Tag Archives: ಪತ್ರಕರ್ತ

ಬೇಜವಾಬ್ದಾರಿ ಟಿವಿ ನಿರೂಪಕರು…


– ರವಿ ಕೃಷ್ಣಾರೆಡ್ಡಿ  


ನೆನ್ನೆ ರಾತ್ರಿ (30/1/12) ಸುವರ್ಣ ನ್ಯೂಸ್ 24×7 ನಲ್ಲಿ ನಿರೂಪಕ ರಂಗನಾಥ್ ಭಾರದ್ವಾಜ್ ಪಕ್ಷೇತರ ಶಾಸಕ ನರೇಂದ್ರಸ್ವಾಮಿಯವರನ್ನು ಸಂದರ್ಶಿಸುತ್ತಿದ್ದರು. ವಿಷಯ, ನೆನ್ನೆ ಸದನದಲ್ಲಿ ನಾಲ್ವರು ಪಕ್ಷೇತರ ಶಾಸಕರು ಸ್ಪೀಕರ್ ವಿರುದ್ಧ ಘೋಷಣೆ ಕೂಗಿದ್ದು.

ನಾನು ಆಗ ತಾನೆ ಟಿವಿ ಹಾಕಿದ್ದೆ. ಹಾಗಾಗಿ ಆ ಸುದ್ದಿ ನೋಡಿದ್ದೆ ಎರಡು ನಿಮಿಷ. ಆ ಎರಡು ನಿಮಿಷದಲ್ಲಿ ರಂಗನಾಥ್ ಭರದ್ವಾಜ್ ನರೇಂದ್ರಸ್ವಾಮಿಯರ ಹಿತಚಿಂತಕ, ಪೀಡಕ, ಮತ್ತು ಜನರಂಜಕ, ಕಮೀಡಿಯನ್, ಎಲ್ಲವೂ ಆಗಿಹೋದರು.

ಒಂದು ಪ್ರಶ್ನೆ, “ಇವತ್ತು ನೀವು ಮಾಡಿದ ಪ್ರತಿಭಟನೆ ಯಾರನ್ನು ಮೆಚ್ಚಿಸಲು?” ಎಂದಾಗಿತ್ತು.

ಸರಿಯಾದ ಪ್ರಶ್ನೆಯೇ. ಕರ್ನಾಟಕದ ಈ ಬಾರಿಯ ಪಕ್ಷೇತರ ಶಾಸಕರು ನಡೆದುಕೊಂಡಿರುವುದೇ ಹಾಗೆ. ಅಧಿಕಾರದ ಹಿಂದೆ ಬಿದ್ದು ಸದನದಲ್ಲಿ ಸ್ವತಂತ್ರ ಧ್ವನಿಗಳೇ ಇಲ್ಲದಂತೆ ನಡೆದುಕೊಂಡರು. ಹಾಗಾಗಿ ನೆನ್ನೆಯ ಪ್ರತಿಭಟನೆಯೂ ಯಾವುದೋ ಲಾಭಕ್ಕಾಗಿ ಅಥವ ಮುಂದಿನ ದಿನಗಳ ಅನುಕೂಲಕ್ಕಾಗಿ ಎಂದು ಭಾವಿಸಬಹುದು.

ಆದರೆ, ಒಬ್ಬ ಟಿವಿ ನಿರೂಪಕನಾಗಿ ವಿಷಯದ ಹಿನ್ನೆಲೆ ಮತ್ತು ಗಾಂಭೀರ್ಯ ಅರಿಯದೆ ಕೇಳಬಹುದಾದ ಪ್ರಶ್ನೆಯೇ ಅದು? ಸ್ಪೀಕರ್‌ಗೆ ಸುಪ್ರೀಮ್‌ಕೋರ್ಟ್ ಹಾಕಿರುವ ಛೀಮಾರಿಗೆ ಈ ಶಾಸಕರು ಪ್ರತಿಕ್ರಿಯಿಸುತ್ತಿದ್ದಾರೆ. ಅವರು ಸ್ವಾರ್ಥಿಗಳೇ ಇರಬಹುದು. ಜನಪ್ರತಿನಿಧಿಗಳಾಗಲು ವೋಟು ಗಳಿಸುವ ದೃಷ್ಟಿ ಹೊರತುಪಡಿಸಿ ಅಯೋಗ್ಯರೇ ಇರಬಹುದು. ಆದರೆ ನೆನ್ನೆಯದು ಬಹಳ ಗಂಭೀರ ವಿಷಯ. ರಾಜ್ಯದ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸಂಬಂಧಿಸಿದ್ದು. ಹಾಗಾಗಿ ಶಾಸಕರ ಆ ಪ್ರತಿಕ್ರಿಯೆಯನ್ನು ಈ ರೀತಿ ಅವಹೇಳನೆ ಅಥವ ನಗೆಪಾಟಲು ಮಾಡುವ ಮೂಲಕ ಸ್ಪೀಕರ್‌ರ ದೋಷ ಮತ್ತು ಅನ್ಯಾಯವನ್ನು ತೆಳು ಮಾಡಿ ಜನರ ಮುಂದೆ ಇಡುತ್ತಿದ್ದೇನೆ ಎನ್ನುವ ಪ್ರಜ್ಞೆ ಈ ನಿರೂಪಕರಿಗೆ ಬೇಡವೆ? ನಗುಮುಖದಿಂದ ಕೂಡಿದ್ದ ಆ ಪ್ರಶ್ನೆ ಕುಚೇಷ್ಟೆಯಿಂದ ಕೂಡಿದ್ದಷ್ಟೇ ಅಲ್ಲ, ಬೇಜವಾಬ್ದಾರಿಯದ್ದೂ ಸಹ.

ಇಷ್ಟಕ್ಕೂ ಇವರು ಸುದ್ದಿಮಾಧ್ಯಮದಲ್ಲಿ ಇದ್ದಾರೊ, ಅಥವ Late Night ಮನರಂಜನೆಯ ಉದ್ಯಮದಲ್ಲಿ ಇದ್ದಾರೊ?

ಇದಕ್ಕಿಂತ ಕೆಟ್ಟ ಪ್ರಶ್ನೆ, “ಈ ಪ್ರತಿಭಟನೆ ಮಾಡದೇ ಇದ್ದಿದ್ದರೆ ನಿಮಗೆ ಮುಂದಕ್ಕೆ ಏನಾದರೂ ಲಾಭ ಆಗುತ್ತಿತ್ತೊ ಏನೊ. ಅದೇನೋ ಹೇಳುತ್ತಾರಲ್ಲ, ಸುಮ್ಮನೆ ಇರಲಾರದೆ ಚಡ್ಡಿಯಲ್ಲಿ.. ಅದೇನೊ ಇರುವೆ ಬಿಟ್ಟುಕೊಂಡರಂತೆ, ಹಾಗೆ. ಯಾಕೆ ಮಾಡೋದಿಕ್ಕೆ ಹೋದ್ರಿ?”

ಇದು ಎಂತಹ ಅಪ್ರಬುದ್ಧ ಭಾಷೆ ನೋಡಿ. ಈ ನರೆಂದ್ರಸ್ವಾಮಿ ರಂಗನಾಥ್‌ಗೆ ಯಾವ ರೀತಿಯ ಸ್ನೇಹಿತ? ಹೀಗೆಲ್ಲ ಜನಪ್ರತಿನಿಧಿಗಳನ್ನು ಕೇವಲವಾಗಿ ಮಾತನಾಡಿಸಿದರೆ ನಮ್ಮ ಶಾಸಕಾಂಗದ ಗೌರವ ಏನು ಉಳಿಯಿತು? ನಮ್ಮ ಶಾಸಕರು ಇವತ್ತು ಇಂತಹುದನ್ನೆಲ್ಲ ಕೇಳಿಸಿಕೊಳ್ಳುವುದಕ್ಕೆ ಯೋಗ್ಯರೇ ಇರಬಹುದು. ಆದರೆ, ಒಬ್ಬ ಜವಾಬ್ದಾರಿಯುತ ಪತ್ರಕರ್ತ, ನಿರೂಪಕ, ಆಡುವ ಮಾತೇ ಇದು? ಬೀದಿಯಲ್ಲಿ ಮಾತನಾಡುವ ಸಲಿಗೆಯ ಕುಚೇಷ್ಟೆಯ ಭಾಷೆ.

ಇಬ್ಬರಿಗೂ ನಾಚಿಕೆಯಾಗಬೇಕು.

