Daily Archives: July 1, 2015

ನಮ್ಮ ಗ್ರಾಮ ಪಂಚಾಯಿತಿಗಳು ಎಷ್ಟು ಸಬಲ?


– ರವಿ 


[ಚಿಂತಕ ಮತ್ತು ಲೇಖಕ ಡಿ.ಎಸ್.ನಾಗಭೂಷಣರು ಸಂಪಾದಿಸುತ್ತಿರುವ “ಹೊಸ ಮನುಷ್ಯ” ಮಾಸಿಕಕ್ಕೆ ಇತ್ತೀಚೆಗೆ ಈ ಲೇಖನ ಬರೆದಿದ್ದೆ. ಇಲ್ಲಿ ಲಗತ್ತಿಸಿರುವ ಚಿತ್ರದಲ್ಲಿ “ಹೊಸ ಮನುಷ್ಯ” ಮಾಸಿಕದ ವಿವರಗಳು ಮತ್ತು ಸಂಪರ್ಕ ಸಂಖ್ಯೆಗಳು ಲಭ್ಯವಿವೆ. ಸಾಧ್ಯವಾದರೆ ದಯವಿಟ್ಟು ಅದಕ್ಕೆ ಚಂದಾದಾರರಾಗಿ. ರವಿ]

***

hosamanushyaಅಧಿಕಾರ ವಿಕೇಂದ್ರೀಕರಣ ಮತ್ತು ಸ್ವರಾಜ್ಯದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎರಡು-ಮೂರು ದಶಕಗಳಿಂದ ನಡೆಯುತ್ತಿರುವ ಗ್ರಾಮ-ತಾಲ್ಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆಗಳು ಕ್ರಾಂತಿಕಾರಕ ಮತ್ತು ಪ್ರಗತಿಶೀಲ ಹೆಜ್ಜೆಗಳು. ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸುವ ಮತ್ತು ಬೇರುಮಟ್ಟದಲ್ಲಿ ಬಲಪಡಿಸುವ ಈ ಪದ್ಧತಿ ಹಲವಾರು ಎಡರುತೊಡರುಗಳ ನಡುವೆ ಕರ್ನಾಟಕದಲ್ಲಿ ನಿರಂತರವಾಗಿ ನಡೆದು ಬರುತ್ತಿದೆ. ಅದಕ್ಕಾಗಿ ನಾವೆಲ್ಲ ಒಂದು ಮಟ್ಟದವರೆಗಾದರೂ ತೃಪ್ತಿ ಮತ್ತು ಸಂತೋಷ ಪಡಬೇಕಿದೆ.

