ಜನರಿಂದ, ಜನರಿಗಾಗಿ ಸಮಾಜದಿಂದ ನಾಯಕನಿಂದ, ನಾಯಕನಿಗಾಗಿ ಎನ್ನುವ ಫ್ಯಾಸಿಸ್ಟ್ ವ್ಯವಸ್ಥೆಗೆ ತೆವಳುತ್ತಿರುವ ಇಂಡಿಯಾ

– ಬಿ.ಶ್ರೀಪಾದ ಭಟ್

ಕೆಲವೊಮ್ಮೆ ಚರಿತ್ರೆ ತೆವಳುತ್ತದೆ, ಬಸವನ ಹುಳುವಿನ ಹಾಗೆ;ನಿ ಧಾನಕ್ಕೆ ಚಲಿಸುವ ಉಡದ ಹಾಗೆ. ಕೆಲವೊಮ್ಮೆ ಚರಿತ್ರೆ ಹಾರುತ್ತದೆ, ಹದ್ದಿನ ಹಾಗೆ. ಮಿಂಚಿನ ಹಾಗೆ ಕಣ್ಣು ಕುಕ್ಕಿ ಮಾಯವಾಗುತ್ತದೆ. -ಡಿ.ಆರ್.ನಾಗರಾಜ್

2012 ರಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಸರ್ಕಾರವನ್ನು ಸೋಲಿಸಿ ಅಧಿಕಾರಕ್ಕೇರಿದ ಗೂಂಡಾಗಿರಿ ಪಕ್ಷವೆಂದೇ ಕುಖ್ಯಾತಿಗೊಂಡ ಸಮಾಜವಾದಿ ಪಕ್ಷದ ಒಂದು ವರ್ಷದ ಅಧಿಕಾರದ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಕೋಮು ಗಲಭೆಗಳು ಮತ್ತು ಹಿಂಸಾಚಾರ ಘಟನೆಗಳು :

2/6/12 ಮಥುರಾ 4 ಜನರ ಸಾವು. 4/6/12 ಮುಜಪ್ಫರ್ ನಗರ 20 ಜನರ ಸಾವು
23/7/12 ಬರೇಲಿ 3 ಜನರ ಸಾವು 16/9/12 ಘಜಿಯಾಬಾದ್ 6 ಜನರ ಸಾವು
24/10/12 ಫೈಜಾಬಾದ್ 1 ಜನರ ಸಾವು 6/12/12 ಅಜಮಗರ್ 11 ಜನರ ಸಾವು
16/1/13 ಲಖ್ನೋ 2 ಜನರ ಸಾವು 4/2/13 ಮಥುರಾ 1 ಜನರ ಸಾವು
24/2/13 ಇಟಾವ 1 ಜನರ ಸಾವು 3/3/13 ಪ್ರತಾಪ್ ಘಡ್ 2 ಜನರ ಸಾವು
27/8/13 ಮುಜಪ್ಫರ್ ನಗರ 4 ಜನರ ಸಾವು 9/9/13 ಮುಜಪ್ಫರ್ ನಗರ 50 ಜನರ ಸಾವು

ಇದಲ್ಲದೆ ಅಮೇಥಿಯಲ್ಲಿ ದಲಿತರ ಮನೆಗಳ ಮೇಲೆ ದಾಳಿ ನಡೆಸಿ ಸುಡಲಾಗಿದೆ.
– (ತೆಹೆಲ್ಕ, 21ನೇ ಸೆಪ್ಟೆಂಬರ್ 2013 )

ಕೋಮು ಗಲಭೆಗಳಲ್ಲಿ ನಿಜಾಂಶಗಳು ಗೌಣಗೊಂಡು ಕಟ್ಟುಕಥೆಗಳು ಮೇಲುಗೈ ಸಾಧಿಸುತ್ತವೆ. ವದಂತಿಗಳು ಅನೇಕ ಬಗೆಯ ಹೌದು ಮತ್ತು ಅಲ್ಲಗಳೊಂದಿಗೆ ಪ್ರಾಮುಖ್ಯತೆ ಪಡೆದು ಪ್ರತಿಯೊಂದು ಕೋಮುಗಲಭೆಗಳನ್ನು ಹಿಂದಿನದಿಕ್ಕಿಂಲೂ ವಿಭಿನ್ನವೆಂಬಂತೆಯೂ, ಈ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಹತ್ಯೆಗಳು ಅನಿವಾರ್ಯವೆಂಬಂತೆಯೂ ಸಮರ್ಥಿಸಲ್ಪಡುತ್ತವೆ ಮತ್ತು ಕಾಲಕ್ರಮೇಣ ತೆರೆಮರೆಗೆ ಸರಿಯಲ್ಪಡುತ್ತವೆ. -ಫರಾ ನಕ್ವಿ

ಮೇಲಿನ ಕೋಮು ಗಲಭೆಗಳಿಗೆ ಅಖಿಲೇಶ್ ಸರ್ಕಾರದ ಸಂಪೂರ್ಣ ವೈಫಲ್ಯತೆ ಮೂಲಭೂತ ಕಾರಣವಾದರೆ, ಇದರ ಹುಟ್ಟಿಗೆ ಕಾರಣರಾರು, ಇದನ್ನು ಬೆಂಕಿ ಹಾಕಿ ಬೆಳೆಸಿದವರಾರು ಎಂಬ ಪ್ರಶ್ನೆಗೆ ಅನಾಯಾಸವಾಗಿ ನಮ್ಮ ಗೋಣು ಬಿಜೆಪಿಯ ದಿಕ್ಕಿಗೆ ತಿರುಗುತ್ತದೆ. ಇದಕ್ಕೆ ಕಳೆದ ಎಂಬತ್ತು ವರ್ಷಗಳಲ್ಲಿ ಇಂಡಿಯಾದಲ್ಲಿ ಘಟಿಸುವ ಪ್ರತಿಯೊಂದು ಕೋಮು ಗಲಭೆಯ ಸಂದರ್ಭಗಳನ್ನು, ಹಿನ್ನೆಲೆಗಳನ್ನು ಅವಲೋಕಿಸಿದಾಗ ಈ ಸಂಘ ಪರಿವಾರದ ಪ್ರಚೋದನೆಗಳು, ಗುಪ್ತ ಆಶಯಗಳು ಅದಕ್ಕಾಗಿ ಯಾವುದೇ ಕೃತ್ಯಕ್ಕೂ ರೆಡಿಯಾಗುವ ಮನಸ್ಥಿತಿ ಇವೆಲ್ಲವೂ ಇತಿಹಾಸದಲ್ಲಿ ದಾಖಲಾಗಿವೆ. ಪ್ರತಿಯೊಂದು ದುಷೃತ್ಯದಲ್ಲೂ ತನ್ನ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಅದನ್ನು ನಿರಾಕರಿಸುವುದರ ಬದಲು ಸಂಘ ಪರಿವಾರ ತೀಕ್ಷಣವಾಗಿ ಪ್ರತಿಕ್ರಿಯಿಸುವುದು ‘ನೀವು ಕೇವಲ ನಮ್ಮನ್ನು ದೂಷಿಸುತ್ತೀರಿ ಆದರೆ ಅವರೇನು ಕಡಿಮೆಯೇ ? ಮೊದಲು ಅವರಿಗೆ ತಣ್ಣಗಿರಲು ಹೇಳಿ, ಇಲ್ಲದಿದ್ದರೆ ನಾವು ಪಾಠ ಕಲಿಸುತ್ತೇವೆ’ ಎಂದೇ. ಹೀಗೆ ಕಳೆದ ಎಂಬತ್ತು ವರ್ಷಗಳಲ್ಲಿ ಅವರು ಎನ್ನುವ ಗುಮ್ಮನನ್ನು ಸದಾ ಜೀವಂತವಾಗಿರಿಸಿಕೊಂಡೇ ಹಿಂದೂತ್ವದ ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದ ಸಂಘ ಪರಿವಾರ ಇಂದು ತಮ್ಮವರಿಗಾಗಿಯೇ ದೇಶವನ್ನು ತಯಾರಿಸಲು ಹೊರಟಿದೆ.

2002 ರಲ್ಲಿ ಫ್ಯಾಸಿಸ್ಟ್ ಮುಖ್ಯಮಂತ್ರಿ ನರೇಂದ್ರ ಮೋದಿಯ ನೇತೃತ್ವದ ಅಧಿಕಾರದ ಅವಧಿಯಲ್ಲಿ ಗುಜರಾತ್‌ನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದಲ್ಲಿ ಸಾವಿರಾರು ಮುಸ್ಲಿಂರನ್ನು ಹತ್ಯೆ ಮಾಡಲಾಗಿಯಿತು. ಕಳೆದ ದಶಕದಲ್ಲಿ ಗುಜರಾತ್ ನಂತರ ಮಧ್ಯಪ್ರದೇಶದಲ್ಲಿ ಅಲ್ಲಿನ ಸಂಘ ಪರಿವಾರದ ಸೋಕಾಲ್ಡ್ ಜನಪ್ರಿಯ ಮುಖ್ಯಮಂತ್ರಿಯ ರಾಜ್ಯಭಾರದಲ್ಲಿ ಹೆಚ್ಚಿನ ಕೋಮು ಗಲಭೆಗಳು ಜರುಗಿವೆ. ಹೈದರಾಬಾದನಲ್ಲಿ ನಡೆದ ಸಣ್ಣ ಮಟ್ಟದ ಹಿಂಸಾಚಾರವನ್ನು ಹೊರತುಪಡಿಸಿದರೆ ಸೆಪ್ಪೆಂಬರ್ 2013 ರಲ್ಲಿ ಉತ್ತರ ಪ್ರದೇಶದ ಮುಜಫರ್ ನಗರ್ ಜಿಲ್ಲೆಯಾದ್ಯಾಂತ ಜರುಗಿದ ಕೋಮು ಗಲಭೆಗಳು ಮತ್ತು ಹತ್ಯಾಕಾಂಡಗಳಲ್ಲಿ ಸುಮಾರು 56 ಜನ ಸಾವಿಗೀಡಾಗಿದ್ದಾರೆ. Mulayam_Muzaffarnagarಮೋದಿಯು ದೇಶದ ಪ್ರಧಾನಿಯಾಗಲು ಮತ್ತು ಸಂಘ ಪರಿವಾರವು 2014 ರಲ್ಲಿ ಡೆಲ್ಲಿ ಗದ್ದುಗೆ ಕಬಳಿಸಲು ಯಾವುದೇ ಬಗೆಯ ಹಿಂಸಾಚಾರಕ್ಕೆ ಮತ್ತು ಮತಾಂಧತೆಗೆ ತಯಾರಾಗಿದ್ದರೆ ಅದಕ್ಕೆ ಎಣ್ಣೆ ಸುರಿದದ್ದು ಈ ಮುಲಾಯಂ ಸಿಂಗ್ ಎನ್ನುವ ಮತ್ತೊಬ್ಬ ಮತಾಂಧ ರಾಜಕಾರಣಿ.

