Daily Archives: April 23, 2015

ಆರ್‌ಎಸ್‌ಎಸ್ ಮತ್ತು ಅಂಬೇಡ್ಕರ್ : ಐಡಿಯಾಲಜಿಯ ವಾಸ್ತವೀಕರಣ, ವಾಸ್ತವದ ಆದರ್ಶೀಕರಣ

– ಬಿ.ಶ್ರೀಪಾದ ಭಟ್

ಇತಿಹಾಸವನ್ನು ತಮ್ಮ ಮತೀಯವಾದಿ ಸಿದ್ಧಾಂತಗಳಿಗೆ ಅನುಗುಣವಾಗಿ ಉತ್ಪಾದಿಸುವುದರಲ್ಲಿ ಸಿದ್ಧಹಸ್ತರಾದ ಸಂಘ ಪರಿವಾರ ಮತ್ತು ಮುಖ್ಯವಾಗಿ ಆರೆಸ್ಸೆಸ್ ಇಂದು ಡಾ.ಬಿ.ಆರ್.ಆಂಬೇಡ್ಕರ್ ಅವರನ್ನು appropriation ಮಾಡಿಕೊಳ್ಳಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ. ಅಂಬೇಡ್ಕರ್ ’ಘರ್ ವಾಪಸಿ’ ನೀತಿಯನ್ನು ಬೆಂಬಲಿಸಿದ್ದರು ಎನ್ನುವ ಸುಳ್ಳನ್ನು ಉತ್ಪಾದಿಸುತ್ತಿದ್ದಾರೆ. ಗೋಬೆಲ್ಸ್ ತಂತ್ರವನ್ನು ಅನುಸರಿಸುತ್ತಿರುವ ಸಂಘ ಪರಿವಾರ ಸಾವಿರ Young_Ambedkarಸುಳ್ಳುಗಳನ್ನು ಹೇಳುತ್ತಿದೆ. ಅಂಬೇಡ್ಕರ್ ಅವರ ೧೨೫ನೇ ಜನ್ಮ ದಿನದ ಸಂದರ್ಭದಲ್ಲಿ ೨೦೦ ಪುಟಗಳ ಅಂಬೇಡ್ಕರ್ ಕುರಿತಾದ ಕೃತಿಗಳನ್ನು ತನ್ನ ಪ್ರಕಾಶನದ ಮೂಲಕ ಹೊರತರಲು ಆರೆಸ್ಸೆಸ್ ನಿರ್ಧರಿಸಿದೆ. ಈ ಪುಸ್ತಕಗಳಲ್ಲಿ ಅಂಬೇಡ್ಕರ್ ಅವರು ಇಸ್ಲಾಮಿಕ್ ಅಗ್ರೆಶನ್, ಮತಾಂತರ, ಆರ್ಟಿಕಲ್ ೩೭೦ ಗಳ ಕುರಿತಂತೆ ಸಂಘ ಪರಿವಾರದ ಚಿಂತನೆಗಳನ್ನೆ ಹೊಂದಿದ್ದರು ಎಂದು ವಿವರಿಸಲಾಗಿದೆ. ಅವರೊಬ್ಬ ರಾಷ್ಟ್ರೀಯವಾದಿ ಎಂದೇ ಹೇಳುವ ಸಂಘ ಪರಿವಾರದ ಮುಖವಾಣಿ ’ಆರ್ಗನೈಸರ್‌’ನ ಸಂಪಾದಕ ಪ್ರಫುಲ್ಲ ಕೇಟ್ಕರ್ ’ಪಾಕಿಸ್ತಾನದ ಹೈದರಾಬಾದನಲ್ಲಿ ಪರಿಶಿಷ್ಟ ಜಾತಿಯ ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸಿದಾಗ ಅದನ್ನು ಕಟುವಾಗಿ ಟೀಕಿಸಿದ ಅಂಬೇಡ್ಕರ್ ಮತಾಂತರಗೊಂಡ ಹಿಂದೂಗಳು ಮರಳಿ ತಮ್ಮ ಧರ್ಮಕ್ಕೆ ಬಂದರೆ ತಾವು ಸ್ವಾಗತಿಸುತ್ತೇವೆ ಎಂದು ಹೇಳಿದರು. ಈ ಮೂಲಕ ಅವರು ’ಘರ್ ವಾಪಸಿ’ಯನ್ನು ಬೆಂಬಲಿಸಿದರು’ ಎಂದು ಹೇಳುತ್ತಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಾ ’ಅಂಬೇಡ್ಕರ್ ಅವರನ್ನು ರಾಜಕೀಯ ಅಸ್ಪೃಶ್ಯತೆಯಿಂದ ಬಿಡುಗಡೆಗೊಳಿಸಬೇಕಾಗಿದೆ, ಕಳೆದ ಇಪ್ಪತ್ತು ವರ್ಷಗಳಲ್ಲಿ ಅಂಬೇಡ್ಕರ್‌ಗೆ ಆದ ಅನ್ಯಾಯವನ್ನು ನಾವು ಸರಿಪಡಿಸುತ್ತೇವೆ’ ಎಂದು ಹೇಳಿದ್ದಾರೆ. narender_modi_rssಮಹಾರಾಷ್ಟ್ರದ ಮುಖ್ಯಮಂತ್ರಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ತಮ್ಮ ಐಡಿಯಾಲಜಿ ಗೋಳ್ವಲ್ಕರ್, ಸಾವರ್ಕರ್ ಹೆಸರನ್ನು ಸ್ಮರಿಸದೆ ತಾನು ಅಂಬೇಡ್ಕರ್ ಮತ್ತು ಜೋತಿಬಾ ಫುಲೆ ಮಾರ್ಗದಲ್ಲಿ ಮುನ್ನಡೆಯುತ್ತೇನೆ ಎಂದು ಹೇಳಿದರು. ಇತ್ತೀಚೆಗೆ ಮುಂದಿನ ಒಂದು ವರ್ಷದ ಕಾಲ ಅಂಬೇಡ್ಕರ್ ಅವರ ಕುರಿತಾಗಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಪಟ್ಟಿಯನ್ನು ಸಹ ಬಿಡುಗಡೆಗೊಳಿಸಿದ್ದಾರೆ. ಇಡೀ ಸಂಘ ಪರಿವಾರವೇ ಅಂಬೇಡ್ಕರ್ ಮೂಲಕ ತಳ ಸಮುದಾಯಗಳ ಓಟ್ ಬ್ಯಾಂಕ್‌ಗೆ ಲಗ್ಗೆ ಇಟ್ಟಿದೆ ಎನ್ನುವುದು ಮಾತ್ರ ಇವೆಲ್ಲದರ ಒಟ್ಟು ಸಾರಾಂಶ. ಏಕೆಂದರೆ ದಲಿತರ ಬೆಂಬಲವಿಲ್ಲದೆ ರಾಜಕೀಯ ಅಧಿಕಾರ ಸಾಧ್ಯವಿಲ್ಲ ಎಂದು ಈ ಮತೀಯವಾದಿಗಳಿಗೆ ಅರಿವಾಗಿದೆ.

