Daily Archives: September 5, 2015

ಅಕ್ಕನ ಮದುವೆ ಮಾಡಲು ಜೀತಕ್ಕೆ ಸೇರಿದ ಅಪ್ಪ 5 ರೂ.ಗಾಗಿ ತಡಕಾಡಿದಾಗ…!

                                                                                                                              – ಸೂರಿ

1995ರಲ್ಲಿ ನನ್ನಕ್ಕನ ಮದುವೆ ನಿಶ್ಚಯವಾಯಿತು. ಇದು ಎಲ್ಲರಂತೆ ನಮಗೆ ಸಂಭ್ರಮದ ವಿಷಯ ಆಗಿರಲಿಲ್ಲ. ಏಕೆಂದರೆ ಕೂಲಿಯನ್ನೇ ನಂಬಿ ಇಡೀ ಕುಟುಂಬಕ್ಕೆ ಅಕ್ಕನ ಮದುವೆ ಒಂದು ರೀತಿಯ ಭಾರವಾಗಿತ್ತು.

ಮದುವೆಗೆ ಬೇಕಿದ್ದ ಹಣ ಹೊಂದಿಸುವುದು ನನ್ನಪ್ಪನಿಗೆ ಬಲು ಕಷ್ಟದ ಕೆಲಸವಾಗಿತ್ತು. ಬಂಜರು ಭೂಮಿಯಂತಿರುವ ತುಂಡು ಭೂಮಿಯಲ್ಲಿ ಬೆಳೆ ತೆಗೆಯುವುದು ಸಾಧ್ಯವಿಲ್ಲದ ಮಾತಾಗಿತ್ತು. ಹಾಗಾಗಿ ಜೀವನಕ್ಕೆ ಕೂಲಿಯೇ ಆಧಾರವಾಗಿತ್ತು. ಅಪ್ಪ ಒಂದು ಮನೆಗೆ ಕೆಲಸಕ್ಕೆ ಹೋದರೆ, ಅವ್ವ ಮತ್ತು ಅಕ್ಕ ಇನ್ನೊಂದು ಮನೆ ಕೆಲಸಕ್ಕೆ ಹೋಗುತ್ತಿದ್ದರು.

ನಮ್ಮ ಕಷ್ಟ ಏನೇ ಇರಲಿ, ಮಗಳ ಮದುವೆ ನಿಶ್ಚಯವಾಯಿತು ಎಂದು ಅವ್ವ-ಅಪ್ಪ ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. 26 ವರ್ಷ ಕಳೆದರೂ ಮದುವೆ ನಿಶ್ಚಯವಾಗಿರಲಿಲ್ಲ. ಮುದಿ ಮೋರೆ ಬಿದ್ದಿದೆ, ಇವಳನ್ನು ಯಾರು ಮದುವೆಯಾಗುತ್ತಾರೆ? ಎಂಬ ಚುಚ್ಚು ಮಾತು ಅವ್ವ ಮತ್ತು ಅಕ್ಕನ ಕಣ್ಣಲ್ಲಿ ಆಗಾಗ ನೀರು ತರಿಸುತ್ತಿದ್ದವು. ಹೆದರಬೇMigrant workers travel atop a truck in Mumbaiಡ ನಾನಿದ್ದೇನೆ ಎಂದು ಅಕ್ಕನಿಗೆ ಸಮಾಧಾನ ಮಾಡಿದ್ದೆ. ಸದ್ಯ ಅದಾದ ಕೆಲವೇ ದಿನಗಳಲ್ಲಿ ಅಕ್ಕನ ಮದುವೆ ದಿನಾಂಕವೂ ನಿಗದಿಯಾಯಿತು.

