Daily Archives: September 14, 2011

ಹನಿ… ಹನಿ…


ಬೆಳಗಾಯಿತು ;
ನನ್ನದಷ್ಟೇಯಲ್ಲ
ಲೋಕದ ಎಲ್ಲ
ಗಾಯಗಳು
ಬೀದಿ ತಲುಪಿದವು

ಎಷ್ಟು ನಿರಾಳವಾಗಿ ರೆಕ್ಕೆ ಬಿಚ್ಚಿದೆ
ಕನ್ಕಪ್ಪಡಿ ಇರುಳಿನಲ್ಲಿ ;
ಏನೂ ಕಾಣುವುದಿಲ್ಲವೆಂದು ಈಗಲೂ ಇರುಳನ್ನೇಕೆ
ದೂರುತ್ತಿ ..

ನಿನ್ನ ನಾಜೂಕು ಬೆರಳುಗಳಿಂದ
ನನ್ನ ಹೆಸರನ್ನ ಎದೆಯ ಮೇಲೆ ಬರೆಯಿಸಿಕೊಳ್ಳುವ
ಆಸೆ ಇನ್ನೂ ಇತ್ತು
ಬದುಕು ನಿನ್ನೆ ದಿನ
ನನ್ನ ಬೆರಳುಗಳಿಂದ ನಿನ್ನ ಹೆಸರನ್ನ
ನಿನ್ನ ಸಮಾಧಿಯ ಮೇಲೆ
ಬರೆಯಿಸಿತು ….


ನಿನ್ನ ಕಾಲು ನೋವಿನ ಸುದ್ದಿ ಈಗಷ್ಟೆ ತಲುಪಿತು
ನಿನ್ನೆ ರಾತ್ರಿ ನನ್ನ ಕನಸಿನಲ್ಲಿ ನೀನು ಅಷ್ಟು ಓಡಾಡಬಾರದಿತ್ತು


ಇದೆಂಥ
ನೋಟ ಗೊತ್ತಿಲ್ಲ
ಇರುಳಿನಲಿ ಚಂದ್ರನ
ಕಂಡು
ಲೋಕ ಬೆಳಗಿನಲಿ
ಹಬ್ಬ ಆಚರಿಸುತ್ತಿದೆ
ಅದಕ್ಕೆಂದೇ
ಕರುಣಾಳು ಹಗಲು
ಕನಸ ಬಿಟ್ಟು ಬಂದವರಿಗೆ
ರೊಟ್ಟಿ ಕೊಡುತ್ತಿದೆ


ಬೆಳಕು
ಕಣ್ಣು ತೆರೆಯಿಸಿದೆಂದರು ;
ಎದ್ದು ನೋಡಿದೆ
ಬೆಳಗಿನಲಿ ಮರಕ್ಕೆ
ಜೋತು ಬಿದ್ದಿತ್ತು
ಬೆಳಕು ಕುರುಡಾಗಿಸಿದ
ಕನ್ಕಪ್ಪಡಿ ..!

