Tag Archives: ಯಡಿಯೂರಪ್ಪ

ನಮ್ಮ ಆದರ್ಶವನ್ನೆಂದೂ ಮರೆಯಬಾರದು


-ಬಿ. ಶ್ರೀಪಾದ ಭಟ್


“ಸಂಧಾನ ಕೂಡ ಒಂದು ಅಸ್ತ್ರವಾಗಿದ್ದು ಅದನ್ನು ರಾಜಕೀಯ ಹೋರಾಟದ ಕಾಲಕ್ಕೆ ಆಗಾಗ ಬಳಸುವುದು ಅವಶ್ಯಕವಾಗುತ್ತದೆ. ಅದರಿಂದ ಒಂದು ಘೋರ ಹೋರಾಟದಿಂದ ಬಸವಳಿದ ಜನತೆಗೆ ಕೆಲ ಕಾಲ ವಿರಾಮ ಸಿಕ್ಕಂತಾಗುತ್ತದೆ. ಆದರೆ ಈ ಸರಳ ಸಂಧಾನಗಳನ್ನು ಮಾಡಿಕೊಂಡರೂ ನಾವು ನಮ್ಮ ಆದರ್ಶವನ್ನೆಂದೂ ಮರೆಯಬಾರದು. ಅದು ಯಾವತ್ತೂ ನಮ್ಮ ದೃಷ್ಟಿಯಲ್ಲಿರಬೇಕು. ನಾವು ಯಾವ ಉದ್ದೇಶಕ್ಕಾಗಿ ಹೋರಾಡುತ್ತಿದ್ದೇವೆಯೋ ಅದಕ್ಕೆ ಸಂಬಂಧಿಸಿದಂತೆ ನಮ್ಮ ವಿಚಾರಗಳು ಸ್ಪಷ್ಟವಾಗಿರಬೇಕು, ಧೃಡವಾಗಿರಬೇಕು.”  – ಭಗತ್ ಸಿಂಗ್ ( ಕೃಷ್ಣ ಸಹಾಯ್  “ಸೊಷಲಿಸ್ಟ್ ಮೂವ್‍ಮೆಂಟ್ಸ್ ಇನ್ ಇಂಡಿಯಾ”) (ನರೇಂದ್ರ ಪಾಠಕ್ ರವರ  “ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ”ದಿಂದ)

“ರಾಜಕಾರಣಿಗಳ ಎರಡು ಕಣ್ಣುಗಳು ಎರಡು ತರವಾಗಿರಬೇಕು. ಒಂದು ಶುಭ್ರ ಹಾಗೂ ಮತ್ತೊಂದು ಕೆಂಪಾಗಿರಬೇಕು. ಶುಭ್ರತೆ ಪ್ರೀತಿಯ ಸಂಕೇತವಾದರೆ ಕೆಂಪು ಕ್ರೋಧದ ಸಂಕೇತ. ಶೋಷಿತರು, ದಲಿತರು, ಉಪೇಕ್ಷಿತರ ಬಗ್ಗೆ ಪ್ರೀತಿಯನ್ನು, ಸುಲಿಗೆ ಕೋರರು, ಹತ್ಯಾಚಾರಿಗಳು ಹಾಗೂ ಶೋಷಕರ ಬಗ್ಗೆ ಕ್ರೋಧವನ್ನು ವ್ಯಕ್ತಪಡಿಸುವುದು ಅತ್ಯವಶ್ಯವಾದದ್ದು. ಆದರೆ ಈ ಕ್ರೋಧ ಅಹಿಂಸಾತ್ಮಕವಾಗಿರಬೇಕು, ಸಾತ್ವಿಕವಾಗಿರಬೇಕು.” – ರಾಮ ಮನೋಹರ ಲೋಹಿಯಾ (ಕೃಷ್ಣ ಸಹಾಯ್ “ಸೊಷಲಿಸ್ಟ್ ಮೂವ್‍ಮೆಂಟ್ಸ್ ಇನ್ ಇಂಡಿಯಾ”)  (ನರೇಂದ್ರ ಪಾಠಕ್ ರವರ “ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ”ದಿಂದ)

ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಮೇಲಿನೆರಡನ್ನೂ ಮೈಗೂಡಿಸಿಕೊಂಡ ಅಪೂರ್ವ ಸೋಷಲಿಸ್ಟ್ ರಾಜಕಾರಣಿಗಳಾಗಿದ್ದರು. ನಯೀಂ ಸುರಕೋಡ ಅನುವಾದಿಸಿರುವ  ನರೇಂದ್ರ ಪಾಠಕ್ ರವರ “ಕರ್ಪೂರಿ ಠಾಕೂರ್ ಮತ್ತು ಸಮಾಜವಾದದ” ಕೃತಿಯಿಂದ ಸಂಗ್ರಹ ಪೂರ್ಣವಾಗಿ ಆಯ್ದ ಕರ್ಪೂರಿ ಠಾಕೂರ್ ಅವರ ಜೀವನ ಚಿತ್ರಣವನ್ನು ಇಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ.

ಭಾರತ  ರಾಷ್ಟ್ರೀಯ ಕಾಂಗ್ರೆಸ್‍ನ ಸಾಂಪ್ರದಾಯಿಕ ನಿಲುವುಗಳು, ಅಲ್ಲಿ ಬಲಪಂಥೀಯರ ಪ್ರಭಾವ ಹೆಚ್ಚುತ್ತಿದೆಯೇನೋ ಎನ್ನುವ ಅನುಮಾನ, ಹಾಗೂ ಪ್ರಮುಖವಾಗಿ ಸಮಾಜವಾದದ ಬಲು ದೊಡ್ಡ ಪ್ರಭಾವ, ಇವೆಲ್ಲದರ ಕಾರಣಕ್ಕಾಗಿ ಕಾಂಗ್ರೆಸ್‍ನೊಳಗೇ ಒಂದು ಸಮಾಜವಾದಿ ಗುಂಪನ್ನು ರಚಿಸಲು ಅಂದಿನ ತರುಣ ಸಮಾಜವಾದಿಗಳಾಗಿದ್ದ ರಾಮ ಮನೋಹರ ಲೋಹಿಯಾ, ಮಿನೂ ಮಸಾನಿ, ಅಶೋಕ ಮೆಹ್ತ, ಯೂಸುಫ಼್ ಮೆಹ್ರೋಲಿ, ಅಚ್ಯುತ್ ಪಟುವರ್ಧನ್ ರಂತಹವರು ಮುಂದಾದರು. ಇವರಿಗೆ ಅರುಣ ಅಸ್ರಫ್ ಅಲಿ, ಕಮಲಾದೇವಿ ಚಟ್ಟೋಪಾಧ್ಯಾಯ, ಎನ್.ಜಿ.ಗೋರೆ ಮುಂತಾದ ಸಂಘಟನೆಕಾರರು ಬೆಂಬವಿತ್ತಿದ್ದರು. ಇದರ ಫಲಶ್ರುತಿಯಾಗಿ 1934ರ ಅಕ್ಟೋಬರ್‌ನಲ್ಲಿ “ಕಾಂಗ್ರೆಸ್ ಸಮಾಜವಾದಿ ಪಕ್ಷ” ಸ್ಥಾಪನೆಯಾಯ್ತು. ಈ ಪಕ್ಷಕ್ಕೆ ಆಚಾರ್ಯ ನರೇಂದ್ರ ದೇವ ಅಧ್ಯಕ್ಷರಾದರೆ, ಜಯಪ್ರಕಾಶ್ ನಾರಾಯಣ್ ಕಾರ್ಯದರ್ಶಿ ಯಾದರು, ಲೋಹಿಯಾ ಅವರು ಸಂಘಟನಾ ಸದಸ್ಯರಾದರು.

ಇದಕ್ಕೆ ಹದಿಮೂರು ವರ್ಷಗಳ ಹಿಂದೆ 1921 ರ ಜನವರಿ 24 ರಂದು ಬಿಹಾರಿನ ದರ್ಭಾಂಗ  (ಈಗಿನ ಸಮುಷ್ಟಿಪುರ)  ಜಿಲ್ಲೆಯ ಪಿತೋಝಿಯಾ ಗ್ರಾಮದಲ್ಲಿ ಕ್ಷೌರಿಕ ಕುಟುಂಬದಲ್ಲಿ ಕರ್ಪೂರಿ ಠಾಕೂರ್ ಜನಿಸಿದರು. ಇವರ ಆ ಗ್ರಾಮ ಹಾಗೂ ಉತ್ತರ ಬಿಹಾರ ಅತ್ಯಂತ ಹಿಂದುಳಿದ ಪ್ರದೇಶವಾಗಿತ್ತು. ಅಲ್ಲಿ ಮಕ್ಕಳು ಹುಟ್ಟುತ್ತಲೇ ಕೆಲಸಕ್ಕೆ, ಕೂಲಿಗೆ ಕಳುಹಿಸುತ್ತಿದ್ದರು. ನಂತರ ಕರ್ಪೂರಿಯವರು ಎರಡು ದಶಕಗಳ ಕಾಲ  (1967 — 1987) ಭಾರತದ ರಾಜಕೀಯದಲ್ಲಿ ಹಿಂದುಳಿದವರ, ದಲಿತರ ಪ್ರಮುಖ ನಾಯಕರಾಗಿಯೂ, ಗಾಂಧೀಜಿ ಹಾಗೂ ಲೋಹಿಯಾರವರ ಚಿಂತನೆಗಳನ್ನು, ಸಮಾಜವಾದಿ ತತ್ವಗಳನ್ನು ರಾಜಕೀಯವಾಗಿಯೂ ಹಾಗೂ ಸಾಮಾಜಿಕವಾಗಿಯೂ ಅನುಷ್ಟಾನಗೊಳಿಸಲು ತಮ್ಮ ಜೀವನವನ್ನೇ ಸಮರ್ಪಿಸಿಕೊಂಡರು. ಈ ಮೂಲಕ ಬಿಹಾರದ ನೆಲೆಯಿಂದ ರೂಪುಗೊಂಡ ಇಂಡಿಯಾದ ಒಬ್ಬ ಪ್ರಮುಖ ರಾಜಕೀಯ ನಾಯಕರಾಗಿ ಕರ್ಪೂರಿ ಠಾಕೂರ್ ಹೆಸರುಗಳಿಸಿದರು. ಕರ್ಪೂರಿ ಹುಟ್ಟಿದ ಆ 20ರ ದಶಕ ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕವಾದ ಪ್ರಮುಖ ಘಟ್ಟವಾಗಿತ್ತು. ಸೌತ್ ಆಫ್ರಿಕಾದಿಂದ ಮರಳಿದ ಗಾಂಧೀಜಿ ನೇರವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ನಂತರದ ವರ್ಷಗಳಲ್ಲಿ ಅಸಹಾಕಾರ ಚಳವಳಿಯನ್ನು ಹುಟ್ಟಿಹಾಕಿದರು. ಆ ಮೂಲಕ  ದೇಶದಾದ್ಯಂತ ಅನೇಕ ತರುಣ, ತರುಣಿಯರನ್ನು ತಮ್ಮ ಈ ಪ್ರಯೋಗಕ್ಕೆ ಆಕರ್ಷಿಸಿದರು. ಇದಕ್ಕಾಗಿ ಬಿಹಾರಿನ ಚಂಪಾರಣ್ಯವನ್ನು ತಮ್ಮ ಆರಂಭದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡರು.

ಇಂತಹ ತಲ್ಲಣಗಳ ಕಾಲ ಘಟ್ಟದಲ್ಲಿ ಅತ್ಯಂತ ಹಿಂದುಳಿದ ಕ್ಷೌರಿಕ ಕುಟುಂಬದಲ್ಲಿ ಹುಟ್ಟಿದ ಕರ್ಪೂರಿಯವರ ಬಾಲ್ಯ ಅತ್ಯಂತ ಬಡತನದಿಂದ ಕೂಡಿತ್ತು. ಅವರನ್ನು ಹತ್ತಿರದಿಂದ ಬಲ್ಲ ಕೃಷ್ಣ ನಂದನ್ ಠಾಕೂರ್‌ರವರ ಪ್ರಕಾರ “ಪರೀಕ್ಷೆಗಳಿಗೆ ಫೀಸ್ ಕಟ್ಟಲು ದುಡ್ಡಿಲ್ಲದಂತಹ ಅನೇಕ ಸಂದರ್ಭಗಳು ಕರ್ಪೂರಿಯವರ ಬಾಲ್ಯ ಜೀವನದಲ್ಲಿ ಎದುರಾಗಿದ್ದವು. ಇಂತಹ ದುರ್ಭರ ಸಂದರ್ಭಗಳಲ್ಲಿ ಅವರ ತಂದೆ ಮಾಜಿ ಮಂತ್ರಿ ಸತ್ಯನಾರಾಯಣ ಸಿಂಗ್ ಅವರಿಂದ ಸಾಲ ಪಡೆದು ಫೀಸ್ ಕಟ್ಟಿದ್ದರು.” ಅದೇ ರೀತಿ ಅವರ ದರ್ಭಾಂಗ ಕಾಲೇಜಿನ ಅಧ್ಯಾಪಕರಾದ ಪ್ರೊ.ಬಿ.ಎಂ.ಕೆ.ಸಿನ್ಹಾ ಹೇಳುವುದು “ಕರ್ಪೂರಿ ಠಾಕೂರ್ ನಿಸ್ಸಂದೇಹವಾಗಿ ಬಡವರಾಗಿದ್ದರು. ಆದರೆ ಅವರು ಸಕ್ರಿಯ ರಾಜಕೀಯದಲ್ಲಿ ತಮ್ಮ ಕಾರ್ಯಬಾಹುಳ್ಯದಿಂದಾಗಿ ಹಾಗೂ ಚಟುವಟಿಕೆಗಳನ್ನು ಹೆಚ್ಚಿಸುವುದಕ್ಕಾಗಿ ತಮ್ಮ ಬಿ.ಎ. ತೃತೀಯ ವರ್ಷದ ಓದನ್ನು ನಿಲ್ಲಿಸಿದರೇ ಹೊರತು ಬಡತನದಿಂದಲ್ಲ. ಅವರಲ್ಲಿ ನಾನು ಒಂದು ಬಗೆಯ ತಳಮಳವನ್ನು ಕಾಣುತ್ತಿದ್ದೆ. ಏನಾದರೂ ಮಾಡಲು ಅವರು ನಿರಂತರವಾಗಿ ಚಡಪಡಿಸುತ್ತಿದ್ದರು. ಸುಮಾರು ಆರು ತಿಂಗಳ ನಂತರ ಲಹೇರಿಯಾ ಸರಾಯ್ ನಿಲ್ದಾಣದಲ್ಲಿ ನಾನು ಅವರನ್ನು ನೋಡಿದೆ. ಕುರ್ತಾ, ಪೈಜಾಮ ತೊಟ್ಟಿದ್ದರು, ಆದರೆ ಬರಿಗಾಲಲ್ಲಿ ಇದ್ದರು. ‘ನೀವು ಕಾಲೇಜಿಗೆ ಬರುತ್ತಿಲ್ಲ, ಯಾಕೆ’ ಎಂದು ಅವರನ್ನು ಕೇಳಿದೆ. ‘ಸರ್, ನಾನು ರಾಜಕೀಯಕ್ಕೆ ಇಳಿದಿದ್ದೇನೆ, ಗಾಂಧೀಜಿಯ ಆಂದೋಲನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇನ್ನೆಂದು ಕಾಲೇಜಿಗೆ ಬರಲಾರೆ,’ ಎಂದರು.”

ಕರ್ಪೂರಿ ಠಾಕೂರ್ ಅವರ ನಿಧನದ  ನಂತರ ಅವರೊಬ್ಬರ ಸಂಗಾತಿ ಕಪಿಲ್ ದೇವ್ ಹೇಳಿದ್ದು ಹೀಗೆ: “1987 ರ ನವೆಂಬರ್ ತಿಂಗಳಲ್ಲಿ ಒಂದು ದಿನ ಕರ್ಪೂರೀಜಿ ನನ್ನ ಮನೆಗೆ ಬಂದಿದ್ದರು. ಊಟ ಮುಗಿಸಿ ಹೊರಟು ನಿಂತಾಗ ಅವರು ಏಕಾಂತದಲ್ಲಿ ನನಗೆ 35 ಸಾವಿರ ರೂಪಾಯಿ ನೀಡಿ ‘ಕಪಿಲ್ ಭಾಯಿ ಇದು ನನ್ನ ಜೀವಮಾನದ ಗಳಿಕೆ. ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳಿರಿ, ನನ್ನ ಹಳ್ಳಿಯಲ್ಲಿ ಒಂದು ಮನೆ ಕಟ್ಟಿಸಿರಿ.’  ಈ ಹಣದಲ್ಲಿ ಮನೆ ಕಟ್ಟುವುದಿರಲಿ ಒಂದು ಕೋಣೆಯನ್ನೂ ಕಟ್ಟಿಸುವುದು ಸಾಧ್ಯವಿರಲಿಲ್ಲ ಎಂದು ಕಪಿಲ್ ದೇವ್‍ಗೆ ಅನ್ನಿಸಿತು. ದುರದೃಷ್ಟವಶಾತ್ ಕೆಲವೇ ತಿಂಗಳುಗಳಲ್ಲಿ ಕರ್ಪೂರಿ ಠಾಕೂರ್ ನಿಧನರಾದರು. ಅವರ ನಿಧನರಾದ ನಂತರ ಈ ಹಣವನ್ನು ಅವರ ಕುಟುಂಬಕ್ಕೆ ತಲುಪಿಸಲಾಯಿತು. ಪಿತೋಝಿಯಾದಲ್ಲಿ ಅವರ ಪೂರ್ವಜರ ಮನೆ ಇಂದು ಕೂಡ ಹಾಗೆ ನಿಂತಿದೆ. ಸಾರ್ವಜನಿಕ ಬದುಕನ್ನು ಬದುಕುವ ವ್ಯಕ್ತಿ ಮನೆ ಮಾರು ಎನ್ನುವ ಮಾಯೆಯಿಂದ ದೂರವಿರಬೇಕು ಎಂದು ಸಾರಲು ಆ ಮನೆ (ಗುಡಿಸಲು) ಬಿಹಾರದಲ್ಲಿ ಇನ್ನೂ ಸೂರಿಲ್ಲದವರ ಸಂಖ್ಯೆ ಕಡಿಮೆ ಇಲ್ಲ ಎನ್ನುವುದಕ್ಕೆ ಸಂಕೇತವೂ ಆಗಿದೆ.”

ಬಹುಶಃ ಗಾಂಧೀಜಿ, ಅಂಬೇಡ್ಕರ್, ಲೋಹಿಯಾರಂತಹ ರಾಜಕೀಯ ನಾಯಕರು ಹಾಗೂ ಚಿಂತಕರ ಅತ್ಯಂತ ಕಟ್ಟಾ ಅನುಯಾಯಿಯಾಗಿದ್ದ ಕರ್ಪೂರಿಯಂತಹ ರಾಜಕೀಯ ನಾಯಕರಿಂದ ಇದು ನಿರೀಕ್ಷಿತವೇ. ಏಕೆಂದರೆ ಅವರ ಸ್ನೇಹಿತ ಲಾಡಲಿ ಮೋಹನ್ ನಿಗಂ ಅವರ ಪ್ರಕಾರ “ಕರ್ಪೂರಿ ಕೇವಲ ವ್ಯಕ್ತಿಯಾಗಿರಲಿಲ್ಲ, ಅವರ ಬಳಿ ಒಂದು ಕನಸಿತ್ತು. ಕನಸು, ಸಂಕಲ್ಪ, ಹಾಗೂ ತ್ಯಾಗ ಇವು ಮೂರೂ ಕರ್ಪೂರಿಯವರನ್ನು ರೂಪಿಸಿದ್ದವು. ಅವರು ಹಗಲು ರಾತ್ರಿ ಬಡವರನ್ನು ಕುರಿತು ಚಿಂತಿಸುತ್ತಿದ್ದರು. ಅವರು ವ್ಯಕ್ತಿಯಾಗಿರಲಿಲ್ಲ, ರಾಜಕೀಯ ಹಾಗೂ ವೈಚಾರಿಕತೆಯ, ಒಂದು ಮೌಲ್ಯದ ಸಂಕೇತವಾಗಿದ್ದರು.”

