ಲೇಖಕಿ ರೂಪಾ ಹಾಸನ ಅವರು ಜೈನ ಸಮಾಜದ ಕ್ಷಮೆ ಕೇಳಬೇಕಂತೆ!

– ತ್ರಿಲೋಕನಾಥ್ ಹೊಸಗದ್ದೆ

ಹಾಸನದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದ ಆವರಣದಲ್ಲಿ ದಿನಾಂಕ ಫೆ.24 ರಂದು ಜಾನಪದ ಪರಿಷತ್ತು “ಜಾನಪದ ಆಹಾರ ಮೇಳ” ಏರ್ಪಡಿಸಿತ್ತು. ಮೇಳದ ಪ್ರಯುಕ್ತ ಜೋಳದ ರೊಟ್ಟಿ, ಹೋಳಿಗೆ, ವಿವಿಧ ಕಾಳಿನ ಸಾರು, ಚಿಕನ್, ಮಟನ್, ಹಂದಿ ಮಾಂಸದ ವಿವಿಧ ಖಾದ್ಯಗಳು ಪ್ರದರ್ಶನದಲ್ಲಿದ್ದವು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತಮ್ಮ ಇಚ್ಚೆಗನುಗುಣವಾಗಿ ಆಹಾರ ಪದಾರ್ಥ ಸೇವಿಸಿದರು, ಕೊಂಡು ಹೋದರು.

ಸದ್ಯ ಆಹಾರ ಮೇಳದ ಹಿನ್ನೆಲೆಯಲ್ಲಿ ಹಾಸನದಲ್ಲಿ ವಿವಾದ ಎದ್ದಿದೆ. ಕವಿ, ಲೇಖಕಿ ಹಾಗೂ ಸಮಾನ ಶಿಕ್ಷಣಕ್ಕಾಗಿ, ಶೋಷಣೆ ಮುಕ್ತ ಸಮಾಜಕ್ಕಾಗಿ ನಡೆಯುವ ಹೋರಾಟಗಳಲ್ಲಿ ಭಾಗಿಯಾಗಿರುವ ರೂಪಾ ಹಾಸನ ಅವರು ಜೈನ ಸಮಾಜದ ಮುಖಂಡರಿಂದ ವಿರೋಧ, ಕ್ಷಮಾಪಣೆಗೆ ಆಗ್ರಹಗಳನ್ನು ಎದುರಿಸಬೇಕಾಗಿದೆ.

ಈ ಎಲ್ಲಾ ಬೆಳವಣಿಗೆಗಳಿಗೆ ಒಂದಿಷ್ಟು ಹಿನ್ನೆಲೆ ಇಲ್ಲಿದೆ. ಆಹಾರ ಮೇಳದ ಕಾರ್ಯಕ್ರಮದ ದಿನವೇ ಹಾಸನದ ಪತ್ರಿಕೆ ‘ಜನಮಿತ್ರ’ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಹಂದಿಮಾಂಸ ಪದಾರ್ಥಗಳ ವ್ಯವಸ್ಥೆ ಮಾಡುವ ಕ್ರಮವನ್ನು ಪ್ರಶ್ನಿಸಿ ಒಂದು ಸುದ್ದಿಯನ್ನು ಪ್ರಮುಖವಾಗಿ ಪ್ರಕಟಿಸಿತ್ತು. ಸುದ್ದಿ ಬರೆದ ಪತ್ರಿಕೆಯ ಮುಖ್ಯ ಸಂಪಾದಕ ಕೆ.ಪಿ.ಎಸ್. ಪ್ರಮೋದ್, ಪರಿಷತ್ತಿನ ಆವರಣದಲ್ಲಿ ಹಂದಿಮಾಂಸ ಸೇವನೆ, ಮಾರಾಟವನ್ನು ಟೀಕಿಸಿದ್ದರು. ನಂತರ ಅನೇಕರು ಪತ್ರಿಕೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ವಾದದ ಸರಣಿಯಲ್ಲಿ ಕೆಲ ಪ್ರಜ್ಞಾವಂತರು ಜಾನಪದ ಆಹಾರ ಮೇಲ್ವರ್ಗದವರ ಖಾದ್ಯಗಳಿಗಷ್ಟೇ ಸೀಮಿತವಾದದ್ದು ಸರಿಯಲ್ಲ ಎಂದರು. ಜಾನಪದ ಪರಿಷತ್ತು ದನದ ಮಾಂಸವನ್ನು ‘ಆಹಾರ’ ಎಂದು ಏಕೆ ಗ್ರಹಿಸಲಿಲ್ಲ ಎಂದು ಸರಿಯಾಗಿಯೇ ಪ್ರಶ್ನೆ ಮಾಡಿದ್ದರು.

