Category Archives: ಸಾಮಾಜಿಕ

ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಎಲ್ಲರಿಗೂ ಸಿಗಬೇಕು ಸೂರು, ಮರೆತಿರಾ ಜಸ್ಟಿಸ್ ಪಾಟೀಲರೆ?

– ಭೂಮಿ ಬಾನು

ಲೋಕಾಯುಕ್ತ ಶಿವರಾಜ್ ವಿ.ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಂದರ ನಂತರ ಒಂದು ಎಂಬಂತೆ ಮೂರು ನಿವೇಶನ/ಮನೆಗಳನ್ನು ಬೆಂಗಳೂರಿನಲ್ಲಿ ಅವರು ಗೃಹನಿರ್ಮಾಣ ಸಹಕಾರ ಸಂಘಗಳ ಬೈಲಾ ಉಲ್ಲಂಘಿಸಿ ಪಡೆದಿದ್ದಾರೆ ಎನ್ನುವ ಆರೋಪ ಅವರನ್ನು ಈ ನಿರ್ಧಾರಕ್ಕೆ ಬರುವಂತೆ ಮಾಡಿದೆ.

ಬೆಂಗಳೂರು ಮಿರರ್ ಪತ್ರಿಕೆಗೆ ಈ ಸುದ್ದಿಯನ್ನು ವಿಸ್ತೃತವಾಗಿ ಮೊದಲು ಪ್ರಕಟಿಸಿದ ಕೀರ್ತಿ ಸಲ್ಲಬೇಕು. ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ಆರಂಭವಾಯಿತು. ಹಾಗೆ ಚರ್ಚೆ ಆರಂಭವಾದ ನಂತರವಷ್ಟೆ ಲೋಕಾಯುಕ್ತರಿಗೆ ಒಂದು ನಿವೇಶನವನ್ನು ಹಿಂತಿರುಗಿಸಬೇಕು ಎಂಬ ಆಲೋಚನೆ ಬಂತು. ಮುಂದುವರಿದು, ರಾಜೀನಾಮೆ ಕೊಟ್ಟರು. ತಮ್ಮ ನಿರ್ಧಾರವನ್ನು ಪ್ರಕಟಿಸುವಾಗ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಹೇಳಬೇಕು ಎಂದುಕೊಂಡದಷ್ಟನ್ನೆ ಹೇಳಿ ಎದ್ದು ಹೋದರು. ತಮ್ಮ ವಿರುದ್ಧದ ದುರುದ್ದೇಶಪೂರಕ ಪ್ರಚಾರದಿಂದ ತುಂಬಾ ನೋವಾಗಿದೆ. ಇಂತಹ ಅಹಿತವಾದ ಸಂದರ್ಭದಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಭಾವಿಸಿದ್ದೇನೆ ಎಂದರು. ಅವರು ಈ ಎಲ್ಲಾ ಘಟನಾವಳಿಗಳಿಗೆ ಕಾರಣರಾದವರನನ್ನು ಕೇಳಬಯಸಿದ್ದು, “ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಯಸುತ್ತಾರೋ ಅಥವಾ ಭ್ರಷ್ಟಾಚಾರದ ವಿರುದ್ಧ ಹೋರಾಡುವವರ ವ್ಯಕ್ತಿತ್ವಕ್ಕೆ ಕಳಂಕ ತರಲು ಯತ್ತಿಸುತ್ತಾರೋ?”

ತಾನು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿಂತವನು, ಆದರೆ ತನಗೆ ಬೆಂಬಲ ಸಿಗಲಿಲ್ಲ. ಬದಲಿಗೆ ತನ್ನ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ನಡೆಯಿತು ಎನ್ನುವ ಭಾವನೆ ಅವರ ಮಾತಿನಲ್ಲಿದೆ. ಸನ್ಯಾನ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಲ್ಲಿ ಹೇಳಿದ ಮಾತು ಇಲ್ಲಿ ನೆನಪಾಗುತ್ತಿದೆ. ‘ನಾನು ನನ್ನ ಪ್ರಮಾಣವಚನಕ್ಕೆ ಬದ್ಧನಾಗಿರುತ್ತೇನೆ’ ಎಂದು ಅವರು ಒತ್ತಿ ಹೇಳಿದ್ದರು. ಅವರು ಹಾಗೆ ಹೇಳುವ ಅಗತ್ಯ ಏನೂ ಇರಲಿಲ್ಲ. ಏಕೆಂದರೆ, ಅವರಿಂದ ಆ ಹುದ್ದೆ ನಿರೀಕ್ಷಿಸುವುದೇ ಅದನ್ನು, ಮತ್ತೇನನ್ನೂ ಅಲ್ಲ.

ಒಂದು ಮನೆ ಇದ್ದಾಗ್ಯೂ ಜುಡಿಶಿಯಲ್ ಲೇಔಟ್ ನಲ್ಲಿ ನಿವೇಶನ ಪಡೆದದ್ದು ಈಗ ಚರ್ಚೆಯ ವಿಷಯಗಳಲ್ಲಿ ಒಂದು. ಆ ಸಂದರ್ಭದಲ್ಲಿ ತಾನೂ ಯಾವುದೇ ಅಫಿಡವಿಟ್ಟು ಸಲ್ಲಿಸಿರಲಿಲ್ಲ ಎಂದು ಹೇಳಿದ್ದಾರೆ. ಭಾರತದ ಸಂವಿಧಾನ ಒಪ್ಪಿ ಈ ನೆಲದಲ್ಲಿ ಬದುಕುತ್ತಿರುವ ಎಲ್ಲರಿಗೂ ಕಾನೂನು ಒಂದೆ. ಕಾನೂನು ಗೊತ್ತಿದ್ದು ತಪ್ಪು ಮಾಡಿರಲಿ, ಅಥವಾ ಗೊತ್ತಿಲ್ಲದೆ ಮಾಡಿರಲಿ ಪರಿಣಾಮ ಒಂದೆ. ಪ್ರಸ್ತುತ ಸಂದರ್ಭ ಚರ್ಚೆಯಲ್ಲಿರುವ ವ್ಯಕ್ತಿ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿದ್ದವರು. ಅವರು ಕಾನೂನು ಗೊತ್ತಿರಲಿಲ್ಲ ಎಂದರೆ ನಂಬಬೇಕೆ? ಸತ್ಯವನ್ನು ಮರೆಮಾಚಿ ನಿವೇಶನ ಪಡೆದದ್ದು ಭಾರತೀಯ ದಂಡ ಸಂಹಿತೆ ಸೆ.200 ರ ಪ್ರಕಾರ ಅಪರಾಧ. ಸನ್ಮಾನ್ಯರ ಪ್ರಕರಣದಲ್ಲಿ ಈ ಅಪರಾಧ ಎರಡು ಬಾರಿ ಆಗಿದೆ. ಒಮ್ಮೆ ಜುಡಿಶಿಯಲ್ ಲೇಔಟ್ ಪ್ರಕರಣದಲ್ಲಿ ಮತ್ತೊಮ್ಮೆ ವಯ್ಯಾಳಿಕಾವಲ್ ನಿವೇಶನ ಕೊಳ್ಳುವಾಗ.

ಈ ನೆಲದ ಎಲ್ಲಾ ಗೃಹನಿರ್ಮಾಣ ಸಹಕಾರ ಸಂಘಗಳಿಗೆ ಒಂದು ಸಾಮಾನ್ಯ ಬೈಲಾ ಇದೆ. ಅದರ ಪ್ರಕಾರ ಈಗಾಗಲೇ ಆ ಸಂಘದ ಕಾರ್ಯವ್ಯಾಪ್ತಿಯಲ್ಲಿ ನಿವೇಶನ/ಮನೆ ಇರುವವರು ಮತ್ತೊಂದು ನಿವೇಶನಕ್ಕೆ ಅರ್ಹರಲ್ಲ. ಎಲ್ಲರಿಗೂ ಸೂರು ದೊರಕುವಂತಾಗಬೇಕು ಎಂಬುದು ಈ ನಿಯಮದ ಮೂಲ ಉದ್ದೇಶ. ಆದರೆ ತನ್ನಿಂದ ಏನೂ ತಪ್ಪಾಗಿಲ್ಲ ಎಂದು ವಾದಿಸುವುದರಲ್ಲಿ ಅರ್ಥವಿಲ್ಲ. ಮೂಲ ಉದ್ದೇಶಕ್ಕೆ ಧಕ್ಕೆಯಾಗಿರುವುದಂತೂ ಸತ್ಯ. ಜುಡಿಶಿಯಲ್ ಲೇಔಟ್ ನಲ್ಲಿ ಬರೋಬ್ಬರಿ 9,400 ಚದರ ಅಡಿಗಳ ನಿವೇಶನ ಇವರಿಗಿದೆ. ಅಷ್ಟು ವಿಸ್ತೀರ್ಣದ ನಿವೇಶನದಲ್ಲಿ 30X40 ರ ಎಂಟು ನಿವೇಶನ ಮಾಡಿ ಎಂಟು ಕುಟುಂಬಕ್ಕೆ ನೀಡಬಹುದಿತ್ತು! ಜೊತೆಗೆ ಆ ಸಂಘದವರು ಸರ್ಕಾರದ ಅನುಮತಿ ಇಲ್ಲದೆ ರೈತರಿಂದ 36 ಎಕರೆ ಜಮೀನು ಖರೀದಿಸಿದ್ದರು. ಇಂತಹ ಅಕ್ರಮಗಳಿಂದ ರೂಪುಗೊಂಡ ಲೇಔಟ್ ನ ಫಲಾನುಭವಿಗಳ ಪಟ್ಟಿಯಲ್ಲಿ ಅನೇಕ ನ್ಯಾಯಾಧೀಶರು ಇರುವುದೇ ದುರಂತ.

