ಮಹಿಳಾ ಕೈದಿಗಳು ಮತ್ತು ಪಿರಿಯೆಡ್ಸ್

Naveen Soorinje


– ನವೀನ್ ಸೂರಿಂಜೆ


 

 

“ಪೊಲೀಸ್ ಠಾಣೆಗಳಲ್ಲಿ ನ್ಯಾಪ್ಕಿನ್ ಪ್ಯಾಡ್ ಒದಗಿಸಿ” ಎಂದು ಭಾರತೀಯ ವಿದ್ಯಾರ್ಥಿAngellica Aribam_1 ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಏಂಜಿಲಿಕಾರವರು ದೆಹಲಿ ಪೊಲೀಸರಿಗೆ ಬರೆದ ಪತ್ರ ಬಗ್ಗೆ ಚರ್ಚೆಯಾಗುತ್ತಿರುವ ದಿನಗಳಲ್ಲಿ ಜೈಲಿನಲ್ಲಿರುವ ಮಹಿಳಾ ಕೈದಿಗಳ ಅವಸ್ಥೆ ನೆನಪಿಗೆ ಬಂತು. ಸಾರ್ವಜನಿಕರ ಜೊತೆಗೆ ನಿತ್ಯ ವ್ಯವಹರಿಸುವ ಪೊಲೀಸ್ ಠಾಣೆಗಳಲ್ಲಿ ಇಂತಹ ಪರಿಸ್ಥಿತಿಯಾದರೆ ಹೊರ ಜಗತ್ತಿಗೇ ಸಂಪರ್ಕವಿಲ್ಲದ ಜೈಲುಗಳ ಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ನಾನು ಮಂಗಳೂರು ಜೈಲಿನಲ್ಲಿ ನಾಲ್ಕುವರೆ ತಿಂಗಳು ಕಳೆಯಲು ಅವಕಾಶ ಸಿಕ್ಕಿದಾಗ ಮಹಿಳಾ ಕೈದಿಗಳು ಪಿರಿಯೆಡ್ಸ್ ಸಂದರ್ಭದಲ್ಲಿ ಅನುಭವಿಸುವ ನೋವು ಸಂಕಟಗಳ ಅರಿವಾಗಿ ದಂಗಾಗಿ ಹೋಗಿದ್ದೇನೆ. ಮಹಿಳೆಯೊಬ್ಬಳು ನನ್ನನ್ನೇ ಕೊಲೆ ಮಾಡಿದರೂ ಕೂಡ ಆಕೆಯನ್ನು ಕರ್ನಾಟಕದ ಜೈಲಿಗೆ ಹಾಕುವಂತಹ ಸ್ಥಿತಿ ಬರಬಾರದು ಎಂದು ಅಂದುಕೊಂಡರೂ ತಪ್ಪಿಲ್ಲ ಅನ್ನಿಸುತ್ತದೆ.

ಜೈಲುಗಳ ಮಹಿಳಾ ಬ್ಯಾರಕುಗಳ ಸ್ಥಿತಿ ಯಾರಿಗೂ ಬೇಡ. ಠಾಣೆಯಲ್ಲಿ ಎಂಟು ಗಂಟೆಗಳ ಕಾಲ ಪೊಲೀಸ್ ವಶದಲ್ಲಿದ್ದಾಗ ಎಂಜಲಿಕಾರವರಿಗೆ ನ್ಯಾಪ್ಕಿನ್ ಪ್ಯಾಡ್ ಸಿಗದೇ ಇದ್ದಾಗ ಅವರು ಅನುಭವಿಸಿದ ಸಂಕಟಕ್ಕೆ ಹೋಲಿಕೆನೇ ಮಾಡಲಾಗದಷ್ಟು ನರಕಯಾತನೆಯನ್ನು ಮಹಿಳಾ ಕೈದಿಗಳು ಇಂದು ಅನುಭವಿಸುತ್ತಿದ್ದಾರೆ. ಬೇರೆ ಯಾವ ಕಡೆಯಲ್ಲಾದರೂ ಯಾರನ್ನಾದರೂ ಸಂಪರ್ಕ ಮಾಡಬಹುದು. ಜೈಲಿನ ಮಹಿಳಾ ಬ್ಯಾರಕುಗಳ ಲೋಕವೇ ನಿಗೂಢವಾಗಿದ್ದು. ಇಲ್ಲಿ ವರ್ಷಗಟ್ಟಲೆ ಕೈದಿಗಳಾಗಿರುವ ಮಹಿಳೆಯರಿದ್ದಾರೆ. ಜೈಲು ಸೇರಿದ ನಂತರ ಒಂದೇ ಒಂದು ಬಾರಿಯೂ ಮನೆಯವರ ಮುಖ ನೋಡದ ಮಹಿಳೆಯರೂ ಇದ್ದಾರೆ. ಅವರ ಸ್ಥಿತಿ ಹೇಗಿರಬೇಡ ?