ಇಂತಹ ನಡವಳಿಕೆ ರಂಗನಾಥ್ ಭಾರದ್ವಾಜ್ ಒಬ್ಬರಿಗೇ ಸೀಮಿತವಾಗಿಲ್ಲ. ನಮ್ಮ ಅನೇಕ ಟಿವಿ ನಿರೂಪಕರು ರಾಜಕಾರಣಿಗಳ ಜೊತೆ ಅತಿಸಲಿಗೆ ಬೆಳೆಸಿಕೊಂಡು ನಮ್ಮ ಪ್ರಜಾಪ್ರಭುತ್ವದ ಘನತೆಯನ್ನೇ ಕುಗ್ಗಿಸುತ್ತಿದ್ದಾರೆ. ಎಷ್ಟೋ ಸಲ ನಮ್ಮ ಪತ್ರಕರ್ತರು ರಾಜಕಾರಾಣಿಗಳಿಗಿಂತ ಹೆಚ್ಚಿಗೆ ಓದಿಕೊಂಡಿರುತ್ತಾರೆ. ಸಿದ್ಧಾಂತ, ಸಭ್ಯನಡವಳಿಕೆ, ಭಾಷಾಪ್ರಯೋಗದ ಬಗ್ಗೆ ತಿಳಿದುಕೊಂಡಿರುತ್ತಾರೆ. ಆದರೆ ಅದ್ಯಾವುದೂ ಅವರ ನಡವಳಿಕೆ ಮತ್ತು ಭಾಷೆಯಲ್ಲಿ ಕಾಣಿಸುತ್ತಿಲ್ಲ.

ರಾಜಕಾರಣಿಗಳ ಜೊತೆ ಅತಿಸಲಿಗೆಯಿಂದ ಮತ್ತು ಅತಿ ಬೇಜವಾಬ್ದಾರಿಯಿಂದ ವರ್ತಿಸುವ ಕನ್ನಡದ ಟಿವಿ ನಿರೂಪಕರು ವಿನೋದ್ ಮೆಹ್ತಾರ ಈ ಮಾತುಗಳನ್ನು ಕೇಳಿಸಿಕೊಳ್ಳುವ ಮೂಲಕ ತಮ್ಮ ವೃತ್ತಿಯ ಕೆಲವು ಪ್ರಾಥಮಿಕ ಪಾಠಗಳನ್ನಾದರೂ ಕಲಿಯಬೇಕು.

ಟಿವಿ ನಿರೂಪಕರು ಇನ್ನೊಬ್ಬರ ಘನತೆಯನ್ನು ಹೆಚ್ಚು ಮಾಡದಿದ್ದರೂ ಪರವಾಗಿಲ್ಲ, ಕನಿಷ್ಟ ತಮ್ಮ ವೃತ್ತಿಘನತೆಯನ್ನಾದರೂ ಉಳಿಸಿಕೊಳ್ಳಲಿ.

ಈಗಾಗಲೆ ಅವರ ಘನತೆ ರಾಜಕಾರಣಿಗಳ ತರಹವೇ ಭ್ರಷ್ಟಾಚಾರದ ವರದಿಗಳಲ್ಲಿ, ಮಾಧ್ಯಮ ಕುರಿತಾದ ಸೆಮಿನಾರ್‌ಗಳಲ್ಲಿ. ಟ್ಯಾಬ್ಲಾಯ್ಡುಗಳಲ್ಲಿ,  ಹಾದಿಬೀದಿಯಲ್ಲಿ, ಹರಾಜಾಗುತ್ತಿದೆ.

ವರದಿಗಾರರ, ಸಂಪಾದಕರ ಮತ್ತು ಮಾಧ್ಯಮಸಂಸ್ಥೆಗಳ ಜೇಬು ಮತ್ತಷ್ಟು ದೊಡ್ಡದಾಗಲಿವೆ…


– ರವಿ ಕೃಷ್ಣಾರೆಡ್ಡಿ  


ಇಂದು ಭಾರತ ಜನತಂತ್ರಗೊಂಡ ದಿನದ ವಾರ್ಷಿಕಾಚರಣೆ.

ಬಹುಶಃ ನಾನು ಈ ನನ್ನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಎಂದೂ ಇಷ್ಟೊಂದು ನಿರುತ್ಸಾಹಗೊಂಡಿರಲಿಲ್ಲ. ಅದರಲ್ಲೂ ಕರ್ನಾಟಕದ ರಾಜಕೀಯ ವ್ಯವಸ್ಥೆಯ ಬಗ್ಗೆ, ಇಲ್ಲಿನ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ, ಮತ್ತು ಜನ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯ ಮತ್ತು ಅನೀತಿಗಳಿಗೆ ಪ್ರತಿಸ್ಪಂದಿಸುತ್ತಿರುವ ರೀತಿ ನೋಡಿ ನಿಜಕ್ಕೂ ವಾಕರಿಕೆ ಆಗುತ್ತಿದೆ.

ಇದಕ್ಕೆ ನಾನು ಕಳೆದ ಮೂರು ದಿನಗಳಿಂದ ಪಟ್ಟುಬಿಡದೆ ಕೂತು ಓದಿದ “All the President’s Men” ಪುಸ್ತಕ ಮತ್ತು ಇಂದು ಹರಡಿಕೊಂಡು ಕೂತಿರುವ ಶಾಸಕನೊಬ್ಬನ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ದಾಖಲೆಗಳೂ ಸ್ವಲ್ಪಮಟ್ಟಿಗೆ ಕಾರಣ ಇರಬಹುದು.

ಬಹುಶಃ ನಿಮಗೆ ಗೊತ್ತಿರಬಹುದು, ಅಮೆರಿಕದ ಇತಿಹಾಸದಲ್ಲಿ ರಾಜೀನಾಮೆ ನೀಡಿ ಹೊರನಡೆದ ಏಕೈಕ ರಾಷ್ಟ್ರಾಧ್ಯಕ್ಷ ರಿಚರ್ಡ್ ನಿಕ್ಸನ್. ಅಮೆರಿಕದ ರಾಜಕೀಯ ನಮ್ಮಷ್ಟು ಎಂದೂ ಗಬ್ಬೆದ್ದಿರಲಿಲ್ಲ. ಆದಷ್ಟೂ ನೀತಿ-ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿರುವ ವ್ಯವಸ್ಥೆ ಅದು. ಅದಕ್ಕೆ ಕಾರಣ ಅಲ್ಲಿನ ರಾಜಕಾರಣಿಗಳಷ್ಟೇ ಅಲ್ಲ. ಅಲ್ಲಿಯ ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು, ಚಿಂತಕರು, ಉತ್ತರದಾಯಿತ್ವವನ್ನು ಗಟ್ಟಿಯಾಗಿ ಅಪೇಕ್ಷಿಸುವ ಅಲ್ಲಿಯ ಜನಸಾಮಾನ್ಯರು. ಹೀಗೆ ಎಲ್ಲರೂ ಅಲ್ಲಿಯ ವ್ಯವಸ್ಥೆ ತಕ್ಕಷ್ಟು ಮಟ್ಟಿಗೆ ನ್ಯಾಯಯುತವಾಗಿಯೇ ಇರುವಂತೆ ನೋಡಿಕೊಂಡಿದ್ದಾರೆ. ಆದರೆ ಇಂತಹ ವ್ಯವಸ್ಥೆಯಲ್ಲಿಯೂ ನಿಕ್ಸನ್ ಮತ್ತು ಆತನ ಕೆಳಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಅಮೇರಿಕದ ಮಟ್ಟಿಗೆ ಮಾಡಬಾರದಂತಹ ಅಪಚಾರ ಮಾಡಿದರು. ಅದು 1971-72ರ ಸಮಯ. ನಿಕ್ಸನ್‌ನ ಮರುಚುನಾವಣೆಗೆ ಸಿದ್ಧಮಾಡಿಕೊಳ್ಳುತ್ತಿದ್ದ ಆತನ ಗುಂಪು ತಮ್ಮ ವಿರೋಧಿ ಗುಂಪಿನ ಜನರ ಫೋನ್‌ಗಳನ್ನು ಕದ್ದಾಲಿಸಿದರು. ಅವರ ಮೇಲೆ ವ್ಯವಸ್ಥಿತ ಅಪಪ್ರಚಾರ ಮತ್ತು ಪಿತೂರಿಗಳನ್ನು ಮಾಡಿದರು. ಕೊನೆಗೆ ವಿರೋಧಪಕ್ಷದ ಕಚೇರಿಯಲ್ಲಿಯೇ ಕದ್ದಾಲಿಕೆ ಯಂತ್ರ ಅಳವಡಿಸಲು ಯತ್ನಿಸಿದರು. ಆ ಯತ್ನದಲ್ಲಿ ಇವರ ಜನ ತೊಡಗಿದ್ದಾಗ ಅಚಾನಕ್ ಆಗಿ ಸಿಕ್ಕಿಬಿದ್ದರು. ಅದೇ ವಾಟರ್‌ಗೇಟ್ ಪ್ರಕರಣ ಮತ್ತು ಹಗರಣ.

