ಜೀವನದಿಗಳ ಸಾವಿನ ಕಥನ – 3

ಡಾ.ಎನ್. ಜಗದೀಶ್ ಕೊಪ್ಪ

ಪೃಥ್ವಿಯ ಮೇಲಿನ ಭೂವಿನ್ಯಾಸದಲ್ಲಿ ನದಿಗಳ ಪಾತ್ರ ಅನನ್ಯವಾದುದು. ಪರ್ವತಗಳ ಗಿರಿಶ್ರೇಣಿಯಲ್ಲಿ ಹುಟ್ಟಿ ಹರಿಯುವ ನದಿಗಳು, ಸಮುದ್ರ ಸೇರುವ ಮುನ್ನ, ತಾವು ಕ್ರಮಿಸುವ ಹಾದಿಯುದ್ದಕ್ಕೂ ತಮ್ಮ ಇಕ್ಕೆಲಗಳ ಭೂಮಿಯನ್ನು ಫಲವತ್ತಾಗಿಸುತ್ತಾ, ಸುತ್ತ ಮುತ್ತಲಿನ ಪ್ರದೇಶಗಳ ಅಂತರ್ಜಲವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.

ನದಿಗಳು, ಮಂಜಿನಿಂದ ಆವೃತ್ತವಾಗಿರುವ ಹಿಮಾಲಯದಂತಹ ಪರ್ವತಶ್ರೇಣಿಗಳಲ್ಲಿ, ಬೇಸಿಗೆ ಕಾಲದಲ್ಲಿ ಹೆಚ್ಚಿನ ಒಳಹರಿವಿನಿಂದ ಪ್ರವಾಹದ ರೀತಿಯಲ್ಲಿ ಹರಿದರೆ, ಇತರೆ ಸಾಮಾನ್ಯ ದಿನಗಳಲ್ಲಿ ಸೂರ್ಯನ ಶಾಖಕ್ಕೆ ಕರಗುವ ಮಂಜುಗೆಡ್ಡೆಯಿಂದಾಗಿ ಸಹಜವಾಗಿ ಹರಿಯುತ್ತವೆ. ನದಿಪಾತ್ರದಲ್ಲಿ ಬೀಳುವ ಮಳೆ, ಹಳ್ಳ-ಕೊಳ್ಳಗಳಲ್ಲಿ ಜಿನುಗುವ ನೀರು ಇವೆಲ್ಲವನ್ನೂ ತನ್ನೊಳಗೆ ಲೀನವಾಗಿಸಿಕೊಳ್ಳುವ ಪ್ರಕ್ರಿಯೆ ನದಿಗೆ ಸಹಜವಾದುದು.

ಈ ನದಿಗಳಲ್ಲಿ ಹರಿಯುವ ನೀರು ಬರೀ ನೀರಷ್ಟೇ ಅಲ್ಲ, ಪರ್ವತ, ಗುಡ್ಡಗಾಡುಗಳ ಇಳಿಜಾರಿನಲ್ಲಿ ಹರಿಯುವ ನೀರು ಅನೇಕ ಗಿಡ-ಮೂಲಿಕೆಗಳನ್ನು ತೋಯಿಸಿ ಹರಿಯುವುದರಿಂದ ಈ ನೀರಿನಲ್ಲಿ ಅನೇಕ ಔಷದೀಯ ಅಂಶಗಳು, ಖನಿಜಾಂಶಗಳು ಮಿಳಿತವಾಗಿರುತ್ತವೆ. ಜೊತೆಗೆ ಈ ನೀರು ಸಿಹಿ ನೀರಾಗಿರುತ್ತದೆ.

ಇಂತಹ ಜೀವ ನದಿಗಳಿಗೆ ಅಣೆಕಟ್ಟು ನಿರ್ಮಿಸುವುದರ ಮೂಲಕ ಅವುಗಳ ಸಹಜ ಹರಿವಿಗೆ ಅಡೆ-ತಡೆ ನಿರ್ಮಿಸಿ ಮಣಿಸುವ ಪ್ರಯತ್ನಕ್ಕೆ 8 ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ.

