Daily Archives: January 1, 2015

ಶುಭ್ರತೆಯನ್ನು ಹಣತೆ ಮಾಡಿ ತೇಲಿ ಬಿಟ್ಟಂತೆ : ಆಸ್ಟ್ರೇಲಿಯಾ… ಆಸ್ಟ್ರೇಲಿಯಾ! (ಭಾಗ-1)

[ವಕೀಲರೂ ಮತ್ತು ನಮ್ಮ ವರ್ತಮಾನ ಬಳಗದ ಲೇಖಕರೂ ಆಗಿರುವ ಶ್ರೀಧರ್ ಪ್ರಭು ಇತ್ತೀಚೆಗೆ ತಾನೆ ಆಸ್ಟ್ರೇಲಿಯ ಪ್ರವಾಸ ಮಾಡಿಕೊಂಡು ಬಂದಿದ್ದಾರೆ. ಬಂದ ತಕ್ಷಣ ತಮ್ಮ ಪ್ರವಾಸ ಕಥನ ಬರೆಯಲು ಆರಂಭಿಸಿದ್ದಾರೆ. ಈಗಾಗಲೆ ನಮ್ಮಲ್ಲಿ ಪ್ರಕಟವಾಗಿರುವ ಶ್ರೀಧರರ ಲೇಖನಗಳಿಗೆ ಸಾಕಷ್ಟು ಮೆಚ್ಚಿಗೆಗಳು ಬಂದಿರುವುದಷ್ಟೇ ಅಲ್ಲದೆ ಅವರು ನಮ್ಮ ಬಳಗದ ಸಕ್ರಿಯ ಸದಸ್ಯರಲ್ಲಿ ಒಬ್ಬರಾಗಿಬಿಟ್ಟಿದ್ದಾರೆ. ಇಂದು ಅವರ ಪ್ರವಾಸ ಕಥನದ ಮೊದಲ ಕಂತು ಪ್ರಕಟಿಸುತ್ತಿದ್ದೇವೆ. ಇದು ಸುದೀರ್ಘವಾಗಿ, ಸವಿಸ್ತಾರವಾಗಿ ಮೂಡಿಬರಲಿ ಎಂದು ಆಶಿಸುತ್ತೇವೆ. ಅವರ ಬರಹಗಳು ನಮ್ಮೆಲ್ಲರಿಗೂ ಪ್ರಸ್ತುತವಾಗಿರುತ್ತವೆ ಎನ್ನುವುದು ಈ ಮೊದಲ ಕಂತಿನಲ್ಲೇ ರುಜುವಾತಾಗುತ್ತಿದೆ. -ರವಿ]


– ಶ್ರೀಧರ್ ಪ್ರಭು


ಹೆಸರು: ರಾಯ್ ಪಾಮರ್
ವಯಸ್ಸು: 75 ವರ್ಷ
ವಾಸ: ಸೀಫೋರ್ಡ್ ಉಪನಗರ, ಮೆಲ್ಬರ್ನ್, ಆಸ್ಟ್ರೇಲಿಯಾ
ಉದ್ಯೋಗ: ಬ್ಯಾಂಕ್‌ನಿಂದ ನಿವೃತ್ತಿ ಪಡೆದ ನಂತರದಲ್ಲಿ ದಕ್ಷಿಣ ಮೆಲ್ಬರ್ನ್‌ ನಲ್ಲಿ ಆಫೀಸು ಕಟ್ಟಡಗಳಲ್ಲಿನ ಶೌಚಾಲಯಗಳ ಸ್ವಚ್ಚತೆ
ಹವ್ಯಾಸ: ಸೈಕಲ್ ಸವಾರಿ, ಪರ್ವತಾರೋಹಣ ಮತ್ತು ಗಾಲ್ಫ್