ಈ ಘಟನೆಯ ಹಿಂದೆ ಬಿದ್ದು ಆ ಇಡೀ ಪ್ರಕರಣವನ್ನು ಬೇಧಿಸುತ್ತಾ ಹೋಗಿದ್ದು ವುಡವರ್ಡ್ ಮತ್ತು ಬರ್ನ್‍ಸ್ಟೀನ್ ಎಂಬ ಇಬ್ಬರು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಪತ್ರಕರ್ತರು. ಆಗ ಅವರಿಬ್ಬರಿಗೂ ಮುವ್ವತ್ತರ ಆಸುಪಾಸು. ನಂತರದ ದಿನಗಳಲ್ಲಿ ಅಮೆರಿಕದ ಅನೇಕ ಪತ್ರಕರ್ತರು, ಟೈಮ್, ನ್ಯೂಸ್‌ವೀಕ್, ನ್ಯೂಯಾರ್ಕ್ ಟೈಮ್ಸ್, ಲಾಸ್ ಏಂಜಲೀಸ್ ಟೈಮ್ಸ್, .. ಹೀಗೆ ಹಲವು ಮಾಧ್ಯಮ ಸಂಸ್ಥೆಗಳು ಈ ಹಗರಣವನ್ನು ಬೇಧಿಸಲು ಯತ್ನಿಸುತ್ತವೆ. ಆದರೆ ವುಡವರ್ಡ್, ಬರ್ನ್‍ಸ್ಟೀನ್ ಮತ್ತು ವಾಷಿಂಗ್ಟನ್ ಪೋಸ್ಟ್‌ನ ಎಡಬಿಡದೆ ಸಾಗಿದ ಇನ್ವೆಸ್ಟಿಗೇಟಿವ್ ಜರ್ನಲಿಸಂ ಆ ಹಗರಣ ಬಯಲಾಗಲು ಪ್ರಮುಖ ಕಾರಣ. ತನ್ನ ಸಹಚರರು ಮಾಡುತ್ತಿದ್ದ ಕೆಲವು ಅಕ್ರಮ ಕೆಲಸಗಳು ನಿಕ್ಸನ್‌ಗೆ ಗೊತ್ತಿತ್ತು. ಅದನ್ನು ಮುಚ್ಚಿ ಹಾಕಲು ಮಾಡುತ್ತಿದ್ದ ಪ್ರಯತ್ನಗಳ ಬಗ್ಗೆಯೂ ಆತನಿಗೆ ಅರಿವಿತ್ತು. ಮತ್ತು ಆ ಇಡೀ ವಿದ್ಯಮಾನದಲ್ಲಿ ನಿಕ್ಸನ್ ಸುಳ್ಳು ಹೇಳುತ್ತ, ಆರೋಪಗಳನ್ನು ನಿರಾಕರಿಸುತ್ತ ಬಂದ. ಕೊನೆಗೆ ಎಲ್ಲವೂ ಬಯಲಾಗಿ ರಾಜೀನಾಮೆ ನೀಡಿ, ಆತನ ಉಪಾಧ್ಯಕ್ಷನೇ ಅಧ್ಯಕ್ಷನಾದ ಮೇಲೆ ಆತನಿಂದ ಕ್ಷಮಾದಾನ ಪಡೆದುಕೊಂಡು ಜೈಲುಪಾಲಾಗದೆ ಉಳಿದುಕೊಂಡ. (ಮತ್ತೂ ಒಂದಷ್ಟು ವಿವರಗಳಿಗೆ ನನ್ನ ಈ ಲೇಖನ ನೋಡಿ.)

ಈ ಪ್ರಕರಣ ಮತ್ತು ಅದನ್ನು ಬಯಲಿಗೆಳೆದ ರೀತಿ ನಮ್ಮ ಎಲ್ಲಾ ಪತ್ರಕರ್ತರಿಗೂ, ಅದರಲ್ಲೂ ವಿಶೇಷವಾಗಿ ರಾಜಕೀಯ ವರದಿಗಾರರಿಗೆ ಗೊತ್ತಿರಲೇಬೇಕು. ಈ ಪುಸ್ತಕ ಪತ್ರಕರ್ತರಿಗೆ ಪಠ್ಯವಾಗಬೇಕು. ಆದರೆ ಇತ್ತೀಚಿನ ಪತ್ರಕರ್ತರಿಗೆ ಇದು ಗೊತ್ತಿರುವ ಸಾಧ್ಯತೆಗಳು ಬಹಳ ಕಮ್ಮಿ ಎನ್ನಿಸುತ್ತದೆ. ನಾನು 2006ರಲ್ಲಿ ವಿಕ್ರಾಂತ ಕರ್ನಾಟಕ ಆರಂಭಿಸುವ ಮೊದಲು ಬೆಂಗಳೂರಿನಲ್ಲಿ ಕೆಲವು ಹಿರಿಯ ಪತ್ರಕರ್ತರು ಮತ್ತು ಸಂಪಾದಕರೊಡನೆ ಒಂದು ಸಂವಾದ ಏರ್ಪಡಿಸಿದ್ದೆ. ಅದಾದ ನಂತರ ಈ ಪುಸ್ತಕವನ್ನು ಆಧರಿಸಿ ತೆಗೆದಿರುವ ಅದೇ ಹೆಸರಿನ ಸಿನೆಮಾ ಪ್ರದರ್ಶನವನ್ನೂ ವ್ಯವಸ್ಥೆ ಮಾಡಿಸಿದ್ದೆ. ಅದನ್ನು ನೋಡಲು ಉಳಿದವರು ಹತ್ತು ಜನರೂ ಇರಲಿಲ್ಲ.

ಕರ್ನಾಟಕದಲ್ಲಿ ಇಂದು ಭ್ರಷ್ಟಾಚಾರ ಎನ್ನುವುದು, ಅದರಲ್ಲೂ ರಾಜಕಾರಣಿಗಳ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳು, ಎಲ್ಲಾ ತರಹದ ಎಲ್ಲೆಗಳನ್ನೂ ಮೀರಿವೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಹತ್ತಾರು ಜನ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್‌ಗಳು, ಪ್ರಾಮಾಣಿಕ ವರದಿಗಾರರು ಹುಟ್ಟಿಕೊಳ್ಳಬೇಕಿತ್ತು. ಏನಾಗಿದೆ ಇಲ್ಲಿ?

ಇವತ್ತು ಬಯಲಾಗುತ್ತಿರುವ ಪ್ರಕರಣಗಳೂ ಸಹ ರಾಜಕೀಯ ವಿರೋಧಿಗಳು ಪತ್ರಿಕಾಲಯಗಳಿಗೆ ತಾವೇ ಖುದ್ದಾಗಿ ತಲುಪಿಸುತ್ತಿರುವ ದಾಖಲೆ ಮತ್ತು ಮಾಹಿತಿಗಳೇ ಹೊರತು ಪತ್ರಕರ್ತರು ತಮ್ಮ ಕಚೇರಿಯಿಂದ ಹೊರಗೆ ಹೋಗಿ ಮಾಹಿತಿ ಕಲೆಹಾಕುತ್ತಿಲ್ಲ. ಇಂತಹ ಸ್ವಚ್ಚಂದ ಭ್ರಷ್ಟಾಚಾರದ ಸಮಯದಲ್ಲಿ ಮತ್ತು ಮಾಹಿತಿ ಹಕ್ಕಿನ ಯುಗದಲ್ಲೂ ಪತ್ರಕರ್ತರು ಮತ್ತು ಅವರ ಸಂಪಾದಕರು ದಡ್ಡರಾಗಿದ್ದಾರೆ; ಸೋಮಾರಿಗಳಾಗಿದ್ದಾರೆ; ಭ್ರಷ್ಟರಾಗಿದ್ದಾರೆ; ಖದೀಮರಾಗಿದ್ದಾರೆ; ಪಕ್ಷಪಾತಿಗಳಾಗಿದ್ದಾರೆ; ಶ್ರೀಮಂತರಾಗಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದ ಹಗರಣಗಳನ್ನೇ ನೆನಪಿಸಿಕೊಳ್ಳಿ. ಒಂದೊಎರಡೊ ಬಿಟ್ಟರೆ ಮಿಕ್ಕೆಲ್ಲ ಹಗರಣ ಖಾಸಗಿ ಜನ ಕೋರ್ಟ್ ಮೆಟ್ಟಿಲು ಹತ್ತಿ ಜನರ ಮುಂದೆ ಇಟ್ಟದ್ದೇ ಹೊರತು ನಮ್ಮ ಪತ್ರಿಕೆಗಳು ಬಯಲಿಗೆಳೆದದ್ದು ಎಷ್ಟು?

ಈ ಮಧ್ಯೆ ಅಧಿಕಾರಸ್ಥರಿಂದ ಲಾಭ ಮಾಡಿಕೊಂಡ ಪತ್ರಕರ್ತರ ಮತ್ತು ಮಾಧ್ಯಮಸಂಸ್ಥೆಗಳ ಪಟ್ಟಿಯೇ ದೊಡ್ದದಿದೆ.

