Monthly Archives: December 2014

ಎಚ್.ಎಸ್.ದೊರೆಸ್ವಾಮಿ : ವರ್ತಮಾನ.ಕಾಮ್‌ನ (2014) ವರ್ಷದ ವ್ಯಕ್ತಿ

ವರ್ತಮಾನ ಬಳಗ

ವಯಸ್ಸು 96 ದಾಟಿದೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಪ್ರಯಾಣಿಸಿ ಆಯಾಸಗೊಂಡಿರಬಹುದು. ಸಿರಿಮನೆ ನಾಗರಾಜ್ ಹಾಗೂ ನೂರ್ ಜುಲ್ಫಿಕರ್ ಅವರನ್ನು ಮುಖ್ಯವಾಹಿನಿಗೆ ಕರೆತರುವ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಮಾತುಕತೆ, ಸಭೆಗಳು, ಪತ್ರಿಕಾ ಗೋಷ್ಟಿಗಳು, ನೆರೆದಿದ್ದ ನೂರಾರು ಜನ.. – ಈ ಎಲ್ಲಾ ಕಾರಣಗಳಿಂದಾಗಿ ಹಿರಿಯ ಜೀವ ಸುಸ್ತಾಗಿರಬಹುದು. ಅವರನ್ನು ಆದಷ್ಟು ಬೇಗ ಬೆಂಗಳೂರಿನಲ್ಲಿ ಅವರ ಮನೆಗೆ ತಲುಪಿಸಿ doreswamy-ex-naxalsವಿಶ್ರಾಂತಿ ತೆಗೆದುಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಜೊತೆಗಾರರು ಯೋಚಿಸುತ್ತಿದ್ದರೆ, ಅವರು ಇತರೆ ಗೆಳೆಯರೊಂದಿಗೆ ಬಳ್ಳಾರಿಗೆ ಹೊರಟು ನಿಂತಿದ್ದಾರೆ! “ನನಗೆ ಅಲ್ಲೊಂದು ಕಾರ್ಯಕ್ರಮವಿದೆ. ಬರುತ್ತೇನೆ ಎಂದು ಹೇಳಿದ್ದೇನೆ..” ಎಂದು ಬೆಂಗಳೂರಿನ ಸ್ನೇಹಿತರನ್ನು ಗೊಂದಲಕ್ಕೀಡುಮಾಡಿದವರು ಎಚ್.ಎಸ್.ದೊರೆಸ್ವಾಮಿ.

ಕರ್ನಾಟಕದ ಮಟ್ಟಿಗೆ ‘ನಮ್ಮ ನಡುವೆ ಇರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ’ ಎಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ದೊರೆಸ್ವಾಮಿ. ವಯಸ್ಸು, ಅನಾರೋಗ್ಯ ಎಂಬೆಲ್ಲಾ ಕಾರಣಗಳಿಗೆ ವಿಶ್ರಾಂತಿ ಜೀವನದ ಮೊರೆಹೋಗಿದ್ದರೆ, ಅವರನ್ನು ಯಾರೂ ಬೇಡ ಎನ್ನುತ್ತಿರಲಿಲ್ಲ. ಬದಲಿಗೆ ಅವರು ಬೀದಿ ಹೋರಾಟಕ್ಕೆ ಇಳಿದು ದುರ್ಬಲ ವರ್ಗಗಳಿಗೆ ದನಿಯಾಗುತ್ತಾರೆ. 2014ರಲ್ಲಿ ನಡೆದ ಪ್ರಮುಖ ಮೂರು ಹೋರಾಟ/ಬೆಳವಣಿಗೆಗಳಲ್ಲಿ ದೊರೆಸ್ವಾಮಿಯವರ ಪಾತ್ರ ದೊಡ್ಡದು. ಮಂಡೂರಿನ ಜನ ತಮ್ಮ ಊರಿಗೆ ಕಸ ಹಾಕಬಾರದೆಂದು ಧರಣಿ ಕೂತಾಗ ಅವರೊಟ್ಟಿಗೆ ಇವರು ನಿಂತರು. Doreswamy-mandurಇತರರು ಬಂದರು. ಸರಕಾರ ಮಾತು ಕೇಳಬೇಕಾಯಿತು. ಒಂದು ಹಂತಕ್ಕೆ ಸರಕಾರ ಜನರ ಮಾತಿಗೆ ಬೆಲೆ ಕೊಟ್ಟು ಹಂತಹಂತವಾಗಿ ಆ ಊರಿಗೆ ಕಸ ಸಾಗಿಸುವುದನ್ನು ಕಡಿಮೆ ಮಾಡಿತು. ಆ ಮಟ್ಟಿಗೆ ಜನರ ಹೋರಾಟ ಯಶಸ್ವಿ.

ಹಲವು ವರ್ಷಗಳಿಂದ ಬೆಂಗಳೂರಿನ ಭೂಗಳ್ಳರ ವಿರುದ್ಧ ಹೋರಾಟ ನಡೆದೇ ಇತ್ತು. ಈ ವರ್ಷ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿ ಕೋಟಿಗಟ್ಟಲೆ ಮೌಲ್ಯದ ಭೂಮಿ ಸರಕಾರಕ್ಕೆ ಹಿಂತಿರುಗಲು ದೊರೆಸ್ವಾಮಿ ನೇತೃತ್ವದಲ್ಲಿ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮತ್ತಿತರರು ಬೆಂಗಳೂರಿನಲ್ಲಿ ನಡೆಸಿದ ಹೋರಾಟ ಕಾರಣ. ಭೂಗಳ್ಳರ ವಿರುದ್ಧ ಕಠಿಣ ಕ್ರಮ ಹಾಗೂ ಆ ಸಂಬಂಧದ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥ ಮಾಡಲು ಅಗತ್ಯ ನ್ಯಾಯಾಲಯಗಳ ಸ್ಥಾಪನೆಗೆ ಸಂಬಂಧಪಟ್ಟ ಕಾನೂನು ತಿದ್ದುಪಡಿ ವಿಧೇಯಕ ಸರಕಾರದಿಂದ ಅಂಗೀಕಾರವಾಗಿ ರಾಷ್ಟ್ರಪತಿಯವರ ಮುಂದೆ ಬಹಳ ಕಾಲದಿಂದ ಹಾಗೇ ಉಳಿದಿತ್ತು. ಈ ಹೋರಾಟದ ಫಲವಾಗಿ ಕೇಂದ್ರ ಸರಕಾರ ರಾಷ್ಟ್ರಪತಿ ಅಂಗೀಕಾರ ಪಡೆಯಿತು. ಅಷ್ಟೇ ಅಲ್ಲ ಭೂಗಳ್ಳರ ಪಾಲಾಗಿದ್ದ ಸಾವಿರಾರು ಕೋಟಿ ರೂ ಮೌಲ್ಯದ ಸರಕಾರಿ ಭೂಮಿಯನ್ನು ಸರಕಾರ ಹಿಂದಕ್ಕೆ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಆಗಬೇಕಿರುವ ಕಾರ್ಯ ಇನ್ನೂ ಬಹಳಷ್ಟಿದೆ.doreswamy-anti-land-grabbing

ಬಹಳ ಕಾಲದಿಂದ ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಕೆಲಸ ನಿಂತಿತ್ತು. ಸಿರಿಮನೆ ನಾಗರಾಜು ಮತ್ತು ಜುಲ್ಫಿಕರ್ ಅವರು ಸೈದ್ಧಾಂತಿಕ ಕಾರಣಗಳಿಗಾಗಿ ಸಶಸ್ತ್ರ ಹೋರಾಟದಿಂದ ಹಿಂದೆ ಸರಿದಿದ್ದರೂ ಮುಖ್ಯವಾಹಿನಿಗೆ ಬರಲಾಗಿರಲಿಲ್ಲ. ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದರು. ಅವರೇನು ಸರಕಾರದ ಯಾವ ಪ್ಯಾಕೇಜನ್ನೂ ಬಯಸಿದವರಲ್ಲ. ಶಾಂತಿಗಾಗಿ ನಾಗರಿಕರ ವೇದಿಕೆಯ ಗೌರಿ ಲಂಕೇಶ್, ಶಿವಸುಂದರ್ ಮತ್ತಿತರರ ಪ್ರಯತ್ನದಿಂದ ಸರಕಾರ ಇತ್ತ ಕಡೆ ಸ್ವಲ್ಪ ಗಮನ ಹರಿಸಲು ಸಾಧ್ಯವಾಗಿತ್ತು. ನಕ್ಸಲರನ್ನು ಮುಖ್ಯವಾಹಿನಿಗೆ ತರಲು ನಾಗರಿಕರನ್ನು, ಅಧಿಕಾರಿಗಳನ್ನು ಒಳಗೊಂಡ ಸಮಿತಿ ನೇಮಕವಾಯಿತು. ಆ ಸಮಿತಿಯಲ್ಲಿ ನಾಗರಿಕರ ಪ್ರತಿನಿಧಿಯಾಗಿ ನೇತೃತ್ವ ವಹಿಸಿದರು ದೊರೆಸ್ವಾಮಿ, ಗೌರಿ ಲಂಕೇಶ್ ಹಾಗೂ ಎ.ಕೆ.ಸುಬ್ಬಯ್ಯ. ಮೊದಲ ಹಂತವಾಗಿ ಇಬ್ಬರು ಮುಖ್ಯವಾಹಿನಿಗೆ ಬಂದಿದ್ದಾರೆ. ಇದೇ ಸಮಿತಿಯ ಮುಂದೆ ಸಶಸ್ತ್ರ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಇನ್ನು ಮೂರು ಜನ ಮುಖ್ಯವಾಹಿನಿಗೆ ಬರುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಖ್ಯವಾಹಿನಿಗೆ ಬಂದವರಾರೂ, ಹೋರಾಟದಿಂದ ದೂರ ಸರಿಯುತ್ತಿಲ್ಲ. ಬದಲಿಗೆ ಸಾಮಾಜಿಕ ನ್ಯಾಯಕ್ಕಾಗಿ ಮತ್ತಷ್ಟು ಗಟ್ಟಿಯಾಗಿ ಹೋರಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಮುಖ್ಯವಾಹಿನಿಯಲ್ಲಿರುವ ಸಂಗಾತಿಗಳಿಗೆ ಇದು ಆಶಾದಾಯಕ ಬೆಳವಣಿಗೆ.

2014ರಲ್ಲಿ ಪಟ್ಟಿ ಮಾಡಬಹುದಾದ ಈ ಮೇಲಿನ ಪ್ರಮುಖ ಘಟನೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ ದೊರೆಸ್ವಾಮಿಯವರನ್ನು hiremath-doreswamyವರ್ತಮಾನ ವರ್ಷದ ವ್ಯಕ್ತಿ ಎಂದು ಗುರುತಿಸಲು ಹೆಮ್ಮೆ ಪಡುತ್ತದೆ. ಬಲಾಢ್ಯರ ವಿರುದ್ಧ, ದುರ್ಬಲರ ಪರ ದನಿ ಎತ್ತುವ ಪ್ರಾಮಾಣಿಕ ವ್ಯಕ್ತಿತ್ವಗಳನ್ನು ಗುರುತಿಸುವುದು ವರ್ತಮಾನದ ಉದ್ದೇಶ. ಕಳೆದ ವರ್ಷ ವರ್ತಮಾನ ಈ ಸ್ಥಾನಕ್ಕೆ ಎಸ್.ಆರ್.ಹಿರೇಮಠರನ್ನು ಆಯ್ಕೆ ಮಾಡಿದ್ದು ಓದುಗರಿಗೆ ನೆನಪಿರಬಹುದು. ಹಿರೇಮಠರು ತಮ್ಮ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ನಡೆಯುತ್ತಿದ್ದಾರೆ. ದೊರೆಸ್ವಾಮಿಯವರು ನೇತೃತ್ವ ವಹಿಸಿದ್ದ ಭೂಗಳ್ಳರ ವಿರುದ್ಧ ಹೋರಾಟದಲ್ಲಿ ಇವರೂ ಪಾಲ್ಗೊಂಡಿದ್ದನ್ನು ಸ್ಮರಿಸಬಹುದು.

ಘರ್ ವಾಪಸಿ, ಮತಾಂತರ ಮತ್ತು ಪಂಪ

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ನಮ್ಮ ಪಾರ್ಲಿಮೆಂಟ್ ಹೌಸ್ ನಲ್ಲಿ ಈಗ ಮತಾಂತರದ ಬಹುದೊಡ್ಡ ಗದ್ದಲ ನಡೆಯುತ್ತಿದೆ. ಇದು ಹೊಸತೇನೂ ಅಲ್ಲ. ಆದರೆ ಮತಾಂತರವನ್ನು ‘ಸತ್ಯದ ಮೇಲಿನ ಹಲ್ಲೆ’ ಎನ್ನುತ್ತಿದ್ದವರು ಅದನ್ನೇ ಮಾಡಿ ಅದಕ್ಕೆ ಹೊಸಹೆಸರು ಕೊಟ್ಟಿದ್ದಾರೆ. ಮತಾಂತರ ನಿಲ್ಲಿಸಿ ಅನ್ನುತ್ತಲೇ ಹೊರಗಿನವರನ್ನು ಒಳಕರೆಯುವ ghar vapsi‘ಘರ್ ವಾಪಸಿ’ಯ ಬಾಗಿಲು ತೆಗೆಯಿರಿ ಅನ್ನುತ್ತಿದ್ದಾರೆ. ವಾಪಾಸಾತಿ ಅಂದರೆ ಹೊರಹೋದವರು ಮನೆಗೆ ಮರಳುವುದು. ಕೇಳುವುದಕ್ಕೆ ಹಿತವೇ. ಆದರೆ ಜಾತಿ ಇಲ್ಲದ ಧರ್ಮದಿಂದ ಜಾತಿ ಇರುವ ಸಮಾಜಕ್ಕೆ ವಾಪಾಸಾಗುವುದೆಂದರೆ ಮನೆಯಿಂದ ಮನೆಗಳಿಗೆ ಬಂದಂತೆ. ಈ ಮನೆಗಳೋ ಒಂದರಿಂದ ಇನ್ನೊಂದಕ್ಕೆ ಗಾಳಿಬೆಳಕನ್ನೇ ಬಿಟ್ಟುಕೊಡದವುಗಳು! ಅಂಬೇಡ್ಕರ್ ಎಂದಂತೆ ಮೆಟ್ಟಿಲುಗಳೇ ಇಲ್ಲದ ಮಹಡಿಯ ಗೂಡುಗಳು. ಇಲ್ಲಿ ವಾಪಾಸಾಗುವುದು ಎಂದರೆ ಎಲ್ಲಿಗೆ? ಬರುವವರಿಗೆಲ್ಲಾ ಇರುವ ಅವರವರ ಮನೆ ಯಾವುದು? ವಾಪಾಸಾಗುವ ಘರ್ ಗಲ್ಲಿಯಲ್ಲಿದೆಯೋ? ಗಟಾರದಲ್ಲಿದೆಯೋ? ಹಳ್ಳಿಯಲ್ಲಿದೆಯೋ? ಹಾರೋಗೇರಿಯಲ್ಲಿದೆಯೋ? ಖಚಿತವಿಲ್ಲ. ಸೋಜಿಗ ಎಂದರೆ ಈ ವಾಪಾಸಾದವರೆಂದು ಹೇಳಲಾದವರೂ ಧರ್ಮದ ಹುಡುಕಾಟಕ್ಕೆ ಬಿದ್ದವರಲ್ಲ. ಬದುಕೇ ಹುಡುಕಾಟವಾದ ಬಡತನದ ಹಾದಿಯವರು. ಜುಟ್ಟಿಗಿಂತ ಹೊಟ್ಟೆ, ಧರ್ಮಕ್ಕಿಂತ ದರ್ದು ದೊಡ್ಡದಾಗಿ ಬಿಸಿಲುಬೆಂಕಿಗೆ ಮೈಸುಟ್ಟುಕೊಂಡವರು. ಮರುಕರೆದುಕೊಂಡವರು ಇವರನ್ನು ಎಲ್ಲಿ ತಂದು ನಿಲ್ಲಿಸಿದರೋ ಕಾಣೆ? ಆದರೆ ಕರೆತಂದ ಕ್ರಿಯಾವಿಧಿಗಳೆಲ್ಲವೂ ಸಮುದಾಯವೊಂದರ ಆಚರಣಾವಿಧಿಯ ರೂಪದಲ್ಲೇ ನಡೆದಿವೆ. ಹಾಗಿದ್ದರೆ ಆ ಚಿಂದಿ ಆಯುತ್ತಾ ಚಿಂದಿಯಾದವರನ್ನು ಈ ವಿಧಿಕ್ರಿಯೆಯ ವಾರಸುದಾರರು ತಮ್ಮೊಳಗೆ ತಂದುಕೊಂಡರೇ? ಕನಕನನ್ನೇ ಹೊರಗಿಕ್ಕಿದವರು ಈ ತಿರುಕರನ್ನು ಒಳಬಿಟ್ಟುಕೊಂಡರೇ? ಈ ದೇಶದ ಚರಿತ್ರೆ ಓದಿದ ಯಾರೊಬ್ಬರಿಗೂ ಈ ಭರವಸೆ ಇರದು. ಆದರೆ ಜಾತಿ ವರ್ತುಲದಿಂದ ದಾಟುವ ಮತಾಂತರವನ್ನು ನಿಷೇಧಿಸುವ ಕೂಗಿನ ಒಟ್ಟೊಟ್ಟಿಗೇ ಜಾತಿಕೂಪಕ್ಕೆ ಸೆಳೆಯುವ ಹಿಂಚಲನೆಯ ವಾಪಾಸಾತಿಯ ಸದ್ದೂ ಮೊಳಗುತ್ತಲೇ ಬಂದಿರುವುದಂತೂ ಸುಳ್ಳಲ್ಲ.

ಕನ್ನಡದ ಸಾಂಸ್ಕೃತಿಕ ಜಗತ್ತು ಮತಾಂತರ ಮತ್ತು ಘರ್ ವಾಪಸಿಯ ಈ ಎರಡೂ ಮಾದರಿಗಳನ್ನು ಒಡನಾಡಿದೆ. ಮಧ್ಯಯುಗದ ಶರಣರಚಳವಳಿ ಮೂರ್ತವಾದುದೇ ಮತಾಂತರದಲ್ಲಿ. ಕುಲನಾಮಕಳೆಯದೆ ಕುಲದ ಅವಹೇಳನವಳಿದು ದೇಹವನ್ನು ದೇಗುಲವಾಗಿಸಿದ ಈ ಚಳವಳಿ, ತಳಮೂಲದ ಪತಿತರಿಗೆ ಬಿಡುಗಡೆಯ ಭಾಗ್ಯವಾಗಿಯೇ ಒದಗಿಬಂದು, ಸಾಮೂಹಿಕ ಸಂಚಲನೆಗೆ ಕಾರಣವಾಯಿತು ಎಂಬ ವಾದವಿದೆ. ಇನ್ನು ಕವಿಗಳಾದ ಹರಿಹರ, ರಾಘವಾಂಕ, ರತ್ನಾಕರರ್ಣಿ, ಚಾಮರಸರೇ ಮುಂತಾದವರು ಈ ಬಗೆಯ ನಿರ್ಗಮನ-ಆಗಮನದ ಸರಣಿಯನ್ನೇ ತುಳಿದು ಧರ್ಮ, ಮತಗಳ ಒಳಹೊರಗನ್ನು ಹುಡುಕಾಡಿದರು ಎನ್ನಲಾಗಿದೆ. ಗುರು-ಶಿಷ್ಯಪರಂಪರೆಯ ನಡೆಕಾರರು, ಶಮಣಧಾರೆಯ ಸಿದ್ಧಪಂಥಗಳು ತಮ್ಮ ಆಧ್ಯಾತ್ಮಿಕ ಹುಡುಕಾಟಕ್ಕೆ ಬೇಕಾದ ಬಿಡುಗಡೆಗಾಗಿ ಇಂದಿಗೂ ಜಾತಿ, ಹುಟ್ಟುಗಳ ಕ್ಲೇಷವನ್ನೇ ಸದ್ದಿಲ್ಲದೆ ದಾಟುತ್ತಿವೆ. ಹೀಗೆ ತತ್ವದ ಹುಡುಕಾಟ, ಭರವಸೆಯ ಹುಡುಕಾಟಗಳೆರಡೂ ದಾಟುತ್ತಿರುವುದು ಜಾತಿಬೇಲಿಯನ್ನೇ. ಬದುಕಿರುವ ತನಕ ಬಿಡುಗಡೆಯಿಲ್ಲದ ಜಾತಿಯನ್ನು ಕೊಡವಿ ನಿರಾಳವಾಗುವುದೇ ಈ ದಾಟುವಿಕೆಗಳ ಹೂರಣವೂ ಆಗಿದೆ. ಕನ್ನಡಸಾಹಿತ್ಯದ ಲಿಖಿತಪರಂಪರೆಯ ಆರಂಭ ಬಿಂದುವಿನಲ್ಲೂ ಇಂಥದ್ದೇ ಮತಾಂತರವೊಂದಿದೆ. ಪಂಪನಿಗೆ ಸಂಬಂಧಿಸಿದ ಈ ಕಥೆಯಲ್ಲಿ ಜಾತಿಶ್ರೇಣಿಯ ಮೇಲ್ತುದಿಯ ಬ್ರಾಹ್ಮಣನಿಗೂ ಜಾತಿಯ ದಾಟುವಿಕೆಯೇ ಬಿಡುಗಡೆಯಾಗಿ ಕಂಡಿದೆ! ಆದರೆ ಕನ್ನಡದ ಸಾಂಸ್ಕೃತಿಕ ಜಗತ್ತು ಕೇವಲ ದಾಟುವುದಕ್ಕಷ್ಟೇ ಸಾಕ್ಷಿಯಾಗಿಲ್ಲ. ಮರುಹೊಂದಾಣಿಕೆಯ ಘರ್ ವಾಪಸಿಯ ಕಸರತ್ತನ್ನೂ ನಡೆಸಿದೆ. ಮನುಷ್ಯರಿಗಷ್ಟೇ ಸೀಮಿತವಾಗದೆ, ಮರುಹೊಂದಾಣಿಕೆಯ ಈ ಕಡಾಯಿಯಲ್ಲಿ ಅದು ದೇವರುಗಳನ್ನೂ ಹಾಕಿ ತಿರುವಿ ರೂಪಾಂತರಿಸಿದೆ. ರಂಗನೋ, ವಿಠ್ಠಲನೋ ಹರಿಯ ಕವಲಾದುದು; ಕಲ್ಕುಡ, ಜುಮಾದಿಗೋ ಹೊಸಹೆಸರು ದಕ್ಕಿದುದು ಈ ವರಸೆಗಳಲ್ಲೇ. ಅಂತೆಯೇ ಪಂಪನ ತಂದೆಯ ಮತಾಂತರವನ್ನು ಕನ್ನಡಜಗತ್ತು ಅಲ್ಲಿಗೇ ಕೈಬಿಟ್ಟಿಲ್ಲ. ಮರಳಿ ಮೂಲಕ್ಕೆ ಎಳೆದುಕಟ್ಟುವ ಯತ್ನವನ್ನೂ ಮಾಡಿದೆ. ಈ ಹಿನ್ನೆಲೆಯಲ್ಲಿ ಮತಾಂತರವನ್ನು ಕುರಿತ ಆದಿಕವಿಯ ನಿಲುವು ಹಾಗೂ ಕನ್ನಡದ ಕೆಲವು ಪ್ರಾತಿನಿಧಿಕ ಓದುಗಳಲ್ಲಿನ ಸೂಕ್ಷ್ಮವಾದ ಮರುಹೊಂದಾಣಿಕೆಯ ಕಸರತ್ತುಗಳನ್ನು ಒಟ್ಟೊಟ್ಟಿಗಿಟ್ಟು, ಮತಾಂತರ ಮತ್ತು ಘರ್ ವಾಪಸಿಯ ಸಾಂಸ್ಕೃತಿಕ ಜಗತ್ತಿನ ಸತ್ಯವೊಂದನ್ನು ವಿವರಿಸಿಕೊಳ್ಳುವ ಉದ್ದೇಶವಿಲ್ಲಿದೆ.

ಪಂಪನ ಕನ್ನಡದ ನಂಟು

ಪಂಪನ ಸ್ವಂತ ಬದುಕಿನ ಕೆಲವು ಮಾಹಿತಿಗಳನ್ನು ಆತನ ಕಾವ್ಯಗಳೇ ಹೇಳಿವೆ. ‘ಆದಿಪುರಾಣ’ದಲ್ಲಿ ಆತನ ರೂಪ, ಸ್ವಭಾವಗಳಿದ್ದರೆ, ‘ವಿಕ್ರಮಾರ್ಜುನ ವಿಜಯ’ದಲ್ಲಿ ವಂಶಾವಳಿ ವಿವರಗಳಿವೆ. ಪಂಪಭಾರತದ ಆರಂಭದಲ್ಲಿ ವೇಮುಲವಾಡದ ಚಾಲುಕ್ಯದೊರೆ ಅರಿಕೇಸರಿಯ ವಂಶಾವಳಿ ಇದೆ. ಕೊನೆಯಲ್ಲಿ ಕವಿಯ ಕುಲಪರಂಪರೆಯ ಉಲ್ಲೇಖವಿದೆ. ಕಾವ್ಯದ ಕೊನೆಗೆ ಸ್ವವಿಚಾರ ಪ್ರಸ್ತಾಪವು ಸಂಪ್ರದಾಯವಲ್ಲವೆಂಬ ಹಿನ್ನೆಲೆಯಲ್ಲಿ ಇದನ್ನು ಪಂಪನೇ ಹೇಳಿದನೆಂದು ನಂಬಲಾಗದು ಎನ್ನುವ ಅಭಿಪ್ರಾಯವೂ ಇದೆ. ಅದಕ್ಕೆ ಆಶ್ರಯದಾತನದನ್ನು ಮೊದಲು ಹೇಳಿ ತನ್ನದನ್ನು ಕೊನೆಯಲ್ಲಿ ಹೇಳುವ ಕ್ರಮವನ್ನು ಪಂಪ ಅನುಸರಿಸಿರಬಹುದೆಂಬ ಸಮಜಾಯಿಷಿಯೂ ಇದೆ. ಭಿನ್ನಾಭಿಪ್ರಾಯಗಳ ನಡುವೆಯೂ ಇದನ್ನು ಪಂಪನೇ ಹೇಳಿದನೆಂದು ಒಪ್ಪಿದರೆ, ಪರಂಪರೆಯಿಂದ ಆತನ ಹಿರಿಯರು ನೆಲೆಸಿದ್ದುದು ವೆಂಗಿಮಂಡಲದ ವೆಂಗಿಪಳುವಲ್ಲಿ. ಈ ವೆಂಗಿಮಂಡಲವು ಕೃಷ್ಣಾ ಗೋದಾವರೀ ನದಿಗಳ ನಡುವೆ ಪೂರ್ವಸಮುದ್ರದ ಕರೆಯ(ಕಿನಾರೆ) ತನಕ ಇದ್ದ ವಿಸ್ತಾರವಾದ ನಾಡು. ಇವೊತ್ತಿನ ಆಂಧ್ರಪ್ರದೇಶದ ಭಾಗ. ಆದರೂ ಕರ್ನಾಟಕದ ಚರಿತ್ರೆಯಲ್ಲಿ ಹೆಸರಾದ ಕನ್ನಡದ ಅನೇಕ ಹೆಮ್ಮೆಯ ಮನೆತನಗಳು ಇಲ್ಲಿ ನೆಲೆಸಿದ್ದವು. ಇದರ ಜೊತೆಗೆ ಪಂಪನ ತಾಯಿ ಬೆಳ್ವೊಲದ ಅಣ್ಣಿಗೇರಿಯ ಜೋಯಿಸಸಿಂಘನ ಮೊಮ್ಮಗಳು ಎಂಬ ಉಲ್ಲೇಖವೂ ಪಂಪನ ತಮ್ಮ ಜಿನವಲ್ಲಭನ ಕುರ್ಕ್ಯಾಲ ಶಾಸನದಲ್ಲಿದೆ. ಹೀಗಾಗಿ ವೆಂಗಿಮಂಡಲದ ವೆಂಗಿಪಳುವಿನಲ್ಲಿಯೇ ಪಂಪ ಹುಟ್ಟಿ ಬೆಳೆದನೇ ಎಂಬುದು ನಿಶ್ಚಯವಿಲ್ಲ. ಆದರೆ ಪಂಪನ ತಂದೆಯ ವಂಶದವರು ಇದ್ದ ಪರಿಸರ ಹಾಗೂ ಪಂಪ ಆಸ್ಥಾನಕವಿಯಾಗಿದ್ದ ನಾಡುಗಳು ಇಂದಿನ ಕನ್ನಡ ಸೀಮೆಗಳಲ್ಲ. ಕನ್ನಡ ಪ್ರದೇಶಕ್ಕೆ ಹೊರತಾದುವುಗಳು. ಇಲ್ಲಿದ್ದೂ ಬರೆದ ಆತನ ಎರಡೂ ಕಾವ್ಯಗಳು ಕನ್ನಡದ ಕಣ್ಣುಗಳಂತೆಯೇ ಇವೆ ಎಂಬುದು ನಿರ್ವಿವಾದ. ಹಾಗಾಗಿ ಕನ್ನಡಕುಟುಂಬಿಯಾದ ಪಂಪ ಬದುಕಿದ ನಾಡು ಕನ್ನಡನೆಲ ಹೌದೋ ಅಲ್ಲವೋ ಎಂಬ ಈ ಮಣ್ಣುಪರೀಕ್ಷೆಯ ಅಗತ್ಯವಂತೂ ಖಂಡಿತಾ ಇಲ್ಲ.

ಪಂಪನ ವಂಶ ಮತ್ತು ಮತಾಂತರ

ಭಾಷಿಕ ನೆಲೆಯಲ್ಲಿ ಕನ್ನಡಕುಟುಂಬಿಯಾಗುವ ಪಂಪ ‘ಮನುಷ್ಯಜಾತಿ ತಾನೊಂದೆವಲಂ’ ಎಂದ ವಿಶ್ವಕುಟುಂಬಿಯೂ ಹೌದು. ಆದರೆ ಪಂಪನನ್ನು ಹೀಗೆ ವಿಶಾಲವಾಗಿ ಓದಿಕೊಳ್ಳುವ ಮುಕ್ತತೆಯೇ ಕನ್ನಡದ ಓದಿನಲ್ಲಿ ತುಂಬಿದೆ ಎನ್ನಲಾಗದು. ಅದು ಮತ, ಜಾತಿಯ ಗುರುತುಹಚ್ಚಿಯೂ ಆತನ ಸತ್ವದ ನೆಲೆಯನ್ನು ವಿವರಿಸಿಕೊಂಡಿದೆ.pampa ಶ್ರದ್ಧೆಯ ನೆಲೆಯಲ್ಲಿ ಪಂಪನನ್ನು ಜೈನನಲ್ಲ ಎನ್ನಲಾಗದು. ಆತನೂ ತನ್ನನ್ನು ಜೈನನೆಂದೇ ಕರೆದುಕೊಂಡಿದ್ದಾನೆ. ಜಿನಸ್ತುತಿಯಿಂದ ಸಿಕ್ಕುವ ಬಿಡುಗಡೆಗೆ ಪ್ರಶಸ್ತಿ, ಸಮ್ಮಾನಗಳು ಸಮನಲ್ಲವೆಂದಿದ್ದಾನೆ. ಕನ್ನಡದಲ್ಲಿ ಮೊದಲ ಜಿನಪುರಾಣವನ್ನು ಬರೆದಿಟ್ಟು ಹೋಗಿದ್ದಾನೆ. ಆದರೆ ‘ವಿಕ್ರಮಾರ್ಜುನ ವಿಜಯ’ದ ಕೊನೆಯ ಕೆಲವು ಪದ್ಯಗಳ ಆಧಾರದಲ್ಲಿ ಪುನಾರಚಿಸಲಾದ ಆತನ ವಂಶಾವಳಿ ಬೇರೆಯದೇ ಕಥೆ ಹೇಳುತ್ತದೆ. ಇಲ್ಲಿರುವ ಹಿರೀಕರ ಮಾಹಿತಿ, ಪಂಪನಿಂದ ಹಿಂದಿನ ಮೂರನೆಯ ತಲೆಮಾರಿನ ಮಾಧವಸೋಮಯಾಜಿ ಎಂಬ ವೈದಿಕನವರೆಗೆ ಹೋಗಿ ನಿಂತಿದೆ. ಕಮ್ಮೆಕುಲದ ಈ ಬ್ರಾಹ್ಮಣ ಹೋಮ, ಹವನಗಳನ್ನು ಮಾಡಿ ‘ಸರ್ವಕೃತುಯಾಜಿ’ ಎನಿಸಿದಾತ. ಈತನಿಂದ ಹರಿದುಬಂದ ವಂಶನಕ್ಷೆಯಂತೆ ಇವನ ಮಗ ಅಭಿಮಾನಚಂದ್ರ. ಅಭಿಮಾನಚಂದ್ರನ ಮಗ ಕೋಮರಯ್ಯ. ಈ ಕೋಮರಯ್ಯನ ಮಗನೇ ಪಂಪನ ತಂದೆ ಭೀಮಪಯ್ಯ (ಅಭಿರಾಮದೇವರಾಯ). ‘ಜಾತಿಯೊಳೆಲ್ಲಂ ಉತ್ತಮದ ಜಾತಿಯ ವಿಪ್ರ'(ಬ್ರಾಹ್ಮಣ)ನಾಗಿದ್ದೂ, ಜಿನೇಂದ್ರ ಧರ್ಮಮೆ ವಲಂ ದೊರೆಧರ್ಮದೊಳೆಂದು ನಂಬಿ ತಜ್ಜಾತಿಯನ್ ಉತ್ತರೋತ್ತರಮೆ ಮಾಡಿದಾತ! ಜೈನಧರ್ಮಕ್ಕೆ ಮತಾಂತರವಾದಾತ. ಹೀಗೆ ಈ ವಂಶಾವಳಿ ಕಥನವು ಸೋಮಯಾಜಿಯ ಕಡುವೈದಿಕ ಕ್ರಿಯಾಚರಣೆ ಹಾಗೂ ಅದರಿಂದ ಬಿಡಿಸಿಕೊಂಡು ಜಿನಧರ್ಮಕ್ಕೆ ‘ಮತಾಂತರವಾದ’ ಗೌರವಾನ್ವಿತ ಭೀಮಪಯ್ಯನ ದಾಟುವಿಕೆ ಎರಡನ್ನೂ ಹೊಂದಿದೆ. ಅದು ಕನ್ನಡದ ಆದಿಕವಿಯನ್ನೇ ಮತಾಂತರದ ಜೊತೆಗೆ ಬೆಸೆದಿದೆ. ಮತಾಂತರವೆಂಬ ದಾಟುವಿಕೆಯನ್ನು ವ್ಯಕ್ತಿಯ ವಿವೇಕವಾಗಿ ನೋಡಿದೆ. ಆ ಕುರಿತು ಯಾವ ಬಗೆಯ ನೋವು, ಹಳಹಳಿಕೆಯಿಲ್ಲದ ಮೆಚ್ಚುಗೆ ತೋರಿದೆ. ಹಿರೀಕನಾದ ಮಾಧವಸೋಮಯಾಜಿ ಹೋಮದ ಹೊಗೆಯಿಂದ ತನ್ನ ಯಶಸ್ಸೆಂಬ ಬಳ್ಳಿಯನ್ನೇ ಕರಿದು ಮಾಡಿಕೊಂಡನಲ್ಲಾ ಎಂದು ಸಂಕಟಪಟ್ಟಿದೆ. ಆ ತಪ್ಪುಮಾಡದೆ, ಮತಾಂತರದ ಮೂಲಕ ತನ್ನ ಜಾತಿಗೆ ಮತ್ತಷ್ಟು ಪರಿಪೂರ್ಣತೆ ತಂದುಕೊಂಡ ತಂದೆಯ ಬಗೆಗೆ ಅಭಿಮಾನಪಟ್ಟಿದೆ. ಹೀಗೆ ಕವಿಯಾಗಿ ಲೌಕಿಕ-ಆಗಮಿಕಗಳನ್ನು ಕೃತಿಯ ಮೂಲಕ ಬೆಳಗಿದ ತನ್ನಂತೆಯೇ, ಮತಾಂತರವನ್ನು ಕೃತಿಗಿಳಿಸುವ ಮೂಲಕ ತಂದೆಯೂ ತನ್ನ ಜಾತಿಯನ್ನೂ ಉತ್ತರೋತ್ತರವಾಗಿ ಬೆಳಗಿಕೊಂಡ ಎಂಬ ಅಭಿಪ್ರಾಯವೇ ಪಂಪನಲ್ಲಿ ಇರುವಂತಿದೆ. ತಂದೆಯ ಬ್ರಾಹ್ಮಣ್ಯ ನಿರಾಕರಣೆ ಅಥವಾ ಬ್ರಾಹ್ಮಣ್ಯದ ಬಿಡುಗಡೆ, ಆತನಿಗೆ ಜಾತಿವ್ಯವಸ್ಥೆಯಿಂದ ಜಾತಿಯಿಲ್ಲದ ಧರ್ಮವ್ಯವಸ್ಥೆಗೆ ದಾಟಿದ ಮುಂಚಲನೆಯಾಗಿ ಕಂಡಿದೆ. ‘ಸತ್ಯದ ಮೇಲಿನ ಹಲ್ಲೆ’ ಅಥವಾ ವಿದ್ರೋಹಿ ಕೇಡಾಗಿ ಅಲ್ಲ. ಮತಾಂತರವನ್ನು ಕುರಿತ ಪಂಪನ ಈ ಅಭಿಮಾನದ ಜೊತೆಗೆ ಕನ್ನಡದ ಲಿಖಿತಸಾಹಿತ್ಯವೂ ಚಿಗುರೊಡೆದಿದೆಯಾಗಿ, ಕನ್ನಡಸಾಹಿತ್ಯಚರಿತ್ರೆಯ ಬೀಜವೇ ಉಲ್ಲಂಘನೆಯಲ್ಲಿದೆ, ಮತಾಂತರವೇ ಅದಕ್ಕೆ ಹೊಸಪ್ರತಿಭೆಯ ಹೊಸನೀರು ದಕ್ಕುವಂತೆ ಮಾಡಿದೆ ಎನ್ನಬೇಕು. ಹೀಗೆ ಈ ಕವಿಚರಿತೆ ಒಂದು ಕಡೆಯಿಂದ ಕನ್ನಡಸಾಹಿತ್ಯದ ಮೊದಲ ಬೆಳಸನ್ನೇ ಮತಾಂತರದ ಬೆಳಸಾಗಿ ಘೋಷಿಸುತ್ತದೆ. ಮತ್ತೊಂದೆಡೆಯಿಂದ ವರ್ತಮಾನದ ‘ಮತಾಂತರ ಸಂಕಥನ’ದ ಜಳ್ಳು-ಕಾಳುಗಳನ್ನೂ ಎದುರಿಗಿಡುತ್ತಿದೆ.

ಒತ್ತಾಯದ ಮರುವಲಸೆ

ಮತಾಂತರವಾದವನು ಪಂಪನಲ್ಲ ಪಂಪನ ತಂದೆ ಎನ್ನುವ ಬಗೆಗೆ ಭಿನ್ನಾಭಿಪ್ರಾಯವಿಲ್ಲ. ಆದರೆ ಈ ಮತಾಂತರವನ್ನು ಪಂಪನ ದಾಟುವಿಕೆಯಾಗಿ ಕನ್ನಡದ ಓದು ಸ್ವೀಕರಿಸಿದೆ ಎಂದೇನಲ್ಲ. ಯಾಕೆಂದರೆ ಅಲ್ಲಿ ಮತಾಂತರದ ಸ್ವರೂಪ ಚರ್ಚೆಗಿಂತ ಮತಾಂತರಪೂರ್ವದ ಅವಸ್ಥೆಯೊಂದಿಗೆ ಕವಿ ಉಳಿಸಿಕೊಂಡ ನಂಟಿನ ಪ್ರತಿಪಾದನೆಗೇ ಒತ್ತು ಸಿಕ್ಕಿದೆ. ವೆಂಗಿಮಂಡಲದ ಸೋಮಯಾಜಿಯನ್ನು ಕುರಿತ ಮಾಹಿತಿಗಳಿಗೆ ಅವಧಾರಣೆ ಸಿಕ್ಕಿದೆ. ಜಿನವಲ್ಲಭನ ಬಗೆಗೆ ಅಸಮಾಧಾನವೂ, ಪಂಪನ ಕುರಿತ ಮೆಚ್ಚುಗೆಯೂ ವ್ಯಕ್ತವಾಗಿದೆ. ಜೈನಪಂಪನದಲ್ಲದ ವೈದಿಕಪಂಪನ ಚಹರೆಯನ್ನೇ ಹುಡುಕಿ ಗುಡ್ಡೆಹಾಕುವ ಯತ್ನವಿದೆ. ಅದರ ಭಾಗವಾಗಿಯೇ ಕೆಲವು ಓದುಗಳು ಜೈನನಾಗುವ ಮುನ್ನಿನ ಸಂಸ್ಕಾರಗಳ ಉಳಿಕೆಯಲ್ಲಿಯೇ ಪಂಪನ ಶ್ರೇಷ್ಠತೆ ಇದೆ ಎಂದು ವಾದಿಸುತ್ತವೆ. ಆತನಲ್ಲಿದ್ದ ವೈದಿಕಸತ್ವದಿಂದಲೇ ಇಂತಹ ಕಾವ್ಯಸೃಷ್ಟಿಯ ಸಾಧನೆ ಸಾಧ್ಯವಾಯಿತು ಎನ್ನುತ್ತವೆ. ಹೀಗೆ ಅವು ಪಂಪನನ್ನು ಜೈನನಲ್ಲ ಎನ್ನದೆ, ಆತನ ಕಾವ್ಯವಸ್ತು ಮತ್ತದರ ನಿರ್ವಹಣೆಯಲ್ಲಿ ಮತಾಂತರದಾಚೆಗಿನ ವೈದಿಕದ ನೆರಳನ್ನೇ ಬೇಟೆಯಾಡುತ್ತವೆ. ಇದಕ್ಕೆ ಪೂರಕವಾಗಿ ಮತಾಂತರವನ್ನು ‘ಸಂಕರ’ವೆನ್ನುವ ವಾದವೂ, ಪಂಪನಲ್ಲಿ ವೈದಿಕ-ಜೈನ ಎರಡೂ ಬೆರೆತಿದೆ ಎನ್ನುವ ಮೂಲಕ ವೈದಿಕದ ಕಿಲುಬಿನಿಂದಲೇ ಆತ ಕವಿಯಾದ ಎನ್ನುವುದನ್ನೇ ಸಮರ್ಥಿಸುತ್ತದೆ. ಹೀಗೆ ಈ ಕವಿಸತ್ವದ ಮೂಲಶೋಧವು ಪಂಪನನ್ನು ಬ್ರಾಹ್ಮಣ್ಯದಲ್ಲೇ ಮರುಹೊಂದಾಣಿಕೆ ಮಾಡಿ, ಆತನ ಕಾವ್ಯಪ್ರತಿಭೆಯನ್ನು ಮತಾಂತರಕ್ಕೆ ಮೊದಲಿನ ಸಂಸ್ಕಾರದ ಮುಂದುವರಿದ ಹರಿವೆಂದೇ ದೃಢೀಕರಿಸಲೆತ್ನಿಸುತ್ತದೆ. ಇದಕ್ಕೆ ವಿರುದ್ಧವಾಗಿ ಮತಾಂತರಗೊಂಡು ಬಿಡುಗಡೆಗೊಂಡುದರಿಂದಲೇ ಪಂಪ ಅಗ್ರಹಾರದ ಗೊಡ್ಡು ಪಂಡಿತನಾಗುವುದರಿಂದ ತಪ್ಪಿಸಿಕೊಂಡು ಕವಿಯಾದ, ಹೊಸಹರಿವು ಕಂಡುಕೊಂಡ ಎಂಬ ಇನ್ನೊಂದು ವಾದವೂ ಇದೆ. ಮತಾಂತರವನ್ನು ನೆವಮಾಡಿಕೊಂಡ ಪಂಪಸತ್ವದ ಕುರಿತ ಚರ್ಚೆಗಳು ಹೀಗೆ ನಡೆದಿದ್ದರೂ, ಬಹುಮಟ್ಟಿನ ಪಂಪಪರಿಚಯ ಪಠ್ಯಗಳು ಮಾತ್ರ ಆತನಲ್ಲಿ ವೈದಿಕಸತ್ವವನ್ನೇ ನೆನಪಿಸಿವೆ. ‘ಮನುಷ್ಯಜಾತಿ ತಾನೊಂದೆವಲಂ’ ಎಂದು ವಿಶ್ವಸಹೋದರತೆ ಸಾರಿದವನು ಎನ್ನುತ್ತಲೇ, ‘ಜೈನೀಯತೆಯೊಳಗೂ ವೈದಿಕಸತ್ವ’ ಉಳಿಸಿಕೊಂಡವನೆಂದು ಜಾತಿಯೊಳಗೇ ಕಟ್ಟಿವೆ. ಹೀಗೆ ಮನುಷ್ಯರೆಲ್ಲಾ ಒಂದೇ ಎಂದು ಜಾತಿಜಡವನ್ನು ದಾಟಿ ಧರ್ಮದ ಪ್ರವಾಹ ಒಪ್ಪಿದ ಮನುಕುಲದ ಮಿತ್ರನನ್ನು ಅಗ್ರಹಾರದ ಕಲ್ಲಾಗಿಸಲು ನಡೆಸಿದ ಈ ನಿರಂತರ ಯತ್ನವೂ ಒಂದರ್ಥದಲ್ಲಿ ಸಾಂಸ್ಕೃತಿಕ ಪ್ರತಿನಿಧೀಕರಣದ ಮರುಹೊಂದಾಣಿಕೆಯ ಘರ್ ವಾಪಸಿಯೇ ಆಗಿದೆ.

ಆದರೆ ಈ ತೆರನಾದ ಸಾಂಸ್ಕೃತಿಕ ಐಕಾನ್ ಗಳ ಘರ್ ವಾಪಸಿಗೂ, ಇಂದು ಸುದ್ದಿಯಲ್ಲಿರುವ ಘರ್ ವಾಪಸಿಗೂ ಸ್ವರೂಪ ಮತ್ತು ಉದ್ದೇಶದಲ್ಲಿ ಮೂಲಭೂತ ವ್ಯತ್ಯಾಸವೊಂದಿದೆ. ಅದೇನೆಂದರೆ ಸಾಂಸ್ಕೃತಿಕ ಪ್ರತಿನಿಧೀಕರಣದ ಘರ್ ವಾಪಸಿಯಲ್ಲಿ ನಿಶ್ಚಿತತೆ ಪಾರದರ್ಶಕತೆ ಇದೆ. ಅಂದರೆ ಪಂಪನಂತಹ ಸಾಂಸ್ಕೃತಿಕ ಪ್ರತಿನಿಧಿಗಳನ್ನು RSS-mohanbhagwatಎಲ್ಲಿಗೆ ಕರೆತರಬೇಕು ಎನ್ನುವಾಗ ಮತ, ಧರ್ಮದ ಅಮೂರ್ತತೆಗಿಂತ ನಿರ್ದಿಷ್ಟವಾದ ಘರ್/ಜಾತಿಯ ಖಚಿತ ವಿಳಾಸವಿರುತ್ತದೆ. ಪಂಪನಲ್ಲಿ ಇನ್ನೂ ಉಳಿದುಕೊಂಡ ಬ್ರಾಹ್ಮಣ್ಯವನ್ನೇ ಹುಡುಕಿ ಡಿಎನ್ಎ ಪರೀಕ್ಷೆಯನ್ನೂ ಮುಗಿಸುವ ಈ ಖಚಿತ ಕಾರ್ಯತಂತ್ರದಲ್ಲಿ ಇಂದು ಕಲ್ಪಿಸಲಾಗುತ್ತಿರುವ ವಿಶಾಲವಾದ ಮತಾವರಣದ ಅಮೂರ್ತತೆ ಇಲ್ಲ. ಆತ ಯಾರು ಎನ್ನುವ ಹಕ್ಕುಪ್ರತಿಪಾದನೆಯೇ ಇದೆ. ಆದರೆ ಅಧಿಕಾರ ರಾಜಕಾರಣದ ಶಕ್ತಿಗಾಗಿ ಕಾಲಾಳುಗಳು ಖಾಲಿಯಾಗದಂತೆ ಕಾಯುವ ಘರ್ ವಾಪಸಿಯಲ್ಲಿ ಖಚಿತತೆಯೇನೋ ಇದೆ. ಆದರೆ ಅದು ಪಾರದರ್ಶಕವಾಗಿ ಪ್ರಕಟವಾಗುವುದಿಲ್ಲ. ಅದರ ಕಾರ್ಯತಂತ್ರಗಳಲ್ಲಿಯೂ ವೈವಿಧ್ಯವಿದೆ. ತಳಜಾತಿಗಳು ಬೌದ್ಧ ಮತ್ತಿತರ ಅನ್ಯಮತಗಳ ಕಡೆಗೆ ದೊಡ್ಡಸಂಖ್ಯೆಯಲ್ಲಿ ಆಕರ್ಷಿತರಾಗಿ ತಮ್ಮ ಬಿಡುಗಡೆಯ ಹಕ್ಕು ಸಾಧಿಸುತ್ತಿರುವ ಘಳಿಗೆಯಲ್ಲೇ, ಇರುವ ಕಾಲಾಳುಗಳನ್ನು ಉಳಿಸಿಕೊಳ್ಳಲು ಅದು ದಲಿತಕೇರಿಗೆ ದೀಕ್ಷೆ, ವನವಾಸಿ ಚಳವಳಿ, ದೈವಾಂತರ, ಜೀರ್ಣೋದ್ಧಾರಗಳ ಪ್ಯಾಕೇಜ್ ಗಳನ್ನು ಒಯ್ಯುತ್ತದೆ. ಇನ್ನೊಂದೆಡೆ ಬಿಸಿಲಲ್ಲಿ ಬಿದ್ದ ತಿರುಕರನ್ನು ಹುಡುಕಿ ಘರ್ ವಾಪಸಿ ಮಾಡುತ್ತಿರುವುದಾಗಿ ಘೋಷಿಸುತ್ತದೆ. ಆದರೆ ಹೀಗೆ ಕಾಯಲ್ಪಟ್ಟವರು ಮತ್ತು ಒಳಕರೆದವರನ್ನು ಎಲ್ಲಿ ತುಂಬಿಕೊಳ್ಳುವುದೆಂಬ ಪ್ರಶ್ನೆಯನ್ನಂತೂ ಮೌನವಾಗಿಯೇ ಅದು ಕೊಂದು ಮಲಗಿಸುತ್ತದೆ. ಅವರು ಊರೊಳಗೆ ಬರುತ್ತಾರೆ. ಮನೆ ಕತ್ತಲಲ್ಲಿರುತ್ತದೆ!

