Daily Archives: July 15, 2015

ನಮ್ಮನ್ನು ಕಾಡದಿರುವ ಅಸಹಾಯಕ ಮಹಿಳೆಯರ ಸಮಸ್ಯೆ


– ರೂಪ ಹಾಸನ


ಇತ್ತೀಚೆಗೆ ಮಾಧ್ಯಮಗಳಲ್ಲಿ ಚರ್ಚಿತವಾಗುತ್ತಿರುವ ಮಹಿಳೆಗೆ ಸಂಬಂಧಿಸಿದ ಮುಖ್ಯವಾದ ಎರಡು ವಿಷಯಗಳೆಂದರೆ, ವಿವಾಹ ಪೂರ್ವ ಲೈಂಗಿಕ ಸಂಬಂಧ ಮತ್ತು ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವಿಕೆ ಕುರಿತಾದದ್ದು. ಇವು ಸರಿಯೋ ತಪ್ಪೋ ಎಂದು ಚರ್ಚಿಸುವುದು ಈ ಲೇಖನದ ಉದ್ದೇಶವಲ್ಲ, ಮತ್ತು ವಾಸ್ತವ ಸ್ಥಿತಿಯ ಬೇರೆ ಬೇರೆ ಮುಖಗಳನ್ನು ಬಿಚ್ಚಿಡುವುದಷ್ಟೇ ಈ ಲೇಖನದ ಪ್ರಮುಖ ಉದ್ದೇಶ ಎಂಬುದನ್ನು hallaki_woman_uttarakannadaಮೊದಲಿಗೇ ಸ್ಪಷ್ಟಪಡಿಸುತ್ತೇನೆ. ಈ ಎರಡೂ ವಿಷಯಗಳೂ ನೇರವಾಗಿ ಮತ್ತು ಮುಖ್ಯವಾಗಿ ಹೆಣ್ಣಿಗೆ ಸಂಬಂಧಿಸಿದವಾದರೂ, ಎಂದಿನಂತೆ ಹೆಣ್ಣು ಮಕ್ಕಳಿಗಿಂತಾ ಪುರುಷರೇ ಹೆಚ್ಚು ಉತ್ಸಾಹದಿಂದ ಪೂರ್ವ-ಪರ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹ. ಒಂದು ಮನಸ್ಸು ಹೆಣ್ಣು ಹೀಗೆಯೇ ಇರಬೇಕು ಎಂದು ಯೋಚಿಸುವ ಸಂಪ್ರದಾಯಬದ್ಧ ಪೂರ್ವಾಗ್ರಹಪೀಡಿತ ಮನಸ್ಥಿತಿಯದಾದರೆ, ಇನ್ನೊಂದು ಮುಕ್ತಕಾಮದ ಅನುಕೂಲಗಳ ಬಗ್ಗೆ ಯೋಚಿಸುವ ಲಂಪಟ ಮನಸ್ಸು. ಇವುಗಳನ್ನು ಮೀರಿ ಹೆಣ್ಣುಮಕ್ಕಳ ಮನಸ್ಸನ್ನು, ಅವರಿರುವಂಥಾ ಸ್ಥಿತಿಯನ್ನು ವಿವೇಚಿಸಿ ನಿಜವಾಗಿ ಹೆಣ್ಣಿಗೆ ಏನು ಬೇಕು? ಎಂದು ಯೋಚಿಸುವ ಮನಸ್ಸುಗಳು ಕಡಿಮೆ.

