Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

Anna_Hazare

ಅಣ್ಣಾ… ನಿನ್ನ ಉಪವಾಸ ಮಲಿನ ಮನಸ್ಸುಗಳನ್ನು ತಿಳಿಗೊಳಿಸಲಿ.

– ಚಿದಂಬರ ಬೈಕಂಪಾಡಿ

ಅಂದು ಬದುಕಿಗೆ ವಿದಾಯ ಹೇಳಲು ಕಾಗದ ಬರೆದಿಟ್ಟು ಆತ್ಮಹತ್ಯೆಗೆ ಮುಂದಾಗಿದ್ದ ಅಣ್ಣಾ ಹಜಾರೆ ಅನೇಕ ದಶಕಗಳಿಂದ ನಖ ಶಿಖಾಂತ ಹರಡಿಕೊಂಡಿರುವ ಭ್ರಷ್ಟಾಚಾರದ ಬೇರನ್ನು ಕೀಳಲು ಪಣತೊಟ್ಟದ್ದು ಐತಿಹಾಸಿಕ ಘಟನೆ. ಹದಿಮೂರು ದಿನಗಳ ಕಾಲ ರಾಮಲೀಲಾ ಮೈದಾನದಲ್ಲಿ ಉಪವಾಸ ಮಾಡಿದ ಅಣ್ಣಾ ಚರಿತ್ರೆಯ ಪುಟಗಳಲ್ಲಿ ದಾಖಲಾಗುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಪರಮಾಧಿಕಾರ ಹೊಂದಿದೆ, ಅಂಥ ಸಂಸತ್ತನ್ನೇ ನಡುಗಿಸಿದವರು ಅಣ್ಣಾ ಎಂದು ಅವರನ್ನು ಸುತ್ತುವರಿದಿದ್ದವರು ಬೆನ್ನುತಟ್ಟಿಕೊಳ್ಳಬಹುದು. ಸಂವಿಧಾನಿಕ ಸಂಸ್ಥೆಯ ಗಡಿದಾಟಿ ಹೋಗುವುದು ಕೂಡಾ ಐತಿಹಾಸಿಕ ಘಟನೆ, ಅಂಥ ಯತ್ನ ನಡೆದದ್ದು ಮಾತ್ರ ವಿಷಾದನೀಯ.

ಹಳ್ಳಿಗಾಡಿನ ಅಣ್ಣಾ ದಿಲ್ಲಿವಾಲಾಗಳು ತಡಬಡಾಯಿಸುವಂತೆ ಮಾಡಿದರು ನಿಜ, ಅಣ್ಣಾ ಅವರ ಹೋರಾಟಕ್ಕೆ ಮಂಡಿಯೂರಿದ ಸರ್ಕಾರ ಕೂಡಾ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ. ಆದರೆ ಈ ದಾಖಲೆ ಋಣಾತ್ಮಕ ಸಂದೇಶವನ್ನು ರವಾನಿಸುತ್ತದೆ ಎನ್ನುವುದನ್ನು ಮರೆಯಬಾರದು. ಒಂದು ವಿಮಾನ ಅಪಹರಣ ಮಾಡಿ ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿಟ್ಟುಕೊಂಡು ಬೇಡಿಕೆಗಳ ಈಡೇರಿಕೆಗಾಗಿ ಆಡಳಿತ ವ್ಯವಸ್ಥೆಯನ್ನು ಮಂಡಿಯೂರುವಂತೆ ಮಾಡುವ ಕ್ರಮಕ್ಕಿಂತ ಭಿನ್ನವಾದುದು ರಾಮಲೀಲಾ ಮೈದಾನದ ಸತ್ಯಾಗ್ರಹ ಎಂದು ಅನೇಕರಿಗೆ ಅನ್ನಿಸಿದರೆ ತಪ್ಪಲ್ಲ.

ಕಾಂಗ್ರೆಸ್ ಪಕ್ಷದ ಭವಿಷ್ಯದ ಕುಡಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಅಣ್ಣಾ ಅವರ ಸತ್ಯಾಗ್ರಹವನ್ನು ಕಟುವಾಗಿ ಟೀಕಿಸಿದ್ದು ಒಂದು ವರ್ಗವನ್ನು ಸಿಟ್ಟಿಗೇಳಿಸಿತು. ‘ಬೆವಕೂಫ್ ’ ಎನ್ನುವ ದಾಟಿಯಲ್ಲಿ ರಾಮಲೀಲಾ ಮೈದಾನದಿಂದ ಬುದ್ಧಿವಂತರು ಕಿರುಚಿಕೊಂಡಾಗ ಸ್ವತ: ಅಣ್ಣಾ ಅವರು ಕೇಳಿಸಿಕೊಂಡಿದ್ದರೆ ಕ್ಷಮೆಯಾಚಿಸುತ್ತಿದ್ದರೇನೋ ?. ಯಾಕೆಂದರೆ ಇಳಿವಯಸ್ಸಿನ ಅಣ್ಣಾ ಪ್ರಧಾನಿಯರ ಬಗ್ಗೆ ಆಡಿದ ಮಾತಿಗೆ ಮನನೊಂದುಕೊಂಡರು. ಸಂಸತ್ತಿನ ಹೊರಗಿರುವವರ ಹಟಮಾರಿತನದ ಬೇಡಿಕೆಗಳನ್ನು ಒಪ್ಪಿಕೊಂಡರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಥ ಬೇಡಿಕೆಗಳು ಮಂಡನೆಯಾಗಲು ಅನುವಾಗುತ್ತದೆ ಎನ್ನುವ ರಾಹುಲ್ ಧ್ವನಿ ತಳ್ಳಿಹಾಕುವಂತಿಲ್ಲ.

ಭ್ರಷ್ಟಾಚಾರಿಗಳ ಕುತ್ತಿಗೆಗೆ ಕುಣಿಕೆ ಹಾಕಲು ಅಗತ್ಯವಾದ ಹಗ್ಗಹೊಸೆಯಲು ಸಂಸತ್ತು ಒಪ್ಪಿಕೊಂಡಿತು ನಿಜ, ಆದರೆ ಇಂಥ ಹಗ್ಗ ಹೊಸೆಯುವವರಲ್ಲಿ  ಲಾಲೂ, ಪಾಸ್ವಾನ್, ಅಮರ್ ಸಿಂಗ್ ಮುಂತಾದವರು ಕೈಜೋಡಿಸುತ್ತಾರೆ ಎಂದಾದಾಗ ಒಂದಷ್ಟು ಸಂಶಯಗಳು ಮೂಡುವುದು ಸಹಜ. ಯಾಕೆಂದರೆ ಇಂಥವರು ಬಿಳಿ ದಿರಿಸು ತೊಟ್ಟು ಹೊಳೆದರೂ ಅವರ ಮೈಮೇಲಿನ ಕಲೆಗಳು ಮಾತ್ರ ಮರೆಯಾಗುವುದಿಲ್ಲ. ಜನರ ನೆನಪುಗಳು ಬಹುಕಾಲ ಬಾಳುವಂಥವಲ್ಲ ಅಂದುಕೊಂಡರೂ ಇವರನ್ನು ಮೆತ್ತಿಕೊಂಡಿರುವ ಹಗರಣಗಳು ಮರೆತುಬಿಡುವಂಥವಲ್ಲ.

ಅಣ್ಣಾ ಟೀಮಿನ ಸಚ್ಚಾರಿತ್ರ್ಯರ ನಡುವೆಯೇ ಪ್ರಶ್ನಿಸಲು ಅರ್ಹರ ಮುಖಗಳಿರುವುದೂ ಸತ್ಯ. ಒಂದು ಕಾಲದಲ್ಲಿ ಜನರಿಂದ ಮೆಚ್ಚುಗೆ ಗಳಿಸಿದವರು ಸ್ವಯಂಸೇವೆಯ ಹೆಸರಲ್ಲಿ ಸುಂದರವಾದ ಬದುಕು ಸವೆಸಿದರೆ ಅದನ್ನು ಉದಾರವಾಗಿ ಕಾಣಲು ಸಾಧ್ಯವೇ?. ಭಾರತದ ಹಳ್ಳಿಯ ಜನರ ಜೋಲು ಮುಖ, ಕೊಳಚೆ, ಜೋಪಡಿಯ ಮುಗ್ಧ ಮಕ್ಕಳನ್ನು ಸಾಗರದಾಚೆ ತೋರಿಸಿ ಬದುಕುವ ಈ ನೆಲದ ಜೀವಗಳ ಬಗ್ಗೆ ಕನಿಕರ ಪಡಬೇಕಲ್ಲವೇ?.

ಇದೆಲ್ಲವನ್ನು ಬದಿಗಿಟ್ಟು ಅಣ್ಣಾ ಸೂತ್ರಗಳನ್ನು ಒಪ್ಪಿಕೊಂಡ ಮಾತ್ರಕ್ಕೇ ದೇಶ, ರಾಜ್ಯ, ಜಿಲ್ಲಾಮಟ್ಟದಲ್ಲಿಹಾಸುಹೊಕ್ಕಾಗಿ ಹೆಣೆದುಕೊಂಡಿರುವ ಭ್ರಷ್ಟಾಚಾರದ ಸುಕ್ಕುಗಳು ಬಿಡಿಸಿಕೊಳ್ಳುತ್ತವೆ ಎಂದಾಗಲೀ, ಹಳ್ಳಿಯ ಪಂಚಾಯಿತಿ ಕಚೇರಿಯ ಗುಮಾಸ್ತ ಮಿಸ್ಟರ್ ಕ್ಲೀನ್ ಆಗಿಬಿಡುತ್ತಾನೆ ಅಂದುಕೊಳ್ಳುವಂತಿಲ್ಲ. ಒಂದಷ್ಟು ಮಂದಿ ರಾಮಲೀಲಾ ಮೈದಾನದಲ್ಲಿ ಟಿವಿ ಕ್ಯಾಮರಾಗಳ ಮುಂದೆ ಪ್ರಮಾಣ ಮಾಡಿದ ಮಾತ್ರಕ್ಕೆ ಭ್ರಷ್ಟಾಚಾರ ಸಾರಾಸಗಟಾಗಿ ಅಳಿಸಿಹೋಗುತ್ತದೆ ಅಂದುಕೊಳ್ಳುವುದು ಮೂರ್ಖತನವಾಗುತ್ತದೆ.