ಸುಮಾರು ೧೩೦ ವರ್ಷಗಳ ಹಿಂದೆ ಆರ್ಯ ಸಮಾಜ ಪ್ರಾರಂಬಿಸಿದ “ಜಾತ್-ಪಾತ್-ತೋಡಕ್ ಮಂಡಲ್” ಎನ್ನುವ ಒಕ್ಕೂಟ ಮೂಲಭೂತವಾಗಿ ಹಿಂದೂ ಧರ್ಮದಲ್ಲಿ ಸುಧಾರಣೆಯನ್ನು ತರಲು ಬಹುಪಾಲು ಬ್ರಾಹ್ಮಣರು ಕಟ್ಟಿಕೊಂಡ ಒಂದು ಸಂಸ್ಥೆ. ಹಿಂದೂ ಧರ್ಮದ ಜಾತಿ ಪದ್ಧತಿಯಲ್ಲಿ ಸುಧಾರಣೆ ಬಯಸುವ ಈ ಮೇಲ್ಜಾತಿಗಳ ಗುಂಪಿನಲ್ಲಿ ಒಬ್ಬ ದಲಿತನೂ ಸದಸ್ಯನಾಗಿರಲಿಲ್ಲ. ೧೯೩೫ರಲ್ಲಿ ತಮ್ಮ ಸಂಸ್ಥೆಯ ವಾರ್ಷಿಕೋತ್ಸವಕ್ಕೆ ಅಂಬೇಡ್ಕರ್ ಅವರನ್ನು ಅತಿಥಿಯಾಗಿ ಆಹ್ವಾನಿಸಿರುತ್ತಾರೆ. ಮೊದಲು ಈ ಆಹ್ವಾನವನ್ನು ತಿರಸ್ಕರಿಸುವ ಅಂಬೇಡ್ಕರ್ ನಂತರ ತಮ್ಮ ಮಾತುಗಳನ್ನು ಸೆನ್ಸಾರ್ ಮಾಡಕೂಡದು ಎನ್ನುವ ಕರಾರಿನೊಂದಿಗೆ ಸಮ್ಮತಿಸುತ್ತಾರೆ. ತಮ್ಮ ಭಾಷಣದ ಸಾವಿರ ಪ್ರತಿಗಳನ್ನು ಮುದ್ರಿಸಿ “Annihilation of Caste” ತಲೆಬರಹದ ಅಡಿಯಲ್ಲಿ ತಮ್ಮ ಭಾಷಣದ ಪ್ರತಿಯನ್ನು “ಜಾತ್-ಪಾತ್-ತೋಡಕ್ ಮಂಡಲ್”ಗೆ ಕಳುಹಿಸಿಕೊಡುತ್ತಾರೆ. ಆದರೆ ತಮ್ಮ ಈ ಲೇಖನಗಳಲ್ಲಿ ಅಂಬೇಡ್ಕರ್ ಅವರು ಮಂಡಲ್‌ನ ಈ ಸುಧಾರಣ ತಂತ್ರವನ್ನು ನಿರಾಕರಿಸಿ ಇಂಡಿಯಾದಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ’ಜಾತಿ ವಿನಾಶ’ ಒಂದೇ ಉಳಿದಿರುವ ಮಾರ್ಗ ಎಂದು ಹೇಳುತ್ತಾರೆ. ಹಿಂದೂ ಧರ್ಮದ ಮನುನೀತಿಯನ್ನು, ವರ್ಣಾಶ್ರಮ ಪದ್ಧತಿಯನ್ನು, ಬ್ರಾಹ್ಮಣ್ಯದ ಕುಟಿಲತೆಯನ್ನು ಕಟುವಾಗಿ ಟೀಕಿಸುತ್ತಾರೆ. ಈ ಮಂಡಲ್‌ನ ನೇತೃತ್ವವನ್ನು ವಹಿಸಿರುವ ಬ್ರಾಹ್ಮಣರಿಂದ ಜಾತಿ ಸುಧಾರಣೆ ಸಾಧ್ಯವೆ ಎಂದು ಪ್ರಶ್ನಿಸುವ ಅಂಬೇಡ್ಕರ್, ಬ್ರಾಹ್ಮಣರ ನಾಯಕತ್ವದಲ್ಲಿ ಜಾತಿ ವಿನಾಶ ಸಾಧ್ಯವಿಲ್ಲ ಎಂದು ಎಚ್ಚರಿಸುತ್ತಾರೆ. ’ನಿಮ್ಮಲ್ಲಿ ಸುಧಾರಣವಾದಿ ಬ್ರಾಹ್ಮಣರು ಇರಬಹುದು. ಆದರೆ ಇವರೆಲ್ಲ ಸಂಪ್ರದಾಯವಾದಿ ಬ್ರಾಹ್ಮಣರ ವಿರುದ್ಧ ಸಂಘಟನೆ ನಡೆಸುತ್ತಾರೆ ಎನ್ನುವುದನ್ನು ನಾನಂತೂ ನಂಬುವುದಿಲ್ಲ ಮತ್ತು ಇದು ಸಾಧ್ಯವೂ ಇಲ್ಲ’ ಎಂದು ಅಂಬೇಡ್ಕರ್ ಸ್ಪಷ್ಟ ಮಾತುಗಳಲ್ಲಿ ಮಂಡಲ್‌ನ ಒಕ್ಕೂಟವನ್ನು ಉದ್ದೇಶಿಸಿ ಹೇಳುತ್ತಾರೆ. ಅಂಬೇಡ್ಕರ್ ಅವರ ನೇರವಾದ, ಸತ್ಯನಿಷ್ಠ ಮಾತುಗಳಿಂದ ಹಿಂಜರಿದ ಬ್ರಾಹ್ಮಣರ ನೇತೃತ್ವದ ಜಾತ್-ಪಾತ್-ತೋಡಕ್ ಮಂಡಲ್ ಕೊನೆಗೂ ಆ ಸಮ್ಮೇಳವನ್ನು ನಡೆಸುವುದೇ ಇಲ್ಲ. ಅಂಬೇಡ್ಕರ್ ಅವರು ತಮ್ಮ ಭಾಷಣದ ಪ್ರತಿಯನ್ನು “Annihilation of Caste” ಹೆಸರಿನಲ್ಲಿ ಪುಸ್ತಕರೂಪದಲ್ಲಿ ಮುದ್ರಿಸುತ್ತಾರೆ.

