Daily Archives: August 27, 2013

ಹಸಿವು ಹಿಂಗಿಸೋ ತಾಕತ್ತಿರುವ ಮಸೂದೆ…


– ಡಾ.ಎಸ್.ಬಿ. ಜೋಗುರ


ದೇಶದ 67 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಾದರೂ ನಾವು ಇಲ್ಲಿಯ ನಾಗರಿಕರ ಆಹಾರ ಸುಭದ್ರತೆಯ ಬಗೆಗೆ ಯೋಚಿಸುತ್ತಿರುವದು ಸಮಾಧಾನಕರ ಸಂಗತಿಯಾಗಿದೆ. ಆದರೆ ಲೋಕಸಭೆಯಲ್ಲಿ ಈ “ರಾಷ್ಟ್ರೀಯ ಆಹಾರ ಸುಭದ್ರತೆಯ ಮಸೂದೆ”ಗೆ ಸಂಬಂಧಿಸಿದ ಚರ್ಚೆಯ ಸಂದರ್ಭದಲ್ಲಿ ಟಿ.ಡಿ.ಪಿ. ಪಕ್ಷದ ಹುಯಿಲಿನಿಂದಾಗಿ ಆಹಾರ ಸಚಿವ ಕೆ.ವಿ.ಥಾಮಸ್ ಕಕ್ಕಾಬಿಕ್ಕಿಯಾಗಬೇಕಾಯಿತು. ಮತ್ತೂ ರಾಷ್ಟ್ರೀಯ ಆಹಾರ ಸುಭದ್ರತಾ ಬಿಲ್ ಮಂಡನೆಯಾಗುವ ಬದಲು ಯತಾಸ್ಥಿತಿಯಲ್ಲಿಯೇ ಉಳಿಯುವಂತಾಗಿತ್ತು. Food Security Billಆದರೆ ಈಗ ಆಹಾರ ಮಸ್ಸೊದೆಗೆ ಅಂಗೀಕಾರ ದೊರೆಯುವ ಮೂಲಕ ದೇಶದ 67 ಪ್ರತಿಶತ ಜನರಿಗೆ ಇದರಿಂದ ಪ್ರಯೋಜನವಾಗಲಿದೆ. 1.25 ಲಕ್ಷ ಕೊಟಿ ಹಣ ಇದಕ್ಕಾಗಿ ವ್ಯಯವಾಗಲಿದೆ.

ಮಾಹಿತಿ ಹಕ್ಕು, ಉದ್ಯೋಗದ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳ ಸಾಲಿನಲ್ಲಿ ಈ ಆಹಾರ ಸುಭದ್ರತೆಯ ಹಕ್ಕು ಕೂಡಾ ತುರ್ತಾಗಿ ಸೇರಬೇಕಿತ್ತು. ಆದರೆ ಈ ಬಿಲ್ ಬಗ್ಗೆ ಒಮ್ಮತ ಬಾರದ ಕಾರಣ ಬರೀ ಚರ್ಚೆಯ ಹಂತದಲ್ಲಿಯೇ ಅದು ಉಳಿದಿತ್ತು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಹಾರದ ಸುಭದ್ರತೆ, ಶಿಕ್ಷಣ ಹಾಗೂ ಉದ್ಯೋಗಕ್ಕಿಂತಲೂ ಹೆಚ್ಚು ನಿರ್ಣಾಯಕವಾಗಲಿದೆ.