ಮೆಸಪೊಟೋಮಿಯ ಈಶಾನ್ಯ ಭಾಗದ ಜಾರ್ಗೊಸ್ ಪರ್ವತಶ್ರೇಣಿಗಳ ತಪ್ಪಲಲ್ಲಿ ಹರಿಯುವ ನದಿಗಳಿಗೆ ಅಣೆಕಟ್ಟು ನಿರ್ಮಿಸಿ, ಕಾಲುವೆ ಮುಖಾಂತರ ನೀರು ಹರಿಸಿರುವುದು ಮೆಸಪಟೋಮಿಯಾ ನಾಗರೀಕತೆಯ ಪ್ರಾಚೀನ ಅವಶೇಷಗಳಿಂದ ದೃಢಪಟ್ಟಿದೆ.

ಸುಮಾರು 6500 ವರ್ಷಗಳ ಹಿಂದೆ ಸುಮೇರಿಯನ್ ಜನಾಂಗ ಟಿಗ್ರಿಸ್ ಮತ್ತು ಯುಪ್ರಟಿಸ್ ನದಿಗಳಿಗೆ ಅಣೆಕಟ್ಟು ನಿರ್ಮಿಸಿರುವುದು ಕಂಡುಬಂದಿದ್ದರೂ ಕೂಡ, ಇದು ಪ್ರವಾಹ ನಿಯಂತ್ರಿಸಲು ಸುಮರಿಯನ್ನರು ಕಂಡುಕೊಂಡಿದ್ದ ಪ್ರಾಚೀನವಾದ ದೇಸಿ ತಂತ್ರಜ್ಞಾನ ಎಂದು ಇತಿಹಾಸತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಎರಡು ಕುರುಹುಗಳನ್ನು ಹೊರತುಪಡಿಸಿದರೆ, ಕ್ರಿ.ಪೂ.3500 ರಲ್ಲಿ ಈಗಿನ ಜೋರ್ಡಾನ್ ದೇಶದಲ್ಲಿ ಅಂದು ಅಸ್ತಿತ್ವದಲ್ಲಿದ್ದ ಜಾವಾ ಎಂಬ ಪಟ್ಟಣಕ್ಕೆ ಕಾಲುವೆ ಮುಖಾಂತರ ನೀರು ಹರಿಸಲು ನದಿಯೊಂದಕ್ಕೆ 600 ಅಡಿಗಳ ಉದ್ದದ, ವಿಶಾಲವಾದ ಅಣೆಕಟ್ಟು ನಿರ್ಮಿಸಿರುವುದರ ಜೊತೆಗೆ, ನದಿಯುದ್ದಕ್ಕೂ 10 ಸಣ್ಣ ಸಣ್ಣ ಜಲಾಶಯಗಳನ್ನು ಸೃಷ್ಟಿ ಮಾಡಿರುವುದು ಕಂಡುಬಂದಿದೆ.

ಪ್ರಾಚೀನ ಇತಿಹಾಸದಲ್ಲಿ ಅತಿದೊಡ್ಡ ಅಣೆಕಟ್ಟಿನ ನಿರ್ಮಾಣವೆಂದರೆ, ಕ್ರಿ.ಪೂ. 2600 ರಲ್ಲಿ 14 ಮೀಟರ್ ಎತ್ತರ, 113 ಮೀಟರ್ ಉದ್ದದ ಅಣೆಕಟ್ಟು ಈಜಿಪ್ಟ್‌ನ ಕೈರೊ ನಗರದ ಬಳಿ ನಿರ್ಮಾಣಗೊಂಡಿರುವುದು. ಈಜಿಪ್ಟ್‌ನಲ್ಲಿ ಪಿರಮಿಡ್ಡುಗಳನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳು ಮತ್ತು ಕಾರ್ಮಿಕರೇ ಈ ಅಣೆಕಟ್ಟನ್ನು ನಿರ್ಮಿಸಿದ್ದಾರೆ ಎಂದು ಇತಿಹಾಸಕಾರರು ಊಹಿಸಿದ್ದಾರೆ. ಏಕೆಂದರೆ ಈಜಿಪ್ಟ್‌ನ ಮೊದಲ ಪಿರಮಿಡ್ ರಚಿತವಾದ ಕಾಲದಲ್ಲೇ ಈ ಅಣೆಕಟ್ಟು ನಿರ್ಮಾಣಗೊಂಡಿದೆ. 10 ವರ್ಷಕ್ಕೂ ಹೆಚ್ಚು ಕಾಲ ನಡೆದ ಈ ಅಣೆಕಟ್ಟಿನ ಕಾಮಗಾರಿಗೆ 17 ಸಾವಿರ ಬೃಹದಾಕಾರದ ಕತ್ತರಿಸಿಲ್ಪಟ್ಟ ಕಲ್ಲುಗಳನ್ನು ಬಳಸಲಾಗಿದೆ. ದುರಂತವೆಂದರೆ, ಈ ಅಣೆಕಟ್ಟಿನ ನಿರ್ಮಾಣಕಾರ್ಯ ಪೂರ್ಣಗೊಳ್ಳುವ ಮುನ್ನವೇ ಅಣೆಕಟ್ಟಿನ ಒಂದು ಭಾಗ ನೈಲ್ ನದಿಯ ಪ್ರವಾಹದಲ್ಲಿ ಕೊಚ್ಚಿಹೋಯಿತು. ಈ ಅಣೆಕಟ್ಟಿನ ನಿರ್ಮಾಣದ ಉದ್ದೇಶ ಕುಡಿಯುವ ನೀರಿಗಾಗಿ ಮಾತ್ರ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಧೃಡಪಟ್ಟಿದೆ. ಅಣೆಕಟ್ಟು ನಿರ್ಮಾಣಕ್ಕೆ ಮುನ್ನವೇ ನೈಲ್ ನದಿಯ ಪ್ರಾಂತ್ಯಗಳಲ್ಲಿ ಕೃಷಿ ಪದ್ಧತಿ ಆಚರಣೆಯಲ್ಲಿತ್ತು.