ಹಿಂದೂ ಧರ್ಮದಲ್ಲಿನ ಜಾತಿ ವಿನಾಶವು ಅದರ ಎಲ್ಲಾ ಸೌಲಭ್ಯಗಳನ್ನು ಅನುಭವಿಸುತ್ತಿರುವ ಮೇಲ್ಜಾತಿಗಳ ಜವಾಬ್ದಾರಿ ಎನ್ನುವುದು ಅಂಬೇಡ್ಕರ್ ಮತ್ತು ಪುಸ್ತಕದ ಒಟ್ಟಾರೆ ಆಶಯವಾಗಿತ್ತು. ಸಾವಿರಾರು ವರ್ಷಗಳಿಂದ ದೌರ್ಜನ್ಯ ನಡೆಸುತ್ತಾ ಬಂದಿರುವ ಮೇಲ್ಜಾತಿಗಳು ಸ್ವತಃ ತಾವೇ ಈ ಜಾತಿ ಪದ್ಧತಿಯನ್ನು ಕೊನೆಗೊಳಿಸಬೇಕು ಎಂದು ಅಂಬೇಡ್ಕರ್ ಚಿಂತನೆಗಳು ಆಶಿಸುತ್ತವೆ. ಆದರೆ ೧೯೩೬ರಿಂದ ಇಂದಿನವರೆಗೂ ಜಾತಿ ವಿನಾಶದ ಕುರಿತಾಗಿ ಮೇಲ್ಜಾತಿಗಳಲ್ಲಿ ಯಾವುದೇ ಬಗೆಯ ಹೊಸ ಚಿಂತನೆಗಳು ಕಂಡು ಬರುತ್ತಿಲ್ಲ. ಜಾತಿ ವಿನಾಶಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವ ಮೇಲ್ಜಾತಿಯ ಸಮಾಜ ಸಂಪ್ರದಾಯಸ್ಥರ ಮೂಲಕ ನೇರವಾಗಿ ಮತ್ತು ಸುಧಾರಣವಾದಿಗಳ ಮೂಲಕ ಪರೋಕ್ಷವಾಗಿ ಜಾತಿ ಪದ್ಧತಿಯನ್ನು ಪೋಷಿಸುತ್ತಿದೆ. ಬ್ರಾಹ್ಮಣರಿಂದ ಮೊದಲುಗೊಂಡು ಮುಟ್ಟಿಸಿಕೊಳ್ಳುವ ಎಲ್ಲಾ ಜಾತಿಗಳಲ್ಲಿಯೂ ಬ್ರಾಹ್ಮಣ್ಯದ ಜಾತೀಯತೆ ಮತ್ತು ಸನಾತನವಾದವು ಬೆರೆತು ಹೋಗಿದೆ. ಮೇಲ್ಜಾತಿಯ ಸಂಪ್ರದಾಯನಿಷ್ಠರು ಮತ್ತು ಸುಧಾರಣವಾದಿಗಳು ತಮ್ಮ ಜಾತಿ ಐಡೆಂಟಿಟಿಯನ್ನು ಕಳಚಿಕೊಳ್ಳಲು ವಿಫಲರಾಗಿದ್ದಾರೆ. ಇದು ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾದದ್ದು. ಜಾತಿ ಐಡೆಂಟಿಟಿಯಿಂದ ಸಂಪೂರ್ಣವಾಗಿ ಹೊರಬರದೆ, ಜಾತಿ ವಿನಾಶದ ಪರಿಕಲ್ಪನೆಗೆ ಹೆಗಲು ಕೊಡದೆ ಅಂಬೇಡ್ಕರ್ ಲೆಗಸಿಯ ಉತ್ತರದಾಯಿತ್ವವನ್ನು ಹೆಗಲಗೇರಿಸಿಕೊಳ್ಳುವುದು ಕೇವಲ ಆತ್ಮವಂಚನೆ ಎನಿಕೊಳ್ಳುತ್ತದೆ. ಇವರ ಈ ಮರೆ ಮೋಸದ ಫಲವಾಗಿ ತಳ ಸಮುದಾಯಗಳು ಈ ಸುಧಾರಣವಾದಿಗಳಿಂದಲೂ ಮತ್ತಷ್ಟು ಅಂತರ ಕಾಯ್ದುಕೊಳ್ಳುತ್ತಾ ಹೊಸ ಸಾಮಾಜಿಕ-ರಾಜಕೀಯ ಪಲ್ಲಟಗಳಿಗಾಗಿ ಸಂಘಟಿತರಾಗುತ್ತಿದ್ದಾರೆ. ಆದರೆ ಸುಧಾರಣಾವಾದಿಗಳನ್ನು ಹೊರತುಪಡಿಸಿ ಹಿಂದೂ ಧರ್ಮದ ಅಡಿಯಲ್ಲಿ ರಾಜಕೀಯವಾಗಿ ಒಂದಾಗುವ ಈ ಸಂಪ್ರದಾಯನಿಷ್ಠ ಜಾತಿ ಸಮೂಹಗಳು ಇಂದು ಬಿಜೆಪಿ ಮತ್ತು ಆರೆಸ್ಸೆಸ್‌ನ ಶಕ್ತಿಕೇಂದ್ರಗಳಾಗಿವೆ. ಈ ಜಾತಿಸಂಘಟನೆಗಳನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡಿರುವ ಬಿಜೆಪಿ ಪಕ್ಷ ತಳ ಸಮುದಾಯಗಳನ್ನು ಸೆಳೆಯಲು ಮುಂದಾಗಿದೆ. ಅದಕ್ಕೆ ಸಂಘ ಪರಿವಾರ ಬಳಸಿಕೊಳ್ಳುತ್ತಿರುವುದು ಅಂಬೇಡ್ಕರ್ ಅವರ ಲೆಗಸಿಯನ್ನು. ಆದರೆ ಅಂಬೇಡ್ಕರ್ ಅವರ ಎಲ್ಲಾ ಹೋರಾಟಗಳು, ಸಂಘಟನೆಗಳು, ಚಿಂತನೆಗಳು ಸಂಪೂರ್ಣವಾಗಿ ಹಿಂದೂ ಧರ್ಮದ ವಿರುದ್ಧವಾಗಿತ್ತು. ಅಂಬೇಡ್ಕರ ಅವರ ಬರಹಗಳು, ಭಾಷಣಗಳಲ್ಲಿ ಇದು ನಮಗೆ ಸ್ಪಷ್ಟವಾಗಿ ಅರಿವಾಗುತ್ತದೆ.

ಆದರೆ ಮೂವತ್ತು ಮತ್ತು ನಲವತ್ತರ ದಶಕಗಳಲ್ಲಿ ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಮತ್ತು ಮುಸ್ಲಿಂ ಲೀಗ್‌ನ ಮತೀಯವಾದಿ ರಾಜಕಾರಣವನ್ನು ತೀವ್ರವಾಗಿ ಖಂಡಿಸಿದ್ದರು. ೧೯೪೦ರಲ್ಲಿ ಅಂಬೇಡ್ಕರ್ ಅವರು ಬರೆದ “ಪಾಕಿಸ್ತಾನ ಅಥವಾ ವಿಭಜನೆಗೊಂಡ ಇಂಡಿಯಾ” ಪುಸ್ತಕದಲ್ಲಿ ಎಲ್ಲಾ ಮಾದರಿಯ ಮೂಲಭೂತವಾದಿಗಳನ್ನು, ಕೋಮುವಾದಿ ಶಕ್ತಿಗಳನ್ನು ವಿರೋಧಿಸಿದ್ದರು ಮತ್ತು ಕಟುವಾದ ಶಬ್ದಗಳಿಂದ ಟೀಕಿಸಿದ್ದರು. ಆ ಪುಸ್ತಕದಿಂದ ಆಯ್ದ ಭಾಗಗಳು:

“ಒಂದು ವೇಳೆ ಹಿಂದೂ ರಾಜ್ ಎನ್ನುವ ತತ್ವವು ಜಾರಿಗೊಂಡರೆ, ನಿಜಕ್ಕೂ ಅದು ಈ ದೇಶದ ಬಲು ದೊಡ್ಡ ದುರ್ಘಟನೆ ಎಂದೇ ನಾನು ಭಾವಿಸುತ್ತೇನೆ. ಇದರಲ್ಲಿ ಸಂಶಯವಿಲ್ಲ. ಇದು ದುರಹಂಕಾರದ ಚಿಂತನೆಗಳು. ಈ ಕುರಿತಾಗಿ ಹಿಂದೂಗಳು ಏನೇ ಹೇಳಿಕೊಂಡರೂ ಸ್ವಾತಂತ್ರ, ಸಮಾನತೆಗೆ ಹಿಂದೂಯಿಸಂ ಒಂದು ವಿಪತ್ತು. ಈ ಹಿನ್ನೆಲೆಯಲ್ಲಿ ಈ ಮಾದರಿಯ ಚಿಂತನೆಗಳಿಗೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅರ್ಹತೆ ಇಲ್ಲ. ಹಿಂದೂ ರಾಜ್ ಅನ್ನು ನಾವು ಯಾವುದೇ ಬೆಲೆ ತೆತ್ತಾದರೂ ಸರಿ, ತಡೆಯಬೇಕಾಗಿದೆ.

“ಮೇಲ್ಜಾತಿ ಹಿಂದೂಗಳು ಹಿಂದುತ್ವದ ಹೆಸರಿನಲ್ಲಿ ಸ್ವತಃ ಹಿಂದೂಗಳನ್ನು ನಾಶಮಾಡುವಂತಹ ವಿಶೇಷ ಗುಣಲಕ್ಷಣಗಳನ್ನು ಅವರು ಹೊಂದಿದ್ದಾರೆ. ಸಂಪತ್ತು ಮತ್ತು ಶಿಕ್ಷಣದಲ್ಲಿ ಏಕಸ್ವಾಮ್ಯತೆಯನ್ನು ಸಾಧಿಸಿದ ಈ ಮೇಲ್ಜಾತಿ ಹಿಂದೂಗಳಿಗೆ ಈ ಏಕಸ್ವಾಮ್ಯತೆಯನ್ನು ಮುಂದುವರೆಸಿಕೊಂಡು ಹೋಗುವುದು ಅವರ ಮುಖ್ಯ ಗುರಿಯಾಗಿತ್ತು. ತಮ್ಮ ಈ ಸ್ವಾರ್ಥದ ಗುಣದಿಂದಾಗಿ ತಳ ಸಮುದಾಯಗಳಿಗೆ ಶಿಕ್ಷಣ ಮತ್ತು ಆರ್ಥಿಕ ಸುಭದ್ರತೆಯಂದ ವಂಚನೆಗೊಳಿಸಿದರು. ತಳಸಮುದಾಯಗಳೊಂದಿಗೆ ಬೆಳೆಸಿದ ಪ್ರತ್ಯೇಕತೆ ಮತ್ತು ತಾರತಮ್ಯ ತತ್ವವನ್ನು ಈ ಮೇಲ್ಜಾತಿ ಹಿಂದೂಗಳು ಮುಸ್ಲಿಂ ಸಮುದಾಯಕ್ಕೂ ವಿಸ್ತರಿಸುತ್ತಿದ್ದಾರೆ. ಇವರು ಮುಸ್ಲಿಂರನ್ನು ಸಹ ಶಿಕ್ಷಣ ಮತ್ತು ಸಂಪತ್ತಿನಿಂದ ದೂರವಿಡಲು ಬಯಸುತ್ತಿದ್ದಾರೆ.