ಹಳೆಯದಾದ ಹುಲ್ಲು ಮನೆಯಲ್ಲಿ ಜೀವನ ಪಯಣ ಮುಂದುವರಿದಿತ್ತು. ಮದುವೆ ಖರ್ಚಿಗೆ ನಯಾ ಪೈಸೆಯೂ ಇರಲಿಲ್ಲ. ಶಾಲೆ ಮೆಟ್ಟಿಲೇರದ ಅಕ್ಕ, ಚಿಕ್ಕ ವಯಸ್ಸಿನಿಂದಲೇ ದುಡಿಮೆಗೆ ಇಳಿದಿದ್ದಳು. ಸರ್ಕಾರಿ ಶಾಲೆ-ಕಾಲೇಜಿನಲ್ಲಿ ಓದುತ್ತಿದ್ದ ನಾನು ಮತ್ತು ತಮ್ಮ ರಜೆ ದಿನದಲ್ಲಿ ಕೂಲಿಗೆ ಹೋಗಿ ಬಂದ ಪುಡಿಗಾಸನ್ನೂ ಕೂಡಿ ಹಾಕಿಕೊಂಡು ಓದು ಮುಂದುವರೆಸಿದ್ದೆವು.

ಈ ಸ್ಥಿತಿಯಲ್ಲಿರುವ ಕುಟುಂಬಕ್ಕೆ ಅಕ್ಕನ ಮದುವೆಗೆ ಹಣ ಹೊಂದಿಸುವುದು ಸಾಧಿವಿಲ್ಲದ ಮಾತಾಗಿತ್ತು. ಮದುವೆ ಖಚರ್ಿನ ಜೊತೆಗೆ 6 ಸಾವಿರ ರೂ. ವರದಕ್ಷಿಣೆ ಕೂಡ ಕೊಡಬೇಕಿತ್ತು. ಅಕ್ಕನ ಮದುವೆ ಮಾಡಲು ಊರಿನ ಅನೇಕರ ಬಳಿ ಅಪ್ಪ ಸಾಲ ಕೇಳಿದರು. ಆದರೆ ದೊಡ್ಡ ಮೊತ್ತದ ಹಣ ಯಾರಿಂದಲೂ ಸಿಗಲಿಲ್ಲ. ಪರಿಚಯಸ್ಧರೊಬ್ಬರ ಮೂಲಕ ನನ್ನೂರಿಂದ ಸುಮಾರು 18 ಕಿಲೋ ಮೀಟರ್ ದೂರ ಇರುವ ಗ್ರಾಮದ ಮೇಲ್ಜಾತಿಯೊಬ್ಬರ ಮನೆಯಲ್ಲಿ 15 ಸಾವಿರ ರೂ. ಸಾಲ ತಂದರು.
ಸಾಲ ತೀರಿಸಲು ಕುಟುಂಬದಲ್ಲಿ ಯಾರಾದರೊಬ್ಬರು 2 ವರ್ಷ ಜೀತ ಮಾಡಬೇಕಿತ್ತು. 2 ವರ್ಷಕ್ಕೆ 15 ಸಾವಿರ ಸಾಲ ಹಣ ತೀರಿ ಹೋಗುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಜೀತಕ್ಕೆ ಸೇರಲು ಸಿದ್ದವಾಗಿದ್ದ ಅಪ್ಪ 15 ಸಾವಿರ ಹಣ ತಂದು, ಅಕ್ಕನ ಮದುವೆ ಮಾಡಿ ಮುಗಿಸಿದರು.

ಮನೆಯ ಸ್ಥಿತಿ ಗೊತ್ತಿದ್ದರಿಂದ ಚೆನ್ನಾಗಿ ಓದಿ ಸರ್ಕಾರಿ ಕೆಲಸ ಹಿಡಿಯಬೇಕು ಎಂಬ ಛಲ ಮನದೊಳಗೆ ಮನೆ ಮಾಡಿತ್ತು. ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣನಾಗಿದ್ದ ಕಾರಣ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಗೆ ಸುಲಭವಾಗಿ ಸೀಟು ಸಿಕ್ಕಿತ್ತು.

