Daily Archives: September 16, 2013

ಮೋದಿ ಮತ್ತು ಭವಿಷ್ಯದ ಇತಿಹಾಸದ ಪುಟಗಳು


– ರವಿ ಕೃಷ್ಣಾರೆಡ್ದಿ


 

“It’s easier to fool people than to convince them that they have been fooled.”― Mark Twain

ಇದು ಅಮೆರಿಕ ಅಲ್ಲ ಮತ್ತು ಇಲ್ಲಿ ಅಧ್ಯಕ್ಷೀಯ ವ್ಯವಸ್ಥೆ ಇಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ದೇಶದ ದೊಡ್ಡ ಪಕ್ಷವೊಂದು ತನ್ನ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಸುತ್ತಮುತ್ತ ನಡೆದ ಘಟನಾವಳಿಗಳ ಬಗ್ಗೆ ಹೇಳುವುದಾದರೆ, ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ ಇರುವುದಿಲ್ಲ ಮತ್ತು ಅಭ್ಯರ್ಥಿಗಳೂ ಇರುವುದಿಲ್ಲ. ಬಹುಮತ ಪಡೆದ ಸಂಸದೀಯ ಗುಂಪು ಆಯ್ಕೆ ಮಾಡಿಕೊಳ್ಳುವ ನಾಯಕತ್ವದ ಸ್ಥಾನ ಅದು. ಇತ್ತೀಚೆಗೆ ಆಗುತ್ತಿರುವುದೆಲ್ಲ ಮೀಡಿಯಾ ಮ್ಯಾನೇಜ್ ಮಾತ್ರವಾಗಿದೆ ಮತ್ತು ನಿತ್ಯಹಸಿವಿನ ಕಾರಣಕ್ಕಾಗಿ ಅದನ್ನು ಮಾಧ್ಯಮಗಳು ಭಕ್ಷಿಸಿ ಜನರಿಗೆ ಉಣಬಡಿಸುತ್ತಿವೆ.

ಗುಜರಾತಿನ ನೆಲದಲ್ಲಿ ಹುಟ್ಟಿಬಂದ ಸಂತ, ರಾಜಕಾರಣಿ, ಶಾಂತಿದೂತ,  ಗಾಂಧೀಜಿ. 200px-MKGandhi[1]ಹಲವಾರು ಭಿನ್ನಾಭಿಪ್ರಾಯಗಳಿದ್ದರೂ ಕೊನೆಯವರೆಗೂ ಗಾಂಧೀಜಿಯನ್ನು ಗೌರವಿಸುತ್ತ ಉಳಿದವರು ಸರ್ದಾರ್ ಪಟೇಲ್. ದೇಶ ಕಟ್ಟಿದವರು. ಅಂತಹ ನೆಲದಲ್ಲಿ ಯಾವುದೇ ಪಾಪಪ್ರಜ್ಞೆ ಮತ್ತು ಪ್ರಾಯಶ್ಚಿತ್ತದ ಲವಲೇಶವೂ ಇಲ್ಲದ ಕಳೆಯ ಗಿಡವೊಂದು ಇಂದು ವಿಷಪೂರಿತ ಮುಳ್ಳುಗಳೊಂದಿಗೆ ಆಮ್ಲಜನಕಕ್ಕೆ ಬದಲಾಗಿ ಇಂಗಾಲವನ್ನೇ ಕಕ್ಕುವ ಹೆಮ್ಮರವಾಗಿ ಬೆಳೆದು ನಿಂತಿದೆ. ಭಾರತದ ಇತಿಹಾಸ, ಪರಂಪರೆ ಮತ್ತು ಆತ್ಮದ ಪರಿಚಯವೇ ಇಲ್ಲದ ಜನ ಈ ದೇಶವನ್ನು ರೋಬಾಟ್ ಯಂತ್ರಮಾನವರಂತೆಯ ಏಕೋದ್ದೇಶದ ಮನುಷ್ಯರ ಸಂಕುಚಿತ ರಾಷ್ಟ್ರ ಕಟ್ಟುವುದಕ್ಕಾಗಿ, ಈ ದೇಶದಲ್ಲಿ ನಡೆದ ಸಾಂಸ್ಕೃತಿಕ ಮತ್ತು ರಾಜಕೀಯ ಹೋರಾಟಗಳ, ನ್ಯಾಯ ಮತ್ತು ಸಮಾನತೆಯ, ಮಾನವನ ಪರಮಾದ್ಭುತ ಜೀವವಿಕಾಸದ ಮತ್ತು ವಲಸೆಯ ಕತೆಯನ್ನೇ ತಿರುಚಿ ಕಗ್ಗತ್ತಲ ಭವಿಷ್ಯ ಬರೆಯಹೊರಟಿದ್ದಾರೆ.

ಮೋದಿಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಕ್ಷಣ ಮೋದಿಯೇನೂ ಪ್ರಧಾನಿ ಆಗುವುದಿಲ್ಲ. ಚುನಾವಣೆಯಲ್ಲಿ ಏನಾಗುತ್ತದೆ ಎಂದು ಊಹಿಸಲಾಗದ ರಭಸದ ಮತ್ತು ಅನಿಶ್ಚಿತತೆತ ವರ್ತಮಾನದಲ್ಲಿ ನಾವಿದ್ದೇವೆ. ಈಗಿನ ಪರಿಸ್ಥಿತಿಯನ್ನು ಇಟ್ಟುಕೊಂಡು ಹೇಳುವುದಾದರೆ ಬಿಜೆಪಿ ಮತ್ತದರ ಎರಡೇ ಎರಡು ಮಿತ್ರಪಕ್ಷಗಳು ಏನೇ ತಿಪ್ಪರಲಾಗ ಹಾಕಿದರೂ ಮುಂದಿನ ಸರ್ಕಾರ ರಚಿಸುವ ಸ್ಥಿತಿ ಮುಟ್ಟುವುದಿಲ್ಲ. ಆದರೆ ಅವಿಭಜಿತ ಆಂಧ್ರಪ್ರದೇಶದ ತೆಲಂಗಾಣ ಮತ್ತು ಸೀಮಾಂಧ್ರದಲ್ಲಿ ಅಪ್ರಸ್ತುತವಾಗುತ್ತ ಸಾಗಿರುವ ತೆಲುಗುದೇಶಂ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಅಲ್ಲೊಂದು ಬೋನಸ್ ಪಕ್ಷ ಸಿಗುತ್ತದೆ, ಆದರೆ ಹೆಚ್ಚಿನ ಸೀಟುಗಳೇನೂ ಬರುವ ಹಾಗೆ ಕಾಣಿಸುತ್ತಿಲ್ಲ. ತಮಿಳುನಾಡಿನಲ್ಲಿ ಜಯಲಲಿತ ಜೊತೆಯಾಗಬಹುದು. ಮಾಮೂಲಿನಂತೆ ಒಂದೇ ಪಕ್ಷಕ್ಕೆ ಅಪಾರವಾದ ಬಹುಮತ ಕೊಡುವ ತಮಿಳುನಾಡಿನ ನಿಯಮ ಈ ಸಾರಿಯೂ ಪುನರಾವರ್ತನೆ ಆಗಿ ಜಯಲಲಿತರ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಬಂದರೆ ಅದು ಮಾತ್ರ ಮೋದಿಗೆ ನಿಜವಾದ ಬೋನಸ್.