“ಮೇಲ್ನೋಟಕ್ಕೆ ಆಶ್ಚರ್ಯವೆನಿಸಿದರೂ ಸಾವರ್ಕರ್ ಮತ್ತು ಜಿನ್ನಾ ಒಂದು ರಾಷ್ಟ್ರ ವರ್ಸಸ್ ದ್ವಿರಾಷ್ಟ್ರದ ತತ್ವದ ವಿರುದ್ಧ ಪರಸ್ಪರ ವಿರೋಧಿಸುವುದರ ಬದಲು ಇಬ್ಬರೂ ಅದರ ಕುರಿತಾಗಿ ಸಮ್ಮತದಿಂದಿದ್ದಾರೆ. ಅಲ್ಲದೆ ಒಂದು ಮುಸ್ಲಿಂ ರಾಷ್ಟ್ರ ಮತ್ತು ಇನ್ನೊಂದು ಹಿಂದೂ ರಾಷ್ಟ್ರ ಎಂದು ಒಪ್ಪಿಕೊಂಡಿದ್ದಾರೆ.

“ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ನೀತಿಯ ಆಧಾರದಲ್ಲಿ ಸಮಾನಮನಸ್ಕ ಸಮ್ಮಿಶ್ರ ರಾಜಕೀಯ ಪಕ್ಷಗಳು ಧೃವೀಕರಣಗೊಳ್ಳಬೇಕಾಗಿದೆ. ಈ ಮೂಲಕ ಈ ಹಿಂದೂ ರಾಜ್ ಮತ್ತು ಮುಸ್ಲಿಂ ರಾಜ್ ತತ್ವಗಳಿಗೆ ಅಂತ್ಯ ಹೇಳಬೇಕಾಗಿದೆ.ಇಂಡಿಯಾದಲ್ಲಿ ತಳ ಸಮುದಾಯಗಳು ಮತ್ತು ಮುಸ್ಲಿಂ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಒಂದೇ ಆಗಿರುವುದರಿಂದ ತಮ್ಮನ್ನು ಶತಮಾನಗಳ ಕಾಲ ಅವಕಾಶವಂಚಿತರಾಗಿ ಮಾಡಿದ ಈ ಮೇಲ್ಜಾತಿ ಹಿಂದೂಗಳ ವಿರುದ್ಧ ಒಂದಾಗಬೇಕಿದೆ.”

ಹಿಂದೂಗಳ ಕುರಿತಾಗಿ ಅಂಬೇಡ್ಕರ್ ಅವರು “Annhilation of CVaste” ಪುಸ್ತಕದಲ್ಲಿ ಬರೆದ ಕೆಲವು ಭಾಗಗಳು:

“ಹಿಂದೂಗಳು ತಮ್ಮನ್ನು ತಾವು ಸಹನಾಶೀಲರೆಂದು ಕೊಚ್ಚಿಕೊಳ್ಳುತ್ತಾರೆ. ನನ್ನ ಅಭಿಪ್ರಾಯದಲ್ಲಿ ಇದು ತಪ್ಪು ಗ್ರಹಿಕೆ. ಬಹುತೇಕ ಸಂದರ್ಭಗಳಲ್ಲಿ ಅಸಹನೀಯ ಮತ್ತು ಉದ್ರೇಕಿತರಾಗಿ ವರ್ತಿಸುವ ಹಿಂದೂಗಳು ತಾವು ಬಲಹೀನರಾಗಿದ್ದಾಗ ಮಾತ್ರ ಸೈರಣೆಯಿಂದ ವರ್ತಿಸುತ್ತಾರೆ. ಹಿಂದೂಗಳು ಮುಸ್ಲಿಂರು ತಮ್ಮ ಧರ್ಮವನ್ನು ವಿಸ್ತರಿಸಿದ್ದಕ್ಕಾಗಿ ಅವರನ್ನು ಟೀಕಿಸುತ್ತಾರೆ. ಇದಕ್ಕಾಗಿ ಖಡ್ಗವನ್ನು ಬಳಸಿದ್ದಾರೆಂದು ಮುಸ್ಲಿಂರನ್ನು ದೂರುತ್ತಾರೆ. ಇದೇ ಮಾದರಿಯಲ್ಲಿ ಕ್ರಿಶ್ಚಿಯನ್ನರನ್ನು ದೂರುತ್ತಾರೆ. ಹಿಂದೂ ಆದವನು ಬೆಳಕನ್ನು ಕೊಡದಿದ್ದರೆ, ಬೇರೆಯವರನ್ನು ಶಾಶ್ವತವಾಗಿ ಕತ್ತಲಲ್ಲಿಟ್ಟರೆ, ತನ್ನ ಜ್ಞಾನವನ್ನು ಹಂಚಿಕೊಳ್ಳದಿದ್ದರೆ ಮುಸ್ಲಿಂ ಅವರ ಕುತ್ತಿಗೆಯನ್ನು ಹಿಡಿದಿದ್ದರಲ್ಲಿ ನನಗೆ ತಪ್ಪೇನು ಕಾಣುತ್ತಿಲ್ಲ. ಏಕೆಂದರೆ ಹಿಂದೂವಿನ ಈ ಸಂಕುಚಿತ ಮನೋಭಾವ ಮತ್ತು ಬೌದ್ಧಿಕ ಸರ್ವಾಧಿಕಾರ ಮುಸ್ಲಿಂನ ದಾಳಿಗಿಂತಲೂ ಕ್ರೂರವೆಂದು ನಾನು ನಂಬಿದ್ದೇನೆ.

“ಸಮಾಜ ಶಾಸ್ತ್ರಜ್ಞರು ಹಿಂದೂಗಳನ್ನು ’ಕರುಣೆಯ ಪ್ರಜ್ಞಾರೂಪ’ ಎಂದು ಕರೆಯುತ್ತಾರೆ. ಆದರೆ ಇದನ್ನು ತಿರಸ್ಕರಿಸುತ್ತೇನೆ. ಹಿಂದೂನಲ್ಲಿ ಕರುಣೆಯ ಪ್ರಜ್ಞೆ ಇಲ್ಲ. ಪ್ರತಿಯೊಬ್ಬ ಹಿಂದೂವಿನಲ್ಲಿರುವುದು ಜಾತಿಯ ಪ್ರಜ್ಞೆ. ಈ ಕಾರಣಕ್ಕಾಗಿಯೇ ಹಿಂದೂಗಳನ್ನು ಸಮಾಜ ಅಥವಾ ದೇಶವೆಂದು ಪರಿಗಣಿಸಲು ಸಾಧ್ಯವಿಲ್ಲ. ಹಿಂದೂ ಸಮಾಜವು ಒಂದು ಮಿಥ್ಯೆ ಎಂದು ನಾನು ಖಚಿತವಾಗಿ ನಂಬಿದ್ದೇನೆ. ಹಿಂದೂ ಎನ್ನುವ ಪದವೇ ವಿದೇಶಿ ಮೂಲದ್ದು. ಸ್ಥಳೀಯರನ್ನು ಗುರುತಿಸಲು ಮುಸ್ಲಿಂರು ಕೊಟ್ಟ ಪದ. ಮುಸ್ಲಿಂ ಸಾಮ್ರಾಜ್ಯಕ್ಕಿಂತಲೂ ಮೊದಲು ಸಂಸ್ಕೃತ ಪಠ್ಯಗಳಲ್ಲಿ ಈ ಪದಬಳಕೆ ಇಲ್ಲ. ಹಿಂದೂ ಸಮಾಜ ಎನ್ನುವುದೇ ಆಸ್ತಿತ್ವದಲ್ಲಿ ಇಲ್ಲ. ಇದು ಜಾತಿಗಳ ಒಂದು ಗುಂಪು ಅಷ್ಟೇ. ಪ್ರತಿಯೊಂದು ಜಾತಿಗೂ ಅದರ ಕುರಿತಾದ ಪ್ರಜ್ಞೆ ಜಾಗೃತವಾಗಿರುತ್ತದೆ.

