Category Archives: ಸಾಮಾಜಿಕ

ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಭವಿಷ್ಯದ ಬಗ್ಗೆ ಆಸೆ ಬಿಟ್ಟಿದ್ದವರಿಗೆ ಇದು ವಸಂತಕಾಲ ???

ನೆನ್ನೆ (5/9/2011) ಆದದ್ದು ಎಂದೋ ಆಗಬೇಕಿತ್ತು. ರಾತ್ರಿಯಲ್ಲಿ ಕಳ್ಳತನ ಮಾಡಿದವರನ್ನು ಹಿಡಿಯಲು ಆಗದೇ ಇರುವುದಕ್ಕೆ ಹಲವಾರು ಕಾರಣಗಳು, ಅಸಾಮರ್ಥ್ಯಗಳು ಕಾರಣ ಆಗಿರಬಹುದು. ಆದರೆ ಅದು ಇಡೀ ಸಮಾಜದ ಸ್ವಾಸ್ಥ್ಯವನ್ನು ಪ್ರಶ್ನಿಸುವುದಿಲ್ಲ. ವ್ಯವಸ್ಥೆಯ ಯಾವುದೋ ಒಂದು ಅಂಗಸಂಸ್ಥೆಯ ಅಸಾಮರ್ಥ್ಯವನ್ನಷ್ಟೇ ಅದು ಪ್ರಶ್ನಿಸುತ್ತದೆ. ಆದರೆ ಹಗಲುಕಳ್ಳರನ್ನು ಯಾರೂ ಹಿಡಿಯುವವರೇ ಇಲ್ಲದೇ ಹೋದಾಗ, ಮತ್ತು ಅವರೇ ಜನನಾಯಕರಾಗಿ ಹೋದಾಗ, ಅದು ವರ್ತಮಾನದ ಭೀಕರತೆಯನ್ನು ತೋರಿಸುತ್ತದೆ. ಜೊತೆಗೆ ಭವಿಷ್ಯದ ಬಗ್ಗೆ ಇಟ್ಟುಕೊಳ್ಳಬಹುದಾದ ಎಂತಹ ಆಶಾವಾದವನ್ನೂ ನಗೆಪಾಟಲಾಗಿಸುತ್ತದೆ.

ಈ ನನ್ನ ದೇಶದ ಬಗ್ಗೆ ಈಗಲೂ ನನಗೆ ಅಪರಿಮಿತ ಆಶಾವಾದವಿದೆ. ಬಳ್ಳಾರಿ ಮತ್ತು ಅದರ ಸುತ್ತಮುತ್ತ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವವರು ಇಂದಲ್ಲ ನಾಳೆ ಜನಾರ್ದನನ ಜನ್ಮಸ್ಥಾನ ಸೇರುತ್ತಾರೆ ಎಂಬ ವಿಷಯದಲ್ಲಂತೂ ನಾನು ಬಹಳವೇ ಎನ್ನುವಷ್ಟು ಆಶಾವಾದಿಯಾಗಿದ್ದೆ. ಅವರದು ಕೇವಲ ಅಕ್ರಮ ಗಣಿಗಾರಿಕೆಯಾಗಿರಲಿಲ್ಲ. ಅದರಾಚೆಗೂ ಅವರ ಪ್ರಭಾವವಿತ್ತು. ಆಟಾಟೋಪ ಭಯಭೀಕರವಾಗಿತ್ತು. ಅದು ಕಳೆದ ಐದಾರು ವರ್ಷಗಳಿಂದ ಕರ್ನಾಟಕ ಮತ್ತು ಆಂಧ್ರದ ರಾಜಕೀಯವನ್ನು ಅನೈತಿಕಗೊಳಿಸಿದ್ದೇ ಅಲ್ಲದೆ ಸಾಮಾಜಿಕ ಮೌಲ್ಯಗಳನ್ನೂ ನಾಶಗೊಳಿಸುತ್ತಾ ಬಂದಿತ್ತು. ಆದರೆ ಇಂತಹ ಕೃತ್ಯಗಳ ಆಯಸ್ಸು ಬಹಳ ವರ್ಷಗಳಿರುವುದಿಲ್ಲ ಎಂದು ಇತ್ತೀಚಿನ ಘಟನೆಗಳು ಮತ್ತೊಮ್ಮೆ ಸಾಬೀತು ಮಾಡುತ್ತಿವೆ.

ಹಗಲುಕಳ್ಳರು ಒಬ್ಬೊಬ್ಬರೇ ವಿಚಾರಣೆಗೆ ಒಳಪಡುತ್ತಿದ್ದಾರೆ. ಜೈಲಿಗೆ ಹೋಗುತ್ತಿದ್ದಾರೆ.

ದೇಶದ ರಾಜಕೀಯ ನಾಯಕರ ಸ್ಥಿತಿ ನೋಡಿ: ಈಗಾಗಲೆ ಇಬ್ಬರು ಲೋಕಸಭಾ ಸದಸ್ಯರು ಮತ್ತು ಒಬ್ಬ ರಾಜ್ಯಸಭಾ ಸದಸ್ಯೆ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಒಬ್ಬ ಲೋಕಸಭಾ ಸದಸ್ಯ ಮತ್ತು ಮತ್ತೊಬ್ಬ ರಾಜ್ಯಸಭಾ ಸದಸ್ಯ ಇಷ್ಟರಲ್ಲೇ ವಿಚಾರಣಾಧೀನ ಕೈದಿಗಳಾಗುವ ಎಲ್ಲಾ ಸಾಧ್ಯತೆಗಳೂ ಇವೆ.

ಇದೇ ಸಂದರ್ಭದಲ್ಲಿ ಕರ್ನಾಟಕದ ಸ್ಥಿತಿ ನೋಡಿ: ಒಬ್ಬ ವಿಧಾನಸಭಾ ಶಾಸಕ ಮತ್ತು ಮತ್ತೊಬ್ಬ ವಿಧಾನಪರಿಷತ್ ಶಾಸಕ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ನಿರೀಕ್ಷಣಾ ಜಾಮೀನಿಗೆ ಅಲೆಯುತ್ತಿದ್ದಾರೆ. ಇದ್ದಕ್ಕಿದ್ದಂತೆ ಕಾಯಿಲೆ ಬೀಳುತ್ತಿದ್ದಾರೆ. ಮತ್ತೊಬ್ಬ ಶಾಸಕಿಯೂ ಮಾಜಿ ಮುಖ್ಯಮಂತ್ರಿಯೊಬ್ಬರೊಂದಿಗೆ ನಿರೀಕ್ಷಣಾ ಜಾಮೀನಿಗೆ ಓಡಾಡುತ್ತಿದ್ದಾರೆ. ಬೇರೆ ಇಬ್ಬರು ಶಾಸಕರು ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯ ಕೇಸಿನಲ್ಲಿ ಸಹ ಆರೋಪಿಗಳಾಗಿದ್ಡಾರೆ. ಲೋಕಾಯುಕ್ತ ವರದಿಯ ಪರಿಣಾಮವಾಗಿ ಸಚಿವರೊಬ್ಬರ ಮಕ್ಕಳು ಅಪ್ಪನೊಡಗೂಡಿ ವಿಚಾರಣೆಗೊಳಪಡುವ ಸಾಧ್ಯತೆ ಇದೆ. ಮತ್ತೆ ಇನ್ನೂ ಎರಡು-ಮೂರು ಬಳ್ಳಾರಿ ಕಡೆಯ ಶಾಸಕರು CBI ನವರಿಂದ ಬಂಧನಕ್ಕೊಳಗಾಗಬಹುದು, ಇಲ್ಲವೇ ಲೋಕಾಯುಕ್ತ ವರದಿಯ ಆಧಾರದ ಮೇಲೆ ವಿಚಾರಣೆಗೊಳಪಡಬಹುದು. ಸಚಿವೆಯೊಬ್ಬರು ಸಹ ಈಗಾಗಲೆ ಬಂಧನದಲ್ಲಿರುವ ಮಾಜಿ ಸಚಿವರ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆಗೊಳಪಡುವ ಅಥವ ನ್ಯಾಯಾಂಗ ಬಂಧನಕ್ಕೊಳಪಡುವ ಸಾಧ್ಯತೆಯೂ ಇದೆ. ಒಬ್ಬ ರಾಜ್ಯಸಭಾ ಸದಸ್ಯನಿಗೂ ಕಾನೂನು ಕೋಳ ತೊಡಿಸಬಹುದಾಗಿದೆ.

ರಾಜಕೀಯ ನಾಯಕರಿಂದ ಭಯಾತಂಕಗಳಿಲ್ಲದೆ ನಡೆದ ಹಗಲುದರೋಡೆಗಳು, ಕಾನೂನುಬಾಹಿರ ಅಕ್ರಮಗಳು, ನ್ಯಾಯ ಕೊಡಿಸದ ಪೋಲಿಸು ಮತ್ತು ನ್ಯಾಯಾಂಗ ವ್ಯವಸ್ಥೆ, ಈ ಇಡೀ ದುಷ್ಟತನದಲ್ಲಿ ಪಾಲುದಾರರೇನೋ ಎನ್ನುವಂತೆ ಇಂತಹ ಕೃತ್ಯಗಳನ್ನೆಲ್ಲ ತಮ್ಮ ಓಟಿನ ಮೂಲಕವೆ ಬೆಂಬಲಿಸಿಕೊಂಡು ಬರುತ್ತಿದ್ದ ಬಹುಸಂಖ್ಯಾತ ಮತದಾರರು; ಇಂತಹವುಗಳೆಲ್ಲದರಿಂದ ಭವಿಷ್ಯದ ಬಗ್ಗೆ ಆಸೆ ಬಿಟ್ಟಿದ್ದವರಿಗೆ ಇದು ಆಶಾವಾದದ ವಸಂತಕಾಲ.

ಈ ಕೆಳಗಿನ ಲೇಖನ ಸುಮಾರು ನಾಲ್ಕು ವರ್ಷಗಳ ಹಿಂದೆ (2007ರ ಅಕ್ಟೋಬರ್‌ನಲ್ಲಿ) ಬರೆದದ್ದು. ನಾವು ಅನುಭವಿಸುತ್ತಾ ಬಂದ ಹತಾಶ ಸ್ಥಿತಿ ಕೇವಲ ಇತ್ತೀಚಿನದ್ದಲ್ಲ ಮತ್ತು ಈಗ ಆಗುತ್ತಿರುವ ಬಂಧನ/ವಿಚಾರಣೆಗಳಲ್ಲಿ ಕೆಲವು ನಾಲ್ಕು ವರ್ಷಗಳ ಹಿಂದೆಯೇ ಆಗಬೇಕಿತ್ತು ಎಂದು ಹೇಳುವುದಕ್ಕೆ, ಮತ್ತು ಹೀಗಾದ ನಂತರವೂ ಜನಸಾಮಾನ್ಯರ ಪ್ರತಿಕ್ರಿಯೆ ಹೇಗಿತ್ತು ಎಂದು ನೆನಪಿಸಿಕೊಳ್ಳುವುದಕ್ಕೆ ಈ ಲೇಖನ ಸಹಾಯ ಮಾಡುತ್ತದೆ. ಆ ಬಂಧನಗಳು ಆಗಲೇ ಆಗಿದ್ದಿದ್ದರೆ ರಾಜ್ಯ ಕಳೆದ ಮೂರೂವರೆ ವರ್ಷಗಳಿಂದ ಕಂಡ ಸುಲಿಗೆ, ದುರಾಡಳಿತ, ಭ್ರಷ್ಟಾಚಾರ, ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಕರ್ನಾಟಕದ ರಾಜಕೀಯವೂ ಇಷ್ಟು ಹದಗೆಡುತ್ತಿರಲಿಲ್ಲ. ಯಾರೆಲ್ಲಾ ಇದಕ್ಕೆ ಕಾರಣ?

ರವಿ ಕೃಷ್ಣಾ ರೆಡ್ಡಿ


ಬಹಿರಂಗ ಕಾಮಕೇಳಿಯಲ್ಲಿ ಜನ ಮತ್ತು ರಾಜಕಾರಣಿಗಳು – ಛೇ… ಛೀ… ಥೂ… ಅಯ್ಯೋ

ಕಳೆದ ಹಲವಾರು ವಾರಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕಾರಣ ಕೇವಲ ಅರೆಮಬ್ಬಿನ ಕೋಣೆಯಲ್ಲಷ್ಟೆ ಕಾಣಸಿಗುವ ವಿಕೃತ ರಂಜನೆಯನ್ನು ಜನರಿಗೆ ಬಹಿರಂಗವಾಗಿ ನೀಡುತ್ತಿದೆ. ಆದರೆ ತಾವು ನೋಡುತ್ತಿರುವ ಈ ವ್ಯಭಿಚಾರದ ನಾಟಕ ತಾವೆ ಸೃಷ್ಟಿಸಿದ ಒಂದು ಅಂಕ ಮತ್ತು ಅದರಲ್ಲಿ ತಾವು, ತಮ್ಮ ಮನೆಯವರು, ತಮ್ಮ ಮುಂದಿನ ಪೀಳಿಗೆಯವರೂ ಪಾಲ್ಗೊಂಡಿದ್ದಾರೆ ಎನ್ನುವುದನ್ನು ಆ ಕ್ಷಣಿಕ ಉದ್ರೇಕೋನ್ಮತ್ತ ಸ್ಥಿತಿಯಲ್ಲಿ ಜನ ಮರೆತಿದ್ದಾರೆ.

ಯಾವ ಪಕ್ಷಕ್ಕೂ ಬಹುಮತ ನೀಡದೆ, “ನೀನು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಲು ಯೋಗ್ಯ” ಎಂಬ ಸಂದೇಶವನ್ನು ಜನ ಯಾವೊಬ್ಬನಿಗೂ ನೀಡದೆ ಇದ್ದಾಗ ಕರ್ನಾಟಕದ ಎಲ್ಲಾ ನಾಚಿಕೆಗೆಟ್ಟ ರಾಜಕಾರಣಿಗಳೆಲ್ಲ ತಾನೆ ಮುಖ್ಯಮಂತ್ರಿಯಾಗಲು ಯೋಗ್ಯ ಎಂದು ಮುಂದೆ ಬಂದುಬಿಟ್ಟರು. ಇಂತಹ ಬಹುಮತವಿಲ್ಲದ ಸ್ಥಿತಿಯಲ್ಲಿ ಮಂತ್ರಿಯೊ ಮುಖ್ಯಮಂತ್ರಿಯೊ ಆಗುವಾಗ ಇರಬೇಕಾದ ಕನಿಷ್ಠ ನಾಚಿಕೆಯೂ ಇಲ್ಲದೆ ಈ ಭಂಢರು ಎಗ್ಗುಸಿಗ್ಗಿಲ್ಲದೆ ಅದಕ್ಕೆ ಜನಾಭಿಪ್ರಾಯ, ಸಿದ್ಧಾಂತ ಅಂತೆಲ್ಲ ಘೋಷಿಸಿ ಬಿಟ್ಟರು. ಜನ ಸುಮ್ಮನೆ ನೋಡುತ್ತ ನಿಂತರು.