ಇಷ್ಟಾದರೂ ನ್ಯಾಯಮೂರ್ತಿ ಪಾಟೀಲರು ‘ಭ್ರಷ್ಟಾಚಾರ ವಿರುದ್ಧ ಹೋರಾಡಲು ಬಂದವನನ್ನು ಹೀಗೆ ಕಳಂಕಿತನನ್ನಾಗಿ ಮಾಡಿದಿರಲ್ಲ’ ಎಂದು ಗೋಗರೆಯುವುದು ವಿಪರ್ಯಾಸ. ಅವರಲ್ಲಿ ತಮ್ಮಿಂದ ತಪ್ಪಾಗಿದೆ ಎಂಬ ಭಾವನೆಯೇ ಇಲ್ಲ. ಭ್ರಷ್ಟಾಚಾರದ ವಿರುದ್ಧ ಪ್ರಬಲ ಕಾನೂನಿಗಾಗಿ ಹೋರಾಡಿದ ಅಣ್ಣಾ ಹಜಾರೆ ಪಾಟೀಲರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ ಎಂಬರ್ಥದ ಹೇಳಿಕೆ ನೀಡಿದ್ದು ಪಾಟೀಲರಿಗೆ ತೀವ್ರ ಮುಜುಗರಕ್ಕೆ ಕಾರಣವಾಗಿರಬಹದು. ನಂತರ ರಾಜೀನಾಮೆಯ ಈ ನಿರ್ಧಾರಕ್ಕೆ ಬಂದಿರಬಹುದು. ಒಂದು ಪಕ್ಷ ರಾಜ್ಯಪಾಲರು ರಾಜೀನಾಮೆ ಒಪ್ಪದೆ ಹಿಂಪಡೆಯಿರಿ ಎಂದು ಸಲಹೆ ನೀಡಿದರೆ ಪರಿಸ್ಥಿತಿ ಬದಲಾಗಬಹುದು. ಆದರೆ ಅಂತಹ ಲಕ್ಷಣಗಳು ಕಾಣುತ್ತಿಲ್ಲ. ಸದ್ಯ ಖಾಲಿಯಾದ ಸ್ಥಾನಕ್ಕಾಗಿ ಸೂಕ್ತ ವ್ಯಕ್ತಿಯನ್ನು ಹುಡುಕಿ ನೇಮಕ ಮಾಡುವ ಹೊಣೆ ರಾಜ್ಯ ಸರ್ಕಾರದ್ದು. ನಿಜಕ್ಕೂ ಇದು ಕಷ್ಟದ ಕೆಲಸ. ಜುಡಿಶಿಯಲ್ ಲೇಔಟ್ ನ ಫಲಾನುಭವಿಗಳಾದ ಒಟ್ಟು ನ್ಯಾಯಾಧೀಶರ ಸಂಖ್ಯೆಯೇ 84! ಕಳಂಕರಹಿತ, ಆರೋಪ ಹಿನ್ನೆಲೆ ಇಲ್ಲದ ನ್ಯಾಯಾಧೀಶರನ್ನು ಹುಡುಕುವುದು ಎಷ್ಟು ಕಷ್ಟದ ಕೆಲಸ ನೋಡಿ!

Deccan Herald - Mining Payments

ವಿವೇಚನಾ ಖೋಟಾದ ಲಾಭವೇಕೆ?

– ಭೂಮಿ ಬಾನು

ಬರವಣಿಗೆ ಬಲ್ಲವನಿಗೆ ಅಹಂ ನೆತ್ತಿಗೇರುವುದು ಸಹಜ. ಪತ್ರಕರ್ತರ ಬಳಗದಲ್ಲಂತೂ ಅಹಂ ಸರ್ವೇ ಸಾಮಾನ್ಯ. ಇತ್ತೀಚೆಗಂತೂ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಇದೆ ಎನ್ನುವ ಕಾರಣಕ್ಕೆ ತೀರಾ ಅಸಹಜ ಎನ್ನವಷ್ಟು ಅಹಂ ಅನೇಕ ಟಿವಿ ಪತ್ರಕರ್ತರ ನೆತ್ತಿಯೇರಿ ಕೂತಿದೆ. ಪರಿಣಾಮವಾಗಿ, ಸುತ್ತಲ ಸಮಾಜದಿಂದ ಅಂತಹವರು ನಿರೀಕ್ಷಿಸುವುದೂ ಹೆಚ್ಚಾಗಿದೆ. ಮಾಧ್ಯಮ ಮಂದಿ ಪದೇ ಪದೇ ಅಲ್ಲಲ್ಲಿ ಟೀಕೆಗೆ, ಮೂದಲಿಕೆಗೆ ಒಳಗಾಗುವುದು ಇದೇ ಕಾರಣಕ್ಕೆ. ತಾವು ಪತ್ರಕರ್ತರು, ಮಾಧ್ಯಮದವರು ಎಂಬ ಕಾರಣಕ್ಕೆ ವಿಶೇಷ ಸವಲತ್ತು ಪಡೆಯುವುದು ಜನ್ಮ ಸಿದ್ಧ ಹಕ್ಕು ಎಂದು ಈ ಸಮುದಾಯ ಭಾವಿಸಿದಂತಿದೆ.

ಇತ್ತೀಚೆಗೆ ಅಲ್ಲಲ್ಲಿ ಕೇಳಿ ಬರುತ್ತಿರುವ ‘ಪತ್ರಕರ್ತರ ಸೈಟು’ ಪುರಾಣ ನನ್ನ ಈ ಅಭಿಪ್ರಾಯಕ್ಕೆ ಮೂಲ ಕಾರಣ. ಬೆಂಗಳೂರಿನ ಕೆಲ ಹಿರಿಯ ಪತ್ರಕರ್ತರು ಅನಾದಿ ಕಾಲದಿಂದಲೂ ಮುಖ್ಯಮಂತ್ರಿಯ ವಿವೇಚನಾ ಖೋಟಾದ ಫಲಾನುಭವಿಗಳಾಗಿ ಬಿಡಿಎ ಸೈಟನ್ನು ಪಡೆದುಕೊಂಡಿದ್ದಾರೆ. ಅದಕ್ಕೆ ಅವರು ಅನುಸರಿಸಿದ ವಿಧಾನ ನಾನಾ ರೀತಿಯದ್ದು. ಅವರಲ್ಲೊಬ್ಬರು ಹೆಂಡತಿಗೆ ಸುಳ್ಳೇ ವಿಚ್ಛೇದನ ಕೊಡುವ ಮಟ್ಟಿಗೆ ಹೋದರು ಎಂದರೆ ಅವರ ಸೈಟು ದಾಹ ಎಷ್ಟಿತ್ತು ಎನ್ನುವುದು ಗೊತ್ತಾಗುತ್ತದೆ.

ಬೆಂಗಳೂರಿನಲ್ಲಿ ಹುಟ್ಟಿಕೊಂಡ ಜಾಡ್ಯ ರಾಜ್ಯದ ಇತರೆ ಜಿಲ್ಲೆಗಳಿಗೂ ಹಬ್ಬುತ್ತಿದೆ. ಅಲ್ಲಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ಥಳೀಯ ಪತ್ರಕರ್ತ ಸಂಘದವರು ಅಥವಾ ಅವರಲ್ಲೇ ಇರುವ ಪ್ರಭಾವಿ ಪತ್ರಕರ್ತರು ಮಂತ್ರಿಗಳ ಮೇಲೆ ಸೈಟುಗಳಿಗಾಗಿ ಒತ್ತಾಯ ಮಾಡುತ್ತಿರುವುದು ಗುಟ್ಟಿನ ಸಂಗತಿ ಅಲ್ಲ.