“ಇಂದು ಧರ್ಮವೆಂದು ಕರೆಯಲ್ಪಡುವ ಹಿಂದೂ ಧರ್ಮ ಕೇವಲ ಪ್ರತಿಬಂಧನೆಗಳ, ನಿಷೇಧಗಳ, ಆಜ್ಞೆಗಳ ಒಂದು ಗೂಡು.”

ಅಂಬೇಡ್ಕರ್ ಅವರು ಬರೆದ “ಹಿಂದೂಯಿಸಂನ ಫಿಲಾಸಫಿ, ಇಂಡಿಯಾ ಮತ್ತು ಕಮ್ಯುನಿಸಂನ ಪೂರ್ವ ಕರಾರುಗಳು. ಕ್ರಾಂತಿ ಮತ್ತು ಪ್ರತಿ ಕ್ರಾಂತಿ, ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್” ಪುಸ್ತಕದಿಂದ ಆಯ್ದ ಭಾಗಗಳು (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ೩ನೇ ಸಂಪುಟ):

“ಆದರೆ ನನ್ನ ಮೂಲಭೂತ ಪ್ರಶ್ನೆ ಏನೆಂದರೆ ಹಿಂದೂಗಳು ಬದುಕಿನ ಸುಖ ಮತ್ತು ದುಖಗಳನ್ನು ಹಂಚಿಕೊಳ್ಳಲು ಏಕೆ ನಿರಾಕರಿಸುತ್ತಾರೆ? ಇದಕ್ಕೆ ಉತ್ತರವೂ ಸಹ ಸರಳ ಮತ್ತು ಸ್ಪಷ್ಟ. ಹಿಂದೂಗಳು ಹಂಚಿಕೊಳ್ಳಲು ನಿರಾಕರಿಸುತ್ತಾರೆ ಏಕೆಂದರೆ ಅವರ ಧರ್ಮವು ಹಂಚಿಕೊಳ್ಳಬಾರದೆಂದು ಬೋಧಿಸುತ್ತದೆ. ಹಾಗಿದ್ದರೆ ಹಿಂದೂಯಿಸಂ ಏನನ್ನು ಬೋಧಿಸುತ್ತದೆ? ಅದು ಒಂದೇ ಪಂಕ್ತಿಯಲ್ಲಿ ಕೂತು ಊಟ ಮಾಡಬಾರದು, ಅಂತರ್ಜಾತಿ ವಿವಾಹ ಆಗಬಾರದು, ಗೆಳೆತನ ಬೆಳೆಸಬಾರದು ಇಂತಹ ತತ್ವಗಳನ್ನು ಬೋಧಿಸುತ್ತದೆ. ಭ್ರಾತೃತ್ವದ ನೇರವಾದ ನಿರಾಕರಣೆಯೇ ಹಿಂದೂಯಿಸಂನ ಫಿಲಾಸಫಿ.

“ಸಾಮಾಜಿಕ ನ್ಯಾಯದ ನೆಲೆಯಿಂದ ಹಿಂದೂಯಿಸಂ ಫಿಲಾಸಫಿಯನ್ನು ಅಧ್ಯಯನ ಮಾಡಿದಾಗ ಅದು ಸಮಾನತೆಯ ದ್ವೇಷ, ಸ್ವಾತಂತ್ರದ ಪ್ರತಿರೋಧಿ, ಭ್ರಾತೃತ್ವದ ವಿರೋಧಿ ತತ್ವಗಳನ್ನು ಬೋಧಿಸುತ್ತದೆ.

“ಸಮಾನತೆ ಮತ್ತು ಮಾನವ ಘನತೆಯ ಗೌರವಗಳಿಗೆ ಭ್ರಾತೃತ್ವ ಮತ್ತು ಲಿಬರ್ಟಿ ತತ್ವಗಳು ಅಡಿಪಾಯಗಳು. ಮೂಲ ಬೇರುಗಳು. ಸಮಾನತೆಯನ್ನು ನಿರಾಕರಿಸಿದರೆ ಬಾಕಿ ಎಲ್ಲಾ ತತ್ವಗಳನ್ನೂ ನಿರಾಕರಿಸಿದಂತೆ. ನನಗೆ ಸಂಪೂರ್ಣ ಮನವರಿಕೆ ಆದಂತೆ ಹಿಂದೂಯಿಸಂನಲ್ಲಿ ಸಮಾನತೆ ಇಲ್ಲ.

“ಹಿಂದೂಯಿಸಂನಲ್ಲಿ ಅಸಮಾನತೆ ಎನ್ನುವುದು ಧಾರ್ಮಿಕ ಸಿದ್ಧಾಂತ ಮತ್ತು ಇದನ್ನು ಅತ್ಯಂತ ಪಾವಿತ್ರ ಎಂದು ಬೋಧಿಸಲಾಗುತ್ತದೆ ಮತ್ತು ಪ್ರಜ್ಞಾಪೂರ್ವಕವಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಸಮಾನತೆ ಎನ್ನುವುದು ಹಿಂದೂಗಳ ಜೀವನ ಕ್ರಮ. ಅಸಮಾನತೆ ಹಿಂದೂಯಿಸಂನ ಆತ್ಮ.

“ಜಾತಿ ಎನ್ನುವ ಆದರ್ಶ ಮತ್ತು ಕೇವಲ ಆದರ್ಶ ಮಾತ್ರವಲ್ಲ. ಜಾತಿಯನ್ನು ಆಚರಣೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಜರ್ಮನ್ ಫಿಲಾಸಫರ್ ನೀಟ್ಸೆ ಹೇಳಿದಂತೆ ’ಆದರ್ಶವನ್ನು ವಾಸ್ತವೀಕರಿಸು ಮತ್ತು ವಾಸ್ತವವನ್ನು ಆದರ್ಶೀಕರಿಸು’ ಎನ್ನುವ ನೀತಿಯನ್ನು ಚಾತುವರ್ಣದ ಜಾತಿಪದ್ಧತಿಯಲ್ಲಿ ಹಿಂದೂಗಳು ಶ್ರದ್ಧೆಯಿಂದ ಆದರಿಸುತ್ತಾರೆ ಮತ್ತು ಪಾಲಿಸುತ್ತಾರೆ