೭ .
ಎಷ್ಟು ಸಾರಿ ತೊಳೆದರೂ ಕನ್ನಡಿಯನ್ನು
ಮುಖದ ಕಲೆ ಅಳಿಸಲಾಗದು.
೮ .
ಈ ಮನಸು ಕುದಿಕುದಿವ ಅವಿಶ್ರಾಂತ
ನಡುಗೆಯಲ್ಲಿದೆಯೆಂಬುದು ಸುಳ್ಳೇನಲ್ಲ
ನಿನ್ನ ಅಸಹನೆಗೆ ಕಾರಣವಿರಬಹುದು.
ಕಾದ ಬಂಡೆ ಜಂಗಮ ಕಾಲುಗಳನು
ಸ್ಥಾವರ ಮಾಡಗೊಡುವುದಿಲ್ಲ.
ಸುಡುವ ಕೆಂಡದ ಮೇಲೆ ಕಾಲೂರಿ
ನನ್ನೆಡೆಗೆ ಕೈಚಾಚುವ ಮನಸು ಹೇಳುತ್ತಿದೆ
ಪಾತರಗಿತ್ತಿ, ಹಾರಿ ಹೋಗುವ ಮುನ್ನ
ಸ್ಥಾವರಕ್ಕೂ ಜೀವತುಂಬು.
ಈ ಪ್ರೀತಿ
ಭೋರ್ಗರೆಯುವ ಜಲಧಾರೆಯಿಂದ
ಒಂದು ಹನಿಯನ್ನೂ
ಕೆನ್ನಾಲಿಗೆ ಚಾಚಿ ಪ್ರಜ್ವಲಿಸುವ ಬೆಂಕಿಯಿಂದ
ಒಂದು ಕಿಡಿಯನ್ನೂ
ನಿಗಿನಿಗಿ ಉರಿಯುವ ಸೂರ್ಯನಿಂದ
ಒಂದು ಕಣವನ್ನೂ
ಒಮ್ಮೆಲೆ ಬಂದೆರಗುವ ಬಿರುಗಾಳಿಯ ಧೂಳಿನಿಂದ
ಒಂದು ಅಣುವನ್ನೂ
ಘೀಳಿಡುವ ಆನೆ ಸದ್ದಿನಿಂದ
ಒಂದು ತುಣುಕನ್ನೂ
ಪಡೆದುಕೊಂಡಿದೆ.
ಕ್ಷಮಿಸು ಲೋಕವೆ..
ತಣ್ಣನೆಯ ಪ್ರೀತಿ ಸಾಧ್ಯವಿಲ್ಲ.
೧೦
ನೀನು
ಉಸಿರಾಡುವ ಗಾಳಿಯ ಹಾಗೆ
ಕಣ್ಣಿಗೆ ಕಾಣುವುದಿಲ್ಲ
ನಿನ್ನ ಇರುವಿಕೆ ಮಾತ್ರ
ಪ್ರತಿಕ್ಷಣ ಅರಿವಿಗೆ ಬರುತ್ತದೆ
ಏನು ಹೇಳಲಿ?
ಲೋಕ ಕಲಿಸಿದ ಪಾಠವಿದು
ಒಳಗಿರುವುದೆಲ್ಲ ಹೊರಗೆ ಕಾಣಿಸದು
೧೧
ನೀನು ಬೆಂಕಿಯಿಟ್ಟೆ
ಎಂಬುದು ನೆಪವಷ್ಟೆ
ಸುಟ್ಟ ಮೇಲಷ್ಟೆ
ಗಂಧದ ಕಡ್ಡಿಗೆ ಸುವಾಸನೆ.
೧೨ .
ದೀಪ ಹಚ್ಚಿಟ್ಟ ಮೇಲಾದರೂ
ಎದುರಿನ ಮುಖ ಕಾಣಲಿಲ್ಲವಾದರೆ
ದೋಷ ಎಲ್ಲಿಯದೆಂದು
ಈಗಲಾದರೂ ಹುಡುಕು
೧೩
ನಿನ್ನದೇನು ಮಹಾ?
ಬೆಳಕಾದವನನ್ನು ಕತ್ತಲೆಗೆ ದೂಡುವುದು
ದಿನದ ಪರಂಪರೆ.
೧೪
ಬಿದ್ದ ಮಳೆ ಒಂದೇ.
ಭೂಮಿಯ ಅನುಭವಕ್ಕೆ
ನೂರು ಬಣ್ಣ
೧೫
ಯಾರ ನೋವನ್ನೂ
ಸಹಿಸಲಾಗುವುದಿಲ್ಲ ನನಗೆ
ನನ್ನದರ ಹೊರತು
ಎಲ್ಲರ ಸಾವಿಗೂ ಕಣ್ಣೀರಾಗುವೆ
ನನ್ನದರ ಹೊರತು
೧೬
ಹೂ ಮುಡಿಗಿಡುವಾಗಿನ  ಖದರು
ಜಗುಲಿಗೆ  ಏರಿಸುವಾಗಿನ  ನೆದರು
