Daily Archives: July 11, 2015

ಅನ್ನ ಹಾಕಿದ ತಪ್ಪಿಗೆ ದಂಡ ಕಟ್ಟಿದವರು – 2 (ಸಣ್ಣ ಕಲ್ಲಿನ ಮೇಲೆ ದೊಡ್ಡ ಕಲ್ಲು ಬಿದ್ದರೆ ಏನಾಗುತ್ತದೆ ಗೊತ್ತೆ?)

-ಜೀವಿ.

ಭಾಗ -1 : ಅನ್ನ ಹಾಕಿದ ತಪ್ಪಿಗೆ ದಂಡ ಕಟ್ಟಿದವರು..

ದಂಡ ಕಟ್ಟಿ ಊರಿನಿಂದ ದಲಿತರು ಬಹಿಷ್ಕಾರ ಹಾಕಿಸಿಕೊಂಡು ಐದು ದಿನ ಕಳೆದಿತ್ತು. ರಾತ್ರಿ 8 ರ ಸುಮಾರಿಗೆ ಪೊಲೀಸ್ ಜೀಪೊಂದು ಊರಿನತ್ತ ಬರುತ್ತಿರುವ ಶಬ್ಧ ಕೇಳಿತು. ಮಾರಮ್ಮನಿಗೆ ಅರ್ಪಿಸಲು ತಳಿಗೆ (ದೇವರಿಗೆ ಎಡೆ ಇಡುವ ಊಟ) ಹೊತ್ತು ಹೊರಟಿದ್ದ ದೇವರಾಜನ ಅಪ್ಪ ಪುಟ್ಟಯ್ಯ ಜೀಪಿನ ಶಬ್ಧ ಕೇಳಿ ವಾಪಸ್ ಮನೆಗೆ ಓಡಿ ಬಂದವನೇ ಪೊಲೀಸರು ಕೇರಿಯತ್ತ ಬರುತ್ತಿರುವ ಸುದ್ದಿ ತಿಳಿಸಿದ. dalit_panther2ನಂತರ ಮನೆಯ ಗಂಡು ಮಕ್ಕಳೊಂದಿಗೆ ಎದ್ದು ಬಿದ್ದು ಓಡಿ ಹೋಗಿ ಊರ ಹೊರಗಿನ ಬೇಲಿಯೊಂದರಲ್ಲಿ ಅಡಗಿ ಕುಳಿತ. ಮಾರಮ್ಮನಿಗೆ ತಳಿಗೆ ಒಪ್ಪಿಸಲು ಕೋಣನನ್ನು ಬಲಿ ಕೊಟ್ಟಿರುವ ವಿಷಯ ಗೊತ್ತಾಗಿ ಪೊಲೀಸರು ಕೇರಿಯತ್ತ ನುಗ್ಗುತ್ತಿದ್ದಾರೆ ಎಂಬುದು ಪುಟ್ಟಯ್ಯನ ಆತಂಕಕ್ಕೆ ಕಾರಣವಾಗಿತ್ತು. ಜೀಪು ಇಳಿದು ಬರುತ್ತಿದ್ದ ಪೊಲೀಸರ ಬೂಟಿನ ಸದ್ದು ಕೇಳಿ ಕೇರಿಯಲ್ಲಿ ಎಲ್ಲರ ಎದೆ ಬಡಿತ ಜಾಸ್ತಿಯಾಗಿತ್ತು. ಎಲ್ಲರ ಮನೆಗೂ ಮಾಂಸ ಹಂಚಿಕೆಯಾಗಿತ್ತು. ಮೇಲ್ಜಾತಿ ಹುಡುಗರಿಗೆ ಊಟ ಹಾಕಿರುವ ಸಿಟ್ಟಿನಿಂದ ಯಾರೋ ಪೊಲೀಸರಿಗೆ ಸುದ್ದಿ ಮುಟ್ಟಿಸಿರಬೇಕು ಎಂದುಕೊಂಡು ಎದೆ ಬಡಿತ ಹೆಚ್ಚಿಸಿಕೊಂಡಿದ್ದರು.