ಜಿಲ್ಲಾ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡರು ಇನ್ನೊಂದು ಪ್ರಮುಖ ದಿನಪತ್ರಿಕೆ ‘ಜನತಾ ಮಾಧ್ಯಮ’ದಲ್ಲಿ ಲೇಖನವೊಂದನ್ನು ಬರೆದು ಆಹಾರ ಮೇಳದಲ್ಲಿ ಮಾಂಸಾಹಾರದ ಪ್ರಸ್ತುತತೆಯನ್ನು ಪ್ರಶ್ನಿಸಿದವರನ್ನು ಖಾರವಾಗಿಯೇ ಟೀಕಿಸಿದರು. ‘ಮಾಂಸಾಹಾರದ ವ್ಯವಸ್ಥೆ ಮಾಡಿದ್ದು ತಪ್ಪಲ್ಲ, ಸಾಹಿತ್ಯ ಪರಿಷತ್ತೇನು ಶಂಕರ ಮಠ ಅಲ್ಲ’ ಎಂದು ಉತ್ತರಿಸಿದರು. ಮುಂದಿನ ಆಹಾರ ಮೇಳಗಳಲ್ಲಿ ದನದ ಮಾಂಸವನ್ನೂ ಸೇರಿಸುವ ಮಾತುಗಳನ್ನಾಡಿದರು.

ವಿಜಯವಾಣಿ ದಿನಪತ್ರಿಕೆಯ ಹಾಸನ ವರದಿಗಾರರು ತಮ್ಮ ವಾರದ ಅಂಕಣ ‘ಲೌಡ್ ಸ್ಪೀಕರ್’ ಗೆ ಚರ್ಚಾ ವಿಶೇಷವಾಗಿ ಇದೇ ವಿವಾದವನ್ನು ಆಯ್ದುಕೊಂಡು ದಿನಾಂಕ ಮಾ.5 ರಂದು ಕೆಲವರ ಅಭಿಪ್ರಾಯ ಪ್ರಕಟಿಸಿದರು. ಹೀಗೆ ಪತ್ರಿಕೆಯ ಕೋರಿಕೆ ಮೇರೆಗೆ ಪ್ರತಿಕ್ರಿಯಿಸಿದವರಲ್ಲಿ ರೂಪಾ ಹಾಸನ ಕೂಡಾ ಒಬ್ಬರು. ಅವರ ಅಭಿಪ್ರಾಯ ಹೀಗಿತ್ತು -“ಆಹಾರದಲ್ಲಿ ಅದು ಪವಿತ್ರ, ಇದು ಅಪವಿತ್ರ ಎನ್ನುವ ಭಾವನೆ ಸರಿಯಲ್ಲ. ಆಹಾರಕ್ಕೆ ಯಾವ ದೋಷವೂ ಇಲ್ಲ. ಸಾಹಿತ್ಯ ಪರಿಷತ್ ಭವನದಲ್ಲಿ ಮಾಂಸಾಹಾರ reactionಮಾರಾಟ ಮಾಡಿದ್ದರಲ್ಲಿ ನನಗೆ ಯಾವ ತಪ್ಪೂ ಕಾಣಿಸುತ್ತಿಲ್ಲ.” ಅಭಿಪ್ರಾಯದ ಕೊನೆಯಲ್ಲಿ ರೂಪಾ ಹಾಸನ ಅವರನ್ನು ‘ಲೇಖಕಿ’ ಎಂದು ಗುರುತಿಸಲಾಗಿತ್ತು.

ತಲೆ ಸರಿಯಿರುವ, ಸಮಚಿತ್ತದಿಂದ ಎಲ್ಲಾ ತೆರನ ಅಭಿಪ್ರಾಯಗಳನ್ನು ಸ್ವೀಕರಿಸುವ ಮನಸ್ಥಿತಿಯಿರುವ ಯಾರಿಗೇ ಆಗಲಿ, ರೂಪಾ ಹಾಸನ ಅವರ ಮಾತುಗಳಲ್ಲಿ ಯಾವ ತಪ್ಪೂ ಕಾಣುವುದಿಲ್ಲ, ವಿವಾದವನ್ನಾಗಿ ಲಂಬಿಸಬಲ್ಲ ಯಾವ ಅಂಶವೂ ಸಿಗುವುದಿಲ್ಲ. ಆದರೆ ‘ಜನಮಿತ್ರ’ ಪತ್ರಿಕೆಗೆ ಅವರ ಹೇಳಿಕೆ ‘ಜೈನ ಧರ್ಮದ ಅವಹೇಳನವಾಗಿ’ ಕಂಡಿತ್ತು.