ಬ್ಯಾಂಕ್‌ನಿಂದ ನಿವೃತ್ತನಾದ ಮೇಲೆ ಏನಾದರೂ ಸ್ವಂತ ಉದ್ಯೋಗ ಮಾಡಬೇಕು ಎನಿಸಿದಾಗ ರಾಯ್ Australia-1ಒಂದು ಯೋಜನಾ ವರದಿ (project report) ತಯಾರಿಸಿ ಸಾಲಕ್ಕಾಗಿ ತನ್ನ ಬ್ಯಾಂಕ್ ಅನ್ನು ಸಂಪರ್ಕಿಸಿದ. ತಕ್ಷಣದಲ್ಲೇ ಸಾಲ ಮಂಜೂರಾಯಿತು; ಅಷ್ಟೇ ಅಲ್ಲ, ತಾನೂ ಕೆಲಸ ಕೊಟ್ಟಿತಲ್ಲದೇ, ಬ್ಯಾಂಕ್ ತನ್ನ ಅನೇಕ ಔದ್ಯಮಿಕ ಗ್ರಾಹಕರಿಗೆ ರಾಯ್‌ನನ್ನು ಪರಿಚಯಿಸಿಕೊಟ್ಟಿತು. ಇಂದು ರಾಯ್ ತನ್ನ ಸ್ವಂತ ಉದ್ಯೋಗದಲ್ಲಿ ಯಶಸ್ಸು ಸಾಧಿಸಿದ್ದಾರೆ.

ಕುತೂಹಲದಿಂದ ಮಾತಿಗೆಳೆದಾಗ ರಾಯ್ ಹೇಳಿದ್ದು ಅಚ್ಚರಿ ಮೂಡಿಸಿತು. ರಾಯ್ ಹೇಳಿದ್ದಿಷ್ಟು: ಸುಮಾರು ಎರಡು ಗಂಟೆಗಳಷ್ಟು ಕೆಲಸ ಮಾಡಿದರೆ ಅರವತ್ತು ಡಾಲರ್ ಸಂಪಾದಿಸುವ ಕೆಲಸವೆಂದರೆ ಈ ಕಟ್ಟಡಗಳ ನೈರ್ಮಲ್ಯದ ಕೆಲಸ. ಬೆಳಿಗ್ಗೆ ಆರು ಗಂಟೆಯಿಂದ ಎಂಟು ಗಂಟೆಯೊಳಗೆ ಕೆಲಸ ಮುಗಿಸಿ ಬಿಟ್ಟರೆ ನಂತರದ ಎಂಟು ಗಂಟೆಗಳ ಕಾಲ ತನ್ನ ಓದು, ಹವ್ಯಾಸಗಳಿಗೆ ಮೀಸಲಿಡಲು ಅವಕಾಶವಿದೆ.

ಬೆಳಿಗ್ಗೆ ಎಂಟು ಗಂಟೆಗೆಲ್ಲ ಕೆಲಸ ಮುಗಿಸಿ ಒಂಭತ್ತು ಗಂಟೆಗೆ ಮನೆ ಸೇರುವ ರಾಯ್ ತನ್ನ ಪ್ರೀತಿಯ ನಾಯಿ ಕೇಟಿ ಜತೆ ತಿರುಗಾಟಕ್ಕೆ ತೆರಳುತ್ತಾರೆ. ನಂತರ ಚಹಾ ಸಮಯ. ಹೆಂಡತಿ ಜೊತೆಗೂಡಿ ಉಭಯ ಕುಶಲೋಪರಿ ಮುಗಿಸಿ ಕಾರಿನ ಮೇಲೆ ಸೈಕಲ್ ಹೇರಿಕೊಂಡು ಆಲ್ಬರ್ಟ್ ಪಾರ್ಕ್ ನಲ್ಲಿ ಒಂದು ಗಂಟೆ ಸೈಕ್ಲಿಂಗ್ ಮುಗಿಸಿದ ನಂತರ ಕ್ರೀಡೆಯ ಬಗ್ಗೆ ಓದು. ನಂತರದಲ್ಲಿ ಮಧ್ಯಾಹ್ನದ ಊಟದ ತಯಾರಿ. ಮಧ್ಯಾಹ್ನ ಒಂದು ಗಂಟೆ ನಿದ್ರೆ. ಆರು ಗಂಟೆ ಸುಮಾರಿಗೆ ಸಣ್ಣ ಬಾಟಲಿ ಬಿಯರ್ ಜತೆ ಒಂದು ಗಂಟೆ ಕಾಲ ನಿಧಾನದ ಊಟ. ನಂತರ ಸಣ್ಣ ವಾಕಿಂಗ್ ಮತ್ತು ಕೊಂಚ ಓದು ಮುಗಿಸಿಕೊಂಡು ಎಂಟು ಗಂಟೆಗೆಲ್ಲ ಗೊರಕೆ ಶುರು. ಇನ್ನು ಹದಿನೈದು ದಿನಕ್ಕೊಮ್ಮೆ ಸಣ್ಣ ಬೆಟ್ಟಗಳಲ್ಲಿ ಬೋಟಿಂಗ್ ಮತ್ತು ಪರ್ವತಾರೋಹಣಕ್ಕೆಂದು ಹೋಗುವ ಪರಿಪಾಠ.

