Daily Archives: January 10, 2015

ಹೊಯ್ಸಳ ಉತ್ಸವ: ಕವಿಗೋಷ್ಟಿಯಲ್ಲಿ ಅಸ್ತ್ರಗಳಾದ ಕವಿತೆಗಳು

9hsn 15.jpg   PKPK
ಸದ್ಯ ಉತ್ಸವಗಳ ಕಾಲ. ಹಂಪಿಯಲ್ಲಿ ಹಂಪಿ ಉತ್ಸವ. ಮೂಡಬಿದ್ರೆಯಲ್ಲಿ ಆಳ್ವರ (ಉಳ್ಳವರ) ವಿರಾಸತ್. ಹಾಗೆಯೇ ಹಾಸನದಲ್ಲಿ ಹೊಯ್ಸಳ ಉತ್ಸವ. ನಾನಾ ಕಾರಣಗಳಿಂದ ಕಳೆದ ಹತ್ತು ವರ್ಷಗಳಿಂದ ಹಾಸನದಲ್ಲಿ ಹೊಯ್ಸಳ ಉತ್ಸವ ನಡೆದಿರಲಿಲ್ಲ. ಈ ಬಾರಿ ನಡೆಯುತ್ತಿದೆ. ಜನ ಸೇರಿಸುವ ಅದ್ಧೂರಿ ಕಾರ್ಯಕ್ರಮಗಳನ್ನು ಮಾಡಿದರಷ್ಟೇ ಅದು ಉತ್ಸವಗವಾಗುತ್ತೆ ಎಂಬ ಐಡಿಯಾಕ್ಕೆ ಜೋತುಬಿದ್ದ ಜಿಲ್ಲಾಡಳಿತ ನಾಲ್ಕುದಿನದ ಕಾರ್ಯಕ್ರಮದಲ್ಲಿ ಪಾಪುಲರ್ ಗಾಯಕರನ್ನು ಕರೆಸುವುದು, ಮನರಂಜನೆಗೆ ರಾಗಿ ಮುದ್ದೆ ಊಟ ಸ್ಪರ್ಧೆ ಹಾಗೂ ಜೊತೆಗೆ ಕೆಲ ಸ್ಥಳೀಯ ಕಲಾವಿದರಿಗೆ (ಜಾನಪದ, ಶಾಸ್ತ್ರೀಯ ಹಾಡುಗಾರರು) ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದೆ.

ಮುಖ್ಯವಾಗಿ ಇದು ಹೊಯ್ಸಳರ ಹೆಸರಿನಲ್ಲಿ ನಡೆಯುತ್ತಿರುವ ಉತ್ಸವ. ಅವರ ಕಾಲದಲ್ಲಿ ಕಲೆ, ಸಾಹಿತ್ಯ, ನೃತ್ಯ ಪ್ರಕಾರಗಳಿಗೆ ಸಾಕಷ್ಟು ಮನ್ನಣೆ ದೊರಕಿದ್ದು ಎಲ್ಲರಿಗೂ ಗೊತ್ತು. ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳು ಶಿಲ್ಪಕಲೆಗೆ ಜಗತ್ತಿನಾದ್ಯಂತ ಮನ್ನಣೆ ಪಡೆದಿವೆ. ಹೊಯ್ಸಳ ಉತ್ಸವ ಸಂಘಟಕರಿಗೆ ಶಿಲ್ಪಕಲೆಗೆ ಸಂಬಂಧಿಸಿದ್ದು ಏನನ್ನಾದರೂ ಮಾಡಬೇಕು ಎನಿಸುವುದಿಲ್ಲ. ಕಲಾವಿದರನ್ನು ಕರೆಯಿಸಿ ಒಂದು ಪ್ರದರ್ಶನ ಏರ್ಪಡಿಸಬೇಕು ಎನಿಸುವುದಿಲ್ಲ. ಕವಿಗೋಷ್ಟಿಯ ಯೋಚನೆಯೂ ಕೊನೇ ವೇಳೆಯಲ್ಲಿ ಹೊಳೆದು ಶುಕ್ರವಾರ 10 ಗಂಟೆಗೆ ಕವಿಗೋಷ್ಟಿ ಎಂದಷ್ಟೇ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಸುಮ್ಮನಾದರು. ಅದರಲ್ಲಿ ಭಾಗವಹಿಸುವ ಕವಿಗಳು ಯಾರು ಎಂಬ ಹೆಸರು ಬೇಡವೆ? ಕಾರ್ಯಕ್ರಮದ ಹಿಂದಿನ ದಿನ ದೂರವಾಣಿ ಕರೆ ಮಾಡಿ ಬಂದು ಕವನ ಓದಿ ಎಂದಿದ್ದಾರೆ. ಕವಿ ಚಲಂ ಹಾಡ್ಲಹಳ್ಳಿಯವರಿಗೆ ದೂರವಾಣಿ ಮಾಡಿದ ಸಿಬ್ಬಂದಿಯೊಬ್ಬರು “ನಿಮಗೆ ಆಹ್ವಾನ ಪತ್ರಿಕೆ ಬೇಕಿದ್ದರೆ, ನಮ್ಮ ಕಚೇರಿಗೆ ಬಂದು ಕಲೆಕ್ಟ್ ಮಾಡಿಕೊಳ್ಳಿ ಎಂದರಂತೆ”.

ಕವಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ರೂಪ ಹಾಸನ ಅವರನ್ನು ಕೊನೆ ಗಳಿಗೆಯಲ್ಲಿ ಕವಿಗೋಷ್ಟಿ ಉದ್ಘಾಟನೆಗೆ ಕರೆದಿದ್ದಾರೆ. ಅವರು ಅವ್ಯವಸ್ಥೆಗೆ ಬೇಸತ್ತು ಬರುವುದಿಲ್ಲ ಎಂದಿದ್ದಾರೆ. ನಂತರ ಅಧಿಕಾರಿಗಳು ಒತ್ತಾಯ ಮಾಡಿದಾಗ, ಆಗಿರುವ ಲೋಪಗಳನ್ನು ಎಲ್ಲರ ಮುಂದಿಡಲು ಇದುವೇ ಸರಿಯಾದ ವೇದಿಕೆ ಎಂದು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲಾಡಳಿತದ ಧೋರಣೆಯನ್ನು ವಿರೋಧಿಸಿ ತಾವು ಬರೆದ ಪತ್ರವನ್ನು ಉದ್ಘಾಟನಾ ಭಾಷಣವನ್ನು ಓದಿದರು. ಅದರ ಜೊತೆಗೆ ಈ ಪ್ರಸ್ತುತ ಸಂದರ್ಭಕ್ಕೆ ಸೂಕ್ತವಾಗುವ ಕುವೆಂಪು ಅವರ “ಕವಿ” ಎಂಬ ಕವನ ಓದಿದರು. ವಿಶಿಷ್ಟ ಎಂದರು, ಕುವೆಂಪು ಅವರು ಆ ಕವನವನ್ನು ಇದೇ ದಿನ, ಅಂದರೆ ಹಾಸನದಲ್ಲಿ ಕವಿಗೋಷ್ಟಿ ನಡೆದ ಜನವರಿ 9 ಕ್ಕೆ ಸರಿಯಾಗಿ 84 ವರ್ಷಗಳ ಹಿಂದೆ ಬರೆದಿದ್ದರು. ನಂತರ ಕವನ ವಾಚಿಸಿದ ಬಹುತೇಕರು ಅವರ ಧಾಟಿಯಲ್ಲಿಯೇ ಸಂಘಟಕರನ್ನು ಟೀಕಿಸಿದರು. ಚಲಂ ಹಾಗೂ ಚಿನ್ನೇನಹಳ್ಳಿ ಸ್ವಾಮಿ ಈ ಸಂದರ್ಭಕ್ಕೋಸ್ಕರವೇ ವಿಶೇಷ ಕವನಗಳನ್ನು ಬರೆದು ಓದಿದರು. ಆ ಮೂಲಕ ಕವಿತೆಗಳು ಅವರ ಆಕ್ರೋಶ ವ್ಯಕ್ತಪಡಿಸುವ ಅಸ್ತ್ರಗಳಾದವು. ಖಡ್ಗವಾಯಿತು ಕಾವ್ಯ!