ಆದರೆ, ಈಗಿರುವ ಪಂಚಾಯಿತಿ ವ್ಯವಸ್ಥೆ ಎಲ್ಲಾ ರೀತಿಯಿಂದಲೂ ಸರಿಯಾಗಿದೆಯೇ ಎಂದರೆ, ಎಲ್ಲವೂ ಸರಿಯಿಲ್ಲ ಎನ್ನುವುದೇ ತಕ್ಕ ಉತ್ತರ. ಸುಧಾರಣೆಗಳು ಆಗುತ್ತಲೇ ಇವೇ, ಆಗುತ್ತಲೇ ಇರಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಣ್ಣಪುಟ ಸುಧಾರಣೆಗಳಷ್ಟೇ ಅಲ್ಲದೆ ಮೂಲಭೂತ ಬದಲಾವಣೆಗಳೂ ಆಗಬೇಕಿವೆ. ನಮ್ಮ ದೇಶದ “First Past The Post” ಚುನಾವಣಾ ವ್ಯವಸ್ಥೆ ಸಮಾಜದ ಎಲ್ಲಾ ವರ್ಗದವರಿಗೂ ಸರಿಯಾದ ಪ್ರಾತಿನಿಧ್ಯ ಕೊಡುತ್ತಿಲ್ಲ ಮತ್ತು ಅದನ್ನು “Proportional Representation” ವ್ಯವಸ್ಥೆಗೆ ಬದಲಾಯಿಸಬೇಕು ಎಂಬ ಕೂಗು ಇತ್ತೀಚಿನ ದಿನಗಳಲ್ಲಿ ಬಲವಾಗುತ್ತಿದೆ. ಹಾಗೆಯೇ ಪ್ರಧಾನಮಂತ್ರಿ/ಮುಖ್ಯಮಂತ್ರಿಗಳ ಆಯ್ಕೆಗೆ ಈಗಿನ ಸಂಸದೀಯ ವ್ಯವಸ್ಥೆಯ ಬದಲಿಗೆ ನೇರಆಯ್ಕೆ ವ್ಯವಸ್ಥೆ ಮಾಡಿದರೆ ಹೇಗೆ ಎನ್ನುವ ಪ್ರಶ್ನೆಗಳೂ ಎದ್ದೇಳುತ್ತಿವೆ. ಇಂತಹುದೇ ಪ್ರಶ್ನೆಗಳು ನಮ್ಮ ಗ್ರಾಮ ಪಂಚಾಯಿತಿಯ ವಿಚಾರಕ್ಕೂ ಆಗುತ್ತಿದೆ.

ಇದೆಲ್ಲದರ ಜೊತೆಗೆ ಮೂರು ದಶಕಗಳಿಂದ ಈ ಪಂಚಾಯಿತಿ ವ್ಯವಸ್ಥೆಯಲ್ಲಿ ಇರುವ ಕೆಲವು ಮೂಲಭೂತ ನ್ಯೂನತೆಗಳು ಹಾಗೆಯೇ hosamanushya-2ಉಳಿದುಕೊಂಡು ಬಂದಿದ್ದವು. ಪ್ರತಿ ಐದು ವರ್ಷಕ್ಕೊಮ್ಮೆ ಸ್ಥಾನಗಳ ಮೀಸಲಾತಿ ಬದಲಾವಣೆ ಮಾಡುವುದರಿಂದ ಬಹುತೇಕ ಗೆದ್ದ ಅಭ್ಯರ್ಥಿಗಳಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗುತ್ತಿರಲಿಲ್ಲ. ಹೀಗಾಗಿ ತನ್ನ ಊರು ಅಥವ ಕ್ಷೇತ್ರಕ್ಕಾಗಿ ಪ್ರಾಮಾಣಿಕವಾಗಿ, ಪರಿಣಾಮಕಾರಿಯಾಗಿ ಕೆಲಸ ಮಾಡಲೇಬೇಕಾದ ಅಗತ್ಯ ಇರಲಿಲ್ಲ. ಹೇಗಿದ್ದರೂ ಮುಂದಿನ ಚುನಾವಣೆಗೆ ಅವಕಾಶ ಇಲ್ಲ, ಏನೇ ಅಯೋಗ್ಯ ಕೆಲಸ ಮಾಡಿದರೂ, ಭ್ರಷ್ಟಾಚಾರ ಮಾಡಿದರೂ ನಡೆಯುತ್ತದೆ, ಮೌಲ್ಯಮಾಪನ ಆಗುವುದಿಲ್ಲ ಎನ್ನುವ ಸಂದರ್ಭ ಇತ್ತು. ಮತ್ತೆ ಕೆಲವು ಕಡೆ ತಾಂತ್ರಿಕ ಕಾರಣಗಳ ಗೊಂದಲದಿಂದಾಗಿ ಮಹಿಳಾ ಸದಸ್ಯರ ಸಂಖ್ಯೆ, ಅದರಲ್ಲೂ ಮೀಸಲು ಕ್ಷೇತ್ರಗಳಲ್ಲಿ ಶೇ.೭೫ ಮೀರಿದ ಉದಾಹರಣೆಗಳಿದ್ದವು. ಹಣದ ಹೊಳೆ, ಯಾವಾಗೆಂದರೆ ಆಗ ಅಧ್ಯಕ್ಷ/ಉಪಾಧ್ಯಕ್ಷರ ಬದಲಾವಣೆ, ಅವಧಿಯ ಅಧಿಕಾರ ಹಂಚಿಕೆ, ಅಧ್ಯಕ್ಷರೇ ಇಲ್ಲದೆ ಅಧಿಕಾರಿಗಳೇ ಆಡಳಿತ ನಿಭಾಯಿಸಬೇಕಿದ್ದ ಪರಿಸ್ಥಿತಿ, ಭ್ರಷ್ಟಾಚಾರ ಮತ್ತು ಅಕ್ರಮಗಳು; ಹೀಗೆ ಅನೇಕ ಗೊಂದಲ ಮತ್ತು ವಾಮಮಾರ್ಗಗಳಲ್ಲಿ ನಮ್ಮ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿದ್ದವು.