ಇದ್ಯಾವುದರ ಗೊಡವೆ ಇಲ್ಲದೆ ಮನೆಯಲ್ಲಿ ಮಾಂಸದೂಟ ಸಿದ್ದವಾಗಿರುವುದನ್ನು ನೆನೆದು ಸಂಭ್ರಮದಲ್ಲಿ ಓಡಾಡುತ್ತಿದ್ದ ಮಕ್ಕಳಲ್ಲಿ ಒಬ್ಬರನ್ನು ಕರೆದ ಪೊಲೀಸರು, ಗುಂಡಯ್ಯನ ಮನೆ ತೋರಿಸುವಂತೆ ತಿಳಿಸಿದರು. ಮನೆ ಬಾಗಿಲು ತಟ್ಟಿದ ಪೊಲೀಸರನ್ನು ಕಂಡು ಆತ ಆಶ್ಚರ್ಯಗೊಂಡು ತಬ್ಬಿಬ್ಬಾಗಿದ್ದ. ’ಗುಂಡಯ್ಯ ಎಂದರೆ ನೀನೇನಾ’ ಎಂದು ಕೇಳಿದ ಪೊಲೀಸರಿಗೆ ಆತಂಕದಿಂದಲೇ ’ನಾನೇ ಸ್ವಾಮಿ’ ಎಂದು ಉತ್ತರಿಸಿದ. ಮೇಲ್ಜಾತಿ ಹುಡುಗರಿಗೆ ಊಟ ಹಾಕಿದ ತಪ್ಪಿಗೆ ದಂಡ ಹಾಕಿ ಬಹಿಷ್ಕಾರಕ್ಕೆ ಒಳಗಾಗಿದೇವೆ. ಈಗ ಕೋಣವನ್ನು ಕಡಿತ ತಪ್ಪಿಗೆ ಜೈಲೇ ಸೇರಬೇಕೇನೋ ಎಂದು ಮನದಲ್ಲೆ ಗೊಣಗಿಕೊಂಡ ಗುಂಡಯ್ಯ ಮುಂದೇನು ಮಾಡುವುದು ಎಂದು ಆಲೋಚನೆಯಲ್ಲಿ ತೊಡಗಿದ್ದ. ಅಷ್ಟರಲ್ಲಿ ’ಐದು ದಿನದ ಹಿಂದೆ ನಾಮಕರಣ ಆಗಿದ್ದ ನಿನ್ನ ಮಗಳದ್ದೇನಾ?’ ಎಂದು ಪೊಲೀಸರು ಕೇಳಿದರು. ’ಹೌದು ಸ್ವಾಮಿ’ ಎಂದು ಗುಂಡಯ್ಯನಿಂದ ಅಂದು ಏನಾನಾಯ್ತು ಎಂಬ ಮಾಹಿತಿ ಪಡೆದುಕೊಂಡರು. ಅಷ್ಟೊತ್ತಿಗೆ ಕೇರಿಯ ಎಲ್ಲರೂ ಪೊಲೀಸರತ್ತ ಮುತ್ತಿಕೊಂಡಿದ್ದರು. ಅಲ್ಲಿಗೆ ಆಗಮಿಸಿದ ಪಕ್ಕದೂರಿನ ದಲಿತ ಕೇರಿಯ ರಾಮಕುಮಾರ, ನಡೆದಿರುವ ಎಲ್ಲಾ ವಿಷಯವನ್ನು ವಿವರವಾಗಿ ಪೊಲೀಸರಿಗೆ ತಿಳಿಸಿ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ ಎಂದು ದಂಡ ಹಾಕಿಸಿಕೊಂಡ ದಲಿತರಿಗೆ ಹೇಳಿದ. ಸುತ್ತಮುತ್ತಲ ಊರಿನಲ್ಲಿ ಒಂದಿಷ್ಟು ಓದಿಕೊಂಡು ದಲಿತ ಚಳವಳಿಯಲ್ಲಿ ತೊಡಗಿಕೊಂಡಿದ್ದ ರಾಮಕುಮಾರನ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಏನು ತೊಂದರೆ ಆಗಲಾರದು ಎಂದುಕೊಂಡು ನಡೆದ ಸಂಗತಿಯನ್ನು ಪೊಲೀಸರ ಮುಂದೆ ತೆರದಿಟ್ಟರು.

