ದೇಡ್ ಇಶ್ಕಿಯಾ : ಮನಸ್ಸು ಮಗುವಿನಂತಿದೆ, ಸ್ವಲ್ಪ ಹಸಿಹಸಿಯಾಗಿದೆ

– ಬಿ.ಶ್ರೀಪಾದ ಭಟ್

ಅಭಿಷೇಕ್ ಚುಬೆ ನಿರ್ದೇಶನದ “ದೇಡ್ ಇಶ್ಕಿಯಾ” ಸಿನಿಮಾ ನೋಡಲು ಹೋಗುವಾಗ ಮನಸ್ಸಿನಲ್ಲಿ ಅದರ ಮೊದಲ ಭಾಗ “ಇಶ್ಕಿಯಾ” ಚಿತ್ರದ ರೀಲುಗಳು ಕಾಡುತ್ತಿದ್ದವು. ವಿದ್ಯಾ ಬಾಲನ್‌ಳ oomph ಹಾಗೂ bold and lust ಅನ್ನು ಮೈಗೂಡಿಸಿಕೊಂಡಂತಹ ನಟನೆಯ ನೆನಪು ಎದೆಯನ್ನು ಬೆಚ್ಚಗಾಗಿಸುತ್ತಿತ್ತು. ರಾಹತ್ ಫತೇ ಅಲಿ ಖಾನ್ ಹಾಡಿದ ವಿಶಾಲ್ ಭಾರಧ್ವಾಜ್ ಭೈರವಿ ರಾಗದಲ್ಲಿ ಕಾಂಪೋಸ್ ಮಾಡಿದ ಹಾಡು “ದಿಲ್ ತೊ ಬಚ್ಚಾ ಹೈ ಜೀ, ಥೋಡ ಕಚ್ಚಾ ಹೈ ಜೀ” ನಾಲ್ಕು ವರ್ಷಗಳ ನಂತರವೂ ಕಾಡುತ್ತಿತ್ತು. ಮನಸ್ಸನ್ನು ತೇವಗೊಳಿಸುತ್ತಿತ್ತು.

ಇಶ್ಕಿಯಾದಲ್ಲಿನ ಗಲಭೆಗ್ರಸ್ಥ, rustic ಗೋರಖ್‌ಪುರನಿಂದ ನವಾಬರ ನಾಡಾದ ಅವಧ್‌ನ ಮಹಮುದಾಬಾದ್‌ಗೆ “ದೇಡ್ ಇಶ್ಕಿಯಾ” dedh-ishqiyaಸಿನಿಮಾ ಸ್ಥಳಾಂತರಗೊಂಡಿದೆ. ಇಲ್ಲಿ ಷೇರ್, ಶಾಯರಿ, ಮುಶಾಯರಿ, ಘಜಲ್‌ಗಳು ಮತ್ತು ಕವ್ವಾಲಿಗಳು ಅಚ್ಚರಿಗೊಳಿಸುವಷ್ಟರ ಮಟ್ಟಿಗೆ ಹೃದಯಂಗಮವಾಗಿವೆ. ನಮ್ಮನ್ನು ಬೆಂಬಿಡದೆ ನಶೆಯೇರಿಸುತ್ತವೆ. ಬಹಳ ವರ್ಷಗಳ ನಂತರ ಈ ಸಿನಿಮಾದಲ್ಲಿ ಉರ್ದು ಭಾಷೆ ತನ್ನೆಲ್ಲ ತಾಜಾತನದೊಂದಿಗೆ ನಮ್ಮನ್ನು ಬೆರಗುಗೊಳಿಸುತ್ತದೆ. ಮನಮುಟ್ಟುವ, ಚಕಿತಗೊಳಿಸು, ಅನೇಕ ಬಾರಿ ಧಿಗ್ಭಮೆಗೊಳಿಸುವಂತಹ ಸಂಭಾಷಣೆಯನ್ನು ಬರೆದ ವಿಶಾಲ್ ಭಾರದ್ವಜ್‌ಗೆ ಥಾಂಕ್ಸ್ ಹೇಳಲೇಬೇಕು. ಇಡೀ ಚಿತ್ರದ ಆತ್ಮ ಮತ್ತು ಶಕ್ತಿಯೇ ಈ ಬೆರಗುಗೊಳಿಸುವ ಸಂಭಾಷಣೆಗಳು .