ರೂಪ ಹಾಸನ ಅವರು ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ.

ಇವರಿಗೆ,
ಜಿಲ್ಲಾಡಳಿತ,
ಹಾಸನ ಜಿಲ್ಲೆ
ಹಾಸನ
9.1.2015
ನಮಸ್ಕಾರ.
ಹಾಸನ ಜಿಲ್ಲೆಯಲ್ಲಿ ದಶಕದಿಂದ ನಡೆಯದೇ ಉಳಿದಿದ್ದ ಹೊಯ್ಸಳ ಮಹೋತ್ಸವವು ಜನವರಿ 8,9,10,11 ರಂದು ವೈಭವಯುತವಾಗಿ ನಡೆಯುತ್ತಿದೆ. ಹೊಯ್ಸಳರು ಆಳಿದ ಈ ನಾಡಿಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ಸರ್ವಧರ್ಮಗಳ ಸಮನ್ವಯದ ಹೊಯ್ಸಳರ 300 ವರ್ಷಗಳ ಆಳ್ವಿಕೆಯಲ್ಲಿ ಕಲೆ, ಸಾಹಿತ್ಯ, ಶಿಲ್ಪ, ನೃತ್ಯ, ಸಂಗೀತ, ಸಂಸ್ಕೃತಿಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದುದು ಐತಿಹಾಸಿಕ ದಾಖಲೆಯಾಗಿದೆ. ತಮ್ಮ ಆಳ್ವಿಕೆಯ ಅವಧಿಯಲ್ಲಿ ಹೊಯ್ಸಳರು ಶಿಲ್ಪಕಲೆಗೇ ವಿಶಿಷ್ಟವೆನಿಸುವ ಅನೇಕ ದೇಗುಲಗಳನ್ನು ಕಟ್ಟಿಸಿದ್ದಕ್ಕೆ ಸಾಕ್ಷಿ ನಮ್ಮ ಕಣ್ಣೆದುರಿಗೇ ರಾರಾಜಿಸುತ್ತಿದೆ. ಪ್ರಖ್ಯಾತ ಶಿಲ್ಪಿಗಳಿಗೆ ಅವರ ಕಾಲಮಾನದಲ್ಲಿ ದೊರಕಿದ ಮನ್ನಣೆ ಇತಿಹಾಸದಲ್ಲಿ ದಾಖಲಾಗಿದೆ. ಜೊತೆಗೆ ಹೊಯ್ಸಳರ ಆಳ್ವಿಕೆಯಲ್ಲಿ ಪ್ರಸಿದ್ಧರಾದ ಕವಿಗಳು, ವಿದ್ವಾಂಸರು, ಶಾಸ್ತ್ರಿಗಳಿದ್ದು ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಿದ್ದುದಕ್ಕೆ ದಾಖಲೆಗಳಿವೆ.