Anna_Hazare

Anna_Hazare

ಭೂಮಿ ನೋಂದಾವಣೆ ಮಾಡುವ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಂಚಗುಳಿತನ ಇಲ್ಲವೇ ಇಲ್ಲವೆಂದು ಹೇಳಿದರೆ ಯಾರಾದರೂ ನಂಬಲು ಸಾಧ್ಯವೇ?. ಈ ಕಚೇರಿಗಳನ್ನು ಲಂಚಮುಕ್ತವನ್ನಾಗಿಸಲು ಕಾನೂನುಗಳಿಂದ ಸಾಧ್ಯವೇ ?. ಅಣ್ಣಾ ತಂಡ ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಲಂಚ ಯಾವ ಸ್ವರೂಪದಲ್ಲಿ ಸಂದಾಯವಾಗಬೇಕೋ ಸಂದಾಯವಾಗುತ್ತದೆ. ಪ್ರಾದೇಶಿಕ ಸಾರಿಗೆ ಕಚೇರಿ, ಲೋಕೋಪಯೋಗಿ, ಕೃಷಿ, ಅರಣ್ಯ, ತೆರಿಗೆ, ಶಿಕ್ಷಣ ಹೀಗೆ ಸರ್ಕಾರದ ಕಚೇರಿಗಳು ಭ್ರಷ್ಟಾಚಾರದ ಕೊಂಪೆಗಳಾಗಿವೆ ಎಂದು ಹೆಸರು ಕೂಗಿ ಕರೆಯಬೇಕೇ?. ಲೋಕಾಯುಕ್ತ, ಲೋಕಪಾಲ ಅಥವಾ ಅಣ್ಣಾ ತಂಡದ್ದೇ ಕಾನೂನು ಬಂದರೂ ಭ್ರಷ್ಟ ಕೈಗಳು ಶುದ್ಧವಾಗುವುದಿಲ್ಲ. ಯಾಕೆಂದರೆ ಇಲ್ಲಿ ಕೆಲಸ ಮಾಡುವ ಮನಸ್ಸುಗಳು ಭ್ರಷ್ಟವಾಗಿಬಿಟ್ಟಿವೆ ಅನ್ನಿಸುವುದಿಲ್ಲವೇ?. ಕೈಗಳನ್ನು ನಿಯಂತ್ರಿಸುವ ಮನಸ್ಸುಗಳೇ ಮಲಿನವಾಗಿರುವುದರಿಂದ ಅಲ್ಲಿಂದ ರವಾನೆಯಾಗುವ ಸಂದೇಶಗಳೇನು?.

ಮುಗ್ಧ ಅಣ್ಣಾ ಕೊಟ್ಟ ಭ್ರಷ್ಟಾಚಾರ ನಿಯಂತ್ರಣ ಸಂದೇಶವನ್ನು ಅರ್ಥೈಸುವಲ್ಲೂ ಶಾಸಕಾಂಗದೊಳಗೆ ಕೆಲಸ ಮಾಡುವ ಕೆಲವು ಮನಸ್ಸುಗಳು ಎಡವಿದವು. ಸಂಸತ್ತನ್ನೇ ಹೈಜಾಕ್ ಮಾಡುವ ತಂತ್ರವೆಂದು ಟೀಕಿಸಿದ್ದು ಸ್ವಲ್ಪಮಟ್ಟಿಗೆ ಸತ್ಯಕ್ಕೆ ಹತ್ತಿರವಾದರೂ ಸಂಸತ್ತಿನೊಳಗೆ ನಡೆದುಕೊಳ್ಳುವ ನಡವಳಿಕೆಗಳೂ ಕೆಲವೊಮ್ಮೆ ಸಂಯಮದ, ನಡವಳಿಕೆಯ ಗೆರೆ ದಾಟಿರುವುದೂ ನಿಜ. ಓಟಿಗಾಗಿ ನೋಟು, ಚುನಾಯಿತ ಜನಪ್ರತಿನಿಧಿಗಳು ಕುದುರೆಗಳಂತೆ ಬಿಕರಿಯಾಗುವುದು, ಆಮಿಷಗಳಿಗೆ ಬಲಿಯಾಗಿ ಬಟ್ಟೆ ಬದಲಿಸಿದಷ್ಟೇ ಸುಲಭವಾಗಿ ಪಕ್ಷಾಂತರ ಮಾಡುವುದು ಕೂಡಾ ಭ್ರಷ್ಟಾಚಾರದಷ್ಟೇ ಅನಿಷ್ಟವಾದುದು ಎಂದರೆ ಯಾರೂ ಸಿಟ್ಟಾಗಬೇಡಿ.

ಅಸಾಮಾನ್ಯ ಕಳ್ಳನನ್ನು ಹಿಡಿಯಲು ಕಳ್ಳನಿಂದ ಮಾತ್ರ ಸಾಧ್ಯ. ಅಸಾಮಾನ್ಯ ಕಳ್ಳನ ಕಳವಿನ ತಂತ್ರಗಳು ಸಾಮಾನ್ಯ ಕಳ್ಳನಿಗೆ ಮಾತ್ರ ಗೊತ್ತಿರಲು ಸಾಧ್ಯ ಹೊರತು ಕಳ್ಳನಲ್ಲದಿದ್ದವನಿಗೆ ಗೊತ್ತಿರಲು ಅಸಾಧ್ಯ. ಭ್ರಷ್ಟಾಚಾರವನ್ನು ಹತ್ತಿಕ್ಕಲು ಅಣ್ಣಾ ಹಜಾರೆ ಉಪವಾಸ ಮಾಡಿ ಮಸೂದೆ ಜಾರಿಗೆ ಒತ್ತಾಯಿಸಿದ್ದು ಇತಿಹಾಸದ ಒಂದು ಪುಟವಾಗಿ ಪ್ರಸ್ತುತವಾಗುತ್ತದೆ ನಿಜ, ಆದರೆ ಭ್ರಷ್ಟಾಚಾರ ಅಳಿಸಿ ಹಾಕುವುದು ಹಜಾರ್ ಅಣ್ಣಾಗಳು ಉಪವಾಸ ಮಾಡಿದ ಮಾತ್ರಕ್ಕೇ ಸಾಧ್ಯವಿಲ್ಲ. ಯಾಕೆಂದರೆ ಭ್ರಷ್ಟಾಚಾರದಿಂದಲೇ ಕೋಟ್ಯಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆಗೆ ಕಾಯಿದೆ-ಕಾನೂನುಗಳು ನೆಪವಾಗಬಹುದೇ ಹೊರತು ಪರಿಹಾರ ಕೊಡಲಾರವು. ಹಳ್ಳಿಯ ಸಾಮಾನ್ಯನಿಂದ ಹಿಡಿದು ದಿಲ್ಲಿಯ ಅಸಾಮಾನ್ಯನವರೆಗೆ; ಹಳ್ಳಿಯ ಪುಟ್ಟ ಪಂಚಾಯಿತಿಯಿಂದ ಸಂಸತ್ತಿನೊಳಗೆ ಕುಳಿತುಕೊಳ್ಳುವವರತನಕ; ಹಳ್ಳಿಯ ಮರದ ಕೆಳಗೆ ಕುಳಿತು ಕಾಲಕಳೆಯುವವರಿಂದ ಹಿಡಿದು ರಾಮಲೀಲಾ ಮೈದಾನದಲ್ಲಿ ನಿಂತು ಮಾತನಾಡಬಲ್ಲವರತನಕ ಮನಸ್ಸುಗಳು ತಿಳಿಯಾಗಬೇಕು. ಭ್ರಷ್ಟ ಕೈಗಳಿಗಿಂತಲೂ ಮಲಿನಗೊಂಡಿರುವ ಮನಸ್ಸುಗಳು ಅಪಾಯಕಾರಿ.

ಅಣ್ಣಾ ನಿರ್ಮಲ ಮನಸ್ಸಿನಿಂದ ಮಾಡಿದ ಉಪವಾಸದಿಂದ ಅವರ ದೇಹ ದಣಿಯಿತು, ಸರ್ಕಾರ ಮಣಿಯಿತು ನಿಜ. ಇದಿಷ್ಟೇ ಅಣ್ಣಾ ಅವರ ದೇಹದಂಡನೆಗೆ ಸಿಕ್ಕ ಪ್ರತಿಫಲ ಅಂದುಕೊಳ್ಳಬೇಕೇ?ಖಂಡಿತಕ್ಕೂ ಅಣ್ಣಾ ಮಾಡಿದ ಉಪವಾಸ ಸಾರ್ಥಕವಾಗಬೇಕಾದರೆ ಮಲಿನಗೊಂಡಿರುವ ಮನಸ್ಸುಗಳು ಪರಿಶುದ್ಧವಾಗಬೇಕು. ಅಂಥ ಮನಸ್ಸುಗಳು ಮೊಳಕೆಯೊಡೆಯಲು ರಾಮಲೀಲಾ ಮೈದಾನದಲ್ಲಿ ಅಣ್ಣಾ ಮಲಗಿ ಕಳೆದ ದಿನಗಳು ಪ್ರೇರಣೆಯಾಗಲಿ, ಅಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ)

ಭ್ರಷ್ಟಾಚಾರ ವಿರೋಧೀ ಹೋರಾಟ – ಉತ್ತರಿಸದೇ ಉಳಿದ ಪ್ರಶ್ನೆಗಳು

-ಸಂಜ್ಯೋತಿ ವಿ.ಕೆ.

