Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಯಡಿಯೂರಪ್ಪನ ಯಾಗ ಮತ್ತು ನರಸತ್ತ ನಾಗರೀಕ ಸಮಾಜ

ಪ್ರಿಯ ಮಿತ್ರರೆ,

ಅತ್ಯಂತ ನೋವು ಮತ್ತು ಯಾತನೆಯಿಂದ ಈ ಲೇಖನ ಬರೆಯುತಿದ್ದೇನೆ. ಇಲ್ಲಿನ ಶಬ್ಧಗಳು ಕಟುವಾಗಿದ್ದರೆ, ಕ್ಷಮೆಯಿರಲಿ.

ನಿನ್ನೆ ಅಂದರೆ 19-12-11ರ ಸೋಮವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎರಡನೇ ಭಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾಗ ನಡೆಸಿದರು. ಇದಕ್ಕೆ ಕೊಟ್ಟ ಕಾರಣ ಮಾತ್ರ “ಲೋಕ ಕಲ್ಯಾಣಕ್ಕಾಗಿ” ಎಂಬುದಾಗಿತ್ತು. ಇದಕ್ಕೂ ಮುನ್ನ 17ರ ಶನಿವಾರ ಯಲಹಂಕ ಉಪನಗರದ ಬಳಿ 10 ಸಾವಿರ ಮಹಿಳೆಯರ ಜೊತೆಗೂಡಿ ಲಲಿತ ಸಹಸ್ರ ಕುಂಕುಮಾರ್ಚನೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದನ್ನ ನೀವು ಗಮನಿಸಿದ್ದೀರಿ.

ಯಡಿಯೂರಪ್ಪ ಮತ್ತು ಆ ಹತ್ತು ಸಹಸ್ರ ಮಹಿಳೆಯರು ತಮಗೆ ಅರ್ಥವಾಗದ ಮಂತ್ರಗಳನ್ನು ವದರುತ್ತಾ ಸಹಸ್ರಾರು ರುಪಾಯಿಗಳ ಕುಂಕುಮವನ್ನು ಗಾಳಿಗೆ ತೂರುವ ಬದಲು 10 ಸಾವಿರ ಗಿಡಗಳನ್ನ ಅದೇ ಯಲಹಂಕದ ಸುತ್ತ ಮತ್ತಾ ನೆಟ್ಟಿದ್ದರೆ ಅದು ಎಷ್ಟು ಅರ್ಥಪೂರ್ಣವಾಗಿರುತಿತ್ತು ಅಲ್ಲವೆ? ಒಮ್ಮೆ ಯೋಚಿಸಿ.

ಮುಖ್ಯಮಂತ್ರಿಯ ಗಾದಿಯಿಂದ ಇಳಿದ ಮೇಲೆ ಈ ಮನುಷ್ಯನ ವರ್ತನೆ, ಪ್ರತಿಕ್ರಿಯೆ, ದೇವಸ್ಥಾನಗಳ ಸುತ್ತಾಟ ಇವೆಲ್ಲಾ ಗಮನಿಸಿದರೆ, ಇವರು ಮಾನಸಿಕ ಅಸ್ವಸ್ಥ ಎಂಬ ಗುಮಾನಿ ಮೂಡುತ್ತಿದೆ. ಈಗ ಯಡಿಯೂರಪ್ಪನವರ ಪಾಲಿಗೆ ಮೂರ್ಖ ಜೊತಿಷಿಗಳೇ ಆಪ್ತ ಬಾಂಧವರಾಗಿದ್ದಾರೆ. ಮತ್ತೇ ಅಧಿಕಾರ ಪಡೆಯುವುದಕ್ಕಾಗಿ ಏನೆಲ್ಲಾ ಕಸರತ್ತು ನಡೆಸಿರುವ ಯಡಿಯೂರಪ್ಪನವರಿಗೆ ಸದ್ಯಕ್ಕೆ ಬಾಕಿ ಉಳಿದಿರುವುದೊಂದೇ ಅದು ನರಬಲಿ. ಇಂತಹ ಮನೆಹಾಳತನದ ಸಲಹೆಯನ್ನು ಇವರಿಗೆ ಯಾರೂ ನೀಡಿಲ್ಲ.

ಇವರಿಗೆಲ್ಲಾ ಆತ್ಮಸಾಕ್ಷಿ, ಪ್ರಜ್ಷೆ ಎಂಬುದು ಇದ್ದಿದ್ದರೆ, ಜನ ನಾಯಕರಾಗಿ ಈ ರೀತಿ ವರ್ತಿಸುತ್ತಿರಲಿಲ್ಲ. ಚಾಮರಾಜ ನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ಯಾವ ಮುಖ್ಯ ಮಂತ್ರಿಯೂ ಅಲ್ಲಿಗೆ ಬೇಟಿ ನೀಡಲಿಲ್ಲ. ಬೇಟಿ ನೀಡದಿದ್ದರೂ ಯಾಕೆ ಅಧಿಕಾರ ಕಳೆದುಕೊಂಡೆವು ಎಂಬುದನ್ನ ಯಾವ ಮುಖ್ಯಮಂತ್ರಿಯೂ ಆಲೋಚಿಸಲಿಲ್ಲ. ಇದು ಈ ನಾಡಿನ ವೈಚಾರಿಕ ಪ್ರಜ್ಙೆಗೆ ಗರ ಬಡಿದ ಸಂಕೇತವೇ? ನನಗಿನ್ನೂ ಅರ್ಥವಾಗಿಲ್ಲ.

ಎರಡು ತಿಂಗಳ ಹಿಂದೆ ಯಡಿಯೂರಪ್ಪನವರ  ಆಪ್ತರಾದ ರೇಣುಕಾಚಾರ್ಯ ಮತ್ತು ಶೋಭಾ ಕರಂದ್ಲಾಜೆ ಚಾಮರಾಜನಗರದಲ್ಲಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಕೇರಳದಿಂದ ಪುರೋಹಿತರನ್ನು ಕರೆಸಿ ಯಜ್ಞ ಯಾಗ ಮಾಡಿದರು. ಲಕ್ಷಾಂತರ ರೂಪಾಯಿಯ ತುಪ್ಪ ಬೆಣ್ಣೆ, ರೇಷ್ಮೆ ಬಟ್ಟೆಗಳನ್ನ ಬೆಂಕಿಗೆ ಹಾಕಿ ಆಹುತಿ ಮಾಡಿದರು. ನಾಡಿನ ಜನಪ್ರತಿನಿಧಿಗಳಾಗಿದ್ದುಕೊಂಡು, ಸಚಿವರಾಗಿ ಇಂತಹ ಅರ್ಥಹೀನ ಆಚರಣೆಗಳ ಮಾಡುವ ಮುನ್ನ ಈ ಮೂರ್ಖರು ಒಮ್ಮೆ ಉತ್ತರ ಕರ್ನಾಟಕದ ಸ್ಥಿತಿ ಏನಾಗಿದೆ ಎಂದು ನೋಡಿ ಬಂದಿದ್ದರೆ ಚೆನ್ನಾಗಿರುತಿತ್ತು. ಅಲ್ಲಿಯ ಬದುಕು ಅರ್ಥವಾಗುತಿತ್ತು

ಕಳೆದ ಹತ್ತು ವರ್ಷಗಳ ನಂತರ ಉತ್ತರ ಕರ್ನಾಟಕ ಭೀಕರ ಬರಗಾಲದಲ್ಲಿ ತತ್ತರಿಸುತ್ತಿದೆ. ಬಿಜಾಪುರ ಜಿಲ್ಲೆಯಲ್ಲಿ ಈ ವರ್ಷ ಕೇವಲ 37 ನಿಮಿಷಗಳ ಕಾಲ ಮಳೆ ಬಿದ್ದಿದೆ ಎಂದರೆ ನೀವು ನಂಬಲಾರರಿ. ಅಲ್ಲಿನ ಜನ ತಮಗೆ ಹಾಗೂ ತಮ್ಮ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ, ತಿನ್ನುವ ಅನ್ನ ಮತ್ತು ಮೇವಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದಾರೆ. ಸ್ಥಿತಿವಂತ ರೈತರು ತಮ್ಮ ದನ ಕರುಗಳನ್ನ ಮೇವು ನೀರು ಇರುವ ಪ್ರದೇಶಗಳ ನೆಂಟರ ಮನೆಗಳಿಗೆ ಸಾಗಿಸುತಿದ್ದಾರೆ, ಏನೂ ಇಲ್ಲದವರು ಗೋವಾ ಹಾಗೂ ಕೇರಳದ ಕಸಾಯಿಖಾನೆಗಳಿಗೆ ಅಟ್ಟುತಿದ್ದಾರೆ. ಅವುಗಳ ಮೇಲಿನ ಪ್ರೀತಿ ಮತ್ತು ಭಾವುಕತೆಯಿಂದ ಮಾರಲಾಗದ ಅಸಹಾಯಕರು ಮೂಕ ಪ್ರಾಣಿಗಳನ್ನ ಬಟ್ಟ ಬಯಲಿನಲ್ಲಿ ಬಿಟ್ಟು ರಾತ್ರೋರಾತ್ರಿ ಕೂಲಿ ಅರಸಿಕೊಂಡು ಪೂನಾ, ಮುಂಬೈ ರೈಲು ಹತ್ತುತಿದ್ದಾರೆ. ಡಿಸಂಬರ್ ಚಳಿಗಾದಲ್ಲಿ ಕೂಡ ಉರಿಯುತ್ತಿರುವ ಸೂರ್ಯನ ಬಿಸಿಲಿಗೆ ಮೇವು ನೀರಿಲ್ಲದ ಈ ಮೂಕ ಪ್ರಾಣಿಗಳು ನಿಂತಲ್ಲೆ ನೆಲಕ್ಕೊರುಗುತ್ತಿವೆ.

ಕಳೆದ ಒಂದು ತಿಂಗಳಿನಿಂದ ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಗದಗ, ಧಾರವಾಡದ ಗ್ರಾಮಾಂತರ ಪ್ರದೇಶಗಳನ್ನು ಸುತ್ತಿ ಬಂದ ಮೇಲೆ ನನಗೆ,  ಜನಪ್ರತಿನಿಧಿಗಳನ್ನ ರಸ್ತೆಯಲ್ಲಿ ನಿಲ್ಲಿಸಿ ಇಲ್ಲಿನ ಜನತೆ ಕಪಾಳಕ್ಕೆ ಇನ್ನೂ ಬಾರಿಸಿಲ್ಲವಲ್ಲ ಏಕೆ ಎಂಬ ಪ್ರಶ್ನೆ ಕಾಡತೊಡಗಿದೆ. ಅಲ್ಲದೆ ನನ್ನ ಬಾಲ್ಯದ ದಿನಗಳಲ್ಲಿ ಕೇಳಿದ್ದ ಜನಪದ ಗೀತೆಗಳು ನೆನಾಪಾಗುತ್ತಿವೆ.

1) ಹಾದೀಲಿ ಹೋಗುವವರೇ ಹಾಡೆಂದು ಕಾಡಬೇಡಿ
ಇದು ಹಾಡಲ್ಲ ನನ್ನೊಡಲುರಿ ದೇವರೆ
ಇದು ಬೆವರಲ್ಲ ನನ್ನ ಕಣ್ಣೀರು

2) ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ
ಒಡಲ ಬೆಂಕೀಲಿ ಹೆಣ ಬೆಂದೋ ದೇವರೆ
ಬಡವರಿಗೆ ಸಾವ ಕೊಡಬೇಡೋ

3) ಹೆಣ್ಣಿನ ಗೋಳಟ್ಟಿ ಬನ್ನಿಯ ಮರ ಬೆಂದೋ
ಅಲ್ಲಿ ಸನ್ಯಾಸಿ ಮಠ ಬೆಂದೊ ಹಾರುವರ
ಪಂಚಾಂಗ ಹತ್ತಿ ಉರಿದಾವೋ

4) ಕಣಜ ಬೆಳೆದ ಮನೆಗೆ ಉಣಲಾಕೆ ಕೂಳಿಲ್ಲ
ಬೀಸಾಕ ಕವಣೆ ಬಲವಿಲ್ಲ ಕೂಲಿಯವರ
ಸುಡಬೇಕ ಜನುಮ ಸುಖವಿಲ್ಲ

ಗೋರಕ್ಷಣೆಗೆ ಪುಂಖಾನು ಪುಂಖವಾಗಿ ಬೊಗಳೆ ಬಿಡುವ ಹಾಗೂ ಅವುಗಳ ಪಕ್ಕ ನಿಂತು ಚಿತ್ರ ತೆಗೆಸಿಕೊಳ್ಳುವ ಕಪಟ ಸ್ವಾಮಿಗಳಿಗೆ, ನಕಲಿ ರೈತರ ಹೆಸರಿನ ಅಸ್ತಿತ್ವಕ್ಕೆ ಬಂದ ಸಾವಯವ ಕೃಷಿ ಮಿಷನ್ ಮೂಲಕ ರೈತರಲ್ಲದವರಿಗೆ ವರ್ಷಕ್ಕೆ ನೂರಾರು ಕೋಟಿ ಹಣ ನೀಡುತ್ತಿರುವ ಸರ್ಕಾರದ ಕ್ರಮವನ್ನು ನಾಗರೀಕ ಸಮಾಜದಲ್ಲಿ ಬದುಕುತ್ತಿರುವ ನಾವು ಈಗಲಾದರೂ ಪ್ರಶ್ನಿಸಬೇಕಾಗಿದೆ. ಇಲ್ಲದಿದ್ದರೆ, ಈ ಸಮಾಜವನ್ನು ನರಸತ್ತ ನಾಗರೀಕ ಸಮಾಜವೆಂದು ನಾವೆಲ್ಲರೂ ಒಕ್ಕೊರಲಿನಿಂದ ಘೋಷಿಸಿ ಕೊಳ್ಳಬೇಕಾಗಿದೆ.

