Daily Archives: March 25, 2013

ಬೆತ್ತಲಾದಷ್ಟೂ ಮಾಧ್ಯಮ ಮಾನವಂತವಾಗುತ್ತದೆ!

– ಶ್ರಮಣ

“ಸಮಯ” ಸುದ್ದಿ ವಾಹಿನಿ ಮುಖ್ಯಸ್ಥರಾದ ಮಂಜುನಾಥ್ ಅವರಿಗೆ ಬಹುಪರಾಕು ಸಲ್ಲಲೇಬೇಕು. ಒಂದು ವಾರಗಳ ಕಾಲ ಅವರು ‘ಮಾಧ್ಯಮ ಭ್ರಷ್ಟರ ಬೆತ್ತಲು ಅಭಿಯಾನ’ ನಡೆಸಿದರು. ಅಭಿನಂದನೆ ಸಲ್ಲಬೇಕಾದ್ದು ಅದಕ್ಕಲ್ಲ, ಮಾಧ್ಯಮ ಲೋಕದ ಯಾವ ಭ್ರಷ್ಟನನ್ನೂ ‘ಬೆತ್ತಲು ಮಾಡದೆಯೂ’ ಅಭಿಯಾನ ಮಾಡಿದರಲ್ಲಾ ಅದಕ್ಕೆ! Corruption-in-News-Mediaಇದೊಂಥರಾ ಊಟ-ಉಪಚಾರ ಮಾಡಿಕೊಂಡೇ ಕೆಲವರು ಧರಣಿ ಕುಂತು ತಮ್ಮದು ‘ಉಪವಾಸ ಸತ್ಯಾಗ್ರಹ’ ಅಂತಾರಲ್ಲ ಹಾಗೆ.

ಲಂಚ ಪಡೆದ ಪ್ರಕರಣದಲ್ಲಿ ಬೆತ್ತಲಾದ ಶಾಸಕ ಸಂಪಂಗಿಯ ಹಾಗೆ, ಮಾಡಿದ ತಪ್ಪಿಗೆ ಜೈಲು ಅನುಭವಿಸಿ ಬೆತ್ತಲಾದ ಯಡಿಯೂರಪ್ಪನ ಹಾಗೆ, ಅದ್ಯಾಕೆ ಒಬ್ಬೇ ಒಬ್ಬೇ ಪತ್ರಕರ್ತ ಈ ಅಭಿಯಾನದಲ್ಲಿ ಬೆತ್ತಲಾಗಲಿಲ್ಲ. ಹಾಗಿದ್ದರೂ, ಆ ಕಾರ್ಯಕ್ರಮ ಸರಣಿಗೆ ‘ಬೆತ್ತಲು ಅಭಿಯಾನ’ ಅಂತ ಹೆಸರೇಕೆ ಸ್ವಾಮಿ?

ಸಮಯ ಸುದ್ದಿ ವಾಹಿನಿಯ ಬಳಗ ಎಡವಿದ್ದೇ ತಮ್ಮ ಕಾರ್ಯಕ್ರಮದ ಟೈಟಲ್ ಕಾರ್ಡ್‌ನಿಂದಾಗಿ. ಆ ತಲೆಬರಹದಡಿಯಲ್ಲಿ ಮಾಧ್ಯಮ ಲೋಕದೊಳಗಿನ ಭ್ರಷ್ಟಾಚಾರವನ್ನು ಚರ್ಚಿಸಿದ್ದಾರೆಯೇ ಹೊರತು, ಯಾರನ್ನೂ ಬೆತ್ತಲು ಮಾಡಿಲ್ಲ. ಅಂತಹದೊಂದು ಚರ್ಚೆಯಾಗಿದ್ದು ಶ್ಲಾಘನೀಯ. ಆದರೆ, ನಮಗೆ ಗೊತ್ತಿರುವ ಭ್ರಷ್ಟ ಪತ್ರಕರ್ತರೇನಾದರೂ ಈ ಅಭಿಯಾನದಲ್ಲಿ ಬೆತ್ತಲಾಗುತ್ತಾರಾ ಎಂದು ನಿರೀಕ್ಷಿಸಿದವರಿಗೆ ಮೋಸವಾಯಿತು.

