Author Archives: editor

ದಲಿತರ ಮೇಲೆ ದೌರ್ಜನ್ಯ ನಡೆಸುವ ವ್ಯವಸ್ಥೆಯ ಹೆಸರು – ಸರಕಾರ!

ಭೂಮಿ ಬಾನು

ಇಂದು ಒಂದು ದುರಂತ ನಡೆದು ಹೋಗಿದೆ. ಕೆಜಿಎಫ್ ನಲ್ಲಿ ಮಲದ ಗುಂಡಿ ಶುಚಿಗೊಳಿಸಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸೋ ಕಾಲ್ಡ್ ನಾಗರಿಕ ಸಮಾಜ ತಲೆ ತಗ್ಗಿಸುವುದಷ್ಟೇ ಅಲ್ಲ, ಮಂಡಿ ಊರಿ ಕೂರಬೇಕು. ಸರಕಾರ, ಉಳ್ಳವರು ಎಲ್ಲರೂ ಇದಕ್ಕೆ ಹೊಣೆ.

ಊರಿನ ರಸ್ತೆ ಸರಿಯಿಲ್ಲ, ಕುಡಿವ ನೀರಿಲ್ಲ, ಬಸ್ ನಿಲ್ದಾಣದಲ್ಲಿ ಶೆಡ್ ಇಲ್ಲ, ಎಂದೆಲ್ಲಾ ಪ್ರತಿಭಟನೆ ಮಾಡುವ ‘ಮರ್ಯಾದಸ್ಥ’ ಜನ ನಮ್ಮೂರಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ಮಲದ ಗುಂಡಿಗಳನ್ನು ಶುಚಿಗೊಳಿಸಲು ಯಂತ್ರಗಳಿಲ್ಲ ಎಂದು ದನಿ ಎತ್ತಿದ್ದು ಇಲ್ಲವೇ ಇಲ್ಲ. ಇದೇ ಕಾರಣಕ್ಕೆ ಅಲ್ಲಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

ಬಸವಲಿಂಗಯ್ಯ ಮಲಹೊರುವ ಪದ್ಧತಿಯನ್ನು ರದ್ದು ಮಾಡುವ ಬಗ್ಗೆ ಮಂತ್ರಿ ಮಂಡಲ ಸಭೆಯಲ್ಲಿ ಮಾತೆತ್ತಿದಾಗ ಜೊತೆಯಲ್ಲಿದ್ದ ಕೆಲವರು “ಆ ಅಸಹ್ಯದ ಬಗ್ಗೆ ಎಷ್ಟು ಹೊತ್ತು ಮಾತಾಡ್ತೀರಿ?” ಎಂದು ಮೂದಲಿಸಿದರಂತೆ. ಬಸವಲಿಂಗಯ್ಯ ಪ್ರತಿಕ್ರಿಯಿಸಿ “ಆ ವಿಷಯ ಮಾತನಾಡೋಕೇ ಇಷ್ಟು ಅಸಹ್ಯ ಪಡ್ತೀರಲ್ಲ, ಅದೇ ಅಸಹ್ಯವನ್ನು ತಲೆಯಲ್ಲಿ ಹೊತ್ತು ಸಾಗಿಸೋರ ಪಾಡೇನು”, ಎಂದು ಪ್ರಶ್ನಿಸಿದ್ದರು. ಆ ‘ಕೆಲ ಮಂತ್ರಿಗಳಂಥದೇ’ ಮನಸುಗಳು ಈ ಹೊತ್ತಿನ ಪರಿಸ್ಥಿತಿಗೆ ಕಾರಣ.

ಕೇಂದ್ರ ಸರಕಾರ 1993 ರಲ್ಲಿಯೇ ಮಲ ಹೊರುವ ಪದ್ಧತಿಯನ್ನು ಕಾನೂನು ತಂದು ನಿಷೇಧಿಸಿತು. ವಿಪರ್ಯಾಸ ನೋಡಿ, ಇದುವರೆಗೆ ಯಾವ ಸರಕಾರಗಳೂ ಆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಕಾನೂನು ತಂದರಷ್ಟೆ ಸಾಕೆ?

ಮಲ ಹೊರುವ ಪದ್ಧತಿ ನಿಷೇಧ ಎಂದಾಕ್ಷಣ ಮಲದ ಗುಂಡಿಗಳು ತುಂಬುವುದು ನಿಲ್ಲುತ್ತದೆಯೆ? ಒಳ ಚರಂಡಿ ವ್ಯವಸ್ಥೆ ಇಲ್ಲದ ಮಂದಿ ಎಂದಿನಂತೆ ಆ ಕೆಲಸ ಮಾಡುವವರನ್ನು ಹುಡುಕಿ ಹೋಗುತ್ತಾರೆ. ಅವರಿಗೆ ಒಂದಿಷ್ಟು ಹಣ ಕೊಟ್ಟು ಗುಂಡಿ ಖಾಲಿ ಮಾಡಿಸುತ್ತಾರೆ. ಹೊಟ್ಟೆಗೆ ಹಿಟ್ಟಿಲ್ಲದೆ ಬದುಕಬೇಕಾದ ಸ್ಥಿತಿಯಲ್ಲಿರುವ ಅನೇಕ ದಲಿತ ಕುಟುಂಬಗಳು ಅನ್ನಕ್ಕಾಗಿ ಅನಿವಾರ್ಯವಾಗಿ ಆ ಕೆಲಸಕ್ಕೆ ಹೋಗುತ್ತಾರೆ. ಹೀಗೆ ಸಾಯುತ್ತಾರೆ. (ಆದರೆ ಅದೇ ಮೇಲ್ಜಾತಿಯ ಯಾರೇ ಆಗಲಿ ಎಷ್ಟೇ ಬಡತನವಿದ್ದರೂ, ಎಷ್ಟೇ ದುಡ್ಡು ಕೊಡುತ್ತೇನೆಂದರೂ ಈ ಕೆಲಸಕ್ಕೆ ಕೈ ಹಾಕುವುದಿಲ್ಲ ಎನ್ನುವುದು ವಾಸ್ತವ).
ಕಾನೂನು ತಂದು ಒಂದು ದಶಕವಾಯಿತು. ಇನ್ನಾದರೂ ಕರ್ನಾಟಕದ ಬಹುಪಾಲು ನಗರ, ಪಟ್ಟಣಗಳಲ್ಲಿ ಯಂತ್ರಗಳನ್ನು ಬಳಸಿ ಮಲದ ಗುಂಡಿಗಳನ್ನು ಶುಚಿಗೊಳಿಸುವ ಪದ್ಧತಿ ಜಾರಿಯಾಗಿಲ್ಲ.

ಹಾಸನ ಜಿಲ್ಲೆ ಆಲೂರಿನಂತ ತಾಲೂಕು ಕೇಂದ್ರದದಲ್ಲಿ ಒಳ ಚರಂಡಿ ವ್ಯವಸ್ಥೆಯೂ ಇಲ್ಲ, ತುಂಬಿದ ಗುಂಡಿಗಳನ್ನು ಶುಚಿಗೊಳಿಸಲು ಯಂತ್ರಗಳೂ ಇಲ್ಲ. ರಾಜ್ಯದಾದ್ಯಂತ ಇಂತಹ ಅದೆಷ್ಟೋ ತಾಲೂಕುಗಳಿವೆ.

ನೂತನ ಕಾನೂನಿನ ಪ್ರಕಾರ ಮಲದ ಗುಂಡಿಯನ್ನು ಶುಚಿಗೊಳಿಸಲು ದಲಿತರನ್ನು ನಿಯೋಜಿಸಿಕೊಂಡರೆ, ದಲಿತರ ಮೇಲೆ ನಡೆಸಿದ ದೌರ್ಜನ್ಯ ಎಂದು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬಹುದು. ಆದರೂ ಈ ಪದ್ದತಿ ನಿಲ್ಲದೇ ಇರಲು ಪ್ರಮುಖ ಕಾರಣ ಸರಕಾರದ ನಿರ್ಲಕ್ಷ್ಯ.