ಅಣ್ಣಾ ಹಜಾರೆ, ಅವರ ಉಪವಾಸ ಸತ್ಯಾಗ್ರಹ, ಅವರ ತಂಡದ ಸದಸ್ಯರುಗಳ ತರಹೇವರಿ ಹೇಳಿಕೆಗಳು, ಕೇಂದ್ರ ಸರ್ಕಾರದ ಪ್ರತಿನಿಧಿಗಳ ಅಸಂಬದ್ಧ ಪ್ರತಿಕ್ರಿಯೆಗಳು ಇವೆಲ್ಲ “ಸ್ಫೋಟಕ  ಸುದ್ದಿ”ಗಳಾಗಿ ಎಲ್ಲಾ ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಹರಿದಾಡಿದ ನೆನಪುಗಳು ಕರಗುತ್ತಿರುವ ಈ ಗಳಿಗೆಯಲ್ಲಿ ಒಂದು ಪುನರಾವಲೋಕನ…

ಹಾಲಿ ಇರುವ ಕಾನೂನುಗಳನ್ನು ಪ್ರಾಮಾಣಿಕವಾಗಿ ಮತ್ತು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವುದರ ಹೊರತಾಗಿಯೂ ಕೇಂದ್ರದ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲ ಒಂದು ಪ್ರಬಲ ಮಸೂದೆಯ ಅಗತ್ಯವಂತೂ ಖಂಡಿತವಾಗಿಯೂ ಇದೆ. ಈ  ನಿಟ್ಟಿನಲ್ಲಿ ಜವಹರಲಾಲ ನೆಹರುರವರ ಕಾಲದಲ್ಲಿಯೇ ರಚಿತವಾಗಿ ಹಲವು ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಲೋಕಪಾಲ ಮಸೂದೆ, ವಿವಿಧ ಕೇಂದ್ರ ಸರ್ಕಾರಗಳ ಕಾಲದಲ್ಲಿ ಇಣುಕಿ, ಹಣಕಿ ಮತ್ತೆ ಧೂಳು ತಿನ್ನುತ್ತಾ ಕುಳಿತಿತ್ತು. ಕಾಂಗ್ರೆಸ್ ನೇತ್ರತ್ವದ ಯು.ಪಿ.ಎ. ಸರ್ಕಾರ ತನ್ನ “ಕನಿಷ್ಟ ಸಾಮಾನ್ಯ ಕಾರ್ಯಸೂಚಿ”ಯಲ್ಲಿ (ಕಾಮನ್ ಮಿನಿಮಮ್ ಪ್ರೋಗ್ರಾಮ್) ಇದರ ಪ್ರಸ್ತಾಪ ಮಾಡಿತ್ತಾದರೂ, ಕಾಂಗ್ರೆಸ್ ಪಕ್ಷವೂ ಸೇರಿದಂತೆ ಯು.ಪಿ.ಎ.ನ ಯಾವುದೇ ಅಂಗ ಪಕ್ಷಗಳಿಗಾಗಲಿ, ಯು.ಪಿ.ಎ. ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ದೊಡ್ಡ ದನಿಯಲ್ಲಿ ಗುಲ್ಲೆಬ್ಬಿಸುತ್ತಿರುವ ಆದರೆ ತನ್ನದೇ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ಕುರುಡು, ಕಿವುಡು, ಮೂಕಾಗಿರುವ ಬಿ.ಜೆ.ಪಿ.ಗಾಗಲೀ ಒಂದು ಪ್ರಬಲವಾದ ಮಸೂದೆಯನ್ನು ಮಂಡಿಸುವ ಮನಸ್ಸಿಲ್ಲ ಎಂಬುದು ಸುಸ್ಪಷ್ಟ.

ಭ್ರಷ್ಟಾಚಾರವೆಂಬ ಆಕ್ಟೋಪಸ್ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನೆಲ್ಲಾ ವ್ಯಾಪಿಸುತ್ತಾ ತನ್ನ ಬಾಹುಗಳನ್ನು ದಶದಿಕ್ಕುಗಳಲ್ಲೂ ಚಾಚಿ ಮೇರೆ ಮೀರಿ ಬೆಳೆಯುತ್ತಿರುವಾಗ ಅಣ್ಣಾ ಹಜಾರೆ ಎಂಬ ಪ್ರಾಮಾಣಿಕ ಮನುಷ್ಯನೊಬ್ಬ ಜನಲೋಕಪಾಲ ಮಸೂದೆಗಾಗಿ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಉಪವಾಸ ಕೂತಾಗ, ಬೇಸತ್ತಿದ್ದ ಜನರಿಗೆ ಇದೊಂದು ಆಶಾಕಿರಣವಾಗಿ ಕಂಡಿತ್ತು. ದೊಡ್ಡ ಸಂಖ್ಯೆಯಲ್ಲಿ ಜನ ಬಹಿರಂಗವಾಗಿ ಸೇರಲಿಲ್ಲವಾದರೂ ಒಂದು ಅವ್ಯಕ್ತ ಸಹಮತ ಬಹುಪಾಲು ಜನರಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ಕೇಂದ್ರ ಸರ್ಕಾರದ ಗ್ರಹಿಕೆ ಏನಿದ್ದಿತೋ, ಮಸೂದೆಯ ರೂಪುರೇಷೆಗಳನ್ನು ಚರ್ಚಿಸಲು ನಾಗರಿಕ ಸಮಾಜದ ಪ್ರತಿನಿಧಿಗಳನ್ನೊಳಗೊಂಡಂತೆ ಒಂದು ಜಂಟಿ ಸಮಿತಿಯನ್ನು ರಚಿಸುವ ಇಂಗಿತ ವ್ಯಕ್ತಪಡಿಸಿತು. ಅದಕ್ಕೆ ಒಪ್ಪಿದ ಅಣ್ಣಾ ಸಹಾ “ಸಮಿತಿಯ ವತಿಯಿಂದ ಉತ್ತಮ ಮಸೂದೆಯನ್ನು ಪ್ರಸ್ತುತ ಪಡಿಸುತ್ತೇವೆ. ಅದನ್ನು ಚರ್ಚಿಸಿ ಅಂಗೀಕಾರ ಮಾಡುವ ಅಧಿಕಾರ ಸಂಸತ್ತಿನದ್ದು” ಎಂದು ಮಾಧ್ಯಮಗಳ ಮುಂದೆ ಹೇಳಿದರು. ಅಲ್ಲಿಯವರಗೆ ಎಲ್ಲವೂ ಸುಸೂತ್ರವಾಗಿತ್ತು. ಆದರೆ ಅದರ ಮುಂದಿನ ಘಟ ನಾವಳಿಗಳು ನಾಡಿನ ಬಗ್ಗೆ ನಿಜವಾದ ಕಾಳಜಿ ಹೊಂದಿರುವವರಿಗೆ, ಸಂವಿಧಾನದ ಬಗ್ಗೆ ನಂಬಿಕೆಯಿಟ್ಟ ಪ್ರತಿಯೊಬ್ಬ ಪ್ರಜ್ಞಾವಂತನಿಗೆ ಗಾಬರಿ ಹುಟ್ಟಿಸುವಂತವು.

ಈ ಹಿನ್ನೆಲೆಯಲ್ಲಿ ಅಣ್ಣಾ ಪರ ಅಥವಾ ವಿರುದ್ಧ ಎಂಬ ಪೂರ್ವಾಗ್ರಹಗಳಿಗೆ ಸಿಲುಕದೆಯೇ ಇಡೀ ಪ್ರಕರಣವನ್ನು ವಿಶ್ಲೇಷಿಸುವಾಗ ಕೆಲವು ಪ್ರಶ್ನೆಗಳನ್ನು ಎತ್ತಲೇಬೇಕಿದೆ.

ಮೊದಲಿಗೆ – ‘ನಾಗರಿಕ ಸಮಾಜದ ಪ್ರತಿನಿಧಿಗಳು’ ಎಂಬ ಅಣ್ಣಾ ತಂಡದ ಆಯ್ಕೆಯ ಮಾನದಂಡಗಳೇನು? ದೇಶದ ವಿವಿಧ ಭಾಗಗಳ, ವರ್ಗಗಳ ಪ್ರಾತಿನಿಧ್ಯವಿಲ್ಲದೆ ಇದು ಕೇವಲ ‘ಅಣ್ಣಾ ತಂಡ’ವಾಯಿತೇ ಹೊರತು ನಿಜವಾದ ಸಮಾಜದ ಪ್ರತಿನಿಧಿಗಳ ತಂಡವಾಗಲಿಲ್ಲ. ‘ಇದು ಕೇವಲ ಆಕಸ್ಮಿಕ ಅಥವಾ ಇಂತಹ ಚರ್ಚೆಗಳಲ್ಲಿ ಹೋರಾಟದ ಮೂಲ ಉದ್ದೇಶವನ್ನು ಮುಕ್ಕಾಗಿಸುವುದು ಬೇಡ’ ಎನ್ನುವ ವಾದವನ್ನು ವಾದಕ್ಕಾಗಿಯಾದರೂ ಒಪ್ಪಿಬಿಡಬಹುದಿತ್ತು- ಸಾಮಾಜಿಕ ನ್ಯಾಯದ ಬಗೆಗಿನ ಅಣ್ಣಾರ ನಿಲುವು ಸಮರ್ಪಕವಾಗಿದ್ದಿದ್ದರೆ.

Sansad_Bhavan

Sansad_Bhavan

ಪತ್ರಕರ್ತ ಮುಕುಲ್ ಶರ್ಮ ಅವರು ರಾಳೇಗಾಂವ್ ಸಿದ್ಧಿಯಲ್ಲಿನ ಅಣ್ಣಾರ ಸುಧಾರಣಾ ಕ್ರಮಗಳಿಂದ ಪ್ರಭಾವಿತರಾಗಿದ್ದರೂ, ಅವರ ‘ಬ್ರಾಹ್ಮಣಿಕೆ’ಯ ಧೋರಣೆಯನ್ನೂ ಗುರುತಿಸುತ್ತಾರೆ.  ಅಣ್ಣಾ ತಂದಿರುವ ಜಲ ಸಂರಕ್ಷಣೆ ಮತ್ತು ಸಮರ್ಪಕ ಜಲ ನಿರ್ವಹಣೆ, ಅದರಿಂದ ಹೆಚ್ಚಿದ ಬೇಸಾಯಗಾರರ ಇಳುವರಿ ಮತ್ತು ಆದಾಯ, ಪಾನ ನಿಷೇಧ ಇವೆಲ್ಲಾ ನಿಜಕ್ಕೂ ಅನುಕರಣ ಯೋಗ್ಯ. ಆದರೆ ಜೊತೆಗೇ ದಲಿತರ ಆಹಾರ ಕ್ರಮಗಳ ಬಗೆಗಿನ ಅವರ ಋಣಾತ್ಮಕ ಧೋರಣೆ ಪ್ರಶ್ನಾರ್ಹ. ಅಂತೆಯೇ “ಪ್ರತೀ ಹಳ್ಳಿಯಲ್ಲಿ ಒಬ್ಬ ಚಮ್ಮಾರ, ಕಂಬಾರ, ಝಾಡಮಾಲಿ ಇರಲೇಬೇಕು ಮತ್ತು ಅವರೆಲ್ಲಾ ತಮ್ಮ ಪಾತ್ರ, ಕಸುಬಿನಂತೆ ದುಡಿಯಬೇಕು. ಇದೇ ರಾಳೇಗಾಂವ್ ಸಿದ್ಧಿಯ ಮಾದರಿ” ಎನ್ನುವ ಅಣ್ಣಾರ ಮನಸ್ಸತ್ವ ಇಂತಹ ವಾದವನ್ನು ಒಪ್ಪುವುದನ್ನು ಅಸಾಧ್ಯವಾಗಿಸುತ್ತದೆ. ಮೀಸಲಾತಿಯನ್ನು ವಿರೋಧಿಸುವವರು ಅಣ್ಣಾರ ಹೋರಾಟದೊಡನೆ ತಮ್ಮನ್ನು ಗುರುತಿಸಿಕೊಳ್ಳುವುದು ಕಾಕತಾಳೀಯವಲ್ಲ.