ತಮ್ಮ ಸುದ್ದಿ ವಾಹಿನಿ ವಿಶಿಷ್ಟವಾದ ನೀತಿ ಸಂಹಿತೆ ಜಾರಿಗೆ ತಂದಿದೆ ಎಂದು ಸಮಯ ಬೀಗುತ್ತಿದೆ. Samaya-TVಹಾಗಂತ ಮುರುಗೇಶ್ ನಿರಾಣಿಯ ಸುದ್ದಿಗಳನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುತ್ತೇವೆಂದು ಅವರು ಹೇಳಲು ಸಾಧ್ಯವೆ? ಅದು ಸಾಧುವಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಅಂತಹ ‘ಆಕುಪೇಶನಲ್ ಹಜಾರ್ಡ್ಸ್’ ಎಲ್ಲಾ ಸುದ್ದಿ ವಾಹಿನಿಗಳಿಗೆ ಇದ್ದದ್ದೇ. ಜನಶ್ರೀ ಸುದ್ದಿ ವಾಹಿನಿಗೆ ಶ್ರೀರಾಮುಲು ಎಂದಿಗೂ ‘ಸ್ವಾಭಿಮಾನಿ’ಯೇ. ಕಸ್ತೂರಿ ಸುದ್ದಿ ವಾಹಿನಿ ಪಾಲಿಗೆ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅತ್ಯಂತ ಜನಪ್ರಿಯ ರಾಜಕಾರಣಿಗಳು. ಆ ಮಿತಿಗಳನ್ನು ಆಯಾ ಸುದ್ದಿ ವಾಹಿನಿಗಳು ಮೀರಿ ಸುದ್ದಿ ಮಾಡುತ್ತವೆ ಎಂದು ನಿರೀಕ್ಷಿಸದ ಮಟ್ಟಿಗೆ ಪ್ರೇಕ್ಷಕ ಜಾಗೃತನಾಗಿದ್ದಾನೆ.

ಚರ್ಚೆಯಾಗದ ವಿಷಯಗಳು:
ಸಮಯ ನಡೆಸಿದ ಕಾರ್ಯಕ್ರಮಗಳಲ್ಲಿ ಚರ್ಚೆಯಾಗದೇ ಉಳಿದ ಹಲವು ಸಂಗತಿಗಳಿವೆ. ಅವುಗಳ ಮೂಲಕವೂ ಭ್ರಷ್ಟಾಚಾರವನ್ನು ನೋಡುವ ಸಾಧ್ಯತೆಗಳಿವೆ. ಮೂರ್ನಾಲ್ಕು ಸುದ್ದಿ ಸಂಸ್ಥೆಗಳು ನಿಯಮಿತವಾಗಿ ತನ್ನ ನೌಕರರಿಗೆ ಸಂಬಳ ಕೊಡುತ್ತಿಲ್ಲ. ಸಂಬಳ ಕೊಟ್ಟರೂ, ವರದಿಗಾರರು ಅಲೆದಾಡಿ ಸುದ್ದಿ ಸಂಗ್ರಹಿಸಿದ ಖರ್ಚಿನ ಬಿಲ್ಲುಗಳನ್ನು ಕ್ಲಿಯರ್ ಮಾಡುತ್ತಿಲ್ಲ.

