Daily Archives: August 4, 2013

ಅಕ್ಕಿಯೊಳಗಿನ ಕಲ್ಲಾಗದೇ ಸಾಣಿಗೆಯಾಗೋಣ


– ಡಾ.ಎಸ್.ಬಿ. ಜೋಗುರ


 

ಮನುಷ್ಯನಿಗೆ ಇದು ನನ್ನದು ಇದು ನಿನ್ನದು ಎನ್ನುವ ಆಸ್ತಿ ಪ್ರಜ್ಞೆ ಹುಟ್ಟಿದ ಗಳಿಗೆಯಿಂದಲೇ ಸಾಮಾಜಿಕ ಅಸಾಮನತೆ ಎನ್ನುವದು ಆವೀರ್ಭವಿಸಿತು. ಅದಕ್ಕಿಂತಲೂ ಮುಂಚೆ ಇದ್ದ ಅಸಮಾನತೆ ಕೇವಲ ಜೈವಿಕವಾಗಿತ್ತು, ಸ್ವಾಭಾವಿಕವಾಗಿತ್ತು. ಈ ಬಗೆಯ ಸಾಮಾಜಿಕ ಅಸಮಾನತೆಗಳು ಇತಿಹಾಸದುದ್ದಕ್ಕೂ ವ್ಯಾಪಿಸಿಕೊಂಡಿರುವದಿದೆ. ಬಹುಷ: ಆ ಕಾರಣದಿಂದಾಗಿಯೇ ಕಾರ್ಲಮಾರ್ಕ್ಸ್ ರಂಥಾ ಚಿಂತಕರು ಅಸ್ತಿತ್ವದಲ್ಲಿರುವ ಸಮಾಜಗಳ ಚರಿತ್ರೆ ಎಂದರೆ ವರ್ಗಸಂಘರ್ಷದ ಚರಿತ್ರೆಯೇ ಆಗಿದೆ ಎಂದಿರುವದಿದೆ. ಜೊತೆಗೆ ಉತ್ಪಾದನಾ ಸಾಧನಗಳ ಮೇಲಿನ ಒಡೆತನವಿರುವ ಬಂಡವಾಳಶಾಹಿಗಳು ಶೋಷಣೆಯನ್ನೇ ತಮ್ಮ ಮೇಲ್ಮುಖ ಸಂಚಲನೆಯ ಸಾಧನವನ್ನಾಗಿ ಮಾಡಿಕೊಂಡಿದ್ದರು. ಈ ಬಗೆಯ ಶೋಷಣೆಯ ಗರ್ಭದಲ್ಲಿಯೇ ವರ್ಗ ಸಂಘರ್ಷದ ಬೀಜಗಳು ಅಂಕುರಿಸಿದ್ದವು. ಇದು ಮುಂದೆ ಸಮತಾವಾದಿ ಸಮಾಜಕ್ಕೆ ಜನ್ಮ ನೀಡುತ್ತದೆ ಎಂದು ಭವಿಷ್ಯ ನುಡಿದ ಮಾರ್ಕ್ಸನ ಹೇಳಿಕೆ ಹುಸಿಯಾಯಿತು.

