“ಸತ್ಯದ, ಪ್ರಾಮಾಣಿಕತೆಯ ಸೆಳೆತಗಳನ್ನು ನಿರಾಕರಿಸಿದವರು…”


-ಬಿ. ಶ್ರೀಪಾದ್ ಭಟ್


ಬೆಳೆವ, ಬದಲಾಗುವ, ನಾಶವಾಗುವ ಮತ್ತು ಮರುಹುಟ್ಟು ಪಡೆವ ಈ ಪ್ರಪಂಚದಲ್ಲಿ ಮನುಷ್ಯನ ನೆನಪು ಮತ್ತು ಮರೆವು ದುರಂತಮಯ-ಪಿ.ಲಂಕೇಶ್

ಆರ್ಸನ್ ವೆಲ್ಸ್ ನಟಿಸಿ, ನಿರ್ದೇಶಿಸಿದ, 1941 ರಲ್ಲಿ ತೆರೆಕಂಡ ಸಿಟಿಜನ್ ಕೇನ್ ಚಿತ್ರದ ಆರಂಭದ ದೃಶ್ಯದಲ್ಲಿ ಸಾವಿನ ಹೊಸ್ತಿನಲ್ಲಿರುವ ‘ಚಾಲ್ರ್ಸ ಫಾಸ್ಟರ್ ಕೇನ್’ ‘ರೋಸ್ಬಡ್’ Citizenkaneಎಂದು ಉದ್ಗರಿಸಿ ಸಾವನ್ನಪ್ಪುತ್ತಾನೆ. ಕೂಡಲೇ ಆತನ ಕೈಯಿಂದ ಹಿಮದ ಗ್ಲೋಬ್ ಕೆಳಗುರುಳಿ ಬೀಳುತ್ತದೆ. ಈ ಪದದ ನಿಗೂಢ ಹಿನ್ನೆಲೆಯನ್ನು ಬೇಧಿಸಲು ಚಿತ್ರದುದ್ದಕ್ಕೂ ಪ್ರಯತ್ನಿಸಿದ ವರದಿಗಾರ ಥಾಮ್ಸನ್ ಕ್ಲೈಮಾಕ್ಸ್ನಲ್ಲಿ ಹತಾಶನಾಗಿ “ಬಹುಶಃ ‘ರೋಸ್ಬಡ್’ ಎನ್ನುವುದು ಕೇನ್ ಪಡೆಯದೆ ಇರವಂತಹದ್ದು ಅಥವಾ ಕಳೆದುಕೊಂಡಿರುವಂತಹದ್ದು” ಎಂದು ಹೇಳುತ್ತಾನೆ. ಮುಂದುವರೆದು “ಒಂದು ವೇಳೆ ದೊರಕಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನವೇನೂ ಆಗುತ್ತಿರಲಿಲ್” ಎಂದು ಉದ್ಗರಿಸಿ ಕೇನ್ ನ ಬಂಗಲೆ ‘ಜನಾಡು’ವಿನಿಂದ ನಿರ್ಗಮಿಸುತ್ತಾನೆ. ಈತನ ಈ ಮಾತುಗಳು ಕೇನ್ ನ ಇಡೀ ಬದುಕನ್ನು ಸೂಚ್ಯವಾಗಿ ಧ್ವನಿಸುತ್ತವೆ. ನಂತರದ ದೃಶ್ಯದಲ್ಲಿ ‘ಜನಾಡು’ ಬಂಗಲೆಯಲ್ಲಿ ಕೇನ್ ನ ಹಳೆಯ ವಸ್ತುಗಳನ್ನು ಬೆಂಕಿಗೆಸೆಯುತ್ತಿರುವಂತಹ ಸಂದರ್ಭದಲ್ಲಿ ಹಿಮಗಡ್ಡೆಗಳಲ್ಲಿ ಆಡಲು ಬಳಸುವ ಮರದ ಆಟಿಕೆಯೊಂದನ್ನು ನಿರುಪಯುಕ್ತ ಆಟಿಕೆ ಎಂದು ಬೆಂಕಿಗೆಸೆಯುತ್ತಾರೆ. ಬೆಂಕಿಯಲ್ಲಿ ಉರಿಯುತ್ತಾ ನಿಧಾನವಾಗಿ ಆಟಿಕೆಯ ಮೇಲಿನ ಹೆಸರು ‘ರೋಸ್ಬಡ್’ ಪರದೆಯ ಮೇಲೆ ಗೋಚರಿಸುತ್ತದೆ. ಚಿತ್ರದ ಆರಂಭದಲ್ಲಿ ಕೇನ್ ಬಾಲಕನಾಗಿದ್ದಾಗ ಆತನನ್ನು ಅವನ ತಾಯಿಯಿಂದ ಬೇರ್ಪಡಿಸಿ ಬೋರ್ಡಿಂಗ್ ಶಾಲೆಗೆ ಸೇರ್ಪಡಿಸುವ ಸಂದರ್ಭದಲ್ಲಿ ಬಾಲಕ ಕೇನ್ ಪ್ರತಿಭಟಿಸುತ್ತಿದ್ದಾಗ, ಆಗ ಹಿಮದಲ್ಲಿ ಈ ಮರದ ಆಟಿಕೆಯು ಅನಾಥವಾಗಿ ಬಿದ್ದಿರುತ್ತದೆ. ಕ್ಲೈಮಾಕ್ಸಿಲ್ಲಿ ಇದು ನಿರುಪಯುಕ್ತ ವಸ್ತುವಾಗಿ ಬೆಂಕಿಯಲ್ಲಿ ಉರಿಯುತ್ತಿದ್ದಾಗ ನಮಗೆ ಆ ದೃಶ್ಯ ನೆನಪಾಗುತ್ತದೆ. ಹೌದು, “ರೋಸ್ಬಡ್’ ಎನ್ನುವುದು ನಮ್ಮ ಬಾಲ್ಯಕಾಲದ ಸಂತಸ, ಮುಗ್ಧತೆ, ಭಧ್ರತೆ, ಭರವಸೆ, ಆಶಯಗಳ ಸಂಕೇತವಾಗಿ ಕಾಡಲಾರಂಬಿಸುತ್ತದೆ.” ಕಳೆದುಕೊಂಡ ಈ ರೋಸ್ಬಡ್ ಅನ್ನು ಮರಳಿ ಪಡೆಯಲು ಮನುಷ್ಯ ಜೀವನವಿಡೀ ವ್ಯರ್ಥ ಪ್ರಯತ್ನ ನಡೆಸುತ್ತಿರುತ್ತಾನೆ. ಆದರೆ ಅದನ್ನು ಮರಳಿ ಪಡೆಯಲು ಬೇಕಾದಂತಹ ನಿರ್ಮಲ, ಪ್ರಾಮಾಣಿಕ ವ್ಯಕ್ತಿತ್ವವನ್ನೇ ಕಳೆದು ಕೊಂಡಿರುತ್ತಾನೆ. ಈ ಕಳೆದುಕೊಳ್ಳುವ ಪ್ರಕ್ರಿಯೆಯೂ ಸಹ ಮನುಷ್ಯನ ಕೈ ಮೀರಿದ್ದು ಎಂದು ‘ಸಿಟಿಜನ್ ಕೇನ್’ ಸಿನಿಮಾ ನಿರಂತರವಾಗಿ ಧ್ಯಾನಿಸುತ್ತದೆ. ತನ್ನ ನೈತಿಕತೆ, ಮೌಲ್ಯಗಳನ್ನು ಕಳೆದುಕೊಳ್ಳುತ್ತಾ, ಇಡೀ ಜಗತ್ತನ್ನು ಗೆಲ್ಲಲು ತವಕಿಸುವ ಮನುಷ್ಯ ಕಡೆಗೆ ಇದರಿಂದ ಪಡೆದುಕೊಳ್ಳುವುದೇನನ್ನು? ಮನುಷ್ಯನ ಬದುಕಿನ ವೈರುಧ್ಯಗಳು, ವಿರೋಧಾಭಾಸಗಳು, ಅಹಂ, ಆತ ಮೇಲಕ್ಕೇರುತ್ತಿದ್ದಾನೆ ಎಂದು ಬಾಹ್ಯವಾಗಿ ಗೋಚರಿಸುತ್ತಿದ್ದರೂ ನೈತಿಕವಾಗಿ ಪತನಗೊಳ್ಳುತ್ತಿರುವುದರ ಮೆಟಫರ್ ಅನ್ನು ಸಿಟಿಜನ್ ಕೇನ್ ಸಿನಿಮಾ ಅದ್ಭುತವಾಗಿ ರೂಪಿಸುತ್ತದೆ.

ಜಗತ್ತಿನ ಸಿನಿಮಾದ ಒಂದು ಮಾಂತ್ರಿಕ ಪವಾಡ ಈ ಸಿಟಿಜನ್ ಕೇನ್ ಚಿತ್ರ. ಈ ಚಿತ್ರ ತೆರೆಕಂಡು 73 ವರ್ಷಗಳಾದರೂ ಇಂದಿಗೂ ಇದು ಸರ್ವಕಾಲಿಕ ಶ್ರೇಷ್ಠ ಸಿನಿಮಾಗಳಲ್ಲೊಂದು. ಇಡೀ ಸಿನಿಮಾದ ಕತೆ, ಚಿತ್ರಕತೆ ವರ್ತುಲಾಕಾರದ ಚೌಕಟ್ಟಿನಲ್ಲಿ ಉರುಳುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಮೈತುಂಬಿಕೊಳ್ಳುತ್ತಾ, ಕಡೆಗೆ ಅದು ಶುರುವಾದಲ್ಲಿ ಬಂದು ತಲಪುತ್ತದೆ. ಮೇಲ್ನೋಟಕ್ಕೆ ಈ ಚಿತ್ರಕತೆಯು “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ” ಎನ್ನುವ ವಿವರಗಳನ್ನು ಪರದೆಯ ಮೇಲೆ ಸಶಕ್ತವಾಗಿ ಮೂಡಿಸುತ್ತಿದೆ ಎಂದು ಕಂಡರೂ ಅದರಾಚೆಗೂ ಮೀರಿದ ತಲ್ಲಣಗಳ, ಬಿಕ್ಕಟ್ಟುಗಳ, ನಮ್ಮೆಲ್ಲರ ಕೈಮೀರಿದ ಬದುಕೊಂದು ಅಲ್ಲಿ ಅಡಕಗೊಂಡಿರುವುದು ನಮಗೆ ಪ್ರತಿ ಫ್ರೇಮಿನಲ್ಲಿ ಅನುಭವವಾಗತೊಡಗುತ್ತದೆ.