ಜೈಲಿನಲ್ಲಿದ್ದ ನನಗೆ ಅದೊಂದು ದಿನ ಜೈಲರ್ರಿಂದ ಕರೆ ಬಂದಿತ್ತು.Angellica Aribam ಜೈಲರನ್ನು ಭೇಟಿಯಾದಾಗ “ಮಹಿಳಾ ಕೈದಿಯೊಬ್ಬರು ನಿಮ್ಮನ್ನು ಭೇಟಿಯಾಗಬೇಕಂತೆ” ಎಂದರು. ಮಹಿಳಾ ಕೈದಿಗಳ ಭೇಟಿಗೆ ಅವಕಾಶವಿರುವ ಕೊಠಡಿಯಲ್ಲಿ ಆ ಮಹಿಳಾ ಕೈದಿಯನ್ನು ಭೇಟಿಯಾಗಿದ್ದೆ. ಆಕೆ ಸೇರಿದಂತೆ ಆಗ ಜೈಲಿನಲ್ಲಿದ್ದ 15 ಕ್ಕೂ ಅಧಿಕ ಮಹಿಳಾ ಕೈದಿಗಳ ತಮ್ಮ ದುಸ್ಥಿತಿಯನ್ನು ತೋಡಿಕೊಂಡರು. ಸೀಮಿತವಾಗಿರುವ ಬಟ್ಟೆಬರೆಗಳನ್ನು ಇಟ್ಟುಕೊಂಡು ಮಹಿಳೆಯೊಬ್ಬಳು ಬದುಕುವುದೇ ದುಸ್ಥರವಾಗಿರುವಾಗ ಪಿರಿಯೆಡ್ಸ್ ಸಮಯದಲ್ಲಿ ನ್ಯಾಪ್ಕಿನ್ ಇಲ್ಲವೆಂದರೆ ಹೇಗೆ? ಜೈಲಿಗೆ ನ್ಯಾಪ್ಕಿನ್ ಒದಗಿಸಲೆಂದೇ ಪ್ರತ್ಯೇಕ ಹಣದ ವ್ಯವಸ್ಥೆ ಇದೆ. ಆದರೆ, ಅದು ಅಧಿಕಾರಿಗಳ ಕಿಸೆ ಸೇರುತ್ತದೆ. ಪಿರಿಯೆಡ್ಸ್ ಸಂದರ್ಭದಲ್ಲಿ ಮಹಿಳೆಯ ಮಾನಸಿಕ ಸ್ಥಿತಿಯಲ್ಲೂ ಏರುಪೇರಾಗುತ್ತದೆ. ಪಿರಿಯೆಡ್ಸ್ ಸಮಯದಲ್ಲಿ ಮಹಿಳೆಯ ಸ್ವಚ್ಚವಾಗಿರುವ ಶೌಚಾಲಯ ಬಳಸಬೇಕು. ಇಲ್ಲದೇ ಇದ್ದಲ್ಲಿ ಆಕೆ ಹಲವು ರೋಗಗಳಿಗೆ ಈಡಾಗುತ್ತಾಳೆ. ಆದರೆ ಯಾವ ಮಹಿಳಾ ಬ್ಯಾರಕಿನಲ್ಲೂ ಯಾವುದೇ ಶೌಚಾಲಯಗಳು ಸ್ವಚ್ಚವಾಗಿಲ್ಲ.