ಆದರೂ ಚುನಾವಣೆಗಳಲ್ಲಿ ಹೀಗೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ತಿಂಗಳ ಹಿಂದೆ ಎರಡು ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಎರಡರಲ್ಲೂ ಸೋಲುತ್ತದೆ ಎಂದುಕೊಂಡ ಅನೇಕರಲ್ಲಿ ನಾನೂ ಒಬ್ಬ. ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾನು ಮಾತನಾಡಿಸಿದ ಕೆಲವು ಕಾಂಗ್ರೆಸ್ ನಾಯಕರಿಗೇ ವಿಶ್ವಾಸವಿರಲಿಲ್ಲ. ಹಾಗಾಗಿ, ಅಂಕಗಣಿತ ಏನೇ ಹೇಳಿದರೂ Modiಮೋದಿ ನೇತೃತ್ವದ ಎನ್‌ಡಿಎ‌ ಅಧಿಕಾರ ಸ್ಥಾನದ ಹತ್ತಿರಕ್ಕೆ ಬರುವುದೇ ಇಲ್ಲ ಎಂದು ಹೇಳುವುದು ನಮ್ಮಗಳ ಇಚ್ಚೆ ಆಗುತ್ತದೆಯೇ ಹೊರತು ಕಾಲಜ್ಞಾನವಾಗುವುದಿಲ್ಲ. ಅವಕಾಶವಾದಿ ಮತ್ತು ಸಮಯಸಾಧಕ ರಾಜಕಾರಣಿಗಳೇ ಹೆಚ್ಚಿರುವ ದೇಶ ನಮ್ಮದು. ಅದರ ಜೊತೆಗೆ, ದೇಶದಲ್ಲಿ ಹೆಚ್ಚುತ್ತಿರುವ ನಗರವಾಸಿಗಳು, ನಗರ ಪ್ರದೇಶಗಳಲ್ಲಿಯೇ ಹೆಚ್ಚು ಘಟಿಸುವ ಕೋಮುಗಲಭೆಗಳು ಮತ್ತದು ಮಾಡುವ ಓಟು-ಕ್ರೋಢೀಕರಣ, ತಂತ್ರಜ್ಞಾನವನ್ನು ಬಳಸಿಕೊಂಡು ಭಾವಾವೇಶ ಮತ್ತು ಸಂಕುಚಿತ ಮತಾಂಧತೆಯನ್ನು ಹರಡಲು ಮಾಡುತ್ತಿರುವ ವ್ಯವಸ್ಥಿತ ಪ್ರಯತ್ನ, ವ್ಯಕ್ತಿಪೂಜೆ, ಇತ್ಯಾದಿಗಳು ಮೋದಿ ಮತ್ತವರ ಪಕ್ಷಕ್ಕೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡುವ ಅಂಶಗಳು. ಹಾಗೇನಾದರೂ ಆದರೆ, ಭವಿಷ್ಯದ ಇತಿಹಾಸಕಾರರು ಈ ತಲೆಮಾರಿನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವುದಿಲ್ಲ.

ಆದರೆ ಕರ್ನಾಟಕ ಬೇರೆಯದೇ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವ ವಿಶ್ವಾಸ ನನ್ನದು. ದೇಶದಲ್ಲಿಯ ಕೆಲವು ಕಡೆ ಅಷ್ಟೇ ಅಲ್ಲದೆ ಕರ್ನಾಟಕದಲ್ಲಿಯೂ ಎದ್ದು ಕುಣಿಯುತ್ತಿರುವ ಕೆಲವು ಪಿತೂರಿಕೋರ ನರಿಗಳಿಗೆ ಬಿಜೆಪಿ ಪಕ್ಷ ತಾನು ಪ್ರತಿನಿಧಿಸುತ್ತಿರುವ ಬೆಂಗಳೂರು ನಗರದ ಮೂರು ಲೋಕಸಭಾ ಸ್ಥಾನಗಳಲ್ಲಿ ಒಂದನ್ನು ಉಳಿಸಿಕೊಂಡರೂ ಸಾಧನೆ ಆಗುತ್ತದೆ ಎನ್ನುವುದರ ಅರಿವಿದ್ದಂತಿಲ್ಲ. ರಾಜ್ಯದಲ್ಲಿ ಸದ್ಯದ ವಾಸ್ತವವೇ ಬೇರೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗರದಲ್ಲಿಯ ಕನಿಷ್ಟ ಮೂರು ಸ್ಥಾನಗಳಲ್ಲಿ (ಹೆಬ್ಬಾಳ, ಜಯನಗರ, ಬಸವನಗುಡಿ) ಕಾಂಗ್ರೆಸ್ ಹೀನಾಯವಾಗಿ ಸೋತು ಬಿಜೆಪಿ ಗೆಲ್ಲಲು ಸ್ವತಃ ಕಾಂಗ್ರೆಸ್ ಕಾರಣವೇ ಹೊರತು ಬಿಜೆಪಿಗಿದ್ದಂತಹ “ಒಳ್ಳೆಯ” ಹೆಸರು ಅಲ್ಲ. ಇಂತಹ ಅನುಚಿತ ಔದಾರ್ಯವನ್ನು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರದರ್ಶಿಸದೆ ಸರಿಯಾದ ತಂತ್ರಗಾರಿಕೆ ಮಾಡಿದರೆ, ಎಷ್ಟೇ ಮೋದಿ ಮುಖವಾಡಗಳು ಕುಣಿದಾಡಿದರೂ ಬೆಂಗಳೂರು ನಗರದಿಂದ ಒಬ್ಬನೇ ಒಬ್ಬ ಬಿಜೆಪಿ ಸಂಸದ ಗೆದ್ದು ಬರುವುದು ಕಷ್ಟವಿದೆ. ರಾಜ್ಯದ ಅನೇಕ ಕಡೆಯೂ ಇದೇ ಆಗಲಿದೆ.