ಸಮ್ಮನೆ ಒಮ್ಮೆ ತಣ್ಣಗೆ ಕುಳಿತು ಯೋಚಿಸಿ. ಈ ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಿಂದ ದೇಗುಲಗಳಿಗೆ, ಮಠ ಮಾನ್ಯಗಳ ಬೇಟಿಗಾಗಿ ಖರ್ಚು ಮಾಡಿದ ಪ್ರಯಾಣದ ವೆಚ್ಚ, ಹಾಗೂ ಇವುಳಿಗೆ ನೀಡಿದ ಅನುದಾನ ಇದನ್ನು ಲೆಕ್ಕ ಹಾಕಿದರೆ, ನೂರು ಕೋಟಿ ರೂಪಾಯಿ ದಾಟಲಿದೆ.

ಇದೇ ಹಣವನ್ನ ದನಕರುಗಳ ಮೇವಿಗಾಗಿ ಇಂದು ಉತ್ತರ ಕರ್ನಾಟಕದಲ್ಲಿ ವಿನಿಯೋಗಿಸಿದ್ದರೆ,  ದೇವಸ್ಥಾನ, ಮಠ ಬೇಟಿ ನೀಡಿದ್ದಕ್ಕೆ ಹಾಗು ಹೋಮ ಹವನ ಮಾಡಿಸಿದ್ದಕ್ಕೆ ಸಿಗುವ ಫಲಕ್ಕಿಂತ ಹೆಚ್ಚಿನ ಪುಣ್ಯ ಯಡಿಯೂರಪ್ಪನವರಿಗೆ ಸಿಗುತ್ತಿತ್ತೇನೊ?

ಡಾ. ಎನ್. ಜಗದೀಶ್ ಕೊಪ್ಪ

ಸಮ್ಮೇಳನಗಳು 78 ಆದರೂ, ಸಾಹಿತ್ಯ ಪರಿಷತ್ತು ಸುಧಾರಣೆ ಆಗಿಲ್ಲ

ಭೂಮಿ ಬಾನು

ಗಂಗಾವತಿಯಲ್ಲಿ 78 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಸಮ್ಮೇಳನಗಳು 78 ಆದರೂ ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮವನ್ನು ರೂಪಿಸುವಲ್ಲಿ, ಸಂಘಟಿಸುವಲ್ಲಿ ಇರುವ ಲೋಪಗಳನ್ನು ಸರಿಪಡಿಸುವ ಗೋಜಿಗೇ ಹೋಗಿಲ್ಲದಿರುವುದು ವಿಪರ್ಯಾಸ.

ಸಾಹಿತ್ಯ ಸಮ್ಮೇಳನದ ಈಗಿನ ಒಟ್ಟಾರೆ ಸ್ವರೂಪವೇ ‘ನಾನು ಬರೆಯಬಲ್ಲೆ’ ಎಂಬ ಏಕೈಕ ಕಾರಣಕ್ಕೆ ಹುಟ್ಟಿಕೊಳ್ಳುವ ಅಹಂ ಅನ್ನು ಪೋಷಿಸುವ ಉದ್ದೇಶದಿಂದ ರೂಪುಗೊಂಡದ್ದು. ಅದು ಸಾಹಿತಿಗಳು, ಬರಹಗಾರರು, ಕವಿಗಳು, ವಿಮರ್ಶಕರು ಎಂದು ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ಅನೇಕರಿಗೆ ಒಂದು ವೇದಿಕೆ.

ಪರಿಷತ್ತು ‘ಸಾಹಿತ್ಯವನ್ನು’ ಪರಿಭಾವಿಸುವ ರೀತಿಯಲ್ಲಿಯೇ ಲೋಪಗಳಿವೆ. ಇದುವರೆಗೆ ಒಬ್ಬ ಅನಕ್ಷರಸ್ಥ ಕವಿ, ಅರ್ಥಾತ್ ಜನಪದ ಕವಿ ಸಮ್ಮೇಳನ ನೇತೃತ್ವ ವಹಿಸಿದ ಉದಾಹರಣೆ ಇದೆಯೇ? ಬರೆದದ್ದನ್ನೆಲ್ಲ ಪ್ರಿಂಟ್ ಮಾಡಿಸಿ, ಅಲ್ಲಲ್ಲಿ ಪ್ರಶಸ್ತಿ, ಮನ್ನಣೆ ಗಳಿಸಿದವರು ಮಾತ್ರ ಸಾಹಿತಿ. (ಖ್ಯಾತ ಬರಹಗಾರ, ಪತ್ರಕರ್ತ ಖುಷ್ವಂತ್ ಸಿಂಗ್ ಸಂಸತ್ ಸದಸ್ಯರಾಗಿದ್ದಾಗ ಒಮ್ಮೆ ಮಾತನಾಡುತ್ತ ‘ಸರಕಾರ ಸಾಹಿತಿಗಳಿಗೆ ನೀಡುವ ಪ್ರಶಸ್ತಿ, ಪುರಸ್ಕಾರಗಳು ಕಳೆ ಮೇಲೆ ಸಿಂಪಡಿಸುವ ರಸಗೊಬ್ಬರ’ ಎಂದಿದ್ದರು.) ಅಂತಹದೊಂದು ಪಟ್ಟ ಬಂದಾಕ್ಷಣ ಜಗತ್ತಿನ ಎಲ್ಲಾ ಆಗುಹೋಗುಗಳಿಗೂ ಪ್ರತಿಕ್ರಿಯಿಸುವ ಅರ್ಹತೆ ಸಾಹಿತಿಗೆ ತಂತಾನೆ ಬಂದು ಬಿಡುತ್ತದೆ. ಕರ್ನಾಟಕದ ಸಂದರ್ಭದಲ್ಲಿ ಅನೇಕರು ಗಮನಿಸಿರಬಹುದು, ಕಾವೇರಿ ಗಲಾಟೆ, ಅಮೆರಿಕಾದೊಂದಿಗೆ ಅಣು ಒಪ್ಪಂದ, ಬೆಂಗಳೂರಿನ ಅಸ್ತವ್ಯಸ್ತ ರಸ್ತೆ ಸಂಪರ್ಕ… ಹೀಗೆ ಎಲ್ಲವುದರ ಬಗ್ಗೆಯೂ ಅಭಿಪ್ರಾಯ ಹೊಂದಿರುತ್ತಾರೆ. ಅದು ಅಕ್ಷರ ಜ್ಞಾನದೊಂದಿಗೆ ಉಚಿತವಾಗಿ ಒದಗುವ ಅಹಂನ ಕಾರಣ. ಇತ್ತೀಚೆಗೆ ಜನಪ್ರಿಯ ಸಾಹಿತಿ ಎಸ್. ಎಲ್. ಭೈರಪ್ಪ ಭಾರತದ ಸ್ವಾತಂತ್ರೋತ್ತರ ಇತಿಹಾಸದ ಬಗ್ಗೆ ತಮ್ಮ ಸೀಮಿತ ಅರಿವಿನ ಆಧಾರದ ಮೇಲೆಯೇ ತೀರ್ಪು ಹೊರಡಿಸುವ ಧಾಟಿಯಲ್ಲಿ ಅಂಕಣ ಬರೆಯುತ್ತಿರುವುದಕ್ಕೂ ಇಂತಹದೇ ಅಹಂ ಕಾರಣ.

ಹಿಂದೊಮ್ಮೆ ಹಾ.ಮಾ.ನಾಯಕರು ಕನಿಷ್ಟ ಒಂದು ಪುಸ್ತಕವನ್ನಾದರೂ ಪ್ರಕಟಿಸಿದವರು ಮಾತ್ರ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಬೇಕು ಎಂದು ಹೇಳಿದ್ದರು. ಈ ಮಾತು ಅಲ್ಲಲ್ಲಿ ಟೀಕೆಗೆ ಗುರಿಯಾಗಿತ್ತು. ಸಾಹಿತ್ಯ ಪರಿಷತ್ತು ಸೀಮಿತ ಪರಿಧಿಯಾಚೆಗೆ ಸಮ್ಮೇಳನವನ್ನು ರೂಪಿಸುವ ಅಗತ್ಯವಿದೆ. ಒಟ್ಟಾರೆ ಕನ್ನಡ ಸಮ್ಮೇಳನ ಆಗಬೇಕಿದೆ. ಕನ್ನಡ ಕೇವಲ ಭಾಷೆ ಅಲ್ಲ, ಸಮಾಜ ಮತ್ತು ಕನ್ನಡಿಗರ ಬದುಕು. ರೈತರ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಒಂದು ಗೋಷ್ಠಿ ಏರ್ಪಡಿಸಿ, ಕೋಡಿಹಳ್ಳಿ ಚಂದ್ರಶೇಖರ್, ಕೆ.ಎಸ್ ಪುಟ್ಟಣ್ಣಯ್ಯ ನವರು ಮಾತನಾಡಲು ಅವಕಾಶ ಕೊಟ್ಟರೆ ಜವಾಬ್ದಾರಿ ಮುಗಿಯಿತೆ? ಅಥವಾ ರೈತರ ಸಮಸ್ಯೆಗಳ ಬಗ್ಗೆ ಒಂದು ನಿರ್ಣಯ ಮಂಡಿಸಿದರೆ ಸಾಕೆ?

ವಿಮರ್ಶಕ ಚಿದಾನಂದಮೂರ್ತಿಯವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ನಿರಾಕರಿಸಿದಾಗ ಅದರ ವಿರುದ್ಧ ಖಂಡನಾ ನಿರ್ಣಯ ಮಂಡಿಸುವ ಸಾಹಿತ್ಯ ಪರಿಷತ್ತು, ಮಂಗಳೂರು, ಉಡುಪಿಗಳಲ್ಲಿ ನಡೆದ ಚರ್ಚ್ ಮೇಲಿನ ದಾಳಿಗಳನ್ನು ಖಂಡಿಸುವ ಉಸಾಬರಿಗೇ ಹೋಗುವುದಿಲ್ಲ.

ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತ, ನಾವು ಸಮ್ಮೇಳನಕ್ಕೆ ಸಾಕಷ್ಟು ಪೊಲೀಸ್ ವ್ಯವಸ್ಥೆ ಕಲ್ಪಿಸಿದ್ದೇವೆ. ಕೆಲಸಕ್ಕೆ ನಿಯೋಜಿಸಲಾಗಿರುವ ಪೊಲೀಸರಿಗೆ ಸಮ್ಮೇಳನಕ್ಕೆ ಆಗಮಿಸುವವರೊಂದಿಗೆ ಸಂಯಮದಿಂದ ನಡೆದುಕೊಳ್ಳಬೇಕೆಂಬುದರ ಬಗ್ಗೆಯೂ ತರಬೇತಿ ನೀಡಿದ್ದೇವೆ ಎಂದರು. ಅದು ನಿಜ. ಪೊಲೀಸರಿಗೆ ಅಂತಹ ತರಬೇತಿ ಅಗತ್ಯ. ಆದರೆ ಸಾಹಿತಿಗಳ ಜೊತೆ ವ್ಯವಹರಿಸಲು ಮಾತ್ರ ಅಂತಹ ತರಬೇತಿಯೇ? ರೈತರ ಬಗ್ಗೆ, ಇತರೆ ಕನ್ನಡಪರ ಹೋರಾಟಗಾರರ ಬಗ್ಗೆ, ದಲಿತರ ಹಕ್ಕುಗಳಿಗಾಗಿ ಹೋರಾಡುವವರ ಜೊತೆ ವ್ಯವಹರಿಸುವಾಗ ಸಂಯಮ ಬೇಕಿಲ್ಲವೆ?