ವಿಚಿತ್ರವೆಂದರೆ ಜೈಲಿನೊಳಗಿನ ಈ ಪರಿಪಾಟಲನ್ನು ಮಹಿಳಾ ಜೈಲರ್ ಗಳಿಗೆ ಹೇಳಿದರೂ ಪ್ರಯೋಜನವಾಗುವುದಿಲ್ಲ. ಒಂದು ಉಪ-ಕಾರಾಗೃಹದಲ್ಲಿ ಸಾಮಾನ್ಯವಾಗಿ ಒಂದು ಪುರುಷ ಜೈಲರ್, ಒಂದು ಮಹಿಳಾ ಜೈಲರ್ ಮತ್ತು ಒಬ್ಬ ಜೈಲ್ ಸೂಪರಿಂಡೆಂಟ್ ಇರುತ್ತಾರೆ. ಮಹಿಳಾ ಜೈಲರ್ ಎಂಬುದು ಮಹಿಳಾ ಬ್ಯಾರಕಿಗಷ್ಟೇ ಸೀಮಿತ ಆಗಿರೋದ್ರಿಂದ ಅವರ ಅಧಿಕಾರ ಅಷ್ಟಕ್ಕಷ್ಟೆ. ನೂರಾರು ಕೈದಿಗಳನ್ನು ಸಂಭಾಳಿಸುವ ಪುರುಷ ಜೈಲರುಗಳದ್ದೇ ಜೈಲುಗಳಲ್ಲಿ ಕಾರುಬಾರು ಇರುತ್ತದೆ. ಮಹಿಳಾ ಜೈಲರುಗಳು ನ್ಯಾಪ್ಕಿನ್ ಬಗ್ಗೆ ಪ್ರಸ್ತಾಪಿಸಿದ್ರೂ ಸುಪರಿಂಡೆಂಟ್ ಎದುರು ಸ್ವತಃ ಮುಜುಗರಕ್ಕೆ ಈಡಾಗಬೇಕಾಗುತ್ತದೆ.

ನನ್ನ ಬ್ಯಾರಕಿನಲ್ಲೇ ನಕ್ಸಲ್ ಆರೋಪ Women Jail inmatesಹೊತ್ತು ವಿಚಾರಣಾಧೀನ ಬಂಧನದಲ್ಲಿದ್ದ ಕೈದಿಯೊಬ್ಬರಿದ್ದರು. ಮಹಿಳಾ ಬ್ಯಾರಕಿನಲ್ಲಿ ನ್ಯಾಪ್ಕಿನ್ ಇಲ್ಲದಿರುವ ಬಗ್ಗೆ ನಾವಿಬ್ಬರೂ ಒಮ್ಮೆ ಜೈಲರನ್ನು ಭೇಟಿಯಾಗಿ ಕೇಳಿದ್ದೆವು. ಆತ ನಕ್ಕ ಶೈಲಿ ಇದೆಯಲ್ಲಾ, ಅದನ್ನು ನೆನೆಪಿಸಿಕೊಂಡಾಗ ಈಗಲೂ ಮೈ ಉರಿಯುತ್ತೆ. ನಂತರ ಜೈಲಿನೊಳಗೆ ವಿಚಾರಣಾಧೀನ ಮುಸ್ಲಿಂ ಬಂಧಿತರಿಗೆ ತೊಂದರೆಯಾದಾಗ ಜೈಲಿನಲ್ಲಿ ಪ್ರತಿಭಟನೆ ಮಾಡಿದ್ದೆವು. ಆಗ ಬೇಡಿಕೆ ಈಡೇರಿಕೆಯ ಬಗ್ಗೆ ಅಧಿಕಾರಿಗಳ ಜೊತೆ ಸಂಧಾನ ಸಭೆ ನಡೆಸಿದಾಗ, ನ್ಯಾಪ್ಕಿನ್ ವಿಚಾರವನ್ನು ಬೇಡಿಕೆಯ ಪಟ್ಟಿಯಲ್ಲಿ ಹಾಕಿದ್ದೆವು. ಸ್ವಲ್ಪ ದಿನ ನ್ಯಾಪ್ಕಿನ್ ಪೂರೈಕೆಯೂ ಆಯಿತು. ನಂತರ ನಿಂತು ಹೋಗಿದೆ.

