“ವರ್ತಮಾನ”ದ ಇಂದಿನ ವರ್ತಮಾನ…

ಸ್ನೇಹಿತರೆ,

“ವರ್ತಮಾನ” ನಾನು ಅಂದುಕೊಂಡಷ್ಟು ವೇಗದಲ್ಲಲ್ಲದಿದ್ದರೂ ಸಮಾಧಾನಕರವಾಗಿ ವಿಕಾಸವಾಗುತ್ತಾ ಹೋಗುತ್ತಿದೆ. ಬಹುಶಃ ಇದು ನಿಮ್ಮ ಗಮನಕ್ಕೂ ಬಂದಿರಬಹುದು. ಈಗಾಗಲೆ ಮೂರು ಸರಣಿ ಲೇಖನಗಳು ಪ್ರಕಟವಾಗುತ್ತಿವೆ. ನಾಲ್ಕನೆಯದು ಈ ವಾರ ಆರಂಭವಾಗಲಿದೆ. ರಾಜ್ಯದ ವಿವಿಧ ಭಾಗಗಳಿಂದ ಸಮಾನಮನಸ್ಕರು ಪಾಲ್ಗೊಳ್ಳುತ್ತಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಸುಮಾರು ಹತ್ತು ದಿನಗಳನ್ನು ನಾನು ಕರ್ನಾಟಕದ ಬೇರೆಬೇರೆ ಕಡೆ ಪ್ರವಾಸದಲ್ಲಿಯೇ ಕಳೆದದ್ದರಿಂದಾಗಿ ವೈಯಕ್ತಿಕವಾಗಿ ಏನನ್ನೂ ಬರೆಯಲಾಗಲಿಲ್ಲ. ಆದರೆ, ಹೊಸಹೊಸ ಸ್ನೇಹಿತರು ಮತ್ತು ಸಮಾನಮನಸ್ಕರು, ನಮ್ಮಂತಹುದೇ ಆಶಯವುಳ್ಳವರು ಪರಿಚಯವಾಗುತ್ತಲೇ ಹೋಗುತ್ತಿದ್ದಾರೆ. ಯಾವುದೇ ಹಣಕಾಸಿನ ಅಪೇಕ್ಷೆಯಿಲ್ಲದೆ ವಾರಕ್ಕೆ ನಾಲ್ಕಾರು ಗಂಟೆಗಳನ್ನು ನಾವು ಒಪ್ಪಿಕೊಂಡ ಮೌಲ್ಯ ಮತ್ತು ನೀತಿಗಳಿಗಾಗಿ ನೀಡಲು ಜನ ಜೊತೆಯಾಗುತ್ತಲೇ ಇದ್ದಾರೆ.

ಈ ಮಧ್ಯೆ, ಅನಾಮಿಕರು ನಡೆಸುವ “ಸಂಪಾದಕೀಯ” ಬ್ಲಾಗ್ ವರ್ತಮಾನದ ಬಗ್ಗೆ ಬರೆದು ಒಂದೆರಡು ಮಾತು ಬರೆದು ನಮಗೆ ಬೆಂಬಲ, ಪ್ರೋತ್ಸಾಹ, ಮತ್ತು ಪ್ರಚಾರ ನೀಡಿದೆ. ಅವರಿಗೆ ಧನ್ಯವಾದಗಳು. ಕೆಲವು ತುಡಿತಗಳುಳ್ಳ ಜನರಿಗೆ ಅನಾಮಿಕರಾಗಿ ಅಲ್ಲದೆ ಕೆಲವೊಂದು ವಿಚಾರಗಳನ್ನು ಹೇಳಲಾಗದ ಅನಿವಾರ್ಯತೆ ನಮ್ಮಲ್ಲಿದೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇಲ್ಲದಿದ್ದರೂ, ಅವರ ಅನಿವಾರ್‍ಯತೆ ಮತ್ತು ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ಅವರ ಅನಿವಾರ್ಯತೆಗಳು ಕ್ರಮೇಣ ಕಳಚಿಕೊಳ್ಳಲಿ ಎಂದು ಹಾರೈಸುತ್ತೇನೆ.