ಪತ್ರಕರ್ತ ಅರುಣ್ ರಂಜನ್ ಪ್ರಕಾರ “ಹರಿಜನರ ಮೇಲಿನ ದೌರ್ಜನ್ಯ ಕರ್ಪೂರಿಯವರ ಮನಸ್ಸನ್ನು ತಲ್ಲಣಗೊಳಿಸುತ್ತಿತ್ತು. ಇಂದು ಅವರು ಬದುಕಿದ್ದರೆ ಪ್ರಾಯಶಃ ಹಿಂದಿ ಪ್ರದೇಶದಲ್ಲಿ ಹಿಂದುಳಿದವರ ಕೂಗು ಹರಿಜನರ ಶಕ್ತಿಯೊಂದಿಗೆ ಮಿಳಿತಗೊಂಡು ಬಲಶಾಲಿಯಗುತ್ತಿತ್ತು.” ತಮ್ಮ ಕಾಲೇಜಿನ ವಿದ್ಯಾರ್ಥಿ ದಿನಗಳಲ್ಲಿ ತದ ನಂತರ ಕರ್ಪೂರಿಯವರು ಲೋಹಿಯಾ, ಜಯಪ್ರಕಾಶ್ ನಾರಾಯಣ, ರಾಹುಲ ಸಾಂಕೃತ್ಯಾಯನ್, ರಾಮಕೃಷ್ಣ ಬೇನಿಪುರಿರಂತಹ ನಾಯಕರ ಗರಡಿಯಲ್ಲಿ ಪಳಗುತ್ತಾರೆ. ಆ ಕಾಲದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲಿಗೆ ಕೂಡ ಸೇರುತ್ತಾರೆ. ನಂತರ 1947 ರಲ್ಲಿ ಸ್ಥಾಪಿಸಿದ “ಅಖಿಲ ಭಾರತೀಯ ಹಿಂದ್ ಕಿಸಾನ್ ಪಂಚಾಯತ್” ಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ತಮ್ಮ ರಾಜಕೀಯ ಹಾಗೂ ಸಾಮಾಜಿಕ ಹೋರಾಟದ ಅಧ್ಯಾಯವನ್ನು ಪ್ರಾರಂಭಿಸುತ್ತಾರೆ. ಇಲ್ಲಿ ಇವರು ರಾಜಕೀಯ ಕಾರ್ಯಕರ್ತರೂ ಹೌದು, ಸಾಮಾಜಿಕ ಕಾರ್ಯಕರ್ತರೂ ಹೌದು. 1952 ರಲ್ಲಿ ದೇಶದಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ ತಾಜಪುರ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗುವುದರ ಮೂಲಕ 1980 ರವರೆಗೆ ನಿರಂತರವಾಗಿ ಗೆಲ್ಲುತ್ತಲೇ ಬಂದಿದ್ದಾರೆ. 1967 ರಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಮಂತ್ರಿಯಾಗಿ ತಮ್ಮ ಅಧಿಕಾರದ ರಾಜಕೀಯವನ್ನು ಆರಂಭಿಸಿದ ಕರ್ಪೂರಿ ಠಾಕೂರ್ 1969ರಲ್ಲಿ ಅಲ್ಪ ಕಾಲಾವಧಿಗೆ ಮುಖ್ಯಮಂತ್ರಿಯಾಗಿಯೂ ನಂತರ 1977 ರಿಂದ 1979 ರ ವರೆಗೆ 22  ತಿಂಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು.

ಈ 1969 ರಿಂದ 1980ರ ರಾಜಕೀಯ ಕಾಲಘಟ್ಟವನ್ನು ಕೆಲವೇ ಮಾತುಗಳಲ್ಲಿ ಬರೆದಿಡಲು ಸಾಧ್ಯವೇ ಇಲ್ಲ. ಅದೊಂದು ಅಸಾಧ್ಯ ಹಾಗೂ ಅಸಂಬದ್ಧ ತಿರುವುಗಳ ಮಹಾಕಥೆ. ಈ ಕಾಲಘಟ್ಟದಲ್ಲಿ ಕರ್ಪೂರಿ ಠಾಕೂರ್ ಅತ್ಯಂತ ಪ್ರಮುಖ ರಾಜಕಾರಣಿಯಾಗಿದ್ದರು. ಅನೇಕ ಸ್ಥಿತ್ಯಂತರಗಳಿಗೂ ಕಾರಣರಾಗಿದ್ದರು. ಪಕ್ಷಾಂತರಿಯೆಂದು ಅಪಾದನೆಗೆ ಗುರಿಯಾಗಿದ್ದರು. ಅನೇಕ ಸಂದರ್ಭಗಳಲ್ಲಿ ರಾಜಿ ಮಾಡಿಕೊಂಡಿದ್ದರು ಅದಕ್ಕಾಗಿ ಅಪಾರ ಪ್ರಮಾಣದಲ್ಲಿ ಟೀಕೆಗೆ ಗುರಿಯಾಗಿದ್ದರು. ಆದರೆ ಅವರು ರಾಜಿಯಾಗಿದ್ದು ತಮ್ಮ ಆಳದ ಧ್ಯೇಯವಾದ ಸಮಾಜವಾದದ ನೀತಿಗಳನ್ನು ಹೇಗಾದರೂ ಮಾಡಿ ಅನುಷ್ಟಾನಗೊಳಿಸಬೇಕು ಹಾಗೂ ಕಾಂಗ್ರೆಸ್ಸೇತರ ರಾಜಕೀಯ ಎನ್ನುವ ಒಂದು ಮಹಾ ಸಂಘಟನೆಗಳಿಗಾಗಿ ಮಾತ್ರ. ಇಲ್ಲಿ ವೈಯುಕ್ತಿಕ ಲಾಭದ ಅಂಶ ಲವಲೇಶವೂ ಇರಲಿಲ್ಲ. ಅದರೆ ಇವರ ಅಧಿಕಾರ ಅವಧಿಯ ಅತ್ಯಂತ ಕಪ್ಪು ಚುಕ್ಕೆ ಎಂದರೆ 1978 ರಲ್ಲಿ ಬಿಹಾರದ ಪಟ್ನಾ ಜಿಲ್ಲೆಯ ಬೆಲ್ಚಿಯಲ್ಲಿ  ಠಾಕೂರರ ತೋಳ್ಬಲ, ಸಂಕುಚಿತ ಮನೋಭಾವ, ದುರಹಂಕಾರದಿಂದ ನಡೆದ ದಲಿತರ ದಾರುಣ ಸಾಮೂಹಿಕ ಕಗ್ಗೊಲೆ.

ಇದು ಆ ರಾಜ್ಯದ ಮಧ್ಯಮ ಜಾತಿಯ ವರ್ಗಗಳು ನಡೆಸಿದ ನರಮೇಧವಾಗಿತ್ತು. ಆಗ ಹಿಂದುಳಿದವರ ನೇತಾರ ಹಾಗೂ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರ ಅಧಿಕಾರದ ಅವಧಿಯಲ್ಲಿ ಈ ಬರ್ಬರ ಕೃತ್ಯ ನಡೆದದ್ದು ಕರ್ಪೂರಿಯವರನ್ನು ಇನ್ನಿಲ್ಲದ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿಸಿತ್ತು. ಇದರ ಬಿಕ್ಕಟ್ಟಿನಿಂದ ಕರ್ಪೂರಿಯವರಿಗೆ ಹೊರ ಬರಲು ಕಡೆಯವರೆಗೂ ಸಾಧ್ಯವೇ ಅಗಲಿಲ್ಲ. ಇದರಿಂದಾದ ಮತ್ತೊಂದು ದುರಂತವೆಂದರೆ ಈ ಹಿಂದುಳಿದವರಿಗೆ ಪಾಠ ಕಲಿಸಲು ದಲಿತರ ಹಾಗೂ ಮೇಲ್ಜಾತಿಗಳ ಧೃವೀಕರಣ ನಡೆದದ್ದು. ಮತ್ತೆ ಇದಕ್ಕೆ ಬಲಿಯಾದದ್ದು ಕರ್ಪೂರಿ ಠಾಕೂರ್. ಆಗ ಈ ಧೃವೀಕರಣದ ಲಾಭ ಪಡೆದದ್ದು ಕಾಂಗ್ರೆಸ್ ಪಕ್ಷ. ತಾನು ನಂಬಿದ, ಬೆಳಿಸಿದ ಆದರ್ಶ ತತ್ವಗಳಿಗೆ ವ್ಯತಿರಿಕ್ತವಾಗಿ ನಡೆದ ಅಮಾನವೀಯ ಘಟನೆಗಳು ಹಾಗೂ ಇದಕ್ಕಾಗಿ ಕರ್ಪೂರಿ ತಲೆದಂಡ ಕೊಡಬೇಕಾಗಿರುವುದು ಇದು ಬಹುಶ ಸ್ವಾತಂತ್ರ್ಯ ಭಾರತದ ರಾಜಕೀಯದಲ್ಲಿ ಕರ್ಪೂರಿ ಠಾಕೂರರಂತಹ ದುರಂತ ರಾಜಕಾರಣಿ ಮತ್ತೊಬ್ಬರಿರಲಿಕ್ಕಿಲ್ಲವೆಂದೆನಿಸುತ್ತದೆ. ಇದರಿಂದ ಜರ್ಝರಿತಗೊಂಡ ಕರ್ಪೂರಿ ಮತ್ತೆ  ರಾಜಕೀಯವಾಗಿ ಮೇಲೇಳಲೇ ಇಲ್ಲ. ತಾವು ಅಧಿಕಾರದಲ್ಲಿದ್ದಂತಹ ಸಂದರ್ಭಗಳಲ್ಲಿ ಕರ್ಪೂರಿ ಅತ್ಯಂತ ದಕ್ಷತೆಯಿಂದ, ಪ್ರಗತಿಪರ ಕಾರ್ಯ ನೀತಿಗಳಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. 1969 ರಲ್ಲಿ ಬಿಹಾರನಲ್ಲಿ ಭೀಕರ ಬರ ಬಂದಾಗ ಅತ್ಯಂತ ಆಡಳಿತ ದಕ್ಷತೆಯ ಅನುಭವವನ್ನು, ರಾಜಕೀಯ ಇಚ್ಛಾಶಕ್ತಿಯನ್ನು ಬಳಸಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಕಾನೂನು ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು. ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಸಂವಿಧಾನ ಕಲ್ಪಿಸಿದ ಅವಕಾಶಗಳಿಗೆ ಅನುಗುಣವಾಗಿ ಸಾಮಾಜಿಕ ಹಾಗೂ ಆರ್ಥಿಕ ದೃಷ್ಟಿಯಿಂದ ಶೋಷಿತ, ದಲಿತ ಹಾಗೂ ಉಪೇಕ್ಷಿತ ವರ್ಗಕ್ಕೆ ಹಾಗೂ ಎಲ್ಲಾ ಜಾತಿಯ ಬಡ ಮಹಿಳೆಯರಿಗೆ ಮೀಸಲಾತಿ ನೀಡುವ ಕಾರ್ಯಕ್ರಮ ಜಾರಿಗೊಳಿಸಿದ್ದರು. ಇದು ಆ ಕಾಲದಲ್ಲಿ ಕರ್ಪೂರಿ ಸೂತ್ರವೆಂದೇ ಪ್ರಸಿದ್ದಿಯಾಗಿತ್ತು .ಇದು ಆ ಕಾಲದಲ್ಲಿ ಹಿಂದುಳಿದ ಹಾಗೂ ಅತಿ ಹಿಂದುಳಿದ ಜಾತಿಗಳಿಗೆ ರಾಜಕೀಯವಾಗಿ ಮನ್ನಣೆಗಳು, ಸ್ಥಾನಗಳು ದೊರಕತೊಡಗಿದವು.

[ಮೇಲಿನದಷ್ಟು ನರೇಂದ್ರ ಪಾಠಕ್ ಬರೆದ ಸುರುಕೋಡ ಅನುವಾದಿಸಿದ ಪುಸ್ತಕದಿಂದ ಆಯ್ದ ಕರ್ಪೂರಿಯವರ ಜೀವನದ ಸಂಕ್ಷಿಪ್ತ ಸಾರಾಂಶ.]

ಆದರೆ ಕರ್ಪೂರಿ ಠಾಕೂರ್ ಅವರು ಅತ್ಯಂತ ಮಾನವೀಯ ಹಾಗೂ ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ದುರ್ಬಲ ವರ್ಗದ ಸಬಲೀಕರಣಕ್ಕಾಗಿ ಜಾರಿಗೆ ತಂದಂತಹ ಈ ಸೂತ್ರಗಳು ಅನುಷ್ಟಾನಗೊಂಡು ಅದರೆ ತನ್ನ ಮೂಲ ಧ್ಯೇಯಕ್ಕೆ ವ್ಯತಿರಿಕ್ತವಾಗಿ ಪರಿಣಾಮ ಬೀರತೊಡಗಿದವು. ಈ ಮೂಲಕ ಸಬಲೀಕರಣದ ನೆಪದಲ್ಲಿ ಬಿಹಾರ್‌ನ ಹಿಂದುಳಿದ ವರ್ಗಗಳಲ್ಲಿ ಕೆಲವು ಬಲಿಷ್ಟ ಜಾತಿಗಳು ರಾಜಕೀಯ ಹಿಂಸಾಚಾರಕ್ಕಿಳಿದಿದ್ದು ಆ ಹಿಂಸಾಚಾರಕ್ಕೆ ಬಲಿಯಾದದ್ದು ದಲಿತರಾಗಿದ್ದರು. ಅಲ್ಲಿ ಜಾತೀಯ ಉನ್ಮಾದ ಸೃಷ್ಟಿಯಾಗತೊಡಗಿತ್ತು. ತಾವು ಅತ್ಯಂತ ನಿಸ್ವಾರ್ಥದಿಂದ, ಕಷ್ಟಪಟ್ಟು ಕಟ್ಟಿದ ಹಿಂದುಳಿದ ವರ್ಗಗಳ ಚಳುವಳಿ ಈ ರೀತಿ ಇತರೇ ಹಿಂದುಳಿದವರು (OBC)  ಹಾಗೂ ಅತಿ ಹಿಂದುಳಿದವರು (MBC) ಎಂದು ಮತ್ತೊಂದು ಮಟ್ಟದಲ್ಲಿ ವಿಭಜನೆಗೊಂಡದ್ದು ಕರ್ಪೂರಿಯವರಲ್ಲಿ ಇನ್ನಿಲ್ಲದ ಗೊಂದಲಗಳನ್ನು, ಸಿನಿಕತನವನ್ನು, ಸೋಲಿನ ಮನೋಭಾವನೆಯನ್ನು ಹುಟ್ಟಿ ಹಾಕಿದವು. ಎಪ್ಪತ್ತರ ದಶಕದ ಅಂತ್ಯದ ವೇಳೆಗೆ ಬಿಹಾರನಲ್ಲಿ ಶತ್ರುವಿನ ಶತ್ರು ನಮ್ಮ ಮಿತ್ರ ಅನ್ನುವ ಅವಕಾಶವಾದಿ ತತ್ವದಡಿ ಬ್ರಾಹ್ಮಣ ಹಾಗೂ ದಲಿತರ ಧೃವೀಕರಣ ಶುರುವಾಗಿತ್ತು. ಇದರ ಕರಾಳ ಒಡಬಂಡಿಕೆಗಳು ಹಾಗೂ ಇದರ ಮೂಲಕ ಮತ್ತೆ ದಲಿತರು ನಾಶವಾಗುತಿದ್ದದ್ದು, ಹಿಂದುಳಿದ ವರ್ಗಗಳಲ್ಲಿ ಕೆಲವು ಬಲಿಷ್ಟ ಜಾತಿಗಳು ತನ್ನ ಸಾರ್ವಭೌಮತ್ವಕ್ಕಾಗಿ ತೋಳ್ಬಲದ ರಾಜಕೀಯವನ್ನು ಒಂದು ಮಾದರಿಯನ್ನಾಗಿಯೇ ಜಾರಿಗೊಳಿಸಿದ್ದು, ಇವೆಲ್ಲವೂ ಕರ್ಪೂರಿ ಠಾಕೂರ್‌ರನ್ನು ಸಂಪೂರ್ಣ ಹತಾಶೆಗೆ ಕೆಡವಿತ್ತು. ಅವರ ಅಂತ್ಯ ಅತ್ಯಂತ ದುರಂತ ಅಧ್ಯಾಯದಲ್ಲಿ ಪರ್ಯಾವಸಾನಗೊಂಡಿತು. ಇಲ್ಲಿ ಸುಸಂಬದ್ಧವಾದ ಮತ್ತು ಪೂರ್ವ ಯೋಜನೆಗಳಿಲ್ಲದೆ ಮುಗ್ಧತೆಯೇ ಮೂಲಾಧಾರವನ್ನಾಗಿ ಮಾಡಿಕೊಂಡು, ಸಮಾಜವಾದದಲ್ಲಿ ಅತಿ ನಿಷ್ಟೆಯನ್ನು ಇಟ್ಟುಕೊಂಡು ಜನನಾಯಕರಾದ, ನಿಷ್ಟಾವಂತ, ಸತ್ಯವಂತ ಸಮಾಜವಾದಿಗಳ ಬದುಕು ಹೀಗೇನೇ ಎನ್ನುವ ತೆಳು ಚಿಂತನೆಗಳು ಕೂಡ ಹುಟ್ಟಿಕೊಂಡಿತು. (ಇಂಡಿಯಾದ ಸಮಾಜವಾದವನ್ನು ಲೋಹಿಯಾರ ಮೂಲಕ ತೆರೆದಿಡುತ್ತಾ, ಆ ಮೂಲಕ ಸಮಾಜವಾದದ ಚಿಂತನೆ ಹಾಗೂ ಚಳುವಳಿಗಳ ಅನೇಕ ಮಗ್ಗುಲುಗಳನ್ನು ಕನ್ನಡದಲ್ಲಿ ಸಮಾಜವಾದಿ ಚಿಂತಕರಾದ ಡಿ.ಎಸ್.ನಾಗಭೂಷಣ, ನಟರಾಜ್ ಹುಳಿಯಾರ್ ಅವರು ಅತ್ಯಂತ ಅಳವಾದ ಅಧ್ಯಯನಗಳನ್ನು ನಡೆಸಿ ಈ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ಸಂಪಾದಿಸಿದ್ದಾರೆ. ಈ ಕೃತಿಗಳು ನಿಜಕ್ಕೂ ಸಮಾಜವಾದಿ ಅಧ್ಯಯನಕ್ಕೆ ಅತ್ಯಂತ ಮೌಲಿಕ, ಸೃಜನಶೀಲ, ವೈಚಾರಿಕ ಕೃತಿಗಳು. ಅಲ್ಲದೆ ಹಸಂ ನಯೀಮ್ ಸುರುಕೋಡ ಅನುವಾದಿಸಿದ ಸಮಾಜವಾದದ ಪುಸ್ತಕಗಳು ನಿಜಕ್ಕೂ ಕೈದೀಪಗಳು). ಆದರೆ ಒಟ್ಟಾರೆಯಾಗಿ ಕರ್ಪೂರಿಯವರಿಗೆ ಸಮಾಜವಾದದ ಮಂತ್ರ ಗೊತ್ತಿತ್ತು, ಬಲು ಪರಿಪಕ್ವವಾಗಿಯೇ ಇದನ್ನು ಲೋಹಿಯಾರಿಂದ ಕಲಿತಿದ್ದರು. ಆದರೆ ಅದನ್ನು ಬಳಸುವ ಮಂತ್ರದಂಡ ಮಾತ್ರ ಆಗಾಗ್ಗೆ ಅಥವಾ ಅನೇಕ ವೇಳೆ ಕೈಕೊಡುತ್ತಿತ್ತು ಹಾಗೂ ಇವರು ಬಳಸಿದ ಮಂತ್ರದಂಡವೇ ದೋಷಪೂರಿತವಾಗಿತ್ತೇನೋ!