ಆರಂಭದ ದೃಶ್ಯದಲ್ಲಿ ಕೇನ್ ನ ಐಶಾರಾಮು ಬಂಗಲೆ ‘ಜುನಾಡು’ವಿನ ಕಬ್ಬಿಣದ ಗೇಟುಗಳ ಮೇಲೆ “No Trespassing” ಎನ್ನುವ ಫಲಕ ಸದಾ ನೇತಾಡುತ್ತಿರುತ್ತದೆ.citizen canee- no tresspassing ಇದರಲ್ಲಿ ತನ್ನ ಕಡೆಯ ವರ್ಷಗಳನ್ನು ಏಕಾಂಗಿಯಾಗಿ ಬದುಕಿದ ಕೇನ್ ಸಾಯುವಾಗ ಉದ್ಗರಿಸಿದ ಪದ ‘ರೋಸ್ಬಡ್’ ಕುರಿತಾಗಿ ತನಿಖೆ ನಡೆಸಲು ತನ್ನ ಸಂಪಾದಕರಿಂದ ನಿಯೋಜಿತಗೊಂಡ ವರದಿಗಾರ ‘ಥಾಮ್ಸನ್’ ಕೇನ್ ನ್ ಗಾರ್ಡಿಯನ್ ಥ್ಯಾಚರ್ ನ ಡೈರಿಯನ್ನು ಓದುತ್ತಾ ಹೋದ ಹಾಗೆ ಆತನ ಆರಂಭದ ಬದುಕು ಫ್ಲಾಶ್ ಬ್ಲಾಕಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ನಂತರ ವರದಿಗಾರ ಆತನ ಖಾಸಗೀ ಮ್ಯಾನೇಜರ್ ಬರ್ನಸ್ಟನ್, ಈಗ ದೂರವಾಗಿರುವ ಕೇನ್ ನ ಒಂದು ಕಾಲದ ಜೀವದ ಗೆಳೆಯ ಲೇಲಾಂಡ್, ಕೇನ್ ನ ಎರಡನೇ ಪತ್ನಿ ಸೂಸನ್ ಅಲೆಕ್ಸಾಂಡರ್, ಬಟ್ಲರ್ ರೇಮಂಡ್ ಮೊದಲಾದವರನ್ನು ಸಂದರ್ಶಿಸುತ್ತಾ ಹೋಗುತ್ತಾನೆ. ಅವರ ನೆನಪುಗಳ ಮೂಲಕ ಚಿತ್ರ ತೆರೆದುಕೊಳ್ಳುತ್ತಾ, ಮೈದಾಳುತ್ತಾ ಹೋಗುತ್ತದೆ. ಆದರೆ ಪ್ರತಿ ಫ್ಲಾಶ್ಬ್ಯಾಕ್ ಅನ್ನು ಒಡೆದು ವರ್ತಮಾನದ ಬೆಳಕಿಗೆ ಒಡ್ಡುವ ವರದಿಗಾರ ಥಾಮ್ಸನ್ ನ ಮುಖದ ಒಂದು ಭಾಗ ಮಾತ್ರ ಸದಾ ಒಂದು ಕೋನದಲ್ಲಿ ಕಾಣಿಸುತ್ತಿದ್ದರೆ ಮುಖದ ಮತ್ತೊಂದು ಭಾಗ ಕತ್ತಲಿನಲ್ಲಿಯೇ ಹುದುಗಿರುತ್ತದೆ. ವರದಿಗಾರನ ಶೋಧನೆಯ ಆಶಯಗಳು ಕತ್ತಲಲ್ಲೇ ಉಳಿಯುತ್ತಾ ಹೋಗುವುದನ್ನು ಈ ತಂತ್ರದ ಮೂಲಕ ಸಾಂಕೇತಿಸುವಲ್ಲಿ ನಿರ್ದೇಶಕ ವೆಲ್ಸ್ ಯಶಸ್ವಿಯಾಗಿದ್ದಾನೆ. ಇಲ್ಲಿ ಕೊನೆಗೆ ಕೇನ್ ನ ಜೀವನವನ್ನು ಶೋಧಿಸ ಹೊರಡುವ ವರದಿಗಾರ ಥಾಮ್ಸನ್ ಗೆ ಕಡೆಗೆ ಆತನ ಸ್ವಂತ ಐಡೆಂಟಿಟಿಯೇ ಕಳೆದು ಹೋಗುತ್ತದೆ.

ತನ್ನ 25ನೇ ವರ್ಷದಲ್ಲಿ ಗಾರ್ಡಿಯನ್ ಥ್ಯಾಚರ್ ನ ಮಾತನ್ನು ಧಿಕ್ಕರಿಸಿ ಪತ್ರಿಕೆಯೊಂದನ್ನು Xanadu,as_shown_in_Citizen_Kaneಖರೀದಿಸುವ ಕೇನ್ ನಂತರ ಹಿಂದಿರುಗಿ ನೋಡುವುದೇ ಇಲ್ಲ. ಆತ ಏರುವ ಪ್ರತಿ ಮೆಟ್ಟಿಲೂ ಯಶಸ್ಸಿನ ಸೋಪಾನವಾಗುತ್ತದೆ. ಅಮೇರಿಕಾದ ಜನಪ್ರಿಯ ‘ನ್ಯೂಯಾರ್ಕ್ ಇನಕ್ವೈರ್’ ಪತ್ರಿಕೆಯ ಮಾಲೀಕ, ಪ್ರಕಾಶಕ ಕೇನ್, ಅತ್ಯಂತ ಪ್ರಭಾವಶಾಲಿ, ಆಗರ್ಭ ಶ್ರೀಮಂತ, ಐಶಾರಾಮಿ ಬಂಗಲೆ ‘ಜನಾಡು’ವಿನ ಒಡೆಯ ಸಿಟಿಜನ್ ಕೇನ್, ಬಂದರು, ಬಂಗಾರದ ಗಣಿಗಳು, ಉದ್ದಿಮೆಗಳ ಮಾಲೀಕನಾಗಿ ವಾಮನನಂತೆ ತ್ರಿವಿಕ್ರಮನಾಗಿ ಬೆಳೆಯುತ್ತಾ ಹೋಗುತ್ತಾನೆ. ಕಡೆಗೆ ಅಮೇರಿಕಾ ಅಧ್ಯಕ್ಷ ಪದವಿಗೂ ಸ್ಪರ್ಧೆ ನಡೆಸುತ್ತಾನೆ. ಆದರೆ ನಿರಂತರವಾಗಿ ಆಕ್ರಮಿಸುತ್ತಾ ಹೋಗುವ ಕೇನ್ ಅದನ್ನು ನಿಭಾಯಿಸುವ ಛಾತಿ ಇಲ್ಲದೆ ನೈತಿಕವಾಗಿಪತನಗೊಳ್ಳುತ್ತಾ ಹೋಗುತ್ತಾನೆ. ಪ್ರೇಯಸಿಗಾಗಿ ಅಧ್ಯಕ್ಷ ಪದವಿಯನ್ನು ಬಿಟ್ಟುಕೊಡುವ ಕೇನ್, ಅತ್ಯಂತ ಸಾಧಾರಣ ಗಾಯಕಿ ಮತ್ತು ನಟಿಯಾದ ಸೂಸನ್ ಅನ್ನು ಅಪ್ರತಿಮ ನಟಿ ಎಂದು ಭ್ರಮಿಸುತ್ತಾ ಸಾಗಿ ಆಕೆಗಾಗಿ ಥಿಯೇಟರ್ ಅನ್ನು ಕಟ್ಟಿಸುತ್ತಾನೆ. ತನ್ನ ಪತ್ರಿಕೆಯ ಪ್ರತಿಯೊಂದು ಪುಟವನ್ನು ಸೂಸನ್ ಳ ವೈಭವೀಕರಣಕ್ಕೆ ಮೀಸಲಿಡುತ್ತಾನೆ. ಆದರೆ ಕಡೆಗೆ ಆಕೆಯನ್ನು ಪಂಜರದ ಗಿಣಿಯಾಗಿಸುತ್ತಾನೆ. ಜಗತ್ತಿನ ಎಲ್ಲಾ ಶ್ರೇಷ್ಠ ವಸ್ತುಗಳನ್ನು,ಆಭರಣಗಳನ್ನು ಖರೀದಿಸಿ ಅದಕ್ಕಾಗಿಯೇ ಒಂದು ಬಂಗಲೆಯನ್ನು ಕಟ್ಟಿಸುತ್ತಾನೆ. ಇದೆಲ್ಲದರಿಂದ ದಿಗ್ಭ್ರಮೆ ಮತ್ತು ಶೋಷಣೆಗೊಂಡ ಸೂಸನ್ ಆತನನ್ನು ತೊರೆಯುತ್ತಾಳೆ. ತನ್ನ ಐಶಾರಾಮಿ ಬಂಗಲೆ ‘ಜನಾಡು’ವನಲ್ಲಿ ಕಳೆದು ಹೋಗುವ ಕೇನ್ ಗೆ ‘ತಾನು ಯಾರು? ತನ್ನ ಬದುಕಿನ ಹಿನ್ನೆಲೆ ಏನು? ಏತಕ್ಕಾಗಿ ಬದುಕುತ್ತಿದ್ದೇನೆ? ಎನ್ನುವ ಪ್ರಶ್ನೆಗಳು ಕಾಡಲಾರಂಬಿಸುತ್ತವೆ. ಅತ್ಯಂತcitizen_kane_2 ವೈಭವದಲ್ಲಿ, ಜಗದೇಕವೀರನ ಆಕ್ರಮಣದ ಶೈಲಿಯಲ್ಲಿ ಆಳಿದ ಸಿಟಿಜನ್ ಕೇನ್ ಕಡೆಗೆ ಏಕಾಂಗಿಯಾಗಿ ಅಸಹಾಯಕನಾಗಿ ಸಾಯುತ್ತಾನೆ. ತನ್ನೊಳಗಿನ ಸತ್ಯದ ಅರಿವಾಗಲೀ, ತನ್ನ ಹೊರಗಿನ ಬದುಕಿನ ವಾಸ್ತವದ ಅರಿವಾಗಲಿ ಕೇನ್ ಗೆ ದಕ್ಕುವುದೇ ಇಲ್ಲ. ಈ ಕೇನ್ ಗೆ ‘ರೋಸ್ಬಡ್’ ಎಲ್ಲಿದೆ ಎಂದು ಹುಡುಕುವ ತವಕವಿದೆಯಷ್ಟೇ ಹೊರತಾಗಿ ‘ರೋಸ್ಬಡ್’ನ ಮೆಟಫರ್ ಆತನಿಗೆ ಅರಿವಾಗುವಷ್ಟರಲ್ಲಿ ಕೇನ್ ನ ಬದುಕೇ ಮುಗಿದು ಹೋಗಿರುತ್ತದೆ. ಆತನ ಬದುಕು ಭವಿಷ್ಯದ ತಲೆಮಾರುಗಳಿಗೆ ಕೇವಲ ಮತ್ತೊಬ್ಬರ ನೆನಪುಗಳ ಅಸ್ಥಿಪಂಜರವಾಗಿ ಮಾತ್ರ ಉಳಿದುಬಿಡುತ್ತವೆ ಮತ್ತು ಅದು ಅಷ್ಟು ಮಾತ್ರ ಎಂದು ಮನಮುಟ್ಟುವಂತೆ ಕಟ್ಟುವುದು ಎಂತಹ ಮಾಂತ್ರಿಕತೆ ಅಲ್ಲವೇ??