ಆಹಾರದ ವಿಷಯವಾಗಿ ನಮ್ಮ ದೇಶದಲ್ಲಿ ಕಪ್ಪು ಬಿಳುಪು ಚಿತ್ರಣವಿದೆ. ಸಾಕಷ್ಟು ಆಹಾರ ಉತ್ಪಾದನೆಯಾಗುತ್ತಿರುವದು, ಯೋಗ್ಯ ಸಂಗ್ರಹಾಗಾರ ಇಲ್ಲದ ಕಾರಣ ಕೊಳೆಯುವದು.. ಹುಳ ಹಿಡಿಯುವದೂ ಇದೆ. ಇನ್ನೊಂದು ಬದಿ ಹಸಿವಿನಿಂದ ಸಾಯುವ, ಪೌಷ್ಟಿಕಾಂಶದಿಂದ ಬಳಲುವ ಮಕ್ಕಳ ಪ್ರಮಾಣವೇನೂ ಕಡಿಮೆಯಾಗಿಲ್ಲ. ಅತ್ಯಂತ ವೈಭವಯುತ ಬದುಕು ಸಾಗಿಸುವ, ತಿಂದದ್ದನ್ನು ಅರಗಿಸಿಕೊಳ್ಳುವದೇ ದೊಡ್ಡ ಕಿರಿಕಿರಿಯಾಗಿ ಪರಿತಪಿಸುವ ಔಷಧಿ, ಮಾತ್ರೆಯ ಮೂಲಕ ಆಹಾರ ಜೀರ್ಣವಾಗುವಂತೆ ಮಾಡಿ ನಿಟ್ಟುಸಿರು ಬಿಡುವವರು ಒಂದೆಡೆಯಾದರೆ, starved-peopleಹೊಟೆಲುಗಳಲ್ಲಿ ರೇಟ್ ಬೋರ್ಡ್ ನೋಡಿ, ಕೇಳಿ ಅರ್ಧಂಬರ್ಧ ಹೊಟ್ಟೆಯಲ್ಲಿ ಊಟ ಮಾಡಿ ಬೇಗ ಕರಗದಿರಲಿ ಎಂದು ತವಕಿಸುವ ದೊಡ್ಡ ಸಮೂಹ ಇನ್ನೊಂದೆಡೆ. 2012 ರ ಸಂದರ್ಭದಲ್ಲಿ ‘ಜಾಗತಿಕ ಹಸಿವಿನ ಸೂಚ್ಯಾಂಕ’ ಮಾಡಿದ ಸಮೀಕ್ಷೆಯಲ್ಲಿ ಮೂರು ಮುಖ್ಯ ಸಂಗತಿಗಳನ್ನು ಗಮನಹರಿಸಿ ಅದು ಅಧ್ಯಯನ ಮಾಡಿತ್ತು. ಒಂದನೆಯದು ಸತ್ವಭರಿತ ಆಹಾರದ ಕೊರತೆಯ ಜನಸಮೂಹದ ಪ್ರಮಾಣ, ಎರಡನೆಯದು ಶಿಶುವಿನ ಮರಣ ಪ್ರಮಾಣ, ಮೂರನೇಯದು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವ ಮಕ್ಕಳ ಪ್ರಮಾಣ. ಈ ಮೂರು ಸಂಗತಿಗಳನ್ನು ಆದರಿಸಿ ಮಾಡಲಾದ ಸಮೀಕ್ಷೆಯ ಪ್ರಕಾರ 79 ರಾಷ್ಟ್ರಗಳ ಪೈಕಿ ಭಾರತ 65 ನೇ ಸ್ಥಾನದಲ್ಲಿರುವ ಬಗ್ಗೆ ವರದಿಯಾಗಿದೆ.

2008 ರ ಸಂದರ್ಭದಲ್ಲಿ ಭಾರತೀಯ ರಾಜ್ಯಗಳ ಹಸಿವಿನ ಸೂಚ್ಯಾಂಕದ ಪ್ರಕಾರ ದೇಶದ ಬೇರೆ ಬೇರೆ ರಾಜ್ಯಗಳ ಸ್ಥಿತಿ ಬೇರೆ ಬೇರೆಯಾಗಿದೆ. ದೇಶದ ಸುಮಾರು 12 ರಾಜ್ಯಗಳು ಆಹಾರದ ವಿಷಯವಾಗಿ ಸಂಕಷ್ಟದಲ್ಲಿವೆ. ಅದರಲ್ಲೂ ಮಧ್ಯಪ್ರದೇಶ ತೀರ ಗಂಭೀರವಾದ ಸ್ಥಿತಿಯಲ್ಲಿದೆ ಎಂದು ವರದಿ ಆಗಿರುವದಿದೆ. ಸತ್ವಭರಿತ ಆಹಾರ ಮತ್ತು ಅಭಿವೃದ್ಧಿ ಸೂಚ್ಯಾಂಕದ ವಿಷಯದಲ್ಲಿ ದೇಶದ 12 ರಾಜ್ಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲಾಗಿದೆ. ಅದರಲ್ಲಿ ಹತ್ತು ರಾಜ್ಯಗಳ ಶ್ರೇಣಿ ಹೀಗಿದೆ. ಮೊದಲ ಸ್ಥಾನದಲ್ಲಿ ಕೇರಳ, ಎರಡನೆಯ ಸ್ಥಾನ ಹರಿಯಾಣಾ, ಮೂರನೇಯ ಸ್ಥಾನ ತಮಿಳುನಾಡು, ನಾಲ್ಕನೇಯ ಸ್ಥಾನದಲ್ಲಿ ಗುಜರಾತ, ಐದನೇಯ ಸ್ಥಾನದಲ್ಲಿ ಮಹಾರಾಷ್ಟ್ರ, ಆರನೇಯ ಸ್ಥಾನದಲ್ಲಿ ಕರ್ನಾಟಕ, ಏಳನೇ ಸ್ಥಾನದಲ್ಲಿ ಆಂದ್ರಪ್ರದೇಶ, ಎಂಟನೆಯ ಸ್ಥಾನದಲ್ಲಿ ಆಸ್ಸಾಂ, ಒಂಬತ್ತನೇಯ ಸ್ಥಾನದಲ್ಲಿ ಓಡಿಸ್ಸಾ, ಹತ್ತನೇಯ ಸ್ಥಾನದಲ್ಲಿ ರಾಜಸ್ಥಾನ ಇದೆ. ನಮ್ಮ ದೇಶದಲ್ಲಿ ಸುಮಾರು 42 ಪ್ರತಿಶತ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುವವರಿದ್ದಾರೆ.