ಗಂಗಾವತಿಯಲ್ಲಿ ಮೂರು ಕವಿಗೋಷ್ಟಿಗಳು ನಡೆದವು. ಅದೊಂಥರಾ ಕೇಂದ್ರ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಂತೆ. ಅರ್ಜಿ ಹಾಕಿದವರಿಗೆಲ್ಲ ನೂರು ದಿನಗಳ ಕೆಲಸ ಕೊಡಲೇ ಬೇಕು ಎಂಬಂತೆ, ಇಲ್ಲಿಯೂ ಬೇಡಿಕೆ ಸಲ್ಲಿಸಿದವರಿಗೆಲ್ಲಾ ಕವಿತೆ ಓದುವ ಅವಕಾಶ. ಅಲ್ಲಿ ಅನೇಕರು ‘ಕನ್ನಡ ಮಾತೆಗೆ’ ಜೈಕಾರ ಹಾಕುವವರೇ. ಸಾಹಿತ್ಯ ಸಮ್ಮೇಳನ ಮೂಲಕ ಸಾಹಿತ್ಯ ಅಭಿರುಚಿ ಬೆಳೆಸ ಬೇಕಾದ ಪರಿಷತ್ತು ಇಂತಹ ತೀರಾ ಸಾಧಾರಣ ಕವಿತೆಗಳಿಗೆ ಮಣೆ ಹಾಕಿ ಅಭಿರುಚಿಯನ್ನೇ ಕೊಲ್ಲುತ್ತಿದೆ.

ನಮ್ಮ ಮಾಧ್ಯಮಗಳು ಸಾಹಿತ್ಯ ಸಮ್ಮೇಳನದ ಗೋಷ್ಟಿಗಳಿಗೆ ಉತ್ತಮ ಪ್ರಚಾರ ಕೊಡುತ್ತವೆ. ಅಲ್ಲಿ ಕೇಳಿಬರುವ ಹೇಳಿಕೆಗಳಿಗೆ ಸುಖಾಸುಮ್ಮನೆ ಮನ್ನಣೆ ದೊರಕಿಬಿಡುತ್ತದೆ. ಆದರೆ ಆ ಸಾಧ್ಯತೆಯ ಲಾಭ ಪಡೆದುಕೊಂಡು ಮೌಢ್ಯದ ಗುಂಡಿಯಲ್ಲಿರುವ ಜನಸಾಮಾನ್ಯರನ್ನು ಮೇಲೆತ್ತುವ ಪ್ರಯತ್ನ ಮಾಡಿದ ಉದಾಹರಣೆಗಳು ಕಡಿಮೆ.

ಜಾತ್ಯತೀತ ನೆಲೆ:
ಸಮ್ಮೇಳವನ್ನು ಜಾತ್ಯತೀತ ನೆಲೆಗಟ್ಟಿನ ಮೇಲೆ ರೂಪಿಸುವಲ್ಲಿ ಆಸಕ್ತಿಯನ್ನೇ ತೋರಿಸಿಲ್ಲ. ಇವತ್ತಿಗೂ ಸಮ್ಮೇಳನ ಅಧ್ಯಕ್ಷರನ್ನು ಆರತಿ ಎತ್ತಿ, ಹಣೆಗೆ ಕುಂಕುಮವಿಟ್ಟು ಸ್ವಾಗತಿಸುತ್ತಾರೆ. ‘ಪೂರ್ಣ ಕುಂಭ’ ಹೊತ್ತ ‘ಮುತ್ತೈದೆಯರು’ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯುತ್ತಾರೆ. ಅದಕ್ಕೂ ಮುನ್ನ ಅಡಿಗೆ ಕೋಣೆಯನ್ನು ಅಣಿಗೊಳಿಸಿದ ದಿನ ಸ್ಥಳೀಯ ಪುರೋಹಿತರು ಕಾಯಿ ಒಡೆದು, ಪೂಜೆ ಮಾಡಿ ಒಲೆ ಹೊತ್ತಿಸುತ್ತಾರೆ.

ಅಷ್ಟೇ ಅಲ್ಲ ಕನ್ನಡಾಂಬೆ, ಭುವನೇಶ್ವರಿ ಎಂಬ ಪರಿಕಲ್ಪನೆಯೇ ಜಾತ್ಯತೀತ ನಂಬಿಕೆಗಳಿಗೆ ವಿರುದ್ಧವಾಗಿವೆ. ಆ ನಂಬಿಕೆಗಳನ್ನು ಪ್ರತಿನಿಧಿಸುವ ಸಂಕೇತಗಳು ಸಮುದಾಯವನ್ನು ಒಗ್ಗೂಡಿಸುವುದರ ಬದಲಿಗೆ ವಿಭಜಿಸುವ ಉದ್ದೇಶವನ್ನೇ ಇಟ್ಟುಕೊಂಡಿವೆ. ಸಮಷ್ಟಿಯನ್ನು ಪ್ರತಿನಿಧಿಸುವ ಸಂಕೇತಗಳೊಂದಿಗೆ ಸಮ್ಮೇಳನವನ್ನು ಆಯೋಜಿಸುವ ತುರ್ತನ್ನು ಸಾಹಿತ್ಯ ಪರಿಷತ್ತು ಇದುವರೆಗೂ ಅರ್ಥಮಾಡಿಕೊಳ್ಳದಿರುವುದು, ಅಜ್ಞಾನವೋ, ಹೊಣೆಗೇಡಿತನವೋ.

ಬಿಜಾಪುರದಲ್ಲಿ ನಡೆಯಲಿರುವ 79 ನೇ ಸಮ್ಮೇಳನಕ್ಕೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಅಲ್ಲಿಯವರೆಗೆ ಸಾಕಷ್ಟು ಚರ್ಚೆಯಾಗಲಿ, ಸಮ್ಮೇಳನ ಸ್ವರೂಪದಲ್ಲಿ ಒಂದಿಷ್ಟು ಸುಧಾರಣೆಗಳಾಗಲಿ.

(ಫೋಟೋ ಕೃಪೆ: ದಿ ಹಿಂದು)

Three Gorges Dam

ಜೀವನದಿಗಳ ಸಾವಿನ ಕಥನ – 15

-ಡಾ.ಎನ್.ಜಗದೀಶ್ ಕೊಪ್ಪ

ಲಾಭ ಗಳಿಕೆಯನ್ನೇ ಮುಖ್ಯ ಗುರಿಯಾಗಿರಿಸಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳು, ತೃತೀಯ ಜಗತ್ತಿನ ರಾಷ್ಟಗಳ ಮೂಗಿಗೆ ತುಪ್ಪ ಸವರತೊಡಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಜೀವ ನದಿಗಳ ನೈಜ ಹರಿವಿಗೆ ತಡೆಯೊಡ್ಡಿ ವಿದ್ಯುತ್ ಉತ್ಪಾದನೆ ನೆಪದಲ್ಲಿ ಈ ಕಂಪನಿಗಳು ಸರಕಾರಗಳನ್ನು ದಿಕ್ಕು ತಪ್ಪಿಸಿ ಸಾಲದ ಸುಳಿಗೆ ಸಿಲುಕಿಸಿ ಕಾಲು ಕೀಳುತ್ತಿವೆ. ಇದರ ಅಂತಿಮ ಪರಿಣಾಮ ಜೀವ ನದಿಗಳ ಮಾರಣ ಹೋಮ.

ಎಷ್ಟೋ ಬಾರಿ ಪ್ರವಾಹ ನಿಯಂತ್ರಣಕ್ಕೆ ನಿರ್ಮಿಸಿದ ಅಣೆಕಟ್ಟುಗಳಲ್ಲಿ ಜಲವಿದ್ಯುತ್ ಉತ್ಪಾದನೆಗೆ ಪ್ರಯತ್ನಿಸಿ ಸೋತ ರಾಷ್ಟ್ರಗಳ ಉದಾಹರಣೆ ಜಗತ್ತಿನ ಎಲ್ಲೆಡೆ ದೊರೆಯುತ್ತವೆ. ಇದಕ್ಕೆ ಚೀನಾ ರಾಷ್ಟ್ರದ ಯಾಂಗ್ಟೇಜ್ ನದಿಗೆ ಕಟ್ಟಿದ ತ್ರೀ ಗಾರ್ಜಸ್ಎಂಬ ಅಣೆಕಟ್ಟು ಸಾಕ್ಷಿಯಾಗಿದೆ. ಚೀನಾ ಸರಕಾರ ಮೊದಲು ಪ್ರವಾಹ ನಿಯಂತ್ರಣಕ್ಕಾಗಿ ಯೋಜನೆ ರೂಪಿಸಿ ನಂತರ ಇಡೀ ಯೋಜನೆಯನ್ನು

Three Gorges Dam

Three Gorges Dam

ಜಲ ವಿದ್ಯುತ್‌ಗಾಗಿ ಬದಲಿಸಿತು. ಈ ಕಾರಣಕ್ಕಗಿಯೇ ವಿಶ್ವ ಬಾಂಕ್ ತನ್ನ ವರದಿಯಲ್ಲಿ ಆಯಾ ರಾಷ್ಟ್ರಗಳ ಅಥವಾ ಸರಕಾರಗಳ ಮನಸ್ಥಿತಿಗೆ ತಕ್ಕಂತೆ ಅಣೆಕಟ್ಟುಗಳು ಅಥವಾ ಜಲಾಶಗಳು ಬದಲಾಗುತ್ತಿವೆ ಎಂದು ತಿಳಿಸಿದೆ.

ವೆನಿಜುವೇಲ ಗುರಿ ಎಂಬ ನದಿಗೆ ಕಟ್ಟಲಾದ ಇಟ್ಯವು ಅಣೆಕಟ್ಟು, ಸೈಬೀರಿಯಾದ ಗ್ರಾಂಡ್ ಕೌಲಿ ಅಣೆಕಟ್ಟು ಇವುಗಳಲ್ಲಿ ಕ್ರಮವಾಗಿ 12.600 ಮತ್ತು 10.300 ಮೆಗಾವ್ಯಾಟ್ ವಿದ್ಯುತ್ ಗುರಿ ಇರಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಸಾವಿರಾರು ಕೋಟಿ ಡಾಲರ್ ಹಣ ವಿನಿಯೋಗವಾದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗಲಿಲ್ಲ. ಇದರಲ್ಲಿ ಲಾಭವಾದದ್ದು ಬಹು ರಾಷ್ಟ್ರೀಯ ಕಂಪನಿಗಳಿಗೆ ಮತ್ತು ವಿಶ್ವ ಬ್ಯಾಂಕಿಗೆ ಮಾತ್ರ.

20 ನೇ ಶತಮಾನದ ಅಂತ್ಯದ ವೇಳೆಗೆ ಜಾಗತಿಕವಾಗಿ ಶೇ.22 ರಷ್ಟು ವಿದ್ಯುತ್ ಅನ್ನು ಜಲಮೂಲಗಳಿಂದ ಉತ್ಪಾದಿಸಲಾಗುತ್ತಿತ್ತು. ಇದರಲ್ಲಿ ಶೇ,18 ಏಷ್ಯಾ ಖಂಡದಲ್ಲಿ, ಶೆ.60 ರಷ್ಟು ಮಧ್ಯ ಅಮೇರಿಕಾದಲ್ಲಿ ಉತ್ಪಾದಿಸಲಾಗುತ್ತಿತ್ತು. ಏಷ್ಯಾದ ನೇಪಾಳ, ಶ್ರೀಲಂಕಾ, ಸೇರಿದಂತೆ ಜಗತ್ತಿನ ಇತರೆಡೆಯ ನಾರ್ವೆ, ಅಲ್ಬೇನಿಯಾ, ಬ್ರೆಜಿಲ್, ಗ್ವಾಟೆಮಾಲ, ಘಾನ ಮುಂತಾದ ರಾಷ್ಟ್ರಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ.90 ರಷ್ಟು ಜಲಮೂಲಗಳಿಂದ ಉತ್ಪಾದನೆಯಾಗುತ್ತಿದೆ.

1980ರ ದಶಕದಿಂದೀಚೆಗೆ ಜಾಗತಿಕವಾಗಿ ವಿದ್ಯುತ್ ಬಳಕೆ ಹೆಚ್ಚಾಗುತ್ತಿದ್ದು, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಾ ಪ್ರದೇಶಗಳಲ್ಲಿ ಬೇಡಿಕೆ ದ್ವಿಗುಣಗೊಂಡಿದೆ. ಅತ್ಯಂತ ಕಡಿಮೆ ಉತ್ಪಾದನಾ ವೆಚ್ಚವಿರುವ ಕಾರಣಕ್ಕಾಗಿ ಅಮೆರಿಕಾ, ಕೆನಡಾ ರಾಷ್ಟ್ರಗಳು ಸಹ ಶೇ.70ರಷ್ಟು ವಿದ್ಯುತ್ ಅನ್ನು ಜಲಮೂಲಗಳಿಂದಲೇ ಉತ್ಪಾದಿಸುತ್ತಿವೆ.

ನದಿಗಳಿಗೆ ನಿರ್ಮಿಸಲಾದ ಅಣೆಕಟ್ಟುಗಳ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ಇರುವ ಬಹುದೊಡ್ಡ ತೊಡಕೆಂದರೆ, ನದಿಯ ನೀರಿನ ಪ್ರಮಾಣ ಹಾಗೂ ವಿದ್ಯುತ್ ಬೇಡಿಕೆ ಕುರಿತಂತೆ ತಪ್ಪು ಅಂದಾಜು ವರದಿ ಸಿದ್ಧಗೊಳ್ಳುತ್ತಿದ್ದು, ಇದು ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದೆ.