“ಸಂಪಾದಕೀಯ” ಬ್ಲಾಗ್ ಯಾರದು ಎನ್ನುವ ಬಗ್ಗೆ ನನಗೆ ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಅದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲವೂ ಈಗ ಇಲ್ಲ. (ಅದು ಎಂದೂ ಇರಲಿಲ್ಲ ಎಂದು ಹೇಳಲಾರೆ.) ಆದರೆ ಒಂದು ಮಾತಂತೂ ಹೇಳಬೇಕು: ಹಲವಾರು ಸಂದರ್ಭಗಳಲ್ಲಿ “ಸಂಪಾದಕೀಯ” ಬರೆಯುವವರು, ಅನಾಮಿಕವಾಗಿದ್ದರೂ ಸಹ, ಬಹಳ ಸಂಯಮದಿಂದ ಮತ್ತು ಪ್ರಬುದ್ಧತೆಯಿಂದ ಬರೆದಿದ್ದಾರೆ. ತಮ್ಮ ಒಲವು-ನಿಲುವುಗಳನ್ನು ಒಪ್ಪದಿದ್ದವರನ್ನು ವಿಮರ್ಶಿಸುವಾಗಲೂ ಸಹ ಅವರು ಇಂತಹ ಅನಾಮಿಕ ಬ್ಲಾಗ್‌ಗಳಿಗೆ ಹೊರತಾದ ಸಂಯಮ ಸಾಧಿಸಿದ್ದಾರೆ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ತಮ್ಮ ಇತರೆ ಮಾಧ್ಯಮ ಸಹೋದ್ಯೋಗಿಗಗಳನ್ನು ವಿಮರ್ಶಿಸುವಾಗ ಮತ್ತು ಮಾಧ್ಯಮಸಂಸ್ಥೆಗಳ ಹಗರಣಗಳನ್ನು ಬರೆಯುವಾಗ ನಮ್ಮ ಪತ್ರಕರ್ತರು ಈ ಮಟ್ಟದ ಸಂಯಮ ತೋರಿಸಿ ಅಂತಹ ವಿಚಾರಗಳನ್ನೂ ಎತ್ತಿಕೊಳ್ಳುವ ಧೈರ್ಯ ತೋರಿಸಿದರೆ, ನಮ್ಮ ಕನ್ನಡ ಮಾಧ್ಯಮರಂಗ ತನ್ನ ಹೊಲಸನ್ನು ಕ್ರಮೇಣ ಕಳೆದುಕೊಳ್ಳುತ್ತದೆ. ಆದರೆ, ಆ ಆಶಾವಾದ ಈಗ ಸದ್ಯಕ್ಕೆ ಅವಾಸ್ತವವಾದದ್ದು. “ವರ್ತಮಾನ” ಇಂತಹುದನ್ನು ಮಾಡಬೇಕು. ನಮಗೆ ಸರಿಯಾದ ಜನ ಸಿಗಬೇಕು ಅಷ್ಟೆ. ಆಧಾರಸಹಿತವಾಗಿ ಇರುವುದನ್ನು, ಅದು ಯಾರ ವಿರುದ್ಧವೇ ಆಗಲಿ, ಪ್ರಕಟಿಸುವ ಪ್ರಾಮಾಣಿಕತೆ “ವರ್ತಮಾನ” ಎಂದಿಗೂ ಉಳಿಸಿಕೊಳ್ಳುತ್ತದೆ.

