ರಾಜಕಾರಣ – ರಜೆಕಾಲದಲ್ಲಿ ಹೋಗಿ ಬರುವ ರಮ್ಯ ತಾಣವಲ್ಲ!

-ಭೂಮಿ ಬಾನು

ಚಿತ್ರ ನಟಿ ರಮ್ಯ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. ಕಾಂಗ್ರೆಸ್ನ ಕೆಲ ನಾಯಕರಿಗೆ ಇದು ಅರಗಿಸಿಕೊಳ್ಳಲಾಗದ ಬೆಳವಣಿಗೆ. ಅವರು ತಮ್ಮ ಅಸಹನೆಯನ್ನು ಅಲ್ಲಲ್ಲಿ ಹೊರಹಾಕಿದ್ದಾರೆ. ಸಂಸದ ಹೆಚ್.ವಿಶ್ವನಾಥ್ ಲಘುವಾಗಿ ಕಮೆಂಟ್ ಪಾಸ್ ಮಾಡಿದರೆ, ಉಗ್ರಪ್ಪ ತುಸು ಗಂಭೀರವಾಗಿಯೇ ಅಸಮಾಧಾನ ತೆರೆದಿಟ್ಟಿದ್ದಾರೆ.

ಅಸಹನೆ, ಅಸಮಾಧಾನಕ್ಕೆ ಮುಖ್ಯ ಕಾರಣ ರಮ್ಯ ಎಲ್ಲಿಂದಲೋ ಬಂದವರು ಎನ್ನುವ ಕಾರಣಕ್ಕೆ. ಸಿನಿಮಾಗಳಿಂದ ಪಡೆದ ಪಾಪುಲಾರಿಟಿಯ ಲಾಭ ಪಡೆದು ತನ್ನ ರಾಜಕೀಯ ಪ್ರವೇಶವನ್ನು ಕಾಂಗ್ರೆಸ್ ಮಟ್ಟಿಗೆ ಬಹು ಮುಖ್ಯ ಘಟನೆಯೇನೋ ಎನ್ನುವಂತೆ ಮಾಧ್ಯಮಗಳ ಮೂಲಕ ಬಿಂಬಿಸುವಲ್ಲಿ ರಮ್ಯ ಯಶಸ್ವಿಯಾದರು. ಅವರ ಹಿಂದೆ ಟಿವಿ ಸಂದರ್ಶಕಿಯಾದ ತೇಜಸ್ವಿನಿಯನ್ನು ಚುನಾವಣೆಗೆ ನಿಲ್ಲಿಸಿ ದೇವೇಗೌಡರಂತಹ ಪ್ರಬಲ ಸ್ಪರ್ಧಿಯನ್ನು ಸೋಲಿಸಲು ಕಾರಣಕರ್ತರಾಗಿದ್ದ ಡಿ.ಕೆ.ಶಿವಕುಮಾರ್ ಇದ್ದರು ಎನ್ನುವುದೂ ಪಕ್ಷದ ಇತರೆ ನಾಯಕರ ಅಸಮಾಧಾನಕ್ಕೆ ಕಾರಣ. ಕಾಲ ಕ್ರಮೇಣ ಚಿತ್ರನಟಿಗೆ ಪಕ್ಷದಲ್ಲಿ ಆಯಕಟ್ಟಿನ ಸ್ಥಾನಮಾನಗಳು ಸಿಕ್ಕಬಹುದು. ಹಾಗೆಲ್ಲ ಆದರೆ, ಎಷ್ಟೋ ವರ್ಷಗಳಿಂದ ಊರಿನ ಹಿರಿಯರಿಗೆ ವೃದ್ಧಾಪ್ಯ ವೇತನ ಮಾಡಿಸಿ, ಗಂಗಾ-ಕಲ್ಯಾಣ ಯೋಜನೆ ಅಡಿ ಬೋರ್ ಕೊರೆಸಿ ಕರೆಂಟು ಕೊಡಿಸಲು ಓಡಾಡಿ, ಚುನಾವಣೆ ಬಂದಾಗ ಬ್ಯಾನರ್ ಕಟ್ಟಿ, ಬಾವುಟ ಹಿಡಿದು ಊರೂರು ಅಲೆದವರ ಪಾಡೇನು ಎನ್ನುವುದು ಸಹಜವಾಗಿಯೇ ಏಳುವ ಪ್ರಶ್ನೆ. ಇದೇ ಪ್ರಶ್ನೆ ಅಪ್ಪ, ಅಜ್ಜ ಮಾಡಿದ ಹೆಸರಿನ ಬಲದ ಮೇಲೆ ಪಕ್ಷ ಸೇರಿ, ಟಿಕೆಟ್ ಗಿಟ್ಟಿಸುವ ಸಂಬರ್ಭಗಳು ಬಂದಾಗೆಲ್ಲಾ ಎದುರಾಗಿದೆ.