ಜೈಲು ವ್ಯವಸ್ಥೆಯಲ್ಲೇ ತಪ್ಪುಗಳಿವೆ. ಇಲ್ಲಿ ಪುರುಷ ಕೈದಿಗಳು ಮತ್ತು ಮಹಿಳಾ ಕೈದಿಗಳ ಮಧ್ಯೆ ಆವರಣ ಗೋಡೆ ಹೊರತುಪಡಿಸಿದರೆ ಬೇರಾವ ಸರಕಾರಿ ಸೌಲಭ್ಯಗಳಲ್ಲೂ ವ್ಯತ್ಯಾಸವಿಲ್ಲ. ಹಾಗೆ ನೋಡಿದರೆ ಜೈಲಿಗೆ ಎಂದು ಬರುವ ಎಲ್ಲಾ ಅನುದಾನಗಳ ಪ್ರಯೋಜನಗಳು ಪುರುಷರ ಬ್ಯಾರಕಿಗೆ ಸಲ್ಲಿಕೆಯಾಗುತ್ತದೆ. ಗ್ರಂಥಾಲಯ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸರಕಾರಿ ಯೋಜನೆಗಳು ದೊಡ್ಡದಾಗಿ ಕಾಣುವ ಪುರುಷರ ಬ್ಯಾರಕುಗಳಿರುವ ಬ್ಲಾಕಿಗೆ ಹೋಗುತ್ತದೆ. ಉನ್ನತ ಅಧಿಕಾರಿಗಳು ಪರಿಶೀಲನೆಗೆ ಬರುವ ಸಂಧರ್ಭದಲ್ಲೂ ಕೇವಲ ಪುರುಷರ ಬ್ಯಾರಕುಗಳನ್ನಷ್ಟೇ ಪರಿಶೀಲನೆ ಮಾಡುತ್ತಾರೆ. ಯಾವತ್ತೋ ಒಮ್ಮೆ ಭೇಟಿ ನೀಡೋ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಅಥವಾ ಸದಸ್ಯರು ಇಲ್ಲಿಯವರೆಗೂ ಮಹಿಳಾ ಬ್ಯಾರಕಿಗೆ ಭೇಟಿ ನೀಡಿದ್ದು ನನಗಂತೂ ಗೊತ್ತಿಲ್ಲ. ಉನ್ನತ ಅಧಿಕಾರಿಗಳು ಪರಿಶೀಲನೆಯ ವೇಳೆ ಗೋಡೆ, ಕಿಟಕಿ, ಬಾಗಿಲು, ಬೀಗ ಸರಿಯಿದೆಯೇ ಎಂದು ಪರಿಶೀಲನೆ ನಡೆಸುತ್ತಾರೆಯೇ ಹೊರತು ಮನುಷ್ಯ ಬದುಕಲು ಯೋಗ್ಯವಾದ ವಾತಾವರಣ ಇದೆಯೇ ಎಂಬ ಕಡೆ ಗಮನ ಕೊಡುವುದಿಲ್ಲ. ಇಂತಹ ಪರಿಸರದಲ್ಲಿ ಪಿರಿಯೆಡ್ಸ್ ಟೈಮಲ್ಲಿ ಮಹಿಳೆಯರ ಸ್ಥಿತಿ ಹೇಗಿರಬೇಡ ?