36 ಮಹಲುಗಳ 40 ಕೋಟಿ ಬಂಗಲೆಯ ಮಾಲೀಕ, ಸಾವಿರಾರು ಕೋಟಿ ವ್ಯವಹಾರದ ಉದ್ಯಮಿ, ಟಿವಿ18 ಸಮೂಹದ ಮಾಧ್ಯಮವನ್ನು ಖರೀದಿಸಿದ ಈ antaliaಆಧುನಿಕ ಕೇನ್ ‘ಮುಖೇಶ್ ಅಂಬಾನಿ’ ಇಂದಿನ ವರ್ತಮಾನದ ಸಂದರ್ಭದಲ್ಲಿ ಇಲ್ಲಿ ನೆನಪಾಗುತ್ತಾನೆ. ಸಿಟಿಜನ್ ಕೇನ್ ನಂತೆಯೇ ಜಗದೇಕ ವೀರನಂತೆ ಆಕ್ರಮಿಸುತ್ತಾ ಹೊರಟಿರುವ ಮುಖೇಶ್ ಅಂಬಾನಿ, ಅಡಾನಿಗಳಿಗೆ ‘ರೋಸ್ಬಡ್’ನ ಅರಿವೇ ಇಲ್ಲ. ನೈತಿಕತೆ ಮತ್ತು ಮೌಲ್ಯಗಳು ಅವರ ಪ್ರಜ್ಞೆಯೊಳಗೆ ಇಳಿದೇ ಇಲ್ಲ. ಕೇನ್ ನಂತೆಯೇ ಈ ಅಂಬಾನಿಗಳಿಗೆ, ಅಡಾನಿಗಳಿಗೆ ಮತ್ತು ಇವರ ಅಪ್ತ ಗೆಣೆಕಾರ ಭಾರತದ ಸಿಇಓ ನರೇಂದ್ರ ಮೋದಿಯವರಿಗೆ ಸತ್ಯದ ಸೆಳೆತಗಳು ಇಷ್ಟವಿಲ್ಲ. ಅಧ್ಯಕ್ಷ ಪದವಿಗೆ ಸ್ಪರ್ಧಿಸಿದ ಸಿಟಿಜನ್ ಕೇನ್ ತನ್ನ ಚುನಾವಣಾ ಭಾಷಣಗಳಲ್ಲಿ ತನ್ನ ಎದುರಾಳಿಯನ್ನು ಗೇಲಿ ಮಾಡುತ್ತಾ, ಕೆಳ ಮಟ್ಟದಲ್ಲಿ ಮಾತನಾಡುತ್ತಾನೆ. ಈ ನರೇಂದ್ರ ಮೋದಿಯ ಚುನಾವಣಾ ಭಾಷಣಗಳು ಸಹ ಈ ಸಿಟಿಜನ್ ಕೇನ್ ನ ಮಾದರಿಯಲ್ಲೇ ಇದ್ದದ್ದು ಇಂದು ಇತಿಹಾಸ. ಈ ಅಂಬಾನಿ, ಅಡಾನಿಗಳ ಬದುಕು ಕೇನ್ ನ ಬದುಕಂತೆ ನಮ್ಮ ಕಣ್ಣೆದುರಿಗೆ ಇರುವುದು ಸಧ್ಯಕ್ಕೆ ವರ್ತಮಾನ. ನ್ಯೂಯಾರ್ಕ್ ಅನ್ನು ಆಕ್ರಮಿಸಿಕೊಳ್ಳುವ ಕೇನ್ ಹುಂಬನಂತೆ ಅಮೇರಿಕಾವನ್ನು ಆಕ್ರಮಿಸಿಕೊಳ್ಳಲು ಹೊರಡುತ್ತಾನೆ. ಇಂದಿನ ಮೋದಿ ಸರ್ಕಾರದಲ್ಲಿ ಕೇನ್ ನಂತೆಯೇ ಅಂಬಾನಿಗಳು ,ಅಡಾನಿಗಳು ಇಂಡಿಯಾದ ನೆಲ, ಜಲ, ಗಾಳಿಯನ್ನು ಆಕ್ರಮಿಸಲು ಜೈತ್ರಯಾತ್ರೆ ಆರಂಬಿಸಿದ್ದಾರೆ.