ಇನ್ನು ವರ್ಷ ಒಪ್ಪತ್ತಿನಲ್ಲಿ ಬರಲಿರುವ ಚುನಾವಣೆಗಳಲ್ಲಿ ಅದೇ ಭ್ರಷ್ಟ ಜನ ಚುನಾವಣೆಗೆ ನಿಲ್ಲಲಿದ್ದಾರೆ. ನಮ್ಮ ರಾಜಕೀಯ ವರದಿಗಾರರ, ಸಂಪಾದಕರ ಮತ್ತು ಮಾಧ್ಯಮಸಂಸ್ಥೆಗಳ ಜೇಬು ಮತ್ತಷ್ಟು ದೊಡ್ಡದಾಗಲಿವೆ.

ಇಂತಹ ಸ್ಥಿತಿಯಲ್ಲಿ ಗಣತಂತ್ರ ಎಲ್ಲಿದೆ?

ಪತ್ರಿಕೋದ್ಯಮದ ಪರಿಪಾಟಲು

-ಡಾ. ಎನ್. ಜಗದೀಶ್ ಕೊಪ್ಪ

ಮಿತ್ರರೆ, ಈ ದಿನ ಅಂದರೆ, ದಿನಾಂಕ 15-12-11ರ ಕನ್ನಡಪ್ರಭ ಪತ್ರಿಕೆಯ ಸಂಪಾದಕೀಯವನ್ನು ನೀವು ಓದಿರಬಹುದೆಂದು ಭಾವಿಸಿದ್ದೇನೆ. ಬೆಳಿಗ್ಗೆ ಅದನ್ನು ಓದಿದ ಮೇಲೆ ನಮ್ಮಿಬ್ಬರ ನಡುವೆ ಅಂತಹ ಗಾಢ ಸಂಬಂದ ಇಲ್ಲದಿದ್ದರೂ ಕೂಡ ಹಲವು ಭೇಟಿ ಮತ್ತು ಪತ್ರಿಕೋದ್ಯಮ ವಿಚಾರ ಸಂಕಿರಣದಲ್ಲಿ ಒಟ್ಟಾಗಿ ವೇದಿಕೆ ಹಂಚಿಕೊಂಡ ಪರಿಣಾಮ  ನನಗೆ ಮಿತ್ರರೇ ಆಗಿರುವ ವಿಶ್ವೇಶ್ವರ ಭಟ್ ಇದನ್ನು ಬರೆಯಬಾರದಿತ್ತು ಎಂದು ಆ ಕ್ಷಣದಲ್ಲಿ ನನಗನಿಸಿತು.

ಏಕೆಂದರೆ, ಮೂರು ದಶಕಗಳ ಕಾಲ ಪತ್ರಿಕೋದ್ಯಮಕ್ಕೆ ಮಣ್ಣು ಹೊತ್ತಿರುವ ನಾನು, ಯಾವುದೇ ವ್ಯಕ್ತಿಯ ಬಗ್ಗೆ ಪ್ರೀತಿ ಅಥವಾ ದ್ವೇಷವಿಲ್ಲದೆ ನಿರ್ಭಾವುಕತನದಿಂದ ನಡೆದುಕೊಳ್ಳುವುದೇ ಪತ್ರಕರ್ತನ ಮೂಲಭೂತ ಕರ್ತವ್ಯ ಎಂದು ನಂಬಿದವನು.

ಕಳೆದ 15 ದಿನಗಳ ಹಿಂದೆ ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಸಿದ್ದಲಿಂಗ ಪಟ್ಟಣಶೆಟ್ಟಿ ಭಟ್ಟರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಬಗ್ಗೆ ಅವರು ತಮ್ಮ ಕನ್ನಡಪ್ರಭದ ಸಂಪಾದಕೀಯದಲ್ಲಿ ಆಕ್ರೋಶವನ್ನು ಹೊರಚೆಲ್ಲಿದ್ದಾರೆ. ಅದು ಎಲ್ಲಿಯವರೆಗೆ ಸಾಗಿದೆ ಎಂದರೆ, ಪಟ್ಟಣಶೆಟ್ಟಿಯವರ ಮೊದಲ ಪತ್ನಿ ಬೀದಿಯಲ್ಲಿ ಅಟ್ಟಾಡಿಸಿಕೊಂಡು ಚಪ್ಪಲಿಯಲ್ಲಿ ಹೊಡೆದ ಪ್ರಸಂಗ ಕೂಡ ದಾಖಲಾಗಿದೆ. ಕನ್ನಡ ಸಾಹಿತ್ಯವನ್ನು, ಅದರಲ್ಲೂ ವಿಶೇಷವಾಗಿ ಮಾಲತಿ ಪಟ್ಟಣಶೆಟ್ಟಿಯವರ ಕಾವ್ಯವನ್ನು ಓದಿಕೊಂಡಿರುವ ಎಲ್ಲರೂ ಸಿದ್ದಲಿಂಗ ಪಟ್ಟಣಶೆಟ್ಟಿಯವರ ದಾಂಪತ್ಯದ ಕಹಿನೆನಪುಗಳನ್ನು ಬಲ್ಲರು. ಹಲವುಕಡೆ ಇದನ್ನು ಸ್ವತಃ ಅವರೇ ದಾಖಲಿಸಿದ್ದಾರೆ. ನನ್ನ ಪ್ರಶ್ನೆ ಇದಲ್ಲ, ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಸಂಪಾದಕನೊಬ್ಬ ಸಂಪಾದಕೀಯ ಪುಟವನ್ನ ಹೀಗೆ ಸ್ವಾರ್ಥಕ್ಕೆ ಬಳಸಿಕೊಳ್ಳಬಹುದೆ? ಜಿಲ್ಲಾ ಮಟ್ಟದಲ್ಲಿ ಸಂಪಾದಕನೇ ಪ್ರಕಾಶಕ, ಮುದ್ರಕ, ಕಡೆಗೆ ಓದುಗ ಕೂಡ ಆಗಿರುವುದರಿಂದ ಇಂತಹ ಘಟನೆಗಳು ಸಾಮಾನ್ಯ.

ಇಡೀ ಘಟನೆಯಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟರ ತಪ್ಪು ಎದ್ದು ಕಾಣುತಿದೆ ನಿಜ. ಅವರನ್ನು ತರಾಟೆಗೆ ತೆಗೆದುಕೊಳ್ಳಲು ಭಟ್ಟರಿಗೆ ಅವರದೇ ಆದ ಬ್ಲಾಗ್, ವೆಬ್‌ಸೈಟ್, ಫೇಸ್‌ಬುಕ್ ತಾಣವಿದ್ದದ್ದರಿಂದ ಅಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬಹುದಿತ್ತು. ನಮ್ಮಂತಹ ಸಾರ್ವಜನಿಕರ ಜೊತೆ ಒಡನಾಡುವ ಪತ್ರಕರ್ತರಿಗೆ ಇಂತಹ ಆಪಾದನೆ, ಟೀಕೆ ಎಲ್ಲವೂ ಸಾಮಾನ್ಯ. ಇವುಗಳಿಗೆ ನಾವು ಗುರಿಯಾಗದೆ, ನಾಲ್ಕು ಗೋಡೆಯ ನಡುವೆ ಇರುವ ನಮ್ಮ ಪತ್ನಿ ಅಥವಾ ಮಕ್ಕಳು ಗುರಿಯಾಗಲು ಸಾಧ್ಯವಿಲ್ಲ. ನಾವು ತಪ್ಪು ಮಾಡದಿದ್ದಾಗ ಇಲ್ಲವೆ ಅನಾವಶ್ಯಕಕವಾಗಿ ನಮ್ಮ ಮೇಲೆ ಆರೋಪ ಹೊರಿಸಿದಾಗ ಮುಖಾ ಮುಖಿಯಾಗಿ ನಿಂತು ಝಾಡಿಸುವುದು ಉತ್ತಮ ಮಾರ್ಗವೇ ಹೊರತು ಪರೋಕ್ಷವಾಗಿ ಪತ್ರಿಕೆಯ ಮೂಲಕ ಬೆಂಕಿ ಕಾರುವುದು ಉತ್ತಮ ಬೆಳವಣಿಗೆಯಲ್ಲ.

ಕೆಲವೆಡೆ ಭಟ್ಟರ ಸಂಪಾದಕೀಯ ಸಾಲುಗಳು ಅವರ ಟೀಕಾಕಾರಿಗೆ ಎಚ್ಚರಿಕೆ ನೀಡುವಂತಿವೆ. ಇಡೀ ರಾಜ್ಯಾದ್ಯಂತ ನನ್ನ ಪತ್ರಿಕೆ, ಛಾನಲ್‌ನ ವರದಿಗಾರರಿದ್ದಾರೆ, ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಮಿತ್ರರಿದ್ದಾರೆ, ಅವರ ಮೂಲಕ ಕ್ಷಣ ಮಾತ್ರದಲ್ಲಿ ವಿಷಯ ಸಂಗ್ರಹಿಸಬಲ್ಲೆ ಎಂಬುದರ ಮೂಲಕ ಭಟ್ಟರು ಬ್ಲ್ಯಾಕ್‌ಮೇಲ್ ಪತ್ರಿಕೋದ್ಯಮಕ್ಕೆ ಇಳಿಯುತಿದ್ದಾರೆನೋ ಎಂಬ ಸಂಶಯ ಆತಂಕ ಕಾಡತೊಡಗಿದೆ.

ಅಕ್ಷರದ ಹೆಸರಿನಲ್ಲಿ ಅನ್ನ ತಿನ್ನುತ್ತಾ ಬದುಕು ಕಟ್ಟಿಕೊಂಡಿರುವ ನಾನು ಭಟ್ಟರು ಅನುಭವಿಸಿದಂತಹ ನೂರಾರು ಅಪಮಾನ, ಯಾತನೆಗಳನ್ನು ಅನುಭವಿಸಿದ್ದೇನೆ. ಎದುರಿಗೆ ಸಿಕ್ಕಾಗ ಮುಖ ಮುಸುಡಿ ನೋಡದೆ ಎದೆಗೆ ಒದ್ದ ಹಾಗೆ ಮಾತನಾಡಿದ್ದೇನೆ. ಆದರೆ, ನನ್ನನ್ನು ಟೀಕಿಸುವವರ ಬಗ್ಗೆ ದ್ವೇಷಿಸುವವರ ಬಗ್ಗೆ ಅಕ್ಷರ ರೂಪದಲ್ಲಿ ನಾನೆಂದು ಸೇಡು ತೀರಿಸಿಕೊಳ್ಳಲಾರೆ. ಏಕೆಂದರೆ, ಅಕ್ಷರ ದಾಖಲಾಗುವ ಮಾಧ್ಯಮ. ಅಲ್ಲಮನ ಈ  ವಚನದ ಸಾಲು ನಾನು ಸಿಟ್ಟಿಗೆದ್ದಾಗಲೆಲ್ಲಾ ನನ್ನನ್ನು ತಡೆಯುತ್ತದೆ. “ಬರೆಯಬಾರದು ನೋಡಾ ಅಳಿಸಬಾರದ ಲಿಪಿಯ”. ನಾವು ಬರೆದ ಲಿಪಿ ಶಾಶ್ವತವಾಗಿ ಉಳಿಯುವಂತಿರಬೇಕು. ಹಾಗಾಗ ಬೇಕೆಂದರೆ, ಲೇಖಕ, ಪತ್ರಕರ್ತನಾದವನು ಬರವಣಿಗೆಯಲ್ಲಿ ಸಂಯಮ ಕಾಪಾಡಿಕೊಳ್ಳಬೇಕು. ಇದು ನನ್ನ ನಂಬಿಕೆ.

ಮಾಧ್ಯಮ ಅಕಾಡೆಮಿಗೆ ಮಂಗಳಾರತಿ

-ಡಾ. ಎನ್. ಜಗದೀಶ್ ಕೊಪ್ಪ

ಕಳೆದ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು, ಪತ್ರಕರ್ತರು ತಮ್ಮ ವೃತ್ತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾತನಾಡಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಅಕಾಡೆಮಿಯ ನಿಷ್ಕ್ರಿಯತೆಯ ಬಗ್ಗೆ ಅಧ್ಯಕ್ಷರು ಮತ್ತು ಸದಸ್ಯರ ಮರ್ಮಕ್ಕೆ ತಾಗುವಂತೆ ಮಾತನಾಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಸ್ತಿತ್ವದಲ್ಲಿದೆ ಎಂದು ನನಗೆ ಗೊತ್ತಾಗಿದ್ದು ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಮಾತ್ರ. ಸರ್ಕಾರ ಕೊಟ್ಟ ಅನುದಾನವನ್ನು ಪರಿಣಾಮಾಕಾರಿಯಾಗಿ ಬಳಸಲಾರದಕ್ಕೆ, ಹಾಗೂ ಅಕಾಡೆಮಿಯ ಭವಿಷ್ಯದ ಯೋಜನೆಗಳಿಗೆ ಆರ್ಥಿಕ ನೆರವು ನೀಡಲು ಸಿದ್ಧ ಎಂದು ಸ್ವತಃ ಮುಖ್ಯಮಂತ್ರಿ ಹೇಳಿದರೂ ಸಹ ಪ್ರಸ್ತಾವನೆಯನ್ನ ಸಲ್ಲಿಸಲಾರದ ಸೋಮಾರಿತನದ ಬಗ್ಗೆ ನೇರವಾಗಿ ಮುಖ್ಯಮಂತ್ರಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಪಾಪ ನಿಷ್ಕ್ರಿಯತೆ ಮತ್ತು ಅಬ್ಬೆಪಾರಿತನದ ಪ್ರತಿರೂಪದಂತಿರುವ ಅಧ್ಯಕ್ಷ ಪರಮೇಶ್ ತಾನೆ ಏನು ಮಾಡಬಲ್ಲರು?

ಇದರಲ್ಲಿ ಸರ್ಕಾರದ ಪಾತ್ರವೂ ಇದೆ. ಇತ್ತೀಚೆಗಿನ ದಿನಗಳಲ್ಲಿ ಮಾಧ್ಯಮ ಅಕಾಡೆಮಿಗೆ ಸದಸ್ಯರನ್ನ, ಅಧ್ಯಕ್ಷರನ್ನ ನೇಮಕ ಮಾಡುವ ಪ್ರಕ್ರಿಯೆ ಗಮನಿಸಿದರೆ, ಅಕಾಡೆಮಿಯೆಂಬುದು, ನಿಶ್ಯಕ್ತ ಪತ್ರಕರ್ತರ ನಿರಾಶ್ರಿತರ ಶಿಬಿರವೇನೊ ಎಂಬಾಂತಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಕರ್ನಾಟಕದಲ್ಲಿ ಮಾಧ್ಯಮಗಳ ಬಗ್ಗೆ ಗಂಭೀರ ಚರ್ಚೆ ನಡೆಯುತಿದ್ದು, ಮಾದ್ಯಮಗಳ ಭಾಷೆ, ಕಾರ್ಯವೈಖರಿ ಮುಂತಾದ ವಿಷಯಗಳ ಬಗ್ಗೆ ಪ್ರಜ್ಞಾವಂತ ಓದುಗರು, ವೀಕ್ಷಕರು ಧ್ವನಿ ಎತ್ತಿದ್ದಾರೆ. ಎತ್ತುತ್ತಿದ್ದಾರೆ. ಮಾಧ್ಯಮ ಮತ್ತು ಜನಸಾಮಾನ್ಯರ ನಡುವೆ ಸಂವಹನದ ಸೇತುವೆಯಾಗಬೇಕಿದ್ದ ಅಕಾಡಮಿ ಈ ನಿಟ್ಟಿನಲ್ಲಿ ಏನು ಕೆಲಸ ಮಾಡಿದೆ? ಈ ಕ್ಷೇತ್ರಕ್ಕೆ ಬರುತ್ತಿರುವ ಹೊಸಬರಿಗೆ ಅನುಕೂಲವಾಗುವಂತೆ ಇತ್ತೀಚೆಗೆ ಯಾವ ಕೃತಿ ಪ್ರಕಟಿಸಿದೆ? ಯಾವ ವಿಚಾರ ಸಂಕಿರಣ ಏರ್ಪಡಿಸಿದೆ? ಹಾಗೆ ನೋಡಿದರೆ, ಪ್ರೆಸ್‌ಕ್ಲಬ್ ಪುಸ್ತಕಗಳ ಪ್ರಕಟಣೆಯಲ್ಲಿ ಅಕಾಡೆಮಿಗಿಂತ ಸಾವಿರ ಪಾಲು ವಾಸಿ. ಕಳೆದ ಮೂರು ವರ್ಷಗಳಲ್ಲಿ ಅದರ ಪ್ರಕಟಣೆಗಳ ಸಂಖ್ಯೆ ಐವತ್ತು ದಾಟಿದೆ.