ರೂಪಾ ಹಾಸನ ಅವರ ಪರಿಚಯ ಇರುವ ಅನೇಕರಿಗೆ ಅವರು ಜೈನ ಧರ್ಮದಲ್ಲಿ ಹುಟ್ಟಿದವರು ಎಂದು ಗೊತ್ತಿರಲಿಕ್ಕಿಲ್ಲ. ವಿಜಯವಾಣಿ ಪತ್ರಿಕೆ ಸಿಬ್ಬಂದಿ ಕೂಡಾ ಅವರನ್ನು ಜೈನ ಧರ್ಮದವರು ಎಂಬ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಕೇಳಿಲ್ಲ. ಅವರು ಲೇಖಕಿ ಎಂಬ ಕಾರಣಕ್ಕೆ ಅಭಿಪ್ರಾಯ ಕೇಳಿದ್ದಾರೆ.

“ಜನಮಿತ್ರ” ಪತ್ರಿಕೆ ತನ್ನ ಮಾ.6 ರ ಸಂಚಿಕೆಯಲ್ಲಿ ‘ಜೈನಧರ್ಮ ಮಾಂಸಾಹಾರವನ್ನು ಪ್ರಚೋದಿಸುತ್ತದೆಯೇ?’ ಎಂಬ ತಲೆಬರಹದಡಿಯಲ್ಲಿ ರೂಪಾ ಹಾಸನ ಅವರು ಮತ್ತೊಂದು ಪತ್ರಿಕೆಗೆ ನೀಡಿದ ಅಭಿಪ್ರಾಯವನ್ನು ಟೀಕಿಸುವ ಲೇಖನವನ್ನು ಪ್ರಕಟಿಸಿತು. ಅದನ್ನು ಬರೆದವರೂ ಪತ್ರಿಕೆಯ ಮುಖ್ಯ ಸಂಪಾದಕ ಪ್ರಮೋದ್ ಅವರೆ.

ಲೇಖನದ ಕೆಲ ವಾಕ್ಯಗಳಂತೂ ಅದರ ಹಿಂದೆ ಯಾವುದೋ ದುರುದ್ದೇಶ ಇದೆ ಎಂಬುದನ್ನು ಒತ್ತಿ ಹೇಳುತ್ತಿದ್ದವು. ಅಹಿಂಸೆ ತತ್ವವನ್ನು ತಲತಲಾಂತರದಿಂದ ಪ್ರತಿಪಾದಿಸಿಕೊಂಡು ಬಂದಂತಹ ಜೈನ ಸಮುದಾಯ ಮಾಂಸಾಹಾರವನ್ನು ಪ್ರಚೋದಿಸುತ್ತಾರೆಯೇ ಎಂದು ಪ್ರಶ್ನಿಸಿದರೆ ಖಂಡಿತ ಇಲ್ಲ ಎಂದು ಹೇಳಿಬಿಡಬಹುದು. ಆದರೆ ಅದೇ ಜೈನ ಸಮುದಾಯಕ್ಕೆ ಸೇರಿದ ಲೇಖಕಿ ಪ್ರಖ್ಯಾತ ಸಾಹಿತಿ ರೂಪಾ ಹಾಸನ ಮಾತ್ರ ಮಾಂಸಾಹಾರ ಸೇವನೆಯೇ ಸರಿ ಎಂದು ಪ್ರತಿಪಾದಿಸಲು ಹೊರಟಿದ್ದಾರೆ… – ಹೀಗೆ ಆರಂಭವಾಗುತ್ತದೆ ಪತ್ರಿಕೆಯ ಬರಹ.

ಜೈನ ಧರ್ಮದಲ್ಲಿ ಹುಟ್ಟಿರುವ ಕಾರಣಕ್ಕೆ, ಆ ಧರ್ಮದ ಎಲ್ಲರಿಗೂ ಮಾಂಸಾಹಾರ ಅಪವಿತ್ರವಾಗಿ ಕಾಣಬೇಕು ಎಂಬ ದನಿ ಈ ಲೇಖನದಲ್ಲಿದೆ. ಹಾಗಾದರೆ ಪತ್ರಿಕೆಯ ಎಲ್ಲಾ ಸಂಪಾದಕೀಯ ಬರಹಗಳನ್ನು, ಸುದ್ದಿ ವಿಶ್ಲೇಷಣೆಗಳನು ಆ ಮಾಲೀಕರ ಜಾತಿ, ಧರ್ಮಕ್ಕೆ ಸೀಮಿತವಾಗಿ ಗ್ರಹಿಸಲು ಸಾಧ್ಯವೇ?