ಶಿವಮೊಗ್ಗದಲ್ಲೂ ಇಂತಹದೇ ಪ್ರಕರಣ ಚರ್ಚೆಯಾಗುತ್ತಿದೆ. ಅಲ್ಲಿನ ಪತ್ರಕರ್ತರು ಬಹುಸಂಖ್ಯೆಯಲ್ಲಿ ಒಟ್ಟುಗೂಡಿ ಸೈಟು ಬೇಕೆಂದು ಅರ್ಜಿ ಹಾಕಿದ್ದಾರೆ. ಅರ್ಜಿ ಹಾಕಿದವರ ಪಟ್ಟಿಯಲ್ಲಿ ಪತ್ರಕರ್ತರಲ್ಲದವರು ಇದ್ದಾರೆಂದು ಕೆಲವರು ಚಕಾರ ಎತ್ತಿದ್ದಾರೆ. ಜೊತೆಗೆ ಒಂದು ಬಾರಿ ಸೈಟು ಪಡೆದವರು ಮತ್ತೆ ಅರ್ಜಿ ಹಾಕಿದ್ದಾರೆ ಎಂಬ ಟೀಕೆಯೂ ಇದೆ. ಆದರೆ ಕೆಲವು ವೇದಿಕೆಗಳ ಹೊರತಾಗಿ ಮತ್ತೆಲ್ಲಿಯೂ – ಇಂತಹದೊಂದು ಸೈಟು ಹಂಚಿಕೆ ಪ್ರಕ್ರಿಯೆಯೇ ತಪ್ಪು ಎನ್ನುವ ಅಭಿಪ್ರಾಯ ಕೇಳಿ ಬರುತ್ತಿಲ್ಲ. ಇಂತಹ ವಾಮ ಮಾರ್ಗಗಳಿಂದ ಸೈಟು ಪಡೆಯದವರ ದೊಡ್ಡ ಗುಂಪೇ ಇದೆ. ಮತ್ತು ಆ ಗುಂಪು ಸದಾ ತಮಗೆ ಸಿಗಬೇಕಿದ್ದ ಒಂದು ಅವಕಾಶ ಅಥವಾ ಲಾಭದಿಂದ ವಂಚಿತರಾಗಿದ್ದೇವೆ ಎಂಬ ಭಾವನೆಯಿಂದ ಸದಾ ಬಳಲುತ್ತಿರುತ್ತದೆ. ಜೊತೆಗೆ ಮತ್ತಿತರರಿಂದ ಅವರಿಗಾದ ‘ವಂಚನೆ’ ಕಾರಣ ಸಿಂಪತಿಯನ್ನು ಬಯಸುತ್ತದೆ. ಆದರೆ ತಾವು ಅಂತಹ ಸೈಟಿಗಾಗಿ ಆಸೆ ಪಡುವುದೇ ತಪ್ಪು, ಅಪ್ರಾಮಾಣಿಕತೆ ಎಂದೇಕೆ ಅನಿಸುವುದಿಲ್ಲ?.

ಮುಖ್ಯವಾಹಿನಿಯ ಯಾವ ಪತ್ರಿಕೆಯೂ ಹೀಗೊಂದು ಸಂಪಾದಕೀಯ ಬರೆದಂತಿಲ್ಲ (ಬರೆದಿದ್ದರೆ ಸಂತೋಷ). ಮುಖ್ಯಮಂತ್ರಿಗಿರುವ ವಿವೇಚನಾ ಅಧಿಕಾರದ ಬಗ್ಗೆ ಅಲ್ಲಲ್ಲಿ ಚರ್ಚೆಯಾಗಿದೆ ಯೇ ಹೊರತು, ಪತ್ರಕರ್ತರು ವಿವೇಚನಾ ಕೋಟಾದ ಲಾಭ ಪಡೆಯುವುದು ಚರ್ಚೆಗೆ ಬಂದಿಲ್ಲ.

ಯಾಕೆ ಹೀಗೆ?

ಮಾಧ್ಯಮ ಕ್ಷೇತ್ರಕ್ಕೆ ಸುದೀರ್ಘ ಇತಿಹಾಸವಿದೆ. ಧಾರ್ಮಿಕ ಕಾರಣಗಳಿಗಾಗಿ ಹುಟ್ಟಿಕೊಂಡ ಪತ್ರಿಕೋದ್ಯಮ ಸಹಜವಾಗಿ ಸಾಮಾಜಿಕ ಚಳವಳಿಗಳಲ್ಲಿ ಮುಖ್ಯ ಪಾತ್ರ ವಹಿಸಿತು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಚಳವಳಿಯ ಭಾಗವಾಗಿಯೇ ಪತ್ರಿಕೆಗಳು ಕೆಲಸ ಮಾಡಿದವು. ಆಗ ಲಾಭದ ಉದ್ದೇಶ ಕಡಿಮೆ ಇತ್ತು. ಸ್ವಾತಂತ್ರ್ಯ ನಂತರ ಬಹು ವಿಸ್ತಾರವಾದ ಕ್ಯಾನ್ವಾಸ್ ಪತ್ರಕರ್ತರ ಎದುರು ತೆರೆದುಕೊಂಡಿತು. ಅದರ ಪರಿಣಾಮ ತನಿಖೆ, ವಿಶ್ಲೇಷಣೆ, ಅಭಿವೃದ್ಧಿ, ಜನಾಭಿಪ್ರಾಯ – ಎಂಬ ವಿವಿಧ ಆಯಾಮಗಳ ಅಡಿಯಲ್ಲಿ ಸುದ್ದಿಯ ಹರವು ವಿಸ್ತಾರಗೊಂಡಿತು. ಅದರಂತೆಯೇ ಮಾಧ್ಯಮ ಯಾವುದೇ ಚಳವಳಿಯ ಭಾಗವಾದಂತೆ ಆಗಾಗ ಕಂಡರೂ ಅದರ ವ್ಯಾಪ್ತಿ ಚಳವಳಿಯ ಘಟನಾವಳಿಗಳನ್ನು ವರದಿ ಮಾಡುವಷ್ಟು ಮಟ್ಟಕ್ಕೆ ಸೀಮಿತಗೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮ strictly ಒಂದು ಉದ್ಯಮ. ಪತ್ರಕರ್ತರದು ಇತರೆ ಎಲ್ಲಾ ಕ್ಷೇತ್ರಗಳ ನೌಕರರಂತೆ ಒಂದು ವೃತ್ತಿ. ಅಲ್ಲಲ್ಲಿ ಕೆಲ ಪತ್ರಕರ್ತರು ಈ ಸೀಮಿತ ಅರ್ಥ ಗಳಾಚೆ ನಿಂತು ಕೆಲಸ ಮಾಡುತ್ತಿದ್ದಾರೆ ಎಂದರೆ ಅವರ ಕರ್ತವ್ಯ – ರೋಗಿಯ ಬಗ್ಗೆ ವಿಶೇಷ ಕಾಳಜಿಯಿಂದ ನಿಗದಿತ ಸಮಯದಾಚೆಗೂ ಕೆಲಸ ಮಾಡುವ ವೈದ್ಯ, ವಿದ್ಯಾರ್ಥಿಗಳ ಒಳಿತಿಗಾಗಿ ವಿಶೇಷ ಆಸಕ್ತಿವಹಿಸಿ ಪಾಠ ಮಾಡುವ ಶಿಕ್ಷಕ ಅಥವಾ ಇನ್ನಾವುದೇ ವೃತ್ತಿಯಲ್ಲಿರುವ ಪ್ರಾಮಾಣಿಕ ವ್ಯಕ್ತಿಯ ಕರ್ತವ್ಯಕ್ಕೆ ಸಮ.

ಇತರೆ ಎಲ್ಲಾ ಕ್ಷೇತ್ರಗಳಲ್ಲಿರುವಂತೆ ಇಲ್ಲಿಯೂ ಭ್ರಷ್ಟರಿದ್ದಾರೆ. ಬಹುಕೋಟಿ ಮೊತ್ತದ ಹಗರಣಗಳಲ್ಲಿ ಭಾಗಿಯಾದವರಿದ್ದಾರೆ. ಅವರ ಹೆಸರು ಅವರ ‘ವ್ಯವಹಾರಗಳ’ ಕಾರಣ ಪ್ರಮುಖ ತನಿಖಾ ವರದಿಗಳಲ್ಲಿ ಪ್ರಕಟಗೊಂಡರೂ ಒಂದಿಷ್ಟೂ ನಾಚಿಕೆ, ಪಾಪಪ್ರಜ್ಞೆ ಇಲ್ಲದೆ ಹಿತಬೋಧನೆ ಮುಂದುವರಿಸಿದ್ದಾರೆ. ಹಾಗಾದರೆ ಪತ್ರಕರ್ತರು ವಿಶೇಷ ಪ್ರತಿಭೆಗಳು, ಆಕಾಶದಿಂದ ಇಳಿದು ಬಂದವರಂತೆ ಪರಿಭಾವಿಸುವುದು ಎಷ್ಟು ಸರಿ? ಇವರಿಗೆ ವಿವೇಚನಾ ಕೋಟಾದ ಲಾಭ ಏಕೆ?