ಗಮನಿಸಬೇಕಾದ ಸಂಗತಿಯೆಂದರೆ ಈ ಊರು, ಮನೆಗಳ ಒಳಭೇದವನ್ನು ನಿಭಾಯಿಸುವುದು ಹೇಗೆಂಬ ತೊಡಕು ಹೊರಗಿದ್ದು ನೋಡುವವರಿಗಷ್ಟೇ. ಆದರೆ ಬೆಂಕಿಯೆದುರು ತಣ್ಣೀರು ಕುಡಿಸಿ ಒಳಕರೆದ ಭರವಸೆ ಬಿತ್ತುವವರಿಗೆ ಇದು ಯಾವ ಕಾಲದಲ್ಲೂ ಸಮಸ್ಯೆಯಾಗಿಲ್ಲ. ಯಾಕೆಂದರೆ ಈ ಮರುಮತಾಂತರದ ಕಡಾಯಿಯೊಳಗೆ ಅವರು ರಂಗನನ್ನೋ, ವಿಠ್ಠೋಭನನ್ನೋ, ಜಗನ್ನಾಥನನ್ನೋ ಹಾಕಿ ತಿರುವಿದಂತೆಯೇ, ಕರಾವಳಿಯ ಕಲ್ಕುಡ ಜುಮಾದಿ ಕೊರಗಜ್ಜರನ್ನೂ ಎಳೆದು ಮಗುಚಿಹಾಕಿದ್ದಾರೆ. ಅಷ್ಟೇ ಅಲ್ಲ, ವರ್ತುಲಕ್ಕೆ ಸೆಳೆದುಕೊಂಡ ಜುಮಾದಿ ಕಲ್ಕುಡರಿಗೆ, ರಂಗ ವಿಠ್ಠೋಭರ ಕಕ್ಷೆಗಿಂತ ಬೇರೆಯದಾದ ಸುತ್ತೋಣವನ್ನೂ ತೋರಿಕೊಟ್ಟಿದ್ದಾರೆ. ಅವು ಹಾಗೆಯೇ ಸುತ್ತಿಕೊಂಡು ಕಲಶ, ಕಾಯಕಗಳ ಪಾನಕ ಕುಡಿಯುತ್ತಿವೆ. ಹಾಗಾಗಿ ವಾಪಾಸಾತಿಯ ಈ ನಮೂನೆಗಳಲ್ಲಿ ಪಂಪನನ್ನೋ, ಕನಕನನ್ನೋ, ಚಿಂದಿ ಆಯುವ ತಿರುಕರನ್ನೋ ಯಾವ್ಯಾವ ಲಕೋಟೆಯಯಲ್ಲಿಟ್ಟು ಮೊಹರು ಒತ್ತುವುದೆಂಬ ಕುರಿತು ಅಲ್ಲಿ ಗೊಂದಲವಿಲ್ಲ. ಲಕೋಟೆ ಬೇರಾದರೇನು? ಅಂಚೆ ಕಛೇರಿ ಒಂದೇ ಎನ್ನುವ ಸಮಾಧಾನ ಬಿತ್ತಲೆಂದೇ ದ್ವೈತ, ಅದ್ವೈತ, ವಿಶಿಷ್ಟಾದ್ವೈತೆಂಬ ಬೇರೆ ಬೇರೆ ಬೋಧನೆಯ ಕೋಣೆಗಳೂ ಅಲ್ಲಿವೆ. ಬ್ರಹ್ಮ ಸತ್ಯಂ ಜಗನ್ ಮಿಥ್ಯಂ………? ಇನ್ನು ಚಿಂತಿಸುವುದಕ್ಕೇನಿದೆ?

ಮಕ್ಕಳನ್ನು ಬೆಳೆಸುವುದು ಹೇಗೆ?


– ರೂಪ ಹಾಸನ


ನಾನೊಂದು ಮಗು
ನಾನೊಂದು ಮಗು
ನನ್ನ ಬರವಿಗೆ ಇಡೀ ಜಗತ್ತು ಕಾಯುತ್ತದೆ
ನಾನು ಏನಾಗುತ್ತೇನೆ ಎಂದು
ಇಡೀ ಭೂಮಿ ಕುತೂಹಲದಿಂದ ನೋಡುತ್ತದೆ.
ನಾನು ಏನಾಗಿದ್ದೇನೆ ಏನಾಗುತ್ತೇನೆ
ಎಂಬುದರ ಮೇಲೆ ನಾಗರಿಕತೆಯ ತಕ್ಕಡಿ ನಿಂತಿದೆ

ನಾನೊಂದು ಮಗು
ನನ್ನ ಭವಿಷ್ಯ ನಿಮ್ಮ ಕೈಯಲ್ಲಿದೆ.
ನನ್ನ ಸೋಲು-ಗೆಲುವು
ನಿಮ್ಮಿಂದಲೇ ನಿರ್ಧಾರವಾಗುತ್ತದೆ.

ಎಂದೇ
ನೆಮ್ಮದಿ ನೀಡುವಂಥದನ್ನು ಕೊಡಿ
ಇದು ನನ್ನ ಪ್ರಾರ್ಥನೆ.
ದಯವಿಟ್ಟು ಕಲಿಸಿಕೊಡಿ
ಈ ಜಗತ್ತಿಗೆ ನಾನೊಂದು ವರವಾಗುವಂತೆ.
ಮ್ಯಾಮಿ ಜೆನಿಕೋಲ್

ಬಹುಶಃ ಈ ಪದ್ಯ ನಾವು ಹಿರಿಯರೆಲ್ಲರೂ ಒಮ್ಮೆ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುವಂತಿದೆ.child-dreaming ಯಾವುದೇ ದೇಶದ ಅಭಿವೃದ್ಧಿ ಎನ್ನುವಂತದ್ದು ಆ ದೇಶದ ಮಕ್ಕಳನ್ನು ಕೇಂದ್ರೀಕರಿಸಿ ಆಗಬೇಕು ಎನ್ನುವುದು ಒಂದು ಆರೋಗ್ಯಕರ ಸಿದ್ದಾಂತ. ಮಕ್ಕಳು ಪ್ರತಿಕ್ಷಣ ಬೆಳೆಯುವ ಚೈತನ್ಯಶಾಲಿಗಳಾಗಿರುವುದರಿಂದ ಅವರ ಸಮಗ್ರ ಸರ್ವತೋಮುಖ ಅಭಿವೃದ್ಧಿಯಾದರೆ ಇಡೀ ದೇಶವೇ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಮಗುವನ್ನು ಕೇಂದ್ರದಲ್ಲಿಟ್ಟುಕೊಂಡು ವಿವರಿಸಿಕೊಳ್ಳುತ್ತಾ ಹೋದಾಗ ಮಗುವಿಗೆ ನಿಜವಾಗಿ ಏನು ಬೇಕು? ಅದಕ್ಕೆ ನಾವೇನು ಮಾಡಬೇಕು? ಮಗುವಿನ ಆರೋಗ್ಯಕರ ಬೆಳವಣಿಗೆಗೆ ನಾವೇನು ಮಾಡಬೇಕೆಂಬುದು ಅರಿವಿಗೆ ಬರುತ್ತಾ ಹೋಗುತ್ತದೆ. ಮಗುವೊಂದು ಪ್ರತಿ ಕ್ಷಣ ಹೊಸತಿಗೆ ಅಪ್ಡೇಟ್ ಆಗುತ್ತಿರುತ್ತದೆ. ನಾವು ಅದಕ್ಕೆ ಸ್ಪಂದಿಸದಿದ್ದರೆ ಪ್ರತಿ ಕ್ಷಣ ಔಟ್ಡೇಟೆಡ್ ಆಗುತ್ತಿರುತ್ತೇವೆ. ಇದೇ ನಾವು ಮಗುವನ್ನು ಅರ್ಥಮಾಡಿಕೊಳ್ಳಲು, ಬೆಳೆಸಲು ಇರುವ ನಿಜವಾದ ತಡೆಗೋಡೆ. ಮಗುವನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುತ್ತಾ ಹೋದರೆ ಈ ಸಮಸ್ಯೆ ತಾನಾಗಿಯೇ ಪರಿಹಾರವಾಗುತ್ತದೆ.

‘ಮಗುವಿಗೆ ಏನು ತಿಳಿಯುತ್ತದೆ? ಅದು ನಾವು ಹೇಳಿಕೊಟ್ಟ ಹಾಗೆ ಕಲೀತಾ ಹೋಗುತ್ತೆ. ಅದಕ್ಕೆ ತನ್ನದೇ ಆದ ವ್ಯಕ್ತಿತ್ವ ಇರುವುದಿಲ್ಲ’ ಎನ್ನುವುದು ನಮ್ಮ ಸಾಮಾನ್ಯ ಅಭಿಪ್ರಾಯ. ಆದರೆ ಬಹಳ ಸೂಕ್ಷ್ಮವಾಗಿ ಮಗುವೊಂದನ್ನು ಗಮನಿಸುತ್ತಿದ್ದರೆ ಈ ನಮ್ಮ ಅಭಿಪ್ರಾಯ ತಪ್ಪು ಎಂದು ಸಾಬೀತಾಗುತ್ತದೆ. ಮಕ್ಕಳ ಮನಸ್ಸು ಒಂದು ಕಪ್ಪು ಹಲಗೆ ಇದ್ದ ಹಾಗೆ, ಅಲ್ಲಿ ನಾವು ಏನನ್ನ ಬೇಕಾದರೂ ಬರೀಬಹುದು ಎಂದು ನಂಬಿದರೆ ಅದಕ್ಕಿಂತಾ ಪೆದ್ದುತನ ಇನ್ನೊಂದಿಲ್ಲ. ವೈದ್ಯಕೀಯ ಸಂಶೋಧನೆಗಳ ಪ್ರಕಾರ ಪ್ರತಿಯೊಂದು ಮಗುವೂ ಒಂದು ವ್ಯಕ್ತಿ. ಪ್ರತಿಯೊಂದು ಮಗುವಿನಲ್ಲೂ ಇರುವ ಮನಸ್ಸನ್ನು ಗೌರವಿಸಿ ವ್ಯಕ್ತಿ ಎಂದು ನಂಬಲಾಗುತ್ತದೆ.

ಹಸಿವಾದಾಗ ಅಳುವುದನ್ನು, ಹೊಸ ಆಟಿಕೆ ಕೈಗೆ ಸಿಕ್ಕಾಗ ಸಂತಸದಿಂದ ನಗುವುದನ್ನು, ತನ್ನ ತಾಯಿಯನ್ನ ಕಂಡ ತಕ್ಷಣ ಬೇರೆಯವರ ಕೈಯಿಂದ ಜಿಗಿದು ತಾಯಿಯನ್ನು ಅಪ್ಪಿಕೊಳ್ಳುವುದನ್ನು, ತನಗೆ ಬೇಕಾದ ವಸ್ತು ಸಿಗದಿದ್ದಾಗ ಸಿಟ್ಟುಗೊಳ್ಳುವುದನ್ನು, ಮೆರ್ರಿಗೋ ರೌಂಡ್ ತಿರುಗುವುದನ್ನು ನೋಡಿ ಕೈ ಕಾಲು ಬಡಿದು ಆಡುವುದನ್ನು ಮಗುವಿಗೆ ಹುಟ್ಟಿದ ತಕ್ಷಣ ಯಾರು ಕಲಿಸುತ್ತಾರೆ? ಮಗು ದೊಡ್ಡದಾಗುತ್ತಾ ಹೋದ ಹಾಗೆ, ನಾವು ಏನನ್ನೇ ಹೊರಗಿನಿಂದ ಕಲಿಸಿದರೂ, ಅದನ್ನ ಗ್ರಹಿಸುವ ಶಕ್ತಿ, ತಿಳಿದುಕೊಳ್ಳುವ, ಅರ್ಥೈಸಿಕೊಳ್ಳುವ ಮನಸ್ಸು, ಸಾಮರ್ಥ್ಯ ಮಗುವಿನಲ್ಲಿ ಹುಟ್ಟಿನಿಂದಲೇ ಇರುತ್ತದೆ. ತಾನು ಬೆಳೀತಾ ತನ್ನ ಸುತ್ತಲಿನ ಪರಿಸರವನ್ನ ಮಗು ತನ್ನ ದೃಷ್ಟಿಕೋನದಂತೆಯೇ ಅರ್ಥೈಸುತ್ತಾ ಹೋಗುತ್ತದೆ. ಪುಟ್ಟ ಮಗುವಿಗೆ ಸಹ ತನ್ನದೇ ಇಷ್ಟಾನಿಷ್ಟಗಳು, ನಿಲುವುಗಳು, ಸ್ವಭಾವ ಇರುವುದನ್ನು ಗಮನಿಸಬಹುದು. ಕೆಲವು ಮಕ್ಕಳಿಗೆ ಸಿಹಿ ಇಷ್ಟ ಅಂದ್ರೆ ಕೆಲವಕ್ಕೆ ಉಪ್ಪಿನ ಪದಾರ್ಥ ಇಷ್ಟ. ಕೆಲವು ರಾಗಿ ಮಡ್ಡಿಯನ್ನ ಖುಷಿಯಿಂದ ತಿಂದ್ರೆ, ಇನ್ನು ಕೆಲವು ಮುಖ ಸಿಂಡರಿಸುತ್ತವೆ. ಕೆಲವು ಕಂದಮ್ಮಗಳಿಗೆ ಬಿಸಿಬಿಸಿ ನೀರಲ್ಲಿ ಗಂಟೆಗಟ್ಟಲೆ ಸ್ನಾನ ಮಾಡಿಸಿದರೂ ಕಮಕ್- ಕಿಮಕ್ ಎನ್ನುವುದಿಲ್ಲ. ಇನ್ನು ಕೆಲವು ಮಕ್ಕಳು ಸ್ವಲ್ಪ ಬಿಸಿನೀರು ಮೈಮೇಲೆ ಬಿದ್ದಿದ್ದೇ ತಡ, ಏನೋ ಅನಾಹುತವೇ ಆಯ್ತು ಎಂಬಂತೆ ಕಿರಿಚಾಡುತ್ತವೆ. ಹೀಗೆ ಪ್ರತಿಯೊಂದು ಮಗುವೂ ತನ್ನದೇ ಆದ ವಿಶಿಷ್ಟತೆಯಿಂದ ಪ್ರತ್ಯೇಕ ವ್ಯಕ್ತಿನೇ ಆಗಿರುತ್ತದೆ. ಅದನ್ನು ಗುರುತಿಸುವಂತಾ ಗೌರವಿಸುವಂತಾ ಮನೋಭಾವ ನಮ್ಮಲ್ಲಿ ಮೂಡಬೇಕಷ್ಟೇ.

ಪ್ರತಿಯೊಂದು ಮಗುವಿಗೂ ಹಿರಿಯರಂತೆಯೇ, ಅಥವಾ ಅದಕ್ಕಿಂತಾ ಸೂಕ್ಷ್ಮವೂ ಸಂವೇದನಾಶೀಲವು ಆದ ಎಲ್ಲ ಸನ್ನಿವೇಶಗಳಿಗೂSchool_children_line_Cochin_Kerala_India ಸ್ಪಂದಿಸಿ ಮೂಡುವ ಸಂವೇದನೆಗಳಿವೆ. ಅದನ್ನು ನಿರ್ಲಕ್ಷಿಸಿ ನಮ್ಮ ಅನಿಸಿಕೆ, ಅಭಿಪ್ರಾಯಗಳನ್ನೆಲ್ಲಾ ಮಗುವಿನ ಮೇಲೆ ಬಲವಂತವಾಗಿ ಹೇರುವುದರಿಂದ ಮಗುವಿನ ಸೂಕ್ಷ್ಮ ಸಂವೇದನೆಗಳು ಘಾಸಿಗೊಂಡು, ದೊಡ್ಡದಾದಂತೆಲ್ಲಾ ಸ್ವತಂತ್ರ ವ್ಯಕ್ತಿತ್ವ ಇಲ್ಲದೇ ಕೀಳರಿಮೆಯಿಂದ, ಮನೋವೇದನೆಯಿಂದ ನರಳುತ್ತವೆ ಎನ್ನುತ್ತಾರೆ ಮಕ್ಕಳ ಮಾನಸಿಕ ತಜ್ಞರು. ಇಂದಿನ ನಮ್ಮ ಮಕ್ಕಳು ಹಿಂದಿನ ಪೀಳಿಗೆಗೆ ಹೋಲಿಸಿದರೆ ಹೆಚ್ಚು ಬುದ್ಧಿವಂತರು, ಪ್ರತಿಭಾವಂತರು. ಆದರೆ ಇಂದಿನ ಶಿಕ್ಷಣದ ಹೆಸರಿನಲ್ಲಿ ಅವರನ್ನು ಹೆಚ್ಚು ನೆನಪಿಟ್ಟುಕೊಳ್ಳುವ, ಮಾಹಿತಿ ಸಂಗ್ರಹಿಸುವ, ತುಂಬಿಟ್ಟಿದ್ದನ್ನು ಹೊರಚೆಲ್ಲುವ ‘ಮಿನಿ ಕಂಪ್ಯೂಟರ್’ ಗಳಾಗಿ ಮಾತ್ರ ತಯಾರಿಸಲಾಗ್ತಾ ಇದೆ. ಅವರಲ್ಲಿರುವ ಸಂಗೀತ, ನೃತ್ಯ, ಕಲೆ, ಕ್ರೀಡೆಯಂತಾ ಪ್ರತಿಭೆಗಳಿಗೆ ಒಂದಿಷ್ಟು ಪ್ರೋತ್ಸಾಹ ದೊರಕಿದರೂ ಅವರ ಜಾಣತನ, ಸೃಜನಶೀಲತೆ, ವೈಚಾರಿಕತೆಗೆ ಮತ್ತಷ್ಟು ಮೆರುಗು ನೀಡುವ ಪ್ರಯತ್ನಗಳು ನಡೆಯುವುದು ಕಡಿಮೆ. ಅವರೊಳಗಿನ ಕುತೂಹಲದ ಪ್ರಶ್ನೆಗಳು ಹೆಚ್ಚಿನ ಬಾರಿ ಹೊರಬರದಂತೆ ನಾವೇ ತಡೆಯೊಡ್ಡುತ್ತೇವೆ. ಚಿಕ್ಕಮಕ್ಕಳಾಗಿದ್ದಾಗಿನ ಅವರ ಕುತೂಹಲವನ್ನು, ಅಪರಿಮಿತ ಪ್ರಶ್ನೆಗಳನ್ನು ಮೆಲ್ಲಗೆ ನಾವೇ ಮುರುಟಿ ಬಿಟ್ಟಿರ್ತೀವಿ. ಮಕ್ಕಳ ದೇಹಕ್ಕೆ ‘ಯೂನಿಫಾರಂ’ ತೊಡಿಸಿ ಏಕರೀತಿ ಕಾಣೋ ಹಾಗೆ ಮಾಡಿದಂತೇನೇ ಅವರ ಮನಸ್ಸು-ಬುದ್ಧಿಯನ್ನೂ ಯೂನಿಫಾರಂ ತೊಡಿಸಿ ಏಕರೀತಿ ಮಾಡುವುದಕ್ಕೆ  ಹೊರಟುಬಿಟ್ಟಿದ್ದೇವೆ ನಾವು.

ಆದರೆ ಪ್ರತಿಯೊಂದು ಮಗುವಿಗೂ ಅದರದ್ದೇ ಮನಸ್ಸಿದೆ, ಭಾವನೆಗಳಿವೆ, ನೋವು-ನಲಿವುಗಳಿವೆ. ಮಗು ತನ್ನ ಸುತ್ತ ಮುತ್ತಲ ಘಟನೆ, ಅನುಭವಗಳನ್ನು ನಮಗಿಂತಲೂ ತೀವ್ರವಾಗಿ ಗಮನಿಸುತ್ತಿರುತ್ತದೆ. ಜೊತೆಗೆ ಅದಕ್ಕೆ ತನ್ನದೇ ಆದ ಅಭಿಪ್ರಾಯವೂ ಇದೆ! ತನ್ನ ಮೇಲಾಗುವ ಒತ್ತಡ, ನೋವು, ಅವಮಾನ, ನಾವು ತೋರುವ ನಿರ್ಲಕ್ಷ್ಯದಿಂದ ಮಗುವಿನ ಮನಸ್ಸು ಮುದುಡಿ ಹೋಗುತ್ತದೆ. ಮತ್ತೆ ಅದನ್ನು ಅರಳಿಸುವುದು ಕಷ್ಟದ ಕೆಲಸ. ಮಗುವಿನ ಬಗ್ಗೆ ಒಂದು ಸಣ್ಣ ಗಮನಿಸುವಿಕೆ ಕೂಡ ಅದಕ್ಕೆ ಖುಷಿ ಕೊಡುತ್ತದೆ. ತನ್ಮೂಲಕ ಅದು ತನ್ನನ್ನೇ ಗೌರವಿಸಿಕೊಳ್ಳುತ್ತದೆ. ಆತ್ಮವಿಶ್ವಾಸ ಬೆಳಸಿಕೊಳ್ಳುತ್ತದೆ. ಹೀಗಾಗೇ ಮಗುವಿನ ಜೊತೆ ತೊಡಗಿಕೊಳ್ಳುವಾಗ ನಮ್ಮ ಮಾತು, ನಡವಳಿಕೆ ಎಲ್ಲವೂ ಗಾಜಿನ ಜೊತೆಗೆ ವ್ಯವಹರಿಸುವಷ್ಟೇ ಸೂಕ್ಷ್ಮವಾಗಿರಬೇಕು. ಗಾಜಿನ ಮೇಲೆ ನಾವಿಡೋ ಕೈಬೆರಳು ಕೂಡ ಗುರುತಾಗಿ ಉಳಿದುಬಿಡುತ್ತೆ ಅಲ್ಲವೇ?

ಹಿರಿಯರಾದ ನಾವು ಪ್ರತಿಯೊಂದು ಮಗುವೂ ತನ್ನ ಭಾವನೆಗಳಿಂದ ತನ್ನಂತೆ ತಾನೇ ವಿಕಸಿಸಿ, ಅರಳುವುದಕ್ಕೆ, ಪರಿಮಳ ಸೂಸೋದಿಕ್ಕೆ ಬಿಡಬೇಕು. ಅದಕ್ಕೆ ತಕ್ಕ ಪೂರಕ ಪರಿಸರವನ್ನಷ್ಟೇ ನಾವು ಒದಗಿಸಿ ಕೊಡಬೇಕು. ಮಗುವಿನ ಮನಸ್ಸು ವಿಶಾಲ ನದಿಯಂತೆ. ಅದು ತನಗೆ ಬೇಕೆಂದಂತೆ, ಬೇಕಾದ ಕಡೆಗೆ ಹರಿದು ಬೇಕೆನಿಸಿದ್ದನ್ನು ಪಡೆಯಬಲ್ಲದು. ಯಾವುದು ಸರಿಯಾದದ್ದು? ಯಾವುದು ತಪ್ಪು ಅಂತ ಹೇಳಿಕೊಡುವುದಷ್ಟೇ ನಮ್ಮ ಕರ್ತವ್ಯ. ಅದನ್ನು ಪಡೆಯುವ ದಾರಿಗಳನ್ನ ಮಗು ತಾನೇ ತಿಳೀತಾ ಹೋಗುತ್ತೆ. ಹಾಗೇ ಮಗುವನ್ನ ನಮ್ಮ ಮಿತಿಯಲ್ಲಿಯಷ್ಟೇ ಅರ್ಥೈಸಿಕೊಂಡು ಅದಕ್ಕೆ ಸಂಕೋಲೆ ತೊಡಿಸುವ ‘ರಿಂಗ್ ಮಾಸ್ಟರ್’ ಗಳು ನಾವಾಗದಿರಬೇಕಷ್ಟೇ. ಅದನ್ನು ಅದು ಇರುವಂತೆ ಅರಿತುಕೊಳ್ಳುವ ಕಲೆಯೇ ನಾವು ಮಗುವಿನ ಘನತೆಗೆ ಕೊಡುವ ಬೆಲೆ ಎಂದು ನಾನು ಭಾವಿಸುತ್ತೇನೆ.

ಮಕ್ಕಳು ಎಂದರೆ ಅರಳಲು ಕಾದಿರುವ ಮೊಗ್ಗುಗಳು. ಒಂದು ಮೊಗ್ಗು ಪರಿಪೂರ್ಣವಾಗಿ child_colourಅರಳಬೇಕೆಂದರೆ ನಾವು ಆ ಗಿಡಕ್ಕೆ ಸರಿಯಾದ ಗಾಳಿ, ಬೆಳಕು, ನೀರು, ಮಣ್ಣು,  ಪೋಷಕಾಂಶವನ್ನು ಸಮರ್ಪಕವಾಗಿ ಸಮ ಪ್ರಮಾಣದಲ್ಲಿ ಕೊಟ್ಟಿರಬೇಕು. ಒಂದೇ ಒಂದು ಅಂಶ ಕಡಿಮೆಯಾದರೂ ಮಗುವಿನ ವ್ಯಕ್ತಿತ್ವ ಮುಕ್ಕಾಗುತ್ತದೆ. ಹೀಗಾಗೇ ಮಗುವಿಗೆ ನಾವು ರೂಪಿಸಿ ಕೊಡುವ ವಾತಾವರಣ ತುಂಬಾ ಮುಖ್ಯವಾದುದು. ಒಂದು ಗಿಡದಿಂದ ಒಂದು ಮೊಗ್ಗು ಕುಡಿಯೊಡೆದು ಬಂತೆಂದರೆ ಅದು ಸರಿಯಾಗಿ ವಿಕಸಿಸುವವರೆಗೆ ನಮ್ಮ ಜವಾಬ್ದಾರಿಯಿರುತ್ತದೆ. ಹೀಗಾಗೇ ಮಗುವೆಂದರೆ ‘ಟೇಕನ್ ಫಾರ್ ಗ್ರಾಂಟೆಡ್’ ಆಗಬಾರದು. ಅದು ಒಂದು ಬಹು ದೊಡ್ಡ ಜವಾಬ್ದಾರಿಯಾಗಬೇಕು.

‘ನೀವು ನಿಮ್ಮ ಮಕ್ಕಳನ್ನ ಪ್ರೀತಿಸ್ತೀರಾ?’ ಎಂದು ಕೇಳಿದರೆ ಎಲ್ಲ ಪಾಲಕರೂ ಒಕ್ಕೊರಲಿನಿಂದ ಹೌದೆನ್ನುತ್ತಾರೆ. ಹಾಗಾದರೆ ಪ್ರೀತಿ ಎಂದರೇನು? ಎಂದು ನಾವು ನಮ್ಮನ್ನು ಪ್ರಶ್ನಿಸಿಕೊಳ್ಳಬೇಕು. ಮಕ್ಕಳಿಗೆ ಪ್ರೀತಿ ಕೊಡೋದು ಅಂದ್ರೆ ಅವರು ಕೇಳಿದ್ದು ಕೊಡಿಸೋದು, ಒಳ್ಳೆ ಶಾಲೆಗೆ ಕಳಿಸೋದು, ಒಳ್ಳೆ ಬಟ್ಟೆ ಕೊಡಿಸೋದು, ಒಳ್ಳೆ ತಿಂಡಿ ಕೊಡಿಸೋದು ಎಂಬಷ್ಟಕ್ಕೆ ಮಾತ್ರ ಇಂದು ನಮ್ಮ ಪ್ರೀತಿ ಸೀಮಿತವಾಗಿದೆ. ಆದರೆ ನಿಜವಾದ ಪ್ರೀತಿ, ಮಕ್ಕಳು ನಮ್ಮಿಂದ ನಿರೀಕ್ಷಿಸುವುದೇನೆಂದರೆ ನಾವು ಅವರಿಗೆ ಕೊಡುವಗಮನ, ಕಾಳಜಿ ಮತ್ತು ಗುಣಾತ್ಮಕ ಸಮಯ.

ಮಹಾಭಾರತದಲ್ಲೊಬ್ಬ ಶಿಶುಪಾಲನೆಂಬ ಉಗ್ರ ಬರುತ್ತಾನೆ. ಅವನ ಕಥೆ ನಮಗೆ ಗೊತ್ತೇ ಇದೆ. ಆದರೆ ಈಗ, ಆಧುನಿಕ ಯುಗದಲ್ಲಿ ನಮ್ಮ ಮಕ್ಕಳ ಪಾಲಿಗೆ ಪಾಲಕರೇ ಉಗ್ರಗಾಮಿಗಳು! ಇದು ನಾನು ಹೇಳುತ್ತಿರುವುದಲ್ಲ ನಮ್ಮ ಮನಃಶಾಸ್ತ್ರಜ್ಞರು ಹೇಳುತ್ತಿರುವುದು. ಮಕ್ಕಳ ಶೇಕಡಾ 90ಕ್ಕೂ ಹೆಚ್ಚಿನ ಸಮಸ್ಯೆಗಳಿಗೆ ಪಾಲಕರೇ ಕಾರಣವೆಂದು ಅವರು ಹೇಳುತ್ತಾರೆ. ಹಾಗೆಂದು ಎಲ್ಲರ ಕುರಿತೂ ಸಾರಾಸಗಟಾಗಿ ಈ ಮಾತನ್ನು ಹೇಳುತ್ತಿಲ್ಲ. ಈ ನಮ್ಮ ಶಿಶುಪಾಲಕರಲ್ಲಿ ಕೆಲವರು ತಮಗೇ ಅರಿವಿಲ್ಲದೇ, ತಮ್ಮ ಮಕ್ಕಳ ಮೇಲೆ ಹೇರುವ ಅತೀ ಒತ್ತಡದಿಂದಾಗಿ ಅವರನ್ನು ಖಿನ್ನತೆಗೆ ನೂಕುವ ಮನೋವ್ಯಾಕುಲಕ್ಕೀಡು ಮಾಡುವ, ಅನಿವಾರ್ಯವಾಗಿ ಮಕ್ಕಳು ಆತ್ಮಹತ್ಯೆಯಂಥಾ ಋಣಾತ್ಮಕ ನಿರ್ಧಾರವನ್ನೂ ಕೈಗೊಳ್ಳುವಂತೆ ಮಾಡುವ ದುಷ್ಟರಾಗಿಬಿಡುತ್ತಾರೆಂಬುದನ್ನು ವಿಷಾದದಿಂದ ಹೇಳಲೇ ಬೇಕಿದೆ.

ತಮ್ಮ ಮಗುವಿನ ಬುದ್ಧಿಮತ್ತೆ, ಸಾಮರ್ಥ್ಯ, ತಿಳಿವಿನ ಮಿತಿಯೊಂದನ್ನೂ ಅರಿಯದೇ ‘ನೀನು ಮೊದಲ ರ‍್ಯಾಂಕ್ ಬರಬೇಕು’ ‘ಇಷ್ಟೇ ಅಂಕ ತೆಗೆದುಕೊಳ್ಳಬೇಕು’ ‘ಇಂತಹದ್ದೇ ಕೋರ್ಸ್ ಓದಬೇಕು’…….ಇತ್ಯಾದಿ ಹೇರುತ್ತಾ ಹೋದಾಗ ಮಕ್ಕಳು ಪಾಲಕರ ಬಯಕೆ ಪೂರೈಸಲು ಹೆಣಗುತ್ತಾ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾರೆ. ಹೀಗೆಂದೇ ಇಂದು ಮಕ್ಕಳು ತಮ್ಮ ವಯಸ್ಸು ಹಾಗೂ ಮನಸ್ಸಿನ ಸಹಜತೆ ಕಳೆದುಕೊಂಡು ಕೃತಕವಾಗಿ ಬದುಕುತ್ತಿದ್ದಾರೆ. ಅವರ ಜೀವಂತಿಕೆ ಮತ್ತು ಸೃಜನಶೀಲತೆಗೆ ಒತ್ತು ನೀಡದೇ ನಾವೀಗ ಅವರನ್ನು ಮಾರುಕಟ್ಟೆಯ ಸರಕುಗಳಾಗಿ ಮಾತ್ರ ತಯಾರಿಸುತ್ತಿರುವುದರಿಂದ ಖಿನ್ನತೆಯನ್ನು ಅನುಭವಿಸುತ್ತಾ ತಾವಾಗಲಾರದ್ದನ್ನು ಆಗಲು ಪ್ರಯತ್ನಿಸಿ ಅದು ಸಾಧ್ಯವಿಲ್ಲವೆಂದು ಅರಿವಾದಾಗ ಕೀಳರಿಮೆಯಿಂದ ನೇತ್ಯಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತ ತಲುಪುತ್ತಿದ್ದಾರೆ.

ಇರುವ ಒಂದೋ ಎರಡೋ ಮಕ್ಕಳನ್ನು ಅತೀ ಮುದ್ದಿನಿಂದ ನಾಜೂಕುIndian-Child-Dressed-As-Doctor ಗೊಂಬೆಗಳಾಗಿಸಿ ಬದುಕಿನ ಸಣ್ಣ ಕಷ್ಟವೂ ಅವರಿಗೆ ತಾಕದಂತೆ ಬೆಳೆಸಿ, ಸಮಸ್ಯೆಗಳೆದುರಾದಾಗ ಅದನ್ನು ಎದುರಿಸುವ ಛಲ, ಆತ್ಮವಿಶ್ವಾಸಗಳನ್ನು ಕಲಿಸದ ಪಾಲಕರು ತಾವು ಕಲಿಯಲಾರದ್ದನ್ನೆಲ್ಲಾ ತಮ್ಮ ಮಕ್ಕಳು ಕಲಿಯಬೇಕು, ತಾವು ಸಾಧಿಸಲಾಗದ್ದನ್ನು ತಮ್ಮ ಮಕ್ಕಳು ಸಾಧಿಸಬೇಕೆನ್ನುವ ಮಹದಾಸೆಯಲ್ಲಿ, ತಮ್ಮ ಮಗು ‘ಸೂಪರ್ ಚೈಲ್ಡ್’ ಆಗಿಬಿಡಬೇಕೆಂಬ ಕನಸಿನಲ್ಲಿ ತಮಗರಿವಿಲ್ಲದೇ ಅವರ ಪಾಲಿನ ಉಗ್ರಗಾಮಿಗಳಾಗಿಬಿಡುತ್ತಾರೆ! ಒಮ್ಮೆ ಯೋಚಿಸಿ ನಮ್ಮ ಮಕ್ಕಳನ್ನು ಅವರ ಗುಣ ಸ್ವಭಾವ ಸಾಮರ್ಥ್ಯಕ್ಕನುಗುಣವಾಗಿ ಅವರಿರುವಂತೆ ನಾವು ಬೆಳೆಸುತ್ತಿದ್ದೇವೆಯೇ? ಅದಕ್ಕೆ ಬೇಕಾದಂತಾ ಪೂರಕ ವಾತಾವರಣವನ್ನು ನಿರ್ಮಿಸಿಕೊಟ್ಟಿದ್ದೇವೆಯೇ?

ಸಮಾಜದ ಅವಶ್ಯಕತೆಗಳು ಬದಲಾದಂತೆ ಅರ್ಥ ಸಂಸ್ಕೃತಿ-ಪ್ರದರ್ಶನ ಸಂಸ್ಕೃತಿಗಳೆಡೆಗಿನ ಸೆಳೆತಗಳು ಹೆಚ್ಚಾದಂತೆ ಅದರ ಒತ್ತಡ ನಮ್ಮ ಮಕ್ಕಳ ಮೇಲೆ ತೀವ್ರವಾಗಿ ಬೀಳುತ್ತಿದೆ. ಅದನ್ನು ಪೂರೈಸಲಾಗದೇ ಮಕ್ಕಳು ಖಿನ್ನತೆಗೊಳಗಾಗುವುದೂ ಸ್ವಾಭಾವಿಕ. ಹೀಗೆಂದೇ ಇಂದು ‘ಉತ್ತಮ ಪಾಲಕತ್ವ’ ಕೂಡ ಯೋಚಿಸಬೇಕಾದ ಮುಖ್ಯ ವಿಷಯಗಳಲ್ಲೊಂದು. ತಮ್ಮದೇ ನೂರೆಂಟು ಸಮಸ್ಯೆಗಳು, ಒತ್ತಡಗಳಲ್ಲಿ ತಮ್ಮ ಪ್ರಪಂಚದ ‘ಬೇಕು’ಗಳ ಪೂರೈಕೆಯಲ್ಲಿ ಮುಳುಗಿ ಹೋಗಿರುವ ಹೆಚ್ಚಿನ ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಗುಣಾತ್ಮಕ ಸಮಯವನ್ನು ಕಳೆಯಲು, ಅವರನ್ನು ಅರ್ಥೈಸಿಕೊಳ್ಳಲು, ಅವರ ಬೇಕು-ಬೇಡ ಗಮನಿಸಲು ಸಮಯವಿಲ್ಲ. ಆದರೆ ಸಮಯ ಸಿಕ್ಕಾಗೆಲ್ಲಾ ಅವರ ಮೇಲೆ ಬಲವಂತವಾಗಿ ತಮ್ಮ ಅಭಿಲಾಷೆಗಳನ್ನು ಮಾತ್ರ ನಿರಂತರವಾಗಿ ಹೇರುತ್ತಲೇ ಇರುತ್ತಾರೆ! ಅಲ್ಲವೇ?

ಹೀಗೆಂದೇ ಆಧುನಿಕ ಶಿಶುಪಾಲಕರಿಗೆ ನನ್ನದೊಂದು ಮನವಿ. ಮಕ್ಕಳನ್ನು ಅವರ ಇಚ್ಛೆ ಸಾಮರ್ಥ್ಯಕ್ಕನುಗುಣವಾಗಿ ಸಹಜವಾಗಿ, ಮುಕ್ತವಾಗಿ ಬೆಳೆಸಿ. ಬಂದುದೆಲ್ಲವನ್ನೂ ಆತ್ಮಸ್ಥೈರ್ಯದಿಂದ ಸ್ವೀಕರಿಸುವ ಮನೋಭಾವವನ್ನು ಕಲಿಸಿ. ಅವರ ಇಷ್ಟಾನಿಷ್ಟ, ಗುಣ, ಸ್ವಭಾವ, ಅಭಿರುಚಿಗಳನ್ನು ನಿರಂತರವಾಗಿ ಅಭ್ಯಸಿಸಿ. ವ್ಯಕ್ತಿತ್ವ ದೋಷಗಳನ್ನು ಚಿಕ್ಕಂದಿನಲ್ಲೇ ಪ್ರೀತಿಯಿಂದ ಮುರುಟಿ ಹಾಕಿ. ಎಲ್ಲಕ್ಕಿಂಥಾ ಮುಖ್ಯವಾಗಿ ಅವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಅವರಿಗೆ ನಿಮ್ಮ ಹಣಕ್ಕಿಂಥಾ ಅದರ ಮೂಲಕ ನೀವು ಅವರಿಗೆ ಒದಗಿಸುವ ಸುಖದ ಸಾಧನಗಳಿಗಿಂಥಾ ನಿಮ್ಮ  ಪ್ರೀತಿ, ವಾತ್ಸಲ್ಯದ ನಿರೀಕ್ಷೆ ಹೆಚ್ಚಿಗಿರುತ್ತದೆ ಎಂಬುದನ್ನು ಮರೆಯಬೇಡಿ. ಅವರ ಇಚ್ಛೆಗೆ ವಿರುದ್ಧವಾಗಿ ಅವರಿಗೆ ಒತ್ತಡ ಹೇರದೇ, ಅವರ ಅಭಿರುಚಿ-ಆಸೆಗೆ ತಕ್ಕಂತೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಪ್ರೇರಣೆ, ಸಹಕಾರ ನೀಡಿ.

ಮಕ್ಕಳೊಂದಿಗಿನ ಸಂವಾದದ ನನ್ನ ಅನುಭವದಿಂದ ಕಂಡುಕೊಂಡಿರುವುದೆಂದರೆ ಇಂದಿನ ನಮ್ಮ ಮಕ್ಕಳ ಮುಗ್ಧತೆಯನ್ನು ನಮ್ಮ ದೃಶ್ಯ ಮಾಧ್ಯಮಗಳು ಭ್ರಷ್ಟಗೊಳಿಸುತ್ತಾ ಇವೆ. ಅದರಲ್ಲಿ ಬರುವ ಮಾತು, ಕೃತಿ, ಹಾವಭಾವಗಳನ್ನು ಅನುಕರಿಸಲು ಮಕ್ಕಳು ಪ್ರಯತ್ನಿಸ್ತಾ ಇದ್ದಾರೆ. ಕುತೂಹಲದಿಂದ ಪ್ರಯೋಗಿಸಲು ನೋಡುತ್ತಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನು ಸಾಧ್ಯವಿದ್ದಷ್ಟೂ ಟಿವಿಯಿಂದ ದೂರವಿಡುವ ಪ್ರಯತ್ನ ಮಾಡಬೇಕು. ಆ ಸಮಯದಲ್ಲಿ ಅವರನ್ನು ಹಾಡು, ಆಟ, ಗಿಡ ನೆಡುವುದು, ಚಿತ್ರಕಲೆ ಬಿಡಿಸುವುದರಲ್ಲಿ, ಸಣ್ಣಪುಟ್ಟ ಮನೆಗೆಲಸದಲ್ಲಿ ತೊಡಗಿಸಬೇಕು. ನಾವೂ ಅವರೊಂದಿಗೆ ಈ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬಿಡುವು ಮಾಡಿಕೊಳ್ಳಬೇಕು. ನಾವು ಮಾತ್ರ ಟಿ.ವಿ ನೋಡ್ತಾ ಮಕ್ಕಳಿಗೆ ಬೇರೇನೋ ಕೆಲಸ ಹೇಳಿದರೆ ಖಂಡಿತಾ ಅವರದನ್ನ ಮಾಡುವುದಿಲ್ಲ. ಒಂದು ಮಾತು ನಾವೆಲ್ಲರೂ ನೆನಪಿಡಬೇಕಾದ್ದು ಮಕ್ಕಳು ನಾವು ಹೇಳಿದ್ದನ್ನ ಕೇಳಿ ಏನನ್ನೂ ಕಲಿಯುವುದಿಲ್ಲ. ಅವರು ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ! ನಮ್ಮ ನಡವಳಿಕೆ, ಸ್ವಭಾವ, ಮಾತು, ಹಾವಭಾವಗಳು ಅವರ ಮೇಲೆ ತೀವ್ರ ಪ್ರಭಾವ ಬೀರುತ್ತಿರುತ್ತವೆ. ಆದ್ದರಿಂದ ನಾವು ಪ್ರತಿಕ್ಷಣ ಎಚ್ಚರಿಕೆಯಿಂದ ಇರಬೇಕು! ನಮ್ಮನ್ನು ನೋಡಿ ಅವರು ಕಲಿಯುತ್ತಿರುತ್ತಾರೆ!

ಪ್ರತಿದಿನ ಮಗು ಮನೆ ಬಿಟ್ಟಾಗಿನಿಂದ, ಶಾಲೆಯಿಂದ ಮನೆಗೆ ಬರುವವರೆಗೆ ಏನೇನಾಯ್ತೆಂದು ಸ್ನೇಹದಿಂದ ವಿಶ್ವಾಸಕ್ಕೆ ತೆಗೆದುಕೊಂಡು ಗೆಳೆಯರಂತೆ ವಿಚಾರಿಸಬೇಕು. ವಿಷಯ ಸಂಗ್ರಹಿಸಬೇಕು. ವಿನಾಕಾರಣ ಪ್ರತಿ ಮಾತಿಗೂ ಬೈಯ್ಯುವುದು, ಗದರುವುದು ಹೊಡೆಯುವುದು ಮಾಡದೇ ಎದುರಿಗೆ ಮಗುವನ್ನು ಕುಳ್ಳಿರಿಸಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದರಿಂದ ಮಗುವಿಗೆ ಸ್ನೇಹ ನಂಬಿಕೆ ಬರುತ್ತದೆ. ಆಗವರು ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಮಕ್ಕಳಿಗೆ ಯಾರಿಂದಲಾದರೂ ಏನಾದರೂ ತೊಂದರೆಗಳಾಗುತ್ತಿರುವ ಸುಳಿವು ಸಿಕ್ಕರೆ ತಕ್ಷಣ ಎಚ್ಚೆತ್ತು ಅದರೆಡೆಗೆ ಗಮನ ಹರಿಸಬೇಕು.

ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಕರೂ ತೆಗೆದುಕೊಳ್ಳಬೇಕು ಮತ್ತು ಮಕ್ಕಳಿಗೂ ನೀಡಬೇಕು. ಮುಖ್ಯವಾಗಿ ಮಕ್ಕಳನ್ನು ಶಾಲೆಗೆ ಕೊಂಡೊಯ್ಯುವ ಆಟೋ, ವ್ಯಾನ್ ಇತ್ಯಾದಿ ವಾಹನ ಚಾಲಕರ/ಮಾಲೀಕರ ಸಂಪೂರ್ಣ ವಿವರಗಳನ್ನು ತಿಳಿದುಕೊಂಡಿರಬೇಕು ಮತ್ತು ಅವರ ದೂರವಾಣಿ ಸಂಖ್ಯೆಗಳನ್ನು ಪಡೆದಿರಬೇಕು. ಅವರ ನಡವಳಿಕೆಯು ಮಗುವಿನ ಜೊತೆಗೆ ಹೇಗಿದೆ ಎನ್ನುವುದನ್ನು ಕುರಿತು ಆಗಾಗ್ಗೆ ವಿಚಾರಿಸುತ್ತಿರಬೇಕು.

ಅಪರಿಚಿತ ವ್ಯಕ್ತಿಗಳಿಂದ ಮಕ್ಕಳು ಆದಷ್ಟೂ ದೂರವಿರುವಂತೆ ಹಾಗೂchild-abuse ಅವರಿಂದ ಯಾವುದೇ ವಸ್ತುಗಳನ್ನು ಸ್ವೀಕರಿಸದಂತೆ ತಿಳಿವಳಿಕೆ ನೀಡಬೇಕು. ಪರಿಚಿತ ವ್ಯಕ್ತಿಗಳೊಂದಿಗೆ ಕೂಡ ಆತ್ಮೀಯತೆಯಿಂದ ಇರುತ್ತಲೇ ಒಂದು ದೂರವನ್ನು ನಿರ್ವಹಿಸುವ ಕಲೆಯನ್ನು ಮಕ್ಕಳಿಗೆ ತಿಳಿಸಿ, ಕಲಿಸಿ ಕೊಡಬೇಕು. ಮಕ್ಕಳಿಗೆ ವೈಯಕ್ತಿಕ ಸುರಕ್ಷತೆ ಮತ್ತು ದೌರ್ಜನ್ಯಗಳ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾದುದು. ಕತ್ತಲೆಯಾಗುವ ಮೊದಲೇ ಆದಷ್ಟೂ ಮಕ್ಕಳು ಮನೆ ಸೇರುವಂತೆ ನೋಡಿಕೊಳ್ಳಬೇಕು. ಮಕ್ಕಳು ಯಾವುದೇ ಕಾರಣಕ್ಕಾದರೂ ಅಸಹಜತೆಯಿಂದ ವರ್ತಿಸುತ್ತಿದ್ದರೆ ತಕ್ಷಣ ಅವರೊಂದಿಗೆ ಸಮಾಲೋಚಿಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ಮಕ್ಕಳು, ಮೊಬೈಲ್, ಫೋನ್, ಇಂಟರ್ನೆಟ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಅನಾವಶ್ಯಕವಾಗಿ ಮತ್ತು ಹಿರಿಯರ ಅನುಪಸ್ಥಿತಿಯಲ್ಲಿ ಬಳಸುವುದನ್ನು ತಡೆಯಬೇಕು.