ಹಿಂದುಳಿದವರ ಸಬಲೀಕರಣ, ರಾಜಕೀಯವಾಗಿ ಅಧಿಕಾರವನ್ನು ಪಡೆದುಕೊಳ್ಳುವುದರ ಬಗೆಗೆ ಹಾಗೂ ಹಾವನೂರು ವರದಿಯನ್ನು ಜಾರಿಗೊಳಸಿದ್ದು, ಉಳುವವನೇ ಹೊಲದೊಡೆಯನೆಂಬ ಅತ್ಯಂತ ಪ್ರಗತಿಪರ ಕಾಯ್ದೆಯನ್ನು ಜಾರಿಗೆ ತಂದದ್ದು, ಇವೆಲ್ಲವನ್ನು ದೇವರಾಜ್ ಅರಸು ತಮ್ಮ ಕರ್ನಾಟಕ ರಾಜ್ಯದಲ್ಲಿ ಯಾವ ಹಿಂಸೆ ಹಾಗೂ ಪ್ರತಿ ಹಿಂಸೆ ಇಲ್ಲದೇ ತಮ್ಮ ರಾಜಕೀಯ ಚಾಣಾಕ್ಷತೆ, ಇಚ್ಛಾಶಕ್ತಿಯನ್ನು ಬಳಸಿ ಅನುಷ್ಟಾನಗೊಳಿಸಿದರು. ಆದರೆ ಇದೇ ಮಾದರಿ ಹಾಗೂ ಕ್ಷಮತೆ ಕರ್ಪೂರಿ ಠಾಕೂರರಿಗೆ ಏಕೆ ಸಾಧ್ಯವಾಗದೇ ಹೋಯ್ತು ಎಂದು ಈ ದೇಶದ ರಾಜಕೀಯ ಪಂಡಿತರು ಹಾಗೂ ಚಿಂತಕರು ಕರ್ಪೂರಿ ಅವರನ್ನು ದೇವರಾಜ ಅರಸರೊಂದಿಗೆ ಹೋಲಿಸಿ ವಿಶ್ಲೇಷಿಸುತ್ತಾರೆ. ಆದರೆ ಈ ಮಾದರಿಯ ಕಪ್ಪು ಬಿಳುಪಿನ  ವಿಶ್ಲೇಷಣೆ ನಿಜಕ್ಕೂ ಅಪೂರ್ಣವೆನಿಸುತ್ತದೆ. ಅಲ್ಲದೆ ಅನೇಕ ಸಂದರ್ಭಗಳಲ್ಲಿ ಅಮಾನವೀಯವೆನಿಸುತ್ತದೆ. ಏಕೆಂದರೆ ಅರಸು ಅವರಿಗೆ ಇದ್ದ ಅನೇಕ ಸವಲತ್ತುಗಳು ಕರ್ಪೂರಿ ಅವರಿಗೆ ಇರಲಿಲ್ಲ. ಮೊದಲನೇಯದಾಗಿ ರಾಜಕೀಯ ಪಕ್ಷ. ಆ ಕಾಲದಲ್ಲಿ ಕಾಂಗ್ರೆಸ್ ನಂತಹ ಬಲಿಷ್ಟ ರಾಷ್ಟ್ರೀಯ ಪಕ್ಷ ಅರಸರ ಬೆಂಬಲಕ್ಕಿತ್ತು. ಅವರಿಗೆ ಬಹುಮತವಿತ್ತು. ಈ ಸೌಕರ್ಯ ಕರ್ಪೂರಿ ಠಾಕೂರರಿಗೆ ಇರಲೇ ಇಲ್ಲ. ಇಲ್ಲಿ ಕರ್ಪೂರಿ ನೆಚ್ಚಿದ್ದು ಕೇವಲ ತಮ್ಮ ಆಳದ ಸಮಾಜವಾದದ ಅನುಭವ, ಸಾಮಾಜಿಕ ನ್ಯಾಯದ ಪರ ಒಲವು ಹಾಗೂ ಪ್ರೌಢಿಮೆ, ರಾಜಕೀಯ ಬಲಾಬಲ ಹಾಗೂ ತಮ್ಮ ಹಿಂದಿರುವ ರಾಜಕೀಯ ಕಾರ್ಯಕರ್ತರ ಸಂಖ್ಯೆ. ಇಲ್ಲಿ ಕರ್ಪೂರಿಯವರು ತಮ್ಮದಲ್ಲದ ತಪ್ಪಿಗೂ ದಯನೀಯವಾಗಿ ಸೋಲುತ್ತಾರೆ. ತಲೆದಂಡ ನೀಡಬೇಕಾಗುತ್ತದೆ. ಇನ್ನೊಂದು ಅತ್ಯಂತ ಪ್ರಮುಖ ಸಂಗತಿಯೆಂದರೆ ಕರ್ನಾಟಕದ ರಾಜಕೀಯ ನೆಲೆಗಳು ಹಾಗೂ ಜಾತಿಗಳ ಸಂರಚನೆಗೂ ಉತ್ತರ ಭಾರತದ ಅದರಲ್ಲೂ ಬಿಹಾರಿನಂತಹ ರಾಜ್ಯಗಳಲ್ಲಿನ ರಾಜಕೀಯ ಇತಿಹಾಸ ಹಾಗೂ ಜಾತಿಗಳ ಸಂರಚನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಕರ್ನಾಟಕದಲ್ಲಿನ ಪ್ರಗತಿಪರ ಹೋರಾಟ, ಬ್ರಾಹ್ಮಣೇತರ ಚಳುವಳಿಗಳಿಗೆ ಶತಮಾನ ಕಾಲದಷ್ಟು ಇತಿಹಾಸವಿದೆ.

1900 ರಲ್ಲಿ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ಶುರುವಾದ ಪ್ರಗತಿಪರ ಆಡಳಿತಾತ್ಮಕ ಯೋಜನೆಗಳು ಹಾಗೂ ಅವುಗಳ ಅನುಷ್ಟಾನ ಹಾಗೂ ಇಂದಿಗೆ 110 ವರ್ಷಗಳಷ್ಟು ಹಿಂದೆಯೇ ಹಿಂದುಳಿದವರ ಪರವಾದ ಮೀಸಲಾತಿ ಕರ್ನಾಟಕದಲ್ಲಿ ಕರಡು ನೀತಿಯನ್ನು ರೂಪಿಸಲಾಗಿತ್ತು. ಇಂತಹ ಅನೇಕ ಸಾಂಸ್ಕೃತಿಕ, ಮೀಸಲಾತಿ ಪರ ಚಳುವಳಿಗಳಿಂದ, ಶಾಂತವೇರಿ ಗೋಪಾಲ ಗೌಡರ ಹಾಗೂ ಅವರ ಸಮಾಜವಾದಿ ಗೆಳೆಯರ (ಲೇಖಕ ‘ಪೀರ್ ಬಾಷ’ ಬರೆದ ಕರ್ನಾಟಕ  ಸಮಾಜವಾದಿಗಳ ಸಂದರ್ಶನ ಆಧಾರಿತ ಪುಸ್ತಕ ಇದರ ಬಗ್ಗೆ ಅತ್ಯುತ್ತಮ ಒಳನೋಟಗಳನ್ನು ನೀಡುತ್ತದೆ. ಇದು ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.) ನಿಸ್ವಾರ್ಥ ಜನಪರ ಹೋರಾಟಗಳಿಂದ, ಎಂ.ಡಿ.ನಂಜುಂಡ ಸ್ವಾಮಿಯವರ ನೇತೃತ್ವದಲ್ಲಿನ ಸಮಾಜವಾದಿ ಹೋರಾಟಗಳಿಂದ, ಪ್ರಗತಿಪರ ಸಾಹಿತಿಗಳು, ಚಿಂತಕರಿಂದ ಕೂಡಿದ್ದ ಅರವತ್ತು, ಎಪ್ಪತ್ತರ ದಶಕದ ಕರ್ನಾಟಕದ ರಾಜಕೀಯ, ಸಾಮಾಜಿಕ, ಸಾಹಿತ್ಯಕ ಪರಿಸರಗಳು ಅರಸರಂತಹ ರಾಜಕಾರಣಿಗಳಿಗೆ ಸಾಮಾಜಿಕ ನ್ಯಾಯದ ಪರವಾಗಿ ಪ್ರಯೋಗ ನಡೆಸಲು ಇಲ್ಲಿನ ನೆಲವನ್ನು ಸಂಪೂರ್ಣವಾಗಿ ಹದಗೊಳಿಸಿದ್ದವು. ಇದು ಸಾಮಾಜಿಕ ನ್ಯಾಯಕ್ಕಾಗಿ ಪರಿಪಕ್ವ ವಾತಾವರಣವನ್ನೇ ನಿರ್ಮಿಸಿತ್ತು. ಆಗ ರಾಜಕೀಯ ಇಚ್ಛಾಶಕ್ತಿ, ಎಲ್ಲವನ್ನೂ ಸರಿದೂಗಿಸಬಲ್ಲ ಸಧೃಡ ನಾಯಕತ್ವ, ಹಾಗೂ ನಾಯಕನಲ್ಲಿ ಆಳದ ಕಳಕಳಿಯ ಅವಶ್ಯಕತೆ ಬೇಕಾಗಿತ್ತು. ಇದನ್ನು ದೇವರಾಜು ಅರಸು ಅವರು ಹಿಂದುಳಿದ ವರ್ಗಗಳನ್ನು ಮೇಲೆತ್ತುವುದಕ್ಕೆ ಸಂಪೂರ್ಣವಾಗಿ ಬಳಸಿಕೊಂಡರು. ಅಲ್ಲದೆ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪರವರಂತಹ ಕಾಂಗ್ರೆಸ್ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷಕ್ಕೆ ಅನೇಕ ರೀತಿಯ ಪ್ರಾಮಾಣಿಕತೆಯ, ದಕ್ಷ ಆಡಳಿತದ ಹೆಸರನ್ನೂ ತಂದಿತ್ತಿದ್ದರು. ಆದರೆ ಬಿಹಾರ ರಾಜ್ಯದ ಸಾಮಾಜಿಕ ಸ್ಥಿಗತಿಗಳು, ಅಲ್ಲಿನ ಪ್ರಗತಿಪರ ಹೋರಾಟದ ಇತಿಹಾಸಗಳು ಎಲ್ಲಿಯೂ ಕರ್ನಾಟಕಕ್ಕೆ ಸರಿಗಟ್ಟುವುದೇ ಇಲ್ಲ. ಇದಕ್ಕಾಗಿ ಮತ್ತೊಂದು ಬಗೆಯ ಚಿಂತನೆ ಹಾಗೂ ವಿಸ್ತಾರವಾದ ವಿಶ್ಲೇಷಣೆಯನ್ನು ಮಾಡಬೇಕಾಗುತ್ತದೆ. ಆದರೆ ಕಡೆಯದಾಗಿ 80 ದಶಕದ ಆರಂಭದಲ್ಲಿ  ದೇವರಾಜು ಅರಸು ಹಾಗೂ ಕರ್ಪೂರಿ ಠಾಕೂರ್ ಇಬ್ಬರೂ ಹಿಂದುಳಿದ ನಾಯಕರು ತಾವು ನಂಬಿದ ತಮ್ಮ ಪಕ್ಷ ತಮ್ಮನ್ನು ಅನಾಮತ್ತಾಗಿ ಹಾಗೂ ಅಮಾನವೀಯವಾಗಿ ಕೈ ಬಿಟ್ಟಿದ್ದರ ಪರಿಣಾಮವಾಗಿ, ತಮ್ಮ  ಹಿಂಬಾಲಕರು ಹಾಗೂ ತಾವು ರಾಜಕೀಯವಾಗಿ ಬೆಳಸಿದ ಹಿಂದುಳಿದ ನಾಯಕರು ತಾವು ಅತಂತ್ರರಾದಂತಹ ಸಂದರ್ಭದಲ್ಲಿ ತಮಗೆ ಕೈಕೊಟ್ಟಿದ್ದರ ಪರಿಣಾಮವಾಗಿ ಹಾಗೂ ಅಂದಿನ ಬದಲಾದ ರಾಜಕೀಯ ಸಂದರ್ಭದಲ್ಲಿ  ಎಲ್ಲಿಯೂ ಸಲ್ಲದವರಾಗಿ, ತಮ್ಮದಲ್ಲದ ತಪ್ಪಿಗೆ ರಾಜಕೀಯವಾಗಿ ನಗಣ್ಯವಾಗಿ ಎಂಬತ್ತರ ದಶಕದ ಆರಂಭದ ವೇಳೆಗೆ ಸಂಪೂರ್ಣವಾಗಿ ಏಕಾಂಗಿಗಳಾದರು, ಅಸಹಾಯಕರಾಗಿದ್ದರು, ದುರಂತ ನಾಯಕರ ಹಣೆಪಟ್ಟಿ ಹೊತ್ತಿದ್ದರು.

ಅತಿ ಹಿಂದುಳಿದ ಜಾತಿಗಳಿಂದ ಬಂದ ಕರ್ಪೂರಿ ಹಾಗೂ ದೇವರಾಜ್ ಅರಸ್ ತಮ್ಮ ಸಕ್ರಿಯ ರಾಜಕಾರಣದುದ್ದಕ್ಕೂ ಜನನಾಯಕರಾಗಿ ಹೊರಹೊಮ್ಮಿದರೇ ಹೊರತಾಗಿ ಎಲ್ಲಿಯೂ ಜಾತಿ ನಾಯಕರಾಗಲಿಲ್ಲ. ಯಾವುದೇ ಜಾತಿಯ ಮುಖಂಡರಾಗಲಿಲ್ಲ. ಬದಲಾಗಿ ಇವರ ಕಾಲದಲ್ಲಿ ಬಲಿಷ್ಟ ಜಾತಿಗಳ ಅಹಮ್, ದುರಹಂಕಾರಗಳು ತೆರೆಮರೆಗೆ ಸರಿದು ಅನೇಕ ಬಗೆಯ ಹಿಂದುಳಿದ ಜಾತಿಗಳು ಪ್ರಾಮುಖ್ಯತೆ ಪಡೆದು ವರ್ಗಗಳಾಗಿ ಪರಿವರ್ತನೆಗೊಂಡು ವ್ಯವಸ್ಥೆಯಲ್ಲಿ ತಮ್ಮದೇ ಆದ ಒಂದು ನೆಲೆ ಹಾಗೂ ಬೆಲೆಯನ್ನು ಕಂಡುಕೊಂಡವು. ಇದರ ಫಲವಾಗಿಯೇ ಮಹತ್ವಾಕಾಂಕ್ಷಿ ರಾಜಕಾರಣಿಯೊಬ್ಬನಿಗೆ ತನ್ನಲ್ಲಿನ ಅನೇಕ ದೌರ್ಬಲ್ಯಗಳ ನಡುವೆಯೂ ಜಾತ್ಯಾತೀತನಾಗಿ ಜನನಾಯಕರಾಗಿ ರಾಜಕೀಯವಾಗಿ ಮನ್ನಣೆಗಳಿಸುವುದು ಅರವತ್ತರ ದಶಕದ ಅಂತ್ಯದಲ್ಲಿ, ಎಪ್ಪತ್ತರ ದಶಕ, ಎಂಬತ್ತರ ದಶಕದ ಮಧ್ಯದವರೆಗೂ ಒಂದು ಮಾನದಂಡವಾಗಿಬಿಟ್ಟಿತು. ಆಗ ರಾಜಕಾರಣಿಗಳ ಜಾತೀಯತೆ ಬಹಿರಂಗವಾಗಿ ಚರ್ಚಿತವಾಗುತ್ತಿದ್ದುದು ಅವರು ಭ್ರಷ್ಟಾಚಾರದ ಹಗರಣಗಳಲ್ಲಿ ಸಿಕ್ಕಿಕೊಂಡಾಗ, ತಮ್ಮ ಜಾತಿಯ ಶಾಸಕ ಅಥವಾ ಮಂತ್ರಿಯನ್ನು ಹಿಡಿದು ಸರ್ಕಾರಿ ಉದ್ಯೋಗಗಳನ್ನು, ಬಿಸಿನೆಸ್ ಪರ್ಮಿಟ್ ಪಡೆದುಕೊಳ್ಳುವಾಗ ಮತ್ತು ಚುನಾವಣೆಗಳ ಸಂದರ್ಭಗಳಲ್ಲಿ ಮಾತ್ರವೇ ಹೊರತು ಜಾತಿಯೊಂದರ ಪ್ರಶ್ನಾತೀತ, ಪ್ರಭಾವಶಾಲಿ ರಾಜಕಾರಣಿ ಎನ್ನುವ ಒಂದು ಸರ್ವಕಾಲಿಕ ಶಾಶ್ವತ ರಾಜಕೀಯ ವಾತಾವರಣವೇ ಇರಲಿಲ್ಲ. ಇದೆಲ್ಲ ಬದಲಾದದ್ದು ವಿ.ಪಿ.ಸಿಂಗ್ ಸಂಘ ಪರಿವಾರದ ಕೋಮುವಾದಿ ರಾಜಕೀಯವನ್ನು ಹತ್ತಿಕ್ಕಲು ಅತ್ಯಂತ ಮುಗ್ಧತೆಯಿಂದ, ಪ್ರಾಮಾಣಿಕತೆಯಿಂದ, ಯಾವುದೇ ಸಿದ್ಧತೆಗಳಿಲ್ಲದೆಯೇ ತಂದಂತಹ ಮಂಡಲ್ ವರದಿಯ ನಂತರ. ಇದರ ಬಗ್ಗೆ ಅನೇಕ ರೀತಿಯ ಚರ್ಚೆಗಳಾಗಿವೆ. ಆದರೆ ಇಂದು ನಮ್ಮ ಕರ್ನಾಟಕದ ದುರಂತವೆಂದರೆ  ಈ ಜಾತ್ಯಾತೀತೆಯ ಅತ್ಯಂತ ಸೂಕ್ಷ್ಮ ನೇಯ್ಗೆಯನ್ನು ಕರ್ನಾಟಕದ ರಾಜಕೀಯದಲ್ಲಿ ಧ್ವಂಸಗೊಳಿಸಿದ ಕುಖ್ಯಾತಿ ಈ  ಈ ಯಡಿಯೂರಪ್ಪನವರಂತಹ ಅತ್ಯಂತ ಹಾಸ್ಯಾಸ್ಪದ, ಭ್ರಷ್ಟ ರಾಜಕಾರಣಿಗಳದ್ದು  ಹಾಗೂ ಇದಕ್ಕೆ ಅಷ್ಟೇ ಜವಾಬ್ದಾರರು ಈ ಕುಕೃತ್ಯಕ್ಕೆ ಬೆಂಬಲ ನೀಡಿದ ಬಿಜೆಪಿ ಹಾಗೂ ಆರ್.ಎಸ್.ಎಸ್. ನವರದ್ದು. ಬಹುಪಾಲು ಮಠಗಳಿಗೆ ಜನರ ರೊಕ್ಕವನ್ನು, ಸರ್ಕಾರದ ಹಣವನ್ನು ಕಾನೂನು ಬಾಹಿರವಾಗಿ ಬೇಕಾ ಬಿಟ್ಟಿಯಾಗಿ ಹಂಚಿ ಬ್ಲಾಕ್‍ಮೇಲ್ ತಂತ್ರದ ಮೂಲಕ ಮಠಗಳನ್ನು ಹಾಗೂ ಮಠಾಧಿ ಪತಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಾ ಪ್ರಜಾಪ್ರಭುತ್ವದ ಮೂಲ ನೀತಿಗಳನ್ನೇ ಧ್ವಸಂ ಗೊಳಿಸಿಬಿಟ್ಟರು ಈ ಯಡಿಯೂರಪ್ಪನವರು. ಸ್ವಜನ ಪಕ್ಷ ಪಾತವೆನ್ನುವುದು, ಸ್ವಜಾತಿಯ ನಾಯಕನೆನ್ನುವುದರ ಬಗೆಗಿನ ವ್ಯಾಮೋಹ ಇಂದು ಕರ್ನಾಟಕ ರಾಜಕೀಯದಲ್ಲಿ ಹಾಗೂ ಸಮಾಜದಲ್ಲಿ ಒಂದು ಪ್ರಚ್ಛನ್ನ ಸ್ವೇಚ್ಛಾಚ್ಚಾರ ತೆವಲಾಗಿ ನಿರ್ಮಿಸಿ ಬಿಟ್ಟಿದ್ದಾರೆ ಈ ಯಡಿಯೂರಪ್ಪ ಹಾಗೂ ಬಿಜೆಪಿ. ಇಲ್ಲದಿದ್ದರೆ ಈ ನಿರಾಣಿ, ಈ ರೇಣುಕಾಚಾರ್ಯ, ಈ ಗೋಪಾಲಕೃಷ್ಣ, ಈ ಹರೀಶ, ಈ ಬೊಮ್ಮಾಯಿ,  ಇತ್ಯಾದಿಗಳು ಇಷ್ಟೊಂದು ಅನಾಚಾರ, ಸ್ವೇಚ್ಛಾಚಾರದ, ಬೇಜಾವಬ್ದಾರಿಯ, ಸ್ವಚ್ಛಂದ ಜಾತೀವಾದದ ಪ್ರವೃತ್ತಿಗಳನ್ನು ಬಹಿರಂಗವಾಗಿ ನಡೆದುಕೊಳ್ಳುತ್ತಿರುವುದಕ್ಕೆ ಕಾರಣ ಜನನಾಯಕನಾಗುವ ಮೂಲಕ ರಾಜಕಾರಣಿ ಎನ್ನುವ ತತ್ವ ಹೆಚ್ಚೂ ಕಡಿಮೆ ಕಣ್ಮರೆಯಾಗಿ ಜಾತಿ ನಾಯಕನಾಗಿ ರಾಜಕಾರಣಿ ಎನ್ನುವ ಸಿದ್ಧಾಂತ ಇಲ್ಲಿ ತಳವೂರಿಬಿಟ್ಟಿರುವುದು ಹಾಗೂ ಸರ್ಕಾರದ ರೊಕ್ಕವನ್ನು ಪಡೆದಂತಹ  ಮಠಗಳು ಜಾತಿ ಆಧಾರದ ಮೇಲೆ ಇವರನ್ನು ಬೆಂಬಲಿಸುತ್ತವೆ!