ಯಾವುದೇ ಒಂದು ರಾಷ್ಟ್ರದ ಆರ್ಥಿಕ ಸಂಪನ್ಮೂಲಗಳ ಶೇಖರಣೆಯ ಹಿಂದೆ ದುಡಿಯುವ ಜನಸಮೂಹದ ಬೆವರಿದೆ. ಬಂಡವಾಳ ಎನ್ನುವುದು ಯಾವುದೋ ಒಂದು ಅಗೋಚರ ಶಕ್ತಿಯ ವರಪ್ರಸಾದವಲ್ಲ. ಶ್ರಮಸಂಸ್ಕೃತಿಯಿಂದಲೇ ಅದು ಸೃಷ್ಟಿಯಾಗುತ್ತದೆ, ಒಟ್ಟುಗೂಡುತ್ತದೆ. drought12 ನೇ ಶತಮಾನದಲ್ಲಿ ಬಸವಣ್ಣನವರು ಈ ಬಗೆಯ ಶೊಷಣೆಗೆ ಅನುವು ಮಾಡಿಕೊಡಬಾರದು ಎನ್ನುವ ದೃಷ್ಟಿಯಿಂದಲೇ ಅವನು ರಾಜನಾದರೂ ಸೈ, ದಾಸನಾದರೂ ಸೈ ಇಬ್ಬರೂ ದುಡಿಯಲೇಬೇಕು. ಇನ್ನು ಇವರಿಬ್ಬರ ದುಡಿಮೆಯ ಮಿಗುತಾಯವನ್ನು ಗುಡ್ದೆ ಹಾಕದೇ ಸಮಾಜಕ್ಕೆ ದಾಸೋಹದ ರೂಪದಲ್ಲಿ ಹಿಂತಿರುಗಿಸಬೇಕು. ಅಷ್ಟಕ್ಕೂ ಅದು ಕೆರೆಯ ನೀರನು ಕೆರೆಗೆ ಚೆಲ್ಲುವ ಪರಿ ಎನ್ನುವ ಹಾಗೆ ದಾಸೋಹದ ತತ್ವವನ್ನು ಪರಿಚಯಿಸಿದ್ದರು. ಇತ್ತೀಚೆಗೆ ಬಡಜನರಿಗೆ ನೀಡಲಾಗುವ ಮೂವತ್ತು ಕಿಲೊ ಅಕ್ಕಿಯ ಬಗ್ಗೆ ಕೆಲವು ಅಪಸ್ವರಗಳು ಕೇಳಿಬರುತ್ತಿವೆ. ಇದು ಅವರ ದುಡಿಯುವ ಮನೋಭಾವವನ್ನು ಹಾಳುಗೆಡುವಲಿದೆ ಹಾಗೂ ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಪೆಟ್ಟು ಬೀಳಲಿದೆ ಎನ್ನುವದು ಇವರ ವಾದ. ಬಡವರಿಗೆ ಈ ಅಕ್ಕಿಯನ್ನು ನೀಡದಿದ್ದರೂ ಅತ್ಯಂತ ಸುಭಿಕ್ಷವಾದ ಸುವರ್ಣಯುಗವಂತೂ ಪ್ರಚಲಿತ ರಾಜಕಾರಣದ ಸಂದರ್ಭದಲ್ಲಿ ಪ್ರತಿಷ್ಟಾಪಿತವಾಗದು. ಈಗಾಗಲೇ ದೊಡ್ಡ ದೊಡ್ಡ ಹೊಟೇಲುಗಳಲ್ಲಿ, ಮದುವೆ ಮಂಟಪಗಳಲ್ಲಿ, ವಿವಿಧ ಸಭೆ ಸಮಾರಂಭಗಳಲ್ಲಿ ಟನ್ ಗಟ್ಟಲೇ ಆಹಾರ ಪದಾರ್ಥ ಹಾಳಾಗಿ ಕಸವಾಗುವದರ ಬಗ್ಗೆಯೂ ನಮಗೆ ತಿಳಿದಿರಬೇಕು. ಅದು ಖಾಸಗಿ ಖರ್ಚಾಗಿದ್ದರೂ ಆಹಾರಧಾನ್ಯ ಹಾಳುಗೆಡಹುವ ಬಗ್ಗೆ ಸಾರ್ವಜನಿಕರು ಪ್ರಶ್ನಿಸಬಹುದಾಗಿದೆ. ಹಾಡುಹಗಲಲ್ಲಿಯೇ ಸೂರ್ಯನಿಗೆ ಸವಾಲಾಗಿ ಐಷಾರಾಮಿ ಹೊಟೆಲುಗಳಲ್ಲಿ ಉರಿಯುವ ಸಾವಿರಾರು ದೀಪಗಳ ಬೆಳಕಿನ ವ್ಯಯವಾಗುವದನ್ನೂ ಪ್ರಶ್ನಿಸಬೇಕಿದೆ. ಎಲ್ಲೆಲ್ಲೋ ಕೋಟಿಗಟ್ಟಲೆ ಹಣ ವ್ಯಯವಾಗುವ ಬಗ್ಗೆ ಮಾತನಾಡದೇ ಹೀಗೆ ಬಡವರಿಗೆ ಅಗ್ಗದ ದರದಲ್ಲಿ ಅಕ್ಕಿಯ ಬಗ್ಗೆ ಮಾತ್ರ ಯಾಕೆ ಸಂಕುಚಿತವಾದ ಪ್ರತಿಕ್ರಿಯೆಗಳು ಬರುತ್ತವೆ..?