ಲೇಖನದ ವಿಡಿಯೊ ಪ್ರಸ್ತುತಿ – ಭಾಗ 1

ತನ್ನ ಕ್ಷೇತ್ರದ ಹೊರಗೆ ಮತ್ತೊಬ್ಬ ಕಾಂಗ್ರೆಸ್ಸಿಗನನ್ನು ಗೆಲ್ಲಿಸಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್‌ನ ಅನೇಕ ಮುಖಂಡರು 224 ಶಾಸಕರನ್ನು ಪ್ರತಿನಿಧಿಸಬೇಕಾದ ಮುಖ್ಯಮಂತ್ರಿ ಹುದ್ದೆಯನ್ನು ಕೇವಲ ತಮ್ಮ ಸೀನಿಯಾರಿಟಿ ಮತ್ತು ಕಾಲು ನೆಕ್ಕುವ ನಿರ್ಲಜ್ಜ ಯೋಗ್ಯತೆಯ ಆಧಾರದ ಮೇಲೆ ತಮಗೂ ಹಕ್ಕಿದೆ ಎಂದು ಸಾಧಿಸುತ್ತಾರೆ. ಪಕ್ಷಾವಾರು ಲೆಕ್ಕಾಚಾರದಲ್ಲಿ ಜೆಡಿಎಸ್ ಶಾಸನಸಭೆಯಲ್ಲಿ ಮೂರನೇ ಸ್ಥಾನದಲ್ಲಿದ್ದರೂ ಅದರ ನಾಯಕನಿಗೆ ತಾನೆ ಮುಖ್ಯಮಂತ್ರಿಯಾಗಬೇಕು. ತನ್ನ ಪಕ್ಷ ಮೊದಲೆರಡು ಸ್ಥಾನದಲ್ಲಿ ಇಲ್ಲದಿದ್ದರೂ ಅವರ ಪ್ರಕಾರ ತನ್ನನ್ನು ಮುಖ್ಯಮಂತ್ರಿ ಮಾಡದ ಜನ ಮತ್ತು ಪಕ್ಷ ವಿಶ್ವಾಸದ್ರೋಹಿಗಳು. ಪಕ್ಷ ಬಿಟ್ಟ ಅವರ ಹಿಂದೆ ಹೋಗಿದ್ದು ಕೇವಲ ಏಳು ಜನ ಮಾತ್ರ. ನಲವತ್ತು ಶಾಸಕರನ್ನು ಬೆನ್ನ ಹಿಂದೆ ಇಟ್ಟುಕೊಂಡವರೆಲ್ಲ ಸಮಗ್ರ ಕರ್ನಾಟಕದ ಪರಮೋಚ್ಚ ಪ್ರತಿನಿಧಿ. ಜಾತ್ಯತೀತ, ಕೋಮುವಾದ, ಭ್ರಷ್ಟಾಚಾರ, ಪ್ರಜಾಪ್ರಭುತ್ವ ಇವೆಲ್ಲ ತಮಗೆ ಬೇಕೆಂದಾಗ ಬದಲಾಯಿಸಿಕೊಳ್ಳಬಲ್ಲ ಆಟದ ನಿಯಮಗಳು. ಕಾಮಾತುರದಲ್ಲಿ ಮೂತಿಮುಖ ನೋಡದೆ ಸಂಗ ಮಾಡಿಬಿಟ್ಟು, ತೀಟೆ ತೀರಿದ ನಂತರ, “ಅಯ್ಯೋ, ನೀನು ‘ಕುಂಕುಮ’ ಇಟ್ಟುಕೊಂಡ ಹೊಲಸು ಎಂದು ಗೊತ್ತೇ ಇರಲಿಲ್ಲ,” ಎಂದು ಹೇಳುವ ಸಮಯಸಾಧಕರೆಲ್ಲ “ಹಿಂದಿನ ಅರವತ್ತು ವರ್ಷಗಳಲ್ಲಿ ಯಾರೂ ಮಾಡಿರದಷ್ಟು ಕೆಲಸ ಮಾಡಿರುವ ಮಹಾನ್ ಸಾಧಕರು!” ನೈತಿಕತೆಯ ವಿಷಯಕ್ಕೆ ಬಂದರೆ, ಅದು ನಿಜವೆ.

ಅದು 1999 ರ ವಿಧಾನಸಭಾ ಚುನಾವಣೆಯ ಸಮಯ. ತಾನೆ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿಯ ಆ ಕುಂಕುಮಧಾರಿ ರಾಜ್ಯದಲ್ಲೆಲ್ಲ ತಮ್ಮನ್ನು ಬಿಂಬಿಸಿಕೊಂಡು ಬಂದರು. ವಿಶೇಷವಾದ ಸೂಟುಗಳನ್ನು ಸಹ ಹೊಲಿಸಿಕೊಂಡು ಬಿಟ್ಟಿದ್ದಾರೆ ಎಂಬ ಪುಕಾರಿತ್ತು. ನೋಡಿದರೆ ಅವರ ಕ್ಷೇತ್ರದ ಜನರೆ ಆ ಬಾರಿ ಅವರನ್ನು ಶಾಸಕರನ್ನಾಗಿ ಮಾಡಲಿಲ್ಲ. ಅವರ ಪಕ್ಷಕ್ಕೆ ಸಿಕ್ಕಿದ್ದು ಕೇವಲ 44 ಸ್ಥಾನಗಳು. 2004 ರ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಮೊದಲ ಸ್ಥಾನವೇನೊ ಬಂತು. ಆದರೆ ಅದು ಕೇವಲ ಮೂರನೆ ಒಂದು ಭಾಗದಷ್ಟು ಸ್ಥಾನಗಳು ಮಾತ್ರ. “ಮುಖ್ಯಮಂತ್ರಿ ಸ್ಥಾನ ಬೇಡ, ಕೊನೆಗೆ ಮಂತ್ರಿ ಸ್ಥಾನ ಕೊಟ್ಟರೂ ಪರವಾಗಿಲ್ಲ, ನಿಮ್ಮ ಪಕ್ಷಕ್ಕೆ ಬಂದುಬಿಡುತ್ತೇನೆ,” ಎಂದು ಕೇವಲ ಇಪ್ಪತ್ತು ತಿಂಗಳ ಹಿಂದಷ್ಟೆ ಕಾಂಗ್ರೆಸ್ ಮತ್ತು ಜನತಾದಳಗಳೆರಡರ ಕಾಲಿಗೂ ಬಿದ್ದಿದ್ದರು. ಈಗಲೂ ವಂಚನೆ, ವಚನಭ್ರಷ್ಟತೆ ಎಂದೆಲ್ಲ ಹಾರಾಡುತ್ತ ತುಮಕೂರಿನಲ್ಲಿ ಭಾಷಣ ಬಿಗಿಯಲು ಕುಳಿತಿದ್ದರು. “ನಿಮ್ಮನ್ನೆ ಮುಖ್ಯಮಂತ್ರಿ ಮಾಡುತ್ತೇವೆ, ಬನ್ನಿ” ಎಂದದ್ದೆ ಬೆಂಗಳೂರಿನಿಂದ ಕೇವಲ 70 ಕಿ.ಮಿ. ದೂರದಲ್ಲಿರುವ ತುಮಕೂರಿನಿಂದ ಹೆಲಿಕಾಪ್ಟರ್‌ನಲ್ಲಿ ಓಡೋಡಿ ಬಂದರು. ತಮ್ಮ ನಾಲಿಗೆಯಿಂದ ಹೊರಳಿದ ವಾಕ್ಯವನ್ನು ಕೇಳಿರುವ ಲಕ್ಷಾಂತರ ಜನರಿಗೆ “ನನ್ನ ಮಾತನ್ನು ಮಾಧ್ಯಮದವರು ತಿರುಚಿದ್ದಾರೆ, ನಾನು ಹಾಗೆ ಹೇಳಿಯೆ ಇಲ್ಲ,” ಎನ್ನುವವರಿಗೆಲ್ಲ ಇನ್ನೊಬ್ಬರ ವಚನಭ್ರಷ್ಟತೆಯ ಬಗ್ಗೆ, ವಿಶ್ವಾಸದ್ರೋಹದ ಬಗ್ಗೆ ಮಾತನಾಡುವಷ್ಟು ನಿರ್ಲಜ್ಜತೆ, ಅಹಂಕಾರ, ನೈತಿಕ ಹಕ್ಕು!

ಕ್ಷುದ್ರಮತಿಗಳ ಮತೀಯ ಸಂಘರ್ಷವನ್ನು ತಮ್ಮ ರಾಜಕಾರಣಕ್ಕೆ ಉಪಯೋಗಿಸುವ ಧರ್ಮಭ್ರಷ್ಟ ಪಕ್ಷದ ಬಗ್ಗೆ ಇನ್ನೊಂದು ಮಾತು. ಜನಾರ್ದನ ರೆಡ್ಡಿಯನ್ನು ಅಮಾನತು ಮಾಡಿದ್ದೇವೆ ಅನ್ನುತ್ತಾರೆ; ಮೊನ್ನೆಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಪಕ್ಷದ ಮುಖಂಡತ್ವ ರೆಡ್ಡಿಯದೆ. ತನ್ನ ವ್ಯಭಿಚಾರದಿಂದಾಗಿ ಟೀವಿ ನೋಡುವ ಕನ್ನಡನಾಡಿನ ಚಿಕ್ಕಮಕ್ಕಳಿಗೂ ತಾನು ನಟಿಸಿರುವ ಬ್ಲೂಫಿಲಂ ಚಿತ್ರಗಳನ್ನು ತೋರಿಸಿದ ರೇಣುಕಾಚಾರ್ಯ ಎಂಬ ಕಾಮುಕಾಚಾರ್ಯರನ್ನು ತಮ್ಮ ಧಾರ್ಮಿಕ ಪಕ್ಷದಿಂದ ಅಮಾನತು ಮಾಡಿದ್ದೇವೆ ಅಂದಿದ್ದರು; ಆದರೆ ವಾರದ ಹಿಂದೆ ಅಧಿಕಾರದಾಹಿ ಯಡಿಯೂರಪ್ಪ ನಿಮಿಷಕ್ಕೊಂದು ಮಾತು ಹೇಳುತ್ತ ಟೀವಿಯವರ ಮುಂದೆ ಕಾಣಿಸಿಕೊಳ್ಳುತ್ತಿದ್ದಾಗ ಪ್ರತಿಸಲವೂ ಅವರ ಹಿಂದೆ ಬಾಡಿಗಾರ್ಡ್ ತರಹ ಕಾಣಿಸಿಕೊಳ್ಳುತ್ತಿದ್ದದ್ದು ಅದೇ ರೇಣುಕಾಚಾರ್ಯ. ಐದೂವರೆ ಕೋಟಿ ಜನರಿಗೆ ಹೀಗೆ ಹಿಮಾಲಯ ಗಾತ್ರದ ವಚನವಂಚನೆ ಮಾಡುತ್ತಿರುವ, ಅದನ್ನು ಸಮರ್ಥಿಸಿಕೊಳ್ಳುತ್ತಿರುವ ಈ ಜನರಿಗೆ ರಾಮನ ಬಗ್ಗೆ, ಬಸವಣ್ಣನ ಬಗ್ಗೆ, ವಚನಪರಿಪಾಲನೆ ಬಗ್ಗೆ ಮಾತನಾಡುವ ಪ್ರಾಥಮಿಕ ಯೋಗ್ಯತೆ ಇದೆಯೆ?

ಕೊಳಕರಿಗೆಲ್ಲ ಆರತಿ ಎತ್ತುವ ಹೆಂಗಸರು:

ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಹಿಂದೆಂದಿಗಿಂತಲೂ ಹೆಚ್ಚು ಹಣವನ್ನು ಕರ್ನಾಟಕದ ಜನ ನೋಡುತ್ತಿದ್ದಾರೆ. ಅದೇ ಮೂಲಕಾರಣವಾಗಿ, ಹಣದ ಹೊರತಾಗಿ ಮಿಕ್ಕ ಯಾವ ಯೋಗ್ಯತೆಯೂ ಇಲ್ಲದ ಸ್ಕೌಂಡ್ರಲ್‌ಗಳು, ರೋಗ್‌ಗಳೆಲ್ಲ ತಮ್ಮ ವೈಯಕ್ತಿಕ ಐಡೆಂಟಿಟಿಗಾಗಿ ಚುನಾವಣೆಗೆ ಇಳಿಯುತ್ತಿದ್ದಾರೆ. ಚುನಾವಣೆ ಬಂತು ಎಂದರೆ ಜನರಿಗೆ ಊರಹಬ್ಬ. ಅನೇಕರ ಮನೆಗಳು ಗುಂಡಿನ ಗಡಂಗುಗಳಾಗಿ ಬದಲಾಗಿ ಬಿಡುತ್ತವೆ. ಗಂಡಸರಿಗೆ ಯಥೇಚ್ಚವಾಗಿ ಗುಂಡು ತುಂಡಿನ ಸರಬರಾಜು. ಓಟಿನ ಭಿಕ್ಷೆ ಬೇಡುತ್ತ ಬರುವವನಿಗಾಗಿ ಕಾಯುತ್ತ ಕುಳಿತ ಗರತಿಯರು ಕೊಳಕರಿಗೆಲ್ಲ ಆರತಿ ಎತ್ತುತ್ತಾರೆ. ತಟ್ಟೆಯಲ್ಲಿ ಅವನು ಹಾಕಿದ ನೋಟು ನೂರು ರೂಪಾಯಿಯದೊ ಐದುನೂರು ರೂಪಾಯಿಯದೊ ಎಂಬ ಚಿಂತೆ ಈ ನಾರಿಯರಿಗೆ. 

ತನ್ನ ಗಂಡ ರಾಜ್ಯದ ಮುಖ್ಯಮಂತ್ರಿಯಾಗಿದ್ದರೆ ನಡುಬೀದಿಯಲ್ಲಿ ಓಟು ಕೇಳುವ ಮತ್ತು ಆರತಿ ತಟ್ಟೆಗಳಿಗೆ ನೋಟು ಹಾಕುವ ತಲೆಹಿಡುಕ ಕೆಲಸ ರಾಜ್ಯದ ಮುಖ್ಯಮಂತ್ರಿಯ ಹೆಂಡತಿಯೆ ಮಾಡುತ್ತಿರುತ್ತಾಳೆ.

ಸುಮಾರು ನಲವತ್ತು ವರ್ಷದ ಹಿಂದೆ ಆಗಿದ್ದು ಇದು. ನನ್ನೂರಿನ ಆ ಹಿರಿಯರು ಸ್ವಾತಂತ್ರ್ಯದ ಸಮಯದಲ್ಲಿಯೆ ಕ್ರಿಯಾಶೀಲರಾಗಿದ್ದವರು. ತಮ್ಮ ಮುವ್ವತ್ತರ ವಯಸ್ಸಿಗೆಲ್ಲ ನಮ್ಮ ತಾಲ್ಲೂಕಿನಲ್ಲಿ ಹೆಸರುವಾಸಿಯಾಗಿದ್ದವರು. ಅವರಿಗೆ ಕೊಡಬೇಕಿದ್ದ ಎಂ.ಎಲ್.ಎ. ಸೀಟನ್ನು ಕಾಂಗ್ರೆಸ್ ಪಕ್ಷ ಪಕ್ಕದ ರಾಜ್ಯದ ಮುಖ್ಯಮಂತ್ರಿಯ ಅಳಿಯನಿಗೆ ಕೊಟ್ಟುಬಿಟ್ಟಿತು. ಇವರು ಪಕ್ಷೇತರರಾಗಿ ನಿಂತರು. ಜಿದ್ದಾಜಿದ್ದಿಯ ಚುನಾವಣೆ ಅದು. ಕಾಂಗ್ರೆಸ್‌ನಿಂದ ಏನನ್ನು ನಿಲ್ಲಿಸಿದರೂ ಗೆಲ್ಲುತ್ತಿದ್ದ ಆ ಸಮಯದಲ್ಲಿ ಇವರು ಕಾಂಗ್ರೆಸ್‌ಗೆ ಸೋತಿದ್ದು ಕೇವಲ ಮೂರಂಕಿಯ ಮತಗಳ ಅಂತರದಿಂದ. ಆಗ ಗೆದ್ದ ಅಭ್ಯರ್ಥಿ ನನ್ನ ಕ್ಷೇತ್ರದ ಜನರನ್ನು ಕುರಿತು ಒಂದು ಮಾತು ಹೇಳಿದನಂತೆ: “ಈ ಕ್ಷೇತ್ರದವರು ದುಡ್ಡು ಕೊಟ್ಟರೆ ಹೆಂಡತಿಯರನ್ನು ಬೇಕಾದರೂ ಕೊಟ್ಟುಬಿಡುತ್ತಾರೆ.”