ಕಲ್ಲೂಜಾನ್ ಮತ್ತು ಬಬ್ಬನ್ ಪಾತ್ರಗಳನ್ನು ತಮ್ಮ ಸ್ವಂತ ಕ್ಯಾರೆಕ್ಟರ್ ಆಗಿಯೇ ಘನೀಭವಿಸಿಕೊಂಡ ನಾಸಿರುದ್ದೀನ್ ಶಾ ಮತ್ತು ಅರ್ಶದ್ ವಾರ್ಸಿ ಇವರಿಬ್ಬರ ಕಾಮ್ರೇಡ್‌ಶಿಪ್ ಇಲ್ಲಿಯೂ ಗೆಲ್ಲುತ್ತದೆ. ಸಣ್ಣ ಮಟ್ಟದ thieves ಗಳಾದ ಇವರಿಬ್ಬರೂ ನವಾಬ್ ಮತ್ತವನ ಸೇವಕನ ವೇಷದಲ್ಲಿ ವಜ್ರದ ಹಾರದ ಕಳ್ಳತನಕ್ಕೆ ಕೈ ಹಾಕಿ ಪೋಲೀಸರ ಕೈಗೆ ಸಿಕ್ಕಿಕೊಂಡು ನಂತರ ಅಲ್ಲಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಇಬ್ಬರೂ ಬೇರ್ಪಡುತ್ತಾರೆ. ಮಹುಮುದಾಬಾದ್‌ನ ವಿಧವೆ ಬೇಗಂ ಬೇಗಂ ಪಾರ ( ಮಾಧುರಿ ದೀಕ್ಷಿತ್) ಏರ್ಪಡಿಸಿರುವ ಮುಶಾಯಿರದಲ್ಲಿ ಭಾಗವಹಿಸಲು ಚಾಂದ್‌ಪುರ್‌ನ ನವಾಬನ ವೇಷದಲ್ಲಿ ಬಂದಂತಹ ಕಲ್ಲೂಜಾನ್ ( ಶಾ) ನನ್ನು ಬಬ್ಬನ್ ( ವಾರ್ಸಿ) ಮುಖಾಮುಖಿಯಾಗುತ್ತಾನೆ. ಶಾಯರಿ, ಮುಶಾಯರಿಯ ಸ್ಪರ್ಧೆಯನ್ನು ಏರ್ಪಡಿಸಿ ಅದರಲ್ಲಿ ಗೆದ್ದವನನ್ನು ನಿಖಾ ಮಾಡಿಕೊಂಡು ಮುಂದೆ ಆತನನ್ನೇ ಮಹುಮುದಾಬಾದ್‌ನ ನವಾಬನನ್ನಾಗಿ ಪಟ್ಟಕ್ಕೇರಿಸುಬೇಕೆಂದು ಆಶಿಸಿದ ತನ್ನ ತೀರಿಕೊಂಡ ನವಾಬನಿಗೆ ವಾಗ್ದಾನ ನೀಡಿದ್ದ ಬೇಗಂ ಪಾರ ಸ್ವಯಂವರದ ರೂಪದಲ್ಲಿ ಆ ಸ್ಪರ್ಧೆಯನ್ನು ಏರ್ಪಡಿಸಿರುತ್ತಾಳೆ. ಆಕೆಯ ಸಹವರ್ತಿ, ಸೇವಕಿ, ಜೀವದ ಗೆಳತಿಯಾಗಿ ಮುನಿರಾ (ಹುಮಾ ಖುರೇಷಿ) ಈ ಸ್ವಯಂವರದ ಎಲ್ಲಾ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿರುತ್ತಾಳೆ.