ಆದರೆ ಕಾಲೇಜಿಗೆ ಹೋಗುವ ಬದಲು ಅಕ್ಕನ ಮದುವೆ ಮಾಡಿ ಜೀತಕ್ಕೆ ಸೇರಿರುವ ಅಪ್ಪನನ್ನು ಆ ಸೆರೆಯಿಂದ ಬಿಡಿಸಿಕೊಂಡು ಬರಬೇಕು ಎಂಬ ಆಲೋಚನೆ ಮೂಡಿತು. ಕಾಲೇಜಿಗೆ ಹೋಗದೆ ಅಪ್ಪನ ಬದಲು ಜೀತಕ್ಕೆ ಸೇರಿಕೊಳ್ಳುವ ಕೈಗೊಂಡಿದ್ದ ತೀರ್ಮಾನವನ್ನು ಅವ್ವನ ಬಳಿ ಹೇಳಿಕೊಂಡೆ. ಅದಕ್ಕೊಪ್ಪದ ಅವ್ವ ನಾವು ಅನುಭವಿಸಿರುವ ಕಷ್ಟವೇ ಸಾಕು ಮಗನೇ, ಓದೊ ಮಗನ್ನ ಜೀತಕ್ಕೆ ಸೇರಿಸೋಕೆ ಒಪ್ಪಲಾರೆ ಎಂದು ಕಣ್ಣೀರಿಟ್ಟಳು.

ಅವ್ವನ ಆಸೆಯಂತೆ ಮೈಸೂರಿನಲ್ಲಿ ಪ್ರಥಮ ವರ್ಷದ ಬಿಎಗೆ ಸೇರಿಕೊಂಡು ಹಾಸ್ಟೆಲ್ನಲ್ಲಿ ಜೀವನ ಮುಂದುವರಿಯಿತು. ಅಲ್ಲಿ ಹೊಟ್ಟೆ ತುಂಬ ಊಟ ತಿಂದರೂ ಅಪ್ಪ ಜೀತದಾಳಾಗಿ ದುಡಿಯುತ್ತಿರುವುದನ್ನು ನೆನೆದು ಸುರಿದ ಕಣ್ಣೀರಿಗೆ ಅಳತೆ ಇರಲಿಲ್ಲ. ದಸರಾ ರಜೆ ಸಿಕ್ಕಿ ಊರಿನ ಹಾದಿ ಹಿಡಿದ ನಾನು, ಮರು ದಿನವೇ ಅಪ್ಪ ಜೀತ ಮಾಡುತ್ತಿದ್ದ ಮನೆ ಮುಂದೆ ಹೋಗಿ ನಿಂತೆ. ಅಪ್ಪನ ಕಷ್ಟದಲ್ಲಿ ನನಗೂ ಪಾಲು ಪಡೆಯಬೇಕು ಎಂಬ ಕಾರಣಕ್ಕೆ ರಜೆ ಮುಗಿಯುವ ತನಕ ಜೀತದಾಳಾಗಿ ನಾನೇ ದುಡಿಯುವ ಇಚ್ಛೆ ಪ್ರಕಟಿಸಿದೆ.

ಮೊದಲು ಒಪ್ಪದ ಅಪ್ಪನ ಮನವೊಲಿಸುವಲ್ಲಿ ಯಶಸ್ವಿಯಾಗಿ ಜೀತದಾಳಾಗಿ ಸೇರಿಕೊಂಡೆ. ಕೊಟ್ಟಿಯಲ್ಲಿ ಅಪ್ಪ ಇಟ್ಟುಕೊಂಡಿದ್ದ ಚಾಪೆ, ದಿಂಬಿನೊಂದಿಗೆ ಹೊಸ ಜೀವನ ಆರಂಭವಾಯಿತು. ರಾತ್ರಿ ಎಷ್ಟೊತ್ತಿಗೆ ಮಲಗಿದರೂ ಮುಂಜಾನೆ 4ಕ್ಕೆ ದುಡಿಮೆ ಆರಂಭಿಸಬೇಕಿತ್ತು. ರಾತ್ರಿ ಮೂರ್ನಾಲ್ಕು ಗಂಟೆ ನಿದ್ರೆ ಹೊರತುಪಡಿಸಿದರೆ ಬಿಡುವೇ ಇಲ್ಲದ ದುಡಿಮೆಗೆ ಒಗ್ಗಿಕೊಳ್ಳುವುದು ಕಷ್ಟವಾಯಿತು. ಆದರೂ ಅಪ್ಪನ ಕಷ್ಟಕ್ಕೆ ಸ್ವಲ್ಪ ದಿನವಾದರೂ ಹೆಗಲು ಕೊಡಬೇಕೆಂಬ ನಿರ್ಧಾರ ಕೈಗೊಂಡಿದ್ದ ಕಾರಣ ಕೆಲಸದ ಹೊರೆ ಸಹಿಸಿಕೊಂಡೆ.