ದಲಿತರ ಮೇಲೆ ದೌರ್ಜನ್ಯ ನಡೆಸಿದ ಬಹುದೊಡ್ಡ ವ್ಯವಸ್ಥೆ – ಸರಕಾರ!

ಚಿತ್ರ: persecution.in

ದಲಿತರ ಬಹಿಷ್ಕಾರ ಮತ್ತು ‘ದೊಡ್ಡ ಜನರ’ ಜವಾಬ್ದಾರಿ

– ಭೂಮಿ ಬಾನು

ಅರಕಲಗೂಡು ತಾಲೂಕಿನ ಸಿದ್ದಾಪುರದಲ್ಲಿ ಮುಂದುವರಿದ ಜಾತಿಯವರು ದಲಿತರನ್ನು ಇತ್ತೀಚೆಗೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿದರು. ದಲಿತ ಸಮುದಾಯದ ಒಂಭತ್ತೋ-ಹತ್ತು ಕುಟುಂಬಗಳ ಸದಸ್ಯರಿಗೆ ಹಳ್ಳಿಯ ಯಾವುದೇ ಅಂಗಡಿಯ ಮಾಲೀಕ ಏನನ್ನೂ ಮಾರುವಂತಿಲ್ಲ. ಹಿಟ್ಟಿನ ಗಿರಣಿ ಮಾಲಿಕ ದಲಿತರ ದವಸ ಬೀಸುವಂತಿಲ್ಲ. ಕ್ಷೌರಿಕ ದಲಿತರಿಗೆ ಬ್ಲೇಡು ತಾಕಿಸುವಂತಿಲ್ಲ. ಇಂತಹದೇ ಹಲವು ಕಟ್ಟುಪಾಡುಗಳು.

ಸಿದ್ದಾಪುರ, ಸರಗೂರು ಗ್ರಾಮ ಪಂಚಾಯಿತಿಗೆ ಸೇರುವ ಒಂದು ಹಳ್ಳಿ. ಆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇದೇ ಸಿದ್ದಾಪುರದವರು. ಹೆಸರು ಚೆಲುವಯ್ಯ. ಅವರು ಕೂಡ ದಲಿತ ಸಮುದಾಯಕ್ಕೆ ಸೇರಿದವರು. ಬಹಿಷ್ಕಾರ ಘೋಷಣೆಯಾದ ಮಾರನೆಯ ದಿನ ಹಿಟ್ಟಿನ ಗಿರಣಿಗೆ ಅವರು ನಾಲ್ಕು ಕೆಜಿ ರಾಗಿ ತಗೊಂಡು ಹೋಗಿ ಬೀಸಿಕೊಡುವಂತೆ ಕೋರಿದ್ದಾರೆ. ಗಿರಣಿ ಮಾಲಿಕ ಒಬ್ಬ ಮುಸಲ್ಮಾನ. ಅವನಿಗೆ ಚೆಲುವಯ್ಯನ ಬಗ್ಗೆ ವೈಯಕ್ತಿಕ ದ್ವೇಷವೇನೂ ಇಲ್ಲ. “ಕ್ಷಮಿಸಿ, ನಾನು ನಿಮ್ಮ ರಾಗಿ ಬೀಸೋಕೆ ಆಗೋಲ್ಲ. ನೀವೇನೋ ನಾಲ್ಕು ಕೆಜಿ ರಾಗಿ ಬೀಸೋಕೆ ಹತ್ತು ರೂಪಾಯಿ ಕೊಡ್ತೀರಿ. ಆದರೆ, ನಿಮ್ಮ ರಾಗಿ ನಾನು ಬೀಸಿದ್ದಕ್ಕೆ ಊರ ದೊಡ್ಡವರ ಪಂಚಾಯಿತಿಗೆ 1,001 ರೂಪಾಯಿ ದಂಡ ಕಟ್ಟಬೇಕಾಗುತ್ತೆ..” ಎಂದು ಗೋಗರೆದ.

ಆ ಪಂಚಾಯಿತಿಯ ಪ್ರಥಮ ಪ್ರಜೆ ಚೆಲುವಯ್ಯನದು ಈ ಪರಿಸ್ಥಿತಿ. ಹಳ್ಳಿಗೆ ಭೇಟಿ ನೀಡಿದ ಪತ್ರಕರ್ತರ ಎದುರು ತಮ್ಮ ಸಂಕಟ ತೋಡಿಕೊಂಡು ಚೆಲುವಯ್ಯ ಕಣ್ಣೀರು ಹಾಕಿದರು. ತಮ್ಮ ಮಾತಿನಲ್ಲಿ ಅವರು ತಪ್ಪಿಯೂ ತಮ್ಮ ಸಮುದಾಯಕ್ಕೆ ಬಹಿಷ್ಕಾರ ಹಾಕಿದ ಮುಂದುವರಿದವರ ಬಗ್ಗೆ ಒಮ್ಮೆಯೂ ಏಕವಚನ ಬಳಸಲಿಲ್ಲ.

ಇಷ್ಟೆಲ್ಲಕ್ಕೂ ಕಾರಣ, ದಲಿತರು ಕುಲವಾಡಿಕೆ ಮಾಡಲು ನಿರಾಕರಿಸಿದ್ದು. ಹಲವು ವರ್ಷಗಳಿಂದ ದಲಿತ ಸಮುದಾಯದ ಕೆಲ ಕುಟುಂಬಗಳು ಸತ್ತವರಿಗೆ ಗುಳಿ ತೋಡುವುದು, ಹಬ್ಬಗಳಂದು ಊರ ಗುಡಿಗೆ ಚಪ್ಪರ ಹಾಕುವುದು, ನಾಯಿ ಅಥವಾ ಇತರೆ ಪ್ರಾಣಿ ಸತ್ತರೆ ಶುಚಿ ಮಾಡುವ ಕೆಲಸಗಳನ್ನು ಮಾಡಿಕೊಂಡು ಬಂದಿವೆ. ಕ್ರಮೇಣ ಈ ಕೆಲಸ ಮಾಡುತ್ತಿದ್ದವರು ವೃದ್ಧರಾದರು. ಅವರ ಮಕ್ಕಳು ಹಾಗೂ-ಹೀಗೂ ವಿದ್ಯಾವಂತರಾದರು. ವೃದ್ಧರ ಕೈಯಲ್ಲಿ ಕೆಲಸ ಮಾಡಲಾಗೋಲ್ಲ. ವಿದ್ಯಾವಂತ ಮಕ್ಕಳು ಜಾಗೃತರಾಗಿ ನಾವೇಕೆ ಈ ಕೆಲಸ ಮಾಡಬೇಕು ಎಂದು ಪ್ರಶ್ನೆ ಹಾಕಿದರು. ಈ ಬೆಳವಣಿಗೆ ಮುಂದುವರಿದ ಜನಾಂಗದವರಿಗೆ ಸಹಿಸಲಾಗಲಿಲ್ಲ.

ಐನೂರಕ್ಕೂ ಹೆಚ್ಚು ಕುಟುಂಬಗಳಿರುವ ಹಳ್ಳಿಯಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳು ಏನು ತಾನೇ ಮಾಡಲು ಸಾಧ್ಯ. ದಲಿತರ ಮನೆ ಮಂದಿ ಪ್ರತಿದಿನ ಕೂಲಿ ಮಾಡುವುದು ಇದೇ ಮುಂದುವರಿದ ಜಾತಿ ಜನರ ಜಮೀನುಗಳಲ್ಲಿ. ಬಹಿಷ್ಕಾರದ ಪರಿಣಾಮ ಕೂಲಿಯೂ ಕಟ್. ಅವರು ಬದುಕುವುದು ಹೇಗೆ?