ಒಂದು ಸುದ್ದಿ ವಾಹಿನಿಯಂತೂ ‘ಬರುವ ಜೂನ್ ವರೆಗೆ ಸಂಬಳದ ಮಾತು ಕೇಳಬೇಡಿ..’ ಎಂಬ ಸೂಚನೆಯನ್ನು ತನ್ನ ಸಿಬ್ಬಂದಿಗೆ ಹೇಳಿದೆ. kannada-news-channelsಕೆಲವು ದಿನಗಳ ಹಿಂದೆ ಸಂಬಳ ನೀಡಲು ತಿಂಗಳುಗಟ್ಟಲೆ ತಡಮಾಡಿದ ಕಾರಣ ಹಠಾತ್ ಪ್ರತಿಭಟನೆಗೆ ಇಳಿದ ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ಕಿತ್ತು ಹಾಕಿದ ವರದಿಗಳಿವೆ. ಇತ್ತೀಚಿನ ಚಾನೆಲ್ ಒಂದು ತನ್ನ ಜಿಲ್ಲಾ ಕೆಮರಾಮನ್‌ಗಳಿಗೆ ನಿಗದಿ ಮಾಡಿರುವ ಸಂಬಳವಂತೂ, ತೀರಾ ಕಡಿಮೆ. ನಾಲ್ಕು – ಐದು ಸಾವಿರ ರೂಗಳಿಗೆ ಒಬ್ಬ ವ್ಯಕ್ತಿ ತನ್ನ ಸಂಸಾರ ನಡೆಸಲು ಸಾಧ್ಯವೆ? ಎರಡು-ಮೂರು ತಿಂಗಳಾದರೂ ಸಂಬಳ ನೀಡದಿದ್ದರೆ ಮನೆ ಮಾಲೀಕನಿಗೆ ಬಾಡಿಗೆ ಕೊಡುವುದು ಹೇಗೆ? ಮಕ್ಕಳ ಸ್ಕೂಲ್ ಫೀ ಕಟ್ಟುವುದು ಹೇಗೆ?

ಈಗಂತೂ ಚುನಾವಣೆ ಬಿಸಿ. ವರದಿಗಾರರು ಸದಾ ಓಡಾಡುತ್ತಲೇ ಇರಬೇಕು. ಕೈಯಿಂದ ಖರ್ಚು ಮಾಡಿಕೊಂಡು ಸುದ್ದಿ ಮಾಡಲು ಹೋಗೋಣವೆಂದರೆ ಸಂಬಳವಿಲ್ಲ. ಅಪ್ಪಿ ತಪ್ಪಿ ಹೋದರೂ, ಆದ ಖರ್ಚನ್ನು ಆಫೀಸಿನವರು ತುಂಬುತ್ತಾರೆಂಬ ವಿಶ್ವಾಸವಿಲ್ಲ. ಇದು ಕೇವಲ ಸುದ್ದಿವಾಹಿನಿಗಳ ಸಮಾಚಾರವಲ್ಲ. ಕನ್ನಡದ ಘನತೆವೆತ್ತ ಪತ್ರಿಕೆಯೊಂದರ ತಾಲೂಕು ಮಟ್ಟದ ಬಿಡಿ ಸುದ್ದಿ ಸಂಗ್ರಹಕಾರರಿಗೆ ನಿಗದಿ ಮಾಡಿರುವ ಮಾಸಿಕ ಗೌರವಧನ ರೂ 750 ಮಾತ್ರ ಎಂದರೆ ನೀವು ವಿಧಿ ಇಲ್ಲದೆ ನಂಬಲೇ ಬೇಕು. ಅಂಗನವಾಡಿ ಸಹಾಯಕರು ಸಂಘ ಕಟ್ಟಿಕೊಂಡು ತಮ್ಮ ಗೌರವಧನಕ್ಕೆ ಹೋರಾಡುವ ಅವಕಾಶವಿದೆ. ಈ ತಾಲೂಕು ಮಟ್ಟದ ಪತ್ರಕರ್ತರಿಗೇನಿದೆ?