ನಮ್ಮ ಬಹಳಷ್ಟು ವಿಚಾರಗಳು, ಕಾನೂನುಗಳೂ ಹೆಚ್ಚಾಗಿ ನಗರಕೇಂದ್ರಿತ-ಉಚ್ಚವರ್ಗ-ಸುಶಿಕ್ಷಿತ-ಬೌದ್ಧಿಕ ಸಮಾಜವನ್ನು ಉದ್ದೇಶಿಸಿ ರೂಪುಗೊಳ್ಳುವಂತವು. ಹಾಗೇ ನಮ್ಮ ಮಾಧ್ಯಮಗಳೂ ಹೆಚ್ಚಾಗಿ ಇವುಗಳ ಪರ. ಗ್ರಾಮೀಣ ಪ್ರದೇಶದ-ಬಡ-ಅಶಿಕ್ಷಿತ, ಅದರಲ್ಲೂ ಮುಖ್ಯವಾಗಿ ಮುಗ್ಧ, ಅಸಹಾಯಕ ಹೆಣ್ಣುಮಕ್ಕಳ ಬದುಕಿನ ಮೇಲೆ ಇವು ಯಾವ ರೀತಿಯ ಪರಿಣಾಮವನ್ನು ಬೀರಬಲ್ಲುವೆಂಬುದನ್ನು ಚರ್ಚಿಸುವ ಸಂದರ್ಭಗಳು ಬಹಳ ಕಡಿಮೆ. ಇಲ್ಲಿ ಅಳುವ ಮಗುವಿಗಷ್ಟೇ ಹಾಲು. ದನಿಯಿದ್ದವರಿಗಷ್ಟೇ ನ್ಯಾಯ. ಈ ಎರಡು ರೀತಿಯ ಬದುಕನ್ನು ಬದುಕುತ್ತಿರುವ ಹೆಣ್ಣುಮಕ್ಕಳ ಆಯ್ಕೆಯ ಸ್ವಾತಂತ್ರ್ಯದಲ್ಲಿ woman-unchainedಅಗಾಧ ವ್ಯತ್ಯಾಸಗಳಿರುವುದನ್ನು ನಾವು ಗುರುತಿಸಬೇಕಿದೆ.

ಇತ್ತೀಚೆಗೆ ನಮ್ಮ ಹೆಣ್ಣುಮಕ್ಕಳು ವಿಭಿನ್ನ ಕಾರಣಗಳಿಂದಾಗಿ 10-11 ನೆಯ ವಯಸ್ಸಿಗೇ ಋತುಮತಿಯರಾಗುತ್ತಿದ್ದಾರೆ. ಅವರ ದೇಹ ಪ್ರಬುದ್ಧವಾಗುವಷ್ಟು ವೇಗದಲ್ಲಿ ಮನಸ್ಸು ಹಾಗೂ ಬುದ್ಧಿ ಪ್ರಬುದ್ಧವಾಗಲಾರದೆಂಬುದು ನಿರ್ವಿವಾದ. ವಯೋಸಹಜ ಆಕರ್ಷಣೆ, ಅಸಹಾಯಕತೆ, ಮುಗ್ಧ ಪ್ರೇಮದ ಹೆಸರಿನಲ್ಲಿ ಲೈಂಗಿಕ ಶೋಷಣೆಗೆ ಗುರಿಯಾಗಿ ಕುಟುಂಬದ ಆಶ್ರಯವಿಲ್ಲದೇ, ಅಡ್ಡದಾರಿ ಹಿಡಿದಿದ್ದ ಸಾವಿರಾರು ಹೆಣ್ಣುಮಕ್ಕಳು ಇಂದು ರಾಜ್ಯಾದ್ಯಂತ ರಿಮ್ಯಾಂಡ್ ಹೊಮ್‍ಗಳಲ್ಲಿ, ಬಾಲಮಂದಿರಗಳಲ್ಲಿ, ಸರ್ಟಿಫೈಡ್‍ಶಾಲೆಗಳಲ್ಲಿದ್ದಾರೆ. ಅಲ್ಲಿನ ಬಹಳಷ್ಟು ಹೆಣ್ಣುಮಕ್ಕಳ ಕಥೆ, ಅರಿವಿಲ್ಲದ ವಿವಾಹ ಪೂರ್ವ ಲೈಂಗಿಕ ಸಂಬಂಧದಿಂದ ದುರಂತದಲ್ಲಿ ಕೊನೆಗೊಂಡಿರುವಂತದ್ದು. ಬಹಳಷ್ಟು ಸಂದರ್ಭಗಳಲ್ಲಿ ಹೀಗೆ ಹೆಣ್ಣು ಮಕ್ಕಳನ್ನು ನಂಬಿಸಿ ಮೋಸ ಮಾಡುವವರು ಹತ್ತಿರದ ಸಂಬಂಧಿಗಳು ಹಾಗೂ ಆತ್ಮೀಯರೇ ಆಗಿರುತ್ತಾರೆ. ಮರ್ಯಾದೆಗೆ ಅಂಜಿ ಇಂತಹ ವಿಷಯಗಳು ಬಹಿರಂಗಗೊಳ್ಳದೇ, ಅಪರಾಧಿ ರಾಜಾರೋಷವಾಗಿ ತಿರುಗಾಡುತ್ತಿರುತ್ತಾನೆ. ಆದರೆ ಹೆಣ್ಣುಮಕ್ಕಳು ಮಾತ್ರ ಜೀವನ ಪರ್ಯಂತ ಅದರ ದುಷ್ಪರಿಣಾಮವೆದುರಿಸಬೇಕಾಗುತ್ತದೆ. ತಮ್ಮ ಬದುಕಿನ ಅಮೂಲ್ಯ ಗಳಿಗೆಗಳನ್ನು ತಮ್ಮವರೆನ್ನುವವರಿಲ್ಲದೇ, ಸುರಕ್ಷಿತ ಭವಿಷ್ಯವಿಲ್ಲದೇ ಕಳೆಯಬೇಕಾಗುತ್ತದೆ.