ಇದೆಲ್ಲವನ್ನೂ ಒಂದು ಒಳ್ಳೆಯ ಮಾರ್ಗಕ್ಕೆ ಬದಲಾಯಿಸಬೇಕು ಎಂದು ಈ ರಾಜ್ಯ ಸರ್ಕಾರ ತೀರ್ಮಾನಿಸಿದ್ದನ್ನು ನಾವು ಸ್ವಾಗತಿಸಬೇಕು. ಈಗಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಹೆಚ್.ಕೆ.ಪಾಟೀಲರು ಗ್ರಾಮೀಣ ವಿಚಾರಗಳ ಬಗ್ಗೆ ಆಸಕ್ತರಾಗಿರುವವರಷ್ಟೇ ಅಲ್ಲ, ಒಟ್ಟಾರೆಯಾಗಿ ಜನಪರ ಕಾಳಜಿ ಇರುವವರು. ಹಾಗೆಯೇ ಹಿಂದೆ ಜನತಾ ಪಕ್ಷದಲ್ಲಿದ್ದು, ಬೆಂಗಳೂರು ಜಿಲ್ಲಾಪಂಚಾಯಿತಿ ಅಧ್ಯಕ್ಷರಾಗಿ ಸಾಕಷ್ಟು ಕೆಲಸ ಮಾಡಿ, ಹೆಸರು ಮಾಡಿ, ಸಂಸದರೂ ಆಗಿದ್ದು ಈಗ ಕಾಂಗ್ರೆಸ್‌ನಲ್ಲಿರುವ ಸಿ.ನಾರಾಯಣಸ್ವಾಮಿಯವರೂ ಆಡಳಿತ ಪಕ್ಷದಲ್ಲೇ ಇರುವುದು ಈ ವಿಚಾರಕ್ಕೆ ಪ್ರೋತ್ಸಾಹ ಸಿಕ್ಕಂತಾಯಿತು. ಹಾಗಾಗಿ ಸರ್ಕಾರ ಕಳೆದ ವರ್ಷ ಮಾಜಿ ಸ್ಪೀಕರ್ ರಮೇಶ್‌ಕುಮಾರರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಸುಧಾರಣಾ ಶಿಫಾರಸುಗಳನ್ನು ಕೊಡಲು ಕೇಳಿಕೊಂಡಿತು. ಅದರಲ್ಲಿ ಪಂಚಾಯಿತಿ ವ್ಯವಸ್ಥೆಯಲ್ಲಿಯ ನ್ಯೂನತೆಗಳು ಮತ್ತು ಸುಧಾರಣೆಗಳ ಬಗ್ಗೆ ಅಪಾರ ಅಧ್ಯಯನ ಮಾಡಿರುವ ಸಿ.ನಾರಾಯಣಸ್ವಾಮಿಯವರು ಕೋರ್‌ಕಮಿಟಿಯ ಸದಸ್ಯರಾಗಿದ್ದರು.

