Daily Archives: September 21, 2015

ಆರೆಸ್ಸಸ್ನ ಮೂಲಭೂತವಾದಿ ಅಪಾಯಕಾರಿ ರಾಜಕಾರಣ

ಬಿ.ಶ್ರೀಪಾದ ಭಟ್

8, ಅಕ್ಟೋಬರ್, 2013ರ ಹಿಂದೂ ಪತ್ರಿಕೆಯಲ್ಲಿ ಪತ್ರಕರ್ತೆ ವಿದ್ಯಾ ಸುಬ್ರಮಣ್ಯಂ ಅವರು ಆರೆಸಸ್ ಅನ್ನು ಗಾಂಧಿಯವರ ಹತ್ಯೆಗೆ ನೇರವಾಗಿ ಕಾರಣವೆಂದು ಆಪಾದಿಸದಿದ್ದರೂ ಆರೆಸಸ್ನ ಹಿಂಸಾತ್ಮಕ ನಡುವಳಿಕೆ ಮತ್ತು ಪ್ರಚೋದನಾತ್ಮಕ ಚಿಂತನೆಗಳೇ ಗಾಂಧಿಯವರ ಹತ್ಯೆಗೆ ಕಾರಣಗಳಲ್ಲೊಂದು ಎಂದು ಪಟೇಲರು ನಂಬಿದ್ದರು. ಗಾಂಧೀಜಿrss-2ಯವರ ಹತ್ಯೆಯ ನಂತರ ಆರೆಸಸ್ ಅನ್ನು ನಿಷೇದಿಸಲು 4ನೇ ಫೆಬ್ರವರಿ 1948ರಂದು ಹೊರಡಿಸಿದ ನೊಟಿಫಿಕೇಶಿನಿನಲ್ಲಿ ಆಗಿನ ಸರ್ಕಾರವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಮೂಲಭೂತ ಆದರ್ಶಗಳಾದ ಭ್ರಾತೃತ್ವ, ಪ್ರೀತಿ, ಸಮಾನತೆಗಳನ್ನು ಪಾಲಿಸಲಿಲ್ಲ. ಬದಲಾಗಿ ಸಂಘಪರಿವಾರದ ಸದಸ್ಯರು ಗುರುತರವಾದ ಭಯ ಹುಟ್ಟಿಸುವ ಚಟುವಟಿಕೆಗಳಲ್ಲಿ ಭಾಗವಹಿಸಿದರು.

ಸಂಘಪರಿವಾರದ ಸದಸ್ಯರು ವ್ಯವಸ್ಥೆಯಲ್ಲಿ ಹಿಂಸೆಯನ್ನು ಹುಟ್ಟುಹಾಕಿದರು. ದರೋಡೆ, ಗಲಭೆ, ಹತ್ಯೆಗಳನ್ನು ನಡೆಸಿದರು. ಶಸ್ತ್ರಗಳನ್ನು, ಹಣವನ್ನು ವಸೂಲಿ ಮಾಡಿದರು. ದ್ವೇಷಮಯವಾದ, ಗಲಭೆಗಳನ್ನು ನಡೆಸುವಂತೆ ಕರೆಕೊಡುವಂತಹ, ಭಯೋತ್ಪಾದಕ ಪಾಠಗಳನ್ನು ತಿಳಿಸುವಂತಹ ಕರಪತ್ರಗಳನ್ನು ಸಾರ್ವಜನಿಕವಾಗಿ ಹಂಚಿದರು. ಈ ಕಾರ್ಯತಂತ್ರಗಳನ್ನು ಗುಪ್ತವಾಗಿ ನಡೆಸಿದರು ಎಂದು ಅಭಿಪ್ರಾಯಪಟ್ಟಿತು.