ಇಂತಹದೇ ಪ್ರಕರಣ ಇದೇ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಕೇವಲ ಮೂರು ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು. ಕುಲವಾಡಿಕೆ ಮಾಡಲು ನಿರಾಕರಿಸಿದ್ದ ಒಂಭತ್ತು ಕುಟುಂಬಗಳಿಗೆ ಆ ಊರಿನ ಮುಖಂಡರು ಬಹಿಷ್ಕಾರ ಹಾಕಿದ್ದರು. ಈ ಪ್ರಕರಣ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡ ನಂತರ ಜಿಲ್ಲಾ ಉಸ್ತುವಾರಿ ಮಂತ್ರಿ ವಿ.ಸೋಮಣ್ಣ ಆ ಹಳ್ಳಿಗೆ ಭೇಟಿ ನೀಡಿದರು. ಎರಡೂ ಸಮುದಾಯದ ಮುಖಂಡರನ್ನು ಸೇರಿಸಿ ಊರಿನ ಅಭಿವೃದ್ಧಿ ಬಗ್ಗೆ ಭಾಷಣ ಮಾಡಿ ಆಶ್ವಾಸನೆ ನೀಡಿದರು. ಆ ಹಳ್ಳಿಯನ್ನು ದತ್ತು ತೆಗೆದುಕೊಂಡು ಉದ್ಧಾರ ಮಾಡುತ್ತೇನೆ ಎಂದರು. ಅಲ್ಲಿಯೇ ಹಾಜರಿದ್ದ ಅಧಿಕಾರಿಗಳಿಗೆ ತಕ್ಷಣವೇ ಊರಿನ ಅಭಿವೃದ್ಧಿಗೆ ಬೇಕಾದ ಕಾರ್ಯಯೋಜನೆ ಸಿದ್ಧಪಡಿಸಿ ಎಂದು ತಾಕೀತು ಮಾಡಿದರು. ಕಂಡ ಕಂಡವರನ್ನೆಲ್ಲಾ ಅಮಾನತ್ತು ಮಾಡ್ತೀನಿ ಎಂದು ಧಮಕಿ ಹಾಕಿದರು. ಕೆಳಹಂತದ ಇಬ್ಬರ ಅಮಾನತ್ತಿಗೆ ಆದೇಶವನ್ನೂ ನೀಡಿದರು.

ಆದರೆ ನೆನಪಿರಲಿ, ಅಂದಿನಿಂದ ಇದುವರೆಗೆ ಸೋಮಣ್ಣ ಆ ಹಳ್ಳಿ ಕಡೆಗೆ ಮತ್ತೆ ತಿರುಗಿ ನೋಡಿಲ್ಲ. ಆ ನಂತರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭಗಳಲ್ಲೂ ಆ ಬಗ್ಗೆ ಮಾತನಾಡಿಲ್ಲ.
ಒಕ್ಕಲಿಗ, ಲಿಂಗಾಯುತ ಹಾಗೂ ಕುರುಬ ಜನಾಂಗದವರು ಹೆಚ್ಚಿನ ಪ್ರಭಾವಿಗಳಾಗಿರುವ ಅರಕಲಗೂಡು ತಾಲೂಕಿನಲ್ಲಿ ಆಗಾಗ ಇಂತಹ ಪ್ರಕರಣಗಳು ಕೇಳಿ ಬರುತ್ತಿವೆ. ಆದರೆ ಆ ಪ್ರಬಲ ಸಮುದಾಯಗಳ ರಾಜಕೀಯ ನಾಯಕರು ತಮ್ಮ ಜನಾಂಗದವರಿಗೆ ತಿಳಿ ಹೇಳುವಂತಹ ಕೆಲಸ ಒತ್ತಟ್ಟಿಗಿರಲಿ, ಇಂತಹ ಪ್ರಕರಣಗಳನ್ನು ಖಂಡಿಸಲೂ ಆಸಕ್ತಿ ತೋರಿಸಿಲ್ಲ.
ಲೋಕಸಭೆಯಲ್ಲಿ ಹಾಸನವನ್ನು ಪ್ರತಿನಿಧಿಸುವವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. ಕೆರಗೋಡು ಹಾಗೂ ಸಿದ್ದಾಪುರದ ಘಟನೆಗಳ ಬಗ್ಗೆ ಮಾತನಾಡಲೇ ಇಲ್ಲ. ತಮ್ಮ ಮತಬಾಂಧವರ ಪೈಕಿ ಕೆಲವರು ಅಸ್ಪೃಶ್ಯತೆ ಎಂಬ ಪಿಡುಗಿಗೆ ಬಲಿಯಾಗಿ ಶೋಷಣೆಗೆ ಒಳಗಾಗುವುದನ್ನು ನೋಡಿದಾಗಲೂ ಇವರಿಗೆ ಏನೂ ಅನ್ನಿಸುವುದಿಲ್ಲವೆ?

ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಚಾಲಕ ಎನ್. ಮಹೇಶ್ ಸಿದ್ದಾಪುರದ ಘಟನೆ ತರುವಾಯ ದೌರ್ಜನ್ಯ ಮುಕ್ತ ಸಮಾಜದೆಡೆಗೆ ಎಂಬ ಹೆಸರಿನಡಿ ಸಿದ್ದಾಪುರದಿಂದ ಹಾಸನದವರೆಗೆ ಪಾದಯಾತ್ರೆ ನಡೆಸಿದರು. ಅವರು ತಮ್ಮ ಹೋರಾಟದ ವೇಳೆ ಕೇಳಿದ ಪ್ರಶ್ನೆ ಇಷ್ಟೆ – ಮೇಲ್ಜಾತಿ ಜನ ನಾಯಕರಿಗೆ ಶೋಷಣೆ ಮುಕ್ತ ಸಮಾಜ ಸ್ಥಾಪಿಸುವ ಹೊಣೆ ಇಲ್ಲವೆ?
ದೇವೇಗೌಡ, ಎಚ್.ಡಿ.ರೇವಣ್ಣ – ಹೀಗೆ ಅನೇಕರ ಹೆಸರನ್ನು ಉದ್ಧರಿಸಿ ಅವರು ಪ್ರಶ್ನೆ ಹಾಕಿದರು. ಉತ್ತರ ಕರ್ನಾಟಕದಲ್ಲಿ ಬೆಳಕಿಗೆ ಬಂದ ಇಂತಹ ಪ್ರಕರಣಗಳಲ್ಲಿ ಬಹುತೇಕ ಆರೋಪಿಗಳು ಬಸವಣ್ಣನ ಅನುಯಾಯಿಗಳು ಎಂದು ಹೇಳಿಕೊಳ್ಳುವ ಸಮುದಾಯದವರು. ಆ ಸಮುದಾಯಕ್ಕೆ ನೂರಾರು ಮಠಗಳ ಬೆಂಬಲ, ಮಾರ್ಗದರ್ಶನ ಇದೆ. ಹಾಗಾದರೆ ಆ ಎಲ್ಲಾ ಮಠಗಳ ಸ್ವಾಮಿಗಳು ತಮ್ಮ ಭಕ್ತ ಸಮುದಾಯದವರಿಗೆ ಶೋಷಣೆ ವಿರುದ್ಧ ಜಾಗೃತಿ ಮೂಡಿಸಲು ಸಾಧ್ಯವಿಲ್ಲವೆ? ಅಥವಾ ಕಾರ್ಯ ಚುನಾವಣೆ ವೇಳೆ ಭಕ್ತರಿಗೆ ಅವರು ಅಯ್ಕೆ ಮಾಡಬೇಕಾದ ಅಭ್ಯರ್ಥಿಯನ್ನು ಸೂಚಿಸುವುದಷ್ಟೇ ಸ್ವಾಮೀಜಿಗಳ ಕೆಲಸವೆ?