ಲೈಂಗಿಕ ದುರ್ಬಳಕೆ ಅಥವಾ ಶೋಷಣೆಯ ಕುರಿತು ಹೆಚ್ಚಿನಂಶ ಹೆತ್ತವರು ತಮ್ಮ ಮಕ್ಕಳೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ. ಲೈಂಗಿಕ ವರ್ತನೆಗಳ ಬಗ್ಗೆ ತಮ್ಮ ಮಕ್ಕಳು ಕೇಳಬಹುದಾದ ಪ್ರಶ್ನೆಗಳಿಗೆ ಏನುತ್ತರಿಸಬೇಕೆಂದು ತಿಳಿಯದೇ ಮುಜುಗರ ಪಡುತ್ತಾರೆ. ಆದರೆ ಇಂದು ಮಕ್ಕಳೊಂದಿಗೆ ಲೈಂಗಿಕ ದುರ್ಬಳಕೆಯ ಬಗ್ಗೆ ಅವಶ್ಯಕವಾಗಿ ಮಾತಾಡಲೇ ಬೇಕಿದೆ. ಇಲ್ಲಿ ಸೆಕ್ಸ್ ಎಂಬುದಕ್ಕೆ ಒತ್ತು ಕೊಡದೇ ಸುರಕ್ಷತೆಯನ್ನು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಬೇರೆಲ್ಲಾ ಸುರಕ್ಷಿತತೆಯ ಬಗ್ಗೆ ಹೇಳುವಂತೆಯೇ ಸಹಜವಾಗಿ ಅಸಭ್ಯ ಮತ್ತು ಅಸುರಕ್ಷಿತ ಸ್ಪರ್ಶದ ಕುರಿತೂ ಮಕ್ಕಳಿಗೆ ಹೇಳಿಕೊಡುವುದು ಅನಿವಾರ್ಯವಾಗಿದೆ. ಶೇಕಡಾ 50ರಷ್ಟು ಮಕ್ಕಳು ತಾವು ಒಂದಲ್ಲಾ ಒಂದು ಬಗೆಯ ಲೈಂಗಿಕ ಕಿರುಕುಳ ಅನುಭವಿಸಿಯೇ ಇರುತ್ತಾರೆ. ಇದರಲ್ಲಿ ಗಂಡು-ಹೆಣ್ಣು ಯಾವ ಬೇಧವೂ ಇಲ್ಲ. ಎರಡೂ ಲಿಂಗದ ಮಕ್ಕಳೂ ಸಮಪ್ರಮಾಣದಲ್ಲಿ ಶೋಷಣೆ ಅನುಭವಿಸುತ್ತಾರೆ. ಹೀಗಾಗಿ ಇಬ್ಬರಿಗೂ ತಿಳಿವಳಿಕೆ ನೀಡಬೇಕು.

ನಾವೆಷ್ಟೇ ಆಧುನಿಕರು, ವಿದ್ಯಾವಂತರು ಎಂದುಕೊಂಡರೂ ಇಂದಿಗೂ ಗಂಡು-ಹೆಣ್ಣುಮಕ್ಕಳನ್ನು ತಾರತಮ್ಯದಿಂದ ನೋಡುವುದು, ನಮಗೇ ಅರಿವಿಲ್ಲದೇ ಅವರಲ್ಲಿ ಗಂಡು ಮಕ್ಕಳಲ್ಲಿ ಶ್ರೇಷ್ಠತೆಯನ್ನ, ಹೆಣ್ಣುಮಕ್ಕಳು ಅವರಿಗಿಂತ ಕಡಿಮೆ ಎನ್ನುವಂತೆಯೇ ಬೆಳೆಸಲಾಗುತ್ತಿದೆ. ನಾವು ಮಕ್ಕಳಿಗೆ ಚಿಕ್ಕಂದಿನಲ್ಲೇ ಈ ಭಾವನೆ ಬರದಂತೆ ಅವರಿಬ್ಬರೂ ಸಮಾನರು, ಸಮಾನವಾಗಿ ಕೆಲಸಗಳನ್ನೂ, ಜವಾಬ್ದಾರಿಗಳನ್ನೂ ಹಂಚಿಕೊಂಡು ಮಾಡಬೇಕೆನ್ನುವುದನ್ನು ಕಲಿಸಬೇಕಾಗುತ್ತದೆ. ಆಗ ಮಾತ್ರ ದೊಡ್ಡವರಾದ ನಂತರ ಈ ಒತ್ತಡದ, ಗಂಡೂ-ಹೆಣ್ಣೂ ಇಬ್ಬರೂ ಹೊರಗೆ ಹೋಗಿ ದುಡಿಯಬೇಕಾಗಿರುವ ಈ ದಿನಗಳಲ್ಲಿ ಸಮಾನತೆಯಿಂದ ಸಂತೋಷದಿಂದ ಬದುಕಲು ಸಾಧ್ಯವಾಗುತ್ತದೆ.

 ಮಗು ಹುಟ್ಟುತ್ತಲೇ ವಿಶ್ವಮಾನವನಾಗಿರುತ್ತದೆ. ಅದಕ್ಕೆ ಯಾವುದೇ ಕೊಳಕಿನ ಸೊಂಕಿರುವುದಿಲ್ಲ. ಆದರೆ ಬೆಳೆಯುತ್ತಾ ಹೋದಂತೆ ಮಕ್ಕಳಲ್ಲಿ ಜಾತಿ-ಧರ್ಮ, ಗಂಡು-ಹೆಣ್ಣು ತಾರತಮ್ಯ, ಮೇಲು ಕೀಳಿನ ವ್ಯತ್ಯಾಸ, ಸಣ್ಣತನ, ಕೆಟ್ಟ ಭಾವನೆಗಳನ್ನು ನಾವೇ ಬಿತ್ತುತ್ತಾ ಹೋಗುತ್ತೇವೆ. ಆದರೆ ಮಗುವನ್ನು ಅದರ ಎಲ್ಲಾ ಮುಗ್ಧತೆಗಳೊಂದಿಗೆ ಯಾವುದೇ ಕಲ್ಮಷಗಳು ಸೋಕದಂತೆ ಆದರೂ ದುಷ್ಟರಿಂದ ಎಚ್ಚರಿಕೆಯಿಂದಿರುವಂತೆ ಕಲಿಸಬೇಕಿರುವುದೇ ನಿಜವಾದ ಪಾಲಕರ ಕರ್ತವ್ಯ. ಮಕ್ಕಳಿಗೆ ತಾವು ಒಳಗೊಳ್ಳುವ ಅನುಭವ, ಕಷ್ಟಸಹಿಷ್ಣುತೆ, ಕೌಟುಂಬಿಕ ಜವಾಬ್ದಾರಿ, ಸಮಸ್ಯೆಗಳನ್ನು ಎದುರಿಸುವ ಛಲದಿಂದ ದೃಢತೆ ಉಂಟಾಗುತ್ತದೆ. ದಿಟ್ಟತೆ, ಸಹಜತೆ ಮತ್ತು ಮುಕ್ತತೆಗಳು ಅವರ ವ್ಯಕ್ತಿತ್ವದ ಭಾಗವಾಗಿಬಿಡುತ್ತವೆ. ಪ್ರಪಂಚ ಎಷ್ಟೊಂದು ವಿಶಾಲವಾಗಿದೆ, ಬದುಕಿಗೆಷ್ಟೊಂದು ಮಾರ್ಗಗಳಿವೆ, ಎಲ್ಲರೂ ಎಂಥಹುದೇ ನಿಕೃಷ್ಟ ಸಂದರ್ಭದಲ್ಲಿಯೂ ಸ್ವಾಭಿಮಾನದಿಂದ ಬದುಕಲು ನೂರಾರು ದಾರಿಗಳಿವೆ. ಒಂದು ದಾರಿ ಮುಚ್ಚಿತೆಂದರೂ ಕಷ್ಟಪಡಲು ಸಿದ್ಧವಿರುವ ಚೈತನ್ಯಗಳಿಗೆ ಹಲವಾರು ಪರ್ಯಾಯಗಳಿವೆ ಎಂಬುದನ್ನು ಮಕ್ಕಳಿಗೆ ಸುತ್ತಲ ಸಮಾಜದ ಉದಾಹರಣೆಗಳಿಂದ ತೋರಿಸಿಕೊಡುತ್ತಿರಬೇಕು. ಪ್ರತಿ ಮಗುವೂ ಒಂದು ವ್ಯಕ್ತಿ ಅದನ್ನು ನಾವು ಗೌರವಿಸುವ ಮೂಲಕ ಆ ಮಗುವಿನಲ್ಲೂ ಇರುವ ವಿಶೇಷತೆಯನ್ನು ಗುರುತಿಸುವ ಕೆಲಸವನ್ನು ಮಾಡಿದರೆ ಖಂಡಿತಾ ನಮ್ಮ ಮಕ್ಕಳು ಋಣಾತ್ಮಕ ಆಲೋಚನೆಯಿಂದ ಸಮಸ್ಯೆಗಳಾಗದೇ, ಸಮಾಜದ ಧೀಮಂತ ವ್ಯಕ್ತಿಗಳಾಗುತ್ತಾರೆ. ಬನ್ನಿ ನಮ್ಮ ಮಕ್ಕಳನ್ನು ಪ್ರೀತಿಯಿಂದ ಸಹನೆಯಿಂದ ಅವರಿಚ್ಛೆಯಂತೆ ರೂಪಿಸೋಣ.

“ಇಸುಮುಳ್ಳು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ

– ಅನುಪಮಾ ಪ್ರಸಾದ್

ಎರಡು ದಿನಗಳಿಂದ ಬಿಡದೆ ಅಬ್ಬರಿಸಿದ ಮಳೆ ನಿಧಾನ ಗತಿಗೆ ಇಳಿದು ಆ ದಿನ ಬೆಳಗಿನ ಹೊತ್ತಿಗೆ ಕುಂಬು ಅಟ್ಟದಿಂದ ಕುಟ್ಟೆ ಹುಡಿ ಉದುರಿದ ಹಾಗೆ ಉದುರಲಾರಂಭಿಸಿತ್ತು. ದನ-ಕರುಗಳಿಗೆ ಮಡ್ಡಿ ಇಟ್ಟು ಬಂದ ಶಂಕರಯ್ಯ ನಿತ್ಯದಂತೆ ಜಗಲಿಯಲ್ಲಿ ಕುಳಿತು ಗದುಗಿನ ಭಾರತದ ಪುಟಗಳನ್ನ ಬಿಡಿಸುತ್ತ ಅಲ್ಲೇ ಕುಳಿತಿದ್ದ ರಾಜೀವನ ಬಳಿ; “ಇಂದು ಏವ ಭಾಗ ಸುರುಮಾಡ್ಲಿಪ್ಪದು?” ಕೇಳಿದರು.

“ಪಾಂಡು ಮಹಾರಾಜ ಬೇಟೆಗೆ ಹೋಪಲ್ಲಿವರೆಗೆ ನಿನ್ನೆ ಓದಿದ್ದಿ ಅಜ್ಜ.” ರಾಜೀವನಿಗೆ ಬಾಲ್ಯದಿಂದಲೇ ಕೇಳಿ ಕೇಳಿ ಎಲ್ಲಾ ಕಥೆ ಕಣ್ಣಿಗೆ ಕಟ್ಟುತ್ತಿತ್ತು. ಆದರೂ ಮತ್ತೆ ಮತ್ತೆ ಅಜ್ಜ ರಾಗವಾಗಿ ಓದುವುದನ್ನ ಕೇಳುವುದರಲ್ಲಿ ಖುಷಿ. ಕೃಷ್ಣಾಷ್ಟಮಿಗಾಗಿ ಕಾಲೇಜಿಗೆ ರಜೆಯೂ ಇದ್ದಿದ್ದರಿಂದ ಹೊರಡುವ ಗಡಿಬಿಡಿ ಇರಲಿಲ್ಲ. ಆರಾಮವಾಗಿ ಅಜ್ಜನ ವಾಚನ ಕೇಳುವ ಉಮೇದಿನಲ್ಲಿದ್ದ ರಾಜೀವ. ಅಷ್ಟರಲ್ಲಿ ಅಣ್ಣೇರೆ.. ಅಣ್ಣೇರೆ.. ಅನ್ನುತ್ತ ತುಕ್ರ ಬಂದು ನಿಂತ.

“ನಿಕ್ ಏತ್ ಸರ್ತಿ ಪನೊಡು ಮಾರಾಯ, ಈತ್ ಬೊಲ್ಪುಗೇ ಲಕ್ಕ್‌ದ್ ಬರೊಡ್ಚಿ ಪನ್ದ್. ನಿನೊ ಜೋಕ್ಲು ಎಂಕ್ಲೆನ್ ಪರಂಚೊನ್ವೆರ್ ಬೊಕ್ಕ. (ನಿಂಗೆ ಎಷ್ಟು ಬಾರಿ ಹೇಳ್ಬೇಕು ಮಾರಾಯ. ಇಷ್ಟು ಬೆಳಗ್ಗೆಯೇ ಎದ್ದು ಬರಬೇಡ ಅಂತ. ನಿನ್ನ ಮಕ್ಕಳು ನಮ್ಮನ್ನು ಬೈದುಕೊಂಡಾರು ಮತ್ತೆ.)”

ಶಂಕರಯ್ಯ ಹೇಳಿದಾಗ ತುಕ್ರ ನಗುತ್ತ;

“ಅಕ್ಲ್ ದಾದ ಬೋಡಾಂಡ ಪಣಾಡ್. ಐಕ್ ಕೆಬಿ ಕೊರೊಂದು ಎನ್ನಡ್ದ್ ಅಂಚ ಕುಲ್ಲರೆ ಆಪುಜ್ಜಿ ಅಣ್ಣೆರೆ. ಬೊಲ್ಪುಗ್ ಲಕ್ಕ್‌ದ್ ಇಲ್ಲಡ್ ದಾದ ಬೇಲೆ ಇಜ್ಜಿ. ಪೊಕ್ಕಡೆ ಕುಲ್ಲೊಡ್. ಮೂಲ್ ಬತ್ತ್ತ್ಂಡ ಕಿದೆಕ್ ತಪ್ಪಾಂಡಲಾ ಮಲ್ಪೊಲಿ. (ಅವರು ಎಂತ ಬೇಕಾದ್ರೂ ಹೇಳಲಿ. ಅದಕ್ಕೆ ಕಿವಿ ಕೊಟ್ಟು ನನ್ನಿಂದ ಹಾಗೆ ಕೂತ್ಕೊಳ್ಲಿಕ್ಕೆ ಆಗ್ಲಿಕ್ಕಿಲ್ಲ ಧಣಿ. ಬೆಳಗ್ಗೆ ಎದ್ದು ಮನೆಯಲ್ಲಿ ಯಾವ ಕೆಲಸ ಇರುವುದಿಲ್ಲ. ಸುಮ್ಮನೆ ಕುಳಿತಿರಬೇಕು. ಇಲ್ಲಿ ಬಂದರೆ ಕೊಟ್ಟಿಗೆಗೆ ಸೊಪ್ಪಾದರೂ ತಂದು ಹಾಕಬಹುದು.)” ಅನ್ನುತ್ತ ಮಾಡಿಗೆ ಸಿಕ್ಕಿಸಿದ್ದ ಕತ್ತಿ ಹಿಡಿದು ಮಸೆಯಲು ಹೊರಟ. ಸರ್ಕಾರದಿಂದ ಐದುಸೆನ್ಸಿನ ಮನೆ ಸಿಕ್ಕುವವರೆಗೂ ಆತನ ಕುಟುಂಬ ಶಂಕರಯ್ಯನ ಹಿತ್ತಿಲಿನ ಬಿಡಾರದಲ್ಲೇ ವಾಸ ಮಾಡುತ್ತಿದ್ದುದು. ಅವನಿಗೆ ಸರ್ಕಾರದ ಜಾಗ ಸಿಗಲು ಅರ್ಜಿ ಹಾಕಿಸಿ ಅದು ಸಿಗುವ ತನಕ ಅದರ ಹಿಂದೆ ಓಡಾಡಿದ್ದು ಶಂಕರಯ್ಯನೇ. drought-kelly-stewart-sieckಇವರ ಹಿತ್ತಿಲಲ್ಲೇ ಇದ್ದಾಗ ಬೆಳಗಿನ ಜಾವದಲ್ಲೇ ಕೆಲಸ ಸುರುಮಾಡುತ್ತಿದ್ದ ತುಕ್ರನಿಗೆ ಈಗ ಮನೆಯಲ್ಲಿ ಅದೂ ಬೆಳಗಿನ ಆ ಹೊತ್ತಿಗೆ ಸೋಮಾರಿಯಂತೆ ಕುಳಿತಿರಲು ಸಾಧ್ಯವಾಗುತ್ತಿರಲಿಲ್ಲ. ಇವನಿಗೆ ಎಷ್ಟು ಹೇಳಿದರೂ ಒಂದೇ ಅಂದುಕೊಂಡು ಶಂಕರಯ್ಯ ತನ್ನ ಪಾಡಿಗೆ ಓದಲಾರಂಬಿಸಿದರು. ಒಂದೆರಡು ಸಾಲು ಓದುವಷ್ಟರಲ್ಲಿ ದೇವರ ಪೂಜೆಗೆ ಹೂವು ಕೊಯ್ದು ಬಂದ ಸುಭದ್ರಮ್ಮ; “ಇದಾ, ಈಗ ಮಳೆ ಕಮ್ಮಿ ಇದ್ದು. ಒಂದರಿ ತುಕ್ರನೊಟ್ಟಿಂಗೆ ತೋಟಕ್ಕೆ ಹೋಗಿ ಸೊಳೆ ಉಪ್ಪಿಲ್ಲಿ ಹಾಕಲೆ ಹಲಸಿನ ಕಾಯಿ ಕೊಯಿಶಿಯೊಂಡು ಬನ್ನಿ. ವಿಷ್ಣುಮೂರ್‍ತಿ ತಲೆಕುಚ್ಚಿ ತೆಗಶೆಕು ಹೇಳಿ ಎದ್ದಾಂಗೆ ಬಂಡಾರಿಯಲ್ಲಿಗೆ ಹೋಯಿದ. ಈ ಮಾಣಿಗೆ ಯಾವುದು ಬುಳೆಕ್ಕರಿ ಹೇಳಿ ಗೊಂತಾಗ.” ಅಂದರು.

“ಹರಟೆ ಮಾಡೆಡ ಹೆಣ್ಣೇ, ಆನು ಭಾರತ ಓದಿಂಡಿಪ್ಪದು ಕಾಣ್ತಿಲ್ಯ ನಿನಗೆ?”

“ಓದಿಂಡಿದ್ದರೆಂತಾತಡ? ಒಂದರಿ ಅದರ ಅಲ್ಲಿ ಮಡಗಿಕ್ಕಿ ಹೋಪಲಕ್ಕನ್ನೆ. ಬಂದಿಕ್ಕಿ ಓದಿರಾತಿಲ್ಯೊ” ಅಂದರು.

“ನಾಳೆ ಕೋಡಿ ಮಯ್ಯರ ಮನೆಲ್ಲಿ ತಿಥಿ(ಶ್ರಾದ್ಧ). ಕಸ್ತಲಪ್ಪಗ ತಾಳಮದ್ದಳೆ ಕೂಟ ಇದ್ದು. ಅರ್ಥಗಾರಿಕೆಯಲ್ಲಿ ರೈಸೆಡ್ದ ಆನು. ಈಗ ಮೇಗಣಬೆಟ್ಟಿಂದ ವಾಸ್ದೇವ ಭಾಗವತ ಬಕ್ಕು. ಅವನತ್ರ ಒಂದೆರಡು ಪಾಯಿಂಟ್ ಚರ್ಚೆ ಮಾಡ್ಲಿದ್ದು. ಅಂವ ಬಪ್ಪನ್ನ ಮೊದಲೇ ಇಂದ್ರಾಣ ಎನ್ನ ಪಾರಾಯಣ ಮುಗಿಯೆಕು. ಮತ್ತೆ ಪುರುಸೊತ್ತಾವುತ್ತಿಲ್ಲೆ. ಅಲ್ಲಾ..ಇಂದೆಂತ ಇಂದಿರೆ ಇನ್ನೂ ಚಾಯ ಮಾಡಿದ್ದಿಲ್ಲೆ?”

“ಇಂದಿರೆ ನಿನ್ನೆ ಇರುಳೇ ಹೆರಗೆ. ಎಲ್ಲಾ ಒಬ್ಬಂದಲೇ ಆಯೆಕಷ್ಟೆ. ಮಳೆ ಬಿಟ್ಟೊಂಡಿಪ್ಪಗಳೇ ಹೂ ಕೊಯ್ಕೊಳ್ತೆ ಹೇಳಿ ಮೊದಲು ಜಾಲಿಂಗಿಳ್ದೆ. ಚಾಯ ಕೊದಿವ ಹೊತ್ತಿಂಗೆ ಹಲಸಿನ ಕಾಯಿ ಕೊಯ್ಶಿ ಅಕ್ಕನ್ನೆ ಹೇಳಿ ಗ್ರೇಶಿ ಹೇಳಿದ್ದು ಆನು. ಹಣ್ಣಪ್ಪಲೆ ಸುರುವಾದರೆ ಉಪ್ಪಿಲ್ಲಿ ಹಾಕಲೆಡಿಯ” ಅನ್ನುತ್ತ ಒಳ ಹೋದವರು ಸ್ವಲ್ಪ ಹೊತ್ತಿನಲ್ಲಿ ಹೊಗೆ ಹಾರುವ ಚಹ ತಂದಾಗಿತ್ತು.

ಶಂಕರಯ್ಯ ಚಹದ ಗ್ಲಾಸು ಕೈಯಲ್ಲಿ ಹಿಡಿದುಕೊಂಡು; “ಇದ ಅಬ್ಬುಣೀ, ಇಂದು ಉದಿಯಪ್ಪಗ ಹಾಸಿಗೆಂದ ಏಳೆಕಾರೆ ಭಾಗ್ಯನ ಆರ್ಭಟೆ ಕೇಳ್ಲೆ ಸುರುವಾಯಿದು. ಅದು ಜೋಡಿಗೆ ಬಂದಾಂಗೆ ಕಾಣ್ತು. ಇಂದು ಅದರ ಗುಡ್ಡೆಗೆ ಎಬ್ಬುದು ಬೇಡ. ಈ ಸರ್ತಿ ಅದಕ್ಕೆ ಇಂಜೆಕ್ಷನ್ ಮಾಡ್ಸೆಕು. ಇದರ ಬೊಬ್ಬೆ ಮೇಲಿನ ಬೈಲಿನ ಶೆಟ್ರ ಹಟ್ಟಿಗೆ ಕೇಳಿರೆ ಆ ಹೋರಿ ಗಿಡ್ಡ ರಾಪಾಟ ಮಾಡಿ ಹೇಂಗಾರು ಹಗ್ಗ ಕಡ್ಕೊಂಡು ಬಾರದ್ದೆ ಇರ. ಆನು ಮಡ್ಡಿ ಮಡಗಿಕ್ಕಿ ಬಪ್ಪಗ ಹಟ್ಟಿಯ ತಡಮೆ ಹಾಕಿಕ್ಕಿಯೇ ಬಯಿಂದೆ” ಅನ್ನುತ್ತ ಸುರ್ರನೆ ಒಂದು ಗುಟುಕು ಚಹ ಹೀರಿ ನಾಲಿಗೆ ಚಪ್ಪರಿಸಿ:

“ಎಂತಾರು ನೀನು ಮಾಡಿದಾಂಗೆ ಚಾಯ ಮಾಡ್ಲೆ ಇಂದಿರೆಗೆ ಅರಡಿತ್ತಿಲ್ಲೆ.” ಅಂದವರೇ ರಾಜೀವನತ್ತ ನೋಡಿ ಕಣ್ಣು ಮಿಟುಕಿಸಿದರು.

“ದಿನಾ ಕುಡಿವ ಚಾಯವೂ ರುಚಿರುಚಿಯಾಗಿ ಹೊತ್ತು ತಪ್ಪದ್ದಾಂಗೆ ಬೆಶಿಬೆಶೀಗೆ ಉರ್‍ಪುವ ಸುಖ ಬೇಕು ಮನುಷ್ಯಂಗೆ. ಹಶುವು-ಆಸರು ನವಗೆ ಮಾತ್ರ ಅಲ್ಲ. ಬಾಯಿ ಬಾರದ್ದ ಪ್ರಾಣಿಯ ಜೀವಕ್ಕೆ ಬೇನೆ ಮಾಡಿ ಪಾಪ ಕಟ್ಟಿಯೊಂಬದು ಬೇಡ. ಈಗ ನವಗೆ ದೇವರು ಉಂಬಲೆ ತಿಂಬಲೆ ಕಮ್ಮಿ ಮಾಡಿದ್ದನಿಲ್ಲೆನ್ನೆ.” ಅಂದುಬಿಟ್ಟರು. ಸುಭದ್ರಮ್ಮ ಮಾತು ನಿಲ್ಲಿಸುವ ಮೊದಲೇ ಶಂಕರಯ್ಯ ಧ್ವನಿ ಏರಿಸಿದ್ದರು. ಸಮಾಧಾನದಲ್ಲಿರುವಾಗ ಹೆಂಡತಿಯನ್ನು ಅಬುಣಿ ಎಂದೋ ಮಿನಿಯಾ ಎಂದೋ ಸಂಬೋಧಿಸುವ ಶಂಕರಯ್ಯ ಕೋಪ ತಲೆಗೇರಿದಾಗ ತಾನು ಹಾಗೆ ಕರೆಯುವುದೇ ಸುಳ್ಳೆನಿಸುವಂತೆ ಹೆಣ್ಣೇ.. ಎಂದೋ ಬೋಸುಡಿ ಎಂದೋ ಗರ್ಜಿಸುತ್ತಿದ್ದರು.

“ಇದಾ ಹೆಣ್ಣೇ, ಪಾಪ-ಪುಣ್ಯ, ಮಣ್ಣು-ಮಸಿ ಎಲ್ಲ ನಿನಗೊಬ್ಬಂಗೇ ಇಪ್ಪಾಂಗೆ ರಾಗ ಎಳೆಯೆಡ. ಎಲ್ಲರೂ ಮಾಡ್ತರನ್ನೇ ಆನೂ ಮಾಡ್ಲೆ ಹೆರಟದು.” ಅನ್ನುತ್ತ ಚಾಯದ ಗ್ಲಾಸು ನೆಲಕ್ಕೆ ಕುಕ್ಕಿ ತಲೆ ಬಗ್ಗಿಸಿ “ಬಂದುದಾ ಪಾಂಡುವಿಗೆ ನಿನ್ನಯ ತಂದೆಗಾದ ವಿಪತ್ತಿನಂದದಲೊಂದು…” ರಾಗವಾಗಿ ಓದಲಾರಂಭಿಸಿದರು.

“ಇದಾ ಬಂಗಾರು.. ಒಲೆಲ್ಲಿ ಪುಂಡಿ ಬೇಯಲೆ ಮಡಗಿದ್ದೆ. ರಜ ಕಳುದು ಕಿಚ್ಚು ಸರಿ ಹೊತ್ತುತ್ತ ಇದ್ದ ನೋಡಿಕ್ಕು. ಆನು ಹಲಸಿನ ಕಾಯಿ ಕೊಯ್ಶಿಯೊಂಡು ಬತ್ತೆ” ಅನ್ನುತ್ತ ಕತ್ತಿ ಹಿಡಿದುಕೊಂಡು ತೋಟಕ್ಕಿಳಿದೇ ಬಿಟ್ಟರು ಸುಭದ್ರಮ್ಮ. ಶಂಕರಯ್ಯ ತಮ್ಮ ಓದಿನ ನಡುವೆಯೇ ಅಬ್ಬ..! ಪ್ರಾಯ ಅರುವತ್ತು ಕಳುದರೂ ಇದರ ಹಾಂಕಾರಕ್ಕೆಂತ ಕಮ್ಮಿ ಇಲ್ಲೆ. ಎಂದು ಗೊಣಗಿ ಮತ್ತೆ ಓದು ಮುಂದುವರಿಸಿದರು. ಸುಭದ್ರಮ್ಮ ಅತ್ತ ಹೋಗುತ್ತಿದ್ದಂತೆ ಹಳೆಮನೆ ರಾಮಣ್ಣ ತನ್ನ ಮನೆಯಲ್ಲಿ ನಡೆಯಲಿರುವ ತ್ರಿಕಾಲಪೂಜೆಗೆ ಕರೆಯಲು ಬಂದಿದ್ದರಿಂದ ಶಂಕರಯ್ಯನ ಪಾರಾಯಣ ಮತ್ತೆ ನಿಂತಿತು. ಇಬ್ಬರ ಮಾತುಕತೆಯೂ ಹೊರಳಿದ್ದು ಕೋಡಿಮಯ್ಯರ ಮನೆಯಲ್ಲಿರುವ ತಾಳಮದ್ದಳೆಯ ಪ್ರಸಂಗದ ಬಗ್ಗೆಯೇ. ಕುಂತಿಯಾಗಿ ಶಂಕರಯ್ಯದೇ ಅರ್ಥಗಾರಿಕೆಯಾದ್ದರಿಂದ ಬಹಳ ಹುರುಪಿನಲ್ಲೇ ಅವರ ಮಾತು ನಡೆದಿತ್ತು. ಅಷ್ಟರಲ್ಲ್ಲಿ ದೊಡ್ಡ ದೊಡ್ಡ ನಾಲ್ಕು ಹಲಸಿನ ಕಾಯಿಗಳನ್ನು ಹೊತ್ತು ತಂದು ಮಾಡಡಿಯಲ್ಲಿಟ್ಟ ತುಕ್ರ.. ಅವನ ಹಿಂದಿನಿಂದಲೇ ಸುಭದ್ರಮ್ಮನೂ ಒಂದು ಸಾಧಾರಣ ಗಾತ್ರದ ಹಲಸಿನಕಾಯಿ ಹಿಡಿದು ಬಂದವರು;

“ತುಕ್ರ, ಒರ ಆ ಮಡುಟ್ಟು ಪೆಲಕ್ಕಾಯಿನ್ ನಾಲ್ ಭಾಗ ಮಲ್ತ್ ದೀಡ್ದ್ ಈ ಕಿದೆಕ್ ತಪ್ಪು ಮಲ್ಪರೆ ಪೋಲಾ ಆವೊ. (ತುಕ್ರ, ಒಮ್ಮೆ ಆ ಕೊಡಲಿಯಲ್ಲಿ ಹಲಸಿನಕಾಯಿಯನ್ನು ನಾಲ್ಕು ಭಾಗ ಮಾಡಿಟ್ಟು ನೀನು ಹಟ್ಟಿಗೆ ಸೊಪ್ಪು ಮಾಡ್ಲಿಕ್ಕೆ ಹೋಗು ಆಯ್ತಾ)” ಅಂದರು. ಸುಭದ್ರಮ್ಮನ ಧ್ವನಿ ಕೇಳಿದ್ದೇ ಶಂಕರಯ್ಯ “ಇದಾ ಮಿನಿಯಾ, ಒಂದು ಗ್ಲಾಸು ಚಾಯ ಮಾಡಿಕ್ಕು. ಹಳೆಮನೆ ರಾಮಣ್ಣ ಪೂಜೆ ಹೇಳಿಕೆಗೆ ಬಯಿಂದ.” ಕೂಗಿ ಹೇಳಿದರು.

ಸುಭದ್ರಮ್ಮ ಕೈ ತೊಳೆದು ಚಾ ಮಾಡಿ ತಂದಾಗಲೂ ಇವರ ಚರ್ಚೆ ನಡೆದೇ ಇತ್ತು. ಕುಂತಿ ಅಜ್ಞಾನದಿಂದ ಮಾಡಿದ ಒಂದು ತಪ್ಪು ದ್ರೌಪದಿಗೆ ಎಷ್ಟು ದೊಡ್ಡ ಸಂಕಟಕ್ಕೆ ಕಾರಣವಾಯಿತು ಅನ್ನುತ್ತಿದ್ದರು ಶಂಕರಯ್ಯ. ಸುಭದ್ರಮ್ಮ ರಾಮಣ್ಣನ ಕೈಗೆ ಚಹ ಕೊಟ್ಟು “ಕುಂತಿ ಹೇಳಿರೆ ಎಂತ ಹೇಳಿ ನಿಂಗಳ ಅಂದಾಜು. ಯಾವ್ದು ಅಕ್ಕು ಯಾವ್ದು ಆಗ ಹೇಳಿ ಭೂಮಿಗೆ ಗೊಂತಿಲ್ಯೋ. ಜ್ಞಾನ ಇದ್ದದಕ್ಕೇ ಹಾಂಗೆ ಹೇಳಿದ್ದು ಕುಂತಿ.” ಅಂದುಬಿಟ್ಟರು.

“ನೀನು ಸುಮ್ಮನೆ ಪೆರಟ್ಟು ಮಾತಾಡೆಡ. ಆರಾರುದೆ ಗೊಂತಿದ್ದೊಂಡು ಹಾಂಗೆ ಹೇಳ್ತವೋ. ಪಾಪ! ಕುಂತಿಗೆ ಹಾಂಗೆ ಹೇಳಿದೆನ್ನೇ ಹೇಳಿ ಎಷ್ಟು ದುಃಖ ಆಯಿಕ್ಕು ಹೇಳಿ ನಿನಗೆಂತ ಗೊಂತು?” ಅಂದರು. ರಾಮಣ್ಣ ಚಹ ಕುಡಿದು “ಇನ್ನೂ ಕೆಲವು ಮನೆಗಳಿಗೆ ಹೇಳಿಕೆ ಬಾಕಿ ಇವೆ. ನಾನು ಬರ್‍ತೇನೆ ಶಂಕರಣ್ಣ” ಅನ್ನುತ್ತ ಎದ್ದು ನಿಂತ.

ಸುಭದ್ರಮ್ಮ ಅವರ ಮಾತು ಕಿವಿಗೇ ಬೀಳಲಿಲ್ಲವೆಂಬಂತೆ ರಾಮಣ್ಣನ ಮನೆಯವರ ಯೋಗಕ್ಷೇಮ ವಿಚಾರಿಸಿದವರೇ;. “ಇದಾ ಒಪ್ಪಕುಞ್ಞಿ, ಆ ಪುರಾಣ ಕೇಳಿದ್ದು ಸಾಕು. ಆನು ಬೇಗ ಹಲಸಿನ ಕಾಯಿ ಕೊರೆತ್ತೆ. ಒಂದರಿ ಸೊಳೆ ಎಳಕ್ಕಲೆ ಸೇರು ಬಾ.” ರಾಜೀವನನ್ನು ಕರೆದು ಒಳ ನಡೆದರು.

ಹಲಸಿನ ಕಾಯಿಯ ಸೊಳೆ ಬಿಡಿಸುತ್ತ ಸ್ವಲ್ಪ ಮೆತ್ತಗಾದ ಕಾಯಿಸೊಳೆ ಇದ್ದರೆ ಅದನ್ನ ಅಲ್ಲೇ ಬೀಜ ಬಿಡಿಸಿ ಹಾಗೇ ಬಾಯಿಗೆ ಹಾಕುವುದೆಂದರೆ ಬಹಳ ಇಷ್ಟ ರಾಜೀವನಿಗೆ. ಎದ್ದು ನಡೆದೇ ಬಿಟ್ಟ. ಶಂಕರಯ್ಯನಿಗೆ ಕಿರಿಕಿರಿಯಾಯಿತು. ಆದರೂ ತಾನು ನಿಲ್ಲಿಸಿದಲ್ಲಿಂದ ಮತ್ತೆ ಓದತೊಡಗಿದರು. ಸುಭದ್ರಮ್ಮ ತುಕ್ರ ಭಾಗ ಮಾಡಿಟ್ಟ ಹಲಸಿನ ಕಾಯಿಗಳನ್ನು ಒಂದೊಂದಾಗಿ ಮೆಟ್ಟುಗತ್ತಿಯಲ್ಲಿ ಕಡಿ ಮಾಡುತ್ತ ಮೇಣವನ್ನು ಕಾಯಿಸಿಪ್ಪೆಯ ಮುದ್ದೆಯಲ್ಲಿ ಉದ್ದಿ ತೆಗೆಯುತ್ತಿದ್ದ ಹಾಗೆ ಅದರ ಸೊಳೆ ಬಿಡಿಸಲಾರಂಭಿಸಿದ ರಾಜೀವ. ಅಷ್ಟರಲ್ಲಿ ಜಗಲಿಯಿಂದ ವಾಸ್ದೇವ ಭಾಗವತರ ಧ್ವನಿ ಕೇಳಿಸಿತು. ಹಿಂದೆಯೇ “ಇದಾ ಅಬ್ಬುಣಿ, ವಾಸ್ದೇವ ಬಯಿಂದ. ಒಂದು ಗ್ಲಾಸು ಆಸರಿಂಗೆ ಮಾಡು” ಶಂಕರಯ್ಯನ ಸ್ವರ.

ಸುಭದ್ರಮ್ಮ ತನ್ನ ಕಿವಿಗೆ ಬೀಳಲೇ ಇಲ್ಲವೆಂಬಂತೆ ಕೆಲಸ ಮುಂದುವರಿಸಿದರು. ಮುಟ್ಟಾದ್ದರಿಂದ ಸ್ವಲ್ಪ ದೂರದಲ್ಲಿ ಕುಳಿತು ಸೊಳೆ ಬಿಡಿಸುತ್ತಿದ್ದ ಇಂದಿರೆ;

“ಮೊದಾಲು ನೀನು ಆ ಭಾಗವತಂಗೆ ಆಸರಿಂಗೆ ಮಾಡಿಕೊಟ್ಟಿಕ್ಕಿ ಬಾ ಅಬ್ಬೆ. ತಡ ಮಾಡಿರೆ ಅಪ್ಪಂಗೆ ಕೋಪ ಬಕ್ಕು” ಅಂದಳು.

“ಎನ್ನ ಕೈಲ್ಲಿ ಮೇಣ ಕಾಣ್ತಿಲ್ಯ ಕೂಸೆ. ಆನು ಈ ಕೆಲಸ ಮುಗಿಸಿಕ್ಕಿಯೇ ಏಳ್ತೆ. ಆ ವಾಸ್ದೇವ ರಜ ಹೊತ್ತು ಕೂರಲಿ.”

ಅಜ್ಜಿ ಹಾಗೆ ಹೇಳಿದ್ದು ರಾಜೀವನಿಗೆ ಹಿಡಿಸಲಿಲ್ಲ. “ಅಜ್ಜಂಗೆ ಕೋಪ ಬರ್‍ಸುದೆಂತಗಜ್ಜಿ?” ಅಂದ. ಕೋಪ ಬಂದರೆ ಒಂದರಿ ಡಡ್ಡಢೀ..ಂಗ್ಣ ಕೊಣಿಗು. ಅನ್ನುತ್ತ ತನ್ನ ಕೆಲಸ ಮುಂದುವರಿಸಿದರು ಸುಭದ್ರಮ್ಮ. ಸ್ವಲ್ಪ ಹೊತ್ತಿಗೆ ರಾಜೀವ ನೋಡನೋಡುತ್ತಿದ್ದಂತೆ ದುಡುದುಡು ಬಂದ ಶಂಕರಯ್ಯ ದಬದಬನೆ ಸುಭದ್ರಮ್ಮನ ಬೆನ್ನಿಗೆ ಗುದ್ದಿದ್ದೂ ಆಕೆ ಮುಖವಡಿಯಾಗಿ ಸೊಳೆ ತೆಗೆದು ಸಾರೆ ಮಾತ್ರ ಅಂಟಿಕೊಂಡಿರುವ ಹಲಸಿನ ಕಡಿಗಳ ಮೇಲೆ ಮೊಗಚಿದ್ದು ಮಿಂಚಿನಂತೆ ನಡೆದಿತ್ತು. ಹಿಂದೆಯೇ ಬಯ್ಗುಳ ಸುರಿಮಳೆ.

“ಎನ್ನ ಮಾತು ಅಷ್ಟು ಗಣ್ಯ ಇಲ್ಲದ್ದಾಂಗಾಯಿದ ಬೋಸುಡಿ ನಿನಗೆ? ಆನು ಆಸರಿಂಗೆ ತಪ್ಪಲೆ ಹೇಳಿ ಹೊತ್ತೆಷ್ಟಾತು? ಆ ವಾಸ್ದೇವ ಆಸರಿಂಗೆ ಬತ್ತು ಹೇಳಿ ಕಾದರಾಗ ಹೇಳಿಯೊಂಡು ಹೋದರುದೇ ನಿನಗೆ ಕೂದಲ್ಲಿಂದ ಏಳ್ಲೆಡಿಗಾಯಿದಿಲ್ಲೆ.” ಒಂದಿಂಚು ಅತ್ತಿತ್ತ ಆಗಿದ್ದರೂ ಮೆಟ್ಟುಗತ್ತಿ ಸುಭದ್ರಮ್ಮನ ಶರೀರವನ್ನೇ ಸೀಳುತ್ತಿತ್ತು. ಬಿದ್ದಲ್ಲಿಂದ ಎದ್ದು ಕುಳಿತ ಸುಭದ್ರಮ್ಮ;

“ಕಣ್ಣಿಲ್ಲಿ ನೆತ್ತರಿಲ್ಲದ್ದ ಈ ರಕ್ಕಸಂಗೆ ಕೊಡುವ ಬದಲು ಹುಟ್ಟಿಯಪ್ಪಗಳೇ ಎನ್ನ ಪೊಟ್ಟು ಬಾವಿಗೆ ಹಾಕಲಾವುತ್ತಿತ್ತು ಹೆತ್ತವಕ್ಕೆ.” ಅನ್ನುತ್ತ ಮುಂಗೈಯಿಂದ ಕಣ್ಣೊರೆಸಿಕೊಂಡು ಮುಖ-ಮೈಗಳಿಗೆ ಅಂಟಿಕೊಂಡ ಹಲಸಿನ ರಚ್ಚೆಗಳನ್ನು ಬಿಡಿಸಿಕೊಂಡರು.

ಶಂಕರಯ್ಯ ಏನು ಹೇಳುತ್ತಿದ್ದರೋ. ಅಷ್ಟರಲ್ಲಿ ಹಟ್ಟಿಯಿಂದ ಭಾಗ್ಯ ಕರ್ಕಶ ಸ್ವರದಲ್ಲಿ ಕೂಗುತ್ತ ದಡಬಡ ಮಾಡಲಾರಂಭಿಸಿತು. “ಏ, ರಾಜೀವ. ನಿನ್ನ ಅಜ್ಜಿ ಇಂದು ಹೊಟ್ಟೆಗೆ ಕೊಡುವ ಅಂದಾಜಿಲ್ಲೆ. ನೀನು ಕೈ ತೊಳದಿಕ್ಕಿ ಪೇಟೆಗೆ ಹೋಗಿ ಗೋಡಾಕ್ಟ್ರ ಕರಕ್ಕೊಂಡು ಬಾ.” ಅನ್ನುತ್ತ ಬಯಲಿನತ್ತ ನಡೆದರು. ಸುಟ್ರಾನ್ಹಕ್ಕಿಯೊಂದು ಟಿಟಿಟಿ..ಟಿರ್ರ್..ಎಂದು ಮೂರ್‍ನಾಲ್ಕು ಸರ್ತಿ ಕೂಗಿತ್ತು.

“ಈ ಹರಟೆ ಪಕ್ಕಿಗೆ ಬೇರೆಲ್ಲು ಜಾಗೆ ಸಿಕ್ಕಿದ್ದಿಲ್ಲೆ ಕೂಗಲೆ. ಈಗ ಇಲ್ಲಿ ಆದ ಅನಾಹುತ ಸಾಲದೊ ಇದಕ್ಕೆ? ಒಂದರಿ ದೇವರ ದೀಪ ಸರಿ ಇದ್ದ ನೋಡಿಕ್ಕು ಬಂಗಾರು.” ಸುಭದ್ರಮ್ಮ ಗೊಣಗುತ್ತ ಕೈ ತೊಳೆದು ಒಳ ಹೋದರು. ರಾಜೀವನೂ ಕೈ ತೊಳೆದು ಬಂದು ಅಜ್ಜಿ ತಣಿಯಲೆಂದು ಬಾಳೆಲೆಗೆ ಹಾಕಿಟ್ಟ ಪುಂಡಿಗಳನ್ನು ಹುಡಿ ಮಾಡಲಾರಂಭಿಸಿದ. ಸುಭದ್ರಮ್ಮ ವಗ್ಗರಣೆ ಮಾಡಲು ಒಲೆ ಮೇಲೆ ಬಾಣಲೆ ಇಟ್ಟಿದ್ದರಷ್ಟೆ. ಅಂಗಳದಲ್ಲಿ ಶಂಕರಯ್ಯನ ಬೊಬ್ಬೆ ಕೇಳಿ ಎಲ್ಲರೂ ಹೊರಗೋಡಿ ಬಂದರು.

“ಎನ್ನ ಅಂದಾಜು ಸರಿಯಾಯಿದು. ಆ ಗಿಡ್ಡ ಬಳ್ಳಿ ಕಡ್ಕೊಂಡು ಸುಂಯ್ಪಿಯೊಂಡು ಕಟ್ಟಪುಣಿಲ್ಲಿ ಬಂದೊಂಡಿತ್ತಿದ್ದು. ಎಬ್ಬಲೆ ಹೋದ್ದಕ್ಕೆ ಎನ್ನನ್ನೇ ನೂಕಿ ಹಾಕಿತ್ತು. ಶೆಟ್ರ ಆಳು ಆ ಚೀಂಕ್ರಮೇರ ಹಿಡಿವಲೆ ಅದರ ಹಿಂದಂದಲೇ ಬಂದೊಂಡಿತ್ತಿದ್ದ. ಹಾಂಗಾಗಿ ಆನು ಬದ್ಕಿದೆ. ಇಲ್ಲದ್ದರೆ ಇಷ್ಟೊತ್ತಿಂಗೆ ಆನು ಪಡ್ಚ ಆವುತ್ತಿತ್ತೆ. ಅವನ ಕೈಯಿಂದ ತಪ್ಪಿಸಿಯೊಂಡು ಬರೆ ಹಾರಿ ಗುಡ್ಡೆಗೆ ಓಡಿದ್ದು ಜಗ್ಡ. ಒಂದರಿ ಅದು ಎನ್ನ ಕೈಗೆ ಸಿಕ್ಕೆಕು. ಅದರ ಚರ್ಬಿ ಚೊಲ್ಲದ್ದೆ ಬಿಡೆ ಆನು.” ಏದುಸಿರು ಬಿಡುತ್ತ ಅದೇ ಉಸಿರಲ್ಲಿ ಹೇಳಿದ ಶಂಕರಯ್ಯನ ಮುಖ ಸಿಟ್ಟಿನಿಂದ ಕೆಂಪು ಕೆಂಪಾಗಿತ್ತು.

“ಗಿಡ್ಡ ಎಂತಗೆ ಬಯಿಂದು ಹೇಳಿ ಗೊಂತಿದ್ದೊಂಡೂ ಅದರ ಮಾರ್ಗಕ್ಕೆ ಅಡ್ಡ ನಿಂಬಲೆ ಹೋದ್ದೆಂತಕೆ? ಅಂಡಿ-ಕುಂಡಿ ಇಲ್ಲದ್ದ ಈ ದರ್ಪಕ್ಕೆ ಮನುಷ್ಯರು ಹೆದರುತ್ತವೂ ಹೇಳಿಯೊಂಡು ಜಾನುವಾರುಗಳ ತ್ರವೂ ಆರ್ಭಟೆ ಮಾಡಿರೆ ಅವು ಕೇಳುಗಾ?” ಸುಭದ್ರಮ್ಮನ ಮಾತು ಕಿವಿಗೇ ಬೀಳಲಿಲ್ಲವೆಂಬಂತೆ ಸೇಂಕು ಬಿಡುತ್ತ ಚಿಟ್ಟೆಯಲ್ಲಿ ಕುಳಿತ ಶಂಕರಯ್ಯ,

“ಆ ಗಿಡ್ಡನ ನಂಬಲೆಡಿಯ. ರಾಪು ಕಟ್ಟಿ ನೋಕಾಕದ್ದೆ ಇರ ಅದು. ಹಿಂದಾಣ ಗುಡ್ಡೆಂದ ತಡಮೆ ಹಾರಿ ಬಪ್ಪಲೆಡಿತ್ತ ನೋಡುಗು. ಎಂತಗುದೇ ಹಟ್ಟಿಗೆ ಹೋಗಿ ನೋಡಿಕ್ಕಿಯೇ ಬತ್ತೆ” ಅನ್ನುತ್ತ ಎದ್ದು ಹೋದರು.