ಅಂದ ಹಾಗೆ, ಮುಖ್ಯವಾದ ವಿಷಯ ಇದೇನೆ, “ವರ್ತಮಾನ”ದ ಜೊತೆ ಕೈಜೋಡಿಸುವ ಜನ ಈಗ ಹಿಂದೆಂದಿಗಿಂತ ಹೆಚ್ಚಿಗೆ ಬೇಕಾಗಿದ್ದಾರೆ. ನೀವು ಲೇಖಕರೇ ಆಗಬೇಕಿಲ್ಲ. ನಮ್ಮ ಲೇಖಕ ಮಿತ್ರರು ನುಡಿ ಇಲ್ಲವೆ ಬರಹದಲ್ಲಿರುವ ಲೇಖನಗಳನ್ನು ಕಳುಹಿಸುತ್ತಾರೆ. ನಾವು ಅದನ್ನು ಯೂನಿಕೋಡ್‌ಗೆ ಪರಿವರ್ತಿಸಿ ಪ್ರಕಟಿಸಬೇಕಾಗುತ್ತದೆ. ಅದು ಒಮ್ಮೊಮ್ಮೆ ಒಂದಷ್ಟು ಸಮಯ ಬೇಡುತ್ತದೆ. ಒಂದು ಲೇಖನವನ್ನು ಪ್ರಕಟಿಸಲು (ಯೂನಿಕೋಡ್ ಪರಿವರ್ತನೆ, ಕೋಟ್ಸ್‌ಗಳನ್ನು, ಸಂಖ್ಯೆಗಳನ್ನು ಉಳಿಸಿಕೊಳ್ಳುವುದು, ಲೇಖನವನ್ನು ಫಾರ್ಮ್ಯಾಟ್ ಮಾಡುವುದು, ಫೋಟೋಗಳನ್ನು ಸೇರಿಸುವುದು, ಇತ್ಯಾದಿ) ಕನಿಷ್ಟ ಸರಾಸರಿ ಅರ್ಧ ಘಂಟೆಯಾದರೂ ಹಿಡಿಯುತ್ತದೆ. ಇಂತಹ ಕೆಲಸಕ್ಕೆ ನಮಗೆ ಒಂದಿಷ್ಟು ಕಾಯಕದಾನಿಗಳ ಅವಶ್ಯಕತೆ ಇದೆ. ಹಾಗೆಯೆ, ಈಗ ನನ್ನ ಬಳಿ ಸುಮಾರು ಮೂರು ಗಂಟೆಗಳ ವಿಡಿಯೋ ಇದೆ. ಮ್ಯಾಗ್ಸೆಸೇ ಪುರಸ್ಕೃತ ಹರೀಶ್ ಹಂದೆಯವರೊಡನೆ ಮಾತನಾಡಿರುವುದೇ ಸುಮಾರು ಎರಡು ಗಂಟೆಗಳದಿದೆ. ಇದನ್ನು ಹತ್ತು-ಹದಿನೈದು ನಿಮಿಷಗಳ ಸೆಗ್ಮೆಂಟ್‌ಗಳಿಗೆ ಎಡಿಟ್‌ ಮಾಡಿ, ಯೂಟ್ಯೂಬ್‌ಗೆ ಏರಿಸುವ ಕೆಲಸದಲ್ಲಿ ಸಹಾಯ ಬೇಕಿದೆ. ಇದೇನೂ ಹೆಚ್ಚಿನ ತಾಂತ್ರಿಕ ಪರಿಣತಿ ಬೇಡುವುದಿಲ್ಲ. ಇದನ್ನು ವಿಂಡೋಸ್ ಮೂವಿ ಮೇಕರ್ ಬಳಸಿಕೊಂಡು ಮಾಡುವುದು ಹೇಗೆ ಎಂದು ಹತ್ತು-ಹದಿನೈದು ನಿಮಿಷದಲ್ಲಿ ನಾನೇ ಹೇಳಿಕೊಡಬಲ್ಲೆ. ಆಸಕ್ತ ಗೆಳೆಯರು ದಯವಿಟ್ಟು ಸಂಪರ್ಕಿಸಿ. ಬಹಳ ಸಹಾಯವಾಗುತ್ತದೆ. ಇಂತಹ ಕೆಲಸಗಳಿಗೆ ಸ್ನೇಹಿತರು ಕೈಜೋಡಿಸುತ್ತ ಹೋದಂತೆ ಈ ವೆಬ್‌ಸೈಟ್ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ಸಾಂಘಿಕವಾಗಿ, ಸಮುದಾಯದ ವೇದಿಕೆಯಾಗಿ, ಸ್ವತಂತ್ರವಾಗಿ ಮೂಡಿಬರಲು ಸಾಧ್ಯವಾಗುತ್ತದೆ. ನಿಮಗೆ ಇದು ಸಾಧ್ಯ ಎಂದಾದರೆ, ಈ ವಿನಂತಿಯನ್ನೇ ನಿಮಗೆಂದೇ ಬರೆದ ವೈಯಕ್ತಿಕ ಪತ್ರ ಎಂದುಕೊಳ್ಳಿ. ಸಂಪರ್ಕಿಸಿ.