ಮಂಡ್ಯದಲ್ಲಿ ಇತ್ತೀಚೆಗೆ ದಲಿತರೊಬ್ಬರು ಕ್ಷೌರ ಮಾಡಿಸಿಕೊಳ್ಳಲು ಹೋದಾಗ ಅವನ ಮೂಗಿಗೇ ಕತ್ತರಿ ಹಾಕಿದ ಪ್ರಕರಣ ವರದಿಯಾಗಿದೆ. ವಿಚಿತ್ರ ನೋಡಿ, ಕ್ಷೌರ ಸಮುದಾಯದವರೂ ಹಿಂದುಳಿದವರೇ. ಅವರು ತನ್ನಂತೆ ಅಥವಾ ತನಗಿಂತ ಹಿಂದುಳಿದಿರುವ ಸಮುದಾಯಗಳ ಬಗ್ಗೆ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ?
ಕ್ಷೌರ ಸಮುದಾಯ ಹಾಗೂ ದಲಿತರ ನಡುವೆ ಸಾಮರಸ್ಯ ಸಾಧಿಸಲು ಮಂಡ್ಯದಲ್ಲಿ ನಾಲ್ಕು ದಿನಗಳ ಹಿಂದೆ ವಿಶಿಷ್ಟ ಕಾರ್ಯಕ್ರಮ ಏರ್ಪಟ್ಟಿತ್ತು. ಕೆಲ ಪ್ರಜ್ಞಾವಂತರು ಸೇರಿಕೊಂಡು ಏರ್ಪಡಿಸಿದ್ದ ಕಾರ್ಯಕ್ರಮವದು. ಅಲ್ಲಿ ಕ್ಷೌರ ಸಮುದಾಯದವರು ದಲಿತರ ಕ್ಷೌರ ಮಾಡುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕಾಂಗ್ರೆಸ್ ನ ಸಿದ್ದರಾಮಯ್ಯ, ಶ್ರೀನಿವಾಸ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು. ಎರಡೂ ಸಮುದಾಯಗಳೂ ಹಿಂದುಳಿದಿವೆ. ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಏಳ್ಗೆ ಸಾಧ್ಯ ಎನ್ನುವುದನ್ನು ತಿಳಿ ಹೇಳುವ ಪ್ರಯತ್ನ ಆ ಕಾರ್ಯಕ್ರಮ. ಇಂತಹ ಕಾರ್ಯ ಅಲ್ಲಲ್ಲಿ, ಆಗಾಗ ನಡೆಯುತ್ತಿರಬೇಕು.

ಗೊತ್ತಿಲ್ಲದ ಶಿಕ್ಷಣ ಕೊನೆಗೆ ಪರದಾಟ…

ಕೆಲವು ಸಂಗತಿಗಳು ನಮ್ಮ ಸುತ್ತಲೇ ನಡೆದರೂ ಅವುಗಳ ಮೇಲೆ ನಮಗೆ ನಿಯಂತ್ರಣವಿರುವುದಿಲ್ಲ. ಆ ಹುಡುಗಿಯ ಹೆಸರು ಪುಷ್ಪ. ಹುಡುಗಿ ಹತ್ತನೆಯ ತರಗತಿ ಮುಗಿಸಿದ ನಂತರ ಕಾಲೇಜಿಗೆ ಸೇರಿಸದೆ ಆಕೆಗೆ ಮದುವೆ ಮಾಡಲು ನಿರ್ಧರಿಸಿದರು.

ಆಕೆಯ ಪೋಷಕರು ಹಳ್ಳಿಯಲ್ಲಿದ್ದರೂ ನನಗೆ ಗೊತ್ತಿದ್ದರಿಂದ ನಾನು ಅವರಿಗೆ ಕಿರಿಯ ವಯಸ್ಸಿನಲ್ಲಿ ಮದುವೆ ಮಾಡದಂತೆ ಎಚ್ಚರಿಸಿದೆ. ಆದರೆ ಅವರು ನನ್ನ ಎಚ್ಚರಿಕೆಯನ್ನೂ ಧಿಕ್ಕರಿಸಿ ಆಕೆಯನ್ನು ವಿವಾಹ ಬಂಧನಕ್ಕೆ ಒಳಪಡಿಸಿದರು.

ಕೆಲವು ದಿನಗಳ ನಂತರ ಆ ಹುಡುಗಿಯನ್ನು ನೋಡಲು ಹೊರಟೆ. ಹುಡುಗಿಯನ್ನು ಒಂದು ದೇವಸ್ಥಾನದಲ್ಲಿ ಇರಿಸಿದ್ದರು. ಕುಟುಂಬದ ಎಲ್ಲರ ಮುಖದಲ್ಲೂ ಒಂದು ಬಗೆಯ ಭಯವಿತ್ತು. ಆ ಹುಡುಗಿಯನ್ನು ಮಾತನಾಡಿಸಲು ಪ್ರಯತ್ನಿಸಿದೆ. ಹುಡುಗಿ ತುಂಬಾ ಸುಸ್ತಾದಂತೆ ಕಂಡುಬಂದಳು. ಆಕೆಯ ಪೋಷಕರು, `ರಾತ್ರಿ ಆದರೆ ಸಾಕು. ಭಯಪಡುತ್ತಾಳೆ. ದೀಪ ಆರಿಸಿದರೆ ಕಿರುಚಾಡುತ್ತಾಳೆ. ಏನೇನೋ ವಿಚಿತ್ರವಾಗಿ ಆಡುತ್ತಿದ್ದಾಳೆ,’ ಎಂದರು.

ಆರೋಗ್ಯಪೂರ್ಣವಾಗಿ ನಳನಳಿಸುತ್ತಿದ್ದ ಹುಡುಗಿ ಹೀಗಾಗಿದ್ದು ನೋಡಿ ನನಗೆ ಬಹಳ ದುಃಖವಾಯಿತು.

ಆ ಹುಡುಗಿಯ ಗಂಡನನ್ನು ಮಾತನಾಡಿಸಿದೆ. “ಯಾಕಪ್ಪಾ ನಿನ್ನ ಹೆಂಡತಿ ಭಯಪಡುತ್ತಾಳಂತೆ. ಅವಳಿಗೇನಾದರೂ ಹೊಡೆಯೋದು, ಬಡಿಯೋದು ಮಾಡಿದೆಯೋ ಹೇಗೆ?” ಎಂದೆ.

ಅದಕ್ಕೆ ಆತ, “ಇಲ್ಲ ಸರ್, ಅವಳೆಂದರೆ ನನಗೆ ಇಷ್ಟ. ನನ್ನ, ಅವಳ ಮೊದಲ ರಾತ್ರಿಯಾದ ನಂತರ ಹೀಗೆ ಭಯಪಡಲು ಪ್ರಾರಂಭಿಸಿದ್ದಾಳೆ. ಮೊದ ಮೊದಲು ಸುಮ್ಮನಿದ್ದಳು. ನಂತರ ಹೆದರೋಕೆ ಪ್ರಾರಂಭಿಸಿದಳು. ಹೀಗಾಗಿ ಅವಳ ತಂದೆ ತಾಯಿ ಮನೆಗೆ ಕರೆದುಕೊಂಡು ಹೋದರು,” ಎಂದ.

ನನಗೆ ಸಮಸ್ಯೆ ಸ್ಪಷ್ಟವಾಯಿತು. ಇದು ಲೈಂಗಿಕತೆಯ ತಿಳಿವಳಿಕೆ ಇಲ್ಲದಿದ್ದರಿಂದ ಉಂಟಾದ ಸಮಸ್ಯೆ.

ಆ ಹುಡುಗಿಯನ್ನು ಸ್ತ್ರೀವೈದ್ಯರಲ್ಲಿಗೆ ಕರೆದೊಯ್ದು ಲೈಂಗಿಕತೆಯ ಪೂರ್ಣ ಮಾಹಿತಿಯನ್ನು ವೈದ್ಯರ ಮೂಲಕ ಕೊಟ್ಟ ನಂತರ ಅವರು ಸುಖ ಸಂಸಾರ ನಡೆಸುತ್ತಿದ್ದಾರೆ.