“ಅಷ್ಟು ಬಙ್ಙ ಬಪ್ಪದೆಂತಗಡ? ಭಾಗ್ಯಂಗೆ ಬೂಚು ಹಾಕಿರಾತನ್ನೇ.” ಸುಭದ್ರಮ್ಮ ಗೊಣಗುತ್ತ ಒಳಗೆ ಹೋಗಿದ್ದಷ್ಟೆ. ಹಟ್ಟಿಯಿಂದ ಜೀವ ನಡುಗಿಸುವ ಭೀಕರ ಧ್ವನಿ ಕೇಳಿಸಿತ್ತು. ಶರೀರ ಭಾರವನ್ನೂ ಮರೆತು ಓಡಿದ್ದಳು ಸುಭದ್ರಮ್ಮ. ಹಟ್ಟಿಯಲ್ಲಿ ವಿಚಿತ್ರ ಸ್ಥಿತಿಯಲ್ಲಿ ಅಡ್ಡ ಮಲಗಿ ದಡಬಡ ಹೊರಳಿ ಹೂಂಕರಿಸುತ್ತಿದ್ದ ಜಾನುವಾರುಗಳೆದುರು ನಿಂತಿದ್ದ ಶಂಕರಯ್ಯ ಗಡಗಡ ನಡುಗುತ್ತಿದ್ದರು. ಸುಭದ್ರಮ್ಮನ ಹಿಂದಿನಿಂದಲೇ ರಾಜೀವ-ಇಂದಿರೆಯೂ ಓಡಿದ್ದರು. ಗಿಡ್ಡನ ಬೆನ್ನಿನೊಳಗೆ ತೂರಿದ ಸಬ್ಬಲ್ಲು ಭಾಗ್ಯಳ ಹೊಟ್ಟೆಯಡಿಯಿಂದ ಹೊರಗಿಣುಕಿತ್ತು. ಇದ್ದ ಸ್ಥಿತಿಯಿಂದ ಬೇರ್ಪಡಲಾಗದೆ ನೆಲಕ್ಕುರುಳಿ ಪೆಡಚ್ಚುತ್ತಿದ್ದ ಜಾನುವಾರುಗಳ ಎದುರು ಶಂಕರಯ್ಯ ಕಂಗಾಲಾಗಿ ನಿಂತಿದ್ದರು. ಆ ಪಶುಗಳ ಕಣ್ಣುಗಳು ಕೆಂಡದುಂಡೆಗಳಂತೆ ಹೊರಳಿ ಹೊರಳಿ ಎದುರಿಗಿದ್ದ ಮನುಷ್ಯರನ್ನು ದಿಟ್ಟಿಸುವಂತಿತ್ತು. “ಓ..ದೇವರೆ..” ಅನ್ನುತ್ತ ಒಂದೇ ನೆಗೆತಕ್ಕೆ ಅವುಗಳ ಬುಡಕ್ಕೆ ಹಾರಿದ ಸುಭದ್ರಮ್ಮ ಸಬ್ಬಲ್ಲನ್ನು ಹಿಡಿದೆಳೆಯುತ್ತಿದ್ದಂತೆ ಛಿಲ್ಲನೆ ನೆತ್ತರ ಹೊಳೆ ಹರಿದಿತ್ತು. “ನಿಂಗೋ ಎರಡು ಹೊತ್ತೂ ಮಣಿ ಆಡ್ಸಿ ಪೂಜೆ ಮಾಡುದೆಂತಗೆ ಬೇಕಾಗಿ? ಭಾಗವತ, ಗದುಗಿನ ಭಾರತ, ರಾಮಾಯಣ ಹೇಳಿ ಪಾರಾಯಣ ಮಾಡೊದಾರು ಏವ ಸೌಭಾಗ್ಯಕ್ಕೆ? ಅಂದು ಸುಬ್ಬಣ್ಣನ ಕೊರಳಿಂಗೆ ಕೈ ಹಾಕಿ ನೂಕಿಯಪ್ಪಗಳೇ ನಿಂಗಳ ಭಾಗವತ ಪುಸ್ತಕವ ತೋಡಿಂಗಿಡ್ಕೆಕ್ಕಾತು. ಮನುಷ್ಯತ್ವ ಇಲ್ಲದ್ದ ಜನ್ಮ artಆತು ನಿಂಗಳದ್ದು. ಹೀಂಗಿಪ್ಪ ಒಂದು ಪಿಶಾಚಿಯ ಆವ ಮೂರ್‍ತಲ್ಲಿ ಹೆತ್ತವೋ ಆ ಅಬ್ಬೆ.” ದಪ್ಪ ನೆತ್ತರು ನೋಡಿದ್ದೇ ಸುಭದ್ರಮ್ಮ ಕನಲುತ್ತ ಬೈಪಣೆಯಲ್ಲಿದ್ದ ನೀರಿನ ಬಾನಿಯಿಂದ ನೀರು ಸುರಿಯುತ್ತಿದ್ದಂತೆ ಅವುಗಳ ದೇಹ ನಿಶ್ಚಲವಾಗಿತ್ತು. ಆದರೆ ಅಷ್ಟರಲ್ಲಾಗಲೇ “ಎಂತ ಬೊಗಳಿದ್ದು ಬೋಸುಡಿ ನೀನು? ಗೆಂಡಂಗೇ ಪಿಶಾಚಿ ಹೇಳುವಷ್ಟು ಧೈರ್ಯ ಬಂತಲ್ಲದೋ?” ಅನ್ನುತ್ತ ಶಂಕರಯ್ಯ ಸುಭದ್ರಮ್ಮನ ಹಿಂಭಾಗಕ್ಕೆ ಮೆಟ್ಟಿದ್ದೂ ಬೊಬ್ಬೆ ಕೇಳಿ ಓಡಿ ಬಂದಿದ್ದ ತುಕ್ರ ಶಂಕರಯ್ಯ್ಯನನ್ನು ಹಿಂದಕ್ಕೆಳೆದಿದ್ದೂ ಏಕಕಾಲಕ್ಕಾದ್ದರಿಂದ ಸುಭದ್ರಮ್ಮ ಮುಗ್ಗರಿಸಿದರೂ ಸಾವರಿಸಿಕೊಂಡರು.

“ಅಣ್ಣೆರೆ, ದೇವೆರೆನ್ ತೊರಿಂಡ ಕಾರ್‍ಡ್ ಪುರಿ ಆವು. ಈರೆಗ್ ಮಂಡೆ ಸಮ ಇಜ್ಯಾ? (ದಣಿಗಳೇ, ದೇವರನ್ನು ತುಳಿದರೆ ಕಾಲಲ್ಲಿ ಹುಳ ಆದೀತು. ಮಂಡೆ ಸರಿ ಉಂಟಾ ಇಲ್ವಾ ನಿಮ್ಗೆ?!)” ಕ್ಷಣದ ಹಿಂದಿನ ಅನಾಹುತದಿಂದ ಬೆಚ್ಚಿ ಬಿದ್ದಿದ್ದಕ್ಕಿಂತಲೂ ಎಂದೂ ಕೇಳಿರದ ತುಕ್ರನ ಏರು ಧ್ವನಿಗೇ ಅಲ್ಲಿದ್ದವರೆಲ್ಲ ನಡುಗಿದ್ದರು.

“ಎನ್ನ ಮೈ ಮುಟ್ಟುನ ಧೈರ್ಯ ಬತ್ಂಡಾ ನಿಕ್! ಎನ್ನ ಬುಡೆದಿಗ್ ಯಾನ್ ಹಾಕ್ಪೆ. ತೊರಿಪ್ಪುವೆ. ಈ ಏರ್‍ಯಾ ಕೇಣರ? (ನನ್ನ ಮೈ ಮುಟ್ಟುವ ಧೈರ್ಯ ಬಂತಾ ನಿಂಗೆ? ನನ್ನ ಹೆಂಡತಿಗೆ ನಾನು ಹೊಡಿತೇನೆ. ಬಡಿತೇನೆ. ನೀನು ಯಾರು ಅದನ್ನ ಕೇಳ್ಲಿಕ್ಕೆ?)” ಶಂಕರಯ್ಯ ಮತ್ತೆ ಮುಂದುವರಿಯುತ್ತಿದ್ದಂತೆ

“ಎನ್ನ ದೇವೆರೆಗ್ ಕಾರ್ ದೆರ್‍ತ್‌ನಕ್ಲೆ ಕಾರ್ ಕಡ್ಪುವೆ. ಜೈಲ್ಗ್ ಪೋಂಡಲಾ ಸಮಾ. (ನನ್ನ ದೇವರಿಗೆ ಕಾಲೆತ್ತಿದವರ ಕಾಲು ಕಡಿತೇನೆ. ಜೈಲಿಗೆ ಹೋದರೂ ಸಮ)” ಕೈಯಲ್ಲಿದ್ದ ಕತ್ತಿ ಎತ್ತಿಯೇ ಬಿಟ್ಟಿದ್ದ ತುಕ್ರ ನಾಯ್ಕ.

“ತುಕ್ರಾ.. ನಿನ್ನ ಬುದ್ದಿಗ್ ದಾದ ಆಂಡ್? ಮೂಲ್ ಇಲ್ಲದ ಭಾಗ್ಯಲಕ್ಷ್ಮಿನ ಪುಣ ಬೂರ್‍ದಂಡ್. ಸೆಟ್ರೆನ ಬೋರಿ ನಮ್ಮನ ಕಿದೆಟ್ ಸಯ್ತಂಡ್. ಸತ್ಯ ಪಿದಾಯಿ ಪೋಂಡ ಅಣ್ಣೆರ್ ಜೈಲ್ಡ್ ಕುಲ್ಲೊಡಾವ್. ದುಂಬು ಈ ಸೆಟ್ರೆನ್ ಲೆತೊಂದು ಬಲ್ಲ. (ತುಕ್ರಾ..ನಿನ್ನ ಬುದ್ದಿಗೇನಾಯ್ತು? ಇಲ್ಲಿ ಭಾಗ್ಯಲಕ್ಷ್ಮಿಯ ಹೆಣ ಬಿದ್ದಿದೆ. ಶೆಟ್ರ ಹೋರಿ ನಮ್ಮ ಕೊಟ್ಟಿಗೆಯಲ್ಲಿ ಸತ್ತಿದೆ. ಸತ್ಯ ಹೊರಗೆ ಹೋದ್ರೆ ಯಜಮಾನರು ಜೈಲಿಗೆ ಹೋಗಬೇಕಾದೀತು. ಮೊದಲು ಶೆಟ್ರನ್ನು ಕರ್‍ಕೊಂಡು ಬಾ)” ಜೈಲಿನ ಮಾತು ಬರುತ್ತಿದ್ದಂತೆ ಶಂಕರಯ್ಯ ವಾಸ್ತವಕ್ಕಿಳಿದರು. ದೈನ್ಯದಿಂದ ಹೆಂಡತಿಯ ಮುಖ ನೋಡುತ್ತ;

“ಎನ್ನ ಕೈಯಿಂದ ಗೋಹತ್ಯೆ ಆತನ್ನೇ ಅಬ್ಬುಣೀ.., ಆನು ಕೋಪಲ್ಲಿ ಕೈಗೆ ಸಿಕ್ಕಿದ್ದರ ಇಡ್ಕಿದ್ದಷ್ಟೆ. ಹೀಂಗಕ್ಕು ಹೇಳಿ ಜಾನ್ಸಿದ್ದಿಲ್ಲೆ.” ಅನ್ನುತ್ತ ಜರ್ರನೆ ನೆಲಕ್ಕೆ ಕುಸಿದರು. ಕುಸಿದು ಬಿದ್ದ ಶಂಕರಯ್ಯನನ್ನು ಜಗಲಿಗೆ ತಂದು ಮಲಗಿಸುವಷ್ಟರಲ್ಲೇ ಅವರ ಬಲಭಾಗ ಸೆಟೆದುಕೊಂಡಿದ್ದಲ್ಲದೆ ನಾಲಿಗೆ ಮಾತಿನ ಶಕ್ತಿ ಕಳೆದುಕೊಂಡಿತ್ತು. ಸುದ್ದಿ ತಿಳಿದು ಬಂದ ಶೆಟ್ರು ಅಲ್ಲಿಯ ಅವಸ್ಥೆ ನೋಡಿ ತುಕ್ರ ಹಾಗು ಐತರಿಗೆ ಸತ್ತ ಜಾನುವಾರುಗಳನ್ನು ಹೂಳುವ ವ್ಯವಸ್ಥೆ ಮಾಡಲು ಹೇಳಿ ಶಂಕರಯ್ಯನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಶಂಕರಯ್ಯ ಹೊರಳದ ನಾಲಿಗೆಯನ್ನು ತಿರುಗಿಸುತ್ತ ಗಂಟಲಿನಿಂದ ಗೊರಗೊರ ಸ್ವರ ಹೊರಡಿಸಿ ಕೈ ಮುಗಿಯಲು ಪ್ರಯತ್ನಿಸಿದಾಗ ಶೆಟ್ಟರು ಮುಖ ತಿರುಗಿಸಿ “ಮಾಂತಲಾ ಮುಗಿಂಡತ್ತ ಭಟ್ರೆ. ನಣೊ ಕಣ್ಣ ನೀರ್ ಪಾಡ್ದ್ ಪ್ರಯಜನ ಉಂಡಾ? ಏನ್ ನರಮನಿ ಅತ್ತಾ? ಈ ಅವಸ್ಥೆಡ್ ಪೋಲೀಸ್ ಕಂಪ್ಲೆಂಟ್ ಕೊರ್‍ಪುಜ್ಜಿ. ಇತ್ತೆ ಆಸ್ಪತ್ರೆಗ್ ಪೋಯಿ (ಎಲ್ಲಾ ಮುಗಿಯಿತಲ್ಲ ರಾಯರೆ. ಇನ್ನು ಕಣ್ಣೀರು ಹಾಕಿ ಪ್ರಯೋಜನ ಉಂಟಾ?ನಾನು ಮನುಷ್ಯ ಅಲ್ವಾ. ಈ ಪರಿಸ್ಥಿತಿಯಲ್ಲಿ ಪೋಲೀಸ್ ಕಂಪ್ಲೆಂಟ್ ಕೊಡುವುದಿಲ್ಲ)” ಅಂದರು. ಶಂಕರಯ್ಯ ಮತ್ತೆ ಮತ್ತೆ ತಲೆ ಅಡ್ಡಡ್ಡ ಆಡಿಸಿ ಎಡದ ಕೈಯನ್ನೆತ್ತಿ ಹಟ್ಟಿಯತ್ತ ತೋರಿಸಿದಾಗ ಸುಭದ್ರಮ್ಮನಿಗೆ ಅವರು ಹೇಳುತ್ತಿರುವುದು ಅರ್ಥವಾಗಿತ್ತು.

“ಈಗ ಎಂತಗೆ ಬೇಕಾಗಿ ಆ ಜಾನುವಾರುಗಳ ಒಟ್ಟಿಂಗೆ ಹುಗಿಯೆಕು?. ಹಾಂಗೆ ಮಾಡಿರೆ ಪಾಪ ಪರಿಹಾರ ಅಕ್ಕು ಹೇಳಿ ಗ್ರೇಶೆಡಿ. ಸುಬ್ಬಣ್ಣ ಸತ್ತಪ್ಪಗ ಇಲ್ಲದ್ದ ಹೆದರಿಕೆ ಈಗೆಂತದಕ್ಕೆ. ಹೋರಿಯ ತೆಕ್ಕೊಂಡು ಹೋಗಿ ಶೆಟ್ರ ಜಾಗೆಲ್ಲೇ ಹುಗುದರಾತು. ಅವರ ಜಾಗೆಗೂ ರಜ ಗೊಬ್ಬರ ಅಕ್ಕು.” ಅಂದುಬಿಟ್ಟರು. ಶೆಟ್ರು, ಇಂದಿರೆ, ಚೀಂಕ್ರ ಯಾರು ಹೇಳಿದರೂ ಸುಭದ್ರಮ್ಮ ಗಿಡ್ಡ-ಭಾಗ್ಯರನ್ನು ಒಂದೇ ಕಡೆ ಹೂಳಲು ಬಿಡಲಿಲ್ಲ. ಶಂಕರಯ್ಯನೆದುರೇ “ಶೆಟ್ರೆ, ಬೋರಿನ್ ನಿಕ್ಲೆನ ಗುಡ್ಡೆಡೇ ಗುಂಡಿಗ್ ಪಾಡ್ದ್ ಮಿತ್ ಒಂಜಿ ದೈ ನಡ್ಲೆ. ಈರೆನ ಪುಳ್ಳಿಯರೆಗ್ ಕಥೆ ಪಣಿಯರೆ ಆಂಡ್ (ಶೆಟ್ರೆ, ಹೋರಿಯನ್ನು ನಿಮ್ಮ ಗುಡ್ಡೆಯಲ್ಲೇ ಗುಂಡಿ ತೋಡಿ ಹಾಕಿ, ಮೇಲೊಂದು ಗಿಡ ನೆಡಿ. ನಿಮ್ಮ ಮೊಮ್ಮಕ್ಕಳಿಗೆ ಕಥೆ ಹೇಳಲಿಕ್ಕಾಯ್ತು).” ಅಂದುಬಿಟ್ಟರು ಸುಭದ್ರಮ್ಮ. ಅಜ್ಜನ ಕಣ್ಣಿಂದ ದಿರಿದಿರಿ ನೀರಿಳಿಯುವುದನ್ನು ನೋಡಿದಾಗ ರಾಜೀವನ ಕಣ್ಣಲ್ಲೂ ನೀರಿಳಿಯಿತು. ಅಜ್ಜಂಗೆ ಮನುಷ್ಯತ್ವ ಇಲ್ಲೆ ಹೇಳುವ ಈ ಅಜ್ಜಿ ಈಗ ಮಾಡುದೆಂತರ ಅಮ್ಮ? ಸಾಲದ್ದಕ್ಕೆ ಹೀಂಗಿಪ್ಪ ಹೊತ್ತಿಲ್ಲಿಯೂ ಅಪ್ಪನ ನೆಪಲ್ಲಿ ಹಂಗ್ಸೆಕೊ? ಅಜ್ಜ ಅಂದು ಹಾಂಗೆ ಮಾಡಿದ್ದು ನಮ್ಮ ಒಳ್ಳೆದಕ್ಕೇ ಅಲ್ಲದ? ತಾಯಿಗೆ ಕೇಳುವಂತೆ ಗೊಣಗಿದ. ಅದು ಸುಭದ್ರಮ್ಮನ ಕಿವಿಗೂ ಬಿದ್ದು “ಇದಾ ಒಪ್ಪಕುಞ್ಞಿ. ನಿನಗೆ ಅದಿಕಪ್ರಸಂಗ ಬೇಡ. ನೀನು ಮೊದಾಲು ಪೇಟೆಗೆ ಹೋಗು. ಭಂಡಾರಿ ಅಂಗ್ಡಿಗೆ ಹೋಗಿ ಅಲ್ಲಿ ಮೂರ್‍ತಿ ಇದ್ದರೆ ಅವನ ಕರಕ್ಕೊಂಡು ಒಂದು ವಾಹನ ಮಾಡಿಯೊಂಡು ಬೇಗ ಬನ್ನಿ. ಅಜ್ಜನ ಆಸ್ಪತ್ರೆಗೆ ಕರಕ್ಕೊಂಡು ಹೋಯೆಕು.” ಹಿಂಗೈಯಿಂದ ಕಣ್ಣೊರೆಸಿಕೊಂಡು ಅಂಗಳಕ್ಕಿಳಿದ ರಾಜೀವ.

ಮಂಚದಲ್ಲಿ ಮಲಗಿದ್ದ ಅಜ್ಜನ ತಲೆಯ ಬುಡದಲ್ಲಿ ಕುಳಿತು ಭಾರತ ಕಥಾಮಂಜರಿಯಲ್ಲಿ ಭೀಷ್ಮನ ಶರಶಯ್ಯೆಯ ಪ್ರಸಂಗ ಓದಿ ಮುಗಿಸಿ ಪುಸ್ತಕವನ್ನು ಕಾಲು ಮಣೆಯಲ್ಲಿಟ್ಟು;

“ಇನ್ನು ನಾಳಂಗೆ ಅಜ್ಜಾ.” ಅನ್ನುತ್ತ ರಾಜೀವ ಮೇಲೇಳುತ್ತಿದ್ದಂತೆ ಸುಭದ್ರಮ್ಮ ಊಟದ ಬಟ್ಟಲು ಹಿಡಿದು ಬಂದರು. ಒಂದಿಷ್ಟು ಮುಖ ಸಿಂಡರಿಸದೆ abstract-art-sheepತಮಗ್ಯಾರಿಗೂ ಅಜ್ಜನ ಚಾಕ್ರಿ ಮಾಡಲು ಬಿಡದೆ ತಾನೇ ಎಲ್ಲವನ್ನು ಮಾಡುವ ಅಜ್ಜಿಯನ್ನು ನೋಡುವಾಗ ಅಂದೆಲ್ಲ ಅಜ್ಜನಿಗೆ ಪೆದಂಬು ಹೇಳುತ್ತಿದುದು, ಗಿಡ್ಡನನ್ನು ಹಠ ಹಿಡಿದು ಶೆಟ್ಟರ ಭೂಮಿಯಲ್ಲೇ ಹೂಳಿಸಿದ್ದು ಇದೇ ಅಜ್ಜಿಯಾ ಅನಿಸುತ್ತಿತ್ತು. ಮುಸ್ಸಂಜೆ ಹೊತ್ತಿಗೆ ಶಂಕರಯ್ಯನ ಹಾಸಿಗೆ ಬಳಿ ಕುಳಿತು ರಾಮಾಯಣವನ್ನೋ; ಭಾರತ ಕಥಾ ಮಂಜರಿಯನ್ನೋ ಓದುವಂತೆ ಹೇಳಿದ್ದು ಸುಭದ್ರಮ್ಮನೇ. “ಇದಾ ಒಪ್ಪಕುಞ್ಞಿ, ಅಜ್ಜಂಗೆ ಉದಿಮುರ್‍ಸಂಜೆಪ್ಪಗ ಮನುಗುದು ಹೇಳಿರೆ ಆವುತ್ತಿಲ್ಲೆನ್ನೆ. ನೀನು ನಿನ್ನ ಶಾಲೆ ಕೆಲಸ ಮುಗ್ಸಿಕ್ಕಿ ಉದಿಮುರ್‍ಸ್ಸಂಜೆ ಹೊತ್ತಿಂಗೆ ಅಜ್ಜನ ಹಾಸಿಗೆ ಹತ್ತರ ಕೂದೊಂಡು ರಾಮಾಯಣವೋ ಭಾರತವೋ ಎಂತಾರುದೇ ದೊಡ್ಡಕೆ ಓದಿ ಹೇಳೆಕಾತ. ಬೇರೆ ಎಲ್ಲ ಕೆಲಸ ವಿಷ್ಣು ಮಾಡ್ತ. ಇದೊಂದು ಅವನಿಂದೆಡಿಯ” ಅಂದಿದ್ದರು. ಸುಭದ್ರಮ್ಮನ ಮಾತಿನಲ್ಲಿ ಸತ್ಯವಿತ್ತು. ವಿಷ್ಣುಮೂರ್‍ತಿ ಗದ್ದೆ ಕೆಲಸ ಮುಗಿಸಿ ಮುಸ್ಸಂಜೆಗೆ ಮನೆಗೆ ಬಂದ ಮೇಲೆ ಕೊಟ್ಟಿಗೆಯಲ್ಲಿ ದನ-ಕರುಗಳೊಂದಿಗೆ ಮಾತುಕಥೆ ನಡೆಸುತ್ತ ಅವುಗಳ ಬುಡದಿಂದ ಸಗಣಿ ಎತ್ತಿ ಹಾಕಿ ತಾನು ಹೆರೆಸಿ ತಂದ ಹಸಿಹುಲ್ಲು ಬೈಪಣೆಯಲ್ಲಿ ಹರಡಿ ಎಲ್ಲ ಜಾನುವಾರುಗಳೂ ಸರಿಯಾಗಿ ತಿನ್ನುತ್ತಿದೆಯೋ ನೋಡಿ ಸ್ನಾನ; ಸಂಧ್ಯಾವಂದನೆ ಮುಗಿಸಿ ಬರುವಾಗ ರಾತ್ರಿ ಊಟದ ಹೊತ್ತು. ನಂತರ ಆತ ಶಂಕರಯ್ಯನ ಹಾಸಿಗೆ ಬಳಿ ಕುಳಿತು ಅಂದಂದಿನ ಕೆಲಸಗಳ; ವ್ಯವಹಾರಗಳ ವಿವರ ಹೇಳಿಯೇ ಊಟ ಮಾಡುತ್ತಿದುದು. ವಿಷ್ಣುಮೂರ್‍ತಿ ಕೃಷಿ ಕೆಲಸಗಳಲ್ಲಿ ಪಳಗಿದ್ದರಿಂದ ಸುಭದ್ರಮ್ಮನಾಗಲಿ ಇಂದಿರೆಯಾಗಲಿ ಶಂಕರಯ್ಯನ ಅನಾರೋಗ್ಯದಿಂದ ಕಂಗೆಡಬೇಕಾಗಿ ಬರಲಿಲ್ಲ. ರಾಜೀವನ ವಿದ್ಯಾಭ್ಯಾಸಕ್ಕೆ, ಅವನ ಇತರ ಚಟುವಟಿಕೆಗೆ ಯಾವುದೇ ಅಡಚಣೆಯೂ ಆಗಿರಲಿಲ್ಲ. ರಾಜೀವ ಅಜ್ಜನನ್ನು ಏಳಿಸಿ ಕೂರಿಸಲು ದಿಂಬನ್ನು ಗೋಡೆಗೊರಗಿಸಿಟ್ಟ. ಒಂದು ಬದಿಯಿಂದ ಆತ ಅಜ್ಜನ ಬೆನ್ನಿಗೆ ತನ್ನ ಕೈ ಆದರಿಸಿ ಏಳಿಸುತ್ತಿದ್ದಂತೆ ಸುಭದ್ರಮ್ಮ ಶಂಕರಯ್ಯನ ಕಂಕುಳಿಗೆ ಕೈ ಕೊಟ್ಟು ದಿಂಬಿಗೊರಗಿಸಿ ಕೂರಿಸುತ್ತ;

“ಇದಾ ಒಪ್ಪಕುಞ್ಞಿ,, ನಿನ್ನ ಅಜ್ಜಂಗೆ ಈಗ ವಿಷ್ಣುವಿನ ಮದುವೆ ಮಾಡೆಕಾಯಿದು. ನಿನ್ನೆ ಆ ಕೃಷ್ಣಶಾಸ್ತ್ರಿ ಬಂದಿತ್ತಿದ. ಅಂವ ಈ ವಿಷಯ ಊದಿಕ್ಕಿ ಹೋಪಲೇ ಬಪ್ಪದು. ಅಜ್ಜನ ಈ ಸ್ಥಿತಿಲ್ಲಿ ಇನ್ನು ಆರೋಗ್ಯ ಬಕ್ಕು ಹೇಳಿ ಎನಗೆ ತೋರ್‍ತಿಲ್ಲೆ. ನಾಡ್ದು ಆದಿತ್ಯವಾರ ನೀನೊಂದರಿ ನಿನ್ನ ದೊಡ್ಡ ಮಾವನಲ್ಲಿಗೆ ಹೋಗಿ ಅವನ ಬಪ್ಪಲೆ ಹೇಳಿಕ್ಕಿ ಬರೆಕು. ಕೂಸಿನ ವಿಚಾರಲ್ಲಿ ಅವಂಗೆ ಅಸಮಾಧಾನ ಅಕ್ಕು. ನಿನ್ನ ಅಜ್ಜಂಗೆ ತಾನು ಮಾತು ಕೊಟ್ಟಿದೆ ಹೇಳಿ ಹಠ.” ಅಂದರು.

ಶಂಕರಯ್ಯನೊಂದಿಗೆ ಅಲ್ಲಿ ಇಲ್ಲಿ ತಾಳಮದ್ದಳೆಗೆ ಭಾಗವತಿಕೆಗೆ ಹೋಗುತ್ತಿದ್ದ ಕೃಷ್ಣಶಾಸ್ತ್ರಿ ಪದೇ ಪದೇ ಬರುವುದು, ವಿಷ್ಣುವಿನ ಮದುವೆಗೆ ಒತ್ತಾಯಿಸುತ್ತಿದ್ದುದು ರಾಜೀವನಿಗೂ ಗೊತ್ತಿತ್ತು. ಅಜ್ಜ ಭಾಗವತಿಕೆಯ ಕೃಷ್ಣಶಾಸ್ತ್ರಿಗಳ ಮಗಳನ್ನೇ ವಿಷ್ಣುವಿಗೆ ತಂದುಕೊಳ್ಳಬೇಕೆಂದು ಹೇಳುತ್ತಿದುದು; ಅಜ್ಜಿ ತಮ್ಮ ದೊಡ್ಡ ಸೊಸೆಯ ಸಂಬಂಧದ ಹುಡುಗಿ ಲಲಿತೆ ವಿಷ್ಣುವಿಗೆ ಸರಿಯಾದ ಜೋಡಿ ಎಂದು ವಾದ ಮಾಡುತ್ತಿದುದು; ಆಗೆಲ್ಲ ಅಜ್ಜ ಯೋಗ ಕೂಡಿ ಬಂದರೆ ಲಲಿತೆಯನ್ನ ರಾಜೀವನಿಗೆ ತಂದರಾಯಿತು. ಹೇಗೂ ಅವಳು ರಾಜೀವನಿಗಿಂತಲೂ ಎರಡು ವರ್ಷಕ್ಕೆ ಸಣ್ಣವಳೇ ಎಂದು ನಗುತ್ತಿದುದು ರಾಜೀವನ ಕಿವಿಗೂ ಬಿದ್ದಿತ್ತು. ಅಲ್ಲದೆ ಶಂಕರಿಯ ಜಾತಕಕ್ಕು ವಿಷ್ಣುವಿನ ಜಾತಕಕ್ಕು ತಕ್ಕ ಮಟ್ಟಿನ ಹೊಂದಾಣಿಕೆ ಇದೆ ಎಂದೂ ಸ್ವತಃ ಜಾತಕದ ತಾಳೆ ನೋಡುತ್ತಿದ್ದ ಶಂಕರಯ್ಯನೇ ಹೇಳಿದ್ದೂ ಇತ್ತು. ಈಗ ಅಜ್ಜನಿಗೆ ಹುಷಾರು ತಪ್ಪಿ ಆರೇಳು ತಿಂಗಳಾಗುವಷ್ಟರಲ್ಲೇ ಮನೆಯಲ್ಲಿ ಮದುವೆ ಎಬ್ಬಿಸುವುದು ಅಷ್ಟೊಂದು ಹಿತವೆನಿಸಲಿಲ್ಲ ಅವನಿಗೆ. ಈ ಶಾಸ್ತ್ರಿಗೆ ನಮ್ಮ ವಿಚಾರದಲ್ಲಿ ಯಜಮಾನಿಕೆ ಎಂತದಕ್ಕೆ ಅಂದುಕೊಂಡ.

“ಅಜ್ಜಂಗೆ ಈಗ ಕುಞ್ಞಿರಾಮನ ಎಣ್ಣೆ ಉದ್ದುತ್ತ ಇದ್ದಲ್ಲದೊ ಅಜ್ಜಿ. ಒಂದೆರಡು ತಿಂಗಳು ಕಾದರೆ ಅಜ್ಜ ಹುಷಾರಿ ಅಪ್ಪಲು ಸಾಕು.” ಆತ ಮಾತು ಮುಗಿಸುವ ಮೊದಲೇ ಶಂಕರಯ್ಯ ಅದೆಲ್ಲ ಬೇಡವೆನ್ನುವಂತೆ ಗೊರಗೊರ ಸ್ವರ ಹೊರಡಿಸಿದರು.

“ವಿಷ್ಣುಮೂರ್‍ತಿಯುದೇ ನಿನ್ನೆ ಹೀಂಗೇ ಹೇಳಿಂಡಿತ್ತಿದ್ದ. ನಿನ್ನ ಅಜ್ಜ ಒಪ್ಪಿದ್ದವಿಲ್ಲೆ. ಅಂವ ಮದುವೆಗೆ ಒಪ್ಪಿಗೆ ಕೊಟ್ಟ ಮತ್ತೆಯೇ ಅಜ್ಜ ಮಧ್ಯಾನ ಉಂಡದು.” ಸುಭದ್ರಮ್ಮ ಹೇಳುತ್ತಿದ್ದರೆ ಶಂಕರಯ್ಯ ಹೌದೆನ್ನುವಂತೆ ಕಣ್ಣು ಹೊರಳಿಸಿದರು.

ಮುಂದಿನ ಮಾಸದಲ್ಲೇ ವಿಷ್ಣುಮೂರ್‍ತಿಯ ಮದುವೆ ಶಂಕರಿಯೊಂದಿಗೆ ಸರಳವಾಗಿಯೇ ನಡೆಯಿತು.

ಆದರೆ, ಮನೆ ಮಂದಿಯ ನಿರೀಕ್ಷೆಯಂತೆ ಏನೂ ನಡೆಯದೆ ಶಂಕರಯ್ಯನ ಜೀವ ಮರಿಪುಳ್ಳಿಯನ್ನೂ ನೋಡಿಕೊಂಡೇ ಇಹದ ಯಾತ್ರೆ ಮುಗಿಸಿದ್ದು. ವೈಕುಂಠಕ್ಕೆ ಬಂದ ಹಿರಿಯರೆಲ್ಲ ಸುಭದ್ರಮ್ಮನ ಬಳಿ ಬಂದು “ತೊಂಡಜ್ಜ ಆಗಿಕ್ಕಿಯೇ ಸಾವ ಯೋಗ ಇದ್ದತ್ತು ಶಂಕರಂಗೆ. ಪಾಪ! ಈಗಾರು ಮುಕ್ತಿ ಸಿಕ್ಕಿತ್ತನ್ನೆ. ನಿಜಕ್ಕಾರುದೇ ನಿಂಗಳ ಮರಿಪುಳ್ಳಿ ಚಾಮಿಯೇ. ಅನ್ನಲು” ಮರೆಯಲಿಲ್ಲ.

ಸುಭದ್ರಮ್ಮ ಮಾತ್ರ “ಅಪ್ಪು ಅಂವ ಚಾಮಿಯೇ (ದೇವರೇ). ಇಲ್ಲದ್ದರೆ ನೆಗೆಯೇ ಇಲ್ಲದ್ದ ಎನ್ನ ಇಂದಿರೆಯ ಮೋರೆಲ್ಲಿ ಈಗ ಹೀಂಗುದೇ ಸಂತೋಷ ಕಾಣೆಕಾರೆ ಅದು ಈ ಕೃಷ್ಣ ಚಾಮಿಂದಲೇ” ಅನ್ನುತ್ತ ಮಗುವನ್ನಪ್ಪಿ ಮುದ್ದು ಮಾಡಿದರು.

ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಇರಲಿಲ್ಲ. ತವರು ಮನೆ ಸೇರಿಕೊಂಡ ಮೇಲೆ ಇಂದಿರೆಯ ಮುಖದಲ್ಲಿ ಯಾವಾಗಲೂ ಮರುಕ ಹುಟ್ಟಿಸುವ ದೈನ್ಯತೆಯೇ ಇರುತ್ತಿತ್ತು. ಪ್ರತಿ ಬೆಳಗು-ಸಂಜೆಗಳನ್ನು ಬಾಡಿದ ಮುಖದಲ್ಲೇ ಕಳೆಯುತ್ತಿದ್ದ ಇಂದಿರೆಯ ಮುಖದಲ್ಲಿ ಹೊಸಕಳೆ ಕಂಡಿದ್ದು ವಿಷ್ಣುಮೂರ್‍ತಿಗೆ ಮಗ ಹುಟ್ಟಿದಾಗ. ಮೋಹನ ಎಂದು ಹೆಸರು ಆಯ್ಕೆ ಮಾಡಿದವಳೂ ಅವಳೇ. ಶಂಕರಯ್ಯನ ಸಾವಿನಿಂದಲೂ ವಿಚಲಿತವಾಗದಂತೆ ಅವಳನ್ನು ಮಗು ಹಿಡಿದಿಟ್ಟಿತ್ತು. ಶಂಕರಯ್ಯನ ಸಾವಿನ ನಂತರ ವಿಚಿತ್ರವಾದ ಏಕಾಕಿತನ ಕಾಡಲಾರಂಭಿಸಿದ್ದು ರಾಜೀವನಿಗೆ. ಅಜ್ಜ ಸಾಯುವ ಏಳೆಂಟು ತಿಂಗಳ ಮೊದಲು ರಾಜೀವನ ಪದವಿ ಓದು ಮುಗಿದಿದ್ದರಿಂದ ಜಿಲ್ಲಾ ಮಟ್ಟದ ಪತ್ರಿಕೆಯೊಂದಕ್ಕೆ ಸ್ಥಳೀಯ ವರದಿಗಾರನಾಗಿ ಅರೆಕಾಲಿಕ ಕೆಲಸ ಮಾಡುತ್ತ ನಾಟಕ, ಹವ್ಯಾಸಿ ತಾಳಮದ್ದಳೆ ಎಂದು ಓಡಾಡಲಾರಂಭಿಸಿದ್ದ. ತನ್ನ ಚಟುವಟಿಕೆಗಳ ಬಗ್ಗೆ ಅಜ್ಜನಿಗೆ ವರದಿ ಒಪ್ಪಿಸುತ್ತಿದ್ದ. ಈಗ ಸಂಜೆ ಮನೆಗೆ ಬಂದ ಮೇಲೆ ತನ್ನ ಸಾಧನೆಗಳನ್ನು ಕೇಳಿ ಬೆನ್ನು ತಟ್ಟುವವರೇ ಇಲ್ಲ ಅನಿಸಲಾರಂಭಿಸಿತು. ಮುಸ್ಸಂಜೆಯ ಹೊತ್ತು ಚಾವಡಿಯಲ್ಲಿ ಕುಳಿತು ಮಗುವನ್ನು ಮಡಿಲ್ಲಿಟ್ಟುಕೊಂಡು ಹಾಡು ಗುನುಗುತ್ತಿದ್ದ ಇಂದಿರೆ ರಾಜೀವನ ಬಳಿ ಒಂದಲ್ಲ ಒಂದು ರೀತಿಯಲ್ಲಿ ಅವನ ಜವಾಬ್ದಾರಿ ನೆನಪಿಸುತ್ತಿದ್ದಳು.

ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಹೊರಟ ರಾಜು ತಾಯಿಯ ಬಳಿ ಹೇಳಿ ಹೋಗಲು ಒಳಕೋಣೆಗೆ ಹೋದ. ಆಕೆಯ ಮಡಿಲಲ್ಲಿ ಮಗು ಆಡುತ್ತಿದ್ದುದನ್ನು ನೋಡಿ ಅದರ ಕೆನ್ನೆ ಸವರಿದ. ಇಂದಿರೆ ಅದೆ ಸಂದರ್ಭವೆಂದುಕೊಂಡು “ಇದಾ ರಾಜು, ನೀನೀಗ ಅಪ್ಪಚ್ಚಿ (ಚಿಕ್ಕಪ್ಪ). ನಿನ್ನ ಜವಾಬ್ದಾರಿ ಜಾಸ್ತಿ ಆತು. ಇನ್ನು ನಾಟಕ ಇದ್ದು ಹೇಳಿ ಊರೂರು ಸುತ್ತಿಯೊಂಡಿದ್ದರಾಗ. ನೇರ್ಪಕೆ ಒಂದು ಕೆಲಸಕ್ಕೆ ಸೇರಿಯೊಂಡು ಅಣ್ಣಂಗೆ ಸಕಾಯ ಮಾಡು. ಎನ್ನ ಭಾಗ್ಯ ಹೇಂಗಿದ್ದು ನೋಡು. ಎನ್ನ art-3ಅಬ್ಬೆಗೆ ಹದಿನೈದು ವರ್ಷಕ್ಕೆ ಮದುವೆ ಆತಡ. ಹದಿನಾರು ಕಳಿವಾಗ ಅಕ್ಕ ಹುಟ್ಟಿದ್ದಡ. ಆನು ಹುಟ್ಟುವಾಗ ಅಬ್ಬೆಗೆ ಇಪ್ಪತ್ತು ವರ್ಷಡ. ಎನಗೆ ಹದ್ನೇಳು ವರ್ಷ ಅಪ್ಪಗ ಎನ್ನ ಅಪ್ಪ-ಅಬ್ಬೆ ಎನ್ನ ಮದುವೆ ಮಾಡಿದವು. ಇಪ್ಪತ್ತೊಂದಪ್ಪಗ ಎರಡು ಮಕ್ಕಳ ಅಬ್ಬೆ ಆದೆ. ಇಪ್ಪತ್ತೈದು ಮುಗಿವಾಗ ಗೆಂಡನೇ ಇಲ್ಲದ್ದೆ ಆತು. ಈಗ ನಲ್ವತ್ತೈದಕ್ಕೆ ಪುಳ್ಳಿ ಕೈಲಿದ್ದ. ಅಬ್ಬೆಯ ಕೈ-ಕಾಲು ಗಟ್ಟಿ ಇಪ್ಪಗಳೇ ನಿನ್ನದೂ ಒಂದು ಮದುವೆ ಹೇಳಿ ಆದರೆ ಮತ್ತೆ ಎನಗೆ ಸತ್ತರೂ ಚಿಂತೆ ಇಲ್ಲೆ ಮಗಾ.” ಅನ್ನುತ್ತ ಕಣ್ಣೊರೆಸಿಕೊಂಡು ನಕ್ಕಳು. ಅಲ್ಲೇ ಇದ್ದ ಸುಭದ್ರಮ್ಮ,

“ಏನಾರ ಮಾತಾಡೆಡ ಇಂದಿ. ಈಗ ಸಾವ ಮಾತೆಂತಗೆ. ಮದುವೆ ಮಾಡೆಕಾರೆ ಮಾಡಿರಾತು. ನಿನ್ನ ಅಣ್ಣ್ಣಂದ್ರಿಂಗೆ ಹೇಳಿರೆ ಕೂಸು ನೋಡುಗು.” ಅಜ್ಜಿಯ ಮಾತು ಮುಗಿಯುವ ಮೊದಲೇ ರಾಜೀವ; “ನಿಂಗೊಗೆಲ್ಲ ಎಂತ ಮರ್‍ಲಾ? ಎನಗೆ ಈಗಳೇ ಮದುವೆಯೊ! ಎನ್ನ ಲೆಕ್ಕಚಾರವೇ ಬೇರೆ. ನೀನು ನೋಡಿಂಡಿರಮ್ಮ. ಇಂದಲ್ಲದ್ರೆ ನಾಳೆ ನಿನ್ನ ಮಗ ಎಷ್ಟು ಎತ್ತರಕ್ಕೇರ್‍ತ ಹೇಳಿ ನೋಡು.” ಅನ್ನುತ್ತ ಮಗುವಿನ ಮುಖದ ಹತ್ತಿರ ಬಗ್ಗಿ “ಅಲ್ಲದಾ ಮಗನೇ” ಅಂದವನೇ ಹೋಗಿಬರುತ್ತೇನೆನ್ನುತ್ತ ನಡೆದ.

“ನೀನು ತಿರುಕನ ಕನಸು ಕಾಂಬದೆಲ್ಲ ಬೇಡ. ಅದೆಲ್ಲ ನಮ್ಮಾಂಗಿಪ್ಪವಕ್ಕಲ್ಲ” ಇಂದಿರೆ ಗೊಣಗಿದಳು. ಆತ ಮರೆಯಾದೊಡನೆ ಸುಭದ್ರಮ್ಮ,

“ಈಗ ಒಪ್ಪಕುಞ್ಞಿಯ ಮದುವೆಗೆ ನಿನು ಅಂಬ್ರೆಪ್ಪು ಮಾಡೆಡ ಇಂದಿ. ಒಂದೊ ಅಂವ ಇದರಲ್ಲೇ ಮೇಲೆ ಬೀಳೆಕು. ಇಲ್ಲದ್ರೆ ಇದು ಬೊಡಿಯೆಕು. ನಿನ್ನ ಅಬ್ಬೆ ಆನು ಹೀಂಗೆ ಗುಂಡುಕಲ್ಲಿನ ಹಾಂಗಿಪ್ಪಗ ನೀನು ಸಾವ ಮಾತಾಡ್ಲಕ್ಕೊ ಇಂದಿ?” ಮಾತಿನ ಕೊನೆಯಲ್ಲಿ ಸುಭದ್ರಮ್ಮನ ದ್ವನಿ ನಡುಗಿತು.

ಆನು ನಿನಗೆ ಬೇನೆ ಮಾಡೆಕು ಹೆಳಿ ಹೇಳಿದ್ದಲ್ಲ ಅಬ್ಬೆ. ಈಗ ಕೆಲವು ದಿನಂದ ಇರುಳು ಕನಸಿಲ್ಲಿ ಇವು ಬಂದು ಇಂದಿ..ಇಂದಿ..ಹೇಳಿ ದೆನಿಗೊಳ್ತವು.” ಇಂದಿರೆ ಸಣ್ಣ ಧನಿಯಲ್ಲಿ ಹೇಳಿದಳು. ಸುಭದ್ರಮ್ಮ ಇಂದಿರೆಯ ಬಳಿ ಬಂದು ಕುಳಿತು “ಮೋಳೇ. ನೀನು ಎಷ್ಟೊಂತಿಂಗೂ ಅವನ ನೆಂಪು ಮಾಡಿಯೊಂಡಿಪ್ಪದಕ್ಕೆ ಹಾಂಗೆಲ್ಲ ಅಪ್ಪದು. ಇರುಳು ನೀನು ಎನ್ನೊಟ್ಟಿಂಗೆ ಇಲ್ಲಿಯೆ ಮನುಗು” ಅನ್ನುತ್ತ ಆಕೆಯ ತಲೆ ನೇವರಿಸಿದರು.

ಇಂದಿರೆ ಆ ಮಧ್ಯಾಹ್ನ ಉಂಡು ಸ್ವಲ್ಪ ಹೊತ್ತು ಮಲಗಿದ್ದವಳು ಎಂದಿನಂತೆ ಬಟ್ಟೆ ತೊಳೆಯಲು ತೋಟದೊಳಗಿನ ಕೆರೆಗೆ ಹೋದಳು. ದೊಡ್ಡವರ ವಸ್ತ್ರಗಳನ್ನು ತೊಳೆದು ಹಿಂಡಿ ಬುಟ್ಟಿಯಲ್ಲಿಟ್ಟವಳು ಕೊನೆಯಲ್ಲಿ ಮೊಮ್ಮಗುವಿನ ಬಿಳಿಯ ಬಟ್ಟೆಯನ್ನು ನಿರಿನಲ್ಲಿ ಜಾಲಾಡಿಸಲೆಂದು ಬಗ್ಗಿದಳು. ಆಕೆಯಿದ್ದಲ್ಲಿಂದ ಸ್ವಲ್ಪ ಮುಂದೆ ಪರಿಚಿತ ಪ್ರತಿಬಿಂಬ ತೋಳು ತೆರೆದು ನಿಂತಿದ್ದು ಕಂಡಿದ್ದೇ “ಏ ದೇವರೆ, ನಿಂಗೋ ಇಷ್ಟು ದಿನ ಎಲ್ಲಿತ್ತಿದ್ದಿ?” ಅನ್ನುತ್ತ ಬಿಂಬವನ್ನ ಹಿಡಿಯಲು ಮುನ್ನಡೆದಳು. ಹಿಡಿತ ತಪ್ಪಿದ ಹತ್ತಿಯ ಬಿಳಿ ವಸ್ತ್ರ ತನ್ನ ಪಾಡಿಗೆ ಸ್ವಲ್ಪ ಹೊತ್ತು ನೀರಿನಲ್ಲಿ ಬಲೆಯಂತೆ ಬಿಚ್ಚಿಕೊಂಡು ತೇಲಿ ತೇಲಿ ಮುಳುಗಿತು.

ಸುಭದ್ರಮ್ಮ ಮದ್ಯಾಹ್ನದ ನಿದ್ರೆ ಮುಗಿಸಿ ಎದ್ದವರು ಇಂದಿರೆ ಇಲ್ಲದ್ದನ್ನು ಗಮನಿಸಿ ಶಂಕರಿಯನ್ನು ಕೇಳಿದರು. ಆಕೆ “ಆನು ಮಗನ ವರಗ್ಸಿಕ್ಕಿ ಬಪ್ಪಗಳೇ ಅತ್ತೆ ತೋಟಕ್ಕೆ ಹೋಯಿದವು” ಅಂದಳು. ಹಾಂಗಾರೆ ಇಂದಿ ಇಷ್ಟೊತ್ತಿಂಗೆ ಬರೆಕಾತನ್ನೆ. ಕಂಜಿ(ಕರು)ಗೆ ಹುಲ್ಲು ಹೆರೆಸಿಯೊಂಡು ಕೂದತ್ತಾಯಿಕ್ಕು ಅನ್ನುತ್ತ ಅವರೂ ಕತ್ತಿ ಹಿಡಿದು ನಡೆದರು. ಕೆರೆ ಏರಿಗೆ ಬಂದವರಿಗೆ ಕಂಡಿದ್ದು ತೊಳೆದಿಟ್ಟ ವಸ್ತ್ರಗಳು ಮಾತ್ರ. ಹತ್ತಿರ ಹೋಗಿ ನೋಡಿದವರು ವಿಕಾರವಾಗಿ ಕಿರುಚಿದ್ದೇ ಎಂತೆಂತಹ ಗಾಳಿ_ಮಳೆ, ಬಿರುಬಿಸಿಲುಗಳನ್ನು ತಾಳಿಕೊಂಡು ಬಾಳಿದ ತೆಂಗಿನ ಮರಕ್ಕೆ ಬರ ಸಿಡಿಲು ಬಡಿದು ನೆಲಕ್ಕುರುಳಿದಂತೆ ಉರುಳಿದರು. ಅದುಮಿಡಲಾಗದ ಕಣ್ಣೀರು-ಉಮ್ಮಳಿಕೆಗಳ ನಡುವೆಯೇ ವಿಷ್ಣು, ರಾಜೀವರು ತಾಯಿಯ ಸಂಸ್ಕಾರಗಳನ್ನು ನಡೆಸುತ್ತಿದ್ದರೂ ಮೂಕಿಯಂತೆ ಮೂಲೆ ಹಿಡಿದು ಕುಳಿತಿದ್ದಳು ಸುಭದ್ರಮ್ಮ.