ಹತ್ತು ತಿಂಗಳ ಹಿಂದೆ ಕರ್ನಾಟಕದಲ್ಲಿ ಒಂದು ಶಾಸಕ ಸ್ಥಾನಕ್ಕೆ ಚುನಾವಣೆ ಆಯಿತು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಅದು. ಸಿದ್ಧರಾಮಯ್ಯ ಹಲವಾರು ವರ್ಷಗಳಿಂದ ರಾಜಕೀಯದಲ್ಲಿರುವವರು. ಶುರುವಿನಲ್ಲಿ ಇವರದು ಹೋರಾಟದ ರಾಜಕೀಯವೆ. ಮಂತ್ರಿಯಾಗಿ ಹಲವಾರು ವರ್ಷ “ಸೇವೆ”ಯನ್ನೂ ಸಲ್ಲಿಸಿದ್ದಾರೆ. ಒಂದು ವರ್ಷಕ್ಕೂ ಹೆಚ್ಚಿನ ಕಾಲ ಉಪಮುಖ್ಯಮಂತ್ರಿ ಆಗಿದ್ದವರು. ಕರ್ನಾಟಕದ ಶಾಸನಸಭೆಯಲ್ಲಿ ಇವರಿಗಿಂತ ನೀಚರೂ, ಭ್ರಷ್ಟರೂ, ದುಷ್ಟರೂ, ಅವಿವೇಕಿಗಳೂ, ಅಜ್ಞಾನಿಗಳೂ, ಅನರ್ಹರೂ ಶಾಸಕರಾಗಿರುವಾಗ ಇವರೂ ಒಬ್ಬ ಶಾಸಕರಾಗಿ ಅಲ್ಲಿದ್ದರೆ ನಾಡಿಗೆ ಸ್ವಲ್ಪಮಟ್ಟಿಗೆ ಕ್ಷೇಮವೆ. ಆದರೆ, ಕೇವಲ ಜಾತಿಬಲದಿಂದ, ದುಡ್ಡಿನ ಬಲದಿಂದ, ಅಧಿಕಾರಪಕ್ಷ ಬಲದಿಂದ ಇವರೆದುರು ಚುನಾವಣೆಗೆ ನಿಂತ ಶಿವಬಸಪ್ಪನವರಿಗೆ ಸಂವಿಧಾನದತ್ತ ಹಕ್ಕಿನ ಯೋಗ್ಯತೆ ಬಿಟ್ಟರೆ ಶಾಸಕರಾಗಲು ಸಿದ್ಧರಾಮಯ್ಯನವರಿಗಿಂತ ಇನ್ಯಾವ ತರಹದ ಹೆಚ್ಚಿನ ಯೋಗ್ಯತೆ ಇತ್ತು ಎನ್ನುವುದು ಉತ್ತರವಿಲ್ಲದ ಪ್ರಶ್ನೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ಹತ್ತಾರು ಕೋಟಿ ರೂಪಾಯಿಗೂ ಹೆಚ್ಚಿನ ಹಣ ಹರಿಯಿತು ಎನ್ನುವ ಆ ಉಪಚುನಾವಣೆಯಲ್ಲಿ ಸಿದ್ಧರಾಮಯ್ಯ ಕೇವಲ 257 ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರೆ ಆ ಕ್ಷೇತ್ರದ ಜನ ಇನ್ನೆಂತಹ ಪ್ರಲೋಭನೆಗೆ, ನೈತಿಕ ಭ್ರಷ್ಟತೆಗೆ, ತಲೆಹಿಡುಕತನಕ್ಕೆ ಒಳಗಾಗಿರಬೇಡ? ಇಲ್ಲಿ ಸಿದ್ಧರಾಮಯ್ಯನವರೇನೂ ಕಮ್ಮಿ ಇಲ್ಲ. ಕಾಂಗ್ರೆಸ್‌ನಲ್ಲಿರುವ ಜಾತಿಬಲದ, ಹಣಬಲದ ಲೂಟಿಕೋರ ಭ್ರಷ್ಟರನ್ನೆಲ್ಲ ತಮ್ಮ ಕ್ಷೇತ್ರಕ್ಕೆ ಕರೆತಂದು ತಮ್ಮ ಪರ ಕೋಟ್ಯಾಂತರ ರೂಪಾಯಿ ಚೆಲ್ಲಲು ದಾರಿಮಾಡಿಕೊಡುತ್ತಾರೆ. ಕಾಂಗ್ರೆಸ್ಸಿನ ರಾಜ್ಯಘಟಕದ ಅಧ್ಯಕ್ಷರೆ ಕಾರಿನಲ್ಲಿ ಹತ್ತಾರು ಲಕ್ಷ ಕ್ಯಾಷ್‌ನೊಂದಿಗೆ ಸಿಕ್ಕಿ ಬೀಳುತ್ತಾರೆ. ವಾರೆವ್ಹಾ. ಜನರನ್ನು ಭ್ರಷ್ಟರನ್ನಾಗಿಸಲು ಸಮಬಲದ ಪೈಪೋಟಿ! ಅಷ್ಟೆಲ್ಲ ಕೋಟಿ ಹಣ ಆ ಒಂದೇ ಒಂದು ಕ್ಷೇತ್ರದಲ್ಲಿ ಹರಿಯಿತು ಅಂದರೆ ಆ ಕ್ಷೇತ್ರದ ಜನರಿಗೆ ಈ ತಲೆಹಿಡುಕರು ಎಷ್ಟೊಂದು ಸಲ ತಲೆ ನೀವಿರಬೇಡ? ಬಹುಶಃ ಅಲ್ಲಿ ಸೋತವರು ಕೊನೆಯಲ್ಲಿ ಹೀಗೆಯೂ ಹೇಳಿರಬಹುದಲ್ಲವೆ: “ಈ ಕ್ಷೇತ್ರದ ಜನ ತಮ್ಮ ಮನೆಯವರನ್ನು ಹರಾಜಿಗೆ ಇಟ್ಟು ಯಾರು ಹೆಚ್ಚಿಗೆ ದುಡ್ಡು ಕೊಡುತ್ತಾರೊ ಅವರಿಗೆ ಮಾತ್ರ ಕೊಡುತ್ತಾರೆ. ಮುಂದಿನ ಸಲ ಇನ್ನೂ ಹೆಚ್ಚಿನ ದುಡ್ಡಿನೊಂದಿಗೆ ಬಂದು ನಾವೆ ಮಜಾ ಮಾಡೋಣ!”

ಛೇ. ಇದನ್ನೆಲ್ಲ ನೋಡಿದರೆ ನಮ್ಮ ನಾಡಿನ ಅನೇಕ ಸಜ್ಜನರ ಮನೆಗಳು ಮನೆಯವರೆಲ್ಲ ವ್ಯಭಿಚಾರಕ್ಕೆ ಇಳಿದ ವೇಶ್ಯಾಗೃಹಗಳಾಗಿ ಪರಿವರ್ತನೆಯಾಗಿ ಬಿಟ್ಟಿವೆ ಎಂದರೆ ಅದು ಅಪಚಾರವೆ?

ಜೈಲಿಗೆ ಹೋಗದ ಗಣಿ ರೆಡ್ಡಿ ಅಂಡ್ ಕೊ ಅಥವ ಕುಮಾರಸ್ವಾಮಿ ಅಂಡ್ ಕೊ.:

ನಮ್ಮ ಪತ್ರಿಕೆಯ (ವಿಕ್ರಾಂತ ಕರ್ನಾಟಕ) ಸೆಪ್ಟೆಂಬರ್ 29, 2006 ರ ಸಂಚಿಕೆಯಲ್ಲಿನ ನನ್ನ ಅಂಕಣ ಲೇಖನದ ಶೀರ್ಷಿಕೆ, “ಗೃಹಖಾತೆ ಎನ್ನುವುದು ಒಂದಿದೆಯೆ?” ಅದರಲ್ಲಿ ಆಗ ತಾನೆ ಹೊರಗೆ ಬಂದಿದ್ದ ಗಣಿ ಹಗರಣವನ್ನು ಕುರಿತು ಹೀಗೆ ಬರೆದಿದ್ದೆ: “(ಗಣಿ ಹಗರಣದ ವಿಡಿಯೊ ಸೀಡಿಗಳಲ್ಲಿರುವುದು) ನಿಜವಾದ ವಿಡಿಯೊ ಚಿತ್ರವೊ ಇಲ್ಲಾ ಕೃತಕವಾಗಿ ತಯಾರಿಸಿದ್ದೊ ಎಂದು ನಮ್ಮ ಪೋಲಿಸ್ ಇಲಾಖೆ ಇಲ್ಲಿಯವರೆಗೆ ತಿಳಿದುಕೊಳ್ಳಲಾಗಲಿಲ್ಲ ಎಂದರೆ ಇಂತಹ ಅನಾದಿಕಾಲದ ತಂತ್ರಜ್ಞಾನ ಹೊಂದಿರುವವರ ಕೈಯಲ್ಲಿ ನಮ್ಮ ಭವಿಷ್ಯದ ಸುರಕ್ಷತೆಯನ್ನು ಕನಸುವುದಕ್ಕಿಂತ ಹಗಲು ಕನಸು ಬೇರೊಂದಿಲ್ಲ. ಅವು ಕೃತಕವೇ ಆಗಿರಲಿ, ಇಲ್ಲವೆ ನೈಜದ್ದೆ ಆಗಿರಲಿ, ಅವುಗಳ ಮೂಲ ಎಲ್ಲಿಯದು ಎನ್ನುವುದನ್ನು ಪೋಲಿಸ್ ಇಲಾಖೆ ಇಷ್ಟೊತ್ತಿಗೆ ಕಂಡು ಹಿಡಿದು ಜನಕ್ಕೆ ತಿಳಿಸಬೇಕಿತ್ತು. ಅದು ಕೃತಕವೇ ಆಗಿದ್ದಲ್ಲಿ ಈ ಸೀಡಿ ಪ್ರಕರಣ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಅತಿ ದೊಡ್ಡ ವಂಚನೆ. ಹಾಗಿದ್ದ ಪಕ್ಷದಲ್ಲಿ ಜನಾರ್ದನ ರೆಡ್ಡಿ ಬಳ್ಳಾರಿಯ ಮನೆಯಲ್ಲಲ್ಲ, ಅಲ್ಲಿನ ಜೈಲಿನಲ್ಲಿ ಕಂಬಿ ಎಣಿಸಬೇಕು. ಸೀಡಿಯಲ್ಲಿರುವುದು ನಿಜವೇ ಆಗಿದ್ದಲ್ಲಿ ಚೆನ್ನಿಗಪ್ಪ, ಪ್ರಕಾಶ್, ಕುಮಾರಸ್ವಾಮಿಯಾದಿಯಾಗಿ ಹತ್ತಾರು ಜನ ತಮ್ಮ ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗದ ಪ್ರಯಕ್ತ ಬೆಂಗಳೂರಿನ ವಿಧಾನಸೌಧದಲ್ಲಲ್ಲ, ಪರಪ್ಪನ ಅಗ್ರಹಾರದ ಕಾರಾಗೃಹದ ಕತ್ತಲು ಕೋಣೆಯಲ್ಲಿ ತಮ್ಮ ಕೊನೆಗಾಲದ ತನಕ ಕಾಲ ತಳ್ಳಬೇಕು. ಇವೆರಡರಲ್ಲಿ ಒಂದು ಆಗಲೇಬೇಕು. ಇಲ್ಲದಿದ್ದಲ್ಲಿ ಕರ್ನಾಟಕದಲ್ಲಿ ಕಾನೂನು, ನ್ಯಾಯ, ಆಡಳಿತ, ನೈತಿಕತೆ ಸತ್ತಿದೆ ಎಂದೇ ಅರ್ಥ. ನೀವು ಈ ಮಾತಿಗೆ ನಗುತ್ತಿರುವಿರಿ ಎಂದಾದರೆ, ಇವೆಲ್ಲ ನಮ್ಮಲ್ಲಿ ಎಂದೋ ಸತ್ತಿವೆ ಮತ್ತು ನಮಗೆ ಅವುಗಳ ಅವಶ್ಯಕತೆಯಿಲ್ಲ ಹಾಗೂ ನಾನು ಅಸಾಧ್ಯವನ್ನು ಬಯಸುವ ಹಗಲುಗನಸಿನ ಆಶಾವಾದಿ ಎಂದರ್ಥ, ಅಲ್ಲವೆ?”

ಈ ಹಗರಣ ಬಯಲಿಗೆ ಬಂದು ಈಗ ಒಂದು ವರ್ಷಕ್ಕೂ ಮೇಲಾಗಿದೆ. ಕುಮಾರಸ್ವಾಮಿ/ಚೆನ್ನಿಗಪ್ಪ/ಪ್ರಕಾಶ್ ಗುಂಪಿನ ಯಾರೊಬ್ಬರಿಗೂ ಮತ್ತು ಜನಾರ್ದನ ರೆಡ್ಡಿಯ ಗುಂಪಿನ ಯಾರೊಬ್ಬರೂ ಜೈಲಿನಲ್ಲಿಲ್ಲ. ಯಾವ ತರಹದ ಕಾನೂನು, ಧರ್ಮ ಮತ್ತು ನೈತಿಕತೆಯ ಪಾಠವನ್ನು ನಾವು ನಮ್ಮ ಮಕ್ಕಳಿಗೆ ಮಾಡುತ್ತಿದ್ದೇವೆ ಎಂಬ ಕಿಂಚಿತ್ ನೋವೂ ಜನಮಾನಸದಲ್ಲಿ ಇದ್ದಂತಿಲ್ಲ. ಇದ್ದರೂ ಅದು ಸಾಂಘಿಕವಾಗಿ ಪ್ರಕಟವಾಗಿಲ್ಲ.

ಮಠಾಧೀಶರಿಗೆ ಈ ಅಧಿಕಾರ ಕೊಟ್ಟವರು ಯಾರು?