ಯಾವ ಯಾವ ಋತುಮಾನಗಳಲ್ಲಿ ಎಷ್ಟು ಪ್ರಮಾಣದ ನೀರು ನದಿಗಳಲ್ಲಿ ಹರಿಯುತ್ತದೆ ಎಂಬ ನಿಖರ ಮಾಹಿತಿಯನ್ನು ಯಾವ ಅಣೆಕಟ್ಟು ತಜ್ಞರೂ ಸುಸಂಬದ್ಧವಾಗಿ ಬಳಸಿಕೊಂಡಿಲ್ಲ. ಜೊತೆಗೆ ವಿದ್ಯುತ್‌ನ ಬೇಡಿಕೆಯ ಪ್ರಮಾಣವೆಷ್ಟು ಎಂಬುದನ್ನು ಕೂಡ ಯಾವ ರಾಷ್ಟ್ರಗಳು, ಸರಕಾರಗಳೂ ನಿಖರವಾಗಿ ತಿಳಿದುಕೊಂಡಿಲ್ಲ.

ಇದಕ್ಕೆ ಉದಾಹರಣೆಯೆಂದರೆ ಅರ್ಜೆಂಟೈನಾ ಸರಕಾರದ ಸ್ಥಿತಿ. ತನ್ನ ದೇಶದ ವಿದ್ಯುತ್ ಬೇಡಿಕೆ ಮುಂದಿನ 7 ವರ್ಷಗಳ ನಂತರ ಶೇ.7 ರಿಂದ 8ರವರೆಗೆ ಇರುತ್ತದೆ ಎಂದು ಅಂದಾಜಿಸಿತ್ತು. 1994ರಲ್ಲಿ 3,100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯಾಕ್ರಿಯೇಟಾ ಎಂಬ ಅಣೆಕಟ್ಟನ್ನು ನಿರ್ಮಿಸಿತು. ಇದಕ್ಕೆ ತಗುಲಿದ ವೆಚ್ಚ 11.5 ಶತಕೋಟಿ ಡಾಲರ್. ಅಣೆಕಟ್ಟು ನಿರ್ಮಾಣವಾದ ನಂತರ ಅಲ್ಲಿನ ವಿದ್ಯುತ್ ಬೇಡಿಕೆ ಶೇ. 2ರಷ್ಟು ಮಾತ್ರ.ಹೆಚ್ಚಾಗಿತ್ತು. ತಾನು ಸಾಲವಾಗಿ ಪಡೆದ ಹಣಕ್ಕೆ ನೀಡುತ್ತಿರುವ ಬಡ್ಡಿಯ ಪ್ರಮಾಣವನ್ನು ಲೆಕ್ಕ ಹಾಕಿದಾಗ, ವಿದ್ಯುತ್ ಉತ್ಪಾದನಾ ವೆಚ್ಚ ಶೇ. 30ರಷ್ಟು ದುಬಾರಿಯಾಯಿತು. ಇಂತಹದ್ದೇ ಸ್ಥಿತಿ ಜಗತ್ತಿನಾದ್ಯಂತ 12 ಅತಿ ದೊಡ್ಡ ಅಣೆಕಟ್ಟುಗಳೂ ಸೇರಿದಂತೆ 380 ಅಣೆಕಟ್ಟುಗಳದ್ದಾಗಿದೆ.

ಕೊಲಂಬಿಯಾ ರಾಷ್ಟ್ರ ಹಾಕಿಕೊಂಡ ಅನೇಕ ಜಲವಿದ್ಯುತ್ ಯೋಜನೆಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗದೆ, ಆ ರಾಷ್ಟ್ರವನ್ನು ಆರ್ಥಿಕ ದುಸ್ಥಿತಿಗೆ ದೂಡಿವೆ. ಅಲ್ಲಿನ ಸರಕಾರದ ವಾರ್ಷಿಕ ಆಯ-ವ್ಯಯದಲ್ಲಿನ ಶೇ.60ರಷ್ಟು ಹಣ ಅಣೆಕಟ್ಟು ಯೋಜನೆಗಳಿಗಾಗಿ ತಂದ ಸಾಲದ ಮರು ಪಾವತಿ ಹಾಗೂ ಅದರ ಬಡ್ಡಿಗಾಗಿ ವಿನಿಯೋಗವಾಗುತ್ತಿದೆ.

ಮಧ್ಯ ಅಮೆರಿಕಾದ ಗ್ವಾಟೆಮಾಲದ ಚಿಕ್ಷೊಯ್ ಅಣೆಕಟ್ಟಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಶೇಖರವಾಗದೆ, ಯೋಜನೆ ವಿಪಲಗೊಂಡಿದ್ದರೆ, ಹಂಡೊರಾಸ್ ದೇಶದಲ್ಲಿ ಮಳೆಯೇ ಇಲ್ಲದೆ ನಿರಂತರ ಬರಗಾಲದಿಂದ ಎಲ್ಲಾ ನದಿಗಳು ಬತ್ತಿಹೋದ ಕಾರಣ ವಿದ್ಯುತ್ ಉತ್ಪಾದನಾ ಪ್ರಮಾಣ ಶೇ.30ಕ್ಕೆ ಕುಸಿದಿದೆ.

ಈ ಕೆಳಗಿನ ರಾಷ್ಟ್ರಗಳ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಗಮನಿಸಿದರೆ, ಇವರು ಅಣೆಕಟ್ಟು ಅಥವಾ ಜಲಾಶಯಗಳ ಮೂಲಕ ಜೀವ ನದಿಗಳನ್ನು ಕೊಲ್ಲುವ ಉದ್ದೇಶದಿಂದಲೇ ಮಾಡಿದ ಯೋಜನೆಗಳೆನೊ? ಎಂಬ ಸಂಶಯ ಮೂಡುತ್ತದೆ.

  1. 250 ಮೆಗಾವ್ಯಾಟ್ ವಿದ್ಯುತ್ ಗೆ ಬ್ರೆಜಿಲ್ ನಲ್ಲಿ ನಿರ್ಮಾಣವಾದ ಬಲ್ಬಿನಾ ಅಣೆಕಟ್ಟು ಸ್ಥಾವರದಲ್ಲಿ ಉತ್ಪಾದನೆಯಾದ ಪ್ರಮಾಣ ಕೇವಲ ಶೇ.44 ರಷ್ಟು.
  2. 150 ಮೆಗಾವ್ಯಾಟ್ ಯೋಜನೆಯ ಪನಾಮದ ಬಯಾನೊ ಅಣೆಕಟ್ಟಿನಿಂದ ಉತ್ಪಾದನೆಯಾದ ವಿದ್ಯುತ್ ಶೇ.40 ರಷ್ಟು.
  3. ಥಾಯ್ಲೆಂಡಿನ ಬೂಮಿ ಬೊಲ್ ಅಣೆಕಟ್ಟಿನ ಮೂಲ ಉದ್ದೇಶ ಇದ್ದದ್ದು, 540 ಮೆಗಾವ್ಯಾಟ್, ಆದರೆ ಉತ್ಪಾದನೆಯಾದದ್ದು,150 ಮೆಗಾವ್ಯಾಟ್.
  4. ಭಾರತದ ಸರದಾರ್ ಸರೋವರದ ಅಣಕಟ್ಟಿನಲ್ಲಿ ಉದ್ದೇಶಿತ ಗುರಿ 1.450 ಮೆಗಾವ್ಯಾಟ್ ವಿದ್ಯುತ್, ಉತ್ಪಾದನೆಯಾದದ್ದು ಶೇ. 28 ರಷ್ಟು ಮಾತ್ರ.
  5. ಶ್ರೀಲಂಕಾದ ವಿಕ್ಟೋರಿಯಾ ಅಣೆಕಟ್ಟುವಿನಿಂದ 210 ಮೆಗಾವ್ಯಾಟ್ ವಿದ್ಯುತ್‌ಗಾಗಿ ಗುರಿ ಹೊಂದಲಾಗಿತ್ತು. ಅಲ್ಲಿ ಉತ್ಪಾದನೆಯಾದದ್ದು ಶೇ.32 ರಷ್ಟು ಮಾತ್ರ.

ಹೀಗೆ ಜಗತ್ತಿನಾದ್ಯಂತ ನೂರಾರು ಅಣೆಕಟ್ಟುಗಳ ಇತಿಹಾಸದ ಪಟ್ಟಿಯನ್ನು ಗಮನಿಸಿದರೆ, ಇವರುಗಳ ಮೂಲ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಕಾಡತೊಡಗುತ್ತದೆ.

ಜಲವಿದ್ಯುತ್ ಯೋಜನೆಗಾಗಿ ರೂಪಿಸಿದ ಅಣೆಕಟ್ಟುಗಳಲ್ಲಿ ಜನಸಾಮಾನ್ಯರ ಅರಿವಿಗೆ ಬಾರದ ರೀತಿಯಲ್ಲಿ ಜಾಗತಿಕ ಪರಿಸರಕ್ಕೆ ಅಡ್ಡಿಯಾಗುತ್ತಿರುವ ಅಂಶಗಳನ್ನು ಪರಿಸರ ತಜ್ಙರು ಗುರುತಿಸಿದ್ದಾರೆ. ಈವರಗೆ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲು ಘಟಕ, ಅನಿಲ ಆಧಾರಿತ ಘಟಕಗಳಿಂದ ಮಾತ್ರ ಪರಿಸರಕ್ಕೆ ಹಾನಿ ಎಂದು ನಂಬಲಾಗಿತ್ತು. ಈಗ ಜಲ ವಿದ್ಯುತ್ ಯೋಜನೆಯ ಜಲಾಶಗಳಿಂದಲೂ ಪರಿಸರಕ್ಕೆ ಧಕ್ಕೆಯುಂಟಾಗುತ್ತಿದೆ.

ಜಲವಿದ್ಯುತ್ ಯೋಜನೆಗಳು ಪರಿಸರ ರಕ್ಷಣೆಗೆ ಪೂರಕವಾಗಿದ್ದು ಇವುಗಳಿಗೆ ಕೈಗಾರಿಕಾ ರಾಷ್ಟಗಳು ಉದಾರವಾಗಿ  ನೆರವು ನೀಡಬೇಕೆಂದು ಅಂತರಾಷ್ಟೀಯ ದೊಡ್ಡ ಅಣೆಕಟ್ಟುಗಳ ಸಮಿತಿ ಆಗ್ರಹಿಸಿತ್ತು.

20 ಮತ್ತು 21 ನೇ ಶತಮಾನದಲ್ಲಿ ಜಗತ್ತು ಎದುರಿಸುತ್ತಿವ ಅಪಾಯಕಾರಿ ಸ್ಥಿತಿಯೆಂದರೆ, ದಿನೇ ದಿನೇ ಏರುತ್ತಿರುವ ಜಾಗತಿಕ ತಾಪಮಾನ. ಇದು ಮನು ಕುಲಕ್ಕೆ ದೊಡ್ಡ ಸವಾಲಾಗಿದೆ. ಈ ಕಾರಣಕ್ಕಾಗಿ ನೂತನವಾಗಿ ಅವಿಷ್ಕಾರಗೊಳ್ಳುವ ಯಾವುದೇ ತಂತ್ರಜ್ಙಾನವಿರಲಿ, ಅದರಿಂದ ಪರಿಸರಕ್ಕೆ ಯಾವುದೇ ಧಕ್ಕೆಯಾಗಬಾರದು ಎಂಬುದು ಎಲ್ಲರ ನಿಲುವಾಗಿದೆ. ಈ ನಿಟ್ಟಿನಲ್ಲಿ ಸುಧಾರಿತ ತಂತ್ರಜ್ಙಾನಗಳಿಂದ ಕೂಡಿದ ಜಲವಿದ್ಯುತ್ ಘಟಕದಿಂದ ಯಾವುದೇ ಹಾನಿಯಾಗದಿದ್ದರೂ, ಜಲಾಶಗಳಲ್ಲಿ ಸಂಗ್ರಹವಾಗುತ್ತಿರುವ ನೀರಿನಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ.

ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಅರಣ್ಯ ಪ್ರದೇಶ, ಅಲ್ಲಿನ ಗಿಡ ಮರಗಳು, ಪ್ರಾಣಿಗಳು ಇವುಗಳ ಕೊಳೆಯುವಿಕೆಯಿಂದ ಬಿಡುಗಡೆಯಾಗುತ್ತಿರುವ ಮಿಥೇನ್ ಅನಿಲ ಮತ್ತು ಕಾರ್ಬನ್ ಡೈ ಆಕ್ಸೈಡ್ (ಇಂಗಾಲಾಮ್ಲ) ಇವುಗಳಿಂದ ವಾತಾವರಣದ ಉಷ್ಣತೆ ಹೆಚ್ಚುತ್ತಿರುವುದನ್ನು ಪರಿಸರ ವಿಜ್ಷಾನಿಗಳು ಪತ್ತೆ ಹಚ್ಚಿದ್ದಾರೆ. ಈ ಕುರಿತಂತೆ ಬ್ರೆಜಿಲ್‌ನ ರಾಷ್ಟೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಫಿಲಿಪ್ ಪೆರ್ನಸೈಡ್ ಎಂಬುವರು  ಆ ದೇಶದ ಎರಡು ಜಲಾಶಯಗಳಲ್ಲಿ ನಿರಂತರ ಇಪ್ಪತ್ತು ವರ್ಷ ಸಂಶೋಧನೆ ನಡೆಸಿ ವಿಷಯವನ್ನು ಧೃಡಪಡಿಸಿದ್ದಾರೆ.