ಹಾಗೆಯೇ, ಕನ್ನಡದಲ್ಲಿ ಬರೆಯುವ ನಮ್ಮ ಬರಹಗಾರ ಮಿತ್ರರು ತಮ್ಮ ಲೇಖನಗಳನ್ನು ಯೂನಿಕೋಡ್‌ನಲ್ಲಿ ಬರೆದು ಕಳುಹಿಸಿದರೆ, ಮತ್ತೂ ಉಪಕಾರವಾಗುತ್ತದೆ.

ಕಳೆದ ವಾರ ಆಲಮಟ್ಟಿ-ಬಾಗಲಕೋಟೆ-ಮುಧೋಳ-ಜಮಖಂಡಿ-ಬಿಜಾಪುರಗಳ ಪ್ರವಾಸದಲ್ಲಿದ್ದೆ. ಅಲ್ಲಿ ಕಂಡದ್ದು ಮತ್ತು ಕೇಳಿದ್ದರ ಬಗ್ಗೆ ಈಗಾಗಲೆ ಬರೆಯಬೇಕಾಗಿತ್ತು. ಕನಿಷ್ಠ ಪಕ್ಷ ಮುಧೋಳ ತಾಲ್ಲೂಕಿನ ಚಾರಿತ್ರಿಕ ಸ್ಥಳವಾದ ಹಲಗಲಿ ಊರಿನ ಬಗ್ಗೆಯಾದರೂ ಬರೆಯಬೇಕಿತ್ತು. ಕೆಲಸದ ಒತ್ತಡದಿಂದಾಗಿ ಮತ್ತು ಬರವಣಿಗೆಗೆ ಬೇಕಾದ ಮಾನಸಿಕ ಸ್ಥಿತಿಯ ಅಭಾವದಿಂದಾಗಿ ಇನ್ನೂ ಆಗಿಲ್ಲ. ಆದಷ್ಟು ಬೇಗ ಬರೆಯಬೇಕು ಎಂದುಕೊಳ್ಳುತ್ತಿದ್ದೇನೆ. ಹೆಚ್ಚಿನ ಸಮಯ ಮಾತು ಮತ್ತು ಭೇಟಿಯಲ್ಲಿ ಕಳೆಯುತ್ತಿದೆ.

ಈ ಶನಿವಾರ ಮತ್ತೆ ಪ್ರವಾಸ ಹೋಗುತ್ತಿದ್ದೇನೆ. ಈ ಬಾರಿ ಉಡುಪಿ-ಮಂಗಳೂರು, ಮತ್ತು ನಂತರ ಬೇಲೂರು-ಹಳೇಬೀಡು-ಹಾಸನದ ಸುತ್ತಮುತ್ತ. ಭಾನುವಾರ, ಗಾಂಧಿ ಜಯಂತಿಯಂದು ಉಡುಪಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುವುದಿದೆ. ಅದಕ್ಕಿಂತ ಮೊದಲು ದಾರಿಯಲ್ಲಿ ಅರವಿಂದ ಚೊಕ್ಕಾಡಿಯವರ ಭೇಟಿ ಆಗಬಹುದು. ಕಾರ್ಕಳದಲ್ಲಿ ಒಂದಿಬ್ಬರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದೇನೆ. ಮಂಗಳೂರಿನಲ್ಲೂ ಸ್ನೇಹಿತರ ಭೇಟಿಗೆ ವ್ಯವಸ್ಥೆ ಆಗುತ್ತಿದೆ. ಈ ಬಾರಿ ಕುಟುಂಬದವರೊಂದಿಗೆ ಹೋಗುತ್ತಿರುವುದರಿಂದ ಸಾಕಷ್ಟು ಸಮಯ ಕಳೆಯಲು ಆಗದಿದ್ದರೂ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯದಲ್ಲಿ ಸಮಯ ಇದ್ದೇ ಇರುತ್ತದೆ.