ಜೀವನದಿಗಳ ಸಾವಿನ ಕಥನ – 3

ಡಾ.ಎನ್. ಜಗದೀಶ್ ಕೊಪ್ಪ

ಪೃಥ್ವಿಯ ಮೇಲಿನ ಭೂವಿನ್ಯಾಸದಲ್ಲಿ ನದಿಗಳ ಪಾತ್ರ ಅನನ್ಯವಾದುದು. ಪರ್ವತಗಳ ಗಿರಿಶ್ರೇಣಿಯಲ್ಲಿ ಹುಟ್ಟಿ ಹರಿಯುವ ನದಿಗಳು, ಸಮುದ್ರ ಸೇರುವ ಮುನ್ನ, ತಾವು ಕ್ರಮಿಸುವ ಹಾದಿಯುದ್ದಕ್ಕೂ ತಮ್ಮ ಇಕ್ಕೆಲಗಳ ಭೂಮಿಯನ್ನು ಫಲವತ್ತಾಗಿಸುತ್ತಾ, ಸುತ್ತ ಮುತ್ತಲಿನ ಪ್ರದೇಶಗಳ ಅಂತರ್ಜಲವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.

ನದಿಗಳು, ಮಂಜಿನಿಂದ ಆವೃತ್ತವಾಗಿರುವ ಹಿಮಾಲಯದಂತಹ ಪರ್ವತಶ್ರೇಣಿಗಳಲ್ಲಿ, ಬೇಸಿಗೆ ಕಾಲದಲ್ಲಿ ಹೆಚ್ಚಿನ ಒಳಹರಿವಿನಿಂದ ಪ್ರವಾಹದ ರೀತಿಯಲ್ಲಿ ಹರಿದರೆ, ಇತರೆ ಸಾಮಾನ್ಯ ದಿನಗಳಲ್ಲಿ ಸೂರ್ಯನ ಶಾಖಕ್ಕೆ ಕರಗುವ ಮಂಜುಗೆಡ್ಡೆಯಿಂದಾಗಿ ಸಹಜವಾಗಿ ಹರಿಯುತ್ತವೆ. ನದಿಪಾತ್ರದಲ್ಲಿ ಬೀಳುವ ಮಳೆ, ಹಳ್ಳ-ಕೊಳ್ಳಗಳಲ್ಲಿ ಜಿನುಗುವ ನೀರು ಇವೆಲ್ಲವನ್ನೂ ತನ್ನೊಳಗೆ ಲೀನವಾಗಿಸಿಕೊಳ್ಳುವ ಪ್ರಕ್ರಿಯೆ ನದಿಗೆ ಸಹಜವಾದುದು.

ಈ ನದಿಗಳಲ್ಲಿ ಹರಿಯುವ ನೀರು ಬರೀ ನೀರಷ್ಟೇ ಅಲ್ಲ, ಪರ್ವತ, ಗುಡ್ಡಗಾಡುಗಳ ಇಳಿಜಾರಿನಲ್ಲಿ ಹರಿಯುವ ನೀರು ಅನೇಕ ಗಿಡ-ಮೂಲಿಕೆಗಳನ್ನು ತೋಯಿಸಿ ಹರಿಯುವುದರಿಂದ ಈ ನೀರಿನಲ್ಲಿ ಅನೇಕ ಔಷದೀಯ ಅಂಶಗಳು, ಖನಿಜಾಂಶಗಳು ಮಿಳಿತವಾಗಿರುತ್ತವೆ. ಜೊತೆಗೆ ಈ ನೀರು ಸಿಹಿ ನೀರಾಗಿರುತ್ತದೆ.

ಇಂತಹ ಜೀವ ನದಿಗಳಿಗೆ ಅಣೆಕಟ್ಟು ನಿರ್ಮಿಸುವುದರ ಮೂಲಕ ಅವುಗಳ ಸಹಜ ಹರಿವಿಗೆ ಅಡೆ-ತಡೆ ನಿರ್ಮಿಸಿ ಮಣಿಸುವ ಪ್ರಯತ್ನಕ್ಕೆ 8 ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ.

ಮೆಸಪೊಟೋಮಿಯ ಈಶಾನ್ಯ ಭಾಗದ ಜಾರ್ಗೊಸ್ ಪರ್ವತಶ್ರೇಣಿಗಳ ತಪ್ಪಲಲ್ಲಿ ಹರಿಯುವ ನದಿಗಳಿಗೆ ಅಣೆಕಟ್ಟು ನಿರ್ಮಿಸಿ, ಕಾಲುವೆ ಮುಖಾಂತರ ನೀರು ಹರಿಸಿರುವುದು ಮೆಸಪಟೋಮಿಯಾ ನಾಗರೀಕತೆಯ ಪ್ರಾಚೀನ ಅವಶೇಷಗಳಿಂದ ದೃಢಪಟ್ಟಿದೆ.

ಸುಮಾರು 6500 ವರ್ಷಗಳ ಹಿಂದೆ ಸುಮೇರಿಯನ್ ಜನಾಂಗ ಟಿಗ್ರಿಸ್ ಮತ್ತು ಯುಪ್ರಟಿಸ್ ನದಿಗಳಿಗೆ ಅಣೆಕಟ್ಟು ನಿರ್ಮಿಸಿರುವುದು ಕಂಡುಬಂದಿದ್ದರೂ ಕೂಡ, ಇದು ಪ್ರವಾಹ ನಿಯಂತ್ರಿಸಲು ಸುಮರಿಯನ್ನರು ಕಂಡುಕೊಂಡಿದ್ದ ಪ್ರಾಚೀನವಾದ ದೇಸಿ ತಂತ್ರಜ್ಞಾನ ಎಂದು ಇತಿಹಾಸತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಎರಡು ಕುರುಹುಗಳನ್ನು ಹೊರತುಪಡಿಸಿದರೆ, ಕ್ರಿ.ಪೂ.3500 ರಲ್ಲಿ ಈಗಿನ ಜೋರ್ಡಾನ್ ದೇಶದಲ್ಲಿ ಅಂದು ಅಸ್ತಿತ್ವದಲ್ಲಿದ್ದ ಜಾವಾ ಎಂಬ ಪಟ್ಟಣಕ್ಕೆ ಕಾಲುವೆ ಮುಖಾಂತರ ನೀರು ಹರಿಸಲು ನದಿಯೊಂದಕ್ಕೆ 600 ಅಡಿಗಳ ಉದ್ದದ, ವಿಶಾಲವಾದ ಅಣೆಕಟ್ಟು ನಿರ್ಮಿಸಿರುವುದರ ಜೊತೆಗೆ, ನದಿಯುದ್ದಕ್ಕೂ 10 ಸಣ್ಣ ಸಣ್ಣ ಜಲಾಶಯಗಳನ್ನು ಸೃಷ್ಟಿ ಮಾಡಿರುವುದು ಕಂಡುಬಂದಿದೆ.

ಪ್ರಾಚೀನ ಇತಿಹಾಸದಲ್ಲಿ ಅತಿದೊಡ್ಡ ಅಣೆಕಟ್ಟಿನ ನಿರ್ಮಾಣವೆಂದರೆ, ಕ್ರಿ.ಪೂ. 2600 ರಲ್ಲಿ 14 ಮೀಟರ್ ಎತ್ತರ, 113 ಮೀಟರ್ ಉದ್ದದ ಅಣೆಕಟ್ಟು ಈಜಿಪ್ಟ್‌ನ ಕೈರೊ ನಗರದ ಬಳಿ ನಿರ್ಮಾಣಗೊಂಡಿರುವುದು. ಈಜಿಪ್ಟ್‌ನಲ್ಲಿ ಪಿರಮಿಡ್ಡುಗಳನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳು ಮತ್ತು ಕಾರ್ಮಿಕರೇ ಈ ಅಣೆಕಟ್ಟನ್ನು ನಿರ್ಮಿಸಿದ್ದಾರೆ ಎಂದು ಇತಿಹಾಸಕಾರರು ಊಹಿಸಿದ್ದಾರೆ. ಏಕೆಂದರೆ ಈಜಿಪ್ಟ್‌ನ ಮೊದಲ ಪಿರಮಿಡ್ ರಚಿತವಾದ ಕಾಲದಲ್ಲೇ ಈ ಅಣೆಕಟ್ಟು ನಿರ್ಮಾಣಗೊಂಡಿದೆ. 10 ವರ್ಷಕ್ಕೂ ಹೆಚ್ಚು ಕಾಲ ನಡೆದ ಈ ಅಣೆಕಟ್ಟಿನ ಕಾಮಗಾರಿಗೆ 17 ಸಾವಿರ ಬೃಹದಾಕಾರದ ಕತ್ತರಿಸಿಲ್ಪಟ್ಟ ಕಲ್ಲುಗಳನ್ನು ಬಳಸಲಾಗಿದೆ. ದುರಂತವೆಂದರೆ, ಈ ಅಣೆಕಟ್ಟಿನ ನಿರ್ಮಾಣಕಾರ್ಯ ಪೂರ್ಣಗೊಳ್ಳುವ ಮುನ್ನವೇ ಅಣೆಕಟ್ಟಿನ ಒಂದು ಭಾಗ ನೈಲ್ ನದಿಯ ಪ್ರವಾಹದಲ್ಲಿ ಕೊಚ್ಚಿಹೋಯಿತು. ಈ ಅಣೆಕಟ್ಟಿನ ನಿರ್ಮಾಣದ ಉದ್ದೇಶ ಕುಡಿಯುವ ನೀರಿಗಾಗಿ ಮಾತ್ರ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಧೃಡಪಟ್ಟಿದೆ. ಅಣೆಕಟ್ಟು ನಿರ್ಮಾಣಕ್ಕೆ ಮುನ್ನವೇ ನೈಲ್ ನದಿಯ ಪ್ರಾಂತ್ಯಗಳಲ್ಲಿ ಕೃಷಿ ಪದ್ಧತಿ ಆಚರಣೆಯಲ್ಲಿತ್ತು.

ಕ್ರಿ.ಪೂ. ಒಂದನೇ ಶತಮಾನಕ್ಕೆ ಮುನ್ನ ಮಧ್ಯಪ್ರಾಚ್ಯದ ಮೆಡಿಟೇರಿಯನ್ ಪ್ರದೇಶದಲ್ಲಿ ಕಲ್ಲು ಮತ್ತು ಅಗಾಧ ಪ್ರಮಾಣದ ಮಣ್ಣು ಬಳಸಿ ಅಣೆಕಟ್ಟು ನಿರ್ಮಿಸಿರುವುದು ಕಂಡುಬಂದಿದೆ. ಇಂತಹದೇ ಕುರುಹುಗಳು ಚೀನಾ ಹಾಗೂ ಮಧ್ಯ ಅಮೆರಿಕಾ ದೇಶಗಳಲ್ಲೂ ಕಂಡುಬಂದಿದೆ.

ಅಣೆಕಟ್ಟುಗಳ ನಿರ್ಮಾಣದಲ್ಲಿ ಸುಧಾರಿತ ತಂತ್ರಜ್ಞಾನ ಪ್ರಥಮಬಾರಿಗೆ ರೋಮನ್ನರ ಯುಗದಲ್ಲಿ ಬಳಕೆಯಾಯಿತು. ಅಂದಿನ ಕಾಲದಲ್ಲಿ ರೋಮ್ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟಿದ್ದ ಸ್ಪೇನ್‌ನಲ್ಲಿ ರೋಮನ್ನರು ನಿರ್ಮಿಸಿದ್ದ ಅನೇಕ ಅಣೆಕಟ್ಟುಗಳು ಹಲವಾರು ಶತಮಾನಗಳ ಕಾಲ ಅಸ್ತಿತ್ವದಲ್ಲಿದ್ದವು. 15 ನೇ ಶತಮಾನದಲ್ಲಿ ಅಲಿಕಾಂಟ್ ಬಳಿ ಕಲ್ಲಿನಿಂದ ನಿರ್ಮಿಸಿದ ಅಣೆಕಟ್ಟು ಸುಮಾರು 3 ಶತಮಾನಗಳ ಕಾಲ ಜಗತ್ತಿನ ಅತಿದೊಡ್ಡ ಅಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾಗಿತ್ತು.

ದಕ್ಷಿಣ ಏಷ್ಯಾ ಕೂಡ ಅಣೆಕಟ್ಟು ನಿರ್ಮಾಣ ಮತ್ತು ತಂತ್ರಜ್ಞಾನದ ಬಗ್ಗೆ ದೊಡ್ಡ ಇತಿಹಾಸವನ್ನು ಹೊಂದಿದೆ. ಕ್ರಿ.ಪೂ. 4ನೇ ಶತಮಾನದಲ್ಲಿ ಶ್ರೀಲಂಕಾದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ 34 ಮೀಟರ್ ಉದ್ದದ ಅಣೆಕಟ್ಟು ಆ ಕಾಲಕ್ಕೆ ಅತಿದೊಡ್ಡ ಅಣೆಕಟ್ಟಾಗಿತ್ತು. 12ನೇ ಶತಮಾನದ ಶ್ರೀಲಂಕಾದ ದೊರೆ ಪರಾಕ್ರಮಬಾಹು ಅವಧಿಯಲ್ಲಿ ಶ್ರೀಲಂಕಾದಲ್ಲಿ 15 ಮೀಟರ್ ಎತ್ತರದ ಸುಮಾರು 4 ಸಾವಿರ ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತಿವೆ. ಗ್ರಾಮಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಕೃಷಿ ಬಳಕೆಗಾಗಿ ಲಂಕನ್ನರು ಭಾರಿ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದ್ದರು. ಇವುಗಳಲ್ಲಿ ಒಂದು ಅಣೆಕಟ್ಟು 15 ಮೀಟರ್ ಎತ್ತರ ಮತ್ತು 1.4 ಕಿ.ಮೀ. ಉದ್ದ ಇದ್ದ ಬಗ್ಗೆ ಸಮಾಜಶಾಸ್ತ್ರಜ್ಞ ಎಡ್ಮಂಡ್ ಲೀಚ್ ದಾಖಲಿಸಿದ್ದಾನೆ.

ಅಣೆಕಟ್ಟುಗಳ ನಿರ್ಮಾಣ ಮತ್ತು ತಂತ್ರಜ್ಞಾನ ಕೇವಲ ಕುಡಿಯುವ ನೀರು ಅಥವಾ ಕೃಷಿ ಬಳಕೆಗೆ ಸೀಮಿತವಾಗದೆ ಆಧುನಿಕ ಯುಗದ ಕೈಗಾರಿಗಳ ಸ್ಥಾಪನೆಗೆ ನಾಂದಿಯಾಯಿತು.

ಅಣೆಕಟ್ಟುಗಳ ಮೂಲಕ ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ಇಳಿಜಾರಿನಲ್ಲಿ ನಿರ್ಮಿಸಿದ ಚಕ್ರಗಳ ಮೇಲೆ ಕೊಳವೆಗಳ ಮೂಲಕ ಹಾಯಿಸಿ, ತಿರುಗುವ ಚಕ್ರಗಳ ಮುಖಾಂತರ ಮೆಕ್ಕೆಜೋಳವನ್ನು ಹಿಟ್ಟು ಮಾಡುವ ಪದ್ಧತಿ ಈಜಿಪ್ಟ್, ರೋಮನ್, ಸುಮೇರಿಯನ್ನರ ಕಾಲದಲ್ಲಿ ಬಳಕೆಯಲ್ಲಿತ್ತು.

ಈ ತಂತ್ರಜ್ಙಾನವನ್ನೇ ಮೂಲವನ್ನಾಗಿಟ್ಟುಕೊಂಡು ಪ್ರಾನ್ಸ್ ಮೂಲದ ಟರ್ಬೈನ್ ಎಂಬ ಇಂಜಿನಿಯರ್ 1832ರಲ್ಲಿ ಯಂತ್ರವೊಂದನ್ನು ಆವಿಷ್ಕರಿಸಿ, ವಿದ್ಯುತ್ ಉತ್ಪಾದನೆಗೆ ತಳಹದಿ ಹಾಕಿದ. ಆತ ಕಂಡುಹಿಡಿದ ಯಂತ್ರಕ್ಕೆ ಅವನ ಹೆಸರನ್ನೇ ಇಡಲಾಯಿತು.

17ನೇ ಶತಮಾನದ ವೇಳೆಗೆ ಇಂಗ್ಲೆಂಡ್, ಜರ್ಮನಿ, ಇಟಲಿ ಮುಂತಾದ ದೇಶಗಳಲ್ಲಿ ಅಣೆಕಟ್ಟುಗಳ ಕೆಳಭಾಗದಲ್ಲಿ ನಿರ್ಮಿಸಿದ ವಾಟರ್ ಮಿಲ್ ತಂತ್ರಜ್ಞಾನದಿಂದ ಕಬ್ಬಿಣ ಕುಟ್ಟುವುದು, ಜೋಳದ ಹಿಟ್ಟಿನ ತಯಾರಿಕೆ, ಕಾಗದ ಉತ್ಪಾದನೆಗೆ ಬೇಕಾದ ಪಲ್ಪ್ ತಯಾರಿಕೆ ಮುಂತಾದ ಕಾರ್ಯಗಳು ನಡೆಯುತ್ತಿದ್ದವು.