ರಾತ್ರಿ ವೇಳೆ ಸತ್ತಂತೆ ನಿದ್ರೆ ಬರುತ್ತಿದ್ದವು, ಬೆಳಕಾಗುವುದೇ ಗೊತ್ತಾಗುತ್ತಿರಲಿಲ್ಲ. ಹೊಟ್ಟೆ ತುಂಬ ಊಟ ಸಿಗುತ್ತಿರುವ ತೃಪ್ತಿ ಒಂದೆಡೆಯಾದರೆ ನಿದ್ರೆ ವಿಷಯದಲ್ಲಿ ಮಾತ್ರ ಅತೃಪ್ತಿ. ಬೆಳಗ್ಗೆ 4ಕ್ಕೆ ಎದ್ದು ದನ-ಕರುಗಳನ್ನು ಆಚೆಗೆ ಕಟ್ಟಿ ಸಗಣಿ ಬಾಚುವುದರಿಂದ ಕೆಲಸ ಆರಂಭವಾದರೆ, ಅವುಗಳ ಮೈ ತೊಳೆಯುವ ಹೊತ್ತಿಗೆ 6 ಗಂಟೆ ದಾಟುತ್ತಿತ್ತು.

ಮುಖ, ಕೈಕಾಳು ಕಾಲು ತೊಳೆದುಕೊಂBBBB-2ಡು ನಮಗೆ ಖಾಯಂ ಆಗಿ ನೀಡಿದ್ದ ಲೋಟ-ತಟ್ಟೆ ತೊಳೆದುಕೊಂಡು ಬಾಗಿಲಿಂದ ಆಚೆ ಕುಳಿತು ಊಟ ಮಾಡಿ ಗದ್ದೆಗೆ ಇಳಿದರೆ ಸಂಜೆ ತನಕ ಮೈ ಮುರಿಯುವಷ್ಟು ಕೆಲಸ. ಗದ್ದೆ ಉಳುಮೆ ಮಾಡಿ ಎತ್ತುಗಳು ಸುಸ್ತಾದರೆ ಅವುಗಳಿಗೆ ವಿಶ್ರಾಂತಿ ನೀಡುವುದು. ಆ ಸಂದರ್ಭದಲ್ಲಿ ಬದು ಹಾಕುವುದು, ತೆಂಗಿನ ಕಾಯಿ ಕೀತ್ತು ಚೀಲಕಟ್ಟಿ ಗಾಡಿಗೆ ಲೋಡ್ ಮಾಡುವುದು. ಕಬ್ಬಿ ಗದ್ದೆಗೆ ನೀರು ಹಾಯಿಸೋದು ಹೀಗೆ ಒಂದರ ಮೇಲೋಂದು ಬಿಡುವಿಲ್ಲದೆ ಕೆಲಸ.

ಯುವಕನಾಗಿದ್ದ ನಾನೇ ಈ ಕೆಲಸ ಮಾಡಲು ತಿಣಕಾಡಬೇಕಿದ್ದೆ. ಆಗಲೇ 60 ದಾಟಿರುವ ಅಪ್ಪನ ಕಷ್ಟ ನೆನದು ಎಷ್ಟೋ ರಾತ್ರಿಗಳು ನಿದ್ರೆಗೂ ಅವಕಾಶ ನೀಡದೆ ಕಣ್ಣೀರು ಸುರಿದಿವೆ. ಒಂದು ತಿಂಗಳು ಮುಗಿದೇ ಹೋಯಿತು. ಜೀತದಿಂದ ಮುಕ್ತಿ ನೀಡಲು ಬಂದ ಅಪ್ಪನೊಂದಿಗೆ ಕೊಟ್ಟಿಗೆಯಲ್ಲೇ ಮಲಗಿ ಇಡೀ ರಾತ್ರಿ ಅತ್ತೆವು. ಅಳೋದು ಬಿಟ್ಟು ಬೇರೇನೂ ಮಾಡಲಾಗದ ಅಸಹಾಯಕ ಸ್ಥಿತಿಯೊಳಗೆ ಜೀವನ ಸಿಲುಕಿಕೊಂಡಿತ್ತು.

