Daily Archives: August 29, 2013

ವೈಚಾರಿಕತೆ ಮಾನವ ಸಮಾಜದ ಘನತೆಯಾಗಿದೆ

-ಡಾ.ಎಸ್.ಬಿ.ಜೋಗುರ

ಮಾನವನ ಚಿಂತನಾ ಕ್ರಮ ತೀರಾ ಬಾಲಿಶವಾದ ಎಳೆತನದಿಂದ ತಾರ್ಕಿಕತೆ ಮತ್ತು ಪ್ರಬುದ್ಧತೆಯವರೆಗೆ ಸಾಗಿ ಬರುವಲ್ಲಿ ಸಾವಿರಾರು ವರ್ಷಗಳು, ಮೂರು ಪ್ರಮುಖ ಹಂತಗಳನ್ನು ಕ್ರಮಿಸಿರುವ ಬಗ್ಗೆ ಚರ್ಚೆಗಳಿವೆ. ಒಂದನೆಯದು ದೇವಶಾಸ್ತ್ರೀಯ ಹಂತ ಎರಡನೆಯದು ಆದಿಭೌತಿಕ ಅಮೂರ್ತ ಹಂತ, ಮೂರನೆಯದು ವೈಜ್ಞಾನಿಕ ಹಂತ. ಅಂದರೆ ನಾವೀಗ ಬದುಕಿರುವ ಸಂದರ್ಭ. ದೇವಶಾಸ್ತ್ರೀಯ ಹಂತದಲ್ಲಿ ಮಾನವನ ಆಲೋಚನಾ ಮಟ್ಟ ತೀರಾ ಕೆಳಹಂತದಲ್ಲಿತ್ತು. ನಿಸರ್ಗದ ಎಲ್ಲ ವ್ಯಾಪಾರಗಳು ದೃಷ್ಟಿಗೋಚರವಾಗದ ದೇವರಿಂದ ನಡೆಯುತ್ತವೆ ಎಂಬ ನಂಬುಗೆಯು ಬಲವಾಗಿತ್ತು. ಗುಡುಗು, ಸಿಡಿಲು, ಮಳೆ, ಭೂಕಂಪ, ಅತೀವೃಷ್ಟಿ, ಅನಾವೃಷ್ಟಿ ಮುಂತಾದ ಪಕ್ಕಾ ಪ್ರಾಕೃತಿಕವಾಗಿರುವ ಸಂಗತಿಗಳೆಲ್ಲವೂ ದೇವರಿಂದ ನಿರ್ಧರಿತ ಎನ್ನುವ ಭಾವನೆಯ ಜೊತೆಗೆ ಸರ್ವಚೇತನವಾದ ಮತ್ತು ಲಾಂಛನವಾದದ ಆಚರಣೆಗಳು ಆರಂಭವಾದವು. ತೀರಾ ಪ್ರಾಚೀನ ಕಾಲದಲ್ಲಿದ್ದ ಈ ಬಗೆಯ ಚಿಂತನೆ ತೀರಾ ಅತ್ಯಾಧುನಿಕ ಸಂದರ್ಭದಲ್ಲಿಯೂ ಅದೇ ಮಟ್ಟದ ಪ್ರಾಬಲ್ಯವನ್ನು ಉಳಿಸಿಕೊಂಡದ್ದೇ ದೊಡ್ಡ ವಿಪರ್ಯಾಸ. ನಿಸರ್ಗದ ಹಿಂದಿನ ಸರ್ವಕಾರಣಗಳ ತಿಳುವಳಿಕೆಯನ್ನು ಮೀರಿಯೂ ಈ ದೇವಶಾಸ್ತ್ರೀಯ ಹಂತದ ಚಿಂತನೆ ವಿರಮಿಸುತ್ತಿರುವದನ್ನು ಗಮನಿಸಿದರೆ ನಮ್ಮಲ್ಲಿ ಇನ್ನೂ ವೈಚಾರಿಕ ಜಾಗೃತಿ ಆರಂಭದ ಹಂತದಲ್ಲಿದೆಯೇನೋ ಎಂದೆನಿಸುತ್ತದೆ.