ಒಂದು ಕಡೆ ಇಂಡಿಯಾದ ಮುಸ್ಲಿಂರು ತಮ್ಮ ಮೌಢ್ಯದ ಕೂಪಗಳಾದ Ghettoಗಳಿಂದ ಹೊರಬರದಂತೆ ಅಲ್ಲಿನ ಧರ್ಮಗುರುಗಳು ಅಡ್ಡಗೋಡೆಯಾಗಿ ನಿಂತಿದ್ದರೆ ಈ ಮೂಲಭೂತವಾದಿಗಳನ್ನು ಓಲೈಸುತ್ತ ಮುಸ್ಲಿಂರನ್ನು ಸದಾ ಅಭದ್ರತೆಯ ನೆರಳಿನಲ್ಲಿ ಬದಕುವಂತೆ ಮಾಡಿದ್ದು ಈ ಮುಲಾಯಂ ಎನ್ನುವ ಅಪಾಯಕಾರಿ ರಾಜಕಾರಣಿ. ಕಾಂಗ್ರೆಸ್ ಸಹ ಅಲ್ಪಸಂಖ್ಯಾತರನ್ನು ಬಳಸಿ ಓಟ್ ಬ್ಯಾಂಕ್ ರಾಜಕಾರಣ ಮಾಡಿತ್ತು. ಅದಕ್ಕೆ ಸರಿಯಾಗಿ ಬೆಲೆ ತೆತ್ತಿದೆ ಕೂಡ. ಆದರೆ ಈ ಮುಲಾಯಂನಂತೆ ಈ ಮಟ್ಟದಲ್ಲೆಂದೂ ಬೆಂಕಿಯೊಂದಿಗೆ ನಿರಂತರವಾಗಿ ಸರಸವಾಡಿದಂತಿಲ್ಲ. ಆದರೆ ಸಂಘ ಪರಿವಾರ ಮತ್ತು ಮುಲಾಯಂ ಸಿಂಗ್ ತಮ್ಮ ತಮ್ಮ ನೆಲೆಗಟ್ಟಿನ ಮತಗಳ ಬೇಟೆಗೋಸ್ಕರ ಹಿಂದೂ ಮತ್ತು ಮುಸ್ಲಿಂರ ನಡುವೆ ಹುಟ್ಟಿ ಹಾಕಿದ ವೈಮನಸ್ಯ ಈ ಕೋಮು ಗಲಭೆಗಳಗೆ ಮೂಲ ಬೀಜಗಳು. ಅದಕ್ಕಾಗಿಯೇ ಗುಜರಾತ್ ಹಿಂಸಾಚಾರದ ಆರೋಪಿ, ಮೋದಿಯ ಬಲಗೈ ಬಂಟ ಅಮಿತ್ ಷಾಗೆ ಉತ್ತರ ಪ್ರದೇಶದ ಉಸ್ತುವಾರಿ ವಹಿಸಲಾಯಿತು. ಉಸ್ತುವಾರಿಯ ಜವಬ್ದಾರಿ ವಹಿಸಿಕೊಂಡ ನಂತರ ಈ ಮತೀಯವಾದಿ ಅಮಿತ್ ಷಾ ಮಾಡಿದ ಮೊದಲ ಕೆಲಸ ಅಯೋಧ್ಯೆಗೆ ಭೇಟಿ ನೀಡಿ ರಾಮಮಂದಿರ ನಿರ್ಮಾಣಕ್ಕಾಗಿ ಪಣ ತೊಟ್ಟಿದ್ದು. ಅದೇ ವೇಳೆಯಲ್ಲಿ ಸಂಫ ಪರಿವಾರದ ಅಂಗ ಪಕ್ಷವಾದ ವಿಚ್‌ಪಿ ಅಯೋಧ್ಯೆ ಚಲೋ ಎನ್ನುವ ಕೇಸರೀ ಯಾತ್ರೆಯನ್ನು ಪ್ರಾರಂಭಿಸಿತು. ಸಂಘ ಪರಿವಾರ ಮತ್ತೊಮ್ಮೆ ಏಕ್ ಧಕ್ಕ ಔರ್ ದೋ ಮಾದರಿಯ ಮತಾಂಧತೆಯ ಉನ್ಮಾದದ ಅಲೆ ಸೃಷ್ಟಿಸಲು ಸಜ್ಜಾಯಿತು. ಇವರೊಂದಿಗೆ ಅನಧಿಕೃತವಾಗಿ ಹೊಂದಾಣಿಕೆ ಮಾಡಿಕೊಂಡಂತೆ ಮುಲಾಯಂ ಸಿಂಗ್ ವರ್ತಿಸತೊಡಗಿದ್ದು, ಮುಸ್ಲಿಂ ಸಮುದಾಯವನ್ನು ಸದಾ ಭೀತಿಯ ನೆರಳಿನಲ್ಲಿ ಬದುಕುವಂತೆ ವಾತಾವರಣ ಸೃಷ್ಟಿಸಿ ಅಥವಾ ಆ ಬಗೆಯ ಭೀತಿಯ ವಾತಾವರಣ ಸೃಷ್ಟಿಸಲು ಸಂಘ ಪರಿವಾರಕ್ಕೆ ಕುಮ್ಮಕ್ಕು ನೀಡಿದ್ದರ ಫಲವಾಗಿ ಇಂದು ಮತ್ತೊಮ್ಮೆ ಉತ್ತರ ಪ್ರದೇಶವು ಮತೀಯವಾದಿಗಳ ಫೆನೆಟಿಸಂಗೆ ಆಡೊಂಬಲವಾಗುತ್ತಿದೆ. ಸಂಘ ಪರಿವಾರ ಮತ್ತು ಈ ಮುಲಾಯಂ ಧರ್ಮವನ್ನು ಮತ್ತೊಮ್ಮೆ ರಾಜಕಾರಣದ ಆಯುಧವೆಂಬಂತೆ ಬಳಸಿಕೊಂಡು ಜನರನ್ನು ಭಾವಾವೇಶಕ್ಕೆ ತಳ್ಳಿ ಮರಳಿ ತೊಂಬತ್ತರ ದಶಕದ ಮತೀಯವಾದದ ಅತಿರೇಕತೆಯನ್ನು ಹುಟ್ಟು ಹಾಕಲು ಕೈ ಜೋಡಿಸಿದ್ದಾರೆ.

ಒಂದಂತೂ ನಿಜ ಹಂದಿಯನ್ನು ಕೊಂದು ಮಸೀದಿಯ ಮುಂದೆ ಬಿಸಾಡುವ ಮತಾಂಧತೆಯ ಹಿಂಸೆಯ ಸ್ವರೂಪ ಮತ್ತೆ ಮರುಕಳಿಸುತ್ತಿದೆ. ಧರ್ಮಾಂಧತೆಯ ಐಡೆಂಟಿಟಿ ಪಾಲಿಟಿಕ್ಸ್ ತನ್ನೆಲ್ಲ ಆಯುಧಗಳೊಂದಿಗೆ ಬೆಂಕಿಯುಗುಳುವ ಹಿಂದೂ ರಾಷ್ಟೀಯವಾದಿಯ ನುಡಿಕಟ್ಟುಗಳೊಂದಿಗೆ ಚಾಲನೆಗೆ ಬರುತ್ತಿದೆ. ಮತೀಯ ರಾಷ್ಟ್ರೀಯತೆ ತನ್ನೆಲ್ಲ ಫ್ಯಾಸಿಸಂನೊಂದಿಗೆ ದೇಶದ ಉದ್ದಗಲಕ್ಕೂ ವ್ಯಾಪಿಸಿಕೊಳ್ಳುತ್ತಿದೆ.

ಮೊನ್ನೆ ಮುಜಫರ್ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗಳಿಗೂ 2002 ರ ಗುಜರಾತ್‌ನ ನರಮೇಧದ ಹಿನ್ನೆಲೆಗೂ ಸಾಮ್ಯತೆಗಳಿವೆ:

2002 ರ ಫೆಬ್ರವರಿಯಲ್ಲಿ ಗೋಧ್ರಾದಲ್ಲಿ ಸಂಭವಿಸಿದ ರೈಲು ಅಗ್ನಿ ದುರಂತದಲ್ಲಿ ಸುಮಾರು ಐವತ್ತು ಪ್ರಯಾಣಿಕರು ಸಾವನ್ನಪ್ಪಿದರು, muzaffarnagar-riots-tentsಅವರೆಲ್ಲ ಹಿಂದೂಗಳು. ಅದರ ಕುರಿತಾಗಿ ನ್ಯಾಯಾಂಗ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ ಮತ್ತೆರೆಡು ಸ್ವತಂತ್ರ ತನಿಖೆಗಳು ನಡೆದು ಈ ಅಗ್ನಿ ದುರಂತವು ಆಕಸ್ಮಿಕವೆಂದು ವರದಿ ನೀಡಿದವು. ಮತ್ತೊಂದು ಕಡೆ 2002 ಫೆಬ್ರವರಿ 27 ರಂದು ಗೋಧ್ರಾ ರೈಲು ನಿಲ್ದಾಣದಲ್ಲಿ, ಅಗ್ನಿಗೆ ಆಹುತಿಗೊಳಗಾದ ಬೋಗಿಯಲ್ಲಿ ಮುಸ್ಲಿಂ ನಾಗರಿಕರು ಇರದಂತೆ, ಕೇವಲ ಹಿಂದೂ ಕರಸೇವಕರು ಮಾತ್ರ ಇರುವಂತೆ ಆಯೋಜಿಸಬೇಕೆಂದು ಪೋಲೀಸರಿಗೆ ಸೂಚನೆ ನೀಡಲಾಗಿತ್ತು ಎನ್ನುವ ಅನುಮಾನದ ಅಂಶಗಳು ಕೂಡ ತನಿಖೆಗೆ ಒಳಗಾಗುತ್ತಿದೆ. ಆದರೆ ಫೆಬ್ರವರಿ 28 ರಂದು ಗುಜರಾತ್‌ನ ಪ್ರಾದೇಶಿಕ ದಿನಪತ್ರಿಕೆಗಳು ಗೋದ್ರಾ ಘಟನೆಯನ್ನು ತಿರುಚಿ, ಹಿಂದೂಗಳ ಮತೀಯ ಭಾವನೆಗಳನ್ನು ಕೆರಳಿಸುವಂತಹ ವರದಿಗಳನ್ನು ಪ್ರಕಟಿಸಿದವು. ಅಂದು ಗೋಧ್ರಾ ರೈಲು ನಿಲ್ದಾಣದಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತೆಂದು ಸುಳ್ಳು ವರದಿಗಳನ್ನು ಪ್ರಕಟಿಸಲಾಯಿತು. ಅತ್ಯಾಚಾರಕ್ಕೊಳಗೊಂಡ, ಇರಿತದಿಂದ ಸಾವನ್ನಪ್ಪಿದ ಕೆಲವು ಮಹಿಳೆಯರ ಫೋಟೋಗಳನ್ನು ತಮ್ಮ ದಿನ ಪತ್ರಿಕೆಗಳಲ್ಲಿ ಪ್ರಕಟಿಸಿ ಇದು ಗೋದ್ರಾ ರೈಲು ನಿಲ್ದಾಣದಲ್ಲಿ ನಡೆದದ್ದೆಂದು ಹಸಿ ಹಸಿ ಸುಳ್ಳುಗಳನ್ನು ಪ್ರಚಾರ ಮಾಡಲಾಯಿತು. 2002 ರ ಫೆಬ್ರವರಿಯ ಗೋಧ್ರಾ ರೈಲು ದುರಂತದ ನಂತರ ಹಿಂದೂಗಳ ಮತೀಯ ಭಾವನೆಗಳನ್ನು ಕೆರಳಿಸಿ ಗುಜರಾತ್ ರಾಜ್ಯಾದ್ಯಾಂತ ಮುಸ್ಲಿಂ ವಿರೋಧಿ ಪ್ರಚಾರ ನಡೆಸಿದ ಸಂಘ ಪರಿವಾರ ಇದಕ್ಕೆ ಕುಮ್ಮಕ್ಕು ನೀಡಿದ ನರೇಂದ್ರ ಮೋದಿ ನಂತರದ ವಾರಗಳಲ್ಲಿ ನಡೆಸಿದ ಹತ್ಯಾಕಾಂಡದಲ್ಲಿ ಪ್ರತ್ಯಕ್ಷವಾಗಿಯೇ, ಸರ್ಕಾರದ ಮತ್ತು ಗೃಹ ಖಾತೆಯ ಬೆಂಬಲದಿಂದ ಸಾವಿರಾರು ಮುಸ್ಲಿಂರ ಹತ್ಯೆ ಮಾಡಲಾಯಿತು. ಅದಾಗಿ 11 ವರ್ಷಗಳ ನಂತರವೂ ಇಂದಿಗೂ ಅಲ್ಲಿ ಭಯದ ವಾತಾವರಣವಿದೆ. ಮುಸ್ಲಿಂರನ್ನು ಸದಾ ಅಭದ್ರತೆಯಲ್ಲಿ ನರಳುವಂತೆ ಮಾಡಲಾಗಿದೆ. ಇನ್ನೂ ಕೆಲವು ನಿರಾಶ್ರಿತ ಶಿಬಿರಗಳಲ್ಲಿ ಮುಸ್ಲಿಂರು ಅತಂತ್ರರಾಗಿ ಬದುಕುತ್ತಿದ್ದಾರೆ.ಮಾನವ ವಿರೋಧಿ ಹಿಂದುತ್ವದ ಆಫೀಮು ಇಂದಿಗೂ ಗುಜರಾತ್‌ನಲ್ಲಿ ಜಾರಿಯಲ್ಲಿದೆ