19ನೇ ಶತಮಾನದ ಪೂರ್ವದಲ್ಲಿ ಕೈಗಾರಿಕೆಗಳ ಬಳಕೆಗಾಗಿ 200 ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. 20ನೇ ಶತಮಾನದ ಪ್ರಾರಂಭದವರೆಗೆ ಹರಿಯುವ ನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಅಣೆಕಟ್ಟುಗಳಿಗೆ ಕಲ್ಲು, ಇಟ್ಟಿಗೆ, ಗಾರೆ ಬಳಸುತ್ತಿದ್ದರೂ ಕೂಡ, ಇವುಗಳ ನಿರ್ಮಾಣದ ವ್ಯವಸ್ಥೆಯಲ್ಲಿ ಯಾವುದೇ ವೈಜ್ಞಾನಿಕ ತಳಹದಿ ಇರುತ್ತಿರಲಿಲ್ಲ.

ಈ ದಿಶೆಯಲ್ಲಿ, ಅಲ್ಲಿಯತನಕ ನಿರ್ಮಿಸಲಾಗಿದ್ದ ಅಣೆಕಟ್ಟುಗಳ ಸಫಲತೆ-ವಿಫಲತೆಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿ, 1930 ರಲ್ಲಿ ಪ್ರಥಮವಾಗಿ ನದಿಯ ನೀರಿನ ಹರಿವು, ಅಣೆಕಟ್ಟು ನಿರ್ಮಿಸುವ ಸ್ಥಳದ ಮಣ್ಣಿನ ಪರೀಕ್ಷೆ, ಭೂಗರ್ಭದಲ್ಲಿನ ಕಲ್ಲುಗಳು, ಅಣೆಕಟ್ಟಿನ ನೀರಿನ ಸಂಗ್ರಹ ಹಾಗೂ ಅದರ ಒತ್ತಡದಿಂದಾಗುವ ಭೂಗರ್ಭದಲ್ಲಾಗುವ ಪರಿವರ್ತನೆ ಮುಂತಾದವುಗಳ ಕುರಿತು ಅಧ್ಯಯನ ನಡೆಸಲಾಯಿತು. ಇಂತಹ ವೈಜ್ಞಾನಿಕ ಹಾಗೂ ಕೂಲಂಕುಷ ಅಧ್ಯಯನಗಳ ನಡುವೆ ಕೂಡ ಅಣೆಕಟ್ಟುಗಳ ದುರಂತ ಸಾಮಾನ್ಯವಾಗಿತ್ತು. ಪ್ರತಿ 10 ಅಣೆಕಟ್ಟುಗಳಲ್ಲಿ ಒಂದು ಅಣೆಕಟ್ಟು ದುರಂತದಲ್ಲಿ ಪರ್ಯಾವಸಾನಗೊಳ್ಳುತ್ತಿತ್ತು.

ಪ್ರಾನ್ಸ್‌ನ ಇಂಜಿನಿಯರ್ ಟರ್ಬೈನ್ ಆವಿಷ್ಕರಿಸಿದ ವಿದ್ಯುತ್ ಯಂತ್ರದಿಂದಾಗಿ ಜಲ ವಿದ್ಯುತ್‌ಗೆ ಭಾರಿ ಬೇಡಿಕೆ ಉಂಟಾದ ಕಾರಣ ಅಮೆರಿಕಾ, ಯೂರೋಪ್ ಖಂಡಗಳಲ್ಲಿ ಸಾಕಷ್ಟು ಅಣೆಕಟ್ಟುಗಳು ನಿರ್ಮಾಣವಾದವು. 1900ರಲ್ಲಿ 30ರಷ್ಟಿದ್ದ ಅಣೆಕಟ್ಟುಗಳ ಸಂಖ್ಯೆ 1930ರ ವೇಳೆಗೆ 200ಕ್ಕೆ ತಲುಪಿತ್ತು.

ಅಮೆರಿಕಾದಲ್ಲಿ ವಿಶಾಲವಾದ ಬೃಹತ್ ಹುಲ್ಲುಗಾವಲು ಪ್ರದೇಶಗಳನ್ನು ನೀರಾವರಿಗೆ ಒಳಪಡಿಸುವ ಉದ್ದೇಶದಿಂದ ಅಣೆಕಟ್ಟುಗಳ ನಿರ್ಮಾಣ ಪ್ರಾರಂಭವಾದರೂ, ನಂತರ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗುವಂತೆ, ಜಲ ವಿದ್ಯುತ್ ಯೋಜನೆಗೆ ಒತ್ತು ನೀಡಿ ಭಾರಿ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಯಿತು.

ಅಮೆರಿಕಾ ಸರಕಾರ ಸೇನಾಪಡೆಯ ತಂತ್ರಜ್ಞರನ್ನು ಒಳಗೊಂಡ ತಂಡವೊಂದನ್ನು ರಚಿಸಿ, ಈ ತಂಡದ ಮೂಲಕ ಜಲ ವಿದ್ಯುತ್‌ಗಾಗಿ ಕಬ್ಬಿಣ-ಸಿಮೆಂಟ್ ಬಳಸಿ, 1930ರವರೆಗೆ 50 ಅಣೆಕಟ್ಟುಗಳನ್ನು ನಿರ್ಮಿಸಿ 1931 ರಲ್ಲಿ ಜಗತ್ತಿನ ಬೃಹತ್ ಅಣೆಕಟ್ಟುಗಳಲ್ಲಿ ಒಂದಾದ ಕೊಲರ್‍ಯಾಡೊ ನದಿಯ ಹೂವರ್ ಅಣೆಕಟ್ಟೆಯನ್ನು ನಿರ್ಮಾಣಮಾಡಿತು.

ಅಮೆರಿಕಾದಲ್ಲಿ ನಿರ್ಮಿಸಲಾದ ಅಣೆಕಟ್ಟುಗಳ ಮೂಲಕ ಉತ್ಪಾದಿಸಿದ ಜಲ ವಿದ್ಯುತ್ ಕೈಗಾರಿಕಾ ಕ್ರಾಂತಿಗೆ ನಾಂದಿಯಾಗುವುದರ ಜೊತೆಗೆ, ವಿಶ್ವದ ಮಹಾ ಯುದ್ಧಕ್ಕೆ ಬೇಕಾದ ಯುದ್ಧ ಸಾಮಗ್ರಿ, ವಿಮಾನಗಳ ತಯಾರಿಕೆಗೂ ಸಹಕಾರಿಯಾಯಿತು. 1945ರವರೆಗೆ ಕಲ್ಲಿದ್ದಲು ಆಧಾರಿತ ಹಾಗೂ ಅಣು ವಿದ್ಯುತ್ ಪ್ರಾರಂಭವಾಗುವವರೆಗೆ ಅಮೆರಿಕ ಸರಕಾರ ವಿದ್ಯುತ್ ಉತ್ಪಾದನೆಯನ್ನು ಗುರಿಯಾಗಿಸಿಕೊಂಡು 100ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಾಣ ಮಾಡಿತ್ತು.

ರಷ್ಯಾ ಕೂಡ ಅಣೆಕಟ್ಟುಗಳ ನಿರ್ಮಾಣದಲ್ಲಿ ಹಿಂದೆ ಬಿದ್ದಿರಲಿಲ್ಲ. ಇಲ್ಲಿ ಅಣೆಕಟ್ಟುಗಳ ನಿರ್ಮಾಣದ ಗುರಿ ಜಲ ವಿದ್ಯುತ್‌ಗಿಂತ, ನದಿಗಳ ಹುಚ್ಚು ಪ್ರವಾಹವನ್ನು ನಿಯಂತ್ರಿಸುವುದೇ ಆಗಿತ್ತು.

ರಷ್ಯಾದ ಗೂಢಾಚಾರ ಸಂಸ್ಥೆ ಕೆ.ಜಿ.ಬಿ.ಯ ನಿಯಂತ್ರಣದಲ್ಲಿ ಡೈಪಿರ್ ನದಿಗೆ 1932ರಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸಿ, ಜಲವಿದ್ಯುತ್ ತಯಾರಿಕೆಗೆ ನಾಂದಿ ಹಾಡಿತು. 1970 ರವೇಳೆಗೆ ರಷ್ಯಾದಲ್ಲಿ ಬಹುತೇಕ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿ, ಪ್ರವಾಹ ನಿಯಂತ್ರಣದೊಂದಿಗೆ 1 ಲಕ್ಷದ 20 ಸಾವಿರ ಚ.ಕಿ.ಮೀ. ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಯಿತು.

ಚಿತ್ರಗಳು : ವಿಕಿಪೀಡಿಯ

ಸಾಯಿಸಿ, ಬದುಕಿಸುವ ಮೀಡಿಯಾ!!