ಅದಕ್ಕೇ ಇವರು ಉಪ ಚುನಾವಣೆಗಳಲ್ಲಿ ಜನ ನಮ್ಮನ್ನು ಗೆಲ್ಲಿಸುತ್ತಿಲ್ಲವೇ, ನನ್ನನ್ನು ನಾಯಕನನ್ನಾಗಿ ಮಾಡಿ ನಿಮಗೆ 150 ಸೀಟು ಗೆಲ್ಲಿಸುತ್ತೇನೆ ಎಂದು ಅತ್ಯಂತ ದುರಹಂಕಾರದಿಂದ ನಮ್ಮ ರಾಜ್ಯದ ಜನತೆಯ ಆತ್ಮ ಸಾಕ್ಷಿಯನ್ನೇ ಪ್ರಶ್ನಿಸುತ್ತಿದ್ದಾರೆ ಹಾಗೂ ಈ ರಾಜ್ಯದ ಜನತೆಯ ನೈತಿಕತೆಯ ಮೂಲ ಬೇರನ್ನು ಹೆಚ್ಚೂ ಕಡಿಮೆ ವಿಷಗೊಳಿಸಿದ್ದಾರೆ ಈ ಯಡಿಯೂರಪ್ಪ ಹಾಗೂ ಬಿಜೆಪಿ. ಇದು ನಿಜಕ್ಕೂ ನಮ್ಮೆಲ್ಲರಿಗೆ ಅವಮಾನವೇ ಸರಿ. ಅಲ್ಲದೆ ಇದೇ ಯಡಿಯೂರಪ್ಪನವರು  ಕರ್ನಾಟಕದ ಸಕಲ ವೀರಶೈವ ಜಾತಿಗೆ ಏಕಮೇದ್ವೇತೀಯ ವಾರಸುದಾರ ಹಾಗೂ ನಾಯಕ ಎನ್ನುವ ಠೇಂಕಾರದ ಜೊತೆಗೆ ತಮ್ಮ ಹುಟ್ಟು ಹಬ್ಬದಂದು ಹಿಂದುಳಿದ ವರ್ಗಗಳ ನಾಯಕನಾಗಲು ಹೊರಟಿದ್ದಾರೆ!! ಇವರ ಬಫೂನ್ ಗಿರಿಗೆ, ಅಧ್ವಾನಗಳಿಗೆ ಮತ್ತೆ ನಾವೆಲ್ಲ ಸಾಕ್ಷಿಯಾಗಬೇಕಾಗಿದೆ!!!  ಈ ಕಾಂಗ್ರೆಸ್‍ನ0ತಹ ಆತ್ಮಸಾಕ್ಷಿಯನ್ನೇ ಕಳೆದುಕೊಂಡಂತಹ, ಸಂಪೂರ್ಣವಾಗಿ ಸೋತ, ದಿಕ್ಕು ದೆಸೆಯಿಲ್ಲದ, ನೆಲಕಚ್ಚಿದ ವಿರೋಧ ಪಕ್ಷವಿರುವಾಗ ಕರ್ನಾಟಕಕ್ಕೆ ಮತ್ತೆ ಮತ್ತೆ ಪ್ರಾಥಮಿಕವಾಗಿ, ತುರ್ತಾಗಿ ಬೇಕಾಗಿರುವುದು ಕರ್ಪೂರಿ ಠಾಕೂರ್ ಅವರ ಸಮಾಜವಾದದ ಆದರ್ಶ ಮತ್ತು ದಣಿವರಿಯದ ಹೋರಾಟದ, ಪ್ರಾಮಾಣಿಕತೆಯ ರಾಜಕಾರಣದ ಮಾದರಿ (ಅನೇಕ ಮಿತಿಗಳ ನಡುವೆಯೂ). ನಂತರವಷ್ಟೇ ನಾವು ಗಾಂಧಿ, ಲೋಹಿಯಾ, ಅಂಬೇಡ್ಕರ್ ಅವರನ್ನು ಮುಟ್ಟಲು ಸಾಧ್ಯ.

ಇದೆಲ್ಲದರ ಈ ಅವಾಂತಕಾರಿ, ಗೊಂದಲಗಳ ರಾಜಕೀಯದ ಮಧ್ಯೆ, ಇಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ 2012 ರ ಸಂವತ್ಸರದಲ್ಲಿ ಅತ್ಯಂತ ಭ್ರಷ್ಟ, ಹಾಗೂ ಸಂಪೂರ್ಣವಾಗಿ ಹಾದಿ ತಪ್ಪಿದ ಶ್ರೀರಾಮುಲು ಎನ್ನುವ ಅವಕಾಶವಾದಿ ನಾಯಕ ತಾನೊಬ್ಬ ಹಿಂದುಳಿದ ವರ್ಗಗಳ ನಾಯಕನಾಗಲು ಹೊರಟಿದ್ದಾರೆ. ಅಮಾಯಕತೆಯ ನಟನೆಯನ್ನು ಮಾಡುತ್ತಿದ್ದಾರೆ. ಮಳ್ಳಿ ತರಹದ ವರ್ತನೆಯನ್ನು ತೋರಿಸುತ್ತಿದ್ದಾರೆ. ಅದಕ್ಕಾಗಿ ಇಷ್ಟರಲ್ಲೇ ಹಿಂದುಳಿದವರ ಬಡವರ ಪಕ್ಷ ಸ್ಥಾಪಿಸುತ್ತೇನೆ ಎಂದು ಪದೇ ಪದೇ ಹೆದರಿಸುತ್ತಿದ್ದಾರೆ. ಈ ಶ್ರೀರಾಮುಲು ಎನ್ನುವ ಹಿಂದುಳಿದ ನಾಯಕ ಯಾವುದೇ ಸಿದ್ಧಾಂತದ ಹಿನ್ನೆಲೆ ಇಲ್ಲದಂತಹ ನಾಯಕ. ಇವರ ಸಿದ್ಧಾಂತವೆಂದರೆ ಒಂದೇ ಅದು ತೋಳ್ಬಲದ ರಾಜಕೀಯ, ಹಣವನ್ನು ಚೆಲ್ಲಿಯೇ ಅಧಿಕಾರವನ್ನು ಗಳಿಸಬೇಕು ಎನ್ನುವ ಏಕಸೂತ್ರದ, ಆತ್ಮದ್ರೋಹದ, ಅವಕಾಶವಾದಿ ರಾಜಕೀಯ. ಅಕ್ರಮವಾಗಿ, ಭ್ರಷ್ಟ ತನದಿಂದ ಸಂಪಾದಿಸಿದ ರೊಕ್ಕವನ್ನು ಮುಗ್ಧ ಜನಗಳಿಗೆ ಭಿಕ್ಷೆಯಂತೆ ಪುಡಿಗಾಸನ್ನು ನೀಡಿ ಅವರನ್ನು ತನ್ನ ಹಂಗಿನರಮನೆಯೊಳಗೆ ಬಂಧಿಸಿರುವುದು ಇಡೀ ಬಳ್ಳಾರಿ ಜಿಲ್ಲೆಯಾದ್ಯಾಂತ ಕಣ್ಣಿಗೆ ರಾಚುತ್ತದೆ. ನಾನು ಹಾಗೂ ನನ್ನ ಸ್ನೇಹಿತರು ಅಲ್ಲಿನ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ನಿರಂತರವಾಗಿ ತಿರುಗಿದಾಗ ಇದು ನಮಗೆ ಸ್ಪಷ್ಟವಾಗಿ ಗೊತ್ತಾಯಿತು. ಇದನ್ನೇ ನಮ್ಮ ಕೆಲ ಪತ್ರಕರ್ತರು ಇದು ಶ್ರೀರಾಮುಲು ಅವರ ಜನಪ್ರಿಯತೆ ಎಂದು ಇನ್ನಿಲ್ಲದೆ ಬಡಬಡಿಸುತ್ತಿದ್ದಾರೆ. ಇದು ಆತ್ಮವಂಚನೆಯಲ್ಲದೆ ಮತ್ತಿನ್ನೇನಲ್ಲ. ಇದನ್ನು ಅರ್ಥೈಸಲು ಅಂತಹ ಸಂಶೋಧನೆಗಳೇನು ಬೇಕಾಗಿಲ್ಲ. ಅಲ್ಲದೆ ಈ ರೀತಿಯಾಗಿ ಬೇಕಾಬಿಟ್ಟಿಯಾಗಿ ಹಣವನ್ನು ಚೆಲ್ಲಲ್ಲು ರೆಡ್ಡಿ ಸೋದರರೊಂದಿಗೆ  ಕೈಜೋಡೀಸಿ ರಾಜ್ಯದ, ಬಳ್ಳಾರಿ ಜಿಲ್ಲೆಯ ಸಂಪತ್ತನ್ನು ಲೂಟಿ ಮಾಡಿದ ರೊಕ್ಕ ಇದ್ದೇ ಇದೆಯಲ್ಲ!! ಇವರಿಗೆ ಯಾವುದೇ ಪಕ್ಷದ ಸಿದ್ಧಾಂತಗಳೂ ಕೇವಲ ಅಧಿಕಾರ ಗ್ರಹಣಕ್ಕಾಗಿ ಮಾತ್ರ. ಯಾವುದೇ ಆದರ್ಶಗಳಿಲ್ಲದ, ಸಿದ್ಧಾಂತಗಳಿಲ್ಲದ ಶ್ರೀರಾಮುಲು ಅವರಂತಹ ರಾಜಕಾರಣಿಯಿಂದ ಇಂತಹ ನಡೆಗಳು ಸಾಮಾನ್ಯವೆನ್ನಬಹುದು, ಆದರೆ ಇಲ್ಲಿನ ದುರಂತವೆಂದರೆ ಇಂತಹ ಭ್ರಷ್ಟ ಶ್ರೀರಾಮುಲು ಅವರಿಗೆ ದೇವರಾಜ್ ಅರಸರ ವೇಷವನ್ನು ತೊಡಿಸುವಂತೆ ಇನ್ನಿಲ್ಲದ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕೆ ಬಳಸಿಕೊಳ್ಳಲಾಗುತ್ತಿರುವುದು ವಾಲ್ಮೀಕಿ ಜನಾಂಗವನ್ನು. ಇದಕ್ಕಿಂತಲೂ ದುರಂತ ಬೇರೊಂದಿಲ್ಲವೆನಿಸುತ್ತದೆ. ನೂರು ಸುಳ್ಳುಗಳನ್ನು ಪದೇ ಪದೇ ಹೇಳಿ ಅದನ್ನು ಸತ್ಯವೆನ್ನುವಂತೆ ಭ್ರಮೆ ಮೂಡಿಸುವ ಇಂತಹ ಒಂದು ದುಷ್‍ಕೃತ್ಯ ನಿಜಕ್ಕೂ ಖಂಡನೀಯ. ಇದೆಲ್ಲವನ್ನೂ ಮತ್ತೆ ಮತ್ತೆ ಏತಕ್ಕೆ ಹೇಳ ಬೇಕಾಗಿದೆಯೆಂದರೆ ಎಲ್ಲವೂ ನೆಲಕಚ್ಚಿದಂತಹ ಇಂದಿನ ರಾಜಕೀಯ ಸನ್ನಿವೇಶದಲ್ಲಿ ಈ ಭ್ರಷ್ಟ ನಾಯಕ ಶ್ರೀರಾಮುಲು ತನ್ನಲ್ಲಿರುವ ಎಲ್ಲಾ ಅಸ್ತ್ರಗಳನ್ನೂ ಬಳಸುತ್ತಿದ್ದಾರೆ. ತಾವೊಬ್ಬ ಅಮಾಯಕರಂತೆಯೂ, ಒಬ್ಬಂಟಿಯಂತೆಯೂ ತೋರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸದ್ಯಕ್ಕೆ ಈ ಶ್ರೀರಾಮುಲುಗಿರುವ ಪ್ರಬಲ ಅಸ್ತ್ರವೆಂದರೆ ಅಹಿಂದ ಸಂಘಟನೆ. ಈ ನಾಯಕ ಇಂದು ಅಕ್ಷರಶಹ ತಬ್ಬಲಿಯಾಗಿರುವ, ದಿಕ್ಕಿಲ್ಲದ, ಅನಾಯಕತ್ವದ ಈ ಅಹಿಂದ ಸಂಘಟನೆಗೆ ತನ್ನ ನಾಯಕತ್ವದ ಸ್ಪರ್ಶ ನೀಡುವುದರ ಮೂಲಕ ಅದನ್ನು ಮತ್ತೆ ಪುನುರುಜ್ಜೀವನಗೊಳಿಸುವ ಒಂದಂಶದ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ನಮ್ಮಲ್ಲಿನ ಕೆಲವು  ಸಂಘಟನೆಗಳನ್ನು ಆಪೋಶನ ತೆಗೆದುಕೊಳ್ಳುವ ಸೂಚನೆಗಳು ಗೋಚರಿಸುತ್ತಿವೆ. ಆದರೆ ಈ ಶ್ರೀರಾಮುಲುವಿನ ಈ ಕುಟಿಲತೆಗೆ, ಗುಪ್ತ ಕಾರ್ಯಾಚರಣೆಗೆ ನಮ್ಮಲ್ಲಿನ ಈ ಕೆಲವು ಸಂಘಟನೆಗಳು ಬಲಿಯಾಗುತ್ತವೆಯೇ? ಎಲ್ಲಕ್ಕೂ ಕಾಲವೇ ಉತ್ತರ ನೀಡಬೇಕು.

ಆದರೆ ಒಂದಂತೂ ಸ್ಪಷ್ಟ. ಮುಂದಿನ ತಲೆಮಾರಿಗೆ ನಾವೆಲ್ಲ ನಿರ್ಮಿಸಬೇಕಾದ ವೇದಿಕೆ ಹಾಗೂ ಒಂದು ಸಹನಶೀಲ, ಸೆಕ್ಯುಲರ್ ವ್ಯವಸ್ಥೆ ಇದಂತೂ ಖಂಡಿತ ಅಲ್ಲ. ಯಾವುದೇ ಕಾರಣಕ್ಕಾಗಿಯಾಗಲೀ ನಮ್ಮ ರಾಜ್ಯದ ಈ ಸಂವೇದನಾಶೀಲ, ಪ್ರಗತಿಪರ ಚಿಂತನೆ, ಸಾಮಾಜಿಕ ಬದುಕು, ಸಂಘಟನೆ ಹಾಗೂ ರಾಜಕಾರಣ ನಮ್ಮ ರಾಜ್ಯದ ಸಂಪನ್ಮೂಲವನ್ನು ಕೊಳ್ಳೆ ಹೊಡೆದ ರೆಡ್ಡಿಗಳ ಸಂಗಾತಿಯಾಗಿದ್ದ ಈ ಶ್ರೀರಾಮುಲುನಂತಹ ರಾಜಕಾರಣಿಗೆ ಎಂದೂ ಬಲಿಯಾಗಲಾರೆವೆಂಬ ಎಚ್ಚರಿಕೆ, ಆತ್ಮಸಾಕ್ಷಿಯನ್ನು ತಮ್ಮೊಳಗೆ ಸದಾ ಜೀವಂತವಾಗಿಟ್ಟು ಕೊಳ್ಳಬೇಕಾಗಿದೆ. ಈ ಮೂಲಕ ಶ್ರೀರಾಮುಲು ತೋಡಿದ ಖೆಡ್ಡಾಗೆ ಆಗಲೇ ಬಂದು ಬೀಳುತ್ತಿರುವ ಅಸಹಾಯಕ ಹಿಂದುಳಿದ ವರ್ಗಗಳನ್ನು, ಅಮಾಯಕ ತರುಣರನ್ನೂ ಇದರಿಂದ ಪಾರುಮಾಡಬೇಕಾದ ಜವಬ್ದಾರಿಯೂ ಕನ್ನಡದ ಪ್ರಜ್ಞಾವಂತರ ಮೇಲಿದೆ. ಈಗಾಗಲೇ ಹಿಂದುಳಿದ ವರ್ಗಗಳ ಅಮಾಯಕ ತರುಣರು ಕೇಸರಿ ಪಡೆಗೆ ಬಲಿಯಾಗಿ ತಮ್ಮ ಜೀವನವನ್ನು ನಾಶಪಡಿಸಿಕೊಂಡಿದ್ದಾಗಿದೆ. ಇನ್ನು ಶ್ರೀರಾಮುಲು ಇದಕ್ಕೆ ತಮ್ಮ ಕೈ ಜೋಡಿಸಿದರೆ ಕೇಸರಿಕರಣಗೊಂಡ ಈ ಹಿಂದುಳಿದ ವರ್ಗಗಳ ಅಮಾಯಕರಿಗೆ ಮುಂದಿನ ಭವಿಷ್ಯವೇ ಅತಂತ್ರವಾಗುತ್ತದೆ. ಇಲ್ಲಿ ನಮಗೆ ಗಾಂಧಿ, ಲೋಹಿಯಾ, ಅಂಬೇಡ್ಕರ್ ರವರಂತಹ ಜೊತೆ ಜೊತೆಗೆ ಕನಿಷ್ಟ ಕರ್ಪೂರಿ ಠಾಕೂರರವರ ಸಮಾಜವಾದಿ ಜೀವನ ಹಾಗೂ ಸಮಾಜವಾದದ ನೆಲೆಗಟ್ಟಿನ ರಾಜಕೀಯ, ಸಾಮಾಜಿಕ ಹೋರಾಟಗಳು, ಆರವತ್ತರ, ಎಪ್ಪತ್ತರ ದಶಕದ ಅವರ ಅಸಹಾಯಕತೆಗಳು, ಅವರ ಅತ್ಯಂತ ಸರಳ ಜೀವನ ಶೈಲಿ, ನಮ್ಮಲ್ಲರಿಗೆ ಮುಂದಿನ ನಡೆಗಳ ಬಗೆಗೆ ದಾರಿ ತೋರಬೇಕಲ್ಲವೇ, ಇಂತಹ ಸಂದರ್ಭದಲ್ಲಿಯೇ  ಏನಿಲ್ಲದ್ದಿದ್ದರೂ ಶ್ರೀರಾಮುಲುವಿನ ನೆಪದಲ್ಲಿ ಈ  ಧೀಮಂತ ನಾಯಕರಾದ ದೇವರಾಜ್ ಅರಸ್  ಹೆಸರು ಕೆಡುವುದಕ್ಕಿಂತ ಮೊದಲು ಹಿಂದುಳಿದವರ ನಾಯಕತ್ವದ ನಿಜವಾದ ಮಾದರಿ (ಅನೇಕ ಮಿತಿಗಳ ನಡುವೆಯೂ) ಈ ದೇವರಾಜ ಅರಸ್ ಹಾಗೂ ಕರ್ಪೂರಿ ಠಾಕೂರ್ ಅವರದ್ದು, ಅವರ ಶೈಲಿಯದ್ದು ಎಂದು ನಾವು ವಿವರವಾಗಿ  ಮತ್ತೆ ಮತ್ತೆ ಮಾತನಾಡಬೇಕಲ್ಲವೇ, ಕನಿಷ್ಟ ಈ ಮೂಲಕವಾದರೂ ದೇವರಾಜ್ ಅರಸ್ ಹಾಗೂ ಕರ್ಪೂರಿ ಠಾಕೂರರ ರಾಜಕೀಯ ಮಾದರಿಗಳನ್ನು, ಸಾಮಾಜಿಕ ನ್ಯಾಯದ ನಿಜದ ಕಳಕಳಿಗಳನ್ನು, ಅದಕ್ಕಾಗಿ ಅವರ ತ್ಯಾಗವನ್ನೂ ಇಂದಿನ ತಲೆಮಾರಿನ ಮುಂದಿಡುವ ಜವಾಬ್ದಾರಿ ನಮ್ಮಂತಹವರ ಮೇಲಿದೆಯಲ್ಲವೇ? ಈ ಪ್ರಕ್ರಿಯೆಯಲ್ಲಿ ಈ ಬಿಜೆಪಿಯ ಸಂಪೂರ್ಣ ದಿವಾಳಿಖೋರತನದ, ಭ್ರಷ್ಟ ರಾಜಕಾರಣದ ವಿರುದ್ಧ ಕೊಂಚವಾದರೂ ಬೆಳಕು ದೊರಕಬಹುದಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ, ಪಾಟ್ನಾಡೈಲಿ)