ಪುರುಷ ಬ್ಯಾರಕ್ ಇರೋ ಜೈಲು ಆವರಣದ ಒಳಗೆ ಜೈಲಿನ ಊಟ ಸಿದ್ದವಾಗುತ್ತದೆ. ಪುರುಷ ಕೈದಿಗಳಿಗೆJail ಹಂಚಿದ ನಂತರ ಮಹಿಳಾ ಕೈದಿಗಳಿಗೆ ಊಟ ನೀಡಲಾಗುತ್ತದೆ. ಊಟ ಕಳುಹಿಸುವುದರಿಂದ ಹಿಡಿದು ಪಿರಿಯೆಡ್ಸ್ ಸಮಯದಲ್ಲಿ ನ್ಯಾಪ್ಕಿನ್ ಕೊಡೋದ್ರ ತನಕ ಮಹಿಳಾ ಕೈದಿಗಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಯಾವುದೇ ಜೈಲುಗಳಲ್ಲಿ ಹಾಸಿಗೆ ತಲೆದಿಂಬು ಬಳಸುವಂತಿಲ್ಲ. ನೆಲದ ಮೇಲೆ, ಚಾಪೆ ಅಥವಾ ಬೆಡ್ ಶೀಟ್ ಹಾಸಿ ಮಲಗಬೇಕು. ಹಾಸಿಗೆ ದಿಂಬು ಜೈಲಿನಲ್ಲಿ ಬಳಸಲು ಒಂದೋ ನ್ಯಾಯಾಲಯದ ಅನುಮತಿ ಬೇಕು ಅಥವಾ ಪ್ರಭಾವಶಾಲಿಯಾಗಿರಬೇಕು. ಜೈಲಿನಲ್ಲಿ ದಿನಗಟ್ಟಲೆ, ವರ್ಷಗಟ್ಟಲೆ ಇದ್ದಾಗ ಪಿರಿಯೆಡ್ಸ್ ಟೈಮಲ್ಲಿ ಕೇವಲ ನ್ಯಾಪ್ಕಿನ್ ಅಲಭ್ಯತೆ ಮಾತ್ರ ಸಮಸ್ಯೆ ಅಲ್ಲ. ಪಿರಿಯೆಡ್ಸ್ ಸಮಯದಲ್ಲಿ ಬಹಳಷ್ಟು ಮಹಿಳೆಯರಿಗೆ ತಲೆಯನ್ನು ಗೋಡೆಗೆ ಚಚ್ಚಬೇಕು ಅನ್ನುವಷ್ಟು ತಲೆ ಸಿಡಿತವಾಗುತ್ತದೆ. ಆಗ ಒರಗಿಕೊಳ್ಳಲು ದಿಂಬಿಲ್ಲದೆ ಗೋಡೆಗೆ ತಲೆ ಇಡಬೇಕಾಗುತ್ತದೆ. ಇನ್ನು ಕೆಲ ಮಹಿಳೆಯರಿಗೆ ಪಿರಿಯೆಡ್ಸ್ ಸಮಯದಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಆ ಸಂಧರ್ಭದಲ್ಲೂ ನೆಲದ ಮೇಲೆಯೇ ಮಲಗಬೇಕು ಎನ್ನುವುದು ಅದ್ಯಾವ ಶಿಕ್ಷೆ? ಮನೆಯಲ್ಲಿ ಅಕ್ಕನೋ, ತಂಗಿಯೋ, ಹೆಂಡತಿಯೋ ಬೇಕಾದ ಸೌಲಭ್ಯಗಳು ಕೈಗೆಟುಕುವಂತಿದ್ದರೂ ಪಿರಿಯೆಡ್ಸ್ ಟೈಮಲ್ಲಿ ಅವರ ಕಷ್ಟ ನಮಗೆ ನೋಡೋಕಾಗಲ್ಲ. ಅಂತಹುದರಲ್ಲಿ ನಾಲ್ಕು ಗೋಡೆಗಳ ಮಧ್ಯೆ ತಮ್ಮವರ್ಯಾರು ಇಲ್ಲದೆ, ಕನಿಷ್ಠ ಶುಚಿಯಾದ ಶೌಚಾಲಯವೂ ಇಲ್ಲದೆ, ನ್ಯಾಪ್ಕಿನ್ ಬಿಡಿ ಕನಿಷ್ಠ ಬಳಸೋಕೆ ಬಟ್ಟೆಯೂ ಇಲ್ಲದೆ ಪಿರಿಯೆಡ್ಸ್ ಟೈಮಲ್ಲಿ ಬದುಕುವ ಮಹಿಳಾ ಕೈದಿಗಳ ಪಾಡು ಹೇಗಿರಬೇಕು ಎಂದು ನೆನೆಯುವಾಗ ಮೈ ಜುಂ ಎನಿಸುತ್ತದೆ.