ಈ ಸಮಿತಿ ನವೆಂಬರ್ ೭, ೨೦೧೪ರಲ್ಲಿ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತು. ಅದರಲ್ಲಿ ಒಟ್ಟು ಎಂಬತ್ತು ಶಿಫಾರಸುಗಳಿದ್ದವು. ಆದರೆ ಸರ್ಕಾರ ಇಲ್ಲಿಯವರೆಗೆ ಅದರಲ್ಲಿ ಕೇವಲ ಮೂರನ್ನು ತೆಗೆದುಕೊಂಡು, ಅದರ ಜೊತೆಗೆ ತನ್ನ ಕಡ್ಡಾಯ ಮತದಾನ ಶಿಫಾರಸನ್ನು ಸೇರಿಸಿ ಕಾಯ್ದೆ ತಿದ್ದುಪಡಿ ಮಾಡಿತು. ಸಮಿತಿ ವರದಿಯಲ್ಲಿ ಸರ್ಕಾರ ಸ್ವೀಕರಿಸಿದ ಅಂಶಗಳೆಂದರೆ;

  1. ಐದು ವರ್ಷಗಳ ಮಿಸಲು ಅವಧಿಯನ್ನು ಎರಡು ಅವಧಿಗೆ, ಅಂದರೆ ಹತ್ತು ವರ್ಷಕ್ಕೆ ಬದಲಾಯಿಸಿದ್ದು,
  2. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಿಸಿ, ೩೦ ತಿಂಗಳೊಳಗೆ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡದಿರುವುದು, ಮತ್ತು
  3. ಮಹಿಳಾ ಮೀಸಲಾತಿಗೆ ಸಂಬಂಧಿಸಿದ ನಿಯಮಗಳನ್ನು ವೈಚಾರಿಕವಾಗಿ ನಿಗದಿ ಪಡಿಸಿ ಮೀಸಲು ಸ್ಥಾನಗಳಲ್ಲಿ ಪುರುಷರಿಗೂ ಅವಕಾಶ ಹೆಚ್ಚಾಗುವಂತೆ ಮಾಡಿರುವುದು. (ಮಹಿಳಾ ಮೀಸಲಾತಿಯ ಗೊಂದಲದಿಂದಾಗಿ ಕಳೆದ ಬಾರಿಯ ಗ್ರಾಮಪಂಚಾಯಿತಿಗಳಲ್ಲಿ ರಾಜ್ಯದ ಒಟ್ಟಾರೆ ಎಸ್.ಸಿ/ಎಸ್.ಟಿ ಗಳಿಗೆ ಮೀಸಲಿದ್ದ ಸುಮಾರು ೧೬೦೦೦ ಸದಸ್ಯರಲ್ಲಿ ಸುಮಾರು ೧೩೦೦೦ ಸದಸ್ಯರು ಮಹಿಳೆಯರೇ ಆಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಜಿಲ್ಲಾ ಪಂಚಾಯಿತಿಯ ಸ್ಥಾನವೊಂದು ಕಳೆದ ಎರಡು ದಶಕಗಳಿಂದಲೂ ಮಹಿಳಾ ಎಸ್.ಟಿ. ಅಭ್ಯರ್ಥಿಗೇ ಮೀಸಲಾಗಿತ್ತು. ಇಂತಹವು ಈ ಬಾರಿಯ ತಿದ್ದುಪಡಿಗಳಿಂದಾಗಿ ಬದಲಾಗಿವೆ.)