ನಮ್ಮ ಪೌರ ಕಾರ್ಮಿಕರ ದಿನಚರಿಯನ್ನೊಮ್ಮೆ ನೆನೆಸಿಕೊಳ್ಳಿ! ಸ್ವಚ್ಚತೆ ದೈವತ್ವಕ್ಕಿಂತ ಮೇಲು ಎಂದು ನಂಬಿರುವ ರಾಯ್ ತಾನು ಕೊನೆಯ ಬಾರಿ ಚರ್ಚ್‌ಗೆ ಯಾವಾಗ ಹೋಗಿರಬಹುದು ಎಂದು ನೆನಪೇ ಇಲ್ಲ. ತಾನು ಪ್ರೀತಿಸಿದ ಇಸ್ಲಾ ಳನ್ನು ಮದುವೆಯಾಗಿದ್ದು ಮೆಲ್ಬರ್ನ್ ನಗರದ ಪ್ರಾಣಿ ಸಂಗ್ರಹಾಲಯದಲ್ಲಿ.

ನಮ್ಮ ದೇಶದಲ್ಲಿ ‘ಸ್ವಚ್ಚತೆ’ ಕಾಪಾಡಲು ಜಾತಿಯೊಂದನ್ನು ಸೃಷ್ಟಿಸಿಕೊಂಡು, ಮಲಹೊರುವ ಕಾಯಕದಲ್ಲಿ ಅವರಿಗೆ 100% ‘ಮೀಸಲಾತಿ’ ಕೊಟ್ಟಿದ್ದೇವೆ ಎಂದು ಹೇಳಬೇಕೆನಿಸಿದರೂ, ನಮ್ಮ ದೇಶದ ಮಾನ ಮತ್ತು ರಾಯ್ ಪಾಮರ್‌ನ ಪ್ರಾಣ (ಆಶ್ಚರ್ಯದಿಂದ) ಎರಡೂ ಹೋಗುವುದು ಬೇಡ ಎಂದೆನಿಸಿ ಸುಮ್ಮನಾದೆ.

ಆಸ್ಟ್ರೇಲಿಯಾದ ತುಂಬೆಲ್ಲ ನೈರ್ಮಲ್ಯದಲ್ಲೇ ಶ್ರೇಷ್ಠತೆ ಕಾಣುವ, ಕ್ರೀಡೆ ಹವ್ಯಾಸ ಮತ್ತು ಪ್ರವಾಸಗಳಿಗೆ ಹೆಚ್ಚಿನ ಸಮಯ ಮೀಸಲಿಡುವ ರಾಯ್ ನಂಥವರೇ Australia-2ಬಹುಸಂಖ್ಯಾತರು. ನೈರ್ಮಲ್ಯದ ಕೆಲಸವನ್ನು ಯಾಕೆ ಹೇಸಿಗೆ ಎಂದುಕೊಳ್ಳಬೇಕು ಎಂಬುದೇ ಅರ್ಥವಾಗದ ಮೇಲೆ ಅದನ್ನು ಜಾತಿಯೊಂದಕ್ಕೆ ಅಂಟಿಸಿ ತುಚ್ಚವಾಗಿಸುವ ಪ್ರಕ್ರಿಯೆ ಅವರಿಗೆ ಹೇಗೆ ಗೊತ್ತಾಗಬೇಕು? ಇವರದ್ದು ಮೀಡಿಯಾ ಮುಂದೆ ಪೊರಕೆ ಹಿಡಿದ ಮುಸುಡಿ ತೋರಿಸುವಂಥ ಗಿಮಿಕ್ ಅಲ್ಲ; ಅವರ, ಮತ್ತವರ ಸಮಾಜದ ಭಾವಕೋಶದ ತುಂಬೆಲ್ಲ ಆವರಿಸಿರುವ ಒಂದು ಅವಿಭಾಜ್ಯತೆ.

ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸ್ವಚ್ಚತೆ ಸಹಜವಾಗಿ ಇರುವಂಥದ್ದೇ. ಅದರಲ್ಲೂ ಇಲ್ಲಿನ ಒಂದು ವಿಶೇಷವೆಂದರೆ, ಕಸ ಗುಡಿಸುವುದು, ಕಕ್ಕಸು ತೊಳೆಯುವುದು, ಬಟ್ಟೆ ಬರೆ ಸ್ವಚ್ಛ ಗೊಳಿಸುವುದು ಇತ್ಯಾದಿ, ವಕೀಲಿ, ವೈದ್ಯಕೀಯ ಮುಂತಾದವುಗಳಷ್ಟೇ ಸಹಜವಾದ ಕೆಲಸ. ವಾರಕ್ಕೊಂದು ಬಾರಿ ಬರುವ ಪುರಸಭೆಯ ವಾಹನ ಮನೆಯಲ್ಲಿನ ಕಸದ ಬುಟ್ಟಿಗಳನ್ನು (ಆಹಾರ ಇತ್ಯಾದಿ ಕೇಸರಿ ಮುಚ್ಚಳದ ಬುಟ್ಟಿಯಲ್ಲಿ ಮತ್ತು ಪ್ಲಾಸ್ಟಿಕ್, ರಬ್ಬರ್ ಇತ್ಯಾದಿ ಕೆಂಪು ಮುಚ್ಚಳದ ಬುಟ್ಟಿಯಲ್ಲಿ ತುಂಬಿಸಿ ಇಡಬೇಕು) ಸರದಿಯಂತೆ ಎತ್ತಿ ಅನಾಮತ್ತಾಗಿ ತನ್ನೊಳಗೆ ಸುರಿದುಕೊಳ್ಳುವ ವಾಹನ ಹತ್ತೇ ನಿಮಿಷದಲ್ಲಿ ಒಂದಿಡೀ ಬಡಾವಣೆಯ ಕಸವನ್ನು ಸಂಗ್ರಹಿಸುತ್ತದೆ.

ನಾವು ಅಸ್ಪೃಶ್ಯತೆ ಕಡಿಮೆಯಾಗಿದೆ ಎಂದು ಭಾವಿಸುವ ನಗರ ಪ್ರದೇಶಗಳಲ್ಲಿ ಕೂಡ ಪೌರ ಕಾರ್ಮಿಕರನ್ನು ಮನೆಯೊಳಗೆ ಸೇರಿಸಿಕೊಳ್ಳುವ ಪರಿಪಾಠ ಇಲ್ಲ. ಅಳಿದುಳಿದ ಹಳಸಲನ್ನು ಐದು ಅಡಿ ಎತ್ತರದಿಂದ ಬಿಸಾಕಿ ದಾನ ಮಾಡಿ ಪುಣ್ಯ ಕಟ್ಟಿ ಕೊಳ್ಳುತ್ತೇವೆ. ಅಂತಹುದರಲ್ಲಿ ಮೊನ್ನೆ ಕ್ರಿಸ್ಮಸ್ ನ ಮುನ್ನಾ ದಿನ, ವಿಕ್ಟೋರಿಯಾ ರಾಜ್ಯದ ಫ್ರಾಂಕ್ಸ್ಟನ್ ಪುರಸಭೆಯ ಸಿಬ್ಬಂದಿ ಅಗ್ನಿಶಾಮಕದಳದ ವಾಹನದಲ್ಲಿ ಮನೆ ಮನೆಗೂ ಬಂದು ಮಕ್ಕಳಿಗೆಲ್ಲ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಮಿಠಾಯಿ ಹಂಚಿ ಹೋದದ್ದು ವಿಶೇಷ. ಮನೆಯಲ್ಲಿನ ಎಲ್ಲರೂ ಪೌರ ಸಿಬ್ಬಂದಿಯನ್ನು ಸಂತೋಷದಿಂದ ಬರಮಾಡಿಕೊಂಡು ಸಿಹಿಯ ಪೊಟ್ಟಣವನ್ನು ಲಗುಬಗೆಯಿಂದ ತೆರೆದು ಪ್ರಸಾದದಂತೆ ತಿಂದರು!