4ನೇ ನವೆಂಬರ್ ರಂದು ಪಟೇಲ್ ಅವರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ ಇತರೇ ರಾಜ್ಯಗಳಿಂದಲೂ ಈ ಆರೆಸಸ್ ವಿರುದ್ಧ ನಮಗೆ ದೂರುಗಳು ಬಂದಿವೆ. ಆ ದೂರುಗಳ ಪ್ರಕಾರ ಆರೆಸಸ್ ಸದಸ್ಯರು ನಡಾವಳಿಗಳು ದೇಶ ವಿರೋಧಿ ಲಕ್ಷಣಗಳನ್ನು ಹೊಂದಿದ್ದು. ಸದಾ ಗಲಭೆಗಳನ್ನು ಪ್ರಚೋದಿಸುತ್ತಿದ್ದರು ಎಂದು ತಿಳಿಸಿದ್ದರು. ಇದಕ್ಕೂ ಮುಂಚೆ ಗೃಹ ಮಂತ್ರಿ ಎರಡು ಪತ್ರಗಳನ್ನು ಬರೆದಿದ್ದರು. ಮೊದಲನೇ ಪತ್ರವನ್ನು ಜುಲೈ 1948ರಲ್ಲಿ ಆಗಿನ ಆರೆಸಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಬರೆದಿದ್ದರು. ಅದರಲ್ಲಿ ಆರೆಸಸ್ ಚಟುವಟಿಕೆಗಳು ಸರ್ಕಾರದ ವಿರುದ್ಧದ ಪಿತೂರಿಯಾಗಿದೆ. ಸರ್ಕಾರದ ಇರುವಿಕೆಗೇ ಭಂಗ ತರುವಂತಿದೆ. ಬುಡಮೇಲು ಮಾಡುವಂತಹ ಅದರ ಕೃತ್ಯಗಳು ದಿನಗಳೆದಂತೆ ಹೆಚ್ಚಾಗುತ್ತಿವೆ ಎಂದು ಸ್ಪಷ್ಟವಾಗಿ ಬರೆದಿದ್ದರು. 11ನೇ ಸೆಪ್ಟೆಂಬರ್ 1948ರಂದು ಗೋಳ್ವಾಲ್ಕರ್ ಅವರಿಗೆ ಬರೆದ ಎರಡನೇ ಪತ್ರದಲ್ಲಿ ಪಟೇಲರು ಇಂದು ಆರೆಸಸ್ ಹುಟ್ಟುಹಾಕಿದ ದ್ವೇಷದ ಚಿಂತನೆಗಳಿಂದಾಗಿ ದೇಶದಲ್ಲಿ ಸೃಷ್ಟಿಗೊಂಡ ಕಮ್ಯೂನಲ್ ವಿಷಯುಕ್ತ ವಾತಾವರಣ ಗಾಂಧಿಯವರನ್ನು ಬಲಿ ತೆಗೆದುಕೊಂಡಿತು. ಗಾಂಧೀಜಿವರು ತೀರಿಕೊಂಡ ಬಳಿಕ ಆರೆಸಸ್ ಸದಸ್ಯರು ಸಿಹಿಯನ್ನು ಹಂಚಿದರು. ಇದು ನಾಗರಿಕರಲ್ಲಿ ತಿರಸ್ಕಾರವನ್ನು ಹುಟ್ಟಿಸಿದೆ ಎಂದು ಬರೆಯುತ್ತಾರೆ. (ಓದಿ – ಮರೆತು ಹೋದ ವಾಗ್ದಾನ, ವಿದ್ಯಾ ಸುಬ್ರಮಣ್ಯಂ)

ಈ ಎಲ್ಲ ಹಿನ್ನೆಲೆಗಳಲ್ಲಿ ಆಗಿನ ಗೃಹ ಮಂತ್ರಿ ವಲ್ಲಭಾಯ್ ಪಟೇಲರು ಆರೆಸಸ್ನಿಂದ ದೇಶದ ಧ್ವಜವನ್ನು ಗೌರವಿಸುವಂತೆ ಆದೇಶಿಸುತ್ತಾರೆ (ಕಡೆಗೆ ಆರೆಸಸ್ ಗೌರವಿಸುವುದು ತನ್ನದೇ ಸಿಂಬಲ್ ಆದ ಭಗವದ್ವಜವನ್ನು). ತನ್ನ ಎಲ್ಲಾ ಚಟುವಟಿಕೆಗಳನ್ನು ಬಹಿರಂಗವಾಗಿ ಕಾನೂನಿನ ಅಡಿಯಲ್ಲಿ ನಡೆಸಬೇಕೆಂತಲೂ,ಸಕ್ರಿಯ ರಾಜಕಾರಣದಿಂದ ದೂರವಿರಬೇಕೆಂತಲೂ ಆರೆಸಸ್ನಿಂದ ವಾಗ್ದಾನ ಪಡೆಯುತ್ತಾರೆ. ಎಂದು ಬರೆಯುತ್ತಾರೆ.

ಆದರೆ ಸದಾಕಾಲವು ಅಸಹನೀಯವಾದ ವಾತಾವರವನ್ನು ಸೃಷ್ಟಿಸುವುದರ ದಿಕ್ಕಿನಲ್ಲಿ ಈ ಆರೆಸ್ಸಸ್ನ ನಡೆಗಳು ಚಲಿಸುತ್ತಿರುತ್ತವೆ. ಧಾರ್ಮಿಕ ಮತೀಯವಾದವನ್ನು ಸಾರ್ವಜನಿಕವಾಗಿ ಹುಟ್ಟುಹಾಕುವುದರ ಮೂಲಕ ಆರೆಸ್ಸಸ್ ಸಮಾಜದಲ್ಲಿ ಸದಾಕಾಲವು ವಿಕೃತಿ ಚಿಂತನೆಗಳನ್ನು ಬಿತ್ತುತ್ತಲೇ ಇರುತ್ತದೆ.