ಸಾಮಾನ್ಯ ಕಾರ್ಯಕರ್ತರಿಗೆ ಮತ್ತು ಸಿನಿಮಾ ಪಾಪುಲಾರಿಟಿ ಅಥವಾ ನಾಮ ಬಲದಿಂದ ಪಕ್ಷ ರಾಜಕಾರಣದಲ್ಲಿ ಮನ್ನಣೆಗಳಿಸಿದವರಿಗೆ ಇರುವ ವ್ಯತ್ಯಾಸಗಳೆಲ್ಲಾ ಅವರು ಎದುರಿಸುವ ಮೊದಲ ಚುನಾವಣೆ ನಂತರ ಮುರಿದು ಬೀಳುತ್ತವೆ. ಮೊದಲ ಚುನಾವಣೆಯಲ್ಲಿ ಅವರು ಇತರೆ ಸಾಮಾನ್ಯ ಕಾರ್ಯಕರ್ತರಂತೆ ಪರಿಚಯಿಸಿಕೊಳ್ಳುವ ಅಗತ್ಯ ಬೀಳದೆ ಇರಬಹುದು. ಆದರೆ ನಂತರದ ಚುನಾವಣೆಗಳಲ್ಲಿ ಆತ ಅಥವಾ ಆಕೆ ಕೇವಲ ರಾಜಕಾರಣಿ. ಸಿನಿಮಾ ಖ್ಯಾತಿ, ಟಿವಿ ಆಂಕರ್ ಖ್ಯಾತಿ ಯಾವುದೂ ಲಾಭಕ್ಕೆ ಬರುವುದಿಲ್ಲ. ಅಧಿಕಾರಾವಧಿಯಲ್ಲಿ ಅವರ ನಡೆ, ನುಡಿ ಅಷ್ಟೇ ಮುಖ್ಯ.ಪಕ್ಷ ಅಥವಾ ಆಡಳಿತದಲ್ಲಿ ಮೇಲೇರಲು ಕೂಡಾ ಸಿನಿಮಾ ಜಗತ್ತಿನ ಜನಪ್ರಿಯತೆ ಸಹಾಯಕ್ಕೆ ಬರುವುದಿಲ್ಲ. ಉದಾಹರಣೆಗೆ ಅಂಬರೀಷ್ ಅಥವಾ ಸಿ.ಪಿ ಯೋಗೇಶ್ವರ ಮಂತ್ರಿ ಸ್ಥಾನ ಪಡೆದದ್ದು ಅವರು ಚಿತ್ರನಟರೆಂದಲ್ಲ. ಅದಕ್ಕೆ ಅವರ ಸೀನಿಯಾರಿಟಿ (ಅಂಬರೀಷ್) ಮತ್ತು ಪಕ್ಷಾಂತರ (ಯೋಗೇಶ್ವರ) ಕಾರಣಗಳಿದ್ದವು.