ಎರಡನೆಯದು – ಸರ್ಕಾರ ಪ್ರಸ್ತಾಪಿಸಿದ ಲೋಕಪಾಲ ಮಸೂದೆ ಕೇವಲ ಕಾಗದದ ಮೇಲೂ ಘರ್ಜಿಸಲಾರದಷ್ಟು ದುರ್ಬಲವೆಂಬುದು ನಿಜ. ಆದರೆ ಅಣ್ಣಾ ತಂಡ ರಚಿಸಿದ ಜನಲೋಕಪಾಲ ಮಸೂದೆ ಅದಕ್ಕೆ ಪರ್ಯಾಯವಾಗಬಲ್ಲುದೇ?

  1.  ‘ಜನಲೋಕಪಾಲವನ್ನು ಯಥಾವತ್ತಾಗಿ ಅಂಗೀಕರಿಸಿದರೂ ಭ್ರಷ್ಟಾಚಾರವನ್ನು ಸಂಪೂರ್ಣ ತೊಲಗಿಸಿಬಿಡಲು ಸಾಧ್ಯವಿಲ್ಲ’ ಎಂಬುದನ್ನು ಅದರ ಪರವಾಗಿರುವ ಪರಿಣಿತರೇ ಒಪ್ಪುತ್ತಾರೆ.
  2. ಸಂವಿಧಾನಬದ್ಧವಾಗಿ ಪ್ರಜೆಗಳಿಂದ ಆಯ್ಕೆಯಾದ ಪ್ರಜಾಪ್ರತಿನಿಧಿಗಳೆಲ್ಲರ ಮೇಲೆ (ನ್ಯಾಯಾಂಗವನ್ನೂ ಒಳಗೊಂಡಂತೆ!) ಒಂದು ಸರ್ವತಂತ್ರ ಸ್ವತಂತ್ರವಾದ ಸರ್ವಾಧಿಕಾರಿಯನ್ನು ಸ್ಥಾಪಿಸುವುದು ಪ್ರಜಾಪ್ರಭುತ್ವದ ಮೂಲತತ್ವಕ್ಕೇ ಅಪಾಯಕಾರಿಯಾದದ್ದಲ್ಲವೇ?
  3. ಭ್ರಷ್ಟಾಚಾರವೆಂಬುದು ಮನುಕುಲದ ಇತಿಹಾಸದಷ್ಟೇ ಹಳೆಯ ವಿಷಯವಾದರೂ ಅದರ ವ್ಯಾಪ್ತಿ ಮತ್ತು ಪ್ರಮಾಣ ಇಂದು ಹಿಂದೆಂದಿಗಿಂತಲೂ ಸಹಸ್ರಾರು ಪಟ್ಟು ಹೆಚ್ಚಿದ್ದು, ಜನಸಾಮಾನ್ಯರ  ಕಲ್ಪನೆಗೂ ಮೀರಿದ್ದಾಗಿದೆ. ಇದೇ ಭ್ರಷ್ಟ ಹಣ ಚುನಾವಣೆಗಳನ್ನು ಮತದ ಮಾರುಕಟ್ಟೆಯಾಗಿ ಪರಿವರ್ತಿಸುತ್ತಿದೆ; ನ್ಯಾಯಾಂಗವನ್ನೂ ಭ್ರಷ್ಟಗೊಳಿಸುತ್ತಾ ನ್ಯಾಯವನ್ನು ಬಿಕರಿಯ ವಸ್ತುವನ್ನಾಗಿಸುವ ಧಾಷ್ಟ್ರ್ಯ  ತೋರುತ್ತಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಭಷ್ಟಾಚಾರಗಳೆಲ್ಲ ಇಂದು ಒಂದೇ ಸರಪಣಿಯ ಕೊಂಡಿಗಳಾಗಿದ್ದು, ಅದರ ಮೂಲವಿರುವುದು ಕಾರ್ಪೊರೇಟ್ ಲಾಬಿ, ಕಾರ್ಪೊರೇಟ್ ಭಷ್ಟಾಚಾರದಲ್ಲಿ. ಹೀಗಿರುವಾಗ ಜನಲೋಕಪಾಲ ಮಸೂದೆ ಕಾರ್ಪೊರೇಟ್ ವಲಯವನ್ನು ತನ್ನ ಪರಿಧಿಯಿಂದ ಸಂಪೂರ್ಣ ಹೊರಗಿಟ್ಟಿರುವುದು, ಕೇವಲ ರೋಗದ ಲಕ್ಷಣಗಳನಷ್ಟೇ ಉಪಚರಿಸುತ್ತಾ ಅದರ ಮೂಲವನ್ನು ಕಡೆಗಣಿಸುವ ಕಸರತ್ತಾಗಿದೆ. ಈ ಹಿನ್ನೆಲೆಯಲ್ಲಿಯೇ ಅನಿವಾರ್ಯವಾಗಿ ಅಣ್ಣಾ ತಂಡಕ್ಕೆ ಕಾರ್ಪೊರೇಟ್ ವಲಯದ ಮತ್ತು ಮೇಲ್ಮಧ್ಯಮ ವರ್ಗದ ಕಾರ್ಪೊರೇಟ್ ನೌಕರರ ಬೆಂಬಲವನ್ನು ಅನುಮಾನಿಸಬೇಕಿದೆ. ತನ್ನ ನೌಕರರಿಗೆ ತಮ್ಮದೇ ಸಂಘಟನೆ ರೂಪಿಸಿಕೊಳ್ಳುವ, ತನ್ನ ಹಕ್ಕುಗಳಿಗಾಗಿ ಪ್ರತಿಭಟಿಸುವ ಕನಿಷ್ಟ ಹಕ್ಕನ್ನೂ ಪ್ರತ್ಯಕ್ಷ/ಪರೋಕ್ಷವಾಗಿ ನಿರಾಕರಿಸುವ ಕಾರ್ಪೊರೇಟ್ ಕಂಪನಿಗಳು ಅಣ್ಣಾ ತಂಡದ ಹೋರಾಟವನ್ನು ಬೆಂಬಲಿಸುವ ಸಲುವಾಗಿ ತನ್ನ ನೌಕರರಿಗೆ ಬಿಡುವು ಮಾಡಿಕೊಟ್ಟು ಫ್ರೀಡಂ ಪಾರ್ಕ್‌ಗೆಗೆ ಕಳಿಸುವುದು ಅರಿಯಲಾಗದ ದೊಡ್ಡ ರಹಸ್ಯವೇನಲ್ಲ. ‘ಭ್ರಷ್ಟಾಚಾರ ವಿರುದ್ಧ ಭಾರತ’ ಹೋರಾಟಕ್ಕೆ ಲಕ್ಷಾಂತರ ರೂಪಾಯಿಗಳ ದೇಣಿಗೆ ನೀಡುತ್ತಿರುವುದು ಇಂತಹ ಹಲವಾರು ಕಾರ್ಪೊರೇಟ್ ಕಂಪನಿಗಳೇ.
  4. ಈ ಜನಲೋಕಪಾಲ ಮಸೂದೆ ಸರ್ಕಾರೇತರ ಸಂಸ್ಥೆ(ಎನ್.ಜಿ.ಓ.)ಗಳನ್ನೂ ತನ್ನ ವ್ಯಾಪ್ತಿಯಿಂದ ಹೊರಗಿಡಲು ಬಯಸುತ್ತದೆ. ಎಲ್ಲೋ ಕೆಲವು ಎನ್.ಜಿ.ಓ.ಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆಯಾದರೂ ಇಂದಿನ ಮುಕ್ಕಾಲುವಾಸಿ ಎನ್.ಜಿ.ಓ.ಗಳು ದುಡ್ಡು ಮಾಡುವ ಸಲುವಾಗಿಯೇ ಹುಟ್ಟಿಕೊಳ್ಳುತ್ತವೆಂಬ ವಿಷಯ ಎಲ್ಲರಿಗೂ ತಿಳಿದಿರುವ ಒಂದು ತೆರೆದ ರಹಸ್ಯವಷ್ಟೆ. ಲಕ್ಷಾಂತರ, ಕೋಟ್ಯಾಂತರ ರೂಗಳನ್ನು ನಾನಾ ಮೂಲಗಳಿಂದ (ವಿದೇಶಿ ದೇಣಿಗೆಯೂ ಸೇರಿದಂತೆ) ಸಾರ್ವಜನಿಕ ಉದ್ದೇಶಗಳಿಗಾಗಿ ದೇಣಿಗೆಯಾಗಿ ಪಡೆವ ಈ ಸಂಸ್ಥೆಗಳಿಗೆ ಉತ್ತರದಾಯಿತ್ವವಿರಬೇಕಲ್ಲವೇ? ಎನ್.ಜಿ.ಓ.ಗಳ ಬಹುತೇಕ ದೇಣಿಗೆ ಕಾರ್ಪೊರೇಟ್ ಮೂಲಗಳಿಂದ ಬರುವುದು ಸಹಾ ಈ ಅಪವಿತ್ರ ವರ್ತುಲವನ್ನು ಹಿರಿದಾಗಿಸುತ್ತದೆ. ಅಣ್ಣಾ ತಂಡದ ಅರವಿಂದ ಕೇಜ್ರಿವಾಲ, ಕಿರಣ್ ಬೇಡಿ ತಮ್ಮದೇ ಎನ್.ಜಿ.ಓ.ಗಳನ್ನು ಹೊಂದಿರುವುದು ಮತ್ತು ಈ ತಂಡ ಎನ್.ಜಿ.ಓ.ಗಳನ್ನು ಜನಲೋಕಪಾಲದ ವ್ಯಾಪ್ತಿಗೆ ತರುವುದನ್ನು ವಿರೋಧಿಸುವುದು ಸಹಜವಾಗಿಯೇ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.
  5. ಕೋಟಗಟ್ಟಲೆ ಸಾರ್ವಜನಿಕ ಹಣವನ್ನು ಕೂಡಿಟ್ಟಿರುವ ಮತ್ತು ಅನೇಕ ರಾಜಕಾರಣಿಗಳ ಕಪ್ಪು ಹಣಕ್ಕೆ ದೇಸೀ ಸ್ವಿಸ್ ಬ್ಯಾಂಕ್‌ಗಳಾಗಿರುವ ಮಠಗಳು, ಧಾರ್ಮಿಕ ಕೇಂದ್ರಗಳ ಭ್ರಷ್ಟಾಚಾರದ  ಜನಲೋಕಪಾಲದ ಕಣ್ಣಿಗೇ ಕಾಣದಿರುವುದು ಹೇಗೆ?