ತನ್ನ 25ನೇ ವಯಸ್ಸಿನಲ್ಲಿ ತನ್ನ ಗಾರ್ಡಿಯನ್ ಥ್ಯಾಚರ್ ನನ್ನು ವಿರೋಧಿಸಿ ‘ನ್ಯೂಯಾರ್ಕ ಇನಕ್ವೈರ್’ ambani-modiಪತ್ರಿಕೆಯನ್ನು ಕೊಂಡುಕೊಳ್ಳುವ ಕೇನ್ ಪತ್ರಿಕೆಯ ಕಛೇರಿಗೆ ಗೂಳಿಯಂತೆ ನುಗ್ಗಿ ಅದರ ಮೂಲ ಸಂಪಾದಕನನ್ನು ಹಿಗ್ಗಾಮುಗ್ಗ ಅವಮಾನಿಸಿ ಹೊರ ತಳ್ಳುತ್ತಾನೆ. ತನ್ನ ಮೂಗಿನ ನೇರಕ್ಕೆ ವರದಿಗಳನ್ನು ಸಿದ್ಧಪಡಿಸುತ್ತಾನೆ. ಇದರ ಪರಿಣಾಮ ಒಳ್ಳೆಯದಾಗುವುದೇ ಎಂದು ಆತನ ಸ್ನೇಹಿತ ಅನುಮಾನ ವ್ಯಕ್ತ ಪಡಿಸಿದಾಗ “People will think what I tell them to think” ಎಂದು ಅಹಂಕಾರದಿಂದ ನುಡಿಯುವ ಕೇನ್ ಅಪ್ರಾಣಿಕತೆಯೆಡೆಗೆ ಮುನ್ನುಗ್ಗುತ್ತಾನೆ. ವಿರೋಧಿಗಳನ್ನು ಹತ್ತಿಕ್ಕುತ್ತಾ ಸಾಗುತ್ತಾನೆ. ಆದರೆ ಇದನ್ನು ನಿಭಾಯಿಸುವಲ್ಲಿ ದಯನೀಯವಾಗಿ ಸೋಲುತ್ತಾನೆ. ಇಂದು ಮುಖೇಶ್ ಅಂಬಾನಿ ನೇತೃತ್ವದಲ್ಲಿ ಗಣಿಗಾರಿಕೆ, ಹಣಕಾಸು, ತೈಲ ಉದ್ಯಮ, ಕ್ರಿಕೆಟ್, ರೀಟೇಲ್ ವಲಯಗಳಲ್ಲಿ ಸಾವಿರಾರು ಕೋಟಿ ವ್ಯವಹಾರ ಮಾಡುತ್ತಿರುವ ‘ರಿಲೆಯನ್ಸ್ ಸಂಸ್ಥೆ’ ಕಳೆದ ವರ್ಷಗಳಲ್ಲಿ ಮಾಧ್ಯಮ ರಂಗಕ್ಕೆ ಗೂಳಿಯಂತೆ ಪ್ರವೇಶಿಸಿದೆ. ನೆಟ್ವರ್ಕ್ 18 ಗುಂಪಿನ ಎಲ್ಲಾ ಛಾನಲ್ ಗಳನ್ನು ( ಸುಮಾರು 17 ಛಾನಲ್ಸ್) ಖರೀದಿಸಿರುವ ರಿಲೆಯನ್ಸ್ ಸಮೂಹ ದಕ್ಷಿಣ ಭಾರತದ ರಾಮೋಜಿರಾವ್ ಒಡೆತನದ ಈ ಟಿವಿ ಛಾನಲ್ ಗಳಲ್ಲೂ ತನ್ನ ಬಹುಪಾಲು ಶೇರುಗಳನ್ನು ತೊಡಗಿಸಿದೆ. ಇತ್ತೀಚೆಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ‘ಈ ಟಿವಿ’ ನ್ಯೂಸ್ ಛಾನಲ್ ಗಳನ್ನು ಪ್ರಾರಂಬಿಸಿದೆ. ತನ್ನನ್ನು ವಿರೋಧಿಗಳನ್ನು ಕೇನ್ ನಂತೆಯೇ ಹತ್ತಿಕ್ಕುವಲ್ಲಿ ಪಳಗಿರುವ ಮುಖೇಶ್ ಅಂಬಾನಿಯcitizen-kane-rosebud ಇತ್ತೀಚಿನ ಬಲಿಗಳು ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್, ಸಿಎನ್ಎನ್ ಐಬಿಎನ್ ಗುಂಪಿನ ಹಿರಿಯ ,ಪ್ರಾಮಾಣಿಕ ಪತ್ರಕರ್ತರು. ಮುಕ್ತ ಅಭಿವ್ಯಕ್ತಿ ಸ್ವಾತಂತ್ರದ ವಿರೋಧಿಗಳಾದ ರಿಲೆಯನ್ಸ್ ಸಮೂಹದ ಮಾಲೀಕರ ಕೈಯಲ್ಲಿ ಮಾಧ್ಯಮದ ಒಡೆತನ ದಕ್ಕಿರುವುದು ಪ್ರಜಾಪ್ರಭುತ್ವದ ಅಡಿಪಾಯಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಿದೆ. “ಈ ರಿಲಯನ್ಸ್ ಸಮೂಹ ಈ ರೀತಿಯಾಗಿ ಮಾಧ್ಯಮರಂಗದಲ್ಲಿ ಪ್ರವೇಶಿಸಿ ನೆಟ್ವರ್ಕ್ 18 ಗುಂಪಿನ ಎಲ್ಲಾ ಛಾನಲ್ ಗಳನ್ನು ಖರೀದಿಸಿರುವ ಪ್ರಕ್ರಿಯೆಯ ಕುರಿತಾಗಿ ಬೇರಾವ ಮಾಧ್ಯಮಗಳು ವರದಿ ಮಾಡದಿರುವುದು ನನಗೇನೂ ಆಶ್ಚರ್ಯವೆನಿಸಿಲ್ಲ” ಎಂದು ಕುಲದೀಪ್ ನಯ್ಯರ್ ಬರೆಯುತ್ತಾರೆ. ಇದು ಬಲು ದೊಡ್ಡ ವಿಪರ್ಯಾಸ ಮತ್ತು ಆತಂಕಕಾರಿ. ನಮ್ಮಲ್ಲಿ ಆಳವಾಗಿ ಹುದುಗಿರುವ ಪರಂಪರಾನುಗತ ಗುಲಾಮಗಿರಿ ಮತ್ತು ಸೋಮಾರಿತನ ಇಂದಿನ ಈ ಆಧುನಿಕ ಸಿಟಿಜನ್ ಕೇನ್ ನ ಸಾಮ್ರಾಜ್ಯಕ್ಕೆ ನೀರೆರೆದು ಪೋಷಿಸುತ್ತಿವೆ. ಇಂತಹ ಒಂದು ದುರಂತಕ್ಕೆ ಕಾಯುತ್ತಿದೆಯೇನೋ ಎಂಬಂತೆ ನಮ್ಮ ವ್ಯವಸ್ಥೆ ವರ್ತಿಸುತ್ತಿದೆ.

6 thoughts on ““ಸತ್ಯದ, ಪ್ರಾಮಾಣಿಕತೆಯ ಸೆಳೆತಗಳನ್ನು ನಿರಾಕರಿಸಿದವರು…”

 1. Anand Prasad

  ಭಾರತೀಯರಿಗೆ ಒಟ್ಟಿಗೆ ಕೂಡಿ ಕೆಲವು ಸಾಮಾನ್ಯ ಕಾರ್ಯಕ್ರಮಗಳ ಆಧಾರದಲ್ಲಿ ಕೆಲಸ ಮಾಡುವುದು ಸಿದ್ಧಿಸಿಲ್ಲ. ಇದರಿಂದಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯುತ್ತಿಲ್ಲ. ಭಾರತದಲ್ಲಿ ವ್ಯಕ್ತಿ ಆಧಾರಿತ, ಕುಟುಂಬ ಆಧಾರಿತ ರಾಜಕೀಯ ಪಕ್ಷಗಳು ಮಾತ್ರವೇ ಯಶಸ್ವಿಯಾಗುತ್ತಿವೆ. ತತ್ವ, ಸಿದ್ಧಾಂತ, ಕಾರ್ಯಕ್ರಮ ಆಧಾರಿತ ಪಕ್ಷಗಳು ಯಶಸ್ವಿಯಾಗುತ್ತಿಲ್ಲ. ತತ್ವ, ಸಿದ್ಧಾಂತ, ಕಾರ್ಯಕ್ರಮ ಆಧಾರಿತ ಪಕ್ಷಗಳು ಸಮರ್ಪಕವಾಗಿ ಕೆಲಸ ಮಾಡಲಾಗದೆ ಒಡೆದು ಚೂರು ಚೂರಾಗುತ್ತವೆ. ಉದಾಹರಣೆಗೆ ಜನತಾ ಪಕ್ಷವನ್ನು ನೋಡಬಹುದು. ವ್ಯಕ್ತಿ ಪ್ರತಿಷ್ಠೆ, ಅಧಿಕಾರ ಸ್ಥಾನಕ್ಕಾಗಿ ಪೈಪೋಟಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ಬಹುಮತದ ನಿರ್ಣಯ ತೆಗೆದುಕೊಳ್ಳದೆ ಕೆಲವರು ಪಕ್ಷವನ್ನು ನಿಯಂತ್ರಿಸುವುದು ರಾಜಕೀಯ ಪಕ್ಷಗಳು ಒಡೆಯಲು ಕಾರಣವಾಗಿದೆ. ಇದನ್ನು ನಿವಾರಿಸದೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಲಾರದು. ಇತ್ತೀಚೆಗೆ ಜನ್ಮ ತಾಳಿದ ಆಮ್ ಆದ್ಮಿ ಪಕ್ಷವೂ ಇದಕ್ಕೆ ಹೊರತಾಗಿಲ್ಲದಿರುವುದು ಜನರಲ್ಲಿ ಭ್ರಮನಿರಸನ ಮೂಡಲು ಕಾರಣವಾಗಬಹುದು.

  ಭಾರತದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಎಲ್ಲ ಪ್ರಾದೇಶಿಕ ಪಕ್ಷಗಳೂ ವ್ಯಕ್ತಿ ಹಾಗೂ ಕುಟುಂಬ ಆಧಾರಿತವಾಗಿ ನಡೆಯುತ್ತಿವೆ. ಕುಟುಂಬ ಅಥವಾ ವ್ಯಕ್ತಿ ನಿಯಂತ್ರಿತವಲ್ಲದೆ ಇವು ಉಳಿಯುವುದಿಲ್ಲ, ಒಡೆದು ಚೂರುಚೂರಾಗುತ್ತವೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಕ್ಷವು ಕುಟುಂಬ ಆಧಾರಿತವಾಗಿ (ರಾಜ ಕುಟುಂಬದಂತೆ) ನಡೆಯುತ್ತಿದೆ. ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿಯು ಸಂಘದ ನಿಯಂತ್ರಣದಲ್ಲಿ ನಡೆಯುತ್ತಿರುವ ಕಾರಣ ಒಂದಾಗಿ ಉಳಿದಿದೆ. ಇತ್ತೀಚೆಗೆ ಇದು ಕೂಡ ಮೋದಿ ಎಂಬ ಒಬ್ಬ ವ್ಯಕ್ತಿಯ ನಿಯಂತ್ರಣದಲ್ಲಿ ನಡೆಯುತ್ತಿದೆ. ಒಟ್ಟಿನಲ್ಲಿ ಹೇಳುವುದಾದರೆ ಭಾರತದಲ್ಲಿ ಪ್ರಜೆಗಳಿಗೆ ಓಟಿನ ಹಕ್ಕು ಇದೆಯೇ ಹೊರತು ಇಲ್ಲಿ ನೈಜ ಪ್ರಜಾಪ್ರಭುತ್ವ ನೆಲೆಗೊಂಡಿಲ್ಲ. ಎಡ ಪಕ್ಷಗಳು ಕಾರ್ಯಕ್ರಮ ಹಾಗೂ ಸಿದ್ಧಾಂತದ ಅಡಿಯಲ್ಲಿ ನಡೆಯುತ್ತವೆಯಾದರೂ ಅವುಗಳು ಭಾರತದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಜನಬೆಂಬಲವನ್ನು ಇದುವರೆಗೂ ಪಡೆದಿಲ್ಲ.