ಕರ್ನಾಟಕದ ಯಾವೊಬ್ಬ ಮೇಲ್ಜಾತಿಯ ಮಠಾಧೀಶರಾಗಲಿ ಇಲ್ಲಿಯವರೆಗೂ ಓಟು ಹಾಕಿರುವುದು ಸಂಶಯದ ವಿಚಾರ. ಜನಾಡಳಿತದ ಮೂಲಭೂತ ಪ್ರಕ್ರಿಯೆಯಲ್ಲಿಯೇ ಪಾಲ್ಗೊಳ್ಳದ ಇವರಿಗೆ ಹಸ್ತಾಂತರದ ಬಗ್ಗೆ ಮಾತನಾಡಲು ಯಾವ ಹಕ್ಕಿದೆ? ಒಂದೆರಡು ಜಾತಿಗಳ ಜನರಲ್ಲಿ ಜನವಿರೋಧಿ ಜಾತಿಭಾವನೆ ಪೋಷಿಸುವ, ಜಾತಿಮೂಲ ಹಿಡಿದು ಜನವಿಭಜನೆ ಮಾಡುವ ಇವರಿಗೆ ಸಮಗ್ರ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೇಳುವ ಹಕ್ಕು ಬಂದಿದ್ದಾದರೂ ಹೇಗೆ? ಯಡಿಯೂರಪ್ಪನವರಿಗಾದ ಸ್ಥಿತಿ ಸಿದ್ಧರಾಮಯ್ಯನವರಿಗೊ, ಖರ್ಗೆಗೊ ಆಗಿದ್ದರೆ ಅವರು ಈ ರೀತಿ ಮಾತನಾಡುತ್ತಿದ್ದರೆ? “ನೀವು ಮಾಡಿದ್ದು ನನಗಿಷ್ಟವಾಗಿಲ್ಲ” ಎಂದು ನೇರವಾಗಿ ಹೇಳಲಾಗದ ಸಿದ್ಧಗಂಗಾ ಸ್ವಾಮಿಗಳು ಯಡಿಯೂರಪ್ಪನವರ ಸ್ಥಾನದಲ್ಲಿ ಕೆ.ಎಸ್. ಈಶ್ವರಪ್ಪ ಇದ್ದಿದ್ದರೆ ಧರ್ಮಯಾತ್ರೆ ಎಂಬ ಭೀಕರ ಜೋಕ್‌ಗೆ ಆಶೀರ್ವಾದ ಮಾಡುತ್ತಿದ್ದರೆ? ದಸರಾ ಉದ್ಘಾಟನೆಯನ್ನು ನಿರಾಕರಿಸುವುದಕ್ಕೆ ಈ ಶತಾಯುಷಿಗಳು ರಾಜಕಾರಣಿಗಳ ತರಹ ಆರೋಗ್ಯದ ಕಾರಣ ನೀಡುತ್ತಿದ್ದರೆ? ಕುಮಾರಸ್ವಾಮಿಯ ಬದಲಿಗೆ ಒಕ್ಕಲಿಗನಲ್ಲದ ಮತ್ತೊಬ್ಬ ಮುಖ್ಯಮಂತ್ರಿ ಆಗಿದ್ದಿದ್ದರೆ ಬಾಲಗಂಗಾಧರ ಸ್ವಾಮಿಗಳು ಇಷ್ಟೆಲ್ಲ ರಾದ್ಧಾಂತಗಳ ನಡುವೆ ದಸರಾ ಉದ್ಘಾಟನೆಗೆ ಒಪ್ಪಿಕೊಳ್ಳುತ್ತಿದ್ದರೆ?

ಕರ್ನಾಟಕದ ಜನಸಂಖ್ಯೆಯಲ್ಲಿ ಲಿಂಗಾಯತರ ಸಂಖ್ಯೆ ಮುಕ್ಕಾಲು ಕೋಟಿಯ ಆಸುಪಾಸು ಎನ್ನುತ್ತದೆ ಆಗೀಗ ಪ್ರಕಟಗೊಳ್ಳುವ ಜಾತಿವಾರು ಸಂಖ್ಯೆ. ಆದರೆ ಈ ಮಧ್ಯೆ ಕೆಲವು ಲಿಂಗಾಯತ ಮುಖಂಡರು ಎರಡೂವರೆ ಕೋಟಿ ಲಿಂಗಾಯತರಿಗೆ ಮೋಸ, ಮೂರೂವರೆ ಕೋಟಿ ಲಿಂಗಾಯತರಿಗೆ ಮೋಸ ಎನ್ನುತ್ತಿದ್ದಾರೆ. ಆ ಅಸಂಬದ್ಧ ಸುಳ್ಳುಹೇಳಿಕೆಗಳನ್ನು ಕೆಲವು ಪತ್ರಿಕೆಗಳು ಪ್ರಕಟಿಸಿಯೂ ಬಿಟ್ಟಿವೆ. ಜಾತಿಜಾತಿ ಎನ್ನುವ ಈ ಸಂಕುಚಿತ ಕೋಮುವಾದಿಗಳಿಗೆ ಕನಿಷ್ಟ ತಮ್ಮ ಜಾತಿಯ ಜನ ಈಗ ಎಷ್ಟಿದ್ದಾರೆ ಎನ್ನುವ ಸಾಮಾನ್ಯಜ್ಞಾನವೂ ಇಲ್ಲ. ಇನ್ನು ಇವರಿಗೆ ನಿಜಕ್ಕೂ 800 ವರ್ಷಗಳ ಹಿಂದಿನ ಬಸವಣ್ಣನ ಬಗ್ಗೆ ಗೊತ್ತಿದೆಯೆ? ಹೋಗಲಿ, “ಹುಸಿಯ ನುಡಿಯಲು ಬೇಡ” ಎಂದ ಆತನ ಬಗ್ಗೆ ಕನಿಷ್ಟ ಗೌರವವಾದರೂ ಈ ಬಸವದ್ರೋಹಿಗಳಿಗೆ ಇದೆಯೆ?

ಹೀನ ಸಂದರ್ಭದಲ್ಲಿ ನಾವು:

ಈಗ ಒಂದು ನಿಮಿಷ ಯೋಚನೆ ಮಾಡೋಣ. ಈ ಪರಿಸ್ಥಿತಿಯನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸಿಕೊಳ್ಳದೆ ಭಾರತದ ಹಿನ್ನೆಲೆಯಲ್ಲಿಯೇ ನೋಡೋಣ. ಪ್ರಜಾಪ್ರಭುತ್ವದ ಅರ್ಥವೇ ಗೊತ್ತಿಲ್ಲದ, ರಾಷ್ಟ್ರೀಯತೆಯ ಪರಿಕಲ್ಪನೆಯೇ ಇಲ್ಲದ, ಸ್ವರಾಜ್ಯದ ಹೊಣೆಯೇ ಬೇಕಿಲ್ಲದ ಬಹುಸಂಖ್ಯಾತ ಸ್ವಾರ್ಥ ಜಾತಿವಾದಿ ಜನಸಮೂಹ ನಮ್ಮದು ಎಂದರೆ ಅದು ತಪ್ಪಾಗುತ್ತದೆಯೆ? ಇಡೀ ಪ್ರಪಂಚದ ಯಾವ ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ ನಿಮಗೆ ಈ ಮಟ್ಟದ ನೀಚ, ಲಜ್ಜೆಗೇಡಿ, ನಿರ್ಲಜ್ಜ, ಸ್ವಾರ್ಥ, ಜವಾಬ್ದಾರಿಹೀನ, ಜಾತಿವಾದಿ, ಕೋಮುವಾದಿ ರಾಜಕಾರಣಿಗಳು ಮತ್ತು ಅವರನ್ನು ಚುನಾಯಿಸುವ ಜನರು ಕಾಣ ಸಿಗುತ್ತಾರೆ? ಹೌದು. ನಮಗಿಂತ ಕೆಟ್ಟ ವ್ಯವಸ್ಥೆಗಳು ಇವೆ. ಅನೇಕ ದೇಶಗಳಲ್ಲಿ ಈಗಲೂ ಸರ್ವಾಧಿಕಾರಗಳಿವೆ; ಮಿಲಿಟರಿ ಆಡಳಿತಗಳಿವೆ; ಕಮ್ಯುನಿಸ್ಟ್ ಆಡಳಿತಗಳಿವೆ; ರಾಜಸತ್ತೆಗಳು ಇವೆ. ಆದರೆ ಪ್ರಶ್ನೆ ಅವುಗಳ ಬಗ್ಗೆ ಅಲ್ಲ. ಬೆದರಿಕೆಯಿಲ್ಲದ, ತಮಗೆ ಬೇಕಾದವರನ್ನು ಮುಕ್ತವಾಗಿ ಚುನಾಯಿಸುವ ಸ್ವಾತಂತ್ರ್ಯ ಇರುವ ನಮ್ಮಂತಹ ಎಷ್ಟು ದೇಶಗಳಲ್ಲಿ ರಾಜಕಾರಣಿಗಳು ನಮ್ಮವರಂತೆ ನಿರ್ಲಜ್ಜರೂ, ಭ್ರಷ್ಟರೂ, ಅನೈತಿಕ ಕ್ರಿಮಿಗಳೂ ಆಗಿರುತ್ತಾರೆ?

ಲೇಖನದ ವಿಡಿಯೊ ಪ್ರಸ್ತುತಿ – ಭಾಗ 2

ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ, ನಮ್ಮನ್ನು ನಾವು ಆಳಿಕೊಳ್ಳಲಾಗದ, ವಸಾಹತುಶಾಹಿಯ ಸಂಕೇತವಾದ ರಾಷ್ಟ್ರಪತಿ ಆಳ್ವಿಕೆಗೆ ಕಳೆದ ಮುವ್ವತ್ತಾರು ವರ್ಷಗಳಲ್ಲಿ ನಾಲ್ಕು ಸಲ (1971/1977/1989/2007) ಕರ್ನಾಟಕ ಒಳಗಾಗಿದೆ. ಈ ಸತ್ಯ ನಾವು ನಿಜಕ್ಕೂ ಸ್ವರಾಜ್ಯಕ್ಕೆ ಅರ್ಹರೆ ಎನ್ನುವ ಪ್ರಶ್ನೆಯನ್ನು ಪದೇಪದೆ ಎತ್ತುತ್ತದೆ. ಇದರಷ್ಟೆ ಗಂಭೀರ ಸ್ಥಿತಿ ಇನ್ನೊಂದಿದೆ. ಅದು, ನಾವು ಆರಿಸಿ ಕಳುಹಿಸುವ ಜನರು ನೀಡುವ ಆಡಳಿತಕ್ಕಿಂತ ಅವರಿಲ್ಲದ ಈ ರಾಷ್ಟ್ರಪತಿ ಆಡಳಿತವೆ ಕಡಿಮೆ ಭ್ರಷ್ಟಾಚಾರದ, ಅಷ್ಟಿಷ್ಟು ಸಜ್ಜನಿಕೆ ಉಳ್ಳಆಡಳಿತ ಎನ್ನಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇವೆ. ಹಾಗೆಯೆ, ಮುಂದಿನ ವರ್ಷದ ಚುನಾವಣೆಯಲ್ಲಿ ಜನರಿಗೆ ಉತ್ತಮ ಪರ್ಯಾಯವೂ ಇಲ್ಲ ಎಂದರೆ ಅದು ದುರ್ದೈವ ಮಾತ್ರವಲ್ಲ ವಾಸ್ತವವೂ ಹೌದು. ಛೇ. ಆಧುನಿಕ ಶಿಕ್ಷಣದ ಹಾಗೂ ಮುಂದುವರೆದ ಸಮಾಜ ಮತ್ತು ದೇಶಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ನಾವು ನಿಜಕ್ಕೂ ಒಂದು ಹೀನ ಸಂದರ್ಭದಲ್ಲಿ ಬದುಕುತ್ತಿದ್ದೇವೆ ಮತ್ತು ಅದಕ್ಕೆ ನಾವೆ ಕಾರಣರು ಎಂದರೆ ಅದು ತಪ್ಪಾಗುತ್ತದೆಯೆ?

ದಕ್ಷಿಣ ಆಫ್ರಿಕಾದ ವರ್ಣಭೇದ ಸಮಾಜದ ಹಿನ್ನೆಲೆಯಲ್ಲಿ ರಚಿತವಾದ ಒಂದು ಅಸಾಮಾನ್ಯ ಕಾದಂಬರಿಯ ಹೆಸರು “Cry, The Beloved Country”. ಅದರದೆ ಗುಂಗಿನಲ್ಲಿರುವ ನನಗೆ ಈಗ ಅನ್ನಿಸುತ್ತಿರುವುದು, “Cry, The Beloved Karnataka”.

ಜನಪದ ಲೋಕದ ಭ್ರಷ್ಟಾಚಾರ ವಿರೋಧಿ ನಾಯಕರುಗಳು

ಡಾ. ಅರುಣ್ ಜೋಳದಕೂಡ್ಲಿಗಿ

ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದ್ದು, ಹಜಾರೆಯವರ ಹೋರಾಟದ ಹಿಂದಣ ಅಪಾಯಗಳನ್ನು ವಿದ್ವತ್ ಲೋಕ ವಿಮರ್ಶೆಗೆ ಒಡ್ಡಿದ್ದು, ಸರಕಾರ ಅವರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿ ಈಗ ಕಾರ್ಯಪ್ರವೃತ್ತವಾಗಿರುವುದೂ,  ಎಲ್ಲವೂ ನಿಧಾನಕ್ಕೆ ನೆನಪಿನ ಪುಟ ಸೇರುತ್ತಿವೆ.

ನನಗೀಗ ಜನಪದ ಲೋಕದ ಅಣ್ಣಾ ಹಜಾರೆಗಳು ನೆನಪಾಗತೊಡಗಿದ್ದಾರೆ.ಅಂದರೆ ನಮ್ಮ ನಮ್ಮ ಹಳ್ಳಿಗಳಲ್ಲಿ, ನಮ್ಮ ನಡುವೆಯೇ ಇರುವ ಗ್ರಾಮೀಣ ಪ್ರದೇಶದ ಸಮಾನ್ಯ ಜನರು ಕೂಡ ಭ್ರಷ್ಟಾಚಾರವನ್ನು ವಿರೋಧಿಸಿ ತುಂಬಾ ಹಿಂದಿನಿಂದಲೂ ಹೋರಾಡುತ್ತಾ ಬಂದಿದ್ದಾರೆ. ಅವರುಗಳು ಭ್ರಷ್ಟಾಚಾರ ಎನ್ನುವ ದೊಡ್ಡ ಬ್ಯಾನರಿನಡಿ ಹೋರಾಡದಿದ್ದರೂ, ಲಂಚ ವಿರೋಧಿ ವ್ಯಕ್ತಿತ್ವವನ್ನಂತೂ ರೂಪಿಸಿಕೊಂಡವರು. ಆದರೆ ಅಂತವರನ್ನು ಬೆಂಬಲಿಸಿ ಎಷ್ಟು ಜನ ಹಿಂದೆ ನಿಂತರು ಎಂದು ಕೇಳಿಕೊಂಡರೆ ಅದು ಮಾತ್ರ ಶೂನ್ಯ.