ನಂತರ ಎರಡು ಗಂಟೆಗಳ ಕಾಲ ನಮ್ಮ ನಿರೀಕ್ಷೆಗೂ ಮೀರಿ ನಡೆಯುವ twists and turns ಗಳು ಇಡೀ ಚಿತ್ರದ ಕಥೆಯನ್ನು ಸ್ವಲ್ಪವೂ ನಿರಾಸೆಗೊಳಿಸದೆ Dedh-Ishqiya-Madhuri-Dixitಕ್ಲೈಮ್ಯಾಕ್ಸ್‌ಗೆ ತಲುಪಿಸುತ್ತವೆ. ಇಲ್ಲಿ ಅಪಹರಣವಿದೆ, ಪ್ರೇಮವಿದೆ, violence ಇದೆ, ಇವೆಲ್ಲವೂ ಒಂದಕ್ಕೊಂದು ಬೆಸೆದುಕೊಳ್ಳುವಂತಹ ನೈಪುಣ್ಯತೆಯನ್ನು ಸಾಧಿಸಲು ನಿರ್ದೇಶಕ ಅಭಿಷೇಕ್ ಚುಬೆ ಯಶಸ್ವಿಯಾಗಿದ್ದಾನೆ. ಈ ಪಯಣದಲ್ಲಿ ಕಲ್ಲೂಜಾನ್ ಮತ್ತು ಬಬ್ಬನ್‌ರ ಕಾಮ್ರೇಡ್‌ಶಿಪ್‌ನಷ್ಟೇ ಮನೋಜ್ಞವಾದದ್ದು ಬೇಗಂ ಪಾರ ಮತ್ತು ಮುನೀರಾಳ ಕಾಮ್ರೇಡ್‌ಶಿಪ್. ಇವರಿಬ್ಬರ ಗೆಳತನದ ಅಪ್ತತೆಯ ದೃಶ್ಯಗಳು ಇಡೀ ಚಿತ್ರದ ಅದ್ಭುತ ಕ್ಷಣಗಳಲ್ಲೊಂದು. ಇದನ್ನು ಸಾಧ್ಯವಾಗಿಸಿದ್ದು ಮಾಧುರಿ ದೀಕ್ಷಿತ್ ಮತ್ತು ಹುಮಾ ಖುರೇಷಿ. ಬೇಗಂ ಪಾರ ಮತ್ತು ಮುನೀರಾ ಇಡೀ ಸಿನಿಮಾವನ್ನು ತಮ್ಮ ಹೆಗಲಿಗೇರಿಸಿಕೊಂಡದ್ದು ಹಿಂದಿ ಸಿನಿಮಾರಂಗದ ಇತ್ತೀಚಿನ ವರ್ಷಗಳ ಅಚ್ಚರಿಗಳಲ್ಲೊಂದು. ಮತ್ತೊಮ್ಮೆ ಫೆಮಿನಿಸಂ ಮೇಲುಗೈ ಸಾಧಿಸಿದೆ. ಹಾಗೆಯೇ ಲೋಕಲ್ ಶಾಸಕ, ಗ್ಯಾಂಗ್‌ಸ್ಟರ್, ಜಾನ್ ಮಹಮದ್‌ನ ಪಾತ್ರದಲ್ಲಿ ನಟಿಸಿರುವ ವಿಜಯ್ ರಾಜ್ ಮೇಲಿನ ಕಲಾವಿದರಿಗೆ ಸಮಸಮನಾಗಿ ಹೆಗಲು ಕೊಟ್ಟಿದ್ದಾನೆ. ಹಾಗೆಯೇ ನೂರ್ ಮಹಮ್ಮದ್ ಇಟಾವಿಯಾಗಿ ನಟಿಸಿದ ಮನೋಜ್ ಫಾವಾ ನಮ್ಮೆಲ್ಲರ ಮೆಚ್ಚುಗೆ ಗಳಿಸುತ್ತಾನೆ.

ಕಡೆಗೆ ಯಾವುದೇ ಬಗೆಯ ಮಹಾತ್ವಾಕಾಂಕ್ಷೆಯನ್ನು ತನ್ನೊಡಲೊಳಗೆ ಇಟ್ಟುಕೊಳ್ಳಲು ನಿರಾಕರಿಸುವ “ದೇಡ್ ಇಶ್ಕಿಯಾ” ಸಿನಿಮಾಕ್ಕೆ ಈ ಬಗೆಯ ನಿರಾಕರಣೆಯೇ ಒಂದು ಮಿತಿಯಾಗಿಬಿಟ್ಟಿದೆ. ಥಿಯೇಟರ್‌ನಿಂದ ಹೊರಬಂದ ನಂತರ ಈ ಸಿನಿಮಾ ಒಂದು ಭಾಷ್ಯೆಯಾಗಿ, ಒಂದು ಮೆಟಫರ್ ಆಗಿ, ಗುಂಗಾಗಿ, ಸದಾ ಹಿಂಬಾಲಿಸುವ ವಿಷಾದದ ಛಾಯೆಯಾಗಿ ನಮ್ಮನ್ನು ಕಾಡುವುದಿಲ್ಲ. ಆದರೆ ಆ ರೀತಿ ಕಾಡಲೇಬೇಕೆಂಬ ಹಠವಾದರೂ ಏಕಿರಬೇಕು, ಅಲ್ಲವೇ??

Leave a Reply

Your email address will not be published. Required fields are marked *