ಡಿಸೆಂಬರ್,1949ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯ ಪ್ರಾಂಗಣದಲ್ಲಿ ಗೌಪ್ಯವಾಗಿ ರಾಮನ ಮೂರ್ತಿಯನ್ನು ಸ್ಥಾಪಿಸಲಾಯಿತು. ಆದರೆ ವಲ್ಲಭಾಯಿ ಪಟೇಲರಿಗೆ ರಾಜಕಾರಣದಿಂದ ದೂರವುಳಿಯುವುದಾಗಿಯೂ, ಅಶಾಂತಿ ಕದಡುವಂತಹ ಕಾರ್ಯಗಳಿಂದ ದೂರವಿರುವುದಾಗಿಯೂ ವಾಗ್ದಾನ ನೀಡಿದ ಆರೆಸ್ಸಸ್ ಈrss-1 ರಾಮನ ಮೂರ್ತಿಯ ಉದ್ಭವವನ್ನು ಮುಂದಿಟ್ಟುಕೊಂಡು ಜನರಲ್ಲಿ ಮತೀಯ ಭಾವನೆಗಳನ್ನು ಕೆರಳಿಸತೊಡಗಿತು. ಆಗಿನ ಫೈಜಾಬಾದ್ ಜಿಲ್ಲಾ ಮಾಜಿಸ್ಟ್ರೇಟ್, ಐಸಿಎಸ್ ಅಧಿಕಾರಿ ಕೆ.ಕೆ.ನಾಯರ್ ಅವರು ವಿಗ್ರಹಗಳನ್ನು ತೆರವುಗೊಳಿಸಿದರೆ ಅತ್ಯಂತ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬರೆದರು. ಆದರೆ ಈ ಕೆ.ಕೆ. ನಾಯರ್ ಮೇಲೆ ಈ ವಿಗ್ರಹಗಳನ್ನು ಮಸೀದಿಯೊಳಗೆ ಅಕ್ರಮವಾಗಿ ಸ್ಥಾಪಿಸಿಸುವ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪವಿತ್ತು. ನಂತರದ ದಿನಗಳಲ್ಲಿ ಕೆ.ಕೆ.ನಾಯರ್ ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟರು, ನಂತರ ಭಾರತೀಯ ಜನಸಂಘಕ್ಕೆ ಸೇರಿಕೊಂಡರು ಮತ್ತು 1967ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು.

ಅಡ್ವಾನಿಯವರು ತಮ್ಮ ಪಾಕಿಸ್ತಾನ ಭೇಟಿಯ ಸಂದರ್ಭದಲ್ಲಿ ಜಿನ್ನಾ ಅವರನ್ನು ಪ್ರಶಂಶಿಸಿ ಮಾತನಾಡಿದ್ದನ್ನು ವಿರೋಧಿಸಿದ ಆರೆಸ್ಸಸ್ ಅಡ್ವಾನಿಯವರು ಬಿಜೆಪಿಯ ಅಧ್ಯಕ್ಷ ಪದವಿಯಿಂದ ನಿರ್ಗಮಿಸುವವರೆಗೂ ಬಿಡಲಿಲ್ಲ. ಇದರಿಂದ ಹತಾಶರಾಗಿ ಅಡ್ವಾನಿಯವರು 2005ರ ಸೆಪ್ಪೆಂಬರ್ನಲ್ಲಿ ಚೆನ್ನೈಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯ ಅಂತಿಮ ದಿನದಂದು ಮಾತನಾಡುತ್ತ ತನ್ನ ಪಕ್ಷ ಬಿಜೆಪಿಯು ಆರೆಸಸ್ನೊಂದಿಗೆ ಸಮಾಲೋಚಿಸದೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಈ ನೀತಿಯು ಪಕ್ಷಕ್ಕಾಗಲೀ ಆರೆಸಸ್ಗಾಗಲಿ ಯಾವುದೇ ಒಳಿತನ್ನು ಮಾಡುವುದಿಲ್ಲ. ಈ ನೀತಿಯಿಂದ ಆರೆಸಸ್ನ ಧ್ಯೇಯವಾದ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಹಿನ್ನೆಡೆ ಉಂಟಾಗುತ್ತದೆ. ಆರೆಸಸ್ ಮತ್ತು ಬಿಜೆಪಿ ಈ ಭಾವನೆಯನ್ನು ಹೋಗಲಾಡಿಸಲು ಒಂದಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.

