ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು

– ಜೀವಿ

ದೋ.. ಎಂದು ಸುರಿಯುತ್ತಿದ್ದ ಮಳೆ, ಮಧ್ಯರಾತ್ರಿ ದಾಟಿದರೂ ಎದ್ದೇಳೋ ಬೂದಿ, ಕಾಳ, ಕರಿಯ, ಕುನಾರಿ ಎಂಬ ಸದ್ದು ಕೇಳಲಿಲ್ಲ. ಮಳೆ ಕಾರಣದಿಂದ ಊಟಕ್ಕೆ ಕರೆಯಲು ಯಾರು ಬರಲಾರರೇನೋ ಎಂದುಕೊಂಡು ಅತ್ತಿತ್ತ ಹೊರಳಾಡಿದೆ. ಮಳೆಯಾದರೂ ನಿಲ್ಲಬಾರದೆ ಎಂದು ಮನದಲ್ಲೆ ಶಪಿಸಿ
hunger04-061ಕೊಂಡು ಕಣ್ಮುಚ್ಚಿದೆ. ಆದರೂ ನಿದ್ರೆ ಹತ್ತಿರ ಸುಳಿಯಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಮಳೆ ಕಡಿಮೆಯಾಯಿತು. ಕೊನೆಗೂ ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ ಲೋ ಬೂದಿ ಎಂಬ ಧ್ವನಿ ಕೇಳಿ ಕತ್ತಲಲ್ಲೆ ಕಣ್ಣರಳಿತು. ಎರಡು ಬಾರಿ ಕೂಗಿದ ನಂತರ ಕೆಮ್ಮುತ್ತಾ ಏನು ಗೌಡ್ರೆ ಎಂದ ನನ್ನ ಎದುರಿನ ಮನೆಯಲ್ಲಿದ್ದ ಬೂದಿ ಜವರಪ್ಪ. ಎದ್ದು ಮಕ್ಕಳ ಕರ್ಕೊಂಡು ಊಟಕ್ಕೆ ಬನ್ರೋ, ಹೆಂಗಸ್ರಿಗೂ ಕುಕ್ಕೆ ತಗೊಂಡ್ ಬರೋಕೆ ಹೇಳು ಎಂದು ಹೇಳಿ ಹೋದ.(ಎಲ್ಲರ ಮನೆಗೆ ಖುದ್ದು ಬಾಗಿಲು ತಟ್ಟಿ ಕರೆಯಬೇಕೆಂದೇನು ಇರಲಿಲ್ಲ. ಕೇರಿಯಲ್ಲಿ ನಿಂತು ಒಂದಿಬ್ಬರಿಗೆ ವಿಷಯ ಮುಟ್ಟಿಸಿದ್ದರೆ ಸಾಕಿತ್ತು.) ಆತ ಹೋಗಿ ಐದಾರು ನಿಮಿಷ ಆದರೂ ನಿಶ್ಯಬ್ಧ ಮುಂದುವರಿಯಿತು. ಬೂದಿ ಜವರಪ್ಪ ಮತ್ತೆ ನಿದ್ರೆಗೆ ಹೋದನೇನೋ, ಎಲ್ಲರು ಮಲಗಿದ್ದಾರೆ, ಯಾರೂ ಊಟಕ್ಕೆ ಹೋಗಲಾರರೇನೋ ಎಂದುಕೊಂಡು ಮಲಗದ್ದಲ್ಲೆ ಚಟಪಟಿಸಿದೆ.

ನಂತರ ಮೂಲೆ ಮನೆಯಿಂದ ಲಕ್ಕಜ್ಜ ಕೈಯಲ್ಲೊಂದು ಊರುಗೋಲು ಹಿಡಿದು ಮಕ್ಕಳೊಂದಿಗೆ ಹೆಜ್ಜೆ ಹಾಕಿದ. ಅವನು ಕೋಲು ಊರಿ ಬರುತ್ತಿದ್ದ ಶಬ್ದ ಕೇಳಿ ಜೀವ ಬಂದಂತಾಯಿತು. 10 ನಿಮಿಷದಲ್ಲಿ ನಿಶ್ಯಬ್ಧ ಮಾಯವಾಯಿತು. ಹೆಂಗಸರು-ಗಂಡಸರು ಮತ್ತು ಮಕ್ಕಳು ಮಾತನಾಡುವ ಸದ್ದು ಹೆಚ್ಚಾಯಿತು. ಒಬ್ಬೊಬ್ಬರಾಗಿ ಎದ್ದು ಚೆಂಬು-ಲೋಟ ಹಿಡಿದು ಮನೆಯಿಂದ ಹೊರ ಬಂದರು. ಆವರೆಗೆ ನೀರವ ಮೌನ ಆವರಿಸಿದ್ದ ಕೇರಿಯಲ್ಲಿ ಮಕ್ಕಳು-ಮಹಿಳೆಯರ ಉತ್ಸಾಹದ ಸದ್ದು ಜೋರಾಯಿತು.

