬಹುಪಾಲು ಸಾಹಿತಿಗಳು ಮತ್ತು ವಿಮರ್ಶಕರು ಸಾಹಿತ್ಯೇತರವಾದ ಯಾವುದೇ ಬಗೆಯ ಶೋಷಣೆಯ ಕುರಿತಾಗಿ ತಳೆಯುವ ದಿವ್ಯ ನಿರ್ಲಕ್ಷ್ಯ, ನ್ಯಾಯದ, ಸಮತಾವಾದದ ಪರವಾಗಿ ಚಳುವಳಿ ನಡೆಸುವ ಚಳುವಳಿಗಾರರ ಕುರಿತಾದ ಈ ಯುಜಿಸಿ ಪಂಡಿತರ ಅಸಡ್ಡೆ ಇವರ ಕುರಿತಾಗಿ ನಮ್ಮಲ್ಲಿ ಅಸಹ್ಯ ಹುಟ್ಟಿಸಲು ಮಾತ್ರ ಸಾಧ್ಯವಷ್ಟೇ. ಇವರೆಲ್ಲ ತಿರಸ್ಕಾರಕ್ಕೆ ಮಾತ್ರ ಅರ್ಹರು. ಕನ್ನಡಿಗರು ಇವರ ಬೌದ್ಧಿಕ ಅಹಂಕಾರವನ್ನು ನಿರಾಕರಿಸಿ ಎಷ್ಟು ಬೇಗ ಮೂಲೆಗೆ ಎಸೆಯುತ್ತಾರೋ ಅಷ್ಟು ಒಳ್ಳೆಯದು. ಚಿಂತಕರು ಹೇಳಿದಂತೆ ಸಮತಾವಾದದ, ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾದದ್ದೇನೆಂದರೆ ಪ್ರಜ್ಞಾವಂತರ, ಅಧಿಕಾರಶಾಹಿಯ ದಿವ್ಯ ಮೌನ. ಅನ್ಯಾಯದ, ಅತ್ಯಾಚಾರದ ವಿರುದ್ಧ ತುಟಿಬಿಚ್ಚದ ಭೀಕರವಾದ ಈ ಮೌನ ದಿನಗಳೆದಂತೆ ಒಂದೇ ಏಟಿಗೆ ಎಲ್ಲಾ ಬಗೆಯ ಮಾನವೀಯ, ಜನಪರ ಚಳುವಳಿಗಳನ್ನು ನಾಶಮಾಡಬಲ್ಲದು. ಅಂದರೆ ನ್ಯಾಯದ ಪರವಾಗಿ ಹೋರಾಟ ನಡೆಸುತ್ತಿರುವ ಚಳುವಳಿಗಾರರ ಪರವಾಗಿ ನೀವು ಮಾತನಾಡಲಿಲ್ಲವೆಂದರೆ ನೀವು ನಮ್ಮ ವಿರುದ್ಧ ಇದ್ದೀರಿ ಎಂಬುದಷ್ಟೇ ಈ ಭೀಕರ ಮೌನದ ತಾತ್ಪರ್ಯ. ಈ ಅತ್ಯಾಚಾರ, ಹಲ್ಲೆಗಳನ್ನು ನಡೆಸುವ ಪಟ್ಟಭದ್ರ ವ್ಯವಸ್ಥೆಯನ್ನು ವಿರೋಧಿಸುವವರೆನ್ನಲ್ಲ ತಂಟೆಕೋರರೆಂದು ವ್ಯಾಖ್ಯಾನಿಸುವ ಗುಂಪಿಗೆ ಈ ಮೌನಧಾರಿಗಳೂ ಸೇರಿಕೊಂಡಿದ್ದಾರೆ ಎಂಬುದು ಸೂರ್ಯ ಸ್ಪಷ್ಟ.

ಸೀನ್ 5 :
ಬದಲಾವಣೆಯ ತಂಗಾಳಿ ಬೀಸಿದೆ ಎನ್ನುವ ಹೆಗ್ಗಳಿಕೆಯೊಂದಿಗೆ ಗದ್ದುಗೆ ಹಿಡಿದಿರುವ ಸೋ ಕಾಲ್ಡ್ ಸೆಕ್ಯುಲರ್ ಪಕ್ಷ ಕಾಂಗ್ರೆಸ್‌ನ ದಿವ್ಯ ಮೌನದ ಅರ್ಥ ಬಿಡಿಸಿ ಹೇಳಬೇಕೆ ?? ತನ್ನ ರಾಜ್ಯಭಾರದಲ್ಲಿ ಯಾವುದೇ ಪ್ರಜೆಗೆ ಅನ್ಯಾಯವಾದರೂ ತನ್ನ ಶಾಸಕಾಂಗ ಮತ್ತು ಕಾರ್ಯಾಂಗವು ಆತನ/ಆಕೆಯ ಪರವಾಗಿ ಬೆಂಬಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆನ್ನುವುದು ಸಂವಿಧಾನ ಮೂಲ ಆಶಯವೆಂಬುದು ನಮ್ಮ ಮಾನವೀಯ ರಾಜಕಾರಣಿ ಸಿದ್ಧರಾಮಣ್ಣನವರಿಗೆ ಮರೆತು ಹೋಯಿತೆ? ಅಥವಾ ಜಾಣ ಮೌನವೇ !! ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಮತ್ತು ಸೌಜನ್ಯ ಕೊಲೆ ಪ್ರಕರಣ ಮತ್ತು ಧರ್ಮಸ್ಥಳ ಸುತ್ತಮುತ್ತ ನಡೆದ ಅಸಹಜ ಕೊಲೆಗಳ ವಿರುದ್ಧದ ತನಿಖೆ ಮುಗಿಯುವವರೆಗೂ ತನ್ನ ಸರ್ಕಾರದ ಮಂತ್ರಿಗಳಿಗೆ, ತನ್ನ ಪಕ್ಷದ ಶಾಸಕರಿಗೆ, ಕಾರ್ಯಕರ್ತರಿಗೆ ನೀತಿಸಂಹಿತೆಯನ್ನು ಬೋಧಿಸಿ ಈ ಹೆಗ್ಗಡೆಯವರೊಂದಿಗೆ ಸಮಾನ ದೂರದಲ್ಲಿರಬೇಕೆಂದು ಆದೇಶಿಸಲು ಸಿದ್ಧರಾಮಯ್ಯನವರಿಗೆ ಇರುವ ತೊಂದರೆಯಾದರೂ ಏನು? ಅದು ಒಂದೇ ತೊಂದರೆ, ಅದು ರಾಜಕೀಯ ಇಚ್ಛಾಶಕ್ತಿಯ ಕೊರತೆ.

ಬಹುಮತವೇ ನಿರ್ಣಾಯಕವಾಗುವಂತಹ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವೀರೇಂದ್ರ ಹೆಗ್ಗಡೆಯಂತಹ ಅತಿರಥರಿಗೆ ರಾಜ್ಯಾದ್ಯಾಂತ ಈ ನಿಗೂಢ ಬಹುಮತವನ್ನು ಗಳಿಸುವುದು ನೀರು ಕುಡಿದಷ್ಟೇ ಸುಲಭ. ಈ ನಿಗೂಢ ಬಹುಮತವನ್ನು ಆಧಾರವಾಗಿಟ್ಟುಕೊಂಡು ಶತಮಾನಗಳವರೆಗೆ ತನ್ನ ಸ್ಥಾನ ಮಾನವನ್ನು ಅಭಾದಿತವಾಗಿ ಕಾಪಾಡಿಕೊಳ್ಳುವ ನೈಪುಣ್ಯತೆಯೂ ವೀರೇಂದ್ರ ಹೆಗ್ಗಡೆಯವರಿಗೆ ಗೊತ್ತು.  ಸ್ನೇಹ – ಪ್ರೀತಿ – ಭಕ್ತಿಯ ಅಪೂರ್ವ ಸಮ್ಮಿಳನದ ಫಲವನ್ನು ಪಡೆದುಕೊಳ್ಳುವ ಕಲೆಗಾರಿಕೆ ಈ ವೀರೇಂದ್ರ ಹೆಗ್ಗಡೆಯವರಿಗೆ ಸಿದ್ಧಿಸಿದೆ.

ಆದರೆ ಇದನ್ನು ವಿರೋಧಿಸುವ ನೈತಿಕತೆ ಮತ್ತು ಪ್ರಾಮಾಣಿಕತೆ ನಮಗೆ ಸಿದ್ಧಿಸಿಲ್ಲವಲ್ಲ! ಇದಲ್ಲವೇ ದುರಂತ.

’ಜಟ್ಟ’ : ತಪ್ಪದೇ ನೋಡಿ…


– ರವಿ ಕೃಷ್ಣಾರೆಡ್ದಿ


 

ಕೆಲವು ಸಿನೆಮಾಗಳನ್ನು ಒಳ್ಳೆಯ ಸಿನೆಮಾ ಎಂದು ನೋಡಬೇಕಾಗುತ್ತದೆ, ಮತ್ತೆ ಕೆಲವನ್ನು ಅಂತಹ ಸಿನೆಮಾಗಳನ್ನು ಪ್ರೋತ್ಸಾಹಿಸುವ ಕಾರಣಕ್ಕಾಗಿಯೇ ನೋಡಬೇಕಾಗುತ್ತದೆ. ಜಟ್ಟ ಸಿನೆಮಾವನ್ನು ಎರಡೂ ಕಾರಣಗಳಿಗೆ ನೋಡಬೇಕಿದೆ. ಅದು ಕೇವಲ ಪ್ರಯೋಗಾತ್ಮಕ ಚಿತ್ರವಲ್ಲ. ಕನ್ನಡದಲ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಬಂದ ಕೆಲವು ಪ್ರಶಸ್ತಿ ವಿಜೇತ ಸಿನೆಮಾಗಳನ್ನು ನೋಡಿ ನನಗೆ ಖಂಡಿತ ಬೇಸರವಾಗಿತ್ತು. ಅರ್ಧ ಗಂಟೆಯಲ್ಲಿ ಹೇಳಿ ಮುಗಿಸಬಹುದಾದದ್ದನ್ನು ಎರಡು ಗಂಟೆ ಎಳೆಯುತ್ತಾರೆ. ನಿಧಾನವಾಗಿ, ನೀರಸವಾಗಿ ಕತೆ ಹೇಳುವುದನ್ನೇ ಕಲೆ ಎಂದುಕೊಂಡಿದ್ದಾರೆ. ಮತ್ತು ಈ ಸಿನೆಮಾಗಳು ದುರಂತವನ್ನೇ ಹೇಳಬೇಕು. ಜೀವನಪ್ರೀತಿಯ, ಆಶಾವಾದದ ಸಿನೆಮಾ ಪ್ರಶಸ್ತಿಗೆ ಅನರ್ಹ ಎನ್ನುವ ಭಾವನೆ ಇದೆ.

ಆದರೆ, ’ಜಟ್ಟ’ ಹಾಗಿಲ್ಲ. ಕ್ರೌರ್ಯ ಮತ್ತು ದುರಂತವನ್ನೇ ಇದೂ ಹೇಳಿದರೂ ಅಲ್ಲಿ ಜೀವನಪ್ರೀತಿಯಿದೆ. ತ್ಯಾಗವಿದೆ. ಕರುಣೆ ಇದೆ. ದೊಡ್ದತನವಿದೆ. ವಿಷಾದವಿದೆ. ಹಿಂಸೆಯನ್ನು ತೋರಿಸುತ್ತಲೇ ಅಹಿಂಸೆಯನ್ನು ಸಾರುತ್ತದೆ.