  ಉದಾರೀಕರಣ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆ ಬಂದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಬೇಕಾದ ಮಾಧ್ಯಮಗಳು ಏಕವ್ಯಕ್ತಿಯ ನಿಯಂತ್ರಣದಲ್ಲಿ ಸಿಲುಕಿ ಮಾಧ್ಯಮ ಲೋಕದ ಸರ್ವಾಧಿಕಾರಕ್ಕೆ ಕಾರಣವಾಗಿರುವುದು ಇಂದಿನ ದುರಂತ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸಿ ಯಜಮಾನಶಾಹಿ ವ್ಯವಸ್ಥೆಯನ್ನು, ಪಾಳೆಗಾರಿಕೆಯನ್ನು, ಊಳಿಗಮಾನ್ಯ ವ್ಯವಸ್ಥೆಯನ್ನು ಬಲಗೊಳಿಸಲು ಕಾರಣವಾಗುತ್ತಿದ್ದು ಇದರಿಂದ ಹೊರಬರುವುದು ಹೇಗೆ ಎಂಬುದರ ಬಗ್ಗೆ ಪರ್ಯಾಯ ಮಾಧ್ಯಮಗಳಲ್ಲಿ ಚಿಂತನೆ ನಡೆಸಬೇಕಾಗಿದೆ. ಇಂಥ ವಿಕಾರ ವ್ಯವಸ್ಥೆಯಿಂದ ಹೊರಬರಲು ದೇಶದಲ್ಲಿ ಇಂಟರ್ನೆಟ್ ವ್ಯವಸ್ಥೆಯನ್ನು ಸಾಮಾನ್ಯ ಜನರಿಗೆ ತಲುಪುವಂತೆ ಮಾಡುವುದು ಒಂದೇ ದಾರಿ. ಬೇರೆ ದಾರಿ ಉಳಿದಿಲ್ಲ.

  Reply
 2. M A Sriranga

  ಆನಂದಪ್ರಸಾದ್ ಅವರಿಗೆ– ನಮ್ಮ ಪ್ರಜಾಪ್ರಭುತ್ವದಲ್ಲಿ ತಾವು ಆಶಿಸಿರುವ ಬದಲಾವಣೆ ತರಲು ನಾವು ಆರಿಸಿ ಕಳುಹಿಸಿದ ಶಾಸಕ/ಸಂಸದರನ್ನು ಪ್ರಜೆಗಳು ವಾಪಸ್ಸು ಕರೆಸುವ ಪದ್ಧತಿ ಬೇಕಾಗುತ್ತದೆ. ಇದು ವ್ಯಾವಹಾರಿಕವಾಗಿ,ತಾಂತ್ರಿಕವಾಗಿ ಸಾಧ್ಯವೇ? ಇದರ ಬಗ್ಗೆ ಸುಮ್ಮನೆ ಕನಸು ಕಾಣುವುದರಿಂದ ಪ್ರಯೋಜನವಿಲ್ಲ. ಇನ್ನು ಸರ್ಕಾರವೇ ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ. ಹೀಗಾಗಿ ಖಾಸಗಿಯವರಿಗೆ ಕೆಲವು ರಂಗಗಳಲ್ಲಿ ಹೂಡಿಕೆ ಮಾಡಿ ಅದನ್ನು ಭಾರತದ ಸಂವಿಧಾನ,ನ್ಯಾಯ ವ್ಯವಸ್ಥೆ ಇತ್ಯಾದಿಗಳ ಚೌಕಟ್ಟಿನಲ್ಲಿ ಕೆಲಸ ಮಾಡಲು ಬಿಡಬೇಕಾಗುತ್ತದೆ. ಅಂತಹ ಖಾಸಗಿ ಕಂಪನಿಗಳು ತಮ್ಮ ಬುದ್ಧಿಮತ್ತೆ,ವ್ಯವಹಾರ ಜ್ಞಾನಗಳಿಂದ ಲಾಭ ಮಾಡಿದರೆ ತಪ್ಪೇ? ಆ ಲಾಭಕ್ಕೆ ತಕ್ಕ ಹಾಗೆ ಸರ್ಕಾರದ ನೀತಿ-ನಿಯಮಗಳಂತೆ ಆದಾಯ ತೆರಿಗೆ ವಸೂಲಿಗೆ ಸರ್ಕಾರದ ಸಂಸ್ಥೆಗಳಿವೆ. ಅದರಲ್ಲಿ ದೋಷ ಕಂಡುಬಂದರೆ ಆ ಕಂಪನಿಗಳನ್ನು ಶಿಕ್ಷಿಸುವ ಅಧಿಕಾರ ಸರ್ಕಾರಕ್ಕೆ ಇದೆಯಲ್ಲವೇ? ಇದಕ್ಕೆ ಉದಾಹರಣೆಯಾಗಿ ನಮ್ಮ ಕರ್ನಾಟಕದ ಗಣಿ ದೊರೆಗಳ ಕಂಪನಿ ವ್ಯವಹಾರವೇ ಇದೆಯಲ್ಲ? ಆಳುವ ಸರ್ಕಾರಕ್ಕೆ ಕೆಲವೊಂದು ಆದಾಯ ರಹಿತ ಸೇವಾ ವ್ಯವಸ್ಥೆಗಳನ್ನು ನಡೆಸುವ ಜವಾಬ್ದಾರಿಗಳಿರುತ್ತವೆ. ಉದಾಹರಣೆಗೆ ಗಡಿ ರಕ್ಷಣೆ,ಸೈನ್ಯ, ಆರೋಗ್ಯ,ಶಿಕ್ಷಣ ಇತ್ಯಾದಿ (ಆರೋಗ್ಯ ಮತ್ತು ಶಿಕ್ಷಣಕ್ಕೆ ಖಾಸಗಿಯವರ ಪರ್ಯಾಯ ವ್ಯವಸ್ಥೆ ಇದ್ದರೂ ಸಹ ಸರ್ಕಾರ ಈ ಜವಾಬ್ದಾರಿಯಿಂದ ದೂರ ಸರಿಯುವಂತಿಲ್ಲ). ಇದಕ್ಕೆಲ್ಲಾ ಹಣ ಪ್ರಜೆಗಳು ನೀಡುವ ತೆರಿಗೆಯಿಂದಲೇ ಹೋಗುತ್ತದೆ. ಇದರ ಜತೆಗೆ ಕಾರ್ಖಾನೆಗಳು,ಪತ್ರಿಕೆಗಳು,ಟಿ ವಿ ವಾಹಿನಿಗಳ ಭಾರವನ್ನೂ ಸರ್ಕಾರವೇ ಹೊರಲಿ ಎಂದರೆ ಅದಕ್ಕೆ ಅಗಾಧವಾದ ನೌಕರರು , ಅವರ ಸಂಬಳ ಸವಲತ್ತುಗಳು ಜತೆಗೆ ಇದನ್ನು ನಿಯಂತ್ರಿಸಲು ಅಧಿಕಾರಶಾಹಿ,ಕಟ್ಟಡಗಳು ಇತ್ಯಾದಿಗಳು ಹನುಮಂತನ ಬಾಲದ ಹಾಗೆ ಬೆಳೆಯುತ್ತಾ ಹೋಗುತ್ತದೆ. ಸರ್ಕಾರ ನಡೆಸುವ ಕಾರ್ಖಾನೆಗಳು ಉತ್ಪಾದಿಸುವ ಸರಕುಗಳನ್ನು ಕೊಳ್ಳಲು ಮಾರುಕಟ್ಟೆಯಲ್ಲಿ ಬೇಡಿಕೆ ಇರಬೇಕಲ್ಲ? ಬಳಕೆದಾರ ಕೊಟ್ಟ ಹಣಕ್ಕೆ ತಕ್ಕ ಮಾಲು ಮತ್ತು after sales ಬಯಸುತ್ತಾನೆ ತಾನೇ? ಅದನ್ನು ನಮ್ಮ ಸರ್ಕಾರಿ ಸಂಸ್ಥೆಗಳು ಎಷ್ಟು ಚೆನ್ನಾಗಿ ನಿರ್ವಹಿಸಬಲ್ಲವು ಎಂಬುದಕ್ಕೆ BSNL ಒಂದೇ ಸಾಕು. ತಾಲ್ಲೂಕು ಮತ್ತು ಗ್ರಾಮಾಂತರ ಮಟ್ಟದಲ್ಲಿ ವಾರಗಟ್ಟಲೆ ಕೆಟ್ಟು ಹೋಗಿರುವ telephone linesಗಳ ಬಗ್ಗೆ ಪತ್ರಿಕೆಗಳಲ್ಲಿ ತಾವು ಓದಿರುತ್ತೀರಿ. ಇನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಛೇರಿಗಳ ಬಗ್ಗೆ ಹೇಳುವುದೇನಿದೆ? ಕುರ್ಚಿಗೆ ಕೋಟು ತಗುಲಿಹಾಕಿ ಹೋದರೆ ಆಯ್ತು. ಆ ಸೀಟಿನಲ್ಲಿ ಕೂರುವವನಿಗಾಗಿ ಕಾಯುತ್ತಾ ಕ್ಯೂ ನಲ್ಲಿ ನಿಲ್ಲಬೇಕು ಅಷ್ಟೇ. ಬೇರೆ ದಾರಿ ಇಲ್ಲ.