2013 ಆಗಸ್ಟ್ 27 ರಂದು ಮುಜಫರ್ ನಗರದಲ್ಲಿ ಮುಸ್ಲಿಂ ಯುವಕರು ಹಿಂದೂ ಯುವತಿಯೊಬ್ಬಳನ್ನು ಚುಡಾಯಿಸಿದರೆಂಬ ವದಂತಿಯಿಂದ ಪ್ರಾರಂಭಗೊಂಡ ಈ ಚಿಲ್ಲರೆ ಜಗಳ ಜಾಟ್ ಸಮುದಾಯಕ್ಕೆ ಸೇರಿದ ಗುಂಪೊಂದು ಮುಸ್ಲಿಂ ಯುವಕನನ್ನು ಹತ್ಯೆಗೈಯುವಷ್ಟರ ಮಟ್ಟಿಗೆ ಬಂದು ಮುಟ್ಟಿತು. ಇದಕ್ಕೆ ಪ್ರತಿಯಾಗಿ ಹತ್ಯೆಗೆ ಪ್ರತೀಕಾರವೆಂಬಂತೆ ಮುಸ್ಲಿಂರ ಗುಂಪೊಂದು ಯುವತಿಯ ಇಬ್ಬರು ಸಂಬಂಧಿಕರ ಮೇಲೆ ಹಲ್ಲೆ ನಡೆಸಿತೆಂದೂ ನಂತರ ಈ ಪ್ರಾಣಾಂತಿಕ ಹಲ್ಲೆಯಿಂದಾಗಿ ಈ ಇಬ್ಬರು ಸಹೋದರರು ಸಾವನ್ನಪ್ಪಿದರೆಂದೂ ಪತ್ರಿಕೆಗಳಲ್ಲಿ ವರದಿಯಾಯಿತು. ಆದರೆ ಕೆಲವು ಕಿಡಿಗೇಡಿಗಳು ಪಕ್ಕದ ತಾಲಿಬಾನ್ ರಾಷ್ಟ್ರಗಳಲ್ಲಿ ಚಿತ್ರೀಕರಣಗೊಂಡ ಇಬ್ಬರು ಯುವಕರನ್ನು ಇರಿದು ಸಾಯಿಸುವ ವಿಡಿಯೋ ದೃಶ್ಯವನ್ನು ಮುಜಫರ್ ನಗರದ ಈ ಘಟನೆಗೆ ಸಂಬಂದಿಸಿದ್ದೆಂದು ಸುಳ್ಳು ಪ್ರಚಾರ ಪ್ರಾರಂಬಿಸಿದರು. ಈ ನಕಲಿ ವಿಡಿಯೋ ಅಂತರ್ಜಾಲದಲ್ಲೆಲ್ಲ ಹರಿದಾಡಿತು. ಆಗಸ್ಟ್ 31 ರ ವೇಳೆಗೆ ಮೊಬೈಲ್‌ಗಳಲ್ಲಿ ಎಸ್ಸೆಮ್ಮೆಸ್ ಮೂಲಕ ರವಾನೆಯಾಗತೊಡಗಿತು. ಈ ನಕಲಿ ವಿಡಿಯೋವನ್ನು ಕಾಳ್ಗಿಚ್ಚಿನಂತೆ ಹಬ್ಬಿಸಿ ಹಿಂದೂಗಳ ಭಾವನೆಗಳನ್ನು ಕೆರಳಿಸುವಲ್ಲಿ ಸಂಘಪರಿವಾರದ ಕೈವಾಡವಿದೆಯೆಂದೂ ನೇರವಾಗಿಯೇ ಆರೋಪಿಸಲಾಗುತ್ತಿದೆ. ಆದರೆ ಬಿಜೆಪಿ ಇದನ್ನು ನಿರಾಕರಿಸುತ್ತಿದೆ. ಒಟ್ಟಿನಲ್ಲಿ ಈ ಮತೀಯವಾದವನ್ನು ಈ ಸಂಘ ಪರಿವಾರ ಹುಟ್ಟು ಹಾಕಿತೋ ಇಲ್ಲವೋ ಅದು ತನಿಖೆಯಿಂದ ಗೊತ್ತಾಗುತ್ತದೆ, ಆದರೆ ಈ ಬಗೆಯ ಆಕಸ್ಮಿಕ ವಿಷಮಯ ವಾತಾವರಣಕ್ಕೆ ಕಾಯುತ್ತಿದ್ದ ಸಂಘ ಪರಿವಾರವು ಮುಜಫರ್ ನಗರದಲ್ಲಿ ಘಟಿಸಿದ ಈ ಅಂತಧರ್ಮಗಳ ಒಳ ಕಲಹವನ್ನು ತದನಂತರ ತನ್ನ ಕೈಗೆತ್ತಿಕೊಂಡು ಅದು ಜಿಲ್ಲೆಯಾದ್ಯಾಂತ ವ್ಯಾಪಿಸುವಂತೆ ಮಾಡುವುದರಲ್ಲಿ ಮಾತ್ರ ತನ್ನ ಕೈವಾಡವಿರುವುದನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಉತ್ತರ ಪ್ರದೇಶದ ಬಿಜೆಪಿ ಶಾಸಕರಾದ ಸಂಗೀತ್ ಸಿಂಗ್ ಸೋಮ್ ಮತ್ತು ಭಾರತೇಂದು ಸಿಂಗ್ ಮತ್ತು ಹುಕುಮ್ ಸಿಂಗ್ ಮೇಲೆ ಮತೀಯ ಭಾವನೆಗಳನ್ನು ಕೆರಳಿಸಿ ಮುಜಫರ ನಗರದ ಕೋಮು ಗಲಭೆಗಳಿಗೆ ಕಾರಣರಾದರೆಂದು ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಜಾಮೀನುರಹಿತ ವಾರೆಂಟ್ ಜಾರಿಯಾಗಿದೆ. Suresh ranaಆದರೆ ಅವರನ್ನು ಬಂಧಿಸಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಅದಕ್ಕೆ ಪೋಲೀಸರು ಕೊಡುತ್ತಿರುವ ಕಾರಣ ಆಡಳಿತಾತ್ಮಕ ತೊಂದರೆಗಳು. ಕಡೆಗೆ ಬಂದಿಸಿದ್ದಾರೆ ಎಂದು ವರದಿಯಾಗಿದೆ. ಇದೇ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಅಲ್ಲಿನ ಶಾಸಕಿಯಾಗಿ ಆಯ್ಕೆಗೊಂಡ, ತನ್ನ ತೊಂಬತ್ತರ ದಶಕದ ಹಿಂಸಾತ್ಮಕ ವ್ಯಕ್ತಿತ್ವಕ್ಕೆ ಮರಳಿದ ಬಿಜೆಪಿಯ ಉಮಾಭಾರತಿ ಸದನದಲ್ಲಿ ಮಾತನಾಡುತ್ತ “ಹುಷಾರ್! ಬಿಜೆಪಿಯ ಶಾಸಕರನ್ನು ಬಂಧಿಸಿದರೆ ಮುಂದಿನ ಗತಿ ನೆಟ್ಟಗಾಗಲಿಕ್ಕಿಲ್ಲ, ತೀವ್ರವಾದ ಪರಿಣಾಮಗಳನ್ನು ಎದರುರಿಸಬೇಕಾಗುತ್ತದೆ,” ಎಂದು ಗುಡುಗಿದ್ದಾರೆ. (ದ ಹಿಂದೂ, ಸೆಪ್ಟೆಂಬರ್ 19, 2013)

ಈ ಬಿಜೆಪಿ ನಾಯಕರು, ಮೋದಿ ಮತ್ತು ಮತಾಂಧ ಗುಂಪುಗಳು ತಮ್ಮ ಹಿಂದೂ ಧರ್ಮದ ಭಗವದ್ಜಜ, ಶಂಖ, ಕಮಂಡಲ, ಓಂ ಇತ್ಯಾದಿಗಳು ಧರ್ಮ ರಕ್ಷಣೆಯ, ಸದ್ಭಾವನೆಯ, ರಾಷ್ಟ್ರೀಯವಾದಿ ಸಂಕೇತಗಳೆಂದೂ ಇತರೇ ಧರ್ಮಗಳ ಆಚರಣೆಗಳು ಮತ್ತು ಉಡುಗೆ ತೊಡುಗೆಗಳನ್ನು ಅಪಾಯಕಾರಿ, ರಾಷ್ಟ್ರ ವಿರೋಧಿ ಸಂಕೇತಗಳಾಗಿ ಬಿಂಬಿಸಿ ಅವುಗಳ ಕುರಿತಾಗಿ ಒಂದು ಬಗೆಯ ಹೀಗಳಿಕೆಯ ನುಡಿಕಟ್ಟನ್ನು, ಮನೋಭೂಮಿಕೆಯನ್ನು ಜಾರಿಗೊಳಿಸಿತು. ಎರಡು ವರ್ಷಗಳ ಹಿಂದೆ ಇದೇ ಮೋದಿ ತನ್ನ ಸದ್ಭಾವನಾ ರ್‍ಯಾಲಿಯಲ್ಲಿ ಮುಸ್ಲಿಂ ನಾಯಕರು ತೊಡಿಸಲು ಬಂದ ಸ್ಕಲ್ ಕ್ಯಾಪ್ ಅನ್ನು ತೊಡಲು ಬಹಿರಂಗವಾಗಿಯೇ ನಿರಾಕರಿಸಿದ್ದ. ಕಳೆದ ಹತ್ತು ವರ್ಷಗಳಲ್ಲಿ ನಾನೇನು ಬದಲಾಗಿಲ್ಲ, ಹುಷಾರಾಗಿರಿ ಎಂಬ ವಾರ್ನಿಂಗ್ ರೀತಿಯಲ್ಲಿತ್ತು ಈ ಸರ್ವಾಧಿಕಾರಿಯ ವರ್ತನೆ. ಮಿಯ್ಯಾ ಮುಶ್ರಫ್, ಮೇಡಂ ಮೇರಿ, ಮೈಖೆಲ್ ಲಿಂಗ್ಡೋ ಎಂದು ಅತ್ಯಂತ ಸ್ಯಾಡಿಸ್ಟ್ ಮನಸ್ಥಿತಿಯಲ್ಲಿ ಇತರೇ ಧರ್ಮಗಳನ್ನು ಕ್ರೂರವಾಗಿ, ಅಮಾನವೀಯವಾಗಿ ಹಂಗಿಸಿದ್ದ ಈ ಮೋದಿ ಈ ವರ್ಷ ಮುಂದುವರೆದು “ಬುರ್ಖಾ ಸೆಕ್ಯುಲರಿಸಂ” ಎಂದು ಅಮಾನವೀಯವಾಗಿ ಮಾತನಾಡಿದ್ದಾನೆ. ಇದೇ ಫ್ಯಾಸಿಸ್ಟ್ ಆರೆಸಸ್ 1926 ರಲ್ಲಿ ನಾಗಪುರದಲ್ಲಿ ಹಿಂದೂ ಡಾಕ್ಟರ್ ಮನೆಯ ಮೇಲೆ ಯಾರೋ ಅಲ್ಲಾಹೊ ಅಕ್ಬರ್ ಎಂದು ಕೂಗುತ್ತ ದಾಳಿ ನಡೆಸಿದರು ಎಂದು ಗುಲ್ಲೆಬ್ಬಿಸಿ ಕೋಮು ಗಲಭೆಗಳನ್ನು ಹುಟ್ಟು ಹಾಕಿದ್ದ ಕಾಲದಿಂದ ಹಿಡಿದು 2013 ರಲ್ಲಿ ಮುಜಫರ್ ನಗರದಲ್ಲಿ ನಡೆದ ಕೋಮು ಗಲಭೆಗಳವರೆಗೂ ವರೆಗೂ ಅಂದರೆ ಕಳೆದ 87 ವರ್ಷಗಳಿಂದ ‘ದಾಡಿ, ಟೋಪಿ, ಬುರ್ಖಾದವರೇನಾದರು ಕಂಡಲ್ಲಿ ಅವರ ಮೇಲೆ ಹಲ್ಲೆ ನಡೆಸಿ ಏಕೆಂದರೆ ಅವರು ಇಲ್ಲಿಯವರಲ್ಲ, ನಮ್ಮವರಲ್ಲ’ ಎಂದು ವ್ಯವಸ್ಥಿತ ಅಪಪ್ರಚಾರ ನಡೆಸುತ್ತಾ ಕಾಲಕಾಲಕ್ಕೆ ಲುಂಪೆನ್ ಹಿಂದುತ್ವವಾದಿ ದಾಳಿಕೋರ ತಲೆಮಾರುಗಳನ್ನು ಬೆಳೆಸಿತ್ತು. ಎಂಟು ದಶಕಗಳ ಕಾಲ ಎರಡು ಧರ್ಮಗಳ ನಡುವೆ ವೈಷಮ್ಯದ, ದ್ವೇಷದ ವಾತಾವರಣವನ್ನು ಜೀವಂತವಾಗಿಟ್ಟಿತ್ತು. ಇವರ ಜೊತೆಗಾರ ಬಾಳಾ ಠಾಕ್ರೆ ಮುಂಬೈಯಲ್ಲಿ ಈ ದಾಡಿ, ಟೋಪಿ, ಬುರ್ಖಾದ ವಿರುದ್ಧ ಬೆಂಕಿಯುಗುಳುತ್ತಿದ್ದರೆ ಇತ್ತ ಈ ಅರೆಸೆಸ್ ಉತ್ತರ ಭಾರತಾದ್ಯಾಂತ ‘ಗರ್ವಸೆ ಕಹೋ ಹಂ ಹಿಂದೂ ಹೈ’ ಎಂಬ ಪ್ರಚೋದನಾತ್ಮಕವಾದ, ದೇಶ ವಿರೋಧಿ ಘೋಷಣೆಯನ್ನು ಪ್ರತಿಧ್ವನಿಸುತ್ತಿತ್ತು.