ಇವತ್ತು ಮಾಧ್ಯಮ ಪ್ರಶಸ್ತಿಗಳ ಮೌಲ್ಯ ಕೂಡ ಚರ್ಚೆಗೆ ಒಳಪಟ್ಟಿದೆ. ಕಳೆದ ವಾರ ಮಂಡ್ಯದಲ್ಲಿ ನಡೆದ ಪತ್ರಿಕೋದ್ಯಮ ವಿಚಾರ ಸಂಕಿರಣದ ಸಂದರ್ಭದಲ್ಲಿ ಮಾತನಾಡಿದ ಗೆಳೆಯ ದಿನೇಶ್ ಅಮಿನ್‌ಮಟ್ಟು ಪ್ರಶಸ್ತಿ ಸ್ವೀಕಾರದ ಬಗ್ಗೆ ತಮ್ಮ ಅಸಹಾಯಕತೆಯನ್ನು ಹೊರಹಾಕಿದರು. “ಪ್ರಶಸ್ತಿ ಸ್ವೀಕರಿಸದಿದ್ದರೆ, ಅಹಂಕಾರ ಎನ್ನುತ್ತಾರೆ, 25 ವರ್ಷಕ್ಕೂ ಹೆಚ್ಚು ಕಾಲ ಪತ್ರಕರ್ತನಾಗಿ ದುಡಿದ ನಾನು ಕೇವಲ ಎರಡು ವರ್ಷದಲ್ಲಿ ಪತ್ರಿಕೋದ್ಯಮಕ್ಕೆ ಬಂದು ಲಾಭಿ ಮೂಲಕ ಪ್ರಶಸ್ತಿ ಪಡೆಯುವವನ ಜೊತೆ ಕುಳಿತು ಅಕಾಡೆಮಿ ಗೌರವವನ್ನು ಹೇಗೆ ಸ್ವೀಕರಿಸಲಿ? ನನಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಿಂತ ಈಗಾಗಲೇ ಪಡೆದಿರುವ ಖಾದ್ರಿ ಶಾಮಣ್ಣ ಪ್ರಶಸ್ತಿ, ಮತ್ತು ಬೆಂಗಳೂರಿನ ಸಂಬುದ್ಧ ಟ್ರಸ್ಟ್ ನೀಡಿರುವ ಗೌರವ ಹೆಚ್ಚು ತೃಪ್ತಿ ನೀಡಿವೆ.” ಇದು ದಿನೇಶ್ ಅಮಿನ್ ಒಬ್ಬರ ಮಾತಲ್ಲ, ತನ್ನ ವೃತ್ತಿಯ ಬಗೆಗಿನ ಬದ್ಧತೆ, ಘನತೆ, ಕಾಳಜಿ ಇಟ್ಟುಕೊಂಡಿರುವ ಪ್ರತಿಯೊಬ್ಬ ಪತ್ರಕರ್ತನ ಮಾತು ಕೂಡ ಹೌದು. ಪ್ರಶಸ್ತಿಗೆ ನಾಲ್ಕು ಜನ ಯೋಗ್ಯರನ್ನ ಆಯ್ಕೆ ಮಾಡಿ, ಅವರ ಜೊತೆ ರಾಜಕಾಣಿಗಳಿಗೆ ಬಕೆಟ್ ಹಿಡಿದ ಎಂಟು ಜನ ಭಟ್ಟಂಗಿಗಳನ್ನು ಆಯ್ಕೆ ಮಾಡಿದರೆ ಪ್ರಶಸ್ತಿಯ ಮೌಲ್ಯ ವೃದ್ಧಿಸುವುದಿಲ್ಲ ಎಂಬ ವಾಸ್ತವ ಸತ್ಯವನ್ನ ಅಕಾಡೆಮಿ ಅರಿಯ ಬೇಕಾಗಿದೆ. ಬಹುತೇಕ ಪ್ರಶಸ್ತಿಗಳು ನಗರ ಕೇಂದ್ರಿತವಾಗಿದ್ದು, ವಿಶೇಷವಾಗಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕವನ್ನು ಕಡೆಗಣಿಸಲಾಗಿದೆ, ನಾನು ದಕ್ಷಿಣ ಕರ್ನಾಟಕದ ಮಂಡ್ಯದವನಾಗಿದ್ದು ಪ್ರಜ್ಞಾಪೂರ್ವಕವಾಗಿ ಈ ಮಾತನ್ನು ಹೇಳುತಿದ್ದೇನೆ. ಕಳೆದ ಹತ್ತು ವರ್ಷದ ಪ್ರಶಸ್ತಿ ಪಟ್ಟಿಯನ್ನ ಅಕಾಡೆಮಿ ಪ್ರಕಟಿಸಿದರೆ, ಸತ್ಯಾಂಶ ಹೊರಬೀಳಲಿದೆ.

ಪ್ರಶಸ್ತಿಯ ಈ ಅಧ್ವಾನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪಾಲು ಕೂಡ ಇದೆ. ಇಂದು ಆ ಸಂಘದಲ್ಲಿ ಕಾರ್ಯನಿರತ ಪ್ರತ್ರಕರ್ತರಿಗಿಂತ ಕಾರ್ಯ ಮರೆತ ಪತ್ರಕರ್ತರು ಶೇ.90 ಮಂದಿ ಇದ್ದಾರೆ. ಎಂದೋ, ಯಾವ ದಶಕದಲ್ಲೋ, ಒಂದೆರಡು ವಾರ ಅಥವಾ ತಿಂಗಳು ಪತ್ರಿಕೆ ನಡೆಸಿ ಸಂಪಾದಕ ಎಂಬ ಮುದ್ರೆಯನ್ನ ಹಣೆಗೆ ಮತ್ತು ಎದೆಗೆ ಒತ್ತಿಕೊಂಡು ಒಡಾಡುವವರೆ ಸಂಘದಲ್ಲಿ ಹೆಚ್ಚು ಮಂದಿ ಇದ್ದಾರೆ, ಏಕೆಂದರೆ, ಈ ದೇಶದಲ್ಲಿ ರಾಜಕಾರಣಿಗೆ ಮತ್ತು ಪತ್ರಕರ್ತನಿಗೆ ನಿವೃತ್ತಿಯೇ ಇಲ್ಲ, ಅವರೆಲ್ಲರೂ ಸಾಯುವವರೆಗೂ ರಾಜಕಾರಣಿಗಳು ಮತ್ತು ಪತ್ರಕರ್ತರು. ಈ ಕುರಿತಂತೆ ಅಧ್ಯಕ್ಷರಾಗಿರುವ ಮಿತ್ರ ಗಂಗಾಧರ್ ಮೊದಲಿಯಾರ್‌ಗೆ ನಿರಂತರ ಪ್ರಕಟಣೆಯಲ್ಲಿರುವ ಹಾಗೂ ಮಾಧ್ಯಮ ಪಟ್ಟಿಯಲ್ಲಿರವ ಪತ್ರಿಕೆಗಳ ಪತ್ರಕರ್ತರಿಗೆ ಮಾತ್ರ ಸದಸ್ಯತ್ವ ನೀಡುವ ಕುರಿತು ಸಂಘದ ನಿಯಾಮಾವಳಿಗಳನ್ನು ಬದಲಿಸುವಂತೆ ನಾನೇ ಸಲಹೆ ನೀಡಿದ್ದೆ. ಈ ರೀತಿ ಪರಿಷ್ಕರಿಸಿದಾಗ ಮಾತ್ರ ನಿಜವಾದ ಪತ್ರಕರ್ತರು ವೃತ್ತಿಯಲ್ಲಿ ಉಳಿಯಲು ಸಾಧ್ಯ. ಇಲ್ಲದಿದ್ದರೆ ಜಿಲ್ಲಾ ಘಟಕಗಳು ಶಿಪಾರಸ್ಸು ಮಾಡುವ ಅನೇಕ ಅಪಾತ್ರರು ಪ್ರಶಸ್ತಿಗೆ ಪಾತ್ರರಾಗುತ್ತಾರೆ. ಈಗ ನಡೆಯುತ್ತಿರುವುದು ಅದೇ ಆಗಿದೆ.

ನನ್ನ ಈ ಲೇಖನದ ಉದ್ದೇಶ ಯಾರನ್ನೂ ಗುರಿಮಾಡಿಕೊಂಡು ಟೀಕಿಸುವುದಲ್ಲ. ಅಕಾಡೆಮಿಯ ಅವಧಿ ಅಂತ್ಯಗೊಳ್ಳುತಿದ್ದು, ಮುಂಬರುವ ಅಧ್ಯಕ್ಷರು, ಸದಸ್ಯರು ಈ ಅಂಶಗಳತ್ತ ಗಮನ ಹರಿಸಲಿ ಎಂಬುದೇ ನನ್ನ ಆಶಯ ಮತ್ತು ಕಾಳಜಿ. ಕಳೆದ ವಾರ ಕನ್ನಡ ಭಾಷೆಯ ವಿರೋಧಿಯಾದ ಮರಾಠಿ ಪತ್ರಿಕೆಯೊಂದರ ಹುಬ್ಬಳ್ಳಿ ವರದಿಗಾರನೊಬ್ಬ ಧಾರವಾಡ ಜಿಲ್ಲಾಧ್ಯಕ್ಷರ ಶಿಪಾರಸ್ಸು ಪತ್ರ ತೆಗೆದುಕೊಂಡು ಮಾಧ್ಯಮ ಅಕಾಡೆಮಿ ಸದಸ್ಯತ್ವಕ್ಕೆ ಸಚಿವರು, ಶಾಸಕರನ್ನು ಹಿಡಿದುಕೊಂಡು ಓಡಾಡುತ್ತಿದ್ದಾನೆ. ಸದಸ್ಯರ ಗಮನಕ್ಕೆ ಬಾರದೆ ಈ ಕೃತ್ಯ ನಡೆದಿದ್ದು ಈಗ ಈ ಇಬ್ಬರ ರಾಜೀನಾಮೆಗೆ ಒತ್ತಾಯಿಸಲಾಗಿದೆ. ಇಂತಹ ಅವಾಂತರಗಳು ನಡೆಯದಂತೆ ಸರ್ಕಾರ ಕೂಡ ಎಚ್ಚರಿಕೆ ವಹಿಸಬೇಕಾಹಿದೆ.

ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ

– ಡಾ. ಎನ್ ಜಗದೀಶ್ ಕೊಪ್ಪ.

ಮೊನ್ನೆ ಸೋಮವಾರ ಭಾರತದ ಮಾಧ್ಯಮದ ಇತಿಹಾಸದಲ್ಲೇ ನಡೆಯದ ಅಪರೂಪದ ಘಟನೆ ನಡೆದು, ಮಾಧ್ಯಮದ ಮಂದಿಯನ್ನ ಆತಂಕದ ಮಡುವಿಗೆ ನೂಕಿದೆ. ಭಾರತದ ಪ್ರಸಿದ್ಧ ಪತ್ರಿಕಾ ಸಮೂಹವಾದ ಟೈಮ್ಸ್ ಆಫ್ ಇಂಡಿಯಾ ಬಳಗದ ಇಂಗ್ಲೀಷ್ ಛಾನಲ್ ಟೈಮ್ಸ್ ನೌ ಅವಸರಕ್ಕೆ ಬಲಿ ಬಿದ್ದು ಮಾಡಿದ ಒಂದು ಸಣ್ಣ ಪ್ರಮಾದಕ್ಕೆ ಈಗ ತೆರಬೇಕಾಗಿರುವ ದಂಡ ಸಾಮಾನ್ಯವಾದುದಲ್ಲ. ಬರೋಬ್ಬರಿ ನೂರು ಕೋಟಿ ರೂಪಾಯಿಗಳು.

ಸುದ್ಧಿ ಚಾನಲ್ ಗಳ ಸ್ಪರ್ಧೆಯ ನಡುವೆ ಎಲ್ಲರಿಗಿಂತ ಮುಂಚಿತವಾಗಿ ಸುದ್ಧಿ ತಲುಪಿಸುವ ಭರದಲ್ಲಿ ಅದರ ಖಚಿತತೆ, ಔಚಿತ್ಯ, ಸುದ್ಧಿಮೂಲಗಳ ಪ್ರಾಮಾಣಿಕತೆ ಇವೆಲ್ಲವನ್ನು ಮರೆತು ಅವಸರವಾಗಿ ತಪ್ಪು ಮಾಹಿತಿಗಳನ್ನು ಸುದ್ಧಿಯ ನೆಪದಲ್ಲಿ ಭಿತ್ತರಿಸುವುದು ಇವತ್ತು ಭಾರತದ ಎಲ್ಲಾ ಭಾಷೆಗಳ ಛಾನಲ್ ಗಳ ಕೆಟ್ಟ ಛಾಳಿಯಾಗಿದೆ.

ಇಂತಹದೆ ತಪ್ಪನ್ನು ಟೈಮ್ಸ್ ನೌ ಕೂಡ ಮಾಡಿತು.

2008ರಲ್ಲಿ ಗಾಜಿಯಾಬಾದ್ ನ್ಯಾಯಾಲಯದ ನೌಕರರ ಭವಿಷ್ಯ ನಿಧಿಹಣ ದುರುಪಯೋಗವಾದ ಹಗರಣದಲ್ಲಿ ನ್ಯಾಯಾಧೀಶ ಪಿ.ಕೆ. ಸಮಂತ್ ಅವರ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ 2008ರ ಸೆಪ್ಟೆಂಬರ್ 10 ರಂದು ಟೈಮ್ಸ್ ನೌ ಚಾನಲ್ ಸುದ್ಧಿ ಬಿತ್ತರಿಸುತ್ತಾ ಸಮಂತರ ಭಾವಚಿತ್ರ ಎಂದು ಭಾವಿಸಿ ನಿವೃತ್ತ ನ್ಯಾಯಮೂರ್ತಿ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಪುಣೆ ಮೂಲದ ಸಾವಂತ್ ರವರ ಭಾವಚಿತ್ರ ಪ್ರಕಟಿಸಿ ಪ್ರಮಾದ ಎಸಗಿತು.

ಇದರಿಂದ ಆಕ್ರೋಶಗೊಂಡ ಸಾವಂತರು ಪುಣೆಯ ಸ್ಥಳೀಯ ನ್ಯಾಯಾಲಯದಲ್ಲಿ ನೂರು ಕೋಟಿ ರೂ.ಗಳಿಗೆ ಪರಿಹಾರ ಕೋರಿ ಮಾನ ನಷ್ಟ ಮೊಕದ್ದಮೆ ದಾಖಲಿಸಿದರು. ನ್ಯಾಯಲಯ ಅವರ ಮನವಿಯನ್ನು ಎತ್ತಿ ಹಿಡಿದು ಪರಿಹಾರ ನೀಡುವಂತೆ ಆದೇಶ ನೀಡಿತು. ಟೈಮ್ಸ್ ನೌ ಛಾನಲ್ ಇದರ ವಿರುದ್ಧ ಬಾಂಬೆ ಹೈಕೋರ್ಟ್  ಮೊರೆ ಹೊಕ್ಕಾಗ  ಹೈಕೋರ್ಟ್  ಸಹ ಸಾವಂತರ ಪರ ತೀರ್ಪು  ನೀಡಿ ನ್ಯಾಯಾಲಯದಲ್ಲಿ 20 ಕೋಟಿ ಠೇವಣಿ ಹಾಗೂ 80 ಕೋಟಿ ರೂ ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಸೂಚಿಸಿತು.

ಅಂತಿಮವಾಗಿ ಟೈಮ್ಸ್ ಸಂಸ್ಥೆ ದೆಹಲಿಯ ಸುಪ್ರೀಂ ಕೋರ್ಟ್ ಮೊರೆ ಹೋದರೆ, ದ್ವಿಸದಸ್ಯ ಪೀಠದ ನ್ಯಾಯಮೂ ರ್ತಿಗಳಾದ ಜಿ. ಎಸ್. ಸಿಂಘ್ವಿ ಹಾಗು ಎಸ್. ಜೆ. ಮುಖ್ಯೋಪಾಧ್ಯಾಯ ಚಾನಲ್ನ ಅಜರ್ಿಯನ್ನು ತಿರಸ್ಕರಿಸಿ, ಹೈಕೋರ್ಟ್  ಆದೇಶಕ್ಕೆ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ತೀರ್ಪಿತ್ತರು.

ಇಲ್ಲಿನ ಇಡೀ ಪ್ರಕ್ರಿಯೆಯಲ್ಲಿ ಒಂದು ಸೂಕ್ಷ್ಮ ಸಂಗತಿಯನ್ನು ಗಮನಿಸಬೇಕು. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ಮಾನ ನಷ್ಟಕ್ಕೆ ಒಳಗಾದರೆ, ಅವನು ನ್ಯಾಯಾಲಯದ ಮೂಲಕ ಕೋರುವ ಪರಿಹಾರ ಮೊತ್ತದ ಶೇ.10 ರಷ್ಟು ಹಣವನ್ನು ಮೊಕದ್ದಮೆ ದಾಖಲಿಸುವಾಗ ನ್ಯಾಯಾಲಯದಲ್ಲಿ ಠೇವಣಿ ಇರಿಸಬೇಕು. ಒಂದು ವೇಳೆ ಅವನು ಮಾನಹಾನಿಯ ಬಗ್ಗೆ ಸಾಬೀತು ಪಡಿಸಲು ವಿಫಲನಾದರೆ, ಹಣವನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡು ಎದುರಾಳಿಯ ನ್ಯಾಯಲಯದ ವೆಚ್ಚವನ್ನು ಭರಿಸಲು ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ.

ಹಾಗಾದರೆ, ನಿವೃತ್ತ ನ್ಯಾಯಾಧೀಶರಾದ ಸಾವಂತರಿಗೆ 100 ಕೋಟಿ ಪರಿಹಾರ ಕೇಳಲು 10 ಕೋಟಿ ಹಣ ಠೇವಣಿ ಇಡಲು ಎಲ್ಲಿಂದ ಬಂತು? ಇಲ್ಲೇ ಇರುವುದು ಕಾನೂನಿನ ಸಡಿಲವಾದ ಅಂಶ. ಠೇವಣಿ ಕುರಿತಂತೆ ಕಾನೂನಿನಲ್ಲಿ ಸಮಾಜದ ಗಣ್ಯ ವ್ಯಕ್ತಿಗಳಿಗೆ ನಿಯಮವನ್ನು ಸಡಿಲಿಸುವ ಕುರಿತಂತೆ ಆಯಾ ನ್ಯಾಯಾಧೀಶರ ವಿವೇಚನೆಗೆ ಬಿಡಲಾಗಿದೆ. ಈ ಪ್ರಕರಣವನ್ನು ಗಮನಿಸಿದಾಗ ನ್ಯಾಯ ನೀಡುವಲ್ಲಿ ಎಲ್ಲಾ ಹಂತದಲ್ಲಿ ಕೂಡ ಪಕ್ಷಪಾತ ಧೋರಣೆ ಅನುಸರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಒಬ್ಬ ನಿವೃತ್ತ ನ್ಯಾಯಾದೀಶನ ಮರ್ಯಾದೆ ನೂರು ಕೋಟಿ ಬೆಲೆ ಬಾಳಲು ಹೇಗೆ ಸಾಧ್ಯ? ಅಂದ ಮಾತ್ರಕ್ಕೆ ನಾನು ಮಾಧ್ಯಮದ ಒಂದು ಭಾಗವಾಗಿದ್ದರೂ ಕೂಡ ಇಂದಿನ ಮಾಧ್ಯಮಗಳ ವರ್ತನೆಯನ್ನು ಸಮರ್ಥಿಸಲು ಸಿದ್ಧನಿಲ್ಲ.