ಸಮಾಜದ ಪಿತೂರಿಗಳಿಗೆ ಬಲಿಯಾಗಿ ಒಂದು ತಪ್ಪು ಮಾಡುವ ಜೀವ ಆ ತಪ್ಪನ್ನು ಸರಿಮಾಡಿಕೊಳ್ಳಬೇಕೆಂದರೂ ಅದನ್ನು ಮಾಡುವ ಬಗೆ ತಿಳಿಯದೆ ಒದ್ದಾಡುವ ಕತೆ ಇದು. ಮಧ್ಯಂತರದ ನಂತರ ವೇಗ ಪಡೆದುಕೊಳ್ಳುವ ಚಿತ್ರ ಅನಿರೀಕ್ಷಿತ ಕ್ಲೈಮಾಕ್ಸ್ ಮೂಲಕ ಕೊನೆಯ ಅರ್ಧ ಗಂಟೆಯಲ್ಲಿ ಪ್ರೇಕ್ಷಕನನ್ನು ಬೆಚ್ಚಿ ಬೀಳಿಸುತ್ತದೆ. jattaಬಹುತೇಕ ಎಲ್ಲರ ನಟನೆಯೂ ಚೆನ್ನಾಗಿದೆ. ವಿಷಾದದ ಕತೆ ಹೇಳುತ್ತಿದ್ದರೂ ಪಾತ್ರಧಾರಿಗಳ ನಟನೆಯನ್ನು ನೋಡಿ ಖುಷಿಪಡದೆ ಇರಲಾಗದು.

ಸುಮಾರು ಎರಡೂ ಕಾಲು ಗಂಟೆಯ ಈ ಸಿನೆಮಾವನ್ನು ಒಂದು ಹದಿನೈದು ನಿಮಿಷ ಕಡಿಮೆ ಮಾಡಿ, ಕೆಲವೊಂದು ಕಡೆ ಬರುವ ದೀರ್ಘ ಭಾಷಣಗಳ ಸಂಭಾಷಣೆಯನ್ನು ಕಡಿತ ಮಾಡಿದ್ದರೆ ಚಿತ್ರಕ್ಕೆ ಇನೂ ಬಿಗಿ ಬರುತ್ತಿತ್ತು. ಕೆಲವೊಂದು ಕಡೆ ಯಾವುದೇ ವಾಚ್ಯವಿಲ್ಲದೆ ಕತೆ ಹೇಳಲು ಪ್ರಯತ್ನಿಸುವ ನಿರ್ದೇಶಕರು ಮತ್ತೆ ಹಲವು ಕಡೆ ದೀರ್ಘ ಸಂಭಾಷಣೆ ಇಟ್ಟಿರುವುದು ಚಿತ್ರದಲ್ಲಿನ ದೋಷಗಳಲ್ಲಿ ಒಂದು. ಇದು ಕೆಲವು ಕಡೆ, ವಿಶೇಷವಾಗಿ ಗೃಹಬಂಧನದಲ್ಲಿರುವ ಹೆಣ್ಣುಮಗಳ ಕೈಯ್ಯಲ್ಲಿ ಹೇಳಿಸುವ ಮಾತುಗಳು ಅಸಹಜ ಮತ್ತು ಅಸಾಂದರ್ಭಿಕ ಎನ್ನಿಸುತ್ತವೆ.

ನಾನು ಈ ಸಿನೆಮಾವನ್ನು ಆನೇಕಲ್‌ನಲ್ಲಿ ಅತ್ತ ಥಿಯೇಟರ್ರೂ ಅಲ್ಲದ ಇತ್ತ ಟೆಂಟೂ ಅಲ್ಲದ ಚಿತ್ರಮಂದಿರದಲ್ಲಿ ನೋಡಿದೆ. ಅಂದು ಆಯುಧಪೂಜೆಯ ಮಧ್ಯಾಹ್ನ. ಸುಮಾರು 70-80 ಜನ ಮಾತ್ರ ಇದ್ದರು. ಕೆಲವು ಸಂದರ್ಭಗಳಲ್ಲಿ ಪ್ರೇಕ್ಷಕರ ಅಸಹನೆ ತಾಳಲಾಗದಷ್ಟಿತ್ತು. ಏನೇನನ್ನೋ ಕಲ್ಪಿಸಿಕೊಂಡು ಬಂದಿದ್ದ ಕೆಲವು ಪ್ರೇಕ್ಷಕರು ಈ ಸಿನೆಮಾದ ಕಲಾ ಭಾಷೆ ನೋಡಿ ದಂಗಾಗಿದ್ದರು, ವ್ಯಗ್ರಗೊಂಡಿದ್ದರು. ಕಿರುಚುತ್ತಿದ್ದರು. “ಷಂಡ”ನನ್ನು ಹೀಯಾಳಿಸುತ್ತಿದ್ದರು. “ಗಂಡಸಿಗೆ ಸವಾಲೆಸೆಯುವವಳನ್ನು” ಬೈಯ್ಯುತ್ತಿದ್ದರು. “ಮೋಸಗಾರ್ತಿಯನ್ನು” ಮಾತಿನಲ್ಲೇ ಕೊಲ್ಲುತ್ತಿದ್ದರು. ಸಿಗರೇಟಿನ ಮೇಲೆ ಸಿಗರೇಟು ಹೊತ್ತಿಸುತ್ತಿದ್ದರು. ಅಂದ ಹಾಗೆ ಸಿನೆಮಾದ ವಿರಾಮದ ಸಮಯದಲ್ಲಿ ಬಂದ ಶಿವರಾಜ್ ಕುಮಾರ್‌ರ “ಭಜರಂಗಿ” ಚಿತ್ರದ ಟ್ರೈಲರ್ ಅಲ್ಲಿದ್ದವರನ್ನು ರೋಮಾಂಚನಗೊಳಿಸಿದ ರೀತಿ ನೋಡಬೇಕಿತ್ತು. ಅತಿಮಾನುಷ, ಅಮಾನುಷ, ಅವಾಸ್ತವಿಕ ಕತೆ ಮತ್ತು ದೃಶ್ಯಗಳನ್ನು ನೋಡುವ ಮೂಲಕ ಸಮಯ ಕೊಲ್ಲಲು ಅಥವ ವಾಸ್ತವದಿಂದ ಪಲಾಯನ ಮಾಡಲು ಬಯಸುವ ಜನರಿಗೆ ’ಜಟ್ಟ’ ಚಿತ್ರ ಇಷ್ಟವಾಗುವುದಾದರೂ ಹೇಗೆ? ಮತ್ತು, ಇಂತಹ ಚಿತ್ರಗಳನ್ನು ಎಲ್ಲಾ ತರಹದ ಚಿತ್ರಮಂದಿರಗಳಲ್ಲಿ ನೋಡಲು ಆಗದು. ಅದನ್ನು ನೋಡಬೇಕಾದ ಪರಿಸರವೇ ಒಂದು ಬಗೆಯದು. ಆದರೂ, ಇಂತಹ ಚಿತ್ರಗಳು ಸಣ್ಣಪುಟ್ಟ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಪ್ರದರ್ಶಿತವಾಗುವುದು ಒಳ್ಳೆಯದೇ. ತಾವು ಗಮನಿಸಿರದ ಒಂದು ಭಾಷೆ ಮತ್ತು ವಿಚಾರವನ್ನು ಕೆಲವರಾದರೂ ಬಲವಂತವಾಗಿಯಾದರೂ ಗಮನಿಸಲು ಸಾಧ್ಯವಾಗುತ್ತದೆ.

ಮೊದಲೇ ಹೇಳಿದ ಹಾಗೆ ಈ ಚಿತ್ರವನ್ನು ಒಳ್ಳೆಯ ಸಿನೆಮಾ ಎನ್ನುವ ಕಾರಣಕ್ಕಾಗಿ ಮತ್ತು ಪ್ರೋತ್ಸಾಹಿಸುವ ಕಾರಣಕ್ಕಾಗಿ ಹೆಚ್ಚೆಚ್ಚು ಕನ್ನಡಿಗರು ನೋಡಬೇಕಿದೆ. ನಮ್ಮ ಚಲನಚಿತ್ರಗಳ ಗುಣಮಟ್ಟ ಹೆಚ್ಚಬೇಕಿದ್ದರೆ ಇಂತಹ ಚಿತ್ರಗಳು ಹೆಚ್ಚಬೇಕು. ಚಿತ್ರ ಸಿನೆಮಾ ಮಂದಿರಗಳಿಂದ ತೆರವಾಗುವ ಮೊದಲೇ ಹೋಗಿ ಇದನ್ನು ನೋಡಿ. ಪರಿಚಿತರಿಗೆ ನೋಡಲು ಪ್ರೇರೇಪಿಸಿ.

ಸೌಜನ್ಯ ಹತ್ಯೆ: ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು

– ಶೌರೀಶ್ ಕುದ್ಕುಳಿ

ಪ್ರಜ್ಞಾಪೂರ್ವಕವಾಗಿ ಎಸಗಿದಂತಹ ಒಂದು ಮೃಗೀಯ ಕಾರ್ಯವನ್ನು ಮರೆಮಾಚುವ ಕೆಲಸ ಇಂದು ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಒಂದು ವರ್ಷದ ಹಿಂದೆ ಸೌಜನ್ಯ ಎಂಬ ಅಮಾಯಕ ಹೆಣ್ಣು ಮಗಳ ದಾರುಣ ಹತ್ಯೆಯಾಯಿತು. ಕೆಲವು ಕಾಮುಕರು ಆಕೆಯನ್ನು ಮೃಗೀಯ ರೀತಿಯಲ್ಲಿ ಬಳಸಿಕೊಂಡು, ಕೊಂದು ಹಾಕಿದರು. ಆ ಹೊತ್ತಲ್ಲಿ, ದೇಹದಲ್ಲಿ ಜೀವಾತ್ಮವಿದ್ದ ಪ್ರತಿ ಮಾನವನೂ ಯಾವ ರೀತಿ ಪ್ರಾಣ ಮತ್ತು ಮಾನ ಉಳಿಸಿಕೊಳ್ಳಲು sowjanya-murderedಒದ್ದಾಡುತ್ತಾನೆಯೋ, ಅದೇ ರೀತಿ ಆಕೆಯೂ ತನ್ನ ಪ್ರಾಣರಕ್ಷಣೆಗೆ ವಿಲವಿಲ ಒದ್ದಾಡಿದ ಕುರುಹುಗಳು ನಿಖರವಾಗಿ ಕಾಣಿಸಿವೆ. ತನ್ನ ಅರಿವಿಗೆ ಸಾವಿನ ಕೊನೆಗಳಿಗೆ ಕಾಣಿಸುತ್ತಿದ್ದು, ಅದನ್ನು ಇನ್ನಾರೋ ಬಲಾತ್ಕಾರವಾಗಿ ಹೇರುತ್ತಿರುವಾಗ, ಅದರಿಂದ ಬಿಡುಗಡೆ ಪಡೆಯುವ ಹೊತ್ತಿನಲ್ಲಿ ನಡೆಸುವ ಫಲಕಾರಿಯಲ್ಲದ ಹೋರಾಟ ಮತ್ತು ಆ ವೇದನೆ ಊಹಿಸಿಕೊಂಡರೆ ಎದೆ ನಡುಗುವಂತಹುದು.