ಸತ್ಯದ ಕಠೋರತೆಯನ್ನು ಯಾವ ಕಾಲದಲ್ಲಿಯೂ ಅಲ್ಲಗಳೆಯಲಾಗಿಲ್ಲ. ಅದರ ಪರಿಣಾಮವೂ ಅದರಷ್ಟೆ ಕಠಿಣವಾಗಿರುತ್ತದೆ. ಗೆಲಿಲಿಯೋ, ಸಾಕ್ರೇಟಿಸ್, ಏಸುಕ್ರಿಸ್ತ, ಬಸವೇಶ್ವರ ಮುಂತಾದವರ ಬದುಕಿನ ಅಂತ್ಯವೂ ಅದಕ್ಕೆ ಸಾಕ್ಷಿಯಾಗಿವೆ. ಮೌಢ್ಯತೆಯನ್ನು ಪ್ರಶ್ನಿಸಿ ಜನಜಾಗೃತಿಯನ್ನುಂಟು ಮಾಡಹೊರಟವರಿಗೆ ಆಯಾ ಕಾಲಘಟ್ಟದಲ್ಲಿ ಮೂಲಭೂತವಾದಿಗಳು ಕೊಟ್ಟ ಕಿರುಕುಳಗಳನ್ನು ಮರೆಯುವದಾದರೂ ಹೇಗೆ..? ವಜ್ರದ ಕಠೋರತೆಯನ್ನು, ಹೊಳಪನ್ನು ತಾತ್ಕಾಲಿಕವಾಗಿ ಮಣ್ಣಲ್ಲಿ ಹೂಳಿಟ್ಟು ಅದರ ಪ್ರಭೆಯನ್ನು ನುಂಗಿದ ಭ್ರಮೆಯಲ್ಲಿ ಬೀಗುವಷ್ಟೇ ಕ್ಷಣಿಕವಾದ ಈ ದಮನಕಾರಿ ಗುಣ, ಸತ್ಯದ ಎದುರಲ್ಲಿ ನಗಣ್ಯವೆನಿಸುತ್ತದೆ. ಜನರಲ್ಲಿರುವ ಅಂಧ ಅನುಕರಣೆ ಮತ್ತು ಮೌಢ್ಯತೆಯನ್ನು ನಿವಾರಣೆ ಮಾಡಿ ಅವರ ಮತಿಗೆ ಮೆತ್ತಿದ ಪೊರೆಯನ್ನು ಕಳಚುವ ಯತ್ನ ಮಾಡುತ್ತಿದ್ದ ಮಹಾರಾಷ್ಟ್ರದ Dabholkar-murderಡಾ. ನರೇಂದ್ರ ದಾಬೋಲ್ಕರ ಅವರ ಕೊಲೆಯಾಯಿತು. ಅದೊಂಥರಾ ವ್ಯಕ್ತಿಯೊಬ್ಬನ ಕೊಲೆಯಾಗಿರದೇ ವೈಚಾರಿಕತೆಯ ಕೊಲೆಯೂ ಹೌದು. ದಾಬೋಲ್ಕರ್ ಮಹಾರಾಷ್ಟ್ರದಲ್ಲಿ  ಅಂಧಶೃದ್ಧಾ ನಿರ್ಮೂಲನಾ ಸಮಿತಿ ಯನ್ನು ಹುಟ್ಟು ಹಾಕಿ ಗ್ರಾಮೀಣ ಭಾಗದ ಜನತೆಯಲ್ಲಿಯ ಮೌಢ್ಯತೆಯನ್ನು ಹೊಡೆದುಹಾಕುವಲ್ಲಿ ಪ್ರಾಮಾಣಿಕವಾಗಿ ಹೆಣಗುವಾಗಲೇ ಇನ್ನಿಲ್ಲವಾದದ್ದು ವಿಷಾದನೀಯ ಸಂಗತಿ. ಇಂಥವರ ಸಂಖ್ಯೆಯೇ ನಮ್ಮಂಥಾ ರಾಷ್ಟ್ರಗಳಲ್ಲಿ ಅಪರೂಪ…! ಆ ಅಪರೂಪದ ಸಂಖ್ಯೆಯವರೇ ಇನ್ನಿಲ್ಲವಾಗುವುದು ವೈಚಾರಿಕತೆಯನ್ನು ಇಷ್ಟಪಡುವವರಿಗೆ ನೋವಿನ ಸಂಗತಿ.