ಸ್ವಂತಂತ್ರೋತ್ತರ ಭಾರತದಲ್ಲಿ ಸಂಘ ಪರಿವಾರವು ದೇಶದ ಯಾವುದೇ ಭಾಗದಲ್ಲಾಗಲಿ ಈ ದಾಡಿಯವರು, ಬುರ್ಖಾದವರೇನದರೂ ಕಂಡರೆ ಅವರ ಮೇಲೆ ಹಲ್ಲೆ ನಡೆಸಿ, ಅವರನ್ನು ಬಿಡಬೇಡಿ ಎಂದು ಕರೆ ಕೊಟ್ಟು ಭಿವಂಡಿಯಲ್ಲಿ, ಮುಂಬೈನಲ್ಲಿ, ಮೀರತ್‌ನಲ್ಲಿ, ಕಾನ್ಪುರದಲ್ಲಿ, ಭಾಗಲ್ಪುರದಲ್ಲಿ, ಅಯೋಧ್ಯೆಯಲ್ಲಿ, ಮುಜಫರ್ ನಗರ ದಲ್ಲಿ, ಗುಜರಾತ್‌ನಲ್ಲಿ ಕೋಮು ಗಲಭೆಗಳನ್ನು ಹುಟ್ಟು ಹಾಕಿ ಸಾವಿರಾರು ಮುಗ್ಧ ನಾಗರಿಕರ ಹತ್ಯೆಗಳಿಗೆ ಬೀಜವನ್ನು ಬಿತ್ತಿತು. ತೊಂಬತ್ತರ ದಶಕದಲ್ಲಿ ‘ಜೈ ಶ್ರೀರಾಂ, ಹರ ಹರ ಮಹಾದೇವ’ ಘೋಷಣೆಗಳು ಅಲ್ಪಸಂಖ್ಯಾತರ ಪಾಲಿಗೆ ಮರಣ ಶಾಸನವಾಗಿದ್ದು ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಕೋಮು ಗಲಭೆಗಳಲ್ಲಿ ಸತ್ತ ಮುಸ್ಲಿಂ ನಾಗರಿಕರ ಸಂಖ್ಯೆಗಳನ್ನು ಎದೆ ತಟ್ಟಿ ಘೋಷಿಸಿಕೊಳ್ಳುತ್ತಿತ್ತು ಈ ಸಂಘ ಪರಿವಾರ. ಒಟ್ಟಿನಲ್ಲಿ ಇಂಡಿಯಾದ ಮುಸ್ಲಿಂರು ತಮ್ಮ ಮೌಢ್ಯದ, ಕ್ರೌರ್ಯದ ಕೂಪಗಳಾದ Ghetto ಗಳಿಂದ ಹೊರಬಂದು ಮುಖ್ಯವಾಹಿನಿಗೆ ಬರಲು ಅಣಿಯಾಗುತ್ತಿದ್ದಂತೆಯೇ ಈ ಸಂಘ ಪರಿವಾರ ಮತ್ತು ಈ ಮೋದಿ ಅವರನ್ನು ಸಮಾಜದ ಎರಡನೇ ದರ್ಜೆಯ ನಾಗರಿಕರನ್ನಾಗಿಸುತ್ತ, ಅವರ ಧಾರ್ಮಿಕ ಸಂಕೇತಗಳನ್ನು ವಿಂಡಬನಾತ್ಮಕವಾಗಿ ಹೀನಾಯವಾಗಿ ಹಂಗಿಸುತ್ತ ದೇಶದಾದ್ಯಂತ ಧಾರ್ಮಿಕ ಧ್ರುವೀಕರಣಕ್ಕೆ ಚಾಲ್ತಿ ನೀಡಿತ್ತು.

ಆದರೆ ಮತ್ತೊಂದು ಕಡೆ ತನ್ನನ್ನು ಸರ್ವಧರ್ಮ ಸಹಿಷ್ಣುವೆಂಬಂತೆ ಬಿಂಬಿಸಿಕೊಳ್ಳಲು ಅನೇಕ ವಾಮಮಾರ್ಗಗಳನ್ನು ಹುಡುಕುತ್ತಿದೆ ಸಂಘ ಪರಿವಾರ. ಇದಕ್ಕೆ ಜ್ವಲಂತ ಉದಾಹರಣೆಯೆಂದರೆ 2013 ರ ಸೆಪ್ಟೆಂಬರ್‌ನಲ್ಲಿ ರಾಜಸ್ತಾನದ ಜೈಪುರದಲ್ಲಿ ಮೋದಿಯ ನೇತೃತ್ವದಲ್ಲಿ ನಡೆದ ಬಿಜೆಪಿಯ ರ್‍ಯಾಲಿಯಲ್ಲಿ ಭಾಗವಹಿಸಲು ಮುಸ್ಲಿಂರ ಗುಂಪೊಂದನ್ನು ಆರಿಸಿ ಅವರಿಗೆಲ್ಲ ಸ್ಕಲ್ ಟೋಪಿ ಮತ್ತು ಬುರ್ಖಾಗಳನ್ನು ಉಚಿತವಾಗಿ ವಿತರಿಸಿ, modi_skull_capಇದನ್ನು ಕಡ್ಡಾವಾಗಿ ಧರಿಸಿ ಈ ಬಿಜೆಪಿ ರ್‍ಯಾಲಿಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಗಿತ್ತು. ಈ ಮುಸ್ಲಿಂ ಗುಂಪು ತಮ್ಮ ಸಾಂಪ್ರದಾಯಿಕ ಸ್ಕಲ್ ಕ್ಯಾಪ್ ಅನ್ನು ಧರಿಸಿಕೊಂಡು ಬರುವಂತೆ ಅವರಿಗೆ ವಿಶೇಷವಾಗಿ ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಸಂಘ ಪರಿವಾರದ ನಾಯಕರು ಇದರಲ್ಲಿ ವಿಶೇಷತೆಯೇನಿದೆ? ಅವರರವರ ನಂಬಿಕೆ ಅವರದ್ದು, ಇದು ಸಂಘ ಪರಿವಾರದ ಧರ್ಮ ಸಹಿಷ್ಣತೆಯನ್ನು ಸೂಚಿಸುತ್ತದೆ ಎಂದು ಹೇಳಿ ಪ್ರಜ್ಞಾವಂತರು ಕಕ್ಕಾಬಿಕ್ಕಯಾಗುವಂತೆ ಮಾಡಿದರು. ಅಂದರೆ ಪ್ರಜಾಪ್ರಭುತ್ವ, ಸೆಕ್ಯುಲರ್ ದೇಶವೊಂದರ ಪ್ರಧಾನ ಮಂತ್ರಿ ಆಕಾಂಕ್ಷಿ ನೀವಂದುಕೊಂಡಂತೆ ಧರ್ಮಾಂಧನಲ್ಲ, ಆತನಿಗೂ ಒಳಗೊಳ್ಳುವಿಕೆಯ ಅರಿವಿದೆ, ಅದಕ್ಕೇ ನೋಡಿ ಈ ಸ್ಕಲ್ ಕ್ಯಾಪ್ ಧರಿಸಿರುವ ಮಂದಿ ಹೇಗೆ ಹಿಂದೂಗಳೊಂದಿಗೆ ಬಿಜೆಪಿ ರ್‍ಯಾಲಿಯಲ್ಲಿ ಕೂತಿದ್ದಾರೆ ಎನ್ನುವ ಸಂದೇಶವನ್ನು ರವಾನಿಸುವ ಮಾರ್ಕೆಟಿಂಗ್ ತಂತ್ರವನ್ನು ಹೆಣೆಯಲಾಗಿತ್ತು.

ಇಂದು ಆರೆಸಸ್ ತನ್ನ ಮತೀಯವಾದಿ, ಹಿಂಸಾತ್ಮಕ ರಾಜಕಾರಣದ ಪಯಣದಲ್ಲಿ ಅತ್ಯಂತ ಮುಖ್ಯ ಘಟ್ಟದಲ್ಲಿದೆ. ಬಿಜೆಪಿಯ ಜುಟ್ಟಿನ ಮೇಲೆ ತನ್ನ ಕೇಶವಕೃಪಾದ ಹಿಡಿತವನ್ನು ಬಿಗಿಗೊಳಿಸಿಕೊಳ್ಳುತ್ತಲೇ ಅಖಂಡ ಭಾರತವನ್ನು ಆಳುವ ತನ್ನ ದಶಕಗಳ ಕಾಲದ ಕನಸನ್ನು ನನಸಾಗಿಸುವ ಕಾಲ ಹೆಚ್ಚೂ ಕಡಿಮೆ ಕೈಯಳತೆಯಲ್ಲಿದೆ ಎಂದು ಭ್ರಮಿಸಿರುವ ಈ ಆರೆಸಸ್ ಅದಕ್ಕಾಗಿ ಯೂರೋಪಿಯನ್ ಫ್ಯಾಸಿಸ್ಟರ ಮಾದರಿಯಲ್ಲಿಯೇ ನೇರವಾಗಿ ತನ್ನ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡೇ ಡೆಲ್ಲಿ ಗದ್ದುಗೆ ಕಬಳಿಸುವ ಹುನ್ನಾರದಲ್ಲಿದೆ. ಏಕೆಂದರೆ ಬ್ರಾಹ್ಮಣರಾದ ವಾಜಪೇಯಿಯವರಿಗೆ ಸುಧಾರಣವಾದಿ ಮುಖವಾಡ ತೊಡೆಸಿ ಅವರ ಇಮೇಜ್‌ಗೆ ಯಾವುದೇ ಕುಂದು ಬರದಂತೆ ಅತ್ಯಂತ ಜತನದಿಂದ ಕಾಪಾಡಿಕೊಳ್ಳುತ್ತ, ಅತ್ತ ಅಡ್ವಾನಿಯವರನ್ನು ಮತೀಯವಾದಿ ರಾಜಕಾರಣಕ್ಕೆ ಬಹಿರಂಗವಾಗಿಯೇ ಪಟ್ಟಾಭಿಷೇಕ ಮಾಡಿ ಅಡ್ವಾನಿಯ ಕೋಮುವಾದಿ ರಾಜಕಾರಣದ ಫಲವನ್ನು ತೊಂಬತ್ತರ ದಶಕದ ಮಧ್ಯದ ವೇಳೆಗೆ ಹೆಚ್ಚೂ ಕಡಿಮೆ ತನ್ನ ಕೈಗೆಟುಕಿಸಿಕೊಂಡುಬಿಟ್ಟಿತ್ತು ಈ ಆರೆಸೆಸ್. ಆದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ತಾತ್ಕಲಿಕವಾಗಿ ತನ್ನ ತೀವ್ರವಾದಿ ಮಾರ್ಗವನ್ನು ಹಿಂದಿಟ್ಟು ಮಧ್ಯಮ ಮಾರ್ಗದ ರಾಜಕಾರಣಕ್ಕೆ ಅಣಿಗೊಳ್ಳುವ ಅನಿವಾರ್ಯತೆಗೆ ವಿಷಾದಿಂದ ಒಪ್ಪಿಕೊಳ್ಳುತ್ತಲೇ ತಮ್ಮ ನೀಲಿ ಕಣ್ಣಿನ ಹುಡುಗ ವಾಜಪೇಯಿಗೆ ಪ್ರಧಾನಮಂತ್ರಿಯ ಪಟ್ಟ ತೊಡೆಸಿ, ತಮ್ಮ ಸೇನಾಧಿಪತಿ ಅಡ್ವಾನಿಗೆ ಅವರ ಡೆಪ್ಯುಟಿಯನ್ನಾಗಿಸಿತ್ತು. ಇದು ಆರೆಸಸ್‌ನ ಎರಡಂಚಿನ ಕತ್ತಿಯ ನಡುಗೆಯ ಶೈಲಿ. ಆದರೆ ತಾತ್ಕಾಲಿಕವಾಗಿ ದಕ್ಕಿದ ಆಧಿಕಾರ ಕೈತಪ್ಪಿ ಇಂದಿಗೆ ಹತ್ತು ವರ್ಷಗಳಾಗಿವೆ. ಅಂದು ತೀವ್ರ ಹಿಂದೂತ್ವದ ಪ್ರತಿಪಾದಕರಾಗಿದ್ದ ಅಡ್ವಾನಿಯವರಿಗೆ ವಾಜಪೇಯಿಯವರ ಸುಧಾರಣವಾದಿ ಮುಖವಾಡದ ಅನುಕೂಲತೆಗಳು ಮತ್ತು ಅದರ ತೋರಿಕೆಯ, ಹುಸಿಯಾದ ಒಳಗೊಳ್ಳುವಿಕೆಯ ಪ್ರಾಮುಖ್ಯತೆ ಅರಿವಾಗಿ ಅತ್ತ ಕಡೆ ವಾಲತೊಡಗಿದಾಗ ಆರೆಸಸ್‌ಗೆ ತನ್ನ ಕಟ್ಟರ್ ಹಿಂದುತ್ವದ ಪೋಸ್ಟರ್ ಬಾಯ್ ಆಗಿ ಕಂಡಿದ್ದು ಈ ನರೇಂದ್ರ ಮೋದಿ. ಆತನ ಈ ಫ್ಯಾಸಿಸಂ ವ್ಯಕ್ತಿತ್ವ ಆರೆಸಸ್‌ಗೆ ವರವಾಗಿ ದೊರೆತಂತಾಗಿದೆ. ಮತ್ತೊಮ್ಮೆ ತನ್ನ ಅಖಂಡ ಭಾರತವನ್ನು ಈ ಬಾರಿ ಕರಾರುವಕ್ಕಾಗಿ ಹಿಂದೂ ಮತಾಂಧತೆಯ ಕಪಿಮುಷ್ಟಿಗೆ ಸೆಳೆದುಕೊಳ್ಳುವ, ಧರ್ಮಾಂಧ ರಾಜಕಾಣಕ್ಕೆ ಬಿಡಿಸಲಾಗದಂತೆ ಬಂಧಿಸುವ ಮತ್ತು ಮುಖ್ಯವಾಗಿ ತನ್ನ ಗುರಿಯಾದ ಹಿಂದೂ ರಾಷ್ಟ್ರಕ್ಕಾಗಿ ಈ ಅವಕಾಶವನ್ನು ಬಳಸಿಕೊಳ್ಳಲು ಆರೆಸಸ್ ಪಣತೊಟ್ಟಿದೆ. ಇವರ ಅನುಕೂಲಕ್ಕೆ ಆರೆಸಸ್‌ನ ಅಧಿಪತಿ ಮೋಹನ್ ಭಾಗವತ್ ಮತ್ತು ನರೇಂದ್ರ ಮೋದಿಯ ನಡುವಿನ ಕೆಮಿಸ್ಟ್ರಿ ಸರಿಯಾಗಿಯೇ ಕೂಡಿಕೊಂಡಿದೆ. ಈಗ ಆರೆಸಸ್ ಕೇಶವ ಕೃಪಾದಿಂದ ಹೊರಬಂದು ಬಿಜೆಪಿಯ ಹೈಕಮಾಂಡ್ ಸ್ಥಾನವನ್ನು ಬಹಿರಂಗವಾಗಿಯೇ ವಹಿಸಿಕೊಂಡಿದೆ. ಇಂದು ಇದು ಓಪನ್ ಸೀಕ್ರೆಟ್.