ತನ್ನನ್ನು ಒಂದು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಳ್ಳುವ ಆರೆಸಸ್ 2-4,ಸೆಪ್ಟೆಂಬರ್ 2015ರಂದು ದೆಹಲಿಯಲ್ಲಿ ನಡೆದ ಚಿಂತನ-ಮಂಥನ ಸಬೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಿಜೆಪಿ ಮಂತ್ರಿಗಳ ಸಾಧನೆಯನ್ನು ಪರಾಮರ್ಶೆ ನಡೆಸಿದೆ. ಸರ್ಕಾರದ ನೀತಿಗಳ ಕುರಿತಾಗಿ ಮಂತ್ರಿಗಳೊಂದಿಗೆ ಅಧಿಕೃತವಾಗಿ ಚರ್ಚೆ ನಡೆಸಿದೆ. ಕೇಂದ್ರ ಬಹುಪಾಲು ಎಲ್ಲಾ ಬಿಜೆಪಿ ಮಂತ್ರಿಗಳು ತಮ್ಮ ಮಾತೃಪಕ್ಷ ಆರೆಸ್ಸಸ್ಗೆ ವಿನಯಪೂರ್ವಕವಾಗಿ ಎಲ್ಲಾ ಸರ್ಕಾರಿ ವರದಿಗಳನ್ನು, ಅಂಕಿ ಅಂಶಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ನಿಷ್ಠಾವಂತ ಸ್ವಯಂಸೇವಕ ಎಂದು ಮತ್ತು ಇಂದು ನನ್ನ ಸಾಧನೆಗೆ ಆರೆಸ್ಸಸ್ ಕಾರಣ ಬಣ್ಣಿಸಿಕೊಂಡಿದ್ದಾರೆ. ಬಿಜೆಪಿಯ ವಕ್ತಾರ ಸಿದ್ಧಾರ್ಥ ನಾಥ್ ಅವರು ನಾವು ಸ್ವಯಂಸೇವಕರೆಂದು ಹೇಳಿಕೊಳ್ಳಲು ಹಿಂಜರಿಕೆ ಇಲ್ಲ ಎಂದು ಹೇಳಿದ್ದಾರೆ. ನ್ಯಾಷನಲ್ ಬುಕ್ ಟ್ರಸ್ಟ್ನ ಹಾಲಿ ಛೇರ್ಮನ್ ಮತ್ತು ಆರೆಸ್ಸಸ್ನ ಸಿದ್ಧಾಂತವಾದಿ ಬಲದೇವ್ ಶರ್ಮ ಅವರು ತಂದೆ ತನ್ನ ಮಕ್ಕಳಿಗೆ ಹೇಗೆ ವ್ಯಾಸಂಗ ಮಾಡುತ್ತಿದ್ದೀರಿ ಎಮದು ಕೇಳುವುದರಲ್ಲಿ ತಪ್ಪೇನಿದೆ ಎಂದು ಉದ್ಗರಿಸಿದ್ದಾರೆ.

ಆದರೆ ಹಿಂದುತ್ವದ ರಾಷ್ಟ್ರಕ್ಕಾಗಿ ಸಂಘಟನೆಗೊಳ್ಳುತ್ತಿರುವ, ಈ ಹಿಂದೂ ರಾಷ್ಟ್ರವನ್ನು ಅಲ್ಪಸಂಖ್ಯಾತರ ತುಚ್ಛೀಕರಣದ ಮೂಲಕ ಕಟ್ಟಲು ಬಯಸುವ, ಕಳೆದ 60 ವರ್ಷಗಳ ಇತಿಹಾಸದಲ್ಲಿ ಸಮಾಜದಲ್ಲಿ ಕೋಮು ಗಲಭೆಗಳಿಗೆ ಕಾರಣವಾದ ಮೂಲಭೂತವಾದಿ ಸಂಘಟನೆ ಆರೆಸ್ಸಸ್ನೊಂದಿಗೆ ತನ್ನನ್ನು ಗುರುತಿಸಕೊಳ್ಳ ಬಯಸುವ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ನಡೆ ಅಪಾಯಕಾರಿ. ಇದು ಕೇವಲ ಹಿಂದುತ್ವದ ಮತೀಯವಾದಿಗಳನ್ನು ಪ್ರೋತ್ಸಾಹಿಸುವುದಿಲ್ಲ ಜೊತೆಗೆ ಸಂವಿಧಾನದ ಎಲ್ಲಾ ಆಶಯಗಳನ್ನು, ಕಲಮುಗಳನ್ನು ಪರೋಕ್ಷವಾಗಿ ಭಗ್ನಗೊಳಿಸುತ್ತದೆ. ಇದೇ ಟ್ರೆಂಡ್ ಮುಂದುವರೆದರೆ ಶಿವ ವಿಶ್ವನಾಥನ್ ಅವರು ಹೇಳಿದಂತೆ ಬಿಜೆಪಿ ಆಡಳಿತದಲ್ಲಿ ಸಂವಿಧಾನವು ಒಂದು ಅನ್ಯಲೋಕದ ಗ್ರಹದಂತೆ ಬಿಂಬಿತವಾಗುತ್ತದೆ. ಇದು ತುಂಬಾ ಅಪಾಯಕಾರಿ.