ನೀವು ಪದವೀಧರರೇ? ನಿಮ್ಮ ಜವಾಬ್ದಾರಿ ನಿರ್ವಹಿಸಿ…

ಸ್ನೇಹಿತರೆ,

ಇದನ್ನು ನಾನು ರಾಮಚಂದ್ರ ಗೌಡ ಎಂಬ ಮಾಜಿ ಸಚಿವರ ಪ್ರಸ್ತಾಪದೊಂದಿಗೆ ಆರಂಭಿಸುತ್ತೇನೆ. ಕಾಸಗಲ ಕುಂಕುಮ ಇಟ್ಟುಕೊಂಡೇ ಜನರಿಗೆ ಕಾಣಿಸುವ ಈ ಕುಂಕುಮಧಾರಿ ನಿಮಗೆ ಗೊತ್ತಿರಲೇಬೇಕು. ರೇಣುಕಾಚಾರ್ಯ ಎಂಬ ಹಾಲಿ ಮಂತ್ರಿ ಯಡ್ಡ್‌ಯೂರಪ್ಪನವರಿಗೆ ಜೊತೆಬಿಡದಂತೆ ಕಾಣಿಸಿಕೊಳ್ಳುತ್ತಿರುವುದಕ್ಕಿಂತ ಮೊದಲು ಯಡ್ಡ್‌ಯೂರಪ್ಪನವರ ಜೊತೆಗೆ ಸದಾ ಕಾಣಿಸುತ್ತಿದ್ದವರು ಇವರು. ಒಂದೂವರೆ ವರ್ಷದ ಹಿಂದಿನ ತನಕ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದವರು.

ಪ್ರತಿ ಸರ್ಕಾರ ಬಗ್ಗೆ ಜನರಿಗೆ ಅನ್ನಿಸುತ್ತಿರುತ್ತದೆ, ‘ಇದು ಇತಿಹಾಸದಲ್ಲಿಯೇ ಕೆಟ್ಟ ಸರ್ಕಾರ,’ ಎಂದು. ಆದರೆ ಈಗಿನ ಹಾಲಿ ಬಿಜೆಪಿ ಸರ್ಕಾರದ ಬಗ್ಗೆಯಂತೂ ಆ ಮಾತನ್ನು ಪೂರ್ವಾಗ್ರಹಗಳಿಲ್ಲದೇ ಹೇಳಬಹುದು. ಇದಕ್ಕಿಂತ ಕೆಟ್ಟ ಸರ್ಕಾರ ಹಿಂದೆಂದೂ ಬಂದಿರಲಿಲ್ಲ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಅತಿ ಭ್ರಷ್ಟ ಮುಖ್ಯಮಂತ್ರಿ ಎನ್ನಿಸಿದ್ದ ಬಂಗಾರಪ್ಪನವರೇ ಅವರು ತೀರಿಕೊಳ್ಳುವ ಹೊತ್ತಿಗೆ ದೇವಮಾನವರಾಗಿ ಕಾಣಿಸುತ್ತಿದ್ದರು. ಅದಕ್ಕೆ ಕಾರಣ ಬಂಗಾರಪ್ಪ ಭ್ರಷ್ಟಾಚಾರಿಗಳಲ್ಲ ಎಂದು ರುಜುವಾತಾಯಿತು ಎಂದಲ್ಲ. ಈ ಬಿಜೆಪಿ ಸರ್ಕಾರದ ಮುಂದೆ ಹಿಂದಿನ ದರೋಡೆಕೋರರು ಭ್ರಷ್ಟರು ದುಷ್ಟರೆಲ್ಲ ಸಂತರಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಿದರೆ ಅಷ್ಟೇ ಸಾಕು. ಉಳಿದದ್ದು ತಾನಾಗಿ ಅರ್ಥವಾಗಬೇಕು.

ಇಂತಹ ಬ್ರಹ್ಮಾಂಡ ಭ್ರಷ್ಟ ಸರ್ಕಾರದಲ್ಲೂ, ಅಪಮೌಲ್ಯ ಮತ್ತು ಅನೀತಿಗಳನ್ನೆ ಹಾಸು ಹೊದ್ದು ಉಸಿರಾಡುತ್ತಿರುವ ಈ ಸರ್ಕಾರದಲ್ಲೂ ಭ್ರಷ್ಟಾಚಾರದ ವಿಚಾರಕ್ಕೆ ಒಬ್ಬ ಮಂತ್ರಿಯ ರಾಜೀನಾಮೆ ಕೇಳಿ ಪಡೆಯಲಾಯಿತು. ಅಂದರೆ ಆ ಹಗರಣ ಇನ್ನೆಷ್ಟು ಸ್ಪಷ್ಟವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಮೈಸೂರು ಮತ್ತು ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಭ್ರಷ್ಟ ರೀತಿನೀತಿಗಳ, ನೌಕರಿ ಮಾರಾಟದ, ಹಗರಣ ಅದು. ಅದರ ರೂವಾರಿ ಈ ರಾಮಚಂದ್ರ ಗೌಡರು. ಬಿಜೆಪಿಯಂತಹ ಬಿಜೆಪಿಗೇ, ಯಡ್ಡ್‌ಯೂರಪ್ಪನಂತಹ ಯಡ್ಡ್‌ಯೂರಪ್ಪನವರಿಗೇ ಆ ಹಗರಣವನ್ನು, ರಾಮಚಂದ್ರ ಗೌಡರನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ರಾಮಚಂದ್ರ ಗೌಡರ ರಾಜೀನಾಮೆಯನ್ನು ಬಲವಂತವಾಗಿ ಪಡೆಯಬೇಕಾಯಿತು. ಗೌಡರ ಸಚಿವ ಸ್ಥಾನ ಹೋಯಿತು. ಆದರೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸಂಪುಟದರ್ಜೆಯ ಸ್ಥಾನಮಾನ ಸಿಕ್ಕಿತು. ಆ ಹಗರಣದ ಬಗ್ಗೆ ವಿಚಾರಣೆ ನಡೆಯಲಿಲ್ಲ. ಆರೋಪ ಸುಳ್ಳು ಎಂದು ಸಾಬೀತಾಗಲಿಲ್ಲ. ಸಚಿವ ಸ್ಥಾನ ಕಿತ್ತುಕೊಂಡು ಮತ್ತೊಂದು ಸಂಪುಟ ದರ್ಜೆ ಸ್ಥಾನಮಾನ ಕೊಟ್ಟದ್ದೇ ಶಿಕ್ಷೆ ಎಂದುಕೊಳ್ಳಬೇಕಾದ ಬುದ್ದಿವಂತಿಕೆ ಜನರದ್ದು. ಇನ್ನು, ಅವರ ಶಾಸಕ ಸ್ಥಾನಕ್ಕಂತೂ ಯಾವುದೇ ಸಮಸ್ಯೆಯಾಗಲಿಲ್ಲ.

ಅಂದ ಹಾಗೆ, ಈ ರಾಮಚಂದ್ರ ಗೌಡರು ಬೆಂಗಳೂರು ನಗರ ಮತ್ತು ಜಿಲ್ಲೆಯ ಪದವೀಧರರನ್ನು ಪ್ರತಿನಿಧಿಸುತ್ತಿರುವ ವಿಧಾನಪರಿಷತ್ ಶಾಸಕ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಮ್ಮ ಅಕ್ಷರಸ್ತ, ವಿದ್ಯಾವಂತ, ಘನತೆವೆತ್ತ, ಬುದ್ದಿವಂತ, ಜವಾಬ್ದಾರಿಯುತ ಪದವೀಧರರು ನೇರವಾಗಿ ಮತ್ತು ಪರೋಕ್ಷವಾಗಿ ಆಯ್ಕೆ ಮಾಡಿಕೊಂಡಿರುವ ತಮ್ಮ ಪ್ರತಿನಿಧಿ.

ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರು ಒಮ್ಮೆ ತಲೆತಗ್ಗಿಸಿದರೆ ಅದು ಅವರ ಒಳ್ಳೆಯತನವನ್ನು ತೋರಿಸುತ್ತದೆ.

ಆದರೆ ತಲೆತಗ್ಗಿಸಿದವರು ಮತ್ತು ಇಂತಹ ಕೃತ್ಯದಲ್ಲಿ ಭಾಗಿಯಾಗಬಾರದು ಎಂದುಕೊಂಡವರಿಗೆ ಒಂದು ಅವಕಾಶ ಇನ್ನು ನಾಲ್ಕು ತಿಂಗಳಿನಲ್ಲಿ ಬರಲಿದೆ. ಇದೇ ರಾಮಚಂದ್ರ ಗೌಡರು ಬಿಜೆಪಿಯಿಂದ ಬೆಂಗಳೂರಿನ ಪದವೀಧರರಿಂದ ಪುನರಾಯ್ಕೆ ಅಗಲು ಹೊರಟಿದ್ದಾರೆ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾಗಿದ್ದರೆ ಬರಲಿರುವ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಕ್ರಿಯೆಯಲ್ಲಿ ಜವಾಬ್ದಾರಿಯಿಂದ ಪಾಲ್ಗೊಳ್ಳಿ ಮತ್ತು ಮತ ಚಲಾಯಿಸಿ ಎಂದು ಆಗ್ರಹಿಸಿದರೆ ಅದು ಕಠಿಣವಾದ ಅಥವ ಅಹಂಕಾರದ ಆಗ್ರಹವಲ್ಲ ಎಂದು ಭಾವಿಸುತ್ತೇನೆ.

ಅಂದ ಹಾಗೆ, ಮಿಕ್ಕ ಪಕ್ಷಗಳ ಅಭ್ಯರ್ಥಿಗಳೂ ರಾಮಚಂದ್ರ ಗೌಡರಿಗಿಂತ ಉತ್ತಮರು ಎಂದೇನೂ ನಾನು ಹೇಳುವುದಿಲ್ಲ. ಆದರೆ ಅವರು ಹೊಸಬರೇ ಆಗಿರುತ್ತಾರೆ. ಕನಿಷ್ಟ “ಅನುಮಾನದ ಲಾಭ”ವಾದರೂ (Benefit of the Doubt) ಅವರಿಗೆ ಸಿಗಬೇಕು. ಮತ್ತು ನಿಲ್ಲಲಿರುವ ಅಭ್ಯರ್ಥಿಗಳಲ್ಲಿ ಇರುವುದರಲ್ಲೇ ಉತ್ತಮರನ್ನು ಆರಿಸುವ ಜವಾಬ್ದಾರಿ ನಮ್ಮದು. ಮತ್ತು ನಾವು ಈ ಭ್ರಷ್ಟರಿಗೆ ಮತ್ತು ಅಯೋಗ್ಯರಿಗೆ ವಿರುದ್ಧವಾಗಿ ಚಲಾಯಿಸುವ ಒಂದೊಂದು ಮತಕ್ಕೂ ಅವರಿಗೆ ಬೀಳುವ ಮತಕ್ಕಿಂತ ಹೆಚ್ಚಿನ ಮೌಲ್ಯ, ನೈತಿಕತೆ ಮತ್ತು ಪ್ರಾಮಾಣಿಕತೆ ಇರುತ್ತದೆ.

ಆದರೆ, ನೀವು ಪದವೀಧರರಾಗಿದ್ದರೂ ಮತ ಚಲಾಯಿಸಲು ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಅದು ಬಹಳ ಸುಲಭ. ಒಂದು ಅರ್ಜಿ ತುಂಬಬೇಕು. ಅದರಲ್ಲಿ ನಿಮ್ಮ ಹೆಸರು, ವಿಳಾಸ, ನಿಮ್ಮ ಪದವಿ ಮತ್ತು ಅದನ್ನು ಪಡೆದ ವರ್ಷ, ಇಷ್ಟೇ ತುಂಬಬೇಕಿರುವುದು. (ಅರ್ಜಿಯನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.) ಇಷ್ಟು ತುಂಬಿದ ಅರ್ಜಿಯನ್ನು ನಿಮ್ಮ ಪದವಿ ಪ್ರಮಾಣ ಪತ್ರ ಮತ್ತು ನಿಮ್ಮ ವಿಳಾಸವನ್ನು ದೃಢೀಕರಿಸುವ ದಾಖಲೆಯ ಎರಡು ಪ್ರತಿಗಳೊಂದಿಗೆ (ವೋಟರ್ ಕಾರ್ಡ್/ರೇಷನ್ ಕಾರ್ಡ್/ವಿದ್ಯುತ್ ಅಥವ ಫೋನ್ ಬಿಲ್/ಬಾಡಿಗೆ ಕರಾರು ಪತ್ರ, ಇತ್ಯಾದಿಗಳಲ್ಲಿ ಯಾವುದಾದರೂ ಒಂದು) ಸಂಬಂಧಪಟ್ಟ ಸರ್ಕಾರಿ ಕಚೇರಿಯಲ್ಲಿ ಕೊಟ್ಟರೆ ಮುಗಿಯಿತು. ಇದು ಅಸಾಧ್ಯವೂ ಅಲ್ಲ. ಮಾಡದೆ ಸುಮ್ಮನಿದ್ದುಬಿಡುವಷ್ಟು ಅಪ್ರಾಮಾಣಿಕರೂ ಪಲಾಯನವಾದಿಗಳೂ ನೀವಲ್ಲ. ಅಲ್ಲವೇ?

ಮತ್ತು, ಇದು ಕೇವಲ ಬೆಂಗಳೂರಿನ ಪದವೀಧರರಿಗಷ್ಟೇ ಸೀಮಿತವಲ್ಲ. ರಾಜ್ಯದ ಎಲ್ಲಾ ಪದವೀಧರರಿಗೂ ಸಂಬಂಧಿಸಿದ್ದು. ಪ್ರತಿಯೊಬ್ಬ ಪದವೀಧರನಿಗೂ ಒಬ್ಬ ವಿಧಾನಪರಿಷತ್ ಶಾಸಕನನ್ನು ಆಯ್ಕೆ ಮಾಡಿಕೊಳ್ಳುವ ಒಂದು ವೋಟ್ ಇದೆ. ಹೆಸರು ನೊಂದಾಯಿಸಿ. ಚುನಾವಣೆಯ ದಿನ ಯೋಗ್ಯರಿಗೆ ಮತ ಚಲಾಯಿಸಿ. ಈ ಅಸಂಗತ ಸಮಯದಲ್ಲಿ, ಅಪ್ರಾಮಾಣಿಕತೆ, ಭ್ರಷ್ಟಾಚಾರ ತಾಂಡವನೃತ್ಯ ಮಾಡುತ್ತಿರುವ ಕರ್ನಾಟಕದ ಈ ಅಸಹಾಯಕ ಪರಿಸ್ಥಿತಿಯಲ್ಲಿ ಒಂದಷ್ಟು ಯೋಗ್ಯರನ್ನು ಪ್ರಾಮಾಣಿಕರನ್ನು ಶಾಸನಸಭೆಗೆ ಕಳುಹಿಸಿ. ಹಳ್ಳಿಯ ಜನ, ಸ್ಲಮ್ಮಿನ ಜನ, ಬಡವರು, ಜಾತಿವಾದಿಗಳು, ದುಡ್ಡಿಗೆ ಮತ್ತು ಜಾತಿಗೆ ಮರುಳಾಗಿ ವೋಟ್ ಮಾಡುತ್ತಾರೆ ಅನ್ನುತ್ತೀರಲ್ಲ, ಅವರ್‍ಯಾರಿಗೂ ಅವಕಾಶ ಇಲ್ಲದ ಈ ಚುನಾವಣೆಯಲ್ಲಿ ನೀವು ಹಾಗೆ ಅಲ್ಲ ಎಂದು ನಿರೂಪಿಸಿ. ಮಾರ್ಗದರ್ಶಕರಾಗಿ. ಮುಂದಾಳುಗಳಾಗಿ. ನೀವು ಪಡೆದ ಪದವಿಗೂ ಒಂದು ಘನತೆ ಇದೆ ಎಂದು ತೋರಿಸಿ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾದರೆ, ಈ ವೆಬ್‌ಸೈಟಿನಲ್ಲಿ ನಿಮ್ಮ ತುಂಬಿದ ಅರ್ಜಿ ಮತ್ತು ಸಲ್ಲಿಸಬೇಕಾದ ಸರ್ಕಾರಿ ಕಚೇರಿ ಮತ್ತು ವಿಳಾಸ ಎಲ್ಲವೂ ಸುಲಭವಾಗಿ ಲಭ್ಯವಿದೆ. ಅದನ್ನು ಬಳಸಿಕೊಳ್ಳಿ. ನಗರದ ಹೊರಗಿರುವವರಾದರೆ, ನಿಮ್ಮ ತಾಲ್ಲೂಕಿನ ತಹಸಿಲ್ದಾರ್ ಕಚೇರಿ ಅರ್ಜಿ ತಲುಪಿಸಬೇಕಾದ ಸ್ಥಳ ಎನ್ನಿಸುತ್ತದೆ. ನಿಮ್ಮ ತಹಸಿಲ್ದಾರ್ ಕಚೇರಿಗೆ ಫೋನ್ ಮಾಡಿ ತಿಳಿದುಕೊಳ್ಳಿ.  ಕೊನೆಯ ದಿನಾಂಕ ಎಂದೆಂದು ಯಾರೂ ಹೇಳುತ್ತಿಲ್ಲ. ಹಾಗಾಗಿ ಸಾಧ್ಯವಾದಷ್ಟು ಬೇಗ ಮಾಡಿ.