  Reply
 3. Anand Prasad

  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗಕ್ಕೆ ಅಗತ್ಯ ಬದಲಾವಣೆಗಳನ್ನು ತರುವ ಅಧಿಕಾರ ಶಾಸಕಾಂಗಕ್ಕೆ ಇದೆ. ಇದನ್ನು ಬಳಸಿ ಕಾರ್ಯಾಂಗಕ್ಕೆ ಅರ್ಥಾತ್ ಅಧಿಕಾರಶಾಹಿಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು ಮಾಡಲು ಸಾಧ್ಯವಿದೆ. ಹಾಗೆ ಮಾಡದಂತೆ ಅವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಆದರೂ ಸರ್ಕಾರೀ ನೌಕರರ ಸೇವಾ ನಿಯಮಗಳಿಗೆ ಸೂಕ್ತ ತಿದ್ದುಪಡಿಯನ್ನು ಮಾಡಿ ಅದನ್ನು ಜನಸ್ನೇಹಿಯನ್ನಾಗಿ ಮಾಡಲು ಚುನಾಯಿತ ಪ್ರತಿನಿಧಿಗಳು ಮಾಡಲು ಮುಂದಾಗುತ್ತಿಲ್ಲ. ಚುನಾಯಿತ ಜನಪ್ರತಿನಿಧಿಗಳು ತಮ್ಮ ಕೆಲಸವಾದ ಅಗತ್ಯ ಶಾಸನಗಳನ್ನು ರೂಪಿಸುವ ಕೆಲಸ ಮಾಡಿದರೆ ಇಡೀ ವ್ಯವಸ್ಥೆಯನ್ನೇ ಸಕಾರಾತ್ಮಕವಾಗಿ ಬದಲಾಯಿಸಬಹುದು. ‘ಬಿಸಿ ಇಲ್ಲದೆ ಬೆಣ್ಣೆ ಕರಗುವುದಿಲ್ಲ’ ಎಂಬ ಗಾದೆಯೇ ಇದೆ. ಕೆಲಸ ಮಾಡದ, ಲಂಚಕೋರ, ಅದಕ್ಷ ಹಾಗೂ ದರ್ಪಿಷ್ಟ ಅಧಿಕಾರಿಗಳನ್ನು ಶೀಘ್ರವಾಗಿ ಕೆಲಸದಿಂದ ತೆಗೆದುಹಾಕಿ ಹೊಸಬರನ್ನು ನೇಮಿಸುವ ತಿದ್ದುಪಡಿ ಮಸೂದೆಯನ್ನು ತಂದರೆ ಸರ್ಕಾರೀ ವಲಯದ ಕೆಲಸಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲು ಸಾಧ್ಯವಿದೆ. ಇದಕ್ಕಾಗಿ ನಮ್ಮ ಚುನಾಯಿತ ಪ್ರತಿನಿಧಿಗಳನ್ನು ಒತ್ತಾಯಿಸಬೇಕಾಗುತ್ತದೆ. ಚುನಾಯಿತ ಪ್ರತಿನಿಧಿಗಳು ಕೆಲಸ ಮಾಡದಿದ್ದರೆ ಅವರನ್ನು ವಾಪಾಸ್ ಕರೆಸಿಕೊಳ್ಳುವ ಹಕ್ಕನ್ನು ಮತದಾರರಿಗೆ ನೀಡುವುದು ಅಗತ್ಯ. ಇದಕ್ಕಾಗಿ ಅಗತ್ಯ ತಿದ್ದುಪಡಿ ಮಾಡಬೇಕಾಗುತ್ತದೆ. ಹಾಗೆ ಮಾಡಲು ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ತರುವ ಕನಸು ಹೊಂದಿರುವ ಆಮ್ ಆದ್ಮಿ ಪಕ್ಷದಂಥ ಪಕ್ಷವನ್ನು ಜನ ಆಯ್ಕೆ ಮಾಡಬೇಕಾಗುತ್ತದೆ. ಕನಸು ಕಾಣುವುದು ಒಳ್ಳೆಯದೇ. ಚಿಂತಕರು ಹಿಂದೆ ಕಂಡ ಕನಸುಗಳನ್ನು ಮುಂದೆ ಯಾರಾದರೂ ನನಸು ಮಾಡುತ್ತಾರೆ. ಕನಸುಗಳನ್ನೇ ಕಾಣದೆ ಇದ್ದರೆ ಬದಲಾವಣೆ ತರಲು ಸಾಧ್ಯವಿಲ್ಲ.

  ಎಲ್ಲ ಉದ್ಯಮಗಳನ್ನು ಸರ್ಕಾರವೇ ನಡೆಸಲು ಸಾಧ್ಯವಿಲ್ಲ. ಉದ್ಯಮಗಳನ್ನು ಖಾಸಗಿಯವರು ನಡೆಸುವುದರ ಬಗ್ಗೆ ವಿರೋಧ ಇಲ್ಲ. ಬಿಎಸ್ಸೆನ್ನೆಲ್ ಎಂಬ ಸರ್ಕಾರೀ ನಿಯಂತ್ರಿತ ದೂರಸಂಪರ್ಕ ಸಂಸ್ಥೆಯ ಬಗ್ಗೆ ಹೇಳಿದ್ದೀರಿ. ನೀವು ಹೇಳಿರುವುದು ನೂರು ಶೇಕಡಾ ನಿಜ. ಇದಕ್ಕೆ ಕಾರಣ ಸರ್ಕಾರವೇ. ಬೇಡಿಕೆ ಇದ್ದಷ್ಟು ಹಾಗೂ ಅಗತ್ಯ ಇರುವ ಸಲಕರಣೆಗಳನ್ನು ಸರ್ಕಾರವು ಪೂರೈಸದೇ ಇರುವುದೇ ಬಿಎಸ್ಸೆನ್ನೆಲ್ ಎಂಬ ಸಂಸ್ಥೆಯ ದುರವಸ್ಥೆಗೆ ಪ್ರಧಾನ ಕಾರಣವಾಗಿದೆ. ಹಾಳಾದ ಉಪಕರಣಗಳನ್ನು ಬದಲಿಸಲು ಸರ್ಕಾರವು ಮುಂದಾಗುತ್ತಿಲ್ಲ ಹಾಗೂ ಅಗತ್ಯ ಇರುವ ಕೇಬಲ್ ಇತ್ಯಾದಿಗಳನ್ನು ಸರ್ಕಾರವು ಪೂರೈಸದೇ ಇದ್ದರೆ ಬಿಎಸ್ಸೆನ್ನೆಲ್ ಸಿಬ್ಬಂದಿಯಾದರೂ ಏನು ಮಾಡಿಯಾರು? ಇಂಥ ಕೊರತೆಯ ನಡುವೆಯೂ ಇಂದು ಭಾರತದ ಹಳ್ಳಿಗಳಲ್ಲಿ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಇದ್ದರೆ ಅದು ಬಿಎಸ್ಸೆನ್ನೆಲ್ ಕಾರಣದಿಂದಾಗಿ ಇದೆಯೇ ಹೊರತು ಯಾವುದೇ ಖಾಸಗಿ ದೂರಸಂಪರ್ಕ ಕಂಪನಿಯೂ ಇದುವರೆಗೆ ಭಾರತದ ಗ್ರಾಮಗಳಲ್ಲಿ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಅಥವಾ ೩ಜಿ ಮೊಬೈಲ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಿಲ್ಲ. ಭಾರತದ ಹಳ್ಳಿಗಳಲ್ಲಿ ಇಂದಿಗೂ ೨ಜಿ ಮೊಬೈಲ್ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಮೊಬೈಲಿನಲ್ಲಿ ಒಂದು ಇ-ಮೇಲ್ ನೋಡಬೇಕಾದರೂ ನಿಮಿಷಗಟ್ಟಲೆ ಕಾಯಬೇಕಾಗುತ್ತದೆ. ಯಾವುದೇ ಫೈಲ್ ಡೌನ್ ಲೋಡ್ ಮಾಡಬೇಕಾದರೂ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಭಾರತದ ಹಳ್ಳಿಗಳಲ್ಲಿ ಇದೆ. ಯಾವ ಖಾಸಗಿ ಕಂಪನಿಯ ಮಹಾತ್ಮನೂ ಭಾರತದ ಹಳ್ಳಿಗಳಿಗೆ ೩ಜಿ ಸಂಪರ್ಕ ಕಲ್ಪಿಸಬೇಕು ಎಂಬ ಇರಾದೆ ಹೊಂದಿಲ್ಲ ಏಕೆಂದರೆ ಅದರಲ್ಲಿ ಹೆಚ್ಚಿನ ಲಾಭ ಇಲ್ಲ.