ಲೇಖಕಿಯವರ ಎರಡು ಸಾಲಿನ ಅಭಿಪ್ರಾಯಕ್ಕೆ (ಅದೂ ಮತ್ತೊಂದು ಪತ್ರಿಕೆಯಲ್ಲಿ ಪ್ರಕಟವಾದದ್ದಕ್ಕೆ) ಧರ್ಮದ ಲೇಪ ಹಚ್ಚಿ ಟೀಕೆ ಮಾಡುವುದು ಅದ್ಯಾವ ಪತ್ರಿಕಾ ಧರ್ಮ? ರೂಪ ಅವರು ಜೈನಧರ್ಮೀಯರಾಗಿ ಪ್ರತಿಕ್ರಿಯೆ ನೀಡಿದ್ದಾರೆಯೆ? ಅಷ್ಟನ್ನೂ ಗ್ರಹಿಸಲಾಗದವರು ಒಂದು ಸುದೀರ್ಘ ಇತಿಹಾಸ ಇರುವ ಘನ ಪತ್ರಿಕೆಯ ಮುಖ್ಯ ಸಂಪಾದಕರಾಗಿಬಿಟ್ಟರೆ?
ಈ ಅಪ್ರತಿಮ ಪತ್ರಕರ್ತರ ಬುದ್ಧಿವಂತಿಕೆ ಅಲ್ಲಿಗೆ ನಿಲ್ಲುವುದಿಲ್ಲ.

ರೂಪ ಅವರ ಅಭಿಪ್ರಾಯ ಸ್ಪಷ್ಟ ಕನ್ನಡದಲ್ಲಿದೆ. ಕನ್ನಡ ಓದಬಲ್ಲ ಯಾರೇ ಆಗಲಿ, ಅದರಲ್ಲಿ ಅವರು ಎಲ್ಲಿಯಾದರೂ ಪರಿಷತ್ತು ಭವನ ಮಾಂಸಾಹಾರಕ್ಕೆ ಸೂಕ್ತ ಎಂದು ಹೇಳಿದ್ದಾರೆಯೆ? ಅಥವಾ ಅವರು ತಾನು ಜೈನ ಧರ್ಮೀಯಳಾಗಿ ಹೀಗೆ ಅಭಿಪ್ರಾಯ ಪಟ್ಟಿದ್ದೇನೆ ಎಂದು ಹೇಳಿದ್ದಾರೆಯೆ? ಅವರ ಮಾತು ಜೈನ ಧರ್ಮದ ಅಭಿಪ್ರಾಯವಾಗಲು ರೂಪಾ ಹಾಸನರೇನು ಜೈನ ಧರ್ಮದ ಪೀಠಾಧ್ಯಕ್ಷರೇನು? ಇಡೀ ಜೈನ ಸಮುದಾಯವನ್ನು ಅವಮಾನಗೊಳಿಸುವ ಸಂಗತಿ ಅದರಲ್ಲೇನಿದೆ? ಕಿಡಿ ಹತ್ತಿಸಿ ತಮಾಷೆ ನೋಡುವ ಅಥವಾ ಬೆಂಕಿ ಕಾಯಿಸಿಕೊಳ್ಳುವ ಕುತ್ಸಿತ ಮನಸ್ಸು ಈ ಮುಖ್ಯ ಸಂಪಾದಕರಿಗೇಕೆ?

ಇವರು ಕಿಡಿ ಹಚ್ಚಿದ್ದುದರ ಪರಿಣಾಮ ಹಾಸನದ ಜೈನ ಸಂಘದ ಸದಸ್ಯರು ದಿನಾಂಕ 6 ರಂದು ಸಭೆ ಸೇರಿ, ಪತ್ರಿಕೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯದಂತೆಯೇ, ಲೇಖಕಿಯ ಹೇಳಿಕೆಯನ್ನು ಖಂಡಿಸಿದ್ದಾರೆ. ರೂಪಾ ಹಾಸನ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಅಂತಹ ಹೇಳಿಕೆ ನೀಡಿದಕ್ಕಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಈ ಬೆಳವಣಿಗೆಯ ನಂತರ ಜನಮಿತ್ರದ ಪತ್ರಕರ್ತ ಶಿರೋಮಣಿಗಳು ‘ಜನಮಿತ್ರ ಫಲಶೃತಿ’ ಎಂದು ಲೇಬಲ್ ಹಾಕಿಕೊಂಡು ಆ ಸುದ್ದಿಯನ್ನೂ ಪ್ರಕಟಿಸಿ ಕಾಲರ್ ಹಾರಿಸಿದರೂ ಅಚ್ಚರಿ ಪಡಬೇಕಿಲ್ಲ.