ಸ್ಪೈಡರ್‌ಮ್ಯಾನ್ ಸಿನೆಮಾದಲ್ಲಿ ಒಂದು ವಾಕ್ಯ ಬರುತ್ತದೆ: “With great power comes great responsibility.” ನಾವು ಪಡೆದುಕೊಳ್ಳುವ ಪದವಿಯೊಂದಿಗೆ ನಮಗೆ ಜವಾಬ್ದಾರಿಗಳೂ ಅವಕಾಶಗಳೂ ಅನುಕೂಲಗಳೂ ಬರುತ್ತವೆ. ಆ ಜವಾಬ್ದಾರಿಗಳನ್ನು ನಿಭಾಯಿಸಲು ನಾವು ಅನರ್ಹರು ಅಥವ ಆಗದವರು ಎಂದಾದರೆ ಆ ಪದವಿಗೂ ಅನುಕೂಲಗಳಿಗೂ ನಾವು ಅನರ್ಹರು. ಇನ್ನೊಬ್ಬರನ್ನು ದೂರುತ್ತ ಸಿನಿಕರಾಗುತ್ತ ಇರುವುದಕ್ಕಿಂತ ನಾವು ನಮ್ಮ ನಾಗರಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿರೋಣ.

ಇಷ್ಟನ್ನು ಈ ಸಂದರ್ಭದಲ್ಲಿ ಕರ್ನಾಟಕದ ಪದವೀಧರರಿಂದ ಬಯಸುವುದು ತಪ್ಪೆಂದಾಗಲಿ ಅಪರಾಧವೆಂದಾಗಲಿ ನಾನು ಭಾವಿಸುತ್ತಿಲ್ಲ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಯಡಿಯೂರಪ್ಪನ ಯಾಗ ಮತ್ತು ನರಸತ್ತ ನಾಗರೀಕ ಸಮಾಜ

ಪ್ರಿಯ ಮಿತ್ರರೆ,

ಅತ್ಯಂತ ನೋವು ಮತ್ತು ಯಾತನೆಯಿಂದ ಈ ಲೇಖನ ಬರೆಯುತಿದ್ದೇನೆ. ಇಲ್ಲಿನ ಶಬ್ಧಗಳು ಕಟುವಾಗಿದ್ದರೆ, ಕ್ಷಮೆಯಿರಲಿ.

ನಿನ್ನೆ ಅಂದರೆ 19-12-11ರ ಸೋಮವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎರಡನೇ ಭಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾಗ ನಡೆಸಿದರು. ಇದಕ್ಕೆ ಕೊಟ್ಟ ಕಾರಣ ಮಾತ್ರ “ಲೋಕ ಕಲ್ಯಾಣಕ್ಕಾಗಿ” ಎಂಬುದಾಗಿತ್ತು. ಇದಕ್ಕೂ ಮುನ್ನ 17ರ ಶನಿವಾರ ಯಲಹಂಕ ಉಪನಗರದ ಬಳಿ 10 ಸಾವಿರ ಮಹಿಳೆಯರ ಜೊತೆಗೂಡಿ ಲಲಿತ ಸಹಸ್ರ ಕುಂಕುಮಾರ್ಚನೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದನ್ನ ನೀವು ಗಮನಿಸಿದ್ದೀರಿ.

ಯಡಿಯೂರಪ್ಪ ಮತ್ತು ಆ ಹತ್ತು ಸಹಸ್ರ ಮಹಿಳೆಯರು ತಮಗೆ ಅರ್ಥವಾಗದ ಮಂತ್ರಗಳನ್ನು ವದರುತ್ತಾ ಸಹಸ್ರಾರು ರುಪಾಯಿಗಳ ಕುಂಕುಮವನ್ನು ಗಾಳಿಗೆ ತೂರುವ ಬದಲು 10 ಸಾವಿರ ಗಿಡಗಳನ್ನ ಅದೇ ಯಲಹಂಕದ ಸುತ್ತ ಮತ್ತಾ ನೆಟ್ಟಿದ್ದರೆ ಅದು ಎಷ್ಟು ಅರ್ಥಪೂರ್ಣವಾಗಿರುತಿತ್ತು ಅಲ್ಲವೆ? ಒಮ್ಮೆ ಯೋಚಿಸಿ.

ಮುಖ್ಯಮಂತ್ರಿಯ ಗಾದಿಯಿಂದ ಇಳಿದ ಮೇಲೆ ಈ ಮನುಷ್ಯನ ವರ್ತನೆ, ಪ್ರತಿಕ್ರಿಯೆ, ದೇವಸ್ಥಾನಗಳ ಸುತ್ತಾಟ ಇವೆಲ್ಲಾ ಗಮನಿಸಿದರೆ, ಇವರು ಮಾನಸಿಕ ಅಸ್ವಸ್ಥ ಎಂಬ ಗುಮಾನಿ ಮೂಡುತ್ತಿದೆ. ಈಗ ಯಡಿಯೂರಪ್ಪನವರ ಪಾಲಿಗೆ ಮೂರ್ಖ ಜೊತಿಷಿಗಳೇ ಆಪ್ತ ಬಾಂಧವರಾಗಿದ್ದಾರೆ. ಮತ್ತೇ ಅಧಿಕಾರ ಪಡೆಯುವುದಕ್ಕಾಗಿ ಏನೆಲ್ಲಾ ಕಸರತ್ತು ನಡೆಸಿರುವ ಯಡಿಯೂರಪ್ಪನವರಿಗೆ ಸದ್ಯಕ್ಕೆ ಬಾಕಿ ಉಳಿದಿರುವುದೊಂದೇ ಅದು ನರಬಲಿ. ಇಂತಹ ಮನೆಹಾಳತನದ ಸಲಹೆಯನ್ನು ಇವರಿಗೆ ಯಾರೂ ನೀಡಿಲ್ಲ.

ಇವರಿಗೆಲ್ಲಾ ಆತ್ಮಸಾಕ್ಷಿ, ಪ್ರಜ್ಷೆ ಎಂಬುದು ಇದ್ದಿದ್ದರೆ, ಜನ ನಾಯಕರಾಗಿ ಈ ರೀತಿ ವರ್ತಿಸುತ್ತಿರಲಿಲ್ಲ. ಚಾಮರಾಜ ನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ಯಾವ ಮುಖ್ಯ ಮಂತ್ರಿಯೂ ಅಲ್ಲಿಗೆ ಬೇಟಿ ನೀಡಲಿಲ್ಲ. ಬೇಟಿ ನೀಡದಿದ್ದರೂ ಯಾಕೆ ಅಧಿಕಾರ ಕಳೆದುಕೊಂಡೆವು ಎಂಬುದನ್ನ ಯಾವ ಮುಖ್ಯಮಂತ್ರಿಯೂ ಆಲೋಚಿಸಲಿಲ್ಲ. ಇದು ಈ ನಾಡಿನ ವೈಚಾರಿಕ ಪ್ರಜ್ಙೆಗೆ ಗರ ಬಡಿದ ಸಂಕೇತವೇ? ನನಗಿನ್ನೂ ಅರ್ಥವಾಗಿಲ್ಲ.

ಎರಡು ತಿಂಗಳ ಹಿಂದೆ ಯಡಿಯೂರಪ್ಪನವರ  ಆಪ್ತರಾದ ರೇಣುಕಾಚಾರ್ಯ ಮತ್ತು ಶೋಭಾ ಕರಂದ್ಲಾಜೆ ಚಾಮರಾಜನಗರದಲ್ಲಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಕೇರಳದಿಂದ ಪುರೋಹಿತರನ್ನು ಕರೆಸಿ ಯಜ್ಞ ಯಾಗ ಮಾಡಿದರು. ಲಕ್ಷಾಂತರ ರೂಪಾಯಿಯ ತುಪ್ಪ ಬೆಣ್ಣೆ, ರೇಷ್ಮೆ ಬಟ್ಟೆಗಳನ್ನ ಬೆಂಕಿಗೆ ಹಾಕಿ ಆಹುತಿ ಮಾಡಿದರು. ನಾಡಿನ ಜನಪ್ರತಿನಿಧಿಗಳಾಗಿದ್ದುಕೊಂಡು, ಸಚಿವರಾಗಿ ಇಂತಹ ಅರ್ಥಹೀನ ಆಚರಣೆಗಳ ಮಾಡುವ ಮುನ್ನ ಈ ಮೂರ್ಖರು ಒಮ್ಮೆ ಉತ್ತರ ಕರ್ನಾಟಕದ ಸ್ಥಿತಿ ಏನಾಗಿದೆ ಎಂದು ನೋಡಿ ಬಂದಿದ್ದರೆ ಚೆನ್ನಾಗಿರುತಿತ್ತು. ಅಲ್ಲಿಯ ಬದುಕು ಅರ್ಥವಾಗುತಿತ್ತು

ಕಳೆದ ಹತ್ತು ವರ್ಷಗಳ ನಂತರ ಉತ್ತರ ಕರ್ನಾಟಕ ಭೀಕರ ಬರಗಾಲದಲ್ಲಿ ತತ್ತರಿಸುತ್ತಿದೆ. ಬಿಜಾಪುರ ಜಿಲ್ಲೆಯಲ್ಲಿ ಈ ವರ್ಷ ಕೇವಲ 37 ನಿಮಿಷಗಳ ಕಾಲ ಮಳೆ ಬಿದ್ದಿದೆ ಎಂದರೆ ನೀವು ನಂಬಲಾರರಿ. ಅಲ್ಲಿನ ಜನ ತಮಗೆ ಹಾಗೂ ತಮ್ಮ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ, ತಿನ್ನುವ ಅನ್ನ ಮತ್ತು ಮೇವಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದಾರೆ. ಸ್ಥಿತಿವಂತ ರೈತರು ತಮ್ಮ ದನ ಕರುಗಳನ್ನ ಮೇವು ನೀರು ಇರುವ ಪ್ರದೇಶಗಳ ನೆಂಟರ ಮನೆಗಳಿಗೆ ಸಾಗಿಸುತಿದ್ದಾರೆ, ಏನೂ ಇಲ್ಲದವರು ಗೋವಾ ಹಾಗೂ ಕೇರಳದ ಕಸಾಯಿಖಾನೆಗಳಿಗೆ ಅಟ್ಟುತಿದ್ದಾರೆ. ಅವುಗಳ ಮೇಲಿನ ಪ್ರೀತಿ ಮತ್ತು ಭಾವುಕತೆಯಿಂದ ಮಾರಲಾಗದ ಅಸಹಾಯಕರು ಮೂಕ ಪ್ರಾಣಿಗಳನ್ನ ಬಟ್ಟ ಬಯಲಿನಲ್ಲಿ ಬಿಟ್ಟು ರಾತ್ರೋರಾತ್ರಿ ಕೂಲಿ ಅರಸಿಕೊಂಡು ಪೂನಾ, ಮುಂಬೈ ರೈಲು ಹತ್ತುತಿದ್ದಾರೆ. ಡಿಸಂಬರ್ ಚಳಿಗಾದಲ್ಲಿ ಕೂಡ ಉರಿಯುತ್ತಿರುವ ಸೂರ್ಯನ ಬಿಸಿಲಿಗೆ ಮೇವು ನೀರಿಲ್ಲದ ಈ ಮೂಕ ಪ್ರಾಣಿಗಳು ನಿಂತಲ್ಲೆ ನೆಲಕ್ಕೊರುಗುತ್ತಿವೆ.

ಕಳೆದ ಒಂದು ತಿಂಗಳಿನಿಂದ ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಗದಗ, ಧಾರವಾಡದ ಗ್ರಾಮಾಂತರ ಪ್ರದೇಶಗಳನ್ನು ಸುತ್ತಿ ಬಂದ ಮೇಲೆ ನನಗೆ,  ಜನಪ್ರತಿನಿಧಿಗಳನ್ನ ರಸ್ತೆಯಲ್ಲಿ ನಿಲ್ಲಿಸಿ ಇಲ್ಲಿನ ಜನತೆ ಕಪಾಳಕ್ಕೆ ಇನ್ನೂ ಬಾರಿಸಿಲ್ಲವಲ್ಲ ಏಕೆ ಎಂಬ ಪ್ರಶ್ನೆ ಕಾಡತೊಡಗಿದೆ. ಅಲ್ಲದೆ ನನ್ನ ಬಾಲ್ಯದ ದಿನಗಳಲ್ಲಿ ಕೇಳಿದ್ದ ಜನಪದ ಗೀತೆಗಳು ನೆನಾಪಾಗುತ್ತಿವೆ.

1) ಹಾದೀಲಿ ಹೋಗುವವರೇ ಹಾಡೆಂದು ಕಾಡಬೇಡಿ
ಇದು ಹಾಡಲ್ಲ ನನ್ನೊಡಲುರಿ ದೇವರೆ
ಇದು ಬೆವರಲ್ಲ ನನ್ನ ಕಣ್ಣೀರು

2) ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ
ಒಡಲ ಬೆಂಕೀಲಿ ಹೆಣ ಬೆಂದೋ ದೇವರೆ
ಬಡವರಿಗೆ ಸಾವ ಕೊಡಬೇಡೋ

3) ಹೆಣ್ಣಿನ ಗೋಳಟ್ಟಿ ಬನ್ನಿಯ ಮರ ಬೆಂದೋ
ಅಲ್ಲಿ ಸನ್ಯಾಸಿ ಮಠ ಬೆಂದೊ ಹಾರುವರ
ಪಂಚಾಂಗ ಹತ್ತಿ ಉರಿದಾವೋ

4) ಕಣಜ ಬೆಳೆದ ಮನೆಗೆ ಉಣಲಾಕೆ ಕೂಳಿಲ್ಲ
ಬೀಸಾಕ ಕವಣೆ ಬಲವಿಲ್ಲ ಕೂಲಿಯವರ
ಸುಡಬೇಕ ಜನುಮ ಸುಖವಿಲ್ಲ

ಗೋರಕ್ಷಣೆಗೆ ಪುಂಖಾನು ಪುಂಖವಾಗಿ ಬೊಗಳೆ ಬಿಡುವ ಹಾಗೂ ಅವುಗಳ ಪಕ್ಕ ನಿಂತು ಚಿತ್ರ ತೆಗೆಸಿಕೊಳ್ಳುವ ಕಪಟ ಸ್ವಾಮಿಗಳಿಗೆ, ನಕಲಿ ರೈತರ ಹೆಸರಿನ ಅಸ್ತಿತ್ವಕ್ಕೆ ಬಂದ ಸಾವಯವ ಕೃಷಿ ಮಿಷನ್ ಮೂಲಕ ರೈತರಲ್ಲದವರಿಗೆ ವರ್ಷಕ್ಕೆ ನೂರಾರು ಕೋಟಿ ಹಣ ನೀಡುತ್ತಿರುವ ಸರ್ಕಾರದ ಕ್ರಮವನ್ನು ನಾಗರೀಕ ಸಮಾಜದಲ್ಲಿ ಬದುಕುತ್ತಿರುವ ನಾವು ಈಗಲಾದರೂ ಪ್ರಶ್ನಿಸಬೇಕಾಗಿದೆ. ಇಲ್ಲದಿದ್ದರೆ, ಈ ಸಮಾಜವನ್ನು ನರಸತ್ತ ನಾಗರೀಕ ಸಮಾಜವೆಂದು ನಾವೆಲ್ಲರೂ ಒಕ್ಕೊರಲಿನಿಂದ ಘೋಷಿಸಿ ಕೊಳ್ಳಬೇಕಾಗಿದೆ.

ಸಮ್ಮನೆ ಒಮ್ಮೆ ತಣ್ಣಗೆ ಕುಳಿತು ಯೋಚಿಸಿ. ಈ ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಿಂದ ದೇಗುಲಗಳಿಗೆ, ಮಠ ಮಾನ್ಯಗಳ ಬೇಟಿಗಾಗಿ ಖರ್ಚು ಮಾಡಿದ ಪ್ರಯಾಣದ ವೆಚ್ಚ, ಹಾಗೂ ಇವುಳಿಗೆ ನೀಡಿದ ಅನುದಾನ ಇದನ್ನು ಲೆಕ್ಕ ಹಾಕಿದರೆ, ನೂರು ಕೋಟಿ ರೂಪಾಯಿ ದಾಟಲಿದೆ.

ಇದೇ ಹಣವನ್ನ ದನಕರುಗಳ ಮೇವಿಗಾಗಿ ಇಂದು ಉತ್ತರ ಕರ್ನಾಟಕದಲ್ಲಿ ವಿನಿಯೋಗಿಸಿದ್ದರೆ,  ದೇವಸ್ಥಾನ, ಮಠ ಬೇಟಿ ನೀಡಿದ್ದಕ್ಕೆ ಹಾಗು ಹೋಮ ಹವನ ಮಾಡಿಸಿದ್ದಕ್ಕೆ ಸಿಗುವ ಫಲಕ್ಕಿಂತ ಹೆಚ್ಚಿನ ಪುಣ್ಯ ಯಡಿಯೂರಪ್ಪನವರಿಗೆ ಸಿಗುತ್ತಿತ್ತೇನೊ?

ಡಾ. ಎನ್. ಜಗದೀಶ್ ಕೊಪ್ಪ

ಇನ್ನೂ ಅನೇಕ ಕಪಾಳ ಮೋಕ್ಷಗಳು ಕಾದಿವೆ

ಬಿ.ಶ್ರೀಪಾದ ಭಟ್

ಇಂಡಿಯಾ ದೇಶ ಜಾಗತೀಕರಣಕ್ಕೆ ತುತ್ತಾಗಿ 20 ವರ್ಷಗಳು ತುಂಬಿದ ಗಳಿಗೆಯಲ್ಲಿ, ಇಲ್ಲಿನ ಹತಾಶ ವ್ಯವಸ್ಥೆ ಭ್ರಷ್ಟ ಮಂತ್ರಿ ಶರದ್ ಪವಾರ್ ಗೆ ಕಪಾಳ ಮೋಕ್ಷ ಮಾಡುವುದರ ಮೂಲಕ ಜಾಗತೀಕರಣದ ಹೆಮ್ಮಾರಿ ತನ್ನ  20ನೇ ವಾರ್ಷಿಕೋತ್ಸವವನ್ನು ಸಾಂಕೇತಿಕವಾಗಿ ಆರಂಬಿಸಿದೆ. ಇನ್ನೂ ಮುಂದೆ ಇನ್ನೂ ಅನೇಕ ಕಪಾಳ ಮೋಕ್ಷಗಳು ಕಾದಿವೆ.

ದೃಶ್ಯ 1 : ಕುಪಿತ ಸಿಖ್ ವ್ಯಕ್ತಿಯೊಬ್ಬನಿಂದ ಕಪಾಳ ಮೋಕ್ಷಕ್ಕೆ ಒಳಗಾದ ಕೇಂದ್ರದ ವ್ಯವಸಾಯ ಮಂತ್ರಿ ಶರದ್ ಪವಾರ್ ಅವರ ಮಗಳಾದ ಸುಪ್ರಿಯಾ ಹೇಳಿದ್ದು ” ನನ್ನ ತಂದೆಯವರ ಆಪರೇಶನ್ ಮಾಡಿಸಿಕೊಂಡ ಕಪಾಳಕ್ಕೆ ಏಟು ಬಿದ್ದಿದೆ. ಅದು ಇನ್ನು ಯಾವ ಸ್ವರೂಪ ಪಡೆಯುತ್ತದೆಯೋ ಹೇಳಲಿಕ್ಕಾಗದು” ಇಷ್ಟು ಹೇಳುವಷ್ಟರಲ್ಲಾಗಲೆ ಅವರ ಕಣ್ಣು ತುಂಬಿ ಬಂದಿದ್ದವು. ಇದು ಸಹಜ.ಆದರೆ ಮಾನ್ಯ ಶರದ ಪವಾರ್ ಮತ್ತು ಸುಪ್ರಿಯಾರವರೆ ಅಷ್ಟೇ ಸಹಜವಾದದ್ದು ಈ ಕೆಳಗಿನ ಅಂಶಗಳು:

1997 ರಿಂದ ಇಲ್ಲಿಯವರೆಗೂ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅಮಾಯಕ ರೈತರು ಆತ್ಮಹತ್ಯೆಗೆ ಶರಣಾಗಿದ್ದು ಸರ್ಕಾರಗಳು ಇವರ ನೆರವಿಗೆ ಬಾರದೆ ಇದ್ದದ್ದಕ್ಕೆ. ಜಾಗತೀಕರಣದ ಅಮಲಿನಲ್ಲಿ ದೇಶದ ಬೆನ್ನೆಲೆಬು ಎನಿಸಿಕೊಂಡ ವ್ಯವಸಾಯ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದಕ್ಕೆ. ಈ ಸರ್ಕಾರ ಕುರುಡಾಗಿ, ಯಾವ ಪೂರ್ವಭಾವಿ ಸಿದ್ಧತೆಗಳು, ಮುಂದಾಲೋಚನೆಗಳು, ತರ್ಕಬದ್ಧವಾದ ಚಿಂತನೆಗಳು ಇಲ್ಲದೆ, ಈ ದೇಶದ ಶೇಕಡ 70 ರಷ್ಟಿರುವ ಬಡಜನತೆಯ, ರೈತರ, ತಳಸಮುದಾಯಗಳ ಹಿತಾಸಕ್ತಿಗಳು, ಎಲ್ಲವನ್ನೂ ಕಡೆಗಣಿಸಿ ಒಂದು ರೀತಿಯಲ್ಲಿ ಗೊತ್ತು ಗುರಿಯಿಲ್ಲದೆ ರೂಪಿಸಿದ ಮುಕ್ತ ಮಾರುಕಟ್ಟೆಯ ನೀತಿಯ ಫಲವಾಗಿ ಕಳೆದ 20 ವರ್ಷಗಳಲ್ಲಿ ಮೇಲಿನ ಎಲ್ಲ ಸಮುದಾಯಗಳು ನೆಲ ಕಚ್ಚಿದವು.