ಕಾನೂನಿನ ಅರಿವಿದ್ದು ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ರಾಮಕುಮಾರನಿಗೆ ತನ್ನ ಪಕ್ಕದೂರಿನ ದಲಿತರ ಮನೆಯಲ್ಲಿ cooked-riceಊಟ ಮಾಡಿದ ಮೇಲ್ಜಾತಿಯವರು ಕೊನೆಗೆ ದಂಡ ಕಟ್ಟಿಸಿಕೊಂಡು ಬಹಿಷ್ಕಾರ ಹಾಕಿರುವ ಸುದ್ದಿ ತಡವಾಗಿ ತಿಳಿದಿತ್ತು. ಹೊರ ಊರಿನಿಂದ ಬಂದ ಕೂಡಲೇ ವಿಷಯ ತಿಳಿದು ದಲಿತ ಕೇರಿಗೆ ರಾಮಕುಮಾರ ಬಂದಿದ್ದ. ಬೀದಿಯಲ್ಲಿ ಸಿಕ್ಕಿದ್ದ ಮುಕ್ಕಜ್ಜಿಯಿಂದ ಘಟನೆಯ ಸಂಪೂರ್ಣ ವಿವರ ಪಡೆದುಕೊಂಡಿದ್ದ. ದಲಿತ ಕೇರಿಯಲ್ಲಿ ಮತ್ಯಾರನ್ನು ಮಾತನಾಡಿಸದೆ ನೇರವಾಗಿ ಪಟ್ಟಣಕ್ಕೆ ಹೋಗಿ ಪತ್ರಕರ್ತರಿಗೆ ವಿಷಯ ಮುಟ್ಟಿಸಿದ್ದ. ಮರುದಿನ ರಾಜ್ಯಮಟ್ಟದಲ್ಲಿ ಸುದ್ದಿ ಪ್ರಕಟವಾಗಿತ್ತು. ಪತ್ರಿಕೆಗಳಲ್ಲಿ ಬಂದ ಸುದ್ದಿ ನೋಡಿ ಜಿಲ್ಲಾಧಿಕಾರಿ ಪ್ರಶ್ನೆ ಮಾಡಿದ ನಂತರ ಪೊಲೀಸರು ದಲಿತ ಕೇರಿಗೆ ದಾಂಗುಡಿ ಇಟ್ಟಿದ್ದರು. ಇದ್ಯಾವುದರ ಅರಿವಿಲ್ಲದ ದಲಿತ ಕೇರಿಯ ಜನ ಮೇಲ್ಜಾತಿ ಹುಡುಗರಿಗೆ ಊಟ ಹಾಕಿದ್ದು ನಮ್ಮದೇ ತಪ್ಪು, ಅದಕ್ಕಾಗಿ ದಂಡ ಮತ್ತು ಬಹಿಷ್ಕಾರದ ಹಾಕಿದ್ದಾರೆ ಎಂದು ಭಾವಿಸಿದ್ದರು. ಮುಂದೆ ಈ ರೀತಿ ತಪ್ಪು ಮಾಡದಂತೆ ನೋಡಿಕೊಳ್ಳಲು ತೋಟದ ಮಾರಿಗೆ ಕೋಣವೊಂದನ್ನು ಬಲಿಕೊಟ್ಟು ಸಂಕಷ್ಟದಿಂದ ಪಾರು ಮಾಡಲು ಕೇಳಿಕೊಂಡಿದ್ದರು. ದಂಡ ಮತ್ತು ಬಹಿಷ್ಕಾರದ ವಿಷಯವನ್ನು ರಾಮಕುಮಾರ ಬಹಿರಂಗಪಡಿಸಿದ ನಂತರ ಊರಿಗೆ ಕಾಲಿಟ್ಟಿದ್ದ ಪೊಲೀಸರು, ದಂಡ ಹಾಕಿದವರ ಮನೆ ಬಾಗಿಲು ತಟ್ಟಿ ಮಾರನೆಯ ದಿನ ಠಾಣೆಗೆ ಬರುವಂತೆ ಸೂಚನೆ ನೀಡಿ ಹೋದರು.