ಐತಿಹಾಸಿಕ ಸ್ಮಾರಕಗಳು, ಉದ್ಯಾನಗಳು, ಪ್ರಾಣಿ ಸಂಗ್ರಹಾಲಯಗಳು ಮುಂತಾದೆಡೆಗಳಲ್ಲಿ ಹುಲ್ಲುಹಾಸಿನ ಮೇಲೆ ಕುಳಿತು ಊಟ ಮಾಡಲು ಯಾವ ನಿರ್ಬಂದನೆಯೂ ಇಲ್ಲ. ಸಾರ್ವಜನಿಕರು ತಮ್ಮ ಪ್ಲಾಸ್ಟಿಕ್ ಪೊಟ್ಟಣಗಳು ಮಿಕ್ಕ ಆಹಾರ ಇತ್ಯಾದಿ ತಾವೇ ತುಂಬಿಸಿಕೊಂಡು ಹೋಗುತ್ತಾರೆ. ರೈಲು-ಬಸ್ ನಿಲ್ದಾಣ, ಉದ್ಯಾನವನ, ಜನಪ್ರಿಯ ಪ್ರವಾಸಿ ತಾಣ ಮತ್ತಿತರೇ ಹೆಚ್ಚು ಜನಸಂದಣಿಯ ಜಾಗಗಳಲ್ಲಿ ಕೂಡ ಶೌಚಾಲಯಗಳು ಅಸ್ಥವ್ಯಸ್ಥವಾಗಿಲ್ಲ.

ಹೆದ್ದಾರಿಯುದ್ದಕ್ಕೂ ಅನೇಕ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಮತ್ತು ಊಟ ಮಾಡಲು ಕಲ್ಲಿನ ಮೇಜು-ಬೆಂಚುಗಳನ್ನೂ ನಿರ್ಮಿಸಿದ್ದಾರೆ. Australia-3ಯಾವ ನರಪಿಳ್ಳೆಯೂ ಸುಳಿಯದ ಅಂಥಹ ನಿರ್ಜನ ಪ್ರದೇಶಗಳಲ್ಲಿ ಕೂಡ ಸ್ವಚ್ಚತೆ ರಾರಾಜಿಸುತ್ತದೆ. ಇನ್ನೊಂದು ವಿಶೇಷವೆಂದರೆ ನೆಲಕ್ಕೇ ಜೋಡಿಸಿದ ಅನಿಲಚಾಲಿತ ಒಲೆಗಳನ್ನೂ ನಿರ್ಮಿಸಿ ಇಟ್ಟಿದ್ದಾರೆ. ಒಂದೆರಡು ಡಾಲರ್ ನಾಣ್ಯ ಹಾಕಿದರೆ ಉರಿಯುವ ಈ ಒಲೆ ಚಳಿಗಾಲದಲ್ಲಿ ಆಹಾರ ಬಿಸಿ ಮಾಡಿಕೊಳ್ಳಲು, ಎಣ್ಣೆ ಇಲ್ಲದೆ ಹುರಿಯಲು ಕೂಡ ತುಂಬಾ ಸಹಾಯಕಾರಿ. ಸಾವಿರಾರು ಮೈಲಿ ಸತತವಾಗಿ ಸಾಗುವ ವಾಹನ ಚಾಲಕರಿಗೆ ನಿದ್ದೆಯ ಜೋಂಪು ಬಂದಾಗ ವಿಶ್ರಮಿಸಲೆಂದೇ ವಿಶ್ರಾಂತಿ ಸ್ಥಳಗಳನ್ನು ನಿರ್ಮಿಸಿದ್ದಾರೆ. ತೀರ ನಿರ್ಜನವಾದ ಹೆದ್ದಾರಿಗಳ ಬದಿಯಲ್ಲಿ ಕೂಡ ರಸ್ತೆ ಬದಿಯಲ್ಲಿ ಮಲ ಮೂತ್ರ ಮಾಡಿದ್ದನ್ನು ನಾವು ನೋಡಲಿಲ್ಲ.

ಸಿಂಗಾಪುರ್ ನಂತೆ, ಗಲೀಜು ಮಾಡುವುದನ್ನು ಇಲ್ಲಿ ಅಪರಾಧೀಕರಣಗೊಳಿಸಿದಂತಿಲ್ಲ. ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಬೆದರಿಸುವ ಇಲ್ಲವೇ ಭಾರೀ ದಂಡ ವಿಧಿಸುವ ಫಲಕಗಳೂ ಇಲ್ಲಿಲ್ಲ. ಆಸ್ಟ್ರೇಲಿಯಾನಲ್ಲಿ ಸಾರ್ವಜನಿಕ ಸ್ವಚ್ಚತೆ ಎಂಬುದು ತಮ್ಮ ತಮ್ಮ ಮನೆಗಳಲ್ಲಿ ತಾವಾಗಿಯೇ ವಹಿಸಿಕೊಂಡು ಸಂತೋಷದಿಂದ ಮಾಡುವ ರೀತಿಯದ್ದು; ಯಾವ ಒತ್ತಾಯ, ಬೆದರಿಕೆ, ಪ್ರಚಾರ ಅಥವಾ ಧಾರ್ಮಿಕ ಕಟ್ಟಳೆಗಳ ಸಲುವಾಗಿ ಹೇರಿಕೊಂಡ ಭಾರವಲ್ಲ.