ಕ್ರಿ.ಪೂ. ಒಂದನೇ ಶತಮಾನಕ್ಕೆ ಮುನ್ನ ಮಧ್ಯಪ್ರಾಚ್ಯದ ಮೆಡಿಟೇರಿಯನ್ ಪ್ರದೇಶದಲ್ಲಿ ಕಲ್ಲು ಮತ್ತು ಅಗಾಧ ಪ್ರಮಾಣದ ಮಣ್ಣು ಬಳಸಿ ಅಣೆಕಟ್ಟು ನಿರ್ಮಿಸಿರುವುದು ಕಂಡುಬಂದಿದೆ. ಇಂತಹದೇ ಕುರುಹುಗಳು ಚೀನಾ ಹಾಗೂ ಮಧ್ಯ ಅಮೆರಿಕಾ ದೇಶಗಳಲ್ಲೂ ಕಂಡುಬಂದಿದೆ.

ಅಣೆಕಟ್ಟುಗಳ ನಿರ್ಮಾಣದಲ್ಲಿ ಸುಧಾರಿತ ತಂತ್ರಜ್ಞಾನ ಪ್ರಥಮಬಾರಿಗೆ ರೋಮನ್ನರ ಯುಗದಲ್ಲಿ ಬಳಕೆಯಾಯಿತು. ಅಂದಿನ ಕಾಲದಲ್ಲಿ ರೋಮ್ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟಿದ್ದ ಸ್ಪೇನ್‌ನಲ್ಲಿ ರೋಮನ್ನರು ನಿರ್ಮಿಸಿದ್ದ ಅನೇಕ ಅಣೆಕಟ್ಟುಗಳು ಹಲವಾರು ಶತಮಾನಗಳ ಕಾಲ ಅಸ್ತಿತ್ವದಲ್ಲಿದ್ದವು. 15 ನೇ ಶತಮಾನದಲ್ಲಿ ಅಲಿಕಾಂಟ್ ಬಳಿ ಕಲ್ಲಿನಿಂದ ನಿರ್ಮಿಸಿದ ಅಣೆಕಟ್ಟು ಸುಮಾರು 3 ಶತಮಾನಗಳ ಕಾಲ ಜಗತ್ತಿನ ಅತಿದೊಡ್ಡ ಅಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾಗಿತ್ತು.