ಮೂರನೆಯದಾಗಿ – ಒಂದು ಗಳಿಗೆಯ ಮಟ್ಟಿಗೆ ಈ ಎಲ್ಲಾ ದೂರುಗಳನ್ನೂ, ಅನುಮಾನಗಳನ್ನೂ ಪಕ್ಕಕ್ಕಿಟ್ಟು, ಈ ಇಡೀ ಹೋರಾಟ ನಿಜಕ್ಕೂ ಭ್ರಷ್ಟಾಚಾರದ ವಿರುದ್ಧವೆಂದೂ, ಇದರಿಂದ ಭ್ರಷ್ಟಾಚಾರವನ್ನು ಸಾಕಷ್ಟು ಮಟ್ಟಿಗೆ ನಿಗ್ರಹಿಸಬಹುದೆಂದೂ ನಂಬೋಣ. ಹಾಗಿದ್ದಾಗ್ಯೂ ಈ ಹೋರಾಟದ ರೀತಿ ನಮ್ಮದೇ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಲೇವಡಿ ಮಾಡುವಂತಿದ್ದುದನ್ನು ಒಪ್ಪಬಹುದೇ?

ಜಂಟಿ ಸಮಿತಿಯ ಮೂಲಕ ಜನದನಿಯನ್ನು ನೇರವಾಗಿ ಸಂಸತ್ತಿಗೆ ತಲುಪಿಸಬಹುದಾದ ಒಂದು ಅಪರೂಪದ ಅವಕಾಶ ಅಣ್ಣಾ ಹಜಾರೆಗೆ ದೊರೆತರೂ, ತಮ್ಮ ದೂರದೃಷ್ಟಿಯ ಕೊರತೆಯಿಂದ ಅವರು ಇದನ್ನು ತುಂಬಾ ಅಪ್ರಬುದ್ಧವಾಗಿ ನಿರ್ವಹಿಸಿದಂತೆ ಕಾಣುತ್ತದೆ.

ಸಮಿತಿಯಲ್ಲಿ ಸರ್ಕಾರ ಮತ್ತು ಅಣ್ಣಾ ತಂಡದ ನಡುವೆ ಸಮನ್ವಯ ಸಾಧ್ಯವಾಗದೇ ಹೋದಾಗ ತಾನೇ ಒಂದು ಕರಡು   ಮಸೂದೆ ರಚಿಸಲು ಮುಂದಾದ ಅಣ್ಣಾ ತಂಡ, ಅದನ್ನು ನಿಜವಾದ ಅರ್ಥದಲ್ಲಿ ಜನರ ಲೋಕಪಾಲ ಮಸೂದೆಯಾಗಿ ರೂಪಿಸುವಲ್ಲಿ ಸೋತಿತೆಂದೇ ಹೇಳಬೇಕು. ಇಡೀ ದೇಶಕ್ಕೆ ಸಂಬಂಧಿಸಿದ, ಅದರಲ್ಲೂ ಭ್ರಷ್ಟಾಚಾರದಂತಾ ಆಳ ಬೇರುಗಳುಳ್ಳ ವಿಷಯದಲ್ಲಿ ಮಸೂದೆ ರಚಿಸುವಾಗ ದೇಶದ ವಿವಿಧ ಭಾಗಗಳ ಜನರ, ಪರಿಣಿತರ ಜೊತೆಗೆ ಚರ್ಚಿಸಿ ಅದನ್ನು ರೂಪಿಸಬೇಕಿತ್ತು. ಅದನ್ನು ಜನರ ನಡುವೆ ಒಯ್ದು ಸಾರ್ವಜನಿಕ ಅರಿವು ಮೂಡಿಸುವ ಬಹಿರಂಗ ಚರ್ಚೆಗೆ ಒಡ್ಡಿ, ಒಂದು ಉತ್ತಮ ಮಸೂದೆಯನ್ನಾಗಿ ಬೆಳೆಸಬೇಕಿತ್ತು. ಅಂತಹ ಒಂದು ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಚರ್ಚೆಗೆ ಇಟ್ಟಾಗ ಅದಕ್ಕೊಂದು ಸಮಗ್ರತೆ ಬರುತ್ತಿತ್ತು. ಅದು ದೇಶದ ಒಟ್ಟೂ ಜನರ ಅಭಿಪ್ರಾಯ ಮಂಡನೆಯಾಗಿರುತ್ತದಾದ್ದರಿಂದ ಸಹಜವಾಗಿಯೇ ಸರ್ಕಾರಕ್ಕೆ ಅದನ್ನು ಅನುಮೋದಿಸುವ ಒತ್ತಡವೇರ್ಪಡುತಿತ್ತು. ಇಷ್ಟಾಗಿಯೂ ಒಂದು ಪ್ರಬಲ ಮಸೂದೆ ಅಂಗೀಕಾರವಾಗದೇ ಇದ್ದಿದ್ದರೆ ತಿದ್ದುಪಡಿಗಳ ಮೂಲಕ ಅದನ್ನು ಬಲಪಡಿಸಲು ತಂತಮ್ಮ ಕ್ಷೇತ್ರದ ಜನ ಪ್ರತಿನಿಧಿಗಳ ಮೇಲೆ ಜನರೇ ಒತ್ತಡ ಹೇರುವಂತಾ ಪ್ರಜಾಸತ್ತಾತ್ಮಕ ಮಾರ್ಗದ ಬಗ್ಗೆ ಯೋಚಿಸಬಹುದಿತ್ತು. ಆದರೆ ಅಣ್ಣಾ ತಂಡಕ್ಕೆ ಇದಾವುದಕ್ಕೂ ವ್ಯವಧಾನವೇ ಇದ್ದಂತೆ ತೋರಲಿಲ್ಲ.

ಆದರೆ ಇಂತಹ ಒಂದು ಮಹತ್ವದ ವಿಷಯ ಮತ್ತು ಹೋರಾಟವನ್ನು ಹೀಗೆ ಹಾದಿ ತಪ್ಪಿಸುವಲ್ಲಿ ಪ್ರಸ್ತುತ ಕೇಂದ್ರ ಸರ್ಕಾರದ ಧೋರಣೆಗಳು ಮತ್ತು ತಿಳಿಗೇಡಿತನ, ಎಲ್ಲ ರಾಜಕೀಯ ಪಕ್ಷಗಳ ಅನುಕೂಲಸಿಂಧು ರಾಜಕಾರಣ ಮತ್ತು ಅವಕಾಶವಾದಿ, ಬೇಜವಾಬ್ದಾರಿ ಮಾಧ್ಯಮಗಳ ಪಾತ್ರವೂ ಅಷ್ಟೇ ಇದೆ.

ಒಂದು ಪ್ರಬಲ ಭ್ರಷ್ಟಾಚಾರಿ ವಿರೋಧೀ ಮಸೂದೆ ತರುವ ವಿಷಯದಲ್ಲಿ ಅಪ್ರಾಮಾಣಿಕವಾದ ಕೇಂದ್ರ ಸರ್ಕಾರ, ತನ್ನ ನ್ನು ಶಾಂತಿಯುತವಾಗಿ ಆಗ್ರಹಿಸುವುದನ್ನೂ ಸಹಿಸದೆ ಉಪವಾಸ ಕೂರುವ ಮೊದಲೇ ಅಣ್ಣಾರನ್ನು ಬಂಧಿಸಿ ತನ್ನ ದಮನಕಾರಿ ಮನೋಭಾವ ಪ್ರದರ್ಶಿಸಿತು. ಶಾಂತಿಯುತವಾಗಿ ಬೇರೆ ಬೇರೆ ಹೋರಾಟಗಳಲ್ಲಿ ತೊಢಗಿಕೊಂಡಿದ್ದವರಿಗೂ ತಮ್ಮ ಯಾವ ಹೋರಾಟಗಳಿಗೂ ಯಾವುದೇ ಸರ್ಕಾರ ಸ್ಪಂದಿಸದೇ ಇರುವುದು ಒಂದು ರೀತಿಯ ಹತಾಶೆ ಮೂಡಲು ಕಾರಣವಾಗಿತ್ತು. ಅಂತಹ ಸಂದರ್ಭದಲ್ಲಿಯೇ ನಡೆದ ಈ ಘಟನೆ ಜನರನ್ನು ‘ನಾವು ಹೀಗಲ್ಲದೆ ಮತ್ತೇನು ಮಾಡಿ ರಾಜಕಾರಣಿಗಳಿಗೆ ಚುರುಕು ಮುಟ್ಟಿಸಲು ಸಾಧ್ಯ’ ಎಂಬ ಒಂದು ತಪ್ಪಾದ ಚಿಂತನಾ ಕ್ರಮಕ್ಕೆ ದೂಡಿತು. ಕಾಂಗ್ರೆಸ್ಸಿನ ಕಪಿಲ್ ಸಿಬಾಲ್, ಮನೀಶ್ ತಿವಾರಿಯಂತಹವರು ಬಾಲಿಶ ಹೇಳಿಕೆಗಳನ್ನು ನೀಡುವುದು, ಮತ್ತದನ್ನು ಹಿಂಪಡೆಯುವುದು ಇಂತಹ ಅಪ್ರಬುದ್ಧ ನಡವಳಿಕೆಗಳು ಜನರಲ್ಲಿ ಗೊಂದಲ ಹೆಚ್ಚಿಸಿತು.