ಹಳ್ಳಿ ಜನ ಅದೇನು ಭ್ರಷ್ಟಾಚಾರವನ್ನು ವಿರೋಧಿಸಿಯಾರು? ಎಂದು ಕೆಲವರು ಮೂಗಿಮುರಿಯುವ ಸಾಧ್ಯತೆಯಿದೆ.  ಅಥವಾ ಜಾನಪದ ಮತ್ತು ಭ್ರಷ್ಟಾಚಾರ ಎಂಬ ವಿಷಯವೊಂದನ್ನು ಕುರಿತು ಮಾತನಾಡಲು ಹೊರಟರೆ ಸಾಂಪ್ರದಾಯಿಕ ಜಾನಪದ ವಿದ್ವಾಂಸರು ಇದೇನು ತಲೆ ಕೆಟ್ಟ ಯೋಚನೆ ಎಂದು ತಳ್ಳಿ ಹಾಕುವ ಸಾಧ್ಯತೆಯೂ ಇದೆ. ಇವೆರಡನ್ನೂ ಗಮನದಲ್ಲಿಟ್ಟುಕೊಂಡು ನನ್ನ ಕೆಲವು ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಹಳ್ಳಿ ಜನರ ಸಂಪರ್ಕಕ್ಕೆ ಬರುವ ಅಧಿಕಾರಿಗಳ ಸಮೂಹ ತೀರಾ ಚಿಕ್ಕದೇನಲ್ಲ. ವೃದ್ಧಾಪ್ಯ, ವಿಧವಾ ವೇತನ ಕೊಡುವ ಪೋಷ್ಟಮ್ಯಾನ್ ನಿಂದ ಇದು ಆರಂಭವಾಗುತ್ತದೆ. ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ ಕಛೇರಿ, ನೋಂದಣಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಬ್ಯಾಂಕ್‌ಗಳು, ನೀರಾವರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಮಾರುಕಟ್ಟೆ, ಪೋಲಿಸ್ ಇಲಾಖೆ ಇನ್ನು ಮುಂತಾದ ಇಲಾಖೆಯ ಅಧಿಕಾರಿಗಳ ಜತೆ ಜನರು ಒಡನಾಡುವ ಪ್ರಸಂಗ ಬರುತ್ತದೆ. ನಾನಾ ಕಾರಣಗಳಿಗಾಗಿ ಈ ಇಲಾಖೆಯ ಅಧಿಕಾರಿಗಳು ರೈತರಲ್ಲಿ ಲಂಚ ಪಡೆದು ಅವರ ಕೆಲಸಗಳನ್ನು ಮಾಡಿಕೊಡುತ್ತಾರೆ. ಇದು ಈಚೆಗೆ ತೀರಾ ಸಾಮಾನ್ಯ ಸಂಗತಿ. ಕೆಲವರು ಈ ಅಧಿಕಾರಿಗಳನ್ನು ಎದುರು ಹಾಕಿಕೊಂಡರೆ ನಮ್ಮ ಕೆಲಸಗಳು ಆಗುವುದಿಲ್ಲ ಎಂದು ಹೆದರಿ ಸಾಲ  ಮಾಡಿಯಾದರೂ ಲಂಚ ಕೊಟ್ಟು ಕೆಲಸಗಳನ್ನು ಮಾಡಿಸಿಕೊಳ್ಳುವ ಒಂದು ವರ್ಗವಿದೆ. ಇಂತಹ ವರ್ಗದಿಂದಾಗಿಯೇ ಭ್ರಷ್ಟಾಚಾರ ತನ್ನ ಬಾಹುಗಳನ್ನು ಚಾಚಿಕೊಳ್ಳಲು ಅನುವಾಗುತ್ತದೆ.

ಇದಕ್ಕಿಂತ ಭಿನ್ನವಾದ ಇನ್ನೊಂದು ವರ್ಗವಿದೆ. ಅದು ಇಂತಹ ಅಧಿಕಾರಿಗಳ ಜತೆ ಲಂಚಕೊಡದಿರುವ ಬಗ್ಗೆ ಸೆಣಸಾಡುವ ವರ್ಗ. ಅವರ ಸಾಮಾನ್ಯ ತಿಳುವಳಿಕೆಯೆಂದರೆ ಸರಕಾರ ಸಂಬಳ ಕೊಡುವಾಗ ನಾವೇಕೆ ಅವರಿಗೆ ಹಣಕೊಡಬೇಕು ಎನ್ನುವುದು ಅವರ ವಾದ. ಅದೇನೆ ಆಗಲಿ ಒಂದು ಪೈಸೆಯನ್ನೂ ಲಂಚ ಕೊಡದೆ ಕೆಲಸ ಮಾಡಿಕೊಳ್ಳುವೆ ಎಂದು ಅಲೆದಲೆದು ಕೆಲಸ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೂ ಜಗ್ಗದಿದ್ದಾಗ ಭಿನ್ನರೀತಿಯಲ್ಲಿ ಪ್ರತಿರೋಧ ಒಡ್ಡಿ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿ ಕೆಲಸ ಮಾಡಿಸಿಕೊಳ್ಳುವುದೂ ಉಂಟು. ಇನ್ನೂ ಮುಂದುವರೆದು ಅವರದೇ ರೀತಿಯ ಹೋರಾಟವನ್ನೂ ಸಹ ಮಾಡುತ್ತಾರೆ. ಇಂತಹ ಹೋರಾಟಗಳು ಎಲ್ಲೂ ದಾಖಲಾಗುವುದಿಲ್ಲವಷ್ಟೆ. ಇವರುಗಳೆಲ್ಲಾ ನಮ್ಮ ನಮ್ಮ ಹಳ್ಳಿಗಳಲ್ಲೇ ನೆಲೆಸಿರುವ ಅಣ್ಣಾ ಹಜಾರೆಗಳು ಎಂದು ನನಗೀಗ ಅನ್ನಿಸತೊಡಗಿದೆ. ಹೀಗೆ ಸೆಣಸಾಡಿದ ಕೆಲವು ಕಥನಗಳು ಹೀಗಿವೆ.

ಕಥನ: ಒಂದು

ನಮ್ಮ ಊರಿನಲ್ಲಿ ಬರಮಜ್ಜಿ ಎನ್ನುವ ಅಜ್ಜಿ ಇದ್ದಾಳೆ. ಅವಳು ವೃದ್ಧಾಪ್ಯ ವೇತನ ಪಡೆಯುವಾಗ ಪೋಷ್ಟಮ್ಯಾನ್‌ಗೆ ಕಮಿಷನ್ ಕೊಡುತ್ತಿರಲಿಲ್ಲ. ಅಜ್ಜಿ ಕೇಳುವ ಪ್ರಶ್ನೆ ನಿನಗೆ ಸರಕಾರ ಸಂಬಳ ಕೊಡಲ್ಲೇನು, ಮತ್ಯಾಕ ನಾ ಕೊಡ್ಲಿ ಎನ್ನುವುದು. ಈ ಜಿದ್ದಿಗಾಗಿ ಪೋಷ್ಟಮ್ಯಾನ್ ನಾಲ್ಕು ತಿಂಗಳಾದರೂ ಸಂಬಳ ಕೊಡದಿದ್ದಾಗ ಅಜ್ಜಿ ಅಂಚೆ ಕಚೇರಿಗೆ ಹೋಗಿ ಕೇಳಿದಳು. ಆಗ ಪೋಷ್ಟಮಾಷ್ಟರ್ ನೀನು ಹಣ ಕೊಡಲು ಬಂದಾಗ ಇರಲಿಲ್ಲ ಎಂದು ಹಣ ವಾಪಸ್ ಕಳಿಸಲಾಗಿದೆ, ನೀನು ತಾಲೂಕು ಕಚೇರಿಗೆ ಹೋಗಿ ಮತ್ತೆ ಬಿಲ್ ಹಾಕಿಸಿಕೊಂಡು ಬಾ ಎಂದು ಹೇಳಿದ.

ಆಗ ಅಜ್ಜಿಗೆ ದಿಕ್ಕುತೋಚದೆ, ತಾಲೂಕು ಕಛೇರಿಗೆ ಅಲೆದಾಗ ಅಲ್ಲಿನ ಅಧಿಕಾರಿಗಳು ಅಜ್ಜಿಯನ್ನು ಲಂಚ ಕೇಳಿದರು. ಅಜ್ಜಿ ಅಲ್ಲಿಯೂ ಪೆಡಸಾಗಿಯೇ ಉತ್ತರಿಸಿತು. ಹೀಗಾಗಿ ಒಂದು ವಾರ ಅಜ್ಜಿಯನ್ನು ಅಲೆದಾಡಿಸಿದರು. ಅಜ್ಜಿಕೊನೆಗೆ ನಾನು ಸಾಯೋತನಕ ಈ ಕಚೇರಿ ಬಿಟ್ಟು ಹೋಗಲ್ಲ ಎಂದು ತಾಲೂಕು ಕಛೇರಿಯ ಮುಂದೆ ಕೂತಿತು. ಈ ಸುದ್ದಿ ಹೇಗೋ ತಹಶೀಲ್ದಾರರ ಕಿವಿಗೆ ಬಿದ್ದು, ಅವರೇ ಅಜ್ಜಿಯನ್ನು ಖುದ್ದಾಗಿ ವಿಚಾರಿಸಿ ಲಂಚ ಕೇಳಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಅಜ್ಜಿಯ ವೇತನವನ್ನು ಬಿಡುಗಡೆಗೊಳಿಸಿದರು. ಆಗ ಪೋಷ್ಟಮ್ಯಾನ್ ಉದ್ದೇಶಪೂರ್ವಕವಾಗಿ ಅಜ್ಜಿಯ ವೇತನವನ್ನು ವಾಪಸ್ ಮರಳಿಸಿದ್ದಾರೆ ಎಂದು ತಿಳಿದು ತಹಶೀಲ್ದಾರ್ ಸಂಬಂದಿಸಿದ ಅಧಿಕಾರಿಗಳಿಂದ ಪೋಷ್ಟಮ್ಯಾನ್‌ನನ್ನು ತರಾಟೆಗೆ ತೆಗೆದುಕೊಳ್ಳುವಂತೆ ನೋಡಿಕೊಂಡರು. ಇದು ಮತ್ತೆ ಪುನರಾವರ್ತನೆ ಆಗಲಿಲ್ಲ.

ಕಥನ: ಎರಡು

ನಮ್ಮ ಭಾಗದಲ್ಲಿ ಬಿ.ಡ. ಗೌಡ ಎಂಬ ಗ್ರಾಮ ಲೆಕ್ಕಾಧಿಕಾರಿ ಇದ್ದ. ಈತನು ಹಣದಾಹಿ. ಜಾತಿ ಪ್ರಮಾಣ ಪತ್ರಕ್ಕೆ ಸಹಿ ಹಾಕಲು ಸಹಾ ಹಣ ಕೀಳುತ್ತಿದ್ದ. ಇದರಿಂದ ಜನ ಬೇಸತ್ತಿದ್ದರು. ಹಣಕ್ಕಾಗಿ ಅವರ ಹೊಲ ಇವರಿಗೆ, ಇವರ ಹೊಲ ಅವರಿಗೆ ಬದಲಾಯಿಸಿಬಿಡುವ ಮಟ್ಟಕ್ಕೂ ಇಳಿದಿದ್ದ. ಕರೆಮೂಗಜ್ಜ ಎಂಬ ಅಜ್ಜನಿದ್ದ. ಆತ ಕಡುಕೋಪಿಷ್ಟ. ತನ್ನ ಹೊಲದ ಪಹಣಿ ಕೊಡುವುದಾಗಿ ಬಿ.ಡ. ಗೌಡ ಅವರಲ್ಲಿ ಕೇಳಿದ. ಆತ ಎರಡು ಸಾವಿರ ಕೊಡುವುದಾಗಿ ಕೇಳಿದ್ದ. ಇದರಿಂದ ಕೆಂಡಾಮಂಡಲವಾದ ಮೂಗಜ್ಜ ನಾಳೆ ನಮ್ಮೂರಿಗೆ ಬನ್ನಿ ಕೊಡುತ್ತೇನೆಂದು ಹೇಳಿದನು.

ಮರುದಿನ ಗೌಡರು ಹಳ್ಳಿಗೆ ಬಂದರು. ಊರ ಮುಂದೆ ನೆರೆದ ಜನರ ಎದುರು ಮೂಗಜ್ಜ ಗೌಡರ ಬಳಿ ಬಂದು, ಗೌಡ್ರೆ ನನ್ನತ್ರ ಅಷ್ಟು ಹಣ ಇಲ್ಲ, ಮುಂದಿನ ತಿಂಗಳು ಕೊಡ್ತಿನಿ ಈಗ ಪಹಣಿ ಕೊಡ್ರಿ ಎಂದ. ಅದಕ್ಕೆ ಗೌಡ ಮುಂದಿನ ತಿಂಗಳೇ ಪಹಣಿ ಕೊಡುವೆ ಬಿಡು ಎಂದನು. ಇದರಿಂದ ಕೋಪಗೊಂಡ ಮೂಗಜ್ಜ ಕಾಲಲ್ಲಿ ಇರುವ ಚಪ್ಪಲಿಯನ್ನು ಕಿತ್ತು ಮುಖ ಮೋರೆ ನೋಡದಂತೆ ಹೊಡೆದೇ ಬಿಟ್ಟ. ಜನ ಮೂಗಜ್ಜನನ್ನು ಬಿಡಿಸುವ ಹೊತ್ತಿಗೆ ಗೌಡರು ಹಣ್ಣುಗಾಯಿ ನೀರುಗಾಯಿ ಆಗಿ ಮೂಗು ಬಾಯಿಯಲ್ಲಿ ರಕ್ತ ಸೋರುತ್ತಿತ್ತು. ಆತ ಪಟ್ಟಣಕ್ಕೆ ಹೋಗಿ ಮೂಗಜ್ಜನ ಮೇಲೆ ಪೋಲಿಸ್ ಕಂಪ್ಲೇಟ್ ಕೊಟ್ಟನು. ಇದನ್ನು ಇಡೀ ಊರಿಗೆ ಊರೇ  ಪೋಲಿಸ್ ಠಾಣೆ ಎದುರು ಧರಣಿ ಕೂತು, ಗೌಡರ ಬ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದರು. ಇದರ ಪರಿಣಾಮ ಗೌಡರನ್ನು ಅಮಾನತ್ತಿನಲ್ಲಿಡಲಾಯಿತು. ಈ ಘಟನೆಯಿಂದಾಗಿ ಆ ಭಾಗದ ಗ್ರಾಮಲೆಕ್ಕಾಧಿಕಾರಿಗಳಿಗೆ ಒಂದು ಬಗೆಯ ಬಿಸಿ ತಟ್ಟಿದಂತಾಯಿತು.

ಕಥನ: ಮೂರು

ಕೂಡ್ಲಿಗಿ ತಾಲ್ಲೂಕು ಹಾರಕನಾಳಿನಲ್ಲಿ 1998ರಲ್ಲಿ ನಡೆದ ಒಂದು ಘಟನೆ. ಅಂದು ಊರಿಗೆ ಲೈನ್‌ಮ್ಯಾನ್‌ಗಳ ಗುಂಪೊಂದು ಬಂದಿತ್ತು (ಕೆ.ಇ.ಬಿ. ನೌಕರರು) ಬಾಕಿ ಉಳಿದ ಕರೆಂಟ್ (ಎಲೆಕ್ಟ್ರಿಕಲ್) ಬಿಲ್ಲುಗಳನ್ನು ವಸೂಲಿ ಮಾಡುವುದು ಆ ದಿನದ ಉದ್ದೇಶವಾಗಿತ್ತು. ಹಣಪಾವತಿ ಮಾಡದೆ ಬಾಕಿ ಇರುವ ಮನೆಗಳ ಕರೆಂಟ್ ಕನೆಕ್ಷನ್ ಕಟ್ ಮಾಡುತ್ತಿದ್ದರು.

