Daily Archives: January 8, 2015

ಕದ್ದ ತಲೆಮಾರುಗಳನ್ನು ಹುಡುಕುತ್ತಾ… : ಆಸ್ಟ್ರೇಲಿಯಾ… ಆಸ್ಟ್ರೇಲಿಯಾ! (ಭಾಗ-2)


– ಶ್ರೀಧರ್ ಪ್ರಭು


 

“We are all visitors to this time, this place. We are just passing through. Our purpose here is to observe, to learn, to grow, to love… and then we return home.”

– ಆಸ್ಟ್ರೇಲಿಯದ ಮೂಲನಿವಾಸಿಗಳಲ್ಲಿ ಪ್ರಚಲಿತವಿರುವ ಒಂದು ನಾಣ್ಣುಡಿ

ಪ್ರಪಂಚದ ಮೊದಲ ಕಾಲಾಪಾನಿ

ಇಂಗ್ಲೆಂಡ್ ಮತ್ತು ಅಮೆರಿಕೆಯ ಔದ್ಯೋಗಿಕ ಕ್ರಾಂತಿ ಒಂದು ಕಡೆ ಪ್ರಗತಿ ಮತ್ತು ಶ್ರೀಮಂತಿಕೆ ತಂದರೆ ಇನ್ನೊಂದೆಡೆ ಅತ್ಯಂತ ಕ್ರೂರ ಅಸಮಾನತೆಯನ್ನೂ ತಂದೊಡ್ಡಿತು. ಕಾರ್ಮಿಕರ, ಅದರಲ್ಲೂ ಬಾಲ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಶೋಷಣೆ ಮಿತಿ ಮೀರಿತ್ತು. ಬಹುತೇಕ ಜೈಲುಗಳು ತುಂಬಿ ತುಳುಕುತ್ತಿದ್ದವು. ಇಂತಹುದ್ದರಲ್ಲಿ, ಸಾಮ್ರಾಜ್ಯಶಾಹಿಗಳು ಕಂಡು ಕೊಂಡ ಸುಲಭ ಮಾರ್ಗವೆಂದರೆ ಕೈದಿಗಳನ್ನು ದೂರದ ದ್ವೀಪಗಳಿಗೆ ಸಾಗಿಸುವುದು. ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಬಗ್ಗು ಬಡಿಯಲು ಅಂಡಮಾನಿನ ಕಾಲಾಪಾನಿ Australia-aborigines-artಶಿಕ್ಷೆ ಕಂಡುಕೊಂಡಂತೆ, ತಮ್ಮದೇ ದೇಶದಲ್ಲಿನ ದಂಗೆ, ಹೋರಾಟಗಳನ್ನು ಹತ್ತಿಕ್ಕಲು ಕೈದಿಗಳನ್ನು ಆಸ್ಟ್ರೇಲಿಯಾಗೆ ಸಾಗಿಸುವ ಮಾರ್ಗ ಕಂಡು ಹಿಡಿಯಲಾಯಿತು. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದ ನಡುವಿನ ಸುಮಾರು ಎಂಬತ್ತು ವರ್ಷಗಳ ಅವಧಿಯಲ್ಲಿ ಸುಮಾರು 1,65,000 ಜನರನ್ನು ಆಸ್ಟ್ರೇಲಿಯಾಗೆ ಸಾಗಿಸಲಾಯಿತು.

ಮೂಲನಿವಾಸಿಗಳ ಮಾರಣ ಹೋಮ

ಹೀಗೆ ಕಾಲಿಟ್ಟ ಪಾಶ್ಚಿಮಾತ್ಯರು ಕೇಳಿ ಕಂಡರಿಯದ ರೋಗ ರುಜಿನಗಳನ್ನು ಮೂಲ ನಿವಾಸಿಗಳಿಗೆ ಅಂಟಿಸಿಬಿಟ್ಟರು. ನೆಗಡಿಯಿಂದ ಮೊದಲ್ಗೊಂಡು ಸೀತಾಳೆ ಸಿಡುಬು, ಕಾಲರ, ಕ್ಷಯ ರೋಗ, ಸಿಫಿಲಿಸ್ ನಂತಹ ಗುಪ್ತ ರೋಗಗಳು ಅಂಟಿಕೊಂಡು ಸಿಡ್ನಿ ಸುತ್ತಲಿನ ಅರ್ಧದಷ್ಟು ಮೂಲನಿವಾಸಿಗಳು ಸ್ವರ್ಗವಾಸಿಗಳಾದರು.