ಪ್ರತಿ ವರ್ಷ ಸೆಪ್ಟೆಂಬರ್ 7 ರಂದು “ಆಸ್ಟ್ರೇಲಿಯಾ ಸ್ವಚ್ಚತಾ ದಿವಸ” ಆಚರಿಸಲಾಗುತ್ತದೆ. “ಕ್ಲೀನ್ ಅಪ್ ಆಸ್ಟ್ರೇಲಿಯಾ” ಎಂಬ ಜನಪ್ರಿಯ ಆಂದೋಲನ ದೇಶದಾದ್ಯಂತ ವ್ಯಾಪಿಸಿದೆ. ಆಸ್ಟ್ರೇಲಿಯಾದ ಪರಿಸರ ಇಲಾಖೆ “ನೈರ್ಮಲ್ಯ ನೀತಿ” ಯೊಂದನ್ನು ನಿರೂಪಿಸಿ, ತನ್ನ ಕಸವನ್ನು ರಸವಾಗಿಸುವ ತಂತ್ರ ನಿರೂಪಿಸಿದೆ. ಆದರೆ ನೈರ್ಮಲ್ಯ ಸರಕಾರೀ ಹೇರಿಕೆಯಿಂದ ಪ್ರೇರೇಪಿತವಲ್ಲ.

ಆಸ್ಟ್ರೇಲಿಯಾ ನಿರ್ಜನ ಪ್ರದೇಶವಾದ್ದರಿಂದ ಅಲ್ಲಿ ನೈರ್ಮಲ್ಯ ಉಳಿದಿದೆ ಎಂಬ ಭಾವನೆಯಿದೆ. ಇದು ಅರ್ಧ ಸತ್ಯ. ಇಂದು ಮೆಲ್ಬರ್ನ್‌ನ ಜನಸಂಖ್ಯೆ ನಲವತ್ತು ಲಕ್ಷ ದಾಟಿದೆ; ಸಿಡ್ನಿ ನಗರ ಅರ್ಧ ಕೋಟಿ ಅಂಚಿನಲ್ಲಿದೆ. ವಿಕ್ಟೋರಿಯಾ ರಾಜ್ಯ ಒಂದರಲ್ಲೇ ಸುಮಾರು ನಲವತ್ತು ದೇಶಗಳಿಂದ ವಲಸೆ ಬಂದ ಲಕ್ಷಾಂತರ ಜನರಿದ್ದಾರೆ. ಪ್ರತಿ ವರ್ಷ ಸುಮಾರು ಅರವತ್ತು ಲಕ್ಷದಷ್ಟು ಪ್ರವಾಸಿಗರು ಆಸ್ಟ್ರೇಲಿಯಾಗೆ ಬಂದಿಳಿಯುತ್ತಾರೆ.

ನಮ್ಮ ಕೆಲಸವೇನಿದ್ದರೂ ಕಸ ಹಾಕುವುದು, ಅದನ್ನು ಬಳಿಯುವುದು ಕೀಳು ಜಾತಿಯೊಂದರ ಮೀಸಲು ವೃತ್ತಿ ಎಂಬುದೇ ನಮ್ಮ ಅಚಲ ನಂಬಿಕೆ. ಹೇಗೆ “ಮೇಲು” ಜಾತಿಗಳನ್ನು ಯುದ್ಧ ಮಾಡುವುದರಿಂದ ದೂರ ಮಾಡಿದ್ದರಿಂದ ನಮ್ಮ ದೇಶ ಗುಲಾಮಗಿರಿಯ ಸಂಕೋಲೆಗೆ ಸುತ್ತಿಕೊಂಡಿತೋ ಹಾಗೇ ನೈರ್ಮಲ್ಯವನ್ನು ಕಾಪಾಡುವ ಕರ್ತವ್ಯವನ್ನು “ಕೀಳು” ಜಾತಿಯ ಕೊರಳಿಗೆ ಕಟ್ಟಿ ಅದನ್ನು ಹೇಸಿಗೆಯ ದೃಷ್ಟಿಯಿಂದ ನೋಡಿದ್ದರಿಂದ ನಮ್ಮ ದೇಶ ದೊಡ್ಡದೊಂದು ತಿಪ್ಪೆ ಗುಂಡಿಯಾಗಿದೆ. ನಮ್ಮ ನದಿಗಳು ಹೆಣಗಳು ಮತ್ತು ರಾಸಾಯನಿಕಗಳನ್ನು ಮೆತ್ತಿದ ವಿಗ್ರಹಗಳನ್ನು ನುಂಗುವ ನುಂಗಬೇಕಾದ ಅನಿವಾರ್ಯತೆ ಇರುವ ವಿಷದ ಗುಂಡಿಗಳು.