ಕರ್ನಾಟಕದಲ್ಲಿ ಚಿತ್ರನಟರು ಆಗಾಗ ರಾಜಕಾರಣ ಪ್ರವೇಶಿಸಿದ್ದುಂಟು. ಆದರೆ ಪಕ್ಕದ ರಾಜ್ಯಗಳಲ್ಲಿ ನಡೆದಿರುವಂತೆ ಯಾರೊಬ್ಬರೂ ಬಹುಕಾಲ ಅಧಿಕಾರದಲ್ಲಿಲ್ಲ. ಹಾಗೆ ಚುನಾವಣೆ ಎದುರಿಸಿ ಅಧಿಕಾರ ಹಿಡಿದವರು ತಮ್ಮ ಕ್ಷೇತ್ರದಲ್ಲಿ, ತಮಗೆ ಕೊಟ್ಟ ಜವಾಬ್ದಾರಿಯನ್ನು ಶಿಸ್ತಿನಿಂದ ಪೂರೈಸಿದವರೂ ಅಲ್ಲ. ಉದಾಹರಣೆಗೆ ಅಂಬರೀಷ್. ತಾನು ಹಿರಿಯ, ಜನಪ್ರಿಯ ನಾಯಕ ಆದರೂ ಕೇಂದ್ರದಲ್ಲಿ ಮಂತ್ರಿ ಪಟ್ಟ ಕೊಟ್ಟಿಲ್ಲ ಎಂದು ಅಸಮಾಧಾನ ಪಟ್ಟುಕೊಂಡೇ ಇದ್ದವರು, ಮಂತ್ರಿಯಾದಾಗ ಮಾಡಿದ್ದೇನು – ರಾಜೀನಾಮೆಯ ನಾಟಕ. ಅವರು ಆ ಸಂದರ್ಭದಲ್ಲಿ ತಮ್ಮ ನಡೆ ನಾಟಕ ಅಲ್ಲ ಎಂದು ಎಷ್ಟು ಬಾರಿ ಹೇಳಿದರೂ ಅದು ನಾಟಕವೇ ಆಗಿತ್ತು ಎನ್ನಲು ಕಾರಣವೆಂದರೆ ಅವರು ರಾಜೀನಾಮೆಯನ್ನು ಅಂಗೀಕರಣವಾಗುವಂತೆ ನೋಡಿಕೊಳ್ಳಲೇ ಇಲ್ಲ. ತಾಂತ್ರಿಕವಾಗಿ ಮಂತ್ರಿ ಸ್ಥಾನದಲ್ಲಿ, ಸಂಸದರಾಗಿ ಮುಂದುವರಿದರು. ಯಾರಾದರೂ ಕೇಳಿದರೆ ನಾನಾಗಲೇ ರಾಜೀನಾಮೆ ಕೊಟ್ಟಾಗಿದೆ ಎನ್ನುತ್ತಿದ್ದರು. ಆದರೆ ಅದೇ ಸಂದರ್ಭದಲ್ಲಿ ನಡೆದ ರಾಜ್ಯಸಭಾ ಚುನಾವಣೆಗೆ ಮತ ಹಾಕಲು ಬಂದರು. ನೀವು ರಾಜೀನಾಮೆ ನೀಡಿದ್ದೀರಲ್ಲ ಎಂದು ಪತ್ರಕರ್ತರು ಕೇಳಿದಾಗ ಒಂದಿಷ್ಟೂ ಭಿಡೆ ಇಲ್ಲದೆ ‘ನಾನಿನ್ನೂ ಸದಸ್ಯ, ಇಲ್ಲಿದೆ ನೋಡಿ ಐಡೆಂಟಿಟಿ ಕಾರ್ಡ್’ ಎಂದು ಕೆಮರಾ ಮುಂದೆ ಕೈ ತೋರಿದರು.

ಬಹಳ ಕಾಲ ರಾಜಕಾರಣದಲ್ಲಿ ಬೇರು ಮಟ್ಟದಿಂದ ಕೆಲಸ ಮಾಡಿದವರಿಗೆ ಇಂತಹ ನಡೆವಳಿಕೆಗಳು ಬೇಸರ ಹುಟ್ಟಿಸುತ್ತವೆ. ಸಿನಿಮಾದವರು ಸೀರಿಯಸ್ಸಾಗಿ ರಾಜಕಾರಣ ಮಾಡುವುದು ಯಾವಾಗ? ಮತ್ತೊಬ್ಬ ನಟ ಶಶಿಕುಮಾರ್ ದೂ ಇದೇ ನಡವಳಿಕೆ. ಒಂದು ಚಿತ್ರದ ಶೂಟಿಂಗ್ ಗೆಂದು ಚಿತ್ರದುರ್ಗದ ಹತ್ತಿರ ಬಂದಿದ್ದ ಸಮಯದಲ್ಲಿಯೇ ಜೆ.ಎಚ್ ಪಟೇಲರು ಫೋನ್ ಮಾಡಿ ನೀನು ಚಿತ್ರದುರ್ಗ ಲೋಕಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸು ಎಂದರು. ಶಶಿಕುಮಾರ್ ನಾಮಪತ್ರ ಸಲ್ಲಿಸದರು. ಗೆದ್ದೂ ಬಿಟ್ಟರು. ಅಲ್ಲಿವರೆಗೆ ಆ ನಟ ಜೆಡಿ(ಯು) ಸೇರಿರಲಿಲ್ಲ. ಚಿತ್ರನಟನೆಂಬ ಖ್ಯಾತಿ ಮತ್ತು ಮೂರು ಬಾರಿ ಒಂದೇ ವ್ಯಕ್ತಿಯನ್ನು ಆರಿಸಿದ್ದ ಮತದಾರರು ಹೊಸಮುಖಕ್ಕೆ ಮಣೆ ಹಾಕಿದರು. ಮೇಲಾಗಿ ಜಾತಿಬೆಂಬಲವೂ ಇತ್ತು. ಆದರೆ ನಂತರದ ದಿನಗಳಲ್ಲಿ ಈ ಚಿತ್ರನಟನಿಗೆ ಅದೇ ಖ್ಯಾತಿ ಉಳಿಯಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತರು. ಸಂಸದರಾಗಿದ್ದ ವೇಳೆ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ಖರ್ಚು ಮಾಡಿ ಅಲ್ಲಲ್ಲಿ ಸಮುದಾಯ ಭವನ ಕಟ್ಟಿಸಿ ಕಮಿಷನ್ ಪಡೆದರು ಎಂಬ ಆರೋಪಗಳಿವೆ. ಆದರೆ ಅವರೆಂದೂ ಚಿತ್ರದುರ್ಗದ ಜನತೆ ಅನುಭವಿಸುತ್ತಿರುವ ನೀರಾವರಿ ಸಮಸ್ಯೆ ಬಗ್ಗೆ ಗಂಭೀರವಾಗಿ ಮಾತನಾಡಲೇ ಇಲ್ಲ.