ದಕ್ಷಿಣ ಏಷ್ಯಾ ಕೂಡ ಅಣೆಕಟ್ಟು ನಿರ್ಮಾಣ ಮತ್ತು ತಂತ್ರಜ್ಞಾನದ ಬಗ್ಗೆ ದೊಡ್ಡ ಇತಿಹಾಸವನ್ನು ಹೊಂದಿದೆ. ಕ್ರಿ.ಪೂ. 4ನೇ ಶತಮಾನದಲ್ಲಿ ಶ್ರೀಲಂಕಾದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ 34 ಮೀಟರ್ ಉದ್ದದ ಅಣೆಕಟ್ಟು ಆ ಕಾಲಕ್ಕೆ ಅತಿದೊಡ್ಡ ಅಣೆಕಟ್ಟಾಗಿತ್ತು. 12ನೇ ಶತಮಾನದ ಶ್ರೀಲಂಕಾದ ದೊರೆ ಪರಾಕ್ರಮಬಾಹು ಅವಧಿಯಲ್ಲಿ ಶ್ರೀಲಂಕಾದಲ್ಲಿ 15 ಮೀಟರ್ ಎತ್ತರದ ಸುಮಾರು 4 ಸಾವಿರ ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತಿವೆ. ಗ್ರಾಮಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಕೃಷಿ ಬಳಕೆಗಾಗಿ ಲಂಕನ್ನರು ಭಾರಿ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದ್ದರು. ಇವುಗಳಲ್ಲಿ ಒಂದು ಅಣೆಕಟ್ಟು 15 ಮೀಟರ್ ಎತ್ತರ ಮತ್ತು 1.4 ಕಿ.ಮೀ. ಉದ್ದ ಇದ್ದ ಬಗ್ಗೆ ಸಮಾಜಶಾಸ್ತ್ರಜ್ಞ ಎಡ್ಮಂಡ್ ಲೀಚ್ ದಾಖಲಿಸಿದ್ದಾನೆ.

ಅಣೆಕಟ್ಟುಗಳ ನಿರ್ಮಾಣ ಮತ್ತು ತಂತ್ರಜ್ಞಾನ ಕೇವಲ ಕುಡಿಯುವ ನೀರು ಅಥವಾ ಕೃಷಿ ಬಳಕೆಗೆ ಸೀಮಿತವಾಗದೆ ಆಧುನಿಕ ಯುಗದ ಕೈಗಾರಿಗಳ ಸ್ಥಾಪನೆಗೆ ನಾಂದಿಯಾಯಿತು.

ಅಣೆಕಟ್ಟುಗಳ ಮೂಲಕ ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ಇಳಿಜಾರಿನಲ್ಲಿ ನಿರ್ಮಿಸಿದ ಚಕ್ರಗಳ ಮೇಲೆ ಕೊಳವೆಗಳ ಮೂಲಕ ಹಾಯಿಸಿ, ತಿರುಗುವ ಚಕ್ರಗಳ ಮುಖಾಂತರ ಮೆಕ್ಕೆಜೋಳವನ್ನು ಹಿಟ್ಟು ಮಾಡುವ ಪದ್ಧತಿ ಈಜಿಪ್ಟ್, ರೋಮನ್, ಸುಮೇರಿಯನ್ನರ ಕಾಲದಲ್ಲಿ ಬಳಕೆಯಲ್ಲಿತ್ತು.

ಈ ತಂತ್ರಜ್ಙಾನವನ್ನೇ ಮೂಲವನ್ನಾಗಿಟ್ಟುಕೊಂಡು ಪ್ರಾನ್ಸ್ ಮೂಲದ ಟರ್ಬೈನ್ ಎಂಬ ಇಂಜಿನಿಯರ್ 1832ರಲ್ಲಿ ಯಂತ್ರವೊಂದನ್ನು ಆವಿಷ್ಕರಿಸಿ, ವಿದ್ಯುತ್ ಉತ್ಪಾದನೆಗೆ ತಳಹದಿ ಹಾಕಿದ. ಆತ ಕಂಡುಹಿಡಿದ ಯಂತ್ರಕ್ಕೆ ಅವನ ಹೆಸರನ್ನೇ ಇಡಲಾಯಿತು.

17ನೇ ಶತಮಾನದ ವೇಳೆಗೆ ಇಂಗ್ಲೆಂಡ್, ಜರ್ಮನಿ, ಇಟಲಿ ಮುಂತಾದ ದೇಶಗಳಲ್ಲಿ ಅಣೆಕಟ್ಟುಗಳ ಕೆಳಭಾಗದಲ್ಲಿ ನಿರ್ಮಿಸಿದ ವಾಟರ್ ಮಿಲ್ ತಂತ್ರಜ್ಞಾನದಿಂದ ಕಬ್ಬಿಣ ಕುಟ್ಟುವುದು, ಜೋಳದ ಹಿಟ್ಟಿನ ತಯಾರಿಕೆ, ಕಾಗದ ಉತ್ಪಾದನೆಗೆ ಬೇಕಾದ ಪಲ್ಪ್ ತಯಾರಿಕೆ ಮುಂತಾದ ಕಾರ್ಯಗಳು ನಡೆಯುತ್ತಿದ್ದವು.