Anna_Hazare

Anna_Hazare

ಕಾಂಗ್ರೆಸ್ ಜನಲೋಕಪಾಲದ ವಿರೋಧಿ ಎಂದು ಅಣ್ಣಾ ತಂಡ ಟೀಕಿಸುತ್ತಿದ್ದಾಗ ಕಾಂಗ್ರೆಸ್‌ನ ದಮನಕಾರಿ ನಿಲುವನ್ನು ಟೀಕಿಸುವ ನೆಪದಲ್ಲಿ ರಂಗಕ್ಕಿಳಿದ ಬಿ.ಜೆ.ಪಿ. ಜನರ ಭ್ರಷ್ಟಾಚಾರೀ ವಿರೋಧವನ್ನು ಕಾಂಗ್ರೆಸ್ ವಿರೋಧವನ್ನಾಗಿಸಿ ರಾಜಕೀಯ ಲಾಭ ಗಳಿಸುವ ಹುನ್ನಾರದಲ್ಲಿ ತೊಡಗಿತು. ಅಷ್ಟಕ್ಕೂ ಯು.ಪಿ.ಎ.ಗೆ ಲೋಕಸಭೆಯಲ್ಲಿ ಬಹುಮತವಿದ್ದರೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ಬಹುಮತವಿದೆ. ಆದರೆ ಜನಲೋಕಪಾಲದ ಬಗ್ಗೆ  ವಿರೋಧ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸುವ ಕೆಲಸವನ್ನು ಅಣ್ಣಾ ತಂಡ ಮಾಡಲಿಲ್ಲ. ಕೊನೆಗೆ ಟಿ. ವಿ. ವಾಹಿನಿಯೊಂದು ಜನಲೋಕಪಾಲದ ಬಗ್ಗೆ ನಿಮ್ಮ ನಿಲುವೇನೆಂದು ಬಿ.ಜೆ.ಪಿ.ಯನ್ನು ಜಗ್ಗಿಸಿ ಕೇಳಿದಾಗ “ನಮಗೂ ಜನಲೋಕಪಾಲದ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಒಪ್ಪಿಗೆಯಿಲ್ಲ” ಎಂದು ಹೇಳಿಯೂ ಹೇಳದ ಹಾಗೆ ನುಣಿಚಿಕೊಂಡಿದ್ದನ್ನ ಗಮನಿಸಬೇಕಿದೆ.

ಎಲ್ಲೋ ಕೆಲವು ಅಪವಾದಗಳನ್ನು ಹೊರತುಪಡಿಸಿ ಮಾಧ್ಯಮಗಳು ಈ ಇಡೀ ಪ್ರಸಂಗವನ್ನು ಕಾಂಗ್ರೆಸ್ ವರ್ಸಸ್ ಅಣ್ಣಾ ಎಂಬಂತೆ ಬಾಲಿಶವಾಗಿ ( ಅಥವಾ ಪ್ರಜ್ಙಾಪೂರ್ವಕವಾಗಿ) ಚಿತ್ರಿಸಿದವು. ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಅಥವಾ ತಮ್ಮ ಕಾರ್ಪೊರೇಟ್ ದೊರೆಗಳ ಹಿತಕಾಯುವುದನ್ನೇ ಪರಮ ಕರ್ತವ್ಯವಾಗಿಸಿಕೊಂಡಿರುವ ಮಾಧ್ಯಮಗಳು ಈ ವಿಷಯದ ಬಗ್ಗೆ ಜನರನ್ನು ಆಳವಾದ ಚಿಂತನೆಗೆ ಹಚ್ಚುವ ಬದಲಿಗೆ, ದೇಶಭಕ್ತಿ ಎಂದರೆ ಭ್ರಷ್ಟಾಚಾರವನ್ನು ವಿರೋಧಿಸುವುದು; ಭ್ರಷ್ಟಾಚಾರವನ್ನು ವಿರೋಧಿಸುವುದೆಂದರೆ ಅಣ್ಣಾ ಟೊಪ್ಪಿ ತೊಟ್ಟು, ಮೇಣದ ಬತ್ತಿ ಹಿಡಿದು ಸಾಗುವುದು, ಎಂಬಂತ ತೆಳು ಚಿಂತನೆಗಳನ್ನೇ ಹಬ್ಬಿಸಿದವು.

ಇನ್ನು ಅಣ್ಣಾ ತಂಡ ಗಾಂಧೀಜಿಯವರ ಉಪವಾಸ ಸತ್ಯಾಗ್ರಹದಂತಹ ಅಹಿಂಸಾತ್ಮಕ ಅಸ್ತ್ರವನ್ನು ಅದರ ಪಾವಿತ್ರ್ಯತೆ, ಘನತೆಗಳ ಅರಿವೇ ಇಲ್ಲದೆ ಒಂದು ಬೆದರಿಕೆಯ ತಂತ್ರವಾಗಿ ಬಳಸುವುದು, ಚರ್ಚೆ, ಸಂವಾದಗಳ ಪ್ರಸ್ತುತತೆಯನ್ನೇ ಕಡೆಗಣಿಸಿ, ತಾನು ಪ್ರಸ್ತಾಪಿಸಿದ ಮಸೂದೆಯನ್ನೇ ಸಂಸತ್ತು ಅಂಗೀಕರಿಸಬೇಕಂದು ಆಗ್ರಹಿಸುವುದು, ಅದಕ್ಕೊಂದು ಗಡುವು ವಿಧಿಸಿ ಇಡೀ ಸಂಸತ್ತು ತನ್ನ ಅಣತಿಯಂತೆ ನಡೆಯಬೇಕೆಂದು ಸರ್ವಾಧಿಕಾರಿ ಧೋರಣೆ ತೋರುವುದು; ಇದೆಲ್ಲದರ ಒಟ್ಟಾರೆ ಪರಿಣಾಮ, ನಮ್ಮ ಸಂವಿಧಾನ, ಪ್ರಜಾಪ್ರಭುತ್ವದ ತತ್ವಗಳ ನಂಬಿಕೆಯ ತಳಪಾಯವನ್ನೇ ಅಲುಗಿಸುವ ಪ್ರಯತ್ನ. ಇದನ್ನು ಒಪ್ಪಿದರೆ ‘ಹೋರಾಟದ ಕಾರಣ ಒಳ್ಳೆಯದಿದ್ದರೆ ಆಯಿತು, ಮಾರ್ಗದ ಬಗ್ಗೆ ಚಿಂತಿಸಬೇಕಿಲ್ಲ’ ಎನ್ನುವಂತ ತಪ್ಪು ಸಂದೇಶ ರವಾನಿಸಿದಂತಲ್ಲವೇ?

ಹಾಗಾದರೆ ಭ್ರಷ್ಟಾಚಾರವನ್ನು ತೊಲಗಿಸುವುದಾದರೂ ಹೇಗೆ? ಇದು ಅಹೋರಾತ್ರಿ ಆಗಿಬಿಡುವ ಕೆಲಸವಲ್ಲ ಮತ್ತು ಸಿನಿಕರಾಗುವ ಅವಶ್ಯಕತೆಯೂ ಇಲ್ಲ. ಭ್ರಷ್ಟಾಚಾರದ ನಿರ್ಮೂಲನೆಗೆ ಒಂದು ಪ್ರಬಲ ಕಾನೂನು ರಚಿಸುವ ಜೊತೆಗೇ ಚುನಾವಣಾ ಸುಧಾರಣೆಯೂ ಆಗಬೇಕಾದ್ದು ಅವಶ್ಯ. ಅಲ್ಲದೆ ಜನ ಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸವೂ ಆಗಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ “ಭ್ರಷ್ಟಾಚಾರ ಸಹಾ ಒಂದು ಮಿತಿಯಲ್ಲಿದ್ದರೆ ಒಂದು ಒಪ್ಪಿತ ಮೌಲ್ಯ” ಎಂಬ ಮನೋಭಾವ ಬದಲಾಗಬೇಕಾದುದು ಬಹು ಮುಖ್ಯ.

(ಚಿತ್ರಕೃಪೆ: ವಿಕಿಪೀಡಿಯ)

ಪೋಸ್ಕೊ ಕಣ್ಣು ಕಪ್ಪತ್ತ ಗುಡ್ಡದ ಮೇಲೆ

-ಹು.ಬಾ. ವಡ್ಡಟ್ಟಿ

ಗದಗ ತಾಲೊಕಿನ ಬಿಂಕದ ಕಟ್ಟಿಯಿಂದ ಮುಂಡರಗಿ ತಾಲೊಕಿನ ಶಿಂಗಟಾಲೊರು ವೀರಭದ್ರೇಶ್ವರ ದೇವಸ್ಧಾನದವರೆಗೆ ಹಬ್ಬಿರುವ  ಕಪ್ಪತ್ತ ಗುಡ್ಡದ ಸಾಲು 64.ಕಿ.ಮಿ.ಉದ್ದ, 4 ರಿ0ದ 5 ಕಿ.ಮಿ. ಅಗಲ, ಹಾಗೂ 18000 ಹೆಕ್ಟೇರ್ ಪ್ರದೇಶದಲ್ಲಿ ಕಾಡು ವ್ಯಾಪಿಸಿದೆ. “ಎಪ್ಪತ್ತ ಗುಡ್ಡ ನೋಡುವದಕ್ಕಿಂತ ಕಪ್ಪತ್ತ ಗುಡ್ಡ ನೋಡಬೇಕು,”  “ಸಸ್ಯಕಾಶಿ” ಎ0ಬ  ವಿಶೇಷಣೆಯನ್ನು ಸಹ ಹೊಂದಿದೆ. “ಕಪ್ಪತ್ತ ಮಳೆಯೇ ಕಾರಿ ಮಳೆಯೇ,” ಎಂಬ ಮಳೆಯನ್ನು ಸ್ತುತಿಸುವ ಜಾನಪದ ಹಾಡುಗಳು ಕಪ್ಪತ್ತ ಗಿರಿಯು ಮಳೆಯನ್ನು ತರುತ್ತದೆ ಎನ್ನುವುದಾಗಿದೆ.