ಭಾರತದ ಪತ್ರಿಕೋದ್ಯಮದ ಇತಿಹಾಸದಲ್ಲಿ ವರದಿಯನ್ನ ಜಾಹಿರಾತು ರೂಪಕ್ಕೆ ಇಳಿಸಿದ ನೀಚವೃತ್ತಿಯ ಕಳಂಕ ಅಂಟಿ ಕೊಂಡಿರುವುದು ಟೈಮ್ಸ್ ಆಫ್ ಇಂಡಿಯಾ ಬಳಗಕ್ಕೆ. ಸ್ವಾತಂತ್ರ ಪೂರ್ವದ ಮುನ್ನ ಬ್ರಿಟೀಷರಿಂದ ಪ್ರಾರಂಭವಾದ ಈ ಪತ್ರಿಕೆ ನಂತರದ ದಿನಗಳಲ್ಲಿ ಮಾರ್ವಾ  ಮನೆತನವಾದ ಜೈನ್ ಕುಟುಂಬಕ್ಕೆ ಸೇರಿದ್ದು, ಆನಂತರ ಲಾಭಕೋರತನವನ್ನು ಗುರಿಯಾಗಿರಿಸಿಕೊಂಡು ಪತ್ರಿಕೆಯಲ್ಲಿ ಪೇಜ್ ತ್ರೀ ಎಂಬ ಮೂರನೇ ದರ್ಜೆಯ ಸಂಸ್ಕೃತಿಯ ವರದಿಯನ್ನ ಪರಿಚಯಿಸಿದ ಹೀನ ಇತಿಹಾಸ ಈ ಪತ್ರಿಕೆ ಜೊತೆ ತಳಕು ಹಾಕಿಕೊಂಡಿದೆ.

ಭಾರತದ ಪತ್ರಿಕೋದ್ಯಮ ಇಂದು ಎಂತಹ ಮಾನಗೆಟ್ಟ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಕೇವಲ ಆರು ತಿಂಗಳ ಹಿಂದೆ ದೆಹಲಿ ಮೂಲದ ಹಿಂದೂಸ್ಥಾನ್ ಟೈಮ್ಸ್ ಎಂಬ ಪತ್ರಿಕೆ ಮಧ್ಯಪ್ರದೇಶದ ಇಂದೋರ್ ನಗರದಿಂದ ಹೊಸ ಆವೃತ್ತಿ ಪ್ರಾರಂಭಿಸಿತು. ಮೊದಲ ಸಂಚಿಕೆಯ ವರದಿ ಇಡೀ ಭಾರತವನ್ನು ಬೆಚ್ಚಿ ಬೀಳಿಸಿತು.

ವರದಿಯ ಸಾರಾಂಶವೇನೆಂದರೆ, ಇಂದೋರ್ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತಿ ಹೆಣ್ಣು ಮಗುವಿಗೂ ಲಿಂಗ ಪರಿವರ್ತನೆ ಮಾಡಲಾಗುತ್ತದೆ ಎಂಬ ವಿಷಯ.

ಇಂತಹ ಅವೈಜ್ಞಾನಿಕ ವರದಿಯನ್ನ ಗಮನಿಸಿದ ಹಿಂದೂ ದಿನಪತ್ರಿಕೆ ಈ ಕುರಿತಂತೆ ಭಾರತದ ಮಕ್ಕಳ ತಜ್ಞರೂ ಸೇರಿದಂತೆ, ಲಂಡನ್, ನ್ಯೂಯಾರ್ಕ್ ನಗರದ ವೈದ್ಯರನ್ನು ಸಂದರ್ಶನ ಮಾಡಿ ಇದೊಂದು ಅವಿವೇಕದ, ಅವೈಜ್ಞಾನಿಕ ವರದಿ ಎಂದು ವಿಶೇಷ ವರದಿ ಪ್ರಕಟಿಸಿತು. ಜೊತೆಗೆ ಒಂದು ಅರ್ಥಪೂರ್ಣ ಟಿಪ್ಪಣಿಯನ್ನು ವರದಿಯ ಕೆಳಭಾಗದಲ್ಲಿ ಪ್ರಕಟಿಸಿತು. ಆ ಟಿಪ್ಪಣಿಯ ಸಾರಾಂಶ ಹೀಗಿತ್ತು:
ಪ್ರಿಯ ಓದುಗರೆ? ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪತ್ರಿಕೆಯ ಪ್ರತಿ ಸ್ಪರ್ಧೆ  ನಿಜ, ಆದರೆ ಈ ಪತ್ರಿಕೆ ಪ್ರಕಟಿಸಿರುವ ಒಂದು ಅವೈಜ್ಞಾನಿಕ ವರದಿಗೆ ವಿವರಣೆ ನೀಡುವುದು ನಮಗೆ ಅನಿವಾರ್ಯ. ಈ ಕಾರಣದಿಂದ ವಾಸ್ತವಿಕ ಸತ್ಯವನ್ನು ಆಧರಿಸಿದ ಈ ವರದಿನ್ನು ಪ್ರಕಟಿಸುತಿದ್ದೇವೆ.

ಕೇಂದ್ರ ಸಕರ್ಾರ ಕೂಡ ವರದಿಯಿಂದ ಬೆಚ್ಚಿ ಬಿದ್ದು ತನಿಖೆಗೆ ತಜ್ಷರ ಸಮಿತಿಯೊಂದನ್ನು ನೇಮಕಮಾಡಿತ್ತು. ಆ ಸಮಿತಿ ಇಂದೋರ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಜನಿಸಿದ ಮಕ್ಕಳ ದಿನಾಂಕ, ವೇಳೆ, ಲಿಂಗ ಇವುಗಳನ್ನು ಆಧಾರವಾಗಿಟ್ಟುಕೊಂಡು ಆ ಮಕ್ಕಳ ಪೋಷಕರನ್ನು ಪತ್ತೆ ಮಾಡಿ ತನಿಖೆ ಮಾಡಿದಾಗ ಇದೊಂದು ಕಟ್ಟು ಕಥೆಯೆಂಬುದು ಬೆಳಕಿಗೆ ಬಂತು. ಆನಂತರ ಪತ್ರಿಕೆ ಸಾರ್ವಜನಿಕರ ಕ್ಷಮೆ ಯಾಚಿಸಿ, ಈ ಬಗ್ಗೆ ವರದಿ ಮಾಡಿದ ವರದಿಗಾರ್ತಿ ಮತ್ತು ಈ ಸುದ್ಧಿ ಪ್ರಕಟಿಸಿದ ಸ್ಥಾನಿಕ ಸಂಪಾದಕನನ್ನು ಕಿತ್ತು ಹಾಕಿತು.

ಇದು ವ್ಯಕ್ತಿಯೊಬ್ಬ ತಾನು ಮಾಡಿದ ವಾಂತಿಯನ್ನು ತಾನೇ ತಿನ್ನಬೇಕಾದ ಅನಿವಾರ್ಯದ ಸ್ಥಿತಿ. ಇಂತಹ ದಯನೀಯವಾದ ಸ್ಥಿತಿ ನಮ್ಮ ಮಾಧ್ಯಮಗಳಿಗೆ ಬೇಕೆ? ಇದು ಅಕ್ಷರದ ಹೆಸರಿನಲ್ಲಿ ಅನ್ನ ತಿನ್ನುವವರ ಆತ್ಮಸಾಕ್ಷಿಯ ಪ್ರಶ್ನೆ.

ನಮ್ಮ ಮಾಧ್ಯಮಕ್ಕೆ ತನ್ನ ವೃತ್ತಿಯ ಬಗ್ಗೆ ಘನತೆ, ಗಂಭೀರತೆ ಎಂಬುದು ಇದ್ದಿದ್ದರೆ, ನ್ಯಾಯಾಂಗದ ಕೈಯಲ್ಲಿ ಈ ರೀತಿ ಕಪಾಳ ಮೋಕ್ಷವಾಗುತ್ತಿರಲಿಲ್ಲ.

ಇಂತಹ ಕಪಾಳ ಮೋಕ್ಷದ ಬಿಸಿ ನಮ್ಮ ಕನ್ನಡದ ಸುದ್ಧಿ ಚಾನಲ್ ಗಳಿಗೂ ಮುಟ್ಟಬೇಕಾಗಿದೆ.