ಆದರೆ ಇಂದಿನ ಹೊಯ್ಸಳ ಉತ್ಸವದ ಆಹ್ವಾನಪತ್ರಿಕೆಯನ್ನು ನೋಡಿದರೆ ಈ ಉತ್ಸವ ಯಾರದ್ದು? ಯಾರಿಗಾಗಿ? ಇದು ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದ, ಅವರಿಗಾಗಿಯಷ್ಟೇ ಮಾತ್ರ ನಡೆಯುತ್ತಿರುವ ಉತ್ಸವವೇ ಎಂದು ಗಾಬರಿಯಾಗುತ್ತಿದೆ. ನಾವಿಷ್ಟೂ ದಿನದಿಂದ ಬಯಸಿದ್ದು ಇದೇ ಪ್ರಭುತ್ವ ಕೇಂದ್ರಿತ ಹೊಯ್ಸಳ ಉತ್ಸವವನ್ನೇ ಎಂದು ವ್ಯಥೆಪಡುವಂತಾಗುತ್ತಿದೆ. ಈ ಉತ್ಸವದಲ್ಲಿ ಸಿನಿಮಾ ಕಲಾವಿದರನ್ನೂ ಒಳಗೊಂಡಂತೆ ಹಾಡು, ನೃತ್ಯ, ಮೋಜು, ಮಸ್ತಿಗೇ ಲಕ್ಷಾಂತರ ರೂಪಾಯಿಗಳನ್ನು ಖಚರ್ು ಮಾಡಿ ಪ್ರಾಧಾನ್ಯತೆ ನೀಡಿರುವುದು ಗೋಚರಿಸುತ್ತದೆ. ಜಿಲ್ಲೆಯ ಸಾಂಸ್ಕೃತಿಕ ಅಭಿವೃದ್ಧಿ ಕುರಿತ ಅವಲೋಕನವಾಗಲೀ, ಜಿಲ್ಲೆಯ ವಿವಿಧ ಕ್ಷೇತ್ರಗಳ ಬೆಳವಣಿಗೆಗೆ ಬೇಕಾದ ಮುನ್ನೋಟವನ್ನು ನೀಡುವ ವಿಚಾರ ಸಂಕಿರಣಗಳಾಗಲೀ ಇದರಲ್ಲಿ ಇಲ್ಲದಿರುವುದು ಮುಖ್ಯ ಕೊರತೆಯೆಂದು ನಾನು ಭಾವಿಸುತ್ತೇನೆ.

ನಾವು ಇಂದಿನ ಹೊಯ್ಸಳ ಉತ್ಸವವನ್ನು ನೋಡಿದರೆ ಹಾಗೂ ಹಿಂದೆ ಜಿಲ್ಲೆಯಲ್ಲಿ ನಡೆದ ಅನೇಕ ಹೊಯ್ಸಳ ಉತ್ಸವಗಳಲ್ಲಿ ಭಾಗಿಯಾದ ನೆನಪಿನಿಂದ ಹೇಳುವುದಾದರೂ ಸ್ಥಳೀಯ ಸಾಹಿತಿಗಳು, ಕವಿಗಳು, ಶಿಲ್ಪಕಲಾವಿದರೂ, ಚಿತ್ರಕಲಾವಿದರನ್ನು ಇಂದಿನ ಹೊಯ್ಸಳ ಉತ್ಸವದಲ್ಲಿ ಎಲ್ಲ ರೀತಿಯಲ್ಲಿಯೂ ಕಡೆಗಣಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ._DSC0633
ಹಾಸನದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯಮಟ್ಟದ ಚಿತ್ರಕಲಾವಿದರಿದ್ದಾರೆ. ಎರಡು ಚಿತ್ರಕಲಾ ಶಾಲೆಗಳಿದ್ದು ಅದರಿಂದ ನೂರಾರು ಭರವಸೆಯ ಚಿತ್ರಕಲಾವಿದರು ಹೊರಹೊಮ್ಮಿದ್ದಾರೆ. ದೆಹಲಿಯ ಚಿತ್ರಕಲಾ ಅಕಾಡೆಮಿಯ ಫೆಲೋಶಿಪ್ ಅನ್ನು ಚಿತ್ರಕಲೆಯಲ್ಲಿ ಪರಿಣಿತರಾದ ಹಾಸನ ಜಿಲ್ಲೆಯ 7 ಮಕ್ಕಳು ಪಡೆಯುತ್ತಿದ್ದು ಇದು ರಾಜ್ಯದಲ್ಲಿ ಅಪರೂಪದಲ್ಲಿ ಅಪರೂಪದ ಗೌರವವಾಗಿದೆ. ಇದಲ್ಲದೇ ಹಾಸನ ಜಿಲ್ಲೆಯ ಚಿತ್ರಕಲಾವಿದರು ಅನೇಕ ಅತ್ಯುನ್ನತ ಪ್ರಶಸ್ತಿ ಗೌರವಗಳನ್ನು ಪಡೆದು ಜಿಲ್ಲೆಯ ಗೌರವವನ್ನು ಹೆಚ್ಚಿಸಿದ್ದಾರೆ. ಆದರೆ ವಿಜೃಂಭಣೆಯಿಂದ ನಡೆಯುತ್ತಿರುವ ಈ ಹೊಯ್ಸಳ ಉತ್ಸವದಲ್ಲಿ, ಶಿಲ್ಪಕಲೆಯ ಈ ತವರೂರಿನಲ್ಲಿ, ಚಿತ್ರಕಲೆ, ಶಿಲ್ಪಕಲೆಗೆ ಸಂಬಂಧಿಸಿದ ಒಂದೇ ಒಂದು ಪ್ರದರ್ಶನವಾಗಲೀ, ಪ್ರಾತ್ಯಕ್ಷಿಕೆಯಾಗಲೀ ನಡೆಯದಿರುವುದು ನಮ್ಮ ಚಿತ್ರಕಲಾವಿದರು ಹಾಗೂ ಶಿಲ್ಪ ಕಲಾವಿದರನ್ನು ಅವಮಾನಿಸುತ್ತಿರುವುದರ ಸಂಕೇತವೆಂದು ನಾನು ಭಾವಿಸುತ್ತೇನೆ. ಹೊಯ್ಸಳ ಉತ್ಸವದಲ್ಲಿ ಚಿತ್ರ, ಶಿಲ್ಪಗಳ ರಚನೆಯಾಗಿದ್ದರೆ ಅವು ಶಾಶ್ವತವಾಗಿ ಉಳಿದು ಜಿಲ್ಲಾಡಳಿತದ ಆಸ್ತಿಯಾಗಬಹುದಿತ್ತು. ಅಂತಹ ಅವಕಾಶ ಈಗ ತಪ್ಪಿಹೋಗಿದೆ.

ಹಾಗೇ ನಮ್ಮ ಜಿಲ್ಲೆಯ ಅನೇಕ ಪ್ರಸಿದ್ಧ ಚಿಂತಕರು, ಕವಿ ಸಾಹಿತಿಗಳು ರಾಜ್ಯ, ಅಂತರ್ರಾಜ್ಯ ಕವಿ ಸಮ್ಮೇಳನ, ಉತ್ಸವ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿರುವಂತವರು. ಅನೇಕ ಉನ್ನತ ಪ್ರಶಸ್ತಿ ಗೌರವ ಸ್ಥಾನಮಾನಗಳನ್ನು ಪಡೆದಿರುವಂತವರು. ಅವರನ್ನು ಹೊಯ್ಸಳ ಉತ್ಸವದ ಸಲಹಾ ಸಮಿತಿಗಳಲ್ಲಿ ಭಾಗಿಗಳನ್ನಾಗಿ ಮಾಡಿಕೊಳ್ಳುವಂತಹ ಅಥವಾ ಇದೇ ಸಂದರ್ಭದಲ್ಲಿ ಹೊರತರುತ್ತಿರುವ ಸ್ಮರಣ ಸಂಚಿಕೆಯ ಸಮಿತಿಯಲ್ಲಿಯೂ ಒಳಗೊಳ್ಳುವಂತಹ ಕೆಲಸವಾಗಿಲ್ಲದಿರುವುದು ಖೇದನೀಯ. ಜಿಲ್ಲಾಡಳಿತ ಇವರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ.