ಲೈಂಗಿಕತೆಯ ಶಿಕ್ಷಣ ನೀಡಬೇಕು ಎನ್ನುವ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಿರುತ್ತದೆ. ಪುರುಷರಿಗೂ, ಮಹಿಳೆಯರಿಗೂ ವಿವಾಹದ ನಂತರ ತಮ್ಮ ಜವಾಬ್ದಾರಿಗಳೇನು ಎಂಬ ತಿಳಿವಳಿಕೆ ಇಲ್ಲದಿದ್ದಲ್ಲಿ ಸಂಕಷ್ಟ ಖಂಡಿತ.

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

ಅಜ್ಞಾನ ತಂದಿತ್ತ ಸಂಕಷ್ಟ!

ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿ “ಶರಣ ಸಂಸ್ಕೃತಿ” ವೈಚಾರಿಕ ಪ್ರಜ್ಞೆಯ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿ ಪ್ರತಿ ವರ್ಷ ಸಂಜೆ ಈ ಕಾರ್ಯಕ್ರಮ ಶುರುವಾಗಿ ಮಧ್ಯರಾತ್ರಿವರೆಗೂ ನಡೆಯುತ್ತಿತ್ತು. ಆ ದಿನ ಈ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಆಗಮಿಸಿದ್ದರು. ನನ್ನ ಭಾಷಣವನ್ನು ಬಹಳ ಮಂದಿ ಮೆಚ್ಚಿಕೊಂಡರು. ನನ್ನ ಕೋಣೆಯ ಪಕ್ಕದಲ್ಲೇ ಇದ್ದವರು ತಮ್ಮನ್ನು ಪರಿಚಯಿಸಿಕೊಂಡರು. ನಂತರ ಅವರನ್ನು ಕಾಡುತ್ತಿದ್ದ ಸಮಸ್ಯೆಯೊಂದನ್ನು ಬಿಚ್ಚಿಟ್ಟರು.

“ಸರ್, ನಮ್ಮ ಮಗನಿಗೆ ಸುಮಾರು ಐದು ತಿಂಗಳಿಂದ ಭಾನಾಮತಿ ಹಿಡಿದಿದೆ. ಇದರಿಂದ ನಾವು ಇಲ್ಲಿ ಒಂದು ತಿಂಗಳಿಂದ ಉಳಿದುಕೊಂಡಿದ್ದೀವಿ,” ಎಂದರು. ಭಾನಾಮತಿ ಎಂಬ ಸಮಸ್ಯೆಯಿಂದ ಬಳಲುತ್ತಿರುವವರು ನಾನು ಕಂಡಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪುರುಷರಲ್ಲಿ ಕಡಿಮೆಯೇ. ಆದರೆ ಇಲ್ಲಿ ಮೂವತ್ತು ವರ್ಷದ ಆರೋಗ್ಯಪೂರ್ಣ ಯುವಕ ಭಾನಾಮತಿಯ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ನನಗೆ ಬಹಳ ಬೇಸರ ಮೂಡಿಸಿತು. ಹಾಗೆಯೇ ಅವನ ವಿವರಗಳನ್ನು ಕೇಳುತ್ತಾ ಹೊರಟಂತೆ ಇದೊಂದು ವಿಸ್ಮಯಕಾರಕ ಘಟನೆ ಎನ್ನಿಸಿತು.

ದಷ್ಟಪುಷ್ಟವಾದ, ಬಲಿಷ್ಟ ಮೈಕಟ್ಟು ಹೊಂದಿದ ಈ ಯುವಕ ವಿದ್ಯಾವಂತ ಕೂಡ. ಆರು ತಿಂಗಳ ಹಿಂದೆ ಯುವತಿಯೊಡನೆ ವಿವಾಹವೂ ಆಯಿತು. ಮದುವೆಯಾಗುವವರೆಗೂ ಎಲ್ಲವೂ ಚೆನ್ನಾಗಿತ್ತು. ಮದುವೆಯಾಗಿ ಮೊದಲ ರಾತ್ರಿ ಪ್ರಾರಂಭವಾಯಿತು ನೋಡಿ ಅಲ್ಲಿಂದ ಹುಚ್ಚನಂತೆ ಆಡಲಾರಂಭಿಸಿದ. ಹೆಂಡತಿಯ ಮುಖ ಕಂಡರೆ ದೂರ ಓಡುತ್ತಿದ್ದ. ಆಕೆಯನ್ನು ನೋಡಿದರೆ ಅವನ ಮೈ ಬೆವರಿ ತೊಪ್ಪೆಯಾಗುತ್ತಿತ್ತು. ಇದನ್ನು ನೋಡಿ ಆಕೆ ತನ್ನ ತಂದೆ ತಾಯಿಗೆ ತಿಳಿಸಿದಳು. ಅವರು ಮೊದಲಿಗೆ ಅರಿಶಿನದ ಮೈನಲ್ಲಿ ಹೊರಗಡೆ ಓಡಾಡಿ ಗಾಳಿ ಮೆಟ್ಟಿಕೊಂಡಿರಬಹುದು ಎಂದುಕೊಂಡರು. ಸರಿಯಾಗುತ್ತದೆ ಎನ್ನುವ ಭರವಸೆಯನ್ನೂ ತುಂಬಿದರು.

ನಂತರ ಯಥಾಪ್ರಕಾರ ಎಲ್ಲ ದೇವರುಗಳಿಗೂ ಹರಕೆ ಹೊತ್ತು, ಮಂತ್ರ, ತಾಯಿತ ಕಟ್ಟಿಸಿದರೂ ಪ್ರಯೋಜನವಾಗಲಿಲ್ಲ. ವೈದ್ಯರ ಸಲಹೆ ಪಡೆದರೂ ಅಷ್ಟೇನೂ ಲಾಭವಾಗಲಿಲ್ಲ. ಎಲ್ಲಿ ಹೋದರೂ ಆತನಲ್ಲಿ ದೋಷ ಹುಡುಕಲು ಸಾಧ್ಯವಾಗಲಿಲ್ಲ. ಆದರೆ ಆತನ ಕಿರುಚಾಟವಂತೂ ನಿಲ್ಲಲಿಲ್ಲ. ರಾತ್ರಿಯಾದರೆ ವಿಚಿತ್ರ ಆಟ, ಬೆಳಿಗ್ಗೆ ಮಂಕು ಕವಿದಂತೆ ನೋಟ.

ಮನೆದೇವರ ಬಳಿಗೆ ಹೋಗಿಬನ್ನಿ ಎಂದರು. ಅದನ್ನೂ ಮಾಡಿದೆವು. ಆದರೆ ಅದೂ ಅಲ್ಪಕಾಲೀನ. ಅಲ್ಲಿದ್ದಷ್ಟು ಕಾಲ ಚೆನ್ನಾಗಿದ್ದ. ಇಲ್ಲಿ ಬಂದ ನಂತರ ಅದೇ ರಾಗ ಅದೇ ಹಾಡು!

ಮುಂದೇನು ಮಾಡಬೇಕು ಎಂದು ದಿಕ್ಕೇ ತೋಚದೆ ಈ ಮಠದಲ್ಲಿದ್ದೇವೆ ಎಂದರು. ನಾನು ಅವರ ವಿಳಾಸ, ಮೊಬೈಲ್ ಸಂಖ್ಯೆ ಪಡೆದುಕೊಂಡು ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿ ಬೀಳ್ಕೊಂಡೆ.

ನಂತರ ಆ ನವದಂಪತಿಗಳನ್ನು ಒಂದು ಬಾರಿ ನನ್ನ “ಪವಾಡ ರಹಸ್ಯ ಬಯಲು” ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಇಬ್ಬರೂ ಜೊತೆಯಲ್ಲಿದ್ದರು.