ಸುದ್ದಿ ವಾಹಿನಿಗಳ ಸ್ಪರ್ಧೆ ಎಂಥ ಅವಾಂತರ ಸೃಷ್ಟಿಸುತ್ತವೆ ಎಂಬುದಕ್ಕೆ ಕಳೆದ ವಾರದಲ್ಲಿ ಆದ ಘಟನೆಗಳೇ ಸಾಕ್ಷಿ. ನಟ ದೀಪಕ್ ಚಿತ್ರೀಕರಣದ ವೇಳೆ ಅನಾಹುತಕ್ಕೆ ಗುರಿಯಾಗಿ ಸತ್ತರೆಂದು ಸುದ್ದಿಯಾಗಿದ್ದು, ನಟ ದರ್ಶನ್ ಹೆಂಡತಿಯನ್ನು ಹೊಡೆದು ಬಂಧಿತರಾಗಿದ್ದು ಈ ವಿಷಯದಲ್ಲಿ ದೃಶ್ಯ ಮಾಧ್ಯಮ ವಿಚೇಚನೆ ಇಲ್ಲದೆ ನಡಕೊಂಡಿತು. ಈ ಬಗ್ಗೆ ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪತ್ರಕರ್ತ ತುರುವೀಹಾಳ ಚಂದ್ರು ಲೇಖನ ಬರೆದಿದ್ದಾರೆ.

ಜನಪದ ವೈದ್ಯ: ಸದ್ಯ ಮತ್ತು ಮುಂದುವರಿಕೆಯ ನೆಲೆ

* ಡಾ. ಅರುಣ್ ಜೋಳದಕೂಡ್ಲಿಗಿ

ಚಳ್ಳಕೆರೆಯಲ್ಲಿ ಶ್ರೀದೇವಿ ಮೂಳೆ ಚಿಕಿತ್ಸಾಲಯವಿದೆ. ಅದು ಐದಾರು ಜನ ಇಕ್ಕಟ್ಟಿನಲ್ಲಿ ಕೂರಬಹುದಾದಷ್ಟು ಪುಟ್ಟದೊಂದು ರೂಮು. ಅಲ್ಲಿ ಮೂಳೆನೋವು, ಉಳುಕು, ಸೊಂಟನೋವು, ನರಸಮಸ್ಯೆ ಮುಂತಾದವುಗಳಿಂದ ಬಾದಿತರಾದ ರೋಗಿಗಳು ಸದಾ ಕಿಕ್ಕಿರಿದಿರುತ್ತಾರೆ. 34 ವರ್ಷದ ಯುವ ನಾಟಿ  ವೈದ್ಯ ಎನ್.ಲಕ್ಷ್ಮಣ್ ಅವರು ಮೂಳೆಗೆ ಸಂಬಂದಿಸಿದ ನೋವುಗಳಿಗೆ ಇಲ್ಲಿ ಚಿಕಿತ್ಸೆ ನೀಡುತ್ತಿರುತ್ತಾರೆ. ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಬಗೆಹರಿಯದ ಮೂಳೆ ಸಮಸ್ಯೆಗಳನ್ನು ಲಕ್ಷ್ಮಣ್ ವಾಸಿ ಮಾಡಿದ್ದಾರೆಂಬುದು ಆತನ ಬಗೆಗಿನ ಜನಾಭಿಪ್ರಾಯ. ಈ ವಿಷಯವಾಗಿ ಲಕ್ಷ್ಮಣ್ ಅವರೊಂದಿಗೆ ಮಾತನಾಡಿದಾಗ, ಆತನ ಮಾತು ಮತ್ತು ಅನುಭವದಿಂದ ಜನಪದ ವೈದ್ಯಕ್ಕೆ ಹೇಗೆ ಮರುಜೀವ ನೀಡಬಹುದು ಎನ್ನುವ ಬಗ್ಗೆ ಒಳನೋಟಗಳು ಹೊಳೆದವು.

ಲಕ್ಷ್ಮಣ್ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಪರುಷರಾಮಪುರದ ಹತ್ತಿರದ ಪಿ. ಮಹದೇವಪುರದವರು. ಇವರ ಅಜ್ಜ, ಅಪ್ಪ ಸಹ ಮೂಳೆಗೆ ಸಂಬಂಧಿಸಿದ ಜನಪದ ವೈದ್ಯವನ್ನು ಮಾಡುತ್ತಿದ್ದರಂತೆ, ಲಕ್ಷ್ಮಣ್ ಪಿಯುಸಿ ಪೇಲಾಗಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋದರಂತೆ, ಅಲ್ಲಿ ಆಕಸ್ಮಿಕವಾಗಿ ಅಪಘಾತವೊಂದರಲ್ಲಿ ಕಾಲುಮುರಿದುಕೊಂಡು ಮತ್ತೆ ತನ್ನ ಸ್ವಂತ ಊರಿಗೆ ಮರಳಬೇಕಾಯಿತು. ಇಲ್ಲಿ ತನ್ನ ತಂದೆಯಿಂದ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆದು ಗುಣಮುಖವಾಗುವ ಹೊತ್ತಿಗೆ ನಾನೆ ಯಾಕೆ ಅಪ್ಪನ ವಿದ್ಯೆಯನ್ನು ಕಲಿಯಬಾರದು ಅನ್ನಿಸಿದೆ. ಆಗ ಅಪ್ಪನ ಜತೆ ತಾನು ಮೂಳೆ ಚಿಕಿತ್ಸೆ ಮಾಡುವ ನಾಟಿ ವೈದ್ಯದ ವಿಧಾನಗಳನ್ನು ಕಲಿತಿದ್ದಾನೆ. ನಂತರ ಲಕ್ಷ್ಮಣ್ ಸ್ವತಃ ಮೂಳೆ ಸಂಬಂಧಿ ನೋವುಗಳಿಗೆ ಚಿಕಿತ್ಸೆ ನೀಡಲು ಶುರು ಮಾಡಿದ್ದಾರೆ.

ಪಿಯುಸಿ ಓದಿದ ಲಕ್ಷ್ಮಣ್ ತಂದೆಯಿಂದ ಕಲಿತದ್ದನ್ನಷ್ಟೆ ಅಲ್ಲದೆ, ಮೂಳೆ ನರಕ್ಕೆ ಸಂಬಂದಿಸಿದ ಪುಸ್ತಕಗಳನ್ನು ಓದಿ ತಿಳಿದಿದ್ದಾರೆ, ನಂತರ ಮೂಳೆತಜ್ಞ ನರತಜ್ಞ ಡಾಕ್ಟರುಗಳನ್ನು ಸಂಪಕರ್ಿಸಿ ಈ ಬಗ್ಗೆ ವೈಜ್ಞಾನಿಕವಾಗಿಯೂ ತಿಳಿದುಕೊಂಡಿದ್ದಾರೆ. ಅಂತೆಯೇ ಆಯುವರ್ೇದದ ಚಿಕಿತ್ಸೆಯ ಮಾದರಿಗಳನ್ನೂ ಕಲಿತಿದ್ದಾರೆ. ಹೀಗೆ ಮೂಳೆ ಸಂಬಂಧಿಯಾದ ಹಲವು ಬಗೆಯ ತಿಳುವಳಿಕೆ ಪಡೆದು ನಾಟಿ ವೈದ್ಯದಲ್ಲಿ ತನ್ನದೇ ಆದ ಒಂದು ವಿಶಿಷ್ಠ ವಿಧಾನವನ್ನು ರೂಪಿಸಿಕೊಂಡಿದ್ದಾರೆ. ತನ್ನ ತಾತ, ತಂದೆಯವರ ವೈದ್ಯದ ವ್ಯಾಪ್ತಿಯನ್ನು ಅಗಾಧವಾಗಿ ವಿಸ್ತರಿಸಿದ್ದಾರೆ. ಅಂತೆಯೇ ಜನಪದ ವೈದ್ಯದ ಬಗ್ಗೆ ಜನರಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದ್ದಾರೆ.

ಹದಿಮೂರು ವರ್ಷದಿಂದ ಚಳ್ಳಕೆರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದು, ಈತನಕ ಸುಮಾರು ಇಪ್ಪತ್ತೈದು  ಸಾವಿರಕ್ಕಿಂತ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ್ದಾರೆ. ಇದು ಲಕ್ಷ್ಮಣ್ ಅವರ ಕಿರಿ ವಯಸ್ಸಿನ ಹಿರಿಯ ಸಾಧನೆ. ಆತ ಜನಸಾಮಾನ್ಯರಿಗೆ ಮೂಳೆ ನರಗಳ ಬಗ್ಗೆ ಸರಳವಾಗಿ ವಿವರಿಸಿ, ಆ ಕುರಿತು ಜಾಗೃತಿ ಮೂಡಿಸುತ್ತಾನೆ. ಈತನ ಬಳಿಗೆ ಬರುವ ರೋಗಿಗಳು ಬಹುಪಾಲು ಬಡವರು ರೈತರು ಹಳ್ಳಿಗರು. ಹಾಗಾಗಿ ಇವರು ಚಿಕಿತ್ಸೆಗೆ ಪಡೆವ ಹಣ ಕೂಡ ಜನಸಾಮಾನ್ಯರಿಗೆ ನಿಲುಕುವ ಕಡಿಮೆ ಮೊತ್ತ. ಯಾವುದೇ ಆಥರ್ೋಪೆಡಿಕ್ಸ ಡಾಕ್ಟರಿಗಿಂತ ಕಡಿಮೆ ಇಲ್ಲ ಎನ್ನುವಂತಿರುವ ಲಕ್ಷ್ಮಣ್ ಹಮ್ಮು ಬಿಮ್ಮುಗಳಿಲ್ಲದ ಸರಳ ವ್ಯಕ್ತಿ. ತನ್ನಿಂದ ಈ ರೋಗಕ್ಕೆ ಚಿಕಿತ್ಸೆ ಕೊಡಲು ಸಾದ್ಯವಿಲ್ಲ ಎಂತಾದರೆ, ಉಪಯುಕ್ತ ಮಾರ್ಗದರ್ಶನ ಮಾಡುತ್ತಾರೆ. ಇದನ್ನೆಲ್ಲಾ ನೋಡಿದರೆ ಲಕ್ಷ್ಮಣ್ ಜನಪದ ವೈದ್ಯವನ್ನು ಅರ್ಥಪೂರ್ಣವಾಗಿ ಮುಂದುವರಿಸುತ್ತಿದ್ದಾರೆ ಅನ್ನಿಸುತ್ತದೆ.