ಸಮಾಜದ ಮುಖಂಡರಿಗೇನು ಕನ್ನಡ ಅರ್ಥವಾಗುವುದಿಲ್ಲವೇ? ಅವರ ಹೇಳಿಕೆಯಲ್ಲಿ ಧರ್ಮದ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ ಎಂದು ಎಲ್ಲಿಯಾದರೂ ಮತನಾಡಿದ್ದಾರ ಎನ್ನುವುದನ್ನು ತೆರೆದ ಮನಸ್ಸಿನಿಂದ ಗ್ರಹಿಸುವಷ್ಟೂ ಪ್ರೌಢಿಮೆ ಅವರಿಗಿಲ್ಲವೆ?

ಹಾಸನದ ಗಲ್ಲಿಗಳಲ್ಲಿ ಸದ್ಯ ಹಬ್ಬಿರುವ ಗುಲ್ಲೆಂದರೆ ಇಡೀ ಪ್ರಕರಣದ ಹಿಂದೆ ಕೀಳು ಮಟ್ಟದ ರಾಜಕೀಯ ಇದೆ. ಈ ಲೇಖನಗಳನ್ನು ಬರೆದವರು ಮುಖ್ಯ ಸಂಪಾದಕರಲ್ಲ. ಅವರಿಗೆ ಹೀಗೆಲ್ಲಾ ಬರೆದು ಅಭ್ಯಾಸವಿಲ್ಲ. ಕನ್ನಡದ ಅನೇಕ ಸಂಪಾದಕರಂತೆ ಅವರು ‘ಬರೆಯುವ ಸಂಪಾದಕರಲ್ಲ’. ಆದರೆ ಅದೇ ಪತ್ರಿಕೆಯಲ್ಲಿ ಸಂಪಾದಕ ಹುದ್ದೆಯಲ್ಲಿರುವ ಎಚ್. ಬಿ. ಮದನ್ ಗೌಡ ಅವರ ದುರುದ್ದೇಶ ಪೂರಿತ ಪ್ರಲಾಪಗಳಿವು.

ಈ ಹಿಂದಿನ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿದ್ದವರು ಇದೇ ಮದನ್ ಗೌಡ. ಅವರ ಕಾಲಾನುಕ್ರಮದಲ್ಲಿ ಪರಿಷತ್‍ನ ಕಾರ್ಯಚಟುವಟಿಕೆಗಳನ್ನು ನಡೆಸುವಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳಲಿಲ್ಲ ಮತ್ತು ಮೇಲಾಗಿ ಅವರ ಕಾಲಾವಧಿ ಮೂರು ವರ್ಷ ಮುಗಿದಿದ್ದ ಕಾರಣ, ಹಂಪನಹಳ್ಳಿ ತಿಮ್ಮೇಗೌಡರನ್ನು ಪರಿಷತ್‍ನ ರಾಜ್ಯ ಘಟಕ ನೇಮಿಸಿದೆ. ಆದರೆ ಹೀಗೆ ನೇಮಕ ಮಾಡುವಾಗ ಮದನ್ ಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆ ಕಾರಣಕ್ಕಾಗಿಯೇ ಆಹಾರ ಮೇಳದ ಬಗ್ಗೆ ವಿವಾದ ಹುಟ್ಟು ಹಾಕಿದರು. ಅದನ್ನು ಮುಂದುವರಿಸುತ್ತಾ ರೂಪಾ ಹಾಸನ ಅವರ ಅಭಿಪ್ರಾಯವನ್ನು ವಿವಾದವನ್ನಾಗಿ ಪರಿವರ್ತಿಸಿ ಜೈನ ಸಮಾಜವನ್ನು ಎತ್ತಿಕಟ್ಟಿ ತಮಾಷೆ ನೋಡುವ ವಿಕೃತ ಮನಸ್ಸು ಇಲ್ಲಿ ಕೆಲಸ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾದಿನ (ಗುರುವಾರ) ಒಬ್ಬ ಕವಿ, ಲೇಖಕಿಗೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿ roopa-hassanಒಂದು ಧರ್ಮದವರು ಕ್ಷಮಾಪಣೆಗೆ ಆಗ್ರಹಿಸಿದ್ದಾರೆ. ಇದೆಲ್ಲದರ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕಿರುವ ಪತ್ರಿಕಾ ಮಾಧ್ಯಮದ ಕೆಲ ಕೊಳಕು ಮನಸುಗಳು ಕಾರಣವಾಗಿರುವುದು ವಿಪರ್ಯಾಸ. ಇಂದು ಮಹಿಳಾ ದಿನ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸದಾ ದನಿ ಎತ್ತುವ ರೂಪಾ ಹಾಸನ ಅವರ ಬೆಂಬಲಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ಎಲ್ಲಾ ಪ್ರಜ್ಞಾವಂತ ಮನಸುಗಳು ಅವರೊಂದಿಗೆ ನಿಲ್ಲಬೇಕಿದೆ.