ಧರ್ಮವೇ ನೆಲೆನಿಂತ ಬೀಡಾದ ತುಳುನಾಡು ಮತ್ತು ಕರ್ನಾಟಕದಾದ್ಯಂತ ಮನೆಮಾತಾದ ಶ್ರೀ ಮಂಜುನಾಥನಿರುವ ಧರ್ಮಸ್ಥಳದಲ್ಲಿ ಕಾಮುಕರು ಆಕೆಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿದರು. ಮನೆಗೆ ತೆರಳುವ ಹಾದಿ ಬದಿಯಲ್ಲಿ, ಸಂಜೆ ಸುಮಾರು 5 ಗಂಟೆ ಹೊತ್ತಿಗೆ ನಡೆದ ಈ ಘಟನೆಯ ಸ್ಥಳ ಆ ಸಂದರ್ಭದ ಭೀಕರತೆಯ ಕರಾಳತೆಗೆ ಸಾಕ್ಷಿ. ಮಾನರಕ್ಷಣೆ ಮತ್ತು ಜೀವರಕ್ಷಣೆಗಾಗಿ ಆಕೆ ಒದ್ದಾಡಿರಬಹುದಾದ ಪರಿ, ಆಕೆಯ ಶವ ಬಿದ್ದಿದ್ದ ಜಾಗದಲ್ಲಿರುವ ಕುರುಹುಗಳು ಎಂತಹವರನ್ನೂ ಬೆಚ್ಚಿ ಬೀಳಿಸುವಂತಹದ್ದು. ಕೈ ಕಾಲುಗಳನ್ನು ಮರಕ್ಕೆ ಕಟ್ಟಿ ಹಾಕಿದ ಭೀಭತ್ಸ ಚಿತ್ರ ಹಾಗೆಯೇ ಇತ್ತು. ಕಾಲೇಜಿನ ಗುರುತುಪತ್ರದ ದಾರವೇ ಕತ್ತು ಹಿಸುಕಿ ಕೊಲೆ ಮಾಡಲು ಬಳಸಿದ ಹಗ್ಗವಾಗಿತ್ತು.

ಈ ಘಟನೆಗೆ ಹಲವು ಸಂಘಟನೆಗಳು ಅದರಲ್ಲೂ ವಿದ್ಯಾರ್ಥಿ ಸಂಘಟನೆಗಳು ಮೌನವಾಗಿ ಕಣ್ಣೀರು ಸುರಿಸಿದವು. ಬೀದಿಗಿಳಿದು ಪ್ರತಿಭಟನೆ ಮಾಡಿದವು. ಆದರೆ ಸಾರ್ವಜನಿಕ ಸ್ಮರಣೆ ಅಥವಾ ನೆನಪು ಕ್ಷಣಕಾಲ ಎನ್ನುವಂತೆ, ಸಾರ್ವಜನಿಕರ ರೋಷದ ಬೆಂಕಿ ಇಂದು ತಣ್ಣಗಾಗುತ್ತಿದೆ. ಕಟುಕರು ಬೀದಿಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ.

ಇವುಗಳ ಅರಿವಿರುವ ಜನತೆ ನ್ಯಾಯಾಲಯ, ಪೋಲಿಸ್ ವ್ಯವಸ್ಥೆ ಮತ್ತು ಅಂತಿಮವಾಗಿ ಸರಕಾರದ ಮೇಲೆ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಹಿಳಾ ಸಂಘಟನೆಗಳು ಮೂಕ ವೇದನವನ್ನು ಅನುಭವಿಸುತ್ತಿವೆಯೋ ಎನ್ನುವಂತೆ ಭಾಸವಾಗುತ್ತಿದೆ! ಮಂಗಳೂರಿನ ಪಬ್ ದಾಳಿಗೊಳಗಾದ ಹೆಣ್ಣು ಮಕ್ಕಳಿಗೆ ದೊರಕಿದ್ದ ಬೆಂಬಲ ಮೈಸೂರಿನಲ್ಲಿ ರೈಲಿನಿಂದ ತಳ್ಳಲ್ಪಟ್ಟ ಹೆಣ್ಣು ಮಗಳಿಗೆ ದೊರಕಿಲ್ಲ! JusticeForSowjanyaಹಾಗೆಯೇ ಧರ್ಮಸ್ಥಳದ ಸೌಜನ್ಯಳ ಅಮಾನುಷ ಕೊಲೆಯ ಖಂಡಿಸಿ ಹೋರಾಟ ಮಾಡಿದವರ ವಿರುದ್ಧ ಕೇಸ್ ದಾಖಲು ಮಾಡಿಕೊಂಡ ಉಡುಗೋರೆ ಮಾತ್ರವೇ ಬೆಳ್ತಂಗಡಿಯ ನಾಗರಿಕರಿಗೆ ದೊರಕಿತು!

ನಮ್ಮ ವ್ಯವಸ್ಥೆ ಹೇಗಿದೆ ಮತ್ತು ಎತ್ತ ಸಾಗುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಪ್ರತಿ ವ್ಯಕ್ತಿ ಯಾ ಸಂಘಟನೆಗೆ ಇಂದು ಸಾರ್ವಜನಿಕವಾಗಿ ಅಜೆಂಡಾ ಬೇಕಾಗಿದೆ. ಕೆಲವೊಮ್ಮೆ ಇವರು ರಾಜಕೀಯ ಪಕ್ಷಗಳ ಮುಖವಾಣಿಯಂತೆ ವರ್ತಿಸುತ್ತವೆ. ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಸಾರ್ವಜನಿಕ ಸಂಸ್ಥೆಗಳು ವಿಷಯಾಧಾರಿತ ಚಳುವಳಿಗಳನ್ನು ಮಾಡುತ್ತವೆ. ಇಡೀ ಮನುಕುಲದ ಬುಡಕ್ಕೇ ಪೆಟ್ಟು ಬಿದ್ದಾಗಲೂ, ಸಾರ್ವಜನಿಕರು ಕ್ಷಣ ಕಾಲ ಮಾತ್ರ ವಿಚಲಿತರಾಗಿ ಖಂಡಿಸುತ್ತಾರೆ. ಆದರೆ ಅದರ ಮುಂದಿನ ಬೆಳವಣಿಗೆಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಸೌಜನ್ಯ ಪ್ರಕರಣವೂ ಈ ರೀತಿಯಾಗಿ ಜನರಿಂದ ಮರೆಯಾಗುತ್ತಿರುವ ವೇದನೆಯ ಪ್ರಕರಣ. ಮರೆಯಾಗುವ ರೀತಿಯಲ್ಲಿ ಕೊಲೆಯ ವಿಚಾರಣೆಯ ಗತಿಯೂ ಸಾಗಿದೆ! ಆರೋಪ ಪ್ರತಿ ಆರೋಪಗಳು ನಡೆಯುತ್ತಿವೆ. ಸೌಜನ್ಯ ಹೆತ್ತವರಿಗೆ ಪ್ರಚಾರ ಬೇಕಿಲ್ಲ, ನ್ಯಾಯ ಬೇಕಿದೆ. ಮೂಲತ: ಕೃಷಿ ಕುಟುಂಬವಾಗಿರುವ ಇವರು ನ್ಯಾಯಪರತೆಯಿಂದ ಜೀವಿಸುತ್ತಿರುವವರು. ಆಂತರಿಕ ಕಥೆಗಳು ಧರ್ಮದ ನೆಲೆವೀಡಾದ ಧರ್ಮಸ್ಥಳದಲ್ಲಿ ಹರಿದಾಡುತ್ತಿದ್ದರೂ, ಪೋಲಿಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲುತ್ತಿದ್ದರೂ, ಕಳೆದು ಹೋದ ಸೌಜನ್ಯ ಬರಲಾರಳು ಎಂಬುದು ಅವರ ಅರಿವಿನಲ್ಲಿದೆ. ಸಮಾಜ ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸಿದ್ದೂ ಅವರ ಗಮನದಲ್ಲಿದೆ. Sowjanya-Rape-Murderಆದರೆ ವಿಕೃತವಾಗಿ ಕೊಲೆಗೈದ ಪರಮ ಪಾಪಿಗಳು ಯಾರು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನ್ಯಾಯ ಮರೀಚಿಕೆಯಾಗಿರುವುದು ಪ್ರತಿದಿನವನ್ನೂ ನರಕ ಮಾಡಿದೆ.

ಮೂರು ನಾಲ್ಕು ವ್ಯಕ್ತಿಗಳ ಕುಕೃತ್ಯ ಇದು ಎಂಬುದು ಅನೇಕರ ಅಭಿಮತ. ಮನೋರೋಗಿ ಈ ಕೃತ್ಯ ಮಾಡಿರಲಾರ ಎಂಬುದು ಸ್ಥಳೀಯರ ಅಭಿಪ್ರಾಯ. ಪೋಲಿಸ್ ಇಲಾಖೆಯ ಕಸ್ಟಡಿಯಲ್ಲಿ ಸದ್ಯಕ್ಕೆ ಇರುವ ವ್ಯಕ್ತಿ ಮನೋರೋಗಿ. ಜಗತ್ತಿನ ವ್ಯವಹಾರದಲ್ಲಿ ಹುಚ್ಚರಾಗಿರುವ ಪ್ರತಿ ಮಾನವನಿಗೆ ಸೌಜನ್ಯ ಪ್ರಕರಣ ಕ್ಷುಲಕವೆಂದೆನಿಸಬಹುದು. ಆದರೆ ಈ ಘಟನೆಯನ್ನು ನಗಣ್ಯ ಮಾಡಿದ್ದಲ್ಲಿ, ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು ಎಂಬ ಸಂದೇಶ ಸಮಾಜಕ್ಕಿದೆ.

ಆರೆಸಸ್ ಅಂದರೆ ಏನು?

ಹಿಂದಿ ಮೂಲ : ಮಧು ಲಿಮಯೆ
ಇಂಗ್ಲೀಷ್ ಅನುವಾದ : ಜಾವೇದ್ ಆನಂದ್
ಅನುವಾದ : ಬಿ.ಶ್ರೀಪಾದ ಭಟ್

(ಹಿರಿಯ ಸಮಾಜವಾದಿ ನಾಯಕ, ಲೋಹಿಯಾವಾದಿ ದಿವಂಗತ ಮಧು ಲಿಮಯೆ 1979 ರಲ್ಲಿ, ಅಂದರೆ ಜನತಾ ಪಕ್ಷ ಹೋಳಾದ ನಂತರದ ದಿನಗಳಲ್ಲಿ ಹಿಂದಿ ವಾರ ಪತ್ರಿಕೆ “ರವಿವಾರ್”ಗೆ ಬರೆದ ಲೇಖನ. ಇಂದಿಗೆ ಇದು 34 ವರ್ಷಗಳಷ್ಟು ಹಳೆಯದಾದರೂ ಅದರ ವಿವರಗಳು ಇಂದಿಗೂ ಪ್ರಸ್ತುತ ಎನ್ನುವ ಕಾರಣಕ್ಕೆ ಆಂಶಿಕವಾಗಿ ಅನುವಾದಿಸಲಾಗಿದೆ.)