ಹಾಸನದಂತಾ ಚಿಕ್ಕ ಜಿಲ್ಲಾ ಕೇಂದ್ರವೊಂದರಲ್ಲೇ 1500ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ವಿವಿಧ ಸೌಲಭ್ಯಗಳಿಗಾಗಿ, woman-abstractಮುಖ್ಯವಾಗಿ ಏಡ್ಸ್ ಮತ್ತಿತರ ಲೈಂಗಿಕ ರೋಗಗಳು ಹರಡದಂತೆ ಸುರಕ್ಷಿತ ಲೈಂಗಿಕತೆಯ ಅರಿವು ಮೂಡಿಸಿಕೊಳ್ಳಲು ತಮ್ಮದೇ ಒಂದು ಸಂಘಟನೆಯನ್ನೂ ಮಾಡಿಕೊಂಡಿದ್ದಾರೆ. ಇವರೆಲ್ಲ ಬಡ ಮಹಿಳೆಯರು ಎಂದು ಬೇರೆ ಹೇಳಬೇಕಿಲ್ಲ. ಮತ್ತು ಇವರ್ಯಾರೂ ಸ್ವಇಚ್ಛೆಯಿಂದ ಈ ವೃತ್ತಿಯನ್ನು ಆಯ್ದುಕೊಂಡವರಲ್ಲ. ಅನಿವಾರ್ಯತೆಗೆ ಸಿಕ್ಕು, ಅಸಹಾಯಕತೆಯಿಂದ ಬಲಿಪಶುಗಳಾದವರು. ಇಲ್ಲಿ ನಾನು ಮುಖ್ಯವಾಗಿ ಹೇಳಹೊರಟ ಅಂಶವೆಂದರೆ ವೇಶ್ಯಾವಾಟಿಕೆಯನ್ನು ಕಾನೂನು ಬದ್ಧಗೊಳಿಸಿಲ್ಲವಾದರೂ ಅದನ್ನು ಸಾಮಾಜಿಕವಾಗಿ ಒಪ್ಪಿಕೊಂಡಿದ್ದೇವೆ. ಹೀಗೆಂದೇ ಅವರಿಗೆ ಸುರಕ್ಷಿತ ಲೈಂಗಿಕತೆಯ ಪಾಠವನ್ನು ಆರೋಗ್ಯ ಇಲಾಖೆಯೂ ಸೇರಿದಂತೆ ವಿವಿಧ ಸ್ವಯಂಸೇವಾ ಸಂಸ್ಥೆಗಳು ನೀಡುತ್ತಿವೆ. ವೇಶ್ಯಾವಾಟಿಕೆಯನ್ನು ಯಾವುದೇ ದೇಶ ಕಾನುನುಬದ್ಧಗೊಳಿಸಲೀ ಬಿಡಲೀ ವಿಶ್ವದ ಮೂರನೇ ಹೆಚ್ಚು ಆದಾಯಗಳಿಕೆಯ ಉದ್ಯಮವಾಗಿ ಸೆಕ್ಸೋದ್ಯಮ ಸ್ಥಾನ ಪಡೆದಿರುವುದು, ನಾವೆಲ್ಲರೂ ಒಪ್ಪಲೇ ಬೇಕಾದ ಸತ್ಯ.