19ನೇ ಶತಮಾನದ ಪೂರ್ವದಲ್ಲಿ ಕೈಗಾರಿಕೆಗಳ ಬಳಕೆಗಾಗಿ 200 ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. 20ನೇ ಶತಮಾನದ ಪ್ರಾರಂಭದವರೆಗೆ ಹರಿಯುವ ನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಅಣೆಕಟ್ಟುಗಳಿಗೆ ಕಲ್ಲು, ಇಟ್ಟಿಗೆ, ಗಾರೆ ಬಳಸುತ್ತಿದ್ದರೂ ಕೂಡ, ಇವುಗಳ ನಿರ್ಮಾಣದ ವ್ಯವಸ್ಥೆಯಲ್ಲಿ ಯಾವುದೇ ವೈಜ್ಞಾನಿಕ ತಳಹದಿ ಇರುತ್ತಿರಲಿಲ್ಲ.

ಈ ದಿಶೆಯಲ್ಲಿ, ಅಲ್ಲಿಯತನಕ ನಿರ್ಮಿಸಲಾಗಿದ್ದ ಅಣೆಕಟ್ಟುಗಳ ಸಫಲತೆ-ವಿಫಲತೆಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿ, 1930 ರಲ್ಲಿ ಪ್ರಥಮವಾಗಿ ನದಿಯ ನೀರಿನ ಹರಿವು, ಅಣೆಕಟ್ಟು ನಿರ್ಮಿಸುವ ಸ್ಥಳದ ಮಣ್ಣಿನ ಪರೀಕ್ಷೆ, ಭೂಗರ್ಭದಲ್ಲಿನ ಕಲ್ಲುಗಳು, ಅಣೆಕಟ್ಟಿನ ನೀರಿನ ಸಂಗ್ರಹ ಹಾಗೂ ಅದರ ಒತ್ತಡದಿಂದಾಗುವ ಭೂಗರ್ಭದಲ್ಲಾಗುವ ಪರಿವರ್ತನೆ ಮುಂತಾದವುಗಳ ಕುರಿತು ಅಧ್ಯಯನ ನಡೆಸಲಾಯಿತು. ಇಂತಹ ವೈಜ್ಞಾನಿಕ ಹಾಗೂ ಕೂಲಂಕುಷ ಅಧ್ಯಯನಗಳ ನಡುವೆ ಕೂಡ ಅಣೆಕಟ್ಟುಗಳ ದುರಂತ ಸಾಮಾನ್ಯವಾಗಿತ್ತು. ಪ್ರತಿ 10 ಅಣೆಕಟ್ಟುಗಳಲ್ಲಿ ಒಂದು ಅಣೆಕಟ್ಟು ದುರಂತದಲ್ಲಿ ಪರ್ಯಾವಸಾನಗೊಳ್ಳುತ್ತಿತ್ತು.

ಪ್ರಾನ್ಸ್‌ನ ಇಂಜಿನಿಯರ್ ಟರ್ಬೈನ್ ಆವಿಷ್ಕರಿಸಿದ ವಿದ್ಯುತ್ ಯಂತ್ರದಿಂದಾಗಿ ಜಲ ವಿದ್ಯುತ್‌ಗೆ ಭಾರಿ ಬೇಡಿಕೆ ಉಂಟಾದ ಕಾರಣ ಅಮೆರಿಕಾ, ಯೂರೋಪ್ ಖಂಡಗಳಲ್ಲಿ ಸಾಕಷ್ಟು ಅಣೆಕಟ್ಟುಗಳು ನಿರ್ಮಾಣವಾದವು. 1900ರಲ್ಲಿ 30ರಷ್ಟಿದ್ದ ಅಣೆಕಟ್ಟುಗಳ ಸಂಖ್ಯೆ 1930ರ ವೇಳೆಗೆ 200ಕ್ಕೆ ತಲುಪಿತ್ತು.

ಅಮೆರಿಕಾದಲ್ಲಿ ವಿಶಾಲವಾದ ಬೃಹತ್ ಹುಲ್ಲುಗಾವಲು ಪ್ರದೇಶಗಳನ್ನು ನೀರಾವರಿಗೆ ಒಳಪಡಿಸುವ ಉದ್ದೇಶದಿಂದ ಅಣೆಕಟ್ಟುಗಳ ನಿರ್ಮಾಣ ಪ್ರಾರಂಭವಾದರೂ, ನಂತರ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗುವಂತೆ, ಜಲ ವಿದ್ಯುತ್ ಯೋಜನೆಗೆ ಒತ್ತು ನೀಡಿ ಭಾರಿ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಯಿತು.