ಚಿಂತಕ ಜ್ಯೋತಿರ್ಮಯೀ ಶರ್ಮ ಅವರು ಹಿಂದೊಮ್ಮೆ ರಾಜಕಾರಣವನ್ನು ತನ್ನ ವೈಯುಕ್ತಿಕ ಆಶೆಗಳ ಪೂರೈಕೆಗಾಗಿ ಯಾರೊಂದಿಗಾದರೂ ಕೂಡಿಕೊಳ್ಳುವ, ಹೊಂದಾಣಿಕೆ ಮಾಡಿಕೊಳ್ಳುವ ಹಾದಿ ತಪ್ಪಿದ ಹೆಂಗಸೆಂದು ಬಣ್ಣಿಸಿದ ಗೋಳ್ವಕರ್ ಮಾತುಗಳನ್ನು ಸ್ವತಃ ತಾನೇ ಚಾಲ್ತಿಗೆ ತರಲು ಆರೆಸಸ್ ಮುಂದಾಗಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮೋದಿ ಮತ್ತು ಮೋಹನ್ ಭಾಗವತ್ ಜೋಡಿ ತಮ್ಮ ಜಂಟಿ ಕಾರ್ಯಾಚರಣೆಯ ಮೂಲಕ ದಂಡ ಮತ್ತು ಧರ್ಮದ ಬಳಕೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಪಣತೊಟ್ಟಿದ್ದಾರೆ. ಇವರ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಮೋದಿಯು ಕ್ಷತ್ರಿಯ ರಾಜನಾಗಿ ಪಟ್ಟಾಭಿಷೇಕಗೊಂಡರೆ ಮೋಹನ್ ಭಾಗವತ್ ಆತನ ರಾಜಗುರು. ಬಿಜೆಪಿ ರಾಜ್ಯಭಾರ ಮಾಡುವ ಕ್ಷತ್ರಿಯ ವಂಶವಾದರೆ ಆರೆಸಸ್ ಈ ಕ್ಷತ್ರಿಯ ವಂಶದ ಗುರುಕುಲ ಮತ್ತು ಧರ್ಮಪೀಠ. ಇಪ್ಪತೊಂದನೇ ಶತಮಾನದಲ್ಲಿ ಹಿಂದೂ ಮತ್ತು ಹಿಂದೂ ರಾಷ್ಟ್ರವು ಕಾರ್ಪೋರೇಟ್ ವರ್ಗಗಳದೇ ಒಂದು ಇಂಡಿಯಾ ಆಗಿ ರೂಪುಗೊಳ್ಳುತ್ತದೆ. ಅದು ಕಾರ್ಪೋರೇಟ್ ಇಂಡಿಯಾ ಎಂದು ಕರೆಸಿಕೊಳ್ಳುತ್ತದೆ. ಇಡೀ ಪಾರ್ಲಿಮೆಂಟ್ ವ್ಯವಸ್ಥೆ ಬೋರ್ಡ ರೂಮ್ ಆಗಿ ಕಂಗೊಳಿಸುತ್ತದೆ ಎಂದು ಮಾರ್ಮಿಕವಾಗಿ ಬರೆಯುತ್ತಾರೆ

ಈ ಮೋಮೋ (ಮೋದಿ ಮತ್ತು ಮೋಹನ್ ಭಾಗವತ್) ಜೋಡಿಯ ಕಾರ್ಯಾಚರಣೆಯ ಮೊದಲ ಬಲಿಯೇ ಭಾರತದ ಸಂವಿಧಾನ. bhagvat-gadkari-modiಈ ಮೋಮೋ ಜೋಡಿ ಮಾಡುವ ಮೊದಲ ಕೆಲಸ ನಮ್ಮ ಸಂವಿಧಾನವನ್ನು ಹಿಂದೂ ಮತ್ತು ಹಿಂದೂ ರಾಷ್ಟ್ರದ ಕನಸಿನ ಸಾಕಾರಕ್ಕೆ ಅನುಗುಣವಾಗುವಂತೆ ಸಂಪೂರ್ಣವಾಗಿ ಬದಲಿಸುವುದು. ಇದು ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಏಕೆಂದರೆ ಗಣರಾಜ್ಯಗಳ ಮಾದರಿಯ ಪಾರ್ಲಿಮೆಂಟ್ ವ್ಯವಸ್ಥೆಯನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದ ಸಮತಾವಾದದ, ಸೆಕ್ಯುಲರ್ ಆಶಯವನ್ನು ಧಿಕ್ಕರಿಸುವಂತೆ, ಅಲ್ಲಗೆಳೆಯುವಂತೆ ಮೋದಿಯನ್ನು ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಂದು ಪಟ್ಟ ಕಟ್ಟಿದ ಪ್ರಕ್ರಿಯೆಯೇ ಪ್ರಜಾಪ್ರಭುತ್ವದ ಮಾದರಿಗೆ ವಿರೋಧವಾದದ್ದು. ಇದು ಅಧ್ಯಕ್ಷೀಯ ವ್ಯವಸ್ಥೆಯ ಮಾದರಿ. ಆದರೆ ಈ ಅಧ್ಯಕ್ಷೀಯ ಮಾದರಿಯನ್ನು ನಮ್ಮ ಸಂವಿಧಾನ ಪುರಸ್ಕರಿಸುವುದಿಲ್ಲ. ಆದರೆ ಮೋಮೋ ಜೋಡಿಯ ಮೊದಲ ಉದ್ದೇಶವೇ ನಮ್ಮ ಸಂವಿಧಾನದ ಆಶಯಗಳಿಗೆ ವಿರೋಧವಾದ ಅಧ್ಯಕ್ಷೀಯ ವ್ಯವಸ್ಥೆಯನ್ನು ಜಾರಿಗೆ ತರುವುದು. ಈ ಮೋಮೋ ಆಡಳಿತದ ಮತ್ತೊಂದು ಉದ್ದೇಶ ಜನರಿಂದ, ಜನರಿಗಾಗಿ ಎನ್ನುವ ಪ್ರಜಾಪ್ರಭುತ್ವದ ಮೂಲ ನ್ಯಾಯ ನೀತಿಯನ್ನೇ ತಿರಸ್ಕೃತಗೊಳಿಸುವುದು. ಆ ಸ್ಥಾನದಲ್ಲಿ ನಾಯಕನಿಂದ, ನಾಯಕನಿಗಾಗಿ ಎನ್ನುವ ಸರ್ವಾಧಿಕಾರಿ ವ್ಯವಸ್ಥೆಯನ್ನು ಹುಟ್ಟುಹಾಕುವುದು. ಇದು ಕೂಡ ಉತ್ಪ್ರೇಕ್ಷೆಯಲ್ಲ.

ಮುಖ್ಯವಾದ ಮತ್ತೊಂದು ಗುರಿಯೆಂದರೆ ಆರೆಸಸ್‌ನ ಗುಪ್ತ ಕಾರ್ಯಸೂಚಿಯಾದ ಪ್ರಾಚೀನ ಭಾರತದ ಪುನರುಜ್ಜೀವನ. ಬ್ರಾಹ್ಮಣ ಮತ್ತು ಶೂದ್ರ ಶಕ್ತಿಯನ್ನು ಕ್ರೋಢೀಕರಿಸಿ ದಲಿತರನ್ನು ಮರಳಿ ಊರ ಹೊರಗಿನ ಕೇರಿಗೆ ತಳ್ಳುವ ವರ್ಣಾಶ್ರಮದ ಯುಗದ ಪುನನಿರ್ಮಾಣ. ಅದಕ್ಕೆ ಶಕ್ತಿವಂತ ಶೂದ್ರ ಮೋದಿಯನ್ನು ಸರಿಯಾಗಿ ಗಾಳ ಹಾಕಿ ತನ್ನ ಕಬ್ಜಾದೊಳಕ್ಕೆ ಹಿಡಿದಿಟ್ಟುಕೊಂಡಿದೆ ಈ ಆರೆಸಸ್.

ಮೂವತ್ತರ ದಶಕದಲ್ಲಿ ಫ್ಯಾಸಿಸ್ಟ್ ಪಕ್ಷದ ನಾಯಕ ಮಸಲೋನಿ ಇಟಲಿಯ ಮಹಾನ್ ಚಿಂತಕ ಗ್ರಾಮ್ಷಿಯನ್ನು ಜೈಲಿಗೆ ತಳ್ಳಿ ತನ್ನ ಅಧಿಕಾರಿಗಳಿಗೆ gramsciಹೇಳುತ್ತಾನೆ: “ಈತನನ್ನು ( ಗ್ರಾಮ್ಷಿಯನ್ನು) ಸಾಯಿಸಬೇಡಿ. ಆದರೆ ಮುಂದಿನ ಇಪ್ಪತ್ತು ವರ್ಷಗಳ ಕಾಲ ಈತ ಚಿಂತಿಸಬಾರದು, ಓದಬಾರದು. ಆ ರೀತಿ ಈತನ ಬೌದ್ಧಿಕತೆಯನ್ನು ನಾಶಗೊಳಿಸಿ.” ಇದು ಈ ಮೋಮೋ ಜೋಡಿಯ ಸಂದರ್ಭದಲ್ಲಿ ಇಂಡಿಯಾದ ಮಟ್ಟಿಗೆ ಕೂಡ ನಿಜವಾಗುತ್ತದೆ. ಇದು ಕೂಡ ಉತ್ಪ್ರೇಕ್ಷೆಯಲ್ಲ. ಏಕೆಂದರೆ ಗುಜರಾತ್‌ನಲ್ಲಿ ಮೋದಿ ಆಡಳಿತದ ಕಳೆದ ಹತ್ತು ವರ್ಷಗಳಲ್ಲಿ ಪ್ರಜ್ಞಾವಂತರ ಚಿಂತನೆಗಳು, ಬೌದ್ಧಿಕತೆ, ವಿಚಾರಶೀಲತೆ ಸತ್ತು ಹೋಗಿದೆ. ಇದು ಇಂಡಿಯಾದ ಪಾಲಿಗೂ ನಿಜವಾಗುತ್ತದೆ. ಏಕೆಂದರೆ ಬಿಜೆಪಿಯ ಕನಸೇ ಇಂಡಿಯಾವನ್ನು ಗುಜರಾತ್ ಮಾದರಿಯಲ್ಲಿ ರೂಪಿಸುವುದು.