ಆದರೆ, ಇನ್ನೂ ಹಲವು ಚುನಾವಣೆಗೆ ಸಂಬಂಧಿಸಿದ ಶಿಫಾರಸುಗಳನ್ನು ಸರ್ಕಾರ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಗೆ ಒಪ್ಪಿಕೊಂಡಿಲ್ಲ. ಚುನಾವಣೆಯಲ್ಲಿ ಹಣದ ಪ್ರಭಾವವನ್ನು ತಡೆಯಲು ಪಂಚಾಯಿತಿ ಚುನಾವಣಾ ಪ್ರಚಾರ ಸಭೆಗಳು ಮತ್ತು ಕರಪತ್ರಗಳ ವೆಚ್ಚವನ್ನು ಸರ್ಕಾರವೇ ಭರಿಸಿ, ಮದ್ಯ ಹಂಚಿ ಮತದಾರರಿಗೆ ಆಮಿಷ ಒಡ್ಡುವುದನ್ನು ತಡೆಯಲು ಚುನಾವಣೆ ಘೋಷಣೆಯಾದ ದಿನದಿಂದ ಮುಗಿಯುವವರೆಗೆgram-panchayat-elections ಮದ್ಯದಂಗಡಿಗಳನ್ನು ಬಂದ್‌ ಮಾಡಬೇಕು, ಆ ಪ್ರದೇಶದ ಮದ್ಯದಂಗಡಿಗಳ ಕೀಲಿಯನ್ನು ಜಿಲ್ಲಾಧಿಕಾರಿಗಳ ವಶದಲ್ಲಿ ಇರಿಸಬೇಕು ಎಂಬ ಶಿಫಾರಸನ್ನು ಅದು ಕಾರ್ಯಸಾಧುವಲ್ಲ ಎಂದು ಕೈಬಿಟ್ಟಿದೆ. ಹಾಗೆಯೇ, ಗ್ರಾಮಪಂಚಾಯಿತಿಯಲ್ಲಿ ಏಕಸದಸ್ಯ ವಾರ್ಡಿನ ಶಿಫಾರಸು. ಇವತ್ತಿನ ಗ್ರಾಮ ಪಂಚಾಯಿತಿ ವ್ಯವಸ್ಥೆಯಲ್ಲಿ ಮೀಸಲಾತಿಯ ಕಾರಣಕ್ಕಾಗಿ ಬಹುತೇಕ ಎಲ್ಲಾ ಜನ ಮತ್ತು ಲಿಂಗ ವರ್ಗಗಳಿಗೆ ಪ್ರಾತಿನಿಧ್ಯ ದೊರಕುತ್ತಿದೆ. ಅಷ್ಟರಮಟ್ಟಿಗೆ ಅದು ಸರಿ. ಆದರೆ, ಇದು ಒಂದು ಜಾತ್ಯತೀತ ವ್ಯವಸ್ಥೆಯನ್ನು ಬಲಪಡಿಸುವ ಬದಲಿಗೆ ಕೆಲವು ಸಂದರ್ಭಗಳಲ್ಲಿ ಜಾತಿವೈಷಮ್ಯಗಳನ್ನು ಹುಟ್ಟುಹಾಕುತ್ತಿದೆ. ಯಾವುದೇ ಒಂದು ಮೀಸಲಾತಿ ವರ್ಗದ ಅಭ್ಯರ್ಥಿ ಸಾಮಾನ್ಯ ವರ್ಗದ ಅಭ್ಯರ್ಥಿಗಿಂತ ಹೆಚ್ಚಿನ ಮತಗಳನ್ನು ಪಡೆದರೆ, ಆತ/ಆಕೆಯನ್ನು ಸಾಮಾನ್ಯ ವರ್ಗಕ್ಕೆ ವರ್ಗಾಯಿಸಿ ಮೀಸಲಾತಿ ವರ್ಗದಲ್ಲಿ ಇನ್ನೊಂದು ಹೆಚ್ಚಿನ ಅವಕಾಶ ಕೊಡುವಂತಹ ಕ್ರಮ ಇದೆ. ಇದರಿಂದ ರಾಜ್ಯದ ಹಲವಾರು ಕಡೆ ಮೇಲ್ಜಾತಿಗಳ ಜನ ಮೀಸಲು ಕ್ಷೇತ್ರದ ಅಭ್ಯರ್ಥಿಗಳಿಗೇ ಮತವನ್ನೇ ಹಾಕುತ್ತಿಲ್ಲ. ಒಂದು ಮತವನ್ನು ಮಿಸಲು ಮತ್ತು ಇನ್ನೊಂದು ಮತವನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಚಲಾಯಿಸಬೇಕಾದ ಸಂದರ್ಭದಲ್ಲಿ ತಮ್ಮ ಮತವನ್ನು ಕೇವಲ ಸಾಮಾನ್ಯ ಅಭ್ಯರ್ಥಿಗಳಿಗೆ ಮಾತ್ರ ನೀಡುತ್ತಿದ್ದಾರೆ. ಇದಕ್ಕೆ ಒಂದೇ ಮತಪತ್ರ ಇರುವುದೂ ಕಾರಣವಾಗುತ್ತಿದೆ. ಇವು ಕೇವಲ ಗೊಂದಲಗಳನ್ನಷ್ಟೇ ಅಲ್ಲ, ಇಡೀ ಊರಿಗೆ ಯಾವೊಬ್ಬ ಸಾಮಾನ್ಯ ವರ್ಗದ ಸದಸ್ಯನೂ ಇಲ್ಲದ ಪರಿಸ್ಥಿತಿ ನಿರ್ಮಿಸಿ ಮೇಲ್ಜಾತಿಗಳಲ್ಲಿ ಅತೃಪ್ತಿಯನ್ನೂ ಮೂಡಿಸುತ್ತಿದೆ. ಹಾಗೆಯೇ ಒಂದು ಊರಿನ ನಾಲ್ಕು ಜನ ಸದಸ್ಯರು ಆಯ್ಕೆಯಾದಾಗ, ಯಾರು ಯಾವ ವಾರ್ಡು/ಬೀದಿಯನ್ನು ಪ್ರತಿನಿಧಿಸುತ್ತಾರೆ ಎನ್ನುವ ಹಾಗೆ ಇಲ್ಲ. ಗ್ರಾಮಸ್ಥರು ನಾಲ್ಕೂ ಜನ ಸದಸ್ಯರನ್ನು ಸಂಪರ್ಕಿಸಬೇಕಾಗುತ್ತದೆ ಮತ್ತು ಯಾರೂ ಹೊಣೆಗಾರಿಕೆ ತೆಗೆದುಕೊಳ್ಳದ ಸ್ಥಿತಿಯೂ ಸೃಷ್ಟಿಯಾಗುತ್ತದೆ. ಮೇಲಿನ ಎರಡೂ ನ್ಯೂನತೆಗಳನ್ನು ಏಕಸದಸ್ಯ ವಾರ್ಡಿನ ಶಿಫಾರಸನ್ನು ಒಪ್ಪಿಕೊಂಡಿದ್ದರೆ ಸರಿಪಡಿಸಲು ಸಾಧ್ಯವಿತ್ತು.