ಕನರ್ಾಟಕದ ಗ್ರಾಮೀಣ ಭಾಗದಲ್ಲಿ ಈಗಲೂ ಈ ತರಹದ ಸಾವಿರಾರು ಜನಪದ ವೈದ್ಯರಿದ್ದಾರೆ. ಅವರು ತಮ್ಮ ಸುತ್ತಮುತ್ತ ಸಿಗುವ ಗಿಡಮೂಲಿಕೆಗಳನ್ನು ಬಳಸಿ ಚಿಕಿತ್ಸೆ ಮಾಡುತ್ತಾರೆ. ಇಂದಿನ ಆಧುನಿಕ ವೈದ್ಯದ ಪ್ರಭಾವದಿಂದಾಗಿ ಜನಪದ ವೈದ್ಯರಲ್ಲಿ ನಂಬಿಕೆ ಕಡಿಮೆಯಾಗಿದೆ. ಚಿಕಿತ್ಸೆ ಪಡೆಯುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಹಿಂದೆ ನಾಟಿ ವೈದ್ಯವನ್ನು ಮಾಡುತ್ತಿದ್ದವರು ಈಗ ಕೈಬಿಟ್ಟಿದ್ದಾರೆ. ವಂಶಪಾರಂಪರ್ಯ ಮುಂದುವರಿಕೆ ಸಹ ಕುಂಟಿತವಾಗುತ್ತಿದೆ. ಕಾರಣ ಹೊಸ ತಲೆಮಾರು ತನ್ನ ತಾತ ಮುತ್ತಾತರಿಂದ ಬಂದ ವೈದ್ಯವನ್ನು ಮುಂದುವರಿಸಲು ಆಸಕ್ತಿ ತೋರದಾಗಿದ್ದಾರೆ. ಇದರಿಂದ ಗ್ರಾಮೀಣ ಭಾಗದ ರೈತರು, ಹಳ್ಳಿಗರು, ಬಡವರಿಗೆ ತೊಂದರೆಯಾಗಿದೆ. ಕಾರಣ ಇಂದು ಆಧುನಿಕ ವೈದ್ಯವನ್ನು ಕಲಿತವರು ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ಕೊಡುವ ಮನಸ್ಸು ಮಾಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಕೆಲಸಮಾಡಬೇಕಾಗಿರುವ ದಾದಿಯರೇ(ನರ್ಸಗಳು) ನಗರಗಳಲ್ಲಿ ಮನೆ ಮಾಡಿಕೊಂಡು ಹಳ್ಳಿಗಳಿಗೆ ವಿಮುಖರಾಗಿದ್ದಾರೆ. ಬಹುಪಾಲು ಸರಕಾರಿ ಆಸ್ಪತ್ರೆಗಳು ಸ್ವತಃ ರೋಗಿಗಳಂತೆ ನರಳುತ್ತಿವೆ. ಇನ್ನು ನಗರದ ದೊಡ್ಡ ದೊಡ್ಡ ಆಸ್ಪತ್ರೆಗಳು ವಿಧಿಸುವ ಚಿಕಿತ್ಸೆಯ ದುಬಾರಿ ಮೊತ್ತವನ್ನು ಹಳ್ಳಿಗರಿಗೆ ಭರಿಸಲು ಸಾದ್ಯವಾಗುತ್ತಿಲ್ಲ. ಇದನ್ನು ನೋಡಿದರೆ ಇಂದು ಜನಪದ ವೈದ್ಯಕ್ಕೆ ಮರುಜೀವ ನೀಡುವ ಅಗತ್ಯವಿದೆ.

ಜನಪದ ವೈದ್ಯವನ್ನು ಇರುವಂತೆಯೆ ಮುಂದುವರೆಸುವುದು ಕಷ್ಟ. ಹಾಗಾಗಿ ನಾಟಿ ವೈದ್ಯದಲ್ಲಿ ಕೆಲವು ಅವಶ್ಯ ಮಾಪರ್ಾಡುಗಳನ್ನು ತರಬೇಕಿದೆ. ಈ ವೈದ್ಯದೊಂದಿಗೆ ಬೆರೆತ ಮೂಡನಂಬಿಕೆಗಳನ್ನು ಬಿಡಿಸಬೇಕಿದೆ. ದೈವಗಳೊಂದಿಗೆ ಲಗತ್ತಾಗಿರುವ  ನಂಬಿಕೆಯನ್ನು ಕಡಿಮೆ ಮಾಡಬೇಕಿದೆ. ನಾಟಿವೈದ್ಯರನ್ನು ಗುರುತಿಸಿ ಅವರಿಗೆ ವೈದ್ಯಕೀಯದ ಪ್ರಾಥಮಿಕ ತಿಳುವಳಿಕೆಯನ್ನು ನೀಡಬೇಕು. ಈ ಮೂಲಕ ಅವರ ವೈದ್ಯದಲ್ಲಿ ಕೆಲವು ಬದಲಾವಣೆಗೆ ಮಾರ್ಗದರ್ಶನ ಮಾಡಬೇಕು. ಅನುಭವಿ ನಾಟಿ ವೈದ್ಯರ ಮೂಲಕ ಗ್ರಾಮೀಣ ಭಾಗದ ಯುವಕರಿಗೆ ಕಮ್ಮಟಗಳನ್ನು ಮಾಡಿ, ಯುವಕರಲ್ಲಿ  ಜನಪದ ವೈದ್ಯದ ಬಗ್ಗೆ ಆಸಕ್ತಿ ಮೂಡಿಸುವಂತಾಗಬೇಕಿದೆ. ಮುಖ್ಯವಾಗಿ ನಾಟಿ ವೈದ್ಯದಲ್ಲಿ ಮತ್ತೆ ನಂಬಿಕೆ ಹುಟ್ಟುವ ರೀತಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಬೇಕು.

ಕನರ್ಾಟಕ ಜಾನಪದ ಅಕಾಡೆಮಿ ಇಂತಹ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ. ಸದ್ಯವೆ ಕಾರ್ಯ ಆರಂಭಿಸಲಿರುವ ಜಾನಪದ ವಿಶ್ವವಿದ್ಯಾಲಯ ಜನಪದ ವೈದ್ಯಕ್ಕೆ ಪ್ರತ್ಯೇಕ ವಿಭಾಗ ತೆರೆದು, ಜನಪದ ವೈದ್ಯರನ್ನು ತಯಾರು ಮಾಡಿ ಅಂತವರು ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುವಂತೆ ಪ್ರೇರೇಪಿಸಬೇಕಿದೆ. ನಾಟಿ ವೈದ್ಯ ಪದ್ದತಿಯ ಪರಿಣಿತರನ್ನು `ಜನಪದ ವೈದ್ಯ’ ಎಂಬ ಅಧಿಕೃತ ಸಟರ್ಿಪಿಕೇಟ್ ನೀಡಿ  ಅವರುಗಳು ಚಿಕಿತ್ಸಾ ಕೇಂದ್ರಗಳನ್ನು ನಡೆಸಲು ಅನುವಾಗುವಂತೆ ವ್ಯವಸ್ಥೆ ಮಾಡುವ ಅಗತ್ಯವಿದೆ. ಜನಪದ ವೈದ್ಯರನ್ನು ನಕಲಿ ವೈದ್ಯರೆಂದು ಅಪರಾದಿ ಸ್ಥಾನದಲ್ಲಿ ನಿಲ್ಲಿಸಬಲ್ಲ ಕಾನೂನುಗಳಿಗೂ ತಕ್ಕ ಬದಲಾವಣೆಯನ್ನು ತರುವ ಅಗತ್ಯವಿದೆ.