ಆದರೆ ಮತ್ತೊಂದು ಕಡೆ ಬಿಜೆಪಿ ಪಕ್ಷವು ಮಾಧ್ಯಮಗಳು ಸೃಷ್ಟಿಸಿದ ಮೋದಿಯ ಅಭಿವೃದ್ಧಿಯ ಜನಪ್ರಿಯತೆಯನ್ನು ಬಳಸಿಕೊಂಡು ದೇಶದ ಮಧ್ಯಮ ಹಾಗೂ ಮೇಲ್ವರ್ಗಗಳ ಮತಗಳನ್ನು ಬೇಟೆಯಾಡಲು ಕಾರ್ಯತಂತ್ರ ರೂಪಿಸುತ್ತಿದೆ. ಕಳೆದ ಎರಡು ದಶಕಗಳಲ್ಲಿ ಜಾಗತೀಕರಣದ ಫಲವಾದ ಕನ್ಸೂಮರಿಸಂನ ಸೆಳೆತಕ್ಕೆ ಒಳಗಾಗಿ ಕೊಳ್ಳುಬಾಕ ಸಂಸ್ಕೃತಿಯನ್ನು ಚಾಲ್ತಿಗೊಳಿಸಿದ ಈ ಅಖಂಡ ಭಾರತದ ಮಧ್ಯಮವರ್ಗ ಈ ಕೊಳ್ಳುಬಾಕ ಸಂಸ್ಕೃತಿಯನ್ನೇ ಅಭಿವೃದ್ಧಿಯೆಂದು ಭ್ರಮಿಸಿ ಇಂದಿಗೂ ಕೂಪಮಂಡೂಕಗಳಂತೆ ಬದುಕುತ್ತಿವೆ. ಮೊನ್ನೆಯವರೆಗೂ ಈ ಮಧ್ಯಮವರ್ಗ ಮತ್ತು ಕಾರ್ಪೋರೇಟ್ ವರ್ಗಗಳಿಗೆ ಈ ಜಾಗತೀಕರಣದ ಹರಿಕಾರ Manmohan Singhಮನಮೋಹನ್ ಸಿಂಗ್ ಡಾರ್ಲಿಂಗ್ ಆಗಿದ್ದರು. ಆದರೆ ಇಂದು ಇವರ ಪಾಲಿಗೆ ಮನಮೋಹನ್ ಸಿಂಗ್ ಖಳನಾಯಕ. ಏಕೆಂದರೆ ಇವರ ಆಡಳಿತದಲ್ಲಿ ಮತ್ತಷ್ಟು ಕೊಳ್ಳಲು, ಮಗದಷ್ಟು ಕೊಳ್ಳಲು ಕಷ್ಟವಾಗುತ್ತಿದೆ. ಆದರೆ ನಮ್ಮ ಮಾಧ್ಯಮಗಳ ಮತ್ತು ಮಧ್ಯಮವರ್ಗಗಳ ಈ ಬೌದ್ಧಿಕ ದಿವಾಳಿತನ ಇಂದು ನಮ್ಮ ಪ್ರಜಾಪ್ರಭುತ್ವಕ್ಕೆ, ಒಕ್ಕೂಟ ವ್ಯವಸ್ಥೆಗೆ ತುಂಬಾ ಅಪಾಯಕಾರಿಯಾದ್ದು. ಡಬಲ್ ಡಿಗ್ರಿಗಳನ್ನು ಪಡೆದು, ಎಲ್ಲವನ್ನೂ ಬಲ್ಲವರಂತೆ ಮಹಾನ್ ಬುದ್ದಿವಂತರಂತೆ ವರ್ತಿಸುವ ಮಾಧ್ಯಮಗಳು ಮತ್ತು ಮಧ್ಯಮವರ್ಗಗಳಿಗೆ ಆರೆಸಸ್‌ನ ಮೇಲಿನ ಸರ್ವಾಧಿಕಾದ ಆಶಯಗಳು ಅಪ್ಯಾಯಮಾನವಾಗಿ ಕಂಡಿದ್ದು ಇಂದಿನ ಸಂದರ್ಭದಲ್ಲಿ ಇಂಡಿಯಾವನ್ನು ಸಂಪೂರ್ಣ ಅಪಮೌಲ್ಯೀಕರಣಗೊಳಿಸಿದೆ. ಈ ಮೋದಿ ಬಂದರೆ ಈತ ಮರಳಿ ತಮ್ಮನ್ನು ಕಳೆದ ದಶಕದ ಸ್ವರ್ಗಕ್ಕೆ ಕೊಂಡೊಯ್ಯೊತ್ತಾನೆಂಬ ಸ್ವಾರ್ಥದ ಲೋಲುಪತೆಯಲ್ಲಿ ಮೋದಿಯ ಪರವಾಗಿ ತಾವು ಮಾಡುವ ಪ್ರತಿಯೊಂದು ಮತವೂ ಇಡೀ ದೇಶವನ್ನು ಫ್ಯಾಸಿಸಂಗೆ ತಳ್ಳುತ್ತದೆ ಎಂಬ ಪ್ರಾಥಮಿಕ ಜ್ಞಾನವಿಲ್ಲದೆ ಅತ್ಯಂತ ಬೇಜವಬ್ದಾರಿಯಿಂದ ವರ್ತಿಸಿ ನಾಶವಾಗುತ್ತಿದ್ದಾರೆ ಈ ಮಧ್ಯಮವರ್ಗ. ಕರಾರುವಕ್ಕಾದ ರಾಜಕೀಯ ಭಾಷೆಯನ್ನು ಬಳಸಲು ನಿರಾಕರಿಸುವ ಈ ಮಧ್ಯಮವರ್ಗ ಇಂದು ಸಂವಿಧಾನದ ಮೂಲ ಆಶಯವಾದ ಸೆಕ್ಯುಲರಿಸಂ ಮತ್ತು ಜಾತ್ಯಾತೀತ ಗುಣಗಳನ್ನು ನಿರಾಕರಿಸುತ್ತಿರುವುದು ಇಂಡಿಯಾದ ದುರಂತ. ಈ ಜನ ಸಂಘ ಪರಿವಾರದ ಜೊತೆಗೂಡಿ ದೇಶದ ಜೀವ ತೋರಣಗಳನ್ನು,ಅದರ ಮಾದರಿಗಳನ್ನು ಸ್ಯೂಡೋ ಸೆಕ್ಯುಲರಿಸ್ಟ್ ಎಂದು ಹಂಗಿಸುತ್ತಿರುವುದು ಇವರ ಪತನವಷ್ಟೇ.

ಇನ್ನು ಈ ನರೇಂದ್ರ ಮೋದಿಯು ಪ್ರಧಾನ ಮಂತ್ರಿಯಾದರೆ ಇಂಡಿಯಾದ ವಿದೇಶಾಂಗ ನೀತಿಯನ್ನು ನೆನೆಸಿಕೊಂಡರೆ ಮೂರ್ಛೆ ಬರುತ್ತದೆ. ಈತನಿಗೆ ಅಮೇರಿಕಾ, ಇಂಗ್ಲೆಂಡಿನಲ್ಲಿ ಪ್ರವೇಶವಿಲ್ಲ. ಫ್ಯಾಸಿಸ್ಟರಿಗೆ ನೋ ಎಂಟ್ರಿ. ಇನ್ನು ಪಕ್ಕದ ದೇಶಗಳಾದ ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾದೇಶ ಮತ್ತು ಮಧ್ಯ ಏಷ್ಯಾ ಹಾಗೂ ಅರಬ್ ರಾಷ್ಟ್ರಗಳಿಗೆ ಈ ಮೋದಿ ಯಾವ ಮುಖವಿಟ್ಟುಕೊಂಡು ಹೋಗಬಲ್ಲ? ಸಹಜವಾಗಿಯೇ ಮುಸ್ಲಿಂ ರಾಷ್ಟ್ರಗಳಲ್ಲಿ ಈತ ತಿರಸ್ಕೃತ ನಾಯಕ. ಅಲ್ಲದೆ ಈತ ಮಹಾನ್ ದೇಶಭಕ್ತನಾದುದರಿಂದ ಪ್ರತಿ ವರ್ಷ ಪಾಕಿಸ್ತಾನದೊಂದಿಗೆ ಯುದ್ಧ ಗ್ಯಾರಂಟಿ. ಏಕೆಂದರೆ ಶತೃಗಳನ್ನು ಧೂಳಿಪಟ ಮಾಡಬೇಕೆಂದು ಜಂಬ ಕೊಚ್ಚಿಕೊಂಡಿದ್ದಾರಲ್ಲವೇ ಈ ಸಂಘ ಪರಿವಾರ!! ಕಡೆಗೆ ಸ್ವತಃ ದೇಶದೊಳಗೆ ಮತ್ತು ವಿದೇಶದೊಳಗೆ ತಿರಸ್ಕೃತಗೊಂಡ ರಾಜಕಾರಣಿಯನ್ನು ತನ್ನ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಿಕೊಂಡ ದುರಂತಮಯ ರಾಷ್ಟ್ರ ಭಾರತವೆಂದು ಈ ದೇಶ ಇತಿಹಾಸ ನಿರ್ಮಿಸಬೇಕಾಗುತ್ತದೆ.

ಆದರೆ ನಮ್ಮ ಪುಣ್ಯಕ್ಕೆ ಆರೆಸಸ್ ಏನೇ ತಿಪ್ಪರಲಾಗ ಹಾಕಿದರೂ, ಮಾಧ್ಯಮಗಳು ಆತ್ಮವಂಚನೆಯಿಂದ ಮೋದಿಯ ಪರ ಎಷ್ಟೇ ಕಿರುಚಾಡಿದರೂ, 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ 160 ರಿಂದ 170 ಸೀಟುಗಳನ್ನು ಮಾತ್ರ ಗಳಿಸಬಲ್ಲದಷ್ಟೇ. ಅದನ್ನು ದಾಟಲು ಸಾಧ್ಯವೇ ಇಲ್ಲ. ಕೆಲವು ಮಾಧ್ಯಮಗಳ ಈ ಸಮೀಕ್ಷೆ ನಮ್ಮ ಪ್ರಜಾಪ್ರಭುತ್ವವನ್ನು ಬದುಕಿಸಿದೆ. ಅದು ನಿಜವಾಗಬೇಕಷ್ಟೆ. ಆದರೂ ನಮ್ಮೆಲ್ಲರ ಮುಂದೆ ದೊಡ್ಡ ಸವಾಲಿದೆ. ಅದು ಈ ಶಕ್ತಿ ಕೇಂದ್ರಗಳನ್ನು ಒಡೆಯುವುದು. ಇದಕ್ಕಾಗಿ ನಾವೆಲ್ಲ ಗ್ರಾಮ್ಷಿಗಳಾಗಲು ತಯಾರಾಗಬೇಕು.