ಈ ಸಂಧರ್ಭದಲ್ಲಿ ಸಂಪೂರ್ಣ ಸೋತುಹೋದ ರೈತ ಏನು ಮಾಡಬಹುದಿತ್ತು? ಹೋರಾಡಬಹುದಿತ್ತೇ? ಯಾರ ಬಲದಿಂದ? ಪ್ರಭುತ್ವದ ಎದುರು ಏಕಾಂಗಿಯಾಗಿ ಎಷ್ಟು ದೀರ್ಘ ಕಾಲ? ಶಾಸಕರತ್ತ, ಮಂತ್ರಿಗಳತ್ತ ಚಪ್ಪಲಿ ತೂರಬಹುದಾಗಿತ್ತೇ? ಅವರ ಕಪಾಳ ಮೋಕ್ಷ ಮಾಡಬಹುದಾಗಿತ್ತೇ? ಆದರೆ ಪ್ರಜಾಪ್ರಭುತ್ವದ ಎಲ್ಲಾ ದಾರಿಗಳು ಮುಚ್ಚಿಕೊಂಡಂತಹ ಸಂಧರ್ಭದಲ್ಲಿ ಇದಾವುದನ್ನು ಮಾಡದ ನಮ್ಮ ನೆಲದ ಸಂಪನ್ನ ರೈತ  ಸ್ವತಃ ತನ್ನ ಜೀವವನ್ನೇ ಬಲಿ ಕೊಟ್ಟು ವ್ಯವಸ್ಥೆಗೆ, ಸರ್ಕಾರಕ್ಕೆ, ಅವರ ಆತ್ಮಸಾಕ್ಷಿಗೆ, ನೈತಿಕತೆಗೆ, ಸವಾಲು ಎಸೆದಿದ್ದಾನೆ. ಆದರೆ ಭ್ರಷ್ಟಚಾರದ ಹಿನ್ನೆಲೆಯುಳ್ಳ ಶರದ ಪವಾರ್ ರಂತಹ ರಾಜಕಾರಣಿಗಳು ನಿರ್ಲಜ್ಜೆಯಿಂದ ತನ್ನ ಇಲಾಖೆಗೆ ಸೇರಿದ, ಈ ದೇಶದ ಬೆನ್ನೆಲುಬಾದ ವ್ಯವಸಾಯರಂಗವನ್ನು ಸಂಪೂರ್ಣವಾಗಿ ತುಳಿದು ನಾಚಿಕೆಯಿಲ್ಲದೆ ಅದೇ ಖಾತೆಯಲ್ಲಿ ಮುಂದುವರೆದಿರುವುದಕ್ಕೆ ನಾವೆಲ್ಲ ಹತಾಶೆಯಿಂದ, ಸೋಲಿನಿಂದ ತಲೆತಗ್ಗಿಸಬೇಕಷ್ಟೆ. ಯಾವುದೇ ಕೆಚ್ಚೆದೆಯುಳ್ಳ, ಮಾನವಂತ ಸಮಾಜ ಈ ಶರದ ಪವಾರ್ ರಂತಹವರನ್ನು ಎಂದೋ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತಿತ್ತು. ಈ ಪವಾರ್ ಎಂದೋ ನ್ಯಾಯದೇವತೆಯ ಕಪಾಳ ಮೋಕ್ಷಕ್ಕೆ ತುತ್ತಾಗಬಹುದಾದಿತ್ತು. ಆದರೆ ನಮ್ಮದು ಅನುಕೂಲಸಿಂಧು, ಸೋತ, ದಣಿದ ಸಮಾಜವಲ್ಲವೇ?

ದೃಶ್ಯ 2 : ನಮ್ಮ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ರವರನ್ನು ಆರ್ಥ ಮಾಡಿಕೊಳ್ಳದೆ ಈ ಯುಪಿಎ -2 ಸರ್ಕಾರದ ಕರ್ಮಕಾಂಡಗಳಾಗಲಿ, ಆತ್ಮಹತ್ಯಾತ್ಮಕ ನಿಲುವುಗಳಾಗಲಿ, ಭ್ರಷ್ಟಾಚಾರಗಳಾಗಲಿ ಅರ್ಥವಾಗುವ ಸಾಧ್ಯತೆಗಳು ಕೇವಲ ಅಪೂರ್ಣ ಅಥವಾ ಅರ್ಧ ಸತ್ಯ ಅಥವಾ ಅರ್ಧ ಸುಳ್ಳು. ಸರಿಯಾಗಿ 20 ವರ್ಷಗಳ ಹಿಂದೆ ಇಂಡಿಯಾದ ರಾಜಕಾರಣದಲ್ಲಿ, ಅದರಲ್ಲೂ ದಿಲ್ಲಿ ಎನ್ನುವ ಮಾಯಾವಿಯ ಗದ್ದುಗೆಗೆ ಹತ್ತಿರದ ರಾಜಕಾರಣದಲ್ಲಿ ಕಂಡೂ ಕಾಣದಂತೆ ಗೋಚರಿಸಿದ ಮನಮೋಹನ್ ಸಿಂಗ್ ಬಗ್ಗೆ ಆಗೆಲ್ಲ ಒಬ್ಬ ಹಣಕಾಸು ತಜ್ಞರು ಎನ್ನುವ ಭಾವನೆ ಇತ್ತು. 5 ವರ್ಷಗಳ ನಂತರ ಮನಮೋಹನ್ ಸಿಂಗ್ ರವರ ಮುಕ್ತ ಮಾರುಕಟ್ಟೆ ನೀತಿಯ ಫಲವಾಗಿ ಜಾಗತೀಕರಣವೆನ್ನುವ ಡೈನೋಸಾರ್ ತನ್ನ ದಾಪುಗಾಲನ್ನಿಡಲಾರಂಬಿಸಿತು. ಅದರ ಹರಿಕಾರರಾದ ಮನಮೋಹನ್ ಸಿಂಗ್ ತಮ್ಮ ಅಪಾರ ಪ್ರತಿಭೆ, ಪ್ರಾಮಾಣಿಕತೆ, ಮಿ.ಕ್ಲೀನ್ ಇಮೇಜ್, ಸರಳ ವ್ಯಕ್ತಿತ್ವ ದಿಂದಾಗಿ ನಿಧಾನವಾಗಿ ಆದರೆ ಗಟ್ಟಿಯಾಗಿ ಮಧ್ಯಮ, ಮೇಲ್ವರ್ಗಗಳ ಕಣ್ಮಣಿಯಾಗಿ ಮಿಂಚತೊಡಗಿದರು. ಈ ಮಧ್ಯಮ ವರ್ಗಗಳು ಯಾವಾಗಲೂ ಬಯಸುವ ಸಂತೃಪ್ತಿ ಬದುಕಿನ ಕನಸಿಗೆ, ತಮ್ಮ ಕೊಳ್ಳುಬಾಕತನ ಸಂಸ್ಕೃತಿಗೆ ಈ ಮನಮೋಹನ ಸಿಂಗ್ ಸಾಕ್ಷಾತ್ಕಾರಗೊಳಿಸುವ ದೂತರಂತೆಯೇ ಕಂಡರು.

ಆಮೇಲೆ ನಡೆದಿದ್ದು ಇತಿಹಾಸ ಅಥವಾ ಅಧಃಪತನಗಳ ಸರಣಿ. ಅದು ಮೌಲ್ಯಗಳ ಅಧಃಪತನ, ಸ್ವಂತಿಕೆಯ ಅಧಃಪತನ, ಈ ನೆಲದ, ಮಣ್ಣಿನ ಸಂಸ್ಕೃತಿಯ ,ಜನಪದ ಲೋಕದ, ಹಳ್ಳಿಗಳ ಅವಸಾನದ ಪ್ರಕ್ರಿಯೆ, ಸರ್ಕಾರ ಉದ್ದಿಮೆಗಳು ಈ ದೇಶವನ್ನು ದಿವಾಳಿ ಎಬ್ಬಿಸಿವೆ ಎನ್ನುವ  ಖಳನ ಪಟ್ಟ ಹೊತ್ತುಕೊಂಡಿತು ( ಇದೂ ಕೂಡ ಅರ್ಧ ಸತ್ಯ ಹಾಗೂ ಅರ್ಧ ಸುಳ್ಳು). ಉತ್ತಮ ಖಾಸಗೀಕರಣವೆನ್ನುವುದೇ ಒಂದು ಲೊಳಲೊಟ್ಟೆ ಎನ್ನುವ ನಿಜದ ಮಾತನ್ನು ಸಂಪೂರ್ಣವಾಗಿ ಮರೆತರು.

ನಮ್ಮ ರಾಜ್ಯದ ಒಂದು ಉದಾಹರಣೆಯೊಂದಿಗೆ ಇದನ್ನು ವಿವರಿಸಬಹುದು. ಸರ್ಕಾರಿ ಒಡೆತನದ ಗೃಹ ನಿರ್ಮಾಣ ಮಂಡಳಿಗಳು ನಿರ್ಮಿಸಿ ನಂತರ ಜನತೆಗೆ ಮಾರುವ L.I.G., M.I.G., H.I.G., ಬಡಾವಣೆಗಳನ್ನುನಾವು ಅವಲೋಕಿಸಬಹುದು. ಹೌದು ಸರ್ಕಾರದ ಆರ್ಥಿಕತೆಯ ಭ್ರಷ್ಟಾಚಾರದಿಂದ ಆ ಮನೆಗಳ ಗುಣಮಟ್ಟ ಯಾವತ್ತೂ ಕಳಪೆಯಾಗಿರುತ್ತದೆ. ಈ ಮನೆಗಳನ್ನು ಕೊಂಡವರು ಮತ್ತೆ ಅದನ್ನು ಪುನರ್ ನಿರ್ಮಾಣ ಮಾಡಿಸಿಕೊಳ್ಳುತ್ತಾರೆ. ಆದರೆ ಅಲ್ಲಿರುವ ಜ್ಯಾತ್ಯಾತೀತ ವ್ಯವಸ್ಥೆ ಮಾತ್ರ ಅಪೂರ್ವವಾದದ್ದು. ಅಲ್ಲಿ ಬ್ರಾಹ್ಮಣರ ಮನೆ ಪಕ್ಕ ಮುಸ್ಲಿಂರ ಮನೆ ಇರುತ್ತದೆ, ಅಥವಾ ಲಿಂಗಾಯತರ ಮನೆ ಪಕ್ಕ ದಲಿತರ ಮನೆ ಇರುತ್ತದೆ. ಒಟ್ಟಿನಲ್ಲಿ ಅಲ್ಲಿ ಎಲ್ಲಾ ಜಾತಿಯ ಸಂಸಾರಗಳು ಒಂದು ಕಾಲನಿಯಲ್ಲಿ ಬಾಳುತ್ತಿರುತ್ತವೆ. ಇದು ಯಾವುದೇ ಉದ್ದೇಶಪೂರ್ವಕ ಒತ್ತಡಗಳಿಲ್ಲದೆ ತಂತಾನೆ ಆದದ್ದು. ಇದು ಸಾಧ್ಯವಾದದ್ದು ಸರ್ಕಾರದ ಸಂಸ್ಥೆಗಳು ಸಹಜವಾಗಿಯೇ, ಅನಿರ್ವಾಯವಾಗಿಯೇ ಸಂವಿಧಾನದ ಜಾತ್ಯಾತೀತ, ಸಾಮಾಜಿಕ ನ್ಯಾಯದ, ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಅದರ ಫಲವೇ ಮೇಲಿನ ಒಂದು ಉದಾಹರಣೆ.

ಇದೇ ರಾಜ್ಯದ ಅನೇಕ ಖಾಸಗಿ ಒಡೆತನದ ಕೆಲವು ಲೇಔಟ್ ಗಳನ್ನು ನೋಡಿದರೆ ಅಲ್ಲಿನ ಜಾತೀಯತೆಯ ದುರ್ನಾತ ಕಣ್ಣಿಗೆ ರಾಚುತ್ತದೆ. ಏಕೆಂದರೆ ಖಾಸಗಿಯವರಿಗೆ ಸಂವಿಧಾನ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇದನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಕೂಡ ಅನ್ವಯಿಸಬಹುದು. ಇವರು ಕೇವಲ ಗುಣಮಟ್ಟದ ಹೆಸರಿನಲ್ಲಿ ಈ ದೇಶದ ಸಂವಿಧಾನದ ಚೌಕಟ್ಟಿಗೇ ಕೊಡಲಿ ಪೆಟ್ಟು ಕೊಟ್ಟಿರುವುದು, ಈಗಲೂ ಕೊಡುತ್ತಿರುವುದು ಸರ್ವರಿಗೂ ವಿದಿತವಾಗಿದೆ.

ಇಷ್ಟೆಲ್ಲ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದೆಯೆ, ತನ್ನ ಒಡೆತನದ ಉದ್ದಿಮೆಗಳನ್ನು, ಸಂಸ್ಥೆಗಳನ್ನು ಭ್ರಷ್ಟತೆಯಿಂದ, ಜಾತೀಯತೆಯಿಂದ ಮುಕ್ತಗೊಳಿಸುವ ನಿರ್ದಿಷ್ಟ ಕಾರ್ಯ ಸೂಚಿಗಳು, ಯೋಜನೆಗಳಿಲ್ಲದೆಯೆ, ನೆಗಡಿ ಬಂದರೆ ಮೂಗನ್ನು ಕೊಯ್ಯುವ ನೀತಿಯನ್ನು ಅನುಸರಿಸಿ ಈ ಸರ್ಕಾರಗಳು ಸರ್ವರೋಗಕ್ಕೂ ಖಾಸಗೀಕರಣವೇ ಮದ್ದು ಎನ್ನುವ ಒಂದು ಸರ್ಕಾರೀ ದೋರಣೆ, ಹಾಗೂ ನಮಗೆ ಬೇಕು ಖಾಸಗೀಕರಣ ಎನ್ನುವ ಮಧ್ಯಮ, ಮೇಲ್ವರ್ಗಗಳ, ಖಾಸಗೀ ಉದ್ದಿಮೆದಾರರ ಹಪಾಹಪಿತನ ಎಲ್ಲವೂ ಒಂದಂಕ್ಕೊಂದು ಪೂರಕವಾಗಿ ಸಮಾನರೂಪಿಯಾಗಿ ಹೊಂದಿಕೊಂಡು ಇದು ಕಳೆದ 20 ವರ್ಷಗಳಿಂದ ಈ ದೇಶವನ್ನು ಬೆಳವಣಿಗೆಯ ಹೆಸರಿನಲ್ಲಿ ದುರಂತದ ಅಂಚಿಗೆ ತಂದು ನಿಲ್ಲಿಸಿವೆ. ಖಾಸಗೀಕರಣದ ಇನ್ನೂ ಬೇಕು, ಇನ್ನೂ ಬೇಕೆನ್ನುವ ಅಸಹ್ಯಕರ, ಸ್ವಾರ್ಥ ಸಂಸ್ಕೃತಿ ಇಲ್ಲಿ ಸಂಪೂರ್ಣವಾಗಿ ನೆಲೆಗೊಂಡಿತು. ಇಂದಿಗೂ ಕೂಡ ಇದೇ ಪರಿಸ್ಥಿತಿ. ನಮ್ಮ ಮಾತೃಭಾಷೆಯ ಅಕ್ಷರ ಸಂಸ್ಕೃತಿ ತನ್ನ ಕವಲು ದಾರಿಯಲ್ಲಿ ಎತ್ತಲೂ ಹೊರಳಲು ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿ ನಿಂತಿತ್ತು.

ಈ ಗೊಂದಲಮಯ ಪರಿಸ್ಥಿಯ ಲಾಭ ಪಡೆದುಕೊಂಡ ಮೇಲ್ಜಾತಿ, ಮೇಲ್ವರ್ಗಗಳು ತಮ್ಮ ಜೀವನದ ಅತ್ಯಂತ ಮೇಲ್ಮಟ್ಟವನ್ನು ತಲುಪತೊಡಗಿದ್ದವು. ಸಾವಿರಾರು ವರ್ಷಗಳಂತೆ ಈ ಕಾಲಘಟ್ಟದಲ್ಲೂ ಕೂಡ ತಳ ಸಮುದಾಯಗಳು, ಅಲ್ಪ ಸಂಖ್ಯಾತರು, ಆದಿವಾಸಿಗಳು ಎಲ್ಲಿಯೂ ಸಲ್ಲದೆ ಇದರ ಅಟ್ಟಹಾಸದಲ್ಲಿ ಸಂಪೂರ್ಣವಾಗಿ ದಿಕ್ಕೆಟ್ಟರು. ಅವರು ಅಕ್ಷರಶಹ ತಬ್ಬಲಿಗಳಾಗಿ ಬೀದಿಗೆ ಬಿದ್ದದ್ದು ಇನ್ನೂ ನಮ್ಮ ಕಣ್ಮುಂದೆ ಇದೆ. ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎನ್ನುವ ಸಮತಾವಾದದ ನೀತಿಗಳೇ ಬುಡಮೇಲುಗೊಂಡು ಶೇಕಡ 7 ರಿಂದ 10 ರ ವ್ಯವಸ್ಥೆಯ ಭಾಗದ ಜನಜೀವನದ ಶೈಲಿ ಉತ್ತಮಗೊಳ್ಳುವಿಕೆಯೇ ಈ ದೇಶದ ಭವಿಷ್ಯದ ದಿಕ್ಸೂಚಿ ಎನ್ನುವಂತೆ ಬಿಂಬಿಸಲಾಯಿತು. ಸೆನ್ಸೆಕ್ಸ್ ಗಳಲ್ಲಿ ಮೂಡುವ ಆ ಮಾಯಾವಿ ಅಂಕೆಸಂಖ್ಯೆಗಳೇ  ನಮ್ಮ ದೇಶದ ಅಭಿವ್ರುದ್ದಿಯ ಮಾನದಂಡಗಳು ಎನ್ನುವ ಸರ್ಕಾರ, ಖಾಸಗಿ ಉದ್ದಿಮೆದಾರರು, ಮಧ್ಯಮ ,ಮೇಲ್ವರ್ಗ, ಹಾಗೂ ದೃಶ್ಯ ಮಾಧ್ಯಮ ಗಳು ಇವರೆಲ್ಲರ ಅಜ್ಞಾನದ, ಗೊತ್ತು ಗುರಿಯಿಲ್ಲದ, ಅಮಾನವೀಯ ಭಾಷ್ಯೆಗಳೇ ಕಳೆದ 20 ವರ್ಷಗಳಿಂದ ಚಾಲ್ತಿಯಲ್ಲಿತ್ತು. ಅಲ್ಲದೇ ಇದೇ ಈ ದೇಶವನ್ನು ಪೊರೆದಿತ್ತು. ಇದರ ದುರಂತ ಈಗ ನೋಡುತ್ತಿದ್ದೇವೆ.