ಇನ್ನು ಜಗ್ಗೇಶ್. ಕಾಡಿಬೇಡಿ ಕಾಂಗ್ರೆಸ್ ಟಿಕೆಟ್ ಪಡೆದವರು, ಬೇಡಿ-ಕಾಡಿ ಗೆದ್ದರು. ಆದರೆ ಈ ಕಾಮಿಡಿ ನಟನಿಗೆ ಮತದಾರನ ಬಗ್ಗೆ ಗೌರವ ಇರಲಿಲ್ಲ. ಯಡಿಯೂರಪ್ಪ, ಅಶೋಕ್ ತಮ್ಮ ಕ್ಷೇತ್ರ ಉದ್ಧಾರ ಮಾಡ್ತಾರೆ ಅಂದ್ರು ಎನ್ನುವ ಕಾರಣಕ್ಕೆ ಕೆಲವೇ ದಿನಗಳಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. ಇಂತಹವರಿಂದ ಜನರು ತಾನೇ ಏನು ನಿರೀಕ್ಷಿಸಿಯಾರು? ಈಗ ರಮ್ಯ ರಾಜಕೀಯ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಒಂದು ಪಕ್ಷದ ಕಾರ್ಯಕರ್ತೆ ಎಂದರೆ, ನಾಯಕಿ ಆದರೆ ಅಥವಾ ಜನಪ್ರತಿನಿಧಿ ಯಾದರೆ ದಿನದ ಬಹುಕಾಲ ಜನರ ಮಧ್ಯೆ ಇರಬೇಕು. ಹಿರಿಯ ನಾಯಕರ ಜೊತೆ ಸಭೆಯಲ್ಲಿ ಪಾಲ್ಗೊಳ್ಳಬೇಕು. ತಮ್ಮ ಕ್ಷೇತ್ರದಲ್ಲಿ ಪಕ್ಷ ಸೋತರೆ ಹೊಣೆ ಹೊರಬೇಕು. ಮಗನ ಸ್ಕೂಲ್ ಅಡ್ಮಿಷನ್ ಶಿಫಾರಸ್ಸು ಕೇಳುವವರಿಂದ ಹಿಡಿದು, ರಸ್ತೆ ಮೂಲೆಯಲ್ಲಿ ಕಸದ ಗುಂಡಿ ಕ್ಲೀನ್ ಮಾಡಿಲ್ಲ ಎಂದು ದೂರುವವರನ್ನೂ ತಾಳ್ಮೆಯಿಂದ ಕೇಳಬೇಕು. ಏಕೆಂದರೆ ಡಿ.ಕೆ.ಶಿವಕುಮಾರ್ ಈಗಾಗಲೇ ಸೂಚನೆ ಕೊಟ್ಟಿದ್ದಾರೆ, ಅವರು ರಮ್ಯ ಅವರನ್ನು ಒಕ್ಕಲಿಗ ಡಾಮಿನೆಂಟ್ ಕ್ಷೇತ್ರದಲ್ಲಿ ಲೋಕಸಭೆಗೆ ನಿಲ್ಲಿಸುತ್ತಾರಂತೆ. ಬೆಂಗಳೂರಿನ ಯಾವುದೋ ಒಂದು ಕ್ಷೇತ್ರದಲ್ಲಿ ಮುಂದೆ ನಿಂತರೆ ಅಚ್ಚರಿಯೇನಿಲ್ಲ. (ಅವರು ಸದ್ಯ ಶಾಂತಿನಗರ ಬ್ಲಾಕ್ ಸದಸ್ಯೆ).

ರಾಜಕಾರಣ ರಜೆಕಾಲದಲ್ಲಿ ಹೋಗಿ ಬರುವ ರಮ್ಯತಾಣವಲ್ಲ. ಅದು ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಅಪೇಕ್ಷಿಸುವ ಕ್ಷೇತ್ರ. ರಮ್ಯ ಅವರಾದರೂ ಗಂಭೀರ ರಾಜಕಾರಣಿಯಾಗಲಿ.

Leave a Reply

Your email address will not be published. Required fields are marked *