6 comments

  1. ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸಬೇಕೆಂಬ ಬಿಜೆಪಿಯ ಘೋಷಣೆಯಲ್ಲಿ ಫ್ಯಾಸಿಸ್ಟ್ ವಾಸನೆಯನ್ನು ಪ್ರಜ್ಞಾವಂತರು ಹಾಗೂ ಚಿಂತನಶೀಲರು ಗುರುತಿಸಬಹುದಾಗಿದೆ. ಈ ಘೋಷಣೆಗೆ ಪೂರಕವಾಗಿ ಈಗ ಮೋದಿ ಮಹಾತ್ಮಾ ಗಾಂಧಿಯವರ ಹೇಳಿಕೆಯಾದ ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಅನ್ನು ವಿಸರ್ಜಿಸಬೇಕು ಎಂಬುದನ್ನು ತೆಗೆದುಕೊಂಡು ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸಬೇಕು ಎಂದು ಬೊಬ್ಬೆ ಹಾಕುತ್ತಿದ್ದಾರೆ. ಸಂಘ ಪರಿವಾರದ ಕನಸಾದ ಪ್ರತಿಗಾಮಿ ಹಾಗೂ ಪುರೋಹಿತಶಾಹಿ ಆಡಳಿತ ವ್ಯವಸ್ಥೆಯನ್ನು ದೇಶದಲ್ಲಿ ರೂಪಿಸಲು ಕಾಂಗ್ರೆಸ್ ಪಕ್ಷವು ಒಂದು ದೊಡ್ಡ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಸಂಘ ಪರಿವಾರದ ಈ ಘೋಷಣೆಯನ್ನು ನೋಡಬೇಕು. ಸದ್ಯಕ್ಕೆ ದೇಶವ್ಯಾಪಿ ಕಾರ್ಯಕರ್ತರ ಜಾಲ ಹೊಂದಿರುವ ಕಾಂಗ್ರೆಸ್ ಪಕ್ಷವು ಸಂಘ ಕನಸಾದ ಪುರೋಹಿತಶಾಹಿ ಸಂವಿಧಾನ ನಿರ್ಮಾಣ ಹಾಗೂ ಅದನ್ನು ಜಾರಿಗೆ ತರಲು ತೊಡಕಾಗಿದೆ. ಉಳಿದ ಪಕ್ಷಗಳಿಗೆ ಬಲವಾದ ದೇಶವ್ಯಾಪಿ ಅಸ್ತಿತ್ವವಿಲ್ಲ. ಹೀಗಾಗಿ ಸಂಘ ಪರಿವಾರಕ್ಕೆ ತನ್ನ ಕನಸನ್ನು ನನಸು ಮಾಡಲು ಅಡ್ಡಿಯಾಗಿರುವುದು ಕಾಂಗ್ರೆಸ್ ಪಕ್ಷವೇ ಆಗಿದೆ. ಹೀಗಾಗಿಯೇ ಸಂಘದ ಬೆಂಬಲಿಗರು ಕಾಂಗ್ರೆಸ್ಸಿನ ನಾಯಕರನ್ನು ಅಂತರ್ಜಾಲ ವೇದಿಕೆಗಳಲ್ಲಿ ಹೀನಾಯವಾಗಿ, ಅವಹೇಳನಕಾರಿಯಾಗಿ ಮೂದಲಿಸುತ್ತಿದ್ದಾರೆ. ಈ ಅವಹೇಳನ ಕೇವಲ ಕಾಂಗ್ರೆಸ್ ಭ್ರಷ್ಟ ಎಂಬ ಕಾರಣದಿಂದ ಮೂಡಿಲ್ಲ.

    ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂಬ ಗಾಂಧಿಯವರ ಹೇಳಿಕೆ ಅಪ್ರಾಯೋಗಿಕ ಹಾಗೂ ಪ್ರಜಾಪ್ರಭುತ್ವ ದೇಶವೊಂದಕ್ಕೆ ಹೊಂದಾಣಿಕೆಯಾಗುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂದಾದರೆ ಬಿಜೆಪಿ ಪಕ್ಷವನ್ನು ಕೂಡಾ ವಿಸರ್ಜಿಸಬೇಕಾಗುತ್ತದೆ ಏಕೆಂದರೆ ಕಾಂಗ್ರೆಸ್ಸಿಗಿಂತ ಹೆಚ್ಚಿನ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಸಂಘ ಪರಿವಾರ ಹಾಗೂ ಬಿಜೆಪಿ ತೋರಿಸಿರುವುದನ್ನು ನಾವು ಈಗಾಗಲೇ ಕಂಡಿದ್ದೇವೆ.

    ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದ ಜಾತ್ಯಾತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾಗಬಹುದು ಏಕೆಂದರೆ ಅಲ್ಪಸಂಖ್ಯಾತರ ವೋಟ್ ಬ್ಯಾಂಕಿಗಿಂತ ಬಹುಸಂಖ್ಯಾತರ ವೋಟ್ ಬ್ಯಾಂಕ್ ಬಹಳ ದೊಡ್ಡದು. ಹೀಗಾಗಿ ಜಾತ್ಯಾತೀತ ಪಕ್ಷಗಳು ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂದು ನೋಡದೆ ಶಾಂತಿ ಕದಡುವ, ತಪ್ಪು ಮಾಡಿದ ಎಲ್ಲರ ಮೇಲೂ ಖಡಕ್ಕಾದ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲದೆ ಹೋದರೆ ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರ ಧ್ರುವೀಕರಣ ನಡೆದು ಸಂಘದ ಕೈಗೆ ಅಧಿಕಾರ ಹೋಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಆಗುವ ಸಂಭವ ಇದೆ. ಹೀಗಾಗಿ ಜಾತ್ಯಾತೀತ ಪಕ್ಷಗಳು ವಿವೇಚನೆಯಿಂದ ನಡೆದುಕೊಳ್ಳದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಅಪಾಯ ಇದೆ ಏಕೆಂದರೆ ಈಗ ಬಹುಸಂಖ್ಯತರನ್ನು ಪ್ರಚೋದಿಸಲು, ಸಂಘಟಿಸಲು ಅಪಾರ ಸಾಮರ್ಥ್ಯ ಉಳ್ಳ ಮೋದಿ ಎಂಬ ಬಹಳ ದೊಡ್ಡ ಅಪಾಯಕಾರಿ ನಾಯಕನ್ನು ಸಂಘ ಪರಿವಾರ ಮುಂದೆ ಬಿಟ್ಟಿದೆ. ಇದನ್ನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳ ಯಾರೂ ನಿರ್ಲಕ್ಷಿಸಲಾಗದು. ಎಡ ಪಕ್ಷಗಳೂ ಈಗ ಪ್ರಜಾಪ್ರಭುತ್ವದ ಉಳಿವಿಗಾಗಿ ಪುಟಿದೆದ್ದು ನಿಲ್ಲಬೇಕಾಗಿದೆ.

  2. 2002ರ ಗುಜರಾತ್ ಹಿಂಸಾಕಾಂಡ ಹಾಗೂ 1984 ದೆಹಲಿ ಸಿಕ್ಖ್ ವಿರೋಧಿ ಹತ್ಯಾಕಾಂಡ ಇವುಗಳೆರಡೂ ಒಂದೇ ರೀತಿಯವಲ್ಲ. ದೆಹಲಿ ದಂಗೆಗಳಲ್ಲಿ ಸಿಖ್ ಧರ್ಮದವರು ಮಾತ್ರವೇ ಹತರಾದರು ಆದರೆ ಗುಜರಾತ್ ದಂಗೆಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಎರಡೂ ಸಮುದಾಯದ ಜನ ಹಿಂಸಾಚಾರಗಳಲ್ಲಿ ಸತ್ತಿದ್ದಾರೆ. ಗುಜರಾತ್ ಗಲಭೆಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರ ಧ್ರುವೀಕರಣ ಆಯಿತು. ಇದರ ಪರಿಣಾಮ ಬಿಜೆಪಿ ಮೂರನೇ ಎರಡು ಬಹುಮತ ಗಳಿಸಿತು. ದೆಹಲಿಯ ಗಲಭೆಗಳು ದೇಶಾದ್ಯಂತ ಪುನರಾವರ್ತನೆಗೊಳ್ಳುವ ಭಯ ಇರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ ಏಕೆಂದರೆ ಸಿಕ್ಖರು ಪಂಜಾಬಿನಲ್ಲಿ ಮಾತ್ರವೇ ದೊಡ್ಡ ಸಂಖ್ಯೆಯಲ್ಲಿ ಇರುವುದು. ದೇಶವ್ಯಾಪಿ ಅವರ ಸಂಖ್ಯೆ ಗಣನೀಯವಾಗಿ ಏನೂ ಇಲ್ಲ. ಹೀಗಾಗಿ ರಾಜೀವ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಕೆಲವರು ದೆಹಲಿ ದಂಗೆಗಳಲ್ಲಿ ನಿಷ್ಕ್ರಿಯರಾಗಿದ್ದರು ಅಥವಾ ಕೆಲವು ನಾಯಕರು ದಂಗೆಯನ್ನು ಪ್ರಚೋದಿಸಿದ್ದರೂ ಕಾಂಗ್ರೆಸ್ಸಾಗಲೀ ರಾಜೀವ ಗಾಂಧಿಯವರಾಗಲೀ ಇಡೀ ದೇಶದಲ್ಲಿ ಭೀತಿ ಹುಟ್ಟಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ರಾಜೀವ ಗಾಂಧಿ ನಂತರ ಪ್ರಧಾನಿಯಾದರೂ ಅದರ ಬಗ್ಗೆ ದೇಶದಲ್ಲಿ ಭೀತಿ ತಲೆದೋರಲಿಲ್ಲ. ಅಲ್ಲದೆ ರಾಜೀವ ಗಾಂಧಿ ಹಿಂದೆ ಪ್ರತಿಗಾಮಿ ಸಂಘಟನೆಗಳೂ ಇರಲಿಲ್ಲ. ಆದರೆ ಗುಜರಾತ್ ಗಲಭೆಗಳು ಹಾಗಲ್ಲ. ಇದು ದೇಶಾದ್ಯಂತ ಪುನರಾವರ್ತನೆ ಆಗುವ ಭೀತಿ ಭವಿಷ್ಯದಲ್ಲಿಯೂ ಇದೆ ಏಕೆಂದರೆ ಗುಜರಾತ್ ಹಿಂಸೆ ಗಳಲ್ಲಿ ತೊಡಗಿದ ಹಿಂದೂ ಮತ್ತು ಮುಸ್ಲಿಂ ಧರ್ಮಾನುಯಾಯಿಗಳು ಇಡೀ ದೇಶದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಇದ್ದಾರೆ. ಮೋದಿಯವರು ಕೋಮು ಹಿಂಸೆಯ ವಿರುದ್ಧ ಕ್ರಮ ತೆಗೆದುಕೊಂಡು ನಿಯಂತ್ರಿಸದೆ ಇರುವುದರ ಹಿಂದೆ ಸಂಘದ ಕೈವಾಡ ಇದೆ ಮಾತ್ರವಲ್ಲ ಗಲಭೆಗಳಲ್ಲಿಯೂ ಪ್ರಚೋದನೆ ನೀಡುವಲ್ಲಿ ಅದರ ಪರಿವಾರದ ಸಂಘಟನೆಗಳ ಪಾತ್ರ ಇದೆ. ಹೀಗಾಗಿಯೇ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದಾಗ ದೇಶದಲ್ಲಿ ಪ್ರಜ್ಞಾವಂತ ವಲಯಗಳಿಂದ ವಿರೋಧದ ಧ್ವನಿ ಕೇಳಿಬರುತ್ತಿದೆ. ಬಿಜೆಪಿ ಆಳ್ವಿಕೆಯಲ್ಲಿ ಕೋಮು ಗಲಭೆಗಳು ಇಲ್ಲ ಎಂದು ಹೇಳಲಾಗುತ್ತಿದೆ. ಇದು ನಿಜವೂ ಹೌದು. ಅಧಿಕಾರಕ್ಕೆ ಏರಿದ ನಂತರ ಕೋಮು ಗಲಭೆಗಳ ಅವಶ್ಯಕತೆ ಇಲ್ಲ. ಈಗಾಗಲೇ ನಡೆದಿರುವ ಬಹುಸಂಖ್ಯಾತರ ಧ್ರುವೀಕರಣ ಇರುವ ಕಾರಣ ಅಧಿಕಾರ ಅಭಿವೃದ್ಧಿ ಮಾಡಿದರೂ, ಮಾಡದಿದ್ದರೂ ಅದು ವೋಟು ತರುವುದು ಗ್ಯಾರಂಟಿ. ಗುಜರಾತಿನಲ್ಲಿ ನಡೆಸಿದ್ದನ್ನೇ ಇಡೀ ದೇಶದಲ್ಲಿ ನಡೆಸಿ ಧ್ರುವೀಕರಣ ರಾಜಕೀಯ ನಡೆಸಬಹುದು ಭವಿಷ್ಯದಲ್ಲಿ ಎಂಬ ಭೀತಿಯೇ ಪ್ರಜ್ಞಾವಂತರು, ಚಿಂತಕರ ಮೋದಿ ವಿರೋಧಕ್ಕೆ ಕಾರಣ. ಏಕೆಂದರೆ ಮೋದಿಯವರ ಹಿಂದೆ ಸಂಘ ಪರಿವಾರ ನಿಂತಿದೆ. ಸಂಘ ಪರಿವಾರವು ಪ್ರಜಾಪ್ರಭುತ್ವದಲ್ಲಿ ಹಾಗೂ ಸಂವಿಧಾನದಲ್ಲಿ ಗೌರವ ಹಾಗೂ ನಂಬಿಕೆ ಇರುವ ಸಂಘಟನೆಗಳಲ್ಲ ಅವು ಪಾಳೆಗಾರಿಕೆ ವಿಧಾನದಲ್ಲಿ, ಊಳಿಗಮಾನ್ಯ ವ್ಯವಸ್ಥೆಯಲ್ಲಿ, ಪುರೋಹಿತಶಾಹೀ ಮೌಲ್ಯಗಳ ಪುನರುತ್ಥಾನದಲ್ಲಿ ನಂಬಿಕೆ ಇರುವ ಸಂಘಟನೆಗಳು ಎಂಬುದೇ ಮೋದಿ ವಿರೋಧಕ್ಕೆ ಪ್ರಧಾನ ಕಾರಣ.