ಅನ್ನದ ಮೇಲಿನ ಆಸೆಗೆ ನನಗೆ ನಿದ್ರೆ ಬಂದಿಲ್ಲ ಎಂಬುದು ನನ್ನವ್ವನಿಗೂ ಗೊತ್ತಿತ್ತು. ದೀಪ ಹಚ್ಚಿ ಊಟಕ್ಕೆ ಹೋಗ್ತಿಯಾ ಮಗನೇ ಎಂದು ಮೆಲು ಧ್ವನಿಯಲ್ಲೆ ಕೇಳಿದಳು. ಹೂಂ ಎಂದವನೆ ಎದ್ದು ಹೊರಟೆ, ಪಕ್ಕದಲ್ಲೆ ಮಲಗಿದ್ದ ನನ್ನಕ್ಕ, ಅಣ್ಣ, ಅಪ್ಪ ಎಲ್ಲರು ಎದ್ದರು. ನಾನೊಬ್ಬನಿಗೆ ಮಾತ್ರ ನಿದ್ರೆ ಬಂದಿಲ್ಲ ಎಂದುಕೊಂಡಿದ್ದ ನನಗೆ ಇಡೀ ಕೇರಿಯ ಜನರಿಗೆ ನಿದ್ರೆ ಬಂದಿಲ್ಲ, ಅನ್ನಕ್ಕಾಗಿ ಕಾಯುತ್ತಿದ್ದಾರೆ ಎಂಬುದು ಅರ್ಥವಾಯಿತು. ಅವ್ವ ಕೂಡ ಬಿದಿರ ಕುಕ್ಕೆಗೆ ಬಿಳಿ ಪಂಚೆ ಹರುಕು ಹಾಸಿ, ಸಾಂಬಾರಿಗೊಂದು ಪಾತ್ರೆ, ಪಾಯ್ಸಕ್ಕೊಂದು ಪಾತ್ರೆ ಸಿದ್ದ ಮಾಡಿಕೊಂಡಳು. Streetchildrenಗಂಡಸರು ಮತ್ತು ಮಕ್ಕಳು ಮಾತ್ರ ಮೇಲ್ಜಾತಿಯ ಕೇರಿಯಲ್ಲಿ ಅಥವಾ ಕೊಟ್ಟಿಗೆಯಲ್ಲೀ ಊಟ ಮಾಡಲು ಅವಕಾಶ ಇತ್ತು. ಹೆಂಗಸರು ಅಲ್ಲಿ ಊಟ ಮಾಡುವಂತಿರಲಿಲ್ಲ. ಕುಕ್ಕೆಗೆ ಅವರು ಹಾಕಿಕೊಟ್ಟ ಊಟ ತಂದು ಮನೆಯಲ್ಲಿ ತಿನ್ನಬೇಕಿತ್ತು. ಅದಕ್ಕಾಗಿ ಅವ್ವ ಕುಕ್ಕೆ ಸಿದ್ದ ಮಾಡಿಕೊಂಡಳು. ಅದನ್ನು ಹೊತ್ತು ಸಂಭ್ರಮದಿಂದ ಹೊರಟು ಮೇಲ್ಜಾತಿಯ ಕೇರಿ ಸೇರಿದೆವು.