ಬೆಳಗ್ಗೆ ಕೊಟ್ಟಿಗೆ ಕಸ ಬಾಚಿದ ನಂತರ ಮನೆಯೊಡತಿ ಟೀ ಕೊಟ್ಟಳು. ನಮಗೆ ಮೀಸಲಿಟ್ಟಿದ್ದ ಲೋಟ ಒಂದೇ ಆಗಿದ್ದರಿಂದ ಅಪ್ಪ ಕುಡಿದ ನಂತರ ನಾನು ಕುಡಿದು ತೊಳೆದಿಟ್ಟೆ.

ಬಸ್ ನಿಲ್ದಾಣದ ತನಕ ಕಳಿಸಿಕೊಡಲು ಬಂದ ಅಪ್ಪ ನನ್ನ ಖರ್ಚಿಗೆ ಕೊಡಲು 5 ರೂ. ನೋಟು ತಂದಿದ್ದರು. ಬಸ್ ನಿಲ್ದಾಣದ ಬಳಿ ಆ ಹಣ ಕೊಡಲು ಚೆಡ್ಡಿ ಜೀಬಿಗೆ ಕೈ ಹಾಕಿದರೆ 5 ರೂ. ನೋಟು ಇರಲೇ ಇಲ್ಲ. ಬಂದ ದಾರಿಯಿಂದ ಹಿಡಿದು ಬಸ್ ನಿಲ್ದಾಣದ ಅಕ್ಕ-ಪಕ್ಕ ಇದ್ದ ಗಿಡಗಂಟೆಗಳ ನಡುವೆ ಬಿದ್ದು ಒದ್ದಾಡಿದವರಂತೆ ಅಪ್ಪ ಆ ಹಣಕ್ಕಾಗಿ ಹುಡುಕಾಡಿದ. ಅಲ್ಲಿದ್ದ ಧೂಳೆಲ್ಲೆ ಮೈ ತುಂಬಾ ಆವರಿಸಿಕೊಂಡರೂ ಬಿಡದೆ ತಡಕಾಡಿದ. ಕೊನೆಗೂ 5 ರೂ.ನ ನೋಟು ಸಿಗಲಿಲ್ಲ.

ಮಗನಿಗೆ ಕೊಡಲು ತಂದಿದ್ದ ಹBBBB-3ಣ ಕಳೆದುಕೊಂಡ ಅಪ್ಪ, ಧಾರಾಕಾರವಾಗಿ ಕಣ್ಣೀರು ಸುರಿಸಿದ. ಉಮ್ಮಳಿಸಿ ಬಂದ ದುಃಖ ತಡೆದುಕೊಂಡ ನಾನು ‘ಬಸ್ ಚಾರ್ಜಗೆ ಹಣ ಇದೆ ಬಿಡಪ್ಪ’ ಎಂದು ಸಮಾಧಾನ ಮಾಡಿದೆ. ಬಸ್ ಹತ್ತಿದರೂ ಮರೆಯಾಗುವ ತನಕ ಅಪ್ಪನನ್ನೇ ನೋಡಿ ಅಳುತ್ತಲೆ ಮನೆಗೆ ಬಂದೆ. 5 ರೂಪಾಯಿ ಎಂದರೆ ಪುಡಿಗಾಸು ಎನ್ನುವ ಕಾಲದಲ್ಲಿ 5 ರೂ.ಗಾಗಿ ಅಪ್ಪು ಹುಡುಕಾಡಿದ ಪರಿ ಅದರ ಮಹತ್ವ ಎಷ್ಟು ಎಂಬುದಕ್ಕೆ ಸಾಕ್ಷಿಯಾಗಿದೆ. ಈಗ 100, 1000 ರೂ. ಅಷ್ಟೇ ಏಕೆ ಲಕ್ಷ ಲಕ್ಷ ಹಣವೂ ಲೆಕ್ಕಕ್ಕಿಲ್ಲ ಎನ್ನುವವರಿದ್ದಾರೆ. ಆದರೆ ಮೈಮೇಲೆ ಧೂಳೆರಚಿಕೊಂಡು 5 ರೂಪಾಯಿ ಹುಡುಕಿದ ಆ ಸಂದರ್ಭವನ್ನು ನಾನೆಂದೂ ಮರೆಯಲಾರೆ.

ಚಿತ್ರಗಳು: ಸಾಂದರ್ಭಿಕ