ಕಾರ್ಯಕ್ರಮ ಮುಗಿದ ನಂತರ ದಂಪತಿಗಳು ನಮ್ಮ ಮನೆಯಲ್ಲೇ ಉಳಿದರು. ಮೊದಲಿಗೆ ಆತನ ಪತ್ನಿಯನ್ನು ಕೌನ್ಸೆಲ್ಲಿಂಗ್ ಮಾಡಲಾರಂಭಿಸಿದೆ. ನಿಮ್ಮ ನಡುವೆ ಏನಾದರೂ ಭಿನ್ನಾಭಿಪ್ರಾಯ ಇದೆಯೇ? ಅಥವಾ ಲೈಂಗಿಕ ಅನುಭವ ಪಡೆದುಕೊಳ್ಳುವ ವಿಷಯದಲ್ಲಿ ಪರಸ್ಪರ ಅರಿವಿನ ಕೊರತೆಯುಂಟಾಯಿತೇ? ಇತ್ಯಾದಿ ವಿಷಯಗಳನ್ನು ಕೇಳುತ್ತಾ ಹೋದೆ.

ಆಕೆ, “ಸರ್ ಅವರು ನನ್ನನ್ನು ಮುಟ್ಟೇ ಇಲ್ಲ. ನನ್ನ ಮುಖ ನೋಡಿದರೆ ಹೆದರಿಕೊಳ್ಳುತ್ತಾರೆ. ಅವರ ಮುಖ ಬೆವರುತ್ತದೆ. ಮೊದಲ ದಿನದಿಂದಲೂ ಇದು ನಡೆದಿದೆ. ಅಂದಿನಿಂದ ಅವರ ಜೊತೆ ಮಲಗೋದೇ ಬಿಟ್ಟಿದ್ದೇನೆ. ಅವರು ಸುಖವಾಗಿರಲಿ ಎನ್ನೋದೇ ನನ್ನ ಆಸೆ,” ಎನ್ನುತ್ತಾ ಕಣ್ಣೀರುಗರೆದಳು.

ನಂತರ ಆತನಲ್ಲಿ ವಿಷಯ ಪ್ರಸ್ತಾಪಿಸಿದೆ. “ಯಾಕಪ್ಪ ನಿನ್ನ ಹೆಂಡತಿಯ ಹತ್ತಿರ ಮಲಗಿದರೆ ಹುಚ್ಚನಂತೆ ಆಡ್ತೀಯಾ? ಈ ಮದುವೆ ನಿನಗೆ ಇಷ್ಟವಿರಲಿಲ್ಲವಾ? ಅಥವಾ ಆ ಹುಡುಗಿ ಇಷ್ಟ ಆಗಿಲ್ವಾ?…” ಪ್ರಶ್ನಿಸಿದೆ.

“ಹಾಗೇನೂ ಇಲ್ಲ ಸರ್, ಆಕೆ ಬಹಳ ಒಳ್ಳೆಯವಳು. ಅವಳನ್ನು ನಾನು ತುಂಬಾ ಪ್ರೀತಿಸುತ್ತೇನೆ,” ಎಂದ.

“ಹಾಗಿದ್ದರೆ ನಿಮ್ಮ ನಡುವೆ ಇರುವ ಸಮಸ್ಯೆ ಏನು?” ಎಂದಿದ್ದಕ್ಕೆ ಆತ, “ನನಗೆ ಪುರುಷತ್ವ ಅಂದರೆ ಏನು ಅಂತ ಗೊತ್ತಿಲ್ಲ. ಹೆಂಡತಿಯೊಡನೆ ಏನು ಮಾಡಬೇಕು ಎನ್ನೋದೂ ಗೊತ್ತಿಲ್ಲ. ಅದರ ಬಗ್ಗೆ ತಿಳಿವಳಿಕೆ ಇಲ್ಲದೆ ಅದರ ಬಗ್ಗೆ ಮಾತನಾಡೋದಕ್ಕೆ ಬಹಳ ಮುಜುಗರ. ಆದ್ದರಿಂದ ಅದನ್ನು ಧೈರ್ಯವಾಗಿ ಹೇಳಲಾಗದೆ ಈ ರೀತಿ ಆಡುತ್ತಿದ್ದೇನೆ,” ಎಂದ.

ಅವರಿಬ್ಬರನ್ನೂ ಕೂಡಲೇ ವೈದ್ಯರ ಬಳಿ ಕರೆದೊಯ್ದು ಈ ಲೈಂಗಿಕತೆಯ ಕುರಿತು ಅವರಿಗೆ ಅರಿವನ್ನು ನೀಡುವಂತೆ ಕೇಳಿದೆ.

ಅವರು ಸೂಕ್ತ ಸಲಹೆ ನೀಡಿ ಅವನ ಹಿಂಜರಿಕೆ ನಿವಾರಣೆಗೆ ಔಷಧವನ್ನೂ ನೀಡಿದರು. ನಂತರ ಆತ ತನ್ನ ಸಾಂಸಾರಿಕ ಜೀವನವನ್ನು ಸುಖವಾಗಿ ನಡೆಸಲು ಆರಂಭಿಸಿದ. ಈಗ ಅವರಿಗೂ ಒಂದು ಮುದ್ದಾದ ಹೆಣ್ಣುಮಗುವಿದೆ. ಸುಖೀ ಕುಟುಂಬವಾಗಿದೆ.

ಆದ್ದರಿಂದ ನಮ್ಮಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಅದನ್ನು ನಮ್ಮ ಹತ್ತಿರದವರ ಬಳಿ ಹೇಳಿಕೊಂಡರೆ ಅದಕ್ಕೆ ಪರಿಹಾರ ದೊರೆಯಬಹುದು. ಅದನ್ನು ಹೊರತುಪಡಿಸಿ ಒಳಗೇ ಕೊರಗಿದರೆ ಈ ರೀತಿ ಹೊಸ ಸಮಸ್ಯೆ ಹುಟ್ಟಿಕೊಳ್ಳುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

ರಾಜಕಾರಣ – ರಜೆಕಾಲದಲ್ಲಿ ಹೋಗಿ ಬರುವ ರಮ್ಯ ತಾಣವಲ್ಲ!

-ಭೂಮಿ ಬಾನು

ಚಿತ್ರ ನಟಿ ರಮ್ಯ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. ಕಾಂಗ್ರೆಸ್ನ ಕೆಲ ನಾಯಕರಿಗೆ ಇದು ಅರಗಿಸಿಕೊಳ್ಳಲಾಗದ ಬೆಳವಣಿಗೆ. ಅವರು ತಮ್ಮ ಅಸಹನೆಯನ್ನು ಅಲ್ಲಲ್ಲಿ ಹೊರಹಾಕಿದ್ದಾರೆ. ಸಂಸದ ಹೆಚ್.ವಿಶ್ವನಾಥ್ ಲಘುವಾಗಿ ಕಮೆಂಟ್ ಪಾಸ್ ಮಾಡಿದರೆ, ಉಗ್ರಪ್ಪ ತುಸು ಗಂಭೀರವಾಗಿಯೇ ಅಸಮಾಧಾನ ತೆರೆದಿಟ್ಟಿದ್ದಾರೆ.