ಕೊನೆಯದಾಗಿ, ಲೇಖನಗಳನ್ನು ಕಳುಹಿಸುತ್ತೇವೆ ಎಂದ ಮಿತ್ರರಿಗೆ ಈ ಮೂಲಕ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ನನ್ನ ಒಂದಷ್ಟು ಒತ್ತಡಗಳು ಕಮ್ಮಿಯಾದರೆ, ಈ ವೆಬ್‌ಸೈಟ್‌ನ ಇತರೆ ಆಡಿಯೊ-ವಿಡಿಯೋ ಸಾಧ್ಯತೆಗಳತ್ತ, ಇಂಗ್ಲಿಷ್‌ನಲ್ಲಿ ಬರೆಯಬಲ್ಲ ಸ್ನೇಹಿತರನ್ನು ವರ್ತಮಾನಕ್ಕೆ ಪರಿಚಯಿಸುವುದರತ್ತ, ಮತ್ತು ಕೆಲವೊಂದು ದಾಖಲೆ ಸಮೇತ ಪ್ರಕಟಿಸಬಹುದಾದ ಪ್ರಕಟಣೆಗಳತ್ತ ಒಂದಷ್ಟು ಗಮನ ಹರಿಸಬಹುದು.

ನಮಸ್ಕಾರ,
ರವಿ…

ಇವು ಕಳೆದ ವಾರದ ಪ್ರವಾಸದ ಕೆಲವು ಚಿತ್ರಗಳು:

http://www.facebook.com/media/set/?set=a.193219764084030.49338.100001880229123&l=0af359f1e1&type=1