ಅಮೆರಿಕಾ ಸರಕಾರ ಸೇನಾಪಡೆಯ ತಂತ್ರಜ್ಞರನ್ನು ಒಳಗೊಂಡ ತಂಡವೊಂದನ್ನು ರಚಿಸಿ, ಈ ತಂಡದ ಮೂಲಕ ಜಲ ವಿದ್ಯುತ್‌ಗಾಗಿ ಕಬ್ಬಿಣ-ಸಿಮೆಂಟ್ ಬಳಸಿ, 1930ರವರೆಗೆ 50 ಅಣೆಕಟ್ಟುಗಳನ್ನು ನಿರ್ಮಿಸಿ 1931 ರಲ್ಲಿ ಜಗತ್ತಿನ ಬೃಹತ್ ಅಣೆಕಟ್ಟುಗಳಲ್ಲಿ ಒಂದಾದ ಕೊಲರ್‍ಯಾಡೊ ನದಿಯ ಹೂವರ್ ಅಣೆಕಟ್ಟೆಯನ್ನು ನಿರ್ಮಾಣಮಾಡಿತು.

ಅಮೆರಿಕಾದಲ್ಲಿ ನಿರ್ಮಿಸಲಾದ ಅಣೆಕಟ್ಟುಗಳ ಮೂಲಕ ಉತ್ಪಾದಿಸಿದ ಜಲ ವಿದ್ಯುತ್ ಕೈಗಾರಿಕಾ ಕ್ರಾಂತಿಗೆ ನಾಂದಿಯಾಗುವುದರ ಜೊತೆಗೆ, ವಿಶ್ವದ ಮಹಾ ಯುದ್ಧಕ್ಕೆ ಬೇಕಾದ ಯುದ್ಧ ಸಾಮಗ್ರಿ, ವಿಮಾನಗಳ ತಯಾರಿಕೆಗೂ ಸಹಕಾರಿಯಾಯಿತು. 1945ರವರೆಗೆ ಕಲ್ಲಿದ್ದಲು ಆಧಾರಿತ ಹಾಗೂ ಅಣು ವಿದ್ಯುತ್ ಪ್ರಾರಂಭವಾಗುವವರೆಗೆ ಅಮೆರಿಕ ಸರಕಾರ ವಿದ್ಯುತ್ ಉತ್ಪಾದನೆಯನ್ನು ಗುರಿಯಾಗಿಸಿಕೊಂಡು 100ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಾಣ ಮಾಡಿತ್ತು.

ರಷ್ಯಾ ಕೂಡ ಅಣೆಕಟ್ಟುಗಳ ನಿರ್ಮಾಣದಲ್ಲಿ ಹಿಂದೆ ಬಿದ್ದಿರಲಿಲ್ಲ. ಇಲ್ಲಿ ಅಣೆಕಟ್ಟುಗಳ ನಿರ್ಮಾಣದ ಗುರಿ ಜಲ ವಿದ್ಯುತ್‌ಗಿಂತ, ನದಿಗಳ ಹುಚ್ಚು ಪ್ರವಾಹವನ್ನು ನಿಯಂತ್ರಿಸುವುದೇ ಆಗಿತ್ತು.

ರಷ್ಯಾದ ಗೂಢಾಚಾರ ಸಂಸ್ಥೆ ಕೆ.ಜಿ.ಬಿ.ಯ ನಿಯಂತ್ರಣದಲ್ಲಿ ಡೈಪಿರ್ ನದಿಗೆ 1932ರಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸಿ, ಜಲವಿದ್ಯುತ್ ತಯಾರಿಕೆಗೆ ನಾಂದಿ ಹಾಡಿತು. 1970 ರವೇಳೆಗೆ ರಷ್ಯಾದಲ್ಲಿ ಬಹುತೇಕ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿ, ಪ್ರವಾಹ ನಿಯಂತ್ರಣದೊಂದಿಗೆ 1 ಲಕ್ಷದ 20 ಸಾವಿರ ಚ.ಕಿ.ಮೀ. ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಯಿತು.

ಚಿತ್ರಗಳು : ವಿಕಿಪೀಡಿಯ