ಜಲಾಶಯಗಳ ನೀರಿನಲ್ಲಿ ಬಿಡುಗಡೆಯಾಗುತ್ತಿರುವ ಈ ಅನಿಲಗಳ ಪ್ರಮಾಣ ಪ್ರಾದೇಶಿಕ ಹಾಗೂ ಭೌಗೋಳಿಕ ಲಕ್ಷಣಗಳ ಆಧಾರದ ಮೇಲೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ ಎಂದಿರುವ ಫಿಲಿಪ್, ಉಷ್ಣವಲಯದ ಆರಣ್ಯ ಪ್ರದೇಶದಲಿರುವ ಜಲಾಶಯಗಳು ಪರಿಸರಕ್ಕೆ ಹೆಚ್ಚು ಅಪಾಯಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಾಮಾನ್ಯವಾಗಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಆಮ್ಲಜನಕ ಬಿಡುಗಡೆಗೊಂಡು ಮಿಥೇನ್ ಅನಿಲದಿಂದ ಉತ್ಪತ್ತಿಯಾಗವ ಕೊಳೆಯುವಿಕೆಯ ಬ್ಯಾಕ್ಟೀರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತದೆ. ಆದರೆ, ಪ್ರವಾಹ ಸಂದರ್ಭದಲ್ಲಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುವುದರಿಂದ, ಜೊತೆಗೆ ಹೂಳು, ಕಲ್ಮಶಗಳು ಶೇಖರವಾಗುವುದರಿಂದ ಈ ನಿಯಂತ್ರಣ ಏರು ಪೇರಾಗುತ್ತದೆ ಎಂದು ವಿಜ್ಙಾನಿಗಳು ವಿವರಿಸಿದ್ದಾರೆ

ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತಿರುವ ಹಸಿರು ಮನೆ ಅನಿಲಗಳೆಂದು ಕರೆಯುತ್ತಿರುವ ಇಂಗಾಲಾಮ್ಲ, ಮಿಥೇನ್, ಮತ್ತು ಕಾರ್ಬನ್ ಮೊನಾಕ್ಷೈಡ್ ಇವುಗಳ ಪರಿಣಮದ ಬಗ್ಗೆ ವಿಜ್ಙಾನಿಗಳಲ್ಲಿ ಗೊಂದಲವಿರುವುದು ನಿಜ. ಆದರೆ, ಪಿಲಿಪ್ ಪೆರ್ನಸೈಡ್ ಬ್ರೆಜಿಲ್ನ ಎರಡು ಅಣೆಕಟ್ಟುಗಳ ಅಧ್ಯಯನದಿಂದ, ಜಲಾಯಗಳು ಕಲ್ಲಿದ್ದಲು ವಿದ್ಯುತ್ ಘಟಕದ ಶೇ.50ರಷ್ಟು ಹಾಗೂ ಅನಿಲ ಆಧಾರಿತ ಘಟಕದ ಶೇ.26 ರಷ್ಡು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿವೆ ಎಂಬುದನ್ನ ಸಾಬೀತುಪಡಿಸಿದ್ದಾರೆ.

ಸಾಮಾನ್ಯವಾಗಿ ನದಿಗೆ ಅಣೆಕಟ್ಟು ನಿರ್ಮಿಸುವ ಮುನ್ನ ಸ್ಥಳದ ಪರಿಶೀಲನೆ, ಅಣೆಕಟ್ಟಿನ ವಿನ್ಯಾಸ, ನದಿ ನೀರಿನ ಹರಿಯುವಿಕೆ ಪ್ರಮಾಣ, ಆ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣ ಭೂಮಿಯ ಲಕ್ಷಣ ಇವೆಲ್ಲವನ್ನು ಪರಿಗಣಿಸುವುದು ವಾಡಿಕೆ. ಇದಕ್ಕಿಂತ ಹೆಚ್ಚಾಗಿ ಪ್ರವಾಹದ ಸಂದರ್ಭದಲ್ಲಿ ನದಿಯ ನೀರಿನ ಜೊತೆ ಜಲಾಶಯ ಸೇರುವ ಹೂಳಿನ ಪ್ರಮಾಣ ಮತ್ತು ಅದನ್ನು ತೂಬುಗಳ (ಗೇಟ್) ಮೂಲಕ ಹೊರ ಹಾಕುವ ಬಗ್ಗೆ ಗಣನೆಗೆ ತೆಗೆದುಕೊಳ್ಳಲಾಗುವುದು. ಇತ್ತೀಚಿಗಿನ ದಿನಗಳಲ್ಲಿ ಅಣೆಕಟ್ಟು ನಿರ್ಮಣವೇ ಒಂದು ಅಂತರಾಷ್ಟೀಯ ದಂಧೆಯಾಗಿರುವಾಗ ಯಾವ ಅಂಶಗಳನ್ನು ಗಮನಿಸುವ ತಾಳ್ಮೆ ಯಾರಿಗೂ ಇಲ್ಲ.

ಕಳೆದ ಎರಡು ದಶಕದಿಂದ ಜಗತ್ತಿನ ನದಿಗಳು, ಅಣೆಕಟ್ಟುಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ವಿಜ್ಙಾನಿಗಳು ವಾತಾವರಣದಲ್ಲಾಗುವ ಸಣ್ಣ ಬದಲಾವಣೆಗಳು ಅನೇಕ ಅವಘಡಗಳಿಗೆ ಕಾರಣವಾಗಬಲ್ಲವು ಎಂದು ಎಚ್ಚರಿಸಿದ್ದಾರೆ. ಆಲಾಶಯಗಳಲ್ಲಿ ಹೂಳಿನ ಪ್ರಮಾಣ ನಿರಿಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟಾಗಿದ್ದು ಈಗಾಗಲೇ ಅಂದಾಜಿಸಿದ್ದ ಜಲಾಶಯಗಳ ಆಯಸ್ಸು ಅರ್ಧದಷ್ಟು ಕಡಿಮೆಯಾಗಿದೆ ಎಂದು ಅವುಗಳ ಹಣೆಬರಹವನ್ನು ನಿರ್ಧರಿಸಿದ್ದಾರೆ.

(ಮುಂದುವರಿಯುವುದು)

ವರ್ತಮಾನದ ಅಪೀಲು: ಇದು ನಮ್ಮ ಜವಾಬ್ದಾರಿ, ನೀವೂ ಪಾಲ್ಗೊಳ್ಳಿ

ಕೆಜಿಎಫ್ ದಲಿತ ಕಾಲೋನಿಗಳಲ್ಲಿ ಇತ್ತೀಚೆಗೆ ಘಟಿಸಿದ ಸಾವುಗಳು ನಿಮಗೆ ನೆನಪಿರಬಹುದು. ಕಕ್ಕಸ್ಸು ಗುಂಡಿ ಶುಚಿಗೊಳಿಸಲು ಹೋದ ಐವರು ಅಸುನೀಗಿದ್ದಾರೆ. ಇದೇ ಕೆಲಸದಿಂದಾಗಿ ಅಂಟಿಸಿಕೊಂಡ ನಾನಾ ರೋಗಗಳಿಂದ ಸತ್ತವರೆಷ್ಟೋ, ಲೆಕ್ಕ ಇಟ್ಟವರಾರು? ಇನ್ನು ಕೆಲವರು ರೋಗಗಳಿಂದ ಬಳಲುತ್ತಿದ್ದಾರೆ.

ದುಡಿವವರನ್ನು ಕಳೆದುಕೊಂಡ ಅವರ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಸಾಲು ಸಾಲು ಸಾವುಗಳ ನಂತರ ಸ್ಥಳೀಯ ಸಂಸ್ಥೆ ಎಚ್ಚರಗೊಂಡು ಮಲಹೊರುವ ಪದ್ಧತಿ ನಿರ್ಮೂಲನೆಗೆ ಶತಪ್ರಯತ್ನ ಮಾಡುತ್ತಿದೆ. ಮಲದ ಗುಂಡಿಗಳನ್ನು ಶುಚಿ ಮಾಡಲು ಯಾರೂ ಇವರನ್ನು ಕರೆಯಬಾರದು ಎಂದು ಅರಿವು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ಅದೇ ಆಡಳಿತದ ಜವಾಬ್ದಾರಿಯಾಗಿದ್ದು ದುಡಿಯುವ ಕೈಗಳನ್ನು ಮತ್ತು ದುಡಿಮೆಯನ್ನು ಕಳೆದುಕೊಂಡವರಿಗೆ ಪರ್ಯಾಯ ಉದ್ಯೋಗ ಕೊಡಿಸಬೇಕಾದ್ದು. ಇದುವರೆಗೂ ಅದು ಈಡೇರಿಲ್ಲ. ಭರವಸೆ ನೀಡಿದ್ದಾರೆ. ಈಡೇರುವುದು ಎಂದೋ?

ಆದರೆ ಅಲ್ಲಿಯವರೆಗೆ??

ಪಿಯುಸಿಎಲ್ ಮತ್ತಿತರ ಸಂಘಟನೆಗಳ ಸತತ ಒತ್ತಡದ ಫಲವಾಗಿ, ವೈ.ಜೆ.ರಾಜೇಂದ್ರ, ದಯಾನಂದ್, ಚಂದ್ರಶೇಖರ್, ಪದ್ಮ ಮೊದಲಾದ ಸಾಮಾಜಿಕ ಹೋರಾಟಗಾರರ ಪ್ರಯತ್ನದಿಂದಾಗಿ ಕೆಜಿಎಫ್‌ನಲ್ಲಿ ಈಗ ಮನುಷ್ಯರೇ ಮಲಹೊತ್ತುವ ಕಾರ್ಯಕ್ಕೆ ಸ್ಥಳೀಯ ಆಡಳಿತ ತಡೆಯೊಡ್ಡಿದೆ. ಇದರ ಜತೆಜತೆಗೆ ಈ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದ ಜಿಲ್ಲಾಡಳಿತ ಮಾತ್ರ ನಿಧಾನಗತಿ ಅನುಸರಿಸುತ್ತಿದೆ. ಪರಿಣಾಮವಾಗಿ ಈ ಕುಟುಂಬಗಳ ಒಪ್ಪೊತ್ತಿನ ಊಟಕ್ಕೂ ಈಗ ತತ್ವಾರ.

ಸದ್ಯಕ್ಕೆ ಅವರಿಗೆ ಆದಾಯದ ಮೂಲವೇ ಇಲ್ಲ. ಪರ್ಯಾಯ ಉದ್ಯೋಗ ಕಲ್ಪಿಸುವವರೆಗಾದರೂ ಆ ಕಾಲೋನಿಯಲ್ಲಿ ಗಂಜಿ ಕೇಂದ್ರ ಸ್ಥಾಪಿಸಿ ಅನ್ನ ನೀಡಬೇಕಾದ ಜವಾಬ್ದಾರಿ ಆಡಳಿತದದ್ದು. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ನಾಗರಿಕ ಸಮಾಜವೂ ಜವಾಬ್ದಾರಿ ಮರೆತರೆ? ನಮ್ಮ ಮನೆಯ ಮಲದ ಗುಂಡಿಗಳು ತುಂಬಿಕೊಂಡಾಗ, ನಗರಸಭೆ, ಪುರಸಭೆಗಳನ್ನು ನಂಬಿಕೊಳ್ಳದೆ ನಾವು ಇಂತಹವರ ಮೊರೆ ಹೋಗಿದ್ದೆವು, ಅವರನ್ನು ಗುಂಡಿಯೊಳಗೆ ಇಳಿಸಿ ಮೇಲೆ ಮೂಗು ಮುಚ್ಚಿ ನಿಂತಿದ್ದೆವು. ಅವರು ಅಂಟಿಸಿಕೊಂಡ ರೋಗಗಳಿಗೆ, ತೆತ್ತ ಜೀವಕ್ಕೆ ಸರಕಾರ ಅಷ್ಟೇ ಅಲ್ಲ, ನಾವೂ ಹೊಣೆ.