ಇಂತಹ ಸಂದರ್ಭಗಳಲ್ಲಿಯೇ ಭ್ರಷ್ಟಾಚಾರದ ನಾನಾ ಮುಖಗಳು ಅನಾವರಣಗೊಳ್ಳುವುದು. ರಾಜಕೀಯ ಪಕ್ಷದ ಸಮಾವೇಶ ನಡೆಸುವವರು ಪತ್ರಕರ್ತರನ್ನು ಕರೆಯುತ್ತಾರೆ. ಕೇವಲ ಕರೆದರೆ ಅವರು ಬರುವ ಸ್ಥಿತಿಯಲ್ಲಿಲ್ಲ ಎನ್ನುವ ಸಂಗತಿ ಕೂಡಾ ಬಹುತೇಕ ರಾಜಕೀಯ ಕಾರ್ಯಕರ್ತರಿಗೆ ಗೊತ್ತು. ಪಕ್ಷದ ಖರ್ಚಿನಲ್ಲಿ ವಾಹನ ವ್ಯವಸ್ಥೆ ಮಾಡುತ್ತಾರೆ. ಆಗ ಸಹಜವಾಗಿ ವಾಹನ ವ್ಯವಸ್ಥೆ ಮಾಡಿ ಕಾರ್ಯಕ್ರಮ ಮಾಡಿದವರ ಸುದ್ದಿ ಮಾತ್ರ ಪ್ರಸಾರವಾಗುತ್ತದೆ. ಹಾಗಾದರೆ, ಬರದಿಂದ ತತ್ತರಿಸಿದ ರೈತ, ಶೋಷಣೆಗೆ ಬಲಿಯಾದ ದಲಿತ ಅಥವಾ ಮಹಿಳೆ – ಇಂತಹವರ ಸುದ್ದಿಗೆ ವಾಹನ ವ್ಯವಸ್ಥೆ ಮಾಡುವವರಾರು?

ಮುಖ್ಯವಾಗಿ ನೀತಿ ಸಂಹಿತೆ ಬೇಕಿರುವುದು ಚಾನೆಲ್ ಮುಖ್ಯಸ್ಥರಿಗೆ. tv-mediaಒಂದು ಸಂಸ್ಥೆ ತೆರೆಯುವ ಮುನ್ನ ‘ರಾಜಕೀಯ ಲಾಭವನ್ನಷ್ಟೇ’ ಅಲ್ಲದೆ ಆರ್ಥಿಕವಾಗಿ ತನ್ನ ಸಂಸ್ಥೆಯನ್ನು, ಸಿಬ್ಬಂದಿಯನ್ನು ಸುಸ್ಥಿತಿಯಲ್ಲಿಡಲು ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಬೇಕಿದೆ. ಚಾನೆಲ್ ನಡೆಸಲು ಕೈ ಹಾಕುವ ಹಿರಿಯ ಪತ್ರಕರ್ತರು ‘ಸಾಹಸಿ ಪತ್ರಕರ್ತರಾಗಿ’ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು. ಆದರೆ ಅವರ ಕೈ ಕೆಳಗೆ ದುಡಿಯುವ ಪತ್ರಕರ್ತರು ಸದಾ ‘ಸಾಲಗಾರ’ರಾಗಿಯೇ ಉಳಿಯುತ್ತಾರಲ್ಲ? ತನ್ನ ಸಿಬ್ಬಂದಿ ಅದ್ಧೂರಿಯಾಗಿ ಅಲ್ಲ, ಕನಿಷ್ಠ ವೃತ್ತಿ ಗೌರವ ಕಾಪಾಡಿಕೊಂಡು ಜೀವಿಸಲು ಬೇಕಾಗುಷ್ಟು ಸಂಬಳ ಕೊಡುವ ಜವಾಬ್ದಾರಿಯನ್ನು ಸುದ್ದಿ ಸಂಸ್ಥೆಗಳ ಮಾಲೀಕರು ಹೊರಬೇಕು.

