CET ಮತ್ತು ಕಾಮೆಡ್-ಕೆ ಗಳಲ್ಲಿ ಡ್ರಾಪ್‌ಔಟ್ ಅಕ್ರಮ : ಅರ್ಹರಿಗೆ ಮತ್ತು ಪ್ರತಿಭಾವಂತರಿಗೆ ಅನ್ಯಾಯ


– ರವಿ ಕೃಷ್ಣಾರೆಡ್ದಿ


 

ಇದು ಬಹಳ ವರ್ಷಗಳಿಂದ ನಡೆದು ಬರುತ್ತಿರುವ ಮೋಸ ವಂಚನೆಗಳ ಕರ್ಮಕಾಂಡ. ಸಾರ್ವಜನಿಕರಿಗೆ ಗೊತ್ತಿರಲಿಲ್ಲ ಅಷ್ಟೇ. ಪ್ರತಿವರ್ಷ ನೂರಾರು ಮೆಡಿಕಲ್ ಸೀಟುಗಳನ್ನು ಅರ್ಹರಿಗೆ ಮತ್ತು ಪ್ರತಿಭಾವಂತರಿಗೆ ವಂಚಿಸಿ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯವರು ಅಕ್ರಮವಾಗಿ ಮಾರಿಕೊಳ್ಳುವ ಒಂದು ವ್ಯವಸ್ಥಿತ ಜಾಲವೇ ಇಲ್ಲಿದೆ.

ಇದು ಮೊದಲಿಗೆ ಬಯಲಾಗಿದ್ದು 2011 ರಲ್ಲಿ, ಲೇಖಕ ಬೇದ್ರೆ ಮಂಜುನಾಥರವರ ಮೂಲಕ. Bedre-Photoಬೇದ್ರೆ ಮಂಜುನಾಥರವರ ಪ್ರತಿಭಾವಂತ ಮಗನಿಗೆ ಸಿಇಟಿಯಲ್ಲಿ ಎಂಬಿಬಿಎಸ್‌ಗೆ ಉಚಿತ ಸೀಟು ದೊರಕಿತ್ತು. ಆದರೆ ಆ ಹುಡುಗನಿಗೆ ಪಶುವೈದ್ಯಕೀಯ ಓದಲು ಮನಸ್ಸಿತ್ತು. ಅದನ್ನು ಹೇಗೋ ತಿಳಿದುಕೊಂಡ ಖದೀಮರು ಆ ಹುಡುಗನನ್ನು ಸಂಪರ್ಕಿಸಿ ಲಕ್ಷಾಂತರ ರೂಪಾಯಿಗಳ ಆಮಿಷ ಒಡ್ಡಿ, ಆತ ತಾವು ಸೂಚಿಸಿದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮೆಡಿಕಲ್‌ಗೆ ಅಡ್ಮಿಷನ್ ಮಾಡಿಕೊಳ್ಳುವಂತೆಯೂ, ಹಾಗೆಯೇ ತನಗೆ ಬೇಕಾದ ಪಶುವೈದ್ಯಕೀಯ ಕೋರ್ಸ್‌ಗೂ ಸೇರಿಕೊಳ್ಳುವಂತೆಯೂ, ಅದಾದ ನಂತರ್ ಸಿಇಟಿ ಕೌನ್ಸೆಲಿಂಗ್ ಮುಗಿಯುತ್ತಿರುವಂತೆ ಮೆಡಿಕಲ್ ಕಾಲೇಜಿನಿಂದ ಡ್ರಾಪ್‌ಔಟ್ ಆಗುವಂತೆಯೂ ಸೂಚಿಸಿತು. ಆಗ ಇದ್ದ ನಿಯಮಗಳ ಪ್ರಕಾರ ಸಿಇಟಿ ಕೌನ್ಸೆಲಿಂಗ್ ಮುಗಿದ ನಂತರ ಹೀಗೆ ಡ್ರಾಪ್‌ಔಟ್ ಆದರೆ ಆ ಖಾಲಿ ಉಳಿಯುವ ಸೀಟು ಖಾಸಗಿ ಕಾಲೇಜಿನ ಆಡಳಿತ ಮಂಡಳಿಗೆ ಸೇರುತ್ತದೆ. ಅದನ್ನವರು ಎಂದಿನಂತೆ ಮಾರುಕಟ್ಟೆ ದರದಲ್ಲಿ ಐವತ್ತು ಲಕ್ಷದಿಂದ ಕೋಟಿ ರೂಪಾಯಿಗಳ ತನಕ ಮಾರಿಕೊಳ್ಳಬಹುದು. ಆದರೆ ಇಂತಹ ವಂಚನೆಯ ಜಾಲಕ್ಕೆ ಬೀಳುವ ಮನಸ್ಸಿಲ್ಲದ ಆ ಹುಡುಗ ತನ್ನ ನೈತಿಕ ಪ್ರಜ್ಞೆಯ ಕಾರಣಕ್ಕೆ ಅಂತಹ ಕೆಲಸ ಮಾಡಲು ನಿರಾಕರಿಸಿದ. ಈ ವಿಷಯ ತಿಳಿದ ಬೇದ್ರೆ ಮಂಜುನಾಥರು ಈ ವಂಚನೆಯ ಜಾಲದ ಬಗ್ಗೆ ಮತ್ತು ಅದರಿಂದ ಅರ್ಹರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪತ್ರಿಕೆಗಳ ವಾಚಕರ ವಾಣಿಗೆ 2011 ಜುಲೈ-ಆಗಸ್ಟ್‌ನಲ್ಲಿ ಪತ್ರ ಬರೆದರು. ಆ ಮೂಲಕ ಅದು ಸಾರ್ವಜನಿಕವಾಗಿ ಬಯಲಾಯಿತು. ನಂತರ ಸಿಇಟಿಯ ಮೂಲಕ ಇಂತಹ ಅಕ್ರಮಗಳು ಮತ್ತು ಮೋಸಗಳು ಆಗದಂತೆ ಕ್ರಮಕೈಗೊಳ್ಳುವ ಘೋಷಣೆಗಳು ಸರ್ಕಾರದ ಕಡೆಯಿಂದ ಆದವು.