ವರ್ತಮಾನ ಬಳಗ ಹೀಗೊಂದು ಆಲೋಚನೆ ಮಾಡಿದೆ. ಒಪ್ಪತ್ತಿನ ಅನ್ನಕ್ಕಾಗಿ ಕಷ್ಟಪಡಿಸುತ್ತಿರುವವರಿಗೆ ನಾವು, ನೀವು ನೆರವಾಗೋಣ ಎಂಬುದು ನಮ್ಮ ಆಲೋಚನೆ. ಅವರಿಗೆ ಮುಖ್ಯವಾಗಿ ಈಗ ಬೇಕಿರುವುದು, ಅಕ್ಕಿ, ಬೇಳೆ ಹಾಗೂ ಅಡಿಗೆಗೆ ಬೇಕಾದ ಇತರೆ ಅಗತ್ಯ ಸಾಮಾಗ್ರಿಗಳು. ಸಂಗ್ರಹವಾಗುವ ಹಣದಲ್ಲಿ ಅಗತ್ಯ ವಸ್ತುಗಳನ್ನು ಕೊಂಡು ಅವರಿಗೆ ತಲುಪಿಸುವ ಹೊಣೆ ನಮ್ಮದು. ಸಂಗ್ರಹವಾಗುವ ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ? ಅಂತೆಯೇ ನಮ್ಮ ಜೊತೆ ಕೈಜೋಡಿಸುವವರ ಹೆಸರನ್ನು ಪ್ರಕಟಿಸುತ್ತೇವೆ. ಜೊತೆಗೆ ಹಣ ನೀಡುತ್ತೇವೆ ಎಂದು ಭರವಸೆ ಕೊಡುವವರ ಹೆಸರನ್ನೂ ಮತ್ತೊಂದು ಪಟ್ಟಿಯಲ್ಲಿ ಪ್ರಕಟಿಸುತ್ತೇವೆ. ಅಂತಹವರು ತಮ್ಮ ಭರವಸೆಗಳನ್ನು ಮೇಲ್ ಮಾಡಬಹುದು (editor@vartamaana.com).

ವರ್ತಮಾನ ಬಳಗ 5,000 ರೂ.ಗಳನ್ನು ಈ ಕೆಲಸಕ್ಕಾಗಿ ವಿನಿಯೋಗಿಸುತ್ತದೆ.

ನೀವು ಹಣ ಕಳುಹಿಸಬೇಕಾದ ಬ್ಯಾಂಕ್ ಖಾತೆ: 64046096974 (ಟಿ.ಕೆ.ದಯಾನಂದ) ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಪಂಗಿರಾಮ ನಗರ ಶಾಖೆ, ಬೆಂಗಳೂರು. ಇದೇ ಡಿಸೆಂಬರ್ 15 ರ ಒಳಗೆ ತಾವು ಹಣ ಕಳುಹಿಸಬೇಕಾಗಿ ವಿನಂತಿ. ಚೆಕ್ ಕಳುಹಿಸುವವರು ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ಚೆಕ್ ಟಿ.ಕೆ.ದಯಾನಂದ ರ ಹೆಸರಿನಲ್ಲಿರಲಿ.

ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ:

ನಂ. 400, 23ನೇ ಮುಖ್ಯ ರಸ್ತೆ,
ಕುವೆಂಪು ನಗರ, ಎರಡನೇ ಹಂತ
ಬೆಂಗಳೂರು – 560076

ದೂ: 080-26783329

ನಮಸ್ಕಾರ
ವರ್ತಮಾನ ಬಳಗ.


ಡಿಸೆಂಬರ್ 6, 2011 ರಂದು ಸೇರಿಸಿದ್ದು:

ನಮ್ಮ ಮನವಿಗೆ ಅನೇಕರು ಸ್ಪಂದಿಸಿದ್ದಾರೆ. ಕೆಲ ಉತ್ಸಾಹಿ ಬ್ಲಾಗ್ ಗಳು, ವೆಬ್ ಸೈಟ್ ಗಳು, ಫೇಸ್ ಬುಕ್ ಸ್ನೇಹಿತರು ನಮ್ಮ ಮನವಿಯನ್ನು ಮತ್ತಷ್ಟು ಜನರಿಗೆ ಮುಟ್ಟಿಸುವಲ್ಲಿ ತಮ್ಮ ಸಹಕಾರ ನೀಡಿದ್ದಾರೆ. ಅವರಿಗೆಲ್ಲಾ ನಮ್ಮ ಧನ್ಯವಾದಗಳು. ಅವರ ಸಹಕಾರ ಹೀಗೇ ಇರಲಿ ಎಂದು ಬಯಸುತ್ತೇವೆ. ಈ ಮಧ್ಯೆ ಕೆಲವರು ಹಣ ಕಳುಹಿಸುವುದರ ಬಗ್ಗೆ ಕೆಲವು ಮಾಹಿತಿ ಬಯಸಿದ್ದಾರೆ.

ಇಂಟರ್ ನೆಟ್ ಮೂಲಕ ಹಣ ವರ್ಗಾವಣೆ ಮಾಡ ಬಯಸುವವರಿಗೆ ಅನುಕೂಲವಾಗಬಹುದಾದ ಮಾಹಿತಿ ಇಲ್ಲಿದೆ.
ಬ್ಯಾಂಕ್ ಖಾತೆ ಸಂಖ್ಯೆ: 64046096974
ಖಾತೆ: ಉಳಿತಾಯ ಖಾತೆ
ಬ್ಯಾಂಕ್: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಪಂಗಿರಾಮ ನಗರ ಶಾಖೆ, ಬೆಂಗಳೂರು.
ಐಎಫ್ ಎಸ್ ಸಿ ಕೋಡ್ (IFSC code): SBMY0040376
ಬ್ರಾಂಚ್ ಕೋಡ್ : 040376

(ಇಂಟರ್ ನೆಟ್ ಮೂಲಕ ಹಣ ವರ್ಗಾಯಿಸುವವರು, ಹಣ ಕಳುಹಿಸಿದ ನಂತರ ವರ್ತಮಾನ ಕ್ಕೆ ಇಮೇಲ್ ಮೂಲಕ ತಮ್ಮ ಹೆಸರು, ವಿಳಾಸ ಹಾಗೂ ಕಳುಹಿಸಿದ ಮೊತ್ತ ವನ್ನು ತಿಳಿಸಿದರೆ ತಮ್ಮ ಹೆಸರನ್ನು ಪ್ರಕಟಿಸಲು ಸಹಾಯವಾಗುತ್ತದೆ).

ಚೆಕ್ ಅಥವಾ ಡಿಡಿ ಕಳುಹಿಸುವವರು:

“T.K. Dayanand / ಟಿ.ಕೆ. ದಯಾನಂದ”

ಹೆಸರಿಗೆ ಚೆಕ್ ಬರೆದು
ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ:

ನಂ. 400, 23ನೇ ಮುಖ್ಯ ರಸ್ತೆ,
ಕುವೆಂಪು ನಗರ, ಎರಡನೇ ಹಂತ
ಬೆಂಗಳೂರು – 560076

ದೂ: 080-26783329

ನಮಸ್ಕಾರ,
ವರ್ತಮಾನ ಬಳಗ.


ಡಿಸೆಂಬರ್ 10, 2011 ರಂದು ಸೇರಿಸಿದ್ದು:

-ರವಿ ಕೃಷ್ಣಾರೆಡ್ಡಿ

ಸ್ನೇಹಿತರೆ,

KGF ನ ಸಂತ್ರಸ್ತರಿಗಾಗಿ ನಾವು ಮಾಡಿಕೊಂಡ ಮನವಿಗೆ ಸ್ಪಂದಿಸಿ ಈಗಾಗಲೆ ಐದಾರು ಜನ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ನಾವು ಮನವಿ ಪ್ರಕಟಿಸಿದ ಮೊದಲ ಎರಡು ದಿನ ಹಣಸಂದಾಯ ಮಾಡುವ ವಿಚಾರಕ್ಕೆ ಕೆಲವೊಂದು ಮಾಹಿತಿಗಳು ಅಪೂರ್ಣವಾಗಿದ್ದವು. ಈಗ ನೀವು ಯಾವುದೇ ರೀತಿ ಕಳುಹಿಸಬೇಕೆಂದರೂ (ಇಂಟರ್ನೆಟ್/ಎಟಿಎಮ್ ಟ್ರಾನ್ಸ್‌ಫರ್/ಚೆಕ್) ಸಂಪೂರ್ಣ ಮಾಹಿತಿ ಲಭ್ಯವಿದೆ.

ಇಲ್ಲಿಯವರೆಗೆ ಒಟ್ಟು ರೂ. 18,500 ಸಂಗ್ರಹವಾಗಿದೆ. ಇನ್ನೂ ಹಲವರು ಒಂದೆರಡು ದಿನದಲ್ಲಿಯೇ ಚೆಕ್ ಕಳುಹಿಸುವ, ಅಕೌಂಟಿಗೆ ಟ್ರಾನ್ಸ್‌ಫರ್ ಮಾಡುವ ಆಶ್ವಾಸನೆ ಇತ್ತಿದ್ದಾರೆ. ಸಹಾಯ ಮಾಡಬೇಕೆಂದಿರುವವರು ಆದಷ್ಟು ಬೇಗ ಮಾಡಿ. ಡಿಸೆಂಬರ್ 15ಕ್ಕೆ ಸಂಗ್ರಹವಾಗುವ ಒಟ್ಟು ಮೊತ್ತವನ್ನು ಪದಾರ್ಥರೂಪದಲ್ಲಿ ಸಂತ್ರಸ್ತರಿಗೆ ತಲುಪಿಸುವ ಕಾರ್ಯ ಆರಂಭಿಸಲು ಅನುಕೂಲವಾಗುತ್ತದೆ. ಸರಿಯಾದ ಅಥವ ಅತ್ಯಗತ್ಯವಾದ ಸಮಯದಲ್ಲಿ ಮಾಡುವ ಸಹಾಯವೇ ಅತ್ಯುತ್ತಮ ಸಹಾಯ. ಅದನ್ನು ಮತ್ತಷ್ಟು ನಿಧಾನಗೊಳಿಸುವುದು ಬೇಡ ಎನ್ನುವುದಷ್ಟೇ ನಮ್ಮ ಆಶಯ.

ಅಂದ ಹಾಗೆ, ಇಲ್ಲಿಯವರೆಗೆ ಹಣ ಸಂದಾಯ ಮಾಡಿರುವವರ ಮತ್ತು ಚೆಕ್ ಕಳುಹಿಸಿರುವವರ ವಿವರ ಹೀಗಿದೆ:

ವರ್ತಮಾನ ಬಳಗ – 5000
ರಾಮಕೃಷ್ಣ ಎಂ. – 10000
ಮಾನಸ ನಾಗರಾಜ್ – 500
ಅನಾಮಧೇಯ-1 – 1000
ಎಸ್.ವಿಜಯ, ಮೈಸೂರು – 1000
ಸ್ವರ್ಣಕುಮಾರ್ ಬಿ.ಎ. – 1000

ಒಟ್ಟು: 18,500


ದಿನಾಂಕ 20/12/2011 ರಂದು ಸೇರಿಸಿದ್ದು:

KGF ಸಂತ್ರಸ್ತರಿಗೆ ತಲುಪಿದ ನೆರವು…

ಗೆಳೆಯರೆ,

ಕಳೆದ ಭಾನುವಾರ ಟಿ.ಕೆ. ದಯಾನಂದ್, ದಿನೇಶ್ ಕುಮಾರ್, ಮತ್ತು ಗೆಳೆಯರು KGFಗೆ ಹೋಗಿ ಸುಮಾರು 50 ಸಂತ್ರಸ್ತ ಕುಟುಂಬಗಳಿಗೆ ನೆರವನ್ನು ನೀಡಿ ಬಂದಿದ್ದಾರೆ. ಅದರ ವಿವರಗಳನ್ನು ಒಂದೆರಡು ದಿನದಲ್ಲಿ ಪ್ರಕಟಿಸಲಿದ್ದೇವೆ. ಹಾಗೆಯೇ, ರಸೀತಿಯನ್ನೂ ಸಹ. ದಿನೇಶ್ ಕುಮಾರ್‌ರವರು ಈಗ ತಾನೆ ಅಂದಿನ ಹಂಚಿಕೆ ಕಾರ್ಯದ ಕೆಲವು ಫೋಟೋಗಳನ್ನು ಕಳುಹಿಸಿದ್ದಾರೆ. ಅವರಿಗೆ ಮತ್ತು ಇದನ್ನು ಸಾಧ್ಯ ಮಾಡಿದ ಎಲ್ಲರಿಗೂ ಮತ್ತೊಮ್ಮೆ ವರ್ತಮಾನದ ಬಳಗದ ಪರವಾಗಿ ಧನ್ಯವಾದಗಳು.