ಇಂತಹ ಸಸ್ಯ ಸಂಕುಲದ ಕಪ್ಪತ್ತ ಗುಡ್ಡವು ಅಪಾರವಾದ ಜೀವ ವೈವಿಧ್ಯವುಳ್ಳ ಔಷಧೀಯ ಸಸ್ಯವನ್ನು ಒಳಗೊಂಡಿದೆ. ಕನಿಷ್ಠ 1800 ರಷ್ಟು ಔಷಧೀಯ ಸಸ್ಯ ಪ್ರಬೇಧಗಳು ಈ ಬೆಟ್ಟ ಸಾಲಿನಲ್ಲಿ ಇವೆಯೆಂದು ಅಂದಾಜು ಮಾಡಲಾಗಿದೆ. ಇ0ತಹ ವಿಶೇಷವಾದ ಸಸ್ಯ ರಾಶಿಯ ಕಪ್ಪತ್ತ ಗುಡ್ಡವು ಅಪಾರವಾದ ಖನಿಜ ಸಂಪತ್ತು ಹೊಂದಿದ್ದು, ಅದರಲ್ಲಿ ಬಹುಮುಖ್ಯವಾಗಿ ಕಬ್ಬಿಣದ ಅದಿರು, ಬಂಗಾರ ನಿಕ್ಷೇಪವು ಇದೆ. ಕಬ್ಬಿಣದ ಗಣಿಗಾರಿಕೆ 1970 ದಶಕದಲ್ಲಿಯೇ ಪ್ರಾರ0ಭವಾಗಿದ್ದರೂ, ಅದಕ್ಕಿಂತಲೂ ಮುಂಚಿತವಾಗಿ 1830ರ ದಶಕದಲ್ಲಿ ಬ್ರೀಟಿಷ ಭೂವಿಜ್ಞಾನಿ ನಿಲ್ಬೋಲ್ಟ್ ಎ0ಬುವನು ಬಂಗಾರದ ನಿಕ್ಷೇಪವಿರುವದನ್ನು ಪತ್ತೆ ಹಚ್ಚಿದ್ದರಿಂದಾಗಿ ಬ0ಗಾರದ ಗಣಿಗಾರಿಕೆಯು ಪ್ರಾರ0ಭಗೊಂಡಿತ್ತು. ನಷ್ಟದ ಪರಿಣಾಮವಾಗಿ ಆಗ ಆ ಗಣಿಗಾರಿಕೆ ಸ್ಥಗಿತಗೊಂಡಿದ್ದು, ಅದರ ಕುರುಹುಗಳನ್ನು ಈಗಲು  ನೋಡಬಹುದಾಗಿದೆ.

ಕಬ್ಬಿಣ ಅದಿರಿನ  ಅಕ್ರಮ ಗಣಿಕಾರಿಗೆಯು 2005ರ ನಂತರ ಚುರುಕುಗೊಂಡು, ಹಳೆಯ ಅದಿರಿನ ಗಣಿಗಾರಿಕೆಯ ಪ್ರದೇಶದಿಂದ ಹರಿದು ಬಂದ ಮಣ್ಣನ್ನು ಸಾಗಿಸುವ ನೆಪದಲ್ಲಿ ಅವ್ಯಾಹತವಾಗಿ  ಕಪ್ಪತ್ತ ಗುಡ್ಡದ ಕಬ್ಬಿಣದ ಅದಿರನ್ನು ಲೂಟಿ ಹೊಡೆಯುವ ಅಕ್ರಮ ಕೆಲಸಕ್ಕೆ ರಾಜಕೀಯ ಪುಡಾರಿಗಳು ಕೈ ಹಚ್ಚಿರುವದು ಕಪ್ಪತ್ತ ಗುಡ್ಡದ ನಾಶಕ್ಕೆ ಕಾರಣವಾಗಿದೆ.

ಲಕ್ಷಾಂತರ ಟನ್ನ ಕಬ್ಬಿಣದ ಅದಿರಿನ ಮೇಲೆ ಕಣ್ಣು ಹಾಕಿರುವ ಅಕ್ರಮ ಗಣಿ ಲೂಟಿಕೋರರು ಪೋಸ್ಕೊ ಸ್ಟೀಲ್ ಕಂಪನಿಯನ್ನು ಈ ಭಾಗದಲ್ಲಿ ಸ್ಧಾಪಿಸಿ ಕಪ್ಪತ್ತ ಗುಡ್ಡವನ್ನು ಸರ್ವನಾಶ ಮಾಡುವ ತಂತ್ರವನ್ನು ಹೆಣೆದು ಅದಕ್ಕೆ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿದೆ.

ಜೀವ ವೈವಿಧ್ಯತೆಯ ಸಸ್ಯಸಂಕುಲ, ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿರುವ ಅದಿರಿನ ನಿಕ್ಷೇಪವನ್ನು ಅಭಿವೃದ್ದಿ ನೆಪದಲ್ಲಿ ಲೂಟಿ ಮಾಡಲು  ಹೊರಟಿರುವ ಅಭಿವೃದ್ದಿಯ ಹರಿಕಾರರು ಪೋಸ್ಕೊ ಸ್ಟೀಲ್  ಈ ಭಾಗಕ್ಕೆ ಬರುವುದರಿಂದ ಗುಡ್ಡಕ್ಕೆ ಯಾವದೇ ಧಕ್ಕೆಯಾಗುವದಿಲ್ಲವೆಂದು ಸುಳ್ಳಿನಮಾತು ಹೇಳುವುದು ಎಷ್ಟುರ ಮಟ್ಟಿಗೆ ಸರಿ? ಹಾಗಾದರೇ ಪೋಸ್ಕೊಗೆ ಕಬ್ಬಿಣದ  ಅದಿರನ್ನು ಎಲ್ಲಿ0ದ ತ0ದು ಸ್ಟೀಲ್ ಉತ್ಪಾದನೆ ಮಾಡುವ ಹುನ್ನಾರ ನಡೆಸಿದ್ದಾರೆ ಎನ್ನುವ ಒಳಗುಟ್ಟನ್ನು ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳು  ಬಾಯಿಬಿಡಲೇ ಇಲ್ಲಾ.

ಪೋಸ್ಕೊ ಸ್ಧಾಪನೆಯಾಗುತ್ತಿದ್ದ ಹಳ್ಳಿಗುಡಿಯಿಂದ ಕಪ್ಪತ್ತ ಗುಡ್ಡದ ಅಂತರ ಬರೀ 10ಕಿ ಮೀ ಆಗುತ್ತಿತ್ತು. ಪೋಸೊ ಉಗುಳಲಿದ್ದ ವಿಷಕಾರಿ ಹೊಗೆಯು ಕಪ್ಪತ್ತ ಗುಡ್ಡದ ಔಷಧೀಯ ಸಸ್ಯಗಳ ಮೇಲೆ ದುಷ್ಪರಿಣಾಮ ಬೀರುವದಿಲ್ಲವೆನ್ನುವದು ಯಾವ ಗ್ಯಾರಂಟಿ? ಸೂಕ್ಷ್ಮ ಸಸ್ಯಸಂಕುಲವು ನಾಶ ಹೊಂದಿದರೆ ನಮಗೆ ನಷ್ಟವೇ ಹೊರತು ಬೇರೆಯವರಿಗಲ್ಲ. ಪರಿಸರ ಸಂರಕ್ಷಣೆಯ ಅರಿವು ಇಲ್ಲದೆ ಬರೀ ಹಸಿರು ನೋಟುಗಳು ಮೇಲೆ ಕಣ್ಣಿಟ್ಟರೆ ಪರಿಸರ ಯಾವ ಲೆಕ್ಕ? ಎಲ್ಲವೂ ಬರೀ ಹಣದ ಲೆಕ್ಕಾಚಾರವಾಗುತ್ತದೆ.

(ಚಿತ್ರಗಳು: ಲೇಖಕರವು)

ಅಣ್ಣಾ ಹೋರಾಟದ ಅಡ್ಡ ಪರಿಣಾಮಗಳು!!

– ಭೂಮಿ ಬಾನು

ಅಣ್ಣಾ ಹಜಾರೆಯ ಉಪವಾಸ-ಚಳವಳಿ ದುಷ್ಟರಿಣಾಮಗಳು ಇಷ್ಟು ಬೇಗ ಗೋಚರಿಸುತ್ತವೆ ಯಾರೂ ಊಹಿಸಿರಲಿಲ್ಲವೇನೋ? ಗುಜರಾತ್ ನರಮೇಧದಲ್ಲಿ ಮೈತುಂಬಾ ರಕ್ತ ಅಂಟಿಸಿಕೊಂಡ ನರೇಂದ್ರ ಮೋದಿ ಸದ್ಭಾವನೆಗಾಗಿ ಉಪವಾಸ ಕೂತರು. ಮೋದಿಯ ಉಪವಾಸ ವಿರುದ್ಧವಾಗಿ ಶಂಕರ್ ಸಿಂಘ್ ವಾಗೇಲ ತಾನೂ ಊಟ ಮಾಡೋಲ್ಲ ಅಂದರು. ಅಷ್ಟೇ ಅಲ್ಲ, ಇಲ್ಲಿ ಕರ್ನಾಟಕದಲ್ಲಿ ಕಬ್ಬಿಣದ ಅದಿರನ್ನು ಅಗೆದು ಮಾರಾಟ ಮಾಡಲು ಅನುಮತಿ ನೀಡಬೇಕೆಂದು ಶ್ರೀರಾಮುಲು ಸ್ಪಾಂಜ್ ಕಬ್ಬಿಣ ಕಾರ್ಖಾನೆಯವರ ಪರವಾಗಿ ಉಪವಾಸ ಕೂತರು.