ಇಂದಿರೆಯ ವೈಕುಂಠ ಮುಗಿಸಿ ಹೊರಟು ನಿಂತ ಕೃಷ್ಣಶಾಸ್ತ್ರಿಗಳು ಮಗಳು ಕೊಟ್ಟ ಹೋಳಿಗೆ ಕಟ್ಟು ಚೀಲದೊಳಗಿಡುತ್ತ ಅವಳ ಸಮೀಪ ಬಗ್ಗಿ;

“ಇನ್ನಾರುದೇ ನಿನ್ನ ಮೈದುನಂಗೆ ಜವಾಬ್ದಾರಿ ಬಂದರಾವುತ್ತಿತ್ತು. ನಿನ್ನ ಗೆಂಡಂಗೆ ಗೆಯ್ವಲೊಂದೆ ಗೊಂತಿಪ್ಪದು ಅವನ ಅಪ್ಪನ ಹಾಂಗೆ. ಇಂವಂಗೆ ಅವನ ಅಜ್ಜಂದೇ ಬುದ್ದಿ. ಆರಾರು ಬಙ್ಙ ಬರೆಕು. ಇಂವ ಶಿಸ್ತಿಲ್ಲಿ ಪ್ಯಾಂಟು-ಅಂಗಿ ಸುರ್‍ಕೊಂಡು ಉದಿಯಪ್ಪಗ ಹೋಪಲಾತು. ಶಂಕರಯ್ಯನ ಬಿರ್‍ಸಾತಿಗೆ ಎಂತ ಹೇಳಿ ಎನಗೆ ಗೊಂತಿಲ್ಯೋ. ಅಳಿಯನ ಪೈಸೆಲ್ಲಿ ಬಂಗಾರದಾಂಗಿಪ್ಪ ಜಾಗೆ ಮಾಡಿ ಅವನ ಮಕ್ಕಳ ಕೂರ್‍ಸಿದ. ಇಲ್ಲೆಂತ ಇದ್ದು ಮಣ್ಣಾಂಗಟ್ಟಿ. ಇಂದಿರೆ ಬರೀ ಬೆಪ್ಪಿ. ತನ್ನ ಮಕ್ಕೊಗೆ ಅನ್ಯಾಯ ಆದ್ದು ಗೊಂತಾಯಿದಿಲ್ಲೆ. ನೀನೂ ಹೀಂಗೇ ಕೂದರೆ ನಿನ್ನ ಮಕ್ಕಳ ಗೆತಿಯೂ ಹೀಂಗೇ ಅಕ್ಕು. ಯಜಮಾನಿಕೆ ಮಾಡ್ತ ಆ ತೊಂಡಿಗಾರುದೇ ಬುದ್ಧಿ ಬೇಡದೋ? ಮನೆ ಖರ್ಚಿಂಗೆ ರಜ್ಜ ಪೈಸೆ ಕೊಡೆಕು ಇಲ್ಲದ್ದರೆ ಅಣ್ಣನೊಟ್ಟಿಂಗೆ ಕೆಲಸ ಮಾಡೆಕು ಹೇಳಿ ರಾಜೀವಂಗೆ ಹೇಳಿರೆ ಅಂಬಗ ರಜ್ಜ ಬಙ್ಙ ಗೊಂತಾವುತ್ತಿತ್ತು. ಇದಾ ಮೋಳೆ, ಇನ್ನು ನೀನು ಸುಮ್ಮನೆ ಕೂದರೆ ಆಗ. ಹತ್ತು ದಿನಲ್ಲಿಯೇ ತೊಂಡಿ(ಮುದುಕಿ)ಗೆ ಹತ್ತು ವರ್ಷ ಹೆಚ್ಚಾಯಿದು. ಏವಾಗ ಅಡ್ಡ್ ಬೀಳುಗು ಹೇಳ್ಲೆಡಿಯ. ವಯಿವಾಟು ಸರಿ ಮಾಡಿಯೊಳದ್ರೆ ಸೋತು ಹೋಪೆ ಮತ್ತೆ” ಎಂದು ಪಿಸುಗುಟ್ಟಿದ್ದರು. ಆದರೆ, ಅಚಾನಕ್ ಆಗಿ ಅಡುಗೆ ಮನೆ ಹೊಸ್ತಿಲಿಗೆ ಬಂದ ಸುಭದ್ರಮ್ಮನ ಕಿವಿಗೆ ಎಲ್ಲ ಮಾತೂ ಬಿತ್ತು. ಮತ್ತೆ ನೆಟ್ಟಗಾಗಲು ಅವರಿಗೆ ಅದೇ ಗೊಬ್ಬರವಾಯ್ತು.

“ಕೃಷ್ಣಣ್ಣ, ನಿಂಗೊ ಹೇಳ್ವದುದೇ ಸರಿ. ರಾಜೀವಂಗೆ ಏವ ಜವಾಬ್ದಾರಿಯೂ ಇಲ್ಲೆ. ತೋಟಕ್ಕೆ ನೀರು ಹಿಡಿವ ಸಮಯಲ್ಲೊಂದು ಉದಿಯಪ್ಪಗ ಆರೂ ದೆನಿಗೊಳೆಕು ಹೇಳಿ ಇಲ್ಲೆ. ಬೆಣ್ಚಪ್ಪಂದ(ಬೆಳಕು ಹರಿಯುವ)ಮೊದಲೇ ಎದ್ದಿಕ್ಕಿ ನೀರು ಹಿಡಿವಲೆ ಹೋವುತ್ತ. ನಿತ್ಯ ಬೆಶಿನೀರು ಕೊಟ್ಟಗೆಗೆ, ಹಟ್ಟಿಗೆ ಬೇಕಪ್ಪಷ್ಟು ನೀರು ಉದಿಯಪ್ಪಗಳೇ ಬಾವಿಂದ ಎಳದು ತುಂಬ್ಸುತ್ತ. ಬೇರೆಂತ ವ್ಯವಹಾರಕ್ಕು ತಲೆ ಕೊಡ್ತನಿಲ್ಲೆ. ಅವನ ಅಜ್ಜನ ಬಿರ್‍ಸಾತಿಗೆ ಅವಂಗಿಲ್ಲದ್ದಕ್ಕೆ ಅಂವ art-1ಎಷ್ಟು ಅಡಕ್ಕೆ ಆತು? ಎಷ್ಟು ತೆಂಗಿನ ಕಾಯಿ ಆವುತ್ತು? ಖರ್ಚೆಷ್ಟಾತು ಹೇಳಿಯೂ ಕೇಳ್ತನಿಲ್ಲೆ. ಎಂಗಳುದೇ ಅವಂಗೆ ಹೇಳುವ ಕ್ರಮ ಇಲ್ಲೆ. ಈ ವರ್ಷ ಶಂಕರಿಗೆ ಚೈನು ಮಾಡ್ಸಿದ್ದರನ್ನುದೇ ಈ ತೊಂಡಿಯೂ ಅವಂಗೆ ಹೇಳಿದ್ದಿಲ್ಲೆ. ಅವನ ಅಬ್ಬೆಯೂ ಅವಂಗೆ ಹೇಳಿದ್ದಿಲ್ಲೆ. ಮನೆಲ್ಲಿದ್ದ ದಿನ ಹಶುವಪ್ಪಗ ಬತ್ತ. ಬಳ್ಸಿದ್ದರ ಉಂಡಿಕ್ಕಿ ಹೋವುತ್ತ. ಎಂತಾರುದೇ ಅಬ್ಬೆಯ ಬೂದಿಯ ಬೆಶಿ ತಣಿವನ್ನ ಮೊದಲೇ ಹೀಂಗೆ ಮಾತಾಡ್ಲಕ್ಕ ಕೃಷ್ಣಣ್ಣ.” ಅಂದರು.

“ಆನು ವರ್ತಮಾನಕ್ಕೆ ಹೇಳಿದ್ದಷ್ಟೆ. ಹೀಂಗೇ ಮಾಡಿಯೊಂಡಿದ್ದರೆ ಅವಂಗೇ ಬಙ್ಙ ಅಲ್ಲದ ಸುಭದ್ರಕ್ಕ. ಇನ್ನು ಸರಿ ಅಕ್ಕು. ಅಂಬಗ ಆನು ಹೆರಡುತ್ತೆ.” ಅನ್ನುತ್ತ ಸರಸರನೆ ಹೊರನಡೆದರು. ಹುಣಸೆ ಹಣ್ಣು ಬಾಯಿಯಲ್ಲಿರುವಾಗಲೇ ಸಿಕ್ಕಿಹಾಕಿಕೊಂಡಂತಾಗಿತ್ತು ಅವರ ಸ್ಥಿತಿ.

ಸುಭದ್ರಮ್ಮ ಕೃಷ್ಣಶಾಸ್ತ್ರಿಯ ಬಾಯಿಯನ್ನೇನೋ ಮುಚ್ಚಿಸಿದರು. ಆದರೆ, ಒಣಗಿಯೂ ಒಣಗದಂತಿರುವ ಎದೆಯ ಗಾಯಕ್ಕೆ ಉಪ್ಪು ಬಿದ್ದು ರವಸಲಾರಂಭಿಸಿತು. ತನ್ನ ಗಂಡ ಮಾಡಿದ್ದು ಸರಿ ಎನ್ನುವುದನ್ನ ಅವರ ಮನಸ್ಸೇ ಪೂರ್‍ತಿಯಾಗಿ ಒಪ್ಪಿಕೊಳ್ಳಲು ಇನ್ನೂ ಸಿದ್ಧವಿರಲಿಲ್ಲ.

ಶಂಕರಯ್ಯ ಬದುಕಿದ ರೀತಿಯನ್ನ ಹೀಗೇ ಅಂತ ವ್ಯಾಖ್ಯಾನಿಸಲು ಸಾಧ್ಯವೇ ಇರಲಿಲ್ಲ. ಮೂರು ಗಂಡು ಎರಡು ಹೆಣ್ಣು ಮಕ್ಕಳ ಅವರ ಸಂಸಾರಕ್ಕೆ ಮೂರು ಎಕರೆ ಗದ್ದೆ ಫಸಲು ಏನೇನೂ ಆಗಿರಲಿಲ್ಲ. ಆದರೆ, ಶಂಕರಯ್ಯನ ತಲೆಗೆ ಬಡತನವಿರಲಿಲ್ಲ. ಅವರಿವರ ಜಮೀನಿನ ತಗಾದೆಗಳನ್ನು ಬಗೆ ಹರಿಸುವುದು; ಕಾನೂನಿಗೆ ಸಂಬಂಧಪಟ್ಟ ಕಾಗದ-ಪತ್ರ ಮಾಡಿಕೊಡುವುದರ ಮೂಲಕ ಪುಡಿಗಾಸು ಸಂಪಾದಿಸುತ್ತಿದ್ದರು. ಅದರಲ್ಲೇ ದೊಡ್ಡ ಮಗಳ ಮದುವೆ ಮಾಡಿದ್ದರು. ಆ ಮನೆಯವರಿಗೂ ಶಂಕರಯ್ಯನೇ ಕೆಲವೊಮ್ಮೆ ಕೈತಾಂಗು ನೀಡಬೇಕಾಗಿತ್ತು. ಮತ್ತೊಬ್ಬ ಮಗಳು ಇಂದಿರೆಗೆ ಕೂಡಿ ಬಂದ ಸಂಬಂಧ ಮಾತ್ರ ಹದಿನೆಂಟು ಖಂಡಿಗೂ ಮಿಕ್ಕಿ ಅಡಿಕೆ ಕೊಯ್ಲು ಮಾಡುವ ದೊಡ್ಡ ಕುಳವೇ. ತನ್ನಂತ ಸಾಮಾನ್ಯನ ಮಗಳನ್ನು ಅಂತಹ ಮನೆಯವರು ಒಪ್ಪುತ್ತಾರೆಂದರೆ ಭಾಗ್ಯಲಕ್ಷ್ಮಿ ಒದ್ದುಕೊಂಡು ಬಂದಂತೆಯೇ ಅನ್ನುತ್ತ ಅಳಿಯನಾಗುವವನ ಬಗ್ಗೆ ಸ್ವಲ್ಪ ಒಡಕು ಮಾತು ಕಿವಿಗೆ ಬಿದ್ದರೂ ಒಳ್ಳೆಯ ಕಾರ್ಯಕ್ಕೆ ವಿಘ್ನ ಜಾಸ್ತಿ ಅನ್ನುವ ಗಾದೆ ಮಾತು ಹೇಳುತ್ತ ತರಾತುರಿಯಲ್ಲೇ ಮದುವೆ ಮಾಡಿದ್ದರು ಶಂಕರಯ್ಯ. ಆದರೆ, ಒಡಕು ಮಾತಿನಲ್ಲಿ ಸತ್ಯವೂ ಇತ್ತು. ತಲೆ ನೆಟ್ಟಗಿರುವಾಗ ಸುಬ್ಬಣ್ಣ ಹೆಂಡತಿಯೆಂದರೆ ಎಷ್ಟು ಜೀವ ಇಟ್ಟುಕೊಂಡಿರುತ್ತಿದ್ದನೊ ಅಮವಾಸ್ಯೆಗೋ ಹುಣ್ಣಿಮೆಗೋ ಅನ್ನುವಂತೆ ಇದ್ದಕ್ಕಿದ್ದಂತೆ ಕೆಲವೊಮ್ಮೆ ತಲೆ ಕೆಟ್ಟರೆ ಎಲ್ಲ ಸುಳ್ಳು ಅನಿಸುವಂತೆ ವರ್ತಿಸುತ್ತಿದ್ದ. ಅಳಿಯನ ಕಾಟ ತಡೆಯಲಾರದೆ ಮಗಳನ್ನು, ಮೊಮ್ಮಕ್ಕಳಾದ ವಿಷ್ಣು-ರಾಜೀವರನ್ನು ಮನೆಗೇ ತಂದಿಟ್ಟುಕೊಂಡಿದ್ದರು. ಅಲ್ಲಿಗೂ ಬಂದು ತೊಂದರೆ ಕೊಡುತ್ತಿದ್ದವನನ್ನು ಮಗಳ, ಮೊಮ್ಮಕ್ಕಳ ಭವಿಷ್ಯದ ದೃಷ್ಠಿಯಿಂದ ನಿಷ್ಕರುಣೆಯಿಂದ ಹೊರದಬ್ಬಿದ್ದರು ಶಂಕರಯ್ಯ. ಮುಂದೆ ಅವನ ಸಾವಿನ ನಂತರ ಮಗಳ ಪಾಲಿನ ಜಮೀನಿನ ಬೆಲೆ ವಸೂಲಿ ಮಾಡಿ ಆ ದುಡ್ಡಲ್ಲಿ ಹನ್ನೆರಡು ಖಂಡಿ ಅಡಿಕೆ ಹಿಡಿಯುವ ಹೊಸ ಜಮೀನು ಖರೀದಿಸಿದ್ದರು. ಜವ್ವಂತಿ ಮಗಳು ಹಾಗು ಪುಟ್ಟ ಮಕ್ಕಳು ಮಾತ್ರ ಅಲ್ಲಿರುವುದು ಕಷ್ಟವೆಂದು ತಮ್ಮ ಹಿರಿ ಮಗನನ್ನು ಅಲ್ಲಿ ಕೂರಿಸಿದ್ದರು. ಮುಂದೆ ಎರಡು ವರ್ಷದಲ್ಲಿ ಅಲ್ಲಿಯ ವರಮಾನ ಬಳಸಿಕೊಂಡು ಮತ್ತೊಂದು ಜಮೀನು ಖರೀದಿಸಿ ಅಲ್ಲಿ ಮತ್ತೊಬ್ಬ ಮಗನನ್ನು ಕೂರಿಸಿದ್ದರು. ತಾವಿದ್ದ ಜಮೀನನ್ನು ತಮ್ಮ ನಂತರ ಮಗಳಿಗೂ ಮೊಮ್ಮಕ್ಕಳಿಗೂ ಸಲ್ಲಬೇಕೆಂದು ಹಕ್ಕು ಪತ್ರವನ್ನೂ ಮಾಡಿದ್ದರು. ಆದರೆ, ಲೋಕದ ಮಾತು ಶಂಕರಯ್ಯನ ವಹಿವಾಟಿನ ಬಗ್ಗೆ ಬೇರೆಯೇ ಇತ್ತು.

“ಆ ಶಂಕರಯ್ಯ ದೊಡ್ಡ ಕುದ್ಕ. ಮಾಣಿಗೆ ಮರ್‍ಲು ಹೇಳಿ ಗೊಂತಿದ್ದೊಂಡೇ ಅಂವ ಇಂದಿರೆಯ ಮದುವೆ ಮಾಡಿದ್ದು. ಈಗ ಅವಂಗೆ ಕೊಪ್ಪರಿಗೆ ಸಿಕ್ಕಿದಾಂಗೇ ಅಲ್ಲದ. ಇಂದಿರೆಯ ಪಾಲಿಂಗೆ ಬಂದ ಪೈಸೆಲ್ಲಿ ಬಂಟ್ವಾಳಲ್ಲಿ ಹನ್ನೆರಡು ಖಂಡಿ ಅಡಕ್ಕೆ ಹಿಡಿವ ಆಸ್ತಿ ಮಾಡಿದ. ಅಲ್ಲಿಯಾಣ ಅಡಕ್ಕೆ ಪೈಸೆ ಕಟ್ಟಿಮಡಗಿ ಮತ್ತೆರಡು ವರ್ಷಲ್ಲಿ ಸುಳ್ಯಲ್ಲಿ ಆಸ್ತಿ ಮಾಡಿದ. ಅಕೇರಿಯಾಣವಂಗೆ(ಕೊನೆಯವನಿಗೆ) ಮುಂಡಾಜೆಲ್ಲಿ ಜಾಗೆ ಮಾಡಿದ. ಇವನ ಗೆಂಡು ಮಕ್ಕೊಗಿಪ್ಪ ಏರ್ಪಾಡಾತನ್ನೆ. ಇಲ್ಲಿಯಾಣ ಮನೆ-ಜಾಗೆ ಅವನ ನಂತ್ರಕ್ಕೆ ಮಗಳ ಮಕ್ಕೊಗೆ ಹೇಳಿ ರೆಕಾರ್ಡು ಮಾಡಿದ. ಅದು ಮೂರೂ ಬಂಗಾರದಾಂಗಿಪ್ಪ ಭೂಮಿ. ಇಲ್ಲೆಂತ ಇದ್ದು? ಇಂದಿರೆಯ ಪೈಸೆ ಇಲ್ಲದ್ರೆ ಈ ಶಂಕರಯ್ಯ ಮೂರುಮೂರು ಆಸ್ತಿ ಮಾಡ್ಲಿದ್ದತ್ತೊ?” ಇಂತಹ ನುಸುಳು ಮಾತುಗಳು ತನ್ನ ಹಿಂದೆ ಸುತ್ತುವುದು ಶಂಕರಯ್ಯನಿಗೂ ಗೊತ್ತಿತ್ತು. ಹಾಗಾಗೇ ಆತ ಆವಾಗಾವಾಗ ಮಗಳು-ಮೊಮ್ಮಕ್ಕಳ ಮುಂದೆಯೇ; ಒಳ್ಳೆದಪ್ಪದರ ನೋಡಿ ಸಹಿಸಲೆಡಿತ್ತಿಲ್ಲೆ ಮನುಷ್ಯರಿಂಗೆ. ಘೆನ ಕುಳವಾರು ಹೇಳಿ ಕೂಸಿನ ಕೊಟ್ಟೆ. ಹೀಂಗೇ ಹೇಳಿ ಗೊಂತಾಗಿಯಪ್ಪಗಳೂ ತಳಿಯದ್ದೇ ಕೂದರಕ್ಕೊ. ಎನ್ನ ಮಗಳ ಪೈಸೆಲ್ಲಿ ಆಸ್ತಿ ಮಾಡಿದ್ದರಲ್ಲಿ ತಪ್ಪೆಂತ ಇದ್ದಡ. ಇಲ್ಲಿಯಾಣ ಜಾಗೆ ಪೂರಾ ಅದಕ್ಕೂ ಅದರ ಮಕ್ಕಗೂ ಅಲ್ಲದ? ಹುಳ್ಕು ಮಾತಾಡುವವು ಸಾವಿರ ಹೇಳ್ತವು. ಅದಕ್ಕೆಲ್ಲ ಕೆಮಿ ಕೊಟ್ಟರೆ ನಾವು ಪಡ್ಚ ಎಂದು ಗೊಣಗುವುದಿತ್ತು. ಶಂಕರಯ್ಯನ ಮಾತಿನಲ್ಲಿ ತಥ್ಯವಿದ್ದರೂ; ಇಂದಿರೆ ತಂದೆಯ ಮಾತಿಗೆ ಎದುರಾಡದಿದ್ದರೂ ಸುಭದ್ರಮ್ಮನೊಳಗೆ ಇದು ಸರಿಯಲ್ಲವೆನ್ನುವ ಹಳವಂಡ ಮಾಯವಾಗಿರಲೇ ಇಲ್ಲ.

ಇಂದಿರೆಯ ವರ್ಷಾಂತ ಕಳೆದ ದಿನ ಸುಭದ್ರಮ್ಮ ತನ್ನ ಮಕ್ಕಳೆಲ್ಲ ಅವರವರ ನೆಲೆಗೆ ಹೊರಟು ನಿಂತಾಗ “ಆನು ಸಾವ ಮೊದಲೇ ಎನ್ನ ಪಾಪದ ಈ ಕೂಸಿನ ಕರಕ್ಕೋ ಹೇಳಿ ದೇವರ ಹತ್ರ ಕೇಳಿಯೊಂಡಿತ್ತಿದ್ದೆ. ಅಂವ ಇಷ್ಟು ಬೇಗ ಹೀಂಗೆ ಮಾಡುಗು ಹೇಳಿ ಮಾತ್ರ ಗ್ರೇಶಿತ್ತಿದ್ದಿಲ್ಲೆ. ಇನ್ನು ಎನಗೆ ಏವಗ ಸಾವು ಬಂದರೂ ಚಿಂತೆ ಇಲ್ಲೆ ಮಕ್ಕಳೇ” ಅಂದರು.

ವಿಷ್ಣುಮೂರ್‍ತಿ ಸೋದರಮಾವಂದಿರ ಬಳಿ, “ಅಜ್ಜಿ ಗಟ್ಟಿ ಇಪ್ಪಗಳೇ ರಾಜೀವನ ಮದುವೆ ಒಂದು ಆದರೊಳ್ಳೆದು.” ಅಂದ.

ಎಲ್ಲರೂ ಅದೇ ಮಾತಿಗೆ ಒತ್ತುಕೊಟ್ಟರು. ರಾಜೀವನಿಗೆ ಭವಿಷ್ಯದ ಕನಸು ಹೆಣೆಯುವುದರಲ್ಲಿ ಇದ್ದ ಆಸಕ್ತಿ ಮದುವೆಯ ಬಗ್ಗೆ ಇರಲಿಲ್ಲ. ತಾನು ಇಲ್ಲಿ ಹೀಗಿರಬೇಕಾದವನಲ್ಲ. ಒಂದಲ್ಲ ಒಂದು ದಿನ ತನಗೊಂದು ಅದ್ಭುತ ಭವಿಷ್ಯವಿದೆ ಎಂದು ದೃಢವಾಗಿ ನಂಬಿಕೊಂಡಿದ್ದವನಿಗೆ ನಿರ್ಧರಿಸಲು ಅಥವಾ ಆ ಭವಿಷ್ಯವನ್ನು ಹುಡುಕಿಕೊಂಡು ಹೋಗಲು ಮಾತ್ರ ಧೈರ್ಯ ಸಾಲುತ್ತಿರಲಿಲ್ಲ. ಸುಭದ್ರಮ್ಮನಿಗೆ ಅದು ಗೊತ್ತಿದ್ದುದರಿಂದಲೇ ಒಂದಷ್ಟು ದಿನ ಅವನ ಪಾಡಿಗೆ ಅವನನ್ನು ಬಿಡುವುದೇ ಸರಿ ಅಂದುಕೊಂಡು ಇಂದಿರೆಗೆ ತಾಳ್ಮೆ ತೆಗೆದುಕೊಳ್ಳಲು ಹೇಳಿದ್ದರು. ಆದರೆ, ಈಗ ಸುಭದ್ರಮ್ಮನಿಗೆ ತರ್ಕ ಹಿಡಿದು ಕೂರುವ art-2ಶಕ್ತಿ ಕುಂದಿ ಹೋಗಿತ್ತು. ಅದೊಂದು ಜವಾಬ್ದಾರಿ ಮುಗಿದು ಹೋಗಲಿ ಅನಿಸಿಬಿಟ್ಟಿದ್ದೇ ರಾಜೀವನನ್ನು ಒಪ್ಪಿಸುವ ಜವಾಬ್ದಾರಿ ಹೊತ್ತರು. ಲಲಿತೆಗೆ ಇನ್ನೂ ಕಂಕಣಬಲ ಕೂಡಿ ಬಂದಿರಲಿಲ್ಲವಾದ್ದರಿಂದ ಸುಭದ್ರಮ್ಮನ ಹಿರಿಯ ಮಗ ಸಹಜವಾಗಿ ಆಕೆಯನ್ನೇ ಪ್ರಸ್ಥಾಪಿಸಿದ. ಎಲ್ಲರ ಸಹಮತ ದೊರೆತಾಗ ಸುಭದ್ರಮ್ಮನಿಗೆ ಬೇಡವೆನ್ನಲು ಕಾರಣ ಸಿಗಲಿಲ್ಲ. ಅಲ್ಲದೆ ಶಂಕರಿಯೂ ಇತ್ತೀಚೆಗೆ ಮದುವೆ ಮಾಡಿರಾರುದೇ ಅವಂಗೆ ರಜಾ ಜವಾಬ್ದಾರಿ ಬಕ್ಕು ಅನ್ನಲಾರಂಭಿಸಿದ್ದಳು. ಮೊದಮೊದಲು ರಾಜೀವ ಸದ್ಯಕ್ಕೆ ಮದುವೆ ಬೇಡ ಅನ್ನುತ್ತಲೇ ಕಳೆದ. ಕೊನೆಗೊಂದು ದಿನ ಸುಭದ್ರಮ್ಮ,

“ನೀನೇ ಆರನ್ನಾರು ನೋಡಿರೆ ಹೇಳು. ಇಲ್ಲದ್ರೆ ನಿನ್ನ ಸೋದರ ಮಾವ ಹೇಳಿದ ಕೂಸಿನ ಮದುವೆ ಆಗು. ಆನು ಇನ್ನೆಷ್ಟು ದಿನ ಇಪ್ಪೆ. ನಿನ್ನದೊಂದು ಮದುವೆ ಹೇಳಿ ಆದರೆ ಮೇಗೆ ಹೋಗಿಯಪ್ಪಗ ಮಗಳಿಂಗೆ ಮೋರೆ ತೋರ್‍ಸಲಾರು ಅಕ್ಕನ್ನೇ” ಅನ್ನುತ್ತ ಆಕಾಶ ನೋಡಿ ಕಣ್ಣೊರೆಸಿಕೊಂಡರು. ಅಜ್ಜಿಯ ನಿರ್ಣಾಯಕ ಮಾತಿಗೆ ಏನುತ್ತರಿಸಬೇಕೊ ತಿಳಿಯಲಿಲ್ಲ. ಆ ವಷಾಂತ್ಯದಲ್ಲೇ ಲಲಿತೆಯೊಂದಿಗೆ ರಾಜೀವನ ಮದುವೆ ನಡೆಯಿತು.

ಲಲಿತೆ ಮನೆಗೆ ಬಂದು ವರ್ಷದ ಮೇಲೆ ತಿಂಗಳುಗಳುರುಳಿದರೂ ರಾಜೀವನ ದಿನಚರಿಯಲ್ಲಿ ಯಾವ ವ್ಯತ್ಯಾಸವೂ ಕಂಡುಬರಲಿಲ್ಲ. ಲಲಿತೆ ಗಂಡನ ಚಟುವಟಿಕೆಯ ಬಗ್ಗೆ ತಗಾದೆ ಎತ್ತದೆ ತನ್ನ ಪಾಡಿಗೆ ಮನೆ ಕೆಲಸ ಮುಗಿಸಿ ದನಕರುಗಳ ಚಾಕರಿ, ಅವುಗಳಿಗೆ ಹುಲ್ಲು-ಸೊಪ್ಪು ತಂದು ಹಾಕುವುದು, ಕಳೆ ತೆಗೆಯುವುದು ಎಂದು ತಾನೇ ಹುಡುಕಿ ಕೆಲಸ ಮಾಡುತ್ತಿದ್ದುದರಿಂದ ಸುಭದ್ರಮ್ಮನಿಗಂತು ನಿರಾಳವೆನಿಸಿತ್ತು. ಆದರೂ ಮದುವೆಯಾದರೂ ರಾಜೀವನಲ್ಲಿ ಎಲ್ಲರು ನಿರೀಕ್ಷಿಸಿದ ಜವಾಬ್ದಾರಿ ಬರದಿರುವುದನ್ನು ಕಂಡು ತಾನು ಈ ಹೆಣ್ಣಿನ ಜೀವಕ್ಕೆ ನೋವು ಕೊಟ್ಟೆನೇನೊ ಅನ್ನುವ ಹಳಹಳಿಕೆ ಸುಭದ್ರಮ್ಮನೊಳಗೆ ಬೇರೂರಿತು. ತುಕ್ರ ಕೆಲಸಕ್ಕೆ ಬರುವುದನ್ನು ಪೂರ್‍ತಿಯಾಗಿ ನಿಲ್ಲಿಸಿದ ಮೇಲೆ ವಿಷ್ಣುಮೂರ್‍ತಿಗೂ ಒಂಟಿ ಭೂತದ ಹಾಗೆ ತೋಟ-ಗದ್ದೆಗಳಲ್ಲಿ ಒಬ್ಬನೇ ದುಡಿಯುವುದು ತಪ್ಪಿ ಹೊಸ ಹುರುಪು ಬಂದಿತ್ತು. ಆದರೆ, ಶಂಕರಿ ರಾಜೀವನನ್ನು ದಾರಿಗೆ ತರುವ ಬುದ್ಧಿವಂತಿಕೆ ಲಲಿತೆಗಿಲ್ಲವೆಂದುಕೊಂಡಳು. ಕೊನೆಗೂ ಆಕೆ ಸಮಯ ಸಾಧಿಸಿ ಲಲಿತೆಯ ಬಳಿ; “ಅಲ್ಲಾ ಲಲಿತೆ. ಆನು ಹೀಂಗೆ ಹೇಳ್ತೆ ಹೇಳಿ ಗ್ರೇಶೆಡ. ರಾಜೀವ ಇನ್ನೂದೆ ಹೀಂಗೆ ತಿರಿಗಿಯೊಂಡಿದ್ರೆ ಹೇಂಗೆ?” ಅಂದಳು.

“ಆನು ಹೇಳಿರೆ ಕೆಮಿ ಕೊಡ್ತವೇ ಇಲ್ಲೆ ಅಕ್ಕ. ಅಜ್ಜಿಯೋ ನೀನೋ ಹೇಳೇಕಷ್ಟೆ. ಅವಕ್ಕೆ ಎನ್ನತ್ರೆ ಮಾತಾಡ್ಲೆ ದಣೀಯ ಪುರುಸೊತ್ತೂ ಇಲ್ಲೆನ್ನೆ. ಇಷ್ಟಕ್ಕೂ ಅವಕ್ಕೆ ಹೆಂಡತಿ ಆನೊ ಅಲ್ಲ ಪೆನ್ನು-ಪುಸ್ತಕವೊ ಹೇಳಿಯೂ ಒಂದೊಂದರಿ ಎನಗೆ ಸಂಶಯ ಬತ್ತು. ಏವಗ ನೋಡಿರೂ ಈ ಲೋಕಲ್ಲಿದ್ಹಾಂಗೆ ಇರ್‍ತವಿಲ್ಲೆ.” ಲಲಿತೆ ಮಾತು ಮುಗಿಸುವ ಮೊದಲೇ ಶಂಕರಿ ಸಣ್ಣ ಧ್ವನಿಯಲ್ಲಿ;

“ಹೇಳೆಕಾದ ಸಮಯಲ್ಲಿ ಹೇಳೇಕು ಲಲಿತೆ. ಅಂವ ಕಸ್ತಲಪ್ಪಗ ಮನೆಗೆ ಬಪ್ಪ ಹೊತ್ತಿಂಗೆ ನೀನು ತಲೆ ಬಾಚಿ ಹೂಗು ಸೂಡಿ ರಜ ಚೆಂದಕೆ ಇಲ್ಲದ್ರೆ ಅವಂಗೆ ನಿನ್ನ ಮೋರೆ ನೊಡೆಕು ಹೇಳಿ ಕಾಂಗೊ. ಏವಗ ನೋಡಿರೂ ನೀನು ಸೂಡಿ ಹಾಕ್ಯೊಂಡು ಅಜ್ಜಿಯಕ್ಕಳ ಹಾಂಗೆ ಇರ್‍ತೆ. ನಾಳೆಂದ ಆನು ಹೇಳಿದಾಂಗೆ ಮಾಡು. ಅಂವ ನಿನ್ನ ಮಾತು ಕೇಳದ್ದೆ ಎಂತ ಮಾಡ್ತ!” ಅಂದಳು. ಲಲಿತೆಗೆ ಅವಮಾನವೆನಿಸಿತು.

“ಆನು ಬಂದ ಮೇಲಲ್ಲನ್ನೆ ಇವು ಹೀಂಗೆ. ಆನಿಪ್ಪದು ಹೀಂಗೇ. ಕೋಲ(ವಯ್ಯಾರ) ಮಾಡ್ಲೆಲ್ಲ ಎನ್ನಂದೆಡಿಯ.”

“ನೀನು ಹೇಂಗೆ ಬೇಕಾರು ಇರು. ಇನ್ನು ಮುಂದೆ ನಿನ್ನ ಗೆಂಡನತ್ರ ಮನೆ ಖರ್ಚಿಂಗೆ ತಿಂಗಳಿಂಗೆ ಮೂರು ಸಾವಿರ ಮಡಗಲೆ ಹೇಳು. ಇಲ್ಲಿ ಗೆಯ್ವಲೊಬ್ಬ. ತಿರುಗಲೊಬ್ಬ” ಇದ್ದಕ್ಕಿದ್ದಂತೆ ಧ್ವನಿ ಏರಿಸಿದಳು ಶಂಕರಿ.

“ಆನು ಇನ್ನೂ ಸತ್ತಿದಿಲ್ಲೆ. ಆರು ಎಷ್ಟು ಗೆಯ್ತವು ಹೇಳಿ ನೋಡ್ಲೆ ಆನಿದ್ದೆ ಇಲ್ಲಿ.” ಸುಭದ್ರಮ್ಮನ ಸ್ವರ ಕೇಳುತ್ತಿದ್ದಂತೆ ಇಬ್ಬರ ಧ್ವನಿಯೂ ಅಡಗಿತು.

ನಸುಕು ಹರಿದು ಬೆಳಕು ಹರಡಿಕೊಳ್ಳುತ್ತಿದ್ದ ಹೊತ್ತು. ಮಳೆಗಾಲ ಸ್ವಲ್ಪಸ್ವಲ್ಪವೇ ದೂರಾಗುತ್ತಿದ್ದುರಿಂದ ಉಲ್ಲಾಸಕರ ಚುಮುಚುಮು ಬೆಳಗು. ವಿಷ್ಣುಮೂರ್‍ತಿ ಹಾಲು ಕರೆದು ಕೊಟ್ಟಿಗೆಯ ಸೆಗಣಿ ಬಾಚಿ ಚಾವಡಿಗೆ ಬಂದವನು ತಲೆಗೆ ಮುಂಡಾಸು ಬಿಗಿಯುತ್ತ ಚಾವಡಿಯ ಮೂಲೆಯಲ್ಲಿ ಮರದ ಹಲಗೆಯಿಂದ ವಿಭಾಗಿಸಿದ ರಾಜೀವನ ಖಾಸಗಿ ಕೋಣೆಯತ್ತ ಇಣುಕಿದ. ರಾಜೀವ ಬರವಣಿಗೆಯಲ್ಲಿ ತಲ್ಲೀನನಾದಂತಿದ್ದ. ಏನೋ ಹೇಳಬೇಕೆಂದುಕೊಂಡವನು ಮಾತಿಲ್ಲದೆ ಲಲಿತೆ ತಂದ ಚಹ ಕುಡಿದು ಕತ್ತಿ ಹಿಡಿದು ಅಂಗಳಕ್ಕಿಳಿದ. ಲಲಿತೆ ರಾಜೀವನಿಗೆ ಚಹ ಕೊಡುತ್ತ “ತೋಟಲ್ಲಿ ಮೊಣಪ್ಪಿನೆತ್ತರಕ್ಕೆ ಹುಲ್ಲು ಬೆಳದ್ದು. ರಜ್ಜ ಭಾವಂಗೆ ಸಕಾಯ ಮಾಡ್ಲಾವುತ್ತಿತ್ತು.” ಅಂದಳು.

“ನೋಡು. ಈಗ ಹರಟೆ ಮಾಡೆಡ. ಎನಗೆ ಈಗ ಏವದಕ್ಕು ಪುರುಸೊತ್ತಿಲ್ಲೆ. ಕುವೆಂಪು ಸ್ಮರಣಾರ್ಥ ರಾಜ್ಯ ಮಟ್ಟದ ಏಕಾಂಕ ನಾಟಕ ಸ್ಪರ್ಧೆಗೆ ಈ ವರ್ಷ ಎಂಗಳುದೇ ಹೋಪಲಿದ್ದು. ಅದಕ್ಕಿಪ್ಪದು ಇನ್ನು ಮೂರ್‍ನಾಲ್ಕು ತಿಂಗಳಷ್ಟೆ. ಚಾಯ ಅಲ್ಲಿ ಮಡಗಿಕ್ಕಿ ನೀನು ನಿನ್ನ ಕೆಲಸ ಎಂತ ಹೇಳಿ ನೋಡು.” ಪೆನ್ನು ಕೆಳಗಿಡದೆಯೇ ಹೇಳಿ ಮತ್ತೆ ಬರವಣಿಗೆ ಮುಂದುವರಿಸಿದ.

ಲಲಿತೆ ದನಗಳಿಗೆ ಅಕ್ಕಚ್ಚು ಕೊಟ್ಟು ಅವುಗಳನ್ನು ಮೇವಿಗೆ ಬಯಲಿಗೆಬ್ಬಲು ಹೋದಳು. ಸ್ವಲ್ಪ ಹೊತ್ತಿನಲ್ಲಿ ಚಾವಡಿ ಗುಡಿಸಲು ಹಿಡಿಸೂಡಿ ಹಿಡಿದು ಬಂದ ವಿಷ್ಣುಮೂರ್‍ತಿಯ ಹೆಂಡತಿ ಶಂಕರಿ ಸೀರೆಯನ್ನು ಮೊಣಕಾಲವರೆಗೆ ಮಡಿಸಿ ಸೊಂಟಕ್ಕೆ ಸಿಕ್ಕಿಸುತ್ತ ಕೋಣೆಯಲ್ಲಿದ್ದ ರಾಜೀವನಿಗೆ ಕೇಳಿಸುವಂತೆ ಸುಭದ್ರಮ್ಮನ ಹತ್ತಿರ;

“ಜಾಲಿಂದ ಡಂಕಿ ಬಿದ್ದರೆ ತೋಟಕ್ಕೇ. ಇಷ್ಟು ಬಾಗಿಲಿಲ್ಲಿ ತೋಟ ಇದ್ದರೂ ಒಂದಾರಿ ಬಯಲಿಂಗಿಳಿಯೇಕು ಹೇಳಿ ನಿಂಗಳ ಸಣ್ಣ ಪುಳ್ಳಿಗೆ ತೋರ್‍ತಿಲ್ಲೆನ್ನೆ. ಗದ್ದೆನೆಟ್ಟಿ ಹೇಂಗಾಯ್ದು ಹೇಳಿಯಾರು ನೋಡಿದ್ದನ? ಮನೆಲ್ಲಿಪ್ಪಾಗಾರೂ ಅವನ ಮನಸಿಂಗೆ ರಜ್ಜಾರುದೇ (ಸ್ವಲ್ಪವಾದರೂ) ಅಣ್ಣ್ಣಂಗೆ ಸಕಾಯ ಮಾಡೇಕು ಹೇಳಿ ಕಾಣೆಡ್ದ. ಅದು ಎಡಿಯದ್ರೆ ಮನೆ ಕರ್ಚಿಂಗೆ ಹೇಳಿ ರಜ್ಜಾರು ಕೊಡೆಕು. ಅದೂ ಇಲ್ಲೆ ಇದೂ ಇಲ್ಲೆ ಹೇಳಿ ಮಾಡಿರೆ ಈಗ ಎಲ್ಲ ಸಾಮಾನಿಂಗೂ ಕ್ರಯ ಏರಿದ್ದು. ಅವರವರದ್ದು ಅವವೇ ನೋಡಿಯೊಂಬದು ಹೇಳಿ ಆದ್ರೆ ಬೆಶಿ ಗೊಂತಕ್ಕು. ಜವಾಬ್ದಾರಿ ಇಲ್ಲದ್ರೆ ಹೀಂಗೇ.”

ಅವಳ ಧ್ವನಿಯಲ್ಲಿದ್ದ ವ್ಯಂಗ್ಯದಿಂದ ಅವಮಾನವೆನಿಸಿ ದಡಾರನೆ ಕುರ್ಚಿ ದೂಡಿ ಎದ್ದವನು, “ಹತ್ತನೆ ಕ್ಲಾಸು ಪಾಸು ಮಾಡ್ಲೆಡಿಯದ್ದಕ್ಕಲ್ದೊ ಅಂವ ಮಣ್ಣು ಹೊರ್‍ಲೆ ನಿಂದದು. ಅಜ್ಜ ಇತ್ತಿದ್ದರೆ ಗೊಂತಾವುತ್ತಿತ್ತು ಎನ್ನ ಬೆಲೆ ಎಂತದು ಹೇಳಿ” ಅನ್ನುತ್ತ ಅಂಗಳದ ತಡಮೆ ದಾಟಿ ತೋಟದತ್ತ ದಡದಡ ಹೆಜ್ಜೆ ಹಾಕಿದ. ಮನೆಯಂಗಳದಿಂದ ಇಳಿಯುವುದೇ ಗದ್ದೆ ಬಯಲಿಗೆ. ಗದ್ದೆ ಹುಣಿಯಾಚೆಗೇ ತೋಟ.

“ಈಗ ಬಿ.ಎ. ಪಾಸು ಮಾಡಿ ನೀನು ಗುಡ್ಡೆ ಹಾಕಿದ್ದೆಂತರ? ನೇರ್ಪಕ್ಕೆ ಒಂದು ಉದ್ಯೋಗ ಇಲ್ಲೆ. ನಿನ್ನ ಸಂಬಳ ನಿನ್ನ ತಿರುಗಾಟಕ್ಕಾರು ಸಾಕಾವುತ್ತ? ನಾಟಕ, ಪದ್ಯ ಬರದು ಎಷ್ಟು ಹೊಟ್ಟೆ ತುಂಬ್ಸಲೆಡಿಗು” ಹಿಂದೆಯೇ ಶಂಕರಿಯ ಧ್ವನಿ ಅಪ್ಪಳಿಸಿತು.

ಆನು ಸಾಧಿಸಿದ್ದೆಂತರ ಹೇಳಿ ಈಗ ಅಜ್ಜ ಇತ್ತಿದ್ದರೆ ಹೇಳ್ತಿತ್ತವು.. ಮನಸಿನಲ್ಲೇ ಗೊಣಗಿಕೊಳ್ಳುತ್ತ ನಡೆದ ರಾಜೀವ.

ಶಂಕರಯ್ಯ ಎಷ್ಟೋ ಬಾರಿ ಮಗಳು ಇಂದಿರೆಯ ಬಳಿ, “ನಿನ್ನ ದೊಡ್ಡ ಮಗ ಮೂರ್‍ತಿಗೆ ನಿನ್ನ ಅಬ್ಬೆದೇ ಅಭ್ಯಾಸ. ತಲೆಲ್ಲಿ ಎಂತ ಇಲ್ಲೆ. ಎಷ್ಟೊತ್ತಿಂಗೂ ಕೆಲಸ ಒಂದು ಮಾಡಿಯೊಂಡಿಕ್ಕು. ನಿನ್ನ ಅಬ್ಬೆ ಕಥೆಗೆ ಕೆಮಿ ಕೊಡುಗು. ಕೇಳಿಕ್ಕಿ ಏನಾರು ಪೆರಟ್ಟು ಹೇಳುಗು. ಇವಂಗೆ ಅದುದೇ ಇಲ್ಲೆ. ಇಂವ ಕಥೆಗೂ ಕೆಮಿ ಕೊಡ. ಇದೆಲ್ಲ ಒತ್ತಾಯಂದ ಬತ್ತಿಲ್ಲೆ; ಬಪ್ಪದೂ ಅಲ್ಲ್ಲ. ಜನ್ಮ ವಾಸನೆ ಬೇಕು. ರಾಜೀವನ ನೋಡು. ಅವಂಗೆ ತೇಟ್ ಎನ್ನದೇ ವಜೆ (ಹೋಲಿಕೆ) ಬಯಿಂದು.” woman-abstractಅನ್ನುತ್ತ ಹತ್ತಿರ ಕುಳಿತಿರುತ್ತಿದ್ದ ರಾಜೀವನ ಬೆನ್ನು ತಟ್ಟುತ್ತಿದ್ದರು.

“ಇರೆಕಾತು ಈಗ ಅಜ್ಜ. ಆಗ ಗೊಂತಾವುತ್ತಿತ್ತು. ಇವಕ್ಕೆಲ್ಲ.” ತನ್ನೊಳಗೇ ಮತ್ತೊಮ್ಮೆ ಗೊಣಗಿಕೊಂಡ.