2104ರ ಚುನಾವಣೆಯಲ್ಲಿ ಸದಾ ಸುಳ್ಳನ್ನೇ ನುಡಿಯುವ ನರೇಂದ್ರ ಮೋದಿ ಅಭಿವೃದ್ಧಿ ಕುರಿತಾಗಿ ಭರವಸೆ ಕೊಟ್ಟಿದ್ದಕ್ಕಾಗಿ, ಅಚ್ಛೇ ದಿನ್ ಎನ್ನುವ ಕನಸಿನ ಬೆಲೂನು ತೇಲಿ ಬಿಟ್ಟಿದ್ದಕ್ಕಾಗಿ ಲಕ್ಷಾಂತರ ಜನತೆ ಅವರಿಗೆ ಮತ ಹಾಕಿದ್ದರೇ ಹೊರತು ಸಂಪೂರ್ಣ ಪುರುಷರ, ಸಂಪೂರ್ಣ ಹಿಂದೂಗಳನ್ನೊಳಗೊಂಡ ಆರೆಸ್ಸಸ್ನ ಸಿದ್ಧಾಂತಕ್ಕೆ ಅಲ್ಲವೇ ಅಲ್ಲ. ಎಲ್ಲರ ವಿಕಾಸ ಎನ್ನುವ ಮೋಸದ ಸ್ಲೋಗನ್ಗೆ ಮಾರುಹೋಗಿ ವೋಟ್ ಮಾಡಿದರೇ ಹೊರತಾಗಿ ಈ ಆರೆಸ್ಸಸ್ನ ಸೋ ಕಾಲ್ಡ್ ಹಿಂದುತ್ವ ಸಿದ್ಧಾಂತಕ್ಕೆ ಅಲ್ಲವೇ ಅಲ್ಲ. ಇಂದು ಇದೇ ಪ್ರಜೆಗಳು ಈ ಕೇಂದ್ರ ಸರ್ಕಾರದ ಈ ತೆರೆಮರೆ ಹಿಂದಿನ ಚಟುವಟಿಕೆಗಳನ್ನು ಪ್ರಶ್ನಿಸಬೇಕಾಗಿದೆ.

ಸಂವಿಧಾನಬದ್ಧ ಸರ್ಕಾರವನ್ನು ಅಸಂವಿಧಾನ ಮಾದರಿಯಲ್ಲಿ, ಪ್ರಜಾಪ್ರಭುತ್ವದ ಆಶಯಗಳಿಗೆ ವಿರೋಧವಾಗಿ ಆರೆಸ್ಸಸ್ ಎನ್ನುವ ರಿಮೋಟ್ ಕಂಟ್ರೋಲ್ಗೆ ಸಾರ್ವಜನಿಕವಾಗಿ ಮಂಡಿಯೂರಿದ್ದನ್ನು ನಾವೆಲ್ಲ ಪ್ರತಿಭಟಿಸಬೇಕಾಗಿದೆ ಆದರೆ ತನ್ನನ್ನು ತಾನು ಮಹಾನ್ ಹಿಂದೂ ರಾಷ್ಟ್ರೀಯವಾದಿ ಮತ್ತು ಹಿಂದೂ ಧರ್ಮದ ಅತ್ಯುನ್ನತ ಮೌಲ್ಯಗಳನ್ನು ಒಳಗೊಂಡಂತಹ ಪ್ರಾಮಾಣಿಕ ಸಂಘಟನೆ ಎಂದು ಬೆನ್ನು ತಟ್ಟಿಕೊಳ್ಳುವ ಮತ್ತು ಮಾಧ್ಯಮಗಳಲ್ಲಿ ಕೂಗುಮಾರಿಯಂತೆ ಆರಚುವ ಆರೆಸ್ಸಸ್ ಮತ್ತು ಅದರ ಸಹ ಸಂಘಟನೆಗಳ ಅಣ್ಣನಂತಿರುವ ಬಿಜೆಪಿ ಪಕ್ಷ ಅಧಿಕಾರದಲ್ಲಿರುವ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸಗಡ, ಹರ್ಯಾಣ, ಮಹಾರಾಷ್ಟ್ರ, ಗುಜರಾತ್ನಂತಹ ಪ್ರಮುಖ ರಾಜ್ಯಗಳಲ್ಲಿ ಆಡಳಿತ ಯಂತ್ರವು ಸಂಪೂರ್ಣ ಕುಸಿದು ಹೋಗಿದೆ.