bedre-manjunath-cet
ಆದರೆ, ಮುಂದಿನ ವರ್ಷ, ಅಂದರೆ 2012 ರಲ್ಲಿ ಇದರ ತೀವ್ರತೆ ಕಾಣಿಸಿಕೊಂಡಿತು. ರಂಗೋಲಿಯ ಕೆಳಗೆ ತೂರುವ ಮೋಸಗಾರರು ಆ ವರ್ಷ ಸುಮಾರು 800 ಮೆಡಿಕಲ್ ಸೀಟುಗಳನ್ನು ಹೀಗೆ ಡ್ರಾಪ್‌ಔಟ್ ಮಾಡಿಸಿದ್ದರು. ಬದಲಾದ ಸಿಇಟಿ ನಿಯಮಗಳಿಂದಾಗಿ ಮತ್ತು ಹಗರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವಿದ್ದ ಕಾರಣದಿಂದಾಗಿ ಅನೇಕ ಕಾಲೇಜುಗಳಲ್ಲಿ ಇಂತಹ ಅಕ್ರಮ ಸೀಟುಗಳನ್ನು ತುಂಬಲಾಗಲಿಲ್ಲ. ಆ ಮೂಲಕ ಕೇವಲ ಪ್ರತಿಭಾವಂತರಿಗೆ ಅನ್ಯಾಯವಾಗಿದ್ದೇ ಅಲ್ಲದೆ, ನೂರಾರು ವಿದ್ಯಾರ್ಥಿಗಳು ವೈದ್ಯರಾಗುವ ಅವಕಾಶವನ್ನೇ ನಿರಾಕರಿಸಲಾಯಿತು.