  Reply
 4. M A Sriranga

  ಆನಂದಪ್ರಸಾದ್ ಅವರಿಗೆ —-(೧) ಕನಸುಗಳ ಬಗ್ಗೆ — ಕನಸುಗಳು ಇರಬೇಕು; ಆದರೆ ಅದು ಹಗಲು ಕನಸಾಗಬಾರದು. ನಮ್ಮ ಸದ್ಯದ ಹಲವು ಪಕ್ಷಗಳ ರಾಜಕೀಯ ವ್ಯವಸ್ಥೆಯಲ್ಲಿ ಅದು ಕಾರ್ಯಸಾಧುವೇ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಕೇವಲ ಅಧ್ಯಕ್ಷೀಯ ಮಾದರಿಯ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಆಶಯದಂತೆ ಬದಲಾವಣೆಯ ಕನಸು ಕಾಣಬಹುದೇನೋ? ಅದಕ್ಕೆ ನಮ್ಮಲ್ಲಿ ಎಷ್ಟು ರಾಜಕೀಯ ಪಕ್ಷಗಳು, ಸಾರ್ವಜನಿಕರು,ಬುದ್ಧಿಜೀವಿಗಳು, ರಾಜಕೀಯೇತರ ಸಂಘ ಸಂಸ್ಥೆಗಳು ಒಪ್ಪಿಗೆ ಸೂಚಿಸಬಲ್ಲರು? ಈ ವಾಸ್ತವದ ಪ್ರಜ್ಞೆಯಿಲ್ಲದೆ ಸರ್ಕಾರದ ವ್ಯವಸ್ಥೆಯ ಅಮೂಲಾಗ್ರ ಬದಲಾವಾಣೆಯ ಬಗ್ಗೆ ಯೋಚಿಸುವುದೂ ಸಹ ನಗೆಪಾಟಲಾಗಬಹುದಲ್ಲವೇ?
  (೨) ಸರ್ಕಾರಿ ನೌಕರಶಾಹಿಯ ಬಗ್ಗೆ– ರಾಜ್ಯ/ಕೇಂದ್ರ ಸರ್ಕಾರಾದ ಎಲ್ಲಾ ದರ್ಜೆಯ ನೌಕರರ ಸೇವಾ ನಿಯಮಗಳಲ್ಲೇ ಅವರನ್ನು ಮೂಗುದಾರ ಹಾಕಿ ಕೆಲಸ ಮಾಡಿಸುವಷ್ಟು ಶಕ್ತಿ ಇದೆ. ಆದರೆ ಅದನ್ನು enforce ಮಾಡಲು ಹೊರಟರೆ ನೌಕರರ ಜಾತಿ ರಾಜಕೀಯ, ಅವರ ಸಂಘ ಸಂಸ್ಥೆಗಳು, ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತವೆ. ನಮ್ಮ ಕರ್ನಾಟಕದಲ್ಲೇ puc board, CET ಗಳಲ್ಲಿದ್ದ ಹೆಗ್ಗಣಗಳನ್ನು ಹಿಡಿದು ಬದಲಾವಣೆ ತರಲು ಯತ್ನಿಸಿದ ಒಬ್ಬ ಸ್ತ್ರೀ ಐ ಎ ಎಸ್ ಅಧಿಕಾರಿಗೆ ನಮ್ಮ ರಾಜ್ಯ ಸರ್ಕಾರ ಯಾವ ರೀತಿ ಪ್ರೋತ್ಸಾಹ ಕೊಟ್ಟಿತು ಎಂಬುದನ್ನು ತಾವು ಬಲ್ಲಿರಿ. ಅದೇ ರೀತಿ ಹರ್ಯಾಣದಲ್ಲಿ ಒಬ್ಬ ಐ ಎ ಎಸ್ ಅಧಿಕಾರಿಯ ಇಪ್ಪತ್ತೊಂದು ವರ್ಷಗಳ ಸೇವಾವಧಿಯಲ್ಲಿ ನಲವತ್ತು ಮೂರು ಸಲ ವರ್ಗವಾಗಿದ್ದಾರೆ. ಇಂತಹ ಘಟನೆಗಳನ್ನು ಈ ಹಿಂದೆ ಸಿನಿಮಾಗಳಲ್ಲಿ ನಾವು ನೋಡುತ್ತಿದ್ದವು. ಈಗ ಅದು ನಮ್ಮ ನಿಜ ಜೀವನದಲ್ಲೇ ನಡೆದಿವೆ. ಕೇಂದ್ರ ಸರ್ಕಾರದ ಇಲಾಖೆಯ ಕಚೇರಿಯೊಂದರಲ್ಲಿ ಮುಖ್ಯಸ್ಥನಾಗಿ ಕೆಲಸ ಮಾಡಿ ನಾಲ್ಕು ವರ್ಷಗಳ ಹಿಂದೆ ನಿವೃತ್ತನಾದ ನನ್ನ ಒಂದು ಸ್ವಂತ ಅನುಭವವನ್ನೇ ಹೇಳುವುದಾದರೆ –ಪ್ರತಿ ದಿನ ಒಂದೆರಡು ಘಂಟೆಗಳ ಕಾಲ ತಡವಾಗಿ ಕೆಲಸಕ್ಕೆ ಬರುತ್ತಿದ್ದ ಒಬ್ಬ ನೌಕರನ ಬಗ್ಗೆ ನಾನು ಸಾಕಷ್ಟು ಸಲ ಬುದ್ಧಿವಾದ,ಎಚ್ಚರಿಕೆ ಕೊಟ್ಟು ನಂತರ ಹೀಗೇ ಬಿಟ್ಟರೆ ಇತರರಿಗೂ ಇದು ಹರಡುತ್ತದೆಂದು ಮೇಲಾಧಿಕಾರಿಗಳಿಗೆ report ಮಾಡಿದಾಗ ನಮ್ಮದೇ ನೌಕರ ಸಂಘಗಳು ಆ ಮೇಲಾಧಿಕಾರಿಯ ಮೇಲೆ ಒತ್ತಡ ತಂದು at least ಆ ನೌಕರನಿಗೆ ಒಂದು oral warning / written warning ಸಹ ಬರದಂತೆ ನೋಡಿಕೊಂಡವು. ನಾನು ಕಳುಹಿಸಿದ್ದ report ಸತ್ಯವಾದುದು ಎಂಬುದನ್ನು ಅರಿತಿದ್ದರೂ ಸಹ ಆ ಮೇಲಾಧಿಕಾರಿ ಅಸಹಾಯಕರಾಗಿದ್ದರು!! ನನಗೇ ಸಮಾಧಾನ ಮಾಡಿ some how adjust and manage ಎಂದು ಹೇಳಿದರು!!. ನೌಕರ ಸಂಘಗಳನ್ನು ban ಮಾಡಿದರೆ ಮಾನವ ಹಕ್ಕುಗಳ ಉಲ್ಲಂಘನೆ ; ಮಾಡದಿದ್ದರೆ ಸಾರ್ವಜನಿಕರಿಗೆ ತೊಂದರೆ. ಇದು ವಾಸ್ತವ.
  (೩) BSNL ಬಗ್ಗೆ — ಹಳ್ಳಿಗಳಲ್ಲಿನ internet ಸೇವೆಯ ಬಗ್ಗೆ ತಾವು ಹೇಳಿದ್ದೀರಿ. ಅದು physical lines ಮೇಲೆ ಆಧಾರವಾಗಿರುವಂತಹುದು. ಆ lines ಮಳೆ,ಗಾಳಿಗಳಿಂದ ತುಂಡಾದರೆ ಫೋನೂ ಇಲ್ಲ ಇಂಟರ್ನೆಟ್ಟೂ ಇಲ್ಲ. BSNL ದೂ wireless internet ಗೆ ಡಾಟಾ ಕಾರ್ಡ್(dongle) ಇದೆ. ಆದರೆ ಅವು ಅಷ್ಟು efficient ಅಲ್ಲ. ನಾನೂ ಸಹ ದೊಡ್ಡಬಳ್ಳಾಪುರದಲ್ಲಿ (ಬೆಂಗಳೂರಿಗೆ ಕೇವಲ ನಲವತ್ತು ಕಿ ಮಿ ದೂರದಲ್ಲಿದೆ) 3G ಡಾಟಾ ಕಾರ್ಡ್ ತೆಗೆದುಕೊಂಡು ಸುಮಾರು ಎರಡು ಸಾವಿರದಷ್ಟು ಹಣವನ್ನು ಕಳೆದುಕೊಂಡೆ. ಅಲ್ಲಿಗೇ signal ಸಿಗುತ್ತಿರಲಿಲ್ಲ!! ಟೆಲಿಫೋನ್ ನಂತಹ ಇಲಾಖೆಯೂ ಸರ್ಕಾರದ ಸಬ್ಸಿಡಿ ಮೇಲೆ ನಡೆಯಬೇಕೆಂದು ಅಪೇಕ್ಷಿಸುವುದು ತರವಲ್ಲ. ತನ್ನ ಆದಾಯವನ್ನು ತಾನು ಸಂಪಾದಿಸಿಕೊಳ್ಳಬೇಕು. ಇವರ ಸೇವೆಯ ವೈಖರಿ ನೋಡಿಯೇ ಜನಗಳು ಖಾಸಗಿಯವರತ್ತ ಮುಖಮಾಡಿರುವುದು ಹಾಗೂ . BSNL ಫೋನ್ ಗಳನ್ನು ತಮ್ಮ ಮನೆಗಳಿಂದ ತೆಗೆಸಿಹಾಕುತ್ತಿರುವುದು !!