ಹಿಂದೂ ಮೂಲಭೂತವಾದಿಗಳ ದೌರ್ಜನ್ಯ ಮತ್ತು ಹಲ್ಲೆಗಳು ಕ್ರೌರ್ಯದ ಹಂತವನ್ನು ತಲುಪಿವೆ. ಘರ್ ವಾಪಸಿ, ಭೀಫ್ ನಿಷೇಧ, ಜೈನ್ರ ಹಬ್ಬದ ಸಂದರ್ಭದಲ್ಲಿ ಮಾಂಸದ ನಿಷೇಧ, ಪಠ್ಯಪುಸ್ತಕಗಳ ಕೇಸರೀಕರಣ, ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಕಾನೂನುಗಳು, ವ್ಯಾಪಂ ಹಗರಣ, ಸರ್ಕಾರಿ ಸಂಸ್ಥೆಗಳಲ್ಲಿ ಆರೆಸ್ಸಸ್ ಸ್ವಯಂಸೇವಕರು, ಸಿದ್ಧಾಂತವಾದಿಗಳ ನೇಮಕಗಳು, ಅಲ್ಪಸಂಖ್ಯಾತರ ಮೇಲೆ ನಿರಂತರ ಹಲ್ಲೆಗಳು ಹೀಗೆ ಈ ಹಿಂದುತ್ವದ ಮೂಲಭೂತವಾದವು ಈ ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಮೇಲುಗೈ ಸಾಧಿಸಿವೆ. ಇತ್ತೀಚೆಗೆ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಂಸ್ಕೃತಿ ಸಚಿವರಾಗಿರುವ ಮಹೇಶ್ ಶರ್ಮ ಎನ್ನುವ ಮತೀಯವಾದಿ ಮುಸ್ಲಿಂರಾಗಿದ್ದರೂ ಸಹ ಅಬ್ದುಲ್ ಕಲಾಂ ಅವರು ಮಹಾನ್ ರಾಷ್ಟ್ರೀಯವಾದಿಯಾಗಿದ್ದರು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಂತ್ರಿಯೊಬ್ಬರು ಮುಸ್ಲಿಂ ಸಮುದಾಯವನ್ನು ಅವಮಾನಿಸುವಂತಹ, ಅವರ ಮೌಲ್ಯಗಳನ್ನೇ ಪ್ರಶ್ನಿಸುವಂತಹ ಇಂತಹ ಮಾತುಗಳನ್ನು ಕೇವಲ ಆಕಸ್ಮಿಕವಾಗಿ ಆಡಿದ್ದಲ್ಲ. ಪ್ರಜ್ಞಾಪೂರ್ವಕವಾಗಿಯೇ ನುಡಿದಿದ್ದಾರೆ. ಆರೆಸ್ಸಸ್ನ ಅಂತರಂತಗದ ಮಾತುಗಳನ್ನು ಬಹಿರಂಗವಾಗಿ ಆಡಿದ್ದಾರೆ ಈ ಸ್ವಯಂಸೇವಕ ಕಂ ಸಚಿವ ಮಹೇಶ್ ಶರ್ಮ. ಇದೇ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಆರೆಸ್ಸಸ್ನ ಚಿಂತನ ಭೈಠಕ್ನಲ್ಲಿ ಸಾರ್ವಜನಿಕ ವಲಯಗಳಲ್ಲಿ ಪಶ್ಚಿಮದ ಪ್ರಭಾವಕ್ಕೆ ಒಳಪಟ್ಟ ಇತಿಹಾಸವಾಗಿರಲಿ, ಸಾಂಸ್ಕೃತಿಕ ಸ್ಮಾರಕಗಳಾಗಿರಲಿ, ಸಂಸ್ಥೆಗಳಾಗಿರಲಿ ಎಲ್ಲವನ್ನೂ ಶುದ್ಧೀಕರಿಸುತ್ತೇವೆ ಮತ್ತು ಆ ಸ್ಥಾನದಲ್ಲಿ ಭಾರತದ ಸಂಸ್ಕೃತಿಯನ್ನು,ನಾಗರಿಕತೆಯನ್ನು ಸ್ಥಾಪಿಸುತ್ತೇವೆ ಎಂದು ಹೇಳಿದ್ದಾರೆಂದು ವರದಿಯಾಗಿದೆ. ಇಲ್ಲಿ ಭಾರತೀಯ ಸಂಸ್ಕೃತಿ ಎಂದರೆ ಆರೆಸ್ಸಸ್ ಪ್ರತಿಪಾದಿಸುವ ಕರ್ಮಠತನದ,ಸನಾತನವಾದಿ ಹಿಂದೂ ಸಂಸ್ಕೃತಿ ಎಂದು ಬೇರೆ ಹೇಳಬೇಕಿಲ್ಲ.