ಅಸಹನೆ, ಅಸಮಾಧಾನಕ್ಕೆ ಮುಖ್ಯ ಕಾರಣ ರಮ್ಯ ಎಲ್ಲಿಂದಲೋ ಬಂದವರು ಎನ್ನುವ ಕಾರಣಕ್ಕೆ. ಸಿನಿಮಾಗಳಿಂದ ಪಡೆದ ಪಾಪುಲಾರಿಟಿಯ ಲಾಭ ಪಡೆದು ತನ್ನ ರಾಜಕೀಯ ಪ್ರವೇಶವನ್ನು ಕಾಂಗ್ರೆಸ್ ಮಟ್ಟಿಗೆ ಬಹು ಮುಖ್ಯ ಘಟನೆಯೇನೋ ಎನ್ನುವಂತೆ ಮಾಧ್ಯಮಗಳ ಮೂಲಕ ಬಿಂಬಿಸುವಲ್ಲಿ ರಮ್ಯ ಯಶಸ್ವಿಯಾದರು. ಅವರ ಹಿಂದೆ ಟಿವಿ ಸಂದರ್ಶಕಿಯಾದ ತೇಜಸ್ವಿನಿಯನ್ನು ಚುನಾವಣೆಗೆ ನಿಲ್ಲಿಸಿ ದೇವೇಗೌಡರಂತಹ ಪ್ರಬಲ ಸ್ಪರ್ಧಿಯನ್ನು ಸೋಲಿಸಲು ಕಾರಣಕರ್ತರಾಗಿದ್ದ ಡಿ.ಕೆ.ಶಿವಕುಮಾರ್ ಇದ್ದರು ಎನ್ನುವುದೂ ಪಕ್ಷದ ಇತರೆ ನಾಯಕರ ಅಸಮಾಧಾನಕ್ಕೆ ಕಾರಣ. ಕಾಲ ಕ್ರಮೇಣ ಚಿತ್ರನಟಿಗೆ ಪಕ್ಷದಲ್ಲಿ ಆಯಕಟ್ಟಿನ ಸ್ಥಾನಮಾನಗಳು ಸಿಕ್ಕಬಹುದು. ಹಾಗೆಲ್ಲ ಆದರೆ, ಎಷ್ಟೋ ವರ್ಷಗಳಿಂದ ಊರಿನ ಹಿರಿಯರಿಗೆ ವೃದ್ಧಾಪ್ಯ ವೇತನ ಮಾಡಿಸಿ, ಗಂಗಾ-ಕಲ್ಯಾಣ ಯೋಜನೆ ಅಡಿ ಬೋರ್ ಕೊರೆಸಿ ಕರೆಂಟು ಕೊಡಿಸಲು ಓಡಾಡಿ, ಚುನಾವಣೆ ಬಂದಾಗ ಬ್ಯಾನರ್ ಕಟ್ಟಿ, ಬಾವುಟ ಹಿಡಿದು ಊರೂರು ಅಲೆದವರ ಪಾಡೇನು ಎನ್ನುವುದು ಸಹಜವಾಗಿಯೇ ಏಳುವ ಪ್ರಶ್ನೆ. ಇದೇ ಪ್ರಶ್ನೆ ಅಪ್ಪ, ಅಜ್ಜ ಮಾಡಿದ ಹೆಸರಿನ ಬಲದ ಮೇಲೆ ಪಕ್ಷ ಸೇರಿ, ಟಿಕೆಟ್ ಗಿಟ್ಟಿಸುವ ಸಂಬರ್ಭಗಳು ಬಂದಾಗೆಲ್ಲಾ ಎದುರಾಗಿದೆ.

ಸಾಮಾನ್ಯ ಕಾರ್ಯಕರ್ತರಿಗೆ ಮತ್ತು ಸಿನಿಮಾ ಪಾಪುಲಾರಿಟಿ ಅಥವಾ ನಾಮ ಬಲದಿಂದ ಪಕ್ಷ ರಾಜಕಾರಣದಲ್ಲಿ ಮನ್ನಣೆಗಳಿಸಿದವರಿಗೆ ಇರುವ ವ್ಯತ್ಯಾಸಗಳೆಲ್ಲಾ ಅವರು ಎದುರಿಸುವ ಮೊದಲ ಚುನಾವಣೆ ನಂತರ ಮುರಿದು ಬೀಳುತ್ತವೆ. ಮೊದಲ ಚುನಾವಣೆಯಲ್ಲಿ ಅವರು ಇತರೆ ಸಾಮಾನ್ಯ ಕಾರ್ಯಕರ್ತರಂತೆ ಪರಿಚಯಿಸಿಕೊಳ್ಳುವ ಅಗತ್ಯ ಬೀಳದೆ ಇರಬಹುದು. ಆದರೆ ನಂತರದ ಚುನಾವಣೆಗಳಲ್ಲಿ ಆತ ಅಥವಾ ಆಕೆ ಕೇವಲ ರಾಜಕಾರಣಿ. ಸಿನಿಮಾ ಖ್ಯಾತಿ, ಟಿವಿ ಆಂಕರ್ ಖ್ಯಾತಿ ಯಾವುದೂ ಲಾಭಕ್ಕೆ ಬರುವುದಿಲ್ಲ. ಅಧಿಕಾರಾವಧಿಯಲ್ಲಿ ಅವರ ನಡೆ, ನುಡಿ ಅಷ್ಟೇ ಮುಖ್ಯ.ಪಕ್ಷ ಅಥವಾ ಆಡಳಿತದಲ್ಲಿ ಮೇಲೇರಲು ಕೂಡಾ ಸಿನಿಮಾ ಜಗತ್ತಿನ ಜನಪ್ರಿಯತೆ ಸಹಾಯಕ್ಕೆ ಬರುವುದಿಲ್ಲ. ಉದಾಹರಣೆಗೆ ಅಂಬರೀಷ್ ಅಥವಾ ಸಿ.ಪಿ ಯೋಗೇಶ್ವರ ಮಂತ್ರಿ ಸ್ಥಾನ ಪಡೆದದ್ದು ಅವರು ಚಿತ್ರನಟರೆಂದಲ್ಲ. ಅದಕ್ಕೆ ಅವರ ಸೀನಿಯಾರಿಟಿ (ಅಂಬರೀಷ್) ಮತ್ತು ಪಕ್ಷಾಂತರ (ಯೋಗೇಶ್ವರ) ಕಾರಣಗಳಿದ್ದವು.

ಕರ್ನಾಟಕದಲ್ಲಿ ಚಿತ್ರನಟರು ಆಗಾಗ ರಾಜಕಾರಣ ಪ್ರವೇಶಿಸಿದ್ದುಂಟು. ಆದರೆ ಪಕ್ಕದ ರಾಜ್ಯಗಳಲ್ಲಿ ನಡೆದಿರುವಂತೆ ಯಾರೊಬ್ಬರೂ ಬಹುಕಾಲ ಅಧಿಕಾರದಲ್ಲಿಲ್ಲ. ಹಾಗೆ ಚುನಾವಣೆ ಎದುರಿಸಿ ಅಧಿಕಾರ ಹಿಡಿದವರು ತಮ್ಮ ಕ್ಷೇತ್ರದಲ್ಲಿ, ತಮಗೆ ಕೊಟ್ಟ ಜವಾಬ್ದಾರಿಯನ್ನು ಶಿಸ್ತಿನಿಂದ ಪೂರೈಸಿದವರೂ ಅಲ್ಲ. ಉದಾಹರಣೆಗೆ ಅಂಬರೀಷ್. ತಾನು ಹಿರಿಯ, ಜನಪ್ರಿಯ ನಾಯಕ ಆದರೂ ಕೇಂದ್ರದಲ್ಲಿ ಮಂತ್ರಿ ಪಟ್ಟ ಕೊಟ್ಟಿಲ್ಲ ಎಂದು ಅಸಮಾಧಾನ ಪಟ್ಟುಕೊಂಡೇ ಇದ್ದವರು, ಮಂತ್ರಿಯಾದಾಗ ಮಾಡಿದ್ದೇನು – ರಾಜೀನಾಮೆಯ ನಾಟಕ. ಅವರು ಆ ಸಂದರ್ಭದಲ್ಲಿ ತಮ್ಮ ನಡೆ ನಾಟಕ ಅಲ್ಲ ಎಂದು ಎಷ್ಟು ಬಾರಿ ಹೇಳಿದರೂ ಅದು ನಾಟಕವೇ ಆಗಿತ್ತು ಎನ್ನಲು ಕಾರಣವೆಂದರೆ ಅವರು ರಾಜೀನಾಮೆಯನ್ನು ಅಂಗೀಕರಣವಾಗುವಂತೆ ನೋಡಿಕೊಳ್ಳಲೇ ಇಲ್ಲ. ತಾಂತ್ರಿಕವಾಗಿ ಮಂತ್ರಿ ಸ್ಥಾನದಲ್ಲಿ, ಸಂಸದರಾಗಿ ಮುಂದುವರಿದರು. ಯಾರಾದರೂ ಕೇಳಿದರೆ ನಾನಾಗಲೇ ರಾಜೀನಾಮೆ ಕೊಟ್ಟಾಗಿದೆ ಎನ್ನುತ್ತಿದ್ದರು. ಆದರೆ ಅದೇ ಸಂದರ್ಭದಲ್ಲಿ ನಡೆದ ರಾಜ್ಯಸಭಾ ಚುನಾವಣೆಗೆ ಮತ ಹಾಕಲು ಬಂದರು. ನೀವು ರಾಜೀನಾಮೆ ನೀಡಿದ್ದೀರಲ್ಲ ಎಂದು ಪತ್ರಕರ್ತರು ಕೇಳಿದಾಗ ಒಂದಿಷ್ಟೂ ಭಿಡೆ ಇಲ್ಲದೆ ‘ನಾನಿನ್ನೂ ಸದಸ್ಯ, ಇಲ್ಲಿದೆ ನೋಡಿ ಐಡೆಂಟಿಟಿ ಕಾರ್ಡ್’ ಎಂದು ಕೆಮರಾ ಮುಂದೆ ಕೈ ತೋರಿದರು.