ಕಳೆದ 7-8ವರ್ಷದಲ್ಲಿ 150ಕ್ಕೂ ಹೆಚ್ಚು ಬೀದಿಗೆ ಬಿಸಾಡಲ್ಪಟ್ಟ ನವಜಾತ ಶಿಶುಗಳನ್ನು ಹಾಸನದಲ್ಲಿ ಸಂರಕ್ಷಿಸಿ ದತ್ತು ನೀಡಲಾಗಿದೆ ಹಾಗೂ ಇನ್ನೂ ಹಲವು ಬಿಸಾಡಲ್ಪಟ್ಟ ಶಿಶುಗಳು ನಾಯಿ-ಹಂದಿಗಳ ಪಾಲಾಗಿ ಜೀವ ಕಳೆದುಕೊಂಡಿವೆ. ಈ ಮಕ್ಕಳ ತಾಯಂದಿರಲ್ಲಿ ಹೆಚ್ಚಿನವರು ವಿವಾಹ ಪೂರ್ವ ಲೈಂಗಿಕ ಸಂಬಂಧಗಳಿಂದ ಮೋಸ ಹೋದವರು, ಅತ್ಯಾಚಾರಕ್ಕೊಳಗಾದವರೇ ಆಗಿದ್ದಾರೆ ಎಂಬುದು ಗಮನಿಸ ಬೇಕಾದ ವಿಷಯ. ಪ್ರತಿ ಜಿಲ್ಲೆಯಿಂದ ವರ್ಷಕ್ಕೆ 200-300ರಷ್ಟು ಹದಿಹರೆಯದ ಹೆಣ್ಣು ಮಕ್ಕಳು ವಿವಿಧ ಕಾರಣಗಳಿಂದಾಗಿ ಕಾಣೆಯಾಗುತ್ತಿದ್ದಾರೆ. ಅವರ ಪತ್ತೆಯೇ ಆಗುತ್ತಿಲ್ಲ. ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣುಮಕ್ಕಳ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಇಲ್ಲಿ ಉಲ್ಲೇಖಿತರಾದ ಹೆಚ್ಚಿನವರು ಲೈಂಗಿಕ ಸಂಬಂಧಗಳಿಂದ ಮೋಸ ಹೋದ ಅಶಿಕ್ಷಿತ, ಅಲ್ಪ ವಿದ್ಯಾಭ್ಯಾಸ ಪಡೆದ, ಬಡ ಹೆಣ್ಣು ಮಕ್ಕಳೆಂಬುದನ್ನು ವಿವಿಧ ಇಲಾಖೆಯ ದಾಖಲೆಗಳು ಸ್ಪಷ್ಟೀಕರಿಸುತ್ತವೆ.

ಇದು ಒಂದು ಜಿಲ್ಲೆಯ ಉದಾಹರಣೆಯಷ್ಟೇ. ಸೃಷ್ಟಿ ಸಹಜವಾದ ಲೈಂಗಿಕತೆಯೇ ಹೆಣ್ಣಿಗೆ ಶಾಪವಾಗುವ ಅಸಂಖ್ಯ ಕಥೆಗಳು ಜಗತ್ತಿನಾದ್ಯಂತ ಇವೆ. woman-insightಅರಿವಿಲ್ಲದೇ ಇದರ ಸುಳಿಗೆ ಸಿಲುಕುವ ಇಂಥಹಾ ಹೆಣ್ಣುಮಕ್ಕಳಿಗೆ ನ್ಯಾಯ ನೀಡುವವರ್ಯಾರು? ನಿಜವಾದ ಅಪರಾಧಿಗೆ ಶಿಕ್ಷೆ ನೀಡುವವರ್ಯಾರು? ನಮ್ಮ ಕಾನೂನಿಗೆ ಇವನ್ನೆಲ್ಲಾ ನೋಡುವ ಕಣ್ಣು-ಮನಸ್ಸು ಇದೆಯೇ? ಅತ್ಯಾಚಾರಕ್ಕೊಳಗಾಗುವ ಹೆಣ್ಣುಮಕ್ಕಳದು ಇನ್ನೂ ದೊಡ್ಡ ದುರಂತದ ಕಥೆಯಾದ್ದರಿಂದ ಅದನ್ನು ಪ್ರತ್ಯೇಕವಾಗಿಯೇ ಚರ್ಚಿಸುವ ಅವಶ್ಯಕತೆಯಿದೆ.