ನಲವತ್ತು ಸಾವಿರ ವರ್ಷಗಳಿಂದ ನೆಲವನ್ನು ತಬ್ಬಿ ಬದುಕಿದ ಪ್ರಾಚೀನ ಸಂಸ್ಕೃತಿಯೊಂದನ್ನು ಸಾಮ್ರಾಜ್ಯದಾಹದ ಬಿಳಿಯರು ಕೇವಲ (ಹತ್ತೊಂಬತ್ತನೇ ಶತಮಾನದ ಮೊದಲ) ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಗುರುತು ಸಿಗದಂತೆ ನಾಶಮಾಡಿಬಿಟ್ಟಿದ್ದರು.

ಬ್ರಿಟಿಷರ ಸಾಮ್ರಾಜ್ಯಶಾಹಿ ದಾಹದಲ್ಲಿ ಬೆಂದು 1901ರ ವರೆಗೂ ಒಂದು ವಸಾಹತುವಾಗಿಯೇ ಉಳಿದಿತ್ತು. ಅರ್ಥಿಕ ಅಸಮಾನತೆಯಲ್ಲಿ ಬೆಂದು ಬಂದ ಶೋಷಿತರು ಮತ್ತು ಸಾಮ್ರಾಜ್ಯ ಶಾಹಿಗಳು ಸೇರಿ ಮೂಲನಿವಾಸಿಗಳನ್ನು ಶೋಷಿಸಿದರು. ಇಂದು ಸಿಡ್ನಿ ರಾಜಧಾನಿಯಾಗಿರುವ ನ್ಯೂ ಸೌತ್ ವೇಲ್ಸ್ ನಿಂದ ಬೇರ್ಪಟ್ಟು ತಮ್ಮದೇ ಪ್ರಾಂತ್ಯ ನಿರ್ಮಿಸಿಕೊಳ್ಳಬೇಕು ಎಂಬ ಆಶಯದಿಂದ ಅಂದು ಕೇವಲ ಪೋರ್ಟ್ ಫಿಲ್ಲಿಪ್ ಒಂದು ಜಿಲ್ಲೆಯಾಗಿದ್ದ ವಿಕ್ಟೋರಿಯಾ ಪ್ರಾಂತ್ಯದ ಜನ ಹೋರಾಟ ನಡೆಸಿದರು. ಒಂದು ಪ್ರಾಂತ್ಯದ “ದೊಡ್ಡಣ್ಣನ” ವ್ಯವಹಾರ ಸಹಿಸದೆ ಹೋರಾಟಗಳು ನಡೆದವು.

ಯಾರಿಗೆ ಬಂತು ಎಲ್ಲಿಗೆ ಬಂತು?

ಆಸ್ಟ್ರೇಲಿಯಾ 1901 ರಲ್ಲಿ ಗಣರಾಜ್ಯವಾಗಿ ಉದಯಿಸಿತು. ಆದರೆ ಮೂಲನಿವಾಸಿಗಳ ಶೋಷಣೆ ಇನ್ನೂ ತೀವ್ರವಾಯಿತು. 1909 ರಿಂದ 1969 ರ ವರೆಗೆ ಸಾವಿರಾರು ಮಕ್ಕಳನ್ನು ತಮ್ಮ ತಂದೆ ತಾಯಿಯರಿಂದ ಕದ್ದು ಸರಕಾರ ಪ್ರಾಯೋಜಿಸಿದ ಹಾಸ್ಟೆಲ್ ಗಳಿಗೆ (ಒಂದು ರೀತಿಯಲ್ಲಿ ಮಕ್ಕಳ ಜೈಲುಗಳು) ಸಾಗಿಸಲಾಯಿತು. ಹೀಗಾಗಿ ಮೂಲನಿವಾಸಿಗಳನ್ನು Australia-family-aborigines“ಕದ್ದ ತಲೆಮಾರುಗಳು’ (ಸ್ಟೋಲನ್ ಜೆನರೇಶನ್ಸ್) ಎಂದು ಕೆರೆಯುವ ಪರಿಪಾಠವಿದೆ. ಇಂದಿಗೆ ಕೇವಲ ನಾಲ್ಕು ದಶಕಗಳ ಹಿಂದಿನವರೆಗೂ ಆಸ್ಟ್ರೇಲಿಯ ಸರಕಾರ ‘ಸುಸಂಸ್ಕೃತ’ ಗೊಳಿಸುವಸಲುವಾಗಿ ಕಾನೂನಿನನ್ವಯ ಮೂಲನಿವಾಸಿಗಳ ಮಕ್ಕಳನ್ನು ಅಪಹರಿಸುತ್ತಿತ್ತು.

ಹೆತ್ತವರಿಂದ ಬೇರ್ಪಟ್ಟ ಸಾವಿರಾರು ಜನರು ಕಳೆದೇ ಹೋದರು. ವ್ಯಕ್ತಿ ಗಳು ಮಾತ್ರವಲ್ಲ ಹಲವು ಜನಾಂಗಗಳೇ ಕಳೆದು ಹೋದವು

ರಕ್ತದ ಕಲೆ ತೊಳೆಯುತ್ತಾ…

ಆಸ್ಟ್ರೇಲಿಯಾಗೆ ಮೂಲನಿವಾಸಿಗಳ ರಕ್ತ ಅಂಟಿರುವುದು ಎಷ್ಟು ನಿಜವೋ ಅದನ್ನು ತೊಳೆಯಲು ನಡೆಯುತ್ತಿರುವ ಪ್ರಯತ್ನಗಳೂ ಅಷ್ಟೇ ನಿಜ. ತಾವು ಕ್ಷಮಿಸಲಾಗದ ಅಪರಾಧ ಮಾಡಿದ್ದೇವೆ ಎಂಬ ಅಪರಾಧಿ ಪ್ರಜ್ಞೆ ಬಹುತೇಕರಲ್ಲಿದೆ. ಕಳೆದ ದಶಕ ಒಂದರಲ್ಲೇ ಸರಕಾರ ಉತ್ತರ ಆಸ್ಟ್ರೇಲಿಯ ಪ್ರಾಂತದ 21% (ಹದಿಮೂರು ಲಕ್ಷ ಚದುರ ಮೀಟರ್ ನಷ್ಟು) ಭೂಮಿಯ ಒಡೆತನವನ್ನು ಮೂಲನಿವಾಸಿಗಳಿಗೆ ವಹಿಸಿ ಕೊಟ್ಟಿದೆ.