ಗೋರಿ ಮೇಲೆ ಹರಡುವಾಗಿನ ಸದರು
ಒಂದೇ ಅಲ್ಲ
ಎಲ್ಲೆಡೆ ಇಟ್ಟಿದ್ದು
ಹೂವೇ ಆದರೂ
ಹೂವಿಟ್ಟ ಮನಸು ಘನತೆ ಪಡೆಯುವುದು
ಹೂವು ನಲುಗುವುದು.
೧೭ .
ಒಂದು ರಾತ್ರಿಯಾದರೂ
ನಾನು ಕತ್ತಲಲ್ಲಿ ಉಳಿಯದಂತೆ
ನೋಡಿಕೊಂಡೆ.
ಅದಕ್ಕೆಂದೇ
ಬೆಳಗಾಗುವ ಹೊತ್ತಿಗೆ
ನೀ ಹಚ್ಚಿಟ್ಟ ಹಣತೆಯಲ್ಲಿ
ಐಕ್ಯವಾದೆ.
೧೮
 ತುಟಿಗಳ ಬಿಸಿ ಆರುತ್ತ ನಡೆದಿದೆ
ಎದೆಯ ಕಾತರ ನಿಧಾನದ ಹಾದಿಯಲ್ಲಿದೆ
ಮಳೆಗಾಲದಲ್ಲೇ ಭೂಮಿಯ ಬಿಸಿ ಇಂಗತೊಡಗಿದೆ
ಇದು ನಿನ್ನ ಭಾಷೆಯಲ್ಲಿ ಉದಾಸೀನತೆ
ಲೋಕದ ಭಾಷೆಯಲ್ಲಿ ವೈರಾಗ್ಯ
ಎಲ್ಲ ಭಾಷೆಗಳೂ
ಬಣ್ಣದಲ್ಲಿ ಮುಳುಗೇಳುವ ಸಮಯವಿದು
ನನ್ನ ನಿನ್ನ ಎದೆಯು
ಎಚ್ಚರವಾಗಿಯೇ ಇದ್ದರೆ
ಬಿಸಿ ಆರುವ ತುಟಿಗಳಲ್ಲಿ
ಕಾತರ ಕಳೆದುಕೊಂಡ
ಎದೆಯ ಹಾದಿಯಲಿ
ಹಸಿ ಇಂಗುವ ಭೂಮಿಯಲಿ
ಸಾವು ಇಂಚಿಂಚಾಗಿ
ಬೆಳೆಯುವ ಸತ್ಯ ಗೊತ್ತಾಗುತ್ತಿತ್ತೇನೋ?
೧೯
ನಿನ್ನ ಅರ್ಥ ಮಾಡಿಕೊಳ್ಳುವುದೊಂದು ಕಸರತ್ತು
ನಾನದನ್ನು ನಿಲ್ಲಿಸಿದೆ
ಆ ಗಳಿಗೆಯಿಂದ ನಿನ್ನ ಮೌನ
ಎದೆಗೆ ತಲುಪತೊಡಗಿತು.
ಮಾತು ಕೇಳತೊಡಗಿತು
ಕೆಲವು ಸಂಗತಿಗಳಿರುತ್ತವೆ
ಬಾಯಿ ಬಿಟ್ಟು ಹೇಳಿದರೆ
ಬರೀ ಸದ್ದಷ್ಟೇ ಕೇಳುತ್ತದೆ
ಎಲ್ಲೋ ಇರುವ ಹೂ
ಅರಳಿದ್ದು ಗೊತ್ತಾಗುವ ಹಾಗೆ
ದೇಹದ ಒಳಗುಟ್ಟುಗಳು ಹೀಗಿರುತ್ತವಲ್ಲ
ಮಾತಿಲ್ಲದೆಯೂ
ಹೃದಯಕ್ಕೆ ಮುಟ್ಟುತ್ತವೆ.
೨೦ .
ನಿನ್ನ ನೋಡುವುದೆಂದರೆ
ಕಾತರದಲ್ಲಿ ಕುದಿಯುವುದಲ್ಲ
ನನ್ನ ಮುಖ ನಾನು ಕಾಣುವುದು
೨೧
ಲೋಕ ಅಂದುಕೊಳ್ಳಬಹುದೆಂದು
ನಾನು ಬದಲಾಗಲಾರೆ
ಈ ಬದುಕು
ಪ್ರೇಮದ ಆಟಕ್ಕಾಗಿಯೇ ಮೀಸಲಿದೆ
ಪ್ರೇಮವನ್ನು ಗೆಲ್ಲುತ್ತೇನೆ ಎಂದಲ್ಲ
ಈ ಆಟದಲ್ಲಿ ಸೋಲಾದರೂ ಚಿಂತೆಯಿಲ್ಲ
ಕೊನೆಗೊಮ್ಮೆ ದ್ವೇಷದ ಆಟವನ್ನು
ಆರಂಭಿಸುವುದು
ನನಗೆ ಬೇಡವೆನಿಸಿದೆ.