ಅಂದಹಾಗೆ, ನಮಗೆ ಭಾನುವಾರದ ತನಕವೂ ನೆರವು ಹರಿದು ಬಂದಿತ್ತು. ಒಟ್ಟು ರೂ. 35000 ಹಣಸಂಗ್ರಹವಾಗಿದ್ದು, ಅದರ ಅಂತಿಮ ವಿವರ ಹೀಗಿದೆ: ವರ್ತಮಾನ ಬಳಗ – 5000,, ರಾಮಕೃಷ್ಣ ಎಂ – 10000, ಮಾನಸ ನಾಗರಾಜ್ – 500, ಅನಾಮಧೇಯ-1 – 1000, ಎಸ್. ವಿಜಯ – 1000, ಸ್ವರ್ಣ ಕುಮಾರ್ ಬಿ.ಎ. – 1500, ಬಿ. ಶ್ರೀಪಾದ ಭಟ್ – 2000, ಅನಾಮಧೇಯ-2 – 500, ಅಕ್ಷತಾ – 1000, ಸಂದೀಪ್/ರಾಘವೇಂದ್ರ ಸಿ.ವಿ. – 2000, ಪಿ.ರಂಗನಾಥ – 2000, ತ್ರಿವೇಣಿ ಟಿ.ಸಿ. – 1000, ಅವಿನಾಶ ಕನ್ನಮ್ಮನವರ – 500, ಸತೀಶ್ ಗೌಡ ಬಿ.ಎಚ್. (ಕ.ರ.ವೇ.) – 500, ಆರ್.ಕೆ.ಕೀರ್ತಿ (ಕ.ರ.ವೇ.) – 1000, ಬಿ. ಸಣ್ಣೀರಪ್ಪ (ಕ.ರ.ವೇ.) – 500, ಸಿ.ವಿ.ದೇವರಾಜ್ (ಕ.ರ.ವೇ.) – 1000, ನಂದಿನಿ ಎ.ಡಿ. – 500, ಶಿವಕುಮಾರ್ ದಂಡಿಗೆಹಳ್ಳಿ – 2000, ಕಾರ್ತಿಕ್ ಡಿ.ಪಿ. – 1500.










ನನ್ನ ಭಯಾತಂಕಗಳು, ಮಡೆಸ್ನಾನ, ನಮ್ಮ ರಾಜಕಾರಣ…

-ರವಿ ಕೃಷ್ಣಾರೆಡ್ಡಿ

ಕಳೆದೆರಡು ವರ್ಷಗಳಿಂದ ನನಗಿರುವ ಭಯಾತಂಕಗಳೇ ಬೇರೆ. ಅವು ಬಹುಶಃ ನನ್ನ ಅನೇಕ ಸ್ನೇಹಿತರಿಗಿರುವ ಅಥವ ಇದ್ದಿರಬಹುದಾದ ಭಯಾತಂಕಗಳಿಗಿಂತ ಭಿನ್ನವಾದವು. ಹೆಚ್ಚುತ್ತಿರುವ ಜಾಗತಿಕ ತಾಪಮಾನವೆ ನನ್ನ ಭಯಾತಂಕಕ್ಕೆ ಮೂಲ ಕಾರಣ. ಏಳು ವರ್ಷದ ಮಗಳಿಗೆ ಮತ್ತು ಎರಡು ಮುಟ್ಟುತ್ತಿರುವ ಮಗನಿಗೆ ತಂದೆಯಾಗಿ ನನ್ನ ಆತಂಕ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.

ಈ ಆತಂಕದ ಹಿನ್ನೆಲೆಯೆಲ್ಲಿಯೇ ನಾನು ಸಸ್ಯಾಹಾರಿಯಾಗಲು ತೀರ್ಮಾನಿಸಿದ್ದು. ಅಮೇರಿಕದಲ್ಲಿದ್ದಾಗ ಅದಕ್ಕೊಂದಿಷ್ಟು ಅರ್ಥವಿತ್ತು. ಆದರೆ ಅದಕ್ಕೆ ಇಲ್ಲಿ ಅಷ್ಟು ಘನವಾದ ಅರ್ಥವಿಲ್ಲ. ಆದರೂ ನಾನು ಸುಡುವ ಪೆಟ್ರೋಲು ಮತ್ತು ವಿದ್ಯುತ್‌ಗೆ ಮತ್ತು ಜಾಗತಿಕ ತಾಪಮಾನ ವೃದ್ಧಿಗೆ ನನ್ನ ಕೊಡುಗೆ ಇದ್ದಿರಬಹುದಾದ ಇತರ ವೈಯಕ್ತಿಕ ಕ್ರಿಯೆಗಳಿಗೆ ಪ್ಯಾಯಶ್ಚಿತ್ತವೆಂಬಂತೆ ಅದನ್ನು ನಡೆಸಿಕೊಂಡು ಬರುತ್ತಿದ್ದೇನೆ. ಇನ್ನು ಸ್ಥಳೀಯ ಆಹಾರ ಪದಾರ್ಥಗಳನ್ನೇ–ಕಾರ್ಬನ್ ಫೂಟ್‌ಪ್ರಿಂಟ್ ಆದಷ್ಟೂ ಕಮ್ಮಿ ಇರುವುದನ್ನೇ, ತಿನ್ನಬೇಕು ಎನ್ನುವ ಆಶಯ ಇನ್ನೂ ಆರಂಭಿಸಲೇ ಆಗಿಲ್ಲ.

ಈ ವರ್ಷದ ಏಪ್ರಿಲ್‌ನಲ್ಲಿ ಅಮೆರಿಕದಲ್ಲಿದ್ದಾಗ ಈ “Hot: Living Through the Next Fifty Years on Earth” ಎನ್ನುವ ಪುಸ್ತಕ ಅಮೆಜಾನ್.ಕಾಮ್‌ನಲ್ಲಿ ಕಣ್ಣಿಗೆ ಬಿದ್ದದ್ದು. ನನ್ನ ಮಗಳದೇ ವಯಸ್ಸಿನ ಮಗಳೊಬ್ಬಳ ತಂದೆಯಾಗಿರುವ ಅಮೇರಿಕನ್ ಪತ್ರಕರ್ತ ಮಾರ್ಕ್ ಹರ್ಟ್ಸ್‌ಗಾರ್ಡ್ ತನ್ನ ಮಗಳ ಮುಂದಿನ ದಿನಗಳು ಹೇಗಿರುತ್ತವೆ ಮತ್ತು ಅವಳು ಹೇಗೆ ಜೀವನ ಸಾಗಿಸಬೇಕಾದೀತು ಎನ್ನುವ ಬಗ್ಗೆ ಬರೆದಿರುವ ಪುಸ್ತಕ ಎನ್ನುವ ಬ್ಲರ್ಬ್ ಓದಿಯೇ ಅದನ್ನು ಕೊಂಡಿದ್ದೆ. ಈಗ ಅದನ್ನು ಓದಲು ಆರಂಭಿಸಿರುವೆ. ನನ್ನ ರಾಜ್ಯದ ಮತ್ತು ರಾಷ್ಟ್ರದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಓದು ನನ್ನ ಭಯಾತಂಕಗಳನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಈ  ಹಿನ್ನೆಲೆಯಲ್ಲಿ ನಾನು ಕಳೆದ ವಾರದಿಂದ ಚರ್ಚೆಯಾಗುತ್ತಿರುವ ಎಂಜಲು ಮಡೆಸ್ನಾನದ ಬಗ್ಗೆ ಟಿಪ್ಪಣಿ ಮಾಡಬಯಸುತ್ತೇನೆ. ಯಾರು ಯಾರ ಎಂಜಲೆಲೆಯ ಮೇಲೆ ಉರುಳಾಡಿದರೂ ಅದು ಅವಮಾನದ ಪ್ರಶ್ನೆಯೇ. ಬಾಹ್ಮಣೇತರರು ಉಂಡೆದ್ದ ಎಲೆಯ ಮೇಲೆ ಬ್ರಾಹ್ಮಣರು ಉರುಳಾಡಿದರೂ (ಅಂತಹ ಒಂದು ಸಾಧ್ಯತೆ ಭಾರತದಲ್ಲೆಲ್ಲೂ ಇದ್ದ ಹಾಗೆ ಇಲ್ಲ; ಅದು ಬೇರೆ ಪ್ರಶ್ನೆ.) ಅದು ಮನುಷ್ಯನ ಘನತೆಯೆ ಹಿನ್ನೆಲೆಯಲ್ಲಿ ಅಸಹ್ಯವೇ ಮತ್ತು ಅವಮಾನವೆ. ಇನ್ನು ಬ್ರಾಹ್ಮಣರು ತಿಂದು ಎಂಜಲು ಬಳಿದು ಬಿಟ್ಟ ಎಲೆಯ ಮೇಲೆ ಬ್ರಾಹ್ಮಣೇತರರು ಉರುಳಾಡುವುದರಲ್ಲಿ ಕೇವಲ ವ್ಯಕ್ತಿಗತ ಘನತೆಯ ಪ್ರಶ್ನೆ ಮಾತ್ರವಲ್ಲ, ಜಾತೀಯತೆಯ, ಅದು ಪೋಷಿಸಿಕೊಂಡು ಬಂದ ಅಸ್ಪೃಶ್ಯತೆಯ, ಅಸಮಾನತೆಯ, ಹಿಂದೂ ಸಮಾಜದ ತಾರತಮ್ಯಗಳ ಪ್ರಶ್ನೆಗಳೆಲ್ಲಾ ಅಡಗಿವೆ. ಇದನ್ನು ನಿಲ್ಲಿಸಬೇಕೆ ಬೇಡವೆ ಎನ್ನುವುದು ನನ್ನಂತಹವನಿಗೆ ಚರ್ಚಾಸ್ಪದ ಪ್ರಶ್ನೆಯೇ ಅಲ್ಲ. ಕೆಲವರು ಕಳೆದ ವರ್ಷ ತಮ್ಮ ಅಹಂಕಾರದಲ್ಲಿ ಇದನ್ನು ಕೂದಲು ಸೀಳುವ ಪ್ರಶ್ನೆ ಮಾಡಿಕೊಂಡಿದ್ದರು. ಉದ್ದಟರು ಮತ್ತು ಮೂರ್ಖರು. ಒಂದು ಅಸಹ್ಯ ಸಾಮೂಹಿಕ ಕ್ರಿಯೆಯನ್ನು ಬಹಿರಂಗವಾಗಿ ಯಾವುದೇ ಸಂಕೋಚ-ನಾಚಿಕೆಗಳಿಲ್ಲದೆ ಸಮರ್ಥಿಸಿಕೊಳ್ಳುವಷ್ಟು ನಮ್ಮ ಸಮಾಜ ಹಿನ್ನಡೆದಿದೆ ಎಂದರೆ ಏನು ಹೇಳುವುದು?

ಇಲ್ಲಿ ನಾಜೂಕಾಗಿ ಮಾತನಾಡುವವರೂ ಹಲವರಿದ್ದಾರೆ. ಪೇಜಾವರ ವಿಶ್ವೇಶ್ವರ ತೀರ್ಥರೆಂಬ ಪೂರ್ಣಾವಧಿ ಮತೀಯ ರಾಜಕೀಯ ಕಾರ್ಯಕರ್ತ ಮತ್ತು ಅಲ್ಪಾವಧಿ ಮಠಾಧೀಶರನ್ನು ಕೆಲವು ಟಿವಿ ಚಾನಲ್‌ಗಳು ಸಂದರ್ಶಿಸಿದವು. ಅವರು ಹೇಳಿದ್ದು, ’ಈ ವಿಷಯದ ಬಗ್ಗೆ ನಾನು ತಟಸ್ಥ’. ತಾನು ಅದರ ಪರವೂ ಇಲ್ಲ, ವಿರುದ್ಧವೂ ಇಲ್ಲ ಎನ್ನುವ ಇವರು ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ? Status quo ಕಾಯ್ದುಕೊಳ್ಳಬೇಕು ಎನ್ನುವುದರಲ್ಲಿಯೇ ಎಂಜಲು ಮಡೆಸ್ನಾನದ ಪರವಾದ ಬಲವಾದ ನಿಲುವು ಇದೆ. ಅವರ ಇಡೀ ಮಾತಿನ ಅರ್ಥ ಅದೇ ಇತ್ತು. ತಾನು ತಟಸ್ಥ ಎಂದು ಹೇಳುವುದು ತಾನು ಎಂಜಲು ಮಡೆಸ್ನಾನದ ಪರ ಇದ್ದೇನೆ ಎನ್ನುವುದನ್ನು ಧ್ವನಿಸುತ್ತದೆ ಎಂದು ಗೊತ್ತಾಗದಷ್ಟು ಮುಗ್ಧ ಅಥವ ಮೂರ್ಖರೇ ಇವರು? ಯಾರಾದರೂ ಈ ವಿಷಯದ ಬಗ್ಗೆ ತಾನು ತಟಸ್ಥ, ನೋ ಕಾಮೆಂಟ್ಸ್ ಎಂದರೆಂದರೆ ಅವರು ಎಂಜಲು ಸ್ನಾನದ ಪರ ಇದ್ದಾರೆ ಎಂದೇ ಅರ್ಥ.