ಅದುವರೆಗೂ ದಲಿತರಿಗೆ ಬುದ್ದಿ ಕಲಿಸಿದ್ದೀವಿ ಎಂದುಕೊಂಡಿದ್ದ ಮೇಲ್ಜಾತಿ ಪಂಚಾಯ್ತಿದಾರರಿಗೆ ಪೊಲೀಸರ ಮಾತಿನಿಂದ ನಡುಕ ಉಂಟಾಯಿತು. ಪಕ್ಕದೂರಿನ ರಾಜಕೀಯ ಪುಡಾರಿಗಳ ಮನೆಗೆ ಧಾವಿಸಿ ಪೊಲೀಸರು ಬಂದು ಹೋಗಿರುವ ವಿಷಯ ತಿಳಿಸಿದರು. ಅಂದಿನ ರಾಜ್ಯ ಸರ್ಕಾರದಲ್ಲಿ ಪ್ರಮುಖ ಸಚಿವರಾಗಿದ್ದ ವ್ಯಕ್ತಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಮತ್ತು ಅವರ ಹುಟ್ಟೂರಿನಿಂದ ಕೇವಲ ಒಂದೂವರೆ ಮೈಲಿ ದೂರದಲ್ಲಿರುವ ಊರಿನಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. dalit_panther1ದಲಿತರ ಮೇಲೆ ದೌರ್ಜನ್ಯ ನಡೆಸಿದವರು ಕೂಡ ಮಂತ್ರಿಯ ಸ್ವಜಾತಿಯವರೇ ಆಗಿದ್ದರು. ಕೆಲವರು ರಕ್ತ ಸಂಬಂಧಿಗಳು ಆಗಿದ್ದರು. ಪತ್ರಿಕೆಗಳಲ್ಲಿ ಓದಿ ವಿಷಯ ತಿಳಿದಿದ್ದ ಸಚಿವ, ಠಾಣೆಯಲ್ಲಿ ಮೊಕದ್ದಮೆ ದಾಖಲಾಗದಂತೆ ನೋಡಿಕೊಂಡಿದ್ದ. ಮತ್ತೊಂದು ಪಂಚಾಯ್ತಿ ಮಾಡಿ ಎಲ್ಲವನ್ನು ಸರಿಪಡಿಸುವುದಾಗಿ ಹೇಳಿದ್ದ. ಮೊಕದ್ದಮೆ ದಾಖಲಾಗಬೇಕು, ದಂಡ ಮತ್ತು ಬಹಿಷ್ಕಾರ ಹಾಕಿದವರಿಗೆ ಕಾನೂನಿನ ಅಡಿ ಶಿಕ್ಷೆ ಆಗಬೇಕು ಎಂಬ ಪಟ್ಟನ್ನು ಹೋರಾಟಗಾರ ರಾಮಕುಮಾರ ಹಿಡಿದಿದ್ದ. ಆದರೆ ಮೊಕದ್ದಮೆ ದಾಖಲಿಸದಂತೆ ಕೇವಲ ಸಚಿವ ಮಾತ್ರವಲ್ಲದೇ ಅಂದಿನ ಸರ್ಕಾರ ರಚನೆಗೆ ಪ್ರಮುಖ ಪಾತ್ರದಾರಿಯೂ ಆಗಿದ್ದ ಕಾರಣಕ್ಕಾಗಿ ಜಿಲ್ಲಾಧಿಕಾರಿ ಆದಿಯಾಗಿ ಯಾರೊಬ್ಬರು ಅವರ ಮಾತು ಉಲ್ಲಂಘಿಸುವ ಸ್ಥಿತಿಯಲ್ಲಿ ಇರಲಿಲ್ಲ.