ನಾನು 1937 ರಲ್ಲಿ ರಾಜಕೀಯವನ್ನು ಪ್ರವೇಶಿಸಿದೆ. madhu-limaye-postal-stampಆಗ ತರುಣನಾಗಿದ್ದ ನಾನು ಚಿಕ್ಕ ವಯಸ್ಸಿನಲ್ಲಿಯೇ ಮೆಟ್ರಿಕ್ಯುಲೇಷನ್ ಪಾಸಾಗಿದ್ದೆ ಮತ್ತು ಕೂಡಲೇ ಕಾಲೇಜಿಗೆ ಪ್ರವೇಶವನ್ನು ಪಡೆದಿದ್ದೆ. ಆ ಕಾಲದಲ್ಲಿ ಪುಣೆಯಲ್ಲಿ ಒಂದು ಕಡೆ ಆರೆಸಸ್ ಮತ್ತು ಸಾವರ್ಕರ್‌ವಾದಿಗಳು (ವಿನಾಯಕ್ ದಾಮೋದರ್ ಸಾವರ್ಕರ್ ಬೆಂಬಲಿಗರು) ಮತ್ತೊಂದು ಕಡೆ ಸೋಷಿಯಲಿಷ್ಟರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕಮ್ಯುನಿಷ್ಟರು ಕ್ರಿಯಾಶೀಲರಾಗಿದ್ದರು. 1 ನೇ ಮೇ 1937 ರಂದು ನಾವೆಲ್ಲ ಮೇ ದಿನವನ್ನು ಆಚರಿಸುತ್ತಿದ್ದೆವು. ಆಗ ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆಗಾರರ ಮೇಲೆ ಆರೆಸಸ್ ಮತ್ತು ಸಾವರ್ಕರ್‌ವಾದಿಗಳು ಏಕಾಏಕಿ ಹಲ್ಲೆ ನಡೆಸಿದರು. ಈ ಹಲ್ಲೆಯಿಂದ ಕ್ರಾಂತಿಕಾರಿ ಸೇನಾಪತಿ ಬಾಪಟ್ ಮತ್ತು ಸಮಾಜವಾದಿ ನಾಯಕ ಎಸ್.ಎಂ.ಜೋಶಿ ಗಾಯಗೊಂಡರು. ಈ ಘಟನೆಯ ನಂತರ ಅಂದಿನಿಂದ ಇಂದಿನವರೆಗೂ ಈ ಆರೆಸಸ್ ಮತ್ತು ಸಾವರ್ಕರ್‌ವಾದಿಗಳೊಂದಿಗೆ ನಾವೆಲ್ಲ ತೀವ್ರವಾಗಿ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ.

ಆರೆಸಸ್‌ನೊಂದಿಗೆ ನಮ್ಮ ಮೊದಲ ತಕರಾರು ಶುರುವಾದದ್ದು ರಾಷ್ಟ್ರೀಯತೆಯ ಕುರಿತಾಗಿ. ನಾವೆಲ್ಲ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕುಗಳಿವೆ ಎಂದು ನಂಬಿದ್ದರೆ ಈ ಆರೆಸಸ್ ಮತ್ತು ಸಾವರ್ಕರ್‌ವಾದಿಗಳು ಹಿಂದೂ ರಾಷ್ಟ್ರದ ಕನಸನ್ನು ಪ್ರತಿಪಾದಿಸುತ್ತಿದ್ದರು. ಜಿನ್ನಾ ಅವರು ಸಹ ಈ ಪರಿಕಲ್ಪನೆಯ ಬಲಿಪಶುವಾಗಿದ್ದರು. savarkar-golwalkarಇಂಡಿಯಾ ಎರಡು ದೇಶಗಳಿಂದ ರೂಪಿಸಲ್ಪಟ್ಟಿದೆ, ಅದು ಮುಸ್ಲಿಂ ದೇಶ ಮತ್ತು ಹಿಂದೂ ದೇಶ ಎಂದು ಜಿನ್ನಾ ವಾದಿಸುತ್ತಿದ್ದಾಗ ಅದನ್ನು ಸಾವರ್ಕರ್ ಅನುಮೋದಿಸುತ್ತಿದ್ದರು.

ಅವರೊಂದಿಗಿನ ಮತ್ತೊಂದು ಭಿನ್ನಮತವೆಂದರೆ ನಾವು ಪ್ರಜಾಪ್ರಭುತ್ವ ಮಾದರಿಯ ಗಣರಾಜ್ಯವನ್ನು ಪ್ರತಿಪಾದಿಸುತ್ತಿದ್ದರೆ ಈ ಆರೆಸಸ್ ಪಕ್ಷವು ಪ್ರಜಾಪ್ರಭುತ್ವ ಮಾದರಿಯು ಪಶ್ಚಿಮ ರಾಷ್ಟ್ರಗಳ ಪರಿಕಲ್ಪನೆಯೆಂದೂ ಹಾಗೂ ಇದೆಂದೂ ಇಂಡಿಯಾಕ್ಕೆ ಸರಿ ಹೊಂದುವುದಿಲ್ಲವೆಂದೂ ವಾದಿಸುತ್ತಿತ್ತು. ಹಾಗೆಂದು ಅದರ ಸ್ವಯಂಸೇವಕರು ಬಲವಾಗಿ ನಂಬಿದ್ದರು. ಆ ದಿನಗಳಲ್ಲಿ ಆರೆಸಸ್ ಸಂಚಾಲಕರು ಹಿಟ್ಲರ್‌ನನ್ನು, ಗುರೂಜಿ ಗೋಳ್ವಲ್ಕರ್‌ರನ್ನು ಆರಾಧಿಸುತ್ತಿದ್ದರು ಮತ್ತು ಅವರ ಐಡಿಯಾಲಜಿಗಳನ್ನು ನಂಬುತ್ತಿದ್ದರು.

ಈ ಗುರೂಜಿ ಗೋಳ್ವಲ್ಕರ್ ಮತ್ತು ನಾಜಿಗಳ ನಡುವೆ ಅಪಾರ ಸಾಮ್ಯತೆ ಇತ್ತು. ತಮ್ಮ ಪುಸ್ತಕ “ನಾವು ಮತ್ತು ನಮ್ಮ ರಾಷ್ಟ್ರೀಯತೆ”ಯಲ್ಲಿ ಬರೆಯುತ್ತ ಗೋಳ್ವಲ್ಕರ್ ಅವರು ಹೇಳುತ್ತಾರೆ, “ಭಾರತದಲ್ಲಿರುವ ಅನ್ಯಧರ್ಮೀಯರು ಹಿಂದೂ ಧರ್ಮದ ಆಚರಣೆಗಳನ್ನು ಮತ್ತು ಸಂಸ್ಕೃತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಹಿಂದೂ ಧರ್ಮವನ್ನು ಗೌರವಿಸಬೇಕು. ಹಿಂದೂ ಧರ್ಮವನ್ನಲ್ಲದೆ ಬೇರೇನನ್ನೂ ಪ್ರಚಾರ ಮಾಡಬಾರದು. ಈ ದೇಶದ ಕುರಿತಾದ ಅಸಹನೆಯನ್ನು ಬಿಟ್ಟುಕೊಡಬೇಕು. ಭಾರತದಲ್ಲಿ ಅನ್ಯಧರ್ಮೀಯರನ್ನು ವಿದೇಶಿಯರೆಂದೇ ಪರಿಗಣಿಸಬೇಕು. ಅನ್ಯಧರ್ಮೀಯರು ಈ ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರಂತೆ ಬದುಕಬೇಕು. ಇವರಿಗೆ ಯಾವುದೇ ವಿಶೇಷ ಸೌಕರ್ಯಗಳನ್ನು ನೀಡಲಾಗುವುದಿಲ್ಲ .ಇವರಿಗೆ ಸಮಾನ ನಾಗರಿಕ ಹಕ್ಕುಗಳಿರುವುದಿಲ್ಲ.”

ಈ ಆರೆಸಸ್ ಸದಸ್ಯರು ಮತ್ತು ಸಂಚಾಲಕರು ಹಿಟ್ಟರ್‌ನ ಹಿಂಬಾಲಕರಾಗಿದ್ದರು. ಇವರೆಲ್ಲ ಜರ್ಮನಿಯಲ್ಲಿ ಹಿಟ್ಲರ್ ನಾಜಿಗಳನ್ನು ನಡೆಸಿಕೊಂಡ ರೀತಿಯಲ್ಲಿಯೇ ಇಂಡಿಯಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ರನ್ನು ನಡೆಸಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದರು.

ಗೋಳ್ವಲ್ಕರ್ ಅವರು ಬರೆದ “ನಾವು ಅಥವಾ ನಮ್ಮ ರಾಷ್ಟ್ರೀಯತೆ” ಪುಸ್ತಕ ಒಂದು ಭಾಗ “ತನ್ನ ಬಣ್ಣದ ಮತ್ತು ಸಂಸ್ಕೃತಿಯ ಪರಿಶುದ್ಧತೆಯನ್ನು ಕಾಪಾಡಬೇಕಾದಂತಹ ಸಂದರ್ಭದಲ್ಲಿ ತನ್ನ ದೇಶದ ಅನ್ಯಧರ್ಮೀಯರಾದ ಯಹೂದಿಗಳನ್ನು ಸಂಪೂರ್ಣವಾಗಿ ನಾಶ ಮಾಡುವುದರ ಮೂಲಕ ಜರ್ಮನಿ ಜಗತ್ತನ್ನೇ ನಿಬ್ಬೆರಗಾಗಿಸಿತು. ಇದು ಇಂದು ನಮಗೆ ಆದರ್ಶವಾಗಬೇಕು” ( ಪುಟ 42, ನಾವು ಅಥವಾ ನಮ್ಮ ರಾಷ್ಟ್ರೀಯತೆ, 1947 ) ಎನ್ನುತ್ತದೆ. KZ Mauthausen, Sowjetische Kriegsgefangeneನೀವು ಇದನ್ನು ಹಳೆ ಕಾಲದ, ಸ್ವಾತಂತ್ರ ಪೂರ್ವದ ಪುಸ್ತಕವೆಂದು ವಾದಿಸಬಹುದು. ಆದರೆ ಗೋಳ್ವಲ್ಕರ್ ಅವರ ಮತ್ತೊಂದು ಪುಸ್ತಕ “ಚಿಂತನ ಗಂಗಾ” 1966 ರಲ್ಲಿ ಪ್ರಕಟವಾಯಿತು. ಆ ಪುಸ್ತಕದಲ್ಲಿ ಗೋಳ್ವಲ್ಕರ್ ಭಾರತದ ಪ್ರತಿಯೊಬ್ಬ ಮುಸ್ಲಿಂರು, ಕ್ರಿಶ್ಚಿಯನ್ನರು, ಕಮ್ಯುನಿಷ್ಟರನ್ನು ಅಂತರಿಕ ಶತೃಗಳೆಂದು, ಅವರು ದೇಶದ ಭದ್ರತೆಗೆ ಅಪಾಯಕಾರಿಗಳೆಂದು ಬರೆಯುತ್ತಾರೆ. ಇದು ಈ ಗುರೂಜಿಯ ಐಡಿಯಾಲಜಿ.