  Reply
 5. Ananda Prasad

  ೧. ಅಧಿಕಾರಶಾಹಿಯ ಮನೋಸ್ಥಿತಿ ಬದಲಾವಣೆಗೆ ದೇಶದ ರಾಜಕೀಯದ ಮನೋಸ್ಥಿತಿ ಬದಲಾಯಿಸಬೇಕಾದ ಅಗತ್ಯವಿದೆ. ಅದಕ್ಕಾಗಿಯೇ ಹೊಸ ಕಲ್ಪನೆಗಳನ್ನು ಹೊಂದಿರುವ ರಾಜಕೀಯ ಪಕ್ಷಗಳನ್ನು ಬೆಳೆಸಬೇಕಾಗಿದೆ. ಅದನ್ನು ಜನರೇ ಗುರುತಿಸಿ ಬೆಳೆಸಬೇಕಾಗಿದೆ. ಇಲ್ಲದಿದ್ದರೆ ಬದಲಾವಣೆ ಸಾಧ್ಯವಿಲ್ಲ. ಯಾರೇ ಆಗಲಿ ಯಾವುದೇ ಒಂದು ಹೊಸ ಕೆಲಸ ಮಾಡಲು ಹೊರಟಾಗಲೂ ಅವರು ಆರಂಭದಲ್ಲಿ ನಗೆಪಾಟಲಿಗೀಡಾಗುತ್ತಾರೆ. ಅದನ್ನು ಮೆಟ್ಟಿ ನಿಂತು ಸಾಧಿಸಿ ತೋರಿಸಿದರೆ ವ್ಯಂಗ್ಯ ಮಾಡಿದ ಜನರೇ ತಲೆದೂಗುತ್ತಾರೆ.
  ೨. ನೌಕರರ ಸಂಘಟನೆಗಳು ಶೋಷಣೆಯ ವಿರುದ್ಧ ಹೋರಾಡಿ ನ್ಯಾಯ ಪಡೆಯಲು ಹುಟ್ಟಿಕೊಂಡದ್ದು. ಇಂದು ಅವೇ ಸಂಘಟನೆಗಳು ಜನಪರ ನಿಲುವುಗಳಿಗೆ ಅಡ್ಡಿಯಾದರೆ ಅವುಗಳನ್ನು ನಿಷೇಧಿಸಿದರೂ ತಪ್ಪಿಲ್ಲ. ಈಗಾಗಲೇ ಐಟಿ (ಮಾಹಿತಿ ತಂತ್ರಜ್ಞಾನ) ಕ್ಷೇತ್ರದಲ್ಲಿ ಕಾರ್ಮಿಕ ಸಂಘಟನೆಗಳನ್ನು ನಿಷೇಧಿಸಲಾಗಿದೆ. ಇದನ್ನು ಯಾರೂ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಬೊಬ್ಬೆ ಹಾಕಿರುವುದು ಕಂಡುಬರುವುದಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಿಸಿ ಉಳಿಯಬೇಕಾದರೆ ನೌಕರರ ಸಂಘಟನೆಗಳನ್ನು ನಿಷೇಧಿಸಬೇಕಾಗುತ್ತದೆ. ಸರ್ಕಾರೀ ನೌಕರರಿಗೆ ಸ್ಪರ್ಧೆ ಎಂಬುದೇ ಇಲ್ಲದಿರುವುದರಿಂದ ಹೇಗ್ ಕೆಲಸ ಮಾಡಿದರೂ ನಡೆಯುತ್ತದೆ. ನೌಕರರ ಸಂಘಟನೆಗಳು ಅತಿಯಾಗಿ ಬೆಳೆದ ರಾಜ್ಯಗಳಲ್ಲಿ ಉದ್ಯಮಗಳು ನೆಲಕಚ್ಚಿರುವುದು ಇದೇ ಕಾರಣದಿಂದ. ನೌಕರರಿಗೆ ಅತಿಯಾದ ನೌಕರಿಯ ಭದ್ರತೆಯನ್ನು ನೀಡಲಾಗಿರುವುದೇ ಸಮಸ್ಯೆಯ ಮೂಲ. ಇದನ್ನು ಬದಲಾಯಿಸದಿದ್ದರೆ ಸರ್ಕಾರೀ ನೌಕರರ ಮನೋಸ್ಥಿತಿಯಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿಲ್ಲ (ಯಾವ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ).
  ೩. ಬಿಎಸ್ಸೆನ್ನೆಲ್ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸರ್ಕಾರವು ಬಿಡುತ್ತಾ ಇಲ್ಲ. ಉದಾಹರಣೆಗೆ ಇತರ ಖಾಸಗಿ ಸಂಸ್ಥೆಗಳು ೩ಜಿ ಮೊಬೈಲ್ ಸೇವೆ ಆರಂಭಿಸಿದರೂ ಬಿಎಸ್ಸೆನ್ನಲ್ ೩ಜಿ ಸೇವೆಯನ್ನು ಆರಂಭಿಸಲು ಸರ್ಕಾರವು ವಿಳಂಬ ಮಾಡಿತು ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಿಲ್ಲ. ಇದರ ಪರಿಣಾಮವಾಗಿ ಗ್ರಾಹಕರು ಹೆಚ್ಚು ವೇಗದ ಇಂಟರ್ನೆಟ್ ಸೌಲಭ್ಯ ನೀಡುವ ಖಾಸಗಿ ಕಂಪನಿಯ ಸೇವೆಯನ್ನು ಪಡೆದುಕೊಂಡರು. ಸರ್ಕಾರದ ಈ ವಿಳಂಬ ನೀತಿಯ ಹಿಂದೆ ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಒಳಒಪ್ಪಂದ ಇರುವ ಸಂಭವ ಇದೆ. ಗ್ರಾಮೀಣ ಭಾಗಗಳಿಗೆ ದೂರಸಂಪರ್ಕ ಸೇವೆಯನ್ನು ನೀಡಲು ಸರ್ಕಾರವು ಸಬ್ಸಿಡಿ ನೀಡಿದರೆ ತಪ್ಪಿಲ್ಲ ಏಕೆಂದರೆ ನಗರಗಳಲ್ಲಿ ಇರುವಷ್ಟು ಜನಸಾಂದ್ರತೆ ಹಳ್ಳಿಗಳಲ್ಲಿ ಇರುವುದಿಲ್ಲ. ಹೀಗಾಗಿ ಹಳ್ಳಿಗಳಲ್ಲಿ ದೂರಸಂಪರ್ಕ ಸೇವೆಯನ್ನು ಲಾಭಕರವಾಗಿ ನಡೆಸಲು ಸಾಧ್ಯವಿಲ್ಲ.

  Reply
 6. M A Sriranga

  ಆನಂದಪ್ರಸಾದ್ ಅವರಿಗೆ–(೧) ಅಧಿಕಾರಶಾಹಿಯ ಬಗ್ಗೆ– ತಮ್ಮ ಆಶಾ ಭಾವನೆಗಳಿಗೂ ಮತ್ತು ನಮ್ಮ ದೇಶದ ಪರಿಸ್ಥಿತಿಗಳ ವಾಸ್ತವದ ಅಂಶಗಳಿಗೂ ಅಜಗಜಾಂತರವಿರುವುದರಿಂದ ಈ ಬಗ್ಗೆ ನಾನು ಇನ್ನೂ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ತಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ.
  (೨) ನೌಕರ ಸಂಘಟನೆಗಳ ಬಗ್ಗೆ— ಖಾಸಗಿ ಕ್ಷೇತ್ರದ ಐ ಟಿ ವಲಯದಲ್ಲಿ ಅಲ್ಲಿಯ ನೌಕರರ ಕೆಲಸಕ್ಕೆ ಖಾತರಿಯಿಲ್ಲ. ಆ ಒಂದು ಒಪ್ಪಂದಕ್ಕೆ ಸಹಿ ಹಾಕಿದರೆ ಮಾತ್ರ ಅಲ್ಲಿ ಕೆಲಸ. ಇನ್ನು ನೌಕರರ ಸಂಘಟನೆ ಎಲ್ಲಿಂದ ಬರುತ್ತದೆ? ಅಲ್ಲಿ ಕೆಲಸಗಾರರ ಸಂಘಟನೆಗಳು ಇದ್ದರೆ ತಾನೇ ಅವುಗಳನ್ನು ನಿಷೇಧಿಸುವ ಪ್ರಶ್ನೆ ಉದ್ಭವಿಸುವುದು!!. ಸರಕಾರೀ ಕ್ಷೇತ್ರದಲ್ಲಿ ನೌಕರ ಸಂಘಟನೆಗಳ ಬೆನ್ನೆಲುಬಾಗಿ ನಿಂತಿರುವುದು CPI ಮತ್ತು CPI (M) ಪಕ್ಷಗಳು. ನೌಕರರ ಸಂಘಟನೆಗಳನ್ನು ನಿಷೇಧಿಸುವ ಪ್ರಸ್ತಾಪವನ್ನು ಸಂಸತ್ತಿನಲ್ಲಿ ತಂದರೆ ಆ ರಾಜಕೀಯ ಪಕ್ಷಗಳು ಮತ್ತು ಇತರ ಪಕ್ಷಗಳು ಸುಮ್ಮನಿರುತ್ತವೆಯೇ?.
  (೩) BSNL ಬಗ್ಗೆ– ಸರ್ಕಾರದ ಈ ಸಂಸ್ಥೆಗೆ ಮಾತ್ರ ಭಾರತದ ಎಲ್ಲ ಕಡೆ ದೂರಸಂಪರ್ಕ ಕಲ್ಪಿಸುವ ಜವಾಬ್ದಾರಿವಹಿಸಿದ್ದರೆ ನಾನು ನೀವು ಮೊಬೈಲ್ ಫೋನಿನಲ್ಲಿ ಮಾತಾಡಲೂ ಗಂಟೆಗಟ್ಟಲೆ ಕಾಯಬೇಕಾಗುತ್ತಿತ್ತು!. ಹೀಗಾಗಿ ಖಾಸಗಿಯವರಿಗೆ ಒಂದಷ್ಟು ಅವಕಾಶಕೊಟ್ಟರು. ಅವರು ಅದನ್ನು ಸದುಪಯೋಗಪಡಿಸಿಕೊಂಡರು. BSNL ಅವರಿಗೆ ಅವರ tower ಕೆಲಸಮಾಡಲಿ ಬಿಡಲಿ, SIM ಖರ್ಚಾಗಲಿ ಬಿಡಲಿ ತಿಂಗಳಕೊನೆಗೆ ಸರಿಯಾಗಿ ಸಂಬಳ ಬರುತ್ತದೆ. ಇನ್ನೇಕೆ ಯೋಚಿಸಬೇಕು?. ಇಂದು ಅಂಚೆ ಇಲಾಖೆಯ ಅದಕ್ಷತೆಯೇ courier ಸಂಸ್ಥೆಗಳು ಹುಟ್ಟಲಿಕ್ಕೆ ಪರೋಕ್ಷವಾಗಿ ಕಾರಣ. ಅವರಿಗೂ ಅಷ್ಟೇ. ಅಂಚೆ ಡಬ್ಬಕ್ಕೆ ಹಾಕಿದ ಪತ್ರ ಅಲ್ಲೇ ಇರಲಿ/ವಿಳಾಸದಾರನಿಗೆ ತಲುಪದೇ ಇರಲಿ ಸಂಬಳ ಗ್ಯಾರಂಟಿ!!. ಇನ್ನು ಸ್ಪರ್ಧೆಯ ಕಷ್ಟವೇಕೆ?

  Reply

Leave a Reply

Your email address will not be published.