ಮೇಲ್ಜಾತಿಯ ಎಲ್ಲರೂ ಊಟ ಮಾಡಿದ ನಂತರ ಏನಾದರೂ ಉಳಿದರೆ ನಮ್ಮನ್ನು ಕರೆಯುವ ಪರಿಪಾಟಲಿತ್ತು. ಹೋಗಿ ಮದುವೆ ಮನೆಯ ಮುಂದೆ ನಿಂತ ನಮನ್ನು ಎಲ್ಲಿ ಊಟಕ್ಕೆ ಕೂರಿಸಬೇಕು ಎಂಬ ಚರ್ಚೆ ನಡೆಯಿತು. ಮಳೆ ಬಂದಿದ್ದರಿಂದ ಬೀದಿಯಲ್ಲಿ ಕೂತು ಊಟ ಮಾಡುವ ಅವಕಾಶ ಇರಲಿಲ್ಲ. ಸ್ವಜಾತಿಯವರೆಲ್ಲ ಮನೆಯ ಒಳಗೇ ಕೂತು ಊಟ ಮಾಡಿ ಹೋಗಿದ್ದರು. ಎಲ್ಲರ ಮನೆಯ ಕೊಟ್ಟಿಗೆಯಲ್ಲೂ ದನಕರುಗಳಿದ್ದವು. ಮದುವೆ ಮನೆಯವರ ಕೊಟ್ಟಿಗೆಯಲ್ಲಿ ಸಾಮಾನು ಸರಂಜಾಮು ತುಂಬಿದ್ದವು. ಅಕ್ಕ-ಪಕ್ಕದ ಯಾರೂ ದನಕರುಗಳನ್ನು ಆಚೆಗೆ ಕಟ್ಟಿ ಊಟಕ್ಕೆ ಅವಕಾಶ ಮಾಡಿಕೊಡಲು ಸಿದ್ದರಿರಲಿಲ್ಲ. ಊಟಕ್ಕೆಂದು ಕಾದು ನಿಂತವರಲ್ಲಿ ಲಕ್ಕಜ್ಜ ಹಾಗೆ ಕೈಗೆ ಕೊಡಿ ಸ್ವಾಮಿ ತಿನ್ಕೊಂಡು ಹೋಗ್ತಿವಿ ಎಂದ. ಅದನ್ನು ಒಪ್ಪದ ಮದುವೆ ಮನೆ ಯಜಮಾನ, ಹೇಗೋ ಮನವೊಲಿಸಿ ಒಂದು ಕೊಟ್ಟಿಗೆ ಖಾಲಿ ಮಾಡಿಸಿದ.

ಕೊಟ್ಟಿಗೆಯಲ್ಲಿ ಹುಲ್ಲು ಹಾಸಿಕೊಂಡು ಊಟಕ್ಕೆ ಕುಳಿತೆವು. ಅಳಿದುಳಿದ ಊಟಕ್ಕೆ ಬಂದಿದ್ದ ನಮಗೆ ಮದುವೆ ಮನೆ ಯಜಮಾನ, ಅನ್ನ-ಪಾಯ್ಸ ಎಲ್ಲಾ ಖಾಲಿ ಆಯ್ತು ಮುದ್ದೆ ಮಾತ್ರ ಇದೆ. ಹೊಟ್ಟೆ ತುಂಬ ಊಟ ಮಾಡಿ ಎಂದ. ನನನ್ನು ಸೇರಿ ಊಟಕ್ಕೆ ಬಂದಿದ್ದ ಮಕ್ಕಳಿಗೆ ಎದೆ ಜಲ್ ಎಂದಂತಾಯಿತು. ಲಕ್ಕಜ್ಜ ಮಕ್ಕಳಿಗಾದರೂ ಸಾಕಾಗುವಷ್ಟು ಇದೆಯಾ ನೋಡಿ ಸ್ವಾಮಿ ಎಂದು ದಯನೀಯವಾಗಿ ಕೇಳಿದ. ಅನ್ನ ಬಸಿದಿದ್ದ ಮಂಕ್ರಿ ಮತ್ತು ಪಾತ್ರೆ ತಳ ಎಲ್ಲವನ್ನು ಕೆರೆದು ಕೊನೆಗೂ ಒಂದಿಷ್ಟು ಅನ್ನ ತಂದ ಯಜಮಾನ. ನನ್ನನ್ನು ಸೇರಿ ಮಕ್ಕಳನ್ನು ಮಾತ್ರ ಗುರುತಿಸಿ ಕೋಸಂಬರಿ ಹಾಕುವಂತೆ ತಟ್ಟೆಗೆ ಅನ್ನ ಉದುರಿಸಿದ. ಕಡಿಮೆಯಾದರೂ ಚಿಂತೆಯಿಲ್ಲ ಅನ್ನದ ರುಚಿ ಅನುಭವಿಸಿದ ಸಮಾಧಾನವಾಯಿತು.