ಮತ್ತು ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತ, ಅದೇ ರಭಸದಲ್ಲಿ ನಮ್ಮ ರಾಜ್ಯ ಕಂಡ ಪರಮಾತಿಭ್ರಷ್ಟ ಯಡ್ಡಯೂರಪ್ಪನವರ ಜೊತೆಜೊತೆಗೆ ನಿಂತು ನರೇಂದ್ರ ಮೋದಿ ಮತ ಕೇಳಲಿರುವ ಚಿತ್ರ ಮೋದಿಯ ಅಧಿಕಾರದ ಹಪಹಪಿ ಮತ್ತು ನೀತಿಗಳಿಲ್ಲದ ಮನೋಭಾವವನ್ನೂ ಅನಾವರಣಗೊಳಿಸಲಿದೆ. ಇದನ್ನು ಪ್ರಾಮಾಣಿಕತೆ, ಬಲಿಷ್ಟ ದೇಶ, ಗಂಡಸುತನ, ದೇಶಭಕ್ತಿ, ಇತ್ಯಾದಿಗಳ ಹೆಸರಿನಲ್ಲಿ ಅಂತರ್ಜಾಲದಲ್ಲಿ ಎಗರಾಡುತ್ತಿರುವ ಕರ್ನಾಟಕದ ಕೆಲವು ಮತಾಂಧ ನರಿಗಳು ಹೇಗೆ ಸಮರ್ಥಿಸಿಕೊಳ್ಳಲಿವೆ? ಅವರಿಗೆ ಬೇಕಿರುವುದು ಜನಾಂಗ ನಿರ್ಮೂಲನೆಯೇ ಹೊರತು ಮನುಷ್ಯ ಸಮಾಜವನ್ನು ಕಟ್ಟುವ ಕಾಳಜಿ ಅಲ್ಲ. ಇದನ್ನು ಅರಿಯದ ಮುಗ್ಧರು, ದುಷ್ಟರು ಹಾಕಿದ ಕೋಮುದ್ವೇಷದ ಹೋಮದಲ್ಲಿ ಸಮಿತ್ತುಗಳಾಗಿ ಉರಿದುಹೋಗುತ್ತಿದ್ದಾರೆ. ದೇಶದ ಪ್ರಜ್ಞಾವಂತರೆಲ್ಲ ಈ ದುಷ್ಕೃತ್ಯದ ಸಾಮೂಹಿಕ ಜವಾಬ್ದಾರಿ ಹೊರಬೇಕಿದೆ.

ಬಹುಶಃ ಈ ಚುನಾವಣೆ ಕಾಂಗ್ರೆಸ್‌ನ rahul_priyanka_soniaಇಂದಿರಾಗಾಂಧಿ ಕುಟುಂಬದ ವಂಶಪಾರಂಪರ್ಯ ರಾಜಕಾರಣದ ಅವಸಾನಕ್ಕೂ ನಾಂದಿ ಹಾಡುತ್ತದೆ ಎನ್ನುವ ವಿಶ್ವಾಸ ನನ್ನದು. ಆ ಮೂಲಕ ದೇಶದಲ್ಲಿ ಇನ್ನೂ ಹಲವು ಪ್ರಾದೇಶಿಕ ಪಕ್ಷಗಳು ಹುಟ್ಟುತ್ತವೆ ಮತ್ತು ರಾಷ್ಟ್ರೀಯ ಪಕ್ಷಗಳ ಸ್ಥಾನಮಾನಗಳು ಕುಸಿಯುತ್ತ ಹೋಗುತ್ತದೆ. ಆಂತರಿಕ ಪ್ರಜಾಪ್ರಭುತ್ವ ಕಟ್ಟಿಕೊಳ್ಳದೆ, ನೀತಿ ಮತ್ತು ಮೌಲ್ಯಗಳ ವಿಚಾರದಲ್ಲಿ ಪರ್ಯಾಯ ಕಲ್ಪಿಸದೇ ಹೋದರೆ ಕಾಂಗ್ರೆಸ್ ಸರ್ವನಾಶದತ್ತ ಸಾಗಲಿದೆ. ಅವರ ತಾಯಿಯ ಪರ ಕೆಲಸ ಮಾಡಿದ ಅನುಕಂಪ ಮತ್ತು 2004 ರಂತಹ ಚಾರಿತ್ರಿಕ ಅವಕಾಶಗಳು ರಾಹುಲ್ ಗಾಂಧಿಗೆ ಕೂಡಿ ಬರುವುದಿಲ್ಲ. ಅದನ್ನು ಮೀರುವ ಗಟ್ಟಿಯಾದ ವ್ಯಕ್ತಿತ್ವವನ್ನೂ ಅವರು ಬೆಳೆಸಿಕೊಂಡಿಲ್ಲ. ರಾಷ್ಟ್ರ ಮಟ್ಟದಲ್ಲಿ ಕುಟುಂಬ ರಾಜಕಾರಣದ ಹಿಡಿತ ಇನ್ನೊಂದೈದತ್ತು ವರ್ಷಗಳಲ್ಲಿ ಇಲ್ಲವಾಗುವ ಸಾಧ್ಯತೆ ಇದೆ.