ಹಾಗಯೇ, ಗ್ರಾಮಪಂಚಾಯಿತಿಯ ಅಧ್ಯಕ್ಶ/ಉಪಾಧ್ಯಕ್ಷ ಸ್ಥಾನಕ್ಕೆ ನೇರ ಚುನಾವಣೆ ಮಾಡಬೇಕು ಎನ್ನುವ ಶಿಫಾರಸನ್ನು ರಮೇಶ್‌ಕುಮಾರ್ ಸಮಿತಿ ಮಾಡಿರಲಿಲ್ಲ. ಆದರೆ ಇದರ ಬಗ್ಗೆ ಸಚಿವ ಹೆಚ್.ಕೆ.ಪಾಟೀಲರಿಗೆ ಬಹಳ ಆಸಕ್ತಿಯಿತ್ತು ಎನ್ನುವ ಮಾಹಿತಿ ಇತ್ತು. ಆದರೆ ಆಗ ಕೇವಲ ಹಣ ಮತ್ತು ಪ್ರಭಾವ ಇರುವವರು ಮತ್ತವರ ಚೇಲಾಗಳೇ ಗೆದ್ದು ಬರುತ್ತಾರೆ ಎನ್ನುವ ಅಪಾಯ ಕಂಡಿದ್ದರಿಂದ ಅದನ್ನು ಅನುಷ್ಠಾನ ಮಾಡಲಿಲ್ಲ ಎನ್ನುವ ಮಾತು ಕೇಳಿಬಂದಿದೆ.