ಈ ಹಿಂದೂ ಮೌಲ್ಯಗಳ ಸ್ಯಾಂಪಲ್ಗಾಗಿ ಇತ್ತೀಚೆಗೆ ಮುಚ್ಚಿಕೊಂಡ ಹಿಂದೂಯಿಸಂ ಎನ್ನುವ ಸನಾತನ ಧರ್ಮವನ್ನು ಪ್ರತಿಪಾದಿಸುವ ಗೀತಾ ಪ್ರೆಸ್ ಕಡೆಗೆ ಗಮನ ಹರಿಸೋಣ. 1923ರಲ್ಲಿ ಸ್ಥಾಪನೆಗೊಂಡ ಈ ಗೀತಾ ಪ್ರೆಸ್ ಅನ್ನು ಉ.ಪ್ರ. ಗೋರಖ್ಪುರದಲ್ಲಿ ಜಯದಯಾಲ್ ಗೊಯೆಂಕ ಎನ್ನುವ ಮಾರ್ವಾಡಿ ಪ್ರಾರಂಭಿಸಿದರು. ಅಲ್ಲಿ ಹಿಂದೂ ಧರ್ಮದ ಪ್ರಚಾರ ಮತ್ತು ಅದರ ಸನಾತನ ಪರಂಪರೆಯನ್ನು ಪ್ರತಿಪಾದಿಸುವ ಸಲುವಾಗಿ ಕಲ್ಯಾಣ್ ಎನ್ನುವ ಮಾಸಿಕ ಪತ್ರಿಕೆಯನ್ನು ಮುದ್ರಿಸುತ್ತಿದ್ದರು. ಈ ಮುದ್ರಣಾಲಯವು ಭಗವದ್ಗೀತೆ, ತುಲಸೀ ರಾಮಾಯಣ, ಉಪನಿಷತ್, ಪುರಾಣದ ಪುಸ್ತಕಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿತ್ತು. ಮೊನ್ನೆಯವರೆಗೂ ಈ ಕಲ್ಯಾಣ್ ಪತ್ರಿಕೆಯ ಪ್ರಸಾರ 2 ಲಕ್ಷವನ್ನು ದಾಟಿತ್ತು ಎಂದು ವರದಿಯಾಗಿದೆ. ಆರೆಸ್ಸಸ್ ಬ್ರಾಹ್ಮಣ-ಬನಿಯಾ ಸಂಘಟನೆ ಎಂದು ಗೇಲಿಗೊಳಗಾಗುತ್ತಿತ್ತು ಮತ್ತು ಈ ಕಲ್ಯಾಣ್ ಮಾಸಿಕ ಪತ್ರಿಕೆಯಲ್ಲಿಯೂ ಸಹ ಕೇವಲ ಬ್ರಾಹ್ಮಣ, ಬನಿಯಾ, ಮಾರ್ವಾಡಿ ಮಾತ್ರ ಬರೆಯುತ್ತಿದ್ದರು. ಇದರ ಸಂಪಾದಕರಾಗಿದ್ದ ಹನುಮಾನ್ ಪ್ರಸಾದ್ ಪೊದ್ದಾರ್ ಮತ್ತು ಮಾರ್ವಾಡಿ ಮಾಲೀಕರ ಅನುಸಾರ ಬ್ರಾಹ್ಮಣ, ಬನಿಯಾ, ಕ್ಷತ್ರಿಯರು ಮಾತ್ರ ದ್ವಿಜರು (ಎರಡು ಜನ್ಮವನ್ನು ಪಡೆದವರು) ಅಂದರೆ ಶ್ರೇಷ್ಠರು ಎಂದು ಪರಿಗಣಿಸುತ್ತಿದ್ದರು. ಜಿ.ಸಂಪತ್ ಅವರು ಈ ಗೀತಾ ಪ್ರೆಸ್ನ ಟ್ರಸ್ಟ್ ಆಗಿದ್ದ ಗೋವಿಂದ ಭವನ ಕಾರ್ಯಾಲಯಕ್ಕೆ ಕೇವಲ ಸನಾತನ ಧರ್ಮದ ಹಿಂದೂಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಸದಸ್ಯರಾಗುವ ಅವಕಾಶವಿತ್ತು, ಆದರೆ ಶೂದ್ರ ಮತ್ತು ದಲಿತರು ಮತ್ತು ಆದಿವಾಸಿಗಳಿಗೆ ಸದಸ್ಯರಾಗುವ ಅವಕಾಶವಿರಲಿಲ್ಲ. ಏಕೆಂದರೆ ಅವರು ದ್ವಿಜರಾಗಿರಲಿಲ್ಲ. ಈ ಗೀತಾ ಪ್ರೆಸ್ ರಾಜಸ್ತಾನದಲ್ಲಿಯೂ ಸಹ ಶಾಲೆಯೊಂದನ್ನು ನಡೆಸುತ್ತಿದೆ. ಅಲ್ಲಿ ದ್ವಿಜರಾದ ಕೇವಲ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರ ಮಕ್ಕಳಿಗೆ ಮಾತ್ರ ಪ್ರವೇಶ ಮಾಡಿಕೊಳ್ಳಲಾಗುತ್ತದೆ ಎಂದು ಬರೆಯುತ್ತಾರೆ. ಲೇಖಕ ಅಮಿತ್ ಪಾಲ್ ಅವರು ಈ ಗೀತಾ ಪ್ರೆಸ್ ಕುರಿತು ಸಾರಾಂಶದಲ್ಲಿ ಹೇಳಬೇಕೆಂದರೆ ಅದು ಇಂಡಿಯಾದಲ್ಲಿ ಮುಸ್ಲಿಂರು ಅತಿಥಿಗಳಂತೆ ಬದುಕಬೇಕು, ಸತಿ ಪದ್ಧತಿಯನ್ನು ಅನುಸರಿಸದ ಮಹಿಳೆಯರು ಬಹಿರಂಗವಾಗಿ ಕಾಣಿಸಿಕೊಳ್ಳಬಾರದು, ಮಹಿಳೆಯರಿಗೆ ವಾಕ್ ಸ್ವಾತಂತ್ರ ಕೊಡಬಾರದು, ದಲಿತರಿಗೆ ಅವರ ಸ್ಥಾನವೇನೆಂದು ಅರಿವಿರಬೇಕು ಮತ್ತು ಮೇಲ್ಜಾತಿಗಳ ಸೇವೆ ಮಾಡಬೇಕು ಎಂದು ಪ್ರವಚನ ನೀಡುತ್ತದೆ.