ಸುತ್ತಮುತ್ತಲ ಊರಿಗೆ ವೃತ್ತದಂತಿದ್ದ ಪಕ್ಕದೂರಿನಲ್ಲಿ ದೊಡ್ಡ ಪಂಚಾಯ್ತಿ ಸೇರಿಕೊಂಡಿತು. ಅದಾಗಲೇ ಸುದ್ದಿ ಸುತ್ತಮುತ್ತಲ ಊರಿಗೆ ಹರಡಿತ್ತು. dalit_pantherಪ್ರಭಾವಿ ಸಚಿವ ಆಗಮಿಸುತ್ತಿರುವ ಕಾರಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಇದು ದಂಡ ಹಾಕಿದವರಿಗೆ ದೊಡ್ಡ ಬಲ ಇದ್ದಂತಾಗಿತ್ತು. ಸಚಿವ ಕೂಡ ನಮ್ಮ ಜಾತಿಯವನೇ ಆಗಿದ್ದು, ರಕ್ಷಣೆ ಮಾಡುವುದರಲ್ಲಿ ಅನುಮಾನ ಇಲ್ಲ ಎಂದುಕೊಂಡು ನಗು ಮುಖದೊಂದಿಗೆ ಪಂಚಾಯ್ತಿಗೆ ಹಾಜರಾಗಿದ್ದರು. ಆಗಮಿಸಿದ ಸಚಿವನಿಗೆ ಜೈಕಾರಗಳು ಮೊಳಗಿದವು. ಮೇಲ್ಜಾತಿಯವರ ಮೇಳದಲ್ಲಿ ಕಾಣೆಯಾದವರಂತೆ ಮೂಲೆಯೊಂದರಲ್ಲಿ ಕುಳಿತಿದ್ದ ದಲಿತರನ್ನು ಪಂಚಾಯ್ತಿ ಮುಂದೆ ಹಾಜರಾಗಲು ಸಚಿವ ಆಜ್ಞೆ ಮಾಡಿದ. ಈಗಲೂ ತಪ್ಪು ಮಾಡಿದ ಸ್ಥಿತಿಯಲ್ಲೇ ನಿಂತಿದ್ದ ದಲಿತರಿಗೆ ರಾಮಕುಮಾರ ನಾಯಕನಾಗಿದ್ದ. ಆತ ಮಾತ್ರ ಎದೆಗುಂದದೆ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಮತ್ತು ಅಟ್ಟಹಾಸವನ್ನು ಪ್ರಶ್ನೆ ಮಾಡಿದ. ಅಮಾಯಕರಿಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಪಟ್ಟು ಹಿಡಿದ. ’ನೀನಿನ್ನೂ ಯುವಕ, ಬಿಸಿರಕ್ತದಲ್ಲಿ ಮಾತನಾಡುತ್ತಿದ್ದಿಯಾ…’ ಎಂದು ಮಾತು ಆರಂಭಿಸಿದ ಮಂತ್ರಿ, ’ಎಲ್ಲರೂ ಅಣ್ಣತಮ್ಮಂದಿರಂತೆ ಬಾಳಬೇಕು. ನಮ್ಮ ಸಚಿವ ಸಂಪುಟದಲ್ಲಿ ರಾಮಯ್ಯ ಮಂತ್ರಿಯಾಗಿದ್ದಾರೆ. ಅವರು ಕೂಡ ದಲಿತರೇ ಆಗಿದ್ದು, ಅವರ ಮನೆಯಲ್ಲಿ ನಾನೂ ಕೂಡ ಊಟ ಮಾಡಿದ್ದೇನೆ. ಹಾಗೆಂದ ಮಾತ್ರಕ್ಕೆ ನನ್ನನ್ನು ಜಾತಿಯಿಂದ ಹೊರ ಹಾಕುತ್ತೀರಾ?’ ಎಂದು ಸ್ವಜಾತಿಯವರನ್ನು ಸಚಿವ ಪ್ರಶ್ನೆ ಮಾಡಿದ. ಹೀಗೆ ಮಾಡಬಾರದು ಎಂದು ಹೇಳಿದ ಸಚಿವನ ಮಾತಿಗೆ ಎಲ್ಲರೂ ಮರುಳಾದರು. ಬಹಿಷ್ಕಾರ ಹಿಂದಕ್ಕೆ ಪಡೆದು ದಂಡದ ಹಣ ವಾಪಸ್ ಕೊಡಿ ಎಂದು ಆಜ್ಞೆ ಮಾಡಿದ. ದಲಿತರಿಗೆ ಈತ ನಮ್ಮ ಪರವಾಗಿಯೇ ಮಾತನಾಡುತ್ತಿದ್ದಾನೆ ಎಂಬ ಭಾವನೆ ಬಂದಿತು. ಆದರೆ ಮಾತಿನ ನಡುವೆಯೇ ದಲಿತರತ್ತ ತಿರುಗಿ ನೀವು ಕೂಡ ಎಚ್ಚರಿಕೆಯಿಂದ ಬಾಳಬೇಕು. ’ಸಣ್ಣ ಕಲ್ಲಿನ ಮೇಲೆ ದೊಡ್ಡ ಕಲ್ಲು ಬಿದ್ದರೆ ಏನಾಗುತ್ತದೆ ಗೊತ್ತೆ?’ ಎಂದು ಪ್ರಶ್ನೆ ಮಾಡಿದ. ’ಕೇಸು ದಾಖಲಾದರೆ ಹಳ್ಳಿಯಲ್ಲಿ ಸೌಹಾರ್ದ ವಾತಾವರಣ ಹಾಳಾಗುತ್ತದೆ. ಅಣ್ಣ-ತಮ್ಮಂದಿರಂತೆ ಜೀವನ ನಡೆಸಿ’ ಎಂದು ಹೇಳಿ ಪಂಚಾಯ್ತಿಗೆ dalithsಕೊನೆಗೊಳಿಸಿದ.

’ದೊಡ್ಡ ಕಲ್ಲನ್ನು ಮತ್ತೆಂದೂ ಮೈಮೇಲೆ ಎಳೆದುಕೊಳ್ಳಬೇಡಿ’ ಎಂಬ ಎಚ್ಚರಿಕೆಯನ್ನು ಕೆಳಜಾತಿಯವರಿಗೆ ನೀಡಿ ಕಾನೂನಿನ ಅಂಕುಶಕ್ಕೆ ಸಿಗದಂತೆ ಸ್ವಜಾತಿಯವರನ್ನು ರಕ್ಷಣೆ ಮಾಡಿದ ಸಚಿವನ ಜಾಣತನ ಅಂದು ದಲಿತರಿಗೆ ಅರ್ಥವಾಗಲಿಲ್ಲ. ಅರ್ಥ ಮಾಡಿಕೊಂಡ ರಾಮಕುಮಾರ ಸೇರಿ ಕೆಲವರಿಂದ ಬೇರೇನು ಮಾಡಲಾಗಲಿಲ್ಲ. ನಾವು ದೊಡ್ಡಕಲ್ಲು ಎಂದು ಬೀಗಿಕೊಂಡು ಮೇಲ್ಜಾತಿಯವರು ಮತ್ತೊಮ್ಮೆ ಸಚಿವನಿಗೆ ಜೈಕಾರು ಮೊಳಗಿಸಿದರು. ಸಣ್ಣಕಲ್ಲಿಗೆ ಕಾನೂನಿನ ರಕ್ಷಣೆ ಇದ್ದರೂ ಅದರ ಹಿಡಿತ ದೊಡ್ಡ ಕಲ್ಲುಗಳ ಕೈಲಿದ್ದರೆ ಏನಾಗುತ್ತದೆ ಎಂಬುದಕ್ಕೆ ಅನ್ನ ಹಾಕಿದ ತಪ್ಪಿಗೆ ತಂಡ ಕಟ್ಟಿದ ದಲಿತರೇ ಸಾಕ್ಷಿ.