ಜಾತೀಯತೆಯ ಕುರಿತಾಗಿ ಈ ಆರೆಸಸ್ ಮತ್ತು ಗೋಳ್ವಲ್ಕರ್ ಅವರೊಂದಿಗೆ ನಮ್ಮ ಮತ್ತೊಂದು ಭಿನ್ನಮತವಿತ್ತು. ಈ ಆರೆಸಸ್ ಮತ್ತು ಗೋಳ್ವಲ್ಕರ್ ಜಾತಿ ಪದ್ಧತಿಯನ್ನು ಬೆಂಬಲಿಸುತ್ತಿದ್ದರು. ಆದರೆ ಸಮಾಜವಾದಿಗಳಾದ ನಮಗೆ ಈ ಜಾತಿ ಪದ್ಧತಿ ಒಂದು ಶತೃವಾಗಿತ್ತು. ನಾನು ಈ ಜಾತೀಯತೆ ಮತ್ತು ಬ್ರಾಹ್ಮಣತ್ವದ ಚಿಂತನೆಗಳನ್ನು ವಿರೋಧಿಸುತ್ತಿದ್ದೆ. ಇವೆರೆಡೂ ನಾಶವಾಗುವವರೆಗೂ ನಮ್ಮ ಸಮಾಜದಲ್ಲಿ ಸಮಾನತೆ ಸಾಧ್ಯವಿಲ್ಲವೆಂಬುದು ನನ್ನ ಅಚಲ ನಂಬಿಗೆಯಾಗಿತ್ತು. ಆದರೆ ಈ ಗೋಳ್ವಲ್ಕರ್ ತಮ್ಮ “ಚಿಂತನ ಗಂಗಾ” ಪುಸ್ತಕದಲ್ಲಿ ಬರೆಯುತ್ತಾರೆ, “ನಮ್ಮ ಸಮಾಜದ ವಿಶಿಷ್ಟತೆಯೆಂದರೆ ಅದು ವರ್ಣಾಶ್ರಮ ಪದ್ಧತಿ. ಈ ಸಮಾಜವು ಶಕ್ತಿಯುತ ದೇವರನ್ನು ಒಳಗೊಂಡಿದೆ. ಈ ದೇವರನ್ನು ಸಮಾಜದ ವಿವಿಧ ಸ್ತರಗಳಲ್ಲಿರುವವರಿಗೆ ವಿಭಿನ್ನ ನೆಲೆಗಳಲ್ಲಿ ಪೂಜಿಸಲು ಅವಕಾಶ ನೀಡಲಾಗುತ್ತದೆ. ಸಕಲ ಜ್ಞಾನವನ್ನು ಹೊಂದಿದ ಬ್ರಾಹ್ಮಣರು ಶ್ರೇಷ್ಠರೆಂದು ಪರಿಗಣಿಸಲಾಗುತ್ತದೆ. ಕ್ಷತ್ರಿಯರನ್ನು ಸಹ ಅದೇ ಮಟ್ಟದ ಶ್ರೇಷ್ಠರೆಂದೇ ಗುರತಿಸಲಾಗುತ್ತದೆ, ಏಕೆಂದರೆ ಅವರು ಶತೃಗಳನ್ನು ಸಂಹರಿಸುತ್ತಾರೆ. ವೈಶ್ಯರೂ ಸಹ ಅಷ್ಟೇ ಮುಖ್ಯರಾಗುತ್ತಾರೆ, ಏಕೆಂದರೆ ಅವರು ವ್ಯಾಪಾರದ ಮೂಲಕ ಸಮಾಜವನ್ನು ಸಮತೋಲನದಲ್ಲಿಡುತ್ತಾರೆ. ತಮ್ಮ ಕೌಶಲ್ಯದ ಆಧರಿಸಿ ಸಮಾಜದ ಅವಶ್ಯಕತೆಗಳನ್ನು ಪೂರೈಸುವುದರ ಮೂಲಕ ಶೂದ್ರರೂ ಮುಖ್ಯರಾಗುತ್ತಾರೆ.” ಆದರೆ ಇಲ್ಲಿ ಗೋಳ್ವಲ್ಕರ್ ಅವರು ಚಾಣಕ್ಯನ ಆರ್ಥಿಕ ನೀತಿಯನ್ನು ಅನುಮೋದಿಸುತ್ತ ಶೂದ್ರನ ಕಾಯಕವನ್ನು ಅವನ ಕರ್ತವ್ಯವೆಂದೇ ಷರಾ ಬರೆಯುತ್ತಾರೆ. ಅವರ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಸೇವೆ ಮಾಡುವುದು ಶೂದ್ರರ ಧರ್ಮ. ಅವರ ಧಾರ್ಮಿಕ ಕರ್ತವ್ಯ.

ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರೊಂದಿಗೆ ನಮ್ಮ ಮತ್ತೊಂದು ಪ್ರಮುಖ ಭಿನ್ನಾಭಿಪ್ರಾಯವೆಂದರೆ ಅವರು ಪ್ರತಿಪಾದಿಸುವ ಭಾಷೆ. ಗೋಳ್ವಲ್ಕರ್ ಅವರ ಪ್ರಕಾರ ಹಿಂದಿಯನ್ನು ಸಾರ್ವಜನಿಕ ಭಾಷೆಯನ್ನಾಗಿಯೂ, ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು. ತಮ್ಮ ಚಿಂತನ ಗಂಗಾ ಪುಸ್ತಕದಲ್ಲಿ ಗೋಳ್ವಲ್ಕರ್ ಅವರು “ಸಧ್ಯದ ಅನುಕೂಲಕ್ಕಾಗಿ ಹಿಂದಿ ಭಾಷೆಯನ್ನು ಸಂಪರ್ಕ ಭಾಷೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಸಂಸ್ಕೃತವು ರಾಷ್ಟ್ರ ಭಾಷೆಯಾಗಬೇಕೆಂಬುದೇ ನಮ್ಮ ಅಂತಿಮ ಗುರಿ.” ಎಂದು ಬರೆಯುತ್ತಾರೆ. ಆದರೆ ಮಹಾತ್ಮ ಗಾಂಧಿ ಮತ್ತು ಟಿಳಕರಂತೆ ನಾವೆಲ್ಲರೂ ಪ್ರಾಂತೀಯ ಭಾಷೆಗಳನ್ನು ಬೆಂಬಲಿಸುತ್ತಿದ್ದೆವು. ನಾಗರಿಕರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವುದನ್ನು ನಾವು ವಿರೋಧೀಸುತ್ತಿದ್ದೆವು. ತಮಿಳುನಾಡಿನಲ್ಲಿ ತಮಿಳು, ಆಂಧ್ರದಲ್ಲಿ ತೆಲುಗು, ಕರ್ನಾಟಕದಲ್ಲಿ ಕನ್ನಡ, ಪಶ್ಚಿಮ ಬಂಗಾಲದಲ್ಲಿ ಬೆಂಗಾಲಿ, ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಗಳ ಬಳಕೆಗೆ ನಮ್ಮ ಬೆಂಬಲವಿತ್ತು. ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿಸುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತಿದ್ದೆವು. ಏಕೆಂದರೆ ಅದು ಮೇಲ್ಜಾತಿಯವರ ಭಾಷೆಯಾಗಿತ್ತು.

ಸ್ವಾತಂತ್ರ ಹೋರಾಟದ ರಾಷ್ಟ್ರೀಯ ಚಳುವಳಿಯು ಭಾರತದ ಗಣರಾಜ್ಯ ಸ್ವರೂಪವನ್ನು ಒಪ್ಪಿಕೊಂಡಿತ್ತು. ಕೆಲವು ಪ್ರಮುಖ ಇಲಾಖೆಗಳ ಅಧಿಕಾರವು ದೇಶದ ಹಿತರಕ್ಷಣೆಯ ದೃಷ್ಟಿಯಿಂದ ಕೇಂದ್ರದ ಸುಪರ್ದಿಯಲ್ಲಿದ್ದರೆ ಇತರೇ ವಿವಿಧ ಇಲಾಖೆಗಳ ಜವಬ್ದಾರಿಯು ರಾಜ್ಯ ಸರ್ಕಾರಗಳಗೆ ಸೇರಬೇಕೆಂಬ ವಿಕೇಂದ್ರಿಕರಣದ ನೀತಿ ನಮ್ಮ ನಿಲುವಾಗಿತ್ತು. ಗಣರಾಜ್ಯದ ಈ ಪರಿಕಲ್ಪನೆಯನ್ನು ಸ್ವಾತಂತ್ರ ನಂತರ ರಚಿತವಾದ ಸಂವಿಧಾನವೂ ಅನುಮೋದಿಸಿತ್ತು.

ಪ್ರಜಾಪ್ರಭುತ್ವದ, ವಿಕೇಂದ್ರೀಕರಣದ ಈ ಗಣರಾಜ್ಯ ಮಾದರಿಯನ್ನು, ಅದರ ಸಂವಿಧಾನವನ್ನು ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರು ನಿರಂತರವಾಗಿ ವಿರೋಧಿಸಿದರು. ಈ ಗುಂಪು ಗಣರಾಜ್ಯಗಳ ಪರಿಕಲ್ಪನೆಯನ್ನೇ ಅಪಹಾಸ್ಯ ಮಾಡುತ್ತಿದ್ದವು. ಈ ಗಣರಾಜ್ಯಗಳ ಬಹುರೂಪಿ ತತ್ವಗಳನ್ನು ಪ್ರತಿಪಾದಿಸುವ ಭಾರತದ ಸಂವಿಧಾನವನ್ನೇ ರದ್ದುಗೊಳಿಸಬೇಕೆಂದು ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರು ಒತ್ತಾಯಿಸುತ್ತಿದ್ದರು. ತಮ್ಮ ಚಿಂತನಗಂಗಾ ಪುಸ್ತಕದಲ್ಲಿ ಗೋಳ್ವಲ್ಕರ್ ಬರೆಯುತ್ತಾರೆ, “ಸಂವಿಧಾನವನ್ನು ಪುನರ್ವಿಮರ್ಶಿಸಬೇಕು. ಕೇಂದ್ರಾಡಳಿತ ರಾಜ್ಯವನ್ನು ಸಂವಿಧಾನದಲ್ಲಿ ಸೇರಿಸಬೇಕು.” ಗೋಳ್ವಲ್ಕರ್ ಬಯಸುವುದು ಒಂದು ದೇಶ, ಒಂದು ರಾಜ್ಯ, ಒಂದು ಪಾರ್ಲಿಮೆಂಟ್, ಒಂದು ಕಾರ್ಯಾಂಗ ಮಾತ್ರ. ಇವರು ವಿಭಿನ್ನ ರಾಜ್ಯಗಳ ವಿಧಾನ ಸಭೆಗಳನ್ನು ಮತ್ತು ಮಂತ್ರಿಮಂಡಳಿಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸುತ್ತಾರೆ. ಅಂದರೆ ಇವರ ಗುರಿ ಸರ್ವಾಧಿಕಾರದ ಆಡಳಿತ. ಕೇಂದ್ರಾಡಳಿತ ರಾಜ್ಯಭಾರ.