ಹಬ್ಬ-ಹರಿದಿನಗಳಲ್ಲಿ ಮಾತ್ರ ಸಿಗುತ್ತಿದ್ದ ಕಾರಣಕ್ಕೆ ಅನ್ನ ಅಂದು ಅಮೃತಕ್ಕೂ ಮಿಗಿಲಾದ ರುಚಿ ಹೊಂದಿತ್ತು. ಸಿಕ್ಕಿದ್ದೆ ಸೀರುಂಡೆ ಎಂದು ಉಂಡ ಎಲೆ ಎತ್ತಿಕೊಂಡು ಹೊರಟೆವು. ಅವ್ವ ಹಿಡಿದಿದ್ದ ಕುಕ್ಕೆಗೆ ಮುದ್ದೆ ಮತ್ತು ಸಾಂಬಾರ್ ಮಾತ್ರ ಗತಿಯಾಯಿತು. ಅದು ಗಂಡಿನ ಮದುವೆ ಆಗಿದ್ದರಿಂದ ರಾತ್ರಿ ಚಪ್ಪರದ ಊಟ ಮಾತ್ರ ಇತ್ತು. ಮದುವೆ ಊಟಕ್ಕೆ ಹೆಣ್ಣಿನ ಮನೆಗೆ ಹೋಗಬೇಕಿತ್ತು. ಆದರೆ ಅಲ್ಲಿಗೆ ಹೋಗುವ ಅವಕಾಶ ಇರಲಿಲ್ಲ.

ನನಗಾಗಿ ಕಾದಿದ್ದಳು ಅವ್ವ:

ಹೀಗೆ ಅನ್ನದೊಂದಿಗೆ ತಳುಕುಹಾಕಿಕೊಂಡಿರುವ ಅನೇಕ ಘಟನೆಗಳು ನನ್ನನ್ನು ಪದೇ ಪದೇ ಕಾಡುವುದುಂಟು. ಮನೆಯಲ್ಲಿ ಅನ್ನದ ಮಡಿಕೆ ಅಥವಾ ಪಾತ್ರೆ ಉಪಯೋಗಕ್ಕೆ ಬರುತ್ತಿದ್ದು ತಿಂಗಳಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ. ಹಾಗಾಗಿ ಮೇಲ್ಜಾತಿಯವರ ಕೃಷಿ ಜಮೀನಿಗೆ ಕೂಲಿ ಹೋದರೆ ಅವ್ವ ಮಧ್ಯಾಹ್ನದ ವೇಳೆಗೆ ಅಲ್ಲಿಗೆ ಬರುವಂತೆ ಹೇಳಿ ಹೋಗುವುದನ್ನು ಮರೆಯುತ್ತಿರಲಿಲ್ಲ.

ಅದೊಂದು ದಿನ ಅವ್ವ ಕೂಲಿಗೆ ಹೋಗುವ ಮುನ್ನ ಊರ ಸಮೀಪವೇ ಇರುವ ಗೌಡರ ಮನೆಯ ಹೊಲದ ಅಡ್ರೆಸ್ ಹೇಳಿದ್ದಳು. ಶಾಲೆಯಲ್ಲಿ ಊಟಕ್ಕೆ ಬಿಟ್ಟ ಕೂಡಲೇ ಓಡೋಡಿ ಹೋದೆ ಅಲ್ಲಿ ಅವ್ವ ಹಾಗೂ ಇನ್ನಾರು ಇರಲಿಲ್ಲ. ಆ ಹೊಲದಲ್ಲಿ ಕೆಲಸ ಮುಗಿದು ಊರಿನಿಂದ ಸುಮಾರು 2 ಕಿಮೀಯಷ್ಟು ದೂರವಿರುವ ಇನ್ನೊಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯಿತು.