ಇಷ್ಟು ಕಡಿಮೆ ಸಂಬಳವಾದರೂ, ಅವರೇಕೆ ಕೆಲಸಕ್ಕೆ ಸೇರಿಕೋಬೇಕು ಎಂದು ಅನೇಕರು ಕೇಳುತ್ತಾರೆ. ಇದಕ್ಕೆ ಎರಡು ಕಾರಣಗಳನ್ನು ತಕ್ಷಣಕ್ಕೆ ಗುರುತಿಸಬಹುದು. ಅನೇಕರು ತಾವು ಪತ್ರಕರ್ತರಾಗಬೇಕು, ಎಷ್ಟೇ ಕಷ್ಟವಾದರೂ ಪತ್ರಕರ್ತರೇ ಆಗಬೇಕು ಎಂದು ಕೊಂಡವರು ಸಂಬಳಕ್ಕಿಂತ ಕ್ಷೇತ್ರದೆಡೆಗಿನ ಆಸಕ್ತಿಯಿಂದ ಬಂದಿರುತ್ತಾರೆ. ಇನ್ನೊಂದು ಕಾರಣ – ಜೀವನ ನಡೆಸಲು ಒಂದು ಕೆಲಸ ಬೇಕು ಎಂಬ ಅನಿವಾರ್ಯತೆ.

ಒಂದು ಉದಾಹರಣೆಯನ್ನು ನಿರೂಪಿಸಲು ಬಯಸುತ್ತೇನೆ. ಒಬ್ಬ ಜಿಲ್ಲಾ ವರದಿಗಾರ ತನ್ನ ಮೇಲಿನ ಸಿಬ್ಬಂದಿಯವರ ಸೂಚನೆ ಮೇರೆಗೆ ತನ್ನ tv-mediaವಾಹಿನಿಗೊಂದು ಬಾಡಿಗೆ ಕಚೇರಿ ಹುಡುಕಿದ. ಮಾಲೀಕರೊಂದಿಗೆ ಬಾಡಿಗೆ ಮಾತುಕತೆಯಾಯಿತು. ಮೇಲಿನವರಿಂದಲೂ ಅದಕ್ಕೆ ಒಪ್ಪಿಗೆ ಸಿಕ್ಕಿತು. ಇನ್ನೇನು ತಿಂಗಳ ಬಾಡಿಗೆ ಕೊಡುವ ಸಂದರ್ಭ ಬಂತು, ಆ ಹೊತ್ತಿಗೆ ಆ ಮೇಲಿನ ಅಧಿಕಾರಿ ಅಥವಾ ಸಹೋದ್ಯೋಗಿ ಬದಲಾಗಿದ್ದ. ಹಿಂದಿನವರು ನಿಗದಿ ಮಾಡಿದ್ದ ಬಾಡಿಗೆಯನ್ನು ಹೊಸಬ ಒಪ್ಪಲು ಸಿದ್ಧನಿಲ್ಲ. ಮಾಲೀಕರೊಂದಿಗೆ ಮಾತನಾಡಿ ಮತ್ತಷ್ಟು ಕಡಿಮೆ ಮಾಡಿಸಿ ಎಂದು ಸೂಚಿಸಿದ. ಪೀಕಲಾಟಕ್ಕೆ ಸಿಲುಕಿದ ವರದಿಗಾರ, ಮಾಲೀಕರಿಂದ ಮುಜುಗರ ಅನುಭವಿಸುವುದನ್ನು ತಪ್ಪಿಸಿಕೊಳ್ಳಲು, ತನ್ನ ಕೈಯಿಂದಲೆ ಒಂದಷ್ಟು ಹಾಕಿ ಹಳೆಯ ಬಾಡಿಗೆಯನ್ನೇ ಮುಂದುವರೆಸಿದ. ಅಲ್ಲಿಗೇ ಕತೆ ಮುಗಿಯಲಿಲ್ಲ. ಆ ಮೇಲಿನ ಹುದ್ದೆಗೆ ಕೆಲವೇ ದಿನಗಳಲ್ಲಿ ಮತ್ತೊಬ್ಬ ಬಂದ. ತನ್ನ ಹಿಂದಿನವನಂತೆಯೇ ಈತನೂ ಮತ್ತೆ ಬಾಡಿಗೆ ಬಗ್ಗೆ ತಕರಾರು ತೆಗೆದ, ಮತ್ತಷ್ಟು ಕಡಿಮೆ ಮಾಡಿ ಎಂದ. ಪರಿಣಾಮವಾಗಿ ವರದಿಗಾರನೇ ತನ್ನ ಅಲ್ಪ ಸಂಬಳದಲ್ಲಿಯೇ ಹೊರಲಾರದ ಹೊರೆಯನ್ನು ಹೊತ್ತು ಏಗಬೇಕಾಯಿತು.