ಏಂಜಿಲಿಕಾರವರು ದೆಹಲಿ ಪೊಲೀಸರಿಗೆ ಬರೆದ ಪತ್ರದ ವಿಚಾರ ಚರ್ಚೆಯ ಹೊತ್ತಿನಲ್ಲಿ ಇದೆಲ್ಲ ನೆನಪಿಗೆ ಬಂತು.

15 thoughts on “ಮಹಿಳಾ ಕೈದಿಗಳು ಮತ್ತು ಪಿರಿಯೆಡ್ಸ್

  1. vimala.ks

    ನಿಮ್ಮ ಅನಿಸಿಕೆಯ ಜೊತೆ ನನ್ನ ಸಹಮತವಿದೆ. ಈ ವಿಷಯವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಬೇಕು

    Reply
  2. Anonymous

    swaatantrya chaluvali sandarbhadalli jailige hogi khuddu intaha halavu samasyegalannu edurisida Congress paksha indiraa netrutvadallaagali soniyaa netrutvadallaagali mahilaa khaidigala samasyegalannu bageharisalu krama tegedukolladiddaddu aitihaasika duranta.

    Reply
  3. Anonymous

    ಅಧಿಕಾರಿಗಳು ಮನುಷತ್ವ ಇಲ್ಲದ ಮಾನವರು……………….

    Reply
  4. Anonymous

    ವ್ಯವಸ್ಥೆಯನ್ನು ಬದಲಾಯಿಸಬೇಕು ಸಾರ್, ಅದು ಸಾದ್ಯನಾ?

    Reply
  5. Jaimini p.b.

    felt very sad after reading..heli prayojana illa..melinda kelagina tanaka yelroo kallaru..aa brahma bandroo namma vyavasthe yannu sari maadlu aagolla..

    Reply
  6. prasad raxidi

    ಕಣ್ಣೆದುರಲ್ಲೇ ನರಕವನ್ನಿಟ್ಟುಕೊಂಡು, ಕೆಲಸಕ್ಕೆ ಬಾರದ ,ರಾಮ ಭಗವದ್ಗೀತೆ, ಟಿಪ್ಪು ಸುಲ್ತಾನ ಮುಂತಾದ ಚರ್ಚೆಗಳಲ್ಲಿ ಮುಳುಗಿಹೋಗಿದ್ದೇವೆ, … ನಮ್ಮ ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ ಎಲ್ಲ ಜನ ಪರ ಸಂಘಟನೆಗಳು ಈ ಬಗ್ಗೆ ಗಂಭೀರ ಪ್ರಯತ್ನ ಮಾಡಬೇಕು , ಮಾದ್ಯಮದ ಕೆಲವರಾದರೂ ನಿಮ್ಮೊಡನೆ ಇದ್ದಾರೆಂಬ ನಂಬಿಕೆ ನನ್ನದು. ನಮ್ಮೆಲ್ಲ ಸಾಹಿತಿಗಳು ಸಾವಿರ ಪುಟದ ಸಾಹಿತ್ಯ ಬರೆಯುವುದರ ಜೊತೆಯಲ್ಲಿ ಬದುಕು ನೇರ್ಪಡಿಸುವ ಒಂದು ಸೊಲ್ಲೆತ್ತಿದರೆ,,,,,,ರೆ…ರೆ….ರೆ.ರೆ……….