ಹಾರಕನಾಳಿನ ಭರಮನಗೌಡರದು ಐದು ತಿಂಗಳ ಬಿಲ್ ಬಾಕಿ ಇತ್ತು. ಅವರು ‘ಈಗ ದುಡ್ಡು ಇಲ್ಲ ಬೆಳೆ ಬಂದಿಂದೆ ಕಟ್ತೀವಿ’ ಎಂದರು. ಕೆ.ಇ.ಬಿ. ನೌಕರನೊಬ್ಬ ‘ಆಯ್ತು ನಾವು ಆವಾಗ್ಲೆ ಕನೆಕ್ಷನ್ ಕೊಡ್ತೀವಿ’ ಎಂದು, ಲೈನ್ ಕಟ್ ಮಾಡಲು ಕರೆಂಟ್ ಕಂಬವನ್ನು ಹತ್ತಿದ. ಭರಮನ ಗೌಡರಿಗೆ ಸಿಟ್ಟು ಅವಮಾನ ಎರಡೂ ಆಗಿ ಕಲ್ಲು ಹಿಡಿದು ‘ಲೇ ಲೈನ್ ಬಂದ್ ಕಟ್ ಮಾಡು ಕಲ್ಲಿಲೇ ಹೊಡಿತೀನಿ… ಸೊಂಡೂರು ರಾಜರದು ಕೋಟಿಗಟ್ಟಲೆ ಕರೆಂಟ್ ಬಿಲ್ಲು ಬಾಕಿ ಐತಿ ಅದನ್ನು ವಸೂಲಿ ಮಾಡು ನೋಡ್ತೀನಿ… ಬಂದ್ ಬಿಟ್ಟ ನಮ್ಮಂತ ಬಡವರತ್ರ,’ ಎಂದು ಹೊಡೆಯಲು ಸಜ್ಜಾಗಿ ನಿಂತನು. ಕಂಬದ ಮೇಲಿನ ಲೈನ್ ಮ್ಯಾನ್ ಹೆದರಿ ಲೈನ್ ಕಟ್ ಮಾಡದೆ ಇಳಿದ. ಆತನ ಮುಖದಲ್ಲಿ ಅವಮಾನದ ಛಾಯೆಯಿತ್ತು. ಈ ಭಾಗದಲ್ಲಿ ಕೆಇಬಿ ಯವರು ಸಾಮಾನ್ಯವಾಗಿ ಕೇಳುವ ಮಾತು ಇದಾಗಿತ್ತು. ಈ ಪ್ರಶ್ನೆಗೆ ಇಲಾಖೆಯವರು ಉತ್ತರ ನೀಡಲು ಅಸಹಾಯಕರಾಗಿರುತ್ತಿದ್ದರು. ಆ ನಂತರ ಸಂಡೂರು ಘೋರ್ಪಡೆ ಅವರ ಕಾರ್ಖಾನೆಯ ಸುಮಾರು ಮೂರ್‍ನಾಲ್ಕು ಕೋಟಿಯಷ್ಟು ಬಾಕಿ ಹಣವನ್ನು ಸಿಕ್ ಇಂಡಸ್ಟ್ರಿ ಎಂದು ಸರಕಾರ ಮನ್ನ ಮಾಡಿತು.

ಅಂದು ಭರಮನಗೌಡರು ಘೋರ್ಪಡೆ ಕಂಪನಿ ವಿರುದ್ಧ ಎತ್ತಿದ ಪ್ರಶ್ನೆಯನ್ನು ಜನರು ದೊಡ್ಡದಾಗಿ ಕೂಗು ಹಾಕಿದ್ದರೆ, ಅದೊಂದು ದೊಡ್ಡ ಸಂಗತಿಯೇ ಆಗುತ್ತಿತ್ತು. ಆದರೆ ಪ್ರತಿರೋಧದ ಬಿಡಿ ಬಿಡಿ ದ್ವನಿಗಳು ಒಟ್ಟುಗೂಡಲಿಲ್ಲ.

ಕಥನ: ನಾಲ್ಕು

ಕೂಡ್ಲಿಗಿ ತಾಲೂಕಿನ ಒಂದು ಹಳ್ಳಿಯಲ್ಲಿ ಶಾರದಮ್ಮ ಎನ್ನುವ ನಡು ವಯಸ್ಸಿನ ಹೆಣ್ಣುಮಗಳಿದ್ದಾಳೆ. ಆಯಮ್ಮ ಯಾವುದೇ ಪ್ರಜಾಪ್ರತಿನಿಧಿಗಳು ಬಂದರೆ ಯಾವ ಮುಲಾಜನ್ನೂ ನೋಡದೆ, ನಮ್ಮೂರಿಗೆ ಏನು ಕೆಲಸ ಮಾಡ್ಸೀರಿ ತೋರಿಸ್ರಿ? ಜನರ ಹೊಟ್ಟಿ ಮೇಲೆ ಹೊಡ್ದು ತಮ್ಮ ಹೊಟ್ಟಿ ತುಂಬ್ಸಿಕೊಳ್ಳೋ ಜನ ನೀವು ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. ಇದು ಆಯಮ್ಮ ತನ್ನ ಶಾಲಾ ದಿನಗಳಲ್ಲಿ ಪ್ರಜಾಪ್ರಭುತ್ವ ಮಾದರಿಯ ಬಗ್ಗೆ ಕಲಿತ ಪಾಠದಿಂದಾಗಿ ಬಂದ ತಿಳುವಳಿಕೆಯಾಗಿತ್ತು.

ಹಾಗಾಗಿ ಶಾರದಮ್ಮನ ಓಣಿಯಲ್ಲಿ ಗ್ರಾಮಪಂಚಾಯ್ತಿ ಸದಸ್ಯರು ಅಪ್ಪಿ ತಪ್ಪಿಯೂ ಸುಳಿಯುತ್ತಿರಲಿಲ್ಲ. ಇನ್ನು ಚುನಾವಣೆಯ ಸಮಯದಲ್ಲಿ ಶಾರದಮ್ಮ ಕೂಲಿಗೆ ಹೋಗದೆ, ಪ್ರಚಾರಕ್ಕೆ ಬರುವ ಸದ್ಯದ ಎಮ್ಮೆಲ್ಲೆಯನ್ನು ತರಾಟೆಗೆ ತೆಗೆದುಕೊಳ್ಳಲಿಕ್ಕಾಗಿಯೇ ಕಾದಿರುತ್ತಿದ್ದಳು. ಇನ್ನು ಯಾರೇ ಲಂಚ ಪಡೆಯುವ ಸುದ್ದಿ ತಿಳಿಯುತ್ತಲೂ ಅವರೊಂದಿಗೆ ತನ್ನದೇ ದಾಟಿಯಲ್ಲಿ ಜಗಳತೆಗೆದು ರಂಪಾಟ ಮಾಡುತ್ತಿದ್ದಳು. ಇದು ಸಿನಿಕತೆಯಂತೆ ಕಂಡರೂ ಶಾರದಮ್ಮನ ಒಳಗೆ ಒಂದು ನೈತಿಕವಾದ ಶಕ್ತಿ ಜಾಗೃತವಾಗುತ್ತಿದ್ದಂತೆ ಕಾಣುತ್ತದೆ. ಬರು ಬರುತ್ತಾ ಜನರು ಶಾರದಮ್ಮನ ಮಾತನ್ನು ಗೇಲಿ ಮಾಡಲು ಶುರು ಮಾಡಿದರು. ಇದರಿಂದ ಮನನೊಂದ ಶಾರದಮ್ಮ ಕಾಲನಂತರ ಮೌನಿಯೇ ಆದಳು. ಅಂದು ಶಾರದಮ್ಮನ ಜತೆ ಆ ಊರಿನವರು ದ್ವನಿ ಸೇರಿಸಿದ್ದರೆ ಆ ಹಳ್ಳಿಯೇ ಭ್ರಷ್ಟಾಚಾರ ವಿರೋಧಿ ಹಳ್ಳಿಯಾಗುವ ಸಾದ್ಯತೆಗಳೂ ಇದ್ದವು.

ಈ ಮೇಲಿನ ನಾಲ್ಕು ಕಥನಗಳು ಒಂದು ಮಾದರಿಯಷ್ಟೆ. ಇಂತಹ ನೂರಾರು ಕಥನಗಳನ್ನು ಆಯಾ ಭಾಗದಿಂದ ಸೇರಿಸುತ್ತಾ ಹೋಗಬಹುದು. ಆದರೆ ಅಂತಹ ಧೋರಣೆ ಇರುವವರನ್ನು ಹಾಸ್ಯಕ್ಕೆ ವಸ್ತುವಾಗಿಸಿಕೊಳ್ಳುವ ಘಟನೆಗಳೇ ಹೆಚ್ಚು. ಅಂದರೆ ತಲೆಕೆಟ್ಟವರೆಂದೂ, ಈ ಕಾಲದ ಜಾಯಮಾನ ತಿಳಿಯದ ಹಳೆ ಗಾಂಧಿ ಕಾಲದವರೆಂದು ಟೀಕಿಸಿ ಸುಮ್ಮನಾಗುತ್ತಾರೆ. ಇವರ ಅರ್ಥದಲ್ಲಿ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವವ ಆಧುನಿಕ ಕಾಲಕ್ಕೆ ತೆರೆದುಕೊಂಡವನೆಂತಲೂ, ಅಂತವರು ಯಂಗ್ ಅಂತಲೂ ಆಗುತ್ತದೆ.

ಇಂದು ಅಣ್ಣಾ ಹಜಾರೆಗೆ ಬೆಂಬಲ ಸೂಚಿಸಿ ಘೆರಾವು ಮಾಡಿ ಕೂಗು ಹಾಕುವ ಅದೇ ಯುವಕರು ತಮ್ಮದೇ ಊರಿನ ಭ್ರಷ್ಟಾಚಾರಿ ವಿರೋಧಿಯೊಬ್ಬರನ್ನು ಬೆಂಬಲಿಸಿ, ತಮ್ಮ ತಮ್ಮ ವ್ಯಾಪ್ತಿಯಲ್ಲಿಯೇ ಭ್ರಷ್ಟಾಚಾರ ತೊಡೆದು ಹಾಕಲು, ಲಂಚ ವಿರೋಧಿ ಮನೋಭಾವ ಬೆಳೆಸಲು ಮುಂದಾಗುವುದಿಲ್ಲ. ಇದೊಂದು ಈ ಕಾಲದ ವಿಪರ್ಯಾಸ. ಹೀಗಾದಲ್ಲಿ ಇಡೀ ಭ್ರಷ್ಟಾಚಾರ ನಿರ್ಮೂಲನವಾಗುತ್ತದೆ ಎನ್ನುವುದು ನನ್ನ ನಿಲುವಲ್ಲ, ಆದರೆ ಬುಡಮಟ್ಟದಲ್ಲಿ ಒಂದು ಸಮಸ್ಯೆಯನ್ನು ಗುರುತಿಸುವಾಗ ಈ ಎಲ್ಲಾ ಅಂಶಗಳು ಮುಖ್ಯವಾಗುತ್ತದೆ ಎನ್ನುವುದಷ್ಟೆ ನನ್ನ ಆಶಯ.

ಈಗ ನಾವುಗಳು ದೂರ ಗುಡ್ಡದ ಹಜಾರೆಯವರನ್ನು ನುಣ್ಣಗೆಂಬತೆ ನೋಡುವ ಬದಲು, ಕಣ್ಣು ತೆರೆದು ನಮ್ಮ ನಮ್ಮ ಸುತ್ತಮುತ್ತಲ ಲಂಚ ವಿರೋಧಿ ಪ್ರಾಮಾಣಿಕ ವ್ಯಕ್ತಿತ್ವಗಳನ್ನು ಗುರುತಿಸಿ ಅಂತವರಿಗೆ ಬೆಂಬಲವಾಗಿ ನಿಲ್ಲುವ, ಅವರುಗಳ ಜತೆ ಸಹವರ್ತಿಗಳಾಗುವ ಅಗತ್ಯವಿದೆ. ಜಾನಪದ ಅಧ್ಯಯನಕಾರರೂ ಸಹ ಲಂಚ ವಿರೋಧಿ ಜನಪದ ನಾಯಕರುಗಳ ಬಗ್ಗೆ ಮಾಹಿತಿ ಕಲೆಹಾಕಿ ಅಧ್ಯಯನ ಮಾಡಿದರೆ ಹೊಸ ನೆಲೆಯೊಂದು ತೆರೆದುಕೊಳ್ಳುವ ಸಾದ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಆರಕ್ಷಣ್ ಸಿನಿಮಾ ಮತ್ತು ಶಿಕ್ಷಕರ ದಿನ

“ಇನ್ನುಮುಂದೆ ನೀನು ಶಿಕ್ಷಣ ಕ್ಷೇತ್ರದಿಂದ ಹೊರಗೆ. You will remain a zero” – ಎಂಬರ್ಥದ ಟೀಕೆಗಳಿಂದ ಬೇಸತ್ತ ಪ್ರಿನ್ಸಿಪಾಲ್ ಉಚಿತವಾಗಿ ಬಡ ಮತ್ತು ದಲಿತ ಮಕ್ಕಳಿಗೆ ಪಾಠ ಹೇಳಲು ಆರಂಭಿಸುತ್ತಾರೆ. ಅವರ ಪ್ರಯತ್ನ ಬೃಹತ್ ಪ್ರಮಾಣದ ಯಶಸ್ಸು ನೀಡುತ್ತದೆ. ಸಾವಿರಾರು ರೂಗಳನ್ನು ತೆತ್ತು ಕೋಚಿಂಗ್ ಪಡೆಯಲಾಗದ ನೂರಾರು ವಿದ್ಯಾರ್ಥಿಗಳು ಇವರ ಪ್ರಯತ್ನದ ಸದುಪಯೋಗ ಪಡೆಯುತ್ತಾರೆ. ಇದು ಆರಕ್ಷಣ ಸಿನಿಮಾದ ಕತೆ.

ಅದು ಮೇಲ್ನೋಟಕ್ಕೆ ತಿಳಿಯುವಂತೆ ‘highly cinematic’ ಎಂದು ಹೇಳಿಬಿಡಬಹುದಾದರೂ, ಈ ನೆಲದ ಶಿಕ್ಷಕರಿಗೆ ಉತ್ತಮ ಸಂದೇಶ, ಪ್ರೇರಣೆ ಇಲ್ಲಿದೆ ಎನ್ನುವುದನ್ನು ಒಪ್ಪಲೇಬೇಕು. ಸೋಮವಾರ (ಸೆ.5) ಶಿಕ್ಷಕರ ದಿನ. ಆ ಕಾರಣ ಆ ಸಂದೇಶಕ್ಕೆ ಮಹತ್ವ ಇದೆ. ಈ ಚಿತ್ರದಲ್ಲಿ ಪ್ರಿನ್ಸಿಪಾಲ್ (ಅಮಿತಾಬ್ ಬಚ್ಚನ್) ಚೇಂಬರ್ ನಲ್ಲಿ ಶಿಕ್ಷಕರ ದಿನಾಚರಣೆಗೆ ಕಾರಣರಾದ ಸರ್ವೆಪಲ್ಲಿ ರಾಧಾಕೃಷ್ಣ ರ ಚಿತ್ರಪಟ ಇದೆ ಅಮಿತಾಬ್ ಬಚ್ಚನ್ ಮಾತನಾಡುವ ದೃಶ್ಯಗಳಲ್ಲಿ ಹಿನ್ನೆಲೆಯಲ್ಲಿ ರಾಧಾಕೃಷ್ಣರ ಚಿತ್ರಪಟ ಮತ್ತೆ ಮತ್ತೆ ಕಾಣುತ್ತದೆ. ಚಿತ್ರ ನಿರ್ದೇಶಕರು ಆ ಚಿತ್ರಪಟದ ಮೂಲಕ ಶಿಕ್ಷಕ-ವೀಕ್ಷಕರಿಗೆ ಏನನ್ನೋ ಹೇಳಲು ಬಯಸುತ್ತಾರೆ ಎನ್ನುವುದು ಸ್ಪಷ್ಟ.

ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ಹಲವು ಬದಲಾವಣೆಗಳಿಗೆ ಒಳಗಾಗಿದೆ. ಸರಕಾರಿ ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು ಉತ್ತಮ ಸಂಬಳ ಪಡೆಯುತ್ತಿದ್ದಾರೆ. (ಆಫ್ಕೋರ್ಸ್ ‘ಉತ್ತಮ’ ಎನ್ನುವುದು ಸಾಪೇಕ್ಷ). ಆದರೆ ಜನರ ಮಧ್ಯೆ ಚಾಲ್ತಿಯಲ್ಲಿರುವ ಒಂದು ಮಾತು ಶಿಕ್ಷಕರು, ಅದರಲ್ಲೂ ಪ್ರಥಮ ದರ್ಜೆ ಕಾಲೇಜುಗಳ ಬಹುತೇಕ ಉಪನ್ಯಾಸಕರು, ತಮ್ಮ ಪಗಾರಕ್ಕೆ ನ್ಯಾಯ ಒದಗಿಸುವುದಿಲ್ಲ. ಕೊಳ್ಳೇಗಾಲ, ಹುಮ್ನಾಬಾದ್, ಕೊರಟಗೆರೆ – ಇಂತಹ ಸಣ್ಣ ಊರುಗಳಲ್ಲಿರುವ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಹತ್ತಿರಹತ್ತಿರ ಒಂದು ಲಕ್ಷ ರೂ ಸಂಬಳ ಪಡೆಯುತ್ತಾರೆ ಎಂದರೆ ಬೇರೆಯವರು ಕಣ್ಣು ಕುಕ್ಕುವುದು ಸಹಜ. ಆದರೆ ಅದೇ ಐಐಟಿ ಅಥವಾ ಐಸೆಕ್ ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರ ಬಗ್ಗೆ ಇಂತಹ ಧೋರಣೆ ಕಡಿಮೆ.

ಅಷ್ಟು ಸಂಬಳ ಪಡೆದರೂ ದಿನಕ್ಕೆ ಎರಡೋ-ಮೂರೋ ಗಂಟೆ ಪಾಠ ಮಾಡುತ್ತಾರಷ್ಟೆ. ಅವರ ಓದು, ಅಧ್ಯಯನ ಸದೃಢ ಯುವ ಶಕ್ತಿಯನ್ನು ನಿರ್ಮಿಸುವಲ್ಲಿ ಸೋತಿದೆ ಎನ್ನುವ ಆರೋಪಗಳು ಆಗಾಗ್ಗೆ ಕೇಳಿ ಬರುತ್ತವೆ. ಹಾಗಾದರೆ ಶಿಕ್ಷಕರು ಏನು ಮಾಡಬೇಕು? ಈ ಪ್ರಶ್ನೆಗೆ ‘ಆರಕ್ಷಣ’ ಚಿತ್ರದಲ್ಲಿ ಒಂದು ಸಲಹೆ ಇದೆ. ಕಲಿಕೆಯಲ್ಲಿ ಹಿಂದುಳಿದ, ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬಹುದು.

ಕೊನೆಮಾತು: ಇತ್ತೀಚೆಗೆ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮನೆ ಕಟ್ಟಿದರು. ಕಾರನ್ನೂ ಕೊಂಡರು. ಕೊಲೀಗ್ ಒಬ್ಬರು ‘ನೀವ್ಯಾಕೆ ಕಂಪೂಟರ್ ತಗೋಬಾರದು? ನಿಮ್ಮ ಅಧ್ಯಯನಕ್ಕೂ, ಮಕ್ಕಳಿಗೂ ಉಪಯೋಗ ಆಗುತ್ತೆ. ‘ ಎಂದರು.  ಇದಕ್ಕೆ ಉತ್ತರಿಸಿದ ಪ್ರಾಧ್ಯಾಪಕರು, “ಮಕ್ಕಳ ಕಣ್ಣಿಗೆ ಕಂಪ್ಯೂಟರಿಂದ ತೊಂದರೆ ಆಗುತ್ತೆ ಅದಕ್ಕೆ ಲೇಟ್ ಮಾಡಿದೆ” ಎಂದರು. ನಗಬೇಕೋ, ಅಳಬೇಕೋ ನೀವೇ ಹೇಳಿ.

ಜೀವನದಿಗಳ ಸಾವಿನ ಕಥನ – 1

ಡಾ.ಎನ್. ಜಗದೀಶ್ ಕೊಪ್ಪ

ಇದು ಜೀವನದಿಗಳ ಸಾವಿನ ಕಥನವಷ್ಟೇ ಅಲ್ಲ, ಮನುಕುಲದ ಅವಸಾನದ ಕಥನ ಕೂಡ ಹೌದು. ಒಬ್ಬನ ಹಿತಕ್ಕಾಗಿ ಹಲವರ ಬದುಕನ್ನು ಬಲಿಕೊಡುವ ವಿಕೃತ ದುರಂತಗಾಥೆ. ಯಾವ ಜಾಗದಲ್ಲಿ ಮನುಕುಲದ ನಾಗರೀಕತೆ ಜನ್ಮತಾಳಿತೋ, ಅದೇ ಜಾಗದಲ್ಲಿ ಸಂಸ್ಕೃತಿ ಅವಸಾನಗೊಳ್ಳುತ್ತಿರುವ ನೋವಿನ ಕಥೆ.

ಹರಿಯುವ ನೀರಿಗೆಲ್ಲಾ ಗಂಗೆಯೆಂದು ಹೆಸರಿಟ್ಟು ಪೂಜಿಸಿದ ಈ ನೆಲದಲ್ಲಿ ಮಾತೃ ಸ್ವರೂಪದ ನದಿ ಎಂಬಾಕೆಯ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಹಂತ-ಹಂತವಾಗಿ ನಡೆಯುತ್ತಿರುವ ಅತ್ಯಾಚಾರ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಪೃಥ್ವಿಯ ಎಲ್ಲೆಡೆ ಇತಿಹಾಸದುದ್ದಕ್ಕೂ ನಿರಂತರವಾಗಿ ಅಡೆ ತಡೆಯಿಲ್ಲದೆ ಸಾಗಿದ ಅವಿರತ ಅನಾಚಾರ.

ಮನುಷ್ಯನ ಜ್ಞಾನ ವಿಕಾಸವಾದಂತೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಪ್ರಯೋಗಗಳು ಯಶಸ್ವಿಯಾದಂತೆ, ಆಧುನಿಕ ಜಗತ್ತಿನ ಮಾನವನಲ್ಲಿ ಪ್ರಕೃತಿಯನ್ನು ಮಣಿಸಬೇಕೆಂಬ ಅಹಂಕಾರ ತಲೆ ಎತ್ತಿದೆ. ಇದರ ಫಲವಾಗಿ ನಿಸರ್ಗದ ಕೊಡುಗೆಗಳ ಜೊತೆಜೊತೆಯಲ್ಲಿ ಪ್ರಕೃತಿ ವಿಕೋಪಗಳನ್ನೂ ಅವನು ಅನುಭವಿಸಬೇಕಾಗಿದೆ.

ನಾವು ಈ ಭೂಮಿಯ ಒಡೆಯರಲ್ಲ, ಕೇವಲ ವಾರಸುದಾರರು ಮಾತ್ರ. ಅದನ್ನು ರಕ್ಷಿಸಿ ಮುಂದಿನ ತಲೆಮಾರಿಗೂ ಉಳಿಸಬೇಕಾದದ್ದು ನಮ್ಮ ಹೊಣೆ ಎಂಬ ಪ್ರಜ್ಞೆ ವಿಸ್ಮೃತಿಗೆ ಜಾರಿರುವುದೇ ಪರಿಸರದ ದುರಂತಕ್ಕೆ ಮೂಲ ಕಾರಣವಾಗಿದೆ.

ನಾಗರೀಕ ಸಮಾಜದಲ್ಲಿ ಹೆಚ್ಚಿದ ಅನುಭೋಗ ಪ್ರವೃತ್ತಿ ಪರಿಸರದ ಮೇಲಿನ ಪೈಶಾಚಿಕ ದಾಳಿಗೆ ಮೂಲವಾಗಿದ್ದು,  ಕಳೆದ 20 ಲಕ್ಷ ವರ್ಷಗಳಲ್ಲಿ ನಡೆದ ಪರಿಸರದ ಮೇಲಿನ ದಾಳಿಯಿಂದ ಆಗಿದ್ದ ನಷ್ಟದಷ್ಟು ಪ್ರಮಾಣ ಈಗ ಕೇವಲ 50 ವರ್ಷಗಳಲ್ಲಿ ಜರುಗಿದೆ.

ಮನುಷ್ಯ ಕಾಲಿಟ್ಟ ಜಾಗ ಅದು ಅರಣ್ಯವಿರಲಿ, ಪರ್ವತವಿರಲಿ, ನದಿಯಿರಲಿ ಸುರಕ್ಷಿತವಾಗಿಲ್ಲ. ಮನುಕುಲದ ವಾರಸುದಾರರೆಂದು ಹೇಳಿಕೊಳ್ಳುವ ನಾವು ಕಾಲಿಟ್ಟ ಸ್ಥಳಗಳಲ್ಲಿ ಗರಿಕೆ ಹುಲ್ಲು ಕೂಡ ಬೆಳೆಯಲಾರದು ಎಂಬ ವಾಸ್ತವಿಕ ಕಟು ಸತ್ಯವನ್ನು ನೆನಪಿಗೆ ತಂದುಕೊಳ್ಳಲಾಗದಷ್ಟು ಅಹಂಕಾರದ ಅಟ್ಟಕ್ಕೆ ದೂಡಲ್ಪಟ್ಟಿದ್ದೇವೆ.

ನಾವು ತಿನ್ನುವ ಆಹಾರ, ಉಸಿರಾಡುವ ಗಾಳಿ, ಕುಡಿಯುವ ನೀರು, ಬದುಕುವ ಪರಿಸರ ಎಲ್ಲವನ್ನೂ ವಿಷಮಯಗೊಳಿಸಿ, ಭೂಮಿಯನ್ನು ಸುಡುಗಾಡನ್ನಾಗಿ ಮಾಡಿ ನಾಗರೀಕತೆಯ ಸೋಗಿನಲ್ಲಿ ಅನಾಗರೀಕತೆಯ ಬದುಕು ನಡೆಸುತ್ತಿದ್ದೇವೆ.

ಈ ಭೂಮಿಯ ಮೇಲೆ ಪ್ರಾಣಿಗಳ ಜೊತೆ ಜೊತೆಯಲ್ಲಿ ಮನುಷ್ಯ ಜೀವಿ ಅಸ್ತಿತ್ವಕ್ಕೆ ಬಂದಿದ್ದು 20 ಸಾವಿರ ವರ್ಷಗಳ ಹಿಂದೆ. ಪ್ರಾರಂಭಿಕ ದಿನಗಳಲ್ಲಿ ಪ್ರಾಣಿಯಂತೆ ಬದುಕಿದ್ದ ಆತನ ಮೆದುಳೊಳಗೆ ವಿವೇಚನೆ ಮೂಡಿ, ಪ್ರಕೃತಿಯ ಎಲ್ಲಾ ವಿದ್ಯಮಾನಗಳನ್ನು ಅವಲೋಕಿಸುವ ಬುದ್ಧಿ ಮೊಳೆತದ್ದು ಕೇವಲ 10 ಸಾವಿರವರ್ಷಗಳ ಹಿಂದೆ. ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿ, ಗುಡುಗು-ಸಿಡಿಲು, ಮಳೆ-ಗಾಳಿಗೆ ಅಂಜಿ ಗುಹೆಗಳಲ್ಲಿ ವಾಸವಾಗಿದ್ದ ಅವನ ಕೈಗೆ ಕಬ್ಬಿಣದ ಲೋಹ ಯಾವಾಗ ಆಯುಧವಾಗಿ ದೊರೆಯಿತೊ, ಅಂದೇ ನಾಗರೀಕತೆಯ ಅಧ್ಯಾಯ  ಕೂಡ ಪ್ರಾರಂಭವಾಯಿತು.

ಶಿಲಾಯುಗದಿಂದ ಲೋಹಯುಗಕ್ಕೆ ಸ್ಥಿತ್ಯಂತರಗೊಂಡ ಮಾನವನ ಬದುಕಿನಲ್ಲಿ ನಾಗರೀಕತೆಯ ಬೀಜ ಮೊಳಕೆಯೊಡೆದದ್ದೇ ತಡ, ತನ್ನ ಜೊತೆಯಲ್ಲಿ ಬದುಕಿದ್ದ ಸಾಧು ಪ್ರಾಣಿಗಳನ್ನು ಪಳಗಿಸಿ, ಗೆಡ್ಡೆ-ಗೆಣಸುಗಳನ್ನು ಆರಿಸುವ ಬದುಕಿಗೆ ವಿದಾಯ ಹೇಳಿ, ತಾನಿದ್ದ ಜಾಗದಲ್ಲೇ ಉತ್ತಿ, ಬಿತ್ತಿ ಬೆಳೆಯಬಾರದೇಕೆ ಎಂಬ ಪ್ರಶ್ನೆಯ ಮಿಂಚು ಅವನ ತಲೆಯೊಳಗೆ ಸುಳಿದಾಗ ಪ್ರಕೃತಿಯ ಮೇಲಿನ ದಾಳಿಯ ಮೊದಲ ಅಧ್ಯಾಯಕ್ಕೆ ನಾಂದಿಯಾಯಿತು.

ಜಗತ್ತಿನ ಯಾವುದೇ ನಾಗರೀಕತೆಯ ಹುಟ್ಟು ಮತ್ತು ಅವಸಾನಗಳ ಇತಿಹಾಸವನ್ನು ಅವಲೋಕಿಸಿದಾಗ ಎಲ್ಲವೂ ನದಿ ತೀರದಲ್ಲಿಯೇ ಜನಿಸಿ, ಅಲ್ಲೇ ಅವಸಾನಗೊಂಡಿವೆ. ಹಾಗಾಗಿ ನದಿಗಳೆಂದರೆ ಕೇವಲ ನೀರಿನ ಮೂಲವಲ್ಲ, ಅವು ಮನುಕುಲದ ಹುಟ್ಟು-ಸಾವಿನ ತೊಟ್ಟಿಲುಗಳು ಕೂಡ ಹೌದು.