“ಆದರೆ ಹಿಂದೂಯಿಸಂನ ಈ ಆದರ್ಶದ ಮೌಲ್ಯವನ್ನು ಅದರ ಪರಿಣಾಮಗಳನ್ನು ವಿಮರ್ಶಿಸುವುದರ ಮೂಲಕ ಪರೀಕ್ಷಿಸಬೇಕು. ಪರಿಶುದ್ಧವಾದ ಸಾಮಾಜಿಕ ಹಿನ್ನೆಲೆಯಲ್ಲಿ ಈ ಚಾತುವರ್ಣ ಜಾತಿಪದ್ಧತಿಯನ್ನು ಖಂಡಿಸಬೇಕು. ಉತ್ಪಾದಕರ ಸಂಸ್ಥೆಯಾಗಿ ಅದರ ನಿಲುವುಗಳ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಬೇಕು. ಈ ಚಾತುವರ್ಣ ಜಾತಿ ಪದ್ಧತಿಯು ಸಮಾನ ಹಂಚಿಕೆ ಎನ್ನುವ ಆದರ್ಶದ ನೆಲೆಯಲ್ಲಿ ಸಂಪೂರ್ಣವಾಗಿ ಸೋತಿದೆ. ಒಂದು ವೇಳೆ ಈ ಹಿಂದೂಯಿಸಂ ಒಂದು ಆದರ್ಶ ಸಂಸ್ಥೆ ಎನ್ನುವುದಾದರೆ ಅದು ಸಾಮಾನ್ಯ ಪ್ಲಾಟ್‌ಫಾಮ್ ಅನ್ನು ಕಟ್ಟಲು ಅಸಮರ್ಥವಾಗಿರುವುದೇಕೆ ಎನ್ನುವುದಕ್ಕೆ ಉತ್ತರಿಸಬೇಕು. ಒಂದು ವೇಳೆ ಈ ಹಿಂದೂಯಿಸಂ ಉತ್ಪಾದನೆಯ ನೆಲೆಯ ಆದರ್ಶ ಎನ್ನುವುದಾದರೆ ಅದರ ತಂತ್ರಜ್ಞಾನವು ಆದಿಮಾನವನ ಕಾಲದಿಂದ ಯಾತಕ್ಕೆ ಹೊರಬಂದಿಲ್ಲ ಎನ್ನುವುದಕ್ಕೆ ಉತ್ತರಿಸಬೇಕು. ಒಂದು ವೇಳೆ ಇದು ಹಂಚಿಕೆಯ ನೆಲೆಯಲ್ಲಿ ಆದರ್ಶ ಎನ್ನುವುದಾದರೆ ಅದು ಹೇಗೆ ಸಂಪತ್ತಿನ ಅಸಮಾನ ಕ್ರೋಢೀಕರಣ ಮತ್ತು ಶ್ರೀಮಂತ ಮತ್ತು ಬಡವರ ನಡುವೆ ಅಗಾಧ ಕಂದಕ ಸೃಷ್ಟಿಸಿತು ಎನ್ನುವುದಕ್ಕೆ ಉತ್ತರಿಸಬೇಕು.

“ಜಾತಿ ಪದ್ಧತಿಯ ವ್ಯವಸ್ಥೆಗೆ ಅಪಾರವಾದ ಮೌಲಿಕತೆಯನ್ನು, ಮಹತ್ವವನ್ನು ಪ್ರತಿಪಾದಿಸುವ ಬಹುಪಾಲು ಹಿಂದೂಗಳು ಈ ಜಾತಿ ಪದ್ಧತಿಗೆ ಧಾರ್ಮಿಕ ಚೌಕಟ್ಟನ್ನು ವಿಧಿಸಿದ ಮನುವನ್ನು ಪ್ರಶಂಸಿಸುತ್ತಾರೆ.

“ಸಮಾಜವನ್ನು ತುಂಡು ತುಂಡಾಗಿ ವಿಭಜಿಸುವ, ಕೂಲಿ ಕಾರ್ಮಿಕನಿಂದ ಜ್ಞಾನದ ಕೊಂಡಿಯನ್ನು ಕತ್ತರಿಸಿ ಪ್ರತ್ಯೇಕಿಸುವ ಈ ಹಿಂದೂಯಿಸಂ ಫಿಲಾಸಫಿಯನ್ನು ಸಾಮಾಜಿಕ ಉಪಯುಕ್ತತೆಗೆ ಪೂರಕ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.ಈ ಹಿಂದೂಯಿಸಂ ಫಿಲಾಸಫಿ ಸಾಮಾಜಿಕ ಉಪಯುಕ್ತತೆಯ ಅಗತ್ಯವನ್ನು ಮತ್ತು ವೈಯಕ್ತಿಕ ನೆಲೆಯ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ತಿರಸ್ಕರಿಸುತ್ತದೆ.”

೧೯೩೪ರಲ್ಲಿ ಯೆರವಾಡ ಜೈಲಿನಲ್ಲಿರುವ ಸಂದರ್ಭದಲ್ಲಿ ಗಾಂಧೀಜಿಯವರು ಸುಬ್ರಮಣ್ಯನ್ ಅವರ ದೇವಸ್ಥಾನ ಪ್ರವೇಶ ಮಸೂದೆಗೆ ಬೆಂಬಲ ಸೂಚಿಸುವಂತೆ ಅಂಬೇಡ್ಕರ್ ಅವರನ್ನು ಕೇಳಿಕೊಳ್ಳುತ್ತಾರೆ. ಆದರೆ ವೈಯಕ್ತಿಕ ನೆಲೆಯಲ್ಲಿ ಈ ಕೋರಿಕೆಯನ್ನು ತಿರಸ್ಕರಿಸುವ ಅಂಬೇಡ್ಕರ್ ಅವರು ಅಸ್ಪೃಶ್ಯತೆಯನ್ನು ಕಾನೂಬಾಹಿರ ಎಂದು ಘೋಷಿಸುವುದನ್ನು ಬಿಟ್ಟು ಕೇವಲ ದೇವಸ್ಥಾನ ಪ್ರವೇಶವನ್ನು ಕೈಗೆತ್ತಿಕೊಂಡಿರುವುದು ಪ್ರಾಯೋಗಿಕವಲ್ಲ ಎಂದು ಟೀಕಿಸುತ್ತಾರೆ. ನಂತರ ಗಾಂಧಿಯವರಿಗೆ ಒಂದು ಪತ್ರವನ್ನು ಸಹ ಬರೆಯುತ್ತಾರೆ. ಅದರ ಒಂದು ಭಾಗ ಹೀಗಿದೆ (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಸಂಪುಟ ೧೭):

“ಕೆಲಕಾಲದ ಹಿಂದೆ ಇಂಡಿಯಾದಲ್ಲಿ ಯುರೋಪಿಯನ್ನರ ಕ್ಲಬ್‌ಗಳು, ಸಾಮಾಜಿಕ ಮನರಂಜನ ಕೂಟಗಳ ಹೊರ ಬಾಗಿಲಲ್ಲಿ ’ನಾಯಿಗಳು ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎನ್ನುವ ಫಲಕ ನೇತಾಡುತ್ತಿತ್ತು. ಇಂದಿನ ದಿನಗಳಲ್ಲಿ ಹಿಂದೂ ದೇವಸ್ಥಾನಗಳ ಬಾಗಿಲಲ್ಲಿ ಇದೇ ಮಾದರಿಯ ಫಲಕಗಳು ನೇತಾಡುತ್ತಿರುತ್ತವೆ. ಆದರೆ ಒಂದು ಬದಲಾವಣೆ ಇರುತ್ತದೆ ಮತ್ತು ಆ ಫಲಕ ಹೀಗಿರುತ್ತದೆ: ’ಅಸ್ಪೃಶ್ಯರನ್ನು ಹೊರತುಪಡಿಸಿ ಎಲ್ಲಾ ಹಿಂದೂಗಳು ಮತ್ತು ಪ್ರಾಣಿಗಳಿಗೆ ದೇವಸ್ಥಾನದಲ್ಲಿ ಪ್ರವೇಶವಿದೆ. ಆದರೆ ಅಸ್ಪೃಶ್ಯರಿಗೆ ಮಾತ್ರ ಪ್ರವೇಶವಿಲ್ಲ.’ ಮೇಲಿನ ಎರಡೂ ಉದಾಹರಣೆಗಳಲ್ಲಿ ಸಂದರ್ಭದ ವಿಷಯದಲ್ಲಿ ಸಾಮ್ಯತೆ ಇದೆ. ಆದರೆ ಯುರೋಪಿಯನ್ನರ ಎದುರು ಹಿಂದೂಗಳು ತಮಗೆ ಕ್ಲಬ್‌ಗಳಲ್ಲಿ ಪ್ರವೇಶ ಕೊಡಿರೆಂದು ಬಿಕ್ಷೆ ಬೇಡಿರಲಿಲ್ಲ, ಹಾಗಿದ್ದ ಪಕ್ಷದಲ್ಲಿ ಅಸ್ಪೃಶ್ಯರೇಕೆ ದುರಹಂಕಾರದ ಹಿಂದೂಗಳ ಮುಂದೆ ದೇವಸ್ಥಾನ ಪ್ರವೇಶಕ್ಕೆ ಬಿಕ್ಷೆ ಬೇಡಬೇಕು? ಶಿಕ್ಷಣ, ಉನ್ನತ ಉದ್ಯೋಗ, ಉತ್ತಮ ಬದುಕಿಗಾಗಿ ದಲಿತ ಸಮುದಾಯದ ವ್ಯಕ್ತಿ ಆಶಿಸುತ್ತಾನೆ. ದಲಿತ ವ್ಯಕ್ತಿಯು ಹಿಂದೂಗಳಿಗೆ ನಿಮ್ಮ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ಕೊಡುತ್ತೀರೋ, ಇಲ್ಲವೋ ಎನ್ನುವುದು ನಿಮಗೆ ಸಂಬಂಧಪಟ್ಟ ವಿಷಯ. ಇದು ನನಗೆ ಪ್ರತಿಭಟನೆಯ ಸಂಗತಿಯಲ್ಲ. ನಿಮಗೆ ಜ್ಞಾನೋದಯವಾಗಿ ಪ್ರಜ್ಞಾವಂತರಾದರೆ, ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಅಮಾನವೀಯ ಎಂದು ಮನವರಿಕೆಯಾದಲ್ಲಿ ನಮಗೆ ಪ್ರವೇಶ ಕೊಡಿ. ಆದರೆ ನೀವು ಕೇವಲ ಹಿಂದೂ ಮಾತ್ರ, ಪ್ರಜ್ಞಾವಂತನಲ್ಲ ಎನ್ನುವುದಾದರೆ ನಿಮ್ಮ ದೇವಸ್ಥಾನದ ಬಾಗಿಲುಗಳನ್ನು ಶಾಶ್ವತಾಗಿ ಮುಚ್ಚಿಕೊಳ್ಳಿ. ನಾನು ಇದಕ್ಕೆ ತಲೆ ಕೆಡಿಸಿಕೊಳ್ಳಲಾರೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾನೆ.”