ಮತ್ತೊಂದು ವಿವಾದವೆಂದರೆ ತ್ರಿವರ್ಣಧ್ವಜ. ಈ ತ್ರಿವರ್ಣ ಧ್ವಜವನ್ನು ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಭಾರತದ ಬಿಡುಗಡೆಯ ಸಂಕೇತವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ತ್ರಿವರ್ಣ ಧ್ವಜವನ್ನು ಸ್ವಾತಂತ್ರದ ಸಂಕೇತವಾಗಿ ಹೋರಾಟಗಳಲ್ಲಿ ಬಳಲಾಗುತ್ತಿತ್ತು. ಅದರ ಘನತೆಯನ್ನು ಕಾಪಾಡಲು ಸಾವಿರಾರು ದೇಶಾಭಿಮಾನಿಗಳು ಪ್ರಾಣ ತ್ಯಾಗ ಮಾಡಿದರು. ಆಶ್ಚರ್ಯವೆಂದರೆ ಆರೆಸಸ್ ಈ ತ್ರಿವರ್ಣ ಧ್ಜಜವನ್ನು ರಾಷ್ಟ್ರ ಧ್ವಜವನ್ನಾಗಿ ಎಂದಿಗೂ ಮಾನ್ಯ ಮಾಡಲೇ ಇಲ್ಲ. ಆರೆಸಸ್ ಮಾನ್ಯ ಮಾಡಿದ್ದು ಕೇಸರೀ ಧ್ಜಜವನ್ನು. ಭಗವಧ್ವಜವನ್ನು. ಈ ಕೇಸರೀ ಧ್ವಜವು ಹಿಂದೂ ರಾಷ್ಟ್ರದ ಸಂಕೇತವೆಂದು ಆರೆಸಸ್ ಬಲವಾಗಿ ನಂಬಿತ್ತು.

ಗಣರಾಜ್ಯ ಮಾದರಿಯ ವಿಕೇಂದ್ರೀಕರಣ ತಿರಸ್ಕರಿಸಿದಂತೆಯೇ ಈ ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೂ ತಿರಸ್ಕರಿಸಿದ್ದರು. ಈ ಪ್ರಜಾಪ್ರಭುತ್ವ ವ್ಯವಸ್ಥೆಯು ಪಶ್ಚಿಮ ದೇಶಗಳಿಂದ ನಕಲು ಮಾಡಲಾಗಿದ್ದು ಅದು ಭಾರತದ ಚಿಂತನೆಗಳೊಂದಿಗೆ ಬೆರೆಯುವುದಿಲ್ಲವೆಂದು ಇವರು ನಂಬಿದ್ದರು. ಇವರಿಗೆ ಸೋಷಿಯಲಿಸಂ ಅಂತೂ ಸಂಪೂರ್ಣ ಪರಕೀಯವಾಗಿತ್ತು. ಗೋಳ್ವಲ್ಕರ್ ಅವರು ಈ ಎಲ್ಲಾ ಇಸಂಗಳು ವಿದೇಶಿ ಸಂಸ್ಕೃತಿಗಳೆಂದೂ ಇವನ್ನೆಲ್ಲವನ್ನೂ ತಿರಸ್ಕರಿಸಬೇಕೆಂದೂ ಕರೆ ಕೊಟ್ಟಿದ್ದರು.

1975 ರಲ್ಲಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದಾಗ ಅದನ್ನು ವಿರೋಧಿಸಿ ನಾವೆಲ್ಲಾ ಈ ಆರೆಸಸ್‌ನವರೊಂದಿಗೆ ಕೈಜೋಡಿಸಬೇಕಾದಂತಹ ಸಂದರ್ಭ ಬಂದಿತು. ಚೌಧುರಿ ಚರಣ ಸಿಂಗ್ ಅವರೂ ಸಹ ಇದೇ ಅಭಿಮತವನ್ನು ವ್ಯಕ್ತಪಡಿಸಿದರು. ಎಲ್ಲರೂ ಒಂದಾಗಿ ಒಂದೇ ಪಕ್ಷದ ಅಡಿಯಲ್ಲಿ ಕಾಂಗ್ರೆಸ್ ವಿರುದ್ಧದ ಚುನಾವಣೆಯನ್ನು ಎದುರಿಸಬೇಕೆಂದು ಚರಣ ಸಿಂಗ್ ಒತ್ತಾಯಿಸುತ್ತಿದ್ದರು. ಜಯಪ್ರಕಾಶ ನಾರಾಯಣ ಮತ್ತು ಇತರ ನಾಯಕರೂ ಇದನ್ನು ಅನುಮೋದಿಸಿದ್ದರು. Jayaprakash Narayanಆಗ ನಮ್ಮೆಲ್ಲರ ಆಯ್ಕೆಗಳೆಂದರೆ ಜನಸಂಘ, ಸೋಷಲಿಸ್ಟ್ ಪಕ್ಷಗಳು, ಕಾಂಗ್ರೆಸ್ ( ಓ ), ಭಾರತೀಯ ಲೋಕದಳ, ಮತ್ತು ಭಿನ್ನಮತೀಯ ಕಾಂಗ್ರೆಸ್ ಪಕ್ಷಗಳ ಗುಂಪು. ಈ ಸಂದರ್ಭದಲ್ಲಿಯೂ ನಾವೆಂದೂ ಆರೆಸಸ್ ಜೊತೆಗೆ ಕೈ ಜೋಡಿಸಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ಚರಣಸಿಂಗರು ಸುಮಾರು ಜುಲೈ 7, 1976 ರಂದು ಜೈಲಿನಿಂದ ಬರೆದ ಪತ್ರದಲ್ಲಿ ನಮ್ಮ ಮೇಲಿನ ಆಯ್ಕೆಗಳಲ್ಲಿರುವ ಪ್ರಮುಖ ಬಿಕ್ಕಟ್ಟಾದ ದ್ವಿಸದಸ್ಯದ ಕುರಿತಾಗಿ ವಿವರಿಸಿದರು. ಆರೆಸಸ್‌ನ ಸಂಚಾಲಕರಾದ ಜನಸಂಘದ ಸದಸ್ಯರು ಹೊಸ ಪಕ್ಷದ ಸದಸ್ಯರಾಗಬಹುದೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸುತ್ತಾ ಆಗಿನ ಜನಸಂಘದ ಕಾರ್ಯದರ್ಶಿ ಓಂ ಪ್ರಕಾಶ್ ತ್ಯಾಗಿ ಅವರು ಇದನ್ನು ಮುಕ್ತ ಮನಸ್ಸಿನಿಂದ ಚರ್ಚಿಸಲು ಜನಸಂಘವು ಸಿದ್ಧವೆಂದೂ ಹೇಳುತ್ತಾ, ಅಂತಹ ಬಿಕ್ಕಟ್ಟು ಎದುರಾದಲ್ಲಿ ಆರೆಸಸ್ ಅನ್ನು ವಿಸರ್ಜಿಲೂ ಸಹ ತಯಾರು ಎಂದು ಆಶ್ವಾಸನೆ ಕೊಟ್ಟರು.

ಆದರೆ ಜನತಾ ಪಕ್ಷದ ಸಂವಿಧಾನವನ್ನು ರಚಿಸುವ ಜವಾಬ್ದಾರಿ ಹೊತ್ತುಕೊಂಡ ಉಪಸಮಿತಿಯು ಹೊಸ ಪಕ್ಷದ ತತ್ವಗಳಿಗೆ, ಚಿಂತನೆಗಳಿಗೆ, ವಿಚಾರಗಳಿಗೆ ಭಿನ್ನವಾಗಿರುವವರಿಗೆ ದ್ವಿಸದಸ್ಯತ್ವವನ್ನು ಕೊಡಬಾರದೆಂದು ಅಭಿಪ್ರಾಯ ವ್ಯಕ್ತಪಡಿಸಿತು. ಇದರ ಮಹತ್ವವನ್ನು ಅರಿತುಕೊಂಡ ಎಲ್ಲರೂ ಇದನ್ನು ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಇದಕ್ಕೆ ವಿರೋಧ ಬಂದಿದ್ದು ಜನಸಂಘದ ಸುಂದರ್ ಸಿಂಗ್ ಭಂಡಾರಿ ಅವರಿಂದ. ಆಗ ಜನಸಂಘ ಮತ್ತು ಆರೆಸಸ್‌ನ ಪರವಾಗಿ ಅಟಲ್ ಬಿಹಾರಿ ವಾಜಪೇಯಿಯವರು ಪತ್ರವನ್ನು ಬರೆದು ಜನತಾ ಪಕ್ಷದ ಸದಸ್ಯರ ನೊಂದಣಿಯ ಸಂದರ್ಭದಲ್ಲಿ ಆರೆಸಸ್ ಕುರಿತಾದ ಚರ್ಚೆಯೇ ಅಪ್ರಸ್ತುತ ಎಂದು ಹೇಳಿದರು. ಆಗ ನಾನು ಜೈಲಿನಲ್ಲಿದ್ದೆ. ಹೀಗಾಗಿ ಆಗ ನಡೆದ ತೀರ್ಮಾನಗಳಿಗೆ ನಾನು ಜವಾಬ್ದಾರನಾಗಿರಲಿಲ್ಲ.

ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆ ಬರೆಯುವಂತಹ ಸಂದರ್ಭದಲ್ಲಿ ಆರೆಸಸ್ ಬಗ್ಗೆ ನಾವೆಲ್ಲ ಅಂತಹ ಆತಂಕವನ್ನು ಹೊಂದಿರಲಿಲ್ಲ. ಪ್ರತಿಯೊಂದು ವಾಕ್ಯವನ್ನು ಸ್ಪಷ್ಟವಾಗಿ ವಿವರಿಸಲಾಗಿತ್ತು. ನಿಜಕ್ಕೂ ಹೇಳಬೇಕೆಂದರೆ ಜನತಾ ಪಕ್ಷದ ಪ್ರಣಾಳಿಕೆಯು ಸೋಷಿಯಲಿಸ್ಟ್ ಸಮಾಜದ, ಸೆಕ್ಯುಲರ್ ಪ್ರಜಾಪ್ರಭುತ್ವದ, ಗಾಂಧಿ ಕನಸಿನ ಆದರ್ಶಗಳನ್ನು ಹೊಂದಿತ್ತಲ್ಲವೇ? ಅಲ್ಲಿ ಹಿಂದೂ ರಾಷ್ಟ್ರದ ಪ್ರಸ್ತಾಪವೇ ಇರಲಿಲ್ಲ. ಮಿಗಿಲಾಗಿ ನಮ್ಮ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಸಮಾನ ನಾಗರಿಕತೆಯನ್ನು ಧೃಡೀಕರಿಸಿದ್ದೆವು. ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರಿಯಲ್ಲಿ ಹಿಂದುಳಿದ ಜಾತಿಗಳಿಗೆ ಶೇಕಡಾ 25-33 ಮೀಸಲಾತಿಯನ್ನು ಕಲ್ಪಿಸುವುದಾಗಿ ಹೇಳಿದ್ದೆವು.