ಆಹಾರದ ವಿಷಯವಾಗಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಮೂರು ರೀತಿಯ ಸಮೂಹಗಳನ್ನು ಗುರುತಿಸಿರುವದಿದೆ. food_securityಒಂದನೆಯದಾಗಿ ವರ್ಷವಿಡೀ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದಿರುವ ಕುಟುಂಬಗಳು, ಎರಡನೆಯದಾಗಿ ವರ್ಷದ ಕೆಲವು ತಿಂಗಳುಗಳಲ್ಲಿ ತೊಂದರೆಯನ್ನು ಎದುರಿಸುವ ಕುಟುಂಬಗಳು, ಮೂರನೆಯದು ವರ್ಷದುದ್ದಕ್ಕೂ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದದೇ ಇರುವವರು. ಇನ್ನು ಈ ಮೇಲಿನ ಮೂರು ಪ್ರಕಾರಗಳು ದೇಶದ ಉದ್ದಗಲಕ್ಕೂ ಕಂಡು ಬರುವ ಸಮೂಹಗಳು. ಮೊದಲನೆಯ ಸಮೂಹಗಳಿಗೆ ಈ ಆಹಾರ ಸುಭದ್ರತೆಯ ಪ್ರಶ್ನೆಯೇ ಬರುವದಿಲ್ಲ. ಇನ್ನು ಎರಡನೆಯವರಿಗೆ ಸಂಕಟ ಬಂದಾಗ ವೆಂಕಟರಮಣ. ನಿಜವಾಗಿಯೂ ಆಹಾರದ ಸುಭದ್ರತೆ ಮತ್ತು ಹಕ್ಕಿನ ಪ್ರಶ್ನೆ ಇದ್ದದ್ದೇ ಮೂರನೇಯ ಜನಸಮೂಹದವರಿಗಾಗಿ. ಇವರು ಹಸಿವು ಮತ್ತು ಕೊರತೆಗಳ ನಡುವೆಯೇ ದಿನದೂಡುವವರು. ಎರಡನೆಯ ಮತ್ತು ಮೂರನೇಯ ಪ್ರರೂಪದ ಕುಟುಂಬದ ವಿಷಯಗಳ ಪ್ರಶ್ನೆ ಬಂದರೆ ವರ್ಷದ ಕೆಲವು ತಿಂಗಳುಗಳಲ್ಲಿ ಆಹಾರ ಧಾನ್ಯಗಳ ಕೊರತೆಯ ವಿಷಯವಾಗಿ ಪಶ್ಚಿಮ ಬಂಗಾಲ ಮೊದಲ ಸ್ಥಾನದಲ್ಲಿದ್ದರೆ, ವರ್ಷವಿಡೀ ಆಹಾರ ಧಾನ್ಯಗಳ ಕೊರತೆ ಎದುರಿಸುವ ರಾಜ್ಯಗಳ ಸಾಲಲ್ಲಿ ಆಸ್ಸಾಂ ಮೊದಲ ಸ್ಥಾನದಲ್ಲಿದೆ.