ಈ ದೇಶದ ಶೇಕಡ 70 ರಷ್ಟು ಜನಸಂಖ್ಯೆ ಇಂದು ಅತಂತ್ರ ಸ್ಥಿತಿಯಲ್ಲಿ ನರಳುತ್ತಿವೆ. ವರ್ತಮಾನ ಭೀಕರವಾಗಿಯೂ, ಭವಿಷ್ಯವೇ ಇಲ್ಲದ ಅವರ ದಿನದ ಅದಾಯದ ಮೇಲೆ ಅಸಹ್ಯಕರ ಲೆಕ್ಕಾಚಾರಗಳು ನಡೆಯುತ್ತಿವೆ. ಇನ್ನೊಂದು ನೆಲೆಯಲ್ಲಿ ಈ ಜಾಗತೀಕರಣವೆಂಬ ಪೆಡಂಭೂತ ಸಕಲ ಸರ್ಕಾರೀ ಮರ್ಯಾದೆಗಳೊಂದಿಗೆ ತನ್ನ ದಾಪುಗಾಲನ್ನು ಇಡುತ್ತ ಮನೆಯ ಅಂಗಳವನ್ನು ದಾಟಿ, ವರಾಂಡವನ್ನು ದಾಟಿ, ನಡುಮನೆಗೆ ಬಂದು ಕೂತಾಗಿದೆ. ಈ ಕಾಲಘಟ್ಟದುದ್ದಕ್ಕೂ ಈ ಪೆಡಂಭೂತದ ವಿರುದ್ಧ ಹೋರಾಡಲು ಅಪಾರ ತಿಳುವಳಿಕೆ, ಸಿದ್ಧತೆಗಳು, ಪೂರ್ವ ಯೋಜನೆಗಳು, ನಿರಂತರವಾಗಿ ಸಂಘರ್ಷವನ್ನು ನಡೆಸುವ ಮಾನಸಿಕ ಸಿದ್ದತೆಗಳು ಇರಬೇಕಾದ ಜಾಗದಲ್ಲಿ ಪ್ರಗತಿಪರ ಸಂಘಟನೆಗಳು, ಚಿಂತಕರು, ಎಡಪಂಥೀಯ ಶಕ್ತಿಗಳು ಬಳಸಿದ್ದು ಉಳ್ಳಾಗಡ್ಡಿಯನ್ನು ಹೆಚ್ಚಲು ಬಳಸುವ ಮೊಂಡು ಚಾಕುವನ್ನು. ಇದರ ಫಲವಾಗಿ ನಾವೆಲ್ಲ ಅನೇಕ, ಸುದೀರ್ಘ ಪ್ರತಿರೋಧಗಳ ಮಧ್ಯೆಯೂ ಸೋಲೊಪ್ಪಿಕ್ಕೊಳ್ಳಬೇಕಾಯಿತು. ಅಪಹಾಸ್ಯಕ್ಕೀಡಾಗಬೇಕಾಯಿತು.

ಇಲ್ಲಿ ಕುತೂಹಲಕರ ಸಂಗತಿಯೆಂದರೆ ಇದೇ ಕಾಲ ಘಟ್ಟದಲ್ಲಿ ಘಟಿಸಿದ ಸಂಘ ಪರಿವಾರದ ವ್ಯವಸ್ಥಿತ, ಅಪಾರ ಸಿದ್ಧತೆಗಳನ್ನೊಳಗೊಂಡ, ಪೂರ್ವ ನಿಯೋಜಿತ ಕೋಮುವಾದದ ಸರಣಿ ಹತ್ಯೆಗಳ ವಿರುದ್ಧ ತಮ್ಮ ಎಲ್ಲ ಮಿತಿಗಳ ನಡುವೆಯೂ, ಈ  ಪ್ರಗತಿಪರ ಸಂಘಟನೆಗಳು, ಚಿಂತಕರು, ಜಾತ್ಯಾತೀತ ಶಕ್ತಿಗಳು 20 ವರ್ಷಗಳ ಕಾಲ ಬಿಡಿ, ಬಿಡಿಯಾಗಿ, ಸದರಿ ಸಂಘಟಿತ ಸಮಾಜದ್ರೋಹಿ ಶಕ್ತಿಗಳ ವಿರುದ್ಧ ನಿರಂತರವಾಗಿ ತಮ್ಮ ಮಿತಿಯಲ್ಲೇ ನಡೆಸಿದ ತಮ್ಮ ಅಸಂಘಟಿತ ಹೋರಾಟದಲ್ಲಿ ತಮ್ಮೆಲ್ಲ ಶಕ್ತಿಯನ್ನು ಪೋಲು ಮಾಡಿಕೊಳ್ಳಬೇಕಾಗಿ ಬಂದಿರುವುದೂ ಕೂಡ ಈ ಜಾಗತೀಕರಣದ ಯಶಸ್ಸಿಗೆ ಒಂದು ಕಾರಣ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಇಂದಿನ  ಅಡ್ಡಾದಿಡ್ಡಿಯಾಗಿಯೇ, ಗೊತ್ತು ಗುರಿಯಿಲ್ಲದೆಯೇ ,ಯೋಜನೆಗಳು, ಮುಖ್ಯವಾಗಿ ಕನಸುಗಳು ಇಲ್ಲದ ಕೇವಲ ಸಿನಿಕತನದ ಮನಸ್ಥಿತಿ  ಕೂಡ ಮತ್ತೊಂದು ದುರಂತಕ್ಕೆ ನಾಂದಿ ಹಾಡಲಿದೆ.

ಅನಗತ್ಯವಾಗಿ ಇಷ್ಟೆಲ್ಲ ಚರ್ವಿತ ಚರ್ವಣ ಪೀಠಿಕೆ ಯಾತಕ್ಕೆ ಹೇಳಬೇಕಾಯಿತು ಎಂದರೆ ಅಪಾರ ಪ್ರತಿಭೆ, ಪ್ರಾಮಾಣಿಕತೆ, ಮಿ.ಕ್ಲೀನ್ ಇಮೇಜ್, ಸರಳ ವ್ಯಕ್ತಿತ್ವದ ನಮ್ಮ ಪ್ರಧಾನ ಮಂತ್ರಿ ಮನಮೋಹ ಸಿಂಗ್ ರವರಿಗೆ ಇಷ್ಟೆಲ್ಲಾ ಸಂಕೀರ್ಣತೆ, ಗೋಜಲುಗಳು, ಸಾಮಾಜಿಕ ನ್ಯಾಯದ ವಿವಿಧ ಮಜಲುಗಳು 1992 ರಲ್ಲೂ ಅರ್ಥವಾಗಿರಲಿಲ್ಲ, 2001 ರಲ್ಲೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ, 2012ರ ವೇಳೆಗೂ ಏನೂ ತೋಚದೆ ಸಂಪೂರ್ಣ ಕಂಗೆಟ್ಟ ಸ್ಥಿತಿಯಲ್ಲಿ, ಒಬ್ಬಂಟಿತನದ, ಗೊಂದಲದ, ತಬ್ಬಲಿತನದ ಮನಸ್ಥಿಯಿಂದ ಈ ದೇಶವನ್ನು ಒಂದಲ್ಲ ಒಂದು ರೀತಿ ತಳಮಳಗಳ ಗೂಡಾಗಿಸಿರಿದ್ದಾರೆ ಈ ನಮ್ಮೆಲ್ಲರ ಪ್ರೀತಿಯ ಮನಮೋಹನ ಸಿಂಗ್. ಇದಕ್ಕೆ ಮೂಲಭೂತ ಕಾರಣ ಇವರು ರಾಜಕೀಯ ನಾಯಕರಲ್ಲದಿರುವುದು. ಇದಕ್ಕೆ ಮೂಲಭೂತ ಕಾರಣ ಇವರ ನಾಯಕಿ ಸೋನಿಯಾ ಗಾಂಧಿ ರಾಜಕೀಯ ನಾಯಕಿಯಲ್ಲದಿರುವುದು. ಇದಕ್ಕೆಲ್ಲ ಮೂಲಭೂತ ಕಾರಣ ವಿಶ್ವವಲಯದಲ್ಲಿ ಭಾರತದ ಅತ್ಯಂತ ಪ್ರಭಾವಿ ರಾಜಕಾರಣಿಗಳು ಎಂದು ಗುರುತಿಸಿಕೊಳ್ಳುವ ಇವರಿಬ್ಬರೂ ರಾಜಕಾರಣದ ಮೂಲಭೂತ ಕರ್ತವ್ಯಗಳಾದ ನಿರಂತರ ಜನಸಂಪರ್ಕ ಹಾಗೂ ಅವರೊಂದಿಗೆ ನಿರಂತರ ಸಂವಾದದ ನೀತಿಗಳನ್ನು ಕಳೆದ 20 ವರ್ಷಗಳಿಂದ ಮಾಡದೇ ಇರುವುದು, ಇದಕ್ಕೆಲ್ಲ ಮೂಲಭೂತ ಕಾರಣ ಇವರಿಬ್ಬರೂ ಸದನದಲ್ಲಿ ಆತ್ಮಸಾಕ್ಷಿಯಿಂದ, ಅಧಿಕೃತ ಅಂಕಿಅಂಶಗಳಿಂದ ಸುಧೀರ್ಘವಾಗಿ ಮಾತನಾಡುವ ಮೂಲಭೂತ ಅಗತ್ಯವನ್ನೇ ಮರೆತಂತಿರುವುದು, ಇದಕ್ಕೆಲ್ಲ ಮೂಲಭೂತ ಕಾರಣ ಈ ದೇಶದ ಸಂಕೀರ್ಣತೆಯನ್ನು, ಅದರ ಗೊಂದಲಗಳು, ಇಲ್ಲಿನ ಪ್ರಛ್ಛನ್ನ ಜಾತೀಯತೆ, ಅಂಕೆಗೆ ಸಿಗದ ಕೋಮುವಾದ,  ಅದರ ಗುಪ್ತ ಕಾರ್ಯಸೂಚಿಗಳು, ಜಾತಿ ಮೀರಿದ ಭ್ರಷ್ಟತೆ. ಇವೆಲ್ಲವನ್ನೂ ಸರಳವಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ದೇಶದ ಪ್ರಭಾವಿ ವ್ಯಕ್ತಿಗಳೆನಿಸಿಕೊಂಡ ಇವರಿಬ್ಬರಿಗೂ ಇಲ್ಲದಿರುವುದು. ಇದಕ್ಕೆಲ್ಲ ಮೂಲಭೂತ ಕಾರಣ 125 ವರ್ಷಗಳ ಇತಿಹಾಸವಿರುವ ಪಕ್ಷವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ಅದರ ಅಂತರಂಗ, ಒಳಗುಟ್ಟುಗಳು, ಆಂತರಿಕ ಬಿಕ್ಕಟ್ಟು ಇಂದಿಗೂ ನಮ್ಮ ಪ್ರೀತಿಯ ಮನಮೋಹನ ಸಿಂಗ್ ರವರಿಗೆ ಅರ್ಥವಾಗಿಲ್ಲ, ಗೊತ್ತಿಲ್ಲ, ಇನ್ನು ಪಳಗಿಸಿಕೊಳ್ಳುವ ಮಾತಂತೂ ಈ ಶತಮಾನದಲ್ಲಿ ಸಾಧ್ಯವಿಲ್ಲದ್ದು ಬಿಡಿ. ಇದಕ್ಕೆಲ್ಲ ಮೂಲಭೂತ ಕಾರಣ 125 ವರ್ಷಗಳ ಇತಿಹಾಸವಿರುವ ಪಕ್ಷವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ಅದರ ಅಂತರಂಗ, ಒಳಗುಟ್ಟುಗಳನ್ನು, ಆಂತರಿಕ ಬಿಕ್ಕಟ್ಟುಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ದೇಶದ ಅತ್ಯಂತ ಪ್ರಭಾವಿ ನಾಯಕಿ ಸೋನಿಯಾ ಗಾಂಧಿಯವರಿಗೆ ಅದನ್ನು ಪಳಗಿಸುವ ಮಂತ್ರದಂಡ ಕಾಲ ಕಾಲಕ್ಕೆ ಕೈಕೊಡುತ್ತಿರುವುದು. ಅಲ್ಲದೆ ಇದಕ್ಕೆ ಸೂಕ್ತ ರಾಜಕಾರಣಿಗಳನ್ನು ತನ್ನ ಅಪ್ತವಲಯದಲ್ಲಿ ಬಿಟ್ಟುಕೊಳ್ಳದಿರುವುದು,

ಇದೆಲ್ಲದರ ಫಲವೇ ಇಂದಿನ ಗೋಜಲು ಸ್ಥಿತಿ. ಇದೆಲ್ಲದರ ಫಲವೇ ಇಂದು ಇನ್ನೇನು ದಿಲ್ಲಿ ಮಾಯಾವಿಯ ಗದ್ದುಗೆ ತಮ್ಮ ಕೈಯಳತಲ್ಲಿದೆ, ಕೊಂಚ ಶ್ರಮ ಪಟ್ಟರೆ ಸಾಕು ಅದನ್ನು ನಾವು ಹತ್ತಿ ಕೂಡಬಹುದು ಎನ್ನುವ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಅಡ್ವಾನಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನರೇಂದ್ರ ಮೋದಿ ತರಹದ ಕೋಮುವಾದಿಗಳ ಗುಂಪು. ಇದೇನಾದರು ಸಾಧ್ಯವಾದರೆ ನಮ್ಮೆಲ್ಲರ ಪ್ರೀತಿಯ ಅಪಾರ ಪ್ರತಿಭೆಯ, ಪ್ರಾಮಾಣಿಕತೆಯ, ಸರಳ ವ್ಯಕ್ತಿತ್ವದ ಮನಮೋಹನ ಸಿಂಗ್ ಹಾಗೂ ಪ್ರಭಾವಿ ನಾಯಕಿ ಎನಿಕೊಂಡ ಸೋನಿಯ ಗಾಂಧಿ ಹಾಗೂ ದಿವಾಳಿ ಎದ್ದ ಕಾಂಗ್ರೆಸ್ ಪಕ್ಷ ಈ ದುರಂತದ ಅಪವಾದವನ್ನು ನೇರವಾಗಿ ಹೊರಬೇಕಾಗುತ್ತದೆ. ಜೊತೆಗೆ ಪ್ರಜ್ಞಾವಂತರೆನಿಸಿಕೊಂಡ, ಪ್ರಗತಿಪರರೆನಿಸಿಕೊಂಡವರೆಲ್ಲ ಇದಕ್ಕೆ ಹೊಣೆಗಾರರಾಗಬೇಕಾಗುತ್ತದೆ.

ದೃಶ್ಯ 3 : ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಇದೇ ಕಾಂಗ್ರೆಸ್ ನವರ ಸೋಮಾರಿತನ ,ಜಡತ್ವ, ಕಂಗಾಲುತನ, ದಿಕ್ಕು ತಪ್ಪಿದ ಸ್ಥಿತಿ, ಕುಮಾರಸ್ವಾಮಿಯವರು ತಮ್ಮ ಆತ್ಮಹತ್ಯಾತ್ಮಕ, ಸ್ವಯಂಕೃತ ಅಪರಾಧಗಳನ್ನು ಕಾಲ ಕಾಲಕ್ಕೆ ತಿದ್ದಿಕೊಳ್ಳದೆ ಮತ್ತೆ ಮತ್ತೆ ಅದಕ್ಕೆ ಕೈ ಹಾಕುತ್ತಿರುವ, ನಿಗೂಢ, ಅನೈತಿಕ ನಡೆಗಳು, ಇನ್ನು ಶ್ರೀರಾಮುಲು ತನ್ನ ಅಸಹ್ಯಕರ, ಭ್ರಷ್ಟ ಗೆಲುವನ್ನೇ ಮುಂದಿಟ್ಟುಕೊಂಡು, ಅಮಾಯಕ ಹಿಂದುಳಿದವರನ್ನು ಮುಂದಿಟ್ಟುಕೊಂಡು ಹುಟ್ಟು ಹಾಕಲಿರುವ  ಅನಾಹುತಕಾರಿ, ಪ್ರಜಾಪ್ರ್ಭತ್ವ ವಿರೋಧಿ ನಿರ್ಧಾರಗಳು, ಈ ಕರ್ನಾಟಕ ರಾಜ್ಯವೆನ್ನುವುದು ಆ ದೇವರು ನನಗೆ ಬರೆದುಕೊಟ್ಟ ಜಹಗೀರು, ಇದರ ಒಡೆತನ ನನ್ನ ಆಜನ್ಮಸಿದ್ಧ ಹಕ್ಕು ಎನ್ನುವಂತೆ ಅತ್ಯಂತ ಕುತಂತ್ರ, ಮೂಢಮಯ, ಭ್ರಷ್ಟ ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪ, ಇವರೆಲ್ಲರ ಈ ಸ್ವಾರ್ಥ ನಡೆಗಳು ಮುಂಬರಲಿರುವ ದಿನಗಳಲ್ಲಿ ನಮ್ಮ ರಾಜ್ಯದ ದಿಕ್ಸೂಚಿಯನ್ನು ಸೂಚಿಸುತ್ತವೆ.

ದೃಶ್ಯ 4 : ಇಷ್ಟೆಲ್ಲ  ಹತಾಶೆಯ, ಆತಂಕದ  ಮಾತುಗಳೇಕೆಂದರೆ, ಜನ ಸಾಮಾನ್ಯನಾದ ನನ್ನಂತವನ ಆತಂಕವೇನೆಂದರೆ ಇಂದಿಗೆ 5 ಅಥವಾ 10 ವರ್ಷಗಳ ನಂತರ ಜನತೆ “ಆ ಯಡಿಯೂರಪ್ಪನವರ ಸರ್ಕಾರವೇ ಪರವಾಗಿಲ್ಲ ಮಾರಾಯ್ರೆ ಕಡೇ ಪಕ್ಷ ಸ್ಕೂಲ್ ಮಕ್ಕಳಿಗೆ ಸೈಕಲ್ ಕೊಡಿಸಿದರು ,ಸಾರಾಯಿ ಬಂದು ಮಾಡಿಸಿದರು,” ಎನ್ನುವ ಸ್ಥಿತಿಗೆ ನಮ್ಮ ರಾಜ್ಯ ಬಂದು ತಲುಪಿದರೆ ನಾವೆಲ್ಲ ಅವಮಾನದಿಂದ, ಈ ಸ್ಥಿತಿಗೆ ಸಾಕ್ಷಿಗಳಾಗಿ, ಅಸಹಾಯಕ ಪ್ರೇಕ್ಷಕರಾಗಿದ್ದ ಅಪವಾದಗಳನ್ನು ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡು ಎಲ್ಲಿಗೆ ಹೋಗಬೇಕಾಗುತ್ತದೆ ಎನ್ನುವುದು.

ಬಿಎಸ್ ವೈ, ಸೋಮಣ್ಣ ವಿರುದ್ಧ ದೂರು

ಗುರುವಾರ ಲೋಕಾಯುಕ್ತ ಕೋರ್ಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಸೋಮಣ್ಣ ವಿರುದ್ಧ ಭೂಹಗರಣದ ದೂರು ದಾಖಲಾಯಿತು. ವರ್ತಮಾನ ಬಳಗದ ರವಿಕೃಷ್ಣಾರೆಡ್ಡಿ ಖಾಸಗಿ ದೂರನ್ನು ದಾಖಲಿಸಿದ್ದಾರೆ. ಕೆಂಗೇರಿ ಸಮೀಪ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿರುವ ದಾಖಲೆಗಳು ಲಭ್ಯವಾಗಿವೆ.  ತೀವ್ರ ಅನಾರೋಗ್ಯದ ಕಾರಣ ರವಿಕೃಷ್ಣಾ ರೆಡ್ಡಿ ಅವರಿಗೆ ಇಲ್ಲಿ ವಿಸ್ತೃತ ಲೇಖನ ಬರೆಯಲು ಸಾಧ್ಯವಾಗಿಲ್ಲ. ಆದ್ದರಿಂದ ದೂರು ದಾಖಲಾದ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನ ಇಲ್ಲಿ ನೀಡಿದ್ದೇವೆ.

 

 

 

 

 

 

ಚಿತ್ರಕೃಪೆ: ಪ್ರಜಾವಾಣಿ, ಉದಯವಾಣಿ, ವಿಜಯ ಕರ್ನಾಟಕ