ಆದರೆ ಆರೆಸಸ್ ಸದಸ್ಯರು ಜನತಾ ಪಕ್ಷದ ಈ ಪ್ರಣಾಳಿಕೆಯನ್ನು ಮನಃಪೂರ್ವಕವಾಗಿ ಒಪ್ಪಿರಲಿಲ್ಲ. ಈ ಸಂದರ್ಭದಲ್ಲಿ ಕುಶುಭಾವು ಠಾಕ್ರೆ ಅವರಿಗೆ ಪತ್ರವನ್ನು ಬರೆದು ಜನಸಂಘ ಮತ್ತು ಆರೆಸಸ್‌ನ ದ್ವಂದವನ್ನು ವಿವರಿಸಿ ಇದರಿಂದ ನಿಮ್ಮ ಕಾರ್ಯಸೂಚಿಗಳ ಕುರಿತಾಗಿಯೇ ಅನುಮಾನ ಮೂಡುತ್ತದೆ ಎಂದು ಹೇಳಿದ್ದೆ. ಆದರೂ ಸಂಯುಕ್ತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಅನ್ನು ಎದುರಿಸಲು ನಾವೆಲ್ಲ ಒಂದಾಗಲೇಬೇಕೆಂಬ ಜಯಪ್ರಕಾಶ ನಾರಾಯಣರ ಅನಿಸಿಕೆಯನ್ನು ಒಪ್ಪಿಕೊಳ್ಳಬೇಕೆಂದರೆ ಎರಡು ಮುಖ್ಯ ವಿಷಯಗಳ ಕುರಿತಾಗಿ ನನ್ನಲ್ಲಿ ಖಚಿತತೆ ಇತ್ತು. ಈ ಸಂಯುಕ್ತ ವಿರೋಧ ಪಕ್ಷ ಚಾಲ್ತಿಗೆ ಬರಬೇಕೆಂದರೆ ಆರೆಸಸ್ ತನ್ನ ಸಿದ್ಧಾಂತಗಳನ್ನು ಬದಲಿಸಿಕೊಳ್ಳಬೇಕು. ಅದು ಸೆಕ್ಯುಲರ್ ಐಡಿಯಾಲಜಿಯನ್ನು ಒಪ್ಪಿಕೊಳ್ಳಬೇಕು. ಎರಡನೇಯದಾಗಿ ಆರೆಸಸ್‌ನ ಇತರೇ ಅಂಗ ಪಕ್ಷಗಳು ವಿಸರ್ಜನೆಗೊಂಡು ಸೆಕ್ಯುಲರ್ ಪಕ್ಷಗಳೊಂದಿಗೆ ವಿಲೀನಗೊಳ್ಳಬೇಕು. ಇದನ್ನು ನಾನು ಅರೆಸಸ್‌ನ ಪ್ರಮುಖರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದೆ. ಆಗ ಆರೆಸಸ್‌ನ ಪ್ರಮುಖರು ಈ ನಿಬಂಧನೆಗಳನ್ನು ಈ ಕೂಡಲೆ ಪಾಲಿಸಲು ಕಷ್ಟ, ಅದರೆ ಹಂತಹಂತವಾಗಿ ತಾವು ಬದಲಾಗುತ್ತೇವೆಂದು ಆಶ್ವಾಸನೆಯನ್ನು ಕೊಟ್ಟರು. ಮುಂದಿನ ದಿನಗಳಲ್ಲಿ ಇದರ ಕುರಿತಾಗಿ ಪ್ರಶ್ನಿಸಿದಾಗ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದರು. ಇವರ ಈ ದ್ವಂದ ವರ್ತನೆಗಳಿಂದ ನನಗೆ ಖಚಿತವಾಗಿದ್ದು ಇವರು ಬದಲಾಗಲು ತಯಾರಿಲ್ಲ ಎಂದು. ಅದರಲ್ಲೂ 1977 ರ ನಂತರ ನಡೆದ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರಾಂತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಂಘ ಪರಿವಾರ ಈ ಜನಬೆಂಬಲವಿದ್ದರೆ ನಾವು ಬದಲಾಗುವ ಅಗತ್ಯವೇ ಇಲ್ಲವೆಂದು ಬೀಗಿತ್ತು. ಇದೇ ತಂತ್ರಗಾರಿಕೆಯ ಮೂಲಕ ದೇಶದ ಇತರೇ ರಾಜ್ಯಗಳಲ್ಲಿಯೂ ಅಧಿಕಾರವನ್ನು ಕಬ್ಜಾ ಮಾಡಿಕೊಳ್ಳಬೇಕೆಂದು ಮಹತ್ವಾಕಾಂಕ್ಷೆಯಿಂದಿತ್ತು ಸಂಘ ಪರಿವಾರ. ಕಡೆಗೆ ಕೇಂದ್ರ ಮೇಲೆ ಸಹ ಅದು ಕಣ್ಣಿಟ್ಟಿತ್ತು.

ಆರೆಸಸ್‌ನ ಮುಖವಾಣಿ ಪಾಂಚಜನ್ಯದಲ್ಲಿ ಲೇಖನಗಳಲ್ಲಿ ನನ್ನನ್ನೂ ಒಳಗೊಂಡು ಆರೆಸಸ್‌ನ ನೀತಿಗಳನ್ನು ವಿರೋಧಿಸುವ ಪ್ರತಿಯೊಬ್ಬ ಜನತಾ ಪಕ್ಷದ ಸದಸ್ಯನನ್ನೂ ಟೀಕಿಸಲಾಗಿತ್ತು.

ಈ ಸಂದರ್ಭದಲ್ಲಿ ಆರೆಸಸ್‌ನ ಸರಸಂಚಾಲಕ ಬಾಬಾ ಸಾಹೇಬ್ ದೇವರಸ್ ಅವರು ನನ್ನ ಮನೆಗೆ ಬಂದಿದ್ದರು. morarji-desaiಆದರೆ ಹೊಸ ಬಗೆಯ ಬದಲಾವಣೆಗಳಿಗೆ ಅವರು ಮುಕ್ತ ಮನಸ್ಸಿನವರಾಗಿರಲಿಲ್ಲ. ಅವರೊಂದಿಗೆ ನಿರಂತರ ಸಂಭಾಷಣೆ ನಡೆಸುತ್ತ ಅವರನ್ನು ಬದಲಾಯಿಸಲು ನಾನು ನಡೆಸಿದ ನನ್ನ ಎಲ್ಲ ಪ್ರಯತ್ನಗಳು ವಿಫಲಗೊಂಡವು. ಅರೆಸಸ್‌ನ ಅಂಗ ಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಎಬಿವಿಪಿ, ಯುವ ಮೋರ್ಚ ಮುಂತಾದ ಸಂಘಟನೆಗಳೊಂದಿಗೆ ನಡೆಸಿದ ಮಾತುಕತೆಗಳು ಫಲ ನೀಡಲಿಲ್ಲ. ಇದಕ್ಕೆ ಪ್ರತಿಯಾಗಿ ನನಗೆ ಅವರಿಂದ ತೆಗಳಿಕೆಗಳು ಉತ್ತರ ರೂಪದಲ್ಲಿ ದೊರೆತವು.

ಅವರ ಉದ್ದೇಶಗಳು ಸ್ಪಷ್ಟವಾಗಿದ್ದವು. ಅವರು ಉದ್ದೇಶ ಜನಜೀವದ ಪ್ರತಿಯೊಂದು ಘಟ್ಟಗಳಲ್ಲೂ ತಾವು ಭಾಗಿಗಳಾಗಬೇಕು ಮತ್ತು ಅವರನ್ನು ನಿಯಂತ್ರಿಸಬೇಕೆಂಬುದಾಗಿತ್ತು. ಅವರ ಮೊದಲ ಗುರಿ ಜನತಾ ಪಕ್ಷವನ್ನು ಕಬ್ಜಾ ಮಾಡಿಕೊಳ್ಳುವುದು. ಇದಕ್ಕಾಗಿಯೇ ಸಂಘ ಪರಿವಾರವು ಹಲವಾರು ಜನತಾ ಪಕ್ಷದ ನಾಯಕರ ಮುಂದೆ ಅಧಿಕಾರದ ಕ್ಯಾರೆಟ್ ಅನ್ನು ಅಲ್ಲಾಡಿಸುತ್ತಿದ್ದರು. ಒಂದು ಕಡೆ ಮುರಾರ್ಜಿ ದೇಸಾಯಿಯವರಿಗೆ ನೀವೇ ನಮಗೆ ಪ್ರಶ್ನಾತೀತ ನಾಯಕರೆಂದು ಬಣ್ಣಿಸುತ್ತಿದ್ದರು. ಆದರೆ ಮತ್ತೊಂದು ಕಡೆ ಚರಣಸಿಂಗ್ ಅವರಿಗೆ ನೀವು ಪ್ರಧಾನಿ ಪಟ್ಟಕ್ಕಾಗಿ ಬಯಸಿದರೆ ನಿಮಗೆ ನಮ್ಮ ಬೆಂಬಲ ಖಾತ್ರಿ ಎಂದು ಆಸೆ ಹುಟ್ಟಿಸುತ್ತಿದ್ದರು. ಈಗಲೂ (1979) ಅವರು ಚಂದ್ರಶೇಖರ್, ಜಗಜೀವನ್ ರಾಂ ಮತ್ತು ಜಾರ್ಜ ಫರ್ನಾಂಡೀಸ್ ಅವರಿಗೆ ಈ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಒಮ್ಮೆಯೂ ಅವರು ನನ್ನ ಹೆಸರನ್ನು ಎತ್ತಲಿಲ್ಲ!! ಅವರಿಗೆ ಗೊತ್ತಾಗಿರಬೇಕು ಈ ಮನುಷ್ಯನನ್ನು ಮೂರ್ಖನಾಗಿಸಲು ಸಾಧ್ಯವಿಲ್ಲವೆಂದು. ಅದರೆ ಬದಲಾಗಿ ಅಂತಹ ಪ್ರಯತ್ನಗಳು ಆತನನ್ನು ( ಲಿಮಯೆ) ಮತ್ತಷ್ಟು ಹುಷಾರುಗೊಳಿಸುತ್ತದೆ ಎಂದು ಆರೆಸಸ್ ಮಂದಿಗೆ ಗೊತ್ತಿತ್ತು.

ಈ ಆರೆಸಸ್ ಮಂದಿ ಜೈಲಿನಲ್ಲಿದ್ದಾಗ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು, ರಾಜ ನಾರಾಯಣ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ಇಂದಿರಾ ಗಾಂಧಿಯವರ ಪರ ತೀರ್ಪು ನೀಡಿದಾಗ ಆರೆಸಸ್ ಸರಸಂಚಾಲಕ ಬಾಳಾಸಾಹೇಬ ದೇವರಸರು ಇಂದಿರಾ ಗಾಂಧಿಯವರಿಗೆ ಶುಭ ಕೋರಿದ್ದರು. ಇವರ ಕುರಿತಾಗಿ ನನಗೆ ನಂಬುಗೆ ಇಲ್ಲ.

ಪ್ರಶ್ನೆಗಳಿರುವುದು ಡಿ. ವೀರೇಂದ್ರ ಹೆಗ್ಗಡೆಗೆ!!