೨೨

ಅವನೆಂದನು
ನಿನ್ನನ್ನು ಪ್ರೀತಿಸಿದರೆ ಪ್ರೇಮಿಯಾಗುವೆ
ಲೋಕವನ್ನು ಪ್ರೀತಿಸಿದರೆ
ದೇವರಾಗುವೆ..
ಅವಳೆಂದಳು
ನನ್ನನ್ನು ಪ್ರೀತಿಸಿ ನನಗೆ ದೇವರಾಗು
ನನಗೆ ದೇವರಾದವನು
ಲೋಕಕ್ಕೂ ದೇವರಾಗುವನು
ನನ್ನನ್ನು ಪ್ರೀತಿಸದವನು
ಲೋಕವನ್ನು ಪ್ರೀತಿಸುತ್ತಾನೆಂದರೆ
ಹೇಗೆ ನಂಬುವುದು?
೨೩ .
ನನ್ನಂತೆ ನಿನ್ನಂತೆ
ಲೋಕದಲ್ಲಿ ಎಲ್ಲರೂ
ಪ್ರೀತಿಯನ್ನು ಬೇಡುತ್ತ ಹೊರಟವರೆ
ಕೊಡುವವರು ಇಲ್ಲದಾಗ
ಬೇಡುವವರ ಸಂಖ್ಯೆ
ದೊಡ್ಡದಾಗುವುದು
ಕೊಡದೇ ಹೋದ ಅರಿವು
ಪಡಕೊಂಡ ಸಮುದ್ರದ ನೀರನ್ನೂ
ಬರಿದಾಗಿಸುವುದು
ಬೇಡುವ ಬದಲು ಕೊಡುವುದನ್ನೇಕೆ
ರೂಢಿಸಿಕೊಳ್ಳಲಿಲ್ಲ?
ಹಾಗೆ ಮಾಡಿದ್ದರೆ
ಸಮುದ್ರದಲ್ಲಿದ್ದೂ
ಬಾಯಾರಿಕೆಯಿಂದ ಸಾಯುವ
ಘೋರತೆಯಿಂದ
ತಪ್ಪಿಸಿಕೊಳ್ಳಬಹುದಿತ್ತೇನೋ?

೨೪

ಬಣ್ಣದ ಚಿಟ್ಟೆ
ಕನಸಿನ ರೆಪ್ಪೆ ಪಿಳುಕಿಸುವುದು
ಹಗಲಿನಲ್ಲಲ್ಲ
೨೫ .
ನೀನು ಪ್ರೀತಿಸದೇ ಇದ್ದರೆ ಏನಾಗುತ್ತಿತ್ತು?
ಏನಿಲ್ಲ
ಎಲ್ಲವೂ ಹಾಗೆಯೇ ಇರುತ್ತಿತ್ತು..
ನಾನೂ..
ನನ್ನೊಳಗಿನ ರಾಕ್ಷಸ ವಿಲಾಸವೂ..

೨೬

ಸಂತನಾದರೇನು?
ಅವಮಾನದ ಕಟಕಟೆಯನ್ನೇರಿದಾಗ
ಅನುಮಾನ
ಎಲ್ಲ ದಿಕ್ಕಿನಿಂದಲೂ
ಎದ್ದು ಬರುವುದು
ಕುರುಡನ ಕೈಯಲ್ಲಿಯ ಕಲ್ಲು
ಯಾವ ದಿಕ್ಕಿನತ್ತ
ತಿರುಗುವುದೆಂದು
ಯಾರಿಗೂ ಗೊತ್ತಾಗುವುದಿಲ್ಲ
ಸ್ವತಃ ಕುರುಡನಿಗೂ ಸಹಾ..
೨೭.
ನಿನ್ನ ಪ್ರೀತಿಯಲ್ಲಿ
ನಾನು ಸುಟ್ಟುಕೊಂಡ ಮೇಲಷ್ಟೇ
ನಿನ್ನ ಪ್ರೀತಿಸುವುದು
ರುಜುವಾತಾಗುವುದು
ಕಳವಳಕ್ಕೆ ಕಾರಣಗಳಿಲ್ಲ
ಸುಡದ ಸುರಕ್ಷಿತ ದಾರಿಯಲ್ಲಿ
ಪ್ರೇಮ ದೊರಕದು

-ವಿಭಾವ