ಭಾರತದಲ್ಲಿ ಪೌಷ್ಟಿಕತೆಯ ಕೊರತೆ ಮತ್ತು ಕಡಿಮೆ ತೂಕದ ಮಕ್ಕಳ ವಿಷಯವಾಗಿ ಮಾತನಾಡುವದಾದರೆ ಭಾರತದಲ್ಲಿ 21.7 ಕೋಟಿ ಜನಸಂಖ್ಯೆಯಷ್ಟು ಜನ (ಹೆಚ್ಚೂ ಕಡಿಮೆ ಇಂಡೊನೇಷಿಯಾದ ಒಟ್ಟು ಜನಸಂಖೆಯಷ್ಟು) ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುವ ಬಗ್ಗೆ ಸಮೀಕ್ಷೆಯಲ್ಲಿ ವರದಿಯಾಗಿದೆ. food-security-wasted-grainsಹಸಿರು ಕ್ರಾಂತಿಗಿಂತಲೂ ಮೊದಲು ದೇಶದಲ್ಲಿ ಭೀಕರ ಬರಗಾಲದ ಸಂದರ್ಭದಲ್ಲಿ ಜನ ಅಪಾರವಾಗಿ ಸಾಯುತ್ತಿದ್ದರು. ಆಗ ಮರಣ ಪ್ರಮಾಣ ಸಹಜವಾಗಿ ಹೆಚ್ಚಾಗುತ್ತಿತ್ತು. ಈಗ ಅಂಥ ಬರಗಾಲಗಳಿಲ್ಲ. ಆದರೆ ಈ ಬಗೆಯ ಸತ್ವಭರಿತ ಆಹಾರದ ಕೊರತೆಯಿಂದಾಗಿ ಸಾಯುವವರ ಪ್ರಮಾಣ ಆಗಿನ ಬರಗಾಲಗಳಿಗಿಂತಲೂ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಜನೆವರಿ 2011 ರ ಸಂದರ್ಭದಲ್ಲಿ ಪ್ರಧಾನಿ ಮನಮೋಹನ ಸಿಂಗ್ ರವರು ‘ನಮ್ಮಲ್ಲಿ ಹಸಿವು ಮತ್ತು ಅಪೌಷ್ಟಿಕತೆ ಎನ್ನುವದು ರಾಷ್ಟ್ರ ತಲೆತಗ್ಗಿಸುವಂತಿದೆ’ ಎಂದಿದ್ದರು. ಅದನ್ನು ಗಮನದಲ್ಲಿರಿಸಿಕೊಂಡೇ ‘ರಾಷ್ಟ್ರೀಯ ಆಹಾರ ಸುಭದ್ರತಾ ಬಿಲ್’ ಅನ್ನು ಮಂಡಿಸುವ ಯೋಚನೆಗೆ ಯು.ಪಿ.ಎ ಸರಕಾರ ಬಂದಿದ್ದು. ಈ ಮಸೂದೆಯ ಮೂಲಕ ಜನತೆಯ ಕಲ್ಯಾಣವನ್ನು ಜನರ ಹಕ್ಕಿನಲ್ಲಿ ಬದಲಾಯಿಸುವ ಒಳ್ಳೆಯ ಆಶಯವಿತ್ತು. ಅಂತೂ ಆ ಆಶಯವೂ ಈಡೇರಿದಂತಾಯಿತು.

ವಿರೋಧಿಸಲಿಕ್ಕಾಗಿಯೇ ಇತರೆ ಕರಡುಗಳಿವೆ. ಅವುಗಳಿಗೆ ಬೇಕಾದರೆ ಅಡೆತಡೆ ಒಡ್ಡಲಿ. ಆಹಾರ ಸುಭದ್ರತೆಯನ್ನು ಜನತೆಯ ಹಕ್ಕಾಗಿಸುವ ಮೂಲಕ ಹಸಿದ ಹೊಟ್ಟೆಗೆ ಖಾತ್ರಿಯಾಗಬಹುದಾದ ಆಹಾರಧಾನ್ಯಗಳನ್ನು rationshop-PDSಒದಗಿಸಲಿರುವ ಇಂಥಾ ಕರಡನ್ನು ವಿರೋಧಿಸಬಾರದು. ಈ ಬಿಲ್ ಅತಿ ಮುಖ್ಯವಾಗಿ ಮಹಿಳೆ ಮತ್ತು ಮಕ್ಕಳನ್ನೂ ಗಮನದಲ್ಲಿರಿಸಿಕೊಂಡಿದೆ. ಹೆರಿಗೆಯ ಸಂದರ್ಭದಲ್ಲಿ ಮಹಿಳೆಗೆ ಪೌಷ್ಟಿಕ ಆಹಾರದ ಜೊತೆಯಲ್ಲಿ 6000 ರೂ ಮಾತೃತ್ವ ಧನವನ್ನೂ ಆಕೆ ಪಡೆಯಲಿದ್ದಾಳೆ. ಅಪೌಷ್ಟಿಕತೆಯಿಂದ ಬಳಲುವ 14 ವರ್ಷದ ಮಕ್ಕಳು ಪೌಷ್ಟಿಕ ಆಹಾರವನ್ನು ಕಡ್ಡಾಯವಾದ ಶಿಕ್ಷಣದ ರೀತಿಯಲ್ಲಿಯೇ ಪಡೆಯಲಿದ್ದಾರೆ. ಹಾಗಾಗಿ ಹಸಿವು ಹಿಂಗಿಸುವ ತಾಕತ್ತು, ಈಗ ಪರಿಚಯಿಸಲಾಗಿರುವ ಈ ರಾಷ್ಟ್ರೀಯ ಆಹಾರ ಸುಭದ್ರತಾ ಮಸೂದೆಗಿದೆ. ಈ ಮಸೂದೆಯನ್ನು ನಾವೆಲ್ಲರೂ ಮನಸಾರೆ ಸ್ವಾಗತಿಸಬೇಕು.