– ಸುಧಾಂಶು ಕಾರ್ಕಳ

ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಲಕ್ಷಾಂತರ ಜನರಿಗೆ ಧರ್ಮಸ್ಥಳ ಪುಣ್ಯಕ್ಷೇತ್ರ. ವರ್ಷಕ್ಕೊಮ್ಮೆ ಮಕ್ಕಳು-ಮರಿ ಕಟ್ಟಿಕೊಂಡು, ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಸುವಾಗ ಹಿಂಸೆ ಅನುಭವಿಸಿಯಾದರೂ, ಅಲ್ಲಿಗೆ ಹೋಗದಿದ್ದರೆ ಅವರಿಗೆ ಸಮಾಧಾನವೇ ಆಗುವುದಿಲ್ಲ. ಅಷ್ಟೇ ಏಕೆ, ಈ ಭಾಗದ ಸಾವಿರಾರು ಮಂದಿ ಬಾಲ್ಯದಲ್ಲಿ ಕೂದಲು ಕೊಡುವ ಶಾಸ್ತ್ರ ಮಾಡಿಸಿಕೊಂಡಿದ್ದು ಇಲ್ಲಿಯೇ. ಬಡ ಬಗ್ಗರ ಮನೆಗಳಲ್ಲಿ ಸರಳ ವಿವಾಹದ ಮಾತು ಬಂದರೆ, dharmasthala-veernedra-heggadeಅವರಿಗೆ ನೆನಪಾಗುವುದು ಧರ್ಮಸ್ಥಳ.

ಪ್ರತಿ ಭಾನುವಾರ ರಾತ್ರಿ ಈ ಭಾಗಗಳ ಕಡೆಯಿಂದ ಧರ್ಮಸ್ಥಳಕ್ಕೆ ಹೊರಡುವ ಎಲ್ಲಾ ಬಸ್ ಗಳು ಭರ್ತಿಯಾಗುವುದಕ್ಕೆ ಇದೇ ‘ಭಕ್ತಿ’ ಕಾರಣ. ಊರಲ್ಲಿ ಯಾರದರು ಒಬ್ಬರು ಧರ್ಮಸ್ಥಳಕ್ಕೆ ಹೋಗುತ್ತಾರೆಂದರೆ ಮನೆಗೊಬ್ಬರು ಮಂಜುನಾಥನಿಗೆ ತಮ್ಮದೂ ಕಾಣಿಕೆ ಇರಲಿ ಎಂದು ತಮ್ಮ ಕೈಲಾದಷ್ಟು ಹಣ ಕೊಟ್ಟು ಕಳುಹಿಸುವುದುಂಟು. ವೀರೇಂದ್ರ ಹೆಗ್ಗಡೆಯವರು ಜನೋಪಕಾರಿ ಕೆಲಸ ಮಾಡಿ ಸಜ್ಜನ, ಸಂಭಾವಿತ, ಮಾತನಾಡುವ ಮಂಜುನಾಥ ಎಂಬೆಲ್ಲಾ ಬಿರುದುಗಳನ್ನು ಗಳಿಸುವುದು ಸಾಧ್ಯವಾಗಿದ್ದು ಇಂತಹ ಲಕ್ಷಾಂತರ ಭಕ್ತರ ಸಾವಿರಾರು ಕೋಟಿಗಳ ದಾನದಿಂದ.

ಇದೇ ಭಾನುವಾರ (ಅ.13) ರಂದು ನೂರಾರು ಮಂದಿ ವಿವಿಧ ವಾಹನಗಳಲ್ಲಿ ಧರ್ಮಸ್ಥಳಕ್ಕೆ ಧಾವಿಸಿ ಹೆಗ್ಗಡೆಯವರ ವಿರುದ್ಧ ಪ್ರತಿಭಟನೆ ನಡೆಸಿದರು ಎಂಬ ಸುದ್ದಿ ಟಿವಿಯಲ್ಲಿ ನೋಡಿದಾಗ ಇಂತಹದೊಂದು ಸನ್ನಿವೇಶ ಈ ಕ್ಷೇತ್ರದಲ್ಲಿ ನಡೆಯುತ್ತಿರುವುದು ಇದೇ ಮೊದಲಿರಬೇಕಲ್ಲವೇ ಎನಿಸಿತು. ಖಾವಂದರಿಗೆ ಬಿಸಿ ಮುಟ್ಟಿದೆ. ಮಾತನಾಡುವ ಮಂಜುನಾಥನ ಬಗ್ಗೆ ನೇರಾ ನೇರಾ ಮಾತನಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೀಗಾಗಿದ್ದು ಆಶಾದಾಯಕ ಬೆಳವಣಿಗೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಒಂದು ವರ್ಷದಿಂದ ಸತತವಾಗಿ ಅಬ್ಬರವಿಲ್ಲದೆ ಪ್ರತಿಭಟನೆ ನಡೆಯುತ್ತಲೇ ಇತ್ತು.JusticeForSowjanya ಫೇಸ್‌ಬುಕ್ ನಲ್ಲಿ ಈ ಪ್ರತಿಭಟನೆಗೆ ಅನೇಕರು ಬೆಂಬಲ ಸೂಚಿಸುತ್ತಲೇ ಬಂದಿದ್ದರು. ಬೆಳ್ತಂಗಡಿ, ಮಂಗಳೂರು ಭಾಗಗಳಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಿದ್ದವು. ಪ್ರಕರಣ ಆಗಿ ಒಂದು ವರ್ಷದ ನಂತರ ಟಿ.ವಿ9 ಸ್ಟುಡಿಯೋದಲ್ಲಿ ಸೌಜನ್ಯ ಪೋಷಕರು ಏನನ್ನು ಇದುವರೆಗೆ ಮುಚ್ಚಿಡಲಾಗಿತ್ತೋ..ಅದನ್ನು ಹೊರಹಾಕಿದರು.

ಆ ಮೂಲಕ ಸೌಜನ್ಯ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಎರಡು ಬಾರಿ ಪ್ರಕರಣದ ತನಿಖೆಯಾದರೂ, ನಿಜ ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿಲ್ಲ. ಮಾನಸಿಕ ಅಸ್ವಸ್ಥನೊಬ್ಬನ ತಲೆಗೆ ಈ ಪ್ರಕರಣವನ್ನು ಕಟ್ಟಿ ತನಿಖೆಯ ಶಾಸ್ತ್ರವನ್ನು ಮುಗಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆದಿದೆ ಎನ್ನುವುದು ಆರೋಪ. ಇನ್ನೂ ಗಂಭೀರವಾದ ವಿಚಾರವೆಂದರೆ ಇಂತಹ ಅದೆಷ್ಟೊ ಪ್ರಕರಣಗಳು ಧರ್ಮಸ್ಥಳ ಸುತ್ತ-ಮುತ್ತ ಆಗಿಹೋಗಿವೆ ಎಂಬ ಸುದ್ದಿ. ಸೌಜನ್ಯಳ ತಾಯಿ ಟಿ.ವಿ ಸ್ಟುಡಿಯೋದಲ್ಲಿ ಕೇಳಿದರು.. ನೇತ್ರಾವತಿ ನದಿಯಲ್ಲಿ ಆಗಾಗ ತೇಲಿ ಬರುತ್ತಿದ್ದ ಅನಾಥ ಹೆಣಗಳು ಸೌಜನ್ಯ ಪ್ರಕರಣದ ನಂತರ ನಿಂತಿದ್ದಾದರೂ ಹೇಗೆ?

ಹಾಗಾದರೆ ಈ ಮೊದಲು ನೇತ್ರಾವತಿ ನದಿಯಲ್ಲಿ ಹೇರಳವಾಗಿ ಹೆಣಗಳು ತೇಲಿಬರುತ್ತಿದ್ದವೆ? ಇದುವರೆಗೆ ಯಾಕೆ ಸುದ್ದಿಯಾಗಲಿಲ್ಲ? ಆಯುರ್ವೇದ, ಯೋಗ, ಸ್ವ ಉದ್ಯೋಗ ತರಬೇತಿ, ಪ್ರಕೃತಿ ಚಿಕಿತ್ಸೆ, ಶಿಕ್ಷಣ ಸಂಸ್ಥೆಗಳು, ಪಾಳುಬಿದ್ದ ದೇವಸ್ಥಾನಗಳ ಪುನರುತ್ಥಾನ – ಹೀಗೆ ನಾನಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ದೊಡ್ಡ ಸಾಮ್ರಾಜ್ಯದ ಮೇಲೆ ಈಗ ಅನೇಕ ಪ್ರಶ್ನೆಗಳಿವೆ.

ಸೌಜನ್ಯ ಹತ್ಯೆ ಅಷ್ಟೇ ಅಲ್ಲ..ಇದುವರೆಗೆ ಆಗಿ ಹೋಗಿರುವ ನಾನಾ ಪ್ರಕರಣಗಳ ಬಗ್ಗೆಯೂ ತಕ್ಕ ತನಿಖೆ ನಡೆಯಬೇಕು. sowjanya-rape-murderಪಾಪಕ್ಷೇತ್ರ, ಪುಣ್ಯಕ್ಷೇತ್ರ ಎಂದು ಯಾವ ಸ್ಥಳವೂ ಇರುವುದಿಲ್ಲ. ಆದರೆ ಅಲ್ಲಿ ನೆಲೆಸಿರುವವರು ಆ ಸ್ಥಳಕ್ಕೆ ಒಂದು ಘನತೆ ತರಲು ಸಾಧ್ಯ. ತಮ್ಮ ಮಗಳ ಹತ್ಯೆಗೆ ಸೂಕ್ತ ತನಿಖೆ ಕೋರಲು ಪ್ರತಿಭಟನೆ ನಡೆಸುವುದನ್ನೂ ಬೇಡ ಎಂದು ಫರ್ಮಾನು ಹೊರಡಿಸುವವರಿಂದ ಯಾವ ಕ್ಷೇತ್ರಕ್ಕಾಗಲಿ ಯಾವ ಘನತೆ ದಕ್ಕೀತು? ಧರ್ಮಸ್ಥಳಕ್ಕೆ ಭೇಟಿ ನೀಡುವ ಎಲ್ಲರೂ ಈ ಪ್ರಶ್ನೆಗಳನ್ನು ಕೇಳಬೇಕಿದೆ. ಅವರ ದೇಣಿಗೆ ಹಣ ವಿನಿಯೋಗ ಆಗುತ್ತಿರುವುದು ಹೇಗೆ ಎನ್ನುವುದನನ್ನು ಕೇಳಲೇಬೇಕಲ್ಲವೆ.

ಸರಕಾರ ಸೂಕ್ತ ತನಿಖೆ ಆದೇಶಿಸುವ ಮೂಲಕ ಮುಚ್ಚಿ ಹೋಗಿರಬಹುದಾದ ಸತ್ಯಗಳನ್ನು ಹೊರತರಲೇಬೇಕು. ಅವ್ಯವಹಾರ, ಅನಾಚಾರಗಳು ಬಯಲಾದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ದೇವಸ್ಥಾನವನ್ನು ತನ್ನ ವಶಕ್ಕೆ ಅಂದರೆ ಜನತೆಯ ಆಡಳಿತಕ್ಕೆ ತೆಗೆದುಕೊಳ್ಳಬೇಕು.