ಇನ್ನು ರಾಜಕಾರಣಿಗಳ ವಿಷಯ. ಇಂದು ಕರ್ನಾಟಕದ ಯಾವೊಬ್ಬ ಪ್ರಮುಖ ರಾಜಕಾರಣಿಯೂ ಇದರ ಬಗ್ಗೆ ಗಂಭೀರವಾಗಿ ಮಾತನಾಡುತ್ತಿಲ್ಲ. ಇದು ಕೇವಲ ಸಾಮಾಜಿಕ ಅಥವ ಮತಾಚರಣೆಯ ಪ್ರಶ್ನೆ ಅಲ್ಲ. ಇಂತಹ ಒಂದು ವಿಷಯದ ಬಗ್ಗೆ ತೆಗೆದುಕೊಳ್ಳುವ ನಿಲುವು ನಮ್ಮ ಭವಿಷ್ಯದ ನಿಲುವುಗಳನ್ನೂ ನಿರ್ದೇಶಿಸುತ್ತದೆ. ಈ ಇಡೀ ಚರ್ಚೆಯನ್ನು ಪ್ರಗತಿಪರ ಮತ್ತು ಉದಾರವಾದಿ ಹಿನ್ನೆಲೆಯಲ್ಲಿ ನೋಡಿ ರಾಜ್ಯದ ಜನತೆಯ ಮುಂದೆ ಹೇಗೆ ಇದು ಅಸಹ್ಯ ಮತ್ತು ಒಂದು ಕೆಟ್ಟ ಪರಂಪರೆಯೊಂದರ ಪಳೆಯುಳಿಕೆ, ಯಾಕಾಗಿ ಇದನ್ನು ನಿಲ್ಲಿಸಬೇಕು ಮತ್ತು ವಿರೋಧಿಸಬೇಕು, ಜನ ಮತ್ತು ಸರ್ಕಾರ ಈಗ ಮಾಡಬೇಕಿರುವುದು ಏನು ಎಂದು ಹೇಳಬಲ್ಲ ಒಬ್ಬನೇ ಒಬ್ಬ ರಾಜಕಾರಣಿ ನಮ್ಮ ಮಧ್ಯದಲ್ಲಿಲ್ಲ.

ಇದೇ ಈ ಹೊತ್ತಿನ ದೊಡ್ಡ ದುರಂತ.

ನಾವು ಅಧಿಕಾರ ರಾಜಕಾರಣಿಗಳನ್ನು ಬೆಳೆಸುತ್ತಿದ್ದೇವೆ. ಆದರೆ ನಮ್ಮ ವರ್ತಮಾನವನ್ನು ಸಹನೀಯಗೊಳಿಸಬಲ್ಲ ಮತ್ತು ನಮ್ಮ ಮತ್ತು ನಮ್ಮ ಮುಂದಿನ ತಲೆಮಾರಿಗೆ ಭವಿಷ್ಯವನ್ನು ಕಟ್ಟಿಕೊಡಬಲ್ಲ ಮುಂದಾಳುಗಳನ್ನು ಬೆಳೆಸುತ್ತಿಲ್ಲ. ನಾವು ಬೆಳೆಸುತ್ತಿರುವುದೆಲ್ಲ ಓಟಿನ ಮೇಲೆ ಗಮನವಿಟ್ಟುಕೊಂಡಿರುವ ಸ್ವಾರ್ಥಿಗಳನ್ನು, ಗಂಭೀರ ವಿಷಯದ ಬಗ್ಗೆ ಮಾತನಾಡಲು ಧೈರ್ಯ ಸಾಲದ ಹೆದರುಪುಕ್ಕಲರನ್ನು, ಇಲ್ಲವೆ ಇವು ಯಾವೊಂದೂ ಅರ್ಥವಾಗದ ಮೂರ್ಖರನ್ನು. ಇಂದು ಕರ್ನಾಟಕದಲ್ಲಿ ಯಾವೊಬ್ಬ ಪ್ರಮುಖ ರಾಜಕಾರಣಿಯೂ ಪ್ರಗತಿಪರ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ ಎಂದರೆ ಅದಕ್ಕೆ ಎರಡು ಕಾರಣಗಳಿವೆ. ಒಂದು, ಈ ರಾಜಕಾರಣಿಗಳು ಇಂತಹುದರ ಬಗ್ಗೆ ಮಾತನಾಡಬಲ್ಲಷ್ಟು ಅರ್ಹತೆ ಪಡೆದಿಲ್ಲದಿರುವುದು, ಎರಡನೆಯದು, ಅರ್ಹತೆ ಇದ್ದರೂ ಅವರ ಮಾತನ್ನು ಸಾವಧಾನದಿಂದ ಕೇಳುವಂತಹ ಮತ್ತು ಪ್ರಶಂಸಿಸುವಂತಹ ವಾತಾವರಣವೆ ಇಲ್ಲಿ ಇಲ್ಲದಿರಬಹುದು. ಎರಡೂ ಒಳ್ಳೆಯ ಲಕ್ಷಣಗಳಲ್ಲ.

ನಮ್ಮ ಭವಿಷ್ಯದ ದಿನಗಳು ನಿಜಕ್ಕೂ ಕರಾಳವಾಗಲಿವೆ. ಕಳೆದ ಆರೇಳು ವರ್ಷದಿಂದ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಮಳೆ ಹೇಳಿಕೊಳ್ಳುವ ರೀತಿಯಲ್ಲಿ ಕೈಕೊಟ್ಟಿಲ್ಲ. ಆದರೆ ಇದೊಂದು ಚಕ್ರದ ರೀತಿ. ಎಲ್ ನೀನ್ಯೊ ಪರಿಣಾಮವಾಗಿ ಮುಂದಿನ ವರ್ಷಗಳಲ್ಲಿ ಮಳೆ ಕೈಕೊಡಲಿದೆ. ಇದನ್ನು ಹೇಳಲು ಕಾಲಜ್ಞಾನಿಯೇ ಬೇಕಿಲ್ಲ. ವಿಜ್ಞಾನ ಮತ್ತು ಕಳೆದ ಹಲವು ದಶಕಗಳ ಮಳೆಬೆಳೆಗಳ ಗಮನಿಕೆಯೇ ಸಾಕು. ಇದರ ಜೊತೆಗೆ ಊಹಿಸಲು ಸಾಧ್ಯವಾಗದಂತಹ ದಿನಗಳು ಜಾಗತಿಕ ತಾಪಮಾನ ಏರಿಕೆಯಿಂದ ನಮ್ಮದಾಗಲಿವೆ. ವಿಶೇಷವಾಗಿ ಮಳೆಯಾಶ್ರಿತ ಬಯಲುಸೀಮೆಯ ಜನರ ಸ್ಥಿತಿ ದುರ್ಭರವಾಗಲಿದೆ. ಪ್ಪ್ರತಿಯೊಂದು ಆಹಾರಪದಾರ್ಥಕ್ಕೂ ಕೈಚಾಚುವ ನಗರವಾಸಿಗಳ ಸ್ಥಿತಿಯೂ ಘೋರವಾಗಲಿದೆ. ಆ ದಿನಗಳ ಸವಾಲಿಗೆ ನಮ್ಮ ಇಂದಿನ ರಾಜಕಾರಣಿಗಳು ಸಿದ್ದರಿದ್ದಾರೆಯೇ? ಅಂದಿಗೆ ನಾಯಕತ್ವ ಕೊಡಬಲ್ಲ, ಸತ್ಯ ನುಡಿಯಬಲ್ಲ, ವಿಜ್ಞಾನ ಗಮನಿಸಬಲ್ಲ, ಸ್ವಾರ್ಥ ತೊರೆಯಬಲ್ಲವರಂತಹವರನ್ನು ನಾವು ನಮ್ಮ ಪ್ರತಿನಿಧಿಗಳನ್ನಾಗಿ ಆರಿಸಿಕೊಂಡಿದ್ದೇವೆಯೇ? ಅಥವ, ಅಂದಿನ ದಿನಗಳು ಬಯಸುವ ನಾಯಕತ್ವವನ್ನು ಸಾಧ್ಯವಾಗಿಸುವಂತಹ ಪೂರಕ ವಾತಾವರಣವನ್ನು ನಾವು ನಿರ್ಮಿಸುತ್ತಿದ್ದೇವೆಯೇ?

ಹೌದು ಎಂದು ಹೇಳಲು ನನಗೆ ಯಾವ ಸೂಚನೆ ಸಂಕೇತಗಳೂ ಕಾಣಿಸುತ್ತಿಲ್ಲ. ನಮ್ಮ ಸಮಾಜ ಆತ್ಮಹತ್ಯಾತ್ಮಕ ರೀತಿಯಲ್ಲಿಯೇ ವರ್ತಿಸುತ್ತಿದೆ.

ಈ ಹಿನ್ನೆಲೆಯಲ್ಲಿಯೇ, ನನ್ನೆಲ್ಲ ಸಾಮಾಜಿಕ ಜವಾಬ್ದಾರಿಗಳನ್ನು ಮರೆತು ಕೇವಲ ಒಬ್ಬ ತಂದೆಯಾಗಿ ಯೋಚಿಸಿದಾಗಲೆಲ್ಲ ನನ್ನ ಭಯಾತಂಕಗಳು ಹೆಚ್ಚುತ್ತಲೇ ಹೋಗುತ್ತವೆ. ಎಂಜಲು ಮಡೆಸ್ನಾನದಂತಹ ಸರಳ ವಿಷಯದ ಬಗ್ಗೆ ನಿಲುವು ತೆಗೆದುಕೊಳ್ಳಲಾಗದ ಸಮಾಜ ಮತ್ತು ಸರ್ಕಾರಗಳು ಇದಕ್ಕಿಂತ ಗಂಭೀರವಾದ ವಿಷಯಗಳ ಬಗ್ಗೆ ಏನೆಲ್ಲಾ ಮಾಡಬಹುದು? ಅವರು ಏನು ಮಾಡಿದರೂ ಅದು ಸರಿಯಾದ ಕ್ರಮ ಆಗಿರುವುದಿಲ್ಲ. ಯಾಕೆಂದರೆ ಹಾಗೆ ನಿರ್ಧಾರ ತೆಗೆದುಕೊಳ್ಳುವವರ್‍ಯಾರಿಗೂ ಅಂತಹ ವಿಷಯಗಳ ಬಗ್ಗೆ ಮೂಲಭೂತ ಜ್ಞಾನ ಇರುವುದೂ ಸಂದೇಹವೆ.

ಆದರೂ, ಈ ಎಲ್ಲಾ ಭಯಾತಂಕಗಳ ನಡುವೆಯೂ ನನಗಿರುವ ಏಕೈಕ ಧೈರ್ಯ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ. ಅದನ್ನು ನಾವು ಸ್ವಚ್ಚವಾಗಿ ಉಳಿಸಿಕೊಂಡರೆ ಭವಿಷ್ಯ ಎಂತಹ ಸವಾಲು ಒಡ್ಡಿದರೂ ಕೊನೆಗೆ ಒಂದು ನಾಗರೀಕತೆಯಾಗಿ ನಾವು ಉಳಿಯುತ್ತೇವೆ, ಗೆಲ್ಲುತ್ತೇವೆ.

ನಮ್ಮ ಮುಂದಿನ ದಿನಮಾನಗಳನ್ನು define ಮಾಡುವ ವಿದ್ಯಮಾನ ಒಂದಿದ್ದರೆ ಅದು ಜಾಗತಿಕ ತಾಪಮಾನ ಏರಿಕೆ ಮತ್ತು ಬದಲಾಗುವ ಹವಾಮಾನ. ಆ ಕಾರಣದಿಂದಾಗಿಯೇ ನಮ್ಮ “ವರ್ತಮಾನ.ಕಾಮ್”ನಲ್ಲಿ ಈ ವಿದ್ಯಮಾನದ ಕುರಿತಾಗಿ ನಿಯಮಿತವಾಗಿ ಚರ್ಚೆಯಾಗುವಂತೆ ನೋಡಿಕೊಳ್ಳುವ ಜರೂರು ಇದೆ ಎನ್ನಿಸುತ್ತಲೆ ಇದೆ. ಯಾರಾದರು ಓದುಗರು ಇದರ ಬಗ್ಗೆ ಗಮನ ಹರಿಸಿದ್ದರೆ ದಯವಿಟ್ಟು ಬರೆಯಿರಿ. ಇಲ್ಲವೆ, ಕರ್ನಾಟಕದಲ್ಲಿ ಅಂತಹವರ್ಯಾರಾದರೂ ಇದ್ದರೆ ತಿಳಿಸಿ, ಅವರ ಕೈಯ್ಯಲ್ಲಿ ಬರೆಸಲು ಪ್ರಯತ್ನಿಸೋಣ. ನಾನು ಆಗಲೇ ಹೇಳಿದಂತೆ ಬೇರೆಲ್ಲಾ ವಿಷಯಗಳಿಗಿಂತ ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುವ, ಬದಲಾಯಿಸುವ ಸಂಗತಿ ಇದೇ ಎನ್ನುವುದು ನನ್ನ ಅಭಿಪ್ರಾಯ. ಅದಕ್ಕೆ ನಾವು ನಮ್ಮದೇ ನೆಲೆಯಲ್ಲಿ ರಾಜಕೀಯ-ಸಾಮಾಜಿಕ-ಆರ್ಥಿಕ ನೆಲೆಗಳಲ್ಲಿ ಸಿದ್ಧವಾಗುವುದು ಸೂಕ್ತ. ನಮ್ಮ ಭವಿಷ್ಯದ ಸವಾಲುಗಳನ್ನು ಎದುರಿಸಲು ಸೂಕ್ತವಾದಂತಹ ಪೂರಕವಾದ ರಾಜಕಿಯ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ನಾವು ವಿಫಲರಾದರೆ, ಒಂದು ನಾಗರೀಕತೆಯಾಗಿಯೂ ನಾವು ವಿಫಲರಾದಂತೆಯೆ.