ಅಲ್ಲಿನ ಜನ ಜೀವನ, ಆಹಾರ ಪದ್ಧತಿ ಮತ್ತು ಔದ್ಯೋಗಿಕ ಪ್ರಗತಿ ನೋಡಿದರೆ ಭಾರತದ ನೂರರಷ್ಟು ಪರಿಸರ ಹಾನಿಯಾಗಬೇಕಿತ್ತು. ಆದರೆ ಮೆಲ್ಬರ್ನ್ ನಗರ 2011 ರಿಂದಲೂ ಸತತವಾಗಿ ವಿಶ್ವದ ‘ಜೀವಿಸಲು ಅತ್ಯಂತ ಯೋಗ್ಯ’ ನಗರವೆಂದು ಘೋಷಿತವಾಗಿದ್ದರೆ, ಅಡಿಲೇಡ್ ವಿಶ್ವದ ಎರಡನೇ ಸ್ವಚ್ಛ ನಗರ ಎನಿಸಿದೆ.

ಆಸ್ಟ್ರೇಲಿಯಾನಲ್ಲಿ ಕ್ರಿಸ್ಮಸ್ ಸಂದರ್ಭದಲ್ಲೂ ಒಂದೇ ಒಂದು ಸಾರ್ವಜನಿಕ ಸ್ಥಳವನ್ನು ಒಂದಿನಿತೂ ಗಲೀಜು ಮಾಡಿದ್ದು ನಮ್ಮ ಕಣ್ಣಿಗೆ ಬೀಳಲಿಲ್ಲ. ಕ್ರಿಸ್ಮಸ್ ಆಚರಣೆ ಧಾರ್ಮಿಕ ಆಚರಣೆ ಎನಿಸುವಂತೆ ಇಲ್ಲವೇ ಇಲ್ಲ. ಹೆಚ್ಚೆಂದರೆ ಅದೊಂದು ದೊಡ್ಡ ಸಾಮಾಜಿಕ ಉತ್ಸವ. ಜನರೆಲ್ಲರೂ ಒಟ್ಟು ಸೇರಿ ನಮ್ಮ ತರಹದ ಜಾತ್ರೆ ಆಯೋಜಿಸುತ್ತಾರೆ. ಸುತ್ತಲಿನ ಮನೆಗಳ ಜನರು ಹತ್ತಿರದ ಮೈದಾನದಲ್ಲಿ ಎಲ್ಲರೂ ಸೇರಿ ಪಟಾಕಿ, ಬಾಣ-ಬಿರುಸು ಸಿಡಿಸಿ ಸಂಭ್ರಮಿಸುತ್ತಾರೆ. ಜನರ ಬದುಕಿನಲ್ಲಿ ಧರ್ಮದ ಪಾತ್ರ ನಗಣ್ಯ. ಹಾಗೆಂದೇ, ಧಾರ್ಮಿಕ ಕಾರಣಗಳಿಂದ ಸೇರಿಕೊಂಡು ಯಾವ ಕಾರಣಕ್ಕೂ ಯಾವುದೇ ಪರಿಸರ ಹಾನಿಯೂ ಕಾಣಸಿಗದು.

ಜಾತಿ-ಧರ್ಮದ ಸೊಂಕಿಲ್ಲದ ಸಮಾಜ ಮಾತ್ರ ನೈಜ ನೈರ್ಮಲ್ಯವನ್ನು ಸಾಧಿಸಬಲ್ಲದು ಎಂಬುದಕ್ಕೆ ಆಸ್ಟ್ರೇಲಿಯಾ ಜೀವಂತ ನಿದರ್ಶನ.