೧೯೩೦ರಲ್ಲಿ ಅಂಬೇಡ್ಕರ್ ನೇತೃತ್ವದಲ್ಲಿ ಕಲಾರಾಮ್ ದೇವಸ್ಥಾನ ಪ್ರವೇಶದ ಸತ್ಯಾಗ್ರಹಕ್ಕೆ ಸಿದ್ಧತೆಗಳು ಪ್ರಾರಂಭಗೊಂಡಿರುತ್ತವೆ. ಅದರ ಉದ್ಘಾಟನ ಭಾಷಣ ಮಾಡುವ ಅಂಬೇಡ್ಕರ್ ನಂತರ ಸತ್ಯಾಗ್ರಹವನ್ನು ವಿರೋಧಿಸಿ ಇದಕ್ಕೆ ಸಂಬಂಧಪಟ್ಟಂತೆ ೩ ಮಾರ್ಚ್, ೧೯೩೪ರಂದು ಬಾಬುರಾವ್ ಗಾಯಕವಾಡರಿಗೆ ಒಂದು ಪತ್ರವನ್ನು ಬರೆಯುತ್ತಾರೆ. ಅದರ ಒಂದು ಭಾಗ (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಸಂಪುಟ ೧೭):

“ಬರುವ ರಾಮನವಮಿಯ ದಿನದಂದು ನಾಸಿಕ್‌ನ ಕಲರಾಮ ದೇವಸ್ಥಾನ ಪ್ರವೇಶ ಕುರಿತಂತೆ ಸತ್ಯಾಗ್ರಹದ ಕುರಿತಾಗಿ ನೀವು ನನ್ನ ಅಭಿಪ್ರಾಯವನ್ನು ಕೇಳಿದ್ದೀರಿ. ನನ್ನ ಅಭಿಪ್ರಾಯದಲ್ಲಿ ಇದು ಬೇಕೆ, ಬೇಡವೇ, ಸಾಧುವೇ ಎಂದು ಚರ್ಚಿಸುವುದಕ್ಕಿಂತಲೂ ಈ ಸತ್ಯಾಗ್ರಹವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಒಳಿತು. ಆದರೆ ಈ ಸತ್ಯಾಗ್ರಹದ ನೇತೃತ್ವ ವಹಿಸಿದವನಿಂದ ಈ ಮಾತುಗಳನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ ಹಿಂಜರಿಕೆಯಿಂದಲೆ ನನ್ನ ಬದಲಾದ ನಿಲುವನ್ನು ಪ್ರಕಟಿಸುತ್ತಿದ್ದೇನೆ. ನಾನು ದೇವಸ್ಥಾನ ಪ್ರವೇಶ ಸತ್ಯಾಗ್ರಹವನ್ನು ಒಪ್ಪಿಕೊಳ್ಳಲಾರೆ. ದಲಿತರು ಮೂರ್ತಿಗಳನ್ನು ಪೂಜಿಸಲಿ ಎನ್ನುವ ಕಾರಣಕ್ಕೋಸ್ಕರ ನಾನು ದೇವಸ್ಥಾನ ಪ್ರವೇಶದ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಿಲ್ಲ ಅಥವಾ ದೇವಸ್ಥಾನ ಪ್ರವೇಶದಿಂದ ದಲಿತರು ಹಿಂದೂ ಸಮಾಜದಲ್ಲಿ ಸಮಾನರಾಗಿ ಬದುಕುತ್ತಾರೆ ಎನ್ನುವ ಕಾರಣದಿಂದಲೂ ಅಲ್ಲ. ಆದರೆ ’ಹಿಂದೂ ಧರ್ಮವು ಸಂಪೂರ್ಣವಾಗಿ ಸುಧಾರಣೆಯಾಗಬೇಕು, ಪ್ರಗತಿಪರವಾಗಬೇಕು. ನಂತರವಷ್ಟೇ ನಾವು ಹಿಂದೂ ಧರ್ಮದ ಭಾಗವಾಗುತ್ತೇವೆ’ ಎಂದು ಹೇಳಿರೆಂದು ತಳಸಮುದಾಯಗಳಿಗೆ ಸೂಚಿಸುತ್ತಿದ್ದೇನೆ. ತಳಸಮುದಾಯಗಳು ಚೈತನ್ಯಶೀಲರಾಗಲಿ ಮತ್ತು ಅವರ ಸ್ಥಾನದ ಕುರಿತಾದ ವಾಸ್ತವ ಪ್ರಜ್ಞೆ ಅವರಲ್ಲಿ ಮೂಡಲಿ ಎನ್ನುವ ಒಂದೇ ಕಾರಣಕ್ಕೆ ನಾನು ದೇವಸ್ಥಾನ ಪ್ರವೇಶದ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೆ. ಈಗ ನನ್ನ ಈ ಉದ್ದೇಶ ಈಡೇರಿದೆ ಎಂದು ನನಗೆ ಮನವರಿಕೆಯಾಗಿದೆ. ಇನ್ನು ದೇವಸ್ಥಾನ ಪ್ರವೇಶದ ಅವಶ್ಯಕತೆ ಇಲ್ಲ. ನಾನು ತಳಸಮುದಾಯಗಳು ಶಿಕ್ಷಣ, ರಾಜಕೀಯ ಕಡೆಗೆ ಹೆಚ್ಚು ಗಮನ ಹರಿಸಲಿ ಎಂದು ಆಶಿಸುತ್ತೇನೆ.”