ಬಡವರಿಗೆ ನೀಡುವ ಈ ಅಕ್ಕಿ ಎಲ್ಲೋ..ಯಾವುದೋ ಗೋದಾಮಿನಲ್ಲಿ ಹುಳ ಹಿಡಿದು, ಕಮುಚುಕಟ್ಟಿ ನಾರುವ ಬದಲು ಬಡವನ ಹೊಟ್ಟೆಯ ಸವಾಲಿಗೆ ಉತ್ತರವಾಗುವದಾದರೆ ಅದಕ್ಕಿಂತಲೂ ಸಾರ್ಥಕತೆ ಆ ಅಕ್ಕಿಗೆ ಇನ್ನೇನಿದೆ..? ಅಕ್ಕಿ ಎನ್ನುವದು ಸರ್ವಸ್ವವಲ್ಲ. ಅದು ಆ ಬಡವನ ಪಾಲಿಗೆ ಬೇಳೆಯಲ್ಲ, ಎಣ್ಣೆಯಲ್ಲ, ಉಪ್ಪಲ್ಲ, ಖಾರವಲ್ಲ, ತರಕಾರಿಯೂ ಅಲ್ಲ, ಹೆಂಡತಿಯ ಸೀರೆಯಲ್ಲ, ಮಕ್ಕಳ ವಸ್ತ್ರವಲ್ಲ, ಸ್ಕೂಲ ಫ಼ೀ ಅಲ್ಲ.. ಇರಲು ಮನೆಯಲ್ಲ. ಇಂಥಾ ಇನ್ನೂ ಹತ್ತಾರು ಅಲ್ಲಗಳ ನಡುವೆ ಹೊಟ್ಟೆಗಾಗುವ ಅಕ್ಕಿಯೇ ಎಲ್ಲವೂ ಎಂದು ತಿಳಿದು ವಾದ ಮಾಡುವ ಕ್ರಮವೇ ಸರಿಯಲ್ಲ. ಇಂಥಾ ಹತ್ತಾರು ಇಲ್ಲದ ಸಂಗತಿಗಳು ಬಡವನನ್ನು ಮುತ್ತಿ ಪೀಡಿಸುತ್ತಿರುವಾಗ ಸರಕಾರ ಕೊಡುವ 30 ಕಿಲೊ ಅಕ್ಕಿ ಅವನನ್ನು ಹೇಗೆ ದುಡಿಯದವನನ್ನಾಗಿ ಮಾಡುತ್ತವೆ ಎನ್ನುವದೇ ನಿಗೂಢ ರಹಸ್ಯ.

ಇನ್ನು ಅಗ್ಗದ ದರದಲ್ಲಿ ಅಕ್ಕಿ ಕೊಡುತ್ತಿರುವದು ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನದ ಜನರಿಗೋ..ಇಲ್ಲಾ ಬಂಗ್ಲಾ ದೇಶದ ಜನರಿಗೊ.. ಇಲ್ಲಾ ಶ್ರೀಲಂಕಾದವರಿಗೋ ಆಗಿದ್ದರೆ ತಕರಾರು ಎತ್ತಬಹುದು. ಇದು ನನದೇ ದೇಶದ, ನನ್ನದೇ ರಾಜ್ಯದ ಬಡಜನತೆಗೆ ಕೊಡುತ್ತಿರುವದು. ತಿನ್ನಲು ಸಾಕು ಬೇಕಾದಷ್ಟಿದ್ದರೂ ತಿಂದು ಅರಗಿಸಿಕೊಳ್ಳಲಾಗದೇ ಮಾತ್ರೆ ನುಂಗಿ ಚಡಪಡಿಸುವ ಅತ್ಯಂತ ಕಡಿಮೆ ಪ್ರಮಾಣದ ಜನರಿಗಿಂತಲೂ ಅರೆಹೊಟ್ಟೆಯಲ್ಲಿ ದಿನದೂಡುವ ಕೋಟಿ ಕೋಟಿ ಜನರ ಹಸಿವು ಹಿಂಗುವದು ಮುಖ್ಯವಾಗಬೇಕು.