    Reply
    1. ಸೀತಾ

      ಬಿ ಪಿ ಎಲ್ ಕಾರ್ಡುದಾರರಿಗೆ ಅನ್ನಭಾಗ್ಯವನ್ನೂ ಮುಸ್ಲಿಂ ಮಹಿಳೆಯರಿಗೆ ಶಾದಿ ಭಾಗ್ಯವನ್ನೂ ಕರುಣಿಸಿದ ನಾಡ ಪ್ರಭುಗಳಿಗೆ ನಮ್ಮ ನಾಡಿನ ಕಾರಾಗೃಹವಾಸಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಭಾಗ್ಯ ಕರುಣಿಸಲು ಇಚ್ಚಾಶಕ್ತಿ ಇಲ್ಲವೇ?

      Reply
  7. Girish

    ಉತ್ತಮ ಬರಹ… ಹೇಸಿಗೆ ಹುಟ್ಟಿಸುವ ವ್ಯವಸ್ಥೆ… ಈ ಲೇಖನ ಎಲ್ಲರನ್ನೂ ತಲುಪ ಬೇಕು… ರಾಜ್ಯ ಮಟ್ಟದಲ್ಲಿ ಪ್ರಸಾರವಿರುವ ಯಾವುದಾದರೂ ಪ್ರಮುಖ ದಿನಪತ್ರಿಕೆಯಲ್ಲಿ ಇದನ್ನು ಪ್ರಕಟಿಸಿ.

    ಗಿರೀಶ್, ಬಜಪೆ

    Reply
  8. BNS

    ಇದೇ ಜುಲೈ ತಿಂಗಳ ಬೆಳಗಾವಿ ಅಧಿವೇಶನದಲ್ಲಿ ಈ ಹಗರಣವನ್ನು ಹಾಸಿ, ಹೊದ್ದು ಚರ್ಚೆಯ ಹಳ್ಳ ಹಿಡಿಸಿದ ನಮ್ಮ ರಾಜಕಾರಣಿಗಳು, ಲಕ್ಷಲಕ್ಷಗಟ್ಟಲೆ ಭ್ರಷ್ಟ ಹಣಕ್ಕೆ ಬಾಯ್ಬಿಡುವ ಅಧಿಕಾರಿಗಳ ಕಾರಣ ನಡೆದ ‘ಹಾಸಿಗೆ ದಿಂಬು ಹಗರಣ’ದ ನೆನಪು ಮನಸ್ಸಿನಲ್ಲಿ ಹಾದು ಹೋಯಿತು.ತಿಂಗಳಿನ ‘ಆ ದಿನಗಳ’ ನಡುವೆ ಅವಶ್ಯಕವಾದ ನ್ಯಾಪ್ಕಿನ್ ಒಂದಕ್ಕೆ ಬೇಡುತ್ತಾ ನಿಲ್ಲಬೇಕಾದ ಪರಿಸ್ಥಿತಿ ಮಹಿಳಾ ಕೈದಿಗಳಿಗೆ ಬರುತ್ತದೆ ಎಂದರೆ ಏನು ಹೇಳುವುದು? ಕೈದಿಯಾದರೂ ಒಬ್ಬ ವ್ಯಕ್ತಿಗೆ ಸಿಗಬೇಕಾದ ಘನತೆಗೆ ಕೈಯೊಡ್ಡಬೇಕು ಎಂದರೆ ಅದೆಂಥ ಅಭಾಸ! ಇನ್ನು ಆ ‘ಅಗತ್ಯ’ಕ್ಕೆ ಬೇಕಾದ ಅನುದಾನದಲ್ಲೂ ಗುಂಜಿ ತಿನ್ನುವ, ಕಳಪೆ ನ್ಯಾಪ್ಕಿನ್ ಖರೀದಿಸಿದ, ಘೋಟಾಲಾಗಳ ಕಾಲ್ಪನಿಕ ದೃಶ್ಯ ಕಣ್ಣ ಮುಂದೆ ಬಾರದೆ ಇರಲಿಲ್ಲ.