ನ್ಯಾಯವಾದಿ ಸಂಜಯ ಹೆಗ್ಡೆ “ದೇಶವು ಧಾರ್ಮಿಕ ನೆಲೆಯಲ್ಲಿ ವಿಭಜನೆಗೊಂಡ ನಂತರ ತಳ ಸಮುದಾಯಗಳು ಹಿಂದೂಗಳೆಂದು ಪರಿಗಣಿಸಬೇಕೇ ಬೇಡವೇ ಎನ್ನುವ ಚರ್ಚೆ ಪ್ರಾಮುಖ್ಯತೆ ಪಡೆದುಕೊಂಡಿತು. ಬಿ.ಶಾಮಸುಂದರ್ ರಂತಹ ದಲಿತ ನಾಯಕರು ’ನಾವು ಹಿಂದೂಗಳಲ್ಲ, ನಮಗೆ ಹಿಂದುಗಳ ಜಾತಿಪದ್ಧತಿಯೊಂದಿಗೆ ಯಾವ ಸಂಬಂಧವೂ ಇಲ್ಲ, ಆದರೂ ಹಿಂದೂಗಳು ತಮಗಾಗಿ ನಮ್ಮನ್ನು ಅಲ್ಲಿ ಸೇರಿಸಿದ್ದಾರೆ’ ಎಂದು ಪ್ರತಿಪಾದಿಸಿದ್ದರು ಎಂದು ಹೇಳುತ್ತಾರೆ.

ಹಿಂದೂ ಎನ್ನುವ ವಿಶಾಲ ವೇದಿಕೆಯಲ್ಲಿ ತಳ ಸಮುದಾಯಗಳನ್ನು ಒಳಗೊಳ್ಳುವುದರ ಮೂಲಕ ಹಿಂದುತ್ವದ ಸಬಲೀಕರಣ ಮತ್ತು ವಿಸ್ತರಣೆ ಆರೆಸ್ಸೆಸ್‌ನ ಮುಖ್ಯ ಉದ್ದೇಶ. ಈಗಾಗಲೇ ಒಡಿಸ್ಸಾ ಮತ್ತು ಛತ್ತೀಸ್‌ಗಡ್ ರಾಜ್ಯಗಳಲ್ಲಿ ಆದಿವಾಸಿ ಸಮುದಾಯಗಳನ್ನು ತನ್ನ ವಿವಿಧ ಸಹಯೋಗಿ ಸಂಘಟನೆಗಳಾದ ’ವನವಾಸಿ ಕಲ್ಯಾಣ ಕೇಂದ್ರ’, ’ಏಕಲವ್ಯ ವಿದ್ಯಾ ಕೇಂದ್ರ’ಗಳ ಮೂಲಕ ತನ್ನೊಳಗೆ ಜೀರ್ಣಿಸಕೊಳ್ಳತೊಡಗಿದೆ. ಇದರ ಫಲವಾಗಿ ಛತ್ತೀಸಘಡ್ ರಾಜ್ಯದಲ್ಲಿ ಸತತವಾಗಿ ಅಧಿಕಾರಕ್ಕೆ ಮರಳಿರುವುದು ಆರೆಸ್ಸೆಸ್‌ಗೆ ಇಂದು ತಳ ಸಮುದಾಯಗಳೊಂದಿಗೆ ಹಿಂದುತ್ವದ ಜೊತೆ ಸಂಧಾನ ನಡೆಸಲು ಹುಮ್ಮಸ್ಸನ್ನು ನೀಡಿದೆ.

ಕೆ.ಎನ್.ಪಣಿಕ್ಕರ್ ಅವರು “ಅಂಬೇಡ್ಕರ್ ನಂತರದ ದಲಿತ ರಾಜಕಾರಣದ ಪ್ರಕ್ರಿಯೆಗಳೆಲ್ಲವೂ ಅಂತಿಮವಾಗಿ ಕೂಡಿದ ಸ್ತರದ ಫಲವಾಗಿ ಇಂದು ಹಿಂದುತ್ವದ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ದಲಿತ ರಾಜಕಾರಣದಲ್ಲಿ ಐಡೆಂಟಿಟಿ ರಾಜಕಾರಣ, ಚಳುವಳಿಗಳ ರಾಜಕಾರಣ, ಹೊಂದಾಣಿಕೆ ರಾಜಕಾರಣ ಮತ್ತು ಹಿತಾಸಕ್ತಿಗಳ ರಾಜಕಾರಣ ಎಂಬ ನಾಲ್ಕು ಹಂತಗಳನ್ನು ಕಾಂಬ್ಳೆಯವರು ಗುರುತಿಸುತ್ತಾರೆ. ಅಂಬೇಡ್ಕರ್ ನಂತರ ಈ ನಾಲ್ಕೂ ಮುಖಗಳ ನಡುವೆ ಸಮತೋಲನವಿಲ್ಲದಂತಾದ್ದರಿಂದಲೇ ಹಿಂದುತ್ವ ಶಕ್ತಿಗಳು ದಲಿತರನ್ನು ಸಮೀಪಿಸಲು ಸಾಧ್ಯವಾಗಿದೆ. ಗೋಪಾಲ ಗುರು ತಮ್ಮ ಲೇಖನದಲ್ಲಿ ದಲಿತ ರಾಜಕಾರಣದ ಅಂತರಿಕ ಪಲ್ಲಟಗಳು ಮತ್ತು ಆರ್ಥಿಕ ಪೇಚಾಟಗಳಿಂದಾಗಿ ಅದು ಹಿಂದುತ್ವ ಶಕ್ತಿಗಳ ವಿರುದ್ಧ ಸೆಟೆದು ನಿಲ್ಲುವ ನೈತಿಕ ಬಲವನ್ನು ಕಳೆದುಕೊಂಡಿದೆ ಎಂಬ ಮತ್ತೊಂದು ಪ್ರಮುಖ ಅಂಶವನ್ನು ಮುಂದಿಟ್ಟಿದ್ದಾರೆ. ದಲಿತರ ಸಾಮಾಜಿಕ ವಿಧಿ ವಿಧಾನಗಳನ್ನು ಪೂಜಾ ವಿಧಾನಗಳನ್ನು ಸಂಸ್ಕೃತೀಕರಣಗೊಳಿಸುವುದರ ಮೂಲಕ ಸಂಘ-ಪರಿವಾರವು ಅವರ ಸಾಂಸ್ಕೃತಿಕ ಬಯಕೆಯನ್ನು ಹಿಂದುತ್ವ ರಾಜಕಾರಣದ ಬಲಸಂವರ್ಧನೆಗೆ ಬಳಸಿಕೊಳ್ಳುತ್ತಿದೆ. ಹಿಂದುತ್ವದ ಪ್ರಭಾವಿ ಯಜಮಾನ್ಯೀಕರಣಕ್ಕೆ ಒಳಗಾಗುತ್ತಿರುವ ದಲಿತರು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಳ್ಳುತ್ತಿರುವುದರ ಜೊತೆಗೆ ಅಂತಿಮವಾಗಿ ಅವರದಲ್ಲದ, ದಮನಕಾರಿ ಸಾಂಸ್ಕೃತಿಕ ಪರಂಪರೆಗೆ ದಾರಿ ಮಾಡಿಕೊಡುತ್ತಿರುವ ಈ ಪ್ರಕ್ರಿಯೆಯ ಅಂತರಾಳವನ್ನು ಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎನ್ನಿಸುತ್ತದೆ” ಎಂದು ವಿವರಿಸುತ್ತಾರೆ. (ಹಿಂದುತ್ವ ಮತ್ತು ದಲಿತರು, ಚಿಂತನ ಪ್ರಕಾಶನ)

ಮನುಸ್ಮೃತಿಯನ್ನು ಸುಟ್ಟ ಡಾ.ಅಂಬೇಡ್ಕರ್ ಅವರನ್ನು ಮನುಸ್ಮೃತಿಯನ್ನು ಆರಾಧಿಸುತ್ತಿರುವ ಆರೆಸ್ಸೆಸ್ ತನ್ನ ಐಡಿಯಾಲಜಿಯಲ್ಲಿ ಸೇರಿಸಿಕೊಳ್ಳಲು ಯತ್ನಗಳನ್ನು ನಡೆಸಿದೆ. ಈ ಆತಂಕಕಾರಿ ಪ್ರಕ್ರಿಯನ್ನು ವಿಫಲಗೊಳಿಸಲು ಸಿದ್ಧ ಮಾದರಿಗಳನ್ನು ಹುಡುಕುತ್ತಾ ಹೊರಟರೆ ನಾವು ಪ್ರಾರಂಭಿಸಿದ ಜಾಗಕ್ಕೆ ಮರಳಿ ತಲುಪುತ್ತೇವೆ ಅಷ್ಟೆ.