ಅಲ್ಲಿ ಓಡಲು ಆರಂಭಿhunger-2ಸಿ ನಿಂತಿದ್ದು ಅವ್ವನ ಮುಂದೆಯೇ. ಆದಾಗಲೇ ಎಲ್ಲರೂ ಊಟ ಮುಗಿಸುವ ಹಂತಕ್ಕೆ ಬಂದಿದ್ದರು. ಆದರೆ ನನ್ನವ್ವ ಇನ್ನೂ ಮುದ್ದೆ ಮುಗಿಸದೆ ದಾರಿ ನೋಡುತ್ತಿದ್ದಳು. ಕೂಡಲೇ ಕೈ ತೊಳೆಯುವ ಗೋಜಿಗೂ ಹೋಗದೆ ಅವ್ವನ ತಟ್ಟೆಯಲ್ಲೇ ಊಟಕ್ಕೆ ಕುಳಿತೆ. ಊಟ ಮುಗಿದಿಲ್ಲ ಎಂಬ ಸಂತಸ ನನಗಾದರೆ, ಅವ್ವನ ಕಣ್ಣಲ್ಲಿ ನೀರು ತುಂಬಿಕೊಂಡಿದ್ದವು. ಅತ್ತ ಗಮನವನ್ನೂ ಹರಿಸದ ನಾನು ಅನ್ನ ಊಟ ಮಾಡುವ ಸಂಭ್ರಮದಲ್ಲಿದ್ದೆ. ಕೂಲಿಗೆ ಕರೆದಿದ್ದ ಮೇಲ್ಜಾತಿಯವರು ಕೂಡ ಅಕ್ಕಿ ಖರೀದಿ ಮಾಡಿ ತಂದು ತಿನ್ನಬೇಕಿತ್ತು. ಹಾಗಾಗಿ ಹೊಟ್ಟೆ ತುಂಬ ಮುದ್ದೆ, ಅದರ ಮೇಲೆ ಸ್ವಲ್ಪ ಅನ್ನ ಬಡಿಸುತ್ತಿದ್ದರು. ಎಲೆಗೆ ಹಾಕಿದ್ದ ಅನ್ನದಲ್ಲಿ ಒಂದು ಅಗುಳನ್ನು ಅವ್ವ ಮುಟ್ಟಲಿಲ್ಲ. ನನಗೆ ಅನ್ನ ಊಟ ಮಾಡಿಸಿದ ತೃಪ್ತಿ ಅವ್ವನಿಗಾಗಿತ್ತು. ಪರಮಾನಂದಿಂದ ಮತ್ತೆ ಶಾಲೆಯತ್ತ ಓಡಿದೆ.

ಸ್ವಾಮಿ ಮಾಸ್ಟರ್ ಕೊಟ್ಟ ಅನ್ನ:

ಸರ್ಕಾರಿ ಶಾಲೆಯಲ್ಲಿ ಈಗಿನಂತೆ ಬಿಸಿಯೂಟವಿರಲಿಲ್ಲ. ಸಮೀಪದ ಪಟ್ಟಣದಿಂದ ಬರುತ್ತಿದ್ದ ಸ್ವಾಮಿ ಮಾಸ್ಟರ್ ಟಿಫನ್ ಬಾಕ್ಸ್ನಲ್ಲಿ ಅನ್ನ ತಂದು ಮಧ್ಯಾಹ್ನದ ಊಟ ಮಾಡುತ್ತಿದ್ದರು. ಓದಿನಲ್ಲಿ ಸ್ವಲ್ಪ ಮುಂದಿರುವ ಹುಡುಗರೆಂದರೆ ಅವರಿಗೆ ಅಚ್ಚುಮೆಚ್ಚು. ನನಗೋ ಅವರ ಅನ್ನದ ಬಾಕ್ಸ್ ಎಂದರೆ ಅಚ್ಚುಮೆಚ್ಚು. ಮಧ್ಯಾಹ್ನ 1ಕ್ಕೆ ಊಟದ ಗಂಟೆ ಬಾರಿಸಿದ ಕೂಡಲೇ ಮನೆಗೋಗಿ ಬೆಳಗ್ಗೆಯೇ ಮಾಡಿಟ್ಟಿದ್ದ ಮುದ್ದೆಯಲ್ಲಿ ಅರ್ಧದಷ್ಟ ತಿಂದು ಹತ್ತೇ ನಿಮಿಷದಲ್ಲಿ ವಾಪಸ್ ಬರುತ್ತಿದೆ. ನಾನು ಬರುವಷ್ಟರಲ್ಲಿ ಸ್ವಾಮಿ ಮಾಸ್ಟರ್ ಬಾಕ್ಸ್ ಖಾಲಿಯಾಗದಿರಲಿ ಎಂದು ಊರ ದೇವರು ಬಸವಣ್ಣನಿಗೊಂದು ಕೈಮುಗಿದು ಹೋಗುತ್ತಿದ್ದೆ. ನನ್ನಂತೆ ಮೂರ್ನಾಲ್ಕು ಮಂದಿಗೆ ಆ ಬಾಕ್ಸ್ ಮೇಲೆ ಕಣ್ಣಿತ್ತು. ಅವರು ಊಟ ಮಾಡಿದ ಬಾಕ್ಸ್ ತೊಳೆದಿಡುವ ಪುಣ್ಯ ನಮ್ಮದಾದರೆ ಸಾಕು ಎಂದುಕೊಳ್ಳುತ್ತಿದ್ದೆವು. ಅವರು ಕೂಡ ಕೆಳ ಜಾತಿಯವರೇ ಆಗಿದ್ದರಿಂದ ಮೇಲ್ಜಾತಿ ಮಕ್ಕಳಿಗೆ ಅವರು ತಂದಿದ್ದ ಅನ್ನ ಕೊಡುವ ಸಾಹಸವನ್ನು ಅವರು ಮಾಡುತ್ತಿರಲಿಲ್ಲ. ಹಾಗಾಗಿ ಮೂರ್ನಾಲ್ಕು ಮಂದಿಗೆ ಅದರ ಅವಕಾಶ ಸಿಗುತ್ತಿತ್ತು.