ಇದು ಸಿಇಟಿ ಕತೆ. ಈ ವರ್ಷ ಏನಾಗಿದೆಯೋ ನನಗೆ ಮಾಹಿತಿ ಇಲ್ಲ. ಆದರೆ ಇದು ಕಾಮೆಡ್‌-ಕೆ ಯಲ್ಲೂ ಅವ್ಯಾಹತವಾಗಿ ನಡೆಯುತ್ತ ಬಂದಿದೆ comdekಎಂದು ಇತ್ತೀಚೆಗೆ ತಿಳಿಯಿತು. ನಿಮಗೆ ಗೊತ್ತಿರಬಹುದು, ಕಾಮೆಡ್‌-ಕೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸರ್ಕಾರದ ಸಿಇಟಿಯನ್ನು ಧಿಕ್ಕರಿಸಿ ತಮ್ಮ ಪಾಲಿನ ಪೇಮೆಂಟ್ ಸೀಟುಗಳನ್ನು (ಮ್ಯಾನೇಜ್‌ಮೆಂಟ್ ಸೀಟುಗಳನ್ನಲ್ಲ) ತುಂಬಿಕೊಳ್ಳಲು ಮಾಡಿಕೊಂಡ ಒಂದು ತಂತ್ರ. ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಸಲಾದ ಪೇಮೆಂಟ್ ಸೀಟುಗಳಿಗೆ ನಾವೇ ಪರೀಕ್ಷೆ ಮಾಡಿ ತುಂಬಿಸಿಕೊಳ್ಳುತ್ತೇವೆ ಎಂದು ಖಾಸಗಿ ಕಾಲೇಜುಗಳು ಸಿಇಟಿಗೆ ಪರ್ಯಾಯವಾಗಿ ಇವನ್ನು ನಡೆಸುತ್ತವೆ. ಇಲ್ಲಿಯೂ ಸಹ ಕೆಲವು ಆಡಳಿತ ಮಂಡಳಿಯವರು ಪ್ರತಿಭಾವಂತರಿಗೆ ವಂಚಿಸಿ ಸಿಇಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಅಕ್ರಮವಾಗಿ ಮಾರಿಕೊಳ್ಳುತ್ತಿದ್ದಾರೆ.

ಈ ವರ್ಷವೂ ಅದು ಮುಂದುವರೆದಿದೆ. ನಂಬಬಲ್ಲ ಮೂಲಗಳ ಪ್ರಕಾರ ಹೀಗೆ ಡ್ರಾಪ್‌ಔಟ್ ಮಾಡಿಸಿದ ಸುಮಾರು ಹತ್ತು ವೈದ್ಯಕೀಯ ಸೀಟುಗಳಿಗೆ ಜಾತಿ ಸಂಘವೊಂದು ಬೆಂಗಳೂರಿನಲ್ಲಿರುವ ತನ್ನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಇಂದು “ಸ್ಪಾಟ್ ಅಡ್ಮಿಷನ್” ಸಂದರ್ಶನ ನಡೆಸುತ್ತಿದೆ. ಈ ಹತ್ತೂ ಸೀಟುಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೋಗಬೇಕಿತ್ತು. ಇದು ಒಂದು ಕಾಲೇಜಿನ ಕತೆ. ರಾಜ್ಯದ ಇತರೆ ಅನೇಕ ಖಾಸಗಿ ಕಾಲೇಜುಗಳಲ್ಲಿ ಹೀಗೆ ಅದೆಷ್ಟು ಸ್ಥಾನಗಳು ಬಿಕರಿ ಆಗುತ್ತಿವೆಯೋ? ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.