8 thoughts on “ಲೇಖಕಿ ರೂಪಾ ಹಾಸನ ಅವರು ಜೈನ ಸಮಾಜದ ಕ್ಷಮೆ ಕೇಳಬೇಕಂತೆ!

  1. prasad raxidi

    “ಆಹಾರ ತನ್ನದು ಮಾತು ಪರರದ್ದು” (ಗಾದೆ) ಜನಪದರ ಈ ವಿವೇಕ ನಮಗೆ ಬಂದರೆ ಯಾವ ಆಹಾರವೂ ಮೇಲೂ ಅಲ್ಲ ಕೀಳೂ ಅಲ್ಲವೆಂಬ ಅರಿವು ಬಂದೀತು. ಸಾಹಿತ್ಯ ಪರಿಷತ್ ಆವರಣದಲ್ಲಿ ಮಾಂಸ ತಿನ್ನಬಾರದೆಂಬ ವಿಚಾರ ಹಾಸ್ಯಾಸ್ಪದ… ರೂಪಾ ಹೇಳಿದ್ದರಲ್ಲಿ ತಪ್ಪೇನಿದೆ…ಅತ್ಯಂತ ಪ್ರಗತಿಪರವಾಗಿದ್ದ ಹಾಸನದ ಪತ್ರಿಕೋಧ್ಯಮ (ಏಲ್ಲ ಕಡೆಯೂ) ಇಂದು ತಲಪಿರುವ ಸ್ಥಿತಿ ಇದು.. ಇನ್ನು ಯಾವುದು ಹಿಂಸೆ ಯಾವುದು ಅಹಿಂಸೆ ಅನ್ನುವುದನ್ನು ಬರೀ ಆಹಾರದ ವಿಚಾರಕ್ಕೆ ಸೀಮಿತಗೊಳಿಸಿ ನೋಡಬೇಕಿಲ್ಲ- ನೋಡಬಾರದು ಕೂಡಾ…..

    Reply
  2. dinesh kumar

    ರೂಪ ಹಾಸನ್ ಮಾಡಿರುವ ತಪ್ಪೇನು ಅಂದರೆ ತಮಗೆ ಸರಿಕಂಡಿದನ್ನು ಮಾತಾಡಿರುವುದು. ರೂಪ ಜೈನ ಧರ್ಮದಲ್ಲಿ ಹುಟ್ಟಿರುವ ಕಾರಣಕ್ಕೆ ಅವರು ಮಾಂಸಾಹಾರವನ್ನು ವಿರೋಧಿಸಿಯೇ ಮಾತಾಡಬೇಕು ಎಂದು ಬಯಸುತ್ತವೆ ಪಟ್ಟಭದ್ರ ಹಿತಾಸಕ್ತಿಗಳು. ನಮ್ಮ ಸಮಾಜ ಎಷ್ಟು ಅಸಹಿಷ್ಣುತೆಯನ್ನು ಬೆಳೆಸಿಕೊಳ್ಳುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ನಾಡಿನ ಹಲವಾರು ಪ್ರಗತಿಪರ ಚಳವಳಿಗಳು ಹುಟ್ಟಿದ ನೆಲ ಹಾಸನ. ಮೌಢ್ಯ, ಶೋಷಣೆ, ಅಸಮಾನತೆ, ಕಂದಾಚಾರಗಳ ವಿರುದ್ಧ ಹೋರಾಡಿದ ದೊಡ್ಡ ಪರಂಪರೆಯೇ ಜಿಲ್ಲೆಗಿದೆ. ಆದರೆ ಇಲ್ಲೂ ತಾಲಿಬಾನಿ ಶಿಶುಗಳು ಜನ್ಮ ತಳೆಯುತ್ತಿರುವುದು ಆಘಾತಕಾರಿ. ರೂಪ ಅವರಿಗೆ ನನ್ನ ನೈತಿಕ ಬೆಂಬಲವಿದೆ.

    Reply
  3. udupibitsಶ್ರೀರಾಮ ದಿವಾಣ, ಉಡುಪಿ.

    ಲೇಖಕಿ ರೂಪಾ ಹಾಸನ ಅವರು ತಮ್ಮ ಅಭಿಪ್ರಾಯವನ್ನು ಗೌರವಯುತವಾಗಿ, ಸಾಂದರ್ಭಿಕವಾಗಿ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ರೂಪಾ ಅವರು ಜೈನ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಕೇಳುವುದು ಅಪ್ರಬುದ್ಧತೆಯಾಗುತ್ತದೆ. ಒಂದು ಪತ್ರಿಕೆ, ಸ್ಥಾಪಿತ ಹಿತಾಸಕ್ತಿಯುಳ್ಳ ಗುಂಪು ರೂಪಾ ಹಾಸನ ಅವರ ಅಭಿಪ್ರಾಯವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ.