ಸರ್ಕಾರ ಇತ್ತೀಚಿನ ತಿದ್ದುಪಡಿಯ ಮೂಲಕ ಬದಲಾಯಿಸಿರುವುದು ಕೇವಲ ಚುನಾವಣೆಗೆ ಸಂಬಂಧಿಸಿದ ಕಾನೂನುಗಳನ್ನಷ್ಟೇ; ಅದೂ ಆಂಶಿಕವಾಗಿ. ಆದರೆ ಇದೇ ತಿಂಗಳ ಕೊನೆಗೆ ಆರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಮತ್ತು ಹಣಕಾಸು ಯೋಜನೆಗಳಿಗೆ ಸಂಬಂಧಿಸಿದ ಶಿಫಾರಸುಗಳನ್ನು ಒಪ್ಪಿಕೊಳ್ಳಲಿದೆ ಮತ್ತು ತಿದ್ದುಪಡಿ ಮಾಡಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇವೆಲ್ಲವೂ ಮುಂದಿನ ತಾಲ್ಲೂಕು ಮತ್ತು ಜಿಲ್ಲಾಪಂಚಾಯಿತಿ ವ್ಯವಸ್ಥೆಯ ಸುಧಾರಣೆಗೆ ಅನುಕೂಲವಾಗುತ್ತವೆ. ಆದರೆ, ಈಗಿನ ಗ್ರಾಮಪಂಚಾಯಿತಿಯ ಹಲವಾರು ಚುನಾವಣಾ ಸಂಬಂಧಿ ನ್ಯೂನತೆಗಳು ಇನ್ನು ಐದು ವರ್ಷಗಳ ಕಾಲ ಮುಂದುವರೆಯಲಿದೆ.