ಪ್ರತಿ ಹೊಯ್ಸಳ ಉತ್ಸವದಲ್ಲಿ ಸ್ಥಳೀಯ ಕವಿಗಳೇ ಅಲ್ಲದೇ ರಾಜ್ಯದ ಪ್ರಖ್ಯಾತ ಕವಿಗಳನ್ನೂ ಕರೆಸಿ, ಅವರಿಂದ ಕವಿತೆ ಓದಿಸಿ, ಸನ್ಮಾನಿಸಿ ಗೌರವಿಸುವ ಪ್ರತೀತಿ ಇತ್ತು. ಈ ಬಾರಿ ಹೊರಗಿನ ಕವಿಗಳನ್ನಾರನ್ನೂ ಕವಿಗೋಷ್ಠಿಗೆ ಕರೆದಿಲ್ಲ. ಜೊತೆಗೆ ಕವಿಗೋಷ್ಠಿಯನ್ನೇ ಕಾಟಾಚಾರಕ್ಕಾಗಿ ನಡೆಸಲಾಗುತ್ತಿದೆ ಎಂಬುದಕ್ಕೆ ನಿದರ್ಶನಗಳೂ ಇವೆ. ಹೊಯ್ಸಳ ಮಹೋತ್ಸವದ ಮುಖ್ಯ ಮೊದಲದಜರ್ೆ ಆಹ್ವಾನಪತ್ರಿಕೆಯಲ್ಲಿ ಕವಿಗೋಷ್ಠಿಯ ಪ್ರಸ್ತಾಪವಿಲ್ಲ. ಅದರ ಜೊತೆಗಿಟ್ಟಿರುವ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳ ಸೂಚಿಯಾದ ಎರಡನೇದಜರ್ೆಯ ಆಹ್ವಾನಪತ್ರಿಕೆಯಲ್ಲಿ ‘ಕವಿಗೋಷ್ಠಿ-ಸ್ಥಳೀಯ ಕವಿಗಳಿಂದ ಎಂದಷ್ಟೇ ನಮೂದಾಗಿದೆ. ಕವಿಗಳ ಹೆಸರಿಲ್ಲ. ಯಾಕೆ? ನಮಗೆ ಕವಿಗಳಿಗೆ ಹೆಸರಿಲ್ಲವೇ? ಬೇರೆ ಸ್ಥಳೀಯ ಕಲಾವಿದರಿಗೆ ಎರಡನೇ ದಜರ್ೆಯ ಆಹ್ವಾನಪತ್ರಿಕೆಯಲ್ಲಿ ದೊರಕಿದಷ್ಟು ಗೌರವವೂ ಕವಿಗಳಿಗಿಲ್ಲದೇ ಹೋಯ್ತೇ? ಅಥವಾ ಕವಿಗಳಿಗೆ ಹೆಸರಿಲ್ಲ, ಗೌರವವಿಲ್ಲ, ಸ್ವಾಭಿಮಾನವೂ ಇಲ್ಲವೆಂದು ಜಿಲ್ಲಾಡಳಿತ ಭಾವಿಸಿಬಿಟ್ಟಿದೆಯೋ? ಕವಿಗಳು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಹೇಗೆ ಕರೆದರೂ ಬಂದು ಕವಿತೆ ಓದುತ್ತಾರೆ ಎಂಬ ಅಸಡ್ಡೆಯೋ? ಹೀಗಾಗೇ ನಮ್ಮ ಹೆಸರು ನಮೂದಾಗಿರುವ, ಕಂಪ್ಯೂಟರ್ನಲ್ಲಿ ಟೈಪಿಸಿದ, ನಮಗೆ…. ಎಂದರೆ ಕವಿಗಳಿಗಷ್ಟೇ ವಿತರಿಸಿದ ಮೂರನೇ ದಜರ್ೆಯ ಆಹ್ವಾನಪತ್ರಿಕೆಯ ಹೆಸರಿನ ಹಾಳೆ ನಮ್ಮನ್ನು ತಲುಪಿದೆ. ಈಗ ಸ್ಥಳೀಯ ಕವಿ ಸಾಹಿತಿ, ಚಿತ್ರಕಲಾವಿದ, ಶಿಲ್ಪಕಲಾವಿದರನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿರುವ ಈ ಹೊಯ್ಸಳ ಉತ್ಸವ ಯಾರಿಗಾಗಿ? ಏತಕ್ಕಾಗಿ? ಎಂಬುದನ್ನು ದಯಮಾಡಿ ಜಿಲ್ಲಾಡಳಿತ ವಿವರಿಸಬೇಕೆಂದು ಕೇಳಿಕೊಳ್ಳುವೆ.