  3. ‘ಅಲ್ಪ ಸಂಖ್ಯಾತರ ತುಷ್ಟೀಕರಣ’ – ಜಾತ್ಯತೀತ ಪಕ್ಷಗಳು ಮತ್ತು ಅವುಗಳ ಸರಕಾರಗಳು ಅಲ್ಪಸಂಖ್ಯಾತರನ್ನು ಸಂತೋಷಪಡಿಸಲು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ( ಉದಾ: ಹಜ್ ಯಾತ್ರೆಗೆ ಸಹಾಯ, ಪೈಗಂಬರರ ಜನ್ಮದಿನದಂದು ರಜೆ, ಮುಸ್ಲಿಂ ವೈಯಕ್ತಿಕ ನಿಯಮದ ಹೆಸರಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮುಳುವಾಗುವ ನೀತಿಗಳ ಪಾಲನೆ, ಮೊದಲಾದ ಕಣ್ಣುಕಟ್ಟುಗಳು) ಅಥವಾ ಅವರ ಅಭಿವೃದ್ಧಿಯ ಕಾಳಜಿ ಹೊಂದಿದ್ದೂ ಅವರನ್ನು ಮಾತ್ರ ಉದ್ದೇಶಿಸಿದ ಪ್ರಗತಿಪರ ಕಾರ್ಯಕ್ರಮಗಳು ( ಉದಾ: ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ) ಮೊದಲಾದವುಗಳಿಂದ ಅವರಿಗೆ ಪ್ರಯೋಜನವಾಗಿದೆಯೇ? ಪ್ರಯೋಜನವಾದುದಕ್ಕಿಂತ ಹಾನಿಯಾದುದೆ ಹೆಚ್ಚು. ಜಾತ್ಯತೀತ ಪಕ್ಷಗಳು ಮಾಡಬೇಕಾದುದೆಂದರೆ ಮುಸ್ಲಿಮರನ್ನು ಪ್ರಗತಿಪರ ಚಿಂತನೆಗಳನ್ನು ಬೆಳೆಸಿಕೊಂಡು ತಮ್ಮಷ್ಟಕೆ ತಾವು ಎಳಿಗೆಗೊಳ್ಳಲು ಬಿಡಬೇಕು. ಸಮಾಜದ ಇತರ ಸಮುದಾಯಗಳ ಮತ್ತು ಪ್ರಗತಿಪರರ ಜತೆ ಬೆರೆತು ಮುಸ್ಲಿಂ ಹೆಣ್ಣುಮಕ್ಕಳು, ಯುವಕರು ಉತ್ತಮ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟರೆ ಸಾಕು. ಆಗ ಹಿಂದೂ ಮೂಲಭೂತವಾದಿಗಳ ದುರ್ಬೋಧನೆ ಪ್ರಸಕ್ತಿ ಕಳೆದುಕೊಳ್ಳುತ್ತದೆ. ಮುಸ್ಲಿಂ ಮೂಲಭೂತವಾದಿಗಳ ಓಲೈಸುವ ಪಕ್ಷ ಹಿಂದುತ್ವದ ಪಕ್ಷಗಳಷ್ಟೇ ಅಪಾಯಕಾರಿ. ಆದರೆ ಕನ್ನಡದಲ್ಲಿ ದಿ. ಪೂರ್ಣಚಂದ್ರ ತೇಜಸ್ವಿಯವರನ್ನು ಬಿಟ್ಟರೆ ಯಾವ ಚಿಂತಕರೂ ಇದನ್ನು ಗುರುತಿಸಿಲ್ಲ.

  4. 1000 ಕ್ಕೂ (900 ಮುಸ್ಲಿಂ, 100 ಹಿಂದೂ ) ಹೆಚ್ಚು ಜನರ ಸಾವಿಗೆ ಕಾರಣವಾದ 1989 ರ ಬಿಹಾರದ ಭಾಗಲ್ಪುರ ಗಲಭೆಯಲ್ಲಿ ಕಾಂಗ್ರೆಸ್ಸಿನವರೇ ಗಲಭೆಯನ್ನು ಪ್ರಚೋದಿಸಿದರು ಎಂದು ಆಗಿನ ಬಿಹಾರದ ಕಾಂಗ್ರೆಸ್ ಮುಖ್ಯಮಂತ್ರಿಗಳಾಗಿದ್ದ ಸತ್ಯೇಂದ್ರ ಚರಣ ಸಿನ್ಹಾ ರವರು ತಮ್ಮ ಆತ್ಮಕಥೆಯಲ್ಲಿ ಹೇಳಿದ್ದಾರಲ್ಲ. ? ಈ ಗಲಭೆಯಲ್ಲಿ ಕೇವಲ 14 ಜನರಿಗೆ ಮಾತ್ರ ಯಾಕೆ ಶಿಕ್ಷೆಯಾಗಿದೆ? ಅದೇ ರೀತಿ 1983 ರ ಆಸ್ಸಾಂನ ನೆಲ್ಲಿ ಹತ್ಯಾಕಾಂಡದಲ್ಲಿ 2191 ಜನ ( ಎಲ್ಲರೂ ಮುಸ್ಸಿಮರು ) ಕೇವಲ 6 ಗಂಟೆಗಳಲ್ಲಿ ನಡೆದ ಜೆನಿಕೋಡ್ ನಲ್ಲಿ ಹತರಾದರು. ಈ ಹತ್ಯಾಕಾಂಡ ಮಾಡಿದ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ ಅಷ್ಟೇ ಅಲ್ಲ ಸರ್ಕಾರವೇ ಎಲ್ಲರ ಮೇಲಿನ ಕೇಸ್ ಗಳನ್ನು ಯಾಕೆ ಹಿಂತೆಗೆದುಕೊಂಡಿತು ? ಸಿಖ್ ಹತ್ಯಾಕಾಂಡದಲ್ಲಿ ಸತ್ತವರಿಗೆ ಪ್ರತಿಯೊಬ್ಬರಿಗೆ 7 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಿದರೆ ನೆಲ್ಲಿ ಹತ್ಯಾಕಾಂಡದಲ್ಲಿ ಮೃತಪಟ್ಟವರಿಗೆ ಯಾಕೆ ಕೇವಲ 5000 ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಯಿತು ?

  5. ನೀವು ಮಾಧ್ಯಮದವರು , ರಾಜಕಾರಣಿಗಳು ಮೊದಲು ಜಾತಿ – ಜಾತಿ ಅನ್ನುವುದನ್ನು ಬಿಡಿ . ಜಗತ್ತಿನಲ್ಲಿರುವು ಎರಡೇ ಜಾತಿ . ಗಂಡು – ಹೆಣ್ಣು . ರಾಜಕಾರಣಿಗಳು ಸಮಾಜದಲ್ಲಿ ಆ ಜಾತಿ , ಈ ಜಾತಿ , ನೀವು ಮಾಧ್ಯಮದವರು , ರಾಜಕಾರಣಿಗಳು ಮೊದಲು ಜಾತಿ – ಜಾತಿ ಅನ್ನುವುದನ್ನು ಬಿಡಿ . ಜಗತ್ತಿನಲ್ಲಿರುವು ಎರಡೇ ಜಾತಿ . ಗಂಡು – ಹೆಣ್ಣು . ರಾಜಕಾರಣಿಗಳು ಸಮಾಜದಲ್ಲಿ ಆ ಜಾತಿ , ಈ ಜಾತಿ , ಮೀಸಲಾತಿ ಅಂತ ಜನರನ್ನು ಹಾಳು ಮಾಡುವುದು . ಅದೆಲ್ಲ ಸ್ವತಂತ್ರ ಪೂರ್ವದಲ್ಲಿ . ಈಗ ಎಲ್ಲರೂ ಸಾಕಷ್ಟು ವಿದ್ಯಾವಂತರಿದ್ದಾರೆ . ಕೇವಲ ಓಟಿಗೋಸ್ಕರ ರಾಜಕಾರಣಿಗಳು ಜಾತಿಯನ್ನು ಹುಟ್ಟುಹಾಕುತ್ತವೆ . ಆದರೆ ನೀವು ಯಾಕೆ ಜಾತಿಯ ಹಿಂದೆ ಓಡುತ್ತಿರ ??? ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ . ಯಾಕೆ ಬೆಂಗಳೂರಿನಲ್ಲಿ ಶೌಚಾಲಯದಂತಹ ಯಕಶ್ಚಿತ್ ಸಮಸ್ಯೆ ಭೂತಕಾರದಲ್ಲಿದೆ. ನೀವು ಮಾಧ್ಯಮದವರು ಅದು ಬಿಟ್ಟು ಬರೀ ರಾಜಕೀಯ ರಾಜಕೀಯ ರಾಜಕೀಯ .. ಮೊದಲು ಮಾಧ್ಯಮದವರು ರಾಜಕೀಯ ಬಿಟ್ಟು ಹೊರಬನ್ನಿ . ಮುಖಪುಟಗಳಲ್ಲಿ ಜನರ ಸಮಸ್ಯೆಗಳನ್ನು, ದೇಶದ ಸಮಸ್ಯೆಗಳನ್ನು ಎತ್ತಿ ತೋರಿಸಿ . ಕೊನೆಯ ಪುಟದ ಕಾರ್ನರ್ ಅನ್ನು ಹೊಲಸು ರಾಜಕೀಕ್ಕೆ ಮೀಸಲಿಡಿ . ನಿಮ್ಮ ಪತ್ರಿಕೆ ಉದ್ದಾರವಾಗದಿದ್ರೂ ಭಾರತ ಉದ್ದರವಾಗಬಹುದು ???

  6. ಜನರಿಂದ, ಜನರಿಗಾಗಿ ಸಮಾಜದಿಂದ ನಾಯಕನಿಂದ, ನಾಯಕನಿಗಾಗಿ ಎನ್ನುವ ಫ್ಯಾಸಿಸ್ಟ್ ವ್ಯವಸ್ಥೆಗೆ ತೆವಳುತ್ತಿರುವ ಇಂಡಿಯಾ’ ಎಂದು ನೀವು ಹೇಳುತ್ತೀರ. ಆದರೆ ಚೀನ, ರಶ್ಯ ಮತ್ತು ಇತರೆ ದೇಶಗಳೂ ಕೂಡ ಇದಕ್ಕೇನೆ ಪೂರವಾಗಿದ್ದವು. ಗಜನಿ, ಗೋರಿಯ ಕಾಲದಲ್ಲಿದ್ದ ನಿಮ್ಮಂತವರಿಂದಲೇ ಭಾರತ ನಪಂಸಕವಾಯಿತೆನ್ನಬಹುದು. ನೀವು ಯಾವತ್ತಾದರೂ ಬಂಧನಕ್ಕೆ ಒಳಗಾದ ಿಸ್ಲಾಮಿಗಳನ್ನು ಮಾಡಿದ ಕೃತ್ಯದ ಬಗ್ಗೆ ಕೇಳಿ. ಅವರು ತಮ್ಮ ಸಮರ್ಥನೆಗಳ ಸರಗಳನ್ನು ಬಿಚ್ಚಿ ತೋರಿಸುತ್ತಾರೆ. ನಿಮಗೆ ಭಾರತ ಸಾಲದಿಂದ ಹೊರಬರುವುದು ಇಶ್ಟವಿಲ್ಲವೇನೋ ಅನಿಸಿದೆ. ಒಂದು ವೇಳೆ ನಿಮಗೆ B.J.P ಇರಬಾರದೆಂದರೆ ಹೊಸ ಪಕ್ಶವನ್ನು ಹುಟ್ಟು ಹಾಕಿ. ಒಂದು ವೇಳೆ ಭಾರತ ಗುಲಾಮಿಯಾದರೆ ಅದು ಕಾಂಗ್ ಇಂದ ೆನ್ನುವುದನ್ನು ಮರೆಯಬೇಡಿ.

Leave a Reply

Your email address will not be published.