    Reply
  4. ಹನುಮಂತ ಹಾಲಿಗೇರಿ

    ಮೊಸರಿನಲ್ಲಿಯೂ ಕಲ್ಲು ಹುಡುಕುವ ಮನೋಭಾವ ಪಟ್ಟಭದ್ರ ಹಿತಾಸಕ್ತಿಗಳಿವರು. ರೂಪಕ್ಕ ಜೈನ ಧರ್ಮದಲ್ಲಿ ಹುಟ್ಟಿರುವುದೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳಲು ಇರುವ ದೊಡ್ಡ ಅಸ್ತ್ರ. ಪಾಪ, ಹೀಗಾಗಿಯೇ ದೊಡ್ಡ ದೊಡ್ಡ ಜಾತಿಗಳಲ್ಲಿ ಹುಟ್ಟಿದವರಿಗೆ ತಪ್ಪನ್ನು ತಪ್ಪು ಎಂದು ಹೆಳಲು ಬಾಯಿ ಬರುತ್ತಿಲ್ಲ.

    Reply
  5. Sridhara Babu

    ಲೇಖಕಿ ರೂಪ ಹಾಸನ ರವರು ಯಾವ ತಪ್ಪು ಮಾತನ್ನು ಆಡಿಲ್ಲ ಮತ್ತು ಅವರ ಅಭಿಪ್ರಾಯವನ್ನು ತಿರುಚಿ ಧಾರ್ಮಿಕ ಪ್ರಚೋಧನಾಕಾರಿ ಲೇಖನ ಬರೆದವರ ಮೇಲೆ ಐ.ಪಿ.ಸಿ ಕಲಂ ೧೫೩ ಬಿ ಕೆಳಗೆ ಕೇಸನ್ನು ದಾಖಲಿಸದೆ ಸರ್ಕಾರಿ ಇನ್ನು ನಿದ್ದೆ ಮಾಡುತ್ತಿದೆಯಲ್ಲಾ ಅವರಿಗೆ ಉಗಿಯಬೇಕು. 153B. Imputations, assertions prejudicial to national-integration
    (1) Whoever, by words either spoken or written or by signs or by visible representations or otherwise,-

    ………………………. or

    (c) makes or publishes any assertion, counsel, plea or appeal concerning the obligation of any class of persons, by reason of their being members of any religious, racial, language or regional group or caste or community, and such assertion, counsel, plea or appeal causes or is likely to cause disharmony or feelings of enmity or hatred or ill-will between such members and other persons,

    shall be punished with imprisonment which may extend to three years, or with fine, or with both.

    Reply
  6. B.Sripad Bhat

    ಲೇಖಕಿ ರೂಪಾ ಹಾಸನ ಅವರಿಗೆ ನನ್ನ ನೈತಿಕ ಬೆಂಬಲವನ್ನು ವ್ಯಕ್ತಪಡಿಸುತ್ತೇನೆ.ಈ ಧರ್ಮಾಂಧರು ಇರುವುದೇ ಹೀಗೆ.ಇವರು ಬದುಕುವುದೇ ಹೀಗೆ.ಕೆಳ ಮಟ್ಟದ ಜನ

    Reply
  7. Chandrashekhar Aijoor

    ಆಹಾರ ಸಂಸ್ಕೃತಿ, ಅಭಿವ್ಯಕ್ತಿ ಸ್ವಾತಂತ್ರ್ಯ

    ಹಾಸನ ಸಾಹಿತ್ಯ ಪರಿಷತ್ ಆವರಣದಲ್ಲಿ ಮಾಂಸಾಹಾರ ಸರಬರಾಜು ಮಾಡಿದ್ದರಲ್ಲಿ ತಪ್ಪೇನು ಎಂದು ತಮ್ಮ ಅಭಿಪ್ರಾಯ ಸೂಚಿಸಿದ ಕಾರಣಕ್ಕೆ ಲೇಖಕಿ ರೂಪ ಹಾಸನ ಅವರ ಮೇಲೆ ಸ್ಥಳೀಯ ಜೈನ ಸಮುದಾಯ ಮತ್ತು ಇತರರು ಹರಿಹಾಯ್ದಿರುವುದು ಖಂಡನೀಯ.