One thought on ““ವರ್ತಮಾನ”ದ ಇಂದಿನ ವರ್ತಮಾನ…

  1. arun joladkudligi

    ವರ್ತಮಾನ ಚೆನ್ನಾಗಿ ರೂಪುಗೊಳ್ಳುತ್ತಿದೆ..ಆದರೆ ಇತರೆ ಅಂತರಜಾಲ ಪತ್ರಿಕೆಗಳ, ತಾಣಗಳ ಮಿತಿಯನ್ನರಿತು ಮುನ್ನಡೆಯಬೇಕಾದ ಅನಿವಾರ್ಯತೆ ವರ್ತಮಾನದ ಮುಂದಿದೆ. ಏನೇ ಅಂದರೂ ಅಂತರಜಾಲ ತಾಣದ ಓದುವಿಕೆಗೆ, ಓದುಗರಿಗೆ ಅದು ಬೀರುವ ಪರಿಣಾಮಕ್ಕೆ ಮಿತಿ ಇದ್ದೇ ಇದೆ. ಆದರೆ ಆ ಮಿತಿಯನ್ನು ಆಧರಿಸಿ ಪತ್ರಿಕೆಗಳು ಅಂತರ್ಜಾಲ ತಾಣ ಎನ್ನುವ ಕಂದಕವನ್ನುಮುಚ್ಚಿಹಾಕಿ, ಈಗಾಗಲೆ ಇರುವ (ವರ್ತಮಾನದ ತಿಳಿವಿಗೆ ಹೊಂದಿಕೆಯಾಗುವ) ದಿನಪತ್ರಿಕೆ, ಗೌರಿ ಲಂಕೇಶದಂತಹ ವಾರ ಪತ್ರಿಕೆ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿದ್ದಂತೆ ಕಾಣುತ್ತದೆ. ಅಂದರೆ ಒಂದು ವಿಷಯ ಕುರಿತು ಗಮನ ಸೆಳೆಯಲು ವರ್ತಮಾನದ ವೆಬ್ ಸೈಟ್ ಹೆಸರಲ್ಲೇ ಯಾಕೆ ಓದುಗರ ಪತ್ರದಂತಹ ಕಾಲಮ್ಮಿಗೆ ಬರೆಯಬಾರದು. ನಮ್ಮ ಮಾದ್ಯಮದ ಕಣ್ಣಿಗೆ ಬೀಳದ ಸಂಗತಿಗಳನ್ನು ಹಿಡಿಯುವುದರಿಂದಲೂ ಇತರ ಮಾದ್ಯಮಗಳು ವರ್ತಮಾನದ ರೆಫರೆನ್ಸ ಹಾಕಿ ವಿಸ್ಮೃತ ಸುದ್ದಿ ಮಾಡುವಂತಹ ಅನಿವಾರ್ಯತೆಯನ್ನು ವರ್ತಮಾನ ಹುಟ್ಟಿಸುವ ಸಾದ್ಯತೆ ಇದೆ. ಆ ನೆಲೆಯಲ್ಲಿ ವರ್ತಮಾನ ಬೆಳೆಯಬೇಕೆನ್ನುವುದು ನನ್ನ ಆಶಯ. ಹಾಗಾದಲ್ಲಿ ವೆಬ್ ತಾಣಗಳ ಜಾಡಿನಲ್ಲಿಯೇ ಹೊಸದೇನನ್ನಾದರು ಮಾಡಲು ಸಾದ್ಯವಿದೆ. ಸಮಸ್ಯೆಯೊಂದನ್ನು ವರ್ತಮಾನದಲ್ಲಿ ಮಾತ್ರ ದಾಖಲಿಸಿದರೆ ಅದು ನಿಶ್ಚಿತವಾದ ಕನಿಷ್ಟ ಪರಿಣಾಮವನ್ನೂ ಬೀರದೆ ಹೋಗಬಹುದು. ಉದಾ ನನ್ನ ಕೂಡ್ಲಿಗಿಗೆ ಗುಡಿ ಕೈಗಾರಿಕೆಗಳು ಬೇಕು ಎನ್ನುವ ಬರಹ ಮುದ್ರಣ ಮಾದ್ಯಮದಲ್ಲಿ ಬಂದಿದ್ದರೆ ಕನಿಷ್ಟ ಆ ವಿಷಯಕ್ಕೆ ಸಂಬಂಧಿಸಿದವರಾದರೂ ಕನಿಷ್ಟ ಪ್ರತಿಕ್ರಿಯೆಯನ್ನಾದರೂ ನೀಡುತ್ತಿದ್ದರು. ಹಾಗೆಂದು ನಾನು ವರ್ತಮಾನವನ್ನು ದೂರುತ್ತಿಲ್ಲ, ಹೊಸದಾಗಿ ಪತ್ರಿಕೆಯೊಂದನ್ನು ತೆರೆಯಬೇಕೆಂದೂ ಹೇಳುತ್ತಿಲ್ಲ ಬದಲಾಗಿ ವೆಬ್ ತಾಣಕ್ಕಿರುವ ಮಿತಿಯನ್ನು ಇರುವ ಮುದ್ರಣ, ಇರುವ ದೃಶ್ಯ ಮಾದ್ಯಮವನ್ನೂ ಬಳಸಿಕೊಳ್ಳಲು ಸಾದ್ಯವೇ ಎಂದು ಯೋಚಿಸಬಹುದು. ಹೀಗೆ ಯೋಚಿಸಬಹುದು ಎಂದು ನನಗೆ ಅನ್ನಿಸುತ್ತಿದೆ ನೀವೂ ಯೋಚಿಸಿ.

    Reply

Leave a Reply

Your email address will not be published. Required fields are marked *