ಅಂತಹ ಪತ್ರಕರ್ತರು ಅನೇಕರಿದ್ದಾರೆ. ಅದಕ್ಕೆ ಕಾರಣ ಅವರು ತಮ್ಮ ವೃತ್ತಿಗೆ ಕೊಡುವ ಗೌರವ ಮತ್ತು ಅದರೆಡೆಗೆ ಇರುವ ಅದಮ್ಯ ಒಲವು. ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ಭರಪೂರ ಕನಸುಗಳನ್ನು ಹೊತ್ತ ಅನೇಕರು ದುಡಿಯುತ್ತಿದ್ದಾರೆ. ತಮ್ಮ ಕನಿಷ್ಠ ಆದಾಯದಲ್ಲಿಯೇ ತಮ್ಮ ಅಗತ್ಯಗಳನ್ನು ಕಡಿಮೆ ಮಾಡಿಕೊಂಡು ನಿಷ್ಠೆಯಿಂದ ಬದುಕುತ್ತಿದ್ದಾರೆ. ಅವರಿಗೆ ಯಾವ ನೀತಿ ಸಂಹಿತೆಯ ಅಗತ್ಯವೂ ಇಲ್ಲ. ಪತ್ರಿಕೋದ್ಯಮದಲ್ಲಿ ಇವತ್ತಿಗೂ ಒಂದಿಷ್ಟು ಪ್ರಾಮಾಣಿಕತೆ ಉಳಿದಿರೋದ್ದಕ್ಕೆ ಅವರೇ ಕಾರಣ.

ಮಾಧ್ಯಮ ಕ್ಷೇತ್ರದ ಒಳಗಿನ ಹುಳುಕುಗಳಿಗೆ ಮಾಧ್ಯಮದ ಬಾಗಿಲು ಇತ್ತೀಚೆಗಷ್ಟೆ ತೆರೆದುಕೊಳ್ಳುತ್ತಿವೆ. ಬಹುಶಃ ಇತ್ತೀಚಿನ ದಿನಗಳಲ್ಲಿ ಅಪರೂಪ ಎಂಬಂತೆ ಪ್ರಜಾವಾಣಿ ದಿನ ಪತ್ರಿಕೆ ಹಾಸನ ಪತ್ರಕರ್ತರ ಸಂಘ ಕುರಿತ ಸುದ್ದಿಯೊಂದನ್ನು ಪ್ರಕಟಿಸಿತು. ಇದೇ ಹೊತ್ತಿಗೆ ಸಮಯ ವಾಹಿನಿ ಒಂದು ಸರಣಿ ಪ್ರಸಾರ ಮಾಡಿತು. ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳಲ್ಲಿ ಆಗಾಗ ಇನ್-ಹೌಸ್ ಸಂಗತಿಗಳು ಮುನ್ನೆಲೆಗೆ ಬಂದರೆ ಒಳಿತು. ಮಾಧ್ಯಮ ಬೆತ್ತಲಾದಷ್ಟೂ ಮಾನವಂತವಾಗುತ್ತದೆ!