ಸಿಗರೇಟು, ಮದ್ಯ, ಗುಟ್ಕಾದಂಥಾ ಪದಾರ್ಥಗಳನ್ನು ನೀಡಿದರೆ ಒಕ್ಕೊರಳಿನಿಂದ ವಿರೋಧಿಸಬಹುದು ಆದರೆ ಬಡವರ riceದಿನದ ಗಂಜಿಗಾಗಿ ನೀಡುವ ಅಕ್ಕಿಯನ್ನು ಕುರಿತು ವಿರೋಧಾತ್ಮವಾಗಿ ಪ್ರತಿಕ್ರಿಯಿಸುವುದು ಮಾತ್ರ ಸರಿಯಲ್ಲ. ಬಡತನ ಎನ್ನುವುದು ಒಂದು ಸ್ಥಿತಿ. ಅದನ್ನು ಯಾರೂ ಇಷ್ಟಪಟ್ಟು ತಂದುಕೊಂಡಿರುವದಿಲ್ಲ. ಆ ಬಡತನದ ಹತ್ತಾರು ಅಸಹಾಯಕ ಮುಖಗಳಲ್ಲಿ ಈ ಹಸಿವೂ ಒಂದು ಕನಿಷ್ಟ ಪಕ್ಷ ಅದಾದರೂ ಹಿಂಗುವಂತಾಗುವ ಗಳಿಗೆಗೆ ನಾವು ಸಂತಸ ಪಡಬೇಡವೇ..? ಸ್ವಾತಂತ್ರ್ಯಪೂರ್ವದಿಂದ ಇವತ್ತಿನವರೆಗೂ ಸರ್ವೋದಯ ಸಮಾಜದ ಕನಸನ್ನು ಕಾಣುವ ನಾವುಗಳು ನಮ್ಮದೇ ರಾಜ್ಯದ ಶೋಷಿತರಿಗೆ, ಕೆಳಸ್ತರಗಳಿಗೆ ನೀಡಲಾಗುವ ಕನಿಷ್ಟ ಸೌಲಭ್ಯಗಳನ್ನೂ ಸಹಿಸಲಾಗುವದಿಲ್ಲವಲ್ಲ..! ಎನ್ನುವದೇ ಬಹು ದೊಡ್ದ ವಿಷಾದ.

30 ಕಿಲೊ ಅಕ್ಕಿ ಬಡವರ ಬದುಕಿನ ಭಾಗ್ಯವನ್ನಂತೂ ಬದುಕಿಸಲಾರದು. ಆದರೆ ಕೊನೆಯ ಪಕ್ಷ ಆ ಕುಟುಂಬದ ಹಸಿವನ್ನಾದರೂ ನೀಗಿಸಬಲ್ಲದು. ದೇಶ ಸ್ವಾಯತ್ತವಾಗಿ 6 ದಶಕಗಳಾದರೂ ಇಂದಿಗೂ ನನ್ನದೇ ದೇಶದ ಅರ್ಧದಷ್ಟು ಜನ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುವದು, ಅರೆಹೊಟ್ಟೆಯಲ್ಲಿ ಮಲಗುವ ಸ್ಥಿತಿ ಇದೆ. ಈ ಸ್ಥಿತಿ ಬ್ರಿಟಿಷರು ಇಲ್ಲಿಂದ ಕಾಲ್ತೆಗೆದ ಮೇಲೆ ನಮ್ಮವರು ನಮ್ಮನ್ನಾಳುವಾಗ ನಿರ್ಮಾಣವಾದದ್ದು ಎನ್ನುವುದೇ ಒಂದು ಬಹುದೊಡ್ಡ ವ್ಯಂಗ್ಯ. ಕಸದಲ್ಲಿ ಎಸೆಯುವ ಎಂಜಲು ಅನ್ನಕ್ಕಾಗಿ ನಾಯಿ-ಹಂದಿಗಳ ಜೊತೆ ಸೆಣಸಾಡುವ ಸನ್ನಿವೇಶದ ಎದುರು ನಮ್ಮ ನಾಗರಿಕತೆ ನಾಚಿ ನೀರಾಗಬೇಕು. ಹಾಗಾದಾಗ ಮಾತ್ರ ನಾವು ಬಡವರಿಗೆ ನೀಡುವ ಅಕ್ಕಿಯಲ್ಲಿ ಕಲ್ಲಾಗದೇ ಸಾಣಿಗೆಯಾಗುವ ಸಾಧ್ಯತೆಯಿದೆ.