ಬಹಳ ಕಾಲ ರಾಜಕಾರಣದಲ್ಲಿ ಬೇರು ಮಟ್ಟದಿಂದ ಕೆಲಸ ಮಾಡಿದವರಿಗೆ ಇಂತಹ ನಡೆವಳಿಕೆಗಳು ಬೇಸರ ಹುಟ್ಟಿಸುತ್ತವೆ. ಸಿನಿಮಾದವರು ಸೀರಿಯಸ್ಸಾಗಿ ರಾಜಕಾರಣ ಮಾಡುವುದು ಯಾವಾಗ? ಮತ್ತೊಬ್ಬ ನಟ ಶಶಿಕುಮಾರ್ ದೂ ಇದೇ ನಡವಳಿಕೆ. ಒಂದು ಚಿತ್ರದ ಶೂಟಿಂಗ್ ಗೆಂದು ಚಿತ್ರದುರ್ಗದ ಹತ್ತಿರ ಬಂದಿದ್ದ ಸಮಯದಲ್ಲಿಯೇ ಜೆ.ಎಚ್ ಪಟೇಲರು ಫೋನ್ ಮಾಡಿ ನೀನು ಚಿತ್ರದುರ್ಗ ಲೋಕಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸು ಎಂದರು. ಶಶಿಕುಮಾರ್ ನಾಮಪತ್ರ ಸಲ್ಲಿಸದರು. ಗೆದ್ದೂ ಬಿಟ್ಟರು. ಅಲ್ಲಿವರೆಗೆ ಆ ನಟ ಜೆಡಿ(ಯು) ಸೇರಿರಲಿಲ್ಲ. ಚಿತ್ರನಟನೆಂಬ ಖ್ಯಾತಿ ಮತ್ತು ಮೂರು ಬಾರಿ ಒಂದೇ ವ್ಯಕ್ತಿಯನ್ನು ಆರಿಸಿದ್ದ ಮತದಾರರು ಹೊಸಮುಖಕ್ಕೆ ಮಣೆ ಹಾಕಿದರು. ಮೇಲಾಗಿ ಜಾತಿಬೆಂಬಲವೂ ಇತ್ತು. ಆದರೆ ನಂತರದ ದಿನಗಳಲ್ಲಿ ಈ ಚಿತ್ರನಟನಿಗೆ ಅದೇ ಖ್ಯಾತಿ ಉಳಿಯಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತರು. ಸಂಸದರಾಗಿದ್ದ ವೇಳೆ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ಖರ್ಚು ಮಾಡಿ ಅಲ್ಲಲ್ಲಿ ಸಮುದಾಯ ಭವನ ಕಟ್ಟಿಸಿ ಕಮಿಷನ್ ಪಡೆದರು ಎಂಬ ಆರೋಪಗಳಿವೆ. ಆದರೆ ಅವರೆಂದೂ ಚಿತ್ರದುರ್ಗದ ಜನತೆ ಅನುಭವಿಸುತ್ತಿರುವ ನೀರಾವರಿ ಸಮಸ್ಯೆ ಬಗ್ಗೆ ಗಂಭೀರವಾಗಿ ಮಾತನಾಡಲೇ ಇಲ್ಲ.

ಇನ್ನು ಜಗ್ಗೇಶ್. ಕಾಡಿಬೇಡಿ ಕಾಂಗ್ರೆಸ್ ಟಿಕೆಟ್ ಪಡೆದವರು, ಬೇಡಿ-ಕಾಡಿ ಗೆದ್ದರು. ಆದರೆ ಈ ಕಾಮಿಡಿ ನಟನಿಗೆ ಮತದಾರನ ಬಗ್ಗೆ ಗೌರವ ಇರಲಿಲ್ಲ. ಯಡಿಯೂರಪ್ಪ, ಅಶೋಕ್ ತಮ್ಮ ಕ್ಷೇತ್ರ ಉದ್ಧಾರ ಮಾಡ್ತಾರೆ ಅಂದ್ರು ಎನ್ನುವ ಕಾರಣಕ್ಕೆ ಕೆಲವೇ ದಿನಗಳಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. ಇಂತಹವರಿಂದ ಜನರು ತಾನೇ ಏನು ನಿರೀಕ್ಷಿಸಿಯಾರು? ಈಗ ರಮ್ಯ ರಾಜಕೀಯ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಒಂದು ಪಕ್ಷದ ಕಾರ್ಯಕರ್ತೆ ಎಂದರೆ, ನಾಯಕಿ ಆದರೆ ಅಥವಾ ಜನಪ್ರತಿನಿಧಿ ಯಾದರೆ ದಿನದ ಬಹುಕಾಲ ಜನರ ಮಧ್ಯೆ ಇರಬೇಕು. ಹಿರಿಯ ನಾಯಕರ ಜೊತೆ ಸಭೆಯಲ್ಲಿ ಪಾಲ್ಗೊಳ್ಳಬೇಕು. ತಮ್ಮ ಕ್ಷೇತ್ರದಲ್ಲಿ ಪಕ್ಷ ಸೋತರೆ ಹೊಣೆ ಹೊರಬೇಕು. ಮಗನ ಸ್ಕೂಲ್ ಅಡ್ಮಿಷನ್ ಶಿಫಾರಸ್ಸು ಕೇಳುವವರಿಂದ ಹಿಡಿದು, ರಸ್ತೆ ಮೂಲೆಯಲ್ಲಿ ಕಸದ ಗುಂಡಿ ಕ್ಲೀನ್ ಮಾಡಿಲ್ಲ ಎಂದು ದೂರುವವರನ್ನೂ ತಾಳ್ಮೆಯಿಂದ ಕೇಳಬೇಕು. ಏಕೆಂದರೆ ಡಿ.ಕೆ.ಶಿವಕುಮಾರ್ ಈಗಾಗಲೇ ಸೂಚನೆ ಕೊಟ್ಟಿದ್ದಾರೆ, ಅವರು ರಮ್ಯ ಅವರನ್ನು ಒಕ್ಕಲಿಗ ಡಾಮಿನೆಂಟ್ ಕ್ಷೇತ್ರದಲ್ಲಿ ಲೋಕಸಭೆಗೆ ನಿಲ್ಲಿಸುತ್ತಾರಂತೆ. ಬೆಂಗಳೂರಿನ ಯಾವುದೋ ಒಂದು ಕ್ಷೇತ್ರದಲ್ಲಿ ಮುಂದೆ ನಿಂತರೆ ಅಚ್ಚರಿಯೇನಿಲ್ಲ. (ಅವರು ಸದ್ಯ ಶಾಂತಿನಗರ ಬ್ಲಾಕ್ ಸದಸ್ಯೆ).

ರಾಜಕಾರಣ ರಜೆಕಾಲದಲ್ಲಿ ಹೋಗಿ ಬರುವ ರಮ್ಯತಾಣವಲ್ಲ. ಅದು ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಅಪೇಕ್ಷಿಸುವ ಕ್ಷೇತ್ರ. ರಮ್ಯ ಅವರಾದರೂ ಗಂಭೀರ ರಾಜಕಾರಣಿಯಾಗಲಿ.