ಆಹ್ವಾನಪತ್ರಿಕೆ ನೋಡಿದ ನಂತರ ಇಂತಹ ಕವಿಗೋಷ್ಠಿಯ ಉದ್ಘಾಟನೆಗೆ ಬರಲು ಸುತಾರಾಂ ನನಗೆ ಇಷ್ಟವಿರಲಿಲ್ಲ. ಆದರೆ ನನ್ನ ಈ ಪ್ರತಿರೋಧವನ್ನು ದಾಖಲಿಸುವ ಸಲುವಾಗಿಯೇ ಇಲ್ಲಿಗೆ ಬಂದಿದ್ದೇನೆ. ಅತ್ಯಂತ ನೋವಿನಿಂದ ಈ ಮಾತುಗಳನ್ನಾಡುತ್ತಿದ್ದೇನೆ.
ಇನ್ನು ಮುಂದೆ ಸ್ವಾಭಿಮಾನಿಗಳಾದ ಕವಿಗಳನ್ನು ಈ ರೀತಿಯಲ್ಲಿ ಅವಮಾನಿಸುವುದಾದರೆ ಹೊಯ್ಸಳ ಮಹೋತ್ಸವದಲ್ಲಿ ಕವಿಗೋಷ್ಠಿಯನ್ನೇ ಆಯೋಜಿಸುವುದು ಬೇಡ. ಕವಿಗೋಷ್ಠಿ ಇರಲೇ ಬೇಕೆಂದಿದ್ದರೆ ಕವಿಗಳಿಗೆ ತಕ್ಕುದಾದ ಗೌರವವನ್ನು ಕೊಟ್ಟು ಕವಿಗೋಷ್ಠಿಯನ್ನು ಆಯೋಜಿಸಬೇಕೆಂ117 (4)ದು ಜಿಲ್ಲಾಡಳಿತವನ್ನು ವಿನಮ್ರವಾಗಿ ನಿವೇದಿಸುತ್ತೇನೆ.

ನಮಗೆ, ಎಂದರೆ ಕವಿಗಳಿಗೆ ರಾಷ್ಟ್ರಕವಿ ಕುವೆಂಪು ಸದಾ ಮಾದರಿ. ಹೀಗೆಂದೇ ಅವರು 84ವರ್ಷಗಳ ಹಿಂದೆ ಇದೇ ದಿನದಂದು ಅಂದರೆ 9-1-1931 ರಂದು ರಚಿಸಿದ, ಇಂದಿಗೆ, ಈ ಸಂದರ್ಭಕ್ಕೆ ಪ್ರಸ್ತುತವಾದ ‘ಕವಿ’ ಎಂಬ ಕವಿತೆಯನ್ನು ಈ ಕವಿಗೋಷ್ಠಿಯ ಸಮಾರಂಭದಲ್ಲಿ, ಜಿಲ್ಲಾಡಳಿತ ಸ್ಥಳೀಯ ಕವಿಗಳನ್ನು ನಿರ್ಲಕ್ಷಿಸಿದ ಈ ಸಂದರ್ಭದಲ್ಲಿ ಓದುವ ಮೂಲಕ ಉದ್ಘಾಟಿಸಲು ಹೆಮ್ಮೆ ಎನಿಸುತ್ತದೆ. ಈ ಮೂಲಕ ನಾವು ಕವಿಗಳು ಪ್ರಭುತ್ವದ ಅವಕಾಶಕ್ಕಾಗಿಯಾಗಲೀ, ಆಡಳಿತಶಾಹಿಯ ಕೃಪಾಕಟಾಕ್ಷಕ್ಕಾಗಿಯಾಗಲೀ ದೀನರಾಗಿ ಕಾದಿರುವವರಲ್ಲ. ಬದಲಿಗೆ, ಸ್ವಾಭಿಮಾನಿಗಳು ಎಂಬುದನ್ನು ಮತ್ತೊಮ್ಮೆ ನಿಮ್ಮ ಗಮನಕ್ಕೆ ತರುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.