ಅಣ್ನಾ ಹಜಾರೆಯ ಉಪವಾಸ ಅಡ್ಡ ಪರಿಣಾಮಗಳೇ ಇವೆಲ್ಲ. ಕೊಲೆ ಆರೋಪಿಗಳು, ಕಳ್ಳ, ಸುಳ್ಳರೆಲ್ಲಾ ಉಪವಾಸ ಕುಂತು ತಮ್ಮ ಬೇಡಿಕೆ ಇಡುವಂತಾದರು. ಹಣ್ಣಿನ ರಸ ಕುಡಿದು ಉಪವಾಸ ಅಂತ್ಯ ಮಾಡುವ ದೃಶ್ಯಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ ಮಾಮೂಲಿಯಾಗಿಬಿಟ್ಟಿವೆ. ಅಣ್ಣಾ ಹೋರಾಟವನ್ನು ಮೊದಲಿನಿಂದಲೂ ಒಂದು ಶಂಕೆಗಣ್ಣಿನಿಂದಲೇ ನೋಡುತ್ತಾ ಬಂದವರಿಗೆ ಈ ಅಡ್ಡ ಪರಿಣಾಮಗಳು ನಿರೀಕ್ಷಿತ. ತಾತ್ವಿಕ ಸ್ಪಷ್ಟತೆ ಇಲ್ಲದ ಹೋರಾಟಗಳು ಟಿಆರ್ಪಿ ಹಿಂದೆ ಬಿದ್ದಿರುವ ಮಾಧ್ಯಮಗಳ ಕಾರಣ ಅನಿರೀಕ್ಷಿತ ಪ್ರಚಾರ ಗಿಟ್ಟಿಸಿದ ಕಾರಣ ಇಂತಹ ಅವಘಡಗಳು ಸಹಜ. ನೋಡ ನೋಡುತ್ತಲೇ ಕೆಲವೇ ದಿನಗಳ ಅಂತರದಲ್ಲಿ ಉಪವಾಸ ಪರಿಣಾಮಕಾರಿ ಪಿಆರ್ ಟೂಲ್ ಆಗಿ ರೂಪ ಪಡೆಯಿತು.

ಸಮಾಜದಲ್ಲಿ ಸದ್ಭಾವನೆ ಮೂಡಿಸಲು ಕೋಮು ಸೌಹಾರ್ದ ಆಡಳಿತದಿಂದ ಮಾತ್ರ ಎಂದು ತಿಳಿಯಬೇಕಿದ್ದ ಮುಖ್ಯಮಂತ್ರಿಗೆ ಅಣ್ಣಾ ಹಜಾರೆ ಉಪವಾಸ ಮಾಡಿದರೆ ಸಾಕು ಎನ್ನುವ ಪಾಠ ಹೇಳಿಕೊಟ್ಟರು. ಮೋದಿಯನ್ನು ಎದುರಿಸಲು ಜನರ ಮಧ್ಯೆ ಹೋಗಿ ಪಾರ್ಟಿ ಕಟ್ಟಬೇಕು ಎಂಬುದನ್ನು ಮರೆತು ಕಾಂಗ್ರೆಸ್ ನವರೂ ಅದೇ ತಂತ್ರ ಅನುಸರಿಸಿದರು.

ಇವರೆಲ್ಲರ ಹೊರತಾಗಿ ಅಣ್ಣಾ ಹೋರಾಟದ ಸಂಪೂರ್ಣ ಲಾಭ ಪಡೆಯಲು ಹೊರಟವರು ಎಲ್.ಕೆ. ಅಡ್ವಾಣಿ. ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ನಡೆಸಲಿದ್ದಾರೆ. ಆ ಮೂಲಕ ಪ್ರಧಾನಿಯಾಗುವ ತಮ್ಮ ಕನಸನ್ನು refresh ಮಾಡಿದ್ದಾರೆ ಎನ್ನುವುದು ಅನೇಕರ ಲೆಕ್ಕಾಚಾರ. ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ರಥಯಾತ್ರೆ ಹೊರಟಿದ್ದವರು ಒಂದು ಸಾಮಾಜಿಕ ಪಿಡುಗಿನ ವಿರುದ್ಧ ಯಾತ್ರೆ ಹೊರಡುವ ಮಾತನಾಡಿದ್ದಾರಲ್ಲಾ ಎನ್ನುವುದಷ್ಟೇ ಸಮಾಧಾನದ ಸಂಗತಿ.

ಪಾಟೀಲ ಪುಟ್ಟಪ್ಪನವರ ಬಾಲ ಲೀಲೆಗಳು

 – ಡಾ. ಎನ್. ಜಗದೀಶ್ ಕೊಪ್ಪ

ಹುಬ್ಬಳ್ಳಿ ಧಾರವಾಡ ನಗರಕ್ಕೆ ಬಂದು ದಶಕವೇ ಕಳೆದು ಹೋಯಿತು. ಇಲ್ಲಿಗೆ ಬಂದ ಮೇಲೆ ನನಗೆ ಜಿಗುಪ್ಸೆ ಮೂಡಿಸಿದ ಇಬ್ಬರು ವ್ಯಕ್ತಿಗಳೆಂದರೆ, ಒಬ್ಬರು, ವಾಮನ ಬೇಂದ್ರೆ. ಮತ್ತೊಬ್ಬರು ಪಾಟೀಲ ಪುಟ್ಟಪ್ಪ.

ಕನ್ನಡದ ಅನನ್ಯ ಕವಿ ಬೇಂದ್ರೆಯವರ ಸಾಹಿತ್ಯವನ್ನು ಯಾರಿಗೂ ಕೊಡದೆ, ಈ ತಲೆಮಾರಿಗೆ ಬೇಂದ್ರೆಯವರ ಕವಿತೆ ಸಿಗದ ಹಾಗೆ ನೋಡಿಕೊಂಡ ಅವಿವೇಕಿ ವಾಮನ ಬೇಂದ್ರೆ.  ಬೇಂದ್ರೆಯವರ ಕವಿತೆಗಳನ್ನ ಕಲಸು ಮೆಲೋಗರ ಮಾಡಿ, ಔದಂಬರ ಗಾಥೆ ಹೆಸರಿನಲ್ಲಿ ಬೇಂದ್ರೆ ಕುಟುಂಬದ ವಂಶವೃಕ್ಷ ಸಹಿತ ಪ್ರಕಟಿಸಿ ಅದನ್ನು ಮೈಸೂರು ಒಂಟಿ ಕೊಪ್ಪಲು ಪಂಚಾಗ ಮಾಡಿದ ಪುಣ್ಯ ಪುರುಷನೀತ, ಶತಮಾನದ ಕವಿತೆಗಳ ಸಂಕಲನಕ್ಕೂ ಸಹ  ಕವಿತೆ ಕೊಡಲಿಲ್ಲ. ಅಷ್ಟೇ ಅಲ್ಲ, ನನ್ನೆದುರಿಗೆ ಹಂಪಿ ವಿ.ವಿ. ಉಪಕುಲಪತಿಯಾಗಿದ್ದ ಎಂ.ಎಂ. ಕಲುಬುರ್ಗಿ ಹಾಗು ಮಲ್ಲೇಪುರಂ ವೆಂಕಟೇಶ್ ’ಸಮಗ್ರ ಕಾವ್ಯ ತರುತ್ತೇವೆ,’ ಎಂದು ಹೇಳಿ 5 ಲಕ್ಷ ಗೌರವ ಸಂಭಾವನೆ ನೀಡಲು ಹೋದಾಗ ತಿರಸ್ಕರಿಸಿದ ಮಹಾಶಯ ಈತ.

ಇನ್ನು ಪಾಪು ಹೆಸರಿನ ಪುಟ್ಟಪ್ಪನವರದೇ ಒಂದು ದೊಡ್ಡ ವೃತ್ತಾಂತ. 1967 ರಿಂದ ಧಾರವಾಡದ ಕನ್ನಡದ ಶಕ್ತಿ ಕೇಂದ್ರವಾದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಅದನ್ನು 1940 ರ ದಶಕದ ತಾಲ್ಲೂಕು ಕಚೇರಿಯಂತೆ ಮಾಡಿದ ಕೀರ್ತಿ ಇವರದು. 93 ವರ್ಷವಾಗಿದ್ದರೂ, ಇನ್ನೂ ಅಧಿಕಾರ ಬಿಟ್ಟು ಕೊಟ್ಟಿಲ್ಲ. ಜೊತೆಗೆ ಹಾವೇರಿಯಲ್ಲಿರುವ ವಿ.ಕೃ. ಗೋಕಾಕ್ ಟ್ರಸ್ಟ ನ ಅಧ್ಯಕ್ಷಗಿರಿ ಬೇರೆ. ಕಳೆದ 5 ವರ್ಷದಿಂದ  ಇದುವರೆಗೆ ಹಾವೇರಿಯಲ್ಲಿ ಸಭೆ ನಡೆದಿಲ್ಲ. ಸದಸ್ಯರು, ಸಂಸ್ಕೃತಿ ಇಲಾಖೆಯ ಅಧಿಕಾರಿ ಪುಟ್ಟಪ್ಪನವರ ಮನೆಗೇ ಬಂದು ಸಭೆ ನಡೆಸಿ ಹೋಗುತ್ತಾರೆ.

ಇಂತಹ ಚರಿತ್ರೆಯ ಪುಟ್ಟಪ್ಪ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ “ಚಂದ್ರಶೇಖರ ಕಂಬಾರ ಪ್ರಶಸ್ತಿಗೆ ಯೋಗ್ಯರಲ್ಲ, ಈ ಪ್ರಶಸ್ತಿ ಬೈರಪ್ಪನವರಿಗೆ ಬರಬೇಕಾಗಿತ್ತು,” ಎಂದಿದ್ದಾರೆ. ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಿರಲಿ ವಯಸ್ಸಾದ ನಂತರ ತೆರೆಯ ಹಿಂದಕ್ಕೆ ಸರಿದು ತಾನು ತನ್ನ ಜೀವಿತದಲ್ಲಿ ಸಂಪಾದಿಸಿದ ಘನತೆ, ಗೌರವಗಳನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ, ಆತನ ಚಟುವಟಿಕೆಗಳನ್ನು ಬಾಲ ಲೀಲೆಗಳು ಎಂದು ಸಮಾಜ ಗುರುತಿಸಿಬಿಡುತ್ತದೆ.

ಕಳೆದ ಎರಡು ವರ್ಷದ ಹಿಂದೆ ನನ್ನನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿ ಎಂದು ಬಿ.ಜೆ,ಪಿ. ಸರ್ಕಾರದ ಬೆನ್ನು ಹತ್ತಿದ್ದರು. ಕಡೆಗೆ ಇವರ ಲೇಖನಗಳ ಪ್ರಕಟನೆಗೆ 50 ಲಕ್ಷ ರೂ ನೀಡಿ ಯಡಿಯೂರಪ್ಪ ಕೈ ತೊಳೆದುಕೊಂಡರು.

ಬಹುಶ: ಇವರ ಇಂತಹ ವರ್ತನೆಗಳನ್ನು ಮುಂಜಾಗ್ರತವಾಗಿ ಗ್ರಹಿಸಿ ನಮ್ಮ ಕನ್ನಡನಾಡು ಇವರಿಗೆ ಪಾಪು ಎಂದು ಹೆಸರಿಟ್ಟಿರಬೇಕು.