ಈ ದೇಶದಲ್ಲಿ ಜಾತ್ಯತೀತತೆ, ವೈವಿಧ್ಯತೆ, ಸಹಿಷ್ಣುತೆ, ಪ್ರಜಾಪ್ರಭುತ್ವ, ಸಮಾನತೆ, ನ್ಯಾಯ, ಇತ್ಯಾದಿಯಂತಹ ಸಾರ್ವಕಾಲಿಕ ಮೌಲ್ಯಗಳಲ್ಲಿ ವಿಶ್ವಾಸವಿಟ್ಟಂತಹ ಪಕ್ಷಗಳ ಕೊರತೆ ಇದೆ. ಮೋದಿಯನ್ನು ತೋರಿಸಿ ಕೆಲವು ಪಕ್ಷಗಳು ಜಾತ್ಯತೀತತೆ ಬಗ್ಗೆ ಮಾತನಾಡುತ್ತವೆಯೇ ಹೊರತು ಅವು ನಿಜಕ್ಕೂ ಜಾತ್ಯತೀತವೇನಲ್ಲ. ಮೋದಿಯಂತಹ ವ್ಯಕ್ತಿ ಇಷ್ಟು ಪ್ರಾಮುಖ್ಯತೆ ಗಳಿಸಲು ನಮ್ಮ ಜಾತ್ಯತೀತ ಪಕ್ಷಗಳ ದಿವಾಳಿತನ, ಅಪ್ರಾಮಾಣಿಕತೆ ಮತ್ತು ಮೌಲ್ಯದಾರಿದ್ರ್ಯಗಳು ಕಾರಣವೇ ಹೊರತು ಮೋದಿಯ ಆಡಳಿತ ವೈಖರಿ ಮತ್ತು ಭಾಷಣಗಳಲ್ಲ. ಮನಮೋಹನ ಸಿಂಗರು ಎರಡು-ಮೂರು ವರ್ಷಗಳ ಹಿಂದೆಯೇ ಪ್ರಧಾನಮಂತ್ರಿ ಸ್ಥಾನದಿಂದ ಹಿಂದೆಸರಿದು, ಮತ್ತೊಬ್ಬ ಕ್ರಿಯಾಶೀಲ ಮತ್ತು ಪ್ರಾಮಾಣಿಕರನ್ನು ಪ್ರಧಾನಿ ಮಾಡಿದ್ದರೆ ವಾಸ್ತವವೇ ಬೇರೆ ಆಗಿರುತ್ತಿತ್ತು. ಆದರೆ ಕಾಂಗ್ರೆಸ್ ನಾಯಕತ್ವ ಯಾವುದೇ ಸ್ವತಂತ್ರ ಮನೋಭಾವದ ವ್ಯಕ್ತಿಯನ್ನು ನಂಬುವ ಸ್ಥಿತಿಯಲ್ಲಿಲ್ಲ. ಇದು ಕಾಂಗ್ರೆಸ್‌ಗಾದ ನಷ್ಟ ಮಾತ್ರವಲ್ಲ, ದೇಶದ ವರ್ತಮಾನ ಮತ್ತು ಭವಿಷ್ಯಕ್ಕೂ ಆದ ಅನ್ಯಾಯ.