ವಂದನೆಗಳೊಂದಿಗೆ,
ನಿಮ್ಮ ವಿಶ್ವಾಸಿ
ರೂಪ ಹಾಸನ

*****

ಕುವೆಂಪು ಕವಿತೆ
ಕವಿ
ವಸಂತವನದಲಿ ಕೂಗುವ ಕೋಗಿಲೆ
ಬಿರುದನು ಬಯಸುವುದಿಲ್ಲ
ಹೂವಿನ ಮರದಲಿ ಜೇನುಂಬುಳಗಳು
ಮೊರೆವುದು ರಾಜನ ಭಯದಿಂದಲ್ಲ.
ವನದೇಕಾಂತದಿ ಪೆಣ್ ನವಿಲೆಡೆಯಲಿ
ಮಯೂರ ನೃತ್ಯೋನ್ಮತ್ತ ವಿಲಾಸಕೆ
ರಾಜನ ಕತ್ತಿಯ ಗಣನೆಯೆ ಇಲ್ಲ.

ನಿಧಾಘ ವ್ಯೋಮದಿ ಮೆಲ್ಲಗೆ ಮೆಲ್ಲಗೆ
ತನ್ನೊಂದಿಚ್ಛೆಗೆ ತೇಲುವ ಮೇಘದ ಆಲಸ್ಯಕೆ
ಅರಸನ ಅಳುಕಿಲ್ಲ.
ಗಾಳಿಯ ಮುತ್ತಿಗೆ
ಮೈ ಜುಮ್ಮೆನ್ನಲು
ತೆರೆತೆರೆ ತೆರೆಯುವ
ತಿಳಿಗೊಳದೆದೆಯಲಿ ಮಿನು ಮಿನು ಮಿಂಚುವ
ನುಣ್ ಬೆಳದಿಂಗಳ
ಲೀಲೆಗೆ ದೊರೆ ಮೆಚ್ಚುಗೆ ಬೇಕಿಲ್ಲ.
ಸಿಡಿಲನು ಸಿಡಿಯುತೆ
ಮೊಳಗುತೆ ನುಗ್ಗುವ
ಕಾರ್ಗಾಲದ ಕರ್ಮುಗಿಲಿಂ ಹೊಮ್ಮುವ
ಕೆಂಗಿಡಿ ಬಣ್ಣದ ಹೊಂಗೆರೆ ಮಿಂಚಿಗೆ
ಆಸ್ಥಾನದ ದಾಸ್ಯದ ಹುರುಪಿಲ್ಲ.
ಕತ್ತಲೆ ಮುತ್ತಿದ ಬಾನಲಿ ಮಿಣುಕುವ ತಾರೆಗೆ
ದೊರೆಯಾಣತಿ ತೃಣವಿಲ್ಲ
ವಿಪ್ಲವ ಮೂರ್ತಿಯ ಸಖನಾಗಿಹನೈ
ಕವಿಗರಸುಗಿರಸುಗಳ ಋಣವಿಲ್ಲ
ಅವನಗ್ನಿ ಮುಖಿ
ಪ್ರಳಯಶಿಖಿ!
ಕುವೆಂಪು
9.1.193