ಇದೆಲ್ಲದರ ನಡುವೆ, ಇಷ್ಟರಲ್ಲೇ ಗ್ರಾಮ ಪಂಚಾಯಿತಿಯ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೆ ಅನೇಕ ಅಭ್ಯರ್ಥಿಗಳು ತಮ್ಮತಮ್ಮ ಪಟಾಲಂ‌ಗಳಿಗೆ ತೀರ್ಥಯಾತ್ರೆ ಮಾಡಿಸುವುದು, ರೆಸಾರ್ಟ್ ರಾಜಕೀಯ, ಕಾರು-ಬೈಕುಗಳ ಉಡುಗೊರೆ, ಇತ್ಯಾದಿ ಘನತೆಯ ಕೆಲಸಗಳಿಗೆ ಮುಂದಾಗಿದ್ದಾರೆ! ಮೊನ್ನೆಯ ಚುನಾವಣೆಗಳಲ್ಲಿ ತಮ್ಮ ಚಿಹ್ನೆ ಯಾವುದಿತ್ತೊ ಅದರ ನಿಜ ರೂಪಗಳನ್ನೇ ಸಾಧ್ಯವಾದಲ್ಲೆಲ್ಲ ಮತದಾರರಿಗೆ ಹಂಚಿದ್ಡಾರೆ ಕೂಡ. ಕೆಲವು ಊರುಗಳಲ್ಲಿ ಕೋಟಿ ರೂಪಾಯಿಗಳನ್ನು ಕೇವಲ ೪೦೦-೫೦೦ ಮತಗಳಿಗೆ ಚೆಲ್ಲಿದ್ದಾರೆ. ಬಾಡೂಟ-ಹೆಂಡದ ಸರಬರಾಜಂತೂ ಅವ್ಯಾಹತವಾಗಿ ನಡೆದಿದೆ. ಕೆಲವು ಕಡೆ ಊರಿನ ದೊಡ್ಡ ಮನುಷ್ಯರು ಹರಾಜು ಹಾಕಿ ಸ್ಥಾನಗಳನ್ನು ಮಾರಿ ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಆಶಯಗಳನ್ನು ಅಣಕಿಸಿದ್ದಾರೆ. ಇಂತಹ ಅಕ್ರಮ, ನಗೆಪಾಟಲುಗಳನ್ನು ನಿಲ್ಲಿಸಬೇಕೆಂದರೆ ಕೇವಲ ಕಾನೂನನ್ನು ಗಟ್ಟಿ ಮಾಡುವುದರಿಂದಷ್ಟೇ ಸಾಧ್ಯವಿಲ್ಲ. ಕೇವಲ ಜನಜಾಗೃತಿಯಿಂದಲೂ ಸಾಧ್ಯವಿಲ್ಲ. ಇವೆರಡೂ ಒಟ್ಟೊಟ್ಟಿಗೆ ಕಾಲಪ್ರವಾಹದಲ್ಲಿ ಸಾಗಬೇಕಿದೆ. ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಮಾಡುವುದು, ಅಧಿಕಾರ ದುರುಪಯೋಗಕ್ಕೆ ಕಡಿವಾಣ, ಅಕ್ರಮ ಎಸಗಿದವರಿಗೆ ಶೀಘ್ರ ಮತ್ತು ಕಠಿಣ ಶಿಕ್ಷೆಯ ಭಯ, ಸ್ಪರ್ಧೆಗೆ ಅನರ್ಹತೆ, ಮುಂತಾದ ಕ್ರಮಗಳ ಜೊತೆಜೊತೆಗೆ hosamanushya-3ಜನರೂ ಸಹ ತಮ್ಮ ಸ್ಥಳೀಯ ಆಡಳಿತದಲ್ಲಿ ಅಸಕ್ತಿ ಮತ್ತು ಪಾಲುದಾರಿಕೆ ಹೆಚ್ಚಿಸಿಕೊಳ್ಳುವುದರಿಂದ ಸಾಧ್ಯವಾಗುತ್ತದೆ.

ಇಷ್ಟೆಲ್ಲ ನ್ಯೂನತೆ ಮತ್ತು ಅಕ್ರಮ, ಅನೈತಿಕತೆಗಳ ನಡುವೆಯೂ, ಮತ್ತೊಂದಿಷ್ಟು ಸುಧಾರಣೆಗಳು ಮತ್ತು ಅಧಿಕಾರ ವಿಕೇಂದ್ರೀಕರಣದ ಈ ಪ್ರಕ್ರಿಯೆಗೆ ಹೊಂದಿಕೊಳ್ಳುವ ಮತ್ತು ವಿಕಾಸಗೊಳ್ಳುವ ಸಮಯವನ್ನು ನಮ್ಮ ಸಮಾಜಕ್ಕೆ ಕೊಟ್ಟರೆ, ಬಹುಶಃ ಮುಂದಿನ ಒಂದೆರಡು ದಶಕಗಳಲ್ಲಿ ಈ ವ್ಯವಸ್ಥೆ ತನ್ನ ಬಹುತೇಕ ಋಣಾತ್ಮಕ ಅಂಶಗಳನ್ನು ಕಳೆದುಕೊಂಡು ಉತ್ತಮ ವ್ಯವಸ್ಥೆಯಾಗುತ್ತದೆ ಎನ್ನುವ ವಿಶ್ವಾಸ ನನಗಿದೆ.