ಭವಿಷ್ಯ ಆಶಾದಾಯಕವಾಗಿ ಇಲ್ಲದಿದ್ದರೂ, ಈ ನಾಡಿನಲ್ಲಿ ಸೀಮಿತ ಪ್ರಮಾಣದಲ್ಲಾದರೂ ನಡೆಯುತ್ತಿರುವ upward-mobility,garment-factory ಗಾರ್ಮೆಂಟ್ಸ್-ಐಟಿಬಿಟಿ-ಮಾಲ್‌ಗಳ ಕಾರಣಕ್ಕಾಗಿ ಕೆಳಮಧ್ಯಮವರ್ಗದ ಹೆಣ್ಣುಮಕ್ಕಳಿಗೆ ಸಿಗುತ್ತಿರುವ ಆರ್ಥಿಕ ಸ್ವಾತಂತ್ರ್ಯ, ಕುಲಮತ‌ಅಂತಸ್ತುಗಳ ಭೇದವಿಲ್ಲದೆ ಪ್ರೇಮದಲ್ಲಿ ಬೀಳುತ್ತಿರುವ ಯುವಸಮಾಜ, ಹೆಚ್ಚುತ್ತಿರುವ ಅಂತರ್ಜಾತಿ ವಿವಾಹಗಳು, ಇವೆಲ್ಲವೂ ಹೊಸದಾದ ಭಾರತವನ್ನೇ ಸೃಷ್ಟಿಸುತ್ತಿವೆ. ಪೂರ್ವಿಕರ ಕೆಲವು ಪ್ರತಿಗಾಮಿ ಚಿಂತನೆಗಳನ್ನು ತೊಡೆದುಹಾಕಿ, ಈ ನೆಲದಲ್ಲಿ ಹುಟ್ಟಿದ ಸಾರ್ವತ್ರಿಕ ಮೌಲ್ಯಗಳನ್ನು ಮತ್ತು ನಮ್ಮ ಪರಂಪರೆಯಲ್ಲಿಯ ಬಂಡಾಯ, ಅಹಿಂಸಾತ್ಮಕ ಹೋರಾಟ, ಮತ್ತು ಸಹಬಾಳ್ವೆಯ ನಾಗರಿಕತೆಯನ್ನು ಹೊಸಕಾಲಕ್ಕೆ ಅನ್ವಯಿಸಿಕೊಂಡು ರೂಪಿಸಿಕೊಂಡರೆ ಪ್ರಪಂಚವೆಲ್ಲ ಸ್ಫೂರ್ತಿಗಾಗಿ ಇದರತ್ತ ನೋಡುವ ದೇಶವಾಗುತ್ತದೆ ನಮ್ಮದು. ಇಲ್ಲದಿದ್ದರೆ ಹಿಟ್ಳರನ ಜರ್ಮನಿಯ ಬಗ್ಗೆ ಇಂದಿನ ಜರ್ಮನ್ನರೂ ಹೇಗೆ ಅಸಹ್ಯಿಸಿಕೊಳ್ಳುತ್ತಾರೋ, ಅದನ್ನು disown ಮಾಡುತ್ತಾರೋ, ಭಾರತದ ಅಂತಹ ಅವಧಿಗೆ ಕಾರಣರೂ ಸಾಕ್ಷಿಗಳೂ ಆಗಿ ಈ ತಲೆಮಾರು ನಿಲ್ಲುತ್ತದೆ. ನಮ್ಮದೇ ಸಂತತಿ ನಮ್ಮ ಭ್ರಷ್ಟತೆ ಮತ್ತು ದುಷ್ಟತೆಯ ಕಾರಣಕ್ಕೆ ನಮ್ಮನ್ನು ನಿರಾಕರಿಸುವುದಕ್ಕಿಂತ ಹೆಚ್ಚಿನ ತಿರಸ್ಕಾರ ಇನ್ನೊಂದಿಲ್ಲ. ಭವಿಷ್ಯದ ಇತಿಹಾಸದ ಪುಟಗಳಲ್ಲಿ ಇಂದಿನ ವರ್ತಮಾನ ಹೇಗೆ ದಾಖಲಾಗಬೇಕು ಎನ್ನುವ ಎಚ್ಚರವನ್ನು ಇಂದಿನ ಭಾರತ ಪಡೆಯಬೇಕಿದೆ.