4-5 ವರ್ಷಗಳ ಹಿಂದಿನ ಒಂದು ಉದಾಹರಣೆಯನ್ನು ನೋಡುವುದಾದರೆ, ಹೆಣ್ಣುಮಕ್ಕಳನ್ನು ಮೋಸಗೊಳಿಸಿದ ಪ್ರಕರಣಗಳ ಅಪರಾಧಿ ಮೋಹನಕುಮಾರನೆಂಬ ವಿಕೃತಕಾಮಿಯ ಸಕ್ಕರೆ ಮಾತಿಗೆ ಮರುಳಾಗಿ ವಿವಾಹ ಪೂರ್ವ ಲೈಂಗಿಕತೆಗೆ ಒಪ್ಪಿ ಬದುಕು ಕಳೆದುಕೊಂಡ ಇಪ್ಪತ್ತಕ್ಕೂ ಹೆಚ್ಚು ಹೆಣ್ಣು ಮಕ್ಕಳು ಬಡ ಕುಟುಂಬಗಳ, ಅಲ್ಪ ವಿದ್ಯೆ ಪಡೆದ, ಉತ್ತಮ ಬದುಕು ಕಟ್ಟಿಕೊಳ್ಳುವ ಆಕಾಂಕ್ಷಿಗಳಾಗಿದ್ದರೆಂಬುದನ್ನು ಗಮನಿಸಬಹುದು.

ಶಾಸ್ತ್ರೋಕ್ತ ಹಾಗೂ ಪ್ರೇಮ ವಿವಾಹಗಳೆರಡರಲ್ಲೂ ಇಂದು ಬದ್ಧತೆ, ಪ್ರಾಮಾಣಿಕತೆ ಹಾಗೂ ಹೊಣೆಗಾರಿಕೆ ಕಡಿಮೆಯಾಗುತ್ತಿರುವುದನ್ನು, ವಿಚ್ಛೇದನಗಳು, ವಿವಾಹೇತರ ಸಂಬಂಧಗಳು ಹೆಚ್ಚುತ್ತಿರುವುದನ್ನೂ ನಾವಿಂದು ಕಾಣುತ್ತಿದ್ದೇವೆ. ಹಾಗಿರುವಾಗ ವಿವಾಹ ಪೂರ್ವ ಲೈಂಗಿಕ ಸಂಬಂಧ ಅಥವಾ ಲಿವಿಂಗ್ ಟುಗೆದರ್‍ಗಳಲ್ಲಿ ಇವುಗಳನ್ನು ನಿರೀಕ್ಷಿಸುವುದು ಇನ್ನೂ ಕಷ್ಟ. ಯಾವುದೇ ಅನಿಶ್ಚಿತ-ಅನಪೇಕ್ಷಿತ ಸಂಬಂಧದಿಂದ ಹುಟ್ಟುವ ಮಕ್ಕಳ ಮನಸ್ಥಿತಿ childmarriageಅದೆಷ್ಟು ಅಭದ್ರತೆಯಿಂದ ಕೂಡಿರಬಹುದೆಂಬ ಊಹೆ ಮಾಡಿದರೂ ಆ ಮಕ್ಕಳ ಸ್ಥಿತಿಯ ಕುರಿತು ವ್ಯಥೆಯಾಗುತ್ತದೆ. ಪ್ರಬುದ್ಧ ಗಂಡು-ಹೆಣ್ಣಿನ ನಡುವಿನ ಸಂಬಂಧ ಪರಸ್ಪರ ಬದ್ಧತೆ, ಜವಾಬ್ದಾರಿ, ನಂಬಿಕೆಗಳಿಂದ ಕೂಡಿದ್ದಾಗ ಅದು ಪ್ರಶ್ನಾತೀತವಾದದ್ದು. ಯಾವುದೇ ವಿಷಯಕ್ಕೆ ಕಾನೂನಿನ ಮಾನ್ಯತೆ ದೊರಕಿದರೂ ಅದಕ್ಕೆ ಸಾಮಾಜಿಕ ಒಪ್ಪಿಗೆ ಸಿಗುವವರೆಗೂ ಜನಮಾನ್ಯತೆ ಹಾಗೂ ಗೌರವಗಳಿಲ್ಲ ಎಂಬುದು ನಾವು ಕಾಣುತ್ತಾ ಬಂದಿರುವ ಸತ್ಯ.