ನಡೆಯುತ್ತಿದ್ದ ಕಾಲಿಗೆ ಕಟ್ಟಪ್ಪುಣಿಯಲ್ಲಿದ್ದ ಕಾಡುಬಳ್ಳಿಯೊಂದು ತೊಡರಿತು. ಆಗಲೇ ಅವನಿಗೆ ತಾನು ಕತ್ತಿ ತೆಗೆದುಕೊಳ್ಳದೆ ಬಂದಿದ್ದು ನೆನಪಾಗಿದ್ದು. ಸುಭದ್ರಮ್ಮ ಯಾವಾಗಲಾದರೊಮ್ಮೆ ಊಟಕ್ಕೆ ಬಾಳೆಲೆ ಕೊಯ್ದು ತರಲು ಹೇಳುವಾಗಲೂ ‘ಕತ್ತಿ ತೆಕ್ಕೊಂಡಿದೆಯೋ ಮಾಣಿ. ತೋಟಕ್ಕಿಳಿದಿಕ್ಕಿ ಬಾಳೆಲೆ ಹೇಳಿ ಕೊಕ್ಕೊ ಎಲೆ ಕೊಯ್ದಿಕ್ಕೆಡ ಇನ್ನು’ ಎಂದು ಹಾಸ್ಯ ಮಾಡಿಯೇ ಕಳುಹಿಸುತ್ತಿದ್ದುದು. ನೆಟ್ಟಿ ಮುಗಿದ ಗದ್ದೆಯಲ್ಲಿ ನಿಂತ ನೀರಿನ ಎಳೆ ಪೈರುಗಳೆಡೆಯಲ್ಲಿ ತಲೆ ಕೆಳಗಾಗಿ ಕಂಡ ಬಿಂಬ ತನ್ನನ್ನ ಅಣಕಿಸಿದಂತನಿಸಿತು. ಕತ್ತಿ ಇಲ್ಲದೆ ತೋಟಕ್ಕಿಳಿದು ಮಾಡುವುದೇನು ಅಂದುಕೊಂಡು ಹಿಂತಿರುಗಲಿದ್ದ. ಅಷ್ಟರಲ್ಲಿ ನಾಗಬನದೊಳಗಿಂದ ತರಗೆಲೆಗಳ ಮೇಲೆ ಭಾರವಾದ ಪ್ರಾಣಿಯೊಂದು ಹೊರಳುತ್ತಿರುವಂತೆ ಚರಪರ ಸದ್ದು. ಕಾಡುಹಂದಿಯಿರಬಹುದೆನಿಸಿ ಭಯವಾದರೂ ಕುತೂಹಲದಿಂದ ಬೆಕ್ಕಿನ ಹೆಜ್ಜೆ ಇಟ್ಟು ಇಣಿಕಿದವನ ಕಣ್ಣಿಗೆ ತಳಿಕೆ ಹಾಕಿದ ಹಾವುಗಳಂತೆ ಮಲಗಿದ್ದ ಜೀವಗಳು ಕಂಡಿದ್ದೇ ಮರಗಟ್ಟಿದ. ವ್ಯಕ್ತಿಗಳ ಗುರುತು ಹತ್ತುತ್ತಿದ್ದಂತೆ ದಿಗ್ಮೂಢನಾದವನು, ಮರುಕ್ಷಣದಲ್ಲೇ;

“ಹಡಬ್ಬೆಗಳೇ, ಇಂತಾ ಅನಾಚಾರವಾ ನಿಂಗಳದ್ದು? ಎಷ್ಟು ದಿನಂದ ನಡೆತ್ತಾ ಇದ್ದು ಇದು?” ಅನ್ನುತ್ತ ಹಾರಿ ಹೋಗಿ ಅವರೆದುರು ನಿಂತವನು ಲಲಿತೆಯ ಕೂದಲ ಗಂಟಿಗೆ ಕೈ ಹಾಕಿದ. ಆಘಾತ, ಕೋಪದಿಂದ ಅವನ ಶರೀರವಿಡೀ ಕಂಪಿಸುತ್ತಿತ್ತು. ಮುಂದೇನು ಮಾಡುತ್ತಿದ್ದನೊ. ಆದರೆ, ರಾಜೀವನ ಮುಷ್ಟಿಯಿಂದ ಲಲಿತೆಯನ್ನು ಬಿಡಿಸಲೆಂಬಂತೆ ವಿಷ್ಣುವಿನ ಕೈ ಅನಿರೀಕ್ಷಿತವಾಗಿ ರಾಜೀವನ ಮುಂಗೈಯನ್ನು ಹಿಡಿಯಿತು. ವಿಷ್ಣು ಹೀಗೆ ತಿರುಗಿನಿಲ್ಲಬಹುದೆಂಬ ಊಹೆಯೂ ಇಲ್ಲದ ರಾಜೀವ ವಿವೇಚನೆ ಕಳೆದುಕೊಂಡು ವಿಷ್ಣುವಿನ ಕತ್ತಿನ ಪಟ್ಟಿ ಬಿಗಿಯಾಗಿ ಹಿಡಿದು ಅಬ್ಬರಿಸುತ್ತ ಮೇಲೆ ಬಿದ್ದ. ಬಿಗಿತ ಜಾಸ್ತಿಯಾಗಿ ಗಂಟಲು ಗೊರಗುಟ್ಟಿ ವಿಷ್ಣು ರಾಜೀವನ ಕೈ ಜಗ್ಗಲು ಪ್ರಯತ್ನಿಸಿದಾಗ ಗಾಬರಿ ಬಿದ್ದ ಲಲಿತೆ ತಾನೂ ಹಿಂದಿನಿಂದ ರಾಜೀವನ ಮುಷ್ಟಿ ಬಿಡಿಸಲು ಪ್ರಯತ್ನಿಸಿದಳು. ಅಂಗಳದಲ್ಲಿ ಕಸ ಗುಡಿಸುತ್ತಿದ್ದ ಶಂಕರಿ ರಾಜೀವನ ಏರುಧ್ವನಿಯ ಬೊಬ್ಬೆ ಕೇಳಿ ಏನೋ ಗಲಾಟೆ ನಡೆಯುತ್ತಿದೆ ಅನಿಸಿ ಅಲ್ಲಿಂದಲೇ, “ತೋಟಕ್ಕೆ ದಾಂಟುವ ಕಟ್ಟಪ್ಪುಣಿ ಹತ್ರ ಬೊಬ್ಬೆ ಕೇಳ್ತು ಅಜ್ಜಿ.” ಎಂದು ಕೂಗಿ ಹೇಳಿ ಗುಡಿಸುತ್ತಿದ್ದ ಹಿಡಿಸೂಡಿ ಹಿಡಿದುಕೊಂಡೇ ಓಡಿದಳು. ಅಸ್ತವ್ಯಸ್ತವಾಗಿದ್ದ ಲಲಿತೆ-ವಿಷ್ಣುಮೂರ್‍ತ್ತಿಯರನ್ನು ನೋಡಿದ್ದೇ ಶಂಕರಿ ಕೈಯಲ್ಲಿದ್ದ ಹಿಡಿಸೂಡಿಯಿಂದ ಲಲಿತೆಗೆ ಹೊಡೆಯಲು ಹೋದಳು. ವಿಷ್ಣುಮೂರ್‍ತಿ ಆಕೆಯ ಕೈಯಿಂದ ಹಿಡಿಸೂಡಿ ಕಿತ್ತೊಗೆದು ಒಮ್ಮೆ ಅವರಿಬ್ಬರನ್ನೂ ದಿಟ್ಟಿಸಿ ಲಲಿತೆಯ ಕೈ ಹಿಡಿದು ದಾರಿಗಡ್ಡ ನಿಂತಿದ್ದ ರಾಜೀವನನ್ನು ಬದಿಗೆ ಸರಿಸಿ ನಡೆದುಬಿಟ್ಟಿದ್ದ. ರಾಜೀವ ಅವರು ಹೋಗುತ್ತಿದ್ದ ದಿಕ್ಕಿಗೆ ಅವರ ಬೆನ್ನಿಗೇ ಅನ್ನುವಂತೆ ಕ್ಯಾಕರಿಸಿ ತುಪ್ಪಿ “ಮರ್ಯಾದೆಗೆಟ್ಟ ನಾಯಿಗೊ” ಅನ್ನುತ್ತ ಕಾಲಪ್ಪಳಿಸಿ ಮನೆಯತ್ತ ನಡೆದ. ಕೋಪದಿಂದ ದಡದಡ ಬಂದ ರಾಜೀವನ ಬೈಗುಳದ ಮಾತು, ಅಳುತ್ತ ಬಂದ ಶಂಕರಿಯ ಶಾಪದ ಮಾತು ಅರ್ಥವಾದಾಗ ಸುಭದ್ರಮ್ಮ ಕುಸಿದು ಕುಳಿತರು. ಸ್ವಲ್ಪ ಹೊತ್ತಿನಲ್ಲೇ ಪ್ಯಾಂಟು ಏರಿಸಿ ಹೆಗಲಿಗೊಂದು ಚೀಲ ಹಾಕಿ ಹೊರ ಬಂದ ರಾಜೀವನನ್ನು ಕಂಡದ್ದೇ ಸುಭದ್ರಮ್ಮ ಅವನನ್ನು ಅಪ್ಪಿ ಹಿಡಿದು,

“ಎನ್ನ ಬಿಟ್ಟಿಕ್ಕಿ ನೀನು ಈಗ ಹೋದರೆ ನಿನ್ನ ಅಬ್ಬೆ ಮುಂಗಿದಲ್ಲಿಗೇ (ಮುಳುಗಿದಲ್ಲಿಗೇ) ಹೋಗಿ ಆನುದೇ ಮುಂಗೆಕಷ್ಟೆ ಒಪ್ಪಕುಞ್ಞಿ” ಅನ್ನುತ್ತ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ದೊಡ್ಡವರ ವಿಚಿತ್ರ ನಡವಳಿಕೆಯಿಂದ ಕಂಗಾಲಾದ ಪುಟ್ಟ ಮೋಹನ ತಾನೂ ಚಿಕ್ಕಪ್ಪನ ಕಾಲುಗಳನ್ನ ತಬ್ಬಿಕೊಂಡು ಜೋರಾಗಿ ಅಳಲಾರಂಭಿಸಿದ. ಮನೆಯಲ್ಲಿ ನಡೆದ ಯಾವ ದುರಂತದಲ್ಲು ಅಜ್ಜಿ ಸ್ವರವೆತ್ತಿ ಹೀಗೆ ವಿಕಾರವಾಗಿ ಅತ್ತಿದ್ದನ್ನು ಕಂಡಿರಲಿಲ್ಲ ರಾಜೀವ. ನೀನೇ ರಕ್ಷಕನೆಂಬಂತೆ ಸುತ್ತುವರಿದ ಎರಡು ಜೀವಗಳನ್ನು ತಬ್ಬಿಕೊಂಡು ಮಣ್ಣಚಿಟ್ಟೆಯಲ್ಲಿ ಕುಸಿದು ಕುಳಿತ ರಾಜೀವ, ಕಾಲುಗಳನ್ನು ತಬ್ಬಿ ಅಳುತ್ತಿದ್ದ ಮೋಹನನನ್ನು ಶೂನ್ಯ ಮನಸ್ಥಿತಿಯಲ್ಲೆ ಕೈಗೆತ್ತಿಕೊಂಡು ಸಮಾಧಾನ ಪಡಿಸಲೆತ್ತನಿಸಿದ. ಮಗು ಅವನ ಕುತ್ತಿಗೆ ತಬ್ಬಿ ಬಿಕ್ಕಳಿಸಲಾರಂಭಿಸಿತು. ಅವನಿಗೂ ಅಸಹಾಯಕತೆಯಿಂದ ದುಃಖ ಉಕ್ಕಿ ಬರುತ್ತಿತ್ತು. ಸ್ವಲ್ಪ ಹೊತ್ತಿನಲ್ಲೇ ಅವರನ್ನು ಎಚ್ಚರಿಸಿದ್ದು ಬೊಬ್ಬೆ ಹಾಕುತ್ತ ಬಂದ ಚೀಂಕ್ರನ ಧ್ವನಿ. ಆತ ಎದೆ ನಡುಗಿಸುವ ಸಾವಿನ ಸುದ್ದಿ ಹೊತ್ತು ಬಂದಿದ್ದ.

“ರಾಜಣ್ಣೇರೆ, ಶೆಟ್ರ ಗುಡ್ಡೆಡ್ ಮಲ್ಲ ಕಲ್ಪಣೆ (ಕಲ್ಲಿನ ಕ್ವಾರೆ)ದ ಕಿರೆಟ್ ರಡ್ಡು ಪುಣ ತಿಕ್ದ್ಂಡ್. ಅವು ವಿಷ್ಣು ಅಣ್ಣೆರ್‌ನಲಾ. ಲಲಿತಕ್ಕೆನಲಾ. ಎನ್ನ ಮಗೆ ಮೀಂದಿಯರೆ ಕಲ್ಪಣೆಗ್ ಪೋತುನಾಯೆ ಬೊಬ್ಬೆ ಪಾಡೊಂದು ಬತ್ತೆ. ಯಂಕ್ಲ್ ಅಪಗನೆ ಪೋದು ನೀರ್‌ಡ್ದ್ ಒಯ್ತು ಕೊಣತ್ತ್ಂಡಲಾ ಜೀವ ಪೋತುಂಡು. (ರಾಜಣ್ಣ, ಶೆಟ್ರ ಗುಡ್ಡೆಯ ದೊಡ್ಡ ಕಲ್ಪಣೆಯ ಕೆರೆಯಲ್ಲಿ ಎರಡು ಹೆಣ ಸಿಕ್ಕಿದೆ. ವಿಷ್ಣು ಅಣ್ಣಂದು, ಲಲಿತಕ್ಕಂದು. ನನ್ನ ಮಗ ಈಜಲು ಕಲ್ಪಣೆಗೆ ಹೋದವ ಬೊಬ್ಬೆ ಹಾಕುತ್ತ ಬಂದ. ನಾವು ಕೂಡಲೆ ಹೋಗಿ ನೀರಿನಿಂದ ಎಳೆದು ತಂದರೂ ಜೀವ ಹೋಗಿದೆ)” ಚೀಂಕ್ರ ಏದುಸಿರು ಬಿಡುತ್ತ ಹೇಳಿ ಮುಗಿಸಿದ.

ಮರುಕ್ಷಣದಲ್ಲೇ ಜಾತ್ರೆಯಲ್ಲಿ ಜನಜಂಗುಳಿ ಚಲಿಸಿದತ್ತ ಸಾಗುವುದು ಅನ್ನುವಂತಾಯ್ತು ರಾಜೀವನ ಸ್ಥಿತಿ. ಘಟನೆ ನಡೆದು ಹೆಣಗಳು ಪೋಸ್ಟ್‌ಮಾರ್ಟಮ್ ಆಗಿ ಬೂದಿಯಾದರೂ ಎರಡು ಮೂರು ದಿನ ಊರ ಜನ ಕಲ್ಪಣೆಯ ಹತ್ತಿರ, ಬನದ ಹತ್ತಿರ ಆಗೊಮ್ಮೆ ಈಗೊಮ್ಮೆ ಗುಂಪು ಸೇರಿ ಇನ್ನೂ ಅಲ್ಲೇನೋ ಇದೆ ಎಂಬಂತೆ ಗುಸುಗುಡುವುದು, ಸಾಂತ್ವನ ಹೇಳಲು ಬಂದು ಅನುಕಂಪದಿಂದ, ವ್ಯಂಗ್ಯದಿಂದ ನೋಡುವುದು, ಮುಂದೆ ಮಾಡಬಹುದಾದ್ದರ ಬಗ್ಗೆ ಸಲಹೆ ಕೊಡುವುದು ನಡೆದೇ ಇತ್ತು. ಲಲಿತೆಯ ತವರಿನಿಂದ ಯಾರೂ ಬರಲೇ ಇಲ್ಲ. ಶಂಕರಿಯ ತಂದೆ-ತಾಯಿ ಬಂದವರು ನಡೆದದ್ದೆನ್ನೆಲ್ಲ ಮತ್ತೆ ತುಣುಕೂ ಬಿಡದಂತೆ ಕೆದಕಿ ಕೇಳಿ ಮಗಳ ಸ್ಥಿತಿ ನೆನೆದು ದುಃಖಿಸುತ್ತ; ಸತ್ತವರಿಗೆ ಹಿಡಿಶಾಪ ಹಾಕುತ್ತಿದ್ದರೆ ಸುಭದ್ರಮ್ಮ ದಿಕ್ಕೆಟ್ಟು ಕುಳಿತಿದ್ದರು.

ಶಂಕರಯ್ಯ ಅಚಾನಕ್ ನೆಲ ಕಚ್ಚಿದಾಗ ವಿಷ್ಣುಮೂರ್‍ತಿ ಬದುಕಿನ ಮಾಡು ಕುಸಿಯದಂತೆ ಸುಭದ್ರಮ್ಮನ ಹೆಗಲಿಗೆ ಹೆಗಲು ಜೋಡಿಸಿದ್ದ. ಮುಂದೆ ಲಲಿತೆ ಕೊಟ್ಟಿಗೆ ಕೆಲಸಕ್ಕೆ, ಹುಲ್ಲು-ಸೊಪ್ಪಿಗೆ ಕತ್ತಿ ಹಿಡಿದು ಹೊರಟಾಗ ಈಕೆ ಮೈ ಮುರಿದು ಗೆಯ್ಯುವ ಜೀವ ಅನ್ನುವುದು ಅರ್ಥವಾಗಿ ನೆಮ್ಮದಿಯಿಂದ ಉಸಿರಾಡಿದ್ದರು. ಬೇಸಾಯದ ದಿನಗಳಲ್ಲಿ ಗದ್ದೆಗಿಳಿಯಲೂ ಲಲಿತೆ ಹಿಂಜರಿಯುತ್ತಿರಲಿಲ್ಲ. ಶಂಕರಿ ರಾಜೀವನ ವಿಚಾರದಲ್ಲಿ ಉಸಿರುಗಟ್ಟಿಸಿದರೆ ಸುಭದ್ರಮ್ಮ ಲಲಿತೆಯತ್ತ The_Totoal_Defeat_abstract_human_bodyಬೆರಳು ತೋರಿಸಿ ಆಕೆಯ ಬಾಯಿ ಮುಚ್ಚಿಸುತ್ತಿದ್ದರು. ಆದರೆ, ಈಗ ಯಾರು ಯಾರತ್ತ ಬೆರಳು ತೋರಿಸುವುದು..? ಯಾರ ಕಣ್ಣುಗಳು ಯಾರನ್ನು ತಿವಿಯಬೇಕು..? ಸುಭದ್ರಮ್ಮನ ಬಾಗಿದ ಬೆನ್ನಿಗೆ ತಿಂಗಳೊಳಗೆ ಮತ್ತಷ್ಟು ಮುದಿತನವೇ ಆವರಿಸಿಬಿಟ್ಟಿತು.

ಮೋಹನನ ತೊದಲು ಧ್ವನಿಯ ಹೊರತಾಗಿ ಆ ಮನೆಯಲ್ಲಿ ಹಗಲಿರುಳು ಆವರಿಸಿದ್ದ ಸ್ಮಶಾನ ಸ್ಥಬ್ದತೆ ಮಾಯವಾಗಿದ್ದು ಕೃಷ್ಣ ಶಾಸ್ತ್ರಿಗಳು ಅಲ್ಲಿ ಇಲ್ಲಿ ಪೊಡಿ ಪೌರೋಹಿತ್ಯಕ್ಕೆ ಹೋಗುತ್ತಿದ್ದ ತಮ್ಮ ಸಣ್ಣ ಮಗ ಗೋಪಾಲನನ್ನು ಕರೆದುಕೊಂಡು ಬಂದಾಗಲೆ. ಬಂದವರೇ ಹೆಚ್ಚಿನ ಪೀಠಿಕೆ ಇಲ್ಲದೆ ಆಸ್ತಿಯ ಪಾಲು ಪಂಚಾಯ್ತಿಕೆ ಮಾತು ತೆಗೆದರು. ರಾಜೀವ ತೀವ್ರ ನಿರಾಸಕ್ತಿಯಿಂದ,

“ನಿಂಗೊಗೆ ಹೇಂಗೆ ಸರಿ ಹೇಳಿ ತೋರ್‍ತೊ ಹಾಂಗೆ ಮಾಡಿ. ಎನಗೆಂತ ಬೇಡ” ಅಂದ.

ಶಾಸ್ತ್ರಿಗಳು ಅವನ ಹೆಗಲ ಮೇಲೆ ಕೈ ಇಟ್ಟು “ನಿನ್ನ ಬೇನೆ ಎಂಗೊಗೆ ಅರ್ಥ ಆವುತ್ತು ರಾಜೀವ. ನೀನು ಬೇಡ ಹೇಳಿ ಹೇಳಿರೂ ಅದು ನ್ಯಾಯ ಅಲ್ಲ. ನಿನ್ನ ಅಜ್ಜಿಗೂ ಪ್ರಾಯ ಎಂಭತ್ತಾತು. ಅವಿಪ್ಪಲ್ಲಿವರೆಗೆ ಈ ಮನೆ-ಜಾಗೆ ಮಾರ್‍ಲೆಡಿಯ. ಮುಂದೆ ಎಂತ ಮಾಡುದು ಹೇಳಿ ತೀರ್ಮಾನ ಆಯೆಕನ್ನೆ.” ಅಂದರು.

“ತೀರ್ಮಾನ ಮಾಡ್ಲೆ ಎಂತ ಇಲ್ಲೆ ಕೃಷ್ಣಮಾವ. ಆಸ್ತಿ ಮಡಿಗ್ಯೊಂಡು ಆನಿನ್ನು ಎಂತ ಮಾಡ್ಲಿದ್ದು. ಅತ್ತಿಗೆಗೆ ಹೇಂಗೆ ಅನುಕೂಲವೊ ಹಾಂಗೆ ಮಾಡಿರಾತು. ಎನ್ನ ಬಗ್ಗೆ ಆಲೋಚನೆ ಮಾಡೆಡಿ.” ಆತ್ಮ ಮರುಕದಲ್ಲಿ ಅದ್ದಿ ತೆಗೆದಂತಿತ್ತು ಅವನ ಧ್ವನಿ.

ಸುಭದ್ರಮ್ಮ ಅಬ್ಬರಿಸಿದ್ದರು. “ಈ ಮುದುಕಿ ಇನ್ನೂ ಸತ್ತಿದಿಲ್ಲೆ ಮಗಾ. ಮುದಿ ಭ್ರಾಂತುದೇ ಸುರುವಾಯಿದಿಲ್ಲೆ. ಆರಿಂಗೆ ಬೇಡದ್ರೂ ಎನಗೆ ಬೇಕು ಇದು. ಈ ಮಾಣಿ ಪ್ರಾಯಕ್ಕೆ ಬಪ್ಪಲ್ಲಿವರೆಗೂ ಈ ಜಾಗೆಯ ಆರಿಂಗು ಎಂತ ಮಾಡ್ಲೆಡಿಯ.” ಮಾತು ಮುಗಿದಿತ್ತು.

ಸದ್ಯಕ್ಕೆ ಮಗಳಿಗೆ ಸಹಾಯಕ್ಕಿರಲಿ ಎಂದು ಮಗನನ್ನು ಅಲ್ಲೇ ಬಿಟ್ಟು ಕೃಷ್ಣ ಶಾಸ್ತ್ರಿಗಳು ಹೊರಟರು. ಗೋಪಾಲ ಯಾರೂ ಹೇಳದೆಯೇ ಒಂದೊಂದೇ ಕೆಲಸ ವಹಿಸಿಕೊಂಡಾಗ ಸುಭದ್ರಮ್ಮನಿಗೆ ಕಸಿವಿಸಿಯಾದರೂ ರಾಜೀವನ ಉದಾಸೀನವನ್ನು ಗಮನಿಸಿ ಮೌನವಾಗುಳಿದರು.

ಗೋಪಾಲ ಬಂದಿದ್ದರಿಂದ ರಾಜೀವನಿಗೆ ತನಗೆ ಒಗ್ಗದ ವಿಚಾರದಿಂದ ಕಳಚಿಕೊಳ್ಳಲು ಅವಕಾಶ ಸಿಕ್ಕಿದಂತಾಗಿತ್ತು. ಕೆಲವೊಮ್ಮೆ ಕೆಲಸ ಜಾಸ್ತಿ ಎಂದೋ ನಾಟಕ ಆಡುವುದಿದೆ ಎಂದೋ ಮನೆಯಿಂದಾಚೆ ಹೋದರೆ ನಾಲ್ಕಾರು ದಿನಕ್ಕೊಮ್ಮೆ ಮನೆಗೆ ಬರುತ್ತಿದ್ದ. ಅದೊಂದು ದಿನ ಮನೆಗೆ ಬಂದವನೆ ಕೈಚೀಲದಲ್ಲಿ ವಸ್ತ್ರ ತುಂಬಿಸಿಕೊಂಡು,

“ಅಜ್ಜಿ, ಆನು ಬೆಂಗ್ಳೂರಿಂಗೆ ಹೋವುತ್ತಾ ಇದ್ದೆ. ನಾಳೆ ಎಂಗಳ ನಾಟಕ ಸ್ಪರ್ಧೆ ಇದ್ದು.” ಅನ್ನುತ್ತ ತನ್ನ ಕಾಲಿಗೆ ನಮಸ್ಕರಿಸಿ ಅಂಗಳಕ್ಕಿಳಿದವನ ಬೆನ್ನು ಕಾಣುವವರೆಗೂ ನೋಡುತ್ತ ನಿಂತರು ಸುಭದ್ರಮ್ಮ….

ರಾಜೀವ ಕಂಪ್ಯೂಟರಿನೊಳಗೆ ಕಣ್ಣು ನೆಟ್ಟು ಘಂಟೆಗಳೇ ಕಳೆದುಹೋಗಿತ್ತು. ’ರಂಗಮನೆ’ ಪತ್ರಿಕೆಗಾಗಿ ಅಲೆಮಾರಿ ಬದುಕಿನ ಕುರಿತಾಗಿ ಬಂದ ನಾಟಕ ಸಾಹಿತ್ಯದ ಬಗ್ಗೆ ಲೇಖನ ಸಿದ್ಧ ಪಡಿಸುತ್ತಿದ್ದುದರಿಂದ ನೆಟ್ ಲೋಕದಲ್ಲಿ ಜಾಲಾಡಿ ಮಾಹಿತಿ ಸಂಗ್ರಹಿಸಿ ತನ್ನ ಲೇಖನಕ್ಕೆ ಪೂರಕವಾದ ತುಣುಕುಗಳನ್ನೆಲ್ಲ ಒಂದೆಡೆ ಸೇರಿಸಿಕೊಳ್ಳುತ್ತಿದ್ದ. ಒಂದಿಷ್ಟು ಬಿಡುವು ಬೇಕೆನಿಸಿತು. ಮಹಡಿ ಮೇಲಿನ ತನ್ನ ಕೋಣೆಯಿಂದ ಹೊರಗೆ ಬಂದು ವೆರಾಂಡಕ್ಕೆ ಅಳವಡಿಸಿದ ಜಾಲರಿಗೆ ಒರಗಿ ನಿಂತ. ಶರೀರಕ್ಕೆ ಮನಸಿಗೆ ಒಂದು ದೀರ್ಘ ಉಸಿರು ಬೇಕಾಗಿತ್ತು. ಹೊಕ್ಕುಳವರೆಗೆ ಗಾಳಿ ಎಳೆದುಕೊಳ್ಳಲು ಸಿದ್ಧನಾದವನು ಉಸಿರು ಪುಪ್ಪುಸದೊಳಗೆಲ್ಲ ಓಡಾಡಿ ಇನ್ನೇನು ಕೆಳಗಿಳಿಯಬೇಕು. ಅಷ್ಟರಲ್ಲೇ ಹೊರ ದಬ್ಬಿದ. ಜೋಗುಳದಂತೆ ಬೀಸುತ್ತಿದ್ದ ಗಾಳಿಗೆ ಎಂದೂ ಇಲ್ಲದ ಕಟು ದುರ್ಗಂಧದ ಲೇಪವಿತ್ತು. ತನ್ನೂರಿನ ನೇಜಿ ಗದ್ದೆಗಳ ಮೇಲಿಂದ ಬೀಸುವ ಗಾಳಿಯಲ್ಲಿರುತ್ತಿದ್ದ ಗುಡ್ಡೆ ಹೂಗಳ ಪರಿಮಳ ನೆನಪಾದರೂ ಅದನ್ನು ಕಳೆದುಕೊಂಡಿದ್ದಕ್ಕೆ ಪಶ್ಚಾತ್ತಾಪವೇನೂ ಕಾಡಲಿಲ್ಲ. ಗದ್ದೆ ಹುಣಿಗಳಲ್ಲೋ ಕಾಲು ದಾರಿಯಲ್ಲೋ ನಡೆದು ಹೋಗುವಾಗ ಎದುರಾಗುವ ಪರಿಚಿತರ ಅನುಕಂಪದ ನೋಟ; ಪ್ರಶ್ನೆಗಳಿಂದಾಗುವ ಮುಜುಗರಕ್ಕಿಂತ ದಿನದ ಹೆಚ್ಚಿನ ಅವಧಿಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಮೂಗು ಮುಚ್ಚಿಕೊಳ್ಳಬೇಕಾದರೂ; ದಿನವೂ ಸವರಿಕೊಂಡೇ ಹೋಗುವ ಪರಿಚಿತತೆಯ ನಡುವೆಯೂ ಅಪರಿಚಿತರಾಗೇ ಉಳಿಯುವ; ಈ ನಗರದ ಬದುಕೇ ಅವನಿಗೆ ನಿರಾಳವೆನಿಸಿತ್ತು. ಅದೇ ಭಾವದಲ್ಲೇ ಸುತ್ತ ಕಣ್ಣಾಡಿಸಿದ. ಕಣ್ಣ ನೇರಕ್ಕೆ ಉದ್ದಕ್ಕೆ ಬಿದ್ದಿರುವ ರೈಲ್ವೆ ಹಳಿ. ಹಳಿಯ ಆಚೆ ಬದಿಯಲ್ಲಿ ಒಂದಷ್ಟು ಅಲೆಮಾರಿ ಕಾರ್ಮಿಕರ ಗುಡಾರಗಳು. ಈಚೆ ಬದಿಯಲ್ಲಿ ಒಂದಷ್ಟು ವಿಸ್ತಾರಕ್ಕೆ ಧೂಳು ಮೆತ್ತಿಕೊಂಡಿರುವ ಗಿಡ-ಗಂಟಿಗಳ ಬಲ್ಲೆಗಳು. ಅದರ ಸುತ್ತ ಮುತ್ತ ನಾಗರೀಕ ಸಮಾಜ ಉಪಯೋಗಿಸಿ ಬಿಸುಟ ತರಹೇವಾರಿ ಕಸಗಳ ರಾಶಿ. ಅಲ್ಲೇ ಸಮೀಪದಲ್ಲಿ ಆರೇಳು ಬಡಕಲು ಕುರಿಗಳನ್ನು ಮೇಯಿಸುತ್ತ ಮುದುಕನೊಬ್ಬ ಕುಕ್ಕುರುಗಾಲಲ್ಲಿ ಕುಳಿತು ಕೈಯಲ್ಲಿದ್ದ ಬೆತ್ತದಿಂದ ನೆಲ ಗೆಬರುತ್ತಿದ್ದ. ರಾಜೀವನಿದ್ದ ಕಟ್ಟಡದ ಪಕ್ಕದ ಸೈಟ್ ಖಾಲಿ ಇತ್ತು. ಅದರಾಚೆ ಮೈದಾನದಂತಿರುವ ಪ್ರದೇಶದಲ್ಲಿ ಇನ್ನು ರಿಪೇರಿಗೆ ಸಾಧ್ಯವಿಲ್ಲದಂತಹ ವಾಹನಗಳ ಭಾಗಗಳ ಗುಜ್ರಿ ರಾಶಿ ಮಕ್ಕಳ ಹಾಳಾದ ಆಟಿಕೆಗಳಂತೆ ಬಿದ್ದಿತ್ತು. ಅದಕ್ಕೆ ಹೊಂದಿಕೊಂಡಂತೆ ಒಂದು ದೊಡ್ಡ ಗ್ಯಾರೇಜು. ಗ್ಯಾರೇಜಿನ ಹಿಂಬದಿಯ ಗೋಡೆಯನ್ನೇ ಆಧಾರವಾಗಿಸಿಕೊಂಡು ಗಾರೆ ಕಾರ್ಮಿಕರ ಪರಿವಾರದ ತಾತ್ಕಾಲಿಕ ಶೆಡ್. ಶೆಡ್ಡಿನ ಎದುರು ಮೂರ್‍ನಾಲ್ಕು ಮಕ್ಕಳು ಸಣ್ಣ ಮಗುವೊಂದನ್ನು ನಾಯಿಯ ಬೆನ್ನಿನ ಮೇಲೆ ಕೂರಿಸಿ ಅದರ ಬಾಲ ಎಳೆಯುತ್ತ ಕೇಕೇ ಹಾಕುತ್ತಿದ್ದರು. ಅಲ್ಲೇ ಪಾತ್ರೆ ತೊಳೆಯುತ್ತಿದ್ದ ಹೆಂಗಸರು ಇವರ ಆಟ ನೋಡಿ ನಗುತ್ತ ಮತ್ತೊಮ್ಮೆ ಗದರಿಸುತ್ತಿದ್ದರು. ಅಲ್ಲಲ್ಲಿ ಬೀದಿ ನಾಯಿಗಳು ಮಕ್ಕಳನ್ನು ಕಚ್ಚಿ ಹರಿದು ಹಾಕಿದ್ದರೂ ಬೀದಿ ಜನರು ತಮ್ಮ ತಮ್ಮ ಬೀದಿ ನಾಯಿಗಳ ಬಗ್ಗೆ ಎಷ್ಟು ವಿಶ್ವಾಸದಿಂದಿರುತ್ತಾರಲ್ಲ! ಅಂದುಕೊಂಡ ರಾಜೀವ. ಇದ್ದಕ್ಕಿದ್ದಂತೆ “ಅಯ್ಯಯ್ಯೋ.. ಹೊಡಿಬ್ಯಾಡಣ್ಣೋ..” ಅನ್ನುವ ಕೂಗಿಗೆ ಬೆಚ್ಚಿ ಸ್ವರ ಬಂದತ್ತ ನೋಡಿದವನೇ ಅವಾಕ್ಕಾದ. ಬೆಳಗ್ಗೆ ಇವನು ಏಳುವ ಹೊತ್ತಿಗೇ ಗುಡು ಗುಡು ಶಬ್ದದೊಂದಿಗೆ ಡೀಸೆಲ್ ವಾಸನೆ ಕಿಟಕಿಯೊಳಗೆ ತೂರಿ ಬಂದಿತ್ತು. ಬಾಗಿಲು ತೆಗೆದು ಹೊರಗೆ ಬಂದು ಶಬ್ದ ಬರುತ್ತಿದ್ದ ದಿಕ್ಕಿಗೆ ಕಣ್ಣಾಡಿಸಿದರೆ ಕೂಗಳತೆಯ ದೂರದಲ್ಲಿ ಕಾಣುತ್ತಿದ್ದ ದಟ್ಟವಾಗಿ ಬೆಳೆದಿದ್ದ ಕುರುಚಲು ಬಲ್ಲೆಗಳ ನಡುವಿಂದ ಶಬ್ದ ಹಾಗು ಹೊಗೆ ಕಾಣಿಸಿಕೊಂಡಿತ್ತು. ಈಗ ನೋಡಿದರೆ ಆ ಜಾಗದಲ್ಲಿ ದಕ್ಷಿಣ ಕನ್ನಡದ ಭಾಗದಲ್ಲಿ ಅಲ್ಲಲ್ಲಿ ಕಾಣ ಸಿಗುವ ದೈವದ ಗುಡಿಗಳಂತೆ ಎರಡು ಸಿಮೆಂಟಿನ ಗುಡಿಗಳು ಅದರ ಸುತ್ತ ನಿಂತ ಕೊಳಕು ನೀರು. ರಾಜೀವನಿಗೆ ದುರ್ಗಂಧದ ಮೂಲ ಸಿಕ್ಕಿತು. ನಾಲ್ಕೈದು ಹುಡುಗರು ಬರಿಗಾಲಿನಲ್ಲೇ ಆ ಕೊಚ್ಚೆ ನೀರು ಹರಿದು ಹೋಗಲು ದಾರಿ ಮಾಡುತ್ತಿದ್ದರು. ಅವರು ಪ್ಯಾಂಟ್ ಮಾತ್ರ ಧರಿಸಿದ್ದರಿಂದ ಅವರ ಕರಿ ಮೈ ಸಂಜೆ ನಾಲ್ಕು ಘಂಟೆಯ ಸೂರ್‍ಯ ರಶ್ಮಿಯನ್ನು ಹೀರಿಕೊಂಡು ಪಳಪಳ ಹೊಳೆಯುತ್ತಿತ್ತು. ಸ್ವಲ್ಪ ದೂರದಲ್ಲಿ ಪೊದೆಗಳಲ್ಲಿ ಅವರ ಅಂಗಿಗಳು ಪತಾಕೆಗಳಂತೆ ಗಾಳಿಗೆ ಪಟಪಟ ಬಡಿದುಕೊಳ್ಳುತ್ತ್ತಿದ್ದವು. ಹುಡುಗನೊಬ್ಬ ಪಂಪ್ ಚಾಲೂ ಮಾಡಲು ಹೆಣಗುತ್ತಿದ್ದ. ಅವನ ಹಿಂದೆ ಕೈಯಲ್ಲಿ ಬೆತ್ತ ಹಿಡಿದಿದ್ದ ದಡಿಯನೊಬ್ಬ ಸರಿಯಾಗಿ ಹ್ಯಾಂಡಲ್ ತಿರುಗಿಸುತ್ತಿಲ್ಲವೆಂದು ಹುಡುಗನ ಬೆನ್ನಿಗೆ ಕಾಲುಗಳಿಗೆ ಕೋಲಿನಿಂದ ಹೊಡೆಯುತ್ತಿದ್ದ. ಹುಡುಗ ಪೆಟ್ಟು ಬಿದ್ದಾಗೊಮ್ಮೆ ತಿರುಗಿ ನಿಂತು ಅಳುತ್ತ ಬ್ಯಾಡಣ್ಣೋ ಹೊಡಿಬೇಡ ಅನ್ನುವುದು ಮತ್ತೆ ಹ್ಯಾಂಡಲ್ ತಿರುಗಿಸುವುದು ಎರಡು ಮೂರು ಬಾರಿ ನಡೆದು ಕೊನೆಗೊಮ್ಮೆ ಅವನು ಪೂರ್‍ತಿ ಸೋತು ಕುಕ್ಕರುಗಾಲಲ್ಲಿ ಕುಳಿತು ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿದ. ದಡಿಯ ಆ ಹುಡುಗನ ಬೆನ್ನಿಗೆ ತನ್ನ ಮೊಣಕಾಲಿನಿಂದ ತಿವಿದದ್ದೇ ಹುಡುಗನ ಮುಖ ನೆಲಕ್ಕೆ ಬಡಿದು ಆಧಾರಕ್ಕಾಗಿ ಆತ ಅಂಗೈಗಳನ್ನು ನೆಲಕ್ಕದುಮಿದ. ಅಲ್ಲಿಯ ಅಸಹಾಯಕತೆಗೆ, ಕ್ರೌರ್ಯಕ್ಕೆ ರಾಜೀವನ ಮೈ ನಖ-ಶಿಖಾಂತ ಕಂಪಿಸಿತು. ಹಟ್ಟಿ ಗೊಬ್ಬರ ತೆಗೆಯುವ ಇಸುಮುಳ್ಳು ಎದೆಗೇ ಬಿದ್ದಂತ ಯಾತನೆ. ಹಿಂದೆಂದೂ ಇಲ್ಲದಂತೆ ದುತ್ತನೆ ಮನ ಕದಡಿದ್ದು ಎಂದೋ ಮರೆವೆಗೆ ಸಂದಿದ್ದ ಸುರಿವ ಮಳೆಯ ಆ.. ರಾತ್ರಿ..

ಬಾಗಿಲಿಂದ ಹೊರಗೆ ನೂಕಿಸಿಕೊಳ್ಳುತ್ತ “ದಮ್ಮಯ್ಯ ಮಾವ. ಬಡಿಯೆಡಿ. ಒಂದಾರಿ ಇಂದಿರೆಯ ಕಳ್ಸಿ…” ಅನ್ನುತ್ತಿದ್ದ ಆ ಆಕೃತಿ.

…ಆಷಾಡದ ಆ ರಾತ್ರಿ ಪುಟ್ಟ ಹುಡುಗ ರಾಜೀವ ಅಜ್ಜನ ಕಥೆ ಕೇಳುತ್ತ ಚಾವಡಿಯಲ್ಲಿ ಕುಳಿತಿದ್ದ. ಮಳೆ ಹೊಯ್ಯುತ್ತಿದ್ದರೂ ನೀರು ಒಳ ಬಾರದಂತೆ ಮುಂಜಗಲಿ ಇದ್ದಿದ್ದರಿಂದ ಅರೆಬರೆ ತೆರೆದೇ ಇದ್ದ ಮುಂಬಾಗಿಲು ದಡಾರನೆ ದೂಡುವುದರ ಜೊತೆಗೆ ಚಿಮಣಿ ದೀಪದ ಬೆಳಕಲ್ಲಿ ಆಕೃತಿಯೊಂದು ‘ಸುಬ್ಬಣ್ಣ ಬೇಡ. ಒಳ ಹೋಗೆಡ.’ ಎಂದು ಅಜ್ಜ ಕೋಪದಿಂದ ಹೇಳುತ್ತಿದ್ದರೂ ಮನೆಯೊಳಗೆ ನುಗ್ಗುತ್ತ ಇಂದೀ..ಇಂದಿರೇ.. ಇಂದೀ..ಇಂದಿರೇ..ಎಲ್ಲಿದ್ದೆ? ನೀನು ಬತ್ತಿಲ್ಯೋ ಎನ್ನೊಟ್ಟಿಂಗೆ ಎಂದು ಕರೆದಿದ್ದು.. ನಿಂಗೊ ಹಾಂಗೆ ಎನ್ನ ದೆನಿಗೊಳೆಡಿ. ಅಲ್ಲಿಗೆ ಬಂದರೆ ಈ ಮಕ್ಕೊಗೆ ಗೆತಿ ಇಲ್ಲದ್ದೆ ಅಕ್ಕು. ಒಂದಾರಿ ಇಲ್ಲಿಂದ ಹೋಗಿ ಎಂದು ಅಳುತ್ತ ದೇವರ ಕೋಣೆಗೆ ಓಡಿದ ಅಮ್ಮ.. ಅಜ್ಜ ಅವನನ್ನು ದಬ್ಬಿಕೊಂಡು ಮೆಟ್ಟುಕಲ್ಲಿಂದಾಚೆ ನೂಕಿದವನು ಅಜ್ಜಿ ಬೇಡವೆಂದು ಕೂಗುತ್ತಿದ್ದರೂ ನಾಯಿ ಓಡಿಸಲು ಇಟ್ಟ ದೊಣ್ಣೆಯಿಂದ ಹೊಡೆದು ದಬದಬ ಹೊಯ್ಯುತ್ತಿದ್ದ ಮಳೆಯಲ್ಲೇ ಕೊರಳಿಗೆ ಕೈ ಹಾಕಿ ಅಂಗಳದ ತಡಮೆಯಾಚೆಗೆ ತಳ್ಳಿ ಮನೆಯೊಳಗೆ ಬಂದು ಬಾಗಿಲು ಜಡಿದಿದ್ದು.

..ರಾಜೀವನಿಗೆ ತನ್ನ ಅಪ್ಪನ ನೆನಪೆಂದರೆ ಕಣ್ಣಿಗೆ ಕಟ್ಟುವುದು ಅದೇ ದೃಶ್ಯ. ಅದರಾಚೆಯ ಅಪ್ಪ ಹೇಗಿದ್ದನೋ ಕಂಡ ನೆನಪಿಲ್ಲ. ಮುಂದೆ ಕಾಣುವ ಸಂದರ್ಭವೂ ಬರಲಿಲ್ಲ. ಸುರಿವ ಮಳೆಯಲ್ಲಿ ಹೊರ ದಬ್ಬಿಸಿಕೊಂಡಿದ್ದ ಆತ ತನ್ನ ಮನೆ ಸೇರಿರಲಿಲ್ಲ. ನಾಲ್ಕು ದಿನದ ನಂತರ ಅವರ ಮನೆ ಹತ್ತಿರವೇ ಹರಿಯುತ್ತಿದ್ದ ತೋಡಿನಲ್ಲಿ ಸಿಕ್ಕಿದ ಶವ ಅವನ ಅಪ್ಪನದೇ ಎಂದು ಗುರುತಿಸಲಾಗಿತ್ತು..

ವೈಜಯಂತಿ ಕೆಳಗಿನ ಗೇಟಿನೆದುರು ಸ್ಕೂಟಿ ನಿಲ್ಲಿಸಿದ್ದಾಗಲಿ, ಮೆಟ್ಟಿಲು ಹತ್ತಿ ಮೇಲೆ ಬಂದವಳು ತನ್ನ ಪಕ್ಕದಲ್ಲೇ ಬಂದು ನಿಂತದ್ದಾಗಲಿ ರಾಜೀವನರಿವಿಗೆ ಬರಲೇ ಇಲ್ಲ. ವೈಜಯಂತಿ ಅವನ ನೋಟವನ್ನುಸರಿಸಿ ಅರೆಕ್ಷಣ ನಿಂತವಳು ಸಾಂತ್ವನಿಸುವಂತೆ ಅವನ ಹೆಗಲ ಮೇಲೆ ಕೈ ಇಟ್ಟು,

“ಅವನೊಬ್ಬ ಗುತ್ತಿಗೆದಾರ. ಯಾವತ್ತಾದ್ರೂ ಒಮ್ಮೆ ಈ ಭಾಗದ ಒಳ ಚರಂಡಿ ನೀರು ಖಾಲಿ ಮಾಡಿಸ್ಲಿಕ್ಕೆ ಸ್ಲಮ್ಮಿನ ಸಣ್ಣ ಸಣ್ಣ ಹುಡುಗರನ್ನ ಕರ್‍ಕೊಂಡ್ಬರ್‍ತಾನೆ. ಕೈಲಾಗದಿದ್ರೂ ಕೆಲಸ ಆದಮೇಲೆ ಇವನು ಕೊಡುವ ಮಾಂಸದೂಟ- ದುಡ್ಡಿನ ಆಸೆಗೆ ಅವರೂ ಬರ್‍ತಾರೆ.” ಆಕೆಯ ಮಾತು ಪೂರ್‍ತಿಯಾಗಿರಲಿಲ್ಲ. ಆ ಗುತ್ತಿಗೆದಾರ ಹುಡುಗನನ್ನು ತಳ್ಳಿ ದೊಣ್ಣೆ ಎತ್ತಿದ. ಅಷ್ಟರಲ್ಲಿ; “ಏನಣ್ಣೋ ಹೆಣಾ ಬೀಳ್ಸಕ್ಹತ್ತಿಯೇನ್? ಎಂತಾ ಖಬರ್‌ಗೇಡಿ ಅದೀಯೋ ನೀನು?” ಎಂದು ಏರುಧ್ವನಿಯಲ್ಲಿ ಕೂಗುತ್ತ ಪೊದೆಗಳೆಡೆಯಿಂದ ನುಗ್ಗಿ ಬಂದ ಹೆಂಗಸೊಬ್ಬಳು ಕೈಯಲ್ಲಿದ್ದ ಪ್ಲಾಸ್ಟಿಕ್ ತಂಬಿಗೆಯನ್ನು ನೆಲದ ಮೇಲಿಟ್ಟು ಒಂದು ಕಾಲನ್ನು ಪಂಪಿನ ಮೇಲೇ ಇಟ್ಟು ಎರಡೂ ಕೈಯಲ್ಲಿ ಹ್ಯಾಂಡಲ್ ತಿರುಗಿಸಿದಳು. ಗುಡುಗುಡು ಸದ್ದು ಮಾಡುತ್ತ ಪಂಪ್ ಸ್ಟಾರ್‍ಟ್ ಆಗುತ್ತಿದ್ದಂತೆ ಆಕೆ ತಾನು ಆ ದಡಿಯನಿಗೆ ಬೈದಿದ್ದಾಗಲಿ ಪಂಪ್‌ಸ್ಟಾರ್‍ಟ್ ಮಾಡಿದ್ದಾಗಲೀ ಸುಳ್ಳೇ ಅನಿಸುವಂತೆ ಪ್ಲಾಸ್ಟಿಕ್ ತಂಬಿಗೆಯನ್ನೆತ್ತಿ ಶೆಡ್ಡಿನಲ್ಲಿದ್ದ ಮಕ್ಕಳತ್ತ ತೋರಿಸುತ್ತ ಏನೋ ಕೂಗುತ್ತಿದ್ದಂತೆ ಮಕ್ಕಳೆಲ್ಲ ಅವಳ ಬಳಿಗೆ ಓಡಿ ಬರಲಾರಂಭಿಸಿದವು.

“ಈ ಬೆಂಗಳೂರಲ್ಲಿ ಎಂತಹ ಬದುಕು ಬೇಕಾದರೂ ಕಾಣ್ಲಿಕ್ಕೆ ಸಿಗುತ್ತೆ ರಾಜೀವ. ಎಲ್ಲಾದಕ್ಕೂ ಒಂದೊಂದು ಏರಿಯಾ ಇದೆ ನೋಡು. ಬೆಂಗಳೂರು ಅಂತಲ್ಲ. ಬೆಳೆದು ಸೊಕ್ಕಿದ ಪಟ್ಟಣಗಳಲ್ಲೇ ಹೀಗೆ. ನಮ್ಮಂತವರಿಗಾಗಿಯೇ ಇಂತಹ ಏರಿಯಾಗಳಿವೆ. ಗಟಾರ-ಗಬ್ಬು ಸಹಿಸ್ಕೊಂಡ್ರೆ ನಮ್ಮ ಬಜೆಟ್ಟಿಗೆ ಸರಿಯಾಗಿರುತ್ತೆ ಇಲ್ಲಿಯ ಬಾಡಿಗೆಗಳು.”

ವೈಜಯಂತಿಯ ಮಾತಿಗೆ ಹಿನ್ನೆಲೆ ಇತ್ತು. ಕೆಲವು ದಿನಗಳ ಹಿಂದೆ ಅವಳ ಗಂಡ ಗುರುರಾಜನಿಗೂ ಅವಳಿಗೂ ಮನೆ ಬದಲಿಸುವ ವಿಚಾರದಲ್ಲಿ ಮಾತು ನಡೆದಿತ್ತು. ಗುರುರಾಜನಿಗೋ ಈಗೀಗ ಕೆಲವು ಸಿನೆಮಾ ಕೆಲಸಗಳು ಸಿಗಲಾರಂಭಿಸಿದ್ದರಿಂದ ಸ್ನೇಹಿತರು ಇನ್ನಾದರೂ ಆ ಏರಿಯಾ ಬಿಡೊ ಮಾರಾಯ ಅನ್ನಲಾರಂಭಿಸಿದ್ದರು. ಆದರೆ, ವೈಜಯಂತಿ, “ಇಷ್ಟು ದೊಡ್ಡ ಮನೆ ಬೇರೆಲ್ಲೂ ನಮ್ಮ ಬಜೆಟ್ಟಿಗೆ ಸಿಗಲು ಸಾಧ್ಯವೇ ಇಲ್ಲ. ಸುಮ್ಸುಮ್ಮನೆ ಮನೆ ಬದಲಿಸುವ ಮಾತು ಬೇಡ.” ಅಂದುಬಿಟ್ಟಿದ್ದಳು.

“ನಾಟಕದ ಸ್ಕ್ರಿಪ್ಟ್ ರೆಡಿಯಾಗಿದ್ರೆ ಕೊಡಿ. ನಾನು ಓದ್ತೇನೆ. ಇದು ಇವತ್ತಿನ ಸಂದರ್ಶನ. ನೀವು ಇದನ್ನ ಡಿ.ಟಿ.ಪಿ. ಮಾಡಿ ರಾತ್ರಿ ಊಟಕ್ಕೆ ಕೆಳಗೆ ಬನ್ನಿ.” ಕೈಯಲ್ಲಿದ್ದ ಫೈಲನ್ನು ರಾಜೀವನತ್ತ ಚಾಚಿದಳು. ಆಕೆ ಬೆಳಗ್ಗೆ ಹೋಗಿದ್ದು ನಾಟಕ ರಂಗದ ದಂತಕಥೆ ಅನಿಸಿಕೊಂಡ ಕಂಬದ ಕೋಣೆ ಗಿರೀಶರ ಹಾಗು ಹಿರಿಯ ರಂಗಕರ್ಮಿ ಪಾಂಡುರಂಗಯ್ಯನವರ ಜಂಟಿ ಸಂದರ್ಶನಕ್ಕಾಗಿ. ಕಂಬದ ಕೋಣೆಯವರ ಅಸೌಖ್ಯದಿಂದಾಗಿ ಹೋಗುವಾಗ ಸಂದರ್ಶನ ಸಿಗುವುದೋ ಇಲ್ಲವೋ ಅನ್ನುವ ಅನುಮಾನವಿತ್ತು. ಆದರೆ, ಆಕೆ ಫೈಲು ಮುಂದೆ ಹಿಡಿದ ರೀತಿಯಲ್ಲೇ ಬಹಳ ಒಳ್ಳೆಯ ಸಂದರ್ಶನವೇ ಸಿಕ್ಕಿದೆ ಅನ್ನುವುದು ಅರ್ಥವಾಯ್ತು ರಾಜೀವನಿಗೆ. ಅದನ್ನ ತೆಗೆದುಕೊಂಡು ಒಳ ಹೋದವನು ಮೇಜಿನ ಮೇಲಿಟ್ಟಿದ್ದ ನಾಟಕದ ಹಸ್ತಪ್ರತಿಯನ್ನು ತಂದು ಅವಳ ಕೈಗಿಡುತ್ತ ಒಪ್ಪಿಕೊಂಡ ಕೆಲಸ ಪೂರ್‍ತಿಯಾಗದ ಮುಜುಗರದಿಂದ “ಇನ್ನೊಂದಿಷ್ಟು ತಿದ್ದುವುದಿದೆ ಮೇಡಂ” ಅಂದ. ವೈಜಯಂತಿ ಹಸ್ತಪ್ರತಿ ಹಿಡಿದು ಆದಷ್ಟು ಬೇಗ ಕೆಲಸ ಮುಗಿಸಿ ಅನ್ನುವಂತೆ ನಗುತ್ತ ಹೊರಟುಬಿಟ್ಟಳು.