ಮನೆಯಿಂದ ಬೇಗ ಬಂದವನೇ ಕೊಠಡಿಯೊಂದರಲ್ಲಿ ಊಟ ಮಾಡುತ್ತಿದ್ದ ಸ್ವಾಮಿ ಮಾಸ್ಟರ್ಗೆ ಕಾಣಿಸುವಂತೆ ಕಿಟಕಿಯ ಸಮೀಪ ಓಡಾಡುತ್ತಿದೆ. ಕಣ್ಣಿಗೆ ಕಂಡ ಕೂಡಲೇ ಒಳ ಕರೆದು ಬಾಕ್ಸ್ನಲ್ಲಿ ಸ್ವಲ್ಪ ಮಿಗಿಸಿದ್ದ ಅನ್ನ ಊಟ ಮಾಡಲು ಹೇಳುತ್ತಿದ್ದರು. ಊಟ ಮಾಡಿ ಬಾಕ್ಸ್ ತೊಳೆದಿಡುವುದು ಸಂತಸದ ಕ್ಷಣವಾಗುತ್ತಿತ್ತು. ಕೆಲವೊಮ್ಮೆ ನಾನು ಬರುವಷ್ಟರಲ್ಲಿ ಅವರ ಊಟ ಮುಗಿದು ಬೇರಾರೋ ಬಾಕ್ಸ್ ತೊಳೆಯುತ್ತಿದ್ದರು. ಅಂದು ನಿರಾಸೆಯೇ ಗತಿಯಾಗುತ್ತಿತ್ತು.

ಮೂರು ಮಡಿಕೆ:

‘ನಾಗಾ…. ಅವ್ವಾರ ಮನೇಲಿ ಮೂರು ಮಡಿಕೆ ಬಾರೋ…’ ಎಂದು ಊರಿಗೆಲ್ಲ ಕೇಳುವಂತೆ ಕೂಗುತ್ತಿದ್ದ ನನ್ನ ಗೆಳೆಯ ಮಹೇಶ. ಅವನ ತಮ್ಮ ನಾಗರಾಜನೋ ಎದ್ದು ಬಿದ್ದ ಓಡಿ ಹೋಗುತ್ತಿದ್ದ. ಆಗಾಗ ಹೀಗೆ ಕೂಗುತ್ತಿದ್ದ ಕಾರಣಕ್ಕೆ ಈವರೆಗೆ ಅವನಿಗೆ ‘ಮಡಿಕೆ’ ಎಂಬ ಅಡ್ಡ ಹೆಸರು ಅಂಟಿಕೊಂಡಿದೆ. ಮಹೇಶನ ಮೂರು ಮಡಿಕೆ ಸೂತ್ರದಲ್ಲಿ ದೊಡ್ಡದೊಂದು ಅನ್ನದ ಕಥೆಯಿದೆ. ಹಬ್ಬ-ಜಾತ್ರೆಯಲ್ಲಿ ಅನ್ನ ಕಾಣುತ್ತಿದ್ದ ಕಾಲದಲ್ಲಿ ಮನೆಯಲ್ಲಿ ಮೂರು ಮಡಿಕೆ ಬಿಸಿಯಾಗಿದ್ದರೆ ಅದು ನಮಗೆ ಸಂಭ್ರಮದ ದಿನ.