ನಮ್ಮಲ್ಲಿ ಮೌಢ್ಯತೆಯನ್ನು ತುಂಬಾ ವ್ಯವಸ್ಥಿತವಾಗಿ ಸಂಪೋಷಿಸಿಕೊಂಡು ಬರುವ ಮನಸುಗಳಿವೆ. ಕೆಲ ಗ್ರಾಮೀಣ ಭಾಗಗಳಲ್ಲಂತೂ ಒಬ್ಬ ಯೋಗ್ಯ ಪದವಿ ಪಡೆದ ವೈದ್ಯನಿಗಿಂತಲೂ ಮಾಟ, ಮಂತ್ರವನ್ನೇ ನಂಬುವವರ ಪ್ರಮಾಣ ಹೆಚ್ಚಿಗಿದೆ. ವೈದ್ಯನೊಬ್ಬನ ಸಾಮರ್ಥ್ಯ ಮತ್ತು ಶಿಕ್ಷಣಕ್ಕೆ ಸವಾಲಾಗಿ ಒಂದು ನಿಂಬೆಹಣ್ಣು ಕೆಲಸ ಮಾಡುತ್ತದೆ. ಅಷ್ಟಕ್ಕೂ ಅದು ನಂಬುಗೆಯ ಪ್ರಶ್ನೆ. ಈ ನಂಬುಗೆಯೇ ನಮ್ಮನ್ನು ಅನೇಕ ಸಂದರ್ಭಗಳಲ್ಲಿ ಯಾಮಾರಿಸುವದಿದೆ. ಮೌಢ್ಯತೆಯನ್ನೇ ಮಾರಿ ಬದುಕುವ ಜನರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಇಂಥಾ ಕಪಟಿಗಳ ತುತ್ತಿನ ಚೀಲಕ್ಕೆ ಈ ವೈಚಾರಿಕತೆಯಿಂದ ತೂತು ಬೀಳಲಿದೆ ಎಂದು ಖಾತ್ರಿಯಾದದ್ದೇ ದಾಬೋಲಕರರಂಥಾ ಚಿಂತಕರು ಹಲ್ಲೆಗೊಳಗಾಗಬೇಕಾಗುತ್ತದೆ.

ನಮ್ಮಲ್ಲಿ ಇಂದಿಗೂ ಮಾಟ-ಮಂತ್ರ ಮಾಡಿಸುವ ವಿದ್ಯೆ ನಿರಾತಂಕವಾಗಿ ನಡೆದುಕೊಂಡು ಬಂದಿದೆ. ಅದರಲ್ಲಿ ಉತ್ತರದ ಬಿಹಾರ, ಜಾರ್ಖಂಡ, ಛತ್ತೀಸಘಡದಂತಹ ಕಡೆಗಳಲ್ಲಿ ಈ ಮಾಟ ಮಂತ್ರದ ಹಿನ್ನೆಲೆಯಲ್ಲಿ ಸಾವಿರಾರು ಮಹಿಳೆಯರು ಅಸುನೀಗಿರುವದಿದೆ. ಆಕೆ ಮಾಟಗಾತಿ ಎಂದು ತಿಳಿದದ್ದೇ ಅವಳನ್ನು ಅತ್ಯಂತ ಕ್ರೂರವಾಗಿ ಹಿಂಸಿಸುವದಿದೆ. ತೀರಾ ಇತ್ತೀಚೆಗೆ ಬಿಹಾರದ ಪಾಟ್ನಾ ಜಿಲ್ಲೆಯ ಹಳ್ಳಿಯ ವೃದ್ಧೆಯೊಬ್ಬಳನ್ನು ಆಕೆ ಮಾಟಗಾತಿ ಎಂದು ದೂರುವುದು ಮಾತ್ರವಲ್ಲದೇ ಆಕೆಯ ಕೃತ್ಯಗಳು ಸಮುದಾಯಕ್ಕೆ ಅಪಾಯಕಾರಿ ಎಂದು ಆರೋಪಿಸಿ ಆಕೆಯ ಮೂಗನ್ನೇ ಕತ್ತರಿಸಲಾಯಿತು. dhabolkarಬಿಹಾರದ ಕೆಲ ಗ್ರಾಮೀಣ ಜನರು ಆಕೆ ಮಾಟ ಮಂತ್ರಗಳ ಮೂಲಕವೇ ತಮ್ಮ ರೋಗ ರುಜಿನಗಳನ್ನು ಸರಿಪಡಿಸುತ್ತಾಳೆ ಎಂದು ನಂಬಿದವರು. ಆ ನಂಬುಗೆಯ ಹಿನ್ನೆಲೆಯಲ್ಲಿ ಜೀವಹಾನಿಗಳೂ ಸಂಭವಿಸಿದಿದೆ. ಅಂಥಾ ಅವಘಡವೇ ಆಕೆ ಮೂಗು ಕಳೆದುಕೊಳ್ಳಲು ಕಾರಣವಾಯಿತು. ವಿಚಿತ್ರವೆಂದರೆ ಮೇಲೆ ಹೇಳಲಾದ ಮೂರೂ ರಾಜ್ಯಗಳಲ್ಲಿ ಮಾಟ ಮಂತ್ರ ವಿರೋಧಿಸಿ ಶಾಸನಗಳಿವೆ. ಭಾರತದ ಸರ್ವೋಚ್ಚ ನ್ಯಾಯಾಲಯವು ಕೂಡಾ  ಈ ವಿಷಯವಾಗಿ ದೇಶವ್ಯಾಪಿ ಅನ್ವಯವಾಗುವ ಕಾನೂನನ್ನು ಜಾರಿಗೊಳಿಸುವ ಬಗ್ಗೆ 2010 ರ ಸಂದರ್ಭದಲ್ಲಿಯೇ ಮಾತನಾಡಿರುವದಿತ್ತು. ಇಲ್ಲಿಯವರೆಗೆ ರಾಷ್ಟ್ರವ್ಯಾಪಿ ಅನ್ವಯವಾಗಬಹುದಾದ ಅಂಥಾ ಸಾರ್ವತ್ರಿಕ ಶಾಸನ ಬಂದಿಲ್ಲ. ಡಾ. ನರೇಂದ್ರ ದಾಬೋಲ್ಕರ್ ಈ ಬಗೆಯ ಶಾಸನ ಒಂದನ್ನು ಮಹಾರಾಷ್ಟ್ರದಲ್ಲಿ ಜಾರಿಗೊಳಿಸುವ ಹಂಬಲದಲ್ಲಿ  ಕಳೆದ 2005 ರಿಂದಲೂ ತೀವ್ರವಾಗಿ ಹೋರಾಟ ನಡೆಸಿರುವದಿತ್ತು. ಆ ಬಿಲ್ ಜಾರಿಯಾಗದೇ ನೆನೆಗುದಿಗೆ ಬಿತ್ತು. ಇಂದಿಗೂ ನಮ್ಮಲ್ಲಿ ಅಪಾರ ಪ್ರಮಾಣದ ಜನ ತಾವು ಪಡೆದ ಶಿಕ್ಷಣ, ಪದವಿಯನ್ನು ಮೀರಿಯೂ ಮೌಢ್ಯತೆಗೆ ಸಿಲುಕಿರುವದಿದೆ. ಈ ದಿಸೆಯಲ್ಲಿ ಇಡೀ ರಾಷ್ಟ್ರಕ್ಕೆ ಅನ್ವಯವಾಗಬಹುದಾದ ಏಕರೂಪದ ಶಾಸನವನ್ನು ಜಾರಿಗೊಳಿಸುವ ಅಗತ್ಯತೆಯಿದೆ. ವೈಚಾರಿಕತೆ ಎನ್ನುವುದು ಮನುಷ್ಯನ ಶ್ರೇಷ್ಠತೆಯ ಪ್ರತೀಕ. ಮಾನವ ಸಮಾಜದ ಘನತೆಯನ್ನು ಅದು ಎತ್ತಿ ಹಿಡಿಯುವಂಥದ್ದು ಎನ್ನುವುದನ್ನು ನಾವಾರೂ ಅಲ್ಲಗಳೆಯುವಂತಿಲ್ಲ.