ಈಗಾಗಲೆ ಇಂಜಿನಿಯರಿಂಗ್, ಮೆಡಿಕಲ್ ಓದುತ್ತಿರುವ ಉತ್ತಮ ಅಂಕ ಪಡೆದಿರುವ ಪ್ರತಿಭಾವಂತ ಹುಡುಗರನ್ನು ಐದತ್ತು ಲಕ್ಷ ಕೊಟ್ಟು ಹಿಡಿದುಕೊಂಡು ಬಂದು ಅವರಿಂದ ಕಾಮೆಡ್-ಕೆ ಪರೀಕ್ಷೆ ಬರೆಸಿ, ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಸಿ, ಮತ್ತೆ ಡ್ರಾಪ್‌ಔಟ್ ಮಾಡಿಸುವ ಧಂಧೆ ಮತ್ತು ಅಕ್ರಮದ ಬಗ್ಗೆ ನಗರದ ಸೆಂಟ್ರಲ್ ಪೊಲೀಸ್ ಠಾಣೆಯವರು ವಿಚಾರಣೆ ನಡೆಸಿ ಸಿದ್ದಪಡಿಸಿರುವ ಸುಮಾರು 642 ಪುಟಗಳ ಚಾರ್ಜ್‍ಷೀಟ್ ನನ್ನ ಮುಂದಿದೆ. 2011 ನೇ ಸಾಲಿನಲ್ಲಿ ಕಾಮೆಡ್-ಕೆ ಪರೀಕ್ಷೆ ಬರೆದು ಕೆಂಪೇಗೌಡ ಮೆಡಿಕಲ್ ಕಾಲೇಜನ್ನು ಆಯ್ಕೆ ಮಾಡಿಕೊಂಡು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ನಂತರ ಕೊನೆಯ ದಿನಾಂಕದಂದು ಡ್ರಾಪ್‌ಔಟ್ ಆದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಡ್ರಾಪ್‌ಔಟ್ ದಂಧೆ ಪತ್ತೆ ಹಚ್ಚಲು ಒಬ್ಬರು ಕೊಟ್ಟ ದೂರಿನ ಆಧಾರದ ಮೇಲೆ kims-chargesheet-1ಪೋಲಿಸರು ಸುಮಾರು 110 ಜನರನ್ನು ವಿಚಾರಣೆಗೆ ಕರೆದು ಸಿದ್ದಪಡಿಸಿದ ದೋಷಾರೋಪಣೆ ಪಟ್ಟಿ ಇದು. ಕೆಳಹಂತದ ನ್ಯಾಯಾಲಯದಲ್ಲಿದ್ದ ಈ ಮೊಕದ್ದಮೆಯ ವಿರುದ್ಧ ಕಾಲೇಜಿನ ಆಡಳಿತ ಮಂಡಳಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದೆ ಎನ್ನುವುದು ಸುದ್ದಿ.

ಇಂತಹ ಅಕ್ರಮಗಳು ಹೀಗೆ ಸಾರ್ವಜನಿಕವಾಗಿ ಬಯಲಾಗುತ್ತಿದ್ದರೂ ನಮ್ಮ ಸರ್ಕಾರಗಳ ಕುಸಿದ ನ್ಯಾಯಪ್ರಜ್ಞೆ ಮತ್ತು ನೈತಿಕತೆಯ ಕಾರಣವಾಗಿ ಇದ್ಯಾವುದೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಕೈಸನ್ನೆ-ಬಾಯ್ಸನ್ನೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯುತ್ತಿಲ್ಲ. ಅನ್ಯಾಯಕ್ಕೊಳಗಾದ ಪೋಷಕರು ಮತ್ತು ಪ್ರಜ್ಞಾವಂತರು ಎಚ್ಚೆತ್ತುಕೊಂಡು ಈ ಅಕ್ರಮಗಳನ್ನು ಅನ್ಯಾಯಗಳನ್ನು ತಡೆಯಬೇಕಿದೆ.

kims-chargesheet-2

Leave a Reply

Your email address will not be published.