ಪ್ರತಿನಿತ್ಯ ಒಂದು ಮುದ್ದೆ ಮತ್ತೊಂದು ಸಾಂಬಾರ್ ಸೇರಿ ಎರಡು ಮಡಿಕೆ ಬಿಸಿಯಾಗುವುದು ಸಾಮಾನ್ಯ. ಆದರೆ ಮೂರನೇ ಮಡಿಕೆ ಬಿಸಿಯಾಗಿದ್ದರೆ ಅದು ಅನ್ನವೇ ಎಂಬುದು ಖಾತ್ರಿಯಾಗುತ್ತಿತ್ತು. ಮಡಿಕೆಗಳ ಮುಚ್ಚಳ ತೆಗೆದು ನೋಡುವುದು ತಡವಾಗುತ್ತದೆಂದು ಮಡಿಕೆಗಳನ್ನು ಹೊರಗಿನಿಂದಲೇ ಮುಟ್ಟಿ ಮನೆಯಲ್ಲಿ ಅನ್ನ ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದ ಮಹೇಶ.

ನಮ್ಮ ಮನೆಯ ಎಡ ಭಾಗಕ್ಕೆ ಅವನ ಮನೆಯಾದರೆ, ಬಲಭಾಗಕ್ಕೆ ಅವರ ಅಜ್ಜಿಯ ಮನೆ ಇತ್ತು. india-poverty-hungerಎರಡು ಮನೆಯ ಮಧ್ಯದಲ್ಲಿ ನಮ್ಮ ಮನೆಯಿತ್ತು. ಸಾಮಾನ್ಯವಾಗಿ ಅಜ್ಜಿ ಮನೆಯಲ್ಲಿ ಹೆಚ್ಚು ಬಾರಿ ಮೂರು ಮಡಿಕೆ ಬಿಸಿಯಾಗಿರುತ್ತಿದ್ದವು. ಎಲ್ಲೋ ಆಟವಾಡುತ್ತಿದ್ದಾಗ ಊಟಕ್ಕೆ ಕರೆದರೆ ಕೂಡಲೇ ಓಡಿ ಬಂದು ಮಡಿಕೆಗಳನ್ನು ಮುಟ್ಟಿ ನೋಡುತ್ತಿದ್ದ. ಮೂರು ಮಡಿಕೆ ಬಿಸಿಯಾಗಿವೆ ಎಂಬುದು ಗೊತ್ತಾದ ಕೂಡಲೇ ಊರಿಗೆಲ್ಲ ಕೇಳುವಂತೆ ತಮ್ಮ ನಾಗರಾಜನನ್ನು ’ನಾಗಾ… ಅವ್ವಾರ ಮನೇಲಿ ಮೂರು ಮಡಿಕೆ ಬಾರೋ….’ ಎಂದು ಕೂಗುತ್ತಿದ್ದ. ನಾಗನೋ ಓಡಿ ಹೋಗಿ ಊಟಕ್ಕೆ ಕೂರುತ್ತಿದ್ದ. ಅದು ನನಗೆ ಅಜ್ಜಿ ಮನೆ ಅಲ್ಲದಿದ್ದರೂ, ಆಗೊಮ್ಮೆ ಈಗೊಮ್ಮೆ ಸ್ನೇಹಿತನೊಂದಿಗೆ ಅನ್ನ ಊಟ ಮಾಡುವ ಅವಕಾಶ ಸಿಗುತ್ತಿತ್ತು. ಈ ಕಾರಣಕ್ಕೆ ಮಹೇಶ ಇಂದಿಗೂ ‘ಮಡಿಕೆ’. ಇಂದಿಗೂ ಅವನ ಮೊಬೈಲ್ ನಂಬ ರ್ ನನ್ನ ಮೊಬೈಲ್ನಲ್ಲಿ ಮಡಿಕೆ ಎಂದೇ ಸೇವ್ ಆಗಿದೆ(ಆದರೆ ಇತ್ತೀಚೆಗಷ್ಟೆ ನಮ್ಮಿಂದ ದೂರವಾದ). ಅವನನ್ನು ಛೇಡಿಸಲು ಅಡ್ಡ ಹೆಸರಿಂದ ಕರೆಯುತ್ತಿದ್ದರೂ ಆ ಮೂರು ಮಡಿಕೆ ಸೂತ್ರದಲ್ಲಿ ಅನ್ನ ಮತ್ತು ಹಸಿವಿಗೆ ಇರುವ ಬೆಲೆ ಅರ್ಥವಾಗುತ್ತದೆ.