1926ರಲ್ಲಿ ಅದರ ಕಲ್ಯಾಣ್ ಪತ್ರಿಕೆ ಸ್ತ್ರೀ ಧರ್ಮದ ಹೆಸರಿನಲ್ಲಿ 46 ಪುಟಗಳ ಪ್ರಶ್ನೋತ್ತರಗಳನ್ನು ಪ್ರಕಟಿಸಿತು. ಅದರಲ್ಲಿ ಬಾಲ್ಯದಲ್ಲಿ ಮಹಿಳೆ ತನ್ನ ತಂದೆಯ ಅಡಿಯಲ್ಲಿ, ಯೌವನದಲ್ಲಿ ತನ್ನ ಗಂಡನ ಅಡಿಯಲ್ಲಿ, ಗಂಡನ ಸಾವಿನ ನಂತರ ತನ್ನ ಮಕ್ಕಳ ಅಡಿಯಲ್ಲಿ ಬದುಕಬೇಕು ಎಂದು ಬರೆಯಲಾಗಿದೆ ಎಂದು ವಿವರಿಸುತ್ತಾರೆ. ಇದು ಆರೆಸ್ಸಸ್ನ ಸಿದ್ಧಾಂತವೂ ಹೌದು. ಮೇಲಿನ ಗೀತಾ ಪ್ರೆಸ್ನ ಎಲ್ಲಾ ಐಡಿಯಾಲಜಿಗಳೂ ಆರೆಸ್ಸಸ್ನ ಐಡಿಯಾಲಜಿಗಳು. 90 ವರ್ಷಗಳ ಈ ಗೀತಾ ಪ್ರೆಸ್ನ ಚಟುವಟಿಕೆಗಳು ಆರೆಸ್ಸಸ್ನ ಪ್ರತಿಬಿಂಬಗಳು. ಈ ಹಿಂದೂ ರಾಷ್ಟ್ರೀಯತೆ,ಹಿಂದೂ ಇಂrss-3ಡಿಯಾ ಎನ್ನುವ ಐಡಿಯಾಲಜಿಗಳನ್ನು ಪ್ರಚಾರ ಮಾಡುವ ಆರೆಸ್ಸಸ್ನ ಪ್ರಣಾಳಿಕೆಯ ಅನುಸಾರ ಸೆಕ್ಯುಲರ್ ಇಂಡಿಯಾ ಎನ್ನುವ ತತ್ವವು ಎಂದಿಗೂ ಮಾನ್ಯವಾಗಿಲ್ಲ ಮತ್ತು ಅದಕ್ಕೆ ಆಸ್ತಿತ್ವವೇ ಇಲ್ಲ. ಆರೆಸ್ಸಸ್ ಸದಾ ಕಾಲ ಜಪಿಸುವ ಹಿಂದೂ ಪ್ರತಿಷ್ಠೆ ಸನಾತನ ಧರ್ಮದ ಐಡಿಯಾಲಜಿಯಿಂದ ಒಡಮೂಡಿದೆ. ಇತರೇ ಧರ್ಮದವರ ನಂಬಿಕೆಗಳನ್ನು ಅಪಹಾಸ್ಯ ಮಾಡುವ ಆರೆಸ್ಸಸ್ ಆಧ್ಯಾತ್ಮವನ್ನು ಹಿಂದೂ ಸನಾತನ ಧರ್ಮವೆಂದು ವ್ಯಾಖ್ಯಾನಿಸುತ್ತದೆ ಮತ್ತು ಈ ಸನಾತನ ಧರ್ಮಕ್ಕಾಗಿ ಹಿಂಸೆಯನ್ನು ಪ್ರಚೋದಿಸುತ್ತದೆ.

ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಈ ಬಿಜೆಪಿ ಸರ್ಕಾರ ಮಂದುವರೆದ ರೆ ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ವ್ಯವಸ್ಥೆ ಅಳಿವಿನಂಚಿಗೆ ತಳ್ಳಲ್ಪಡುತ್ತದೆ. ಈ ಆರೆಸ್ಸಸ್ ಸಂಘಟನೆಯ ಎಲ್ಲಾ ಚಟುವಟಿಕೆಗಳನ್ನು ಕೂಲಂಕುಶ ತನಿಖೆಗೊಳಿಸಬೇಕಾಗಿದೆ. ಪ್ರಜಾಪ್ರಭುತ್ವದ ಗಣರಾಜ್ಯದ ರಾಷ್ಟ್ರವೊಂದರ ಎಲ್ಲಾ ಕಾನೂನು ಮತ್ತು ನಿಯಮಗಳಿಗೆ ಒಳಪಡುವಂತೆ ಮತ್ತು ತನ್ನ ಎಲ್ಲಾ ಸಹ ಸಂಘಟನೆಗಳ ಭಯೋತ್ಪಾದಕ ಕಾರ್ಯಚಟುವಟಿಕೆಗಳಿಗೆ ಹಕ್ಕುದಾರನಾಬೇಕೆಂದು ಆರೆಸ್ಸಸ್ ಸಂಘಟನೆಯ ವಿರುದ್ಧ ಆಂದೋಲನವನ್ನೇ ರೂಪಿಸಬೇಕಾಗಿದೆ.