ನಾಟಕ ಸ್ಪರ್ಧೆಗಾಗಿ ಬೆಂಗಳೂರಿಗೆ ಬಂದ ರಾಜೀವ ವೈಜಯಂತಿಯನ್ನು ಭೇಟಿಯಾಗಿದ್ದು, ಅವನ ಬದುಕು ಈ ತಿರುವು ತೆಗೆದುಕೊಂಡಿದ್ದು ಅನಿರೀಕ್ಷಿತವಾಗಿ. ಏಕಾಂಕ ನಾಟಕ ಸ್ಪರ್ಧೆಗೆ ತೀರ್ಪುಗಾರರಲ್ಲೊಬ್ಬರಾಗಿ ಬಂದಿದ್ದು ‘ರಂಗಮನೆ’ ನಾಟಕ ಸಂಸ್ಥೆಯನ್ನು ನಡೆಸುತ್ತಿದ್ದ ವೈಜಯಂತಿ. ಆಕೆ ಸ್ವತಃ ನಾಟಕಕಾರ್‍ತಿ, ನಿರ್ದೇಶಕಿ. ಅಲ್ಲದೆ ರಂಗಮನೆ ಹೆಸರಿನ ನಾಟಕ ಸಾಹಿತ್ಯಕ್ಕೆ ಸಂಬಂಧಿಸಿದ ಪತ್ರಿಕೆಯನ್ನೂ ನಡೆಸುತ್ತಿದ್ದಳು. ಮಿತಿಗಳ ನಡುವೆಯೂ ರಾಜೀವನ ಸ್ಕ್ರಿಪ್ಟ್ ಆಕೆಯನ್ನು ಸೆಳೆದಿತ್ತು. ಜೊತೆಗೆ ಸಾಣೆ ಹಿಡಿದರೆ ಪುಟಗೊಳ್ಳಬಹುದಾದ ಅವನ ನಟನೆಯೂ. ಬಿಡುವಿನ ವೇಳೆಯಲ್ಲಿ ಅವನನ್ನು ಕರೆಸಿ ಮಾತಾಡುತ್ತ ‘ರಂಗಮನೆ’ಯ ಬಳಗಕ್ಕೆ ಹಾಗು ತನ್ನ ಪತ್ರಿಕೆಯಲ್ಲಿ ಕೆಲಸ ಮಾಡಲು ಅವನನ್ನು ಆಹ್ವಾನಿಸಿದ್ದಳು. ನರಕದೊಳಗೆ ಮುಳುಗುತ್ತಿದ್ದವನಿಗೆ ಮೇಲೇರಲು ಸಿಕ್ಕಿದ ಏಣಿಯಾಗಿತ್ತು ಅದು.

ವೈಜಯಂತಿಯ ಪುಟ್ಟ ಸಂಸಾರವಿದ್ದದ್ದು ಟೆಲಿಕಾಂ ಲೇ ಔಟಿನ ಕೊನೆಯ ಕ್ರಾಸಿನಲ್ಲಿ. ಒಂದು ಅಂತಸ್ಥಿನ ಮನೆಯನ್ನು ಇಡಿಯಾಗಿ ಬಾಡಿಗೆಗೆ ಪಡೆದುಕೊಂಡಿದ್ದರು. ಮಹಡಿಯಲ್ಲಿ ‘ರಂಗಮನೆ’ಯ ಚಟುವಟಿಕೆಗಳು. ಆಕೆಯ ಗಂಡ ಗುರುರಾಜ ನಾಟಕಗಳಿಗೆ, ಕಿರುತೆರೆಯ ಕೆಲವೊಂದು ಧಾರಾವಾಹಿಗಳಿಗೆ ಸಂಗೀತ ಸಂಯೋಜಕನಾಗಿ ಕೆಲಸ ಮಾಡುತ್ತಿದ್ದ. ಪಿ.ಯು.ಸಿ. ಓದುತ್ತಿರುವ ಮಗಳು ಅಲಕಾ ಕೆಲವೊಮ್ಮೆ ನಾಟಕದಲ್ಲಿ ಪಾತ್ರ ಮಾಡುತ್ತಿದ್ದಳು. abstract-painting-sexಎಲ್ಲರೂ ಕೂತು ನಾಟಕದ ಬಗ್ಗೆ ಚರ್ಚಿಸುವುದಿತ್ತು. ಆದರೆ, ಇತ್ತೀಚೆಗೆ ಗುರುರಾಜ ಕಿರುತೆರೆಯಲ್ಲಿ ಅವಕಾಶಗಳು ಜಾಸ್ತಿಯಾಗಲಾರಂಭಿಸಿದ ಮೇಲೆ ನಿಧಾನವಾಗಿ ರಂಗ ಸಂಗೀತವನ್ನು ನಿರ್ಲಕ್ಷಿಸುತ್ತಿದ್ದಾನೆ ಅನಿಸಲಾರಂಭಿಸಿತ್ತು ವೈಜಯಂತಿಗೆ. ವೈಜಯಂತಿ ಪಕ್ಕಾ ವೃತ್ತಿಪರಳಾಗಿದ್ದರೂ ಹತ್ತಾರು ಚಿಂತನೆಗಳನ್ನು ಒಂದೇ ಬಾರಿ ತಲೆಯಲ್ಲಿ ತುಂಬಿಕೊಂಡು ಅದನ್ನೆಲ್ಲ ಪುತಪುತನೆ ಕೃತಿಗಿಳಿಸಲು ಹವಣಿಸುವವಳು. ರಾಜೀವ ಬಂದ ಮೇಲೆ; ರಂಗಮನೆಯೇ ಅವನ ಮನೆಯೂ ಆಗಿ ಅದೇ ಉಸಿರು ಅನ್ನುವಂತೆ ತೊಡಗಿಕೊಂಡಾಗ ಸಹಜವಾಗೇ ವೈಜಯಂತಿಗೆ ಮತ್ತೊಂದು ಹೆಗಲು ಜೋಡಿಸಿದಂತಾಗಿತ್ತು. ಅದಕ್ಕೂ ಹೆಚ್ಚಾಗಿ ಅವನಿಗೆ ಕಲಿಸುತ್ತ ಕಲಿಸುತ್ತ ಕೆಲವು ಸಮಯದಿಂದೀಚೆಗೆ ಅವಳನ್ನಾಕ್ರಮಿಸಿದ್ದ ಜಡತೆಯಿಂದ ಹೊರಬಂದು; ಸ್ತಬ್ದ ಮಧ್ಯಾಹ್ನದಲಿ ಎಲ್ಲೋ ಕುಳಿತಿದ್ದ ಹಕ್ಕಿಯೊಂದು ಕೂಗುತ್ತ ಹಾರಿ ಸಮೀಪಿಸಿದಂತಹ ಹೊಸ ಲವಲವಿಕೆಗೆ ತೆರೆದುಕೊಂಡಿದ್ದಳು. ಅದರಿಂದಾಗಿ ಗುರುರಾಜನಿಗೂ ನಿರಾಳವೆನಿಸಿತ್ತು. ಹೊಳೆಗೆ ಬಿದ್ದ ಮೀನಿನಂತೆ ರಂಗಮನೆಯಲ್ಲಿ ತೊಡಗಿಕೊಂಡ ರಾಜೀವನಿಗೆ ಊರು ಬಿಟ್ಟು ಏಳೆಂಟು ತಿಂಗಳುರುಳಿದ್ದೂ ಗಮನಕ್ಕೆ ಬರಲಿಲ್ಲ….

ಆಗಿನ್ನೂ ಸಾಯಂಕಾಲದ ಐದು ಘಂಟೆ. ಮಬ್ಬು ವಾತಾವರಣ. ಜೊತೆಗೆ ಎಡ ಭಾಗದ ಮನೆಯವರು ಮೇಲಂತಸ್ತು ಕಟ್ಟಿಸುತ್ತಿದ್ದುದರಿಂದ ರಂಗಮನೆಯೊಳಗೆ ಬೀಳುತ್ತಿರುವ ಹೊರಗಿನ ಬೆಳಕು ಕ್ಷೀಣವಾಗಿತ್ತು. ಒಳಗೆ ಲೈಟು ಉರಿಸಿದ್ದರು. ಮನೆಯೊಳಗೆ ಸೇರಿದ ಸದಸ್ಯರು ಚರ್ಚೆಯ ಹುಮ್ಮಸ್ಸಿನಲ್ಲಿದ್ದರು. ನಗರದ ರಂಗ ಮಂದಿರದಲ್ಲಿ ವಷಾಂತ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ನಾಟಕ ಹಬ್ಬದಲ್ಲಿ ‘ರಂಗಮನೆ’ಯ ತಂಡಕ್ಕೆ ಎರಡು ನಾಟಕ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದನ್ನ ಯಾವ ರೀತಿ ಬಳಸಿಕೊಳ್ಳಬೇಕೆಂಬುದರ ಬಗ್ಗೆ ಮಾತು ನಡೆಯುತ್ತಿತ್ತು. ನಡುವೆಯೇ ಅಲ್ಲಿಯ ಸ್ಥಿರ ದೂರವಾಣಿ ಹೊಡೆದುಕೊಂಡಿತು. ರಾಜೀವ ಫೋನ್ ಎತ್ತಿಕೊಳ್ಳಲು ಎದ್ದಾಗ, ಬಹುಶಃ ಯಾರೋ ಅಭಿನಂದನೆ ಹೇಳಲು ಕರೆ ಮಾಡಿರ್‍ತಾರೆ. ಧನ್ಯವಾದ ಹೇಳಿ ಫೋನ್ ಇಟ್ಟುಬಿಡಿ ರಾಜೀವ. ವಿವರ ಕೇಳಿದ್ರೆ ಗೊತ್ತಿಲ್ಲ ಅಂದುಬಿಡಿ ಅಂದಳು ವೈಜಯಂತಿ. ಆದರೆ, ರಿಸೀವರ್ ಕಿವಿಗಿಟ್ಟು ಹಲೋ ಅಂದರೆ ರಾಜೀವನಿಗೆ ಅತ್ತಲಿಂದ ಕೇಳಿದ್ದು ಅತ್ತಿಗೆ ಶಂಕರಿಯ ಸ್ವರ.

“ಇದು ಆನು. ಇಲ್ಲಿ ನಿನ್ನ ಅಜ್ಜಿ ಎರಡು ಮೂರು ದಿನಂದ ಕಂಡಾಬಟ್ಟೆ ಮರ್‍ಲು ಪರಂಚಲೆ ಸುರು ಮಾಡಿದ್ದವು. ಕಣ್ಣೂ ಸರಿ ಕಾಣ್ತಾ ಇಲ್ಲೆ. ನಿನ್ನೆಂದ ದೇವರ ಕೋಣೆಗಂತು ಹೋವುತ್ತವೇ ಇಲ್ಲೆ. ನೀನೊಂದರಿ ಆದಷ್ಟು ಬೇಗ ಬಂದಿಕ್ಕಿ ಹೋಗು.”

ಕರೆ ಖಡಿತಗೊಂಡಿದ್ದರೂ ರಿಸೀವರ್ ಹಿಡಿದು ಅರೆಘಳಿಗೆ ಹಾಗೇ ನಿಂತಿದ್ದ ರಾಜೀವ. ಊರು ಬಿಟ್ಟು ಬಂದವನು ತಿರುಗಿ ಅತ್ತ ಮುಖ ಹಾಕಲಿಲ್ಲ. ಈಗ ಮನೆಗೆ ಕರೆ ಮಾಡಿ ಅಜ್ಜಿಯ ಯೋಗ ಕ್ಷೇಮ ವಿಚಾರಿಸದೆಯೂ ತಿಂಗಳುಗಳೇ ಉರುಳಿತ್ತು. “ಫೋನ್ ಯಾರದು ರಾಜೀವ?” ವೈಜಯಂತಿಯ ಪ್ರಶ್ನೆಗೆ, ಊರಿಂದ ಎಂದಷ್ಟೆ ಉತ್ತರಿಸಿದ. ಅಷ್ಟರಲ್ಲಿ ಕರೆಂಟ್ ಹೋಗಿದ್ದರಿಂದ ಎಲ್ಲರ ಗಮನ ಹೊರಗಿನ ವಾತಾವರಣದ ಮೇಲೆ ಹರಿಯಿತು. ಕಿಟಕಿಯ ಸರಳುಗಳೆಡೆಯಿಂದ ಕಾಣುತ್ತಿದ್ದ ಆಕಾಶದಲ್ಲಿ ಎಲ್ಲೆಲ್ಲಿಂದಲೋ ಬಂದ ಕರಿ ಮೋಡಗಳೆಲ್ಲ ಗುಪ್ಪೆಯಾಗಿ ಬಿದ್ದು ಈ ಕ್ಷಣದಲ್ಲೇ ಸುರಿಯಲು ತಯಾರಾಗಿದ್ದವು. ಗಾಳಿ ಎಂದಿಗಿಂತ ಜಾಸ್ತಿ ಇತ್ತೊ ಅಥವಾ ರಂಗಮನೆಗೆ ತಾಗಿಯೇ ಇರುವ ಹಿಂಬದಿಯ ಸೈಟಿನಲ್ಲಿ ಕಟ್ಟಡ ಕಟ್ಟುತ್ತಿದ್ದವರು ಗಾರೆ ಕೆಲಸ ನಡೆಯುತ್ತಿದ್ದ ಕಟ್ಟಡದ ಗೋಡೆ ಮುಚ್ಚುವಂತೆ ಉದ್ದಗಲಕ್ಕೆ ಕಟ್ಟಿದ್ದ ನೀಲಿ ಟರ್ಪಾಲ್ ಗಾಳಿಗೆ ಪಟಪಟನೆ ಹೊಡೆದುಕೊಳ್ಳುತ್ತಿದ್ದುದರಿಂದ ಗಾಳಿ ಜಾಸ್ತಿ ಇರುವಂತೆ ಅನಿಸುತ್ತಿತ್ತೋ.

“ನಾ ಹೊರಟೆ. ಈ ಮಳೆ ಅರ್ಧ ಘಂಟೆ ಹೊಯ್ದ್ರೆ ಈ ಲೇಔಟಿಂದ ಸ್ಕೂಟಿ ಹೊರಗೆ ಹೋಗೋ ಮಾತೇ ಇಲ್ಲ.” ಅನ್ನುತ್ತ ಶೈನಿ ಎದ್ದು ನಿಂತೇ ಬಿಟ್ಟಳು.

ರಸ್ತೆ ಬ್ಲಾಕಿಗೆ ಹೆದರಿ ಒಬ್ಬೊಬ್ಬರೇ ಹೊರಟರು. ಉಳಿದವರು ರಾಜೀವ ವೈಜಯಂತಿ ಇಬ್ಬರೇ. ಒಳಗಿನ ನಿಶ್ಯಬ್ದವನ್ನು ಗಾಳಿಯ ಸದ್ದು ಸೀಳುತ್ತಿತ್ತು. ಗುರುರಾಜ ಕಿರುತೆರೆಯ ಧಾರಾವಾಹಿಯ ಕೆಲಸಕ್ಕೆಂದು ಬೆಂಗಳೂರಿಂದ ಹೊರಗೆಲ್ಲೋ ಹೋದವನು ಇನ್ನೂ ಬಂದಿರಲಿಲ್ಲ. ಅದರಲ್ಲೊಂದು ಪಾತ್ರ ನಿರ್ವಹಿಸಲು ಮಗಳನ್ನೂ ಕರೆದೊಯ್ದಿದ್ದ. ತಂದೆ ಮಗಳಿಬ್ಬರಿಗೂ ಕಿರುತೆರೆಯ ಸೆಳೆತ ಜಾಸ್ತಿಯಾಗುತ್ತಿದೆ. ಭ್ರಮೆಯ ಹುಚ್ಚು ಹಿಡಿಸಿ ಈ ಬದುಕು ಹೇಗೆ ವಂಚಿಸಿ ಬಿಡುತ್ತದಲ್ಲ ಈ ಕತ್ತಲೆಯ ಹಾಗೆ ಅನಿಸಿತು ವೈಜಯಂತಿಗೆ.

“ಈ ಬೆಂಗಳೂರಲ್ಲಿ ಶ್ರೀಮಂತ ಏರಿಯಾಗಳಿಗೆ ಕರೆಂಟ್ ಪೂರೈಕೆಯಾಗಬೇಕಾದ್ರೆ ಇಂತಹ ಏರಿಯಾಗಳು ಕತ್ತಲಲ್ಲಿ ಮುಳುಗಲೇಬೇಕು.” ಗೊಣಗಿದಳು. ರಾಜೀವ ಪುಟ್ಟ ಚಾರ್ಜರ್ ಲೈಟ್ ತಂದಿಟ್ಟ. ಇದ್ದಕ್ಕಿದ್ದಂತೆ ಬದಿ ಮನೆಯ ಹೆಂಗಸಿನ ಏರು ಧ್ವನಿ ಗಾಳಿಯೊಂದಿಗೆ ಒಳನುಗ್ಗಿತು.

“ಡರ್ಟಿ ಬಿಚ್. ಯಾವುದೋ ಬೀದಿ ನಾಯಿಗೆ ಬಸಿರಾಗಿ ಕುಂತಿದಾಳೆ. ಇವ್ಳು ರಸ್ತೆಗೆ ಹೋಗಿದ್ದಾದ್ರೂ ಹೇಗೆ ಅಂತೀನಿ?” ಆಕೆ ಯಾವುದೋ ಫೈನಾನ್ಸ್ ಕಂಪೆನಿಯಲ್ಲಿ ಕ್ಲರ್ಕ್ ಕೆಲಸ ಮಾಡುವ ಲಿಲ್ಲಿ ಜೇಮ್ಸ್. ಅವಳದು ಅಸಾಮಾನ್ಯ ಕೀರಲು ಸ್ವರ.

“ಅವಳ ಮೇಲೊಂದು ಕಣ್ಣಿಡಬೇಕು. ಗೇಟು ತೆಗೆದಿಡಬೇಡ ಅಂತ ದಿನಾ ಹೇಳಿ ಹೋಗ್ತಿದ್ದೆ ನಾನು. ಸಂಜೆ ಮನೆಗೆ ಬಂದ ಮೇಲೆ ಚಿನ್ನೂ ತಗೊಂಡು ವಾಕಿಂಗೂ ಅಂತ ಮೊಬೈಲಿನಲ್ಲಿ ಮಾತಾಡ್ಕೊಂಡು ಬೀದಿಯಲ್ಲಿ ಆತುದಿಯಿಂದ ಈ ತುದಿಗೆ ಮೈ ಮೇಲೆ ಪ್ರಜ್ಞೆ ಇಲ್ಲದೆ ಅಡ್ಡಾಡ್ತೀಯಲ್ಲ. ಆ ಹೊತ್ತಿಗೇ ಇವ್ಳು ಯಾವ್ದೋ ಬೀದಿ ನಾಯಿ ಜೊತೆ ಸೇರ್‍ಕೊಂಡಿದಾಳೆ. ಕಮ್ಮಿ ಅಂದ್ರೂ ಇಪ್ಪತ್ತು ಸಾವಿರ ನಷ್ಟ. ಇವಳಿಗೆ ಕರ್ಚು ಮಾಡಿದ್ದಕ್ಕೆ ಲೆಕ್ಕ ಇದೆಯಾ? ಈಗ ಇವಳ ಲೋಕಲ್ ಪಪ್ಪಿ ಯಾರು ತಗೊಳ್ತಾರೆ?” ಕಾ..ಂಯ್.. ಕುಂಯ್ಯೀ….ಕೂಗು. ಅದರ ಹಿಂದೆಯೇ “ಬೇಡ ಪಪ್ಪ. ಚಿನ್ನೂಗೆ ಹೊಡಿಬೇಡ ಪಪ್ಪ..” ಅನ್ನುತ್ತ ಅಳುವ ಮಗುವಿನ ಸ್ವರ.

..ಈ ಸರ್ತಿ ಭಾಗ್ಯಂಗೆ ಇಂಜೆಕ್ಷನ್ ಮಾಡ್ಸೆಕು.” ಅಜ್ಜನ ಧ್ವನಿ ಅನುರಣಿಸಿತು ರಾಜೀವನ ಕಿವಿಯೊಳಗೆ.

ರಕ್ತ ಸಿಕ್ತ ಸಬ್ಬಲ್ಲು..ದನಗಳ ಕೊಟ್ಟಿಗೆಯಲ್ಲಿ ದಪ್ಪಕ್ಕೆ ಹರಿದ ನೆತ್ತರ ಹೊಳೆ.. ಎರಡು ಜೋಡಿ ನಿಗಿ ನಿಗಿಸುವ ಕಣ್ಣುಗಳಿಂದ ಬೆಂಕಿ ಉಂಡೆ.. ಸಾಲದ್ದಕ್ಕೆ ಸ್ವಲ್ಪ ಮೊದಲಷ್ಟೆ ಬಂದ ಅತ್ತಿಗೆಯ ಕರೆ. ಮರೆವಿಗೆ ಸರಿದಿದ್ದ ಬದುಕಿನ ಹಿಂಪುಟಗಳೆಲ್ಲ ಪಟಪಟನೆ ಬಡಿದುಕೊಂಡಿತು. ಅವನಿಗೆ ಊರಿಗೆ ಹೋಗುವುದು ಬೇಕಾಗಿರಲಿಲ್ಲ. ಹೋಗದಿರಲು ಸಾಧ್ಯವೇ ಇಲ್ಲ. ಮುಖ ಹಿಂಡಿದ ರಾಜೀವ ದಣಿದವನಂತೆ ಕುಳಿತಲ್ಲೇ ಕುಸಿದ. ಅವನಿಗೆ ವೈಜಯಂತಿಯ ಕಾಲಬುಡದಲ್ಲಿ ಕುಳಿತು ಅವಳ ಮಡಿಲಲ್ಲಿ ತಲೆಯಿಡಬೇಕೆನ್ನುವ ಒಳಗಿನಿಂದ ಒದ್ದುಕೊಂಡು ಬಂದ ವಾಂಛೆಯನ್ನು ತಡೆದುಕೊಳ್ಳಲಾಗಲಿಲ್ಲ.

“ಏನಾಯ್ತು ರಾಜೀವ? ಮನೆಯಿಂದ ಏನಾದರೂ ಕೆಟ್ಟ ಸುದ್ದಿಯಾ?” ಕೇಳಿದಳು ವೈಜಯಂತಿ.

ಸಮೀಪದ ಹಳಿಯ ಮೇಲೆ ಗಡಕ್ ಗಡಕ್ ರೈಲಿನ ಸದ್ದು. ಶಬ್ದ ನಿಲ್ಲುವವರೆಗೂ ಕುಳಿತಿದ್ದ ರಾಜೀವ ಸರಕ್ಕನೆ ಕುರ್ಚಿಯಿಂದೆದ್ದು ಅವಳ ಕಾಲ ಬುಡದಲ್ಲಿ ಕುಳಿತವನೆ ತಲೆಯನ್ನು ಅವಳ ಮಡಿಲಲ್ಲಿಟ್ಟ. ತಾನೇತಾನಾಗಿ ಅವಳ ಕೈ ರಾಜೀವನ ತಲೆ-ಕತ್ತು ನೇವರಿಸಿತು. ಮೈ ಮನಸನ್ನು ಆರ್ದ್ರಗೊಳಿಸುತ್ತ ಹಿತ ನೀಡುವ ಉಷ್ಣ ಪ್ರವಾಹವೊಂದು ಮೆಲ್ಲ ಮೆಲ್ಲನೆ ಎರಡು ಜೀವಗಳ ನರ-ನಾಡಿಗಳನ್ನಾವರಿಸಿತು. ಎಷ್ಟೋ ಹೊತ್ತಿನ ನಂತರ ಅವಳ ಒದ್ದೆ ಮಡಿಲಿಂದ ತಲೆ ಎತ್ತಿ:

“ನಾನು ಊರಿಗೆ ಹೋಗಿ ಬರಬೇಕು ಮೇಡಂ. ಅಜ್ಜಿಗೆ ಹುಷಾರಿಲ್ಲವಂತೆ” ಅಂದ. ವೈಜಯಂತಿ ಅವನ ಅಸ್ವಸ್ಥತೆಗೆಲ್ಲ ಸಾಂತ್ವನವೆಂಬಂತೆ ಭುಜ ಅದುಮಿದಳು. ಆ ಕ್ಷಣದಲ್ಲೇ ಅವಳಿಗೆ, ಈ ಕತ್ತಲಿಲ್ಲದಿದ್ದರೆ ನಾನೀಗ ಇಷ್ಟು ಸಹಜವಾಗಿ ವರ್ತಿಸಲು ಸಾಧ್ಯವಿತ್ತೆ? ಭ್ರಮೆ ಹಿಡಿಸುವ ಕತ್ತಲು ಮುಖವಾಡದ ಭಾರವನ್ನೂ ಎಷ್ಟು ಸರಳವಾಗಿ ಕಳಚಿಬಿಡುತ್ತದಲ್ಲ ಅನಿಸಿತು.

ರಾಜೀವನೊಂದಿಗೆ ವೈಜಯಂತಿಯೂ ಅವಳ ಮಗಳೂ ಹೊರಟಿದ್ದರು. ಹಳ್ಳಿ ತಲುಪಿದಾಗ ಮುಸ್ಸಂಜೆ ಹೊತ್ತು. ಗುಡುಗು-ಮಿಂಚಿನ ಹಿಮ್ಮೇಳದೊಂದಿಗೆ ಮಳೆ ಸುರಿಯುತ್ತಿತ್ತು. ಮನೆ ಮೆಟ್ಟುಕಲ್ಲು ಹತ್ತುವ ಹೊತ್ತಿಗೆ ಮೂವರೂ ಚಂಡಾಪುಂಡಿ. ನಾಯಿಯೊಂದು ಮಲಗಿದಲ್ಲಿಂದಲೇ ಬೊಗಳಿ ಉದಾಸೀನದಿಂದ ಮೈಮುರಿದು ಮತ್ತೆ ಮಲಗಿತು. ಜಗಲಿಯಲ್ಲಿ ಲಾಟೀನು ಉರಿಯುತ್ತಿತ್ತು. ಫೋನಿನಲ್ಲೇ ವೈಜಯಂತಿ ಬರುತ್ತಿರುವ ವಿಚಾರ ಅತ್ತಿಗೆಗೆ ಹೇಳಿದ್ದ ರಾಜೀವ. ಒಳಗಿನಿಂದ ಬಂದ ಹೆಂಗಸನ್ನು ಇವರು ನನ್ನ ಅತ್ತಿಗೆ ಎಂದು ಪರಿಚಯಿಸಿ “ಮೋನ ಎಲ್ಲಿ?” ಕೇಳಿದ.

“ಮೋನ ಶಾಲೆಗೆ ರಜೆ ಇದ್ದು ಹೇಳಿ ಅವನ ಮಾವನೊಟ್ಟಿಂಗೆ ಅಜ್ಜನ ಮನೆಗೆ ಹೋಯಿದ.” ಅಂದವಳೇ ವೈಜಯಂತಿಯನ್ನುದ್ದೇಶಿಸಿ, “ಇಲ್ಲಿ ಕರೆಂಟ್ ಇಲ್ಲದೆ ಎರಡು ದಿನವಾಯ್ತು. ಗಾಳಿ-ಮಳೆಗೆ ತೋಟದೊಳಗೆಲ್ಲ ಲೈನ್ ತುಂಡಾಗಿದೆಯಂತೆ. ನೀವು ಒದ್ದೆ ಬಟ್ಟೆ ಬದಲಿಸಿ. ಅಷ್ಟರಲ್ಲಿ ಚಾಯ ಮಾಡಿ ತರ್‍ತೇನೆ.” ಅನ್ನುತ್ತ ಒಳ ಹೋಗಿ ಬೈರಾಸು ತಂದು ಕೊಡುತ್ತ, “ಬೆಶಿನೀರು ಕೊಟ್ಟಗೆ ತೋರ್‍ಸಿಕ್ಕು. ಅಲ್ಲಿ ಒಂದು ಲಾಟನ್ನು ಮಡಗಿದ್ದೆ.” ಅಂದಳು.

ಕಾಲು ತೊಳೆದು ಬಂದು ಶಂಕರಿ ಕೊಟ್ಟ ಚಹ ಹಾಗು ಕೆಂಡದಲ್ಲಿ ಸುಟ್ಟ ಹಲಸಿನ ಹಪ್ಪಳ ತಿಂದಾದೊಡನೆ ರಾಜೀವ ಇಬ್ಬರನ್ನೂ ಅಜ್ಜಿ ಮಲಗಿದಲ್ಲಿಗೆ ಕರೆದೊಯ್ದ. ಲಾಟೀನು ಬೆಳಕು ಕೋಣೆಯೊಳಗೆ ಮಂದವಾಗಿ ಹರಡಿತ್ತು. ಕಿಟಕಿಯ ಸಮೀಪವೇ ಮಂಚ. ಮಂಚದ ಪಟ್ಟಿಗೆ ಒರಗಿ ಕುಳಿತಿದ್ದಳು ಅಜ್ಜಿ. ತೆರೆದೇ ಇದ್ದ ಕಿಟಕಿಯಿಂದ ಚಳಿಗಾಳಿ ಒಳನುಗ್ಗುತ್ತಿತ್ತು. ಪಳ್ಳನೆ ಪ್ರಕಾಶಿಸಿ ಮರೆಯಾದ ಮಿಂಚಿನ ಬೆಳಕಲ್ಲಿ ಹಿತ್ತಲಿನ ತೆಂಗಿನ ಮರಗಳೆಡೆಯಿಂದ ಬೇಲಿಗೆ ತಾಗಿಯೇ ಇರುವ; ತುಕ್ರನಾಯ್ಕನ ಪರಿವಾರ ಒಂದು ಕಾಲದಲ್ಲಿ ವಾಸಿಸುತ್ತಿದ್ದ; ಈಗ ಮಡಲು-ಕೊತ್ತಳಿಕೆ, ಕಟ್ಟಿಗೆ, ಅಡಿಕೆ ಸಿಪ್ಪೆಗಳನ್ನು ಸಂಗ್ರಹಿಸಲು ಉಪಯೋಗಿಸುತ್ತಿದ್ದ ಸೋಗೆ ಹೊದೆಸಿದ ಮನೆ ಒಮ್ಮೆ ಕಂಡು ಮತ್ತೆ ಕರಿ ಚಾದರದೊಳಗೆ ಇಡಿಯಾಗಿ ತೂರಿಕೊಂಡಿತು. ರಾಜೀವ ಅಜ್ಜಿಯ ಸಮೀಪವೇ ಕುಳಿತು “ಅಜ್ಜೀ..” ಅಂದ. ಸುಭದ್ರಮ್ಮ ಯಾವಾಗಲೂ ನೀರುತುಂಬಿಕೊಂಡು ಬಲೆಬಲೆಯಾಗುತ್ತಿದ್ದ ತನ್ನ ಕಣ್ಣುಗಳನ್ನು ಹಿಗ್ಗಿಸಿ ನೋಡಿ ಬಾಯಗಲಿಸಿದರು. ವೈಜಯಂತಿಯನ್ನು ಅವಳ ಮಗಳನ್ನೂ ಪರಿಚಯಿಸಿದ. ವೈಜಯಂತಿ ಸುಭದ್ರಮ್ಮನ ಎರಡೂ ಹಸ್ತಗಳನ್ನು ತನ್ನ ಹಸ್ತದೊಳಗಿಟ್ಟುಕೊಂಡು ಕುಳಿತವಳು ಮಂಚದ ಕಾಲಿಗೆ ನೇತಾಡುತ್ತಿದ್ದ ಬೈರಾಸಿನಿಂದ ಅಜ್ಜಿಯ ಕಣ್ಣಂಚುಗಳನ್ನೊರೆಸಿದಳು.

“ನಾನು ಹೊರಗಿನ ಕಿಟಕಿಯಿಂದ ಮಳೆ ನೋಡ್ತೀನಮ್ಮ” ಅಂದವಳೇ ಅಲಕಾ ಹೊರ ಹೋದಳು. ತನ್ನೆದುರು ಕುಳಿತವರನ್ನು ಕಣ್ಣು ಪಿಳುಕಿಸಿ ನೋಡಿದ ಸುಭದ್ರಮ್ಮ ತುಟಿ ಹಿಗ್ಗಿಸಿ ‘ಬಂದೆಯೊ ಒಪ್ಪಕುಞ್ಞಿ’ ಅಂದರು.

“ಕಿಟಕಿ ಹಾಕೆಕಾ ಅಜ್ಜಿ? ಸೀರಣಿ ಬಡಿತ್ತಾ ಇದ್ದು” ಕೇಳಿದ ರಾಜೀವ.

ಸುಭದ್ರಮ್ಮ ಬೇಡವೆಂಬಂತೆ ಕೈ ಸನ್ನೆ ಮಾಡಿ “ಇನ್ನೂ ಎಷ್ಟು ದಿನ ಹೀಂಗೆ ಗೋಡೆ ಕಟ್ಲೆಡಿಗು? ಬಾಗಿಲು ಮುಚ್ಚಲೆಡಿಗು? ಒಳ ಬಪ್ಪವು ಹೇಂಗಾರೂ ಬತ್ತವು. ಹೆರಂಗೆ ಕರಕ್ಕೊಂಡು ಹೋವುತ್ತವು. ನಿನ್ನ ಅಜ್ಜ ದಿನಾ ಭಾರತ ಪಾರಾಯಣ ಮಾಡಿರೆಂತ? ಕುಂತಿ-ಮಾದ್ರಿ ಹೇಳಿಯೊಂಡು ಲೊಟ್ಟೆ ಲೊಟ್ಟೆ ಅರ್ಥ ಹೇಳಿ ರೈಸಿರೆಂತ? ನಿನ್ನ ಅಜ್ಜಂಗೆ ಇದು ಅರ್ಥವೇ ಆಯಿದಿಲ್ಲೆ ಒಪ್ಪಕುಞ್ಞಿ. ನೀನು ನಿನ್ನ ಅಜ್ಜ ಓದಿಯೊಂಡಿದ್ದ ಭಾರತ ಕಥೆ ಕೇಳಿದ್ದೆನ್ನೆ. ನಾಟಕ ಅದೂ ಇದೂ ಹೇಳಿ ಎಂತೆಂತೋ ಬರೆತ್ತೆನ್ನೆ. ಎಡಿಗಾರೆ ನೀನೇ ಹೇಳು ನೋಡ? ಆ ಪಾಂಡು ಅವಂಗೆ ಅವನೇ ಬೇಲಿ ಹಾಕಿದ. ಕುಂತಿ ಪಾಂಡು-ಮಾದ್ರಿ ಇಬ್ರಿಂಗೂ ಗೋಡೆಯ ಹಾಂಗೆ ನಿಂದತ್ತು. ಹಾಂಗೆ ಹೇಳಿ ಪಾಂಡು ಹಾಕಿಯೊಂಡ ಬೇಲಿಯೊ, ಕುಂತಿಯೊ ಪಾಂಡು-ಮಾದ್ರಿ ಸೇರುದರ ತಡದವ? ತಡವಲೆಡಿಗಾತ? ಎಂತಗೆ ಆಯಿದಿಲ್ಲೆ ಹೇಳಿರೆ ಪಾಂಡು ಮಾದ್ರಿ ಹೇಳಿರೆ ಪಕ್ಷಿಜೋಡಿ. ಹೀಂಗೇ ಇಪ್ಪ ಪಕ್ಷಿಜೋಡಿ.” ಅನ್ನುತ್ತ ವೈಜಯಂತಿಯ ಕೆನ್ನೆ ಸವರಿ ರಾಜೀವನ ತಲೆ ನೇವರಿಸಿ ನೆಟಿಗೆ ಮುರಿದವರೇ: “ಎನ್ನ ಇಂದಿ..ಸುಬ್ಬಣ್ಣ, ವಿಷ್ಣು ಲಲಿತೆಯೂ ಹಾಂಗೇ..ಎನ್ನ ಭಾಗ್ಯಂಗೂ ಶೆಟ್ರ ಗಿಡ್ಡಂಗೂ ಹೀಂಗೇ ಇಪ್ಪ ಚಞ್ಞಯಿ.. (ಗೆಳೆತನ) ಪಕ್ಷಿ ಜೋಡಿಗೊ ಜೀವಕ್ಕೆ ಮೋಸ ಮಾಡ್ತವೇ ಇಲ್ಲೆ. ಅಪ್ಪೊ ಅಲ್ಲದೊ ನೀನೇ ಹೇಳು ನೋಡ ಒಪ್ಪಕುಞ್ಞಿ” ಅಂದರು. ಕಿಟಕಿಯಿಂದ ಬಲವಾಗಿ ನುಗ್ಗಿ ಬಂದ ಶೀತಗಾಳಿಗೆ ವೈಜಯಂತಿ ಎದೆಯೊಳಗೆ ಚಳಿಗಾಳಿ ಹೊಕ್ಕಂತೆ ನಡುಗಿದರೆ ರಾಜೀವನಿಗೆ ಕಿಟಕಿಯಾಚೆಯ ಕತ್ತಲ ಒಡಲು ಬಿರಿದ ಮಿಂಚು ಎದೆಯೊಳಗೇ ನುಗ್ಗಿದ ಅನುಭವ. ಪಾಂಡು-ಮಾದ್ರಿ ಹಾಂಗಿಪ್ಪ ಪಕ್ಷಿಜೋಡಿ! ಅಜ್ಜಿ ಹೇಳುತ್ತಿರುವುದಾದರೂ ಏನು?! ಅಷ್ಟರಲ್ಲಿ ಕಾಫಿ ಗ್ಲಾಸು ಹಿಡಿದು ಬಂದ ಶಂಕರಿ;

“ಅಜ್ಜಿ ಈಗ ಮರ್‍ಲು ಪರಂಚುದು ಜಾಸ್ತಿಯಾಯಿದು. ಮಳೆ ಸೊಯ್ಪಿಯೊಂಡಿದ್ರೂ ಆ ಗಿಳಿಬಾಗಿಲು ಹಾಕಲೆ ಒಪ್ಪುತ್ತವೇ ಇಲ್ಲೆ. ಮೊನ್ನೆ ಮೊನ್ನೆವರೆಗೂ ಎಷ್ಟೊತ್ತಿಂಗೂ ದಳಿ ಹಿಡ್ಕೊಂಡು ನಿಂದುಗೊಂಡಿತ್ತಿದ್ದವು. ಈಗ ರಜ ದಿನಂದ ದೇವರೊಳ ಕೂದರೆ ಎಷ್ಟೊತ್ತಾರೂ ಹೆರ ಬಾರವು. ಎಂತಾತಪ್ಪ ಹೇಳಿ ಹೋಗಿ ನೋಡಿರೆ ಕಣ್ಣಿಲ್ಲಿ ನೀರು ಹರಿಶಿಯೊಂಡಿರ್‍ತವು. ಮೋರೆಲ್ಲಿ ಮಾತ್ರ ನೆಗೆ. ಮೊನ್ನೆ ಹೊಸ್ತಿಲು ಡಂಕಿ ಬಿದ್ದ ಮೇಲಂದ ದೇವರ ಕೋಣೆಗೆ ಹೋಯಿದವೇ ಇಲ್ಲೆ. ಸಾಲದ್ದಕ್ಕೆ ಅವರಿಬ್ಬರ ನೆಂಪು ಮಾಡುದುದೇ ಜಾಸ್ತಿಯಾಯಿದು” ಶಂಕರಿ ವರದಿ ಒಪ್ಪಿಸುವಂತೆ ಹೇಳಿ ಒಳ ನಡೆದರೂ ಅವಳ ಕೊನೆಯ ಮಾತಿನಲ್ಲಿ ಅಸಹನೆ ರಾಚುತ್ತಿತ್ತು.

ವೈಜಯಂತಿ ಅವರಿಬ್ಬರು ಅಂದರೆ ಯಾರು ಅನ್ನುವಂತೆ ಹುಬ್ಬೇರಿಸಿ ರಾಜೀವನತ್ತ ನೋಡಿದಳು.

“ವಿಷ್ಣುಮೂರ್‍ತಿ ನನ್ನ ಅಣ್ಣ. ಲಲಿತೆ ನನ್ನ ಹೆಂಡತಿ. ಇಬ್ಬರೂ ಈಗ ಇಲ್ಲ.” ಕಿಟಕಿಯಾಚೆ ಹಾರುತ್ತಿದ್ದ ಮಿಂಚುಹುಳಗಳತ್ತ ನೋಡುತ್ತ ಧ್ವನಿ ತಗ್ಗಿಸಿ ಹೇಳಿದ ರಾಜೀವ.

ವೈಜಯಂತಿಗೆ ಅಜ್ಜಿಯ ಮರ್‍ಲು ಮಾತಿನೊಳಗಿನ ಗೂಢಾರ್ಥ ಅಸ್ಪಷ್ಟವಾಗಿ ಅರ್ಥವಾಗಲಾರಂಭಿಸಿತು. ಸುಭದ್ರಮ್ಮ ಮಾತ್ರ ಇದಾವುದರ ಕಬರ್ ಇಲ್ಲದವರಂತೆ ತೋರು ಬೆರಳಲ್ಲಿ ತನ್ನ ಹಣ್ಣು ಹಣ್ಣು ಕೂದಲು ತಿರುಪುತ್ತ:

“ಎಂತ ಒಪ್ಪಕುಞ್ಞಿ. ಆನು ಹೇಳಿದ್ದು ಸರಿಯೊ ತಪ್ಪೊ ನೀನೇ ಆಲೋಚನೆ ಮಾಡಿ ಹೇಳು ನೋಡ?” ಅಂದವರೇ ಕಿಟಕಿಯತ್ತ ಮುಖ ಮಾಡಿ ಅಸ್ಪಷ್ಟವಾಗಿ ಗೊಣಗುತ್ತ ಮಲಗಿದರು.

ಊಟ ಮಾಡುವಾಗ ಮಾತಾಡಿದ್ದೆಲ್ಲ ಅಲಕಾ ಮತ್ತು ಶಂಕರಿ ಮಾತ್ರ. ಅಲಕಾಗೆ ಮಿಂಚುಹುಳುಗಳದೇ ಧ್ಯಾನ. ಬೇಗ ಊಟ ಮುಗಿಸಿ ಎದ್ದು ಓಡಿದ್ದಳು. ಮಾತಿಲ್ಲದೆ ಊಟ ಮಾಡುತ್ತಿದ್ದ ರಾಜೀವ-ವೈಜಯಂತಿಯರ ಮನಸಿನ ತುಂಬ ಸುಭದ್ರಮ್ಮನ ಸ್ವಗತಗಳೇ ಮಾತಾಡುತ್ತಿದ್ದವು. ಊಟ ಮುಗಿಸಿ ಕೈ ತೊಳೆಯಲು ಹೋಗುವಾಗ ರಾಜೀವ ಮುಂದೆ ನಡೆದು ಹಿತ್ತಿಲ ಬಾಗಿಲಲ್ಲಿ ಲಾಟೀನು ಇಟ್ಟು ನೀರ ತಂಬಿಗೆಯನ್ನು ತಂದ. ಅಷ್ಟರಲ್ಲಿ ಸಣ್ಣ ಸಣ್ಣ ಹಾತೆಗಳು ಪಟಕ್ಕನೆ ಲಾಟೀನಿನ ಗಾಜಿಗೆ ಬಡಿದು ಕೆಳಗೆ ಬೀಳಲಾರಂಭಿಸಿದವು. ಕೈ ತೊಳೆದು ನೀರ ತಂಬಿಗೆಯನ್ನು ರಾಜೀವನಿಗೆ ಕೊಟ್ಟ ವೈಜಯಂತಿ ಗಾಜಿಗೆ ಬಡಿದು ನೆಲಕ್ಕುರುಳುತ್ತಿರುವ ಹಾತೆಗಳನ್ನೇ ನೋಡುತ್ತ ನಿಂತವಳು ನಿಧಾನವಾಗಿ, “ಈ ಸುಡು ಬೆಳಕನ್ನು ಮುಟ್ಟುವ ಸುಖದ ಮುಂದೆ ಈ ಹಾತೆಗಳಿಗೆ ಜೀವ ಲೆಕ್ಕಕ್ಕೇ ಇಲ್ಲ ನೋಡು ರಾಜೀವ. ಅಜ್ಜಿ ಹೇಳಿದ ಆ ಪಕ್ಷಿಜೋಡಿಯ ಹಾಗೆ” ಅಂದಳು. “ಹುಂ. ನನ್ನ ವಿಷ್ಣು-ಲಲಿತೆಯರ ಹಾಗೆ.” ಯಾವುದೊ ಧ್ಯಾನದಲ್ಲಿದ್ದವನಂತೆ ಪ್ರತಿಕ್ರಿಯಿಸಿದ್ದ ರಾಜೀವ. ಅಜ್ಜಿ ವಿಷ್ಣು-ಲಲಿತೆಯರ ಹೆಸರೆತ್ತಿದಾಗ ಮೊದಲಿನಂತೆ ಜುಗುಪ್ಸೆ ಹೆಡೆಯೆತ್ತಿರಲಿಲ್ಲ. ಬದಲಾಗಿ ವಿಚಿತ್ರ ಮೃದುತ್ವ ಸಂಚಾರವಾಗಿತ್ತು. ಅದೂ ಅಲ್ಲದೆ ಅಜ್ಜಿಯ ಬಾಯಿಯಲ್ಲಿ ಅವರ ಹೆಸರು ಬಂದಾಗಲೇ ಅವನಿಗೆ ಇತ್ತೀಚೆಗೆ ಇವರಿಬ್ಬರು ನನ್ನ ನೆನಪಿನೊಳಗೆ ಇಣುಕಿರಲೇ ಇಲ್ಲ ಅನ್ನುವುದೂ ಗಮನಕ್ಕೆ ಬಂದಿದ್ದು.

ಸುಭದ್ರಮ್ಮ ಮಲಗಿದ ಕೋಣೆಯಲ್ಲೇ ನೆಲದ ಮೇಲೆ ವೈಜಯಂತಿಗೂ ಅಲಕಾಗೂ ಚಾಪೆ ಹಾಸಿ ತಾನು ಅಡುಗೆ ಮನೆಯಯಲ್ಲಿ ಮಲಗಿದಳು ಶಂಕರಿ. ರಾಜೀವ ಚಾವಡಿಯಲ್ಲಿದ್ದ ಮಂಚದಲ್ಲಿ ಮಲಗಿದ. ನಿದ್ದೆ ಸುಳಿಯದೆ ಹೊರಳಾಡುತ್ತಿದ್ದವನಿಗೆ ಕ್ರಮೇಣ ನಿದ್ದೆಯೂ ಅಲ್ಲದ ಎಚ್ಚರವೂ ಅಲ್ಲದ ಇತ್ತಂಡ ಸ್ಥಿತಿ.. ‘..ಮರೆದು ಹಿಂದೆಲ್ಲವನು ಕುಂತಿಯನರಿಯಲೀಯದೆ ಮೆಲ್ಲ ಮೆಲ್ಲನೆ ತುರುಗಿದೆಳೆಲತೆ…’ ರಾಗವಾಗಿ ವಾಚನ ಮಾಡುತ್ತ ಕಥೆ ಹೇಳುತ್ತಿರುವ ಅಜ್ಜ..

ಪಾಂಡು-ಮಾದ್ರಿ ಹೇಳಿರೆ ಪಕ್ಷಿಜೋಡಿ. ಹೀಂಗೇ ಇಪ್ಪ ಪಕ್ಷಿಜೋಡಿ. ಎನ್ನ ಇಂದಿ-ಸುಬ್ಬಣ್ಣ.. ವಿಷ್ಣು-ಲಲಿತೆಯೂ ಹೀಂಗೇ..ಎನ್ನ ಭಾಗ್ಯಂಗೂ ಶೆಟ್ರ ಗಿಡ್ಡಂಗೂ ಹೀಂಗೇ ಇಪ್ಪ ಚಞ್ಞಯಿ.. ಪಕ್ಷಿಜೋಡಿಗೊ ಜೀವಕ್ಕೆ ಮೋಸ ಮಾಡ್ತವೆ ಇಲ್ಲೆ..ಅಪ್ಪೊ ಅಲ್ಲದೊ ನೀನೇ ಹೇಳು ನೋಡ ಒಪ್ಪಕುಞ್ಞಿ.. ತನ್ನ ತಲೆ ಸವರಿ ವೈಜಯಂತಿ ಮೇಡಂ ಮುಖ ನೇವರಿಸಿ ಕಣ್ಣಲ್ಲಿ ಕಣ್ಣಿಟ್ಟು ಹೇಳುತ್ತಿರುವ ಅಜ್ಜಿ,

ವೈಜಯಂತಿಯ ನೆನಪಾಗಿದ್ದೇ ತಡೆದುಕೊಳ್ಳಲಾಗದ ಪರವಶತೆಯ ಸಂಚಾರವಾಯ್ತು ಅವನ ಮೈ ಮನಸುಗಳಲ್ಲಿ. ಆದರೆ, ಒಂದೇ ಒಂದು ಬಾರಿ ಲಲಿತೆಯ ಸಾಮೀಪ್ಯದಲ್ಲಿ ಹೀಗೊಂದು ಅನುಭವ ತನಗೆ ದಕ್ಕಿರಲೇ ಇಲ್ಲ.. ಹಾಗೆ ನೋಡಿದರೆ ಹೀಗೂ ಒಂದು ಭಾವ ಅನುಭೂತಿಗೆ ದಕ್ಕುತ್ತದೆಂದೇ ಗೊತ್ತಿರಲಿಲ್ಲ.. ಅಂದರೆ.. ಲಲಿತೆಗೂ..!ವಿಷ್ಣುಗೂ.. ಹೀ..ಗೇ..? ಹಾಗನಿಸಿದ್ದೇ ಅಜ್ಜಿಯ ಮಾತಿನೊಳಗಿನ ಬೆಳಕಿನ ಚೂರುಗಳು ಸಿಡಿಸಿಡಿದು ಕಣ್ಣು ಚುಚ್ಚಿತು. ಅಜ್ಜಿ ಎಳೆದು ತೆಗೆದ ರಕ್ತಸಿಕ್ತ ಸಬ್ಬಲ್ಲು.. ಇಷ್ಟು ದಿನ ಅವನೊಳಗೆ ಬೆಚ್ಚಗೆ ಮಲಗಿದ್ದ ಆತ್ಮ ಮರುಕ ಹೊರ ನಡೆದು ಪಾಪಪ್ರಜ್ಞೆ ಒಳ ಹೊಕ್ಕು ಇಸುಮುಳ್ಳಿನಂತೆ ಚುಚ್ಚಲಾರಂಭಿಸಿದ್ದೇ ದಡಕ್ಕೆನೆದ್ದು ಗೋಡೆಗೊರಗಿ ಕುಳಿತ. ಅವನೆದೆಯ ಮೇಲೆ ವಿಷ್ಣು-ಲಲಿತೆಯರು ಕುಳಿತು ಜೀವ ಕುಲುಕಿಸಲಾರಂಭಿಸಿದರು. ಲುಂಗಿ ಕಟ್ಟಿಕೊಳ್ಳುತ್ತ ನಡೆದು ಹೋದ ಅಣ್ಣನ ಬೆನ್ನು.. ಹಾಸಿಗೆಯಲ್ಲಿ ಕುಳಿತಿರಲಾಗದೆ ಎದ್ದು ಬದಿಯಲ್ಲಿದ್ದ ಮುರುಕು ಕಾಲಿಗೆ ಆಣಿ ಬಡಿದು ಜೋಡಿಸಿದ ತನ್ನ ಅದೇ ಹಳೆಯ ಕುರ್ಚಿಯಲ್ಲಿ ಕುಳಿತ. ಮೇಜಿನ ಮೇಲೆ ಸಣ್ಣಗೆ ಮಿಣಿಮಿಣಿಸುತ್ತಿದ್ದ ಲಾಟೀನಿನ ಕೀ ತಿರುಪಿ ಬತ್ತಿಯನ್ನು ತುಸುವೇ ಮೇಲೇಳಿಸಿದ. ಬೆಳಕು ನೋಡಲಾಗದೆ ಅಸಹಾಯಕತೆಯಿಂದ ಮೇಜಿಗೆ ತಲೆಕೊಟ್ಟ.