ವಿವಾಹ ಪೂರ್ವ ಲೈಂಗಿಕತೆಯಲ್ಲಿ ಪಾಲ್ಗೊಳ್ಳುವಿಕೆ ಅಥವಾ ಲೈಂಗಿಕ ಕಾರ್ಯಕರ್ತೆಯಾಗುವ ಇಚ್ಛೆ ಹೆಣ್ಣಿಗೆ ಸ್ವಯಂ ಆಯ್ಕೆಯ ವಿಷಯವಾಗುವಷ್ಟು ಅವಳು ದೈಹಿಕ-ಮಾನಸಿಕ-ಬೌದ್ಧಿಕವಾಗಿ ಪ್ರಬುದ್ಧಳಾಗಿದ್ದರೆ ಅದು ಅವಳ ಆಯ್ಕೆಗೆ ಬಿಟ್ಟ ವಿಷಯ. ಆದರೆ ಬಹಳಷ್ಟು ಬಾರಿ ವಯೋಸಹಜ ಆಕರ್ಷಣೆ, ಒತ್ತಡ, ಅಸಹಾಯಕತೆ, ಮಹತ್ವಾಕಾಂಕ್ಷೆ , ಮುಗ್ಧತೆಯ ಹೆಸರಿನಲ್ಲಿ ಒಮ್ಮೆ ಲೈಂಗಿಕ ಸಂಬಂಧದ ಸುಳಿಯಲ್ಲಿ ಸಿಲುಕುವ ಹೆಣ್ಣುಮಕ್ಕಳು ಜೀವನ ಪರ್ಯಂತ ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾದಂತಾ ಪರಿಸ್ಥಿತಿಗೆ ಸಿಕ್ಕಿಬೀಳುವುದು ದುರಂತ.

ಆದ್ದರಿಂದ ಮೊದಲು ಮಾನಸಿಕ- ಬೌದ್ಧಿಕ ಪ್ರಬುದ್ಧತೆಯನ್ನು ಪಡೆಯುವಂತಾ ಶಿಕ್ಷಣ-ಅರಿವು, ಜೊತೆಗೆ ಆರ್ಥಿಕ ಸಬಲತೆಯನ್ನು ನಮ್ಮ ಹೆಣ್ಣುಮಕ್ಕಳಿಗೆ ನೀಡಿ, ಅವರ ಬದುಕಿನ ಪ್ರತಿಯೊಂದು ಘಟ್ಟದ ಆಯ್ಕೆಯನ್ನೂ ಸ್ವಯಂ ಇಚ್ಛೆಯಿಂದ, ಯಾವುದೇ ಬಾಹ್ಯ ಒತ್ತಡವೂ ಇಲ್ಲದಂತೆ ಅವರೇ ಮಾಡಿಕೊಳ್ಳುವಂತಾ ಸ್ವಾತಂತ್ರ್ಯವನ್ನು ಅವರು ಪಡೆಯಬೇಕಿದೆ. ಅಲ್ಲಿಯವರೆಗೆ ಯಾವುದೇ ಕಾರಣದಿಂದ ಹೆಣ್ಣು ವಿವೇಕವಿಲ್ಲದ ಮುಕ್ತ ಮನೋಭಾವದವಳೂ, ಸ್ವೇಚ್ಛಾಚಾರಿಯೂ, ಕಾಮುಕರ ಸೆಳೆತಕ್ಕೆ ಸಿಕ್ಕುವವಳೂ ಆದಷ್ಟೂ ಅದರಿಂದ ಹೆಚ್ಚಿನ ಲಾಭ ಲಂಪಟ, ಬೇಜಾವಬ್ಧಾರಿಯುತ ಪುರುಷರಿಗೆ. ಜೊತೆಗೆ ವ್ಯಕ್ತಿಗೆ ಸಿಗಬೇಕಿರುವ ಘನತೆ, ಗೌರವಗಳೊಂದನ್ನೂ ಪಡೆಯದೇ ಬರಿಯ ಭೋಗದ ವಸ್ತು ಮಾತ್ರವಾಗಿ ಇನ್ನಷ್ಟು ಹೆಚ್ಚು ಸಂಕಷ್ಟಕ್ಕೆ, ನೋವಿಗೆ ಗುರಿಯಾಗುವವಳು ಮಹಿಳೆಯೇ ಆಗುತ್ತಾಳೆ.

ಹೆಣ್ಣಿನ ಘನತೆಯ-ನೆಮ್ಮದಿಯ ಬದುಕಿನ ಕುರಿತ ಕಾಳಜಿ ಇರುವ ಪ್ರಜ್ಞಾವಂತರೆಲ್ಲರೂ ಈ ಮುಖಗಳನ್ನು ಕುರಿತೂ ಅಗತ್ಯವಾಗಿ ಚರ್ಚಿಸಬೇಕಿದೆ.