ಹಸಿವನ್ನೇ ಕಾಣದವರಿಗೆ, ಹುಟ್ಟಿನಿಂದಲೇ ಮನೆಯಲ್ಲಿ ನಿತ್ಯ ಮೂರು ಮಡಿಕೆ ಬಿಸಿ ಮಾಡಿಕೊಂಡು ಉಂಡವರಿಗೆ ಅನ್ನದ ಮಹತ್ವ ಅರ್ಥವಾಗುವುದು ಕಷ್ಟ. ವಾರಾನ್ನ ಉಂಡವರಿಗೆ ತಿಂಗಳುಗಟ್ಟಲೆ ಅನ್ನವನ್ನೇ ಕಾಣದವರ ನೋವು ಗೊತ್ತಾಗುವುದಿಲ್ಲ. ಇಲ್ಲಿಯ ನಾನು ಅನುಭವಿಸಿದ ಘಟನೆಗಳು ಕೇವಲ ಹತ್ತು-ಹದಿನೈದು ವರ್ಷ ಹಿಂದಿನವು. ಇಂದಿಗೂ ಬಡತನ ನಮ್ಮ ಊರಲ್ಲಿ ಹೆಚ್ಚು-ಕಮ್ಮಿ ಅಷ್ಟೇ ಇದೆ.

4 thoughts on “ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು

  1. ಹನುಮಂತ ಹಾಲಿಗೇರಿ,

    ಅನ್ನದೊಂದಿಗಿನ ನನ್ನ ನೆನಪುಗಳು ಜೀವಗೊಂಡವು. ನಮ್ಮ ಕಡೆ ಬಿಳಿ ಬಂಗಾರ ಅಂತಾನೆ ಆಗ ಈ ಅನ್ನ ಕರೆಸಿಕೊಳ್ಳುತ್ತಿತ್ತು. ಒಳ್ಳೆ ಲೇಖನ.

    Reply
  2. Anonymous

    ಯಾರು ಏನೇ ಹೇಳಿದ್ರು ಅನ್ನ ಅನ್ನಾನೇ!!! ಹಸಿದವನಿಗೆ ಗೊತ್ತು ಅದರ ಪರಿ

    Reply
    1. Anonymous

      ಸೋಮಾರಿಗಳಿಗೆ ಪುಕ್ಕಟೆ ಅನ್ನ ಕೊಡುವುದು ಕಾಯಕ ಧರ್ಮವಲ್ಲ. ಎಲ್ಲರೂ ದುಡಿದು ಅನ್ನ ಸಂಪಾದನೆ ಮಾಡತಕ್ಕದ್ದು.

      Reply
  3. Brother Basava

    ಅನ್ನ ಭಾಗ್ಯ ಯೋಜನೆಗೆ ರಾಗಿ ಭಾಗ್ಯ ಅಂತ ಹೆಸರು ಕೊಟ್ಟಿದ್ದರೆ ಮಾನ್ಯ ಭೈರಪ್ಪಾಜಿ ಗಲಾಟೆ ಎಬ್ಬಿಸುತ್ತಿರಲಿಲ್ಲ. ಅನ್ನವು ಬ್ರಾಹ್ಮಣರ ಸ್ವತ್ತಲ್ಲವೇ. ಅದನ್ನು ಶೂದ್ರ ದಲಿತರಿಗೆ ಸುಲಭವಾಗಿ ಕೊಡುತ್ತಾರ ಅವರು?

    Reply

Leave a Reply

Your email address will not be published. Required fields are marked *