    ಹಾಗೆ ನೋಡಿದರೆ ಆಹಾರ ಪದ್ಧತಿಯ ಪಾವಿತ್ರ್ಯ ಕುರಿತ ವಿವಾದವೇ ಕುಚೋದ್ಯದ್ದು ಮತ್ತು ಅನಾರೋಗ್ಯಕಾರಿಯಾದದ್ದು. ಸಾರ್ವಜನಿಕ ಸ್ಥಳದಲ್ಲಿ ಸಸ್ಯಾಹಾರವನ್ನಷ್ಟೇ ಉಪಯೋಗಿಸಬೇಕು ಎನ್ನುವ ಮನಸ್ಥಿತಿಯೇ ಸಂವಿಧಾನದ ಆಶಯಕ್ಕೆ ವಿರೋಧವಾಗಿದೆ. ಇಂಥ ಅನವಶ್ಯಕ ವಿವಾದಗಳ ಹಿಂದೆ ಸಂಘ ಪರಿವಾರದ ಕೈವಾಡ ಇರುವುದು ಸ್ಪಷ್ಟ.

    ತಮ್ಮ ಸಮಾಜದ ಗೌರವಾನ್ವಿತ ಮಹಿಳೆ ಮಾಂಸಾಹಾರದ ಪರವಾಗಿ ಹೇಳಿಕೆ ನೀಡಿರುವುದರಿಂದ ಕ್ಷಮೆ ಯಾಚಿಸಬೇಕೆಂದು ಜೈನ ಸಮುದಾಯ ಕೇಳಿರುವುದು ಹಾಸ್ಯಾಸ್ಪದವಾಗಿದೆ. ರೂಪ ಹಾಸನ ಅವರ ವೈಯಕ್ತಿಕ ಅಭಿಪ್ರಾಯ ಇಡೀ ಸಮುದಾಯದ ಅಭಿಪ್ರಾಯವಾಗಲು ಹೇಗೆ ಸಾಧ್ಯ?ರೂಪ ಅವರು ಮಾಂಸಾಹಾರದ ವಕ್ತಾರರಾಗಿ ಅಥವಾ ಸಸ್ಯಾಹಾರದ ವಿರುದ್ಧ ಯಾವ ಹೇಳಿಕೆಯನ್ನೂ ನೀಡಿಲ್ಲ.

    ಆಹಾರ ಸಂಸ್ಕೃತಿಯ ಹಕ್ಕನ್ನು ಪ್ರತಿಪಾದಿಸಿರುವುದು ಪ್ರಜಾತಾಂತ್ರಿಕ ಮೌಲ್ಯಕ್ಕೆ ತಕ್ಕುದಾದದ್ದೇ ಆಗಿರುವುದರಿಂದ ರೂಪ ಹಾಸನ ಅವರ ಮೇಲೆ ಅನಗತ್ಯ ಒತ್ತಡ ತಂದು, ಅವರನ್ನು ಮಾನಸಿಕ ಹಿಂಸೆಗೆ ಗುರಿಮಾಡಿರುವುದು ಜೈನ ಸಮುದಾಯದ ಅಹಿಂಸಾತ್ಮಕ ಧೋರಣೆಗೆ ವಿರುದ್ಧವಾಗಿದೆ. ಇದು ವಿಪರ್ಯಾಸವಲ್ಲವೇ?

    -ಪ್ರೊ.ವಿ.ಎಸ್.ಶ್ರಿಧರ
    -ಕೆ.ಎಲ್.ಚಂದ್ರಶೇಖರ್ ಐಜೂರ್
    (ಸಾಮಾಜಿಕ ಪ್ರತ್ಯೇಕತೆ
    ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ
    ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ
    ನಾಗರಬಾವಿ, ಬೆಂಗಳೂರು-72)

    Reply
  8. k puttaswamy

    ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕಾದವರೇ ಅದರ ದಮನಕ್ಕೆ ಮುಂದಾದದರೆ ಅಂತಹವರನ್ನು ದಮನ ಮಾಡಿ ನಮ್ಮ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬೇಕು.ಮೇಲಿನ ವರದಿಯ ವಿವರಗಳು ನಿಜವೇ ಆಗಿದ್ದರೆ ಆ ಮುಖರಹಿತ ಸಂಪಾದಕರು ಇಂಥ ಚೇಷ್ಟೆ ಮಾಡಿರುವ ವರದಿಗಾರನನ್ನು ಹೊರಗೆ ಕಳುಹಿಸಿ ತಮ್ಮಮುಖವನ್ನು ಕಾಪಾಡಿಕೊಳ್ಳಬೇಕು. ತಪ್ಪೇ ಮಾಡದ ರೂಪ ಹಾಸನ್‍ರವರಿಗೆ ನಮ್ಮ ೆಲ್ಬೆಂಲರ ಬಲವಿದೆ.ಕ್ಷಮೆ ಕೇಳುವ ಆಗತ್ಯವಿಲ್ಲ.

    Reply

Leave a Reply

Your email address will not be published. Required fields are marked *