    ಆದರೂ ನವೀನ್ ಸೂರಿಂಜೆಯವರ ಈ ಸೂಕ್ಷ್ಮಾವಲೋಕನೆಗೆ ಬೆನ್ನು ತಟ್ಟುವ ಧೈರ್ಯ ಮಾಡುತ್ತೇನೆ. ಪದೇ ಪದೇ ನೆನಪಿಗೆ ಬರುವ, ನನ್ನ ಇಂಗ್ಲಿಷ್ ಟೀಚರ್ ಒಬ್ಬರು ಹೇಳುತ್ತಿದ್ದ ಮಾತು ಇದು “ಮಹಿಳೆಯರನ್ನು ನೀವು ಅಕ್ಕತಂಗಿಯರಂತೆ ನೋಡಬೇಕಿಲ್ಲ, ದೈವತ್ವಕ್ಕೆ ಏರಿಸಿ ಪೂಜ್ಯಭಾವನೆಯಿಂದಲೂ ನೋಡಬೇಕಿಲ್ಲ, ಕೇವಲ ಮನುಷ್ಯರಂತೆ ಕಾಣಿ”

    Reply
  9. A S Abudhabi

    ಉತ್ತಮ ಅನುಭವ, ನಿಜವಾಗಿಯೂ ನಮ್ಮ ವ್ಯವಸ್ಥೆ ಬದಲಿಸುವ ತನಕ ಇದೆಲ್ಲವೂ ಮರೀಚಿಕೆಯಾಗಿಯೇ ಉಳಿಯುವುದರಲ್ಲಿ ಸ೦ಶಯವಿಲ್ಲ. ಭ್ರಷ್ಟಾಚಾರ, ಲ೦ಚ ಹಾಗೂ ಕಿಸೆ ತು೦ಬಿಸುವುದರಲ್ಲೇ ತಲ್ಲೀನರಾದ ಅಧಿಕಾರಿಗಳಿಗೆ ಇನ್ನು ನ್ಯಾಪ್ಕಿನ್ ಗೆ ಬೇಡಿಕೆಯಿಟ್ಟಾಗ ನಗುವುದರಲ್ಲಿ ಅಚ್ಚರಿ ಪಡಬೇಕಾದ್ದೇನಿಲ್ಲ ಬಿಡಿ. ನಿಜವಾಗಿಯೂ ನಮ್ಮ ಪೋಲಿಸ್ ಅಧಿಕಾರಿಗಳನ್ನು ಕೊಲ್ಲಿ ರಾಷ್ಟ್ರಗಳಿಗೆ ಟ್ರೈನಿ೦ಗಿಗೆ ಕಳುಹಿಸುವ ಅಗತ್ಯವಿದೆ ಏಕೆ೦ದರೆ ಕೊಲ್ಲಿ ರಾಷ್ಟ್ರಗಳಲ್ಲಿ ಕೈದಿಗಳನ್ನು ಯಾವ ರೀತಿ ಮನುಷ್ಯರ ತರಹ ನೋಡಿಕೊಳ್ಳುತ್ತಾರೆ೦ಬುವುದನ್ನು ನಮ್ಮ ಅಧಿಕಾರಿಗಳು ನೋಡಿ ಕಲಿಯಬೇಕಾದುದು ಬಹಳಷ್ಟಿದೆ.

    Reply
  10. Jayashankar Halagur

    ಮಾನವ ಹಕ್ಕು ಆಯೋಗ, ಮಹಿಳಾ ಆಯೋಗ ಅದೇನು ಮಾಡುತ್ತಿವೆಯೋ? ಮನುಷ್ಯರಾದವರೆಲ್ಲರೂ ಯೋಚಿಸಬೇಕಾದ ಮಹತ್ವದ ವಿಚಾರವನ್ನು ಮಂಡಿಸಿದ್ದೀರಿ, ಈ ಪ್ರಜ್ಞೆ ಎಲ್ಲೆಡೆಯೂ ಜಾಗೃತವಾಗಿ ಸೆರಮನೆಯ ಮಹಿಳೆಯರ ಸ್ಥಿತಿ ಪ್ರಗತಿದಾಯಕವಾಗಿ ಬದಲಾಗಲಿ.

    Reply

Leave a Reply

Your email address will not be published. Required fields are marked *