***

(ಇಸುಮುಳ್ಳು : ಕೊಟ್ಟಿಗೆಯ ಸೊಪ್ಪಿನ ಗೊಬ್ಬರ ತೆಗೆಯಲು ಬಳಸುವ ಮುಳ್ಳಿನಂತೆ ಚೂಪು ಮೊನೆಗಳಿರುವ ಗುದ್ದಲಿ.)

ಜನನುಡಿ 2014 : ಒಂದು ವರದಿ

– ವಸಂತ ಕಡೇಕಾರ್

“ಕೋಮುವಾದಿ ಗಾಢಾಂಧಕಾರದ ಸುರಂಗದ ಕೊನೆಯಲ್ಲೊಂದು ಬೆಳಕಿನ ಕಿಂಡಿ, ಜನನುಡಿ” – ದಿನೇಶ್ ಅಮಿನ್ ಮಟ್ಟು

ಇವು ದಿನೇಶ ಅಮಿನ್ ಮಟ್ಟು ಅವರು ಡಿಸೆಂಬರ್ 13-14ರಂದು ಮಂಗಳೂರಿನಲ್ಲಿ ನಡೆದ ಜನನುಡಿ ಸಮಾವೇಶದ “ಸಮಕಾಲೀನ ಸವಾಲುಗಳು – ಐಕ್ಯತೆಯ ಅಗತ್ಯತೆ’ ಬಗೆಗಿನ ಗೋಷ್ಟಿಯಲ್ಲಿ ಅಧ್ಯಕ್ಷೀಯ ಭಾಷಣದ ಕೊನೆಯಲ್ಲಿ ಆಡಿದ ಮಾತುಗಳು. dinesh-amin-umapathiತಾರ್ಕಿಕವಾಗಿ ತಣ್ಣಗೆ ವಿಚಾರ ಮಂಡಿಸುವ ದಿನೇಶ್ ಇಂತಹ ‘ಅತಿಶಯೋಕ್ತಿ’ಯಂತೆ ಕಾಣುವ ಮಾತುಗಳನ್ನು ಸಾಮಾನ್ಯವಾಗಿ ಆಡುವುದಿಲ್ಲವಲ್ಲ ಎಂದು ಬಹಳ ಜನರಿಗೆ (ಅದರಲ್ಲೂ ಜನನುಡಿ ಸಮಾವೇಶದಲ್ಲಿ ಭಾಗವಹಿಸದೆ ಇದ್ದವರಿಗೆ) ಆಶ್ಚರ್ಯವಾಗಬಹುದು. ಎರಡೂ ದಿನ ಭಾಗವಹಿಸಿದ ಬಹುಪಾಲು ಜನರಿಗೆ ಮಾತ್ರ ಇದು ಎರಡು ದಿನದ ಸಮಾವೇಶದ ‘ಕ್ಲೈಮಾಕ್ಸ್’ ಮತ್ತು ಸಾರಾಂಶವಾಗಿ ಕಂಡಿತು..

ಇದಕ್ಕೆ ಸಮಾವೇಶದ ಹಿಂದಿನ ಕೆಲವು ದಿನಗಳಲ್ಲಿ ಸಂಘ ಗ್ಯಾಂಗ್ ನಮ್ಮೆಲ್ಲರ ಮೇಲೆ ಹರಿಯಬಿಟ್ಟ ಕೋಮುವಾದಿ-ಫ್ಯಾಸಿಸ್ಟ್ ಗಾಢಾಂಧಕಾರ ಸೃಷ್ಟಿಸುವ ಪ್ರಚೋದನಕಾರಿ ಹುನ್ನಾರಗಳೂ (ಭಗವದ್ಗೀತೆ ರಾಷ್ಟ್ರೀಯ ಗ್ರಂಥ, ಘರ್ ವಾಪಸಿ, ಮತಾಂತರ, ಚುನಾವಣಾ ಪ್ರಚಾರದಲ್ಲಿ ರಾಮಜಾದೆ-ಹರಾಮ್ ಜಾದೆ, ರಾಷ್ಟ್ರೀಯ ಪ್ರೊಫೆಸರ್ ಭೈರಪ್ಪ, ಸಂಸ್ಕೃತ ಹೇರಿಕೆ ಇತ್ಯಾದಿ) ಮತ್ತು ಅವುಗಳ ಬಗ್ಗೆ ನಡೆದ ಚರ್ಚೆಗಳೂ ಕಾರಣವಾಗಿರಬಹುದು. ಕಳೆದ ಬಾರಿ ‘ಆಳ್ವಾಸ್ ನುಡಿಸಿರಿ’ಗೆ ಪ್ರತಿಭಟನೆಯಾಗಿ ಜನಪರ ಪರ್ಯಾಯವಾಗಿ ತಳಮಟ್ಟದಿಂದ ಹುಟ್ಟಿಕೊಂಡ ಜನನುಡಿ, ಹಲವು ಇಂತಹ ಪ್ರತಿಭಟನಾ ವೇದಿಕೆಗಳಂತೆ ‘ಒನ್ ಟೈಮ್ ವಂಡರ್’ ಆಗಿಲ್ಲ. ಎರಡನೇ ವರ್ಷಕ್ಕೆ ಇನ್ನೂ ಹೆಚ್ಚಿನ ಬಲ, ಕಸುವು, ಧೃಢತೆ, ಆತ್ಮವಿಶ್ವಾಸ ಮತ್ತು ಐಕ್ಯತೆಯೊಂದಿಗೆ ಕಾಲಿಟ್ಟಿರುವುದು ಇಂತಹ ಉತ್ಸಾಹ ಮತ್ತು ಭರವಸೆಯ ವಾತಾವರಣಕ್ಕೆ ಕಾರಣವಾಗಿರಬೇಕು.

ಎರಡನೇ ಸಮಾವೇಶದ ಮುನ್ನಡೆ

ಪಾಲ್ಗೊಂಡವರ ಸಂಖ್ಯೆ ಸುಮಾರು ಇಮ್ಮಡಿಯಾದ್ದು ಮಾತ್ರವಲ್ಲದೆ ದೊಡ್ಡ ಸಂಖ್ಯೆಯಲ್ಲಿ ಯುವಜನರ ಪಾಲ್ಗೊಳ್ಳುವಿಕೆ, jananudi-2014ಎರಡು ದಿನದ ಉದ್ದಕ್ಕೂ ಎಲ್ಲಾ ಗೋಷ್ಟಿಗಳಲ್ಲೂ ಸಭಾಂಗಣ ತುಂಬಿತ್ತಲ್ಲದೆ ನಡೆದ ಬಿಚ್ಚುಮನಸ್ಸಿನ ಪ್ರಬುದ್ಧ ಚರ್ಚೆ – ಈ ಎಲ್ಲವೂ ಸ್ಫೂರ್ತಿದಾಯಕವಾಗಿತ್ತು. ಮುಂದಿನ ವರ್ಷ ಕನಿಷ್ಟ ನಾಲ್ಕು ವಲಯವಾರು ಜನನುಡಿ ಸಮಾವೇಶಗಳನ್ನು ಸಂಘಟಿಸಿ ಇನ್ನಷ್ಟು ಪ್ರಗತಿಪರ ಸಂಘಟನೆಗಳನ್ನು ಒಳಗೊಳ್ಳಬೇಕು, ಇನ್ನಷ್ಟು ಜನರನ್ನು ತಲುಪಬೇಕು ಎಂಬ ಉತ್ಸಾಹ, ದೃಢನಿಶ್ಚಯ ಕಂಡುಬಂತು.

ಜನನುಡಿ-2013ರಲ್ಲೂ ಇದ್ದ ಕರಾವಳಿಯ ತಲ್ಲಣಗಳು, ಕವಿಗೋಷ್ಟಿ ಅಲ್ಲದೆ, ಇನ್ನೂ ಹಲವು ಹೊಸ ವಿಷಯಗಳ ಬಗ್ಗೆ ಗೋಷ್ಟಿಗಳು jananudi-2014-5ಇದ್ದಿದ್ದು ಈ ಬಾರಿಯ ವಿಶೇಷವಾಗಿತ್ತು. “ಕಾರ್ಪೊರೆಟ್ ಮೌಲ್ಯಗಳ ಮುಖಾಮುಖಿಯಲ್ಲಿ ಸಾಹಿತ್ಯ”, ‘ಶ್ರೇಣೀಕೃತ ಜಾತಿ ವ್ಯವಸ್ಥೆಯ ಹೊಸರೂಪ ಹಾಗೂ ದಲಿತ ಮಹಿಳಾ ಸಂವೇದನೆ’, “ಸಾಮಾಜಿಕ ಜಾಲತಾಣದ ಸವಾಲುಗಳು” ಮತ್ತು “ಸಮಕಾಲೀನ ಸವಾಲುಗಳು-ಐಕ್ಯತೆಯ ಅಗತ್ಯತೆ” ಇಂತಹ ಗೋಷ್ಟಿಗಳಾಗಿದ್ದವು. ಸಮಾರಂಭ, ಸಮಾರೋಪ ಅಲ್ಲದೆ ಮೇಲೆ ಹೇಳಿದ ಗೋಷ್ಟಿಗಳಲ್ಲಿ ಹಲವು ವಿಷಯಗಳ ಬಗ್ಗೆ (ಕೆಲವು ಬಾರಿ ಬಿಸಿ ಬಿಸಿ) ವಾಗ್ವಾದ, ಸಂವಾದ ನಡೆಯಿತು. ದೇಶೀ ಕಪ್ಪು ಹಣ ಹೊರಗೆಳೆಯುವ ಅಗತ್ಯತೆ, ಕಪ್ಪುಹಣ ಚಲಾವಣೆಗೆ ಅದ್ದೂರಿ ಸಾಹಿತ್ಯ ಮೇಳ-ಸಾಂಸ್ಕೃತಿಕ ಜಂಭೂರಿ ಉತ್ಸವಗಳನ್ನು ನಡೆಸುವುದು, ಸಂವಿಧಾನ ಬಿಟ್ಟರೆ ಬೇರೇ ಯಾವುದೇ ರಾಷ್ಟ್ರೀಯ ಗ್ರಂಥ ಆಗುವ ಅಸಾಧ್ಯತೆ, ಪುರೋಹಿತಶಾಹಿಯ ವಿರುದ್ಧ ದನಿಎತ್ತಿದವರ ಕೊಲೆ-ದಮನದ ಚರಿತ್ರೆ, ಇವುಗಳ ಬಗ್ಗೆ ಉದ್ಘಾಟನಾ ಸಮಾರಂಭದಲ್ಲೇ ಚರ್ಚೆ ಆರಂಭವಾಯಿತು.

ಕಾರ್ಪೊರೆಟ್ ಮೌಲ್ಯಗಳ ಮುಖಾಮುಖಿಯಲ್ಲಿ

“ಕಾರ್ಪೊರೆಟ್ ಮೌಲ್ಯಗಳ ಮುಖಾಮುಖಿಯಲ್ಲಿ ಸಾಹಿತ್ಯ”, ಗೋಷ್ಟಿಯಲ್ಲಿ ಎರಡು ಭಿನ್ನವಾದ ಅಭಿಪ್ರಾಯಗಳನ್ನು ಮಂಡಿಸಲಾಯಿತು. jananudi-2014-2ಕಾರ್ಪೊರೆಟ್ ಮತ್ತು ಸಾಹಿತ್ಯವನ್ನು ಎದುರುಬದಿರು ಮಾಡುವುದು ಕಷ್ಟ. ಎರಡೂ ನಮ್ಮದಲ್ಲ. ಎಲ್ಲದಕ್ಕೂ ಬೆಲೆ ಕಟ್ಟುವ, ಚರಿತ್ರೆಯನ್ನು ನಮ್ಮಿಂದ ಬೇರ್ಪಡಿಸುವ, ಬಹುತ್ವ ನಾಶ ಮಾಡಿ ಏಕತ್ವ ಸ್ಥಾಪಿಸುವ ಕಾರ್ಪೊರೆಟ್ ಮೌಲ್ಯಗಳನ್ನು ನಿರಾಕರಿಸಿ ಬರಿಯ ಪ್ರತಿಭಟನಾ ನೆಲೆಗಳನ್ನು ಬಿಟ್ಟು ಆತ್ಮಸ್ಥೈರ್ಯದ ಸಾಂಸ್ಕೃತಿಕ ಅಭಿವ್ಯಕ್ತಿಯ ಸ್ವಾಯತ್ತ ನೆಲೆಯನ್ನು ಕಂಡುಕೊಳ್ಳುವುದು ಪ್ರತಿಪಾದಿತವಾದ ಒಂದು ಅಭಿಪ್ರಾಯ. ಕಾರ್ಪೊರೆಟ್ ಮತ್ತು ಸಾಹಿತ್ಯ ಎರಡನ್ನು ಸಮಾನವಾಗಿ ಟೀಕಿಸುವುದು ಸರಿಯಲ್ಲ. ಕಾರ್ಪೊರೆಟ್ ಬರಿಯ ಬೆಲೆ ಕಟ್ಟುತ್ತದೆ. ಸಾಹಿತ್ಯ ಮೌಲ್ಯಗಳನ್ನು ಸೃಷ್ಟಿಸುತ್ತದೆ. ಸಾಹಿತ್ಯ ಡಿಕನ್ಸ್ಟ್ರಕ್ಟ್ ಮಾಡುತ್ತದೆ. ಕಾರ್ಪೊರೆಟ್ ರಿಕನ್ಸ್ಟ್ರಕ್ಟ್ ಮಾಡುತ್ತದೆ. ಸಾಹಿತ್ಯ ಸಮುದಾಯದಲ್ಲಿ ನೆಲೆಗೊಂಡ ವಿವೇಕದ ಮಾದರಿಗಳ ಮೌಲ್ಯಮಾಪನ ಮಾಡುತ್ತದೆ. ಕಾರ್ಪೊರೆಟ್ ಅನಿವಾರ್ಯ ಅನಿಷ್ಟ ಎಂಬುದನ್ನು ತಿರಸ್ಕರಿಸಬೇಕು. ಇದು ಪ್ರತಿಪಾದಿತವಾದ ಇನ್ನೊಂದು ಅಭಿಪ್ರಾಯ. ಇವರೆಡರ ಬಗ್ಗೆ ಹಾಗೂ ಸಾಹಿತ್ಯ ಮತ್ತು ಕಾರ್ಪೊರೆಟ್ ಮೌಲ್ಯಗಳೆಂದರೇನು ಎನ್ನುವ ಬಗ್ಗೆ ಸಹ ಸಾಕಷ್ಟು ಚರ್ಚೆ ಆಯಿತು. ಡಾ.ನಟರಾಜ ಬೂದಾಳ್ ಮತ್ತು ಡಾ. ಮಲ್ಲಿಕಾರ್ಜುನ ಮೇಟಿ ಈ ಗೋಷ್ಟಿಯಲ್ಲಿ ವಿಷಯ ಮಂಡನೆ ಮಾಡಿದರು.

ಕರಾವಳಿಯಲ್ಲೇ ಏಕೀ ಉಗ್ರ ಕೋಮುವಾದ?

”ಶ್ರೇಣೀಕೃತ ಜಾತಿ ವ್ಯವಸ್ಥೆಯ ಹೊಸರೂಪ ಹಾಗೂ ದಲಿತ ಮಹಿಳಾ ಸಂವೇದನೆ’ ಅತ್ಯಂತ ಹೆಚ್ಚು ಬಿಸಿ-ಬಿಸಿ ಚರ್ಚೆ ನಡೆದ ಗೋಷ್ಟಿಯಾಗಿತ್ತು.jananudi-2014-6 ಹೈದರಾಬಾದ್ ಮತ್ತು ಕರಾವಳಿ ಕರ್ನಾಟಕ ಎರಡರಲ್ಲೂ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿದ್ದರೂ ಕೋಮುವಾದಿ ಹಿಂಸಾಚಾರ-ದಂಗೆಗಳು ಮತ್ತು ಕೋಮುವಾದೀಕರಣದಲ್ಲಿ ಭಾರೀ ವ್ಯತ್ಯಾಸಕ್ಕೆ ಏನು ಕಾರಣವೆನ್ನುವುದು ಚರ್ಚೆಯ ವಿಷಯವಾಗಿತ್ತು. ಅನುಭಾವಿ ಸೂಫಿಸಂ ಮತ್ತು ಅವೈದಿಕ ಪರಂಪರೆಯ ಲಿಂಗಾಯತ ಮಠಗಳ ಪ್ರಾಬಲ್ಯ ಇದಕ್ಕೆ ಕಾರಣವೆಂದು ಒಂದು ವಾದ. ಆದರೆ ಕರಾವಳಿಯಲ್ಲೂ ಅವೈದಿಕ ಪರಂಪರೆಯ ಬುಡಕಟ್ಟು ಸಂಸ್ಕೃತಿ ಇದ್ದು, ಬರೇ ಅದೊಂದೇ ಕೋಮುವಾದದ ದಾಳಿ ತಡೆಯಲಾಗದು ಎನ್ನುವುದು ಇನ್ನೊಂದು ವಾದವಾಗಿತ್ತು. ಕರಾವಳಿಯಲ್ಲಿ ಮುಸ್ಲಿಮರು ಆರ್ಥಿಕವಾಗಿ ಪ್ರಬಲ ಕೋಮು ಆಗಿದ್ದು, ಶಿಕ್ಷಣ, ಬಂಡವಾಳಶಾಹಿ ಬೆಳೆದಿದ್ದು, ಬುಡಕಟ್ಟು ಸಂಸ್ಕೃತಿಯ ಆಚರಣೆಗಳನ್ನು ಪ್ರವೇಶಿಸಿ ವೈದಿಕೀಕರಿಸಿ ಅದನ್ನು ಕೋಮುವಾದಿಕರಣಕ್ಕೆ ಸಾಂಸ್ಕೃತಿಕ ರಾಜಕಾರಣಕ್ಕೆ ಬಳಸಿಕೊಂಡದ್ದು, ಪೇಜಾವರ ಸ್ವಾಮಿಜಿಯಂಥವರ ಬೆಂಬಲದಿಂದ 1960ರ ದಶಕದಲ್ಲೇ ಕೋಮುವಾದಿ ಪ್ರಯೋಗಶಾಲೆಯಾಗಿ ಈ ಪ್ರದೇಶದ ಆಯ್ಕೆ, ಇತ್ಯಾದಿ ಕಾರಣವಾಗಿರಬಹುದು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪರಾಭವ ಗಮನಿಸಿದರೆ ಕೋಮುವಾದೀಕರಣ ಜನಮಾನಸವನ್ನು ಪೂರ್ತಿಯಾಗಿ ಹಿಡಿದಿದೆ ಎಂದೂ ಹೇಳುವಂತಿಲ್ಲ.

ಈಗ ಕೆಂದ್ರ ಸರಕಾರದಲ್ಲಿ ಅಧಿಕಾರ ಹಿಡಿದಿರುವುದು, ವಿಧಾನಸಭೆ-ಲೋಕಸಭೆ ಎರಡರಲ್ಲೂ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿರುವುದು jananudi-2014-7ಕೆಲವು ಲಿಂಗಾಯತ ಮಠಗಳು ವಿಶ್ವ ಹಿಂದೂ ಪರಿಷತ್ತಿಗೆ ಬೆಂಬಲ ನೀಡುತ್ತಿರುವುದನ್ನು ಗಮನಿಸಿದರೆ, ಹೈದರಾಬಾದ್ ಕರ್ನಾಟಕ ಸೇರಿದಂತೆ ಯಾವ ಪ್ರದೇಶವೂ ಕೋಮುವಾದೀಕರಣದ ಅಪಾಯದಿಂದ ಮುಕ್ತವಾಗಿಲ್ಲ. ಧರ್ಮಸ್ಥಳ ಮತ್ತು ಆಳ್ವಾಸ್ ನುಡಿಸಿರಿ ಎರಡಕ್ಕೂ ರಾಜ್ಯದಾದ್ಯಂತದಿಂದ ಜನ-ಧನ ಹರಿದು ಬರುತ್ತಿರುವುದು ಕೋಮುವಾದೀಕರಣದ ಅಪಾಯ ಇಡೀ ರಾಜ್ಯಕ್ಕೆ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಜಾತಿ ಜತೆ ಸ್ವಲ್ಪ ಮಟ್ಟಿಗೆ ತಳುಕು ಹಾಕಿಕೊಂಡಿದ್ದ ‘ವೃತ್ತಿಕೌಶಲ್ಯ’ವನ್ನೂ ಬಂಡವಾಳಶಾಹಿ ನುಂಗಿ ಹಾಕಿರುವುದು; ಮಹಿಳಾ ವಿಮೋಚನಾ ಚಳುವಳಿ ಮೇಲು ವರ್ಗ-ಜಾತಿ ಮತ್ತು ಕೆಳವರ್ಗ-ಜಾತಿಯ ಮಹಿಳೆಯ ಸಮಸ್ಯೆಗಳ ವ್ಯತ್ಯಾಸ ಗುರುತಿಸದಿರುವುದು: ಜಾತಿ, ಧರ್ಮ, ಲಿಂಗ ಎಂಬ ಮೂರೂ ತಾರತಮ್ಯ ಎದುರಿಸುವುದರಿಂದ ಅತ್ಯಂತ ಹೆಚ್ಚು ದಮನಿತ ದಲಿತ ಮಹಿಳೆಯ ಮೇಲಾಗುವ ಸತತ ಭೀಕರ ದೌರ್ಜನ್ಯಗಳು ನಿರ್ಭಯ ಪ್ರಕರಣದಂತೆ ಪ್ರತಿಸ್ಪಂದನೆ ಪಡೆಯದಿರುವುದು; ಜಾತಿ ತಾರತಮ್ಯ-ಅಸ್ಪೃಶ್ಯತೆಗಳ ಸಾರ ಬದಲಾಗದೆ ರೂಪಗಳು ಮಾತ್ರ ಬದಲಾಗಿರುವುದು;- ಇತ್ಯಾದಿಗಳ ಬಗೆಗೂ ಪ್ರಸ್ತಾಪ ಬಂತು. ದೇವು ಪತ್ತಾರ್ ಮತ್ತು ಗೌರಿ ವಿಷಯ ಮಂಡನೆ ಮಾಡಿದರು. ಡಾ.ಎಚ್.ಎಸ್.ಅನುಪಮ ಅಧ್ಯಕ್ಷತೆ ವಹಿಸಿದ್ದರು.

ಮೊದಲ ದಿನ ಸಂಜೆ ಸಾಂಸ್ಕೃತಿಕ ಸಂಜೆ ಏರ್ಪಡಿಸಲಾಗಿತ್ತು. ಆ ದಿನಗಳು ಖ್ಯಾತಿಯ ಸಿನಿಮಾ ನಟ ಚೇತನ್ ಅವರ ಅನುಭವಗಳ jananudi-2014-3ಬಗ್ಗೆ ಮಾತನಾಡಿದರು. ಪಿಚ್ಚಳ್ಳಿಯವರು ಅಧ್ಯಕ್ಷೀಯ ಮಾತುಗಳನ್ನು ಹೇಳಿದ್ದಲ್ಲದೆ ತತ್ವಪದಗಳನ್ನೂ ಹಾಡಿದರು. ಆಟ ಮಾಟ ಧಾರವಾಡ ತಂಡ ಗಿರೀಶ್ ಕಾರ್ನಾಡ್ ಅವರ ತಲೆದಂಡ ನಾಟಕ ಪ್ರದರ್ಶಿಸಿತು.

ಸಾಮಾಜಿಕ ಮಾಧ್ಯಮದ ಸವಾಲುಗಳು

ಸಾಮಾಜಿಕ ಮಾಧ್ಯಮ ಜನಪ್ರಿಯವಾಗುತ್ತಿರುವುದು ಮತ್ತು ಅದು ಕೋಮುವಾದಿ ವಿಷ ಹರಡಲು ಪ್ರಗತಿಪರರ ವಿರುದ್ಧ ನಿಂದನೆ, ಭಯೋತ್ಪಾದನೆಗೆ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ , “ಸಾಮಾಜಿಕ ಜಾಲತಾಣದ ಸವಾಲುಗಳು” ಬಗೆಗಿನ ಗೋಷ್ಟಿಯನ್ನೂ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಹಮ್ಮಿಕೊಂಡಿರುವ ಕಾಂಗ್ರೆಸ್-ಮುಕ್ತ ಭಾರತಕ್ಕಾಗಿ ಸಾಮಾಜಿಕ ಮಾಧ್ಯಮ ಯೋಜನೆ ಪ್ರಜಾಪ್ರಭುತ್ವ-ಮುಕ್ತ ಭಾರತದತ್ತ ಹೋಗುವ ಅಪಾಯ; ಪ್ರಗತಿಪರ ಸಂಘಟನೆಗಳು, ಚಳುವಳಿಗಳು ವ್ಯಕ್ತಿಗಳು ಈ ದಾಳಿಯನ್ನು ಸಂಘಟಿತವಾಗಿ ಎದುರಿಸುವ ಮತ್ತು ಸೆಕ್ಯುಲರ್ ಪ್ರಗತಿಪರ ಮೌಲ್ಯಗಳ ಪ್ರಸಾರಕ್ಕೆ ಬಳಸುವ ತುರ್ತು ಅಗತ್ಯತೆ; ‘ಮುಖ್ಯವಾಹಿನಿ’ ಮಾಧ್ಯಮ’ಗಳಲ್ಲಿ ಅಭಿವ್ಯಕ್ತಿ ವಂಚಿತರಿಗೆ ದಲಿತ ಇತ್ಯಾದಿ ಜನವಿಬಾಗಗಳಿಗೆ ಸಾಮಾಜಿಕ ಮಾಧ್ಯಮ ಒದಗಿಸುವ ಅವಕಾಶ; jananudi-2014-9ನೈಜ ಮತ್ತು ಹುಸಿ ಅಂಬೇಡ್ಕರ್ ವಾದಿಗಳನ್ನು ಗುರುತಿಸುವ ಸವಾಲು; ಅಕ್ಷರ-ಬದ್ಧತೆ (ಫೇಸ್ ಬುಕ್ ಕಲಿಗಳು) ಮತ್ತು ಚಳುವಳಿ-ಬದ್ಧತೆ ನಡುವಿನ ಕಂದಕ; ಫೇಸ್-ಬುಕ್ ಅಸ್ಪೃಶ್ಯತೆ; ಫೇಕ್ ಅಕೌಂಟುಗಳ, ಪ್ರೊಮೊಟೆಡ್ ಲೈಕುಗಳ, ‘ಕಲ್ಪಿತ ಜನಪ್ರಿಯತೆ’ಯಿಂದ ನೈಜ ಜನಪ್ರಿಯತೆಯ ಉತ್ಪಾದನೆ; ಅಸಹನೆ, ಹಿರೊಯಿಸಂಗಳನ್ನು ಹಿಗ್ಗಿಸಿ ಪ್ರಜಾಪ್ರಭುತ್ವ ಮತ್ತು ಸಾಂಘಿಕ ಶಕ್ತಿಯನ್ನು ಕುಗ್ಗಿಸುವ ಅಪಾಯ – ಇತ್ಯಾದಿಗಳನ್ನು ವಿಷಯ ಮಂಡನೆ ಮತ್ತು ಚರ್ಚೆ ಒಳಗೊಂಡಿತ್ತು. ಪ್ರಭಾ ಬೆಳವಂಗಲ, ನಾಗರಾಜ್ ಹೆತ್ತೂರ್, ಅರುಣ ಜೋಳದ ಕೂಡ್ಲಿಗಿ ವಿಷಯ ಮಂಡನೆ ಮಾಡಿದರು. ಶಶಿಧರ ಹೆಮ್ಮಾಡಿ ಗೋಷ್ಟಿಯ ನಿರ್ವಹಣೆ ಮಾಡಿದರು.

ಕರಾವಳಿ ತಲ್ಲಣಗಳು

‘ಕರಾವಳಿಯ ತಲ್ಲಣಗಳು’ ಗೋಷ್ಟಿ ಈಗ ಎಲ್ಲರನ್ನೂ ಕಾಡುತ್ತಿರುವ ಕೋಮುವಾದೀಕರಣ ಅಲ್ಲದೆ ಅಭಿವೃದ್ಧಿಯ ಪ್ರಶ್ನೆಗಳನ್ನೂ ಒಳಗೊಂಡಿತ್ತು. ಕರಾವಳಿಯ ಬದುಕಿನ ಆಧಾರವಾಗಿದ್ದ ಕೃಷಿಯ ನಾಶ; (ಅವೈದಿಕ) ದೇವರುಗಳ ‘ಮತಾಂತರ’ (ವೈದಿಕೀಕರಣ); ಪ್ರಮುಖ ಒಬಿಸಿ ಸಮುದಾಯಗಳ ವ್ಯವಸ್ಥಿತ ಕೋಮುವಾಧೀಕರಣ; ಹೊರರಾಜ್ಯ-ಹೊರದೇಶಗಳ ಮೇಲೆ ಆಧಾರಿತ ಆರ್ಥಿಕ; ಹೊರರಾಜ್ಯ-ಹೊರದೇಶಗಳ ಉದ್ಯೋಗ ಮಾರುಕಟ್ಟೆ jananudi-2014-8ಏರುಪೇರು ಆಧಾಗ ಸಹಾಯಕ್ಕೆ ಬಾರದ ಸರಕಾರಗಳು, ಸ್ಥಳೀಯ ಉದ್ಯೋಗ ಸೃಷ್ಟಿಸದ ಕೈಗಾರಿಕೆಗಳು;ಒಂದಕ್ಕೊಂದು ಪೂರಕವಾಗುವ ಎರಡೂ ಮೂಲಭೂತವಾದಗಳ ಅಪಾಯ;ಯಾವುದೇ ನಿಜವಾದ ಪ್ರಶ್ನೆಗಳನ್ನು ಎತ್ತಿಕೊಳ್ಳದೆ ಸಾಂಸ್ಕೃತಿಕ ರಾಜಕಾರಣದಿಂದಲೇ ರಾಜಕೀಯ ಬೆಂಬಲ ಗಳಿಸಿ ಉಳಿಸಿಕೊಳ್ಳುವ ಮತೀಯ ಶಕ್ತಿಗಳು; ನಿಜವಾದ ಪ್ರಶ್ನೆಗಳನ್ನು ಎತ್ತಿಕೊಂಡು ಹೋರಾಟ ಮಾಡಿಯೂ ರಾಜಕೀಯ ಬೆಂಬಲ ಗಳಿಸಿ ಉಳಿಸಿಕೊಳ್ಳುವಲ್ಲಿ ಸೋತಿರುವ ಪ್ರಗತಿಪರ ಶಕ್ತಿಗಳು; ಸೆಕ್ಯುಲರ್ ಸಾಂಸ್ಕೃತಿಕ ರಾಜಕಾರಣ ಮಾಡುವ ಅನಿವಾರ್ಯತೆ; ರಾಜ್ಯದ ಅತ್ಯಂತ ಹಿಂದುಳಿದ ತಾಲೂಕು ಜೋಯ್ಡಾ (ಉತ್ತರ ಕನ್ನಡ)ದ ವಿಶಿಷ್ಟ ಸಮಸ್ಯೆಗಳು ದೂರದ ಬೆಂಗಳೂರಿಗೆ ಕೇಳಿಸದಿರುವುದು; – ಇತ್ಯಾದಿಗಳನ್ನು ವಿಷಯ ಮಂಡನೆ ಮತ್ತು ಚರ್ಚೆ ಒಳಗೊಂಡಿತ್ತು. ಡಾ. ಜಯಪ್ರಕಾಶ ಶೆಟ್ಟಿ, ಸುಬ್ರತೊ ಮಂಡಲ್ ಮತ್ತು ಮುನೀರ್ ಕಾಟಿಪಳ್ಳ ವಿಷಯ ಮಂಡನೆ ಮಾಡಿದರು. ವಿಷ್ಣು ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಜಾಗತೀಕರಣ ಮತ್ತು ಕೋಮುವಾದ ಪ್ರಮುಖ ಸಮಕಾಲೀನ ಸವಾಲು ಎಂದು jananudi-2014-1“ಸಮಕಾಲೀನ ಸವಾಲುಗಳು ಮತ್ತು ಐಕ್ಯತೆಯ ಅಗತ್ಯತೆ’ ಗೋಷ್ಟಿಯಲ್ಲಿ ಗುರುತಿಸಲಾಯಿತು. ಜಾಗತೀಕರಣದ ಸಣ್ಣ ಮತ್ತು ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳು ಕುಂಠಿತವಾಗುತ್ತಿರುವುದು ಅಥವಾ ಮುಚ್ಚಿ ಹೋಗುತ್ತಿರುವುದು, ಅದರಿಂದಾಗಿ ಮೀಸಲಾತಿಯ ಅವಕಾಶಗಳು ಇಲ್ಲವಾಗುತ್ತಿರುವುದು, ಖಾಸಗಿ ಉದ್ಯಮಗಳಲ್ಲಿ ಮೀಸಲಾತಿಯ ನೀತಿಯನ್ನು 200 ಉದ್ಯಮಗಳಲ್ಲಿ 198 ವಿರೋಧಿಸಿರುವುದು, ರಾಜ್ಯ ಸರಕಾರಗಳಿಗೆ ಖಾಸಗಿ ಕಂಪನಿಗಳ ‘ಬೆದರಿಕೆ’, ಬಿಜೆಪಿಯ ಕೋಮುವಾದಿ ಚುನಾವಣಾ ಪ್ರಚಾರ ಬಯಲು ಮಾಡದ ಮಾಧ್ಯಮಗಳು, ಬಿಜೆಪಿಯ ಪಿಆರ್ ಏಜೆನ್ಸಿಗಳಿಗೆ ಶರಣಾದ ಮಾಧ್ಯಮಗಳು, ದೇಶವನ್ನೆಲ್ಲಾ ಜೈಲು ಮಾಡಿದ ತುರ್ತು ಪರಿಸ್ಥಿತಿ ಮರುಕಳಿಸುವ ಮತ್ತು ಈ ಬಾರಿ ಜೈಲಿನ ಕೀಲಿ ಕೈ ಸ್ಥಳೀಯ ಕೋಮುವಾದಿ ಕಟುಕರ ಕೈಲಿ ಇರುವ ಅಪಾಯ – ಇತ್ಯಾದಿಗಳ ಬಗೆಗೆ ಪ್ರಸ್ತಾಪ ಬಂತು. ಡಾ. ಎಲ್.ಹನುಮಂತಯ್ಯಮತ್ತು ಡಿ.ಉಮಾಪತಿ ವಿಷಯ ಮಂಡನೆ ಮಾಡಿದರು. ದಿನೇಶ್ ಅಮಿನ್ ಮಟ್ಟು ಅಧ್ಯಕ್ಷತೆ ವಹಿಸಿದ್ದರು.

ನಿಜವಾದ ಶತ್ರುಗಳ ಅನಾವರಣ ಮಾಡುವುದು ಜನನುಡಿಯ ಪ್ರಮುಖ ಕೆಲಸ

ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ದಿನೇಶ್ ಆರ್ಥಿಕ ಉದಾರೀಕರಣ ಮತ್ತು ಕೋಮುವಾದೀಕರಣದ ಬಗ್ಗೆ ಯುವಕರನ್ನು ಎಚ್ಚರಿಸುವುದು ಜನನುಡಿಯ ಪ್ರಮುಖ ಜವಾಬ್ದಾರಿ ಎಂದರು. ಕಳೆದ ಎರಡು ದಶಕಗಳಲ್ಲಿ ಅವರು ಈ ಜಗತ್ತಿಗೆ ಕಣ್ಣು ತೆರೆಯುತ್ತಿದ್ದಂತೆ ನಡೆದ ಈ ಪ್ರಮುಖ ವಿದ್ಯಮಾನಗಳ ಅದರಲ್ಲೂ jananudi-2014-4ರೂಪ ವಿನ್ಯಾಸಗಳಲ್ಲಿ ಬದಲಾಗುತ್ತಿರುವ ಕೋಮುವಾದ ಹಾಕುವ ಹಲವು ವೇಷಗಳ ಮುಖವಾಡಗಳನ್ನು ಬಯಲು ಮಾಡಬೇಕು. ಬಿಜೆಪಿಯ ಸಾಂಸ್ಕೃತಿಕ ರಾಜಕಾರಣದ ಅಪಾಯ ಮತ್ತು ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೆಕ್ಯುಲರ್ ಪ್ರಗತಿಪರರು ಸೋತಿದ್ದಾರೆ. ಅದನ್ನು ಅರ್ಥ ಮಾಡಿಕೊಂಡು ಸೆಕ್ಯುಲರ್ ಸಾಂಸ್ಕೃತಿಕ ರಾಜಕಾರಣ ಮಾಡಬೇಕು. ಜನನುಡಿ ಒಂದು ಸೆಕ್ಯುಲರ್ ಮತ್ತು ಪ್ರಗತಿಪರ ಚಳುವಳಿಗಳ ಸಂಘಟನೆಗಳ ವ್ಯಕ್ತಿಗಳ ವೇದಿಕೆ. ಜನರ ನಿಜವಾದ ಶತ್ರುಗಳನ್ನು ಜನತೆಯ ಮುಂದೆಅನಾವರಣ ಮಾಡುವುದು ಜನನುಡಿಯ ಪ್ರಮುಖ ಕೆಲಸವಾಗಬೇಕು. ಇದಕ್ಕಾಗಿ ಇಲ್ಲಿರುವವರೆಲ್ಲ ತಮ್ಮ ಭಿನ್ನಾಭಿಪ್ರಾಯ ಮರೆತು ಐಕ್ಯತೆ ಸಾಧಿಸಬೇಕು. ನಮ್ಮ ದೇಶದ ವರ್ತಮಾನ ಅಧ್ಯಯನ ಮಾಡಬೇಕು. ಅದಕ್ಕಾಗಿ ಗಾಂಧಿ, ಅಂಬೇಡ್ಕರ್, ಲೊಹಿಯಾ, ಮಾರ್ಕ್ಸ್ ಓದಬೇಕು ಎಂದು ಜನನುಡಿಯ ಯುವ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಸಮಾರೋಪದಲ್ಲಿ ಕೆ.ನೀಲಾ ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಆಗ್ರಹಿಸುವ ನಿರ್ಣಯ ಮಂಡಿಸಿ ಅದನ್ನು ಸರ್ವಾನಮತದಿಂದ ಅಂಗೀಕರಿಸಲಾಯಿತು. ಡಾ. ಜಿ. ರಾಮಕೃಷ್ಣ, ಪ್ರೊ. ಆರ್.ಕೆ.ಹುಡಗಿ ಮತ್ತು ಡಾ. ಮೀನಾಕ್ಷಿ ಬಾಳಿ ಮಾತನಾಡಿದರು.

ಜನನುಡಿ ಎರಡನೇ ಸಮಾವೇಶ ಎಲ್ಲಾ ಅಂಶಗಳಲ್ಲೂ ಪ್ರಗತಿ ಸಾಧಿಸಿದ್ದರೂ, ಕರ್ನಾಟಕವನ್ನು ಬಾಧಿಸುವ ಇನ್ನೂ ಹಲವು ವಿಷಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಬಹುದಿತ್ತು. ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಆಗ್ರಹಿಸುವ ನಿರ್ಣಯವನ್ನು ಸರಕಾರಕ್ಕೆ ಕೊಟ್ಟು ಆ ಬಗ್ಗೆ ಫಾಲೋ-ಅಪ್ ಮಾಡಲಾಗುವುದಂತೆ. ಸಮಾವೇಶದ ಮುಂದುವರಿಕೆಯಾಗಿ ಇನ್ನೂಇಂತಹ ಕೆಲವು ನಿರ್ದಿಷ್ಟ ಕಾರ್ಯಾಚರಣೆಗಳ ಕಾರ್ಯಕ್ರಮ ಹಾಕಿಕೊಳ್ಳಬಹುದಿತ್ತು. ಚಳುವಳಿಗಳ ಐಕ್ಯತೆ ಮುಂದಿರುವ ಸವಾಲುಗಳ ಬಗ್ಗೆ ಒತ್ತು ಆ ಬಗೆಗಿನ ಗೋಷ್ಟಿಯಲ್ಲಿ ಸಾಲದಾಯಿತು.

***

ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಆಗ್ರಹಿಸುವ ನಿರ್ಣಯದ ಪ್ರಮುಖ ಅಂಶಗಳು:

  • ಕರಾವಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಿ ಕೋಮುವಾದಿ ಶಕ್ತಿಗಳಿಗೆ ಬೆಂಬಲವಾಗಿ ನಿಂತವರನ್ನು ಕಡ್ಡಾಯವಾಗಿ ಕರಾವಳಿಯಿಂದ ಹೊರಹಾಕಬೇಕು
  • ಐಕ್ಯತೆ-ಸಾಮರಸ್ಯ ಬೆಸೆಯುವ ಕೆಲಸ ಚಟುವಟಿಕೆಗಳನ್ನು ಸರಕಾರ ವಿವಿಧ ಿಲಾಖೆಗಳ ಮೂಲಕ ಹಮ್ಮಿಕೊಳ್ಳಬೇಕು
  • ‘ಧರ್ಮ ಸಂಸ್ಕೃತಿಯ ಹೆಸರಿನಲ್ಲಿ ಯುವಜನರ ಮೇಲೆ ದಾಳಿ ನಡೆಸುವ ಶಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು
  • ಕೋಮುವಾದವನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಕೋಮುವಾದಿ ಹಿನ್ನೆಲೆ ಇರುವ ಸಂಘ ಸಂಸ್ಥೆ, ವ್ಯಕ್ತಿ–ಶಕ್ತಿಗಳು ನಡೆಸುವ ಯಾವುದೇ ಸಾಹಿತ್ಯಿಕ ಸಾಂಸ್ಕೃತಿಕ ಸಮಾವೇ ಶಗಳಿಗೆ ಸರ್ಕಾರ ಅನುದಾನ ಕೊಡಬಾರದು ಮತ್ತು ಸರಕಾರದ ಪ್ರತಿನಿಧಿಗಳು ಭಾಗವಹಿಸಬಾರದು
  • ದೇವಮಾನವರು, ಮಠಾಧಿಪತಿಗಳು, ಧರ್ಮಾಧಿಕಾರಿಗಳು ನಡೆಸುವ ಸಾಹಿತ್ಯ ಸಮ್ಮೇಳನ, ಸರ್ವ ಧರ್ಮ ಸಮ್ಮೇಳನ, ಸಮಾಜ ಸೇವಾ ಚಟುವಟಿಕೆಗಳಿಗೆ ಸರ್ಕಾರ ಅನುದಾನ ನೀಡಬಾರದು

***

ಜನನುಡಿ-2014ರಲ್ಲಿ ಕೇಳಿ ಬಂದ ನುಡಿಗಳು

“ಬಡವರ ಬದುಕು ಉರಿಯಲ್ಲಿರುವಾಗ ‘ನುಡಿ’ ಎಂದರೆ ‘ಸಿರಿ’ ಎಂದು ಭಾವಿಸುವುದು ಶೋಷಣೆಯ ಘೋಷಣೆಯಾಗಿದೆ. ಬಂಡವಾಳಶಾಹಿಗಳು ತಮ್ಮ ಅವ್ಯವಹಾರಗಳ ಕಳಂಕ ಮುಚ್ಚಿ ಹಾಕಲು, ರಾಜಕೀಯ ಸ್ಥಾನಮಾನ-ಪ್ರತಿಷ್ಟೆ ಸಾಂಸ್ಥಿಕ ಬಲ ಗಟ್ಟಿಗೊಳಿಸಲು ಸಾಹಿತ್ಯ-ಸಾಂಸ್ಕೃತಿಕ ವಲಯದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ.” – ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ

***

“ಬಂಡವಾಳಶಾಹಿ ವಸ್ತುಗಳನ್ನು ಮಾತ್ರವಲ್ಲ ವಿಚಾರಗಳನ್ನೂ ಉತ್ಪಾದಿಸುತ್ತದೆ. ಕಾರ್ಪೊರೆಟ್ ವಲಯ ಸಾಹಿತ್ಯ ಮತ್ತು ಶಿಕ್ಷಣವನ್ನು ಹಿಡಿದಿಟ್ಟುಕೊಂಡಿದೆ. ಸಾಹಿತಿಗಳನ್ನು ‘ಮೈಲಿಗೆ’ ಮಾಡಲು ಸಾಹಿತ್ಯ ಉತ್ಸವ ನಡೆಯುತ್ತಿದೆ. ..ಇಸಂ ಚಳುವಳಿ ಬೇಡವೆನ್ನುವರು, ಎಡ-ಬಲ ಎರಡೂ ಅಲ್ಲ, ಮಧ್ಯಮ ಎನ್ನುವವರು ಬಲದ ಬಾಲವೇ ಆಗಿದ್ದಾರೆ.” – ಕೆ.ನೀಲಾ

***

“ಹಸಿವು, ಅಪಮಾನ, ಸಾಮಾಜಿಕ ತಾರತಮ್ಯ ಇರುವಾಗ ನುಡಿ ಸಿರಿ ಹೇಗಾಗುತ್ತದೆ?..1981ರಲ್ಲಿ ಪೇಜಾವರ ಸ್ವಾಮಿ ಮೀನಾಕ್ಷಿಪುರಂನಲ್ಲಿ ಇಸ್ಲಾಮಿಗೆ ಮತಾಂತರವಾದವರನ್ನು ವಾಪಾಸು ಕರೆಸುತ್ತೇನೆಂದು ಹೊರಟಾಗ, ಅವರನ್ನು ‘ಯಾವ ಜಾತಿಗೆ ಸೇರಿಸುತ್ತೀರಿ ? ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ.” -ಮಾವಳ್ಳಿ ಶಂಕರ್

***

“ಕರಾವಳಿಯಲ್ಲಿ ಇಂದು ಉಸಿರುಗಟ್ಟಿಸುವ ವಾತಾವರಣ ಇದೆ. ಇಲ್ಲಿ ಕಂಬಳಕ್ಕೆ ಹೇರಿದ ನಿಷೇಧ ಮಡೆಸ್ನಾನಕ್ಕೆ ಇಲ್ಲ. ಉಳಾಯಿಬೆಟ್ಟುವಿನ ಘಟನೆ ಸಂಬಂಧ ಪತ್ರಿಕೆಯೊಂದು 300 ಮುಸ್ಲಿಮರು ಆಕ್ರಮಣ ಮಾಡಿದರು ಎಂದು ವರದಿ ಮಾಡಿರುವುದು ಪತ್ರಕರ್ತರ ಮನಸ್ಸು ಎಷ್ಟು ಮಲಿನವಾಗಿದೆ ಎಂಬುದನ್ನು ತೋರಿಸುತ್ತದೆ. 60ವರ್ಷಗಳ ಹಿಂದೆ ಇಡೀ ಜಿಲ್ಲೆಯಲ್ಲಿ ನಾನೊಬ್ಬಳೇ ಮುಸ್ಲಿಂ ಹುಡುಗಿ ಶಾಲೆಗೆ ಹೋಗುತ್ತಿದ್ದಾಗ ಆಕ್ಷೇಪಿಸಿದವರಿಗೆ ನನ್ನ ತಂದೆ ದಿಟ್ಟ ಉತ್ತರ ಕೊಟ್ಟಿದ್ದರು. ಇಂದು ಶಾಲೆಗೆ ಹೋಗುವ ಮುಸ್ಲಿಂಹೆಣ್ಣು ಮಕ್ಕಳಿಗೆ ರಕ್ಷಣಾ ಪಡೆ ಬೇಡ. ನಾವಿದ್ದೇವೆ ಎಂದು ತಂದೆ-ತಾಯಿ ಹೇಳಲು ಸಾಧ್ಯವಾಗುತ್ತಿಲ್ಲ. ಇಂದು ಜನ ಹಿಂದೂಗಳಾಗಿ, ಮುಸ್ಲಿಮರಾಗಿ ಬದುಕುತ್ತಿದ್ದಾರೆ. ಮನುಷ್ಯರಾಗಿ ಬದುಕುತ್ತಿಲ್ಲ.” -ಸಾರಾ ಅಬೂಬಕ್ಕರ್

ಚಿತ್ರಕೃಪೆ: ಐವನ್ ಡಿಸಿಲ್ವ