2008 ರಲ್ಲಿ ಅಂದಿನ ಪ್ರಧಾನಿ ಕೆವಿನ್ ರಡ್ ಮೂಲನಿವಾಸಿಗಳ ಬಹಿರಂಗ ಕ್ಷಮೆ ಕೇಳಿದರು. ಸರಕಾರ ಮೂಲನಿವಾಸಿಗಳ ಸಲುವಾಗಿ ಆಸ್ಟ್ರೇಲಿಯ ಸರಕಾರವೇ ಲಕ್ಷಗಟ್ಟಲೆ ಡಾಲರ್ ಖರ್ಚು ಮಾಡಿ ಮೂಲನಿವಾಸಿಗಳ ಆಶಯಗಳನ್ನು ಪ್ರತಿಪಾದಿಸುವ ಸಂವಾದ ಕಾರ್ಯಕ್ರಮಗಳನ್ನು ಸಂಯೋಜಿಸಿದೆ. ಇಂತಹ ಸಾಕಷ್ಟು ಕಾರ್ಯಕ್ರಮಗಳು ಆಸ್ಟ್ರೇಲಿಯ ದೇಶದ ಹೊರಗೂ ಜರುಗಿವೆ. ಅಂತಹ ಒಂದೆರಡು ಕಾರ್ಯಕ್ರಮಗಳು ಬೆಂಗಳೂರಿನಲ್ಲೂ ನಡೆದಿವೆ. ಸರಕಾರವೇ ಮುಂದೆ ನಿಂತು, ದುಡ್ಡು ಮತ್ತು ಅಂತರ ರಾಷ್ಟ್ರೀಯ ಮಟ್ಟದ ಪ್ರಚಾರ ಕೊಡಿಸಿ ತಾವೇ ಎಸಗಿದ ಅನ್ಯಾಯಗಳ ಖಂಡನೆ ಮಾಡುವ ಇಂತಹ ಉದಾಹರಣೆಗಳು ಅಪರೂಪ.

ನವೆಂಬರ್ 2014 ನಲ್ಲಿ ಜರುಗಿದ ಬೆಂಗಳೂರು Australia-aborigines-costumeಸಾಹಿತ್ಯ ಹಬ್ಬ (Bengaluru Literary Festival)ದಲ್ಲಿ ಕೂಡ ಅಂತಹ ಒಂದು ಸಂವಾದ ಜರುಗಿತ್ತು. ಕ್ಯಾತೀ ಕ್ರೇಗೀ, ಡೈಲನ್ ಕೋಲ್ಮನ್, ಅನೀಟ ಹೈಸ್, ಜೇರ್ಡ್ ಥಾಮಸ್, ಎಲೆನ್ ವಾನ್, ನೀರ್ವೆನ್ ಮತ್ತು ನಿಕೋಲ್ ವಾಟ್ಸನ್ ಮೊದಲಾದ ಆಸ್ಟ್ರೇಲಿಯಾದ ಜನಪರ ಲೇಖಕರು ಮತ್ತು ಹೋರಾಟಗಾರರೂ ಪಾಲ್ಗೊಂಡಿದ್ದರು. ಇಂತಹ ಆಸ್ಟ್ರೇಲಿಯದ ಅನೇಕ ಸಾಮಾಜಿಕ ಕಳಕಳಿಯ ಚಿಂತಕರು ಭಾರತದ ದಲಿತ-ಆದಿವಾಸಿ ಹೋರಾಟಗಳ ನಡುವೆ ಬಾಂಧವ್ಯ ಬೆಸೆಯುವ ಪ್ರಯತ್ನದಲ್ಲಿದ್ದಾರೆ.

ಇಂದು ಪ್ರಪಂಚದಾದ್ಯಂತ ಮೂಲನಿವಾಸಿಗಳು, ದಲಿತರು ಮತ್ತು ದಮನಿತರ ಪರ ನಡೆಯುತ್ತಿರುವ ಹೋರಾಟಗಳ ಆಶಯಗಳು ಬಹುತೇಕವಾಗಿ ಒಂದೇ. ಸಾಮ್ರ್ಯಾಜ್ಯಶಾಹಿಶೋಷಣೆಯ ವಿರುದ್ಧ ನಡೆದ ಸ್ವತಂತ್ರ ಹೋರಾಟದ ಮುಂದುವರಿದ ಭಾಗವಾಗಿ ದಲಿತ, ಶೋಷಿತ ಮತ್ತು ಮೂಲನಿವಾಸಿಗಳಿಗೆ ಸೇರಬೇಕಿರುವ ಹಕ್ಕುಗಳನ್ನು ಪಡೆಯುವ ಹೋರಾಟಗಳು ಒಂದಕ್ಕೊಂದು ಬೆಸೆದು ಒಗ್ಗಟ್ಟಿನ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.