ಐದು ಸಾವಿರ ವರ್ಷಗಳ ಹಿಂದೆ ಟೈಗ್ರಿಸ್ ಮತ್ತು ಯೂಪ್ರಟೀಸ್ ನದಿಗಳ ತೀರದಲ್ಲಿ ಹುಟ್ಟಿದ ಮೆಸಪೊಟೋಮಿಯಾ ನಾಗರೀಕತೆ, ಈಜಿಪ್ಟ್‌ನ ನೈಲ್ ನದಿ ಬಳಿ ಜನಿಸಿದ ಈಜಿಪ್ಟ್ ನಾಗರೀಕತೆ, ದಕ್ಷಿಣ ಅಮೆರಿಕದ ಇಂಕಾ ಮತ್ತು ಮಾಯಾ ನಾಗರೀಕತೆ, ಗ್ರೀಕ್‌ನ ರೋಮ್ ನಾಗರೀಕತೆ, ಭಾರತದ ಸಿಂಧೂ ನದಿ ತೀರದ ಹರಪ್ಪ, ಮೆಹಂಜೋದಾರೊ ನಾಗರೀಕತೆ ಇವುಗಳ ಮೂಲ ಬೇರುಗಳು ಜಗತ್ತಿನ ಹಲವಾರು ನದಿಗಳಲ್ಲಿ ಅಡಕವಾಗಿದೆ. ಮನುಷ್ಯ ಸಂಸ್ಕೃತಿಯ ಜನನಕ್ಕೆ ಕಾರಣವಾದ ಇದೇ ಜೀವ ನದಿಗಳು ಅವನ ಸಂಸ್ಕೃತಿ ಮತ್ತು ನಾಗರೀಕತೆಯ ಅವಸಾನಕ್ಕೂ ಕಾರಣವಾಗಿವೆ. ಈ ಸಂದರ್ಭದಲ್ಲಿ ಲೆವಿಸ್ ಮಮ್‌ಪೆಡ್ ಎಂಬ ಲೇಖಕ ತನ್ನ “ಟೆಕ್ನಿಕ್ ಅಂಡ್ ಸಿವಿಲೈಜೇಷನ್” ಕೃತಿಯಲ್ಲಿ “ಕಬ್ಬಿಣ ಮತ್ತು ಕಲ್ಲಿದ್ದಲಿನ ಆವಿಷ್ಕಾರ ನಾಗರೀಕತೆ ವಿಕಾಸ ಮತ್ತು ವಿನಾಶಕ್ಕೆ ಕಾರಣಮಯ” ಎನ್ನುವ ಮಾತು ಇಲ್ಲಿ ಪ್ರಸ್ತುತ.

ಹುಟ್ಟು, ವಿನಾಶ, ಮರುಹುಟ್ಟುಗಳ ಹೋರಾಟದಲ್ಲಿ ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲಿನ ಅವಲಂಬನೆ ಮತ್ತು ಅದರ ದುರ್ಬಳಕೆ ಕೂಡ ಹೆಚ್ಚಾಯಿತು. ಪ್ರಕೃತಿಯ ಒಂದು ಭಾಗವಾಗಿಯೇ ಬದುಕಿದ ನಮ್ಮ ಮೂಲನಿವಾಸಿಗಳು, ಪರಿಸರಕ್ಕೆ ಧಕ್ಕೆಯಾಗದ ರೀತಿ ಬದುಕಿದ್ದರು. ಇಂದಿಗೂ ಕೂಡ ಅರಣ್ಯವಾಸಿಗಳಲ್ಲಿ ಇಂತಹ ಸಂಸ್ಕೃತಿಯನ್ನು ನಾವು ನೋಡಬಹುದು. ಅವರು ಒಂದು ಮರ ಕಡಿಯುವ ಮುನ್ನ ಅದಕ್ಕೆ ಪ್ರತಿಯಾಗಿ ಎರಡು ಸಸಿ ನೆಡುವ ಸಂಸ್ಕೃತಿ ಹಾಗೂ ಬೇಸಾಯ ಮಾಡಿದ ಭೂಮಿಯನ್ನು ಹಲವಾರು ವರ್ಷ ತೊರೆದು ಬೇರೆಡೆ ಬೇಸಾಯ ಮಾಡುವ ಕ್ರಮವನ್ನು ನಾವು ಆದಿವಾಸಿಗಳ ಬದುಕಿನಲ್ಲಿ ಇಂದೂ ಸಹ ಕಾಣಬಹುದಾಗಿದೆ. ಪ್ರಕೃತಿಯ ಕುರಿತಾದ ಈ ಜ್ಞಾನ ಪರಂಪರೆಯನ್ನು ಅವರಿಗೆ ಯಾರೂ ಧಾರೆ ಎರೆಯಲಿಲ್ಲ. ಪರಿಸರದ ಮಕ್ಕಳಂತೆ ಬದುಕಿದ ಅವರ ಎದೆಯೊಳಗೆ ಈ ಜ್ಞಾನ ತಾನಾಗಿಯೇ ಮೊಳೆತದ್ದು. ಈ ನೆಲದ ನಿಜ ಮಕ್ಕಳನ್ನು ನಾಗರೀಕ ಸೋಗಿನ ನಾವು “ಅನಾಗರೀಕರೆಂದು” ಕರೆಯುವ ಪ್ರವೃತ್ತಿಯನ್ನು ಒಮ್ಮೆ ಪ್ರಶ್ನಿಸಿಕೊಳ್ಳಬೇಕಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಗ್ರೀಕ್ ದಾರ್ಶನಿಕ ಸಾಕ್ರೆಟೀಸ್ “ಪ್ರಕೃತಿ ಜೀವ ಸಂಕುಲಗಳನ್ನು ಪೋಷಿಸಿಕೊಂಡು ಬಂದಿರುವುದು ಮಾನವನ ಒಳಿತಿಗಾಗಿ ಇದರ ದುರುಪಯೋಗ ಸಲ್ಲದು” ಎಂದಿದ್ದ.

ಎಲ್ಲವೂ ತನ್ನ ಕಾಲಡಿಯಲ್ಲಿರಬೇಕು ಎಂಬ ಭ್ರಮೆಯನ್ನು ಬೆನ್ನತ್ತಿರುವ ಮನುಕುಲ ತಾನು ಸವೆಸಿದ ಹಾದಿಯನ್ನು, ನಡೆದ ಹೆಜ್ಜೆ ಗುರುತುಗಳನ್ನು ಹಿಂತಿರುಗಿ ನೋಡಲಾರದ ಸೊಕ್ಕನ್ನು ಬೆಳೆಸಿಕೊಂಡಿದೆ.

ಲೇಖಕರಾದ ಯಜ್ರೊಹೈಲಾ ಮತ್ತು ರಿಚರ್ಡ್ ಲೇಪಿನ್ಸ್ ತಮ್ಮ “ಹ್ಯೂಮನಿಟಿ ಅಂಡ್ ನೇಚರ್” ಕೃತಿಯಲ್ಲಿ 15ನೇ ಶತಮಾನದಲ್ಲಿ ಉದ್ಭವವಾದ ಊಳಿಗಮಾನ್ಯ ಪದ್ಧತಿ ಮತ್ತು 17ನೇ ಶತಮಾನದಲ್ಲಿ ಜನ್ಮತಾಳಿದ ಬಂಡವಾಳಶಾಹಿ ಯುಗದಿಂದ ಪರಿಸರದ ದುರ್ಬಳಕೆಗೆ ದಾರಿಯಾಯಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಪ್ರಾನ್ಸಿಸ್ ಬೇಕನ್ ಎಂಬಾತ “ಪ್ರಕೃತಿಯನ್ನು ಮಣಿಸಿ ಅದರ ಮೇಲೆ ಪ್ರಭುತ್ವ ಸಾಧಿಸುವುದು ಮಾನವನ ಕರ್ತವ್ಯ. ಇದರಲ್ಲಿ ಅವನ ಭವಿಷ್ಯ ಅಡಗಿದೆ. ಮಾನವನ ಅಭ್ಯದಯಕ್ಕಾಗಿ ಪ್ರಕೃತಿಯನ್ನು ಪಳಗಿಸುವುದು ತಪ್ಪಲ್ಲ” ಎಂದು ವಾದಿಸಿದ್ದಾನೆ.

ಇಂತಹ ಅಪಕ್ವ ಪಾಶ್ಚಿಮಾತ್ಯ ಚಿಂತನೆಯ ಧಾರೆಗಳನ್ನು ನಿರಾಕರಿಸಿದ್ದ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ “ಯೂರೋಪಿಯನ್ನರು ಯಾವ ನೆಲವನ್ನು ಮೆಟ್ಟಲಿ, ಸಾವು ಆ ನೆಲವನ್ನು, ಆ ನೆಲದ ಪರಿಸರವನ್ನು ಮತ್ತು ಅಲ್ಲಿನ ಮೂಲನಿವಾಸಿಗಳನ್ನು ಬೆನ್ನಟ್ಟುತ್ತದೆ” ಎಂದು ಮಾರ್ಮಿಕವಾಗಿ ನುಡಿದಿದ್ದಾನೆ.

ಮನುಕುಲದ ಇಂತಹ ನಿರಂತರ ದಾಳಿಯ ಚರಿತ್ರೆಯನ್ನು ಅವಲೋಕಿಸಿರುವ ಇತಿಹಾಸ ತಜ್ಞ ಎಲಿಂಗ್‌ಟನ್ ಮನುಕುಲದ ಐದು ಶತಮಾನಗಳನ್ನು “ಸಾಮ್ರಾಜ್ಯಶಾಹಿ, ವಸಹಾತುಶಾಹಿ, ಕೈಗಾರಿಕಾಶಾಹಿ, ಬಂಡವಾಳಶಾಹಿ, ಜನಾಂಗಶಾಹಿ ಯುಗ” ಎಂದು ವಿಂಗಡಿಸಿದ್ದು, ಈಗ ಮನುಕುಲ ಹಾಗೂ ಪರಿಸರದ ಉಳಿವಿಗಾಗಿ ಪರಿಸರಶಾಹಿ ಯುಗ ರೂಪುಗೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದ್ದಾನೆ.

ಪಾಶ್ಚಿಮಾತ್ಯ ಪ್ರೇರಿತ ಅಭಿವೃದ್ಧಿ ಹಾಗೂ ಆರ್ಥಿಕ ಸಿದ್ಧಾಂತಗಳು ಇದೀಗ ಮನುಕುಲವನ್ನು ಭೋಗದ ಹುಚ್ಚುಕುದುರಯನ್ನೇರುವಂತೆ ಮಾಡಿವೆ. ಎಲ್ಲವನ್ನೂ ವ್ಯಾಪಾರದ ಸರಕುಗಳಂತೆ ನೋಡುವ ನಮ್ಮ ಆರ್ಥಿಕ ತಪ್ಪು ಪರಿಕಲ್ಪನೆಗಳು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಸುತ್ತಿರುವ ಪ್ರಕೃತಿ ಮೇಲಿನ ಪೈಶಾಚಿಕ ದಾಳಿ ವರ್ತಮಾನದ ಜಗತ್ತನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿದೆ.

(ಮುಂದುವರಿಯುವುದು)

ಸಾವಿನ ಕಥನಕ್ಕೆ ಮುನ್ನ ಒಂದು ಟಿಪ್ಪಣಿ

ಸ್ನೇಹಿತರೆ,

ಹೇಳಬೇಕಾದ ಎಲ್ಲವನ್ನೂ ಈ ಕೆಳಗಿರುವ ಡಾ. ಜಗದೀಶ್ ಕೊಪ್ಪರವರ ಮುನ್ನುಡಿಯೇ ಹೇಳುತ್ತಿದೆ. ಈ ಲೇಖನ ಸರಣಿ ಇನ್ನು ಮುಂದೆ ಪ್ರತಿ ಭಾನುವಾರ “ವರ್ತಮಾನ”ದಲ್ಲಿ ಪ್ರಕಟವಾಗಲಿದೆ. ನಾಳೆ ಮೊದಲ ಕಂತು. ಜಗದೀಶ್‌ರವರು “ವರ್ತಮಾನ”ದ ಪ್ರಯತ್ನಕ್ಕೆ ಕೊಡುತ್ತಿರುವ ಬೆಂಬಲವನ್ನು ಶ್ಲಾಘಿಸುತ್ತ, ಈ ಲೇಖನ ಸರಣಿ ನಮ್ಮೆಲ್ಲರ ಅರಿವನ್ನು ವಿಸ್ತರಿಸಲಿ ಎಂದು ಆಶಿಸುತ್ತೇನೆ.

ರವಿ ಕೃಷ್ಣಾ ರೆಡ್ಡಿ


ಸಾವಿನ ಕಥನಕ್ಕೆ ಮುನ್ನ ಒಂದು ಟಿಪ್ಪಣಿ

ಹರಿಯುವ ನೀರಿಗೆ ಗಂಗೆಯೆಂದು ಕೈಯೆತ್ತಿ ಮುಗಿದವರ ನೆಲದ ಸಂಸ್ಕೃತಿಯಿಂದ ಬಂದ ನನ್ನಂತಹವನಿಗೆ ಇಂದಿನ ಅಭಿವೃದ್ಧಿಯ ಅಂಧಯುಗದಲ್ಲಿ ಇಲ್ಲಿನ ಗಾಳಿ, ನೀರು ಮಾರಾಟದ ಸರಕಾಗಿ ಬಿಕರಿಯಾಗುತ್ತಿರುವುದು ನೋವಿನ ಸಂಗತಿ.

ಜಗತ್ತಿನ ಜೀವನದಿಗಳನ್ನು ಅಣೆಕಟ್ಟುಗಳ ಹೆಸರಿನಲ್ಲಿ ಕೊಂದು ಹಾಕುತ್ತಿರುವ ಕಥನವೇ ಈ ” ಜೀವನದಿಗಳ ಸಾವಿನ ಕಥನ”. ಎಂಟು ವರ್ಷಗಳ ಹಿಂದೆ ಡಾಕ್ಟರೇಟ್ ಪದವಿಗಾಗಿ ಜಾಗತೀಕರಣ ಕುರಿತಂತೆ ಅಧ್ಯಯನ ಮಾಡುತಿದ್ದ ಸಮಯದಲ್ಲಿ ಸಿಕ್ಕ ಮಾಹಿತಿಯನ್ನು ನಿಮ್ಮೆದುರು ಅನಾವರಣಗೊಳಿಸುತಿದ್ದೇನೆ.

ಈ ಸಂದರ್ಭದಲ್ಲಿ ಪೆಟ್ರಿಕ್ ಮೆಕ್ಕಲಿಯವರ “ಸೈಲೆನ್ಸ್‌ಡ್ ರಿವರ್‍ಸ್” (ಸ್ಥಬ್ದವಾದ ನದಿಗಳು) ಹಾಗೂ ಮೌಡೆ ಬಾರ್‍ಲೋ ಅವರ “ಬ್ಲೂ ಕವನೆಂಟ್” (ನೀಲಿ ಒಂಪ್ಪಂಧ) ಮತ್ತು “ಬ್ಲೂ ಗೋಲ್ಡ್” (ನೀಲಿ ಚಿನ್ನ) ಕೃತಿಗಳಿಂದ ಪ್ರೇರಣೆ ಪಡೆದು ಈ ಲೇಖನ ಮಾಲೆ ರಚಿಸಿದ್ದೇನೆ.

ಈ ಲೇಖನ ಮಾಲೆಯ ಬಗ್ಗೆ ನಿಮ್ಮ ತಕರಾರುಗಳು ಏನೇ ಇರಲಿ, ನದಿಗಳ ಬಗ್ಗೆ, ನೀರಿನ ಬಗ್ಗೆ ನಿಮ್ಮ ಆಲೋಚನಾ ಕ್ರಮ ಬದಲಾದರೆ, ನನ್ನ ಶ್ರಮ ಸಾರ್ಥಕ.

ಡಾ.ಎನ್.ಜಗದೀಶ ಕೊಪ್ಪ
ಧಾರವಾಡ